ಗುರುವಾರ, ಮಾರ್ಚ್ 30, 2017

ಪೆಸ್ಬೊಕ್ನಲ್ಲಿ ಫೇಕ್ ನ್ಯೂಜ್ ಹಾಕಿದರೆ ಭಾರಿ ದಂಡ

ಫೆಸ್ಬುಕ್ನಲ್ಲಿ ಫೇಕ್ ನ್ಯೂಸ್ ಹಾಕಿದರೆ ಭಾರಿ ದಂಡ!!

ಫೆಸ್ಬುಕ್, ವಾಟ್ಸ್‌ಆಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಪ್ರತಿಯೊಬ್ಬ ಜನಸಾಮಾನ್ಯನಿಗೂ ವೇದಿಕೆಯಾಗಿದ್ದೇನೋ ನಿಜ. ಆದರೆ, ಇದೇ ವೇದಿಕೆಯಿಂದ ಹಲವು ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ.!! ಹೌದು, ಆನ್ಲೈನ್ ಪ್ರಪಂಚದಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಜನರನ್ನು ದಾರಿತಪ್ಪಿಸುವ ಘಟನೆಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿದೆ.!!

ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಜನರನ್ನು ದಾರಿತಪ್ಪಿಸಲು ಮತ್ತು ಬೇರೆಯವರನ್ನು ನಿಂದನೆ ಮಾಡಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ತಲುಪುತ್ತಿರುವುದು ಗೊತ್ತಿದ್ದರೂ ಸಹ ಸರ್ಕಾರ ಏನು ಮಾಡದ ಸ್ಥಿತಿಯಲ್ಲಿದೆ.ಕೆಲವೊಂದು ಚಿಕ್ಕ ಪ್ರಕರಣಗಳು ಮಾತ್ರ ಹೊರಬರುತ್ತವೆ.!!

ಇಲ್ಲಿ ಹೀಗಿದ್ದರೆ, ಫೆಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ನ್ಯೂಸ್, ಪರನಿಂದನೆ ಪೋಸ್ಟ್ ಮಾಡಿದರೆ ಹೆಚ್ಚು ದಂಡ ವಿಧಿಸುವ ಬಗ್ಗೆ ಜರ್ಮನಿಯಲ್ಲಿ ಚರ್ಚೆಯಾಗುತ್ತಿದೆ.
ಈ ಬಗ್ಗೆ ಜರ್ಮನಿಯ ನ್ಯಾಯಾಂಗ ಇಲಾಖೆ ಸಚಿವ ಹೈಕೊ ಮಾಸ್ ಸುಳಿವು ನೀಡಿದ್ದು, ಇಂತಹ ಪೋಸ್ಟ್ ಮಾಡುವವರಿಗೆ ಭಾರಿ ಮೊತ್ತದ ದಂಡ ವಿಧಿಸುವ ಕರಡನ್ನು ಅವರು ಪ್ರಸ್ತಾಪಿಸಿದ್ದಾರೆ.!!

ಇತ್ತೀಚಿಗೆ ಜರ್ಮನ್ಗೆ ಬರುತ್ತಿರುವ ವಲಸಿಗರ ಸಂಖ್ಯೆ ಹೆಚ್ಚಾಗಿದ್ದು, ಇವರ ವಿರುದ್ದ ದೇಶದಲ್ಲಿ ಸುಳ್ಳುಸುದ್ದಿಗಳನ್ನು ಹರಡುತ್ತಿದ್ದರು. ಇದರಿಂದ ದೇಶದ ಸಾಮರಸ್ಯ ಹಾಳಾಗಿತ್ತು. ಹಾಗಾಗಿ, ಇದನ್ನು ತಡೆಯಲು ಜರ್ಮನ್ ಸರ್ಕಾರ ಈ ಕಾನೂನನ್ನು ಜಾರಿಗೆ ತರುತ್ತಿದೆ ಎನ್ನಲಾಗಿದೆ.

ಝಾಕೀರ್ ಸ್ಥಾಪಿಸಿದ ಸಂಸ್ಥೆ ಮುಟ್ಟುಗೋಲು

ಝಾಕಿರ್ ನಾಯ್ಕ ಸ್ಥಾಪಿಸಿದ್ದ ಸಂಸ್ಥೆಯ 18 ಕೋಟಿ ರೂ. ಮೊತ್ತದ ಆಸ್ತಿ ಮುಟ್ಟುಗೋಲು

ಹೊಸದಿಲ್ಲಿ, ಮಾ.20: ವಿದ್ವಾಂಸ ಝಾಕಿರ್ ನಾಯ್ಕಾ ಸ್ಥಾಪಿಸಿರುವ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ಗೆ ಸೇರಿದ, ದಕ್ಷಿಣ ಮುಂಬೈಯ ಡೊಂಗ್ರಿಯಲ್ಲಿರುವ 18.37 ಕೋಟಿ ರೂ. ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ. ಝಾಕಿರ್ ವಿರುದ್ಧದ ಅಕ್ರಮ ಹಣ ಚಲುವೆ (ಕಪ್ಪು ಹಣ ಬಿಳುಪು ಮಾಡುವ ಪ್ರಕ್ರಿಯೆ) ಪ್ರಕರಣದ ಅಂಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಝಾಕಿರ್ ನಾಯ್ಕಿ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೊಸ ಸಮನ್ಸ್ ಜಾರಿಗೊಳಿಸಿದ್ದು ಮಾ.30ರಂದು ಹೊಸದಿಲ್ಲಿಯಲ್ಲಿರುವ ಕೇಂದ್ರ ಕಚೇರಿಯೆದುರು ಹಾಜರಾಗುವಂತೆ ಸೂಚಿಸಿದೆ. ಬಾಂಗ್ಲಾದೇಶದ ಢಾಕಾದ ಕೆಫೆಯೊಂದರ ಮೇಲೆ ಕಳೆದ ವರ್ಷ ಭಯೋತ್ಪಾದಕರು ನಡೆಸಿದ ದಾಳಿಗೆ ಸಂಬಂಧಿಸಿ, ಈ ಉಗ್ರರಲ್ಲಿ ಹಲವರು ಝಾಕಿರ್ ನಾಯ್ಕಾ ಬೋಧನೆ ಯಿಂದ ಪ್ರಭಾವಿತರಾಗಿ ಈ ಕಾರ್ಯ ನಡೆಸಿದ್ದರು ಎಂಬ ವರದಿಯ ಹಿನ್ನೆಲೆಯಲ್ಲಿ, ಉಗ್ರವಾದ ವಿರೋಧಿ ಕಾನೂನಿನಡಿ ನಾಯ್ಕೆಗೆ ಮಾ.14ರಂದು ಹಾಜರಾಗುವಂತೆ ಮೊದಲ ಸಮನ್ಸ್ ಜಾರಿಗೊಳಿಸಲಾಗಿತ್ತು.
ಎನ್‌ಐಎ ಕಳೆದ ನವೆಂಬರ್‌ನಲ್ಲಿ ಝಾಕಿರ್ ನಾಯ್ಕ್ ಮತ್ತವರ ಸಹಚರರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಮುಂಬೈಯಲ್ಲಿರುವ ಝಾಕಿರ್ ನಿವಾಸಕ್ಕೆ ನೋಟಿಸ್ ಕಳುಹಿಸಲಾಗಿದೆ. ಬಂಧನದಿಂದ ತಪ್ಪಿಸಿಕೊಳ್ಳಲು ಝಾಕಿರ್ ಇದೀಗ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

ಸ್ಟೇಝಿಲ್ಲಾ ಸಹಸ್ಥಾಪಕ ವಸುಪಾಲ್

ಸ್ಟೇಝಿಲ್ಲಾ ಸಹಸ್ಥಾಪಕ ವಸುಪಾಲ್ ಬಂಧನ ಖಂಡಿಸಿ ರಾಜನಾಥ್‌ಗೆ ಪ್ರಮುಖ ಟೆಕ್ ಉದ್ಯಮಿಗಳ ಪತ್ರ

ಹೊಸದಿಲ್ಲಿ,ಮಾ.20: ಸ್ಟೇಝಿಲ್ಲಾ ಸಹಸ್ಥಾಪಕ ಯೋಗೇಂದ್ರ ವಸುಪಾಲ್ ಅವರನ್ನು ಬಂಧಿಸಿರುವ ವಿಧಾನದ ಬಗ್ಗೆ ಕಳವಳ ವ್ಯಕ್ತಪಡಿಸಿ ಪೇಟಿಎಮ್‌ನ ವಿಜಯ ಶೇಖರ ಶರ್ಮಾ, ಓಲಾ ಕ್ಯಾಬ್ಸ್‌ನ ಭವಿಷ್ ಅಗರವಾಲ್ ಮತ್ತು ಮಾಜಿ ಇನ್ಫೋಸಿಸ್ ನಿರ್ದೇಶಕ ಟಿ.ವಿ.ಮೋಹನದಾಸ ಪೈ ಸೇರಿದಂತೆ ಪ್ರಮುಖ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳು ಮತ್ತು ಸ್ಟಾರ್ಟ್ ಅಪ್‌ಗಳ ಸ್ಥಾಪಕರು ಗೃಹಸಚಿವ ರಾಜನಾಥ ಸಿಂಗ್ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

'ಹೆಲ್ಪ್-ಯೋಗಿ-ಡಾಟ್ ಕಾಮ್' ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪತ್ರಕ್ಕೆ ಎಕ್ಜೋಟೆಲ್‌ನ ಶಿವಕುಮಾರ ಗಣೇಶನ್,ಕ್ಲೌಡ್ ಚೆರ್ರಿಯ ವಿನೋದ್ ಮುತ್ತುಕೃಷ್ಣನ್ ಸೇರಿದಂತೆ 73 ಉದ್ಯಮಿಗಳು ಸಹಿ ಹಾಕಿದ್ದಾರೆ.

ನಾವೆಲ್ಲ ಒಂದು ಸಮುದಾಯವಾಗಿ ಒಂದಾಗಿದ್ದೇವೆ ಮತ್ತು 'ಸ್ಟಾರ್ಟ್ ಅಪ್ ಇಂಡಿಯಾ ಸ್ಟಾಂಡ್ ಅಪ್ ಇಂಡಿಯಾ 'ಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಲ್ಲಿ ನಂಬಿಕೆಯಿರಿಸಿದ್ದೇವೆ.
ವಿವಾದ ಕುರಿತು ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯಬೇಕು ಎಂದು ನಮ್ಮ ಸಮುದಾಯ ಕರೆ ನೀಡುತ್ತಿದೆ ಮತ್ತು ಈ ದೇಶದ ಕಾನೂನುಗಳನ್ನು ಬುಡಮೇಲುಗೊಳಿಸಲು ಯಾವುದೇ ಅಧಿಕಾರ ದುರುಪಯೋಗವನ್ನು ಬಲವಾಗಿ ವಿರೋಧಿಸಿತ್ತೇವೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ವಿಷಯವನ್ನು ಪರಿಶೀಲಿಸುವಂತೆ ಮತ್ತು ಯೋಗಿ (ವಸುಪಾಲ್)ಯವರಿಗೆ ತ್ವರಿತ ನ್ಯಾಯ ದೊರೆಯುವಂತೆ ನೋಡಿಕೊಳ್ಳಬೇಕೆಂದು ನಾವು ನಿಮ್ಮನ್ನು ವಿನಮ್ರವಾಗಿ ಕೋರುತ್ತಿದ್ದೇವೆ ಎಂದು ಪತ್ರವು ಹೇಳಿದೆ.

ಹೋಮ್‌ಸ್ಟೇಗಳ ಆನ್‌ಲೈನ್ ತಾಣ ಸ್ಟೇಝಿಲ್ಲಾದ ಸಿಇಒ ಆಗಿರುವ ವಸುಪಾಲ್ ಅವರನ್ನು ಜಿಗ್‌ಸಾ ಅಡ್ವೈರ್ಟಿಸಿಂಗ್‌ಗೆ ಹಣ ಪಾವತಿಸದ ವಿವಾದದಲ್ಲಿ ಕಳೆದ ವಾರ ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸಂತೂರ್ ಫೆಮಿನಾ ಸೌತ್ ಪ್ರಶಸ್ತಿ - ಆಶ್ನಾ ಗೌರವ್

ಕರ್ನಾಟಕದ ಹುಡುಗಿಗೆ ಸಂತೂರ್ ಫೆಮಿನಾ ಸೌತ್ ಪ್ರಶಸ್ತಿ

ಬೆಂಗಳೂರು, ಮಾರ್ಚ್ 20: ಉದ್ಯಾನ ನಗರಿಯಲ್ಲಿ ಇತ್ತೀಚೆಗೆ ನಡೆದ ಸಂತೂರ್ ಫೆಮಿನಾ ಸ್ಟೈಲ್ ದಿವಾ ಸೌತ್ ಸೌಂದರ್ಯ ಸ್ಪರ್ಧೆಯಲ್ಲಿ, ಮಣಿಪಾಲ್ ನ ಆಶ್ನಾ ಗರವ್ ಅವರು ಈ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಭಾವನಾ ಶ್ರೀಪಾದ ಅವರು, ಮೊದಲ ರನ್ನರ್ ಅಪ್ ಪ್ರಶಸ್ತಿ ಗಳಿಸಿದರೆ, ಅನೂಖಿಯಾ ಹರೀಶ್ ಅವರು ದ್ವಿತೀಯ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು. ಮಾರ್ಚ್ 18ರಂದು ಈ ಸ್ಪರ್ಧೆ ಅಂತಿಮ ಸುತ್ತು ನಡೆಸಲಾಗಿತ್ತು.

ಅಂತಿಮ ಸುತ್ತಿನಲ್ಲಿ 14 ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಿರೂಪಕಿ ಪಲೋಮಾ ರಾವ್ ಅವರು, ಎಲ್ಲಾ ಸ್ಪರ್ಧಾಳುಗಳನ್ನು ಸ್ಪರ್ಧೆಯ ತೀರ್ಪುಗಾರರಿಗೆ ಒಬ್ಬೊಬ್ಬರಾಗಿ ಪರಿಚಯಿಸಿದರು.

ಎಲ್ಲಾ ಸ್ಪರ್ಧಾಳುಗಳಿಗೂ ಮಿಂಚುವ ವಜ್ರಾಭರಣಗಳನ್ನು ಹಾಕಲಾಗಿತ್ತು.
ಈ ವಜ್ರಾಭರಣಗಳನ್ನು ಆಭರಣ್ ಜ್ಯೂವೆಲರ್ಸ್ ಪ್ರಾಯೋಕತ್ವ ನೀಡಿತ್ತು.

ಫೈನಲ್ ನಲ್ಲಿ ಒಟ್ಟು ಮೂರು ಸುತ್ತುಗಳು ನಡೆದವು. ಮೂರನೇ ಹಾಗೂ ಅಂತಿಮ ಸುತ್ತಿನಲ್ಲಿ ಮಿರ ಮಿರನೆ ಮಿಂಚುವ ಆಕರ್ಷಕ ಗೌನ್ ಗಳನ್ನು ಧರಿಸಿದ್ದ ಸುಂದರಿಯರು, ತಮ್ಮ ಸೌಂದರ್ಯವನ್ನು ನೂರು ಪಟ್ಟು ಹೆಚ್ಚಾಗಿ ಬಿಂಬಿಸುವಂತೆ ಕಂಗೊಳಿಸಿದರು.

ಫೈನಲ್ ನ ಅಂತಿಮ ಸುತ್ತಿನಲ್ಲಿ ಎಲ್ಲಾ ಸ್ಪರ್ಧಾಳುಗಳು ಅತ್ಯುತ್ತಮವಾಗಿ ಪ್ರದರ್ಶನ ನೀಡಿ, ತೀರ್ಪುಗಾರರೇ ಸೂಕ್ತ ತೀರ್ಪು ನೀಡುವಲ್ಲಿ ಕೊಂಚ ಗೊಂದಲಕ್ಕೀಡಾಗುವಂತೆ ಮಾಡಿದರು.

ಆದರೆ, ಅಂತಿಮ ಹಂತದಲ್ಲಿ ಮಣಿಪಾಲ್ ನ ಆಶ್ನಾ ಗೌರವ್ ಅವನ್ನು ತೀರ್ಪುಗಾರರು ಪ್ರಶಸ್ತಿಗೆ ಆಯ್ಕೆ ಮಾಡಿದರು. ಆಶ್ನಾ ಆಯ್ಕೆಯಾಗುತ್ತಲೇ ಸಮಾರಂಭದಲ್ಲಿದ್ದ ಪ್ರೇಕ್ಷಕರ ಚಪ್ಪಾಳೆ ಮುಗಿಲು ಮುಟ್ಟಿತ್ತು.

ಅಂದಹಾಗೆ, ಈ ಸಮಾರಂಭಕ್ಕೆ ಕನ್ನಡ ಹಾಗೂ ಹಿಂದಿ ಚಿತ್ರರಂಗದ ಸಿನಿಮಾ ತಾರೆಯರು ಆಗಮಿಸಿ, ಈ ಸ್ಪರ್ಧೆಯು ಮತ್ತಷ್ಟು ಕಳೆಗಟ್ಟುವಂತೆ ಮಾಡಿದ್ದರು. ಹಿಂದಿ ಸಿನಿಮಾ ತಾರೆಯಲ್ಲಿ ಮಿಂಚಿನಂತೆ ಕಂಡಿದ್ದು ಅದಾ ಶರ್ಮಾ.

ಇನ್ನು, ಸಮಾರಂಭದಲ್ಲಿ ಭಾಗವಹಿಸಿದ್ದ ಕನ್ನಡ ಕಲಾವಿದೆಯರಲ್ಲಿ ಕಣ್ಣಿಗೆ ಕಂಡಿದ್ದು ಇತ್ತೀಚೆಗಷ್ಟೇ ತೆರೆ ಕಂಡಿದ್ದ 'ಕಿರಿಕ್ ಪಾರ್ಟಿ' ಚಿತ್ರದ ನಟಿ ರಶ್ಮಿಕಾ ಮಂದಾನಾ.

ಬಿಕ್ಷಾಟನೆ ಕೊನೆಗಾಣಿಸಲು ರಾಜ್ಯ ಸರ್ಕಾರ ಚಿಂತನೆ

ಭಿಕ್ಷಾಟನೆ ಕೊನೆಗಾಣಿಸಲು ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು,ಮಾ.20– ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವೆಡೆ ಹೆಚ್ಚುತ್ತಿರುವ ಭಿಕ್ಷಾಟನೆಯನ್ನು ಕೊನೆಗಾಣಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಸಚಿವ ಎಚ್.ಆಂಜನೇಯ ವಿಧಾನಸಭೆಯಲ್ಲಿ ಹೇಳಿದರು.   ಪ್ರಶ್ನೋತ್ತರ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯೆ ಜಯಮಾಲಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಭಿಕ್ಷುಕರು ಅನಾಥ ಮಕ್ಕಳನ್ನು ವಾಮಮಾರ್ಗದಲ್ಲಿ ಕರೆತಂದು ಭಿಕ್ಷಾಟನೆಗೆ ದೂಡುತ್ತಾರೆ. ಕಾನೂನಿನ ಪ್ರಕಾರ ಭಿಕ್ಷಾಟನೆ ನಿಷೇಧವಿದ್ದು, ಅದು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎಂದು ವಿಷಾದಿಸಿದರು.

1975 ಕರ್ನಾಟಕ ಭಿಕ್ಷಾಟನಾ ಅಧಿನಿಯಮ ಜಾರಿಯಲ್ಲಿರುವ ಸೆಕ್ಷನ್ 4 ಪ್ರಕಾರ 14 ವರ್ಷ ತುಂಬಿದ ಪುರುಷ ಮತ್ತು ಮಹಿಳೆಯನ್ನು ಭಿಕ್ಷಾಟನೆಗೆ ದೂಡುವುದು ಶಿಕ್ಷಾರ್ಹ ಅಪರಾಧ. ಅಂಥವರನ್ನು ಬಂಧಿಸಿ ನಿರಾಶ್ರಿತ ಠಾಣೆಗಳಲ್ಲಿ ಇಡಲಾಗುವುದು ಎಂದರು.
  ತಾಯಿ ಮತ್ತು ಮಗುವನ್ನು ಒಮ್ಮೆ ಬಂಧಿಸಿದರೆ ನಿರಾಶ್ರಿತ ಪರಿಹಾರ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತಿಲ್ಲ. ಇಂತಹ ಕಡೆ ಬೇರ್ಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಜಾಗತಿಕ ಸಂತುಷ್ಟ ಸೂಚಿ- ಭಾರತ 122 ಸ್ಥಾನ

ಇದು ಸ್ಯಾಡ್ ನ್ಯೂಸ್ : ಸಂತುಷ್ಟ ದೇಶಗಳ ಜಾಗತಿಕ ಪಟ್ಟಿಯಲ್ಲಿ ಭಾರತದ ಸ್ಥಾನ ನೋಡಿದರೆ ಅಳು ಬರುವುದು ಖಚಿತ

ಬರ್ಲಿನ್, ಮಾ. 20: ಅತ್ಯಂತ ಅತೃಪ್ತ ದೇಶಗಳ ಪೈಕಿ ಭಾರತವೂ ಒಂದು ಹಾಗೂ ಕಳೆದ ವರ್ಷ ಅದು ಇನ್ನೂ ಹೆಚ್ಚಿನ ಅತೃಪ್ತಿಗೆ ಒಳಗಾಯಿತು ಎಂಬುದಾಗಿ ‘ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ 2017’ ಅಭಿಪ್ರಾಯಪಟ್ಟಿದೆ.

ಪಟ್ಟಿಯಲ್ಲಿ ಬರುವ 155 ದೇಶಗಳ ಪೈಕಿ ನಾರ್ವೆ ಅತ್ಯಂತ ಸಂತುಷ್ಟ ದೇಶವಾಗಿ ಹೊರಹೊಮ್ಮಿದೆ.

ಭಾರತ 122ನೆ ಸ್ಥಾನದಲ್ಲಿದೆ. ಕಳೆದ ವರ್ಷದಲ್ಲಿ ಭಾರತದ ಸ್ಥಾನ 118 ಆಗಿದ್ದು, ಈ ವರ್ಷ ಅದು ನಾಲ್ಕು ಸ್ಥಾನಗಳನ್ನು ಕಳೆದುಕೊಂಡಿದೆ.

ವಿಶ್ವಸಂಸ್ಥೆಯಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಸಂತೋಷ ದಿನ ಆಚರಣೆಯ ಸಂದರ್ಭದಲ್ಲಿ ವರದಿಯನ್ನು ಬಿಡುಗಡೆ ಮಾಡಲಾಯಿತು.
ಕಳೆದ ವರ್ಷ ನಾಲ್ಕನೆ ಸ್ಥಾನದಲ್ಲಿದ್ದ ನಾರ್ವೆ ಈ ಬಾರಿ ಮೊದಲ ಸ್ಥಾನಿಯಾಯಿತು.

ಆರ್ಥಿಕ, ಆರೋಗ್ಯ ಮತ್ತು ಹಣಕಾಸು ತಜ್ಞರು ನಡೆಸುವ ಸಮೀಕ್ಷಾ ಅಂಕಿಅಂಶಗಳನ್ನು ಆಧರಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಡೆನ್ಮಾರ್ಕ್ ಈ ಬಾರಿ ಎರಡನೆ ಸ್ಥಾನಕ್ಕೆ ಇಳಿದಿದೆ.

ಐಸ್‌ಲ್ಯಾಂಡ್, ಸ್ವಿಟ್ಸರ್‌ಲ್ಯಾಂಡ್ ಮತ್ತು ಫಿನ್‌ಲ್ಯಾಂಡ್ ಕ್ರಮವಾಗಿ 3, 4 ಮತ್ತು 5ನೆ ಸ್ಥಾನಗಳಲ್ಲಿವೆ.

ಪುಣೆಯಲ್ಲಿ ಜಂಟಿ ವೀಸಾ ಕೇಂದ್ರ ಆರಂಭ

ಪುಣೆಯಲ್ಲಿ ಜಂಟಿ ವೀಸಾ ಕೇಂದ್ರ ಆರಂಭ

ಮುಂಬೈ,ಫೆ.27: ವಿಎಫ್‌ಎಸ್ ಗ್ಲೋಬಲ್ ಸಂಸ್ಥೆಯ ನೂತನ ಜಂಟಿ ವೀಸಾ ಅರ್ಜಿ ಕೇಂದ್ರ ಸೋಮವಾರ ಪುಣೆಯಲ್ಲಿ ಆರಂಭಗೊಂಡಿದ್ದು, ಇಲ್ಲಿ ಫ್ರಾನ್ಸ್, ಇಟಲಿ, ಜರ್ಮನಿ, ಆಸ್ಟ್ರಿಯ,ಗ್ರೀಸ್, ಲಾಟ್ವಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ವೀಸಾಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಕೇಂದ್ರದಲ್ಲಿ ಇತರ 15 ಸ್ಕಾಂಡಿನೇವಿಯನ್ ದೇಶಗಳಾದ ಸ್ವೀಡನ್,ಸ್ವಿಸ್, ಪೋರ್ಚುಗಲ್, ಬೆಲ್ಜಿಯಂ, ಡೆನ್ಮಾರ್ಕ್, ಹಂಗರಿ, ನಾರ್ವೆ, ಲಕ್ಸೆಂಬರ್ಗ್, ಸೈಪ್ರಸ್ ಹಾಗೂ ಎಸ್ತೋನಿಯಾ ದೇಶಗಳಿಗೂ ವೀಸಾಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಇದರ ಜೊತೆ ಆಸ್ಟ್ರೇಲಿಯ, ಬ್ರಿಟನ್, ಐಯರ್ಲ್ಯಾಂಡ್,ಕೆನಡ,ಅಮೆರಿಕ, ಮಲೇಶ್ಯ, ದ.ಆಫ್ರಿಕ, ಟರ್ಕಿ ಹಾಗೂ ಯುಎಇಗಳಿಗೂ ವೀಸಾ ಸೇವೆಯನ್ನು ಒದಗಿಸಲಿದೆ. ನೂತನ ಜಂಟಿ ವೀಸಾ ಕೇಂದ್ರದ ಆರಂಭದೊಂದಿಗೆ, ವಿಎಫ್‌ಎಸ್ ಗ್ಲೋಬಲ್ ಸಂಸ್ಥೆಯು ವಿವಿಧ ದೇಶಗಳ ವೀಸಾ ಅವಶ್ಯಕತೆಗಳನ್ನು ಒಂದೇ ಸೂರಿನಡಿ ಒದಗಿಸಲಿದೆಯೆಂದು , ಸಂಸ್ಥೆಯ ಮಧ್ಯಪ್ರಾಚ್ಯ ಹಾಗೂ ದ.ಏಶ್ಯಕ್ಕಾಗಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್ ಮಲ್ಹೋತ್ರಾ ತಿಳಿಸಿದ್ದಾರೆ.

ಪಾಕ್: ಹಿಂದೂ ವಿವಾಹ ಮಸೂದೆ ಕಾನೂನು ಜಾರಿ

ಪಾಕ್: ಹಿಂದೂ ವಿವಾಹ ಮಸೂದೆ ಕಾನೂನು ಜಾರಿ

ಇಸ್ಲಾಮಾಬಾದ್, ಮಾ. 20: ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳ ವಿವಾಹವನ್ನು ನಿಯಂತ್ರಿಸುವ ಮಸೂದೆಯು, ಅಧ್ಯಕ್ಷ ಮಮ್ನೂನ್ ಹುಸೈನ್ ಸೋಮವಾರ ಸಹಿ ಹಾಕುವುದರೊಂದಿಗೆ ಕಾನೂನಾಗಿದೆ.ಇದರೊಂದಿಗೆ, ಮದುವೆಗಳನ್ನು ನಿಯಂತ್ರಿಸುವುದಕ್ಕಾಗಿ ಪಾಕಿಸ್ತಾನದ ಹಿಂದೂಗಳಿಗೆ ವಿಶಿಷ್ಟ ವೈಯಕ್ತಿಕ ಕಾನೂನೊಂದು ಲಭಿಸಿದಂತಾಗಿದೆ.

‘‘ಪ್ರಧಾನಿ ನವಾಝ್ ಶರೀಫ್‌ರ ಸಲಹೆಯಂತೆ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ್‌ನ ಅಧ್ಯಕ್ಷರು ‘ಹಿಂದೂ ವಿವಾಹ ಮಸೂದೆ 2017’ಕ್ಕೆ ಸಹಿ ಹಾಕಿದ್ದಾರೆ’’ ಎಂದು ಪ್ರಧಾನಿ ಕಚೇರಿಯ ಹೇಳಿಕೆಯೊಂದು ತಿಳಿಸಿದೆ.

ಮದುವೆಗಳು, ಕುಟುಂಬಗಳು, ತಾಯಂದಿರು ಮತ್ತು ಅವರ ಮಕ್ಕಳನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಜೊತೆಗೆ, ಹಿಂದೂ ಕುಟುಂಬಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನೂ ಅದು ರಕ್ಷಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

‘‘ಪಾಕಿಸ್ತಾನದಲಿ ವಾಸಿಸುವ ಹಿಂದೂ ಕುಟುಂಬಗಳ ಮದುವೆಗಳನ್ನು ಊರ್ಜಿತಗೊಳಿಸುವುದಕ್ಕಾಗಿ ರೂಪಿಸಲಾದ ಪ್ರಬಲ ಕಾನೂನಾಗಿದೆ’’ ಎಂದಿದೆ.

ಪಾಕಿಸ್ತಾನದಲ್ಲಿ ವಾಸಿಸುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಮಾನ ಹಕ್ಕುಗಳನ್ನು ನೀಡುವ ಪ್ರಸ್ತಾಪಕ್ಕೆ ತನ್ನ ಸರಕಾರ ಯಾವತ್ತೂ ಆದ್ಯತೆ ನೀಡಿದೆ ಎಂದು ಪ್ರಧಾನಿ ಶರೀಫ್ ಹೇಳಿದರು.

‘‘ಅವರು ಇತರ ಯಾವುದೇ ಸಮುದಾಯದಷ್ಟೇ ದೇಶಪ್ರೇಮಿಗಳು. ಹಾಗಾಗಿ, ಅವರಿಗೆ ಸಮಾನ ರಕ್ಷಣೆಯನ್ನು ನೀಡುವುದು ಸರಕಾರದ ಜವಾಬ್ದಾರಿಯಾಗಿದೆ’’ ಎಂದರು.

ಕಾನೂನಿನ ಪ್ರಕಾರ, ಹಿಂದೂಗಳ ಮದುವೆಗಳ ನೋಂದಣಿಗಾಗಿ ಅವರಿಗೆ ಅನುಕೂಲವೆನಿಸುವ ಸ್ಥಳಗಳಲ್ಲಿ ಸರಕಾರವು ವಿವಾಹ ನೋಂದಣಾಧಿಕಾರಿಗಳನ್ನು ನೇಮಿಸುತ್ತದೆ.

ದಾಂಪತ್ಯ ಹಕ್ಕುಗಳು, ಕಾನೂನುಬದ್ಧವಾಗಿ ಬೇರ್ಪಡುವುದು, ಮದುವೆಗಳನ್ನು ರದ್ದುಗೊಳಿಸುವುದು, ಹೆಂಡತಿ ಮತ್ತು ಮಕ್ಕಳ ಆರ್ಥಿಕ ಭದ್ರತೆ, ಮದುವೆ ರದ್ದಾದರೆ ಪರ್ಯಾಯ ಪರಿಹಾರ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ ಮದುವೆ ರದ್ದುಗೊಳಿಸುವುದು ಮುಂತಾದವುಗಳಿಗೆ ಕಾನೂನು ಅವಕಾಶ ಮಾಡಿಕೊಡುತ್ತದೆ.

ರುಮಾಹ್:- ಜಗತ್ತಿನ ಅತಿ ದೊಡ್ಡ ಒಂಟೆ ಉತ್ಸವ

ರುಮಾಹ್: ಜಗತ್ತಿನ ಅತಿ ದೊಡ್ಡ ಒಂಟೆ ಉತ್ಸವಕ್ಕೆ ಚಾಲನೆ

ರಿಯಾದ್, ಮಾ. 20: ಸೌದಿ ಅರೇಬಿಯದ ದೊರೆ ಸಲ್ಮಾನ್ ಅವರ ಆಶ್ರಯದಲ್ಲಿ ನಡೆಯುತ್ತಿರುವ ಜಗತ್ತಿನ ಅತ್ಯಂತ ದೊಡ್ಡ ಒಂಟೆ ಉತ್ಸವ ರಿಯಾದ್‌ನಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ರುಮಾಹ್‌ನಲ್ಲಿ ರವಿವಾರ ಆರಂಭಗೊಂಡಿದೆ.

28 ದಿನಗಳ ‘ದೊರೆ ಅಬ್ದುಲಝೀಝ್ ಒಂಟೆ ಉತ್ಸವ’ದಲ್ಲಿ ಒಂಟೆಗಳ ಸೌಂದರ್ಯ ಸ್ಪರ್ಧೆ ನಡೆಯಲಿದೆ ಹಾಗೂ 114 ಮಿಲಿಯ ಸೌದಿ ರಿಯಾಲ್ (ಸುಮಾರು 200 ಕೋಟಿ ರೂಪಾಯಿ)ನಷ್ಟು ಅಗಾಧ ಮೊತ್ತದ ಬಹುಮಾನವಿದೆ.

1999ರಲ್ಲಿ ಸ್ಥಳೀಯ ಬೆಡೊಯುನ್ ಜನರ ಗುಂಪೊಂದು ಆರಂಭಿಸಿದ ಈ ಸ್ಪರ್ಧೆಗೆ ಸೌದಿ ರಾಜ ಕುಟುಂಬದ ಬೆಂಬಲ ಲಭಿಸಿತು. ಅದರ ಬೆಳೆಯುತ್ತಿರುವ ಜನಪ್ರಿಯತೆಯ ಹಿನ್ನೆಲೆಯಲ್ಲಿ ಅದು ಪರಂಪರೆ ಉತ್ಸವವಾಗಿ ಮಾರ್ಪಟ್ಟಿತು ಹಾಗೂ ಜಿಸಿಸಿ ದೇಶಗಳ ಜನರನ್ನು ಆಕರ್ಷಿಸಿತು.

ಸೌದಿ ಅರೇಬಿಯದ ಜೀವನ ಶೈಲಿ ಮತ್ತು ಸಂಸ್ಕೃತಿ ಹಾಗೂ ಬೆಡೊಯುನ್ ಸಂಪ್ರದಾಯಗಳನ್ನು ಆಚರಿಸುವ ಹಬ್ಬವು ಇಂದು 3 ಲಕ್ಷಕ್ಕೂ ಅಧಿಕ ಒಂಟೆಗಳು ಮತ್ತು ಅವುಗಳ ಮಾಲೀಕರನ್ನು ಆಕರ್ಷಿಸುತ್ತಿದೆ.

‘‘ಈ ಹಬ್ಬವು ಇತಿಹಾಸ, ಪರಂಪರೆ ಮತ್ತು ಮನರಂಜನೆಗಳ ವಿಷಯದಲ್ಲಿ ಸೌದಿಗಳು ಮತ್ತು ವಿದೇಶೀಯರಿಗೆ ಅತ್ಯುತ್ತಮ ದೇಣಿಗೆಗಳನ್ನು ನೀಡುತ್ತದೆ’’ ಎಂದು ದೊರೆ ಅಬ್ದುಲಝೀಝ್ ಒಂಟೆ ಉತ್ಸವ ಸಮಿತಿಯ ವಕ್ತಾರ ಡಾ. ತಲಾಲ್ ಬಿನ್ ಖಾಲಿದ್ ಅಲ್-ತಾರಿಫಿ ಹೇಳಿದರು.

ತೆರಿಗೆ ಸಂಗ್ರಹ : ವಾರ್ಷಿಕ ಗುರಿ ಮುಟ್ಟಿದ ಕರ್ನಾಟಕ

ತೆರಿಗೆ ಸಂಗ್ರಹ: ವಾರ್ಷಿಕ ಗುರಿ ಮುಟ್ಟಿದ ಕರ್ನಾಟಕ ತೆರಿಗೆ ಇಲಾಖೆ

ಬೆಂಗಳೂರು, ಮಾರ್ಚ್ 20: ಕರ್ನಾಟಕ ತೆರಿಗೆ ಇಲಾಖೆಯು 2016-17ರ ಆರ್ಥಿಕ ವರ್ಷದಲ್ಲಿ ತನಗೆ ನೀಡಲಾಗಿದ್ದ ಗುರಿಯನ್ನು ಫೆ. 16ರಂದೇ ಮುಟ್ಟಿರುವುದಾಗಿ ತಿಳಿಸಿದೆ.

ಬೆಂಗಳೂರಿನಲ್ಲಿಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ- ಗೋವಾ ಪ್ರಾದೇಶಿಕ ಮುಖ್ಯ ತೆರಿಗೆ ಆಯುಕ್ತರಾದ ನೂತನ್ ಒಡೆಯರ್ ಅವರು, ಈ ವಿಷಯ ತಿಳಿಸಿದರು.

ಪ್ರಸಕ್ತ ಹಣಕಾಸು ವರ್ಷ ಮುಗಿಯಲು ಇನ್ನು ಕೆಲವೇ ದಿನ (ಮಾರ್ಚ್ 30) ಬಾಕಿ ಇವೆ. ಈವರೆಗೆ 13 ಸಾವಿರ ಕೋಟಿ ತೆರಿಗೆಯನ್ನು ವಸೂಲಿ ಮಾಡಲಾಗಿದೆ ಎಂದು ಆಯುಕ್ತರು ಅಂಕಿ-ಅಂಶ ಸಹಿತ ವಿವರಿಸಿದರು.

ಕಳೆದ ವರ್ಷ 2,135 ಕೋಟಿ ರು. ಪತ್ತೆಯಾಗಿದ್ದರೆ, 4, 828 ಕೋಟಿ ರು. ಆಸ್ತಿ ಪತ್ತೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಶೇ. 22.48ರಷ್ಟು ಹೆಚ್ಚುವರಿ ತೆರಿಗೆ ಸಂಗ್ರಹಿಸಲಾಗಿದ್ದು, ನೀಡಲಾಗಿದ್ದ ಗುರಿಯನ್ನು ಆರ್ಥಿಕ ವರ್ಷ ಮುಕ್ತಾಯವಾಗುವುದರೊಳಗೇ ಮುಟ್ಟಲಾಗಿದೆ ಎಂದು ತಿಳಿಸಿದರು.

ಅಲ್ಲದೆ, ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲಿ 6ನೇ ಸ್ಥಾನದಲ್ಲಿದ್ದರೆ, ವೈಯಕ್ತಿಕ ಆದಾಯ ಸಂಗ್ರಹದಲ್ಲಿ ರಾಜ್ಯವು ಮೂರನೇ ಸ್ಥಾನದಲ್ಲಿದೆ ಎಂದು ಅವರು ವಿವರಿಸಿದರು.

ಶೇ. 64ರಷ್ಟು ಸಿಬ್ಬಂದಿ ಕೊರತೆ, ಸತತ ನಾಲ್ಕು ವರ್ಷಗಳ ಬರಗಾಲದ ಪರಿಸ್ಥಿತಿಗಳ ಹೊರತಾಗಿಯೂ ಇಲಾಖೆಯು ನಿಗದಿತ ಗುರಿಯನ್ನು ಮುಟ್ಟಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮ ಇಸ್ಲಾಮ್

ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮ ಇಸ್ಲಾಮ್

ವಾಶಿಂಗ್ಟನ್, ಮಾ. 20: ಇಸ್ಲಾಮ್ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮವಾಗಿದೆ; ಮುಸ್ಲಿಮ್ ಬಾಹುಳ್ಯದ ದೇಶಗಳಲ್ಲಿ ಮಾತ್ರವಲ್ಲದೆ, 2050ರ ವೇಳೆಗೆ 10 ಶೇಕಡ ಯುರೋಪಿಯನ್ನರು ಇಸ್ಲಾಂನ ಅನುಯಾಯಿಗಳಾಗಿರುತ್ತಾರೆ ಎಂದು ಇತ್ತೀಚಿನ ಪಿವ್ ರಿಸರ್ಚ್ ಸೆಂಟರ್‌ನ ಸಂಶೋಧನೆಯೊಂದು ತಿಳಿಸಿದೆ.

2010 ಮತ್ತು 2050ರ ನಡುವಿನ ಅವಧಿಯಲ್ಲಿ, ಮುಸ್ಲಿಮರ ಸಂಖ್ಯೆ ಜಗತ್ತಿನಾದ್ಯಂತ 73 ಶೇಕಡದಷ್ಟು ಹೆಚ್ಚಲಿದೆ ಎಣದಯ ಸಂಶೋಧನಾ ವರದಿ ಹೇಳಿದೆ. ನಂತರದ ಸ್ಥಾನದಲ್ಲಿ ಕ್ರೈಸ್ತ ಧರ್ಮವಿದ್ದು, ಇದೇ ಅವಧಿಯಲ್ಲಿ ಅವರ ಸಂಖ್ಯೆ 35 ಶೇಕಡದಷ್ಟು ಹೆಚ್ಚಲಿದೆ ಹಾಗೂ ಹಿಂದೂಗಳ ಸಂಖ್ಯೆ 34 ಶೇಕಡದಷ್ಟು ಹೆಚ್ಚಲಿದೆ ಎಂದು ವರದಿ ಹೇಳಿದೆ.

ಅಂದರೆ, ಈಗ ಜಗತ್ತಿನ ಎರಡನೆ ಅತಿ ದೊಡ್ಡ ಧರ್ಮವಾಗಿರುವ ಇಸ್ಲಾಮ್, ಶತಮಾನದ ಕೊನೆಯ ಹೊತ್ತಿಗೆ ಜಗತ್ತಿನ ಕ್ರೈಸ್ತ ಧರ್ಮವನ್ನು ಹಿಂದಿಕ್ಕಿ ಜಗತ್ತಿನ ಅತಿ ದೊಡ್ಡ ಧರ್ಮವಾಗಲಿದೆ ಎಂದು ಸಂಶೋಧನೆ ಹೇಳುತ್ತದೆ.

ಮುಸ್ಲಿಮ್ ಮಹಿಳೆಯರು ಹೆಚ್ಚು ಮಕ್ಕಳನ್ನು ಹೊಂದುತ್ತಿರುವುದು ಇದಕ್ಕೆ ಕಾರಣವಾಗಿದೆ. ಇತರ ಎಲ್ಲ ಧಾರ್ಮಿಕ ಗುಂಪುಗಳನ್ನು ಒಗ್ಗೂಡಿಸಿದರೆ, ಈ ಧರ್ಮಗಳ ಮಹಿಳೆಯರು ಸರಾಸರಿ 2.3 ಮಕ್ಕಳನ್ನು ಹೊಂದಿದರೆ, ಮುಸ್ಲಿಮ್ ಮಹಿಳೆಯರು ಸರಾಸರಿ 3.1 ಮಕ್ಕಳನ್ನು ಹೊಂದುತ್ತಾರೆ ಎಂದು ಪಿವ್ ಅಭಿಪ್ರಾಯಪಟ್ಟಿದೆ. ಅದೂ ಅಲ್ಲದೆ, ಇಸ್ಲಾಮ್ ಧರ್ಮದ ಅನುಯಾಯಿಗಳು ಮುಸ್ಲಿಮೇತರರಿಗಿಂತ ಸರಾಸರಿ 7 ವರ್ಷಗಳಷ್ಟು ಕಿರಿಯವರಾಗಿರುತ್ತಾರೆ.

ಹೆರಿಗೆ ಸೌಲಭ್ಯ(ತಿದ್ದುಪಡಿ) ಮಸೂದೆ 2016 ರಾಜ್ಯಸಭೆಯಲ್ಲಿ ಅಂಗೀಕಾರ

ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ ೨೦೧೬ ರಾಜ್ಯಸಭೆಯಲ್ಲಿ ಅಂಗೀಕಾರ

ನವದೆಹಲಿ: ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ ೨೦೧೬ ನ್ನು ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.

ಈ ಮಸೂದೆಯ ತಿದ್ದುಪಡಿಯ ಪ್ರಕಾರ ನೌಕರಿಯಲ್ಲಿರುವ ತಾಯಂದಿರಿಗೆ ಹೆರಿಗೆ ರಜೆಯನ್ನು ಸದ್ಯದ ೧೨ ವಾರಗಳಿಂದ ೨೬ ವಾರಗಳಿಗೆ ಹೆಚ್ಚಿಸಲಾಗಿದೆ. ಈ ಮಸೂದೆ ಕಳೆದ ವರ್ಷ ಆಗಸ್ಟ್ ೧೧ ರಂದೇ ರಾಜ್ಯಸಭೆಯಲ್ಲಿ ಅಂಗೀಕಾರವಾಗಿತ್ತು. ಆದರೆ ತಾಂತ್ರಿಕ ತಿದ್ದುಪಡಿಯಿಂದ ರಾಜ್ಯಸಭೆಯಲ್ಲಿ ಮತ್ತೆ ಅಂಗೀಕಾರ ಮಾಡಲಾಗಿದೆ ಎಂದು ರಾಜ್ಯಸಭೆಯ ಉಪಸಭಾಪತಿ ಪಿ ಜೆ ಕುರಿಯನ್ ಹೇಳಿದ್ದಾರೆ.

ಕೂಗು ಮತದ ಈ ಮಸೂದೆಯನ್ನು ಅಂಗೀಕರಿಸಲಾಗಿದೆ.

ಮೂರು ತಿಂಗಳಿಗಿಂತಲೂ ಚಿಕ್ಕ ಮಗುವನ್ನು ದತ್ತು ಸ್ವೀಕರಿಸುವ ತಾಯಿಗೆ ಈ ಮಸೂದೆಯಲ್ಲಿ ೧೨ ವಾರಗಳ ರಜೆಯನ್ನು ಕಲ್ಪಿಸಲಾಗಿದೆ.

ಹಾಗೆಯೇ ಈ ರಜದ ಅವಧಿ ಮುಗಿದ ಮೇಲೆ ಆರೋಗ್ಯದ ದೃಷ್ಟಿಯಿಂದ ಅಗತ್ಯತೆ ಇದ್ದಲ್ಲಿ, 'ಮನೆಯಿಂದ ಕೆಸಲಕ್ಕೆ' ಅವಕಾಶ ನೀಡುವ ಸೌಲಭ್ಯವನ್ನು ಕೂಡ ಆ ಮಸೂದೆ ಮಾಡಿಕೊಟ್ಟಿದೆ.
೫೦ ಅಥವಾ ಅದಕ್ಕಿಂತಲೂ ಹೆಚ್ಚು ನೌಕರನ್ನು ಹೊಂದಿರುವ ಉದ್ಯೋಗ ಸಂಸ್ಥೆಗಳು ಮಕ್ಕಳನ್ನು ನೋಡಿಕೊಳ್ಳುವ ಕ್ರಶ್ ಗಳನ್ನೂ ಸ್ಥಾಪಿಸುವುದು ಕೂಡ ಕಡ್ಡಾಯ ಮಾಡಿ ತಿದ್ದುಪಡಿ ಮಾಡಲಾಗಿದೆ.

ಪತಂಗಗಳು ಬೆಳಕಿನತ್ತ ಆಕರ್ಷಿತವಾಗುವುದೇಕೆ..?

ಪತಂಗಗಳು ಬೆಳಕಿನತ್ತ ಆಕರ್ಷಿತವಾಗುವುದೇಕೆ...?

ಪತಂಗಗಳು ಹಾರಾಟದಲ್ಲಿ ತಮ್ಮನ್ನು ತಾವು ಹೊಂದಿಸಿಕೊಳ್ಳಲು ಚಂದ್ರನನ್ನು ಬಳಸಿಕೊಳ್ಳುವುದರಿಂದ ಅವು ಬೆಳಕಿನತ್ತ ಆಕರ್ಷಿತಗೊಳ್ಳುತ್ತವೆ. ಕೃತಕ ಬೆಳಕು ಇದ್ದಾಗ ಗೊಂದಲಕ್ಕೊಳಗಾಗುವ ಪತಂಗಗಳು ಅದನ್ನು ಚಂದ್ರನೆಂದು ತಪ್ಪಾಗಿ ಗ್ರಹಿಸುತ್ತವೆ.

ಪತಂಗಗಳಿಗೆ ಚಂದ್ರನು ಆಪ್ಟಿಕಲ್ ಇನ್ಫಿನಿಟಿ ಅಥವಾ ದೃಷ್ಟಿಸಂಬಂಧಿ ಅನಂತದಲ್ಲಿ ಗೋಚರಿಸುತ್ತಾನೆ. ಅಂದರೆ ಪತಂಗದ ಕಣ್ಣುಗಳಿಂದ ನೋಡಿದರೆ ಬೆಳಕಿನ ಕಿರಣಗಳು ಭೂಮಿಗೆ ಸಮಾನಾಂತರವಾಗಿ ಕಾಣುತ್ತವೆ. ಹೀಗಾಗಿ ಪತಂಗಗಳು,ವಿಶೇಷವಾಗಿ ತಮ್ಮ ರೇಖಾತ್ಮಕ ಹಾರಾಟಕ್ಕೆ ಚಂದ್ರನನ್ನು ಮಾರ್ಗದರ್ಶಿ ಸಾಧನವಾಗಿ ಬಳಸಿಕೊಳ್ಳುತ್ತವೆ.

ಆಪ್ಟಿಕಲ್ ಇನ್ಫಿನಿಟಿಯು ಸ್ಥಳಕ್ಕೆ ಸಂಬಂಧಿಸಿದಂತೆ ತನ್ನ ತಾಣವನ್ನು ನಿರಂತರವಾಗಿ ಹೊಂದಿಸಿಕೊಳ್ಳಲು ಅನುಕೂಲ ಕಲ್ಪಿಸುತ್ತದೆ. ಇತರ ಗೋಚರ ಹೆಗ್ಗುರುತುಗಳು ಕಂಡು ಬಾರದಿರಬಹುದಾದ ರಾತ್ರಿಯ ಅಂಧಕಾರವನ್ನು ಪರಿಗಣಿಸಿದಾಗ ಇದು ತುಂಬ ಮಹತ್ವದ್ದಾಗುತ್ತದೆ.

ಕೃತಕ ಬೆಳಕು ಚಂದ್ರನಿಗಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಬಹುದು ಮತ್ತು ಪತಂಗಗಳು ಅದನ್ನೇ ಚಂದ್ರನೆಂದು ತಪ್ಪಾಗಿ ಭಾವಿಸುತ್ತವೆ. ಹೀಗಾಗಿ ಅವು ಕೃತಕ ಬೆಳಕಿನ ದಿಕ್ಕಿನಲ್ಲಿ ಮುಂದುವರಿಯುತ್ತವೆ. ಅವು ಕೃತಕ ಬೆಳಕಿನ ಸಮೀಪ ಹಾರುವಾಗ ಆಪ್ಟಿಕಲ್ ಇನ್ಫಿನಿಟಿಯನ್ನು ಕಳೆದುಕೊಳ್ಳುತ್ತವೆ ಮತ್ತು ದಿಕ್ಕು ತಪ್ಪಿದಂತಾಗುತ್ತವೆ.

ತನ್ನನ್ನೇ ತಾನು ಮರುಹೊಂದಿಸಿಕೊಳ್ಳುವ ಪ್ರಯತ್ನದಲ್ಲಿ ಪತಂಗವು ನಿರಂತರವಾಗಿ ಕೃತಕ ಬೆಳಕಿನ ಸುತ್ತ ಗಿರಕಿ ಹೊಡೆಯಬಹುದು. ಆದರೆ ಬೆಳಕಿನ ಮೂಲವು ಆಪ್ಟಿಕಲ್ ಇನ್ಫಿನಿಟಿ ಅಲ್ಲವಾದ್ದರಿಂದ ತನ್ನನ್ನು ತಾನು ಮರುಹೊಂದಿಸಿಕೊಳ್ಳುವ ಪತಂಗದ ಪ್ರಯತ್ನ ವಿಫಲಗೊಳ್ಳುತ್ತದೆ ಮತ್ತು ಅಂತಿಮವಾಗಿ ಅದು ಕೃತಕ ಬೆಳಕನ್ನು ಸೂಸುವ ದೀಪದ ಮೇಲೆ ಬಿದ್ದು ಸುಟ್ಟುಹೋಗುತ್ತದೆ.

'ಮೇಕ್ ಇನ್ ಇಂಡಿಯಾದ' ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಭಾರತ ದೇಶದ ಮೊಟ್ಟ ಮೊದಲ 'ಮೇಕ್ ಇನ್ ಇಂಡಿಯಾ' ಯೋಜನೆಯ ಅಡಿಯಲ್ಲಿ ತಯಾರಿಸಿದ ಪೂರ್ಣ ಪ್ರಮಾಣದ ರೈಲು ಎಂಬ ಖ್ಯಾತಿಗೆ 'ಮೇಧಾ' ಪಾತ್ರವಾಗಿದೆ.
'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಅತ್ಯದ್ಭುತ ತಂತ್ರಜ್ಞಾನ ಒಳಗೊಂಡಿರುವ ಸ್ವದೇಶಿ ನಿರ್ಮಿತ ರೈಲು ಲೋಕಾರ್ಪಣೆಗೊಳ್ಳುವ ಮೂಲಕ ಭಾರತ ದೇಶದಲ್ಲಿ ಉತ್ಪಾದನೆಯಾದ ಮೊಟ್ಟ ಮೊದಲ 'ಮೇಕ್ ಇನ್ ಇಂಡಿಯಾ' ರೈಲು ಎಂಬ ಹೆಗ್ಗಳಿಕೆಗೆ 'ಮೇಧಾ' ಪಾತ್ರವಾಗಿದೆ.

ಎಸ್,ಪಿ,ಗೆ ನೋಟಿಸ್ - ಇಳಯರಾಜ

ಗಾಯಕರು ಸಿಕ್ಕಾಪಟ್ಟೆ ಹಣ ಸಂಪಾದಿಸುತ್ತಾರೆ, ಆದರೆ ಸಂಗೀತ ಸಂಯೋಜಕರಿಗೆ ಗೌರವಧನ ಕೊಡಲ್ಲ!

ಚೆನ್ನೈ: ತಾನು ನಿರ್ದೇಶಿಸಿರುವ ಹಾಡುಗಳನ್ನು ಸಂಗೀತ ಕಾರ್ಯಕ್ರಮಗಳಲ್ಲಿ ಹಾಡಬಾರದು ಎಂದು ಸಂಗೀತ ನಿರ್ದೇಶಕ ಇಳಯರಾಜಾ ಅವರು ಖ್ಯಾತ ಗಾಯಕ ಎಸ್‍.ಪಿ. ಬಾಲಸುಬ್ರಮಣ್ಯಂ, ಚರಣ್ ಹಾಗೂ ಗಾಯಕಿ ಚಿತ್ರಾ ಅವರಿಗೆ ನೋಟಿಸ್ ಕಳುಹಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಇಳಯರಾಜಾ ಅವರು ನೋಟಿಸ್ ಕಳುಹಿಸಿರುವ ಬಗ್ಗೆ ಫೇಸ್‌ಬುಕ್‍ನಲ್ಲಿ ಬರೆದುಕೊಂಡಿರುವ ಎಸ್‍ಪಿಬಿ ಈ ವಿಷಯದ ಬಗ್ಗೆ ನನಗೆ ಮೊದಲಿಗೆ ಗೊತ್ತೇ ಇರಲಿಲ್ಲ ಎಂದಿದ್ದಾರೆ.

ಸಂಗೀತಕ್ಷೇತ್ರಕ್ಕೆ ಎಸ್‌‍ಪಿಬಿಯವರು ಬಂದು 50 ವರ್ಷವಾಗಿರುವ ನೆನಪಿಗೆ 'ಎಸ್‍ಪಿಬಿ 50' ಹೆಸರಿನ ಕಾರ್ಯಕ್ರಮವನ್ನು ವಿಶ್ವದಾದ್ಯಂತ ಹಮ್ಮಿಕೊಂಡಿದ್ದು ಅವರು ಪ್ರವಾಸದಲ್ಲಿದ್ದಾರೆ.

ಕೆಲವು ದಿನಗಳ ಹಿಂದೆ ಇಳಯರಾಜಾ ಅವರ ವಕೀಲರು ನನಗೆ ನೋಟಿಸ್ ನೀಡಿದ್ದಾರೆ. ನನ್ನ ಜತೆ ಗಾಯಕ ಚರಣ್,ಗಾಯಕಿ ಚಿತ್ರಾ ಅವರಿಗೂ ನೋಟಿಸ್ ನೀಡಲಾಗಿದೆ.
ಅಲ್ಲದೆ ಸಂಗೀತ ಕಛೇರಿ ಆಯೋಜಿಸಿರುವ  ಆಯೋಜಕರಿಗೂ ನೋಟಿಸ್ ನೀಡಲಾಗಿದೆ. ಇನ್ನು ಮುಂದೆ ನಾವು ಇಳಯರಾಜಾ ಅವರು ನಿರ್ದೇಶಿಸಿದ ಹಾಗೂ ಸಂಯೋಜನೆ ಮಾಡಿದ ಹಾಡುಗಳನ್ನು ಹಾಡುವುದಿಲ್ಲ.ಇಳಯರಾಜಾ ಅವರ ಅನುಮತಿ ಇಲ್ಲದೆ  ಹಾಡಿದರೆ ಹಕ್ಕುಸ್ವಾಮ್ಯ ಉಲ್ಲಂಘನೆಯಾಗುತ್ತದೆ ಎಸ್‍ಪಿಬಿ ತಮ್ಮ ಫೇಸ್‍ಬುಕ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ ನನ್ನ ಹಾಡುಗಳನ್ನು ಎಸ್‌ಪಿ ಬಾಲಸುಬ್ರಮಣ್ಯಂ ಹಾಡಬಾರದು: ಇಳಯರಾಜಾ

ಇಳಯರಾಜಾ ಅವರು ಎಸ್‍ಪಿಬಿ ಅವರಿಗೆ ನೋಟಿಸ್ ಕಳಿಸಿರುವ ಸುದ್ದಿ ಹರಡುತ್ತಿದ್ದಂತೆ ಎಸ್‍ಪಿಬಿ ಅಭಿಮಾನಿಗಳು ಇಳಯರಾಜಾ ಅವರ ಮೇಲೆ ಸಿಟ್ಟುಗೊಂಡಿದ್ದಾರೆ. ಇಳಯರಾಜಾ ಅವರು ಈ ರೀತಿ ಮಾಡಿದ್ದು ಸರಿಯಲ್ಲ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿ ಬರುತ್ತಿದೆ.

ಏತನ್ಮಧ್ಯೆ, ಎಸ್‍ಪಿಬಿಯವರು ತಾವು ರಾಜಾ ಸರ್ ಅವರನ್ನು ಗೌರವಿಸುತ್ತೇನೆ. ಯಾರಿಗೂ ನೋವುಂಟು ಮಾಡಬೇಡಿ ಎಂದು ಫೇಸ್‍ಬುಕ್ ಮೂಲಕ ವಿನಂತಿಸಿಕೊಂಡಿದ್ದಾರೆ

ಸಾಮಾಜಿಕ ತಾಣಗಳಲ್ಲಿ ಇಳಯರಾಜಾ ನೋಟಿಸ್ ಬಗ್ಗೆ ಚರ್ಚೆಯಾಗುತ್ತಿದ್ದು, ಇಳಯರಾಜಾ ಅವರು ಯಾಕೆ ಹೀಗೆ ಮಾಡಿದರು ಎಂಬ ಪ್ರಶ್ನೆ ಅಭಿಮಾನಿಗಳದ್ದು.

ಈ ಬಗ್ಗೆ ನ್ಯೂಸ್ ಮಿನಿಟ್ ಮಾಧ್ಯಮದೊಂದಿಗೆ ಮಾತನಾಡಿದ ಇಳಯರಾಜಾ ಅವರ ಕಾಪಿರೈಟ್ಸ್ ಕನ್ಸಲ್ಟೆಂಟ್ (ಹಕ್ಕುಸ್ವಾಮ್ಯ ಸಲಹೆಗಾರ) ಇ. ಪ್ರದೀಪ್ ಅವರು, ಜನರು ಈ ವಿಷಯವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇಳಯರಾಜಾ ಅವರ ಪೂರ್ವಾನುಮತಿ ಪಡೆಯದೆ ಮತ್ತು ಅವರಿಗೆ ಗೌರವಧನ ನೀಡದೆ ಯಾರೊಬ್ಬರೂ ಅವರ ಹಾಡುಗಳನ್ನು ಹಾಡುವಂತಿಲ್ಲ ಎಂದು ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ಸುದ್ದಿಗೋಷ್ಠಿ ಕರೆದು ಇಳಯರಾಜಾ ಅವರು ಹೇಳಿದ್ದರು. ಇದೇನು ಹೊಸ ವಿಷಯವಲ್ಲ. ಆದರೆ ಇದೀಗ ಎಸ್‍ಪಿಬಿ ಅವರೇ ಕಾನೂನು ನೋಟಿಸ್ ಕಳುಹಿಸಿಕೊಡಬೇಕಾದಂತ ಪರಿಸ್ಥಿತಿಯನ್ನು ತಂದಿಟ್ಟಿದ್ದಾರೆ ಎಂದಿದ್ದಾರೆ.

ಇಳಯರಾಜಾ ಅವರು 35 ವರ್ಷಗಳ ಕಾಲ ಅವರು ಸಂಗೀತ ಸಂಯೋಜನೆ ಮಾಡಿ ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಆದರೆ ಅವರಿಗೆ ತಕ್ಕ ಗೌರವಧನ ಯಾವತ್ತೂ ಸಿಗಲಿಲ್ಲ. ಇಳಯರಾಜಾ ಅವರ ಸಂಗೀತವನ್ನು ಬಳಸಿಕೊಂಡು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಆರ್ಕೆಸ್ಟ್ರಾ ಅಥವಾ ಸಂಗೀತಗಾರರು ಗೌರವಧನ ಕೊಡಲಿ ಎಂದು ನಾವು ಒತ್ತಾಯಿಸುತ್ತಿಲ್ಲ. ಆದರೆ ಅವರ ಸಂಗೀತವನ್ನು ಬಳಸಿ ಲಕ್ಷ ಅಥವಾ ಕೋಟಿಗಟ್ಟಲೆ ಸಂಪಾದನೆ ಮಾಡುವ ಗಾಯಕರಲ್ಲಿ ಮಾತ್ರ ನಾವು ಗೌರವಧನಕೊಡಿ ಎಂದು ಕೇಳುತ್ತಿದ್ದೇವೆ. ಎಸ್‌‍ಪಿಬಿ ಅವರೇನೂ ಸಹಾಯಾರ್ಥ ಸಂಗೀತ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ಅವರು ಭರಪೂರ ಹಣ ಸಂಪಾದನೆ ಮಾಡುತ್ತಿದ್ದರೆ, ಸಂಗೀತ ಸಂಯೋಜಕನಿಗೆ ₹1 ಕೂಡಾ ಸಿಗುತ್ತಿಲ್ಲ. ಸಂಗೀತ ಸಂಯೋಜನೆ ಮಾಡಿದ ವ್ಯಕ್ತಿಯ ಸಾಮರ್ಥ್ಯ ಮತ್ತು ಕಲೆಗೆ ಬೆಲೆ ಬೇಡವೇ?

ಇಳಯರಾಜಾ ಅವರು ಹಲವಾರು ಹಾಡುಗಳ ಹಕ್ಕು ಸ್ವಾಮ್ಯವನ್ನು ಹೊಂದಿದ್ದಾರೆ. ಹೀಗಿರುವಾಗ ಪ್ರಸ್ತುತ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಎಸ್‍ಪಿಬಿ ಅನುಮತಿ ಕೇಳಬೇಕಿತ್ತು. ಅವರಿಬ್ಬರೂ ಗೆಳೆಯರು. ಹೀಗಿರುವಾಗ ಇಳಯರಾಜಾ ಅವರಲ್ಲಿ ಎಸ್‍ಪಿಬಿ ಅನುಮತಿ ಕೇಳಬಹುದಿತ್ತಲ್ಲವೇ?

ಇಂಥಾ ಸಂಗೀತ ಕಛೇರಿ ಮೂಲಕ ಸಿಕ್ಕಿದ ಆದಾಯದಿಂದ ಸಂಗೀತ ಸಂಯೋಜಕರು ಯಾವತ್ತೂ ಹಣ ಕೇಳುವುದಿಲ್ಲ. ಇಂತಿಷ್ಟೇ ಪಾವತಿ ಮಾಡಬೇಕು ಎಂಬ ಒತ್ತಾಯವೂ ಇಲ್ಲ. ಅವರಿಗೆ ಎಷ್ಟು ಹಣ ಕೊಡಲು ಸಾಧ್ಯ ಎಂದು ನಾವೇ ಕೇಳುತ್ತೇವೆ. ನೀವು ಸಂಗೀತ ಸಂಯೋಜಕರ ಬಳಿ ಅನುಮತಿ ಕೇಳಿ ಅವರಿಗೆ ಗೌರವಧನ ಕೊಟ್ಟು ಬಿಡಿ. ಆದರೆ ಯಾರೊಬ್ಬರೂ ₹1 ಕೊಡಲು ಮನಸ್ಸು ಮಾಡಲ್ಲ. ಜನರಿಗೆ ಎಲ್ಲವೂ ಉಚಿತವಾಗಿ ದಕ್ಕಬೇಕು ಅಂತಾರೆ ಪ್ರದೀಪ್.

ತನ್ನ ಪೂರ್ವಾನುಮತಿಯಿಲ್ಲದೆ ಹಾಡುಗಳನ್ನು ಪ್ರಸಾರ ಮಾಡುವಂತಿಲ್ಲ, ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಇಳಯರಾಜಾ ಅವರು 2015ರಲ್ಲಿ ರೇಡಿಯೊ ಸ್ಟೇಷನ್ ಮತ್ತು ಟಿವಿ ವಾಹಿನಿಗಳಿಗೆ ಎಚ್ಚರಿಕೆ ನೀಡಿದ್ದರು.