ಗುರುವಾರ, ಜುಲೈ 16, 2015

ಕರ್ನಾಟಕದ ಅರಣ್ಯ ಸಂಪತ್ತು


ಕರ್ನಾಟಕದ ಅರಣ್ಯ ಸಂಪತ್ತು


ಕರ್ನಾಟಕದ ಅರಣ್ಯ ಸಂಪತ್ತು ಹೇರಳವಾದುದು. ಪುರಾತನ ಕಾಲದಲ್ಲಿ ಕರ್ನಾಟಕ ರಾಜ್ಯ ದಂಡಕಾರಣ್ಯದ ಒಂದು ಮುಖ್ಯ ಪ್ರದೇಶವಾಗಿದ್ದು ಮೃಗಗಳ ಬೇಟೆಯಲ್ಲಿ ಆಸಕ್ತಿಯಿದ್ದ ಅಂದಿನ ಅರಸರಿಂದ ಅನೇಕ ರೀತಿಯಲ್ಲಿ ಪೋಷಿತವಾಗಿದ್ದಿತು. ಪ್ರಸಿದ್ಧ ವೆನಿಶಿಯನ್ ಪ್ರವಾಸಿ ಮಾರ್ಕೋಪೋಲೋ ಕರ್ನಾಟಕದ ಅರಣ್ಯ ಸಂಪತ್ತನ್ನು ಸಾಕಷ್ಟು ಪ್ರಶಂಸಿಸಿದ್ದಾನೆ. ವಿಜಯನಗರಕ್ಕೆ ಭೇಟಿ ನೀಡಿದ ಅನೇಕ ವಿದೇಶೀ ಪ್ರವಾಸಿಗಳೂ ಇಲ್ಲಿನ ಕಾಡಿನ ದಟ್ಟತೆ ಮತ್ತು ಸಮೃದ್ಧತೆಯ ಬಗ್ಗೆ ವರ್ಣಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದಲ್ಲಿ ಅರಣ್ಯಗಳಿಗೆ ತುಂಬಾ ಪ್ರಾಮುಖ್ಯ ನೀಡಲಾಗಿತ್ತು. ಅಂದು ವಿಜಯನಗರವನ್ನು ಸಂದರ್ಶಿಸಿದ ಅರೇಬಿಯದ ವ್ಯಾಪಾರಿ ಅಬ್ದುಲ್ ರಜಾಕ್ ಎಂಬಾತ ಕರ್ನಾಟಕದ ಅರಣ್ಯ ಸಂಪತ್ತು ಹಾಗೂ ಅದರ ವಾಣಿಜ್ಯ ಪ್ರಾಮುಖ್ಯತೆಯ ಬಗ್ಗೆ ಬಹುವಾಗಿ ವಿವರಿಸಿದ್ದಾನೆ. ವಿಜಯನಗರ ಸಾಮ್ರಾಜ್ಯ ಇರುವವರೆಗೂ ದಕ್ಷರೀತಿಯಿಂದ ನಡೆಯುತ್ತಿದ್ದ ಅರಣ್ಯಗಳ ಆಡಳಿತ ೧೫೬೫ರ ತಾಳೀಕೋಟೆಯ ಕದನದ ಅನಂತರ ಕುಸಿಯಿತು. ಸಾಗುವಳಿಗೆ ಸಾಕಷ್ಟು ಜಮೀನಿಲ್ಲದೆ ಜನ ಅರಣ್ಯ ಒತ್ತುವರಿ ಮಾಡಿ ವ್ಯವಸಾಯ ಮಾಡಲು ಪ್ರಾರಂಭಿಸಿದರು. ತರುವಾಯ ಹೈದರ್ ಅಲಿ ಹಾಗೂ ಟಿಪ್ಪುಸುಲ್ತಾನರ ಕಾಲದಲ್ಲಿ ಶ್ರೀಗಂಧದ ಮರವನ್ನು ರಾಜವೃಕ್ಷ ಎಂದು ಪರಿಗಣಿಸಲಾಯಿತು. ಜೊತೆಗೆ ಬಹುಮುಖ್ಯ ಪ್ರಯೋಜನಕಾರಿ ಸಾಗುವಾನಿ ತೇಗದ ಮರಕ್ಕೂ ಸರ್ಕಾರದ ರಕ್ಷಣೆ ದೊರೆಯಿತು.
ಕಾಡುಗಳ ಆಡಳಿತ ಹಾಗೂ ಸಂರಕ್ಷಣೆಯಲ್ಲಿ ಬ್ರಿಟಿಷರ ಕೊಡುಗೆ ಅಪಾರ. ವೈಜ್ಞಾನಿಕ ವಿಧಾನದಲ್ಲಿ ಕಾಡುಗಳ ವಿಂಗಡನೆ ಹಾಗೂ ಸಂರಕ್ಷಣೆಯನ್ನು ಇಡೀ ಭಾರತದಲ್ಲಿ ಪ್ರಾರಂಭಿಸಿದವರೂ ಬ್ರಿಟಿಷರೇ. ಕರ್ನಾಟಕದ ಸ್ಥಿತಿಯೂ ಬೇರೆಯಲ್ಲ. ೧೭೯೯ರ ಅನಂತರ ಬ್ರಿಟಿಷರ ಅಧೀನಕ್ಕೊಳಪಟ್ಟ ಕರ್ನಾಟಕದ ಭಾಗದಲ್ಲಿ ಮೊದಲು ಶ್ರೀಗಂಧ ಹಾಗೂ ತೇಗದ ಮರಗಳಿಗೆ ಮಾತ್ರ ಪ್ರಾಮುಖ್ಯವಿತ್ತು. ಗವರ್ನರ್ ಜನರಲ್ ಡಾಲ್ ಹೌಸಿಯ ೧೮೫೦ರ ಆದೇಶ, ಕರ್ನಾಟಕದ ಅರಣ್ಯ ರಕ್ಷಣೆ, ಅಭಿವೃದ್ಧಿ, ಮಾರ್ಪಾಡು ಎಲ್ಲವೂ ಕಾನೂನು ಕಟ್ಟಳೆಗಳಿಗೆ ಒಳಪಟ್ಟು ವೈಜ್ಞಾನಿಕ ರೀತಿಯಲ್ಲಿ ಬೆಳೆದುಬರುವಂತೆ ಮಾಡಿತು. ಹಿಂದೆ ಅರಬ್ಬರು, ಆಫ್ರಿಕನ್ನರು ಅನಂತರ ಭಾರತಕ್ಕೆ ಬಂದ ಬ್ರಿಟಿಷರು ಹಡಗುಗಳ ನಿರ್ಮಾಣಕ್ಕೆ ಸಾಗುವಾನಿ ಮತ್ತು ಸುರಹೊನ್ನೆ ಮರಗಳನ್ನು ಕಡಿದು ಉಪಯೋಗಿಸುತ್ತಿದ್ದರು. ಇಂಗ್ಲೆಂಡಿನ ಓಕ್ ಮರ ನಶಿಸುತ್ತ ಬಂದಂತೆಲ್ಲ ಕರ್ನಾಟಕದ ಸಾಗುವಾನಿ ಮರಗಳಿಗೆ ಬೇಡಿಕೆ ಹೆಚ್ಚುತ್ತ ಬಂದಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಇಡೀ ಭಾರತದಲ್ಲಿ ಸಾಕಷ್ಟು ಪ್ರಮಾಣದ ಮರದ ದಿಮ್ಮಿ, ಕಂಬಗಳಿಗಾಗಿ ಅರಣ್ಯ ನಾಶ ಮುಂದವರಿಯಿತು. ಜೊತೆ ಜೊತೆಯಲ್ಲೇ ಅರಣ್ಯದ ಮರಮುಟ್ಟುಗಳ ವಿಚಾರವಾಗಿ ವೈಜ್ಞಾನಿಕ ಸಂಶೋಧನೆ ಪ್ರಾರಂಭವಾಯಿತು. ನೆಡುತೋಪುಗಳು, ಸಾಲುಮರಗಳು, ಗುಂಡು ತೋಪುಗಳನ್ನು ಅಲ್ಲಲ್ಲಿ ಬೆಳೆಸಿದರು. ಆದರೂ ಜನಸಂಖ್ಯೆಯ ಹೆಚ್ಚಳದಿಂದಾಗಿಯೂ ಹೆಚ್ಚು ಬೆಳೆ ಬೆಳೆಯುವ ಆಂದೋಲನದಿಂದಾಗಿಯೂ ಯೋಗ್ಯವಾದ ಕಾಡುಗಳು ನಾಶವಾಗುತ್ತ ಬಂದವು. ಕೈಗಾರಿಕೆಗಳಿಗೆ ಬೇಕಾದ ಮರಮುಟ್ಟು, ಸೌದೆ, ಇದ್ದಿಲುಗಳಿಗಾಗಿ ಪ್ರತಿವರ್ಷ ಸು. ೧ ಲಕ್ಷ ಹೆಕ್ಟೇರು ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ ಎಂದು ೧೯೭೦ರ ದಶಕದ ಅಂಕಿ ಸಂಖ್ಯೆಗಳು ತಿಳಿಸುತ್ತವೆ. ಆದರೆ ಇತ್ತೀಚೆಗೆ ನೆಡುತೋಪುಗಳನ್ನು ಹೆಚ್ಚಿಸುವ, ಸಸ್ಯಗಳನ್ನು ನೆಟ್ಟು ಅರಣ್ಯಗಳನ್ನು ಅಭಿವೃದ್ಧಿಪಡಿಸುವ ಹಾಗೂ ಸಾಮಾಜಿಕ ಅರಣ್ಯ ಕಾರ್ಯಕ್ರಮಗಳಿಂದಾಗಿ ಕರ್ನಾಟಕದ ಅರಣ್ಯ ಕ್ಷೇತ್ರ ಗಣನೀಯವಾಗಿಯಲ್ಲದಿದ್ದರೂ ನಿಧಾನವಾಗಿ ವೃದ್ಧಿಯಾಗುತ್ತಿದೆ.
೧೯೬೦ರ ದಶಕದಲ್ಲಿ ಕರ್ನಾಟಕದಲ್ಲಿ ೩೫,೨೧,೦೦೦ ಹೆಕ್ಟೇರು ಅರಣ್ಯವಿದ್ದು, ಇದು ಕರ್ನಾಟಕದ ಭೂಭಾಗದ ಶೇ. ೨೩ ಭಾಗದಷ್ಟಾಗುತ್ತಿತ್ತೆಂದು ದಾಖಲೆಗಳು ತಿಳಿಸುತ್ತವೆ. ೧೯೮೫ರ ವೇಳೆಗೆ ಕರ್ನಾಟಕದ ಅರಣ್ಯ ಪ್ರದೇಶದ ವಿಸ್ತೀರ್ಣ ಸುಮಾರು ಶೇ. ೧೯.೫ಕ್ಕೆ ಕುಸಿಯಿತು. ಅಂಕಿ ಅಂಶಗಳ ಪ್ರಕಾರ ೨೦೦೨-೦೩ರಲ್ಲಿ ಕರ್ನಾಟಕದ ಅರಣ್ಯ ಪ್ರದೇಶದ ವಿಸ್ತೀರ್ಣ ೩೦,೭೦,೦೦೦ ಹೆಕ್ಟೇರು. ವಿವಿಧ ಸಂರಕ್ಷಣಾ ತಂತ್ರಗಳಿಂದಾಗಿಯೂ ಈಗ ಕರ್ನಾಟಕದ ಭೂಭಾಗ ಶೇಕಡ ೧೪.೮ ಭಾಗ ಮಾತ್ರ ಅರಣ್ಯದಿಂದ ಆವೃತವಾಗಿದೆ.
ಕರ್ನಾಟಕದಲ್ಲಿ ಇಷ್ಟು ಅರಣ್ಯ ಪ್ರದೇಶವಿದ್ದರೂ ಇದಷ್ಟೂ ಮಾನವನ ಪ್ರಯೋಜನಕ್ಕೆ ಅರ್ಹವಾದುದೆಂದು ಹೇಳಲು ಸಾಧ್ಯವಿಲ್ಲ. ಕಾರಣಾಂತರಗಳಿಂದ ಒಟ್ಟು ಅರಣ್ಯದ ಶೇ. ೨೫ರಷ್ಟು ಭಾಗ ಕ್ಷೀಣದೆಶೆಯಲ್ಲಿದೆ. ಇಂಥ ಅಪ್ರಯೋಜಕ ಪ್ರದೇಶವನ್ನು ವೈಜ್ಞಾನಿಕ ಪ್ರಯೋಗಗಳ ಮೂಲಕ ಮೇಲುದರ್ಜೆಗೆ ಏರಿಸುವುದು ಸರ್ಕಾರದ ಉದ್ದೇಶ. ಈ ದಿಶೆಯಲ್ಲಿ ಅರಣ್ಯ ಇಲಾಖೆಯ ಅನೇಕ ವರ್ಷಗಳ ಪ್ರಯತ್ನದ ಫಲವಾಗಿ ಇಂದು ಮಾನವ ನಿರ್ಮಿತ ನೆಡುತೋಪುಗಳ ವಿಸ್ತೀರ್ಣ ಸು.೧,೫೦೦ಚ.ಕಿಮೀ. ಈ ನೆಡುತೋಪುಗಳಲ್ಲಿ ಆಧುನಿಕ ಕೈಗಾರಿಕೆಗೆ ಬೇಕಾಗುವ ಯೂಕಲಿಪ್ಟಸ್, ನೀಲಗಿರಿ, ತೇಗ, ರಬ್ಬರ್, ಕೋಕೋ, ಸಂಬಾರ, ಶ್ರೀಗಂಧ, ಗೇರು, ಎಣ್ಣೆ ಗಿಡಗಳು ಮುಂತಾದವು ಹೇರಳವಾಗಿವೆ. ಇತ್ತೀಚೆಗೆ ಜಾರಿಗೆ ಬಂದಿರುವ ಅರಣ್ಯವಿಭಾಗ ಬಿಡುಗಡೆ ಕಾನೂನು ಕಾಡಿನ ನಾಶವನ್ನು ಸಾಕಷ್ಟು ಪ್ರಮಾಣದಲ್ಲಿ ತಡೆಗಟ್ಟಿದೆ. ಜನತೆಗೆ ಬೇಕಾದ ಮರಮುಟ್ಟು, ಸೌದೆ, ಹಸಿಗೊಬ್ಬರ, ವ್ಯವಸಾಯದ ಉಪಕರಣಗಳು ಮುಂತಾದವುಗಳನ್ನು ಅರಣ್ಯ ಕೃಷಿಯ ಮೂಲಕ ಸರಿತೂಗಿಸಿಕೊಳ್ಳಬೇಕಾದುದು ಅನಿವಾರ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ