ಶನಿವಾರ, ಆಗಸ್ಟ್ 28, 2021

ಜಾತಿ ವಿನಾಶದ ಮೊದಲ ಹೆಜ್ಜೆ ಜಾತಿ ಗಣತಿ: ಸಿದ್ದರಾಮಯ್ಯ

ಜಾತಿ ವಿನಾಶದ ಮೊದಲ ಹೆಜ್ಜೆ ಜಾತಿ ಗಣತಿ: ಸಿದ್ದರಾಮಯ್ಯ

ಜಾತಿ ಗಣತಿಯ ಬೇಡಿಕೆಯನ್ನು ಸಂಕುಚಿತ ಅರ್ಥದಿಂದ ನೋಡಬೇಕಾಗಿಲ್ಲ. ಇದು ಕೇವಲ ತಲೆಎಣಿಕೆ ಮೂಲಕ ಜಾತಿ ಸಂಖ್ಯೆಯನ್ನು ಗುರುತಿಸಲು ಮಾಡುವ ಸಮೀಕ್ಷೆ ಅಲ್ಲ. ಇದು ಎಲ್ಲ ಜಾತಿ-ಧರ್ಮಗಳ ಜನತೆಯ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಸಮಗ್ರರೂಪದ ಸಮೀಕ್ಷೆ. ಕರ್ನಾಟಕದಲ್ಲಿ ಇದನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿದೆ ಎನ್ನುವ ಕಾರಣಕ್ಕೆ ಇದನ್ನು ಕೇವಲ ಹಿಂದುಳಿದ ಜಾತಿಗಳಿಗೆ ಸೀಮಿತಗೊಳಿಸಿ ವಿಶ್ಲೇಷಿಸುವುದು ತಪ್ಪು.
ನಮ್ಮದು ಜಾತಿಗ್ರಸ್ತ ಸಮಾಜ. ಇಲ್ಲಿನ ಪ್ರತಿಯೊಂದು ಜಾತಿಗೆ ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ,ಸಾಂಸ್ಕೃತಿಕವಾಗಿ ಪ್ರತ್ಯೇಕ ಗುರುತುಗಳಿವೆ.  ಇವರ ಸಮಸ್ಯೆಗಳು ಮತ್ತು ಪರಿಹಾರಗಳೂ ಭಿನ್ನವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಇಡೀ ಜನಸಮುದಾಯಕ್ಕೆ ಅನ್ವಯವಾಗುವ ಏಕರೂಪದ ಸಾಮೂಹಿಕ ಯೋಜನೆಯನ್ನು ರೂಪಿಸಲಾಗುವುದಿಲ್ಲ. ಪ್ರತಿಯೊಂದು ಜಾತಿ-ಧರ್ಮದ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಯ ಸಮೀಕ್ಷೆ ನಡೆಸಿ ಹಿಂದುಳಿಯುವಿಕೆಯನ್ನು ಗುರುತಿಸಿದರೆ ಅದರ ಆಧಾರದಲ್ಲಿ ವೈಜ್ಞಾನಿಕವಾಗಿ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಈ ಮೂಲಕ ಸಾಧಿಸುವ ಆರ್ಥಿಕ ಸ್ವಾವಲಂಬನೆ, ಜಾತಿ ವಿನಾಶದ  ಪ್ರಯತ್ನದ ಮೊದಲ ಹೆಜ್ಜೆಯಾಗುತ್ತದೆ. ಇದು ಜಾತಿಗಣತಿಯ ಮೂಲ ಉದ್ದೇಶ.
ಜಾತಿ ಗಣತಿಯ ಬೇಡಿಕೆ ಇಂದು ನಿನ್ನೆಯದಲ್ಲ. ಮಂಡಲ್ ಆಯೋಗದ ವರದಿಯನ್ನು ಸಲ್ಲಿಸುವಾಗಲೇ ಆಯೋಗದ ಅಧ್ಯಕ್ಷರಾಗಿದ್ದ ಬಿ.ಪಿ.ಮಂಡಲ್ ಅವರು ಜಾತಿ ಗಣತಿ ನಡೆಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಸಂವಿಧಾನದ ಪರಿಚ್ಚೇದ 15(4)ರ ಪ್ರಕಾರ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ವಿಶೇಷ ಕ್ರಮಗಳನ್ನು ಕೈಗೊಳ್ಳಲು ರೂಪಿಸಲಾಗಿರುವ ಮೀಸಲಾತಿಯನ್ನು ವೈಜ್ಞಾನಿಕ ರೀತಿಯಲ್ಲಿ ಜಾರಿಗೆ ತರಲು ಜಾತಿ ಗಣತಿ ಅನಿವಾರ್ಯ ಎಂದು ಅವರು ಪ್ರತಿಪಾದಿಸಿದ್ದರು. ಮೀಸಲಾತಿಯನ್ನು ಪ್ರಶ್ನಿಸಿದ ಪ್ರಕರಣ ಪ್ರತಿಬಾರಿ ವಿಚಾರಣೆಗೆ ಬಂದಾಗ ಸುಪ್ರೀಂಕೋರ್ಟ್ ಮೀಸಲಾತಿಯನ್ನು ನಿರ್ಧರಿಸಲು ಬೇಕಾದ ಜಾತಿ ಕುರಿತ ಅಂಕಿ-ಅಂಶ ಎಲ್ಲಿದೆ ಎಂಬ ಪ್ರಶ್ನೆಯನ್ನು ಕೇಳಿದೆ.
ಜಾತಿ ಆಧಾರಿತ ಜನಗಣತಿ ಕೊನೆಯ ಬಾರಿ ನಡೆದದ್ದು 1931ರಲ್ಲಿ.   ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯವೇಳೆ ಧರ್ಮಗಳ ಗಣತಿ ಜೊತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ  ಗಣತಿಯನ್ನು ತಲೆಎಣಿಕೆಯ ಮೂಲಕ ನಡೆಸಲಾಗುತ್ತದೆ. ಆದರೆ ಹಿಂದುಳಿದ ವರ್ಗದಲ್ಲಿರುವ ಜಾತಿಗಳ ಬಗೆಗಿನ ಇಲ್ಲಿಯ ವರೆಗಿನ ಮಾಹಿತಿಗೆ ಸ್ಯಾಂಪಲ್ ಸರ್ವೆಯೇ ಆಧಾರ.  ನಮ್ಮ ರಾಜ್ಯದ ಎಲ್ .ಜಿ.ಹಾವನೂರು ಆಯೋಗದಿಂದ ಹಿಡಿದು, ಕೇಂದ್ರ ಸರ್ಕಾರದ ಮಂಡಲ್ ಆಯೋಗದ ವರದಿಯ ವರೆಗೆ ಎಲ್ಲ ಆಯೋಗಗಳು 1931ರ ಜಾತಿ ಗಣತಿಯನ್ನು ಮೂಲವಾಗಿಟ್ಟುಕೊಂಡು ನಡೆಸಿದ್ದ ಸ್ಯಾಂಪಲ್ ಸರ್ವೆಯನ್ನು ಆಧರಿಸಿಯೇ ಶಿಫಾರಸುಗಳನ್ನು ಮಾಡಿವೆ.. ಈ ಕಾರಣಕ್ಕಾಗಿಯೇ ನ್ಯಾಯಾಲಯಗಳ ಈ ಮಾಹಿತಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಾ ಬಂದಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದುಳಿದ ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುತ್ತಿದೆ. ಆದರೆ ಈ ಮೀಸಲಾತಿ ನೀತಿಯನ್ನು ಯಾವ ಅಂಕಿ-ಅಂಶದ ಆಧಾರದಲ್ಲಿ ರೂಪಿಸಲಾಗಿದೆ? ದೇಶದಲ್ಲಿರುವ ಹಿಂದುಳಿದ ಜಾತಿಗಳ ನಿಖರ ಸಂಖ್ಯೆ ಎಷ್ಟು? ಅವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಏನು? ಇದ್ಯಾವುದಕ್ಕೂ ಸರ್ಕಾರದ ಬಳಿ ಉತ್ತರ ಇಲ್ಲ. ಸುಪ್ರೀಂ ಕೋರ್ಟ್ ಮತ್ತೆ ಮತ್ತೆ ಕೇಳಿರುವುದು  ಇದೇ ಪ್ರಶ್ನೆಯನ್ನು.
ಹಿಂದುಳಿದ ಜಾತಿಗಳ ಮೀಸಲಾತಿಗೆ ಕಾನೂನಿನ ರಕ್ಷಣೆ ನೀಡಿದ ಮಂಡಲ್ ತೀರ್ಪು ಎಂದೇ ಪ್ರಸಿದ್ದವಾದ ಇಂದಿರಾ ಸಾನಿ ತೀರ್ಪಿನಲ್ಲಿ ಹಿಂದುಳಿದ ಜಾತಿಗಳನ್ನು ಕ್ರಮಬದ್ಧವಾಗಿ ಗುರುತಿಸಲು  ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಶಾಶ್ವತ ಹಿಂದುಳಿದ ಜಾತಿಗಳ ಆಯೋಗ ರಚಿಸಬೇಕೆಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಎನ್.ಧರ್ಮಸಿಂಗ್ ಸರ್ಕಾರದಲ್ಲಿ  ಉಪಮುಖ್ಯಮಂತ್ರಿ ಮತ್ತು  ಹಣಕಾಸು ಖಾತೆ ಸಚಿವನಾಗಿದ್ದ ನಾನು ಮಂಡಿಸಿದ್ದ 2004-05ರ ಬಜೆಟ್ ನಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುವ ಘೋಷಣೆ ಮಾಡಿದ್ದೆ. ಆದರೆ ಆಗಿನ ಅತಂತ್ರ ರಾಜಕೀಯ ಸ್ಥಿತಿಯಿಂದಾಗಿ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ. ಮರುವರ್ಷ ನನ್ನನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಿದ್ದ ಕಾರಣದಿಂದಾಗಿ ಈ ಸಮೀಕ್ಷೆಯ ಆದೇಶ ಮೂಲೆಗುಂಪಾಗಿತ್ತು. ಅದರ ನಂತರ ಅಧಿಕಾರಕ್ಕೆ ಬಂದ ಎಲ್ಲ ಮುಖ್ಯಮಂತ್ರಿಗಳು ಈ ಯೋಜನೆಯನ್ನು ನಿರ್ಲಕ್ಷಿಸುತ್ತಾ ಬಂದಿದ್ದರು. ಒಂಬತ್ತು ವರ್ಷಗಳ ನಂತರ ಮುಖ್ಯಮಂತ್ರಿಯಾಗಿ  ನಾನೇ ಇದಕ್ಕೆ ಚಾಲನೆ ನೀಡಬೇಕಾಯಿತು.
ನ್ಯಾಯವಾದಿ ಕಾಂತರಾಜ್ ಅವರ ನೇತೃತ್ವದ ಶಾಶ್ವತ ಹಿಂದುಳಿದ ಆಯೋಗಕ್ಕೆ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಹೊಣೆಗಾರಿಕೆ ವಹಿಸಿದ್ದು ಮಾತ್ರವಲ್ಲ 170 ಕೋಟಿ ರೂಪಾಯಿ ಅನುದಾನವನ್ನೂ ನೀಡಿದ್ದೆ. ಈ ಸಮೀಕ್ಷೆ ನ್ಯಾಯಾಲಯದ ನಿಕಷಕ್ಕೆ ಒಳಗಾಗುವ ಎಲ್ಲ ಸಾಧ್ಯತೆಗಳಿರುವ ಕಾರಣ ಈ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಎಚ್ಚರಿಕೆಯಿಂದ ನಡೆಸಬೇಕಿತ್ತು. ಸುಮಾರು 1.6 ಲಕ್ಷ ಸಿಬ್ಬಂದಿಯ ಮೂಲಕ ರಾಜ್ಯದ 1.3 ಕೋಟಿ ಮನೆಗಳಿಗೆ ಭೇಟಿ ನೀಡಿ 2015ರ ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಅತ್ಯಂತ ವೈಜ್ಞಾನಿಕವಾಗಿಯೇ ಈ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯಲ್ಲಿ ಮಾಹಿತಿ ಸಂಗ್ರಹ ಒಂದು ಭಾಗವಾದರೆ, ಅದರ ವಿಶ್ಲೇಷಣೆ ಇನ್ನೊಂದು ಪ್ರಮುಖ ಭಾಗ. ಈ ಕಾರ್ಯಕ್ಕಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನ ನೆರವನ್ನು ಪಡೆಯಲಾಗಿತ್ತು. ಈ ವಿಶ್ಲೇಷಣಾ ಕಾರ್ಯ ನಿರೀಕ್ಷೆ ಮೀರಿ ವಿಳಂಬವಾಗಿದ್ದು ನಿಜ.
ದೇಶದಲ್ಲಿಯೇ ಮೊದಲನೆಯದಾದ ಈ ಜಾತಿ ಸಮೀಕ್ಷೆ ನನ್ನ ಕನಸಿನ ಕೂಸು. ಇದನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ಸ್ವೀಕಾರ ಮಾಡಿ ಅದರ ಶಿಫಾರಸುಗಳನ್ನು ಜಾರಿಗೊಳಿಸಬೇಕೆಂಬುದು ನನ್ನ ಆಸೆಯಾಗಿತ್ತು, ಆದರೆ ಆ ಕಾಲದಲ್ಲಿ ಪೂರ್ಣಗೊಂಡಿರಲಿಲ್ಲ. ನನಗಿರುವ ಮಾಹಿತಿ ಪ್ರಕಾರ ಆಯೋಗ ಸಮೀಕ್ಷಾ ವರದಿಯನ್ನು ಪೂರ್ಣಗೊಳಿಸಿದ್ದು 2018ರ ಕೊನೆಯಲ್ಲಿ. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು. ಕಾಂತರಾಜ್ ಆಯೋಗ ವರದಿ ಸಲ್ಲಿಸಲು ಸಮಯವಕಾಶ ಕೋರಿ ಆಗಿನ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಪತ್ರ ಬರೆದರೂ ಅದಕ್ಕೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಸಮ್ಮಿಶ್ರ ಸರ್ಕಾರವಾಗಿದ್ದ ಕಾರಣ ಅನಗತ್ಯ ಸಂಘರ್ಷ ಬೇಡವೆಂದು ನಾನು ಒತ್ತಾಯಿಸಲು ಹೋಗಲಿಲ್ಲ. ಕೊನೆಗೆ 2019ರ ಸೆಪ್ಟೆಂಬರ್ ನಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಸಮಗ್ರ ವರದಿಯನ್ನು ಕಾಂತರಾಜ್ ಆಯೋಗ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲಿಸಿದೆ.
ವಿರೋಧಪಕ್ಷದಲ್ಲಿದ್ದಾಗ ಜಾತಿ ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡು ಜಾರಿಗೊಳಿಸಲು ಒತ್ತಾಯಿಸುತ್ತಿದ್ದ ಬಿಜೆಪಿ ನಾಯಕರು ಈಗ ರಾಗಬದಲಾಯಿಸುತ್ತಿರುವುದು ವಿಷಾದನೀಯ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಚನೆಯಾಗಿರುವ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸ್ವಾಯತ್ತ ಸಂಸ್ಥೆ, ಇದಕ್ಕೆ ರಾಜಕೀಯ ಬಣ್ಣ ಬಳಿಯಬಾರದು. ಮಂಡಲ್ ಆಯೋಗ ರಚನೆಯಾಗಿದ್ದು 1977ರ ಜನತಾ ಸರ್ಕಾರದ ಕಾಲದಲ್ಲಿ, ಅದು ವರದಿ ಸಲ್ಲಿಸಿರುವುದು 1980ರಲ್ಲಿ ಇಂದಿರಾಗಾಂಧಿ ಸರ್ಕಾರಕ್ಕೆ, ಅದನ್ನು  ಒಪ್ಪಿಕೊಂಡಿರುವುದು 1990ರಲ್ಲಿ ಅಧಿಕಾರದಲ್ಲಿದ್ದ ವಿ.ಪಿ.ಸಿಂಗ್ ಸರ್ಕಾರ. ನಮ್ಮ ರಾಜ್ಯದಲ್ಲಿಯೇ ರಚನೆಯಾಗಿರುವ ಎ.ಜೆ.ಸದಾಶಿವ ಆಯೋಗ ರಚನೆ ಮಾಡಿದ್ದು ಒಂದು ಸರ್ಕಾರ, ಅದು ವರದಿ ಸಲ್ಲಿಸಿದ್ದು ಇನ್ನೊಂದು ಸರ್ಕಾರಕ್ಕೆ. 
ಇಂತಹ ಸಮೀಕ್ಷೆಗಳು ಕೋಟ್ಯಂತರ ಜನತೆಯ ಸಾಮಾಜಿಕ,ಆರ್ಥಿಕ  ಭವಿಷ್ಯವನ್ನು ನಿರ್ಧರಿಸುವ ವಿಷಯವಾಗಿರುವ ಕಾರಣ ಅವಸರದಿಂದ, ನಿರ್ಲಕ್ಷದಿಂದ ಮಾಡಲಾಗದು. ವಿಳಂಬವಾದರೂ ಈಗ ಪೂರ್ಣಗೊಂಡಿದೆ. ಈಗ ಕುಂಟುನೆಪಗಳನ್ನು ಮುಂದೊಡ್ಡಿ ಈ ಸಮೀಕ್ಷೆಯನ್ನು ತಿರಸ್ಕರಿಸಿದರೆ ಅದು ರಾಜ್ಯದ ಜನತೆಗೆ ಬಗೆವ ದ್ರೋಹವಾಗುತ್ತದೆ ಮಾತ್ರವಲ್ಲ ಒಂದು ಕೆಟ್ಟ ಪರಂಪರೆಗೆ ನಾಂದಿ ಹಾಡಿದಂತಾಗುತ್ತದೆ.
ಕೆಲವು ಬಿಜೆಪಿ ನಾಯಕರು ಜಾತಿ ಸಮೀಕ್ಷೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಬಹಳಷ್ಟು ತರಾತುರಿಯಿಂದ ಸಂವಿಧಾನಕ್ಕೆ ತಿದ್ದುಪಡಿಯನ್ನೂ ಮಾಡಿ ಆರ್ಥಿಕವಾಗಿ ಹಿಂದುಳಿದವರಿಗೂ ಶೇಕಡಾ 10ರಷ್ಟು ಮೀಸಲಾತಿಯನ್ನು ಘೋಷಿಸಿತು. ಈ ಮೀಸಲಾತಿ ನೀತಿಗೆ ಮುನ್ನ ಯಾವ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆದಿದೆ?.
ರಾಜ್ಯ ಸರ್ಕಾರ ಇಂತಹ ವಿಚಾರದಲ್ಲಿ ರಾಜಕೀಯ ಮಾಡಲು ಹೋಗಬಾರದು. ಈಗಾಗಲೇ ಜಾತಿಗಣತಿಯ ವರದಿ ಮುಖ್ಯಮಂತ್ರಿಯವರ ಮೇಜಿನಲ್ಲಿದೆ. ಮೊದಲು ಅದನ್ನು ಸ್ವೀಕರಿಸಬೇಕು, ಅದರಲ್ಲಿ ಏನಾದರೂ ಲೋಪ-ದೋಷಗಳಿದ್ದರೆ ಅದನ್ನು ಸರಿಪಡಿಸಲು ಕ್ರಮಕೈಗೊಳ್ಳಬೇಕು. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಸರ್ಕಾರಕ್ಕೆ ಸಂಪೂರ್ಣವಾಗಿ ಸಹಕರಿಸಲು ನಾವು ಸಿದ್ದರಿದ್ದೇವೆ. 

-Siddaramaiah
ಮಾಜಿ ಮುಖ್ಯಮಂತ್ರಿಗಳು 
ಕೃಪೆ : ಪ್ರಜಾವಾಣಿ, 28-08-2021

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ