ಗುರುವಾರ, ನವೆಂಬರ್ 25, 2021

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯ ಮಹಿಳೆಯರ ಪಾತ್ರ

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯ ಮಹಿಳೆಯರ ಪಾತ್ರ

ಬ್ರಿಟಿಷರ ಆಳ್ವಿಕೆಯಿಂದ ರೋಸಿ ಹೋಗಿದ್ದ ಭಾರತೀಯರು ಬ್ರಿಟಿಷರ ವಿರುದ್ಧ ತಿರುಗಿಬಿದ್ದು ಗುಲಾಮತನದಿಂದ ಸ್ವತಂತ್ರರಾಗಲು ನಿರ್ಧರಿಸಿ ಹೋರಾಟ ಪ್ರಾರಂಭಿಸಿದರು. ಇಂತಹ ಹೋರಾಟದಲ್ಲಿ ಅನೇಕ ಪುರುಷರು, ಮಹಿಳೆಯರು, ಮಕ್ಕಳು ಭಾಗವಹಿಸಿ ದೊಡ್ಡ ಕ್ರಾಂತಿಯನ್ನೇ ಪ್ರಾರಂಭಿಸಿದರು, ಅದೇ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಸಂಗ್ರಾಮ.

ಇಂತಹ ಮಹೋನ್ನತ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವಿರಾರು ಮಹಿಳೆಯರು ಪುರುಷರಷ್ಟೆ ಪ್ರಮುಖ ಪಾತ್ರ ವಹಿಸಿದರು. ಅಂತಹ ಸಾವಿರಾರು ದೇಶಭಕ್ತಿ, ತ್ಯಾಗ, ಬಲಿದಾನ, ಹೋರಾಟ ಮತ್ತು ಸಾಮಾಜಿಕ ಪ್ರಜ್ಞೆಯಿಂದ ಮೆರೆದ ಧೀಮಂತ, ದಿಟ್ಟ ಮಹಿಳೆಯರನ್ನು ಮೆಚ್ಚಿಕೊಳ್ಳುತ್ತಾ, ಅವರನ್ನೇ ಸ್ಫೂರ್ತಿಯಾಗಿ ಇಂದಿನ ತಲೆಮಾರಿನವರು ಅವರ ವಿಷಯಗಳನ್ನು ತಿಳಿದು, ಅವರನ್ನು ಆದರ್ಶವಾಗಿರಿಸಿಕೊಂಡು ದೇಶಭಕ್ತಿ ಮರೆಯಲಿ ಎಂದು ಆಶಿಸುತ್ತಾ ಕೆಲವು ಧೀಮಂತ ದಿಟ್ಟಮಹಿಳೆಯರ ಪರಿಚಯ ಮಾಡಿಕೊಳ್ಳೋಣ.

ಝಾನ್ಸಿ ರಾಣಿ ಲಕ್ಷ್ಮೀಬಾಯಿ  1828-1858 

ಲಕ್ಷ್ಮೀಬಾಯಿ ಇವರ ತೌರೂರಿನ ಹೆಸರು ಮಣಿಕರ್ಣಿಕಾ ತಾಂಬೆ. ಝಾನ್ಸಿಯ ರಾಜನನ್ನು ವಿವಾಹವಾದ ನಂತರ ಝಾನ್ಸಿರಾಣಿ ಲಕ್ಷ್ಮೀಬಾಯಿ ಎಂಬ ಹೆಸರು ಪಡೆದರು. ರಾಜನ ನಿಧನಾನಂತರ ಒಂದು ಮಗುವನ್ನು ದತ್ತು ಪಡೆದು ತಾವೇ ರಾಜ್ಯಭಾರ ಮಾಡುತ್ತಿದ್ದರು. ಬ್ರಿಟಿಷ್ ವೈಸ್‌ರಾಯ್ ಲಾರ್ಡ್‌ಡಾಲ್ ಹೌಸಿಯ ದತ್ತು ಮಕ್ಕಳಿಗೆ ರಾಜ್ಯದ ಹಕ್ಕಿಲ್ಲವೆಂಬ ಕಾಯಿದೆಯನ್ನು ವಿರೋಧಿಸಿ ಬ್ರಿಟಿಷ್‌ರ ವಿರುದ್ಧ ಯುದ್ಧ ಘೋಷಿಸಿದರು. ತಾಂತ್ಯಾಟೋಪಿಯವರ ನಾಯಕತ್ವದಲ್ಲಿ ಹೋರಾಟ ಪ್ರಾರಂಭವಾಯ್ತು. ಸ್ವತಃ ತಾವೇ ತಮ್ಮ ದತ್ತು ಪುತ್ರನನ್ನು ಬೆನ್ನಿಗೆ ಕಟ್ಟಿಕೊಂಡು ರಣಾಂಗಣಕ್ಕಿಳಿದು ರಣಚಂಡಿಯಂತೆ ಹೋರಾಡಿದರು. 1958 ರ ಜೂನ್ 18 ರಂದು ಅವರು ವೀರಮರಣವನ್ನು ಹೊಂದಿದರು. ಅವರು ಸ್ವರ್ಗಸ್ಥರಾಗಿ 162 ವರ್ಷಗಳಾದರೂ ಇಂದಿಗೂ ಝಾನ್ಸಿಯ ಪ್ರಾಂತದಲ್ಲಿ ಅವರ ಶೌರ್ಯದ ಗುಣಗಾನ ಜಾನಪದ ಹಾಡುಗಳ ಮೂಲಕ ಪ್ರಚಾರದಲ್ಲಿದೆ.

ಸರೋಜಿನಿ ನಾಯ್ಡು  1879-1949 

ಭಾರತ ಸ್ವಾತಂತ್ಯ್ರ ಸಂಗ್ರಾಮದಲ್ಲಿ ಭಾಗವಹಿಸಿದ ಪ್ರಮುಖರಲ್ಲಿ ಭಾರತದ ಕೋಗಿಲೆ ಎಂದು ಬಿರಿದಾಂಕಿತರಾದ ಕವಿಯತ್ರಿ ದಿಟ್ಟ ಧೀಮಂತ ಮಹಿಳೆ ಉರ್ದು, ತೆಲುಗು, ಇಂಗ್ಲೀಷ್, ಪರ್ಷಿಯಾ ಹಾಗೂ ಬಂಗಾಲಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಗುರು ಗೋಪಾಲಕೃಷ್ಣ ಗೋಖಲೆಯವರೊಂದಿಗೆ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದರು. 1925 ರಲ್ಲಿ ಕಾನ್ಪುರದಲ್ಲಿ ನಡೆದ ಭಾರತೀಯ ಮಹಿಳಾ ಅಧಿವೇಶನದಲ್ಲಿ ಅಧ್ಯಕ್ಷೆಯಾಗಿದ್ದ ಪ್ರಥಮ ಭಾರತೀಯ ಮಹಿಳೆ ಎಂದು ಪ್ರಖ್ಯಾತರಾದ ಧೀಮಂತ ಮಹಿಳೆ, 1949 ಮಾರ್ಚ್ 29 ರಂದು ಮರಣ ಹೊಂದಿದರು.

ರಾಜಕುಮಾರಿ ಅಮೃತ್‌ಕೌರ್ 1839-1964

ಸ್ವಾತಂತ್ರ ಸಂಗ್ರಾಮದಲ್ಲಿ ಮಹಾತ್ಮಗಾಂಧಿಯವರ ಸಹಭಾಗಿತ್ವದಲ್ಲಿ ಚಳುವಳಿಗೆ ಇಳಿದ ದಿಟ್ಟೆ. 1927 ರಲ್ಲಿ ಅಖಿಲ ಭಾರತ ಮಹಿಳಾ ಅಧಿವೇಶನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸ್ವತಂತ್ರ ಭಾರತದ ಪ್ರಥಮ ಮಹಿಳಾ ಆರೋಗ್ಯ ಮಂತ್ರಿಯಾಗಿದ್ದರು ಮತ್ತು ದೆಹಲಿಯಲ್ಲಿ ಅಖಿಲ ಭಾರತ ಆರೋಗ್ಯ ವಿಜ್ಞಾನ ಸಂಸ್ಥೆ (ಂIಒS) ಯನ್ನು ಆರಂಭಿಸಿದರು. 1964 ರಲ್ಲಿ ನಿಧನರಾದರು.

ಮಾತಂಗಿ ಹಜ್ರಾ 1870-1942

ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯವರಾದ ಮಾತಂಗಿಯವರು ಕ್ವಿಟ್ ಇಂಡಿಯಾ ಚಳುವಳಿ ಮತ್ತು ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇವರನ್ನು ಮಹಿಳಾಗಾಂಧಿ ಎಂದು ಕರೆಯುತ್ತಿದ್ದರು. 1942 ಸೆಪ್ಟೆಂಬರ್ 29 ರಂದು ತಮ್ಲುಕ್ ಪೋಲೀಸ್ ಠಾಣೆ ವಶಪಡಿಸಿಕೊಳ್ಳಲು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಹೋಗುತ್ತಿರುವಾಗ ಅವರಿಗೆ ಗುಂಡೇಟು ತಗುಲಿತು. ಆದರೂ ವಿಚಲಿತರಾಗದೆ ವಂದೇಮಾತರಂ ಎಂದು ಕೂಗುತ್ತಾ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ದಿಟ್ಟ, ಧೀಮಂತ ಮಹಿಳೆ ಮಾತಂಗಿ ಹಜ್ರಾ.

ದುರ್ಗಾಬಾಯಿ ದೇಶಮುಖ್ 1909-1981

12 ನೇ ವಯಸ್ಸಿನಲ್ಲಿ ಇಂಗ್ಲೀಷರ ವಿರುದ್ದ ಸಿಡಿದು ವಿದ್ಯಾಭ್ಯಾಸ ಮೊಟಕುಗೊಳಿಸಿದರು. ನಂತರ ರಾಜಮಂಡ್ರಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಬಾಲಿಕಾ ಹಿಂದಿ ಪಾಠಶಾಲೆಯನ್ನು ಆರಂಭಿಸಿದರು. ಮಹಾತ್ಮಗಾಂಧಿಯವರ ಅನುಯಾಯಿಯಾಗಿದ್ದ ದುರ್ಗಾಬಾಯಿ ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಬಾರಿ ಜೈಲುವಾಸ ಅನುಭವಿಸಿದರು. ಸಣ್ಣ ವಯಸ್ಸಿನಲ್ಲಿ ಹೋರಾಟಕ್ಕಿಳಿದ ಧೀಮಂತೆ ದಿಟ್ಟ ಮಹಿಳೆ ದುರ್ಗಾ 1981 ರಲ್ಲಿ ನಿಧನರಾದರು. ಇವರೂ ಎಂದಿಗೂ ಚಿನ್ನಾಭರಣ ಧರಿಸದ ಧೀಮಂತೆ.

ಮೇಡಂ ಭೀಕಾಜಿ ಕಾಮಾ 1861-1936

ಮಹನೀಯರೇ ಏಳಿ ಈ ಧ್ವಜಕ್ಕೆ ವಂದಿಸಿ. ಧ್ವಜದೊಡನೆ ಭಾರತದ ಸ್ವಾತಂತ್ರ್ಯಕ್ಕಾಗಿ ಸಹಕರಿಸಿ ಎಂದು ಜರ್ಮನಿಯ ಸ್ಟುವರ್ಟ್‌ನಲ್ಲಿ 1907 ರಲ್ಲಿ ನಡೆದ ಸಮಾಜವಾದಿ ಅಧಿವೇಶನದಲ್ಲಿ ಪ್ರಥಮಬಾರಿಗೆ ಧ್ವಜಾರೋಹಣ ಮಾಡಿದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಧ್ರುವತಾರೆ ಎನಿಸಿದ ಮೇಡಂ ಭೀಕಾಜಿ ಕಾಮ ಇಂಡಿಯನ್ ಹೌಸ್, ಪ್ಯಾರಿಸ್ ಇಂಡಿಯನ್ ಸೊಸೈಟಿ ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ದಿಟ್ಟ ಮಹಿಳೆ. ಪ್ರಥಮ ಧ್ವಜ ಇಂದು ಕ್ರಮೇಣ ಬದಲಾವಣೆ ಪಡೆಯಿತು. 1936 ಆಗಸ್ಟ್ 31 ರಂದು ನಿಧನರಾದ ದಿಟ್ಟ ಧೀಮಂತೆ ಮೇಡಂ ಭೀಕಾಜಿಕಾಮ.

ಸುಚೇತ ಕೃಪಲಾನಿ 1904-1974

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದ ಧೀಮಂತೆ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ರಥಮ ಮಹಿಳಾ ಮುಖ್ಯ ಮಂತ್ರಿಯಾಗಿ ಉತ್ತರ ಪ್ರದೇಶದ ಆಳ್ವಿಕೆಯನ್ನು 1963 ರಿಂದ 1967 ರವರೆಗೆ ಯಶಸ್ವಿಯಾಗಿ ನಿಭಾಯಿಸಿ 1974 ಡಿಸೆಂಬರ್ ಒಂದರಂದು ದೆಹಲಿಯಲ್ಲಿ ನಿಧನರಾದರು.

ಇವರಷ್ಟೇ ಅಲ್ಲದೆ ಬಹಳ ಮುಖ್ಯವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ದೇಶಕ್ಕಾಗಿ ತಮ್ಮ ತ್ಯಾಗ, ದಿಟ್ಟತನದಿಂದ ಬಲಿಯಾದ ಮಹಿಳೆಯರೆಂದರೆ ಕಿತ್ತೂರು ರಾಣಿ ಚೆನ್ನಮ್ಮ, ಬೇಗಲತಾಫಿಯಾ ಅಬ್ದುಲ್ ವಾಜಿದ್, ಜ್ಯೋತಿಮಯಿ ಗಂಗೂಲಿ ರಾಣಿ ಗೈದಿನಲ್ಯೂ, ಕಸ್ತೂರಬಾ ಗಾಂಧಿ, ವಿಜಯಲಕ್ಷ್ಮಿ ಪಂಡಿತ್, ಕಮಲಾ ನೆಹರೂ, ರಿಹಾನತ್ಯಾಯ ಬೇಡಾ, ಕ್ಯಾಪ್ಟನ್ ಲಕ್ಷ್ಮಿಸೈಗಲ್, ಕಲ್ಪನಾದತೈ ನೋನಿಬಾಲದೇವಿ, ಪ್ರೀತಿಲತಾ ವಾಡ್ಡಿಯರ್.

ಭಾರತೀಯರಷ್ಟೇ ಅಲ್ಲದೆ ಬ್ರಿಟಿಷ್ರಾದ ಅನಿಬೆಸೆಂಟ್ (1847-1933) ಸಮಾಜವಾದಿ ಮಹಿಳೆಯರ ಹಕ್ಕಿಗಾಗಿ ಹೋರಾಟ ಮಾಡಿದ ಶಿಕ್ಷಣ ತಜ್ಞೆ, ತತ್ವಜ್ಞಾನಿ, ಥಿಯೋಸೋಫಿಕಲ್ ಸೊಸೈಟಿ ಹೋಂರೂಲ್ ಚಳುವಳಿಯಲ್ಲಿ ಭಾರತೀಯರ ಪರವಾಗಿ ಹೋರಾಟ ಮಾಡಿದ್ದರು. 1917ರಲ್ಲಿ ಕಲ್ಕತ್ತಾದಲ್ಲಿ ನಡೆದ ಭಾರತೀಯ ಮಹಿಳಾ ಕಾಂಗ್ರೆಸ್‌ನ ಮೊದಲ ಅಧ್ಯಕ್ಷೆಯಾಗಿದ್ದರು.

ನಮ್ಮ ದೇಶ ಭಾರತದ 75 ನೇ ಸ್ವಾತಂತ್ರ್ಯೋತ್ಸವದ ಆಚರಣೆ ಸಂದರ್ಭದಲ್ಲಿ ಇತಿಹಾಸ ಪುಟದಲ್ಲಿ ನೆನಪಾಗಿ ಬೆರತು ಹೋಗಿರುವ, ದೇಶವನ್ನು ತಮ್ಮ ತ್ಯಾಗ, ಬಲಿದಾನಗಳಿಂದ ಗುಲಾಮಗಿರಿಯಿಂದ ಹೊರತಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ, ಪ್ರಸಿದ್ಧರಾದ ದಿಟ್ಟ ಧೀಮಂತ ಮಹಿಳೆಯರನ್ನು ನೆನೆಯುತ್ತಾ ನಮ್ಮ ನಮನಗಳನ್ನು ಸಲ್ಲಿಸೋಣ. ಇವರೆಲ್ಲರೂ ತೋರಿಸಿದ ಮಾರ್ಗದಲ್ಲಿ ಇಂದಿನ ಪೀಳಿಗೆಯೂ ದೇಶದ ಪ್ರಗತಿಗಾಗಿ ಮುಂದುವರೆಯಲಿ ಎಂದು ಹಾರೈಸೋಣ.

ದೇಶ ನಮಗೇನು ಕೊಟ್ಟಿತು ಎಂದು ಯೋಚಿಸುವ ಬದಲು ದೇಶಕ್ಕಾಗಿ ನಾನೇನು ಮಾಡಿದೆ ಎಂದು ಒಮ್ಮೆ ನೆನೆದು ಪ್ರಗತಿಯತ್ತ ಸಾಗಲು ಭಾರತೀಯರಾಗಿ ಶ್ರಮಿಸೋಣ. ಭಾರತಾಂಬೆಯ ಮಡಿಲಲ್ಲಿ ಬೆಳೆದ ನಾವೇ ಧನ್ಯರು.

ಜೈ ಭಾರತ ಮಾತೆ..

✍️ ಶ್ರೀಮತಿ ಬಿ. ಎಸ್. ಹೇಮಲತ, ಬೆಂಗಳೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ