ಶನಿವಾರ, ಜೂನ್ 20, 2015

ವಿಮರ್ಶೆಯ ಪೂರ್ವ-ಪಶ್ಚಿಮ (1)

ವಿಮರ್ಶೆಯ ಪೂರ್ವ-ಪಶ್ಚಿಮ

ಕೃತಿಯ ಮಹತ್ತನ್ನು ನಿರ್ಣಯಿಸುವಾಗ ನಾವು ಕೃತಿಯಲ್ಲಿ ಅಭಿವ್ಯಕ್ತವಾಗುವ ಕವಿಯ ಸತ್ವವನ್ನು ಗಮನಿಸಬೇಕೆ ಹೊರತು ಕೃತಿಯ ಗಾತ್ರವನ್ನಾಗಲಿ, ಅಥವಾ ಅದು ಯಾವ ಕಾವ್ಯಪ್ರಕಾರ ಲಕ್ಷಣಗಳಿಗೆ ಅನುಸಾರವಾಗಿ ರಚಿತವಾಗಿದೆ ಎಂಬುದನ್ನಾಗಲಿ ಪ್ರಧಾನವಾಗಿ ಪರಿಗಣಿಸಬಾರದು. ‘ಮಹಾಕವಿ’ ಎನ್ನುವ ಮಾತಿಗೆ ಕೇವಲ ‘ಮಹಾಕಾವ್ಯ’ -ವನ್ನು ಬರೆದವರೆ ಮಹಾಕವಿಗಳು; ಭಾವಗೀತೆಗಳನ್ನು ಬರೆದ ಕವಿ ಮಹಾಕವಿ ಆಗಲಾರ – ಎಂದು ಅರ್ಥ ಕಲ್ಪಿಸಬಾರದು. ‘ಗಾತ್ರವದು ಸೂತ್ರವಲ್ಲಾತ್ಮಕ್ಕೆ’[1] ಎನ್ನುವುದೇ ಇಲ್ಲಿ ಅನುಸರಿಸಬೇಕಾದ ಸೂತ್ರ. ಕಾವ್ಯ ರಚನೆಯೂ ಒಂದು ಶಿಲ್ಪ : ಇದರಲ್ಲಿ ಗುಹಾಂತರ್ದೇವಾಲಯ ಶಿಲ್ಪ; ಮಹಾದೇವಾಲಯ ಶಿಲ್ಪ; ಲಲಿತ ಶಿಲ್ಪಗಳೂ ಉಂಟು. ಒಂದೇ ಒಂದು ಅಖಂಡವಸ್ತುವನ್ನು ಹಿಡಿದು ಅದನ್ನೇ ಕಡೆದು ಬಿಡಿಸುವ ಮಹಾ ಕಾವ್ಯಪದ್ಧತಿ ಗುಹಾಂತರ್ದೇವಾಲಯ ಶಿಲ್ಪದ ರೀತಿಗೆ ಸಂಬಂಧಿಸಿದ್ದು. ಅಜಂತಾ, ಎಲ್ಲೋರಗಳ ದೇಗುಲಗಳನ್ನು ಕಡೆದವರು, ಆ ವಸ್ತುವಿದ್ದಲ್ಲೇ ಹೋಗಿ, ಅದನ್ನೇ ಕಡೆದು ತಮ್ಮ ಕೌಶಲವನ್ನು ತೋರಿದ್ದಾರೆ. ಆದರೆ ತಂಜಾವೂರಿನ ಬೃಹದೇಶ್ವರ ದೇಗುಲ-ದಕ್ಷಿಣ ಇಂಡಿಯಾದ ಯಾವ ದೊಡ್ಡ ದೇಗುಲಗಳನ್ನಾಗಲಿ-ವನ್ನು ನೋಡಿದರೆ ಅದು ಹತ್ತು ದಿಕ್ಕಿನಿಂದ ಸಾಮಗ್ರಿಗಳನ್ನು ತಂದು ಬೇರೆಯಾಗಿ ಕಡೆದು ಜೋಡಿಸಿದ್ದು. ಮಹಾಕಾವ್ಯವನ್ನು ಬರೆಯದಿದ್ದರೂ ವಿಶೇಷ ಸತ್ವಯುತವಾದ ಭಾವಗೀತೆಗಳನ್ನು ರಚಿಸಿದ ಪ್ರಮುಖ (Major) ಕವಿಗಳಿಗೆ ಈ ಹೋಲಿಕೆ ಅನ್ವಯಿಸುತ್ತದೆ. ಯಾವ ಇಂಥ ಕವಿಯ ಭಾವಗೀತೆಗಳು, ಹೊರಗೆ ನೋಡುವುದಕ್ಕೆ ಬಿಡಿ ಬಿಡಿಯಾಗಿ ತೋರಿದರೂ, ಕವಿ ಮನೋಧರ್ಮದ ಬೆಳವಣಿಗೆಯ ದೃಷ್ಟಿಯಿಂದ ಅವೆಲ್ಲವೂ ಒಂದು ದೊಡ್ಡ ಶಿಲ್ಪಸೌಧದ ವಿವಿಧ ಭಾಗಗಳಾಗಿ ಗೋಚರಿಸುತ್ತವೆ. ಅವೆಲ್ಲವನ್ನೂ ಒಟ್ಟಿಗೆ ತೆಗೆದುಕೊಂಡು ನೋಡಿದಾಗ ನಮ್ಮ ಬಗೆಗಣ್ಣಿನ ಮುಂದೆ ಆ ಮಹಾದೇವಾಲಯ ಶಿಲ್ಪ ಗೋಚರಿಸುತ್ತದೆ. ಈ ಸತ್ವವನ್ನುಳ್ಳ ಭಾವಗೀತೆಗಳನ್ನು ಬರೆದ ಕವಿಯೂ ‘ಮಹಾಕವಿ’ ಎನ್ನುವ ಹೆಸರಿಗೆ ಪಾತ್ರನಾಗುತ್ತಾನೆ.  ಇನ್ನು ಲಲಿತ ಕಲಾ ಶಿಲ್ಪಕ್ಕೆ ನಿದರ್ಶನವಾಗಿ, ಬಿಡಿಬಿಡಿಯಾದ ಸುಂದರ ಶಿಲ್ಪದ ಕೃತಿಗಳನ್ನು ರಚಿಸಿದವರನ್ನು ಸೇರಿಸಬಹುದು. ಇಂಗ್ಲಿಷಿನಲ್ಲಿ ಇಂಥವರನ್ನು Minor poet  ಎನ್ನುವವರ ಗುಂಪಿಗೆ ಸೇರಿಸಬಹುದು.
ಇಂದು ಪಾಶ್ಚಾತ್ಯ ಕಾವ್ಯವಿಮರ್ಶೆಯಲ್ಲಿ ವಿಶೇಷ ಪ್ರಚುರವಾಗಿರುವ Major ಮತ್ತು Minor poets ಎನ್ನುವ ಮಾತುಗಳ ವ್ಯಾಪ್ತಿಯನ್ನು ಇಲ್ಲಿ ಗಮನಿಸುವುದು ತಪ್ಪಾಗಲಾರದು. ಈ ಬಗ್ಗೆ ಇ.ಟಿ.ಎಸ್. ಇಲಿಯಟ್ ಹೇಳಿರುವ ಮಾತುಗಳ ಸಾರವನ್ನು ಹೀಗೆ ಸಂಗ್ರಹಿಸಬಹುದು : ಕವಿಗಳನ್ನು Major ಮತ್ತು Minor ಎಂದು ವಿಂಗಡಿಸುವುದು ಅವರ ಬರೆದ ಕವನಗಳ ಸಂಖ್ಯೆಯ ಅಥವಾ ಗಾತ್ರವನ್ನು ಗಣನೆಗೆ ತೆಗೆದುಕೊಂಡು ಅಲ್ಲ. ಕೆಲವರು ದೀರ್ಘವಾದ ಕವನಗಳನ್ನು ರಚಿಸಿಯೂ ಇಂದು Minor ಕವಿಗಳ ಗುಂಪಿಗೆ ಸೇರಬಹುದು; ಕೆಲವರು ಕೆಲವೇ ಕೆಲವು ಅತ್ಯುತ್ತಮ ಕಿರುಕವನಗಳನ್ನು ರಚಿಸಿಯೂ Major ಕವಿಗಳೆನ್ನಿಸಿಕೊಳ್ಳಬಹುದು. ಆದುದರಿಂದ ನಾವು ಯಾರ ಕವನಗಳನ್ನು ಕೇವಲ ಸಂಗ್ರಹ (Anthology)ಗಳಲ್ಲಿ ಮಾತ್ರ ಕಾಣುತ್ತೇವೋ ಅವರನ್ನು Minor poet ಎಂದೂ, ಯಾರ ಕವನಗಳನ್ನು ನಾವು ಮತ್ತೆ ಮತ್ತೆ ಓದಲು ಇಚ್ಛಿಸುತ್ತೇವೆಯೋ, ಅಂಥವರನ್ನು Major poet ಎಂದೂ ಹೇಳಬಹುದು.[2] ಅಷ್ಟೇ ಅಲ್ಲ. “ಭಾಷೆಯನ್ನು ಬಳಸುವುದರಲ್ಲಿ ಆವನಿಗಿರುವ ಸಾಮರ್ಥ್ಯ; ಕಾವ್ಯಪ್ರಕಾರ ಪ್ರಯೋಗದಲ್ಲಿ ಅವನಿಗಿರುವ ಪರಿಣತಿ; ಅವನ ಕಾವ್ಯ ವಸ್ತುವಿಗೆ ಲಭಿಸುವ ಸಾರ್ವಕಾಲಿಕ ಶಕ್ತಿ; ಅದನ್ನು ಆತ ನಿರ್ವಹಿಸುವುದರಲ್ಲಿ ಕಂಡುಬರುವ ಸ್ವೋಪಜ್ಞತೆ ಇತ್ಯಾದಿ ಲಕ್ಷಣಗಳು ಯಾರಲ್ಲಿ ಕಾಣುತ್ತವೋ ಅವನೇ Major poet.”[3]
ಮಹಾಕವಿ ಮತ್ತು ಮಹಾಕಾವ್ಯಗಳ ವಿಚಾರವಾಗಿ ನಮ್ಮವರು ಸಮರ್ಪಕವಾದ ವಿಮರ್ಶನ ಸೂತ್ರಗಳನ್ನು ಹೇಳದಿದ್ದರೂ ಒಂದು ಕೃತಿ ಏಕೆ ಮಹಾಕಾವ್ಯವಾಗಿದೆ, ಒಬ್ಬ ಕವಿ ಏಕೆ ಮಹಾಕವಿ ಎನ್ನಿಸಿಕೊಂಡಿದ್ದಾನೆ – ಎಂಬುದನ್ನು ಗುರುತಿಸುವುದು ಕಷ್ಟವಾಗುವು -ದಿಲ್ಲ. “ಕಾವ್ಯದ ಮಹತ್ತು ಎನ್ನುವುದು ಹೇಗೋ ನಾವೂ ಗುರುತಿಸಬಹುದಾದ ಒಂದು ಗುಣ;… ಕಾವ್ಯವನ್ನು ಓದುತ್ತಿರುವಂತೆ ನಮಗಾಗುವ ಭಾವಶ್ರೀಮಂತಿಕೆಯ ಅರಿವು, ಕವಿ ಬಳಸಿರುವ ಭಾಷೆಯ ಮಹತ್ತು ಮತ್ತು ಅರ್ಥ ಸಂಪತ್ತು”[4] ಇದು ಮಹಾಕೃತಿ ಎನ್ನುವುದನ್ನು ನಮ್ಮ ಅನುಭವಕ್ಕೆ ತರುತ್ತದೆ. ಸಣ್ಣ ಪುಟ್ಟ ಕೃತಿಗಳ ಬೆಲೆ ವಿಮರ್ಶೆಯ ಮಾರುಕಟ್ಟೆಯಲ್ಲಿ ಕಾಲದಿಂದ ಕಾಲಕ್ಕೆ ವ್ಯತ್ಯಾಸ ಹೊಂದಬಹುದು. ಆದರೆ ಮಹಾಕೃತಿಗಳ ಬಗ್ಗೆ ಅಲ್ಪ ಸ್ವಲ್ಪ ಭಿನ್ನಾಭಿಪ್ರಾಯಗಳು ಅದರ ಯಾವುದೋ ಕೆಲವು ಅಂಶಗಳನ್ನು ಕುರಿತು ತಲೆದೋರ -ಬಹುದಾದರೂ, ಅವು ಎಲ್ಲ ಕಾಲದಲ್ಲಿಯೂ ಜನರ ನಲವಿಗೆ, ಗೌರವಕ್ಕೆ ಪಾತ್ರವಾಗಿ ತಮ್ಮ ಬೆಲೆಯನ್ನು ಹೆಚ್ಚಿಸಿಕೊಂಡಿವೆ. ಅವು ಮಹೋನ್ನತ ಎಂಬ ಪ್ರಶಸ್ತಿಗೆ ಪಾತ್ರವಾಗಿವೆ.[5] ಒಂದು ಮಾತಿನಲ್ಲಿ ಹೇಳುವುದಾದರೆ, ಯಾವ ಕವಿಯ ಕೃತಿಯಲ್ಲಿ ಆತನ ಕಾಲದ ಯುಗಮನಸ್ಸು ಅಭಿವ್ಯಕ್ತವಾಗಿದೆಯೋ, ಯಾರ ಪ್ರತಿಭೆ ಉಳಿದ ಕವಿಗಳ ಪ್ರತಿಭೆಯ ಪ್ರವಹಣಕ್ಕೆ ಒಂದು ಹೊಸ ಪಾತ್ರವನ್ನು ತನ್ನ ಕೃತಿಪಥದ ಮೂಲಕ ರೂಪಿಸಿ ನೂತನ ಸಂಪ್ರದಾಯವೊಂದರ ಪ್ರವರ್ತನಕ್ಕೆ ಕಾರಣವಾಗಿದೆಯೋ, ಯಾರು ತನ್ನ ಕಾಲದ ಭಾಷೆಯ ಸಾಧ್ಯತೆಯನ್ನು ಸೂರೆಗೈದು ಅದಕ್ಕೊಂದು ಹೊಸ ಮೆರುಗನ್ನೂ, ಅರ್ಥಪುಷ್ಟಿಯನ್ನೂ ತಂದು ಕೊಟ್ಟಿದ್ದಾನೆಯೋ, ಯಾರ ಕೃತಿ ಸಾರ್ವಕಾಲಿಕ ಸೊಗಸಿನ ಮೌಲ್ಯದ ತವನಿಧಿ -ಯಾಗಿದೆಯೋ ಅಂಥ ಕವಿಯನ್ನು ಮಹಾಕವಿ ಎಂದು ಕರೆಯಬಹುದು.
ವಿಮರ್ಶೆಯಲ್ಲಿ ಏರುಪೇರು
“This with your judgement as our Watches, none
 Go just alike, yet each believes his own.”[6]
ಕವಿ ಪೋಪ್ ಹೇಳಿದ ಈ ಮಾತು ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ಕವಿಕೃತಿಗಳನ್ನು ಕುರಿತು ವಿಮರ್ಶಕರು ನೀಡಬಹುದಾದ ಅಭಿಪ್ರಾಯ – ತೀರ್ಪುಗಳ ಸ್ವರೂಪವನ್ನೂ, ವೈವಿಧ್ಯವನ್ನೂ ಚೆನ್ನಾಗಿ ವಿಡಂಬಿಸುತ್ತದೆ. ಎಲ್ಲರೂ ಭಾವಿಸುತ್ತಾರೆ ತಮ್ಮ ಕೈಗಡಿಯಾರವೇ ಸರಿಯಾಗಿದೆ ಎಂದು. ಆದರೆ ಯಾರೊಬ್ಬರ ಗಡಿಯಾರ ತೋರಿಸುವ ಕಾಲವೂ, ಮತ್ತೊಬ್ಬರ ಗಡಿಯಾರ ತೋರಿಸುವ ಕಾಲದೊಂದಿಗೆ ಹೊಂದಿಕೊಳ್ಳುವುದಿಲ್ಲ!
ಈ ಮಾತು ಸಾಹಿತ್ಯ ವಿಮರ್ಶೆಯಲ್ಲಿ ಕಂಡುಬರುವ ಅಭಿಪ್ರಾಯ ಭೇದಗಳನ್ನು ಸೂಚಿಸುತ್ತದೆ ಎಂದು ಭಾವಿಸಬೇಕೇ ಹೊರತು, ವಿಮರ್ಶಕರ ಮತದಲ್ಲಿ ಸಾಮ್ಯವೇ ಇರುವುದಿಲ್ಲವೆಂದಾಗಲಿ, ಇರುವುದು ಸಾಧ್ಯವಿಲ್ಲವೆಂದಾಗಲಿ ತಿಳಿಯಬಾರದು. ಯಾವುದನ್ನು ಸಾಹಿತ್ಯವಿಮರ್ಶೆಯಲ್ಲಿ ಮೌಲ್ಯನಿರ್ಣಯ ಎನ್ನುತ್ತೇವೆಯೋ, ತೀರ್ಪು ಎನ್ನುತ್ತೇವೆಯೋ ಅದು ವಿರಸ-ವೈವಿಧ್ಯಗಳಿಂದ ಸಿದ್ಧವಾಗತಕ್ಕದಲ್ಲ. ಒಂದು ಕೃತಿಯನ್ನು ಕುರಿತು ಸಮರ್ಥರಾದ ವಿಮರ್ಶಕರು, ಕೃತಿಯ ಕೆಲವು ಅಂಶಗಳ ವಿಚಾರದಲ್ಲಿ ಅಲ್ಪ ಸ್ವಲ್ಪ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದರೂ, ಅದರ ‘ಬೆಲೆ’ಯ ವಿಚಾರದಲ್ಲಿ ಹೆಚ್ಚು ಕಡಿಮೆ ಸಮಾನವಾದ ಭಾವನೆಯನ್ನೆ ತಾಳುವರೆಂಬುದರಲ್ಲಿ ಸಂದೇಹವಿಲ್ಲ. ಕೃತಿಯೊಂದನ್ನು ಕುರಿತು ವಿಮರ್ಶಕರಲ್ಲಿ ಒಬ್ಬೊಬ್ಬರದು ಒಂದೊಂದು ದಿಕ್ಕಿನ ಅಭಿಪ್ರಾಯವಾದರೆ ಅದು ತೀರ್ಪು ಎನ್ನಿಸಿಕೊಳ್ಳುವುದಿಲ್ಲ. ಅದರ ಬದಲು ಅವರ ಅಭಿಪ್ರಾಯಗಳ ವೈಪರೀತ್ಯಕ್ಕೆ ವಿಮರ್ಶಕರಲ್ಲಿ ಯಾವುದೋ ದೋಷವಿರಬಹುದೆನ್ನುವ ಸಂದೇಹ ನಮಗೂ ಮೂಡುತ್ತದೆ. ಹಲವು ಕೈಗಡಿಯಾರಗಳು ತೋರಿಸುವ ಕಾಲದಲ್ಲಿ ಎಲ್ಲೋ ಕೆಲವು ಸೆಕೆಂಡುಗಳು, ನಿಮಿಷಗಳ ಅಂತರವಿರಬಹುದು; ಆದರೆ ಘಂಟೆ ಘಂಟೆಗಳ ಆಂತರವೇ ಒಂದು ಮತ್ತೊಂದಕ್ಕೆ ಕಂಡುಬಂದರೆ ಆ ಗಡಿಯಾರಗಳಲ್ಲೇ ಏನೋ ದೋಷವಿರಬೇಕೆಂದು ಭಾವಿಸಬೇಕಾಗುತ್ತದೆ.
ಕೃತಿವಿಮರ್ಶೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳು ಕಂಡುಬಂದರೂ, ಕೃತಿಯ ನಿಜವಾದ ಬೆಲೆಯ ವಿಚಾರದಲ್ಲಿ ಒಂದು ಬಗೆಯ ಸಮಾನತೆ ಇರುವಂತೆ ನೋಡಿಕೊಳ್ಳಬೇಕಾದರೆ ವಿಮರ್ಶಕರು ಆರೋಗ್ಯವಂತರಾಗಿರಬೇಕು; ಕೃತಿಯಲ್ಲಿ ಹುದುಗಿರುವ ಕವಿಯ ಆಶಯವನ್ನು ಗ್ರಹಿಸುವ, ಕೃತಿಯ ಸೊಗಸನ್ನು ವ್ಯಾಖ್ಯಾನಿಸುವ, ತಂತ್ರವನ್ನು ವಿಮರ್ಶಿಸುವ, ಬೆಲೆಯನ್ನು ನಿರ್ಣಯಿಸುವ ಸಾಮರ್ಥ್ಯವುಳ್ಳವರಾಗಿರಬೇಕು.
ಯಾವ ಕವಿಯ ಕೃತಿಯನ್ನು ಅವಲೋಕಿಸುವಾಗಲೂ ಮೊದಲು ಆ ಕವಿಯ ವ್ಯಕ್ತಿವೈಲಕ್ಷಣ್ಯಗಳನ್ನು ನಾವು ಗುರುತಿಸಬೇಕು. ಕವಿಕೃತಿಯಲ್ಲಿ ಅಂತರ್ಗತವಾಗಿರುವ ಅಥವಾ ಅಭಿವ್ಯಕ್ತವಾಗಿರುವ ಆ ಕವಿಯ ಕಾವ್ಯಶ್ರದ್ಧೆಯ ಸಾಮಗ್ರಿಗಳನ್ನು, ಕವಿಯ ಧ್ಯೇಯ, ದೃಷ್ಟಿ ಧೋರಣೆಗಳನ್ನು ಕಂಡುಕೊಳ್ಳಬೇಕು. ಕವಿ ತಾನು ಬರೆಯುವಾಗ ಯಾವುದನ್ನು ಪ್ರಧಾನವೆಂದು ಭಾವಿಸಿದ್ದಾನೆ, ಅದನ್ನು ಅವನು ಸಮರ್ಪಕವಾಗಿ ಸಾಧಿಸಿದ್ದಾನೆಯೆ ಎನ್ನುವುದರ ಪರಿಶೀಲನೆ ಅಗತ್ಯ. ಏಕೆಂದರೆ ಕವಿಯೇ ತನ್ನ ಕೃತಿಯಲ್ಲಿ, ತನ್ನ ಕಾವ್ಯೋದ್ದೇಶದ ಕೀಲಿಕೈಗಳನ್ನು ಇರಿಸಿರುವುದುಂಟು. ಪಂಪ ತನ್ನ ಕಾವ್ಯಗಳೆರಡನ್ನೂ ಕುರಿತು “ಬೆಳಗುವೆನಿಲ್ಲಿ ಲೌಕಿಕಮನ್, ಅಲ್ಲಿ ಜಿನಾಗಮಮಂ” ಎಂದು ಹೇಳಿಕೊಂಡಿದ್ದಾನೆ; ಆದಿಪುರಾಣವನ್ನು ಕುರಿತು ಅದರಲ್ಲಿ “ಅರಿವುದು ಧರ್ಮಮಂ ಕಾವ್ಯ ಧರ‍್ಮಮುಮಂ” ಎನ್ನುತ್ತಾನೆ. ಕುಮಾರವ್ಯಾಸ “ತಿಳಿಯ ಹೇಳುವೆ ಕೃಷ್ಣ ಕತೆಯನು” ಎನ್ನುತ್ತಾನೆ. “ಪರೆವುದು ದುರಿತ ತಮಿಸ್ರಂ, ಪೊರೆಯೇರುವುದಮಳದೃಷ್ಟಿ ಕುವಲಯವನಂ”-  ಎನ್ನುತ್ತಾನೆ ಜನ್ನ ತನ್ನ ಯಶೋಧರ ಚರಿತ್ರೆಯನ್ನು ಕುರಿತು. ಮಿಲ್ಟನ್ ತನ್ನ ‘ಸ್ವರ್ಗಚ್ಯುತಿ’ (Paradise Lost) ಯನ್ನು ಬರೆವ ಮುನ್ನ ತನ್ನ ಉದ್ದೇಶ To justify the ways of God to men” ಎನ್ನುತ್ತಾನೆ. ಹೀಗೆ ನೇರವಾಗಿ ತಮ್ಮ ಕಾವ್ಯೋದ್ದೇಶವನ್ನು ಹೇಳಿಕೊಂಡಿದ್ದಾರೆ ಕೆಲವರು ಕವಿಗಳು. ಮತ್ತೆ ಕೆಲವರಲ್ಲಿ ಆ ಉದ್ದೇಶ, ಅವರ ಪ್ರಧಾನವಾದ ದೃಷ್ಟಿ ಅವರ ಕಾವ್ಯಗಳಲ್ಲಿ ಹುಡುಕಿದರೆ ದೊರೆಯುತ್ತದೆ. “ಪ್ರಕೃತಿಯೊಲ್ಮೆಯೆ ಪರಮನಾರಾಧನೆ”; “ರಸಾನುಭೂತಿಯ ರಸಪಥವಲ್ಲದೆ, ಸತ್ಯಕ್ಕೆ ಗತಿಯಿಲ್ಲ, ಮತಿಯಿಲ್ಲ; ಚಿರಸೌಂದರ‍್ಯದ ಸಂಪದವಿದ್ದರೆ ಧರ್ಮಕ್ಕೆ ಚ್ಯುತಿಯಿಲ್ಲ”; “ತೆಗೆ ಜಡವೆಂಬುದೆ ಬರಿ ಸುಳ್ಳು” ಇಂಥ ಕೆಲವು ಸೂತ್ರಗಳು ಕುವೆಂಪು ಅವರ ಪ್ರಕೃತಿ ಗೀತೆಗಳ ಪರಿಶೀಲನೆಗೆ ಬೀಗದಕೈಯಾಗುತ್ತವೆ. “ಏಕಾಂತದ ಜಿನುಗು ಲೋಕಾಂತಕೆಳೆಯಿತು ಜನವು ಜನಾರ್ದನನೆಂದರಿತೆ”, “ತಾಯಿಪಾದದಾನಂದ ಗಂಧ ಉಂಡು ಬೆಂದವರ ಜೀವನ ಬೆರೆಸೋಣ ಬಾ” – ಎಂಬ ಮಾತುಗಳು ಬೇಂದ್ರೆಯವರ ಕೃತಿಪರಿಶೀಲನೆಗೆ ಸಹಾಯಕವಾಗುವ ಒಂದೆರಡು ಸೂತ್ರಗಳು. “ಏನೇತಕೆ ಎಂಬುದೆ ಹವ್ಯಾಸ, ಇದನುಳಿದಾಗದು ಪದವಿನ್ಯಾಸ” – ಈ ಮಾತು ಪು.ತಿ.ನ. ಅವರ ಕೃತಿಯನ್ನರ್ಥಮಾಡಿಕೊಳ್ಳುವ ಸೂತ್ರ. ಹೀಗೆ ಪ್ರತಿಯೊಬ್ಬ ಸಮರ್ಥ ಕವಿಯ ಕೃತಿಯಲ್ಲಿಯೂ, ಸಮರ್ಥನಾದ ವಿಮರ್ಶಕ ಆಯಾ ಕವಿಕೃತಿಗಳನ್ನರಿಯುವ ಸೂತ್ರಗಳನ್ನು ಅಲ್ಲಿಂದಲೇ ಕಂಡುಕೊಳ್ಳುತ್ತಾನೆ. ಹಾಗೆ ಕಂಡುಕೊಳ್ಳದಿದ್ದಲ್ಲಿ, ಆಯಾ ಕವಿಯ ಆಶಯವೇ ಅಲ್ಲದ, ಅವನ ಮನೋಭಾವಕ್ಕೆ ಒಗ್ಗದ ದೃಷ್ಟಿಗಳನ್ನು ಅನ್ವಯಿಸಿ ಕವಿಯ ಬಗ್ಗೆ ತಪ್ಪು ತೀರ್ಮಾನವನ್ನು ಹೇಳುವ ಪ್ರಮಾದ ಸಂಭವಿಸುತ್ತದೆ. “ಹಕ್ಕಿಗೆ ಈಜುವುದಕ್ಕೆ ಬರುವುದಿಲ್ಲ; ಮೀನಿಗೆ ಹಾರುವುದಕ್ಕೆ ಬರುವುದಿಲ್ಲ” – ಎಂಬಂತಹ ಆಕ್ಷೇಪಣೆ ಸಾಹಿತ್ಯ ವಿಮರ್ಶೆಯಲ್ಲಿ ತಲೆದೋರುತ್ತವೆ. ಆದಕಾರಣ ಆಯಾಕವಿ ಅವನವನ ಮಿತಿಯಲ್ಲಿ ಅವನಿಗೆ ಒಗ್ಗುವ ಮನೋಧರ್ಮದಲ್ಲಿ ಸಾಧಿಸಬೇಕಾದುದನ್ನು ಸಾಧಿಸಿದ್ದಾನೆಯೆ ಇಲ್ಲವೆ ಎನ್ನುವುದರ ಪರಿಶೀಲನೆ ಸಾಹಿತ್ಯವಿಮರ್ಶೆಯ ಕ್ಷೇತ್ರದಲ್ಲಿ ಉಂಟಾಗುವ ವಿಚಾರದ ಗೊಂದಲವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಬಹುದು.
ವಿಮರ್ಶೆಯ ತೀರ್ಮಾನಗಳು ತಪ್ಪುಹಾದಿಗೆ ಹೋಗುವ ಕಾರಣಗಳಲ್ಲಿ ವೈಯಕ್ತಿಕ ಅಭಿಮಾನವೋ, ಪಂಥ ಪ್ರವೃತ್ತಿಯೋ ಪ್ರಧಾನವಾಗಬಹುದು. ಒಂದು ಒಳ್ಳೆಯ ಕೃತಿಯನ್ನು ಬರೆದಾತ ತಮ್ಮವನಾದ ಮಾತ್ರದಿಂದಲೆ, ಅವನ ಕೃತಿಯ ದೋಷಗಳ ಬಗ್ಗೆ ಕಣ್ಣುಮುಚ್ಚಿ ಅದು ಅತ್ಯುತ್ತಮವೆಂದು ಕಿರುಚುವ ಗುಂಪೊಂದು ಸಿದ್ಧವಾಗುವುದುಂಟು. ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘವು ಮುದ್ದಣನ ಜ್ಞಾಪಕೋತ್ಸವವನ್ನು ನೆರವೇರಿಸಿದಾಗ, ಮುದ್ದಣನನ್ನು ಕುರಿತು ಬಂದ ಸ್ಮಾರಕ ಗ್ರಂಥವೊಂದರಲ್ಲಿ ಅವನನ್ನು ಕುರಿತು ಇಂಥ ಪ್ರಶಂಸೆಯ ಮಳೆ ಸುರಿಯಿತು : “ಪ್ರಕೃತಿ ಸೌಂದರ‍್ಯದ ವರ್ಣನೆಯಲ್ಲಿ ಈತನು ಕಾಳಿದಾಸ ಷೇಕ್ಸ್‌ಪಿಯರಿಗಿಂತ ಬಹಳ ಕಡಮೆಯಾದವನಲ್ಲ;” “ಇವನ ಕನ್ನಡದ ಶೈಲಿಯ ಸೊಗಸು ರಸ್ಕಿನ್ ಡಿಕ್ವಿನ್ಸಿಗಳ ಇಂಗ್ಲಿಷ್ ಶೈಲಿಯ ಸೊಗಸಿಗೆ ಸಮಾನವಾಗುತ್ತದೆ”; “ಈ ವರ್ಣನೆಯು ಭಾವನೆಯಲ್ಲಿಯೂ ಊಹೆಯಲ್ಲಿಯೂ ಶೈಲಿಯಲ್ಲಿಯೂ ಸಾಹಿತ್ಯ ಸಾಮ್ರಾಜ್ಯದ ಎಲ್ಲೆಯನ್ನು ಮುಟ್ಟಿರುವುದು” – ಇತ್ಯಾದಿ. ಮುದ್ದಣ ಸಂಚಿಕೆ ಪ್ರಕಟವಾಗಿ ಹತ್ತು ವರ್ಷ ಮುಗಿದ ಮೇಲೆ ಶ್ರೀ ಎಸ್.ವಿ. ರಂಗಣ್ಣನವರು ಆ ಎಲ್ಲ ಹೇಳಿಕೆಗಳನ್ನೂ ವಿಮರ್ಶಿಸುತ್ತಾ, “ಅಭಿಮಾನದ ಕಾವು ಇಳಿದು ನಿಷ್ಪಕ್ಷಪಾತದ ವಿಮರ್ಶಾ ಬುದ್ಧಿ ತಲೆಯೆತ್ತಿದೆ. ಮುದ್ದಣನ ಸ್ಥಾನ ಯಾವುದು, ಮೇಲಿನ ಹೊಗಳಿಕೆಗೆ ಅವನು ನಿಜವಾಗಿಯೂ ಪಾತ್ರನೆ ಎಂಬ ವಿಷಯದಲ್ಲಿ ಪ್ರಬಲವಾದ ಸಂದೇಹ ಜಿಜ್ಞಾಸೆಗಳು ಮೂಡಿವೆ. ನಮ್ಮೊಳಗೇ ಯೋಚಿಸಿ ನೋಡೋಣ. ಪ್ರಪಂಚದ ಕವಿಶ್ರೇಷ್ಠರಲ್ಲಿ ಒಬ್ಬನು ನಮ್ಮ ಕನ್ನಡದವನೆಂಬ ಸುದ್ದಿ ಬಂದರೆ ನಮಗೆ ಸಂತೋಷವಲ್ಲವೆ? ನಮ್ಮ ಹೆಮ್ಮೆಯನ್ನು ಹಿಡಿಯಲಾದೀತೆ? ಆದರೆ “ಜೈ” ಎಂದು ಕೂಗಲು ಮಹಡಿಯನ್ನು ಏರುವ ಮೊದಲು ಬಂದಿರುವ ವರ್ತಮಾನ ನಂಬತಕ್ಕದ್ದೇ ಯಥಾರ್ಥವಾದದ್ದೇ ಸ್ಥಿರವಾದದ್ದೇ ಎಂಬ ವಿಚಾರಣೆ ಒಳ್ಳೆಯದು; ಮುಂದೆ ಆಶೆಯು ಕೇವಲ ಗಾಳಿಯಾಗಿಳಿಸುವುದು ಹೋಗುವ ಸಂಭವವಿಲ್ಲ”[7]-ಎಂದು ಎಚ್ಚರಿಸುತ್ತಾರೆ. ಕೃತಿಯ ಬೆಲೆಯನ್ನು ಸರಿಯಾಗಿ ನಿರ್ಣಯಿಸುವುದು ಅತಿರೇಕ ಅಭಿಮಾನಗಳ ಕಿರಿಚಲಲ್ಲ; ತಾಳ್ಮೆಯ ಸಮಾಧಾನದ, ಸಮತೂಕದ ವಿಮರ್ಶನ ಬುದ್ಧಿ. ಒಂದೊಂದು ಸಲ ವಿಮರ್ಶಕ ತಾನೂ ಯಾವುದೋ ಒಂದು ಗುಂಪನ್ನು ಸೇರಿದಾಗ, ಪಂಥ ಪ್ರವೃತ್ತಿಯಿಂದ ಬರುವ ವಿಮರ್ಶೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಆ ಕವಿ ರೋಮ್ಯಾಂಟಿಕ್ ಎಂದೊ, ಈ ಕವಿ ನವ್ಯ ಎಂದೋ ಆ ಕವಿತೆ ಬರೆಯುವ ಗುಂಪಿನವರ ಹಾಗೆ ಈ ಕವಿತೆ ಬರೆಯುವ ಗುಂಪಿನ ಕವಿ ಬರೆಯುತ್ತಿಲ್ಲವೆಂದೂ; ಆದ್ದರಿಂದ ಈತನ ಕವಿತೆ ಸಮರ್ಪಕವಾಗಿಲ್ಲವೆಂದೂ, ಬೇಕಾದಷ್ಟು ಮಾತುಗಳು ತೂರಾಡುವುದನ್ನು ಎಲ್ಲರೂ ಬಲ್ಲರು. ವಿಮರ್ಶಕನೇ ನಿಂತು ಕವಿಗಳನ್ನೂ ಕಾವ್ಯಗಳನ್ನೂ ಒಂದೊಂದು ಗುಂಪನ್ನಾಗಿ ವಿಂಗಡಿಸಿ ಅವರಲ್ಲೇ ತಿಕ್ಕಾಟವನ್ನು ನೋಡುವ ಟಗರು ಕಾಳಗದ ಪ್ರದರ್ಶನಗಳೂ ಸಾಕಷ್ಟಿವೆ. ಇವುಗಳಿಂದ ಕವಿಗಾಗಲಿ, ಕಾವ್ಯಕ್ಕಾಗಲಿ, ಸಹೃದಯರಿಗಾಗಲಿ ಏನೇನೂ ಪ್ರಯೋಜನವಿಲ್ಲ. ಯಾವ ಪಂಥದ ಕಾವ್ಯದ ವಿಚಾರದಲ್ಲಿಯೂ ತನ್ನ ರಸಜ್ಞತೆಯನ್ನು ಕಳೆದುಕೊಳ್ಳದಿರುವ ವಿಮರ್ಶಕರಿಂದ ಹೆಚ್ಚು ಲಾಭವುಂಟು.
ಕೆಲವು ಕೃತಿಗಳು ಬಹುಬೇಗ ಜನಪ್ರಿಯವಾಗಬಹುದು, ಮತ್ತೆ ಕೆಲವು ಆಗದಿರಬಹುದು. ಕೃತಿಯನ್ನು ಕುರಿತು ಬರುವ ಈ ‘ಜನಪ್ರಿಯತೆ’ ಎಷ್ಟೋ ಸಲ ವಿಮರ್ಶಕರನ್ನೂ ತಪ್ಪು ಹಾದಿಗೆಳೆಯುವ ಸಂಭವವಿದೆ. ‘ಜನಪ್ರಿಯತೆ’ಯನ್ನೆ ಹಲವು ಸಲ ವಿಮರ್ಶಕರು ಕೃತಿಯ ಬೆಲೆಯನ್ನಳೆಯುವ ಮಾನದಂಡವನ್ನಾಗಿ ಮಾಡಿಕೊಳ್ಳುವುದು ಇದರಿಂದಾಗುವ ಅಪಾಯಗಳಲ್ಲಿ ಒಂದು. ನಿದರ್ಶನಕ್ಕೆ ಈ ಕೆಲವು ಸಂಗತಿಗಳನ್ನು ಗಮನಿಸಬಹುದು: ಒಂದು ಕವನ ಸಂಗ್ರಹಕ್ಕೆ (ಅದೂ ಆ ಕವಿಯ ಮೊದಲ ಸಂಗ್ರಹ) ಸುಪ್ರಸಿದ್ಧರಾದ ಕಾದಂಬರಿಕಾರರೊಬ್ಬರು ಮುನ್ನುಡಿ ಬರೆಯುತ್ತಾ “…ರೊಬ್ಬರನ್ನು ಹೊರತು ಪಡಿಸಿದರೆ… ರಷ್ಟು (ಈ ಕವನಸಂಗ್ರಹದ ಕವಿಯಷ್ಟು) ಬೇಗ ಖ್ಯಾತನಾಮರಾದ ಕನ್ನಡ ಕವಿ ಸಿಕ್ಕುವುದಿಲ್ಲ” ಎನ್ನುತ್ತಾರೆ. ಉದ್ದ್ರಂಥವೊಂದರಲ್ಲಿ, ವಿಮರ್ಶಕರೊಬ್ಬರು “ರಾಜರತ್ನಂರವರ ‘ಯೆಂಡ್ಕುಡಕನ ಪದಗಳು’ ಪ್ರಕಟವಾದಾಗ ಅದು ನಾಡಿನ ಅನೇಕ ರಸಿಕರ ಲಕ್ಷ್ಯವನ್ನು ಸೆಳೆದುಕೊಂಡಿತು. ಈಗ ಅದರ ಲೋಕಪ್ರಿಯತೆ ತೀರ ಕಡಮೆಯಾಗಿದೆ;”[8] “ಕುವೆಂಪುರವರ ಈ ಕಾದಂಬರಿ (ಕಾನೂರು ಹೆಗ್ಗಡತಿ) ಬಹಳ ಹಿಂದೆಯೆ ಪ್ರಕಟವಾಗಿದ್ದರೂ ಅದು ಜನಪ್ರಿಯತೆಯನ್ನು ಗಳಿಸಲಿಲ್ಲ.”[9] – ಎಂದು ಬರೆಯುತ್ತಾರೆ. ಈ ಎಲ್ಲ ಹೇಳಿಕೆಗಳಲ್ಲಿನ ವಾಸ್ತವ ಸಂಗತಿ ಸತ್ಯದೂರವಾದದ್ದು. ಒಂದು ವೇಳೆ ಅಂಥ ಮಾತು ಸತ್ಯವಾದರೂ ಅದು ಕೃತಿವಿಮರ್ಶೆಯಲ್ಲಿ ಅತ್ಯಂತ ಗೌಣವಾದುದು; ಅಂಥ ಮಾತು ವಿಮರ್ಶೆಯಿಂದ ಬೇರೆಯಾದ, ಕೃತಿಗೆ ಸಂದ ಜನಪ್ರಿಯತೆಯನ್ನು ಕುರಿತ ಮಾತಾಗಿ ಇರಬಹುದು. ಆದರೆ ಇಲ್ಲಿ ನಮಗೆ ಪ್ರಕೃತವಾದುದು, ಜನಪ್ರಿಯವಾಗಿರುವುದು ಮತ್ತು ಆಗಿಲ್ಲದಿರುವುದು ಎಷ್ಟರಮಟ್ಟಿಗೆ ವಿಮರ್ಶಕನ ದೃಷ್ಟಿಯಲ್ಲಿ ಕೃತಿಯ ಬೆಲೆಯನ್ನು ನಿರ್ಣಯಿಸುವುದರಲ್ಲಿ ನೆರವಾಗುತ್ತದೆ ಎಂಬ ಪ್ರಶ್ನೆ. ಬದುಕಿನ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಜನ ಬಹುಬೇಗ ಪ್ರಸಿದ್ಧರಾಗುವಂತೆ ಸಾಹಿತ್ಯ ಕ್ಷೇತ್ರದಲ್ಲಿಯೂ ಲೇಖಕ ಬಹು ಬೇಗ ಪ್ರಸಿದ್ಧನಾಗಬಹುದು. ಅದು ವ್ಯಕ್ತಿಯ ಅಥವಾ ಕೃತಿಯ ಹಿರಿಯತನಕ್ಕೆ ಸಾಕ್ಷಿಯಾಗಲಾರದೆಂದು ಹೇಳುವ ಧೈರ‍್ಯವಿಲ್ಲದಿದ್ದರೂ, ಈ ಪ್ರಸಿದ್ಧಿ ಬೇರೆಯ ಸಾವಿರ ಕಾರಣಗಳಿಂದಲೂ ಬರಲು ಸಾಧ್ಯವಿದೆ ಎಂಬುದನ್ನು ಮರೆಯಬಾರದು. ಜನಪ್ರಿಯತೆಯಿಂದ ತತ್ಕಾಲದಲ್ಲಿ ಒಂದು ಕೃತಿ ಉಳಿದ ಕೃತಿಗಳಿಗಿಂತ ಶ್ರೇಷ್ಠವೆಂಬ ಭಾವನೆ ಉಂಟಾಗಬಹುದು. ಆದರೆ ಈ ‘ಜನಪ್ರಿಯತೆ’ ಎನ್ನುವುದು ಈ ಒಂದು ಕೃತಿಯ ವಿಚಾರದಲ್ಲಿ ಎಲ್ಲ ಕಾಲಕ್ಕೂ ಉಳಿಯಬಹುದಾದುದೋ ಇಲ್ಲವೋ, ಅಥವಾ ಜನಪ್ರಿಯತೆಯಿಲ್ಲದ ಹಾಗೂ ಜನಪ್ರಿಯತೆ ಕಡಮೆಯಾದ ಕೃತಿಗಳು ಶ್ರೇಷ್ಠ ಕೃತಿಗಳಾಗಿಲ್ಲವೊ ಎಂಬುದನ್ನು ವಿಮರ್ಶಕ ಯೋಚಿಸಬೇಕು ಹಾಗೆ ನೋಡಿದರೆ ಷೇಕ್ಸ್‌ಪಿಯರನ ಕಾಲದಲ್ಲಿ, ಅವನಿಗೇ ಇಲ್ಲದ ಜನಪ್ರಿಯತೆಯನ್ನು ಗಳಿಸಿಕೊಂಡ ಎಷ್ಟೋ ನಾಟಕಕಾರರಿದ್ದರಂತೆ; ಇಂದು ಅವರ ಹೆಸರು ಸಂಶೋಧಿಸಿದರೆ ಸಿಕ್ಕಬಹುದೇನೊ! ಹಾಪ್‌ಕಿನ್ಸ್ ಕವಿ ಬದುಕಿದ್ದಾಗ ಅವನನ್ನು ಕೇಳುವವರೇ ಇಲ್ಲ; ಆತ ತೀರಿಹೋದ ಎರಡು ದಶಕಗಳ ಮೇಲೆ ಆತನನ್ನು ಆಧುನಿಕ ಕಾವ್ಯದ ನೇತಾರನೆಂದು ಬಲ್ಲವರು ಪ್ರಶಂಸಿಸಿದ್ದಾರೆ. ಆದಕಾರಣ ಬಹು ಜನಾಭಿಪ್ರಾಯದ ಉತ್ಸಾಹಾತಿರೇಕರೂಪದ ಕೂಗನ್ನು ವಿಮರ್ಶಕ ಸರಿಯಾಗಿ ವಿಮರ್ಶಿಸದೆ, ಕೃತಿಯ ಮಾನದಂಡವನ್ನಾಗಿ ಬಳಸಿಕೊಳ್ಳಬಾರದು.
ವಿಮರ್ಶಕರ ಅಜಾಗರೂಕತೆಯಿಂದಾಗಲಿ, ಅಥವಾ ಅಸಮರ್ಥತೆಯಿಂದಾಗಲಿ ಕೃತಿಯನ್ನು ಕುರಿತು, ಕೃತಿಭಾಗಗಳನ್ನು ಕುರಿತು ವಿಮರ್ಶೆ ತಪ್ಪಾಗುವುದೂ ಉಂಟು : ಶಾಕುಂತಲ ನಾಟಕದಲ್ಲಿ ಬರುವ ‘ದೂರ್ವಾಸಶಾಪ’ದ ಪ್ರಸಂಗವನ್ನು ಕುರಿತು, “ಎರಡನೆಯ ಅಮಾನುಷ ವ್ಯಾಪಾರ ದೂರ್ವಾಸ ಶಾಪ. ಕಣ್ವಾರಣ್ಯದಲ್ಲಿ ಮುನಿಯೋರ್ವ ಸಿಟ್ಟಿನ ನುಡಿಯನ್ನು ನುಡಿಯುವುದೇನು, ಹಸ್ತಿನಾವತಿಯಲ್ಲಿ ಅರಸನ ಸ್ಮೃತಿಯಿಂದ ವಿವಾಹ ವೃತ್ತಾಂತವೆಲ್ಲ ಅಳಿಸಿಹೋಗುವುದೆಂದರೇನು! ಕಾರ‍್ಯಕಾರಣ ಸಂಬಂಧದಿಂದ ಕೊಂಡಿಗೆ ಕೊಂಡಿ ತಗುಲಿಕೊಳ್ಳುವಂತೆ ವಸ್ತು ವಿನ್ಯಾಸಕ್ಕೆ ಹೊಂದಿಕೊಳ್ಳದೆ ಹೊರಗಡೆಗೆ ಸೇರಿದ ಘಟನೆ ಅದು…. ತಿರುಗಿ ತಿರುಗಿ ತನ್ನ ಕೃತಿಗಳಲ್ಲಿ ಶಾಪವನ್ನು ತಂದಿಡುತ್ತಿದ್ದುದು ವಾಡಿಕೆಯಾಗಿದ್ದರಿಂದಲೋ ಏನೋ, ಅಂತೂ ದಿವ್ಯಸ್ಫೂರ್ತಿಯಿಂದ ಕಂಡುಕೊಂಡ ನಲ್ಲನಲ್ಲೆಯರನ್ನು ಪ್ರತ್ಯೇಕಿಸುವ ಸ್ವಾರಸ್ಯ ಉಪಾಯವನ್ನು ಕಾಳಿದಾಸ.”[10] “ಒಂದಲ್ಲ ಒಂದು ವಿಧದ ಶಾಪವನ್ನು ವಸ್ತುವಿಲಾಸದ ಕೀಲುಮೊಳೆಯಾಗಿ ಜೋಡಿಸುವುದರಲ್ಲಿ “ಶಾಕುನ್ತಲ”ದ ಹೊತ್ತಿಗೇ ನುರಿತ ಕೈಯಾಗಿದ್ದ ಕಾಳಿದಾಸ.”[11] ಎಂದು ಶ್ರೀ ರಂಗಣ್ಣನವರು ಬರೆಯುತ್ತಾರೆ. ಅವರ ಪ್ರಕಾರ ಅದೊಂದು ಅಮಾನುಷ (ಅತಿಮಾನುಷ ಎಂಬ ಮಾತು ಇಲ್ಲಿಗೆ ಸರಿ) ಘಟನೆ. ಅದು ನಾಟಕದ “ವಸ್ತು ವಿನ್ಯಾಸಕ್ಕೆ ಹೊಂದಿಕೊಳ್ಳದೆ ಹೊರಗಡೆಗೆ ಸೇರಿದ ಘಟನೆ” ಯಂತೆ! ಶಾಕುಂತಲ ನಾಟಕದ ದೂರ್ವಾಸ ಶಾಪ ಕೇವಲ ಅಭ್ಯಾಸಬಲದಿಂದ, ‘ತಿರುಗಿ ತಿರುಗಿ ತನ್ನ ಕೃತಿಗಳಲ್ಲಿ ಶಾಪವನ್ನು ತಂದಿಡುತ್ತಿದ್ದುದು ವಾಡಿಕೆಯಾಗಿದ್ದರಿಂದ’ ಈ ವಿಚಾರದಲ್ಲಿ ಕವಿ ಸಾಕಷ್ಟು ‘ನುರಿತ’ದ್ದರಿಂದ ತಂದಿದ್ದಾನೆ ಎನ್ನುವ ಈ ಮಾತು ವಿಮರ್ಶಕರ ಅಜಾಗರೂಕತೆಯಿಂದ ಬಂದಿರಬೇಕು. ಏಕೆಂದರೆ ಕಾಳಿದಾಸ ನಲ್ಲನಲ್ಲೆಯರನ್ನು ಬೇರ್ಪಡಿಸುವ ಈ ಉಪಾಯವನ್ನು ‘ದಿವ್ಯಸ್ಫೂರ್ತಿಯಿಂದ ಕಂಡುಕೊಂಡ’ನೆಂದು ಈ ಪ್ರಸಂಗವೂ ಉಳಿದ ಶಾಪಗಳಂತೆ ‘ವಸ್ತುವಿಲಾಸದ ಕೀಲುಮೊಳೆ’ ಯಾಗಿದೆಯೆಂದು ಲೇಖಕರು ಒಪ್ಪಿಕೊಂಡಿದ್ದಾರೆ. ಮುಂದೆ ಮತ್ತೊಮ್ಮೆ “ನಾಟಕದ ಕಥಾಸರಣಿಗೆ ಅತ್ಯಗತ್ಯ ದೂರ್ವಾಸ,”[12] “ದೂರ್ವಾಸನ ಆಗಮನ ದಿಟವಾಗಿ ನಾಟಕೀಯ, ಉಜ್ವಲವಾಗಿ ನಾಟಕೀಯ”[13] – ಎನ್ನುತ್ತಾರೆ. ಈ ಮಾತು, – ದೂರ್ವಾಸ ಶಾಪ “ವಸ್ತುವಿನ್ಯಾಸಕ್ಕೆ ಹೊರಗಡೆಯಿಂದ ಅಂಟಿಕೊಂಡ ಘಟನೆ” – ಎಂಬ ಹಿಂದಿನ ಹೇಳಿಕೆಯನ್ನು ವಿರೋಧಿಸುತ್ತಿದೆ ಅಥವಾ ತಿದ್ದಿಕೊಂಡಿದೆ ಎಂದು ಭಾವಿಸಬೇಕಾಗುತ್ತದೆ. ವಾಸ್ತವವಾಗಿ ದೂರ್ವಾಸಶಾಪದ ಔಚಿತ್ಯವನ್ನರಿಯಬೇಕಾದರೆ, ಭಾರತೀಯ ಋಷಿ ಮನೋಧರ್ಮದ ಋಷಿಪದವಿಯ ನಿಜವಾದ ಅಂತರಾರ್ಥವನ್ನು ಸರಿಯಾಗಿ ಯೋಚಿಸಬೇಕು. ದುರ್ವಾಸಶಾಪ ಈ ನಾಟಕದಲ್ಲಿ ಯಾವ ಸತ್ಯಕ್ಕೆ ಪ್ರತಿಮೆಯಾಗಿದೆ ಎಂಬುದನ್ನು ಪರಿಶೀಲಿಸಬೇಕು. ಹಾಗಿಲ್ಲದಿದ್ದರೆ ಅದು ಕೇವಲ ಒಂದು ಮಂತ್ರವಿಲ್ಲದ ತಂತ್ರವಾಗಿ ಮಾತ್ರ ಕಂಡೀತು. ಕುವೆಂಪುರವರ ರಾಮಾಯಣದರ್ಶನದ ಛಂದಸ್ಸನ್ನು ಕುರಿತು ವಿಮರ್ಶಕರೊಬ್ಬರು, “ಚಿತ್ರಾಂಗದಾ ರಾಮಾಯಣದರ್ಶನದಂಥ ಮಹಾಕಾವ್ಯಗಳಲ್ಲಿ ಅವರು ಸರಳ ರಗಳೆಯನ್ನು ಉಪಯೋಗಿಸಿದ್ದಾರೆ.”[14] “ಚಿತ್ರಾಂಗದಾ” ಹಾಗೂ “ರಾಮಾಯಣ ದರ್ಶನಂ” ದಂಥ ಎರಡು ಮಹಾಕಾವ್ಯಗಳೂ ಹೊರಬಿದ್ದಿವೆ,”[15] “ಎರಡು ಸಂಪುಟಗಳಲ್ಲಿ ತುಂಬಿರುವ ಈ ಕಾವ್ಯ ಸರಳ ರಗಳೆಯಲ್ಲಿ ಬರೆಯಲ್ಪಟ್ಟಿದೆ.” ಎನ್ನುತ್ತಾರೆ. ಈ ಮಾತುಗಳಲ್ಲಿ ‘ಚಿತ್ರಾಂಗದಾ’ವನ್ನೂ ಮಹಾಕಾವ್ಯದ ನಿಲುವಿಗೆ ಏರಿಸಿರುವ ಪ್ರಮಾದ ಹಾಗಿರಲಿ, ‘ರಾಮಾಯಣ ದರ್ಶನಂ’ದ ಛಂದಸ್ಸು ‘ಸರಳ ರಗಳೆ’ ಎಂದು ರಾಗವೆಳೆದಿರುವುದು ಸೋಜಿಗವಾಗಿದೆ. ವಾಸ್ತವವಾಗಿ ಕವಿಗಳೇ ಅದನ್ನು ಮಹಾಛಂದಸ್ ಎಂದು ಕರೆದಿದ್ದಾರೆ. ಸರಳ ರಗಳೆಗೂ ಈ ಛಂದಸ್ಸಿಗೂ ಏನಾದರೂ ವ್ಯತ್ಯಾಸವಿದೆಯೆ ಎಂಬುದನ್ನು ತಿಳಿಯಲು ಲೇಖಕರು ಪ್ರಯತ್ನಿಸಿದ್ದರೆ ಹೆಚ್ಚು ಲಾಭವಾಗುತ್ತಿತ್ತು. “ಪುಟ್ಟ ವಿಧವೆ’ ಎನ್ನುವುದು ಬೇಂದ್ರೆಯವರ ಕವನಗಳ ರಾಶಿಯಲ್ಲಿ ನಿಗಿ – ನಿಗಿ ಉರಿಯುವ ಕೆಂಡ.”[16] ಅದರ ಕೆಲವು ಪಂಕ್ತಿಗಳನ್ನು ಕುರಿತು ಕವಿಯೊಬ್ಬರು, “ಇಲ್ಲಿ ಬರುವ ವಿಧವೆ ವಯಸ್ಸಿನಲ್ಲಿ ಚಿಕ್ಕವಳು; ಆಸೆ ಇನ್ನೂ ಹೂವಾಗಿರುವಾಗಲೇ ಇವಳಿಗೆ ವಿಧವೆಯ ದುಃಸ್ಥಿತಿ ಸಂದಿತು. ತಲೆಭಾರ ಇಳಿದಿತ್ತು; ಅಂಗಾರ ಬೆಳೆದಿತ್ತು, ಮೈಯನ್ನು ಮುಚ್ಚಿತ್ತು ಕೆಂಪುಸೀರೆ; ಈಕೆ ಸೌಭಾಗ್ಯವತಿಯಾಗಿದ್ದ ಕಾಲದಲ್ಲಿ ಮಹಾರಾಯ ಗಂಡ ಏನೇನು ಚಿತ್ರಹಿಂಸೆಯಿತ್ತು ಕಾಡಿದ್ದನೋ; ಆತ ದುರ್ದೈವದಿಂದ ಬಾಳ್ಮರೆಯಾದ ಮೇಲೆ ಹಿತೈಷಿಗಳೂ, ಧರ್ಮೋದ್ಧಾರಕರೂ ಸೇರಿ ಇವಳಿಗೆ ಶಾಶ್ವತ ರಕ್ಷಣೆಯನ್ನು ಶಾಸ್ತ್ರದ ಹೆಸರಿನಲ್ಲಿ ದಾನ ಮಾಡಿದ್ದಾರೆ”[17] – ಎಂದು ಬರೆಯುತ್ತಾರೆ. ಈ ವಿವರಣೆಯಲ್ಲಿ ಅಂಥ ಹೊಸದೇನೂ ಇಲ್ಲ. ಅದರ ಬದಲು ಕಣ್ಮರೆಯಾದ ಗಂಡನ ಬಗೆಗೆ ಆ ಪದ್ಯದಲ್ಲಿ ಇಲ್ಲದ, ಹಾಗೂ ಸಲ್ಲದ ಒಂದು ಅಜಾಗರೂಕತೆಯ ಮಾತು ಕವಿಯ ಆಶಯಕ್ಕೇ ವಿರುದ್ಧವಾಗಿದೆ. “ಆಕೆ ಸೌಭಾಗ್ಯವತಿಯಾಗಿದ್ದ ಕಾಲದಲ್ಲಿ ಮಹಾರಾಯ ಗಂಡ ಏನೇನು ಚಿತ್ರಹಿಂಸೆಯಿತ್ತು ಕಾಡಿದ್ದನೋ” ಎಂಬ ಮಾತು ಅತ್ಯಂತ ಅನಗತ್ಯವಾದದ್ದು. ಆಗ ತಾನೆ ಅರಳುತ್ತಿದ್ದ ಹೊಸ ಹರೆಯದ ದಾಂಪತ್ಯದಲ್ಲಿ ಒದಗಿದ ಪತಿವಿಯೋಗದ ದಾರುಣತೆ ಮತ್ತು ಆ ವಿಧವೆಯನ್ನು ಕುರಿತು ಶಾಸ್ತ್ರ ಹೆಸರಿನಲ್ಲಿ ಸಮಾಜ ನಡೆಯಿಸಿಕೊಂಡ ರೀತಿಯ ಕಟುವಾದ ವಿಡಂಬನೆ ಇದೇ ಅಲ್ಲಿ ಪ್ರಧಾನವಾದದ್ದು. ಇದನ್ನೆಲ್ಲಾ ನೋಡಿದರೆ ಅನ್ನಿಸುತ್ತದೆ : “ಕೃತಿ ವಿಚಾರದಲ್ಲಿ ತಲೆದೋರುವ ಅಭಿಪ್ರಾಯ ಭೇದಗಳಿಗೆ ಹಾಗೂ ತೀರ್ಮಾನದ ವ್ಯತ್ಯಾಸಗಳಿಗೆ, ವಿಮರ್ಶಕ ಕೃತಿಕಾರನ ಆಶಯವನ್ನು ಗ್ರಹಿಸುವುದರಲ್ಲಿ ಉಂಟಾಗುವ ಅಸ್ಪಷ್ಟತೆ, ಮತ್ತು ಸಹಾನುಭೂತಿ ಅಭಿರುಚಿಗಳ ಅರಕೆ, ಅರ್ಧ ಅಥವಾ ಅದಕ್ಕಿಂತಲೂ ಕಡಿಮೆ ಕಾರಣಗಳಾದರೆ, ಕಲಾಕೃತಿಯ ವಿಚಾರದಲ್ಲಿ ಖಚಿತವಾದ ಅಭಿಪ್ರಾಯವಿಲ್ಲದಿರುವಿಕೆ ಇನ್ನುಳಿದರ್ಧ ಅಥವಾ ಅದಕ್ಕೂ ಮಿಗಿಲಾದ ಕಾರಣವಾಗುತ್ತದೆ.”[18]
ವಿಮರ್ಶಕರ ಸುತ್ತ ಅವರ ಅಭಿಪ್ರಾಯಗಳನ್ನೆ ಅನುಸರಿಸಿ ಕಿರಿಚುವ ತಂಡವೊಂದು ಎಲ್ಲ ಕಾಲದಲ್ಲಿಯೂ ಗೊಂದಲವನ್ನು ಉಂಟುಮಾಡುತ್ತದೆ. ಸಮರ್ಥರಾದ ವಿಮರ್ಶಕರು ಎಲ್ಲೋ ಕೆಲವರು ಮಾತ್ರ; ಅವರು ಎಂದೋ ಯಾವುದೋ ಕವಿಯನ್ನು ಕುರಿತು ಕೊಂಚ ಬೆಚ್ಚಿಬೀಳುವಂತಹ ಮಾತನ್ನು ಹೇಳಬಹುದು. ಆಗ ಮರಿವಿಮರ್ಶಕರು ಅದನ್ನೆ ಹುಯ್ಯಲೆಬ್ಬಿಸಿ ಅದು ತಮ್ಮ ಅಭಿಪ್ರಾಯವೆಂಬಂತೆ ಸಾರಿ ಹೇಳುವುದುಂಟು. ಆದರೆ ಮುಂದೆ ಸಮರ್ಥನಾದ ವಿಮರ್ಶಕ ಕಾಲಕ್ರಮದಲ್ಲಿ ಹಿಂದೆ ಹೇಳಿದ ಕೃತಿವಿಚಾರದ ತೀರ್ಪನ್ನು ತಿದ್ದಿಕೊಂಡರೆ ಅಥವಾ ಬದಲಾಯಿಸಿದರೆ, ಪೆಚ್ಚಾಗುವವರು ಈ ಮರಿವಿಮರ್ಶಕರೇ! ಹೀಗಾಗಿ ಇಂಥವರು ಸ್ವತಂತ್ರವಾಗಿ ಆಲೋಚಿಸದೆ ಯಾರೋ ಒಬ್ಬ ದೊಡ್ಡವರು ಹೇಳಿದ್ದನ್ನೆ ತಾವೂ ಹೇಳುತ್ತಾರೆ. ವಿಮರ್ಶೆಯ ಆಚಾರ್ಯನೊಬ್ಬನ ಅಭಿಪ್ರಾಯವನ್ನು ಗಿಳಿಪಾಠ ಒಪ್ಪಿಸುವ ವಿಮರ್ಶಕರೇ ಹೆಚ್ಚು. ಅಥವಾ ಬಹುಜನ ಪ್ರಚಲಿತವಾದ ಅಭಿಪ್ರಾಯಕ್ಕೆ ತಲೆ ಹಾಕುವ ‘ಹೌದಪ್ಪ’ಗಳೇ ಹೆಚ್ಚು. ಮತ್ತೆ ಕೆಲವರು ಇರುಳು ತೆಗಳಿದ್ದನ್ನು ಬೆಳಗ್ಗೆ ಹೊಗಳತಕ್ಕವರು; ಸದಾ ತಮ್ಮ ಕಟ್ಟಕಡೆಯ ನಿಲುವೇ ಸಮರ್ಪಕವೆಂದು ಭಾವಿಸುತ್ತಾರೆ ಇಂಥವರು.[19]
ಎಷ್ಟೋ ವೇಳೆ ಇಂಥ ರಭಸವಿಮರ್ಶೆಯಿಂದ ತೊಂದರೆಯಾಗುವುದು ವಿಮರ್ಶಕರಿಗೇ ಹೊರತು ಕವಿಗಳಿಗಲ್ಲ. “ನಾಯಿ ಕಚ್ಚಿದವರು ಗುಣ ಹೊಂದಿದ, ಆದರೆ ಕಚ್ಚಿದ ನಾಯಿಯೆ ಸತ್ತು ಹೋಯಿತು[20] – ಎಂಬಂತಾಗಬಹುದು ಎಷ್ಟೋ ಸಲ! ನಿಜವಾದ ವಿಮರ್ಶೆ ಎನ್ನುವುದು ಎಷ್ಟು ಜವಾಬ್ದಾರಿಯುತವಾದ, ಆಳವಾದ ಪರಿಶ್ರಮದ   ಪರಿಣಾಮ!
ಹಾಗಾದರೆ ಕೃತಿಯನ್ನು ಕುರಿತ ತೀರ್ಪು ಹೇಗಿರಬೇಕು, ಹೇಗಿರಬಾರದು ಎನ್ನುವುದನ್ನು ವಿಮರ್ಶಕರಾದವರು ಯೋಚಿಸಬೇಕು. ಕವಿಕೃತಿಯನ್ನು ಕುರಿತು ವಿಮರ್ಶಕ ಹೇಳುವ ಮಾತು ಖಚಿತವಾಗಿರಬೇಕು; ಸರಳವಾಗಿರಬೇಕು; ವಿಮರ್ಶಕನ ದಿಟ್ಟತನವನ್ನು ನಮ್ರತೆಯಿಂದ ಪ್ರಕಟಪಡಿಸುವಂತಿರಬೇಕು. ಷಡಕ್ಷರಿಯನ್ನು ಕುರಿತು “ಅವನು ಮಹಾಕವಿಯೆಂದು ಕೆಲವರು ಭಾವಿಸುತ್ತಾರೆ. ನಮ್ಮ ನಮ್ರವಾದ ತಿಳಿವಳಿಕೆಗೆ ಅವನು ಮಹಾಕವಿಯ ತೇಜೋಂಶವುಳ್ಳವನೇ ಹೊರತು ಮಹಾಕವಿಯ ಸಿದ್ಧಿಪಡೆದವನಲ್ಲ;”[21] ಪೊನ್ನನ ‘ಶಾಂತಿಪುರಾಣವು’ “ಶ್ರೇಷ್ಠಕೃತಿಯೆಂದು ಹೊಗಳುವವರು ಪಂಡಿತರಾದರೂ ಇರಬೇಕು, ಮೂರ್ಖರಾದರೂ ಇರಬೇಕು.’[22] ಹರಿಹರನ “ಈ ವ್ಯಕ್ತಿತ್ವದಲ್ಲಿ ಸಮಗ್ರತೆಯಿದೆ, ಸಮತೂಕವಿಲ್ಲ; ಉತ್ಸಾಹವಿದೆ, ನಿಗ್ರಹವಿಲ್ಲ. ಇದರಲ್ಲಿಯೇ ಇದರ ಸೊಗಸಿದೆ.”[23] ಮುದ್ದಣ ಕವಿಗೆ “ಕಾವ್ಯಪ್ರಪಂಚದಲ್ಲಿ ಅವನಿಗೊಂದು ಪ್ರತ್ಯೇಕ ಸ್ಥಾನವು ನಿಶ್ಚಯವಾಗಿದೆ ಎಂದು ನಂಬಿದರೆ ಕವಿಗೆ ಮಾನ್ಯ, ವಿಮರ್ಶಕ ಜನ್ಮವು ಸಾರ್ಥಕ. ಚಿತ್ರವು ಸತ್ಯವಾಗಿ ಸಾಮಾನ್ಯ; ಚೌಕಟ್ಟು ಶಿವನಾಣೆ ಸುವರ್ಣ.”[24]- ಇಂಥ ಮಾತುಗಳಲ್ಲಿ ಸಮತೂಕದ ವಿಮರ್ಶೆ ವ್ಯಕ್ತವಾಗಿದೆ. ವಿಮರ್ಶೆಯಲ್ಲಿ ನೇರವಾದ ಮಾತನ್ನು ಹೇಳಿದರೆ ಯಾರು ಏನೆಂದುಕೊಂಡಾರೋ ಎಂದು ಹಿಂಜರಿದು ಅಡ್ಡಗೋಡೆಯ ಮೇಲೆ ದೀಪವಿರಿಸಿದಂತೆ ಹೇಳುವ ದಾಕ್ಷಿಣ್ಯವಿಮರ್ಶೆ ಸ್ವಾಗತಾರ್ಹವಲ್ಲ. “ಇದು ಮಹಾಕಾವ್ಯವಲ್ಲದಿದ್ದರೂ, ಮೇಲ್ತರಗತಿಯ ಕಾವ್ಯವೆನ್ನಲಡ್ಡಿಯಿಲ್ಲ; ಇದು ಲಘುಕಾವ್ಯವಲ್ಲದಿದ್ದರೂ ಮಧ್ಯಮ ಕಾವ್ಯವಲ್ಲ; ಈ ಕವಿಯ ಶಕ್ತಿ ಮೇಲಾದುದಾದರೂ ಮಹತ್ತಾದುದಲ್ಲ ರೀತಿಯ ಮಾತುಗಳಲ್ಲಿ ಖಚಿತತೆಯ ಅಭಾವವಿದೆ. ಅಷ್ಟೇ ಅಲ್ಲದೆ ತೀರ ಸಂದಿಗ್ಧವಾದ ರೀತಿಯಲ್ಲಿ ಮಾತನ್ನು ಬಳಸುವ ಚಮತ್ಕಾರ ವಿಮರ್ಶೆಯೂ ಒಂದುಂಟು. ಈ ಕವಿ “ನಿತ್ಯಜೀವನದ ಸಮಸ್ಯೆಗಳನ್ನೆಲ್ಲ ಹಿಂದಕ್ಕೆ ತಳ್ಳಿ, ಕಲೆಯಲ್ಲಿ ಆನಂದವನ್ನು ಚಿತ್ರಿಸಹೋಗಿದ್ದಾರೆ.”[25] - ಎನ್ನುವಂಥ ಈ ಮಾತನ್ನು ಗುಣಪ್ರಶಂಸೆಗೂ ಹೇಳಬಹುದು ದೋಷನಿರ್ದೇಶನಕ್ಕೂ ಹೇಳಬಹುದು. ವಿಮರ್ಶೆಯಲ್ಲಿ ಧೈರ‍್ಯವಿರಬೇಕು ಎಂದರೆ ಅದು ಕಟುವಾಗಿ, ಖಂಡಿಸುವಂತಿರಬೇಕು ಎಂದಲ್ಲ; ಅಥವಾ ಬಹುಕಾಲದಿಂದ ಒಪ್ಪಿಕೊಂಡು ಬಂದ ಅಭಿಪ್ರಾಯವೊಂದನ್ನು ಖಂಡಿಸಿ ಬೇರೆಯ ಮಾತನ್ನು ಹೇಳುವುದರಲ್ಲಿಯೆ ವಿಮರ್ಶಕನ ಸಾಹಸ ವ್ಯಕ್ತವಾಗಬೇಕು ಎಂದಲ್ಲ. ಶಾಕುಂತಲ ನಾಟಕದ ನಾಲ್ಕನೆಯ ಅಂಕದಲ್ಲಿ ಬರುವ ಕಣ್ವರ ಉಪದೇಶ ಬಹುಕಾಲದಿಂದ ಅತ್ಯಂತ ಸೊಗಸಾದ ಭಾಗವೆಂದು ಪರಿಗಣಿತವಾಗಿದೆ. ಅದನ್ನು ಕುರಿತು ಶ್ರೀ ರಂಗಣ್ಣನವರು “ನಾಲ್ಕನೇ ಅಂಕದ ಕೊನೆಯಲ್ಲಿ ಕಣ್ವಚರ್ಯೆ ಶುಷ್ಕೋಪನ್ಯಾಸದ ಕಾರಣದಿಂದ ಅಸ್ವಾಭಾವಿಕವಾಗುತ್ತದೆ. ಪೂರ್ವಾಪರ ವಿರೋಧದಿಂದ ಕಲುಷಿತವಾಗುತ್ತದೆ….. ನಾಟಕದ ಕವಿಯಾದರೋ ಅನಾವಶ್ಯಕವಾಗಿ ಉಪಾಧ್ಯಾಯ -ನಾಗಿದ್ದಾನೆ ಹೊತ್ತಲ್ಲದ ಹೊತ್ತಿನಲ್ಲಿ. ವಾಚಾಳಿಯಾಗಿದ್ದಾನೆ ವಾಕ್ಸಂಯಮವಿರಬೇಕಾದ ಸ್ಥಿತಿಯಲ್ಲಿ”[26] – ಎನ್ನುತ್ತಾರೆ. ಅಷ್ಟೇ ಅಲ್ಲ ಕಣ್ವರು ಇಲ್ಲಿ ‘ವಾತ್ಸಲ್ಯಪೀಡಿತ ಪಿತ’ ರಂತೆ. ಅವರ ಮಾತು ‘ಶುಷ್ಕವೂ ಅನಗತ್ಯವೂ ಆದ ಸಾಮಾನ್ಯ ಬುದ್ಧಿವಾದ’ವಂತೆ! ವಿರಹ-ಮಿಲನಗಳಂಥ ಸನ್ನಿವೇಶಗಳಲ್ಲಿ ಉಂಟಾಗುವ ಮಾನವ ಮನೋಧರ್ಮದ ನವುರಾದ ಭಾವನೆಗಳನ್ನರಿಯದವರು ಇಂಥ ಮಾತನ್ನು ಒಪ್ಪಬಹುದು. ಕಣ್ವರು ಇಲ್ಲಿ ‘ವಾತ್ಸಲ್ಯ ಪೀಡಿತ ಪಿತ’ರಾಗಿದ್ದಾರೆಯೆ? ಎಂದರೆ ಕಣ್ವರು ಈ ಸಂದರ್ಭದಲ್ಲಿ ಕಠೋರ ತಪಸ್ಸಿನಿಂದ ಶುಷ್ಕವಾದ ಕೊರಡಾಗಿರಬೇಕಾಗಿತ್ತೆಂದು ಲೇಖಕರ ಅಭಿಪ್ರಾಯವೇ? ಸದ್ಯ ಸುದೈವದಿಂದ ಅವರು ಹಾಗಾಗಿಲ್ಲ. ಕಾಡಿನಲ್ಲಿ ವಾಸಿಸುವ ತಮ್ಮಂತಹ ಋಷಿಗಳಿಗೇ, ಅದರಲ್ಲೂ ಸಾಕುಮಗಳಾದ ಶಕುಂತಲೆಯನ್ನು ಅಗಲುವ ತಮಗೇ ಇಷ್ಟೊಂದು ವ್ಯಥೆಯಾಗುವುದಾದರೆ, ಲೋಕದಲ್ಲಿ ತಮ್ಮ ತನೂಭವೆಯರನ್ನು ಪತಿಗೃಹಕ್ಕೆ ಕಳುಹಿಸುವ ತಂದೆ ತಾಯಿಯರು ಇನ್ನೆಷ್ಟು ನೋವನ್ನು ಅನುಭವಿಸುತ್ತಾರೋ ಎನ್ನುವ ವಿಸ್ಮಯ -ಕಾರುಣ್ಯದಲ್ಲಿ ಅವರ ಅನುಕಂಪೆ ಲೋಕವನ್ನೆ ತಬ್ಬಿದೆ. ಜೊತೆಗೆ ಲೌಕಿಕ ನಿಯಮವನ್ನು ಮುರಿಯಲೊಪ್ಪದೆ ಮಗಳಿಗೆ ಹೇಳಿದ ನಾಲ್ಕು ಬುದ್ಧಿಯ ಮಾತು ಶತಮಾನಗಳನ್ನು ದಾಟಿ ಇವತ್ತಿಗೂ ಮಗಳನ್ನು ಬೀಳ್ಕೊಡುವ ಎಲ್ಲ ತಂದೆ ತಾಯಂದಿರ ಹೃದಯದ ವಾಣಿಯಾಗಿದೆ. ಆದಕಾರಣ ಇಂಥ ವಿಮರ್ಶೆ ಹಿಂದಿನಿಂದ ಬಂದ ಮಧುರ ಭಾವವೊಂದನ್ನು ಕದಲಿಸಲು ಮಾಡಿದ ಒಂದು ಬಗೆಯ ಸಾಹಸವೆಂದೆ ತಿಳಿಯಬೇಕಾಗುತ್ತದೆ. ವಿಮರ್ಶೆ ಯಾವಾಗಲೂ ಕವಿಯ ಬಗ್ಗೆ, ಓದುಗರು ತಿರಸ್ಕಾರವನ್ನೋ ಅನೌದಾರ್ಯವನ್ನೋ ಪ್ರಚೋದಿಸುವ ರೀತಿಯಲ್ಲಿರಬಾರದು. ಸಮದೃಷ್ಟಿಯ, ಸಮತೂಕದ ವಿಮರ್ಶೆ ಎಲ್ಲ ಕಾಲಕ್ಕೂ ತನ್ನ ತೂಕವನ್ನು ಕಾಯ್ದುಕೊಳ್ಳುತ್ತದೆ. ನಾಳಿನ ಜನ ಕೃತಿಯ ಜೊತೆಗೆ ಕೃತಿ ವಿಮರ್ಶಕನನ್ನೂ ಇಟ್ಟು ತೂಗುತ್ತಾರೆ. ಕಲಾಕೃತಿಯನ್ನು ಕುರಿತು ನಾವು ಕೊಡುವ ತೀರ್ಪು, ಎಷ್ಟೋ ವೇಳೆ ನಮ್ಮನ್ನು ಕುರಿತ ತೀರ್ಪೂ ಆಗುತ್ತದೆ ಎಂಬುದನ್ನು ವಿಮರ್ಶಕರು ಮರೆಯಬಾರದು.
ಹಾಗಾದರೆ ಕೃತಿಯೊಂದರ ವಿಚಾರದಲ್ಲಿ ವಿಮರ್ಶಕರೆಲ್ಲರ ಮತವೂ ಸರ್ವಸಮಾನವಾಗಿರಬೇಕು, ಹಾಗಿದ್ದರೆ ಅದು ಸಮರ್ಪಕವಾದ ವಿಮರ್ಶೆ ಎಂದು ಅರ್ಥವಲ್ಲ. ಒಂದೇ ಕೃತಿಯನ್ನು ಕುರಿತು ಉತ್ತಮ ಅಭಿರುಚಿಯನ್ನುಳ್ಳ ವಿಮರ್ಶಕ ಶ್ರೇಷ್ಠರ ಅಭಿಪ್ರಾಯಗಳಲ್ಲಿ ಭಿನ್ನತೆ ತಲೆದೋರಬಹುದು; ಆದರೆ ಆ ಭಿನ್ನಾಭಿಪ್ರಾಯಗಳು ಸಾಮಾನ್ಯವಾಗಿ ಕೃತಿಯ ಯಾವುದೋ ಕೆಲವು ಅಂಶಗಳ ವಿಚಾರದಲ್ಲಿ ಹೊರತು, ಕೃತಿಯ ನಿಜವಾದ ಬೆಲೆಯ ವಿಚಾರದಲ್ಲಿ ಆಗಲಾರವು. ಕೃತಿಯಲ್ಲಿ ಯಾವ ಉತ್ತಮವಾದ ಅಂಶಗಳನ್ನು ಎತ್ತಿ ಒತ್ತಿ ಹೇಳಬಹುದೋ, ಅವುಗಳನ್ನು ಉತ್ತಮ ವಿಮರ್ಶಕರು ಸಮಾನವಾಗಿಯೆ ಹೇಳುವರೆಂಬ ಭರವಸೆಗೆ ಚ್ಯುತಿಯಿರುವುದಿಲ್ಲ. ವಿಮರ್ಶೆ ಎಷ್ಟಾದರೂ ವೈಯಕ್ತಿಕವೂ, ಕೊಂಚಮಟ್ಟಿಗೆ ಭಾವನಿಷ್ಠವೂ ಆಗದೆ ಇರಲು ಸಾಧ್ಯವಿಲ್ಲ. ಇದರ ಮೇಲೆ ವಿಮರ್ಶಕನೂ ಒಬ್ಬ ಮನುಷ್ಯ; ಆತ ಯಂತ್ರವಲ್ಲ. ಆದಕಾರಣ ಅಲ್ಪಸ್ವಲ್ಪ ದೋಷಗಳೂ ಅನಿವಾರ್ಯವಾಗಿ ಆಗುವುದುಂಟು. ಅಷ್ಟೇ ಅಲ್ಲ “ಎಲ್ಲ ಕಾಲದಲ್ಲಿಯೂ ವಿಮರ್ಶಕರ ತೀರ್ಪು ಸಮರ್ಪಕವಾಗಿಯೇ ಇರುತ್ತದೆಂದು ಹೇಳಲಾಗುವುದಿಲ್ಲ. ಎಂಥ ಶ್ರೇಷ್ಠ ವಿಮರ್ಶಕರೂ ಸದಾ ಸಮರ್ಪಕವಾದ ತೀರ್ಪನ್ನು ಕೊಡುವಂಥ ‘ವರ’ವನ್ನೇನೂ ಪಡೆದುಕೊಂಡು ಬಂದಿರುವುದಿಲ್ಲ. ಒಮ್ಮೊಮ್ಮೆ ಅವರ ತೀರ್ಪು ತಪ್ಪಾಗಿದ್ದರೆ ಅವರ ಮಹತ್ತೇನೂ ಸೂರೆಹೋಗುವುದಿಲ್ಲ”[27] ಅಲ್ಲದೆ ಪ್ರತಿಯೊಬ್ಬ ವಿಮರ್ಶಕನಿಗೂ ತನ್ನ ಮಾತನ್ನು ಎತ್ತಿ ಹೇಳುವ ಹಕ್ಕಿದೆ. ಒಂದು ವೇಳೆ ಅವನ ವಿಮರ್ಶೆಯಲ್ಲೇನಾದರೂ ತಪ್ಪಿದ್ದರೆ, ಕಾಲಕ್ರಮದಲ್ಲಿ ಅವನೇ ತಿದ್ದಿಕೊಳ್ಳಬಹುದು, ಅಥವಾ ಮತ್ತೊಬ್ಬ ಸಮರ್ಥನಾದ ವಿಮರ್ಶಕ ಬಂದು ಅದನ್ನು ತಿದ್ದಬಹುದು. ಸಾಹಿತ್ಯಚರಿತ್ರೆಯ ಇತಿಹಾಸದಲ್ಲಿ ಇದು ನಡೆಯತಕ್ಕ ಸಾಮಾನ್ಯ ಸಂಗತಿ. ಆದರೆ ಒಂದು ಮಾತನ್ನು ಮರೆಯಬಾರದು : “ವ್ಯಾಖ್ಯಾನವಾಗಲಿ, ವಿಮರ್ಶೆಯಾಗಲಿ ಎಂದೂ ಕೃತಿವಿಚಾರದಲ್ಲಿ ಕಡೆಯ ಮಾತಾಗಲಾರವು. ಅತ್ಯಂತ ಶ್ರೇಷ್ಠ ವಿಮರ್ಶಕನೆನ್ನಿಸಿಕೊಂಡವನೂ ಸಹ, ತನ್ನ ಕಾಲಕ್ಕೆ ಉಚಿತವಾದ ಹಾಗೂ ಅನಿವಾರ್ಯವಾದ ರೀತಿಯಲ್ಲಿ ಕೃತಿಯನ್ನು ಕುರಿತು ವ್ಯಾಖ್ಯಾನಿಸಿರಬಹುದು ಅಥವಾ ವಿಮರ್ಶಿಸಿರಬಹುದು. ಆದುದರಿಂದ ಆತ ಹೇಳಿದ ಮಾತು ಅವನಿಗಿಂತ ಹಿಂದಿನವರಿಗೆ ಅರ್ಥವಾಗುತ್ತಿರಲಿಲ್ಲ ಎನ್ನುವುದು ಎಷ್ಟು ಸರಿಯೋ, ಹಾಗೆಯೆ ಅದು ಅವನ ಮುಂದಿನ ಕಾಲದವರಿಗೆ ಸಾಕಾಗುವುದಿಲ್ಲವೆಂಬುದೂ ಅಷ್ಟೇ ಸರಿ.”[28]
ವಿಮರ್ಶೆಯ ಗುರಿ ಸಹೃದಯರ ಆಸ್ವಾದನಾಶಕ್ತಿಯನ್ನು ಹೆಚ್ಚಿಸುವುದು, ಅಭಿರುಚಿಯನ್ನು ತಿದ್ದುವುದು. ಸಹೃದಯ ಆಗಲೆ ಓದಿರುವ ಕೃತಿಯ ಬಗ್ಗೆ ಬೆಳಕು ಬೀರುವುದು; ಓದದಿರುವ ಕೃತಿಗಳ ಬಗ್ಗೆ ಕುತೂಹಲವನ್ನು ಮೂಡಿಸುವುದು. ಆದರೆ ಅದು ಎಂದೆಂದೂ ಮೂಲಕೃತಿಗೆ ಬದಲಾಗಿ ಓದಬೇಕಾದುದಲ್ಲ. ಶಾಕುಂತಲ ನಾಟಕದ ಮೇಲೆ ಅತ್ಯುತ್ತಮವಾದ ಪುಸ್ತಕ, ಶಾಕುಂತಲ ನಾಟಕವೇ. ಪೇಕ್ಸ್‌ಪಿಯರನ ಒಂದು ನಾಟಕ, ಅದನ್ನು ಕುರಿತು ಬಂದ ನೂರು ವಿಮರ್ಶೆಯ ಪುಸ್ತಕಗಳಿಗಿಂತ ಮಿಗಿಲಾದದ್ದು. ಸಾಹಿತ್ಯ ವಿಮರ್ಶೆ ಎಂದೂ ಸಾಹಿತ್ಯ ಕೃತಿಗಳಿಗೆ ಪ್ರತಿನಿಧಾನವಾಗಲಾರದು. “ಸಾಹಿತ್ಯ ವಿಮರ್ಶೆಯನ್ನು ಯಾವಾಗಲೂ ಸಿದ್ಧ ತೀರ್ಮಾನಗಳಿಗಾಗಿ ಓದಬೇಡಿ… ನಿಮ್ಮ ವಿಮರ್ಶನ ಶಕ್ತಿಯನ್ನು ಬೆಳೆಯಿಸಿಕೊಳ್ಳಿ; ಅವರಿವರ ಮೇಲೆ ಅವಲಂಬಿಸಬೇಕು.”[29] ಬೇಕಾದರೆ ಉತ್ತಮ ವಿಮರ್ಶೆಯ ನೆರವನ್ನು ನಿರ್ದೇಶನವನ್ನು ಪಡೆದುಕೊಳ್ಳಿ. ಆದರೆ ವಿಮರ್ಶಕನ ಮಾತನ್ನು ನೀವು ಎಷ್ಟು ಗೌರವಿಸಬೇಕೆಂಬುದನ್ನು ತಿಳಿಯಬೇಕು. ಸಾಹಿತ್ಯ ವಿಮರ್ಶಕ ಎಷ್ಟಾದರೂ ದಂಡಧಾರಿ ಅಲ್ಲ; ದೀಪಧಾರಿ!

--------------------------------------------------------------------------------

[1] ಕುವೆಂಪು : ಚಿತ್ರಾಂಗದಾ, ೩-೯೯೮, ೯೯೯ (ಪು. ೩೭)

[2] T.S. Eliot : On Poetry and poets. p.39-52

[3] Helen Gardner : The art of T.S. Eliot. p. 3-4

[4] Abercrombie : The Idea of Great Poetry. p. 7… 39-40

[5] ಪಾಶ್ಚಾತ್ಯದಲ್ಲಿ ಮಹಾ ಕೃತಿಗಳನ್ನು ಕುರಿತು The Epic, Great Poetry, Heroic Poetry, the Classic ಎಂಬ ವಿಭಾಗಗಳುಂಟು. ಅವುಗಳೆಲ್ಲದರ ವಿವರಣೆ ಇಲ್ಲಿ ಅಪ್ರಕೃತ.

[6] Alexander pope : An Essay on Criticism. p. 50

[7] ಎಸ್.ವಿ. ರಂಗಣ್ಣ : ಹೊನ್ನಶೂಲ. ಪು. ೪-೫

[8] ಜಿ.ಬಿ. ಜೋಷಿ : ಕೆ.ಡಿ. ಕುರ್ತಕೋಟಿ : ನಡೆದು ಬಂದ ದಾರಿ, (ಸಂಪುಟ ೧) ಪು. ೭೧

[9] ಅಲ್ಲೇ. ಸಂಪುಟ ೨, ಪು. ೧೩೨

[10] ಎಸ್.ವಿ. ರಂಗಣ್ಣ : ಶಾಕುಂತಲ ನಾಟಕದ ವಿಮರ್ಶೆ, ಪು. ೨೦-೨೧

[11] ಅಲ್ಲೇ. ಪು. ೫೧

[12] ಅಲ್ಲೇ. ಪು ೫೩

[13] ಅಲ್ಲೇ ಪು. ೫೦

[14] ಜೆ.ಬಿ. ಜೋಷಿ; ಕೆ.ಡಿ. ಕುರ್ತಕೋಟಿ : ನಡೆದು ಬಂದ ದಾರಿ, (ಸಂಪುಟ ೧) ಪು. ೪೫-೬೪-೭೮

[15] ಜೆ.ಬಿ. ಜೋಷಿ; ಕೆ.ಡಿ. ಕುರ್ತಕೋಟಿ : ನಡೆದು ಬಂದ ದಾರಿ, (ಸಂಪುಟ ೧) ಪು. ೪೫-೬೪-೭೮

[16] ತೀ.ನಂ.ಶ್ರೀ. ಸಮಾಲೋಕನ. ಪು. ೫೧

[17] ಕೆ.ಎಸ್. ನರಸಿಂಹಸ್ವಾಮಿ : ಉಪವನ. ಪು. ೧೪

[18] A.E. Powell : The Romantic Theory of Poetry. p. 15

[19] A. Pope : An Essay on Criticism, Lines 408, 409, 430, 431
Some ne’er advance a judgement of their own
 But catch the Spreading notion of the town;
 Some praise at morning what they blamed at night;
 But always think the last opinion right.

[20] Quoted by Helen Gardner : The business Criticism. p. 9
The man recovered of the bite
 The dog it was that died

[21] ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು. ೩೫೪; ೧೦೪;೧೭೦

[22] ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು. ೩೫೪; ೧೦೪;೧೭೦

[23] ಎಸ್.ವಿ. ರಂಗಣ್ಣ : ಹೊನ್ನಶೂಲ. ಪು. ೨೦

[24] ಕೆ.ಎಸ್. ನರಸಿಂಹಸ್ವಾಮಿ : ಉಪವನ. ಪು. ೭೪

[25] ಎಸ್.ವಿ. ರಂಗಣ್ಣ : ಶಾಕುಂತಲ ನಾಟಕದ ವಿಮರ್ಶೆ. ಪು. ೧೫-೧೬

[26] ಶಾಕುಂತಲ ನಾಟಕ. ೪-೮೪

[27] Cassell’s Encylopaedia of Literature. p. 137

[28] ಅಲ್ಲೇ. ಪು. ೧೩೪

[29] J. Reeves : The Critical sense p. 16

blogger
delicious
digg
facebook
reddit
stumble
twitter
print
email
ಪುಸ್ತಕ: ಸಮಗ್ರ ಗದ್ಯ- 3
ಲೇಖಕರು: ರಾಷ್ಟ್ರಕವಿ ಡಾ|| ಜಿ ಎಸ್ ಶಿವರುದ್ರಪ್ಪ
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ