ಗುರುವಾರ, ಮಾರ್ಚ್ 30, 2017

ಮಣಿಪುರ: ವಿಶ್ವಾಸ ಗೆದ್ದ ಬಿರೇನ್ (ಮುಖ್ಯಮಂತ್ರಿ)

ಮಣಿಪುರ: ವಿಶ್ವಾಸ ಗೆದ್ದ ಬಿರೇನ್‌

ಇಂಫಾಲ್‌: ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರ ವಿಶ್ವಾಸಮತ ಗೆದ್ದಿದೆ. ಟಿಎಂಸಿಯ ಏಕೈಕ ಶಾಸಕ ಟಿ. ರವೀಂದ್ರ ಸಿಂಗ್‌ ಕೂಡ ಬಿರೇನ್‌ ಸಿಂಗ್‌ ನೇತೃತ್ವದ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಹಾಗಾಗಿ ಮತ ವಿಭಜನೆ ನಡೆಸದೆ,  ಧ್ವನಿಮತದಿಂದ ವಿಶ್ವಾಸಮತ ಅಂಗೀಕಾರವಾಗಿದೆ ಎಂದು ಘೋಷಿಸಲಾಯಿತು.

60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 21 ಶಾಸಕರನ್ನು ಹೊಂದಿದೆ. ನಾಗಾ ಪೀಪಲ್ಸ್‌ ಫ್ರಂಟ್‌ (ಎನ್‌ಪಿಎಫ್‌), ನ್ಯಾಷನಲ್‌ ಪೀಪಲ್ಸ್‌ ಪಾರ್ಟಿಯ (ಎನ್‌ಪಿಪಿ) ತಲಾ ನಾಲ್ವರು ಮತ್ತು ಲೋಕಜನಶಕ್ತಿ ಪಾರ್ಟಿಯ ಒಬ್ಬ ಶಾಸಕ ವಿಶ್ವಾಸಮತದ ಪರ ಮತ ಹಾಕಿದ್ದಾರೆ.

ಪಕ್ಷೇತರ ಶಾಸಕ ಅಸಬ್‌ ಉದ್ದೀನ್‌ ಮತ್ತು ಬಿರೇನ್‌ ನೇತೃತ್ವದ ಮಂತ್ರಿ ಪರಿಷತ್‌ಗೆ ಸೇರ್ಪಡೆಗೊಂಡಿರುವ ಒಬ್ಬ ಕಾಂಗ್ರೆಸ್‌ ಶಾಸಕ ಕೂಡ ಸರ್ಕಾರವನ್ನು ಬೆಂಬಲಿಸಿದ್ದಾರೆ.

ಟಿಎಂಸಿ ಆಪಾದನೆ: ಸರ್ಕಾರಕ್ಕೆ ಬೆಂಬಲ ನೀಡುವ ವಿಚಾರದಲ್ಲಿ ರವೀಂದ್ರ ಸಿಂಗ್‌ ಅವರು ಪಕ್ಷದ ನಾಯಕತ್ವದ ಜತೆ ಚರ್ಚಿಸಿಲ್ಲ ಎಂದು ಟಿಎಂಸಿ ಆಪಾದಿಸಿದೆ.

ಆದರೆ ಈ ಆಪಾದನೆಯನ್ನು ರವೀಂದ್ರ ಅವರು ಅಲ್ಲಗಳೆದಿದ್ದಾರೆ. ‘ಪಕ್ಷದ ನಾಯಕತ್ವದ ಜತೆ ಸಮಾಲೋಚನೆ ನಡೆಸಿದ ನಂತರವೇ ಈ ನಿರ್ಧಾರ ಕೈಗೊಳ್ಳಲಾಗಿದೆ. ನಾನು ಪಕ್ಷದ ಆದೇಶವನ್ನು ಉಲ್ಲಂಘಿಸಿಲ್ಲ. ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಪಕ್ಷ ಹೇಳಿದ್ದನ್ನೇ ಮಾಡಿದ್ದೇನೆ’ ಎಂದು ರವೀಂದ್ರ ಹೇಳಿದ್ದಾರೆ.

ಪಕ್ಷದ ನಿರ್ಧಾರವನ್ನು ಉಲ್ಲಂಘಿಸಿದ್ದರೆ ತಮ್ಮ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕಿತ್ತು. ಹಾಗೇನೂ ಆಗಿಲ್ಲ. ಪಕ್ಷ ತಮ್ಮ ಜತೆಗೆ ಇದೆ ಎಂಬುದೇ ಅದರ ಅರ್ಥ ಎಂದು ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಲು ರವೀಂದ್ರ ಅವರಿಗೆ ಸೂಚಿಲಾಗಿತ್ತು. ಆದರೆ ಕಾಂಗ್ರೆಸ್‌ಗೆ ಸರ್ಕಾರ ರಚಿಸುವುದು ಸಾಧ್ಯವಾಗಿಲ್ಲ. ನಂತರ ಬಿಜೆಪಿ ಮುಖಂಡರ ಜತೆಗೆ ರವೀಂದ್ರ ಅವರು ರಾಜಭವನಕ್ಕೆ ಹೋಗಿದ್ದಾರೆ ಎಂದು ಟಿಎಂಸಿ ಉಪಾಧ್ಯಕ್ಷ ಮುಕುಲ್‌ ರಾಯ್‌ ಹೇಳಿದ್ದಾರೆ.

‘ರವೀಂದ್ರ ವಿರುದ್ಧ ಯಾವುದೇ ಸಂದರ್ಭದಲ್ಲಿ ಶಿಸ್ತುಕ್ರಮ ಕೈಗೊಳ್ಳಬಹುದು. ಆದರೆ ಅವರ ಜೀವಕ್ಕೆ ಅಪಾಯ ಉಂಟಾಗುವ ಸನ್ನಿವೇಶ ಸೃಷ್ಟಿಸಲು ನಾವು ಬಯಸುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಅವರು ಮಾರ್ಚ್‌ 15ರಂದ ಬಿರೇನ್‌ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ್ದರು. ಆದರೆ ಇದಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿತ್ತು. ಅತಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸನ್ನೇ ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಹೇಳಿತ್ತು.

ಐದನೇ ಪ್ರಶಸ್ತಿಗೆ ಮುತ್ತಿಕ್ಕಿದ ಫೆಡರರ್

ಐದನೇ ಪ್ರಶಸ್ತಿಗೆ ಮುತ್ತಿಕ್ಕಿದ ಫೆಡರರ್‌

ಇಂಡಿಯಾನ ವೆಲ್ಸ್‌ (ರಾಯಿಟರ್ಸ್‌/ ಎಎಫ್‌ಪಿ): ಕುತೂಹಲ ಕೆರಳಿಸಿದ್ದ ಫೈನಲ್‌ ಹೋರಾಟದಲ್ಲಿ ತಮ್ಮ ಆತ್ಮೀಯ ಸ್ನೇಹಿತ ಸ್ಟಾನಿಸ್ಲಾಸ್‌ ವಾವ್ರಿಂಕ ಅವರ ಸವಾಲು ಮೀರಿ ನಿಂತ ರೋಜರ್‌ ಫೆಡರರ್‌ ಅವರು ಇಂಡಿಯಾನ ವೆಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಸ್ವಿಟ್ಜರ್‌ಲೆಂಡ್‌ನ ಫೆಡರರ್‌ 6–4, 7–5ರ ನೇರ ಸೆಟ್‌ಗಳಿಂದ ಜಯಭೇರಿ ಮೊಳಗಿ ಸಿದರು. ಇದರೊಂದಿಗೆ ಟೂರ್ನಿಯಲ್ಲಿ ಐದನೇ ಪ್ರಶಸ್ತಿ ಗೆದ್ದು ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು. ನೊವಾಕ್‌ ಈ ಮೊದಲು ಟೂರ್ನಿಯಲ್ಲಿ ಐದು ಟ್ರೋಫಿ ಎತ್ತಿಹಿಡಿದ ಹೆಗ್ಗಳಿಕೆ ಹೊಂದಿದ್ದರು.

35 ವರ್ಷದ ರೋಜರ್‌ ಅವರು ಎಟಿಪಿ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಹಿರಿಯ ಆಟಗಾರ ಎಂಬ ಹಿರಿಮೆಯನ್ನೂ ತಮ್ಮದಾಗಿಸಿಕೊಂಡರು.
ಈ ಸಾಧನೆ ಮೊದಲು ಆ್ಯಂಡ್ರೆ ಅಗಾಸ್ಸಿ ಅವರ ಹೆಸರಿನಲ್ಲಿತ್ತು. ಅಗಾಸ್ಸಿ ಅವರು 2004ರಲ್ಲಿ ಸಿನ್ಸಿನಾಟಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು. ಆಗ ಅವರಿಗೆ 34 ವರ್ಷ ವಯಸ್ಸಾಗಿತ್ತು.

ಗಾಯದ ಕಾರಣ ಆರು ತಿಂಗಳು  ಅಂಗಳದಿಂದ ದೂರ ಉಳಿದಿದ್ದ ಫೆಡರರ್‌ ಇದರಿಂದ ಚೇತರಿಸಿಕೊಂಡ ಬಳಿಕ ಈ ವರ್ಷದ ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ನಲ್ಲಿ  ಪ್ರಶಸ್ತಿ ಗೆದ್ದಿದ್ದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 10ನೇ ಸ್ಥಾನ ಹೊಂದಿದ್ದ ರೋಜರ್‌ ಈ ಟೂರ್ನಿಯಲ್ಲೂ ಅಮೋಘ ಸಾಮರ್ಥ್ಯ ತೋರಿದರು.

ಸೆಮಿಫೈನಲ್‌ನಲ್ಲಿ  ಸ್ಪೇನ್‌ನ ಆಟಗಾರ ರಫೆಲ್‌ ನಡಾಲ್‌ ಅವರ ಸದ್ದಡಗಿಸಿ ವಿಶ್ವಾಸದಿಂದ ಪುಟಿಯುತ್ತಿದ್ದ ಅವರು ಫೈನಲ್‌ ಹೋರಾಟದಲ್ಲೂ ಆಕ್ರಮಣಕಾರಿ ಆಟದ ಮೂಲಕ ಅಭಿಮಾನಿಗಳ ಮನಗೆದ್ದರು. ಸ್ವಿಟ್ಜರ್‌ಲೆಂಡ್‌ನವರೇ ಆದ ವಾವ್ರಿಂಕ ವಿರುದ್ಧ 19–3ರ ಗೆಲುವಿನ ದಾಖಲೆ ಹೊಂದಿದ್ದ ರೋಜರ್‌ ಆರಂಭಿಕ ಸೆಟ್‌ನಲ್ಲಿ ಶರವೇಗದ ಸರ್ವ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿ ಸುವ ಪ್ರಯತ್ನ ನಡೆಸಿದರು. ಆದರೆ ವಾವ್ರಿಂಕ ಇದಕ್ಕೆ ಬಗ್ಗಲಿಲ್ಲ. ಹೀಗಾಗಿ ಮೊದಲ ಎಂಟು ಗೇಮ್‌ಗಳಲ್ಲಿ ಸಮಬಲದ ಹೋರಾಟ ಕಂಡು ಬಂತು. ಒಂಬತ್ತನೇ ಗೇಮ್‌ನಲ್ಲಿ ತಮ್ಮ ಸರ್ವ್‌ ಉಳಿಸಿಕೊಂಡ ಫೆಡರರ್‌ ಮರು ಗೇಮ್‌ನಲ್ಲಿ ಸ್ನೇಹಿತನ ಸರ್ವ್‌ ಮುರಿದು ಸೆಟ್‌ ತಮ್ಮದಾಗಿಸಿಕೊಂಡರು.

ವೆಸ್ನಿನಾಗೆ ಟ್ರೋಫಿ
ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ರಷ್ಯಾದ ಎಲೆನಾ ವೆಸ್ನಿನಾ ಪ್ರಶಸ್ತಿ ಜಯಿಸಿ ದ್ದಾರೆ. ಫೈನಲ್‌ ಹೋರಾಟದಲ್ಲಿ ವೆಸ್ನಿ ನಾ 6–7, 7–5, 6–4ರಲ್ಲಿ ತಮ್ಮದೇ ದೇಶದ ಸ್ವೆಟ್ಲಾನ ಕುಜ್ನೆತ್ಸೋವಾ ಅವರ ನ್ನು ಮಣಿಸಿದರು.

ಆರನೇ ಸ್ಥಾನಕ್ಕೇರಿದ ರೋಜರ್‌
ಇಲ್ಲಿ ಪ್ರಶಸ್ತಿ ಗೆದ್ದಿರುವ ಫೆಡರರ್‌ ಸೋಮವಾರ ಬಿಡುಗಡೆಯಾಗಿರುವ ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ.
ಈ ಟೂರ್ನಿಗೂ ಮುನ್ನ ಅವರು 10ನೇ ಸ್ಥಾನದಲ್ಲಿದ್ದರು. ಇಲ್ಲಿ ರನ್ನರ್‌ ಅಪ್‌ ಆದ ವಾವ್ರಿಂಕ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬ್ರಿಟನ್‌ನ ಆ್ಯಂಡಿ ಮರ್ರೆ ಅಗ್ರಸ್ಥಾನ ದಲ್ಲಿದ್ದು, ಸರ್ಬಿಯಾದ ನೊವಾಕ್‌ ಜೊಕೊವಿಚ್‌ ನಂತರದ ಸ್ಥಾನ ಹೊಂದಿ ದ್ದಾರೆ.

ಸ್ಪೇನ್‌ನ ರಫೆಲ್‌ ನಡಾಲ್‌ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಅಗ್ರಪಟ್ಟ ಅಲಂಕರಿಸಿದ್ದಾರೆ. ಅವರು ಅಮೆರಿಕಾದ ಸೆರೆನಾ ವಿಲಿಯಮ್ಸ್‌ ಅವರನ್ನು ಹಿಂದಿಕ್ಕಿದ್ದಾರೆ. ಕೆರ್ಬರ್‌ ಖಾತೆಯಲ್ಲಿ 7, 515 ಪಾಯಿಂಟ್ಸ್‌ ಇದ್ದರೆ, ಸೆರೆನಾ 7, 130 ಅಂಕ ಹೊಂದಿದ್ದಾರೆ.

ರಾಷ್ಟ್ರೀಯ ವೀಕ್ಷಕರಾಗಿ 12 ಒಲಿಂಪಿಯನ್ಗಳ ನೇಮಕ

ರಾಷ್ಟ್ರೀಯ ವೀಕ್ಷಕರಾಗಿ 12 ಒಲಿಂಪಿಯನ್‌ಗಳ ನೇಮಕ

ನವದೆಹಲಿ: ದೇಶದ ಕ್ರೀಡಾ ಕ್ಷೇತ್ರದ ಸುಧಾರಣೆಗಾಗಿ ಸುದೀರ್ಘ ಅವಧಿಯ ಯೋಜನೆ ರೂಪಿಸಲು ಮತ್ತು ಅನುಷ್ಠಾನಗೊಳಿಸಲು 12 ಮಂದಿ ಮಾಜಿ ಒಲಿಂಪಿಯನ್‌ ಕ್ರೀಡಾಪಟುಗಳನ್ನು ರಾಷ್ಟ್ರೀಯ ವೀಕ್ಷಕರನ್ನಾಗಿ  ಕೇಂದ್ರ ಸರ್ಕಾರವು ನೇಮಕ ಮಾಡಿದೆ.

ಬೀಜಿಂಗ್ ಒಲಿಂಪಿಕ್ಸ್‌ನ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅಭಿನವ್ ಬಿಂದ್ರಾ, ಅಥ್ಲೀಟ್‌ಗಳಾದ ಪಿ.ಟಿ. ಉಷಾ, ಅಂಜು ಬಾಬಿ ಜಾರ್ಜ್, ಆರ್ಚರಿಪಟು ಸಂಜೀವಕುಮಾರ್ ಸಿಂಗ್, ಬ್ಯಾಡ್ಮಿಂಟನ್ ಆಟಗಾರ್ತಿ ಅಪರ್ಣಾ ಪೋಪಟ್, ಬಾಕ್ಸರ್‌ ಎಂ.ಸಿ. ಮೇರಿ ಕೋಮ್, ಅಖಿಲ್ ಕುಮಾರ್, ಹಾಕಿ ಪಟು ಜಗಬೀರ್ ಸಿಂಗ್, ಟೆನಿಸ್ ಪಟು ಸೋಮದೇವ ದೇವವರ್ಮನ್, ವೇಟ್‌ಲಿಫ್ಟರ್‌ ಕರ್ಣಂ ಮಲ್ಲೇಶ್ವರಿ, ಕುಸ್ತಿಪಟು ಸುಶೀಲ್ ಕುಮಾರ್, ಫುಟ್‌ ಬಾಲ್ ಆಟಗಾರ ಐ.ಎಂ. ವಿಜಯನ್ , ಈಜುಪಟು ಖಜಾನ್ ಸಿಂಗ್ ಮತ್ತು ಟೇಬಲ್ ಟೆನಿಸ್ ಆಟಗಾರ ಕಮಲೇಶ್ ಮೆಹ್ತಾ ಅವರನ್ನು ನೇಮಕ ಮಾಡಲಾಗಿದೆ.

'ರಾಷ್ಟ್ರೀಯ ವೀಕ್ಷಕರು ದೇಶದಲ್ಲಿ ಕ್ರೀಡೆಯ ಅಭಿವೃದ್ಧಿಗಾಗಿ ರೂಪುರೇಷೆ ರಚಿಸುವಲ್ಲಿ ಕೇಂದ್ರ ಸರ್ಕಾರ, ಭಾರತೀ ಯ ಕ್ರೀಡಾ ಪ್ರಾಧಿಕಾರ (ಸಾಯ್),  ರಾಷ್ಟ್ರೀಯ ಕ್ರೀಡಾ ಫೆಡ ರೇಷನ್‌ಗಳು ,  ಮತ್ತು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಗಳಿಗೆ ನೆರವು ನೀಡಲಿದ್ದಾರೆ’ ಎಂದು ಕೇಂದ್ರ ಕ್ರೀಡಾ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ತಂಡಗಳ ಆಯ್ಕೆ, ರಾಷ್ಟ್ರೀಯ ತರಬೇತಿ ಶಿಬಿರಗಳ ಆಯೋಜನೆ, ಅಥ್ಲೀಟ್‌ಗಳ ಕೌಶಲ್ಯ ಅಭಿವೃದ್ಧಿಗಾಗಿ ದೀರ್ಘ ಮಾದರಿಯ ಯೋಜನೆ, ತರಬೇತುದಾರರು, ತಾಂತ್ರಿಕ ಅಧಿಕಾರಿಗಳಿಗೆ ತರಬೇತಿ ಮತ್ತು ನಿರ್ವಹಣೆ,  ಅಥ್ಲೀಟ್‌ಗಳ ಸಾಧನೆ ಗಳ ಮೌಲ್ಯ ಮಾಪನದಂತಹ ಕಾರ್ಯಗಳನ್ನೂ ವೀಕ್ಷಕರು ನಿರ್ವಹಿಸಲಿದ್ದಾರೆ’ ಎಂದು  ಪ್ರಕಟಣೆ ಯಲ್ಲಿ ತಿಳಿಸಲಾಗಿದೆ. 2020, 2024 ಮತ್ತು 2028ರ ಒಲಿಂಪಿಕ್ಸ್‌ ಕೂಟಗಳಿಗೆ ಈಗಿನಿಂದಲೇ ಸಿದ್ಧತೆ ಆರಂಭಿಸಲು ವೀಕ್ಷಕರು ಯೋಜನೆ ರೂಪಿಸಲಿದ್ದಾರೆ.

ತಮಿಳುನಾಡಿಗೆ ವಿಜಯ್ ಹಜಾರೆ ಟ್ರೋಫಿ

ತಮಿಳುನಾಡಿಗೆ ವಿಜಯ್‌ ಹಜಾರೆ ಟ್ರೋಫಿ

ನವದೆಹಲಿ : ಅನುಭವಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ (112; 120ಎ, 14ಬೌಂ) ಅವರ ಆಕರ್ಷಕ ಶತಕದ ಬಲದಿಂದ ತಮಿಳುನಾಡು ತಂಡ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದೆ.

ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ  ಫೈನಲ್‌ ಪಂದ್ಯದಲ್ಲಿ ತಮಿಳುನಾಡು ತಂಡ 37ರನ್‌ ಗಳಿಂದ ಬಂಗಾಳ ತಂಡವನ್ನು ಮಣಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಐದನೇ ಪ್ರಶಸ್ತಿ ಎತ್ತಿಹಿಡಿಯಿತು.

ವಿಜಯ್‌ ಶಂಕರ್‌ ಪಡೆ ಏಳು ವರ್ಷಗಳ ಬಳಿಕ ವಿಜಯ್‌ ಹಜಾರೆ ಟ್ರೋಫಿ ಜಯಿಸಿತು. 2009–10ರಲ್ಲಿ ತಂಡ ಕೊನೆಯ ಬಾರಿಗೆ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು. ಆಗಲೂ ಫೈನಲ್‌ನಲ್ಲಿ ಬಂಗಾಳ ತಂಡವನ್ನು ಸೋಲಿಸಿತ್ತು. ಮೊದಲು ಬ್ಯಾಟ್‌ ಮಾಡಿದ ತಮಿಳುನಾಡು 47.2 ಓವರ್‌ಗಳಲ್ಲಿ 217ರನ್‌ ಪೇರಿಸಿತು.
ಸವಾಲಿನ ಗುರಿ ಬೆನ್ನಟ್ಟಿದ ಬಂಗಾಳ ತಂಡ 45.5 ಓವರ್‌ಗಳಲ್ಲಿ 180ರನ್‌ ಗಳಿಸಲಷ್ಟೇ ಶಕ್ತವಾಯಿತು.

ಆರಂಭಿಕ ಆಘಾತ:  ಬ್ಯಾಟಿಂಗ್‌ ಆರಂಭಿಸಿದ ವಿಜಯ್‌ ಶಂಕರ್‌ ಪಡೆ ಆರಂಭಿಕ ಸಂಕಷ್ಟ ಎದುರಿಸಿತು. ತಂಡದ ಮೊತ್ತ 49 ರನ್‌ ಆಗುವಷ್ಟರಲ್ಲಿ ಗಂಗ ಶ್ರೀಧರ್‌ ರಾಜು (4), ಕೌಶಿಕ್‌ ಗಾಂಧಿ (15), ಬಾಬಾ ಅಪರಾಜಿತ್‌ (5) ಮತ್ತು ನಾಯಕ ವಿಜಯ್‌ (2) ಪೆವಿಲಿಯನ್‌ ಸೇರಿ ಕೊಂಡರು. ವೇಗಿ ಅಶೋಕ್‌ ದಿಂಡಾ ಮೂರು ವಿಕೆಟ್‌ ಉರುಳಿಸಿ ಬಂಗಾಳ ತಂಡಕ್ಕೆ ಮೇಲುಗೈ ತಂದುಕೊಟ್ಟರು.

ಈ ಹಂತದಲ್ಲಿ ಕಾರ್ತಿಕ್‌ ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು.   ಬಾಬಾ ಇಂದರ್‌ಜಿತ್‌ (32; 49ಎ, 1ಬೌಂ) ಜೊತೆ ಐದನೇ  ವಿಕೆಟ್‌ಗೆ 85ರನ್‌ ಕಲೆಹಾಕಿದ ಅವರು ಆರನೇ ವಿಕೆಟ್‌ಗೆ ವಾಷಿಂಗ್ಟನ್‌ ಸುಂದರ್‌ (22; 30ಎ, 2ಬೌಂ) ಮತ್ತು ಏಳನೇ ವಿಕೆಟ್‌ಗೆ ಮಹಮ್ಮದ್‌ (10) ಜೊತೆ ಕ್ರಮವಾಗಿ 38 ಮತ್ತು 28ರನ್‌ ಸೇರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಅಮಿರ್‌ ಗನಿ ಬೌಲ್‌ ಮಾಡಿದ 43ನೇ ಓವರ್‌ನ ಮೂರನೇ ಎಸೆತವನ್ನು ಬೌಂಡರಿಗಟ್ಟಿ ಶತಕ ಪೂರೈಸಿದ ಕಾರ್ತಿಕ್‌ 112 ರನ್‌ ಗಳಿಸಿದ್ದ ವೇಳೆ ಮಹಮ್ಮದ್ ಶಮಿಗೆ ವಿಕೆಟ್‌ ಒಪ್ಪಿಸಿದರು. ಗಾಯದಿಂದ ಚೇತರಿಸಿಕೊಂಡ ಬಳಿಕ ಮೊದಲ ಪಂದ್ಯ ಆಡಿದ ಶಮಿ ನಾಲ್ಕು ವಿಕೆಟ್‌ ಪಡೆದು ಬಂಗಾಳ ಪರ ಯಶಸ್ವಿ ಬೌಲರ್‌ ಅನಿಸಿದರು.

ಗುರಿ ಬೆನ್ನಟ್ಟುವ ಹಾದಿಯಲ್ಲಿ ಬಂಗಾಳ ತಂಡ  ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್‌ (1) ಮತ್ತು ಅಗ್ನಿವ್‌ ಪಾನ್‌ (0) ಅವರ ವಿಕೆಟ್‌ ಅನ್ನು ಬೇಗನೆ ಕಳೆದುಕೊಂಡಿತು. ಈ ಹಂತದಲ್ಲಿ ನಾಯಕ ಮನೋಜ್‌ ತಿವಾರಿ (32; 46ಎ, 3ಬೌಂ, 1ಸಿ) ಮತ್ತು ಶ್ರೀವತ್ಸ ಗೋಸ್ವಾಮಿ (23; 46ಎ, 3ಬೌಂ) ತಂಡಕ್ಕೆ ಆಸರೆಯಾಗುವ ಲಕ್ಷಣ ತೋರಿದ್ದರು.

13ನೇ ಓವರ್‌ ಬೌಲ್‌ ಮಾಡಿದ ರಾಹಿಲ್ ಷಾ ಐದನೇ ಎಸೆತದಲ್ಲಿ ಗೋಸ್ವಾಮಿ ವಿಕೆಟ್‌ ಪಡೆದು ಈ ಜೋಡಿಯನ್ನು ಮುರಿದರು.
ವಿಜಯ್‌ ಶಂಕರ್‌ ಬೌಲ್‌ ಮಾಡಿದ 21ನೇ ಓವರ್‌ನ ಐದನೇ ಎಸೆತದಲ್ಲಿ ಮನೋಜ್‌ ಬೌಲ್ಡ್‌ ಆಗಿದ್ದರಿಂದ ತಂಡದ ಗೆಲುವಿನ ಹಾದಿ ಕಠಿಣವಾಯಿತು. ಸುದೀಪ್‌ ಚಟರ್ಜಿ (58; 79ಎ, 5ಬೌಂ) ಅರ್ಧಶತಕ ಸಿಡಿಸಿದ್ದರಿಂದ ಬಂಗಾಳದ ಗೆಲುವಿನ ಆಸೆ ಚಿಗುರೊಡೆ ದಿತ್ತು.  ಅವರ ವಿಕೆಟ್‌ ಪತನವಾದ ಬಳಿಕ ಬಂದ ಆಟಗಾರರು ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ಸಂಕ್ಷಿಪ್ತ ಸ್ಕೋರ್‌: ತಮಿಳುನಾಡು: 47.2 ಓವರ್‌ಗಳಲ್ಲಿ 217 (ಕೌಶಿಕ್‌ ಗಾಂಧಿ 15, ದಿನೇಶ್‌ ಕಾರ್ತಿಕ್‌ 112, ಬಾಬಾ ಇಂದರ್‌ಜಿತ್‌ 32, ವಾಷಿಂಗ್ಟನ್‌ ಸುಂದರ್‌ 22, ಅಶ್ವಿನ್‌ ಕ್ರಿಸ್ಟ್‌ 10; ಅಶೋಕ್‌ ದಿಂಡಾ 36ಕ್ಕೆ3, ಕಾನಿಷ್ಕ್‌ ಸೇಠ್‌ 59ಕ್ಕೆ1, ಮಹಮ್ಮದ್‌ ಶಮಿ 26ಕ್ಕೆ4).

ಬಂಗಾಳ: 45.5 ಓವರ್‌ಗಳಲ್ಲಿ 180 (ಶ್ರೀವತ್ಸ ಗೋಸ್ವಾಮಿ 23, ಮನೋಜ್‌ ತಿವಾರಿ 32, ಸುದೀಪ್‌ ಚಟರ್ಜಿ 58, ಅನುಸ್ತಪ್‌ ಮಜುಂದಾರ್‌ 24, ಅಮೀರ್‌ ಗನಿ 24; ಅಶ್ವಿನ್‌ ಕ್ರಿಸ್ಟ್‌ 23ಕ್ಕೆ2, ಎಂ. ಮಹಮ್ಮದ್‌ 30ಕ್ಕೆ2, ರಾಹಿಲ್‌ ಷಾ 38ಕ್ಕೆ2, ವಿಜಯ್‌ ಶಂಕರ್‌ 20ಕ್ಕೆ1, ಬಾಬಾ ಅಪರಾಜಿತ್‌ 22ಕ್ಕೆ1, ಸಾಯಿ ಕಿಶೋರ್‌ 29ಕ್ಕೆ1).

ಫಲಿತಾಂಶ: ತಮಿಳುನಾಡಿಗೆ 37ರನ್‌ ಗೆಲುವು ಹಾಗೂ ಪ್ರಶಸ್ತಿ.
ಪಂದ್ಯಶ್ರೇಷ್ಠ: ದಿನೇಶ್ ಕಾರ್ತಿಕ್‌.

ವಿಶ್ವ ಮಹಿಳಾ ಸ್ನೂಕರ್ : ವಿದ್ಯಾ ಪಿಳ್ಳೈಗೆ ಬೆಳ್ಳಿ

ವಿಶ್ವ ಮಹಿಳಾ ಸ್ನೂಕರ್‌: ವಿದ್ಯಾ ಪಿಳ್ಳೈಗೆ ಬೆಳ್ಳಿ

ಸಿಂಗಪುರ (ಪಿಟಿಐ): ಅಪೂರ್ವ ಸಾಮರ್ಥ್ಯ ತೋರಿದ ಭಾರತದ ವಿದ್ಯಾ ಪಿಳ್ಳೈ ಅವರು ಇಲ್ಲಿ ನಡೆದ ವಿಶ್ವ ಮಹಿಳಾ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದಾರೆ.

ಸೋಮವಾರ ನಡೆದ ಫೈನಲ್‌ ಹೋರಾಟದಲ್ಲಿ ಭಾರತದ ವಿದ್ಯಾ 4–5 ಫ್ರೇಮ್‌ಗಳಿಂದ ಹಾಂಕಾಂಗ್‌ನ ಎನ್‌ಜಿ ಆನ್‌ ಯೀ ವಿರುದ್ಧ ಪರಾಭವ
ಗೊಂಡರು. ಲೀಗ್‌ ಹಂತದ ಪಂದ್ಯಗಳಲ್ಲಿ ಅಮೋಘ ಆಟ ಆಡಿದ್ದ ವಿದ್ಯಾ ಫೈನಲ್‌ ಹೋರಾಟದ ಮೊದಲ ಆರು ಫ್ರೇಮ್‌ ಗಳು ಮುಗಿದಾಗ 4–2ರ ಮುನ್ನಡೆ ಗಳಿಸಿದ್ದರು.

ಹೀಗಾಗಿ ಬೆಂಗಳೂರಿನ ಆಟಗಾರ್ತಿ ಚಿನ್ನ ಗೆಲ್ಲುವುದು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ನಂತರದ ಮೂರು ಫ್ರೇಮ್‌ಗಳಲ್ಲಿ ಅವರು ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿದ್ದರಿಂದ ಹಿನ್ನಡೆ ಎದುರಾಯಿತು. ನಿರ್ಣಾಯಕ ಫ್ರೇಮ್‌ನ ಆರಂಭದಲ್ಲಿ ವಿದ್ಯಾ 22 ಸ್ಕೋರ್‌ ಸಂಗ್ರಹಿಸಿದರು.
ಆದರೆ ಮಾಜಿ ವಿಶ್ವ ಚಾಂಪಿಯನ್‌ ಯೀ ಬ್ರೇಕ್‌ ಮೂಲಕ 36 ಸ್ಕೋರ್‌ ಕಲೆಹಾಕಿ 42–22ರ ಮುನ್ನಡೆ ಪಡೆದುಕೊಂಡರು.

ಈ ಹಂತದಲ್ಲಿ ಮತ್ತೆ ಪುಟಿದೆದ್ದ ವಿದ್ಯಾ ದಿಟ್ಟ ಆಟ ಆಡಿದರಾದರೂ ನಾಲ್ಕು ಪಾಯಿಂಟ್ಸ್‌ನಿಂದ (50–54) ಚಿನ್ನ ಗೆಲ್ಲುವ ಅವಕಾಶ ಕೈಚೆಲ್ಲಿದರು.
ಲೀಗ್‌ ಹಂತದಲ್ಲಿ ಅಮೋಘ ಆಟ ಆಡಿದ್ದ ವಿದ್ಯಾ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ 4–1ರಲ್ಲಿ ಲಾತ್ವಿಯಾದ ಆಟಗಾರ್ತಿ, ಮಾಜಿ ಯುರೋಪಿಯನ್‌ ಚಾಂಪಿಯನ್‌ ತತ್‌ಜಾನ ವಸಿಲ್‌ಜೆವಾ ಅವರನ್ನು ಮಣಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ 4–1ರಿಂದ ಹಾಂಕಾಂಗ್‌ನ ಕ್ಯಾಥರಿನಾ ವಾನ್‌ ಅವರನ್ನು ಸೋಲಿಸಿದ್ದ ಭಾರತದ ಆಟಗಾರ್ತಿ, ಸೆಮಿಫೈನಲ್‌ನಲ್ಲಿ 5–1ರಲ್ಲಿ ಇಂಗ್ಲೆಂಡ್‌ನ ರೆಬೆಕ್ಕಾ ಗ್ರೆಂಜರ್‌ ಅವರ ಸವಾಲು ಮೀರಿ ನಿಂತಿದ್ದರು.

ಪೆಸ್ಬೊಕ್ನಲ್ಲಿ ಫೇಕ್ ನ್ಯೂಜ್ ಹಾಕಿದರೆ ಭಾರಿ ದಂಡ

ಫೆಸ್ಬುಕ್ನಲ್ಲಿ ಫೇಕ್ ನ್ಯೂಸ್ ಹಾಕಿದರೆ ಭಾರಿ ದಂಡ!!

ಫೆಸ್ಬುಕ್, ವಾಟ್ಸ್‌ಆಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಪ್ರತಿಯೊಬ್ಬ ಜನಸಾಮಾನ್ಯನಿಗೂ ವೇದಿಕೆಯಾಗಿದ್ದೇನೋ ನಿಜ. ಆದರೆ, ಇದೇ ವೇದಿಕೆಯಿಂದ ಹಲವು ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ.!! ಹೌದು, ಆನ್ಲೈನ್ ಪ್ರಪಂಚದಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಜನರನ್ನು ದಾರಿತಪ್ಪಿಸುವ ಘಟನೆಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿದೆ.!!

ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಜನರನ್ನು ದಾರಿತಪ್ಪಿಸಲು ಮತ್ತು ಬೇರೆಯವರನ್ನು ನಿಂದನೆ ಮಾಡಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ತಲುಪುತ್ತಿರುವುದು ಗೊತ್ತಿದ್ದರೂ ಸಹ ಸರ್ಕಾರ ಏನು ಮಾಡದ ಸ್ಥಿತಿಯಲ್ಲಿದೆ.ಕೆಲವೊಂದು ಚಿಕ್ಕ ಪ್ರಕರಣಗಳು ಮಾತ್ರ ಹೊರಬರುತ್ತವೆ.!!

ಇಲ್ಲಿ ಹೀಗಿದ್ದರೆ, ಫೆಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ನ್ಯೂಸ್, ಪರನಿಂದನೆ ಪೋಸ್ಟ್ ಮಾಡಿದರೆ ಹೆಚ್ಚು ದಂಡ ವಿಧಿಸುವ ಬಗ್ಗೆ ಜರ್ಮನಿಯಲ್ಲಿ ಚರ್ಚೆಯಾಗುತ್ತಿದೆ.
ಈ ಬಗ್ಗೆ ಜರ್ಮನಿಯ ನ್ಯಾಯಾಂಗ ಇಲಾಖೆ ಸಚಿವ ಹೈಕೊ ಮಾಸ್ ಸುಳಿವು ನೀಡಿದ್ದು, ಇಂತಹ ಪೋಸ್ಟ್ ಮಾಡುವವರಿಗೆ ಭಾರಿ ಮೊತ್ತದ ದಂಡ ವಿಧಿಸುವ ಕರಡನ್ನು ಅವರು ಪ್ರಸ್ತಾಪಿಸಿದ್ದಾರೆ.!!

ಇತ್ತೀಚಿಗೆ ಜರ್ಮನ್ಗೆ ಬರುತ್ತಿರುವ ವಲಸಿಗರ ಸಂಖ್ಯೆ ಹೆಚ್ಚಾಗಿದ್ದು, ಇವರ ವಿರುದ್ದ ದೇಶದಲ್ಲಿ ಸುಳ್ಳುಸುದ್ದಿಗಳನ್ನು ಹರಡುತ್ತಿದ್ದರು. ಇದರಿಂದ ದೇಶದ ಸಾಮರಸ್ಯ ಹಾಳಾಗಿತ್ತು. ಹಾಗಾಗಿ, ಇದನ್ನು ತಡೆಯಲು ಜರ್ಮನ್ ಸರ್ಕಾರ ಈ ಕಾನೂನನ್ನು ಜಾರಿಗೆ ತರುತ್ತಿದೆ ಎನ್ನಲಾಗಿದೆ.

ಝಾಕೀರ್ ಸ್ಥಾಪಿಸಿದ ಸಂಸ್ಥೆ ಮುಟ್ಟುಗೋಲು

ಝಾಕಿರ್ ನಾಯ್ಕ ಸ್ಥಾಪಿಸಿದ್ದ ಸಂಸ್ಥೆಯ 18 ಕೋಟಿ ರೂ. ಮೊತ್ತದ ಆಸ್ತಿ ಮುಟ್ಟುಗೋಲು

ಹೊಸದಿಲ್ಲಿ, ಮಾ.20: ವಿದ್ವಾಂಸ ಝಾಕಿರ್ ನಾಯ್ಕಾ ಸ್ಥಾಪಿಸಿರುವ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ಗೆ ಸೇರಿದ, ದಕ್ಷಿಣ ಮುಂಬೈಯ ಡೊಂಗ್ರಿಯಲ್ಲಿರುವ 18.37 ಕೋಟಿ ರೂ. ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ. ಝಾಕಿರ್ ವಿರುದ್ಧದ ಅಕ್ರಮ ಹಣ ಚಲುವೆ (ಕಪ್ಪು ಹಣ ಬಿಳುಪು ಮಾಡುವ ಪ್ರಕ್ರಿಯೆ) ಪ್ರಕರಣದ ಅಂಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಝಾಕಿರ್ ನಾಯ್ಕಿ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೊಸ ಸಮನ್ಸ್ ಜಾರಿಗೊಳಿಸಿದ್ದು ಮಾ.30ರಂದು ಹೊಸದಿಲ್ಲಿಯಲ್ಲಿರುವ ಕೇಂದ್ರ ಕಚೇರಿಯೆದುರು ಹಾಜರಾಗುವಂತೆ ಸೂಚಿಸಿದೆ. ಬಾಂಗ್ಲಾದೇಶದ ಢಾಕಾದ ಕೆಫೆಯೊಂದರ ಮೇಲೆ ಕಳೆದ ವರ್ಷ ಭಯೋತ್ಪಾದಕರು ನಡೆಸಿದ ದಾಳಿಗೆ ಸಂಬಂಧಿಸಿ, ಈ ಉಗ್ರರಲ್ಲಿ ಹಲವರು ಝಾಕಿರ್ ನಾಯ್ಕಾ ಬೋಧನೆ ಯಿಂದ ಪ್ರಭಾವಿತರಾಗಿ ಈ ಕಾರ್ಯ ನಡೆಸಿದ್ದರು ಎಂಬ ವರದಿಯ ಹಿನ್ನೆಲೆಯಲ್ಲಿ, ಉಗ್ರವಾದ ವಿರೋಧಿ ಕಾನೂನಿನಡಿ ನಾಯ್ಕೆಗೆ ಮಾ.14ರಂದು ಹಾಜರಾಗುವಂತೆ ಮೊದಲ ಸಮನ್ಸ್ ಜಾರಿಗೊಳಿಸಲಾಗಿತ್ತು.
ಎನ್‌ಐಎ ಕಳೆದ ನವೆಂಬರ್‌ನಲ್ಲಿ ಝಾಕಿರ್ ನಾಯ್ಕ್ ಮತ್ತವರ ಸಹಚರರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಮುಂಬೈಯಲ್ಲಿರುವ ಝಾಕಿರ್ ನಿವಾಸಕ್ಕೆ ನೋಟಿಸ್ ಕಳುಹಿಸಲಾಗಿದೆ. ಬಂಧನದಿಂದ ತಪ್ಪಿಸಿಕೊಳ್ಳಲು ಝಾಕಿರ್ ಇದೀಗ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

ಸ್ಟೇಝಿಲ್ಲಾ ಸಹಸ್ಥಾಪಕ ವಸುಪಾಲ್

ಸ್ಟೇಝಿಲ್ಲಾ ಸಹಸ್ಥಾಪಕ ವಸುಪಾಲ್ ಬಂಧನ ಖಂಡಿಸಿ ರಾಜನಾಥ್‌ಗೆ ಪ್ರಮುಖ ಟೆಕ್ ಉದ್ಯಮಿಗಳ ಪತ್ರ

ಹೊಸದಿಲ್ಲಿ,ಮಾ.20: ಸ್ಟೇಝಿಲ್ಲಾ ಸಹಸ್ಥಾಪಕ ಯೋಗೇಂದ್ರ ವಸುಪಾಲ್ ಅವರನ್ನು ಬಂಧಿಸಿರುವ ವಿಧಾನದ ಬಗ್ಗೆ ಕಳವಳ ವ್ಯಕ್ತಪಡಿಸಿ ಪೇಟಿಎಮ್‌ನ ವಿಜಯ ಶೇಖರ ಶರ್ಮಾ, ಓಲಾ ಕ್ಯಾಬ್ಸ್‌ನ ಭವಿಷ್ ಅಗರವಾಲ್ ಮತ್ತು ಮಾಜಿ ಇನ್ಫೋಸಿಸ್ ನಿರ್ದೇಶಕ ಟಿ.ವಿ.ಮೋಹನದಾಸ ಪೈ ಸೇರಿದಂತೆ ಪ್ರಮುಖ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳು ಮತ್ತು ಸ್ಟಾರ್ಟ್ ಅಪ್‌ಗಳ ಸ್ಥಾಪಕರು ಗೃಹಸಚಿವ ರಾಜನಾಥ ಸಿಂಗ್ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

'ಹೆಲ್ಪ್-ಯೋಗಿ-ಡಾಟ್ ಕಾಮ್' ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪತ್ರಕ್ಕೆ ಎಕ್ಜೋಟೆಲ್‌ನ ಶಿವಕುಮಾರ ಗಣೇಶನ್,ಕ್ಲೌಡ್ ಚೆರ್ರಿಯ ವಿನೋದ್ ಮುತ್ತುಕೃಷ್ಣನ್ ಸೇರಿದಂತೆ 73 ಉದ್ಯಮಿಗಳು ಸಹಿ ಹಾಕಿದ್ದಾರೆ.

ನಾವೆಲ್ಲ ಒಂದು ಸಮುದಾಯವಾಗಿ ಒಂದಾಗಿದ್ದೇವೆ ಮತ್ತು 'ಸ್ಟಾರ್ಟ್ ಅಪ್ ಇಂಡಿಯಾ ಸ್ಟಾಂಡ್ ಅಪ್ ಇಂಡಿಯಾ 'ಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಲ್ಲಿ ನಂಬಿಕೆಯಿರಿಸಿದ್ದೇವೆ.
ವಿವಾದ ಕುರಿತು ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯಬೇಕು ಎಂದು ನಮ್ಮ ಸಮುದಾಯ ಕರೆ ನೀಡುತ್ತಿದೆ ಮತ್ತು ಈ ದೇಶದ ಕಾನೂನುಗಳನ್ನು ಬುಡಮೇಲುಗೊಳಿಸಲು ಯಾವುದೇ ಅಧಿಕಾರ ದುರುಪಯೋಗವನ್ನು ಬಲವಾಗಿ ವಿರೋಧಿಸಿತ್ತೇವೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ವಿಷಯವನ್ನು ಪರಿಶೀಲಿಸುವಂತೆ ಮತ್ತು ಯೋಗಿ (ವಸುಪಾಲ್)ಯವರಿಗೆ ತ್ವರಿತ ನ್ಯಾಯ ದೊರೆಯುವಂತೆ ನೋಡಿಕೊಳ್ಳಬೇಕೆಂದು ನಾವು ನಿಮ್ಮನ್ನು ವಿನಮ್ರವಾಗಿ ಕೋರುತ್ತಿದ್ದೇವೆ ಎಂದು ಪತ್ರವು ಹೇಳಿದೆ.

ಹೋಮ್‌ಸ್ಟೇಗಳ ಆನ್‌ಲೈನ್ ತಾಣ ಸ್ಟೇಝಿಲ್ಲಾದ ಸಿಇಒ ಆಗಿರುವ ವಸುಪಾಲ್ ಅವರನ್ನು ಜಿಗ್‌ಸಾ ಅಡ್ವೈರ್ಟಿಸಿಂಗ್‌ಗೆ ಹಣ ಪಾವತಿಸದ ವಿವಾದದಲ್ಲಿ ಕಳೆದ ವಾರ ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸಂತೂರ್ ಫೆಮಿನಾ ಸೌತ್ ಪ್ರಶಸ್ತಿ - ಆಶ್ನಾ ಗೌರವ್

ಕರ್ನಾಟಕದ ಹುಡುಗಿಗೆ ಸಂತೂರ್ ಫೆಮಿನಾ ಸೌತ್ ಪ್ರಶಸ್ತಿ

ಬೆಂಗಳೂರು, ಮಾರ್ಚ್ 20: ಉದ್ಯಾನ ನಗರಿಯಲ್ಲಿ ಇತ್ತೀಚೆಗೆ ನಡೆದ ಸಂತೂರ್ ಫೆಮಿನಾ ಸ್ಟೈಲ್ ದಿವಾ ಸೌತ್ ಸೌಂದರ್ಯ ಸ್ಪರ್ಧೆಯಲ್ಲಿ, ಮಣಿಪಾಲ್ ನ ಆಶ್ನಾ ಗರವ್ ಅವರು ಈ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಭಾವನಾ ಶ್ರೀಪಾದ ಅವರು, ಮೊದಲ ರನ್ನರ್ ಅಪ್ ಪ್ರಶಸ್ತಿ ಗಳಿಸಿದರೆ, ಅನೂಖಿಯಾ ಹರೀಶ್ ಅವರು ದ್ವಿತೀಯ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು. ಮಾರ್ಚ್ 18ರಂದು ಈ ಸ್ಪರ್ಧೆ ಅಂತಿಮ ಸುತ್ತು ನಡೆಸಲಾಗಿತ್ತು.

ಅಂತಿಮ ಸುತ್ತಿನಲ್ಲಿ 14 ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಿರೂಪಕಿ ಪಲೋಮಾ ರಾವ್ ಅವರು, ಎಲ್ಲಾ ಸ್ಪರ್ಧಾಳುಗಳನ್ನು ಸ್ಪರ್ಧೆಯ ತೀರ್ಪುಗಾರರಿಗೆ ಒಬ್ಬೊಬ್ಬರಾಗಿ ಪರಿಚಯಿಸಿದರು.

ಎಲ್ಲಾ ಸ್ಪರ್ಧಾಳುಗಳಿಗೂ ಮಿಂಚುವ ವಜ್ರಾಭರಣಗಳನ್ನು ಹಾಕಲಾಗಿತ್ತು.
ಈ ವಜ್ರಾಭರಣಗಳನ್ನು ಆಭರಣ್ ಜ್ಯೂವೆಲರ್ಸ್ ಪ್ರಾಯೋಕತ್ವ ನೀಡಿತ್ತು.

ಫೈನಲ್ ನಲ್ಲಿ ಒಟ್ಟು ಮೂರು ಸುತ್ತುಗಳು ನಡೆದವು. ಮೂರನೇ ಹಾಗೂ ಅಂತಿಮ ಸುತ್ತಿನಲ್ಲಿ ಮಿರ ಮಿರನೆ ಮಿಂಚುವ ಆಕರ್ಷಕ ಗೌನ್ ಗಳನ್ನು ಧರಿಸಿದ್ದ ಸುಂದರಿಯರು, ತಮ್ಮ ಸೌಂದರ್ಯವನ್ನು ನೂರು ಪಟ್ಟು ಹೆಚ್ಚಾಗಿ ಬಿಂಬಿಸುವಂತೆ ಕಂಗೊಳಿಸಿದರು.

ಫೈನಲ್ ನ ಅಂತಿಮ ಸುತ್ತಿನಲ್ಲಿ ಎಲ್ಲಾ ಸ್ಪರ್ಧಾಳುಗಳು ಅತ್ಯುತ್ತಮವಾಗಿ ಪ್ರದರ್ಶನ ನೀಡಿ, ತೀರ್ಪುಗಾರರೇ ಸೂಕ್ತ ತೀರ್ಪು ನೀಡುವಲ್ಲಿ ಕೊಂಚ ಗೊಂದಲಕ್ಕೀಡಾಗುವಂತೆ ಮಾಡಿದರು.

ಆದರೆ, ಅಂತಿಮ ಹಂತದಲ್ಲಿ ಮಣಿಪಾಲ್ ನ ಆಶ್ನಾ ಗೌರವ್ ಅವನ್ನು ತೀರ್ಪುಗಾರರು ಪ್ರಶಸ್ತಿಗೆ ಆಯ್ಕೆ ಮಾಡಿದರು. ಆಶ್ನಾ ಆಯ್ಕೆಯಾಗುತ್ತಲೇ ಸಮಾರಂಭದಲ್ಲಿದ್ದ ಪ್ರೇಕ್ಷಕರ ಚಪ್ಪಾಳೆ ಮುಗಿಲು ಮುಟ್ಟಿತ್ತು.

ಅಂದಹಾಗೆ, ಈ ಸಮಾರಂಭಕ್ಕೆ ಕನ್ನಡ ಹಾಗೂ ಹಿಂದಿ ಚಿತ್ರರಂಗದ ಸಿನಿಮಾ ತಾರೆಯರು ಆಗಮಿಸಿ, ಈ ಸ್ಪರ್ಧೆಯು ಮತ್ತಷ್ಟು ಕಳೆಗಟ್ಟುವಂತೆ ಮಾಡಿದ್ದರು. ಹಿಂದಿ ಸಿನಿಮಾ ತಾರೆಯಲ್ಲಿ ಮಿಂಚಿನಂತೆ ಕಂಡಿದ್ದು ಅದಾ ಶರ್ಮಾ.

ಇನ್ನು, ಸಮಾರಂಭದಲ್ಲಿ ಭಾಗವಹಿಸಿದ್ದ ಕನ್ನಡ ಕಲಾವಿದೆಯರಲ್ಲಿ ಕಣ್ಣಿಗೆ ಕಂಡಿದ್ದು ಇತ್ತೀಚೆಗಷ್ಟೇ ತೆರೆ ಕಂಡಿದ್ದ 'ಕಿರಿಕ್ ಪಾರ್ಟಿ' ಚಿತ್ರದ ನಟಿ ರಶ್ಮಿಕಾ ಮಂದಾನಾ.

ಬಿಕ್ಷಾಟನೆ ಕೊನೆಗಾಣಿಸಲು ರಾಜ್ಯ ಸರ್ಕಾರ ಚಿಂತನೆ

ಭಿಕ್ಷಾಟನೆ ಕೊನೆಗಾಣಿಸಲು ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು,ಮಾ.20– ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವೆಡೆ ಹೆಚ್ಚುತ್ತಿರುವ ಭಿಕ್ಷಾಟನೆಯನ್ನು ಕೊನೆಗಾಣಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಸಚಿವ ಎಚ್.ಆಂಜನೇಯ ವಿಧಾನಸಭೆಯಲ್ಲಿ ಹೇಳಿದರು.   ಪ್ರಶ್ನೋತ್ತರ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯೆ ಜಯಮಾಲಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಭಿಕ್ಷುಕರು ಅನಾಥ ಮಕ್ಕಳನ್ನು ವಾಮಮಾರ್ಗದಲ್ಲಿ ಕರೆತಂದು ಭಿಕ್ಷಾಟನೆಗೆ ದೂಡುತ್ತಾರೆ. ಕಾನೂನಿನ ಪ್ರಕಾರ ಭಿಕ್ಷಾಟನೆ ನಿಷೇಧವಿದ್ದು, ಅದು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎಂದು ವಿಷಾದಿಸಿದರು.

1975 ಕರ್ನಾಟಕ ಭಿಕ್ಷಾಟನಾ ಅಧಿನಿಯಮ ಜಾರಿಯಲ್ಲಿರುವ ಸೆಕ್ಷನ್ 4 ಪ್ರಕಾರ 14 ವರ್ಷ ತುಂಬಿದ ಪುರುಷ ಮತ್ತು ಮಹಿಳೆಯನ್ನು ಭಿಕ್ಷಾಟನೆಗೆ ದೂಡುವುದು ಶಿಕ್ಷಾರ್ಹ ಅಪರಾಧ. ಅಂಥವರನ್ನು ಬಂಧಿಸಿ ನಿರಾಶ್ರಿತ ಠಾಣೆಗಳಲ್ಲಿ ಇಡಲಾಗುವುದು ಎಂದರು.
  ತಾಯಿ ಮತ್ತು ಮಗುವನ್ನು ಒಮ್ಮೆ ಬಂಧಿಸಿದರೆ ನಿರಾಶ್ರಿತ ಪರಿಹಾರ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತಿಲ್ಲ. ಇಂತಹ ಕಡೆ ಬೇರ್ಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಜಾಗತಿಕ ಸಂತುಷ್ಟ ಸೂಚಿ- ಭಾರತ 122 ಸ್ಥಾನ

ಇದು ಸ್ಯಾಡ್ ನ್ಯೂಸ್ : ಸಂತುಷ್ಟ ದೇಶಗಳ ಜಾಗತಿಕ ಪಟ್ಟಿಯಲ್ಲಿ ಭಾರತದ ಸ್ಥಾನ ನೋಡಿದರೆ ಅಳು ಬರುವುದು ಖಚಿತ

ಬರ್ಲಿನ್, ಮಾ. 20: ಅತ್ಯಂತ ಅತೃಪ್ತ ದೇಶಗಳ ಪೈಕಿ ಭಾರತವೂ ಒಂದು ಹಾಗೂ ಕಳೆದ ವರ್ಷ ಅದು ಇನ್ನೂ ಹೆಚ್ಚಿನ ಅತೃಪ್ತಿಗೆ ಒಳಗಾಯಿತು ಎಂಬುದಾಗಿ ‘ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ 2017’ ಅಭಿಪ್ರಾಯಪಟ್ಟಿದೆ.

ಪಟ್ಟಿಯಲ್ಲಿ ಬರುವ 155 ದೇಶಗಳ ಪೈಕಿ ನಾರ್ವೆ ಅತ್ಯಂತ ಸಂತುಷ್ಟ ದೇಶವಾಗಿ ಹೊರಹೊಮ್ಮಿದೆ.

ಭಾರತ 122ನೆ ಸ್ಥಾನದಲ್ಲಿದೆ. ಕಳೆದ ವರ್ಷದಲ್ಲಿ ಭಾರತದ ಸ್ಥಾನ 118 ಆಗಿದ್ದು, ಈ ವರ್ಷ ಅದು ನಾಲ್ಕು ಸ್ಥಾನಗಳನ್ನು ಕಳೆದುಕೊಂಡಿದೆ.

ವಿಶ್ವಸಂಸ್ಥೆಯಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಸಂತೋಷ ದಿನ ಆಚರಣೆಯ ಸಂದರ್ಭದಲ್ಲಿ ವರದಿಯನ್ನು ಬಿಡುಗಡೆ ಮಾಡಲಾಯಿತು.
ಕಳೆದ ವರ್ಷ ನಾಲ್ಕನೆ ಸ್ಥಾನದಲ್ಲಿದ್ದ ನಾರ್ವೆ ಈ ಬಾರಿ ಮೊದಲ ಸ್ಥಾನಿಯಾಯಿತು.

ಆರ್ಥಿಕ, ಆರೋಗ್ಯ ಮತ್ತು ಹಣಕಾಸು ತಜ್ಞರು ನಡೆಸುವ ಸಮೀಕ್ಷಾ ಅಂಕಿಅಂಶಗಳನ್ನು ಆಧರಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಡೆನ್ಮಾರ್ಕ್ ಈ ಬಾರಿ ಎರಡನೆ ಸ್ಥಾನಕ್ಕೆ ಇಳಿದಿದೆ.

ಐಸ್‌ಲ್ಯಾಂಡ್, ಸ್ವಿಟ್ಸರ್‌ಲ್ಯಾಂಡ್ ಮತ್ತು ಫಿನ್‌ಲ್ಯಾಂಡ್ ಕ್ರಮವಾಗಿ 3, 4 ಮತ್ತು 5ನೆ ಸ್ಥಾನಗಳಲ್ಲಿವೆ.

ಪುಣೆಯಲ್ಲಿ ಜಂಟಿ ವೀಸಾ ಕೇಂದ್ರ ಆರಂಭ

ಪುಣೆಯಲ್ಲಿ ಜಂಟಿ ವೀಸಾ ಕೇಂದ್ರ ಆರಂಭ

ಮುಂಬೈ,ಫೆ.27: ವಿಎಫ್‌ಎಸ್ ಗ್ಲೋಬಲ್ ಸಂಸ್ಥೆಯ ನೂತನ ಜಂಟಿ ವೀಸಾ ಅರ್ಜಿ ಕೇಂದ್ರ ಸೋಮವಾರ ಪುಣೆಯಲ್ಲಿ ಆರಂಭಗೊಂಡಿದ್ದು, ಇಲ್ಲಿ ಫ್ರಾನ್ಸ್, ಇಟಲಿ, ಜರ್ಮನಿ, ಆಸ್ಟ್ರಿಯ,ಗ್ರೀಸ್, ಲಾಟ್ವಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ವೀಸಾಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಕೇಂದ್ರದಲ್ಲಿ ಇತರ 15 ಸ್ಕಾಂಡಿನೇವಿಯನ್ ದೇಶಗಳಾದ ಸ್ವೀಡನ್,ಸ್ವಿಸ್, ಪೋರ್ಚುಗಲ್, ಬೆಲ್ಜಿಯಂ, ಡೆನ್ಮಾರ್ಕ್, ಹಂಗರಿ, ನಾರ್ವೆ, ಲಕ್ಸೆಂಬರ್ಗ್, ಸೈಪ್ರಸ್ ಹಾಗೂ ಎಸ್ತೋನಿಯಾ ದೇಶಗಳಿಗೂ ವೀಸಾಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಇದರ ಜೊತೆ ಆಸ್ಟ್ರೇಲಿಯ, ಬ್ರಿಟನ್, ಐಯರ್ಲ್ಯಾಂಡ್,ಕೆನಡ,ಅಮೆರಿಕ, ಮಲೇಶ್ಯ, ದ.ಆಫ್ರಿಕ, ಟರ್ಕಿ ಹಾಗೂ ಯುಎಇಗಳಿಗೂ ವೀಸಾ ಸೇವೆಯನ್ನು ಒದಗಿಸಲಿದೆ. ನೂತನ ಜಂಟಿ ವೀಸಾ ಕೇಂದ್ರದ ಆರಂಭದೊಂದಿಗೆ, ವಿಎಫ್‌ಎಸ್ ಗ್ಲೋಬಲ್ ಸಂಸ್ಥೆಯು ವಿವಿಧ ದೇಶಗಳ ವೀಸಾ ಅವಶ್ಯಕತೆಗಳನ್ನು ಒಂದೇ ಸೂರಿನಡಿ ಒದಗಿಸಲಿದೆಯೆಂದು , ಸಂಸ್ಥೆಯ ಮಧ್ಯಪ್ರಾಚ್ಯ ಹಾಗೂ ದ.ಏಶ್ಯಕ್ಕಾಗಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್ ಮಲ್ಹೋತ್ರಾ ತಿಳಿಸಿದ್ದಾರೆ.