ವಿಮರ್ಶೆಯ ಪೂರ್ವ-ಪಶ್ಚಿಮ
ವಿಮರ್ಶೆಯ ದಾರಿ
ತಮ್ಮ ಸುತ್ತಣ ವ್ಯಾಪಾರಗಳಿಗೆ, ಸವಿಗಳಿಗೆ, ಪ್ರತಿಕ್ರಿಯೆಯನ್ನು ತೋರಿಸದೆ ಯಾರು ತಾನೆ ಸುಮ್ಮನಿರುತ್ತಾರೆ? ಪ್ರತಿಯೊಬ್ಬರೂ ತಮಗೆ ಅನಿಸಿದ್ದನ್ನು ಮತ್ತೊಬ್ಬರಿಗೆ ಹೇಳಿಕೊಂಡಲ್ಲದೆ ತೃಪ್ತಿಯಿಲ್ಲ. ಈ ಅರ್ಥದಲ್ಲಿ ಎಲ್ಲರೂ ವಿಮರ್ಶಕರೇ. ಈ ಪಲ್ಯಕ್ಕೆ ಉಪ್ಪು ಸಾಲದು, ಈ ಚಟ್ನಿ ಖಾರ; ಸಾರು ಮಾತ್ರ ಸೊಗಸಾಗಿದೆ – ಎಂದು ಊಟ ಬಲ್ಲವನು ಹೇಳಿದಾಗ ಅದೂ ಒಂದು ರೀತಿಯಲ್ಲಿ ವಿಮರ್ಶೆಯೇ. ಅದೊಂದು ರೀತಿಯ ರುಚಿವಿವೇಚನೆಯ ನಿರೂಪಣೆ. ಆರೋಗ್ಯವಾದ ನಾಲಗೆ, ರುಚಿಯ ಹದವನ್ನು ಬಲ್ಲ ನಾಲಗೆ, ತಾನು ಸವಿಯುವ ಆಹಾರದ ರುಚಿ ವಿವೇಚನೆಯನ್ನು ನಿರೂಪಿಸುವಂತೆ, ಆರೋಗ್ಯವಾದ ಮನಸ್ಸು, ಅನುಭವದಿಂದ ಪಕ್ವವಾದ ಮನಸ್ಸು, ಬದುಕಿನ ಹಂತ ಹಂತಗಳಲ್ಲಿ ಯಾವುದು ಸರಿ, ಯಾವುದು ಸರಿ ಅಲ್ಲ, ಯಾವುದು ಚಂದ, ಯಾವುದು ಚಂದವಲ್ಲ, ಯಾವ ಯಾವ ಅಂಶಗಳ ಹೊಂದಿಕೆಯಿಂದ ಒಂದು ವಸ್ತು ಹಿತವಾಗುತ್ತದೆ ಎನ್ನುವ ವಿವೇಚನೆಯನ್ನು ಮಾಡಬಲ್ಲುದು. ಬದುಕಿನ ವ್ಯಾಖ್ಯಾನವಾದ ಸಾಹಿತ್ಯದ ವಿಚಾರದಲ್ಲಿ ಆರೋಗ್ಯವಾದ ಮನಸ್ಸು, ರುಚಿಬಲ್ಲ ನಾಲಗೆ ಮಾಡುವ ವಿವೇಚನೆಗೂ ಈ ಮಾತು ಅನ್ವಯಿಸುತ್ತದೆ.
ಸಾಹಿತ್ಯ ವಿಮರ್ಶೆ ಎಂದರೆ ಸಾಕಷ್ಟು ಸಮೃದ್ಧವಾದ ಸಾಹಿತ್ಯವಿರುವಲ್ಲಿ ಶಕ್ತನಾದ ಸೂಕ್ಷ್ಮಜ್ಞನಾದ ಸಹೃದಯನೊಬ್ಬ ಅದನ್ನು ಆಸ್ವಾದಿಸಿ, ಆಲೋಚಿಸಿ ಅದರ ಗುಣದೋಷಗಳನ್ನು ವಿವೇಚಿಸಿ, ಅದರ ಬೆಲೆಯನ್ನು ಕಟ್ಟುವ ಒಂದು ನಿಷ್ಪಕ್ಷಪಾತವಾದ ಪ್ರಯತ್ನ ಎನ್ನಬಹುದು. “ಸಮೃದ್ಧವಾದ ಸಾಹಿತ್ಯವಿರುವಲ್ಲಿ” ಎಂದು ಹೇಳಿದ್ದರ ಕಾರಣ ಇಷ್ಟೆ : ಸಾಹಿತ್ಯ ಸೃಷ್ಟಿ ಮೊದಲು, ಅದನ್ನು ಕುರಿತ ವಿಮರ್ಶೆ ಅನಂತರ. ಎಲ್ಲಿ ಸಾಹಿತ್ಯಸೃಷ್ಟಿ ಸಮೃದ್ಧವಾಗಿದೆಯೋ ಅಲ್ಲಿ ಅದನ್ನು ಕೇರಿ ತೂರಿ ಅದರ ಸೊಗಸನ್ನು ಬೆರಳಿಟ್ಟು ತೋರುವ ಅಗತ್ಯ ಒದಗುತ್ತದೆ. ಎಲ್ಲಿ ಸಾಹಿತ್ಯವಿನ್ನೂ ಸಮೃದ್ಧವಾಗಿ ಬೆಳೆದಿಲ್ಲವೋ ಅಲ್ಲಿ ವಿಮರ್ಶೆಯ ಅಗತ್ಯವೇನಿದೆ? ಸಾಹಿತ್ಯ ಸಾಕಷ್ಟು ಬೆಳೆದ ಮೇಲೆ, ವಿಮರ್ಶೆ ಅದರ ಗುಣ ದೋಷ ವಿವೇಚನೆಗೆ ಹೊರಡುತ್ತದೆ. ಎಂದರೆ ಸಾಹಿತ್ಯ ಸಾಕಷ್ಟು ಬೆಳೆದು ನಿಲ್ಲುವ ಒಂದು ಘಟ್ಟ ಉಂಟು, ಅದನ್ನು ಗಮನಿಸಿ ಅನಂತರ ವಿಮರ್ಶೆ ಅಥವಾ ವಿವೇಚನೆಗೆ ತೊಡಗುವ ಘಟ್ಟ ಉಂಟು; ಆದಕಾರಣ, ಸಾಹಿತ್ಯಸೃಷ್ಟಿಯ ಕಾಲ, ವಿಮರ್ಶೆಯ ಕಾಲ ಎಂದು ಎರಡು ಪ್ರತ್ಯೇಕವಾದ ಘಟ್ಟಗಳನ್ನು ಸಾಹಿತ್ಯ ಚರಿತ್ರೆಯಲ್ಲಿ ಗುರುತಿಸಬಹುದು ಎಂದು ಅರ್ಥವಾಗುವ ಸಂಭವ ಉಂಟು. ಅಷ್ಟೇ ಅಲ್ಲ, ಹಾಗೆ ಅರ್ಥ ಮಾಡಿದ್ದೂ ಉಂಟು. ಇದು ಸಾಹಿತ್ಯ ಸಮೃದ್ಧಿಯ ಯುಗ, ಆದುದರಿಂದ ಈ ಕಾಲದಲ್ಲಿ ಸಾಹಿತ್ಯವಿಮರ್ಶೆ ಸಾಕಷ್ಟು ಬೆಳೆಯಲು ಅವಕಾಶವಾಗಲಿಲ್ಲ ಎಂದೂ; ಇದು ವಿಮರ್ಶೆಯ ಯುಗ, ಆದುದರಿಂದ ಈ ಕಾಲದಲ್ಲಿ ರಚಿತವಾದ ಸಾಹಿತ್ಯ ಗುಣದಲ್ಲಿ ಕಳಪೆಯಾಯಿತು ಎಂದೂ ಪಾಶ್ಚಾತ್ಯರಲ್ಲಿ ಕೆಲವರು ಭಾವಿಸಿದ್ದೂ ಉಂಟು.[1] ಹಾಗೆ ನೋಡಿದರೆ ಇಂಥ ಬೇರೆ ಬೇರೆಯ ಕಾಲಗಳು ಇರುವುವೆಂಬ ಊಹೆಯೇ ಸರಿಯಾದದ್ದಲ್ಲ. ಕೆಲವು ಕಾಲದಲ್ಲಿ ಸಾಹಿತ್ಯ ಸಮೃದ್ಧವಾಗಿರಬಹುದು, ವಿಮರ್ಶೆ ಸಾಕಷ್ಟು ಬೆಳೆಯದಿರಬಹುದು; ಮತ್ತೆ ಕೆಲವು ಸಲ ವಿಮರ್ಶೆ ಬೆಳೆದಿರಬಹುದು, ಸಾಹಿತ್ಯದ ಗುಣ ಕಡಿಮೆಯಾಗಿರಬಹುದು. ಸಾಹಿತ್ಯ ಮತ್ತು ವಿಮರ್ಶೆ ಈ ಎರಡರ ಏರಿಕೆಗಳಿಗೆ ಪರಸ್ಪರ ಪ್ರಭಾವ ಕಾರಣವೆನ್ನುವುದಕ್ಕಿಂತ ಬೇರೆಬೇರೆಯ ಕಾರಣಗಳಿರಬಹುದು. ಈ ಎರಡು ಬಗೆಯ ಕ್ರಿಯೆಗಳಿಗೂ ಬೇರೆಬೇರೆಯ ಕಾಲಗಳುಂಟೆಂದು ಒಪ್ಪಿದರೆ, ಒಂದು ಬೆಳೆದಾಗ ಮತ್ತೊಂದು ಬೆಳೆಯಲಾರದೆನ್ನುವ ಭಾವನೆಗೆ ಅವಕಾಶವಾಗುತ್ತದೆ. ಒಂದು ಬೆಳೆದಾಗ ಮತ್ತೊಂದು ಬೆಳೆಯಲಾರದೆನ್ನುವುದು ಅತ್ಯಂತ ಅಸಮರ್ಪಕವಾದ ವಾದವಾಗುತ್ತದೆ. ವಾಸ್ತವವಾಗಿ ಸಾಹಿತ್ಯ ನಿರ್ಮಿತಿಯ ಹಿಂದೆ ಅಥವಾ ಜೊತೆಜೊತೆಗೆ ವಿಮರ್ಶನ ಕ್ರಿಯೆಯೂ ನಡೆಯುತ್ತಾ ಬಂದಿದೆ. ಕವಿಕೃತಿಯ ಜತೆಗೆ, ತತ್ಕಾಲದಲ್ಲೇ ನಡೆದ ವಿಮರ್ಶೆಯನ್ನು ಸಮಕಾಲೀನ ಸಾಹಿತ್ಯವಿಮರ್ಶೆ ಎನ್ನಬಹುದು. ಕೃತಿರಚನೆಯ ನಂತರ, ಎಷ್ಟೋ ಕಾಲ ಕಳೆದ ಮೇಲೆಯೂ ಅದನ್ನು ಕುರಿತು ವಿಮರ್ಶೆ ನಡೆಯಬಹುದು. ಅಷ್ಟೇ ಏಕೆ? ಕಾಲದಿಂದ ಕಾಲಕ್ಕೆ ಹಿಂದಿನ ಸಾಹಿತ್ಯವನ್ನೆಲ್ಲ ಮತ್ತೆ ಮತ್ತೆ ಅವಲೋಕಿಸಿ, ವಿವೇಚಿಸಿ, ಕೃತಿಗಳೊಂದಿಗೆ, ಈ ಕೃತಿಗಳನ್ನು ಕುರಿತು ಅದುವರೆಗೂ ಬಂದ ವಿಮರ್ಶೆಗಳನ್ನೂ ವಿಮರ್ಶೆಗೆ ಗುರಿಪಡಿಸಿ ಹೊಸದಾಗಿ ಬೆಲೆ ಕಟ್ಟುವ ಕ್ರಿಯೆಯೂ ನಡೆದಿದೆ. ಅಂತೂ ವಿಮರ್ಶೆ, ತನ್ನ ಕಾರ‍್ಯನಿರ್ವಹಣಕ್ಕೆ ಯಾವುದಾದರೂ ಒಂದು ನಿರ್ದಿಷ್ಟವಾದ ಘಟ್ಟವನ್ನು ಆರಿಸಿಕೊಳ್ಳಲೇ ಬೇಕಾಗುತ್ತದೆ. ಒಂದು ಸಾಹಿತ್ಯ ಚಳುವಳಿಯ ನಿಲುಗಡೆಯ ಬಿಂದುವನ್ನೋ, ಒಂದು ಶತಮಾನವನ್ನೋ ವಿಮರ್ಶಕ ತನ್ನ ನೆಲೆಯನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಟಿ.ಎಸ್. ಎಲಿಯಟ್ ಈ ಬಗ್ಗೆ ಹೀಗೆ ಸೂಚಿಸುತ್ತಾನೆ: “ಕಾಲದಿಂದ ಕಾಲಕ್ಕೆ, ಪ್ರತಿ ನೂರು ವರ್ಷಕ್ಕೊಂದು ಸಲವೋ ಏನೋ, ವಿಮರ್ಶಕನೊಬ್ಬ ಉದಯಿಸಿ ಹಿಂದಿನ ಸಾಹಿತ್ಯವನ್ನು ಪರಿಶೀಲಿಸಿ, ಕವಿಗಳನ್ನೂ, ಕೃತಿಗಳನ್ನೂ ಒಂದು ಹೊಸ ಕ್ರಮದಲ್ಲಿ ನೆಲೆಗೊಳಿಸುವುದು ಅಗತ್ಯವಾಗಿದೆ. ಈ ಒಂದು ಕಾರ್ಯ ಕ್ರಾಂತಿಗೆ ಸಂಬಂಧಿಸಿದ್ದಲ್ಲ. ಪುನರ್ ವಿಂಗಡಣೆಗೆ ಸಂಬಂಧಿಸಿದ್ದು.”[2]
“ವಿಮರ್ಶೆ ಎಂದರೆ ಕವಿಪ್ರತಿಭೆಯಿಂದ ಹೊರಹೊಮ್ಮುವ ಸುಂದರ ಭಾವಮಯ ಕಾವ್ಯಕ್ಷೇತ್ರಗಳಲ್ಲಿ ಸೂಕ್ಷ್ಮಮತಿಯಾದ ಸಹೃದಯನು ಕೈಗೊಳ್ಳುವ ವಿಹಾರಯಾತ್ರೆಯ ಅಥವಾ ಸಾಹಸಯಾತ್ರೆಯ ಕಥನಕಾರ‍್ಯ.”[3] ಈ ಕವಿತೆಯ ಅರ್ಥವೇನು? ಕವಿಯ ಭಾವವೇನು? ಎಂದು ಹೊರಡುವುದೇ ವಿಮರ್ಶೆಯ ಮೊದಲ ಹೆಜ್ಜೆ. ಎಂದರೆ ಕಾವ್ಯದ ಭಾವ, ಅರ್ಥ, ಉದ್ದೇಶಗಳನ್ನು ವಿಚಾರಪೂರ್ವಕವಾಗಿ ವಿಶ್ಲೇಷಿಸಿ ವಿವೇಚಿಸುವುದೇ ವಿಮರ್ಶೆ. ಅದು “ಸಾಹಿತ್ಯವನ್ನು ಕುರಿತ ಕ್ರಮಬದ್ಧವಾದ ವಿವೇಚನೆ.”[4] ಇಂಥ ವಿವೇಚನೆಯ ಆರಂಭ ವಿವರಣೆ ವ್ಯಾಖ್ಯಾನಗಳಿಂದ; ಅದರ ನಿಲುಗಡೆ ಕೃತಿಯ ಮೌಲ್ಯನಿರ್ಣಯದಲ್ಲಿ. “ಸಾಹಿತ್ಯ ಎನ್ನುವುದು ವಿವಿಧ ಪ್ರಕಾರಗಳಲ್ಲಿ ಅಭಿವ್ಯಕ್ತಗೊಂಡ ಜೀವನ ವ್ಯಾಖ್ಯಾನ ಎನ್ನುವುದಾದರೆ, ಸಾಹಿತ್ಯವಿಮರ್ಶೆ ಆ ಜೀವನ ವ್ಯಾಖ್ಯಾನದ ವ್ಯಾಖ್ಯಾನ.”[5] ಅದೂ ಒಂದು ಕಲೆ. “ಸಾಹಿತ್ಯವನ್ನು ಬೆಲೆಕಟ್ಟುವ ಕಲೆ; ಯಾವ ಯಾವ ಕಾರಣಗಳಿಂದಾಗಿ ಒಂದು ಕೃತಿ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎನ್ನುವುದನ್ನು ನಿರ್ಣಯಿಸುವ ಕಲೆ.”[6] ಹೀಗೆ ಕೃತಿಯನ್ನು ಬೆಲೆ ಕಟ್ಟುವ ಪ್ರಯತ್ನ ಬೇರೊಂದು ದೃಷ್ಟಿಯಿಂದ ನೋಡಿದಾಗ ಕೃತಿಯಲ್ಲಿ ಅಂತರ್ಗತವಾಗಿರುವ ಕವಿಯ ಅನುಭವಗಳ ತರ-ತಮದ ವಿವೇಚನೆಯೂ ಹೌದು. ಈ ದೃಷ್ಟಿಯಿಂದ “ವಿಮರ್ಶೆ ಒಂದು ಅನುಭವಕ್ಕೂ ಮತ್ತೊಂದು ಅನುಭವಕ್ಕೂ ಇರುವ ವ್ಯತ್ಯಾಸಗಳನ್ನು ಗುರುತಿಸಿ ಬೆಲೆಕಟ್ಟುವ ಪ್ರಯತ್ನ.”[7] ಈ ಪ್ರಯತ್ನಕ್ಕೆ ಬೇಕಾದದ್ದು ಒಂದು ಬಗೆಯ ಅಂತರ್ದೃಷ್ಟಿ. ನಮ್ಮಿಂದ ಭಿನ್ನವಾದ ಅನ್ಯಮನೋಧರ್ಮಗಳನ್ನು ಪ್ರವೇಶಿಸುವ ಸಾಮರ್ಥ್ಯವೇ ವಿಮರ್ಶೆಯ ಸಾರ. ಮ್ಯಾಥ್ಯೂ ಆರ‍್ನಾಲ್ಡನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉಗ್ಗಡಿಸುತ್ತಾನೆ : “ಜಗತ್ತಿನಲ್ಲಿ ಯಾವ ಯಾವ ಅತ್ಯುತ್ತಮವಾದ ಆಲೋಚನೆ ಹಾಗೂ ಅನುಭವಗಳಿವೆಯೋ, ಅವುಗಳನ್ನು ಅರ್ಥಮಾಡಿಕೊಂಡು ಪ್ರಸಾರಮಾಡುವ ಒಂದು ನಿಷ್ಪಕ್ಷಪಾತವಾದ ಪ್ರಯತ್ನವೇ ವಿಮರ್ಶೆ.”[8]
ಕವಿಕೃತಿಯೊಂದನ್ನು ಕುರಿತು, ವಿಚಾರಪೂರ್ವಕವಾಗಿ ವಿಶ್ಲೇಷಿಸಿ ವಿವೇಚಿಸುವುದೇ ವಿಮರ್ಶೆಯ ಮೊದಲ ಹೆಜ್ಜೆ ಎಂದೆವು. ಈ ಕ್ರಿಯೆ ಮೂಲತಃ ಬುದ್ಧಿಪ್ರಧಾನವಾದುದು. ಇದು ಕಾವ್ಯಸೃಷ್ಟಿಶಕ್ತಿ ಮತ್ತು ಕಾವ್ಯಾಸ್ವಾದನಶಕ್ತಿ ಇವುಗಳಿಂದ ಭಿನ್ನವಾದುದು ಮತ್ತು ವಿಶಿಷ್ಟವಾದುದು. ಕೃತಿನಿರ್ಮಾಣ ಶಕ್ತಿಯೆ ಬೇರೆ, ವಿಮರ್ಶನಶಕ್ತಿಯೆ ಬೇರೆ. ವಿಮರ್ಶನ ಶಕ್ತಿಯೇ ಬೇರೆ ಎಂದೆನಿಸಿಕೊಂಡರೂ ಅದು ಕಾವ್ಯನಿರ್ಮಾಣಶಕ್ತಿಯ ಮತ್ತು ಆಸ್ವಾದನ ಶಕ್ತಿಯ ಜೊತೆ ಜೊತೆಗೆ ಕೂಡ ಇರಬಹುದು. ಆದರೆ ಕೆಲವರು, ಕಾವ್ಯನಿರ್ಮಾಣ ಶಕ್ತಿಗಿರುವಂತಹ ಸ್ಥಾನವನ್ನೆ ವಿಮರ್ಶೆಗೂ ಕೊಡಲು ಪ್ರಯತ್ನಿಸಿರುವುದೂ ಉಂಟು. “ಅದು ಸಾಹಿತ್ಯ ಸೃಷ್ಟಿಯಷ್ಟೇ ವ್ಯಕ್ತಿವಿಶಿಷ್ಟವಾದುದು, ಮತ್ತು ಅದೂ ಅಷ್ಟೇ ಪ್ರತಿಭಾ ಸೃಷ್ಟಿಯೆ;”[9] ಏಕೆಂದರೆ “ಕೃತಿ ನಿರ್ಮಾಣಶಕ್ತಿಯೂ, ಕೃತಿ ವಿಮರ್ಶನಶಕ್ತಿಯೂ ಮೂಲತಃ ಬೇರೆ ಬೇರೆ ಅಲ್ಲ; ಅವು ಒಂದೇ ಅಖಂಡಕ್ರಿಯೆಯ ಎರಡು ಭಾಗಗಳು”[10] – ಎಂದು ಕೆಲವರು ಹೇಳುತ್ತಾರೆ. ಈ ಹೇಳಿಕೆಯಲ್ಲಿ ಒಂದೆರಡು ಗಮನಾರ್ಹವಾದ ಮಾತುಗಳಿವೆ. ವಿಮರ್ಶಕನಾದವನು ಪ್ರತಿಭಾವಂತನ ಸೃಷ್ಟಿಯಾದ ಸಾಹಿತ್ಯ ಕೃತಿಯ ಪರಿಶೀಲನೆಗೆ, ವಿವೇಚನೆಗೆ, ಹೊರಡುವ ಕಾರಣ ಅವನಲ್ಲಿಯೂ ಪ್ರತಿಭೆ ಇರಬೇಕು. ಭಾರತೀಯ ಕಾವ್ಯಮೀಮಾಂಸೆಯಲ್ಲಿ ಸಹೃದಯನ ಆಸ್ವಾದನ ಕ್ರಿಯೆಯೂ ಒಂದು ಪ್ರತಿಭಾ ವ್ಯಾಪಾರವೇ ಎಂದು ಪರಿಗಣಿತವಾಗಿದೆ. ಈ ಸಹೃದಯ ಪ್ರತಿಭೆಯನ್ನು ರಾಜಶೇಖರನೆಂಬ ಆಲಂಕಾರಿಕ ‘ಭಾವಯಿತ್ರೀ’ ಎಂದು ಹೆಸರಿಸಿದ್ದಾನೆ. ಸಹೃದಯ ಸಮೂಹದಲ್ಲಿಯೆ ಅತ್ಯಂತ ಸೂಕ್ಷ್ಮ ಸಂವೇದನಾಶೀಲನಾದ, ರಸಜ್ಞನಾದ ಯಾರೋ ಒಬ್ಬನು ವಿಮರ್ಶಕನೆನಿಸಿಕೊಂಡು ಕೃತಿಯೊಂದರ ಪರಿಶೀಲನೆಗೆ ಹೊರಟಾಗ ಆತನಲ್ಲಿ ಕವಿಕೃತಿಯ ‘ಅನುಸೃಷ್ಟಿ’ ಶಕ್ತಿರೂಪವಾದ ಪ್ರತಿಭೆ ಆತನ ವಿಮರ್ಶನ ಶಕ್ತಿಗೆ ಮೂಲಧನವಾಗುವುದೆಂಬುದರಲ್ಲಿ ಸಂದೇಹವಿಲ್ಲ. ಆದರೆ ಆತ ಕವಿ ಕೃತಿಯ ರಸಾನುಭವವನ್ನು ಸಹೃದಯರಿಗಾಗಿ ವಿಶ್ಲೇಷಿಸಿ ಅನುವಾದಿಸಬೇಕಾದರೆ ಅದೊಂದು ವಿಚಾರ ಪೂರ್ವಕವಾದ, ವಿಚಾರಪ್ರಧಾನವಾದ ವ್ಯಾಪಾರವಾಗಬೇಕಾಗುತ್ತದೆ. ವಿಚಾರ, ವಿಶ್ಲೇಷಣೆ, ವಿವೇಚನೆ ಇವುಗಳು ಬುದ್ಧಿಪೂರ್ವಕವಾದ ಆವೇಶದ ಕ್ರಿಯೆಗಳಲ್ಲ, ಬುದ್ಧಿಪೂರ್ವಕವಾದ ವಿವೇಚನೆಯ ಕ್ರಿಯೆಗಳು. ಅವನು ಹೊರಟಿರುವುದು ಕೃತಿವಿಚಾರ ನಿರೂಪಣೆಗೇ ಹೊರತು ಕೃತಿ ನಿರ್ಮಾಣಕ್ಕಲ್ಲ. ತನ್ನ ವಿಮರ್ಶೆಯಿಂದ ಕವಿಯ ರಸಾನುಭವದ ವಿವರಣೆ ಆಗಬೇಕೆಂಬುದು ಆತನ ಗುರಿ, ತನ್ನ ವಿಮರ್ಶೆಯಿಂದ ರಸಾನುಭವವನ್ನುಂಟುಮಾಡ ಬೇಕೆಂಬುದಲ್ಲ. ರಸಾನುಭವಪೂರ್ವಕವಾದ ಸೃಷ್ಟಿ ಆತನ ಗುರಿಯಾದರೆ ಆತ ಕಾವ್ಯವನ್ನು ಬರೆಯಬಹುದೆ ಹೊರತು ವಿಮರ್ಶೆಯನ್ನಲ್ಲ. ವಿಮರ್ಶೆ “ಉದ್ದಕ್ಕೂ ಪ್ರಜ್ಞಾಪೂರ್ವಕವಾಗಿ ನಡೆಯುವ ಕ್ರಿಯೆ; ಮಾನವ ಮತಿಯ-ಅದರ ಸಮಸ್ತ ಗುಣ-ದೋಷಗಳನ್ನೂ ಒಳಗೊಂಡ-ಒಂದು ಬೌದ್ಧಿಕ ಕ್ರಿಯೆ.”[11] ಹಾಗೆಂದ ಮಾತ್ರಕ್ಕೆ ವಿಮರ್ಶೆ ಕೇವಲ ಶುಷ್ಕವಾದ, ಅತ್ಯಂತ ನಿಷ್ಕೃಷ್ಟವಾದ, ಒಂದು ಬಗೆಯ ತಾರ್ಕಿಕ ಕ್ರಿಯೆ ಎಂದು ಅರ್ಥವಲ್ಲ. ವಿಮರ್ಶಕನಲ್ಲಿಯೂ, ಕವಿಯಲ್ಲಿರುವಂತೆ ಸೃಷ್ಟಿಶೀಲವಾದ ಶಕ್ತಿ ಕಿಂಚಿತ್ತೂ ಇಲ್ಲವೆಂದೂ, ಅದು ಕೇವಲ ಬೌದ್ಧಿಕ ಕ್ರಿಯೆ ಎಂದೂ ಅರ್ಥವಲ್ಲ. ಕವಿಯ ಆವೇಶದ ನಡುವೆಯೂ ವಿಮರ್ಶನಶಕ್ತಿ ಇರುತ್ತದೆ; ವಿಮರ್ಶಕನ ವಿಚಾರವಂತಿಕೆಯಲ್ಲಿಯೂ ಸೃಜನಶೀಲತೆ ಇರುತ್ತದೆ. ‘ಇರುತ್ತದೆ’ ಅಲ್ಲ, ಇರಬೇಕು. ಏಕೆಂದರೆ “ಭಾವಗ್ರಹಣವಿಲ್ಲದೆ ಬುದ್ಧಿಯಿಂದ ಮಾಡುವ ವಿಚಾರವು ಶುಷ್ಕವಾಗುವುದು ನಿಜ; ಆದರೆ ಬುದ್ಧಿಮೂಲಕವಾದ ವಿಚಾರವಿಲ್ಲದ ರಸಾನುಭವವು ವಿವೇಚನೆಯಿಲ್ಲದ ಉತ್ಸಾಹದಲ್ಲಿ ಪರಿಣಾಮವಾಗುವುದು.”[12] ರಸಜ್ಞನಾದ, ಕವಿಹೃದಯವುಳ್ಳ ವಿಮರ್ಶಕನ ವಿಮರ್ಶೆ ಎಷ್ಟೋ ವೇಳೆ ಸಾಹಿತ್ಯಾಸ್ವಾದದಿಂದ ಒದಗುವ ಸುಖವನ್ನೂ ಕೊಡಬಹುದು. ಆದರೆ ವಿರ್ಮಶನ ಶಕ್ತಿಯೂ ಕೃತಿ ನಿರ್ಮಾಣಶಕ್ತಿಯೂ ಒಂದೇ ಎಂಬ ರಭಸದಲ್ಲಿ, ವಿಮರ್ಶೆ ಪ್ರಧಾನತಃ ಸೃಷ್ಟಿಶೀಲವಾದದ್ದು ಎಂದು ಹೇಳುವುದು ಸರಿ ಅಲ್ಲ. ಕೃತಿವಿಮರ್ಶನಶಕ್ತಿ ಮತ್ತು ಕೃತಿನಿರ್ಮಾಣಶಕ್ತಿ ಎರಡೂ ಮೂಲತಃ ಬೇರೆ ಬೇರೆ ಅಲ್ಲದಿರಬಹುದು. ಆದರೆ ಕೃತಿನಿರ್ಮಾಣದ ಸ್ವರೂಪವೂ ಕೃತಿ ವಿಮರ್ಶೆಯ ಸ್ವರೂಪವೂ ಬೇರೆ ಬೇರೆ ಎಂದು ಒಪ್ಪಬೇಕು. ಆದರೆ ಸಾಹಿತ್ಯವಿಮರ್ಶೆ ಕೃತಿ ರಚನೆಯಷ್ಟೇ ವ್ಯಕ್ತಿವಿಶಿಷ್ಟವಾದುದು ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.
ಒಟ್ಟಿನಲ್ಲಿ ವಿಮರ್ಶೆ, ವಿಶೇಷ ಕಾವ್ಯಸಂಸ್ಕಾರದಿಂದ ಪರಿಷ್ಕೃತನಾದ ಸಹೃದಯನೊಬ್ಬನು ಕಲಾಕೃತಿಯ ಬಗೆಗೆ ಪಡಿಮಿಡಿದ ಅನುಭವದ ವಿಚಾರ ನಿರೂಪಣೆ; ಸಾಹಿತ್ಯದ ಸೊಗಸನ್ನು ಸಹೃದಯರಿಗಾಗಿ ವ್ಯಾಖ್ಯಾನಿಸುವ ಒಂದು ನಿಷ್ಪಕ್ಷಪಾತವಾದ ಪ್ರಯತ್ನ; ಕೃತಿಯ ಗುಣದೋಷಗಳನ್ನು ಬೆರಳಿಟ್ಟು ನಿರ್ದೇಶಿಸುವ ಒಂದು ಕ್ರಮಬದ್ಧವಾದ ವಿವೇಚನೆ; ಯಾವ ಯಾವ ಕಾರಣಗಳಿಂದ ಒಂದು ಕೃತಿ ಉತ್ತಮವಾಗಿದೆ ಅಥವಾ ಉತ್ತಮವಾಗಿಲ್ಲ ಎನ್ನುವ ತೀರ್ಮಾನದ ನಿರ್ದೇಶನ ಅಥವಾ ಮೌಲ್ಯ ನಿರ್ಣಯ. ಅದೊಂದು ಶಾಸ್ತ್ರವೂ ಹೌದು, ಕಲೆಯೂ ಹೌದು. ಆದರೆ ವಿಮರ್ಶೆ ಆದಷ್ಟು ಪ್ರಾಮಾಣಿಕವಾದ, ನಿಷ್ಪಕ್ಷಪಾತವಾದ ಒಂದು ಪ್ರಯತ್ನವೇ ಹೊರತು, ಕಲಾಕೃತಿಗಳನ್ನು ಕುರಿತ ಕಟ್ಟಕಡೆಯ ತೀರ್ಪು ಎಂದು ಯಾರೂ ಒಪ್ಪಬೇಕಾಗಿಲ್ಲ. ಏಕೆಂದರೆ “ಸ್ವಯಂ ಸಂಪೂರ್ಣವಾದ, ಸ್ವಾವಲಂಬಿಯಾದ ಶುದ್ಧ ವಿಮರ್ಶೆ ಎನ್ನುವುದು ಅಸಂಭವನೀಯವಾದದ್ದು.”[13]
ವಿಮರ್ಶೆ ಪಾಶ್ಚಾತ್ಯರಲ್ಲಿ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವೇ ಆಗಿದೆ. ಕವಿಕೃತಿಗಳನ್ನು ಕುರಿತು ಬಂದಿರುವ ವಿಪುಲವಾದ ವಿಮರ್ಶಾ ಗ್ರಂಥಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅಲ್ಲಿ ಪ್ರತಿಭೆಯ ವಿಲಾಸವಿದೆ; ಶಾಸ್ತ್ರದ ನಿಷ್ಕೃಷ್ಟತೆ ಇದೆ; ವಿಚಾರದ ಹೊಳಪಿದೆ; ಎಲ್ಲಕ್ಕೂ ಮಿಗಿಲಾಗಿ ಕವಿಕೃತಿಯ ರಸಾನುಭವದ ನಿರೂಪಣೆ ಇದೆ. ಇದನ್ನು ನೋಡಿದರೆ ಅನ್ನಿಸುತ್ತದೆ: ಕವಿಕೃತಿ ರಚಿತವಾಗುವುದು ಒಂದೇ ಸಲ. ಕವಿ ತನ್ನ ಅಂತರಂಗದ ಅನುಭವಕ್ಕೆ ಕೃತಿರೂಪಧಾರಣೆ ಮಾಡಿಸುವುದು ಒಂದೇ ಸಲ. ಆದರೆ ಅದನ್ನು ಕುರಿತು-ಅದು ಉತ್ತಮ ಕೃತಿಯಾಗಿದ್ದ ಪಕ್ಷದಲ್ಲಿ – ಬೆಳೆಯುತ್ತಾ ಹೋಗುವ ವಿಮರ್ಶೆಯ ವಿಲಾಸಕ್ಕೆ ಕೊನೆ ಎಲ್ಲಿ? ಷೇಕ್ಸ್‌ಪಿಯರನ ಒಂದೊಂದು ಒಳ್ಳೆಯ ನಾಟಕದ ಮೇಲೂ ಬಂದಿರುವ, ಬರುತ್ತಿರುವ ವಿಮರ್ಶಾಗ್ರಂಥಗಳನ್ನು ನೋಡಿದರೆ ಬೆರಗು ಕವಿಯುತ್ತದೆ. ವಿಮರ್ಶಕರ ತಕ್ಕಡಿಯಲ್ಲಿ ಕವಿ-ಕಾವ್ಯಗಳ ಬೆಲೆ ಕಾಲದಿಂದ ಕಾಲಕ್ಕೆ ಏರಿಳಿಕೆಯಲ್ಲಿ ತೂಗುವುದನ್ನು ವಿಮರ್ಶೆಯ ಇತಿಹಾಸವೇ ಹೇಳುತ್ತದೆ.
ವಿಮರ್ಶೆಯಿಂದ ಕವಿಗೆ, ಕಾವ್ಯಕ್ಕೆ, ಸಹೃದಯ ಸಮಾಜಕ್ಕೆ ಆಗುವ ಪ್ರಯೋಜನ ಅಷ್ಟಿಷ್ಟಲ್ಲ. ಕವಿಯ ದೃಷ್ಟಿಯಿಂದ ನೋಡುವುದಾದರೆ, ವಿಮರ್ಶೆ ಎಷ್ಟೋ ವೇಳೆ ಅವನಿಗೆ ಮಾರ್ಗದರ್ಶನ ಮಾಡಬಹುದು. ವಿಮರ್ಶೆಯಿಂದ, ಕವಿಯ ಕಡೆಗೆ, ಕೃತಿಯ ಕಡೆಗೆ ಸಹೃದಯರ ಗಮನ ಹರಿದು ಕವಿಯ ಕೀರ್ತಿ ಹೆಚ್ಚಲು ಕಾರಣವಾಗಬಹುದು. ಸಮರ್ಥನಾದ ವಿಮರ್ಶಕನ ವಿಮರ್ಶೆಯಿಂದ ಕವಿಗೆ ತನ್ನ ಕಾವ್ಯದ ಬೆಲೆ ಅರ್ಥವಾಗಬಹುದು; ಅಥವಾ ಕವಿ ತನ್ನ ಕೃತಿಯ ವಿಚಾರದಲ್ಲಿ ಇರಿಸಿಕೊಂಡ ಅನಾವಶ್ಯಕವಾದ, ನಿರಾಧಾರವಾದ ಅತಿಪ್ರಶಂಸೆಯ ಭಾವನೆಯ ನೆರೆ ಬತ್ತಬಹುದು. ವಿಮರ್ಶಕನ ಸಹಾಯದಿಂದ, ಕವಿ ತನ್ನ ಮುಂದಿನ ಕೃತಿಗಳಲ್ಲಿ ತಾನು ಹಿಂದಿನ ಕೃತಿಗಳಲ್ಲಿ ಎಸಗಿದ ದೋಷಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಪಡಬಹುದು. ಆದರೆ ವಿಮರ್ಶಕರ ವಿಮರ್ಶೆಯಿಂದ ಮಾರ್ಗದರ್ಶನ ಪಡೆಯಬೇಕಾದರೆ ಕವಿಯಲ್ಲಿ ವಿನಯ ಔದಾರ್ಯ, ವಿವೇಕ ಬೇಕು. ಈ ಔದಾರ‍್ಯ, ವಿವೇಕ ಬಹುಜನ ಕವಿಗಳಲ್ಲಿ ಕಡಮೆ. ಹೀಗಾಗಿ ವಿಮರ್ಶಕರು ಕವಿಯ ಪ್ರತಿಪಕ್ಷ ಎನ್ನುವ ಭಾವನೆ ಹೇಗೋ ಬೆಳೆದು ಬಂದಿದೆ. ಈ ಭಾವನೆ ಬಲಿಯುವುದಕ್ಕೆ ಕವಿಗಳು ಕಾರಣರಾದಂತೆ ವಿಮರ್ಶಕರೂ ಕಾರಣರಾಗಿದ್ದಾರೆ. ಪರಸ್ಪರ ಪ್ರತಿಷ್ಠೆಯ ಪ್ರಶ್ನೆ ಬಂದಾಗ ಆಗುವುದು ಹೀಗೆ; ವಿನಯ, ಔದಾರ‍್ಯ, ವಿವೇಕಗಳ ದಾರಿ ಬೇರೆ.
ಓದುಗರ ದೃಷ್ಟಿಯಿಂದ ನೋಡಿದಾಗ ವಿಮರ್ಶೆ ಒಂದು ರೀತಿಯಲ್ಲಿ ತೋರುದೀಪವಾಗಬಹುದು. ಸಹೃದಯರು ತಾವಾಗಿಯೇ ಓದಿದಾಗ ಕಾಣದಿದ್ದ ಹೊಸ ಅಂಶಗಳನ್ನು ಹೊಸ ದೃಷ್ಟಿಯನ್ನು ಅವರು ವಿಮರ್ಶೆಯನ್ನೋದಿ ಪಡೆಯಬಹುದು. ವಿಮರ್ಶೆಯಿಂದ ಓದುಗರ ರುಚಿಶುದ್ಧಿಯೂ ಹಾಗೂ ಉತ್ತಮ ಅಭಿರುಚಿಗಳ ನಿರ್ದೇಶನವೂ ಆಗುತ್ತದೆ. ಸಹೃದಯರಿಂದ ಒಂದು ಕಡೆ ಅತಿ ಪ್ರಶಂಸೆಗೆ, ಮತ್ತೊಂದು ಕಡೆ ಅವಜ್ಞೆಗೆ ಗುರಿಯಾದ ಕವಿಗಳನ್ನೂ ಕವಿಕೃತಿಗಳನ್ನೂ ವಿಮರ್ಶೆ ತನ್ನ ತಕ್ಕಡಿಯಲ್ಲಿ ತೂಗಿ ಸರಿಯಾದ ಬೆಲೆಯನ್ನು ನಿರ್ಣಯಿಸಿ ಸಹೃದಯ ಸಮಾಜದ ಕಣ್ಣನ್ನು ತೆರೆಯಿಸಬಹುದು.
ವಿಮರ್ಶೆ ಒಂದು ರೀತಿಯಲ್ಲಿ ಸಾಹಸದ, ಆದರೆ ಅತ್ಯಂತ ಜವಾಬ್ದಾರಿಯುತವಾದ ಕೆಲಸ. ಇದರಿಂದ ವಿಮರ್ಶಕನಿಗೆ ಕೀರ್ತಿ ಬರಬಹುದು ಇಲ್ಲವೆ ಅಪಕೀರ್ತಿ ಬರಬಹುದು. ಆತನ ಬುದ್ಧಿಗೆ ಇದೊಂದು ಒರೆಗಲ್ಲು. ವಿಮರ್ಶೆ ಮಾಡುತ್ತಾ ಮಾಡುತ್ತಾ ಆತನ ವಿಚಾರಶಕ್ತಿ ಹರಿತವಾಗುತ್ತದೆ, ಕಣ್ಣು ಸೂಕ್ಷ್ಮವಾಗುತ್ತದೆ, ರಸಾನುಭವ ಶಕ್ತಿ ವರ್ಧಿಸುತ್ತದೆ. ಒಟ್ಟಿನಲ್ಲಿ ಇದೊಂದು ಬಗೆಯ ವ್ಯಾಯಾಮ ಆತನ ಆಲೋಚನಾಶಕ್ತಿಗೆ. ಎಲ್ಲಕ್ಕೂ ಮಿಗಿಲಾಗಿ ಕಸ-ರಸಗಳನ್ನು ಬೇರ್ಪಡಿಸಿದ ಕೃತಕೃತ್ಯತೆಯ ಭಾವವೇ ಆತನಿಗೆ ಲಭಿಸುವ ಅಂತಿಮ ಪ್ರಯೋಜನವೆನ್ನಬಹುದು.
ನಮಗೂ ಕೃತಿಗೂ ನಡುವೆ
ಯಾತ್ರೆಗಾಗಿ ಬೇಲೂರಿಗೋ ಹಳೇಬೀಡಿಗೋ ಹೋಗುತ್ತೇವೆ. ದೇವಸ್ಥಾನದ ಆವರಣವನ್ನು ಪ್ರವೇಶಿಸುತ್ತಲೇ ಒಬ್ಬಿಬ್ಬರು ಬರುತ್ತಾರೆ. ‘ಬನ್ನಿ, ನಾವು ದೇವಸ್ಥಾನವನ್ನು ತೋರಿಸುತ್ತೇವೆ’- ಎನ್ನುತ್ತಾರೆ. ನಾವು ಅವರ ನಿರ್ದೇಶನವನ್ನು ಒಪ್ಪಿ ಅವರೊಂದಿಗೆ ಹೊರಟರೆ ಅವರು ದೇವಸ್ಥಾನದ ಪ್ರತಿಯೊಂದು ಭಾಗವನ್ನು ಕುರಿತು ವಿವರಿಸತೊಡಗುತ್ತಾರೆ. ನಾವಾಗಿ ನೋಡಿದರೆ ನಮ್ಮ ಕಣ್ಣಿಗೆ ಬೀಳದೆ ಇರಬಹುದಾಗಿದ್ದ ಎಷ್ಟೋ ಅಂಶಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಾರೆ. ತೋರಿಸುವವರು ಸುಮ್ಮನೆ ಆಯಾ ವಿಗ್ರಹಕ್ಕೆ ಸಂಬಂಧಪಟ್ಟ, ನಮಗಾಗಲೇ ಗೊತ್ತಿರುವ ಪುರಾಣ ಕಥೆಗಳನ್ನೋ, ಅಥವಾ ಇದರ ಕೈಬಳೆ ಹೀಗೆ ತಿರುಗುತ್ತದೆ, ಅದರ ಕಾಲಂದಿಗೆ ಹಾಗೆ ತಿರುಗುತ್ತದೆ, ಈ ಮೂರ್ತಿಯ ಕಿರೀಟದಲ್ಲಿ ನೂರಾ ಎಂಟು ಮಣಿಗಳನ್ನು ಕೆತ್ತಿದ್ದಾರೆ ಎನ್ನುವಂಥ ವಿವರಗಳನ್ನೋ ಹೇಳುತ್ತಾ ಹೋದರೆ, ನಮಗೆ ಗೊತ್ತಿರುವ ಅಥವಾ ನಮಗೆ ಬೇಕಿಲ್ಲದ ಕೆಲವು ಚಮತ್ಕಾರಜನಕ ಸಂಗತಿಗಳನ್ನೋ ನಿರೂಪಿಸುತ್ತಾ ಹೋದರೆ, ನಮಗೆ ಬೇಸರವಾಗಲೂಬಹುದು. ಅಂತಲ್ಲದೆ ಸುಶಿಕ್ಷಿತನಾದ, ಉತ್ತಮ ಅಭಿರುಚಿಯುಳ್ಳ ನಿರ್ದೇಶಕನೊಬ್ಬ ಆಯಾ ವಿಗ್ರಹದ ಸೊಗಸನ್ನು, ಭಾವವನ್ನು, ಭಂಗಿಯನ್ನು, ಅದಕ್ಕಿರಬಹುದಾದ ಐತಿಹಾಸಿಕ ಮತ್ತು ಶಿಲ್ಪ ಶಾಸ್ತ್ರೀಯ ಹಿನ್ನೆಲೆಯ ಆಧಾರದಿಂದ ವಿವರಿಸಿದಾಗ ನಮಗೆ ಆ ದೇವಸ್ಥಾನದ ಶಿಲ್ಪದ ಪರಿಚಯ ಇನ್ನೂ ಚೆನ್ನಾಗಿ ಆಗಬಹುದು. ಅದರಿಂದ ನಮಗೆ ಒಂದು ಬಗೆಯ ಉಲ್ಲಾಸವೂ, ಸಂತೋಷವೂ ಆಗುತ್ತದೆ. ನಮ್ಮ ತಿಳಿವಳಿಕೆಯ ಪರಿಧಿ ವಿಸ್ತರಿಸಿದ ಅನುಭವವಾಗುತ್ತದೆ.
ಕಾವ್ಯವೊಂದರ ಪರಿಚಯಕ್ಕೆ ಹೊರಟಾಗಲೂ ಹೀಗೆಯೇ. ಕೃತಿಯ ಪರಿಚಯ, ಪರಿಶ್ರಮವಿರುವವರು ಯಾರಾದರೂ ಅದನ್ನು ಕುರಿತು ಸಹೃದಯತೆಯಿಂದ ಅದರ ಸೊಗಸನ್ನು ಆಸ್ವಾದಿಸಿ, ವಿವೇಚಿಸಿ ನಮಗಾಗಿ ವ್ಯಾಖ್ಯಾನಿಸಿದಾಗ ನಮಗೆ ಕೃತಿಯ ಬಗೆಗೆ ಕುತೂಹಲವೂ, ಕೃತಿಯ ಗುಣಾವಗುಣಗಳ ಪರಿಚಯವೂ ಆಗುತ್ತದೆ. ಈ ನಿದರ್ಶನದಿಂದ ಮೂರು ಅಂಶಗಳು ಸ್ಪಷ್ಟವಾಗುತ್ತವೆ. ಒಂದು, ಕವಿ ನಿರ್ಮಿತವಾದ ಕಲಾಕೃತಿ; ಎರಡು, ಕಲಾ ಕೃತಿಯ ಸೊಗಸನ್ನು ಸಹೃದಯರಿಗೆ ಪರಿಚಯ ಮಾಡಿಕೊಡಲು ನಿಂತ ನಿರ್ದೇಶಕ ಅಥವಾ ವಿಮರ್ಶಕ; ಮೂರು, ವಿಮರ್ಶಕನ ಮುಖಾಂತರ ಕೃತಿ ರಸಾಸ್ವಾದಕ್ಕೆ ಒಪ್ಪಿಕೊಂಡ ಸಹೃದಯ.
ದೇವಸ್ಥಾನಕ್ಕೆ ಹೋದಾಗ ಅದರ ಶಿಲ್ಪದ ಪರಿಚಯವನ್ನು, ಕಾವ್ಯವೊಂದರ ಅಭ್ಯಾಸವನ್ನು, ರಸಾಸ್ವಾದವನ್ನು, ಮೊದಲು ನಾವೇ ಮಾಡಿಕೊಳ್ಳುತ್ತೇವೆ; ಮಾಡಿಕೊಳ್ಳಬಲ್ಲೆವು; ಕಲಾಕೃತಿಗೂ ನಮಗೂ ನಡುವೆ ಈ ವಿಮರ್ಶಕ ಪೂಜಾರಿಯ ಪ್ರವೇಶವೇತಕ್ಕೆ ಎನ್ನಬಹುದು. ನಿಜ. ಪ್ರೇಕ್ಷಕನಾದವನು, ಸಹೃದಯನಾದವನು ಮೊಟ್ಟಮೊದಲು ಕಲಾಕೃತಿಯ ಪರಿಚಯವನ್ನು ತಾನೇ ನೇರವಾಗಿ ಮಾಡಿಕೊಳ್ಳುವುದು ಒಳ್ಳೆಯದು. ಬೇರೆ ಯಾವ ವ್ಯಕ್ತಿಗಳ ಅಭಿಪ್ರಾಯದ ಮಿಶ್ರಣವೂ, ಮಾಧ್ಯಮವೂ ಇಲ್ಲದೆ ತಾನೇ ಕೃತಿಯ ರಸಾಸ್ವಾದನಕ್ಕೆ ಪ್ರಯತ್ನ ಪಡುವುದೇ ಸರಿಯಾದ ಮಾರ್ಗ. ಯಾವಾಗಲೂ ವಿಮರ್ಶಕನ ನಿರ್ದೇಶನದ ಜೊತೆಯಲ್ಲಿಯೇ ಮೊತ್ತಮೊದಲು ಕೃತಿಪರಿಚಯಕ್ಕೆ ಹೊರಡಬಾರದು.[14] ಬೇಲೂರಿಗೋ ಹಳೇಬೀಡಿಗೋ ಹೋದವರು, ಮೊದಲ ಸಲ ನೋಡತಕ್ಕವರಂತೂ, ಯಾವ ನಿರ್ದೇಶಕರ ಉಪಾಧಿಯೂ ಇಲ್ಲದೆ ತಾವೇ ನೋಡುವುದು ಒಳ್ಳೆಯದು. ಹಾಗೆ ಕಂಡ ಅನುಭವಗಳನ್ನು ಮೆಲುಕು ಹಾಕಿ ವಿವೇಚಿಸಬೇಕು. ಆದರೆ ಎರಡನೆಯ ಸಲವೋ ಮೂರನೆಯ ಸಲವೋ ನೋಡಲು ಹೋದಾಗ ಬೇಕಾದರೆ, ನಿರ್ದೇಶಕನ ನೆರವನ್ನು ಕೋರಬಹುದು. ಆತನ ನಿರ್ದೇಶನದಿಂದ ನಿಮ್ಮ ತಿಳಿವಳಿಕೆಯ ಪರಿಧಿ ವಿಸ್ತರಿಸಿದರೆ, ನೀವು ಅದುವರೆಗೂ ಗಮನಿಸದಿದ್ದ ವಿಶೇಷಾಂಶಗಳ ಕಡೆಗೆ ನಿಮ್ಮ ಕಣ್ಣು ತೆರೆದರೆ ನಿಜವಾಗಿಯೂ ಅಂಥ ನಿರ್ದೇಶನದಿಂದ ನಿಮಗೆ ಲಾಭವಾಗುತ್ತದೆ; ಸಂತೋಷವೂ ಆಗುತ್ತದೆ. ಅವನ ನಿರ್ದೇಶನದಿಂದ ನಿಮಗೇನೂ ಉಪಯೋಗವಾಗದಿದ್ದರೆ, ಅವನ ಪಾಡಿಗೆ ಅವನನ್ನು ಬಿಟ್ಟುಬಿಡಿ. ಒಟ್ಟಿನಲ್ಲಿ ಸಾರಾಂಶ ಇಷ್ಟು: ವಿಮರ್ಶಕನ ಜೊತೆಯಲ್ಲಿಯೇ ಸಹೃದಯನಾದವನು ಕೃತಿಯ ಪ್ರಥಮ ಪರಿಚಯಕ್ಕೆ ಹೊರಡಬಾರದು. ತಾನು ಮೊದಲು ಆಸ್ವಾದಿಸಿ ಅದನ್ನು ಕುರಿತು ತನ್ನ ಅನುಭವವನ್ನು ತಾನೇ ಪರಿಭಾವಿಸಿ ವಿವೇಚಿಸಿ, ಅನಂತರ ಅದನ್ನು ಕುರಿತು ವಿಮರ್ಶಕರು ಏನನ್ನಾದರೂ ಹೇಳಿದ್ದಾರೆಯೇ ಎನ್ನುವುದನ್ನು ಗಮನಿಸುವುದು ಒಳ್ಳೆಯದು. ವಿಮರ್ಶೆಯನ್ನೋದಿದ ಮೇಲೆ ಆ ಕೃತಿಯನ್ನು ಕುರಿತು ನೀವು ರೂಪಿಸಿಕೊಂಡ ಭಾವನೆಗಳು, ವಿಮರ್ಶಕನ ಭಾವನೆಗಳಿಂದ ಖಚಿತವಾಗಬಹುದು, ಸಮರ್ಥಿತವಾಗಬಹುದು, ವಿಸ್ತರಿಸಬಹುದು ಅಥವಾ ಮಾರ್ಪಾಟನ್ನೇ ಹೊಂದಬಹುದು. ನಿಮ್ಮ ಅಭಿಪ್ರಾಯಗಳೊಂದಿಗೆ ವಿಮರ್ಶಕನ ಅಭಿಪ್ರಾಯಗಳೂ ಹೊಂದಿಕೊಂಡರೆ, ನಿಮ್ಮದನ್ನೇ ಖಚಿತಪಡಿಸಿದರೆ, ಸಮರ್ಥಿಸಿದರೆ, ಅನ್ನಿಸುತ್ತದೆ, ಇದೇ ಭಾವ ಭಾವನೆಗಳು ನನ್ನಂತೆ ಬೇರೆಯವರಿಗೂ ಬಂದ ಕಾರಣ, ನನ್ನ ಆಲೋಚನೆ ಸಮರ್ಪಕವಾಗಿದೆ ಎಂದು. ಒಂದು ವೇಳೆ ನಿಮ್ಮ ಅಭಿಪ್ರಾಯಗಳಿಗೂ ವಿಮರ್ಶಕನ ಅಭಿಪ್ರಾಯಗಳಿಗೂ ಏನೇನೂ ತಾಳೆಯಾಗದಿದ್ದರೆ, ಇಲ್ಲಿ ಈ ವ್ಯತ್ಯಾಸಕ್ಕೆ ಏನು ಕಾರಣವಿರಬಹುದೆನ್ನುವ ವಿಚಾರಪ್ರಚೋದನೆಗೆ ಅವಕಾಶವಾಗುತ್ತದೆ. ಹಾಗಲ್ಲದೆ ವಿಮರ್ಶಕನ ಆಲೋಚನೆಗಳಿಂದ ನಿಮ್ಮ ಅಭಿಪ್ರಾಯಗಳು ತಿದ್ದುಪಡಿಯಾಗುವುದಾದರೆ, ಅಥವಾ ಉತ್ತಮವಾದ ಮಾರ್ಪಾಟನ್ನು ಹೊಂದಿ ಅರಿವಿನ ಸೀಮಾರೇಖೆ ವಿಸ್ತರಿಸಿದರೆ, ಅದರಿಂದ ಲಾಭವೂ, ಹರ್ಷವೂ ಆಗುತ್ತದೆ; ವಿಮರ್ಶಕನ ಬಗೆಗೆ ಗೌರವವೂ ಮೂಡುತ್ತದೆ.
ವಿಮರ್ಶಕರ ಬಗೆಗೆ ಗೌರವವೂ ಮೂಡುತ್ತದೆ-ಎಂದೆವು. ಹಾಗೆಯೇ ಕನಿಕರವೂ ಮೂಡುತ್ತದೆ, ಪ್ರತಿಭಾಶಾಲಿಗಳೆನ್ನಿಸಿಕೊಂಡ ಕವಿಗಳೂ, ಲೇಖಕರೂ, ಅವರನ್ನು ಕುರಿತು ನಡೆದುಕೊಂಡಿರುವ ರೀತಿಯನ್ನು ನೋಡಿದರೆ. ಕವಿಗಳಂತೂ ಕೆಲವು ಸಲ ಎಲ್ಲೋ ಅಟ್ಟದ ಮೇಲೆ ನಿಂತು ಸವಾಲ್ ಹಾಕುತ್ತಾರೆ ವಿಮರ್ಶಕರಿಗೆ: “ನೀನೇರಬಲ್ಲೆಯಾ ನಾನೇರುವೆತ್ತರಕೆ? ನೀ ಹಾರಬಲ್ಲೆಯಾ ನಾ ಹಾರುವಗಲಕ್ಕೆ? ನೀ ಮುಳುಗಬಲ್ಲೆಯಾ ನಾ ಮುಳುಗುವಾಳಕ್ಕೆ?”[15] ಎಂದು. ಪಾಪ, ವಿಮರ್ಶಕನ ಕೆಲಸವೇ ಮೊದಲನೆಯದಾಗಿ ಅಪ್ರಿಯ ಸತ್ಯವನ್ನು ಎತ್ತಿ ಹೇಳತಕ್ಕದ್ದು. ಅದು ರುಚಿಸುವುದಾದರೂ ಎಷ್ಟು ಜನಕ್ಕೆ? ಸರಿ, ವಿಮರ್ಶಕನನ್ನು ಕುರಿತು ಅಪಹಾಸ್ಯ ಪ್ರತಿಭೆ ಕೊಂಕು ಶೈಲಿಯಲ್ಲಿ ಕಾಕು ನುಡಿಯುತ್ತದೆ: “ವಿಮರ್ಶಕರಿದ್ದಾರಲ್ಲ, ಇವರು ಶ್ರೀಮಂತರ ಬೆಲೆಬಾಳುವ ಉಡುಪುಗಳ ಮೇಲಿನ ಧೂಳನ್ನು ಒರೆಸುವವರು.”[16] ಹೀಗೆಂದವನು ಸುಪ್ರಸಿದ್ಧ ಲೇಖಕ ಬೇಕನ್. “ವಿಮರ್ಶಕರೆಂದರೆ ಯಾರು ಗೊತ್ತೆ? ಸಾಹಿತ್ಯ ಹಾಗೂ ಕಲಾಕ್ಷೇತ್ರಗಳಲ್ಲಿ ಕೈಸಾಗದೆ ಸೋತವರು.”[17] ಹೀಗೆಂದವನು ಡಿಸ್ರೇಲಿ. “ಈ ವಿಮರ್ಶಕರಿದ್ದಾರಲ್ಲ, ಇವರು ಕವಿಗಳೋ, ಚರಿತ್ರಕಾರರೋ, ಜೀವನ ಚರಿತ್ರೆಯ ಲೇಖಕರೋ ಆಗಬಹುದಾಗಿತ್ತು; ಒಂದಲ್ಲ ಒಂದು ಕ್ಷೇತ್ರದಲ್ಲಿ ಅವರು ಪ್ರಯತ್ನಿಸಿ ವಿಫಲರಾದವರು, ಆದ್ದರಿಂದ ವಿಮರ್ಶೆಯ ಕಡೆ ತಿರುಗಿದ್ದಾರೆ”[18] ಎನ್ನುತ್ತಾನೆ ಡೆಡನ್. ಕವಿ ಪೋಪ್ ತನ್ನ ಒಂದು ಪದ್ಯದಲ್ಲಿ ಇದೇ ಮಾತನ್ನು ಹೇಳುತ್ತಾನೆ.[19] ಈ ಎಲ್ಲ ಟೀಕೆಗಳ ಹಿಂದಿರುವ ಮನೋಭಾವವನ್ನು ಗಮನಿಸಿದರೆ, ಹೇಗೆ ಸೃಷ್ಟಿಶೀಲವಾದ ಶಕ್ತಿಯಿರತಕ್ಕವರು, ಕೃತಿವಿಮರ್ಶಕರನ್ನು ಕುರಿತು ಒಂದು ಬಗೆಯಲ್ಲಿ ಅಪಹಾಸ್ಯಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಅಪಹಾಸ್ಯದಲ್ಲಿಯೂ ಎರಡು ಅಂಶಗಳು ವ್ಯಕ್ತವಾಗುತ್ತವೆ: ಒಂದು, ವಿಮರ್ಶಕರ ಕೆಲಸ ಬೇರೊಬ್ಬರದನ್ನು, ತಮಗೆ ಸೇರದಿರುವ ವಸ್ತುವೊಂದನ್ನು ಎತ್ತಿಕೊಂಡು ಅದರ ಧೂಳು ಒರೆಸಿ, ಅಲಂಕರಣಗೊಳಿಸತಕ್ಕದ್ದು. ಎರಡನೆಯದು, ವಿಮರ್ಶಕರ ಕೆಲಸವೇನಿದ್ದರೂ, ನಿರ್ಮಿತವಾದ ಕಲಾಕೃತಿಯನ್ನು ಕುರಿತೇ ಹೊರತು, ಅವರಿಗೆ ಸ್ವತಹ ಕೃತಿ ನಿರ್ಮಾಣ ಮಾಡುವ ಶಕ್ತಿಯಿಲ್ಲ ಎನ್ನುವುದು. ಇದನ್ನು ಸ್ಪಷ್ಟಪಡಿಸಲೆಂದೇ “ಕಾವ್ಯ ಬರೆಯಲು ಹೊರಟು ಕೈಲಾಗದೆ ಸೋತವರು ವಿಮರ್ಶಕರಾಗಿರುತ್ತಾರೆ” ಎಂಬ ಮಾತು ಹೊರಟಿದ್ದು. ಕಾವ್ಯಯತ್ನದಲ್ಲಿ ಯಶಸ್ವಿಯಾಗಲಾರದ ಕವಿ ಒಳ್ಳೆಯ ವಿಮರ್ಶಕನಾಗಬಲ್ಲ ಎಂದರೆ, ಯಶಸ್ವಿಯಾದ ಕವಿ ಒಳ್ಳೆಯ ವಿಮರ್ಶಕನಾಗಲಾರನೆಂದೂ, ಯಶಸ್ವಿಯಾಗಲಾರದ ವಿಮರ್ಶಕ ಒಳ್ಳೆಯ ಕವಿಯಾಗಬಹುದು ಎಂದೂ ಹೇಳಲು ಸಾಧ್ಯವಿದೆ! ಆದರೆ ಸಫಲ ಕವಿ, ಸಫಲನಾದ ವಿಮರ್ಶಕನಾಗಲೂಬಹುದು; ವಿಫಲ ವಿಮರ್ಶಕ ಕಾವ್ಯಯತ್ನದಲ್ಲಿಯೂ ವಿಫಲನಾಗಿರಬಹುದು. ಅಯಶಸ್ವಿಗಳಾದ ಕವಿಗಳು ಉತ್ತಮ ವಿಮರ್ಶಕರಾದ ನಿದರ್ಶನಗಳಿರಬಹುದು. ಕಾವ್ಯ ನಿರ್ಮಾಣದಲ್ಲಿ ವಿಫಲನಾದ ಅಥವಾ ಅಯಶಸ್ವಿಯಾದ ಕವಿ ವಿಮರ್ಶಕನಾದ ಪಕ್ಷದಲ್ಲಿ, ಅವನಿಗೆ ನೇರವಾಗಿ ವಿಮರ್ಶೆಗೆ ತೊಡಗುವವರಿಗಿಂತ ಮಿಗಿಲಾದ ಕೆಲವು ಸಾಧನ ಸೌಲಭ್ಯಗಳು ಇರುವುದು ಸಾಧ್ಯ. ಏಕೆಂದರೆ ಆತನಿಗೆ ಆಗಲೇ ಕಾವ್ಯನಿರ್ಮಾಣದ ರಹಸ್ಯ, ಕವಿ ಮನಸ್ಸಿನ ಜಟಿಲತೆ, ರಸಾನುಭವದ ಸ್ವರೂಪದ ಪರಿಚಯ, ಕವಿಗೊದಗುವ ಸಮಸ್ಯೆಗಳ ಅರಿವು – ಈ ಮೊದಲಾದವುಗಳ ಪರಿಚಯ, ಆತ ಯಶಸ್ವಿಯಾದ ವಿಮರ್ಶಕನಾಗಲು ನೆರವಾಗಬಹುದು. ಆದರೆ ಈ ಮಾತಿನ ನೆಪದಲ್ಲಿ ಉತ್ತಮ ವಿಮರ್ಶಕರೆಲ್ಲ ಅಯಶಸ್ವಿಗಳಾದ ಕವಿಗಳಾಗಿದ್ದವರೇ ಎಂದಾಗಲೀ, ಕಾವ್ಯಯತ್ನದಲ್ಲಿ ವಿಫಲರಾದವರು ಕಡೆಗೆ ತಮ್ಮ ಯಶಸ್ಸಿಗಾಗಿ ವಿಮರ್ಶಕರಾಗಲು ಹವಣಿಸುತ್ತಾರೆ ಎಂದಾಗಲಿ ಹೇಳುವುದು ಸರಿಯಾದದ್ದಲ್ಲ. ಆದರೆ ಉತ್ತಮ ವಿಮರ್ಶಕನಾದವನು ಉತ್ತಮ ಕವಿಯೂ ಆಗಿದ್ದ ಪಕ್ಷದಲ್ಲಿ ಅದೊಂದು ಅಪೂರ್ವ ಸಂಘಟನೆಯೇ.
ವಿಮರ್ಶಕ, ಉತ್ತಮ ವಿಮರ್ಶಕನಾಗಬೇಕಾದರೆ ಅವನೂ ಕವಿಯಾಗಲೇ ಬೇಕಾದ್ದಿಲ್ಲ. ಆತ ಮೊದಲು ಉತ್ತಮನಾದ ಸಹೃದಯನಾದರೆ ಸಾಕು. ವಿಮರ್ಶಕನೆಂದರೆ ಸಹೃದಯ ಸಮೂಹದಲ್ಲಿಯೇ ಹೆಚ್ಚಿನ ತಿಳಿವನ್ನೂ ಸೂಕ್ಷ್ಮದೃಷ್ಟಿಯನ್ನೂ ಉಳ್ಳವನು; ಕವಿಯೇರಿದೆತ್ತರಕ್ಕೆ ಏರಿ, ಕವಿ ಮುಳುಗಿದಾಳಕ್ಕೆ ಮುಳುಗಿ ಕೃತಿಯ ಸೊಗಸನ್ನು ವ್ಯಾಖ್ಯಾನಿಸಿ ತೋರುವವನು. ಅದಕ್ಕೆ ಬೇಕಾದದ್ದು ಸಮರ್ಪಕವಾದ ಸಹೃದಯತೆ. ಏಕೆಂದರೆ ವಿಮರ್ಶೆಯಲ್ಲಿ “ಮೊದಲು ಆಸ್ವಾದ, ಅನಂತರ ವಿಮರ್ಶೆ. ಈ ವಿಮರ್ಶನಶಕ್ತಿ ರಸಾನುಭವದ ಜೊತೆಯಲ್ಲಿಯೇ ಬೆಳೆಯತಕ್ಕದ್ದು. ವಿಮರ್ಶಕ ದಿವ್ಯಸ್ಫೂರ್ತಿಗೆ ವಶನಾದವನೆಂದಾಗಲಿ ಅಥವಾ ಕೇವಲ ಪರೋಪಜೀವಿ ಎಂದಾಗಲಿ ತಿಳಿಯಬಾರದು. ಅವನೂ ನಮ್ಮಂತೆ ಒಬ್ಬ ಸಹೃದಯ. ತಾನು ಓದಿದ್ದರಲ್ಲಿ ಹಲವು ರುಚಿಸಿದ್ದು ಏಕೆ, ಮತ್ತೆ ಹಲವು ರುಚಿಸಲಿಲ್ಲವೇಕೆ ಎನ್ನುವ ಪ್ರಶ್ನೆಗಳನ್ನು ಕಂಡುಕೊಂಡವನು.”[20] ಈ ಬಗೆಯ ಪ್ರಶ್ನೆಗಳು ಏಳಬೇಕಾದರೆ ಅವನ ಆಸ್ವಾದನಶಕ್ತಿ ಸಮರ್ಪಕವಾಗಿರಬೇಕು. “ಒಂದು ಉತ್ತಮಕೃತಿಯ ಅನುಭವವನ್ನು ವಿಶ್ಲೇಷಿಸಬೇಕಾದರೆ ಆತ ಅದರ ಸೊಗಸನ್ನು ಮೊದಲು ಆಸ್ವಾದಿಸಬಲ್ಲವನಾಗಿರಬೇಕು; ತನ್ನ ಅಭಿರುಚಿ ಸಮರ್ಪಕವಾಗಿದೆ ಎನ್ನುವ ಬಗೆಗೆ ಓದುಗರಲ್ಲಿ ವಿಶ್ವಾಸವನ್ನುಂಟು ಮಾಡಬೇಕು.”[21] ಆತ ಹಾಗೆ ಓದುಗರಲ್ಲಿ ನಂಬುಗೆಯನ್ನುಂಟುಮಾಡಬೇಕಾದರೆ ವಿಶೇಷವಾದ ಕಾವ್ಯಾಭ್ಯಾಸದ ಪರಿಣತಿ ಆತನಿಗೆ ಅಗತ್ಯ. ಈ ಕಾವ್ಯಸಂಸ್ಕಾರ ಎನ್ನುವುದು ತಟಕ್ಕನೆ ಪ್ರಾಪ್ತವಾಗುವುದಲ್ಲ. “ಅದು ಕೇವಲ ಉತ್ತಮವಾದ ಕೃತಿಗಳ ಅಧ್ಯಯನಾನುಭವದ ಸಂಕಲನವಲ್ಲ; ಹಾಗೆ ತುಂಬಿಕೊಂಡ ಅನುಭವಗಳನ್ನು ಅಳವಡಿಸಿಕೊಳ್ಳುವ ರೀತಿಯೂ ಹೌದು.”[22] ವಿಮರ್ಶನಶಕ್ತಿ ವಿಶೇಷ ಪ್ರಯತ್ನದ ಪರಿಣಾಮವೇ ಹೊರತು ಸುಮ್ಮನೆ ಕೂತಲ್ಲಿಗೆ ಇಳಿದುಬಂದುದಲ್ಲ.
ಕೃತಿಯ ರಸಾನುಭವವನ್ನು ತನ್ನ ಬುದ್ಧಿಯ ಮೂಲಕ ವಿಶ್ಲೇಷಿಸಿಕೊಡುವ ಮುನ್ನ, ವಿಮರ್ಶಕನು ಕವಿ ಕೃತಿಯ ಅನುಭವವನ್ನು ತನ್ನಲ್ಲಿ ಪುನಃ ಸೃಷ್ಟಿಸಿಕೊಳ್ಳಬೇಕು. ಕೃತಿನಿರ್ಮಾಣವೆನ್ನುವುದು ಹೇಗೆ ಒಂದು ಸೃಷ್ಟಿಕಾರ‍್ಯವೋ ಕೃತಿರಸಾಸ್ವಾದನವೂ ಒಂದು ಬಗೆಯ ಸೃಷ್ಟಿ ಕಾರ‍್ಯವೇ. ಇದಕ್ಕೆ ವಿಮರ್ಶಕನಿಗೆ ಸೂಕ್ಷ್ಮದೃಷ್ಟಿಬೇಕು, ಕಲ್ಪನಾಶಕ್ತಿಬೇಕು. ಆಗ ಮಾತ್ರವೇ ಕವಿಕೃತಿಯ ಆತ್ಮವನ್ನರಿಯಲು ಆತನಿಗೆ ಸಾಧ್ಯವಾಗುತ್ತದೆ. ಕೃತಿಯ ಉದ್ದೇಶವೇನು, ಕೃತಿಯಲ್ಲಿ ಕವಿ ನಿರ್ವಹಿಸಿರುವುದೇನು ಎನ್ನುವುದನ್ನು ಗುರುತಿಸಲು ಗ್ರಹಿಸಲು ವಿಮರ್ಶಕ ಶ್ರಮಿಸಬೇಕು; ಕವಿಕೃತಿಯ ಆತ್ಮವನ್ನು ಒಳಹೊಕ್ಕು ನೋಡಿ ಕವಿಯ ಭಾವವನ್ನು ವರ್ಣಿಸಲು ಸಮರ್ಥನಾಗಬೇಕು. ಇದಕ್ಕೆ ಕಲ್ಪನಾಶಕ್ತಿ ಅಗತ್ಯ. ಅಷ್ಟೇ ಅಲ್ಲ, ಕೃತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಅದು ರಚಿತವಾದ ಸನ್ನಿವೇಶ. ಅದರ ರಚನೆಗೆ ಪ್ರಚೋದಕವಾದ ಪರಿಸರದ ಪ್ರಭಾವ, ಕವಿಯ ವ್ಯಕ್ತಿತ್ವದ ವಿಕಾಸ ಇವುಗಳನ್ನು ವಿಶದಪಡಿಸಬೇಕಾದರೆ, ಕಲ್ಪನಾಶಕ್ತಿಯೊಂದಿಗೆ ಸರಿಯಾದ ವಿಚಾರಶಕ್ತಿಯೂ ನೆರವಾಗಬೇಕಾಗುತ್ತದೆ.
ಕುತೂಹಲ ಮತ್ತು ಜಿಜ್ಞಾಸೆಯ ಮನೋಭಾವ ವಿಮರ್ಶಕನಲ್ಲಿ ಪ್ರಧಾನವಾಗಿರಬೇಕು. ಇದರ ಜೊತೆಗೆ ತಾನು ವಿಮರ್ಶಿಸುವ ಕೃತಿಯ ಬಗೆಗೆ ಅಪಾರವಾದ ಸಹಾನುಭೂತಿ ಇರಬೇಕು. ವಿಮರ್ಶೆ ಮೂಲತಃ ನಮ್ಮದಲ್ಲದ ಭಿನ್ನಮನೋಧರ್ಮಗಳನ್ನು ಒಳಹೊಕ್ಕು ನೋಡುವ ಪ್ರಯತ್ನವಾದುದರಿಂದ “ಮತ್ತೊಂದು ಮನಸ್ಸನ್ನು ಗ್ರಹಿಸಬೇಕಾದರೆ ಮೊದಲು ಅದರ ವೈಚಿತ್ರ್ಯಗಳನ್ನು ಸಹಿಸಿಕೊಳ್ಳಬೇಕು. …. ಕೇವಲ ವಿಚಾರ ವಿಶ್ಲೇಷಣೆಗಿಂತ ಪರಿಭಾವನೆ, ವಿಶೇಷವಾದ ಆತ್ಮಪ್ರತ್ಯಯಕ್ಕಿಂತ ಕೃತಿಯಲ್ಲಿ ತನ್ಮಯವಾಗುವಿಕೆ, ಇವುಗಳಿಂದ ಅಗ್ರಾಹ್ಯವಾದ ಸೂಕ್ಷ್ಮವಾದ ಪ್ರತಿಭಾವಂತನ ಮನಸ್ಸು ವಿಮರ್ಶಕನಿಗೆ ವಶವಾಗುತ್ತದೆ.”[23]- ಕವಿಯ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕಾದರೆ ವಿಶೇಷವಾದ ಸಹಾನುಭೂತಿ ಎಷ್ಟು ಅಗತ್ಯವೆಂಬುದು ಈ ಮಾತಿನಿಂದ ಸ್ಪಷ್ಟವಾಗುತ್ತದೆ.
ಕಾವ್ಯ ನಿರ್ಮಾಣಕ್ಕೆ ಕಾರಣಗಳನ್ನು ಹೇಳುವಾಗ ನಮ್ಮ ಆಲಂಕಾರಿಕರು ‘ಚಿತ್ತಸ್ವಾಸ್ಥ್ಯ’ವನ್ನು ಹೇಳುತ್ತಾರೆ. ಸ್ವಾಸ್ಥ್ಯ ಎಂದರೆ ದೇಹ ಮನಸ್ಸುಗಳ ಸ್ವಸ್ಥತೆ. ವಿಮರ್ಶಕನಿಗೂ ಇದು ಮೊತ್ತಮೊದಲನೆಯದಾಗಿ ಇರಬೇಕಾದ ಪರಿಕರ. “ವೈದ್ಯ ಹೇಗೆ ದೇಹದ ಆರೋಗ್ಯದ ಬಗ್ಗೆ ಆಸಕ್ತನೋ, ಹಾಗೆಯೇ ವಿಮರ್ಶಕ ಸಹೃದಯರ ಮನಸ್ಸಿನ ಬಗ್ಗೆ ಆಸಕ್ತ. ಏಕೆಂದರೆ ಅತ್ಯಂತ ಆರೋಗ್ಯಶಾಲಿಯಾದ ಮನಸ್ಸು ವಿಶೇಷವಾದ ಬೆಲೆಗಳನ್ನು ಗ್ರಹಿಸಬಲ್ಲದು.”[24] ಆದ ಕಾರಣ ಕವಿಯ ಮನಸ್ಸು ಸ್ವಸ್ಥವಾಗಿರಬೇಕು. ಅನಾರೋಗ್ಯವಾದ ಮನಸ್ಸು ಉತ್ತಮವಾದ ರುಚಿಯನ್ನು ಗ್ರಹಿಸಲಾರದು. ಹಾಗೆಯೇ ಯಾವುದು ಉತ್ತಮವೆಂಬುದನ್ನು ತಿಳಿಸಲಾರದು. ಇಲ್ಲಿ ‘ಆರೋಗ್ಯ’ವೆಂದರೆ, ಅದೊಂದು ಬಗೆಯ ಮಾನಸಿಕ ಎಚ್ಚರ. ಹಡ್ಸನ್ ಹೇಳುತ್ತಾನೆ: “ವಿಮರ್ಶಕ ಮಾನಸಿಕವಾಗಿ ಚುರುಕಾಗಿರಬೇಕು; ಮೃದುವಾಗಿರಬೇಕು. ಆತನ ದೃಷ್ಟಿ ಸೂಕ್ಷ್ಮವಾಗಿರಬೇಕು, ಕವಿಕೃತಿಯ ಭಾವಗಳಿಗೆ ಪಡಿಮಿಡಿಯುವಂತಿರಬೇಕು. ಕೃತಿಯ ಸಾರವನ್ನು ಗ್ರಹಿಸುವಲ್ಲಿ ಶಕ್ತನಾಗಿರಬೇಕು.”[25] ಇದು ಮನಸ್ಸು ಸ್ವಸ್ಥವಾಗಿರಬೇಕು ಎನ್ನುವುದರ ಅರ್ಥ. ವಿಮರ್ಶಕನ ಮನಸ್ಸಿನ ಸ್ವಾಸ್ಥ್ಯವನ್ನು ಎಲ್ಲಕ್ಕಿಂತಲೂ ಮಿಗಿಲಾಗಿ ಕೆಡಿಸತಕ್ಕದ್ದು ಪೂರ್ವಗ್ರಹ. ಹಿಂದೆ ಹೇಳಿದ ಸಮಸ್ತ ಲಕ್ಷಣಗಳನ್ನೂ ನುಂಗಿ ನೊಣೆಯುವ ಗ್ರಹ ಇದು. ತನ್ನ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಮರ್ಶಕ ಪೂರ್ವಗ್ರಹಗಳಿಂದ ತನ್ನನ್ನು ಕಾಯ್ದುಕೊಳ್ಳಬೇಕು. ಏನೋ ಒಂದು ಬಗೆಯ ಪಕ್ಷಪಾತ ಮತ್ತು ಪೂರ್ವಗ್ರಹಗಳು ಹೇಗೋ ಬಂದು ನುಗ್ಗಿ ಬಿಡುತ್ತವೆ. ವೈಯಕ್ತಿಕವಾದ ರುಚಿಭೇದದಿಂದ ಬಂದ ಪಕ್ಷಪಾತ, ತಾನು ಕಲಿತ ಶಿಕ್ಷಣದ, ತಾನು ಸೇರಿದ ಪಂಥದ, ತನ್ನಜಾತಿ, ಮತ, ಕಡೆಗೆ ರಾಷ್ಟ್ರಕ್ಕೆ ಸಂಬಂಧಿಸಿದ ಪಕ್ಷಪಾತಗಳು ವಿಮರ್ಶಕನಲ್ಲಿ ಸೇರಿಕೊಂಡಿರುವುದುಂಟು. ಇಂಥ ಪಕ್ಷಪಾತಗಳಿಂದ ವಿಮರ್ಶೆ ತಪ್ಪು ಹಾದಿ ತುಳಿದಿರುವ ಪರಿಯನ್ನು ನಿದರ್ಶನ ಪೂರ್ವಕವಾಗಿ ಇಲ್ಲಿ ವಿವರಿಸುವ ಅಗತ್ಯವಿಲ್ಲ; ಅದು ಅಷ್ಟರ ಮಟ್ಟಿಗೆ ಎಲ್ಲರಿಗೂ ಗೊತ್ತು. ಆದಕಾರಣ ವಿಮರ್ಶಕ ನಿರ್ಲಿಪ್ತ ಮನೋಭಾವವನ್ನು ಬೆಳೆಯಿಸಿಕೊಳ್ಳಬೇಕು. ನಿರ್ಲಿಪ್ತ ಮನೋಭಾವವೆಂದರೆ ಭಾವರಾಹಿತ್ಯವಲ್ಲ. ವಿಮರ್ಶಕ ಪಕ್ಷಪಾತರಹಿತನಾಗಿರಬೇಕು ಎಂದು ಹೇಳುವುದು ಸುಲಭ. ಆದರೆ ಅಂತಹ ಮನಃಸ್ಥಿತಿಯನ್ನು ಸಂಪಾದಿಸಿಕೊಳ್ಳುವುದು ಬಹು ಕಷ್ಟ. ಏಕೆಂದರೆ ಅವನೂ ಒಬ್ಬ ಮನುಷ್ಯ. “ರಾಜಕೀಯವೋ, ನೈತಿಕವೋ, ಧಾರ್ಮಿಕವೋ ಆದ ಉಪಾಧಿಗಳು ಆತನ ಮತಿಯನ್ನು ಕವಿಯುತ್ತವೆ. ಅವನಿಗೆ ವೈಯಕ್ತಿಕವಾದ ಪೂರ್ವಗ್ರಹಗಳುಂಟು-ಅವನಾಗಿ ಬರಮಾಡಿಕೊಂಡವು ಅಥವಾ ಆತನ ವಯಸ್ಸಿಗೆ ಇಲ್ಲವೆ ಕಾಲಕ್ಕೆ ಅನುಗುಣವಾದವು. ಅವನಿಗೂ ಶತ್ರುಗಳುಂಟು, ಮಿತ್ರರುಂಟು. ಅವನೂ ಎಡವುತ್ತಾನೆ, ತೂಕಡಿಸುತ್ತಾನೆ.”[26] ಆದಕಾರಣ ಆತ ಸಂಪೂರ್ಣ ನಿಷ್ಪಕ್ಷಪಾತದೃಷ್ಟಿಯಿಂದ ಇರಲೇಬೇಕು ಎಂದು ಹೇಳುವುದು ಒಂದು ಆದರ್ಶಸ್ಥಿತಿಯನ್ನು ನಿರ್ದೇಶಿಸಿದಂತಾಯಿತೇ ಹೊರತು ವಾಸ್ತವ ಸಾಧ್ಯಸ್ಥಿತಿಯನ್ನು ಹೇಳಿದಂತಾಗಲಿಲ್ಲ. ವಿಮರ್ಶಕ ನಿಷ್ಪಕ್ಷಪಾತವಾದ ಮನೋಭಾವವನ್ನು ಬೆಳೆಯಿಸಿಕೊಂಡಷ್ಟೂ ಆತನ ವಿಮರ್ಶೆ ವಿಶೇಷ ಬೆಲೆಯುಳ್ಳದ್ದಾಗಿರುತ್ತದೆ ಎಂದು ಹೇಳಬಹುದು. ಆದರೂ ಆದರ್ಶ ವಿಮರ್ಶಕನ ಲಕ್ಷಣವನ್ನು ಹೇಳಬಾರದು: “ಕಲ್ಪನಾಶಕ್ತಿ, ಅಂತರ್‌ದೃಷ್ಟಿ, ಸಹಾನುಭೂತಿ, ವಿದ್ವತ್ತು, ಜೀವನಾನುಭವ, ರೀತಿ-ತಂತ್ರಗಳನ್ನು ಗುರುತಿಸಿ ಮೆಚ್ಚುವ ಸಾಮರ್ಥ್ಯ, ವಿಶ್ಲೇಷಣಶಕ್ತಿ, ಪೂರ್ವಗ್ರಹ ವಿಮುಕ್ತಿ, ಉದಾರತೆ, ವ್ಯಾಖ್ಯಾನ ಕೌಶಲ ಇವು ಉತ್ತಮ ವಿಮರ್ಶಕನಿಗಿರಬೇಕಾದ ಯೋಗ್ಯತೆಗಳು. ಆದರ್ಶ ವಿಮರ್ಶಕನೆಂದರೆ ವಿಶ್ಲೇಷಣ ಶಕ್ತಿ ಹಾಗೂ ವೈಜ್ಞಾನಿಕ ದೃಷ್ಟಿಯನ್ನುಳ್ಳ ಕಲಾವಿದ. ಹೀಗಿರುವಾಗ ಇಂಥ ವಿಮರ್ಶಕರು ಅಪೂರ್ವವಾಗಿರುವುದು ಆಶ್ಚರ್ಯವಲ್ಲ.”[27]
ವಿಮರ್ಶಕನ ಕಾರ‍್ಯ ಬಹುಮುಖವಾದುದು. “ವಿಮರ್ಶಕ ಕೃತಿಯ ಬಗೆಗೆ ಆಗಲೇ ನಮ್ಮಲ್ಲಿ ರೂಪುಗೊಂಡ ಅಸ್ಪಷ್ಟಭಾವನೆಗಳಿಗೆ ಖಚಿತಾಕಾರವನ್ನು ನೀಡುತ್ತಾನೆ. ಕೆಲವು ವೇಳೆ ನಮಗರಿಯದ ಹೊಸ ದೃಷ್ಟಿಕೋನಗಳನ್ನು ತೆರೆಯುತ್ತಾನೆ. ಕೆಲವು ವೇಳೆ ಆತ ಮಾರ್ಗಾನ್ವೇಷಕ, ಅಷ್ಟೇ ಅಲ್ಲ ಮಾರ್ಗನಿರ್ಮಾಪಕನೂ ಹೌದು. ನಮಗೆ ತೀರ ಪರಿಚಿತವಾಗಿರುವುದರಲ್ಲಿಯೂ ನಾವು ಕಾಣದಿದ್ದ ಅಂಶಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುವ ಸ್ನೇಹಿತ, ಸಹ ಯಾತ್ರಿಕ.”[28] “ಒಮ್ಮೆ ಆತ ಓದುಗರೊಂದಿಗೇ ಪಡಿಮಿಡಿಯುವ ಸಹೃದಯ, ಒಮ್ಮೆ ಯಾವುದೋ ಕ್ರಮವನ್ನು ವಿವರಿಸುವ ಸಮರ್ಥಿಸುವ ಸೃಷ್ಟಿಶೀಲನಾದ ಲೇಖಕ; ಮತ್ತೊಮ್ಮೆ ಅಭಿಪ್ರಾಯಗಳ ತೂರಾಟ ತಿಕ್ಕಾಟಗಳ ನಡುವೆ ಅನುಕೂಲವಾದ ನೆಲೆಯೊಂದರಲ್ಲಿ ನಿಂತು ತನ್ನ ಕಾಲದ ಜನಾಭಿಪ್ರಾಯದ ಮೇಲೆ ತಕ್ಕಷ್ಟು ಪ್ರಭಾವವನ್ನು ಬೀರುವ ಅಧಿಕಾರಿ.”[29] ಇಷ್ಟನ್ನು ನಿರ್ವಹಿಸಬೇಕಾದರೆ ಆತನ ವಿದ್ವತ್ತಿನೊಂದಿಗೆ ವಿಚಾರಶಕ್ತಿಯೂ, ಸೂಕ್ಷ್ಮದೃಷ್ಟಿಯೊಂದಿಗೆ ತೀವ್ರ ಸಂವೇದನಾಸಾಮರ್ಥ್ಯವೂ ಸಮರಸವಾಗಿರಬೇಕಾಗುತ್ತದೆ.
--------------------------------------------------------------------------------
[1] T.S. Eliot : The use of Poetry and use of Criticism p. 20
[2] T.S. Eliot : Selected prose. p. 17
[3] ಕುವೆಂಪು : ಕಾವ್ಯ ವಿಹಾರ ಪು. ೮೨
[4] Orlo Williams : Contemporary Criticism of Literature, p. 15
[5] Hudson : Indroduction to the study of Literature, p. 261
[6] Cassell’s Encyclopaedia of Literature. p. 124 (Ed. S.H. Steinberg)
[7] I.A. Richards : Principles of Literary Criticism. p. 2
[8] Cassell’s Encyolopaedia of Literature. p. 132
[9] L. Abercromble : Principles of Literary Criticism, p. 21
[10] Nalini Kanth Guptha : Poets and Mystics, p. 49
[11] Orlo Williams : Contemporary Criticism of Literature, p. 24-25
[12] ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿಮರ್ಶೆ. ೧. (ಸಾಹಿತ್ಯದಲ್ಲಿ ವಿಮರ್ಶೆಯ ಸ್ಥಾನ) ಪು. ೧೧
[13] Orlo Williams : Contemporary Criticism of Literature p. 9
[14] ಎಲ್ಲರಿಗೂ ಎಲ್ಲ ಕೃತಿಗಳನ್ನು ಮೊದಲು ತಾವೇ ಓದಿ ಅನಂತರ ವಿಮರ್ಶಕರ ವಿಮರ್ಶೆಯನ್ನು ಗಮನಿಸಲು ಸಾಧ್ಯವಾಗದಿರಬಹುದು. ಎಷ್ಟೋ ವೇಳೆ ಕೃತಿಯೊಂದರ ವಿಮರ್ಶೆಯನ್ನೋದಿದ ನಂತರ, ಆ ಕೃತಿಯ ರಸಾಸ್ವಾದಕ್ಕೆ ಹೊರಟವರೂ ಉಂಟು. ಅಂತಹ ಸಂದರ್ಭಗಳಲ್ಲಿ ಓದುಗ ತಾನು ಮೊದಲು ಗಮನಿಸದ ಕೃತಿಯ ಬಗೆಗೆ ತನ್ನ ಗಮನವನ್ನು ಸೆಳೆದ ವಿಮರ್ಶಕನ ವಿಚಾರದಲ್ಲಿ ಕೃತಜ್ಞತೆಯನ್ನು ತೋರಿಸಬಹುದು.
[15] ಕುವೆಂಪು : ಕೃತ್ತಿಕೆ. ಪು. ೩೦
[16] James Reeves : The Critical Sense, p. 8
[17] ಅಲ್ಲೇ p. ೧೦
[18]
[19] A. Pope : An Essay on Criticism, Lines , 35-36
“Some have at first for wits, then poets past.
Turned critics next and proved plain fools at last”
[20] James Reeves. The Critical Sense, p. 13
[21] T.S. Eliot. the use of Poetry and the use of Criticism, p. 17
[22] ಅಲ್ಲೇ ಪು. ೧೮
[23] A.V.D. Nostrand, Literary Criticism in America, p. 77
[24] I.A. Richards : The Principles of Literary Criticism, p. 35
[25] Hudson : Introduction to the Study of Literature, p. 282
[26] Cassel’s Encyclopaedia of Literature, p. 124
[27] R. Sadasiva Iyer : A Hand Books of Literary Criticism, p. 45
[28] Hudson : Introduction to the Study of Literature, p. 267
[29] R. Sadasiva Iyer : A Hand Book of Literary Criticism, p. 12
blogger
delicious
digg
facebook
reddit
stumble
twitter
print
email
ಪುಸ್ತಕ: ಸಮಗ್ರ ಗದ್ಯ- 3
ಲೇಖಕರು: ರಾಷ್ಟ್ರಕವಿ ಡಾ|| ಜಿ ಎಸ್ ಶಿವರುದ್ರಪ್ಪ
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ