ಭಾನುವಾರ, ಆಗಸ್ಟ್ 14, 2016

ಕರ್ನಾಟಕದ ಆರ್ಥಿಕತೆ (ಭಾಗ ೩)

ಕನ್ನಡ ಅಧ್ಯಯನ (ಕರ್ನಾಟಕದ ಆರ್ಥಿಕತೆ): ಭಾಗ ೧ – ಅಭಿವೃದ್ಧಿ – ಸಂಪನ್ಮೂಲಗಳು – ಜನಸಂಖ್ಯೆ – ಬಡತನ: ೩. ಕರ್ನಾಟಕದಲ್ಲಿ ಆರ್ಥಿಕ ಸಾಧನ ಸಂಪತ್ತುಗಳು : ಸಮಸ್ಯೆಗಳು ಹಾಗೂ ನಿರೀಕ್ಷೆಗಳು (೨)

ಜಲ ಹಾಗೂ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು

ಜಲವಿದ್ಯುತ್ ಕೇಂದ್ರಗಳುಸ್ಥಾಪಿತ ಸಾಮರ್ಥ್ಯ ಮೆಗಾವಾಟ್‌ಗಳಲ್ಲಿಶರಾವತಿ೮೯೧ಕಾಳಿನದಿ೮೧೦ವರಾಹಿ೨೩೦ಜೋಗ್೧೨೦ಕಾಳಿನದಿ(ಸೂಪ)೧೦೦ಲಿಂಗನಮಕ್ಕಿ೫೫ಶಿವನಸಮುದ್ರ೪೨ಭದ್ರಾ೩೩ಘಟಪ್ರಭಾ೩೨ಮುನಿರಾಬಾದ್೧೮ಶಿಂಷಾಪುರ೧೭ಶಾಖೋತ್ಪನ್ನ ವಿದ್ಯುತ್ ಕೇಂದ್ರರಾಯಚೂರು೬೩೦ಒಟ್ಟು೨೯೭೮

(ಕೆಲವು ಸಣ್ಣ ವಿದ್ಯುತ್ ಕೇಂದ್ರಗಳನ್ನು ಗಣನೆಗೆ ತೆಗೆದುಕೊಳ್ಳದಿರುವ ಕಾರಣ ಇಲ್ಲಿ ಕೊಟ್ಟಿರುವ ಅಂಕಿ-ಅಂಶಗಳು ಪ್ರಸ್ತುತ ವಿದ್ಯುತ್ ಸಾಮರ್ಥ್ಯತೆಯ ಅಂಕಿ-ಅಂಶಗಳಿಗೆ ಸರಿಸಮನಾಗಿಲ್ಲ.)

ರಾಜ್ಯದ ಆರ್ಥಿಕ ಬೆಳವಣಿಗೆಗೆ ಉಪಯೋಗಿಸಬಹುದಾದಂತಹ ಜಲ ವಿದ್ಯುತ್ ಸಾಮರ್ಥ್ಯತೆ ೪೩೪೭ ಮೆ.ವಾ. ಎಂದು ಅಂದಾಜು ಮಾಡಲಾಗಿತ್ತು. ೧೯೯೩ರವರೆಗೆ, ಒಟ್ಟು ಅಂದಾಜು ಮಾಡಿದ ವಿದ್ಯುಚ್ಛಕ್ತಿಯಲ್ಲಿ ೨೪೦೮ ಮೆ.ವಾ.ನ್ನು ಅಥವಾ ಶೇ. ೫೫ರಷ್ಟನ್ನು ಮಾತ್ರ ಅಭಿವೃದ್ಧಿ ಪಡಿಸಲಾಯಿತು. ಭಾರತದಲ್ಲಿ ಇಲ್ಲಿಯವರೆಗೆ ಕೇವಲ ಶೇ.೨೪ರಷ್ಟು ಸಾಮರ್ಥ್ಯದ ಜಲ ವಿದ್ಯುತ್ತನ್ನು ಅಭಿವೃದ್ಧಿಪಡಿಸಲಾಗಿದೆ. ಜಲ ವಿದ್ಯುತ್ ಪ್ರಗತಿಯಲ್ಲಿ ನಮ್ಮ ರಾಜ್ಯ ಸಜ್ಜಾಗುತ್ತಿರುವುದು ನಿಜವಾಗಲೂ ಪರಿಣಾಮಕಾರಿಯಾಗಿದೆ.

ಯಾವುದೇ ಒಂದು ವಿದ್ಯುತ್ ಉತ್ಪಾದನಾ ವ್ಯವಸ್ಥೆಯ ಕಾರ್ಯ ಸಮರ್ಥತೆಯ ಸೂಚಿಯನ್ನು ‘ಯಂತ್ರ ಸ್ಥಾವರ ಭರಣ ಅಂಶ’ (ಪ್ಲ್ಯಾಂಟ್ ಲೋಡ್ ಫ್ಯಾಕ್ಟರ್) ಎಂದು ಕರೆಯಲಾಗಿದೆ. ಯಂತ್ರ ಸ್ಥಾವರ ಭರಣ ಅಂಶ ಎಂದರೆ ವಾಸ್ತವಿಕವಾಗಿ ಉತ್ಪಾದಿಸುವಂತಹ ವಿದ್ಯುತ್ತಿನ ಪ್ರಮಾಣವು ವಿದ್ಯುತ್ ವ್ಯವಸ್ಥೆಯ ಪೂರ್ಣ ಸಾಮರ್ಥ್ಯದಲ್ಲಿ ಕೆಲಸಮಾಡಿ ಗರಿಷ್ಠ ಪ್ರಮಾಣದ ವಿದ್ಯುತ್ತನ್ನು ಉತ್ಪಾದಿಸುವ ಮಟ್ಟದ ಶೇಕಡಾವಾರು ಅಂಶ. ಯಂತ್ರ ಸ್ಥಾವರ ಭರಣ ಅಂಶ ಅನೇಕ ಅಂಶಗಳ ಮೇಲೆ ಅವಲಂಬಿಸಿದೆ. ಅವುಗಳಲ್ಲಿ ಮುಖ್ಯವಾದವು ವ್ಯವಸ್ಥೆಯ ಹೊರಗೆ ಸಂಬಂಧಿಸಿದ ಅಂಶಗಳು ಮತ್ತು ಸಾಕಷ್ಟು ಪ್ರಮಾಣದ ಒಳ್ಳೆಯ ಗುಣಮಟ್ಟದ ಕಲ್ಲಿದ್ದಲು ನೀಡಿಕೆಯ ಮೇಲೆ ಅವಲಂಬಿಸಿದೆ. ನಮ್ಮ ದೇಶದ ಶಾಖೋತ್ಪನ್ನ ಸ್ಥಾವರಕ್ಕೆ ಶೇ. ೫೮ರಷ್ಟು ಯಂತ್ರ ಸ್ಥಾವರ ಭರಣ ಅಂಶ ಇದ್ದರೆ ಸಾಕು ಎಂಬ ಒಂದು ಭಾವನೆ ಇದೆ. ಭಾರತದಲ್ಲಿ ಇದರ ಪ್ರಮಾಣ ಶೇ.೬೧, ಕರ್ನಾಟಕದಲ್ಲಿ ಇದು ಶೇ. ೬೭ರಷ್ಟಿದ್ದು ಭಾರತದಲ್ಲಿರುವ ಯಂತ್ರ ಸ್ಥಾವರ ಭರಣ ಅಂಶಕ್ಕಿಂತ ಮೇಲ್ಪಟ್ಟದಲ್ಲಿದೆ.

ಕರ್ನಾಟಕದಲ್ಲಿ ಎಲ್ಲ ಮಾದರಿಯ ರವಾನೆ ಮತ್ತು ಹಂಚಿಕೆಯ ಸಾಲುಗಳ ಉದ್ದಳತೆ ಒಟ್ಟು ೩೬೬ ಸಾವಿರ ಸರ್ಕ್ಯೂಟ್ ಕಿ.ಮೀ. ಎಂದು ತಿಳಿದು ಬಂದಿದೆ. ಅದರಂತೆ ಪ್ರತಿ ಸಾವಿರ ಚದರ ಕಿ.ಮೀ. ವಿಸ್ತೀರ್ಣಕ್ಕೆ ಕರ್ನಾಟಕದಲ್ಲಿ ೧೯೦೯ ಕಿ.ಮೀ. ಉದ್ದಳತೆಯ ಸಾಲುಗಳು ಕಂಡುಬಂದರೆ, ಭಾರತದಲ್ಲಿ ೧೩೪೧ ಕಿ.ಮೀ. ಉದ್ದಳತೆಯ ಸಾಲುಗಳು ಕಂಡುಬರುತ್ತದೆ. ಕರ್ನಾಟಕ ರಾಜ್ಯ ರವಾನೆ ಮತ್ತು ಹಂಚಿಕೆಯ ಸಾಲುಗಳ ಪ್ರಗತಿಯಲ್ಲಿ ತೀವ್ರ ಸ್ವರೂಪದ ಬೆಳವಣಿಗೆಯನ್ನು ಸಾಧಿಸಿದೆ ಎನ್ನುವುದರಲ್ಲಿ ಸಂದೇಹವಿಲ್ಲ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಲೋಕಿಸುವುದಾದರೆ, ರವಾನೆ ಮತ್ತು ಹಂಚಿಕೆಯಲ್ಲಿ ತೊಡಗುವ ವಿದ್ಯುತ್ ನಷ್ಟ ಇತರ ರಾಷ್ಟ್ರಗಳಲ್ಲಿ ಶೇ.೧೦ ರಷ್ಟಾದರೂ ಅದು ಹೆಚ್ಚೇನು ಅಲ್ಲ. ಹಾಗೆಯೇ ಭಾರತದಲ್ಲಿನ ಪರಿಸ್ಥಿತಿಗೆ ರವಾನೆ ಮತ್ತು ಹಂಚಿಕೆಯಲ್ಲಿನ ವಿದ್ಯುತ್ ನಷ್ಟ ಶೇ. ೧೨-೧೫ ಇದ್ದರೂ ಅದು ಹೊರೆಯಲ್ಲಾಗುತ್ತಿದ್ದರುವ ವಿದ್ಯುತ್ ನಷ್ಟದ ಪ್ರಮಾಣವು ಶೇ. ೧೯ರಷ್ಟಿದ್ದು, ಭಾರತದಲ್ಲಿ ಅದು ಶೇ. ೨೨ರಷ್ಟಿದೆ. ಆದಾಗ್ಯೂ, ಕರ್ನಾಟಕದ ರವಾನೆ ಮತ್ತು ಹಂಚಿಕೆಯಲ್ಲಿನ ನಷ್ಟವು ಭಾರತದಲ್ಲಿನ ನಷ್ಟಕ್ಕಿಂತ ಕಡಿಮೆಯಿದೆ. ಇದನ್ನು ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಹಾಗೂ ಕರ್ನಾಟಕಗಳ ರವಾನೆ ಮತ್ತು ಹಂಚಿಕೆಯ ಮೇಲಿನ ವಿದ್ಯುತ್ ನಷ್ಟ ಎರಡು ಪಟ್ಟು ಮುಂದಿದೆ. ಈ ರೀತಿಯ ಅಧಿಕ ನಷ್ಟಕ್ಕೆ ರಾಷ್ಟ್ರ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯುಚ್ಛಕ್ತಿಯ ಕಳ್ಳತನವೇ ಮುಖ್ಯ ಕಾರಣವಾಗಿದೆ. ಗೃಹಕೃತ್ಯ ಬಳಕೆದಾರರು, ಅಂಗಡಿಗಳ, ತೋಟಗಳ ಮತ್ತು ಕೈಗಾರಿಕಾ ವಲಯಗಳ ಸಾವಿರಾರು ವಿದ್ಯುತ್ ಬಳಕೆದಾರರು ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಗಳು ಕಣ್ಣು ತಪ್ಪಿಸಿ ಹಗಲು ಹೊತ್ತಿನಲ್ಲಿಯೇ ಆಗಿಂದಾಗ್ಗೆ ವಿದ್ಯುಚ್ಛಕ್ತಿಯನ್ನು ಕಳವು ಮಾಡುತ್ತಿರುವುದು ಕಂಡುಬಂದಿದೆ.

ತಲಾವಾರು ವಿದ್ಯುತ್ ಬಳಕೆ ಹಾಗೂ ಆರ್ಥಿಕಾಭಿವೃದ್ಧಿ ಇವೆರಡರ ನಡುವೆ ನಿಕಟ ಸಂಬಂಧವಿದೆ ಎಂದು ಬಹಳಷ್ಟು ಜನ ವಿಶ್ಲೇಷಕರು ದೇಶದಾದ್ಯಂತ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದ ಹಲವಾರು ವಿದ್ಯುತ್ ಬಳಕೆ ೨೫೨ ಕಿ.ವಾ ಗಂಟೆಗಳಾದರೆ ಇದಕ್ಕೆ ಪ್ರತಿಯಾಗಿ ಭಾರತದಲ್ಲಿ ಸುಮಾರು ಸರಾಸರಿ ೨೦೭ ಕಿ.ವಾ. ಗಂಟೆಗಳೆಂದು ತಿಳಿದು ಬಂದಿದೆ.

ಭಾರತ ಮತ್ತು ಕರ್ನಾಟಕದಲ್ಲಿ ಕ್ರಮವಾಗಿ ಶೇ. ೧೭ ಮತ್ತು ಶೇ. ೧೫ರಷ್ಟು ವಿದ್ಯುತ್ತನ್ನು ಗೃಹಕೃತ್ಯಕ್ಕಾಗಿ ಬಳಸಲಾಗುತ್ತಿದೆ. ಭಾರತದ ಶೇ. ೮೪ರಷ್ಟು ಗ್ರಾಮೀಣ ಪ್ರದೇಶಗಳು ವಿದ್ಯುದ್ದೀಕರಣ ಗೊಂಡಿರುವುದಾದರೆ, ಕರ್ನಾಟಕದ ಬಹುತೇಕ ಎಲ್ಲಾ ಗ್ರಾಮೀಣ ಪ್ರದೇಗಳು ವಿದ್ಯುದ್ದೀಕರಣ ಗೊಂಡಿರುವುದು ಪ್ರಶಂಸನೀಯವಾಗಿದೆ. ಕಂದಾಯ ನೀಡುವ ಯಾವುದೇ ಗ್ರಾಮವಾಗಲೀ ಅಥವಾ ಅಲ್ಲಿ ಕೇವಲ ಒಂದು ಮನೆಗೆ ವಿದ್ಯುತ್ ಸಂಪರ್ಕ ಒದಗಿಸಿದ್ದರೂ ಸಹ ಆ ಗ್ರಮಾವು ವಿದ್ಯುದ್ದೀಕರಣಗೊಂಡಿದೆ ಎಂದು ಅಧಿಕೃತ ಅಂಕಿ-ಅಂಶಗಳ ಆಧಾರದ ಮೇಲೆ ಸಾರ್ವತ್ರಿಕವಾಗಿ ಘೋಷಿಸಲಾಗುತ್ತದೆ. ಇಲ್ಲಿನ ಗಂಭೀರವಾದ ಸಂಗತಿಯೆಂದರೆ ರಾಜ್ಯದ ಬಹಳಷ್ಟು ಸಣ್ಣ-ಪುಟ್ಟ ಹಳ್ಳಿಗಳಿಗೆ, ಹರಿಜನ ಕೇರಿಗಳಿಗೆ ಮತ್ತು ಗಿರಿಜನ ತಾಂಡಗಳಿಗೆ ವಿದ್ಯುತ್ ಸೌಲಭ್ಯವಿರುವುದು ಮನಗಾಣಬೇಕಾಗಿದೆ. ಆದರೆ ಅಂಕಿ-ಅಂಶಗಳ ಕ್ರೋಢೀಕರಣ ದೃಷ್ಟಿಯಿಂದ ಕಂದಾಯ ಗ್ರಾಮಗಳ ಜೊತೆ ಸೇರಿಸುವುದರಿಂದ ಇಂತಹ ಪ್ರದೇಶಗಳ ವಿದ್ಯುತ್ ಸ್ಥಿತಿಯನ್ನು ನಿರ್ದಿಷ್ಟವಾಗಿ ಹೇಳಲಾಗದು.

ರಾಜ್ಯದ ಒಟ್ಟು ವಿದ್ಯುಚ್ಛಕ್ತಿ ಬಳಕೆಯಲ್ಲಿನ ಶೇ. ೪೯ರಷ್ಟನ್ನು ಕೈಗಾರಿಕೆಗಳು ಬಳಸುತ್ತಿದ್ದರೆ. ಭಾರತದಲ್ಲಿ ಈ ಪ್ರಮಾಣವು ಶೇ.೪೬ರಷ್ಟು. ಕರ್ನಾಟಕದ ವಿದ್ಯುಚ್ಛಕ್ತಿ ಮಂಡಳಿಯು ವಿದ್ಯುತ್ ಒದಗಿಸುವ ಜವಾಬ್ದಾರಿಯನ್ನು ಹೊಂದಿದೆಯಾದರೂ ಅತಿಯಾಗಿ ವಿದ್ಯುತ್ ಬಳಸುವ ಕೈಗಾರಿಕಾ ಕೇಂದ್ರಗಳಿಗೆ ವಿದ್ಯುತ್ ಸೌಲಭ್ಯ ಒದಗಿಸುವ ಪರಿಸ್ಥಿತಿಯಲ್ಲಿ ಇಲ್ಲ. ಹೆಚ್ಚಾಗಿ ವಿದ್ಯುತ್ ಬಳಸುವಂತಹ ಕಾರ್ಖಾನೆಗಳನ್ನು ಬೆಂಗಳೂರು ನಗರ ಮತ್ತು ಸುತ್ತ-ಮುತ್ತ ತೆರೆಯುವುದನ್ನು ನಿಷೇಧಿಸಲಾಗಿದೆ. ನಮ್ಮ ರಾಜ್ಯ ಕೈಗಾರಿಕಾ ರಂಗ ತನ್ನ ಶಕ್ತಿಯ ಅಗತ್ಯತೆಗೆ ಹಿಡಿದಿಟ್ಟ ವಿದ್ಯುಚ್ಛಕ್ತಿ ಸ್ಥಾವರಗಳನ್ನು ಹೆಚ್ಚಾಗಿ ಅವಲಂಬಿಸಿರುತ್ತದೆ. ಈ ಹಿಡಿದಿಟ್ಟ ವಿದ್ಯುಚ್ಛಕ್ತಿ ಸ್ಥಾವರಗಳ ಒಟ್ಟು ಸ್ಥಾಪಿತ ಸಾಮರ್ಥ್ಯತೆ ಕರ್ನಾಟಕದಲ್ಲಿ ಸುಮಾರು ೪೪೭ ಮೆ.ವಾ.ನಷ್ಟಿದೆ ಎಂದು ತಿಳಿಯಲಾಗಿದೆ. ಬೃಹತ್ ಘಟಕಗಳಾದ ಸಿಮೆಂಟ್, ರಾಸಾಯನಿಕ ವಸ್ತುಗಳು, ಪೇಪರ್, ಸಕ್ಕರೆ ಮತ್ತು ಬಟ್ಟೆಗಿರಣಿ ಕೈಗಾರಿಕೆಗಳು ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯಿಂದ ಖರೀದಿಸಿದ ವಿದ್ಯುಚ್ಛಕ್ತಿಯನ್ನು ತಮ್ಮಲ್ಲಿಯೇ ಹಿಡಿದಿಡುವ ಶಕ್ತಿ ಸ್ಥಾವರಗಳನ್ನು ಹೊಂದಿರುವುದರಿಂದ ವಿದ್ಯುತ್ ಕಡಿತದ ಸಂದರ್ಭದಲ್ಲಿ ತುರ್ತಾಗಿ ಬಳಸಬಹುದಾಗಿದೆ.

ಕೃಷಿ ಕ್ಷೇತ್ರದ ವಿದ್ಯುತ್ ಬಳಕೆ ಬಗ್ಗೆ ಹೇಳುವುದಾದರೆ, ರಾಜ್ಯದ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇ. ೩೨ರಷ್ಟು ವಿದ್ಯುಚ್ಛಕ್ತಿಯನ್ನು ಕೃಷಿಗೆ ಬಳಸಲಾಗುತ್ತದೆ. ಅದೇ ರೀತಿ ಭಾರತದ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇ.೨೫ರಷ್ಟು ಮಾತ್ರ ಕೃಷಿಗೆ ಉಪಯೋಗವಾಗುತ್ತಿದೆ. ಕರ್ನಾಟಕದಲ್ಲಿ ಕೃಷಿ ಕ್ಷೇತ್ರಕ್ಕೆ ಗರಿಷ್ಟ ಪ್ರಮಾಣದ ವಿದ್ಯುತ್ ಬಳಕೆಯಾಗಲು ರಾಜ್ಯದಲ್ಲಿ ಕೃಷಿಗೆ ನೀಡುತ್ತಿರುವ ವಿಪರೀತ ರಿಯಾಯಿತಿಯೇ ಬಹುಮಟ್ಟಿಗೆ ಕಾರಣವೆನ್ನಬಹುದು. ರಾಜ್ಯದಲ್ಲಿ ಸುಮಾರು ೮.೮೦ ಲಕ್ಷ ಕೃಷಿ ಪಂಪುಸೆಟ್ಟುಗಳಿಗೆ ವಿದ್ಯುತ್ ಒದಗಿಸಲಾಗಿದೆ. ಆ ಪ್ರಕಾರ ಒಟ್ಟು ಫಸಲು ಭೂಮಿಯ ಪ್ರತಿ ಸಾವಿರ ಹೆಕ್ಟೇರ್ ವಿಸ್ತೀರ್ಣಕ್ಕೆ ಕರ್ನಾಟಕದಲ್ಲಿ ೭೫ ಪಂಪುಸೆಟ್ಟುಗಳಿಗೆ ವಿದ್ಯುತ್ ಸರಬರಾಜು ನೀಡಿರುವುದಾದರೆ, ಇಡೀ ಭಾರತದಲ್ಲಿ ಕೇವಲ ೫೬ ಪಂಪುಸೆಟ್ಟುಗಳು ಮಾತ್ರ ವಿದ್ಯುತ್ ಸೌಲಭ್ಯವನ್ನು ಪಡೆದಿವೆ. ನೀರಾವರಿ ಪಂಪುಸೆಟ್ಟುಗಳಿಗೆ ರಾಜ್ಯದಲ್ಲಿ ತೀರ ರಿಯಾಯಿತಿ ದರಗಳಲ್ಲಿ ಅಂದರೆ ೧ ಯೂನಿಟ್ಟಿಗೆ ೪ ಪೈಸೆಗಳಂತೆ ವಿದ್ಯುತ್ ಒದಗಿಸಲಾಗುತ್ತಿದೆ. ದೇಶದಲ್ಲಿ ಕೃಷಿಗೆ ಅತ್ಯಂತ ಕಡಿಮೆ ರಿಯಾಯಿತಿ ದರದಲ್ಲಿ ವಿದ್ಯುತ್ ಒದಗಿಸುವ ರಾಜ್ಯವೆಂದರೆ ತಮಿಳುನಾಡು. ಇಲ್ಲಿ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದು, ಬಹುಮಟ್ಟಿಗೆ ಪುಕ್ಕಟೆಯಾಗಿಯೇ ವಿದ್ಯುತ್ ಸರಬರಾಜು ಮಾಡುತ್ತಿದೆ.

ಮತ್ತೊಂದು ವಿಪರ್ಯಾಸವೆಂದರೆ, ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯು ತನ್ನ ನೌಕರರಿಗೆ ಪುಕ್ಕಟೆಯಾಗಿ ವಿದ್ಯುತ್ ಸೌಲಭ್ಯ ಒದಿಗಿಸಿರುವುದು. ಅಂತೆಯೇ ರೈತರಿಗೆ ಬಹುಮಟ್ಟಿಗೆ ಪುಕ್ಕಟೆಯಾಗಿ ನೀಡುವ ವಿದ್ಯುತ್ ಪ್ರಮಾಣ ಶೇ.೩೨ರಷ್ಟಾದರೆ, ರವಾನೆ ಮತ್ತು ಹಂಚಿಕೆ ಸಮಯದಲ್ಲಿ ಶೇ.೧೯ರಷ್ಟು ವಿದ್ಯುಚ್ಛಕ್ತಿ ಪೋಲಾಗುತ್ತಿದೆ ಎಂದು ತಿಳಿದುಬಂದಿದೆ. ಇನ್ನುಳಿದ ವಿದ್ಯುಚ್ಛಕ್ತಿಯಲ್ಲಿ ಶೇ. ೨೦ರಿಂದ ೨೫ರಷ್ಟನ್ನು ವಿದ್ಯುಚ್ಛಕ್ತಿ ಮಂಡಳಿಯು ಒಟ್ಟು ಆದಾಯದ ಶೇ. ೬೫ರಷ್ಟು ಆದಾಯವನ್ನು ಒದಗಿಸುತ್ತಿರುವ ಹೆಚ್‌.ಟಿ.ಬಳಕೆದಾರರಿಗೆ ಕೊಡಲಾಗುತ್ತಿದೆ. ಈಗ ಚಾಲ್ತಿಯಲ್ಲಿರುವ ಸುಂಕದ ದರವು ಉತ್ಪಾದನಾ ವೆಚ್ಚವನ್ನು ಸಹ ತುಂಬುವುದಿಲ್ಲ.

ರಾಜ್ಯ ವಿದ್ಯುತ್ ಸರಬರಾಜು ವ್ಯವಸ್ಥೆಯ ಮುಖ್ಯ ಅಂಶಗಳು:

೧. ವಿದ್ಯುತ್ ಬೇಡಿಕೆ ನೀಡಿಕೆಗಿಂತ ಮೀರಿ ವಿದ್ಯುತ್ ಕಡಿತ ಉಂಟಾಗಿರುವುದು.

೨. ಜಲ ವಿದ್ಯುತ್ ಮೇಲಿನ ಅತಿಯಾದ ನಂಬಿಕೆ.

೩. ಶಾಖೋತ್ಪನ್ನ ಸ್ಥಾವರದ ಕೆಳ ಯಂತ್ರ ಸ್ಥಾವರ ಭರಣ ಅಂಶ.

೪. ಬಹುಮಟ್ಟನ ರವಾನೆ ಮತ್ತು ಹಂಚಿಕೆಯಲ್ಲಿನ ನಷ್ಟಗಳು ಮತ್ತು

೫. ಆರ್ಥಿಕವಲ್ಲದ ಸುಂಕದ ದರಗಳು.

ವಿದ್ಯುತ್ ಉತ್ಪಾದನೆಯನ್ನು ವಿಸ್ತರಿಸಲು ಮತ್ತು ಅದರ ವೈವಿಧ್ಯತೆ ಕಾಣಲು ಬೇಕಾದಂತಹ ಪ್ರಯತ್ನಗಳಿಂದ ಯಂತ್ರ ಸ್ಥಾವರ ಭರಣ ಅಂಶವನ್ನು  ಉತ್ತಮಗೊಳಿಸುವುದು ಮತ್ತು ರವಾನೆ ಹಾಗೂ ಹಂಚಿಕೆಯಲ್ಲಿನ ಖರ್ಚುಗಳನ್ನು ಕಡಿಮೆಗೊಳಿಸುವುದು. ಜೊತೆಗೆ ರಾಜ್ಯದಲ್ಲಿ ವಿದ್ಯುತ್ ನೀಡಿಕೆ ದರಗಳ ಏರಿಕೆಯ ಬಗ್ಗೆ ಯೋಚಿಸುವುದು.

ಭಾರತದ ಅರ್ಥವ್ಯವಸ್ಥೆಯ ಮುನ್ನೆಚ್ಚರಿಕಾ ಕೇಂದ್ರ ಕೈಗೊಂಡ ಸಮೀಕ್ಷೆಯ ಪ್ರಕಾರ ಕರ್ನಾಟಕ ರಾಜ್ಯವು ಸುಮಾರು ೧೫, ೧೧೪ ಕೋಟಿ ರೂಪಾಯಿಗಳ ಭಾರಿ ಪ್ರಮಾಣದ ಬಂಡವಾಳವನ್ನು ವಿದ್ಯುತ್ ಉತ್ಪಾದನಾ ಯೋಜನೆಗಳಿಗೆ ತೊಡಗಿಸಲಾಗಿದೆ. ಅದರಲ್ಲಿ ಸುಮಾರು ೩೭೨೦ ಕೋಟಿ ರೂಪಾಯಿಗಳನ್ನು ಜಲ ವಿದ್ಯುತ್ ಉದ್ದಿಮೆಗೆ ತೊಡಗಿಸಿ, ೧೮ ಯೋಜನೆಗಳ  ಮೂಲಕ ಒಟ್ಟು ಸುಮಾರು ೨೧೮೩ ಮೆಗಾವ್ಯಾಟ್‌ಗಳ ಸ್ಥಾಪಿತ ಸಾಮರ್ಥ್ಯತೆಯನ್ನು ಹೊಂದಿದೆ. ಅದೇ ರೀತಿ ಇನ್ನುಳಿದ ಸುಮಾರು ೧೧, ೩೯೪ ಕೋಟಿ ರೂಪಾಯಿಗಳನ್ನು ಶಾಖೋತ್ಪನ್ನ ವಿದ್ಯುತ್ ಉದ್ದಿಮೆಗೆ ತೊಡಗಿಸಿ,  ೧೩ ಯೋಜನೆಗಳಲ್ಲಿ ಒಟ್ಟು ಸುಮಾರು ೩೫೭೩ ಮೆ.ವಾ.ಗಳ ಸ್ಥಾಪಿತ ಸಾಮರ್ಥ್ಯತೆಯನ್ನು ರಾಜ್ಯ ಹೊಂದುವಂತಾಗಿದೆ. ಈ ಯೋಜನೆಗಳು ವಿವಿಧ ಹಂತಗಳಲ್ಲಿವೆ. ರಾಜ್ಯದ ಜಲ ವಿದ್ಯುತ್ ಉದ್ದಿಮೆ ಅಭಿವೃದ್ಧಿಯತ್ತ ಸಾಗುತ್ತಿದ್ದರೂ ಪದೇ ಪದೇ ಅಂತರ ರಾಜ್ಯಗಳ ನದಿ ನೀರು ಹಂಚಿಕೊಳ್ಳುವ ವಿಷಯದಲ್ಲಿ ಉಂಟಾಗುತ್ತಿರುವ ಕಲಹದಿಂದ ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸದೆ ಕುಂಠಿತಗೊಳ್ಳುತ್ತಿದೆ. ಇದಲ್ಲದೆ, ಈ ಯೋಜನೆಯ ಅಡಿಯಲ್ಲಿ ಸಿಲುಕಿದವರಿಗೆ ಪುನರ್ವಸತಿಗಾಗಿ ಮತ್ತು ಜಲಾಶಯದ ನಿರ್ಮಾಣದಲ್ಲಿ ನಾಶವಾದ ಕಾಡನ್ನು ಪುನಃ ಬೆಳಸುವುದಕ್ಕಾಗಿ ಹೆಚ್ಚಿನ ವೆಚ್ಚವನ್ನು ಮಾಡಬೇಕಾಗುತ್ತದೆ. ಅದೇ ರೀತಿ ಶಾಖೋತ್ಪನ್ನ ಸ್ಥಾವರಗಳ ಬಗ್ಗೆ ಹೇಳುವುದಾದರೆ, ಶಾಖೋತ್ಪನ್ನ ಸ್ಥಾವರಗಳನ್ನು ಸ್ಥಾಪಿಸುವುದರಿಂದ ವಿದ್ಯುತ್ ಉತ್ಪಾದನಾ ವೆಚ್ಚವು ಹೆಚ್ಚಾಗುತ್ತದೆ.

ಪ್ರಸ್ತುತದಲ್ಲಿರುವ ವಿಪರೀತ ಉತ್ಪಾದನಾ ವೆಚ್ಚ ಮತ್ತು ಆರ್ಥಿಕ ಮುಗ್ಗಟ್ಟನ್ನು ಗಮನಿಸಿ ನಮ್ಮ ಸರ್ಕಾರವು ವಿದ್ಯುತ್ ಉದ್ದಿಮೆಯನ್ನು ವಿದೇಶಿ ಬಂಡವಾಳಗಾರರು ಮತ್ತು ವಿದೇಶಿ ಕಂಪನಿಗಳನ್ನೊಳಗೊಂಡ ಖಾಸಗೀ ಕ್ಷೇತ್ರದ ವಶಕ್ಕೆ ಒಪ್ಪಿಸಲು ತಯಾರಿದೆ. ಈ ದಿಕ್ಕಿನಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಮತ್ತು ಹೊರ ರಾಷ್ಟ್ರದ ಬಂಡವಾಳದಾರರನ್ನು ಆಕರ್ಷಿಸಲು ಹಲವಾರು ರಿಯಾಯಿತಿಗಳನ್ನು ನೀಡಲಾಗಿದೆ.

೧. ೫ ರಿಂದ ೮ ವರ್ಷಗಳ ತೆರಿಗೆ ರಜೆ (Tax holiday)

೨. ಹೊರದೇಶದ ಬಂಡವಾಳದ ಸಂಪೂರ್ಣ ಪಾಲುಗೊಳ್ಳುವಿಕೆ.

೩. ಹೂಡಿದ ಬಂಡವಾಳದ ಮೇಲೆ ೧೬ರಷ್ಟು ಲಾಭಗಳಿಕೆಯ ಭರವಸೆ.

೪. ವಿದೇಶಿ ವಿನಿಮಯ ದರದ ಏರಿಳಿತವಿದ್ದಾಗ್ಯೂ ಹೂಡಿದ ಬಂಡವಾಳ ಮತ್ತು ಲಾಭದ ಹಣವನ್ನು ಪುನಃ ಸ್ವದೇಶಕ್ಕೆ ಮರಳಿಸುವ ಭರವಸೆ.

ಹೊಸ ಆರ್ಥಿಕ ನೀತಿಯನ್ನು ೧೯೯೧ರಲ್ಲಿ ಆರಂಭಿಸಿದ ಪರಿಣಾಮವಾಗಿ ಖಾಸಗಿ ವ್ಯವಹಾರ ಸಂಸ್ಥೆಗಳು ಕರ್ನಾಟಕದಲ್ಲಿ ವಿದ್ಯುತ್ ಉದ್ದಿಮೆಗಳನ್ನು ತೆರೆಯಲು ಆಸಕ್ತಿ ತೋರುತ್ತಿವೆ.

ಕರ್ನಾಟಕ ಸರ್ಕಾರ ಸುಮಾರು ೫೦೦ ಮೆ.ವಾ.ಸ್ಥಾಪಿತ ಸಾಮರ್ಥ್ಯತೆಯ ಶಾಖೋತ್ಪನ್ನ ವಿದ್ಯುತ್ ಠಾಣೆಯನ್ನು ಹೊಸಪೇಟೆಯಲ್ಲಿ ತೆರೆಯಲು ಹೆಚ್.ಓ.ಕೆ. ಅಂತರಾಷ್ಟ್ರೀಯ ಕಂಪನಿ (H.O.K. International Company) ಯ ಜೊತೆ ಒಂದು ಒಪ್ಪಂದ ಮಾಡಿಕೊಂಡು ಜ್ಞಾಪಕ ಪತ್ರಕ್ಕೆ ಸಹಿ ಹಾಕಿದೆ.

ಸರ್ಕಾರ ಕೊಜೆಂಟ್ರಿಕ್ಸ್ ಅಂತರರಾಷ್ಟ್ರೀಯ ಕಂಪನಿ (Cogentrix International Company) ಸಹಯೋಗದಿಂದ ಮಂಗಳೂರಿನಲ್ಲಿ ೧೦೦೦. ಮೆ.ವಾ. ಶಾಖೋತ್ಪನ್ನ ವಿದ್ಯುತ್ ಯೋಜನೆಯನ್ನು ಪೂರ್ಣಗೊಳಿಸಲು ಒಪ್ಪಿಗೆ ನೀಡಿದೆ. ಇದಕ್ಕೆ ತಗಲುವ ವೆಚ್ಚ ಪ್ರತಿ ಮೆಗಾವಾಟ್‌ಗೆ ಸುಮಾರು ೫೦೮೮ ಕೋಟಿ ರೂಪಾಯಿಗಳ ಬೃಹತ್ ಯೋಜನೆಯಾಗಿದೆ. ಲೆಕ್ಕಾಚಾರ ಮಾಡಿದರೆ ಪ್ರತಿ ವೆ.ವಾ.ಗೆ ಐದು ಕೋಟಿ ರೂಪಾಯಿಗಳಿಗೂ ಮೇಲಾಗಿದ್ದು, ಸದ್ಯದಲ್ಲಿ ಪ್ರಸ್ತಾಪಗೊಂಡ ಯಾವುದೇ ಖಾಸಗಿ ವಲಯದ ಯೋಜನೆಗಿಂತಲೂ ಅಧಿಕವಾಗಿದೆ. ಈ ಯೋಜನೆಯು ದೇಶದ ಒಳಗಡೆಯೇ ಯಥೇಚ್ಛವಾಗಿ ದೊರೆಯುವ ಜಲ ಹಾಗೂ ಶಾಖೋತ್ಪನ್ನ ಸಾಮರ್ಥ್ಯತೆಗಳನ್ನು ಉಪಯೋಗಿಸದೇ ಹೊರಗಿನಿಂದ ಆಮದು ಮಾಡಿಕೊಂಡ ಅನಿಲವನ್ನು ಕಚ್ಚಾ ವಸ್ತುವಾಗಿ ಉಪಯೋಗಿಸಿಕೊಂಡಿರುವುದು ವಿಮರ್ಶೆಗೆ ಒಳಗಾಗಿದೆ. ಅಲ್ಲದೆ ಮಂಗಳೂರು ಕರಾವಳಿಯ ಸುತ್ತ-ಮುತ್ತಲಿನ ಪರಿಸರಕ್ಕೆ ಸಂಬಂಧಿಸಿದಂತೆ (Eco System)  ಆಗಬಹುದಾದ ಅಪಾಯವು ಕಳವಳಕ್ಕೆ ಕಾರಣವಾಗಿದೆ.

ಪ್ರಪಂಚದಾದ್ಯಂತ ವಿದ್ಯುಚ್ಛಕ್ತಿ ಸಲಕರಣೆಗಳ ಕಾರ್ಖಾನೆಗೆ ವಿರೋಧಿವಿದ್ದರೂ ಮತ್ತು ಭಾರತದಲ್ಲಿ ಆಮದು-ರಫ್ತುಗಳಿಗೆ ವಿಧಿಸುವ ಸುಂಕವನ್ನು ಕಡಿಮೆ ಮಾಡಿದ್ದರೂ ಸಹ ವಿದೇಶಿ ಕಂಪೆನಿಗಳು ಯೋಜನಾ ವೆಚ್ಚವನ್ನು ಮಿತಿಮೀರಿ ಹೆಚ್ಚು ಮಾಡಬಹುದೆಂದು ಶಂಕಿಸಲಾಗಿದೆ. ಕಡೆ ಪಕ್ಷ ಶೇ. ೧೬ರಷ್ಟು ತೆರಿಗೆಯ ನಂತರದ ವಾರ್ಷಿಕ ಆದಾಯ ಬರುವಂತೆ ಮಾಡುವೆವು ಎಂಬ ಸರ್ಕಾರದ ಭರವಸೆಯನ್ನು ಆಧಾರವಾಗಿಟ್ಟುಕೊಂಡು ವಿದೇಶಿ ಕಂಪನಿಗಳು ವಿದ್ಯುಚ್ಛಕ್ತಿ ಬೆಲೆಯನ್ನು ಹೆಚ್ಚಿಸಿ ಅದರಿಂದ ಅತಿಯಾದ ಲಾಭವನ್ನು ಪಡೆಯಬಹುದೆಂದು ವಿಮರ್ಶಕರು ಟೀಕಿಸುತ್ತಿದ್ದಾರೆ. ಸದ್ಯದಲ್ಲಿ ಕೊಜೆಂಟ್ರಿಕ್ಸ್ (Cogentrix) ಕಂಪನಿಯು ವಿದ್ಯುಚ್ಛಕ್ತಿಯನ್ನು ಖರೀದಿಸುವ ಒಂದು ಒಪ್ಪಂದದ ಬಗ್ಗೆ ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ ಜೊತೆಗೆ ಸಂದಾನ ನಡೆಸುತ್ತಿದೆ. ಮುಂದಿನ ಯೋಜನಾಭಿವೃದ್ಧಿಯನ್ನು ಕಾದುನೋಡಬೇಕಾಗಿದೆ.

೪. ಉಪ – ಸಂಹಾರ

ಕರ್ನಾಟಕ ರಾಜ್ಯ ರೈಲು ಅಭಿವೃದ್ಧಿಯಲ್ಲಿ ಬಹಳಷ್ಟು ಹಿಂದೆಬಿದ್ದಿದ್ದು, ಈಗ ಕಾರ್ಯವ್ಯಾಪ್ತಿಯಲ್ಲಿರುವ ಯೋಜನೆಗಳು ಉದ್ದೇಶಿತ ಕಾಲಾವದಿಯೊಳಗೆ ಪೂರ್ಣಗೊಂಡರೆ ಇನ್ನು ಕೇವಲ ನಾಲ್ಕೈದು ವರ್ಷಗಳಲ್ಲಿ ದೇಶದ ಇತರ ರಾಜ್ಯಗಳಂತೆಯೇ ಮುಂದೆ ಬರುವುದರಲ್ಲಿ ಸಂಶಯವಿಲ್ಲ. ರಸ್ತೆ ಮಾರ್ಗಗಳ ಜಾಲ ಮತ್ತು ಸಂಪರ್ಕ ಮಾಧ್ಯಮದ ಪ್ರಗತಿಯಲ್ಲೂ ಕರ್ನಾಟ್ಕ ಮುಂದೆ ಸಾಗಿದ್ದು ದೇಶದ ಇತರ ರಾಜ್ಯಗಳನ್ನು ಮೀರಿಸುವ ಮಟ್ಟದಲ್ಲಿದೆ. ದೇಶದ ಇತರ ರಾ‌ಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ತೀವ್ರ ಸ್ವರೂಪದ ವಿದ್ಯುಚ್ಛಕ್ತಿಯ ಕೊರತೆಯಿಂದ ನರಳುವುದನ್ನು ಗಮನಿಸಬಹುದು. ದೊಡ್ಡ ಪ್ರಯತ್ನದ ಮೂಲಕ ವಿದ್ಯುತ್ ಕಾರ್ಯ ಯೋಜನೆಗಳನ್ನು ಕೈಗೆತ್ತಿಕೊಂಡು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸುವ ಹೊರತು ರಾಜ್ಯದ ಮುಂದಿನ ಕೈಗಾರೀಕರಣ ಮತ್ತು ಕೃಷಿ ಅಭಿವೃದ್ಧಿ ಕುಂಠಿತಗೊಳ್ಳುವುದರಲ್ಲಿ ಸಂದೇಹವಿಲ್ಲ.

ರಾಜ್ಯದ ಸಾಧನ-ಸಂಪತ್ತುಗಳನ್ನು ಸವಿಸ್ತಾರವಾಗಿ ಪ್ರಗತಿಯ ಹಾದಿಯತ್ತ ಕೊಂಡೊಯ್ಯಲು ಖಾಸಗಿವಲಯ ಹಾಗೂ ಬಹುರಾಷ್ಟ್ರೀಯನ್ನರು ಮುಂದೆ ಬಂದಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ರಾಜ್ಯಕ್ಕೆ ಬೇಕಾದ ಅಧಿಕ ಬಂಡವಾಳ ಹಾಗೂ ಆಧುನಿಕ ತಾಂತ್ರಿಕತೆಗಳನ್ನು ತರುವುದರಲ್ಲಿದ್ದಾರೆ. ಜಾಗತೀಕರಣ ಹಾಗೂ ಖಾಸಗೀಕರಣದ ಕಾರ್ಯಗತಿ ನಿಧಾನವಾಗಿಯೂ ಹಾಗೂ ನಿಶ್ಚಿತವಾಗಿಯೂ ರಾಜ್ಯದಲ್ಲಿ ಕಾಲಿಡುತ್ತಿದೆ. ಬಹುಶಃ ಖಾಸಗಿ ಕ್ಷೇತ್ರದ ಬೆಲೆ ನೀತಿ ಅಥವಾ ಕಾರ್ಮಿಕ ಮತ್ತು ವೇತನ ದರದ ನೀತಿಗಳು ಯಾವ ರೀತಿಯಲ್ಲಿ ರೂಪಗೊಳ್ಳುತ್ತವೆ ಎನ್ನುವುದನ್ನು ಈಗಲೇ ಹೇಳುವುದು ಕಷ್ಟಸಾಧ್ಯ. ಖಾಸಗಿ ವಲಯದ ಪಾಲುಗೊಳ್ಳುವಿಕೆಯಿಂದ ಸಾಧನ ಸಂಪತ್ತುಗಳ ವ್ಯವಸ್ಥೆಯನ್ನು ಸ್ವಲ್ಪಮಟ್ಟಿಗೆ ಉತ್ತಮಗೊಳಿಸಬಹುದು. ಆದರೆ ಇದು ನಮ್ಮ ಜನತೆಯ ಶ್ರೇಯೋಭಿವೃದ್ಧಿಯನ್ನು ಉತ್ತಮಗೊಳಿಸುತ್ತದೆಯೇ? ಎಂಬುದನ್ನು ಕಾದು ನೋಡಬೇಕಾಗುತ್ತದೆ.

ಆಧಾರ ಗ್ರಂಥಗಳು

೧. ಕರ್ನಾಟಕ ಸರ್ಕಾರ, ಸಾಹಿತ್ಯ ಮತ್ತ ಸಂಸ್ಕೃತಿ ಅಭಿವೃದ್ಧಿ ಇಲಾಖೆ (೧೯೭೪), ‘ಕರ್ನಾಟಕ ಪ್ರಗತಿ ಪಥ’ ಬೆಂಗಳೂರು.

೨.ಸೆಂಟರ್ ಫಾರ್ ಮಾನಿಟೋರಿಂಗ್ ಇಂಡಿಯನ್ ಎಕಾನಮಿ (೧೯೯೪), ‘ಕರೆಂಟ್ ಎನರ್ಜಿ ಇನ್ ಇಂಡಿಯಾ’, ಜೂನ್, ಬೊಂಬಾಯಿ.

೩. ಗೌರ್ನಮೆಂಟ್ ಆಫ್ ಕರ್ನಾಟಕ ಪ್ಲಾನಿಂಗ್ ಡಿಪಾರ್ಟಮೆಂಟ್ (೧೯೯೪), ‘ಎಕನಾಮಿಕ್ ಸರ್ವೆ ೧೯೯೩-೯೪’, ಗೌರ್ನಮೆಂಟ್ ಪ್ರೆಸ್, ಮೈಸೂರು.

೪. ಇನ್‌ಸ್ಟಿಟ್ಯೂಟ್ ಫಾರ್ ಸೋಸಿಯಲ್ ಅಂಡ್ ಎಕನಾಮಿಕ್ ಚೇಂಜ್ (೧೯೮೯), ಪೇಪರ್ಸ್‌ಪ್ರೆಸೆಂಟೆಡ್ ಇನ್ ಎ ಸೆಮಿನಾರ್ ಆನ್ ‘ಕರ್ನಾಟಕಾಸ್ ಯಯ್ಥ್ ಫೈವ್ ಇಯರ್ ಪ್ಲಾನ್ ಪರ್‌ಸ್ಪೆಕ್ಟಿವ್’ ೧೬-೧೭ ನವೆಂಬರ್ (ಮಿಮಿಯೋಗ್ರಾಫಡ್).

೫. ವರ್ಲ್ಡ್ ಬ್ಯಾಂಕ್ (೧೯೯೪), ‘ವರ್ಲ್ಡ್ ಡೆವೆಲಪ್‌ಮೆಂಟ್ ರಿಪೋರ್ಟ್’ – ೧೯೯೪ ‘ಇನ್‌ಫ್ರಾಸ್ಟ್ರಕ್ಚರ್ ಫಾರ್ ಡೆವೆಲಪ್‌ಮೆಂಟ್’, ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್, ನ್ಯೂ ಡೆಲ್ಲಿ.

೬. ‘ಪ್ರಜಾವಾಣಿ’, ದಿನಪತ್ರಿಕೆ, ನವೆಂಬರ್ ೯, ೧೯೯೫, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು

ಕೋಷ್ಟಕ – ೧
ಕರ್ನಾಟಕ ಮತ್ತು ಭಾರತದಲ್ಲಿನ ಸಾರಿಗೆ ಮತ್ತು ಸಂಪರ್ಕ ಮಾಧ್ಯಮಗಳ ಬೆಳವಣಿಗೆಯ ಮಟ್ಟಗಳು

ಕ್ರ.ಸಂ.ವಿವರಗಳುಕರ್ನಾಟಕಭಾರತ೧.ಎಲ್ಲಾ ಗೇಜುಗಳನ್ನೊಳಗೊಂಡ ಒಟ್ಟು ರೈಲು ಮಾರ್ಗಗಳು ಪ್ರತಿ ೧೦೦೦ ಚ.ಕಿ.ಮೀ.ಗಳಂತೆ (ಉದ್ದಳತೆ-ಕಿ.ಮಿ.ಗಳಲ್ಲಿ) – (೧೯೯೧-೯೨)೧೬೧೯೨.ಒಟ್ಟು ರೈಲು ಮಾರ್ಗಗಳಲ್ಲಿ ಬ್ರಾಡ್ ಗೇಜ್ ಮಾರ್ಗದ ಶೇಕಡಾವಾರು ಪಾಲುದಾರಿಕೆ – (೧೯೯೧-೯೨)೨೭೫೬೩.ಎಲ್ಲಾ ರಸ್ತೆ ಮಾರ್ಗಗಳು ಪ್ರತಿ ೧೦೦೦ ಚ.ಕಿ.ಮೀ ಗಳಂತೆ (ಉದ್ದಳತೆ-ಕಿ.ಮೀ.ಗಳಲ್ಲಿ) – (೧೯೮೯)೭೯೮೬೦೮೪.ಎಲ್ಲಾ ರಸ್ತೆ ಮಾರ್ಗಗಳ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಮಾರ್ಗಗಳ ಶೇಕಡಾವಾರು ಪಾಲುದಾರಿಕೆ – (೧೯೮೯)೯೮೫.ಬಸ್ಸುಗಳ ಸಂಖ್ಯೆ ಪ್ರತಿ ಲಕ್ಷ ಜನಸಂಖ್ಯೆಗೆ ಅನುಗುಣವಾಗಿ – (೧೯೮೯)೪೫೩೫೬.ಸರಕು-ಸಾಮಗ್ರಿಗಳನ್ನು ಸಾಗಿಸುವ ವಾಹನಗಳ ಪ್ರಮಾಣ ಪ್ರತಿ ಲಕ್ಷ ಜನಸಂಖ್ಯೆಗೆ ಅನುಗುಣವಾಗಿ – ( ೧೯೮೯)೧೨೯೧೫೪೭.ನೋಂದಾಯಿಸಲ್ಪಟ್ಟ ಒಟ್ಟು ಮೋಟಾರು ವಾಹನಗಳ ಪ್ರಮಾಣ (ದ್ವಿಚಕ್ರವಾಹನಗಳು, ಟ್ರಾಕ್ಟರುಗಳು ಇತ್ಯಾದಿ ಸೇರಿದಂತೆ) ಪ್ರತಿ ಲಕ್ಷ ಜನಸಂಖ್ಯೆಗೆ ಅನುಗುಣವಾಗಿ – (೧೯೮೯)೨೫೫೦೧೯೭೨೮.ಅಂಚೆ ಕಛೇರಿಗಳು ಪ್ರತಿ ಲಕ್ಷ ಜನಸಂಖ್ಯೆಗೆ ಅನುಗುಣವಾಗಿ – (೧೯೯೨-೯೩)೨೨೧೮೯.ತಂತಿ (ಟೆಲಿಗ್ರಾಫ್) ಕಛೇರಿಗಳು ಪ್ರತಿ ಲಕ್ಷ ಜನಸಂಖ್ಯೆಗೆ ಅನುಗುಣವಾಗಿ – (೧೯೯೨-೯೩)೯೫೧೦.ದೂರವಾಣಿಗಳು ಪ್ರತಿ ಲಕ್ಷ ಜನಸಂಖ್ಯೆಗೆ ಅನುಗುಣವಾಗಿ – (೧೯೯೨-೯೩)೯೫೦೮೦೦

ಆಧಾರ :

೧. ಸೆನ್ಸಸ್ ಆಫ್ ಇಂಡಿಯಾ ೧೯೯೧, ‘ಫೈನಲ್ ಪಾಪ್ಯುಲೇಶನ್ ಟೋಟಲ್ಸ್’ ನ್ಯೂಡೆಲ್ಲಿ.

೨. ಸೆಂಟರ್ ಫಾರ್ ಮಾನಿಟೊರಿಂಗ್ ಇಂಡಿಯನ್ ಎಕನಾಮಿ, ನವೆಂಬರ್ ೧೯೯೩, ‘ಪ್ರೊಫ್ಸೆಲ್ಸ್ ಆಫ್ ಡಿಸ್ಟ್ರಿಕ್ಟ್ಸ್’, ಬಾಂಬೆ.

೩. ಕನ್ಫೆಡೆರೇಷನ್‌ಆಫ್ ಇಂಡಿಯನ್ ಇಂಡಸ್ಟ್ರಿ ೧೯೯೪, ‘ಹ್ಯಾಂಡ್ ಬುಕ್ ಆಫ್ ಸ್ಟ್ಯಾಟಿಸ್ಟಿಕ್ಸ್’, ನ್ಯೂಡೆಲ್ಲಿ.

೪.  ಗೌರ್ನಮೆಂಟ್ ಆಫ್ ಇಂಡಿಯಾ, ಸೆಂಟ್ರಲ್ ಸ್ಟ್ಯಾಟಿಸ್ಟಿಕಲ್ ಆರ್ಗನೈಸೇಷನ್, ‘ಸ್ಟ್ಯಾಟಸ್ಪಿಕಲ್ ಅಬ್‌ಸ್ಟ್ರಾಕ್ಟ್ ೧೯೯೦, ಇಂಡಿಯಾ, ನ್ಯೂಡೆಲ್ಲಿ.

೫. ಗೌರ್ನಮೆಂಟ್ ಆಫ್ ಇಂಡಿಯಾ, ಸೆಂಟ್ರಲ್ ಸ್ಟ್ಯಾಟಿಸ್ಪಿಕಲ್ ಆರ್ಗನೈಸೇಷನ್, ‘ಸ್ಟ್ಯಾಟಿಸ್ಪಿಕಲ್ ಅಬ್‌ಸ್ಟ್ರಾಕ್ಟ್ ಆಫ್ ದಿ ಇಂಡಿಯನ್ ಯೂನಿಯನ್-೧೯೬೫’, ನ್ಯೂಡೆಲ್ಲಿ.

೬. ಗೌರ್ನಮೆಂಟ್ ಆಫ್ ಕರ್ನಾಟಕ, ಡೈರೆಕ್ಟೊರೇಟ್ ಆಫ್ ಎಕನಾಮಿಕ್ಸ್ ಅಂಡ್ ಸ್ಟ್ಯಾಟಿಸ್ಟಿಕ್ಸ್- ೧೯೯೪, ‘ಕರ್ನಾಟಕ ಅಟ್ ಎ ಗ್ಲಾನ್ಸ್’, ಬೆಂಗಳೂರು.

ಕೋಷ್ಟಕ – ೨
ಕರ್ನಾಟಕ ಮತ್ತು ಭಾರತದಲ್ಲಿನ ವಿದ್ಯುಚ್ಛಕ್ತಿ ವಿಭಾಗದ ಬೆಳವಣಿಗೆಯ ಮಟ್ಟಗಳು

ಕ್ರ.ಸಂವಿವರಗಳುಕರ್ನಾಟಕಭಾರತ೧.ಅ. ಅಂದಾಜು ಮಾಡಲ್ಪಟ್ಟ ಅಗತ್ಯ ವಿದ್ಯುಚ್ಛಕ್ತಿಯ ಪ್ರಾಮಾಣ (ಮಿಲಿಯನ್ ಕಿಲೋವಾಟ್)-೧೯೯೩-೯೪೨೨,೦೭೦೩೨೩,೨೫೨ ಬ. ಪ್ರಸ್ತುತ ಲಭ್ಯವಿರುವ ವಿದ್ಯುಚ್ಛಕ್ತಿಯ ಪ್ರಮಾಣ (ಮಿ.ಕಿ.ವಾ.) – ೧೯೯೩-೯೪೧೭,೨೩೫೨೯೯,೪೯೪ ಕ. ಪ್ರಸಕ್ತ ವಿದ್ಯುಚ್ಛಕ್ತಿಯ ಕೊರತೆ (ಮಿ.ಕಿ.ವಾ)-೧೯೯೩-೯೪೪,೮೩೫೨೩,೭೫೮ ಡ. ಅಂದಾಜು ಮಾಡಲ್ಪಟ್ಟ ಅಗತ್ಯ ವಿದ್ಯುಚ್ಛಕ್ತಿಯಲ್ಲಿ ಶೇಕಡಾವಾರು ಕೊರತೆಯ ಪ್ರಮಾಣ-೧೯೯೩-೯೪೨೧.೯೭.೩೨.ಅ. ಸ್ಥಾಪಿತ ವಿದ್ಯುಚ್ಛಕ್ತಿಯ ಒಟ್ಟು ಉತ್ಪಾದನಾ ಸಾಮರ್ಥ್ಯತೆಯ ಪ್ರಮಾಣ (ಮೆ.ವಾ)-೧೯೯೩-೯೪೩,೧೬೬೭೬,೭೧೮ ಬ. ಜಲವಿದ್ಯುಚ್ಛಕ್ತಿಯ (ಹೈಡಲ್) ಶೇಕಡಾವಾರು ಪಾಲುದಾರಿಕೆ – ೧೯೯೩-೯೪೫೪.೯೨೬.೬ ಕ. ಶಾಖೋತ್ಪನ್ನ ವಿದ್ಯು‌ಚ್ಛಕ್ತಿಯ (ಥರ್ಮಲ್) ಶೇಕಡಾವಾರು ಪಾಲುದಾರಿಕೆ – ೧೯೯೩-೯೪೪೫.೧೭೦.೮ ಡ. ಪರಮಾಣು ಶಕ್ತಿ (ನ್ಯೂಕ್ಲಿಯರ್ ವಿದ್ಯುಚ್ಛಕ್ತಿ)ಯ ಶೇಕಡಾವಾರು ಪಾಲುದಾರಿಕೆ – ೧೯೯೩-೯೪೦೨.೬೩.ಅ. ಜಲ ವಿದ್ಯುತ್ ಸಾಮರ್ಥ್ಯತೆಯ ಪ್ರಮಾನ (ಮೆ.ವಾ)೪,೩೪೭೮೪,೦೪೪ ಬ. ಜಲ ವಿದ್ಯುಚ್ಛಕ್ತಿಯಲ್ಲಿನ ಸ್ಥಾಪಿತ ಸಾಮರ್ಥ್ಯತೆಯ ಪ್ರಮಾಣ (ಮೆ.ವಾ) – ೧೯೯೩-೯೪೨,೪೦೮೨೦,೩೬೬ ಕ. ಜಲ ವಿದ್ಯುತ್ ಸಾಮರ್ಥ್ಯತೆಗೆ  ಅನುಗುಣವಾಗದಂತೆ ಸ್ಥಾಪಿತ ಸಾಮರ್ಥ್ಯತೆಯ ಶೇಕಡಾವಾರು ಪ್ರಮಾಣ – ೧೯೯೩-೯೪೫೫.೪೨೪.೨೪.ಅ. ಶಾಖೋತ್ಪನ್ನ ವಿದ್ಯುಚ್ಛಕ್ತಿಯಲ್ಲಿನ ಸ್ಥಾಪಿತ ಸಾಮರ್ಥ್ಯತೆಯ ಪ್ರಮಾಣ  (ಮಿ.ವಾ)- ೧೯೯೩-೯೪೭೫೮೫೪,೯೪೭ ಬ. ಬಳಸುವ ಸಾಮರ್ಥ್ಯತೆಯ ಪ್ರಮಾಣ (ಪ್ಲಾಂಟ್ ಲೋಡ್ ಫ್ಯಾಕ್ಟರ್ ಆಫ್ ಥರ್ಮಲ್ ಪ್ಲಾಂಟ್ಸ್)-೧೯೯೩-೯೪೬೬.೯೬೧.೦೫.ಅ. ರವಾನೆ ಮತ್ತು ಹಂಚಿಕೆಯ ಲೈನುಗಳು (ಸರ್ಕ್ಯೂಟ್ ಕಿ.ಮಿ.)- ೧೯೯೦೩೬೬,೦೫೮೪೪೦೭,೫೦೧ ಬ. ರವಾನೆ ಮತ್ತು ಹಂಚಿಕೆಯ ಲೈನುಗಳು ಉದ್ಧಳತೆ ಪ್ರತಿ ೧೦೦೦ ಚ.ಕಿ.ಮೀ.ಗಳಂತೆ (ಸರ್ಕ್ಯೂಟ್ ಕಿ.ಮಿ.)- ೧೯೯೦೧೯೦೯೧೩೪೧೬.ಉತ್ಪಾದಿಸಲ್ಪಟ್ಟ ವಿದ್ಯುಚ್ಛಕ್ತಿಗೆ ಅನುಗುಣವಾದಂತೆ ರವಾನೆ ಮತ್ತು ಹಂಚಿಕೆಯಲ್ಲಾಗುತ್ತಿರುವ ವಿದ್ಯುತ್ ನಷ್ಟದಲ್ಲಿನ ಶೇಕಡಾವಾರು ಪ್ರಮಾಣ – ೧೯೯೨- ೯೩೧೮.೭೨೧.೮೭.ಒಟ್ಟು ವಿದ್ಯುತ್ ಉತ್ಪಾದನಾ ಪ್ರಮಾಣ (ಮಿಲಿಯನ್ ಕಿ.ವಾ.ಗ)- ೧೯೯೩-೯೪೧೪,೧೫೫೩೨೩,೫೩೧೮.ಅ. ಒಟ್ಟಾರೆ ವಿದ್ಯುತ್ ಬಳಕೆಯ ಪ್ರಮಾಣ (ಮಿ.ಕಿ.ವಾ.ಗ) – ೧೯೮೯- ೯೦೧೧,೦೭೮೧೭೫,೪೧೯ ಬ. ತಲಾವಾರು ವಿದ್ಯುತ್ ಬಳಕೆಯ ಪ್ರಮಾಣ (ಕಿ.ವಾ.ಗ)- ೧೯೮೯-೯೦೨೫೨೨೦೭ ಇ. ಗೃಹ ವಿದ್ಯುತ್ ಬಳಕೆಯ ಶೇಕಡಾವಾರು ಪ್ರಮಾಣ – ೧೯೮೯-೯೦೧೫.೩೧೬.೯ ಈ. ಕೃಷಿಗೆ ಬಳಸಿದ ವಿದ್ಯುಚ್ಛಕ್ತಿಯ ಶೇಕಡಾವಾರು ಪ್ರಮಾಣ – ೧೯೮೯-೯೦೩೨.೨೨೫.೧ ಉ. ಕೈಗಾರಿಕೆಗೆ ಬಳಸಿದ ವಿದ್ಯುಚ್ಛಕ್ತಿಯ ಶೇಕಡಾವಾರು ಪ್ರಮಾಣ – ೧೯೮೯-೯೦೪೯.೦೪೬.೦ ಊ. ವಾಣಿಜ್ಯ ಕ್ಷೇತ್ರಕ್ಕೆ ಬಳಸಿದ ವಿದ್ಯುಚ್ಛಕ್ತಿಯ ಶೇಕಡಾವಾರು ಪ್ರಮಾಣ – ೧೯೮೯-೯೦೨.೦೫.೪ ಋ. ಇತರೇ ಕ್ಷೇತ್ರಕ್ಕೆ ಬಳಸಿದ ವಿದ್ಯುಚ್ಛಕ್ತಿಯ ಶೇಕಡಾವಾರು ಪ್ರಮಾಣ – ೧೯೮೯-೯೦೧.೫೬.೬ ಋ. ಗ್ರಾಮೀಣ ವಿದ್ಯುದ್ದೀಕರಣದ ಶೇಕಡಾವಾರು ಪ್ರಾಮಾಣ ೧೯೯೨-೯೩೧೦೦೮೪ ಎ. ನೀರಾವರಿ ಪಂಪುಸೆಟ್ಟುಗಳು/ಕೊಳವೆ ಬಾವಿಗಳಿಗೆ ಒದಗಿಸಿದ ವಿದ್ಯುತ್ ಪ್ರಮಾಣ, ಪ್ರತಿ ೧೦೦೦ ಹೆಕ್ಟೇರ್‌ವುಳ್ಳ ಒಟ್ಟು ಬೆಳೆ ತೆಗೆಯುವ ಭೂಮಿ – ೧೯೯೩೭೫೫೬

ಆಧಾರ : ಸೆಂಟರ್ ಫಾರ್ ಮಾನಿಟೊರಿಂಗ್ ಇಂಡಿಯನ್ ಎಕಾನಮಿ – ಜೂನ್ ೧೯೯೪, ‘ಕರೆಂಟ್

ಎನರ್ಜಿ ಸೀನ್ ಇನ್ ಇಂಡಿಯಾ’, ಬಾಂಬೆ.

ಪುಸ್ತಕ: ಕನ್ನಡ ಅಧ್ಯಯನ (ಕರ್ನಾಟಕದ ಆರ್ಥಿಕತೆ)
ಲೇಖಕರು: ಎಂ. ಜಾನ್ಸನ್ ಸಾಮ್ಯುಯಲ್ಎಂ.ಲಿಂಗರಾಜು
ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಸಂಪುಟ ಸಂಪಾದಕರು: ಕೆ.ಜಿ. ವಾಸುಕಿಪ್ರೊ. ಅಬ್ದುಲ್ ಅಜೀಜ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ