ಗುರುವಾರ, ಮಾರ್ಚ್ 30, 2017

ಇಂಡಿಯನ್ ವೆಲ್ಸ್ ಟೆನಿಸ್ :ಫೆಡರರ್ ಗೆ 5 ನೇ ಕೀರಿಟ

ಇಂಡಿಯನ್‌ ವೆಲ್ಸ್‌ ಟೆನಿಸ್‌: ಫೆಡರರ್‌ಗೆ 5ನೇ ಕಿರೀಟ

ಇಂಡಿಯನ್‌ ವೆಲ್ಸ್‌ (ಕ್ಯಾಲಿಫೋರ್ನಿಯಾ): ಸ್ವಿಟ್ಸರ್‌ಲ್ಯಾಂಡಿನ ಟೆನಿಸ್‌ ತಾರೆ ರೋಜರ್‌ ಫೆಡರರ್‌ 2017ನೇ ಸಾಲಿನ "ಇಂಡಿಯನ್‌ ವೆಲ್ಸ್‌ ಎಟಿಪಿ ಟೆನಿಸ್‌' ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರವಿವಾರ ರಾತ್ರಿಯ ಪ್ರಶಸ್ತಿ ಕಾಳಗಳದಲ್ಲಿ ಅವರು ತಮ್ಮದೇ ದೇಶದ ಸ್ಟಾನಿಸ್ಲಾಸ್‌ ವಾವ್ರಿಂಕ ವಿರುದ್ಧ 6-4, 7-5 ಅಂತರದ ಜಯ ಸಾಧಿಸಿದರು.

ಫೆಡರರ್‌ ಇಂಡಿಯನ್‌ ವೆಲ್ಸ್‌ ಪ್ರಶಸ್ತಿ ಗೆಲ್ಲುತ್ತಿರುವುದು ಇದು 5ನೇ ಸಲ. ಇದರೊಂದಿಗೆ ನೊವಾಕ್‌ ಜೊಕೋವಿಕ್‌ ಅವರ ಸರ್ವಾಧಿಕ ಗೆಲುವಿನ ದಾಖಲೆಯನ್ನು ಅವರು ಸರಿದೂಗಿಸಿದರು. ಇದಕ್ಕೂ ಮುನ್ನ ಫೆಡರರ್‌ 2004, 2005, 2006 ಹಾಗೂ 2012ರಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದ್ದರು.ಇನ್ನೊಂದೆಡೆ ವಾವ್ರಿಂಕ ಅವರಿಗೆ ಇದು ಮೊದಲ ಇಂಡಿಯನ್‌ ವೆಲ್ಸ್‌ ಫೈನಲ್‌.
ಫೆಡರರ್‌ ವಿರುದ್ಧ ಆಡಿದ 23 ಪಂದ್ಯಗಳಲ್ಲಿ ಅನುಭವಿಸಿದ 20ನೇ ಸೋಲು.

35ರ ಹರೆಯದ ರೋಜರ್‌ ಫೆಡರರ್‌ ಎಟಿಪಿ ಪ್ರಶಸ್ತಿ ಗೆದ್ದ ಅತೀ ಹಿರಿಯ ಟೆನಿಸಿಗನೆಂಬ ಹೆಗ್ಗಳಿಕೆಗೂ ಪಾತ್ರರಾದರು. ಇದಕ್ಕೂ ಹಿಂದಿನ ದಾಖಲೆ ಅಮೆರಿಕದ ಆ್ಯಂಡ್ರೆ ಅಗಾಸ್ಸಿ ಹೆಸರಲ್ಲಿತ್ತು. ಅವರು 34ರ ಹರೆಯದಲ್ಲಿ ಸಿನ್ಸಿನಾಟಿ ಟೆನಿಸ್‌ ಪ್ರಶಸ್ತಿ ಜಯಿಸಿದ್ದರು (2004).

"ಕಳೆದ ವರ್ಷ ನಾನು ಒಂದೂ ಪ್ರಶಸ್ತಿ ಜಯಿಸಿರಲಿಲ್ಲ. ಈ ವರ್ಷ ಭರ್ಜರಿ ಎನ್ನುವಂಥ ಆರಂಭವನ್ನೇ ಕಂಡುಕೊಂಡಿದ್ದೇನೆ. ಆಸ್ಟ್ರೇಲಿಯನ್‌ ಓಪನ್‌ ಬಳಿಕ ಈಗ ಇಂಡಿಯನ್‌ ವೆಲ್ಸ್‌ ಸರದಿ. ಇದೊಂದು ಖುಷಿಯ ಅನುಭವ...' ಎಂದು ಫೆಡರರ್‌ ಪ್ರತಿಕ್ರಿಯಿಸಿದ್ದಾರೆ.

ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಫೆಡರರ್‌, ವಿಂಬಲ್ಡನ್‌ ಮುಗಿಯುವುದರೊಳಗೆ ಎಂಟಕ್ಕೇರುವ ಗುರಿ ಹಾಕಿಕೊಂಡಿದ್ದಾರೆ.

"ಪಂದ್ಯ ಅತ್ಯಂತ ನಿಕಟವಾಗಿತ್ತು. ಇದೊಂದು ಕಠಿನ ಸೋಲು. ಆದರೆ ನಾನು ಸೋತದ್ದು ಫೈನಲ್‌ನಲ್ಲಿ ಎಂಬುದು ಸಮಾಧಾನಕರ ಸಂಗತಿ...' ಎಂದಿದ್ದಾರೆ ಸ್ಟಾನಿಸ್ಲಾಸ್‌ ವಾವ್ರಿಂಕ.

ವೋಡಾಪೊನ್, ಐಡಿಯಾ ವಿಲೀನ ಘೋಷಣೆ

ವೊಡಾಫೋನ್‌, ಐಡಿಯಾ ವಿಲೀನ ಘೋಷಣೆ

ಮುಂಬೈ: ಬ್ರಿಟನ್ನಿನ ದೂರಸಂಪರ್ಕ ಸಂಸ್ಥೆ ವೊಡಾಫೋನ್‌ ಮತ್ತು ಆದಿತ್ಯ ಬಿರ್ಲಾ ಸಮೂಹದ ಮೊಬೈಲ್‌ ಸೇವಾ ಸಂಸ್ಥೆ ಐಡಿಯಾ ಸೆಲ್ಯುಲರ್‌    ವಿಲೀನಗೊಳ್ಳಲಿವೆ ಎಂದು  ಸೋಮವಾರ ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.

ದೂರಸಂಪರ್ಕ ರಂಗದಲ್ಲಿನ ಅತಿದೊಡ್ಡ ವಿಲೀನ ನಿರ್ಧಾರ ಇದಾಗಿದೆ. ಈ ವಿಲೀನದಿಂದಾಗಿ, ಮೊಬೈಲ್‌ ಬಳಕೆದಾರರ ಸಂಖ್ಯೆ ಮತ್ತು  ವರಮಾನಕ್ಕೆ ಸಂಬಂಧಿಸಿದಂತೆ ದೇಶದ ಅತಿದೊಡ್ಡ  ಹೊಸ ದೂರಸಂಪರ್ಕ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮೊಬೈಲ್‌ ಸಂಸ್ಥೆ ಏರ್‌ಟೆಲ್‌ ಅನ್ನು ಹಿಂದಿಕ್ಕಲಿದೆ.

ವಿಲೀನಗೊಂಡ ಸಂಸ್ಥೆಯು ಮುಂದಿನ ಎರಡು ವರ್ಷಗಳಲ್ಲಿ  ಅಸ್ತಿತ್ವಕ್ಕೆ ಬರಲಿದ್ದು, ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್‌ ಮಂಗಳಂ ಬಿರ್ಲಾ ಅವರು ಹೊಸ ಸಂಸ್ಥೆಯ ಅಧ್ಯಕ್ಷರಾಗಿರಲಿದ್ದಾರೆ.
ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಹೊಣೆಯನ್ನು ವೊಡಾಫೋನ್‌ಗೆ ಸೇರಿದವರು ನಿರ್ವಹಿಸಲಿದ್ದಾರೆ.

‘ಎರಡೂ ಸಂಸ್ಥೆಗಳ ನಡುವಣ ಒಪ್ಪಂದದ ಅನ್ವಯ, ವೊಡಾಫೋನ್‌ ಮತ್ತು ಆದಿತ್ಯ ಬಿರ್ಲಾ ಸಮೂಹವು ಹೊಸ ಸಂಸ್ಥೆಯ  ಮೇಲೆ ಜಂಟಿ ನಿಯಂತ್ರಣ ಹೊಂದಿರಲಿವೆ. ವಿಲೀನದ ನಂತರವೂ ಎರಡೂ ಬ್ರ್ಯಾಂಡ್‌ಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿವೆ’ ಎಂದು ವೊಡಾಫೋನ್‌ ಸಿಇಒ ವಿಟೊರಿಯೊ ಕೊಲಾವೊ ಅವರು  ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಿಲಯನ್ಸ್‌ ಜಿಯೊ ಒಡ್ಡಿರುವ ಸ್ಪರ್ಧೆ ಎದುರಿಸಲು, ಏರ್‌ಟೆಲ್‌ನ ಪ್ರಭುತ್ವಕ್ಕೆ  ತಡೆ ಹಾಕಲು ವಿಲೀನಕ್ಕೆ ಮುಂದಾಗಿಲ್ಲ. ಇಂಟರ್‌ನೆಟ್‌ ಬಳಕೆ ಹೆಚ್ಚಳವೇ ಈ ನಿರ್ಧಾರಕ್ಕೆ ಕಾರಣ’ ಎಂದರು.

ದೇಶದ ದೂರಸಂಪರ್ಕ ಕ್ಷೇತ್ರದ ಮೇಲೆ ಪ್ರಭುತ್ವ ಸಾಧಿಸುವ ನಿಟ್ಟಿನಲ್ಲಿ  ಎರಡು ದಿಗ್ಗಜ ಕಂಪೆನಿಗಳ ವಿಲೀನ ಪ್ರಕ್ರಿಯೆಯು ಟೆಲಿಕಾಂ ವಲಯದಲ್ಲಿ ಹೊಸ ಸಂಚಲನ ಮೂಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಉಪಹಾರ್ ಅಗ್ನಿ ದುರಂತ: ಗೋಪಾಲ್

ಉಪಹಾರ್‌ ಅಗ್ನಿ ದುರಂತ: ಗೋಪಾಲ್‌ ಅನ್ಸಾಲ್‌ ಶರಣು

ನವದೆಹಲಿ: ಉಪಹಾರ್‌ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ಮಂದಿರದ ಮಾಲೀಕ ಗೋಪಾಲ್‌ ಅನ್ಸಾಲ್‌   ತಿಹಾರ್‌ ಜೈಲಿನ ಅಧಿಕಾರಿಗಳ ಎದುರು ಸೋಮವಾರ ಶರಣಾದರು.

ಶರಣಾಗಲು ಸಮಯ ನೀಡುವಂತೆ ಗೋಪಾಲ್‌ ಅನ್ಸಾಲ್‌ ಮಾಡಿರುವ ಮನವಿಯನ್ನು ಸುಪ್ರೀಂಕೋರ್ಟ್‌  ನಿರಾಕರಿಸಿತ್ತು. ಗೋಪಾಲ್‌ಗೆ ಒಂದು ವರ್ಷದ ಜೈಲು ಶಿಕ್ಷೆ ಬಾಕಿ ಇದೆ.

ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಮತ್ತು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ ಹಾಗೂ ಸಂಜಯ್‌ ಕಿಶನ್‌ ಕೌಲ್‌ ಅವರನ್ನು ಒಳಗೊಂಡ ಪೀಠ ಕಾಲಾವಕಾಶ ನೀಡಲು ನಿರಾಕರಿಸಿತು.

ಉಪಹಾರ್‌ ಸಿನಿಮಾ ಮಂದಿರಲ್ಲಿ 1997ರ ಜೂನ್‌ 13ರಂದು ‘ಬಾರ್ಡರ್‌’ ಹಿಂದಿ ಸಿನಿಮಾ ಪ್ರದರ್ಶನದ ವೇಳೆ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ 59 ಜನರು ಮೃತಪಟ್ಟು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಅನಿಲ್ ದಿವಾನ್ ನಿಧನ (ಕಾವೇರಿ ಜಲವಿವಾದದ ವಕೀಲ)

ಅನಿಲ್ ದಿವಾನ್‌ ನಿಧನ

ನವದೆಹಲಿ:  ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅನಿಲ್‌ ದಿವಾನ್‌ (87) ಸೋಮವಾರ ಬೆಳಿಗ್ಗೆ ಇಲ್ಲಿನ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.
  ಕಾವೇರಿ, ಕೃಷ್ಣಾ ಮತ್ತು ಮಹಾದಾಯಿ ಜಲವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಕರ್ನಾಟಕದ ಪರ ವಾದ ಮಂಡಿಸುವ ಕಾನೂನು ತಂಡದಲ್ಲಿದ್ದ ಅನಿಲ್‌ ದಿವಾನ್‌ ಅವರಿಗೆ ಪತ್ನಿ ಸ್ಮಿತಾ, ಪುತ್ರರಾದ ಶ್ಯಾಂ, ವಿವೇಕ್‌ ಹಾಗೂ ಪುತ್ರಿ ಡಾ.ಗೌರಿ ಇದ್ದಾರೆ. ಸಂಜೆ ಅಂತ್ಯಕ್ರಿಯೆ ನೆರವೇರಿತು.   ಕಾನೂನು ತಜ್ಞರಾಗಿದ್ದ ದಿವಾನ್‌ ಕಳೆದ ವಾರವಷ್ಟೇ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಭಾರತೀಯ ವಕೀಲರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು, ಸೆಂಟರ್‌ ಫಾರ್‌ ಪಬ್ಲಿಕ್‌ ಇಂಟರಸ್ಟ್‌ ಲಿಟಿಗೇಷನ್‌ ಎಂಬ ಸ್ವಯಂ ಸೇವಾ ಸಂಸ್ಥೆ ಆರಂಭಿಸಿದ್ದರಲ್ಲದೆ, ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.

ನಿರ್ದಿಷ್ಟ ದಾಳಿ ನಾಯಕನಿಗೆ "ಕೀರ್ತಿ ಚಕ್ರ" ಪ್ರಧಾನ

ನಿರ್ದಿಷ್ಟ ದಾಳಿ ನಾಯಕನಿಗೆ 'ಕೀರ್ತಿ ಚಕ್ರ' ಪ್ರದಾನ

ನವದೆಹಲಿ: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿಯ ನೇತೃತ್ವ ವಹಿಸಿದ್ದ ಮೇಜರ್ ರೋಹಿತ್ ಸೂರಿ ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ‘ಕೀರ್ತಿ ಚಕ್ರ’ ಪ್ರದಾನ ಮಾಡಿದರು.

ಶಾಂತಿ ಕಾಲದಲ್ಲಿ ನಡೆಸುವ ಕಾರ್ಯಾಚರಣೆಗಳಲ್ಲಿ ಶೌರ್ಯ ಮೆರೆಯುವ ಯೋಧರಿಗೆ ನೀಡುವ ಎರಡನೆಯ ಅತ್ಯುನ್ನತ ಗೌರವ ಇದು.

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಅರುಣ್ ಜೇಟ್ಲಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಪಾಲ್ಗೊಂಡಿದ್ದರು.

ಇಸ್ರೋ ವಿಜ್ಞಾನಿಗಳಿಗೆ ನಾರಿಶಕ್ತಿ ಪ್ರಶಸ್ತಿ

ಇಸ್ರೊ ವಿಜ್ಞಾನಿಗಳಿಗೆ ನಾರಿಶಕ್ತಿ ಪ್ರಶಸ್ತಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಿವಿಧ ಯೋಜನೆಗಳಲ್ಲಿ ಮಹತ್ವದ ಪಾತ್ರ ವಹಿಸಿದ ಶುಭಾ ವಾರಿಯರ್, ಬಿ. ಗೋದನಾಯುಕೈ ಮತ್ತು ಅನಟ್ಟಾ ಸೋನಿ ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ‘ನಾರಿ ಶಕ್ತಿ ಪ್ರಶಸ್ತಿ’ ಪ್ರದಾನ ಮಾಡಿದರು.
ಬೀದಿ ಬದಿಯ ಮಹಿಳೆಯರಿಗೆ ಘನತೆಯ ಬದುಕು ಕೊಡಿಸಲು ಕೆಲಸ ಮಾಡುತ್ತಿರುವ ಬೆಂಗಳೂರಿನ ‘ಸಾಧನಾ ಮಹಿಳಾ ಸಂಘ’, ದೇಶದ ಮೊದಲ ಖಾಸಗಿ ಅಭಯಾರಣ್ಯದ ಸಹ ಸಂಸ್ಥಾಪಕಿ ಪಮೇಲಾ ಮಲ್ಹೋತ್ರಾ ಅವರೂ ಇದೇ ಸಂದರ್ಭದಲ್ಲಿ ‘ನಾರಿ ಶಕ್ತಿ ಪ್ರಶಸ್ತಿ’ಯನ್ನು ರಾಷ್ಟ್ರಪತಿಯವರಿಂದ ಸ್ವೀಕರಿಸಿದರು.

ಮಹಿಳೆಯರಿಗಾಗಿ ಅಸಾಮಾನ್ಯ ಸೇವೆ ಸಲ್ಲಿಸಿದ ಒಟ್ಟು 33 ಮಹಿಳೆಯರಿಗೆ ರಾಷ್ಟ್ರಪತಿಯವರು ಈ ಪ್ರಶಸ್ತಿ ಪ್ರದಾನ ಮಾಡಿದರು.
ಸಾಧನಾ ಮಹಿಳಾ ಸಂಘ: 2002ರಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಸಂಘ, ನೋವುಂಡ ಮಹಿಳೆಯರಿಗೆ ನೆರವಿನ ಹಸ್ತ ಚಾಚುತ್ತಿದೆ.  ಬೆಂಗಳೂರಿನ ಲೈಂಗಿಕ ವೃತ್ತಿನಿರತರ ಹಕ್ಕುಗಳಿಗಾಗಿ ಹೋರಾಡುತ್ತಿದೆ.
ದುರ್ಬಲ ವರ್ಗಗಳ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು, ಆರೋಗ್ಯ ಸೇವೆಗಳು ದೊರೆಯಬೇಕು ಎಂಬ ನಿಟ್ಟಿನಲ್ಲಿಯೂ ಇದು ಕೆಲಸ ಮಾಡುತ್ತಿದೆ. ಸಂಘವು ಇದುವರೆಗೆ ಮೂರು ಸಾವಿರ ಮಹಿಳೆಯರಿಗೆ ಸಹಾಯ ಹಸ್ತ ಚಾಚಿದೆ.

ಪಮೇಲಾ ಮಲ್ಹೋತ್ರಾ: ಪತಿಯ ಜೊತೆಗೂಡಿ 1991ರಲ್ಲಿ ದಕ್ಷಿಣ ಕೊಡಗಿನಲ್ಲಿ ಬಂಜರು ಭೂಮಿ ಖರೀದಿಸಿದ ಪಮೇಲಾ, ಅದನ್ನು ವನ್ಯಜೀವಿ ಅಭಯಾರಣ್ಯವಾಗಿ ಪರಿವರ್ತಿಸಿದರು. ಇದು 300 ಎಕರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿದೆ. ವನ್ಯಸಂಪತ್ತಿನ ರಕ್ಷಣೆಯೇ ಇವರ ಕೆಲಸ.

ಸಮುದ್ರದಾಳದಲ್ಲಿ "ವಿರಾಟ್" ಸ್ಮಾರಕ

ಸಮುದ್ರದಾಳದಲ್ಲಿ 'ವಿರಾಟ್‌' ಸ್ಮಾರಕ

ಭಾರತೀಯ ನೌಕಾಪಡೆಯ ಸೇವೆಯಿಂದ ನಿವೃತ್ತವಾಗಿರುವ ಐಎನ್‌ಎಸ್‌ ವಿರಾಟ್‌ ಯುದ್ಧವಾಹಕ ನೌಕೆಯನ್ನು ಸಮುದ್ರದಾಳದ ಸ್ಮಾರಕವಾಗಿ ರೂಪಿಸಲು ಮಹಾರಾಷ್ಟ್ರ ಸರ್ಕಾರ ಆಸಕ್ತಿ ತೋರಿಸಿದೆ.
  ‘ಮಹಾರಾಷ್ಟ್ರದ ಕೊಂಕಣ ತೀರದಲ್ಲಿನ ಸಿಂಧುದುರ್ಗದ ಬಳಿ ಸಮುದ್ರದಲ್ಲಿ  ಐಎನ್‌ಎಸ್‌ ವಿರಾಟ್‌ ಅನ್ನು ಮುಳುಗಿಸಲಾಗುವುದು. ನಂತರ ಆ ಸ್ಥಳದಲ್ಲಿ ಸ್ಕೂಬಾ ಡೈವಿಂಗ್‌ಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ, ರಾಜ್ಯ ಸರ್ಕಾರದ ಮುಂದೆ ಪ್ರಸ್ತಾವ ಇರಿಸಿದೆ.

ಮುಖ್ಯಮಂತ್ರಿ ದೇವೇಂದ್ರ ಪಢಣವೀಸ್‌ ಅವರು ಈ ಪ್ರಸ್ತಾವದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ** ಪ್ರಸ್ತಾವದ ವಿವರ
- ಭಾರತದಲ್ಲಿ ರೆಕ್‌ ಡೈವಿಂಗ್‌ ಇಲ್ಲ
- ಈ ಯೋಜನೆ ಕಾರ್ಯಗತವಾದರೆ ಪ್ರವಾಸಿಗರನ್ನು ಆಕರ್ಷಿಸಲಿದೆ
- ಇದು ಜಗತ್ತಿನ ಎರಡನೇ ಅತಿದೊಡ್ಡ ಕೃತಕ ರೆಕ್‌ ಡೈವಿಂಗ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ
- ನೌಕೆಯನ್ನು ಗುಜರಿಗೆ ಹಾಕುವುದಕ್ಕಿಂತ ಸಮುದ್ರದಾಳದ ಸ್ಮಾರಕವಾಗಿ ಬದಲಿಸಿದರೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಒಟ್ಟು 4,500 ಉದ್ಯೋಗಗಳು ಸೃಷ್ಟಿಯಾಗುತ್ತವೆ   ರೆಕ್ ಡೈವಿಂಗ್
ಸಮುದ್ರದಾಳದಲ್ಲಿರುವ ಹಡಗುಗಳ ಅವಶೇಷಗಳ ಬಳಿ ಸ್ಕೂಬಾ ಡೈವಿಂಗ್‌ ಮಾಡುವುದನ್ನು ‘ರೆಕ್ ಡೈವಿಂಗ್‌’ ಎಂದು ಕರೆಯಲಾಗುತ್ತದೆ.
ವಿಶ್ವದ ಹಲವೆಡೆ ಇಂತಹ ಅವಶೇಷಗಳಿವೆ. ಆದರೆ ಮೊದಲ ಬಾರಿ ಉದ್ದೇಶಪೂರ್ವಕವಾಗಿ ಹಡಗುಗಳನ್ನು ಮುಳುಗಿಸಿ, ರೆಕ್‌ ಡೈವಿಂಗ್‌ಗೆ ಅವಕಾಶ ಸಲ್ಲಿಸಿದ್ದು ಅಮೆರಿಕ.

ಅಮೆರಿಕ ನೌಕಾಪಡೆ ಸೇವೆಯಿಂದ ನಿವೃತ್ತಿಯಾಗಿದ್ದ ಯುಎಸ್‌ಎಸ್‌ ಒರಿಸ್ಕನಿ ನೌಕೆಯನ್ನು ಫ್ಲಾರಿಡಾದ ಪೆನ್ಸಕೋಲಾ ಬಳಿ ಸಮುದ್ರದಲ್ಲಿ ಮುಳುಗಿಸಲಾಗಿದೆ. ಇದು ಈಗ ಜಗತ್ತಿನ ಜನಪ್ರಿಯ ರೆಕ್‌ ಡೈವಿಂಗ್‌ಗಳಲ್ಲಿ ಮೊದಲ ಸ್ಥಾನದಲ್ಲಿದೆ. ಹೀಗೆ ಮುಳುಗಿರುವ ಹಡಗುಗಳು ದೀರ್ಘಕಾಲದಲ್ಲಿ ಕೃತಕ ಹವಳದ ದಿಬ್ಬಗಳಾಗಿ ಬದಲಾಗುತ್ತವೆ.

ನರೇಗಾ ಉದ್ಯೋಗ ಕಾರ್ಡ್ ನಕಲಿ

87 ಲಕ್ಷ ನಕಲಿ ನರೇಗಾ ಉದ್ಯೋಗ ಕಾರ್ಡ್‌ ರದ್ದು

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಹಣದ ದುರ್ಬಳಕೆ ತಡೆಯಲು  87 ಲಕ್ಷ ಉದ್ಯೋಗ ಕಾರ್ಡ್‌ಗಳನ್ನು  ತೆಗೆದು ಹಾಕಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ರಾಮ್ ಕೃಪಾಲ್ ಯಾದವ್ ತಿಳಿಸಿದ್ದಾರೆ.
  ಉದ್ಯೋಗ ಖಾತರಿ ಯೋಜನೆಯ ಲಾಭವು ನಿಜವಾದ ಫಲಾನುಭವಿಗೆ ತಲುಪುತ್ತಿದೆಯೇ ಎಂಬ ಬಗ್ಗೆ ತಪಾಸಣೆ ನಡೆಸಿದಾಗ 87 ಲಕ್ಷ ಉದ್ಯೋಗ ಕಾರ್ಡ್‌ಗಳು ನಕಲಿ ಫಲಾನುಭವಿಗಳ ಹೆಸರಿನಲ್ಲಿ ಇರುವುದು ಕಂಡುಬಂದಿದೆ.  ಸತ್ತವರ ಹೆಸರಿನಲ್ಲೂ ಕಾರ್ಡ್‌ಗಳನ್ನು  ಮಾಡಿ ಹಣ ಲಪಟಾಯಿಸಲಾಗುತ್ತಿತ್ತು ಎಂದು ಸಚಿವರು ತಿಳಿಸಿದರು.   12.49 ಕೋಟಿ ಉದ್ಯೋಗ ಕಾರ್ಡ್‌ಗಳ ಪೈಕಿ ಶೇಕಡ 63ರಷ್ಟು ಕಾರ್ಡ್‌ಗಳ ತಪಾಸಣೆ ಮಾಡಲಾಗಿದೆ. ನೋಂದಾಯಿತ ಕಾರ್ಮಿಕರಿಗೆ ಕನಿಷ್ಠ ನೂರು ದಿನ ಉದ್ಯೋಗ ಒದಗಿಸುವ ಈ ಮಹಾತ್ವಾಕಾಂಕ್ಷಿ ಯೋಜನೆ ದುರ್ಬಳಕೆ ಆಗಬಾರದು ಎಂಬ ಕಾರಣಕ್ಕೆ ಕಾರ್ಮಿಕರ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಿಸಿ ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗುತ್ತಿದೆ ಎಂದರು.
  ಹಳ್ಳಿಗಳಲ್ಲಿ ಕೃಷಿ ಕೆಲಸ ಇಲ್ಲದ ಸಂದರ್ಭದಲ್ಲಿ ಉದ್ಯೋಗ ಒದಗಿಸಿ ಸಂಪಾದನೆಗೆ ಅವಕಾಶ ಮಾಡಿಕೊಡುವುದು ಯೋಜನೆಯ ಮುಖ್ಯ ಉದ್ದೇಶ. ಬರಪೀಡಿತ ಪ್ರದೇಶಗಳಲ್ಲಿ ಕನಿಷ್ಠ 150 ದಿನ ಉದ್ಯೋಗ ಒದಗಿಸಲಾಗುತ್ತಿದೆ. ಜಲ ಸಂರಕ್ಷಣೆ, ಭೂ ಅಭಿವೃದ್ಧಿ, ಅಣೆಕಟ್ಟೆ ಮತ್ತು ನೀರಾವರಿ ಕಾಲುವೆಗಳ ನಿರ್ಮಾಣ, ಕೃಷಿ ಹೊಂಡ ನಿರ್ಮಾಣಕ್ಕೆ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತದೆ.

ಮಣಿಪುರ: ವಿಶ್ವಾಸ ಗೆದ್ದ ಬಿರೇನ್ (ಮುಖ್ಯಮಂತ್ರಿ)

ಮಣಿಪುರ: ವಿಶ್ವಾಸ ಗೆದ್ದ ಬಿರೇನ್‌

ಇಂಫಾಲ್‌: ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರ ವಿಶ್ವಾಸಮತ ಗೆದ್ದಿದೆ. ಟಿಎಂಸಿಯ ಏಕೈಕ ಶಾಸಕ ಟಿ. ರವೀಂದ್ರ ಸಿಂಗ್‌ ಕೂಡ ಬಿರೇನ್‌ ಸಿಂಗ್‌ ನೇತೃತ್ವದ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಹಾಗಾಗಿ ಮತ ವಿಭಜನೆ ನಡೆಸದೆ,  ಧ್ವನಿಮತದಿಂದ ವಿಶ್ವಾಸಮತ ಅಂಗೀಕಾರವಾಗಿದೆ ಎಂದು ಘೋಷಿಸಲಾಯಿತು.

60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 21 ಶಾಸಕರನ್ನು ಹೊಂದಿದೆ. ನಾಗಾ ಪೀಪಲ್ಸ್‌ ಫ್ರಂಟ್‌ (ಎನ್‌ಪಿಎಫ್‌), ನ್ಯಾಷನಲ್‌ ಪೀಪಲ್ಸ್‌ ಪಾರ್ಟಿಯ (ಎನ್‌ಪಿಪಿ) ತಲಾ ನಾಲ್ವರು ಮತ್ತು ಲೋಕಜನಶಕ್ತಿ ಪಾರ್ಟಿಯ ಒಬ್ಬ ಶಾಸಕ ವಿಶ್ವಾಸಮತದ ಪರ ಮತ ಹಾಕಿದ್ದಾರೆ.

ಪಕ್ಷೇತರ ಶಾಸಕ ಅಸಬ್‌ ಉದ್ದೀನ್‌ ಮತ್ತು ಬಿರೇನ್‌ ನೇತೃತ್ವದ ಮಂತ್ರಿ ಪರಿಷತ್‌ಗೆ ಸೇರ್ಪಡೆಗೊಂಡಿರುವ ಒಬ್ಬ ಕಾಂಗ್ರೆಸ್‌ ಶಾಸಕ ಕೂಡ ಸರ್ಕಾರವನ್ನು ಬೆಂಬಲಿಸಿದ್ದಾರೆ.

ಟಿಎಂಸಿ ಆಪಾದನೆ: ಸರ್ಕಾರಕ್ಕೆ ಬೆಂಬಲ ನೀಡುವ ವಿಚಾರದಲ್ಲಿ ರವೀಂದ್ರ ಸಿಂಗ್‌ ಅವರು ಪಕ್ಷದ ನಾಯಕತ್ವದ ಜತೆ ಚರ್ಚಿಸಿಲ್ಲ ಎಂದು ಟಿಎಂಸಿ ಆಪಾದಿಸಿದೆ.

ಆದರೆ ಈ ಆಪಾದನೆಯನ್ನು ರವೀಂದ್ರ ಅವರು ಅಲ್ಲಗಳೆದಿದ್ದಾರೆ. ‘ಪಕ್ಷದ ನಾಯಕತ್ವದ ಜತೆ ಸಮಾಲೋಚನೆ ನಡೆಸಿದ ನಂತರವೇ ಈ ನಿರ್ಧಾರ ಕೈಗೊಳ್ಳಲಾಗಿದೆ. ನಾನು ಪಕ್ಷದ ಆದೇಶವನ್ನು ಉಲ್ಲಂಘಿಸಿಲ್ಲ. ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಪಕ್ಷ ಹೇಳಿದ್ದನ್ನೇ ಮಾಡಿದ್ದೇನೆ’ ಎಂದು ರವೀಂದ್ರ ಹೇಳಿದ್ದಾರೆ.

ಪಕ್ಷದ ನಿರ್ಧಾರವನ್ನು ಉಲ್ಲಂಘಿಸಿದ್ದರೆ ತಮ್ಮ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕಿತ್ತು. ಹಾಗೇನೂ ಆಗಿಲ್ಲ. ಪಕ್ಷ ತಮ್ಮ ಜತೆಗೆ ಇದೆ ಎಂಬುದೇ ಅದರ ಅರ್ಥ ಎಂದು ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಲು ರವೀಂದ್ರ ಅವರಿಗೆ ಸೂಚಿಲಾಗಿತ್ತು. ಆದರೆ ಕಾಂಗ್ರೆಸ್‌ಗೆ ಸರ್ಕಾರ ರಚಿಸುವುದು ಸಾಧ್ಯವಾಗಿಲ್ಲ. ನಂತರ ಬಿಜೆಪಿ ಮುಖಂಡರ ಜತೆಗೆ ರವೀಂದ್ರ ಅವರು ರಾಜಭವನಕ್ಕೆ ಹೋಗಿದ್ದಾರೆ ಎಂದು ಟಿಎಂಸಿ ಉಪಾಧ್ಯಕ್ಷ ಮುಕುಲ್‌ ರಾಯ್‌ ಹೇಳಿದ್ದಾರೆ.

‘ರವೀಂದ್ರ ವಿರುದ್ಧ ಯಾವುದೇ ಸಂದರ್ಭದಲ್ಲಿ ಶಿಸ್ತುಕ್ರಮ ಕೈಗೊಳ್ಳಬಹುದು. ಆದರೆ ಅವರ ಜೀವಕ್ಕೆ ಅಪಾಯ ಉಂಟಾಗುವ ಸನ್ನಿವೇಶ ಸೃಷ್ಟಿಸಲು ನಾವು ಬಯಸುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಅವರು ಮಾರ್ಚ್‌ 15ರಂದ ಬಿರೇನ್‌ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ್ದರು. ಆದರೆ ಇದಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿತ್ತು. ಅತಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸನ್ನೇ ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಹೇಳಿತ್ತು.

ಐದನೇ ಪ್ರಶಸ್ತಿಗೆ ಮುತ್ತಿಕ್ಕಿದ ಫೆಡರರ್

ಐದನೇ ಪ್ರಶಸ್ತಿಗೆ ಮುತ್ತಿಕ್ಕಿದ ಫೆಡರರ್‌

ಇಂಡಿಯಾನ ವೆಲ್ಸ್‌ (ರಾಯಿಟರ್ಸ್‌/ ಎಎಫ್‌ಪಿ): ಕುತೂಹಲ ಕೆರಳಿಸಿದ್ದ ಫೈನಲ್‌ ಹೋರಾಟದಲ್ಲಿ ತಮ್ಮ ಆತ್ಮೀಯ ಸ್ನೇಹಿತ ಸ್ಟಾನಿಸ್ಲಾಸ್‌ ವಾವ್ರಿಂಕ ಅವರ ಸವಾಲು ಮೀರಿ ನಿಂತ ರೋಜರ್‌ ಫೆಡರರ್‌ ಅವರು ಇಂಡಿಯಾನ ವೆಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಸ್ವಿಟ್ಜರ್‌ಲೆಂಡ್‌ನ ಫೆಡರರ್‌ 6–4, 7–5ರ ನೇರ ಸೆಟ್‌ಗಳಿಂದ ಜಯಭೇರಿ ಮೊಳಗಿ ಸಿದರು. ಇದರೊಂದಿಗೆ ಟೂರ್ನಿಯಲ್ಲಿ ಐದನೇ ಪ್ರಶಸ್ತಿ ಗೆದ್ದು ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು. ನೊವಾಕ್‌ ಈ ಮೊದಲು ಟೂರ್ನಿಯಲ್ಲಿ ಐದು ಟ್ರೋಫಿ ಎತ್ತಿಹಿಡಿದ ಹೆಗ್ಗಳಿಕೆ ಹೊಂದಿದ್ದರು.

35 ವರ್ಷದ ರೋಜರ್‌ ಅವರು ಎಟಿಪಿ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಹಿರಿಯ ಆಟಗಾರ ಎಂಬ ಹಿರಿಮೆಯನ್ನೂ ತಮ್ಮದಾಗಿಸಿಕೊಂಡರು.
ಈ ಸಾಧನೆ ಮೊದಲು ಆ್ಯಂಡ್ರೆ ಅಗಾಸ್ಸಿ ಅವರ ಹೆಸರಿನಲ್ಲಿತ್ತು. ಅಗಾಸ್ಸಿ ಅವರು 2004ರಲ್ಲಿ ಸಿನ್ಸಿನಾಟಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು. ಆಗ ಅವರಿಗೆ 34 ವರ್ಷ ವಯಸ್ಸಾಗಿತ್ತು.

ಗಾಯದ ಕಾರಣ ಆರು ತಿಂಗಳು  ಅಂಗಳದಿಂದ ದೂರ ಉಳಿದಿದ್ದ ಫೆಡರರ್‌ ಇದರಿಂದ ಚೇತರಿಸಿಕೊಂಡ ಬಳಿಕ ಈ ವರ್ಷದ ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ನಲ್ಲಿ  ಪ್ರಶಸ್ತಿ ಗೆದ್ದಿದ್ದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 10ನೇ ಸ್ಥಾನ ಹೊಂದಿದ್ದ ರೋಜರ್‌ ಈ ಟೂರ್ನಿಯಲ್ಲೂ ಅಮೋಘ ಸಾಮರ್ಥ್ಯ ತೋರಿದರು.

ಸೆಮಿಫೈನಲ್‌ನಲ್ಲಿ  ಸ್ಪೇನ್‌ನ ಆಟಗಾರ ರಫೆಲ್‌ ನಡಾಲ್‌ ಅವರ ಸದ್ದಡಗಿಸಿ ವಿಶ್ವಾಸದಿಂದ ಪುಟಿಯುತ್ತಿದ್ದ ಅವರು ಫೈನಲ್‌ ಹೋರಾಟದಲ್ಲೂ ಆಕ್ರಮಣಕಾರಿ ಆಟದ ಮೂಲಕ ಅಭಿಮಾನಿಗಳ ಮನಗೆದ್ದರು. ಸ್ವಿಟ್ಜರ್‌ಲೆಂಡ್‌ನವರೇ ಆದ ವಾವ್ರಿಂಕ ವಿರುದ್ಧ 19–3ರ ಗೆಲುವಿನ ದಾಖಲೆ ಹೊಂದಿದ್ದ ರೋಜರ್‌ ಆರಂಭಿಕ ಸೆಟ್‌ನಲ್ಲಿ ಶರವೇಗದ ಸರ್ವ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿ ಸುವ ಪ್ರಯತ್ನ ನಡೆಸಿದರು. ಆದರೆ ವಾವ್ರಿಂಕ ಇದಕ್ಕೆ ಬಗ್ಗಲಿಲ್ಲ. ಹೀಗಾಗಿ ಮೊದಲ ಎಂಟು ಗೇಮ್‌ಗಳಲ್ಲಿ ಸಮಬಲದ ಹೋರಾಟ ಕಂಡು ಬಂತು. ಒಂಬತ್ತನೇ ಗೇಮ್‌ನಲ್ಲಿ ತಮ್ಮ ಸರ್ವ್‌ ಉಳಿಸಿಕೊಂಡ ಫೆಡರರ್‌ ಮರು ಗೇಮ್‌ನಲ್ಲಿ ಸ್ನೇಹಿತನ ಸರ್ವ್‌ ಮುರಿದು ಸೆಟ್‌ ತಮ್ಮದಾಗಿಸಿಕೊಂಡರು.

ವೆಸ್ನಿನಾಗೆ ಟ್ರೋಫಿ
ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ರಷ್ಯಾದ ಎಲೆನಾ ವೆಸ್ನಿನಾ ಪ್ರಶಸ್ತಿ ಜಯಿಸಿ ದ್ದಾರೆ. ಫೈನಲ್‌ ಹೋರಾಟದಲ್ಲಿ ವೆಸ್ನಿ ನಾ 6–7, 7–5, 6–4ರಲ್ಲಿ ತಮ್ಮದೇ ದೇಶದ ಸ್ವೆಟ್ಲಾನ ಕುಜ್ನೆತ್ಸೋವಾ ಅವರ ನ್ನು ಮಣಿಸಿದರು.

ಆರನೇ ಸ್ಥಾನಕ್ಕೇರಿದ ರೋಜರ್‌
ಇಲ್ಲಿ ಪ್ರಶಸ್ತಿ ಗೆದ್ದಿರುವ ಫೆಡರರ್‌ ಸೋಮವಾರ ಬಿಡುಗಡೆಯಾಗಿರುವ ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ.
ಈ ಟೂರ್ನಿಗೂ ಮುನ್ನ ಅವರು 10ನೇ ಸ್ಥಾನದಲ್ಲಿದ್ದರು. ಇಲ್ಲಿ ರನ್ನರ್‌ ಅಪ್‌ ಆದ ವಾವ್ರಿಂಕ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬ್ರಿಟನ್‌ನ ಆ್ಯಂಡಿ ಮರ್ರೆ ಅಗ್ರಸ್ಥಾನ ದಲ್ಲಿದ್ದು, ಸರ್ಬಿಯಾದ ನೊವಾಕ್‌ ಜೊಕೊವಿಚ್‌ ನಂತರದ ಸ್ಥಾನ ಹೊಂದಿ ದ್ದಾರೆ.

ಸ್ಪೇನ್‌ನ ರಫೆಲ್‌ ನಡಾಲ್‌ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಅಗ್ರಪಟ್ಟ ಅಲಂಕರಿಸಿದ್ದಾರೆ. ಅವರು ಅಮೆರಿಕಾದ ಸೆರೆನಾ ವಿಲಿಯಮ್ಸ್‌ ಅವರನ್ನು ಹಿಂದಿಕ್ಕಿದ್ದಾರೆ. ಕೆರ್ಬರ್‌ ಖಾತೆಯಲ್ಲಿ 7, 515 ಪಾಯಿಂಟ್ಸ್‌ ಇದ್ದರೆ, ಸೆರೆನಾ 7, 130 ಅಂಕ ಹೊಂದಿದ್ದಾರೆ.

ರಾಷ್ಟ್ರೀಯ ವೀಕ್ಷಕರಾಗಿ 12 ಒಲಿಂಪಿಯನ್ಗಳ ನೇಮಕ

ರಾಷ್ಟ್ರೀಯ ವೀಕ್ಷಕರಾಗಿ 12 ಒಲಿಂಪಿಯನ್‌ಗಳ ನೇಮಕ

ನವದೆಹಲಿ: ದೇಶದ ಕ್ರೀಡಾ ಕ್ಷೇತ್ರದ ಸುಧಾರಣೆಗಾಗಿ ಸುದೀರ್ಘ ಅವಧಿಯ ಯೋಜನೆ ರೂಪಿಸಲು ಮತ್ತು ಅನುಷ್ಠಾನಗೊಳಿಸಲು 12 ಮಂದಿ ಮಾಜಿ ಒಲಿಂಪಿಯನ್‌ ಕ್ರೀಡಾಪಟುಗಳನ್ನು ರಾಷ್ಟ್ರೀಯ ವೀಕ್ಷಕರನ್ನಾಗಿ  ಕೇಂದ್ರ ಸರ್ಕಾರವು ನೇಮಕ ಮಾಡಿದೆ.

ಬೀಜಿಂಗ್ ಒಲಿಂಪಿಕ್ಸ್‌ನ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅಭಿನವ್ ಬಿಂದ್ರಾ, ಅಥ್ಲೀಟ್‌ಗಳಾದ ಪಿ.ಟಿ. ಉಷಾ, ಅಂಜು ಬಾಬಿ ಜಾರ್ಜ್, ಆರ್ಚರಿಪಟು ಸಂಜೀವಕುಮಾರ್ ಸಿಂಗ್, ಬ್ಯಾಡ್ಮಿಂಟನ್ ಆಟಗಾರ್ತಿ ಅಪರ್ಣಾ ಪೋಪಟ್, ಬಾಕ್ಸರ್‌ ಎಂ.ಸಿ. ಮೇರಿ ಕೋಮ್, ಅಖಿಲ್ ಕುಮಾರ್, ಹಾಕಿ ಪಟು ಜಗಬೀರ್ ಸಿಂಗ್, ಟೆನಿಸ್ ಪಟು ಸೋಮದೇವ ದೇವವರ್ಮನ್, ವೇಟ್‌ಲಿಫ್ಟರ್‌ ಕರ್ಣಂ ಮಲ್ಲೇಶ್ವರಿ, ಕುಸ್ತಿಪಟು ಸುಶೀಲ್ ಕುಮಾರ್, ಫುಟ್‌ ಬಾಲ್ ಆಟಗಾರ ಐ.ಎಂ. ವಿಜಯನ್ , ಈಜುಪಟು ಖಜಾನ್ ಸಿಂಗ್ ಮತ್ತು ಟೇಬಲ್ ಟೆನಿಸ್ ಆಟಗಾರ ಕಮಲೇಶ್ ಮೆಹ್ತಾ ಅವರನ್ನು ನೇಮಕ ಮಾಡಲಾಗಿದೆ.

'ರಾಷ್ಟ್ರೀಯ ವೀಕ್ಷಕರು ದೇಶದಲ್ಲಿ ಕ್ರೀಡೆಯ ಅಭಿವೃದ್ಧಿಗಾಗಿ ರೂಪುರೇಷೆ ರಚಿಸುವಲ್ಲಿ ಕೇಂದ್ರ ಸರ್ಕಾರ, ಭಾರತೀ ಯ ಕ್ರೀಡಾ ಪ್ರಾಧಿಕಾರ (ಸಾಯ್),  ರಾಷ್ಟ್ರೀಯ ಕ್ರೀಡಾ ಫೆಡ ರೇಷನ್‌ಗಳು ,  ಮತ್ತು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಗಳಿಗೆ ನೆರವು ನೀಡಲಿದ್ದಾರೆ’ ಎಂದು ಕೇಂದ್ರ ಕ್ರೀಡಾ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ತಂಡಗಳ ಆಯ್ಕೆ, ರಾಷ್ಟ್ರೀಯ ತರಬೇತಿ ಶಿಬಿರಗಳ ಆಯೋಜನೆ, ಅಥ್ಲೀಟ್‌ಗಳ ಕೌಶಲ್ಯ ಅಭಿವೃದ್ಧಿಗಾಗಿ ದೀರ್ಘ ಮಾದರಿಯ ಯೋಜನೆ, ತರಬೇತುದಾರರು, ತಾಂತ್ರಿಕ ಅಧಿಕಾರಿಗಳಿಗೆ ತರಬೇತಿ ಮತ್ತು ನಿರ್ವಹಣೆ,  ಅಥ್ಲೀಟ್‌ಗಳ ಸಾಧನೆ ಗಳ ಮೌಲ್ಯ ಮಾಪನದಂತಹ ಕಾರ್ಯಗಳನ್ನೂ ವೀಕ್ಷಕರು ನಿರ್ವಹಿಸಲಿದ್ದಾರೆ’ ಎಂದು  ಪ್ರಕಟಣೆ ಯಲ್ಲಿ ತಿಳಿಸಲಾಗಿದೆ. 2020, 2024 ಮತ್ತು 2028ರ ಒಲಿಂಪಿಕ್ಸ್‌ ಕೂಟಗಳಿಗೆ ಈಗಿನಿಂದಲೇ ಸಿದ್ಧತೆ ಆರಂಭಿಸಲು ವೀಕ್ಷಕರು ಯೋಜನೆ ರೂಪಿಸಲಿದ್ದಾರೆ.

ತಮಿಳುನಾಡಿಗೆ ವಿಜಯ್ ಹಜಾರೆ ಟ್ರೋಫಿ

ತಮಿಳುನಾಡಿಗೆ ವಿಜಯ್‌ ಹಜಾರೆ ಟ್ರೋಫಿ

ನವದೆಹಲಿ : ಅನುಭವಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ (112; 120ಎ, 14ಬೌಂ) ಅವರ ಆಕರ್ಷಕ ಶತಕದ ಬಲದಿಂದ ತಮಿಳುನಾಡು ತಂಡ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದೆ.

ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ  ಫೈನಲ್‌ ಪಂದ್ಯದಲ್ಲಿ ತಮಿಳುನಾಡು ತಂಡ 37ರನ್‌ ಗಳಿಂದ ಬಂಗಾಳ ತಂಡವನ್ನು ಮಣಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಐದನೇ ಪ್ರಶಸ್ತಿ ಎತ್ತಿಹಿಡಿಯಿತು.

ವಿಜಯ್‌ ಶಂಕರ್‌ ಪಡೆ ಏಳು ವರ್ಷಗಳ ಬಳಿಕ ವಿಜಯ್‌ ಹಜಾರೆ ಟ್ರೋಫಿ ಜಯಿಸಿತು. 2009–10ರಲ್ಲಿ ತಂಡ ಕೊನೆಯ ಬಾರಿಗೆ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು. ಆಗಲೂ ಫೈನಲ್‌ನಲ್ಲಿ ಬಂಗಾಳ ತಂಡವನ್ನು ಸೋಲಿಸಿತ್ತು. ಮೊದಲು ಬ್ಯಾಟ್‌ ಮಾಡಿದ ತಮಿಳುನಾಡು 47.2 ಓವರ್‌ಗಳಲ್ಲಿ 217ರನ್‌ ಪೇರಿಸಿತು.
ಸವಾಲಿನ ಗುರಿ ಬೆನ್ನಟ್ಟಿದ ಬಂಗಾಳ ತಂಡ 45.5 ಓವರ್‌ಗಳಲ್ಲಿ 180ರನ್‌ ಗಳಿಸಲಷ್ಟೇ ಶಕ್ತವಾಯಿತು.

ಆರಂಭಿಕ ಆಘಾತ:  ಬ್ಯಾಟಿಂಗ್‌ ಆರಂಭಿಸಿದ ವಿಜಯ್‌ ಶಂಕರ್‌ ಪಡೆ ಆರಂಭಿಕ ಸಂಕಷ್ಟ ಎದುರಿಸಿತು. ತಂಡದ ಮೊತ್ತ 49 ರನ್‌ ಆಗುವಷ್ಟರಲ್ಲಿ ಗಂಗ ಶ್ರೀಧರ್‌ ರಾಜು (4), ಕೌಶಿಕ್‌ ಗಾಂಧಿ (15), ಬಾಬಾ ಅಪರಾಜಿತ್‌ (5) ಮತ್ತು ನಾಯಕ ವಿಜಯ್‌ (2) ಪೆವಿಲಿಯನ್‌ ಸೇರಿ ಕೊಂಡರು. ವೇಗಿ ಅಶೋಕ್‌ ದಿಂಡಾ ಮೂರು ವಿಕೆಟ್‌ ಉರುಳಿಸಿ ಬಂಗಾಳ ತಂಡಕ್ಕೆ ಮೇಲುಗೈ ತಂದುಕೊಟ್ಟರು.

ಈ ಹಂತದಲ್ಲಿ ಕಾರ್ತಿಕ್‌ ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು.   ಬಾಬಾ ಇಂದರ್‌ಜಿತ್‌ (32; 49ಎ, 1ಬೌಂ) ಜೊತೆ ಐದನೇ  ವಿಕೆಟ್‌ಗೆ 85ರನ್‌ ಕಲೆಹಾಕಿದ ಅವರು ಆರನೇ ವಿಕೆಟ್‌ಗೆ ವಾಷಿಂಗ್ಟನ್‌ ಸುಂದರ್‌ (22; 30ಎ, 2ಬೌಂ) ಮತ್ತು ಏಳನೇ ವಿಕೆಟ್‌ಗೆ ಮಹಮ್ಮದ್‌ (10) ಜೊತೆ ಕ್ರಮವಾಗಿ 38 ಮತ್ತು 28ರನ್‌ ಸೇರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಅಮಿರ್‌ ಗನಿ ಬೌಲ್‌ ಮಾಡಿದ 43ನೇ ಓವರ್‌ನ ಮೂರನೇ ಎಸೆತವನ್ನು ಬೌಂಡರಿಗಟ್ಟಿ ಶತಕ ಪೂರೈಸಿದ ಕಾರ್ತಿಕ್‌ 112 ರನ್‌ ಗಳಿಸಿದ್ದ ವೇಳೆ ಮಹಮ್ಮದ್ ಶಮಿಗೆ ವಿಕೆಟ್‌ ಒಪ್ಪಿಸಿದರು. ಗಾಯದಿಂದ ಚೇತರಿಸಿಕೊಂಡ ಬಳಿಕ ಮೊದಲ ಪಂದ್ಯ ಆಡಿದ ಶಮಿ ನಾಲ್ಕು ವಿಕೆಟ್‌ ಪಡೆದು ಬಂಗಾಳ ಪರ ಯಶಸ್ವಿ ಬೌಲರ್‌ ಅನಿಸಿದರು.

ಗುರಿ ಬೆನ್ನಟ್ಟುವ ಹಾದಿಯಲ್ಲಿ ಬಂಗಾಳ ತಂಡ  ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್‌ (1) ಮತ್ತು ಅಗ್ನಿವ್‌ ಪಾನ್‌ (0) ಅವರ ವಿಕೆಟ್‌ ಅನ್ನು ಬೇಗನೆ ಕಳೆದುಕೊಂಡಿತು. ಈ ಹಂತದಲ್ಲಿ ನಾಯಕ ಮನೋಜ್‌ ತಿವಾರಿ (32; 46ಎ, 3ಬೌಂ, 1ಸಿ) ಮತ್ತು ಶ್ರೀವತ್ಸ ಗೋಸ್ವಾಮಿ (23; 46ಎ, 3ಬೌಂ) ತಂಡಕ್ಕೆ ಆಸರೆಯಾಗುವ ಲಕ್ಷಣ ತೋರಿದ್ದರು.

13ನೇ ಓವರ್‌ ಬೌಲ್‌ ಮಾಡಿದ ರಾಹಿಲ್ ಷಾ ಐದನೇ ಎಸೆತದಲ್ಲಿ ಗೋಸ್ವಾಮಿ ವಿಕೆಟ್‌ ಪಡೆದು ಈ ಜೋಡಿಯನ್ನು ಮುರಿದರು.
ವಿಜಯ್‌ ಶಂಕರ್‌ ಬೌಲ್‌ ಮಾಡಿದ 21ನೇ ಓವರ್‌ನ ಐದನೇ ಎಸೆತದಲ್ಲಿ ಮನೋಜ್‌ ಬೌಲ್ಡ್‌ ಆಗಿದ್ದರಿಂದ ತಂಡದ ಗೆಲುವಿನ ಹಾದಿ ಕಠಿಣವಾಯಿತು. ಸುದೀಪ್‌ ಚಟರ್ಜಿ (58; 79ಎ, 5ಬೌಂ) ಅರ್ಧಶತಕ ಸಿಡಿಸಿದ್ದರಿಂದ ಬಂಗಾಳದ ಗೆಲುವಿನ ಆಸೆ ಚಿಗುರೊಡೆ ದಿತ್ತು.  ಅವರ ವಿಕೆಟ್‌ ಪತನವಾದ ಬಳಿಕ ಬಂದ ಆಟಗಾರರು ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ಸಂಕ್ಷಿಪ್ತ ಸ್ಕೋರ್‌: ತಮಿಳುನಾಡು: 47.2 ಓವರ್‌ಗಳಲ್ಲಿ 217 (ಕೌಶಿಕ್‌ ಗಾಂಧಿ 15, ದಿನೇಶ್‌ ಕಾರ್ತಿಕ್‌ 112, ಬಾಬಾ ಇಂದರ್‌ಜಿತ್‌ 32, ವಾಷಿಂಗ್ಟನ್‌ ಸುಂದರ್‌ 22, ಅಶ್ವಿನ್‌ ಕ್ರಿಸ್ಟ್‌ 10; ಅಶೋಕ್‌ ದಿಂಡಾ 36ಕ್ಕೆ3, ಕಾನಿಷ್ಕ್‌ ಸೇಠ್‌ 59ಕ್ಕೆ1, ಮಹಮ್ಮದ್‌ ಶಮಿ 26ಕ್ಕೆ4).

ಬಂಗಾಳ: 45.5 ಓವರ್‌ಗಳಲ್ಲಿ 180 (ಶ್ರೀವತ್ಸ ಗೋಸ್ವಾಮಿ 23, ಮನೋಜ್‌ ತಿವಾರಿ 32, ಸುದೀಪ್‌ ಚಟರ್ಜಿ 58, ಅನುಸ್ತಪ್‌ ಮಜುಂದಾರ್‌ 24, ಅಮೀರ್‌ ಗನಿ 24; ಅಶ್ವಿನ್‌ ಕ್ರಿಸ್ಟ್‌ 23ಕ್ಕೆ2, ಎಂ. ಮಹಮ್ಮದ್‌ 30ಕ್ಕೆ2, ರಾಹಿಲ್‌ ಷಾ 38ಕ್ಕೆ2, ವಿಜಯ್‌ ಶಂಕರ್‌ 20ಕ್ಕೆ1, ಬಾಬಾ ಅಪರಾಜಿತ್‌ 22ಕ್ಕೆ1, ಸಾಯಿ ಕಿಶೋರ್‌ 29ಕ್ಕೆ1).

ಫಲಿತಾಂಶ: ತಮಿಳುನಾಡಿಗೆ 37ರನ್‌ ಗೆಲುವು ಹಾಗೂ ಪ್ರಶಸ್ತಿ.
ಪಂದ್ಯಶ್ರೇಷ್ಠ: ದಿನೇಶ್ ಕಾರ್ತಿಕ್‌.

ವಿಶ್ವ ಮಹಿಳಾ ಸ್ನೂಕರ್ : ವಿದ್ಯಾ ಪಿಳ್ಳೈಗೆ ಬೆಳ್ಳಿ

ವಿಶ್ವ ಮಹಿಳಾ ಸ್ನೂಕರ್‌: ವಿದ್ಯಾ ಪಿಳ್ಳೈಗೆ ಬೆಳ್ಳಿ

ಸಿಂಗಪುರ (ಪಿಟಿಐ): ಅಪೂರ್ವ ಸಾಮರ್ಥ್ಯ ತೋರಿದ ಭಾರತದ ವಿದ್ಯಾ ಪಿಳ್ಳೈ ಅವರು ಇಲ್ಲಿ ನಡೆದ ವಿಶ್ವ ಮಹಿಳಾ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದಾರೆ.

ಸೋಮವಾರ ನಡೆದ ಫೈನಲ್‌ ಹೋರಾಟದಲ್ಲಿ ಭಾರತದ ವಿದ್ಯಾ 4–5 ಫ್ರೇಮ್‌ಗಳಿಂದ ಹಾಂಕಾಂಗ್‌ನ ಎನ್‌ಜಿ ಆನ್‌ ಯೀ ವಿರುದ್ಧ ಪರಾಭವ
ಗೊಂಡರು. ಲೀಗ್‌ ಹಂತದ ಪಂದ್ಯಗಳಲ್ಲಿ ಅಮೋಘ ಆಟ ಆಡಿದ್ದ ವಿದ್ಯಾ ಫೈನಲ್‌ ಹೋರಾಟದ ಮೊದಲ ಆರು ಫ್ರೇಮ್‌ ಗಳು ಮುಗಿದಾಗ 4–2ರ ಮುನ್ನಡೆ ಗಳಿಸಿದ್ದರು.

ಹೀಗಾಗಿ ಬೆಂಗಳೂರಿನ ಆಟಗಾರ್ತಿ ಚಿನ್ನ ಗೆಲ್ಲುವುದು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ನಂತರದ ಮೂರು ಫ್ರೇಮ್‌ಗಳಲ್ಲಿ ಅವರು ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿದ್ದರಿಂದ ಹಿನ್ನಡೆ ಎದುರಾಯಿತು. ನಿರ್ಣಾಯಕ ಫ್ರೇಮ್‌ನ ಆರಂಭದಲ್ಲಿ ವಿದ್ಯಾ 22 ಸ್ಕೋರ್‌ ಸಂಗ್ರಹಿಸಿದರು.
ಆದರೆ ಮಾಜಿ ವಿಶ್ವ ಚಾಂಪಿಯನ್‌ ಯೀ ಬ್ರೇಕ್‌ ಮೂಲಕ 36 ಸ್ಕೋರ್‌ ಕಲೆಹಾಕಿ 42–22ರ ಮುನ್ನಡೆ ಪಡೆದುಕೊಂಡರು.

ಈ ಹಂತದಲ್ಲಿ ಮತ್ತೆ ಪುಟಿದೆದ್ದ ವಿದ್ಯಾ ದಿಟ್ಟ ಆಟ ಆಡಿದರಾದರೂ ನಾಲ್ಕು ಪಾಯಿಂಟ್ಸ್‌ನಿಂದ (50–54) ಚಿನ್ನ ಗೆಲ್ಲುವ ಅವಕಾಶ ಕೈಚೆಲ್ಲಿದರು.
ಲೀಗ್‌ ಹಂತದಲ್ಲಿ ಅಮೋಘ ಆಟ ಆಡಿದ್ದ ವಿದ್ಯಾ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ 4–1ರಲ್ಲಿ ಲಾತ್ವಿಯಾದ ಆಟಗಾರ್ತಿ, ಮಾಜಿ ಯುರೋಪಿಯನ್‌ ಚಾಂಪಿಯನ್‌ ತತ್‌ಜಾನ ವಸಿಲ್‌ಜೆವಾ ಅವರನ್ನು ಮಣಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ 4–1ರಿಂದ ಹಾಂಕಾಂಗ್‌ನ ಕ್ಯಾಥರಿನಾ ವಾನ್‌ ಅವರನ್ನು ಸೋಲಿಸಿದ್ದ ಭಾರತದ ಆಟಗಾರ್ತಿ, ಸೆಮಿಫೈನಲ್‌ನಲ್ಲಿ 5–1ರಲ್ಲಿ ಇಂಗ್ಲೆಂಡ್‌ನ ರೆಬೆಕ್ಕಾ ಗ್ರೆಂಜರ್‌ ಅವರ ಸವಾಲು ಮೀರಿ ನಿಂತಿದ್ದರು.