ಅಧ್ಯಾಯ 19:ರೈತ ಚಳವಳಿ ಸೈದ್ಧಾಂತಿಕ ಹೋರಾಟಗಳ ಮೇಲಿನ ಟಿಪ್ಪಣಿಗಳು
ಪ್ರಸ್ತುತ ಅಧ್ಯಯನದಲ್ಲಿ ಮುಖ್ಯವಾಗಿ 1980-90ರ ದಶಕದಲ್ಲಿ ಭಿನ್ನ ಭಿನ್ನ ರೈತ ಸಂಘಟನೆಗಳ-ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ನಡೆದ ರೈತ ಚಳವಳಿಗಳ ಕೆಲವು ಮಾದರಿಗಳನ್ನು ಚರ್ಚಿಸಲಾಗಿದೆ. ಹೋರಾಟಗಳಿಗೆ ನೇರವಾಗಿ ಸಂಬಂಧವಿಲ್ಲದಿದ್ದರೂ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಹಾಗೂ ಬೇರೆ ಬೇರೆ ಸಿದ್ಧಾಂತಗಳ ಹಿನ್ನೆಲೆಯಲ್ಲಿ ರೂಪುಗೊಂಡ ರೈತ ಸಂಘಟನೆಗಳ ಸೈದ್ಧಾಂತಿಕತೆಯನ್ನು ಚರ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ. 1980 ಮತ್ತು 1990ರ ದಶಕದಲ್ಲಿ ಭಾರತದ ರೈತ ಚಳವಳಿಯಲ್ಲೇ ಮಹತ್ವದ ಹೋರಾಟ ಮಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಬಗ್ಗೆ ಬಹಳಷ್ಟು ಮಾಹಿತಿಗಳಿರುವ ಹಿನ್ನೆಲೆಯಲ್ಲಿ ಅದರ ಕುರಿತು ಪ್ರಸ್ತುತ ಲೇಖನದಲ್ಲಿ ಚರ್ಚಿಸಿಲ್ಲ. ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು 1999ರಲ್ಲಿ ಪ್ರಕಟಿಸಿದ ಏಕೀಕರಣೋತ್ತರ ಕರ್ನಾಟಕದ ರೈತ ಚಳವಳಿಗಳು ಎನ್ನುವ ನನ್ನ ಕೃತಿಯಲ್ಲಿ ಇದರ ಕುರಿತಾದ ಚರ್ಚೆಗಳಿವೆ. ಹೀಗಾಗಿ ಅದರ ಬದಲು ಕರ್ನಾಟಕ ರಾಜ್ಯ ರೈತ ಸಂಘದ ಆರಂಭಕ್ಕಿಂತ ಮೊದಲಿದ್ದ ಸಂಘಟನೆಗಳ ಬಗ್ಗೆ ಹಾಗೂ ಅದರ ಸಮಕಾಲೀನ ರೈತ ಸಂಘಟನೆಗಳ ಸ್ವರೂಪೊಮತ್ತು ಸೈದ್ಧಾಂತಿಕತೆಯ ಕುರಿತು ಪ್ರಸ್ತುತ ಲೇಖನ ವಿಮರ್ಶಿಸಲು ಯತ್ನಿಸಿದೆ.
1956ರಿಂದ 1980ರವರೆಗೆ ಕ್ರಿಯಾಶೀಲವಾಗಿದ್ದ ಕರ್ನಾಟಕ ಪ್ರಾಂತ ರೈತ ಸಂಘ (ಸಿ.ಪಿ.ಎಂ. ಪಕ್ಷದ ರೈತ ಘಟಕ) ನಂತರ ಹಿನ್ನಡೆಯನ್ನು ಕಂಡಿತು. 1990ರ ದಶಕದ ಕೊನೆಯ ವರ್ಷಗಳಲ್ಲಿ ಮುಖ್ಯವಾಗಿ ಬಾಗೂರು-ನವಿಲೆ ಹೋರಾಟದ ಮೂಲಕ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ‘ಕಿಸಾನ್ ಸಭಾ’ವು ಜನಪ್ರಿಯತೆ ಗಳಿಸಿತು. ಇದಕ್ಕೆ ಸಂಬಂಧಪಟ್ಟ ವಿವರಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗುವುದು. 1960-1970ರ ದಶಕಗಳಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಕಬ್ಬು ಬೆಳೆಗಾರರ ಹೋರಾಟ, 1980ರ ದಶಕದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಂದ ಸಂಘಟಿತರಾದ ಸುಳ್ಯ-ಉಡುಪಿ ರೈತರ ಹೋರಾಟ, 1990ರ ದಶಕದಲ್ಲಿ ದಲಿತ ಸಂಘರ್ಷ ಸಮಿತಿಯ ಭೂ ಹೋರಾಟ, 1990ರ ದಶಕದಲ್ಲಿ ನಕ್ಸಲೈಟ್ ಹಿನ್ನೆಲೆಯ ರೈತ ಕೂಲಿ ಕಾರ್ಮಿಕ ಸಂಘವು ರಾಯಚೂರಿನಲ್ಲಿ ನಡೆಸಿದ ಹೋರಾಟ ಹಾಗೂ 1998ರಲ್ಲಿ ಸಿರಾದಲ್ಲಿ ನಡೆದ ರೈತ ಹೋರಾಟಗಳ ಬಗ್ಗೆ ಕೆಲವು ಮಾಹಿತಿಗಳನ್ನು ಕೊಡುವುದರೊಂದಿಗೆ ಅವುಗಳನ್ನು ವಿಶ್ಲೇಷಣೆ ಮಾಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ರೈತರ ಹೋರಾಟದ ‘ಲಿಬರಲ್’ ಮಾದರಿ, ಭಾರತೀಯ ಜನತಾ ಪಕ್ಷದ ‘ಬಲಪಂಥೀಯ’ ಧೋರಣೆಯೊಂದಿಗೆ ರೈತರನ್ನು ಸಂಘಟಿಸಿದ ಮಾದರಿ, ಕಟ್ಟಾ ಎಡಪಂಥೀಯ ನಕ್ಸಲೈಟ್ ಹಿನ್ನೆಲೆಯ ರೈತ ಕೂಲಿ ಕಾರ್ಮಿಕರ ಸಂಘ ಹಾಗೂ ಶಿರಾದಲ್ಲಿ ರೈತರ ಸ್ಥಳೀಯ ಹಾಗೂ ತಕ್ಷಣದ ಪೂರ್ವ ನಿಯೋಜಿತವಲ್ಲದ ಹೋರಾಟದ ಮಾದರಿಗಳು ಒಂದಕ್ಕೊಂದು ಸಂಬಂಧವಿಲ್ಲದಿದ್ದರೂ ಅವುಗಳೆಲ್ಲಾ ರೈತರ ಪರವಾಗಿಯೇ ನಡೆದ ಚಳವಳಿಗಳಾಗಿವೆ. ಸೈದ್ಧಾಂತಿಕವಾಗಿ ವೈರುಧ್ಯತೆಗಳನ್ನು ಹೊಂದಿರುವ ಈ ಸಂಘಟನೆಗಳ ಚಳವಳಿಗಳ ಬಗ್ಗೆ ಕೆಲವೊಂದು ವಿವರಗಳನ್ನು ನೀಡುವ ಪ್ರಯತ್ನ ಮಾಡಲಾಗಿದೆ.
ಕಿಸಾನ್ ಸಭಾದ ಬಾಗೂರು-ನವಿಲೆ ಹೋರಾಟ
1998ರಲ್ಲಿ ಕಿಸಾನ್ ಸಭಾವು (ಸಿ.ಪಿ.ಐ ಪಕ್ಷದ ರೈತ ಘಟಕ) ‘ಬಾಗೂರು-ನವಿಲೆ’ಯ ರೈತ ಚಳವಳಿ ಮೂಲಕ ರಾಜ್ಯದ ಗಮನ ಸೆಳೆಯಿತು. ಬಾಗೂರು-ನವಿಲೆ ರೈತ ಸತ್ಯಾಗ್ರಹಕ್ಕೆ ಕಾರಣಗಳನ್ನು ಈ ರೀತಿ ಕೊಡಬಹುದು : ಹಾಸನ ಜಿಲ್ಲೆಯ ಗೊರೂರಿನಲ್ಲಿ ಹೇಮಾವತಿ ನದಿಗೆ ಅಣೆಕಟ್ಟು ಕಟ್ಟಿ ಅದರ ನೀರನ್ನು ಬಯಲು ಪ್ರದೇಶವಾದ ತುಮಕೂರು, ಮಂಡ್ಯ, ತಿಪಟೂರುಗಳಿಗೆ ನೀರುಣಿಸುವ ಯೋಜನೆ 1976ರಲ್ಲಿ ಪ್ರಾರಂಭವಾಯಿತು. ಗೊರೂರಿನಿಂದ ಚನ್ನರಾಯಪಟ್ಟಣ ತಾಲೂಕಿನ ಬಾಗೂರುವರೆಗೆ ಬಂದ ಕಾಲುವೆ ಮುಂದೆ ಸಾಗಲು ಏರು ಪ್ರದೇಶ ಎದುರಾದಾಗ ಅಲ್ಲಿಂದ ನೀರು ತೆಗೆದುಕೊಂಡು ಹೋಗಲು ಬಾಗೂರಿನಿಂದ 10 ಕಿ.ಮೀ. ದೂರದ ನವಿಲೆಯವರೆಗೆ ಸುರಂಗವನ್ನು ತೋಡಲು ತೀರ್ಮಾನಿಸಲಾಯಿತು. ಆಗ ಆ ಪ್ರದೇಶದ ರೈತರು ತಮ್ಮೂರಿಗೂ ನದಿಯ ನೀರು ಸಿಗುತ್ತದೆ ಎಂದು ಸಂತಸಗೊಂಡಿದ್ದರು. ನೆಲದಲ್ಲಿ 150 ರಿಂದ 300 ಅಡಿಗಳ ಆಳದಲ್ಲಿ ತೋಡಲಾಗಿರುವ ಈ ಸುರಂಗವು ಎರಡು ಲಾರಿಗಳು ಎದುರು ಬದರು ಬಂದಲ್ಲಿ ಆರಾಮವಾಗಿ ಸಾಗಿ ಹೋಗುವಷ್ಟು ಅಗಲ ಮತ್ತು ಎತ್ತರ ಹೊಂದಿದೆ. ಸುಮಾರು 20 ವರ್ಷ ನಡೆದ ಈ ಕಾಮಗಾರಿ 1991ರಲ್ಲಿ ಮುಗಿಯುವ ಹೊತ್ತಿಗೆ ರೈತರ ಕನಸು ನನಸಾಗುವ ಬದಲು ಈ 10 ಕಿ.ಮೀ. ವ್ಯಾಪ್ತಿಯ ರೈತರ ಬದುಕಿನಲ್ಲಿ ದುರಂತದ ಛಾಯೆ ಕವಿಯತೊಡಗಿತು ಎಂದು ಆಗಸ್ಟ್ 1998ರ ‘ಜನವಿಮುಕ್ತಿ’ ಪತ್ರಿಕೆ ಅಭಿಪ್ರಾಯಪಟ್ಟಿದೆ.
ಬಾಗೂರು-ನವಿಲೆ ನಡುವಿನ 10 ಕಿ.ಮೀ. ಉದ್ದಕ್ಕೂ ಸಮೃದ್ಧ ತೆಂಗಿನ ತೋಟಗಳು ಇದ್ದು ಅತ್ಯಧಿಕ ತೇವಾಂಶವುಳ್ಳ ಕೊಬ್ಬರಿಗೆ ಈ ಪ್ರದೇಶ ಪ್ರಸಿದ್ದಿಯಾಗಿತ್ತು. ಆದರೆ ಈ ಸುರಂಗ ಮುಗಿಯುತ್ತಾ ಬಂದಂತೆ ಗಗನಚುಂಬಿ ತೆಂಗಿನಮರಗಳು ಒಣಗಿ ಹೋಗಲಾರಂಭಿ ಸಿದವು. ವರ್ಷಕ್ಕೆ ಸರಾಸರಿ 120 ಕಾಯಿ ಹಿಡಿಯುತ್ತಿದ್ದ ಮರಗಳಲ್ಲಿ 10 ಕಾಯಿ ಕೊಡುವುದೂ ಅಸಾಧ್ಯವಾಯಿತು. ಮೊದಮೊದಲು ತಮ್ಮ ಮರಗಳಿಗೆ ರೋಗ ತಗುಲಿರ ಬಹುದೆಂದು ಭಾವಿಸಿದ ರೈತರು ಔಷಧಿಯ ಮೊರೆಹೊಕ್ಕರು. ನಂತರ, ನೀರಿನ ಕೊರತೆಯಿರಬಹುದೆಂದು ಭಾವಿಸಿ ಬೋರ್ ತೋಡಿಸಿದರೆ ಅವೂ ಬತ್ತಿಹೋಗಲಾರಂಭಿಸಿ ದವು. ವಾಸ್ತವವಾಗಿ, ಆ ಪ್ರದೇಶದ ಅಂತರ್ಜಲವೆಲ್ಲಾ ಅಲ್ಲಿ ತೋಡಲಾಗಿರುವ ಸುರಂಗದಲ್ಲಿ ಬಸಿದು ಹೋಗುತ್ತಿತ್ತು. ಹೇಮಾವತಿ ನದಿಯ ನೀರಿನ ಜೊತೆಗೆ ಬಾಗೂರು-ನವಿಲೆ ನಡುವಿನ ಭೂಮಿಯ ಅಂತರ್ಜಲವೆಲ್ಲಾ ತುಮಕೂರಿನತ್ತ ಸಾಗಿಹೋಗಿತ್ತು. ಕ್ರಮೇಣ ಅಲ್ಲಿದ್ದ 15 ಸಣ್ಣ, ದೊಡ್ಡ ಕೆರೆಗಳೂ, ಹಲವಾರು ಬಾವಿಗಳೂ ಬತ್ತಿ ಹೋದವು. ಗಿಡಗಳಿಗಿರಲಿ, ಕುಡಿಯಲೂ ನೀರಿಲ್ಲದೆ ರೈತರು ಪರದಾಡಬೇಕಾಯಿತು. ಇದರಿಂದ ಸಹಜವಾಗಿಯೇ ರೈತರು ಆತಂಕಗೊಂಡರು.
ಬಾಗೂರು-ನವಿಲೆ ರೈತರು ಕಳೆದ 10 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಜೆ.ಎಚ್.ಪಟೇಲರು ಹಾಸನಕ್ಕೆ ಭೇಟಿ ನೀಡಿದರು. ಆಗ ಸಾವಿರಾರು ರೈತರು ಸೇರಿ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದಾಗ ಅದರ ಅಧ್ಯಯನಕ್ಕೆ ಸಮಿತಿಯೊಂದನ್ನು ರಚಿಸಲು ಒಪ್ಪಿಕೊಳ್ಳಲಾಯಿತು. ಈ ಸಮಿತಿಯ ವರದಿ ಹೀಗಿದೆ:
ಕಳೆದ ಹತ್ತು ವರ್ಷದ ಈ ಅವಧಿಯಲ್ಲಿ 10 ಕಿ.ಮೀ. ಉದ್ದಕ್ಕೂ 2 ಲಕ್ಷ 18 ಸಾವಿರಕ್ಕೂ ಹೆಚ್ಚಿನ ತೆಂಗಿನ ಮರಗಳು ಫಸಲು ಕಳೆದುಕೊಂಡಿವೆ. 24 ಹಳ್ಳಿಗಳು ನಷ್ಟ ಅನುಭವಿಸಿವೆೆ. 2525 ರೈತ ಕುಟುಂಬಗಳು ಸಂಕಷ್ಟಕ್ಕೀಡಾಗಿವೆೆ. ಸರಕಾರ ಈ ಎಲ್ಲಾ ರೈತರಿಗೆ ಒಟ್ಟು 25 ಕೋಟಿ 51 ಲಕ್ಷ ರೂಪಾಯಿಗಳ ನಷ್ಟ ತುಂಬಿಕೊಡಬೇಕು. ಮಾವು-ಹಲಸುಗಳಿಗೂ ಆದ ನಷ್ಟ ತುಂಬಿಕೊಡಬೇಕಲ್ಲದೆ, ರೈತರ ನೀರಾವರಿ ಮೂಲ ಬತ್ತಿ ಹೋಗಿರುವುದರಿಂದ ಹನಿ ನೀರಾವರಿ ಮೂಲಕ ವ್ಯವಸ್ಥೆ ಮಾಡಬೇಕು.
ಆದರೆ ಎಲ್ಲಾ ವರದಿಗಳಂತೆ ಈ ವರದಿಯೂ ಸರಕಾರದ ಕಡತಗಳ ರಾಶಿಗೆ ಮತ್ತೊಂದು ಎಂಬಂತೆ ಸೇರ್ಪಡೆಯಾಯಿತು. ಈ ಸಮಿತಿಯ ವರದಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ 1998ರ ಮಾರ್ಚ್ 13ರಂದು ಐದು ಸಾವಿರ ರೈತರು ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಮನೆ ಎದುರು ಧರಣಿ ನಡೆಸಿ ಆಶ್ವಾಸನೆಯ ನಂತರ ಮರಳಿದರು. ಆದರೆ ಆಶ್ವಾಸನೆ ಆಶ್ವಾಸನೆಯಾಗಿಯೇ ಉಳಿಯಿತು. ಬಾಗೂರಿನಲ್ಲಿ ಶುರುವಾದ ಸುರಂಗದ ಪ್ರವೇಶದ್ವಾರಕ್ಕೆ ಮಣ್ಣು ತಂದು ಹಾಕಿ, ನೀರನ್ನು ಬಂದ್ ಮಾಡಿ, ಧರಣಿ ಕುಳಿತರು. ಅಲ್ಲೇ ಗುಡಿಸಲು ಹಾಕಿಕೊಂಡು ಅಡಿಗೆ, ಊಟ ಮಾಡಲಾರಂಭಿಸಿದರು. ಅಲ್ಲದೆ, ಮೇ 11 ರಂದು 20,000 ರೈತರು ಬಾಗೂರಿನಿಂದ ನವಿಲೆಯವರೆಗೆ 10 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ್ದರು. ಜುಲೈ 16ರಂದು ಹಾಸನ ಬಂದ್ ಮಾಡಿ ಅದನ್ನು ಯಶಸ್ವಿಯಾಗಿ ನಡೆಸಿದರು. ಅದಕ್ಕೂ ಸರಕಾರ ಜಗ್ಗದಿದ್ದಾಗ ರೈತರು ರಸ್ತೆತಡೆ ಚಳವಳಿಯನ್ನು ಜುಲೈ 20ರಂದು ಆರಂಭಿಸಿದರು. ಆದರೆ ರೈತರ ಈ ಹೋರಾಟವನ್ನು ಸರಕಾರ ನಿರಂಕುಶವಾಗಿ ದಮನ ಮಾಡಿತು. ಪೊಲೀಸರು ಲಾಠಿಪ್ರಹಾರ ಮಾಡಿದರು. ಸರಕಾರದ ಬೇಜವಾಬ್ದಾರಿಯಿಂದ ಮೊದಲೆ ರೊಚ್ಚಿಗೆದ್ದಿದ್ದ ರೈತರು ಪೊಲೀಸ್ ಜೀಪ್ ಹಾಗೂ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದಕ್ಕೆ ಬೆಂಕಿ ಇಟ್ಟರು. ಪರಿಣಾಮವಾಗಿ, ಪೊಲೀಸರ ಆಕ್ರೋಶ ನಿರಪರಾಧಿ ರೈತರ ಮೇಲೂ ಕಾಣಿಸಿಕೊಂಡಿತು. ವೃದ್ಧರು ಮಕ್ಕಳೆನ್ನದೆ ಎಲ್ಲರ ಮೇಲೂ ದೈಹಿಕವಾಗಿ ಪೊಲೀಸರು ಹಲ್ಲೆ ನಡೆಸಿದರು. ‘ಜನ ವಿಮುಕ್ತಿ’(ಆಗಸ್ಟ್ 1998)ರ ಪ್ರಕಾರ
…ಗಂಡಸರಿಲ್ಲದ ಮನೆಯಲ್ಲಿ ಮಹಿಳೆಯರನ್ನು ಅವಾಚ್ಯವಾಗಿ ಬಯ್ದು ಅವಮಾನ ಮಾಡಿ ಮನೆಯೆಲ್ಲಾ ಜಾಲಾಡಿ ಬಟ್ಟೆ ಬರೆಗಳನ್ನು ಹರಿದು ಹಾಕಿ ತಮ್ಮ ಬರ್ಬರತೆಯನ್ನು ಪ್ರದರ್ಶಿಸಿದ್ದಾರೆ. ಅಂಗಡಿ ಮುಂಗಟ್ಟುಗಳನ್ನು ಲೂಟಿ ಮಾಡಿ ಅಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಡಿದ್ದಾರೆ. ಇಷ್ಟು ಸಾಲದೆಂಬಂತೆ ವಯಸ್ಸಿಗೆ ಬಂದ ಹಳ್ಳಿಯ ಮೂವರು ಹುಡುಗಿಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಇದುವರೆಗೆ ಆ ಹುಡುಗಿಯರ ಸುಳಿವೂ ಸಿಕ್ಕಿಲ್ಲ. ಪೊಲೀಸರ ಈ ರುದ್ರತಾಂಡವದಿಂದ ಕಂಗೆಟ್ಟ ಮುಗ್ಧ ರೈತರು ದೌರ್ಜನ್ಯದಿಂದ ಪಾರಾಗಲು ದೂರದ ಊರುಗಳಿಗೆ ಓಡಿಹೋಗಿದ್ದಾರೆ. ಹೆಂಗಸರನ್ನು ಒಳಗೊಂಡಂತೆ 103 ಜನರು ಈ ಕಾರಣಕ್ಕಾಗಿಯೇ ಜೈಲುವಾಸ ಅನುಭವಿಸಬೇಕಾಯಿತು.
ಅನಿವಾರ್ಯ ಪರಿಸ್ಥಿತಿಯಿಂದ ಸ್ವಪ್ರೇರಿತವಾಗಿ ಶುರುವಾದ ಈ ಹೋರಾಟಕ್ಕೆ ಕಮ್ಯೂನಿಸ್ಟ್ ಪಕ್ಷದ ಅಖಿಲ ಭಾರತ ಕಿಸಾನ್ ಸಭಾ ನಾಯಕತ್ವ ನೀಡುತ್ತಿದೆ. ಆದರೆ ಇದರ ಅಧ್ಯಕ್ಷ ಗೋಪಾಲ್ ಆಮರಣಾಂತ ಉಪವಾಸ ಮಾಡಿ ಬೇಡಿಕೆಗಳ ಈಡೇರಿಕೆಯ ಸೂಚನೆಯಿಲ್ಲದಿದ್ದರೂ ಅದನ್ನು ಕೈಬಿಟ್ಟಿದ್ದಾರೆಂಬ ಆಪಾದನೆಯೂ ಇದೆ. ರೈತರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಲು ಯಾವ ರಾಜಕೀಯ ಪಕ್ಷಗಳೂ ಮುಂದೆ ಬರುತ್ತಿಲ್ಲವೆನ್ನುವುದು ಪ್ರಜಾಪ್ರಭುತ್ವವನ್ನು ಲೇವಡಿ ಮಾಡಿದಂತೆ ಎಂದು ಭಾವಿಸಬೇಕಾಗುತ್ತದೆ.
ಇಷ್ಟೆಲ್ಲಾ ನೋವುಗಳ ಮಧ್ಯೆ ತುಮಕೂರು ನಾಲೆಗೆ ನೀರು ಬೇಕೆಂದು ತುಮಕೂರು ರೈತರು ಹೋರಾಟ ಆರಂಭಿಸಿದ್ದಾರೆ. ಈ ರೈತರು ಬಾಗೂರು-ನವಿಲೆ ರೈತರಿಗೆ ಪರಿಹಾರ ನೀಡಬೇಕೆನ್ನುವುದನ್ನು ಕಡೆಗಣಿಸಿ ತಮ್ಮ ಸಮಸ್ಯೆಯನ್ನು ಮಾತ್ರ ಮುಂದಿಟ್ಟಿದ್ದಾರೆ. ಸದ್ಯಕ್ಕಂತೂ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ ಎಂದು ಹೇಳದೆ ವಿಧಿಯಿಲ್ಲ. ಈ ಘಟನೆಯನ್ನು ಪ್ರಾಂತ್ಯಮಟ್ಟದ ಅಥವಾ ರಾಷ್ಟ್ರಮಟ್ಟದ ವಿಚಾರವನ್ನಾಗಿ ಮಾಡಿ ಚರ್ಚಿಸಲು ಅಖಿಲ ಭಾರತ ಮಟ್ಟದಲ್ಲಿ ರೈತ ಕಾರ್ಮಿಕ ಸಂಘಟನೆಯನ್ನು ಹೊಂದಿರುವ ಪ್ರಾಂತ ರೈತ ಸಂಘ ಕಿಸಾನ್ ಸಭಾ ಸಿ.ಪಿ.ಐ.(ಎಂ) ವಿಫಲವಾಗಿದೆ.
ಹೊಸಪೇಟೆಯ ಕಬ್ಬು ಬೆಳೆಗಾರರ ಹೋರಾಟ
ಟಿ.ಆರ್.ಚಂದ್ರಶೇಖರ್ ಅವರು ಈ ಹೋರಾಟದ ಕುರಿತಂತೆ ಬೆಲ್ಲದ ಚೆನ್ನಪ್ಪನವರ ನಿರೂಪಣೆಯೊಂದಿಗೆ ಬೆಳಕು ಚೆಲ್ಲಿದ್ದಾರೆ. ವಿಜಯನಗರದ ಕಾಲದಿಂದಲೂ ಕಬ್ಬು ಇಲ್ಲಿ ಪ್ರಮುಖ ಬೆಳೆಯಾಗಿದೆ. 1910-1915ರವರೆಗೆ ಹೊಸಪೇಟೆ ಮತ್ತು ಮುಖ್ಯವಾಗಿ ಚಿತ್ತವಾಡಿಗಿ ಬೆಲ್ಲದ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಆ ಕಾಲದಲ್ಲಿ ಶನಿವಾರ, ಭಾನುವಾರದ ಎರಡು ದಿನಗಳ ಸಂತೆಯಲ್ಲಿ 1500ರಿಂದ 2000 ಚೀಲ ಬೆಲ್ಲ ಮತ್ತಿತರ ವಸ್ತುಗಳ ವ್ಯಾಪಾರ ಆಗುತ್ತಿತ್ತು. ಇದೇ ವೇಳೆಗೆ ಮದರಾಸು ಸರಕಾರವು ಚಿತ್ತವಾಡಿಗಿಯಲ್ಲಿ ಸುಧಾರಿಸಿದ ಬೆಲ್ಲ ತಯಾರಿಕಾ ಘಟಕವೊಂದನ್ನು ಸ್ಥಾಪಿಸಿತು. ಆದರೆ ಈ ಯೋಜನೆ ರೈತರನ್ನು ಆಕರ್ಷಿಸಲು ವಿಫಲವಾಯಿತು.
1932ರಲ್ಲಿ ಭಾರತ ಸರಕಾರವು ದೇಶೀಯ ಸಕ್ಕರೆ ಉದ್ಯಮಗಳನ್ನು ವಿದೇಶಿ ಕಂಪನಿಗಳ ಪೈಪೋಟಿಯಿಂದ ರಕ್ಷಿಸಲು ‘ಸಕ್ಕರೆ ಉದ್ಯಮ ರಕ್ಷಣಾ ಕಾನೂನನ್ನು’ ಜಾರಿಗೆ ತಂದಿತು. ಅಲ್ಲಿಂದ ಮುಂದೆ ಈ ದೇಶದಲ್ಲಿ ಸಕ್ಕರೆ ಉದ್ಯಮ ಶರವೇಗದಲ್ಲಿ ಬೆಳೆಯಲಾರಂಭಿಸಿತು. ಸಾರ್ವಜನಿಕರೇ ಮುಂದೆ ಬಂದು ಕಾರ್ಖಾನೆಗಳನ್ನು ಹೊಸಪೇಟೆ ಯಲ್ಲಿ ಸ್ಥಾಪಿಸಲು ಯತ್ನಿಸಿದರು.ೊ1924-1925ರ ಸುಮಾರಿಗೆ ಅಮೆರಿಕ ವಿಶ್ವವಿದ್ಯಾನಿಲಯ ವೊಂದರಲ್ಲಿ ಕೃಷಿ ವಿಜ್ಞಾನದಲ್ಲಿ ಉನ್ನತ ಪದವಿ ಪಡೆದ ಡಾ.ಆರ್. ನಾಗನಗೌಡ, ಉನ್ನತ ಸರ್ಕಾರಿ ವೃತ್ತಿ ಬಿಟ್ಟು ಥಿಯೋಸೋಫಿಸ್ಟ್ ಆಗಿದ್ದ ರಂಗನಾಥ ಮೊದಲಿಯಾರ್ ಹಾಗೂ ತಾಂಡವ ಮೊದಲಿಯಾರ್ ಇವರುಗಳ ಪ್ರಯತ್ನದಿಂದ ಮದರಾಸು ಪ್ರಾಂತ್ಯದ ಪ್ರಭಾವಶಾಲಿ ಕಾಂಟ್ರ್ಯಾಕ್ಟರುಗಳೊಂದಿಗೆ ಆರ್ಥಿಕ ಸಹಾಯಕ್ಕಾಗಿ ಷೇರು ಬಂಡವಾಳವನ್ನು ಸಂಗ್ರಹಿಸಲಾಯಿತು. ಆ ಕಾಲದಲ್ಲಿ 10 ಲಕ್ಷ ರೂಪಾಯಿಗಳ ಬಂಡವಾಳವನ್ನು ಸಂಗ್ರಹಿಸ ಲಾಯಿತು. 1934-35ರಲ್ಲಿ ಸಕ್ಕರೆ ಕಾರ್ಖಾನೆಯು ಹೊಸಪೇಟೆಯ ಚಿತ್ತವಾಡಿಗೆಯಲ್ಲಿ ಕೆಲಸ ಪ್ರಾರಂಭಿಸಿತು.
ಬಂಡವಾಳಗಾರರು ಸಕ್ಕರೆ ಕಾರ್ಖಾನೆ ತಮ್ಮ ಕೈಗೆ ಬಂದ ಮೇಲೆ ರೈತರನ್ನು ಶೋಷಣೆ ಮಾಡಲು ಆರಂಭಿಸಿಯೇ ಬಿಟ್ಟರು. ಕಬ್ಬು ಬೆಳೆಗಾರರ ಉತ್ಸಾಹವನ್ನು ಕುಂದಿಸಿಬಿಟ್ಟರು. ಕಬ್ಬಿಗೆ ಯೋಗ್ಯ ಬೆಲೆ ಕೊಡುವಲ್ಲಿ ಕಾರ್ಖಾನೆ ವಿಫಲವಾಯಿತು. ಬೆಲೆ ನಿರ್ಧರಿಸುವಾಗ ಕೂಡ ಅಧ್ವಾನವಾಗಿತ್ತು. ಸರಬರಾಜು ಮಾಡಿದ ಕಬ್ಬಿಗೆ ಕಾಲಕ್ಕೆ ಸರಿಯಾಗಿ ಹಣ ಪಾವತಿ ಮಾಡುತ್ತಿರಲಿಲ್ಲ. ತೂಕದಲ್ಲಿ ಮೋಸ ಮಾಡಲು ಕಾರ್ಖಾನೆಯವರು ಆರಂಭಿಸಿದರು. ಕಂಪನಿಯ ಆಡಳಿತ ಮಂಡಳಿಯಲ್ಲಿದ್ದ ನಾಗನಗೌಡರು ಈ ಅನ್ಯಾಯವನ್ನು ಪರಿಹರಿಸಲು ಪ್ರಯತ್ನಿಸಿದರು. ಕಂಪನಿಗೆ ಬಂಡವಾಳವನ್ನೇನೂ ಹಾಕದಿದ್ದ ನಾಗನಗೌಡರು ಮಾತಿಗೆ ಆಡಳಿತ ಮಂಡಳಿಯಲ್ಲಿ ಬೆಲೆ ಸಿಗಲಿಲ್ಲ. ತುಂಬಾ ಶ್ರಮಪಟ್ಟು ಕಟ್ಟಿದ್ದ ಕಾರ್ಖಾನೆಯಿಂದ ನೊಂದುಕೊಂಡು ಗೌಡರು ಹೊರಬಂದರು. ನಾಗನಗೌಡರಂತೆ ಕಾರ್ಖಾನೆಯ ತೂಕ ಹಾಗೂ ಬೆಲೆ ವ್ಯವಸ್ಥೆಯನ್ನು ವಿರೋಧಿಸಿದವರ ಕಬ್ಬನ್ನು ಕೊಂಡುಕೊಳ್ಳುವುದನ್ನೇ ಕಾರ್ಖಾನೆಯು ನಿಲ್ಲಿಸಿತು. ಈ ರೀತಿಯ ಅನ್ಯಾಯ, ಅಪಮಾನ ಮತ್ತು ಅನನುಕೂಲಕ್ಕೆ ಸಿಲುಕಿದ ಕಬ್ಬು ಬೆಳೆಗಾರರು ತಮ್ಮ ಸಂಘಟನೆಯನ್ನು ಬೆಳೆಸಲು ಮುಂದಾದರು.
ಕಬ್ಬು ಬೆಳೆಗಾರರ ಸಂಘಟನೆಯಲ್ಲಿ ಆಸಕ್ತಿ ತೆಗೆದುಕೊಂಡವರಲ್ಲಿ ಹೆಚ್ಚಾಗಿ ದೊಡ್ಡ ಜಮೀನ್ದಾರರು, ವ್ಯಾಪಾರಸ್ಥರು ಹಾಗೂ ಶಿಕ್ಷಣ ಹೊಂದಿದ ರೈತರು ಇದ್ದರು. ಈ ಸಂಘಟನೆಯ ರೂವಾರಿ ನಾಗನಗೌಡರು. ಬೆಲ್ಲದ ಚೆನ್ನಪ್ಪ, ಪತ್ತಿಕೊಂಡ ಗುರುನಾಥಪ್ಪ ಮೊದಲಾದವರು ಬೆಲೆ ತೂಕಕ್ಕೆ ಸಂಬಂಧಿಸಿದ ಪ್ರಶ್ನೆಗಳ ಹಿನ್ನೆಲೆಯಲ್ಲಿ ರೈತ ಸಂಘಟನೆಗೆ ಒಂದು ಅಸ್ತಿತ್ವ ತಂದುಕೊಟ್ಟರು. 1950ರ ಹೊತ್ತಿಗೆ ಕಬ್ಬು ಬೆಳೆಗಾರರ ಸಂಘಟನೆಗೆ ಒಂದು ದೃಢವಾದ ರೂಪಕ್ಕೆ ಬಂದು ಕಮಲಾಪುರ, ಚಿತ್ತವಾಡಿಗಿ ಮತ್ತು ಹೊಸಪೇಟೆಗಳಲ್ಲಿ ನೋಂದಾಯಿಸಲ್ಪಟ್ಟ ರೈತ ಸಂಘಗಳು ನಾಗನಗೌಡರ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸುತ್ತಿದ್ದವು. ರೈತ ಸಂಘವು ಪ್ರಬಲವಾದ ಕಾರಣದಿಂದ ಕಾರ್ಖಾನೆ ಜೊತೆ ಸರ್ವಾನುಮತದ ಒಪ್ಪಂದಕ್ಕೆ ಬರುವ ವಾತಾವರಣ ಸೃಷ್ಟಿಯಾಯಿತು. ಕಬ್ಬು ಕಾರ್ಖಾನೆಗಳು ರೈತರ ಕಬ್ಬಿಗೆ ಸರಿಯಾದ ಬೆಲೆ ಕೊಡದಿದ್ದಾಗಲೆಲ್ಲಾ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಹೆಚ್ಚು ಬೆಲೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇಂತಹ ಸಂದರ್ಭದಲ್ಲಿ ರೈತ ಸಂಘ, ಕಾರ್ಖಾನೆ ಮತ್ತು ಸರ್ಕಾರಗಳ ಪ್ರತಿನಿಧಿಗಳಿಂದ ಕೂಡಿದ ತ್ರಿಪಕ್ಷ ಸಭೆಯ ಮೂಲಕ ಸಮಸ್ಯೆಗಳು ಇತ್ಯರ್ಥವಾಗುವಂತಹ ವ್ಯವಸ್ಥೆಯನ್ನು ರೂಪುಗೊಳಿಸುವುದರಲ್ಲಿ ಕೂಡ ರೈತ ಸಂಘದ ಪಾತ್ರ ಮಹತ್ವದ್ದಾಗಿದೆ. 1950ರ ದಶಕದಲ್ಲಿ ಕರ್ನಾಟಕದಲ್ಲಿ ವ್ಯವಸ್ಥಿತ ರೀಘಿ‘ಂದ ಹೋರಾಡಿ ಕಬ್ಬಿಗೆ ಹೆಚ್ಚಿನ ಬೆಲೆಯನ್ನು ಪಡೆದದ್ದು ಹೊಸಪೇಟೆ ಕಬ್ಬು ಬೆಳೆಗಾರರ ಸಂಘ ಎಂದು ಬೆಲ್ಲದ ಚೆನ್ನಪ್ಪ ಅವರು ವಿವರಿಸುತ್ತಾರೆ.
ಕೆಂಗಲ್ ಹನುಮಂತಯ್ಯನವರ ಕ್ಯಾಬಿನೆಟ್ನಲ್ಲಿ ಕೆಲವು ಕಾಲ ಕೃಷಿ ಸಚಿವರಾಗಿದ್ದ ಡಾ. ನಾಗನಗೌಡರ ನೇತೃತ್ವದ ಈ ರೈತ ಸಂಘವು ನ್ಯಾಯಾಲಯಗಳಲ್ಲೂ ಅನೇಕ ಮೊಕದ್ದಮೆಗಳನ್ನು ರೈತರ ಪರವಾಗಿ ನಡೆಸಿತು. 1968ರಲ್ಲಿ ಕೇಂದ್ರ ಸರಕಾರವು ಸಕ್ಕರೆ ಕಾರ್ಖಾನೆಗಳು ಕೊಡಬೇಕಾದ ಹೆಚ್ಚುವರಿ ಕಬ್ಬಿನ ಬೆಲೆಯ ಬಗ್ಗೆ ಅಧ್ಯಯನ ನಡೆಸಲು ಒಂದು ಏಕಸದಸ್ಯ ಆಯೋಗವನ್ನು ನೇಮಿಸಿತ್ತು. ಈ ಸಮಿತಿಯು 1960-61 ಮತ್ತು 1961-1962ನೇ ಸಾಲಿನಲ್ಲಿ ಅರೆದ ಕಬ್ಬಿಗೆ ಕಾರ್ಖಾನೆಗಳು ಎರಡು ವರ್ಷ ಕೂಡಿ ಪ್ರತಿ ಟನ್ಗೆ ರೂ.10.25ರಂತೆ ಹೆಚ್ಚುವರಿ ಬೆಲೆ ನೀಡಬೇಕೆಂದು ಸಲಹೆ ಮಾಡಿತು. ಸಮಿತಿಯ ಸಲಹೆಯಂತೆ ಕಾರ್ಖಾನೆಯು ಹಣ ಪಾವತಿ ಮಾಡಲು ಕೇಂದ್ರ ಸರಕಾರವು ಆಜ್ಞೆಯನ್ನು ಹೊರಡಿಸಿತು. ಆದರೆ ಕಾರ್ಖಾನೆಯ ಆಡಳಿತವರ್ಗವು ಸರಕಾರದ ಈ ಆಜ್ಞೆಯನ್ನು ಮರು ಪರಿಶೀಲಿಸುವಂತೆ ಸರಕಾರವನ್ನು ಕೋರಿತು. ಪರಿಣಾಮವಾಗಿ ರೈತ ಸಂಘವು ಕೂಡ ಸರಕಾರಕ್ಕೆ ಮನವಿ ಸಲ್ಲಿಸಿ, ಹೆಚ್ಚುವರಿ ಬೆಲೆ ಪಾವತಿ ವಿಷಯದಲ್ಲಿ ರೈತರ ಹಿತಾಸಕ್ತಿ ಯನ್ನು ಕಾಪಾಡಬೇಕೆಂದು ಒತ್ತಾಯ ಮಾಡಿತು. ಆದರೆ ಸರಕಾರವು ರೈತರ ಮನವಿಯನ್ನು ನಿರ್ಲಕ್ಷಿಸಿ, ಆಡಳಿತವರ್ಗಕ್ಕೆ ಅನುಕೂಲವಾಗುವಂತೆ ಏಕಪಕ್ಷೀಯವಾಗಿ ರೂ.10.25ಕ್ಕೆ ಬದಲಾಗಿ, ಎರಡು ವರ್ಷದ ಅವಧಿಗೆ ಬದಲಾಗಿ ಕೇವಲ 1960-1961ನೇ ಸಾಲಿನ ಕಬ್ಬಿಗೆ ಮಾತ್ರ ಕೇವಲ ಎಪ್ಪತ್ತು ಪೈಸೆ ಹೆಚ್ಚುವರಿ ಬೆಲೆಯನ್ನು ಕಾರ್ಖಾನೆಯು ಪಾವತಿ ಮಾಡುವಂತೆ 1968ನೆಯ ಸೆಪ್ಟೆಂಬರ್ 11ರಂದು ಮತ್ತೊಂದು ಆಜ್ಞೆ ಹೊರಡಿಸಿತು. ಈ ಅನ್ಯಾಯವನ್ನು ವಿರೋಧಿಸಿ, ಸರಕಾರದ ಮರು ಆಜ್ಞೆ ವಿರುದ್ಧ ಕರ್ನಾಟಕ ರಾಜ್ಯದ ಹೈಕೋರ್ಟಿನಲ್ಲಿ ಹೊಸಪೇಟೆ ರೈತ ಸಂಘವು ದಾವೆ ಹೂಡಿತು. ಹೈಕೋರ್ಟ್ ರೈತ ಸಂಘದ ವಾದ ಎತ್ತಿ ಹಿಡಿದು ತೀರ್ಪು ನೀಡಿತು. ರೈತ ಸಂಘದ ಪರವಾಗಿದ್ದ ರಾಜ್ಯ ಉಚ್ಚನ್ಯಾಯಾಲಯದ ತೀರ್ಪಿನ ವಿರುದ್ಧ ಕಾರ್ಖಾನೆ ಆಡಳಿತವರ್ಗವು ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿತು.
ಸುಪ್ರೀಂ ಕೋರ್ಟ್ ಕೂಡ 1975ರ ನವೆಂಬರ್ 19ರ ತೀರ್ಪಿನಲ್ಲಿ ಕಬ್ಬಿನ ಹೆಚ್ಚುವರಿ ಬೆಲೆ ನಿಗದಿಪಡಿಸುವಾಗ ಮತ್ತು ಅದನ್ನು ಮನ್ನಾ ಮಾಡುವಾಗ ಸರಕಾರವು ರೈತರ ಅಭಿಪ್ರಾಯವನ್ನು ಕೇಳಬೇಕೆಂಬ ಅಂಶವನ್ನು ಎತ್ತಿಹಿಡಿಯಿತು. ಈ ತೀರ್ಪಿನ ಆಧಾರದ ಮೇಲೆ ಬೆಲೆಯ ಬಗ್ಗೆ ವರದಿಗಾಗಿ ಕೇಂದ್ರ ಸರಕಾರದ ಸಕ್ಕರೆ ನಿರ್ದೇಶನಾಲಯಕ್ಕೆ ಕಾರ್ಖಾನೆಯು ಮನವಿಯೊಂದನ್ನು ಸಲ್ಲಿಸಿತು. ನಿರ್ದೇಶನಾಲಯವು ಕಾರ್ಖಾನೆಯು 1960-1961ನೇ ಸಾಲಿಗೆ ಎಪ್ಪತ್ತು ಪೈಸೆ ಹೆಚ್ಚುವರಿ ಬೆಲೆಯನ್ನು ನೀಡಬೇಕೆಂದು ಆದೇಶ ಹೊರಡಿಸಿ ರೈತರ ಹೋರಾಟಕ್ಕೆ ತಣ್ಣೀರೆರಚಿತು. ಪರಿಣಾಮವಾಗಿ, ಹಠ ಬಿಡದ ಹೊಸಪೇಟೆಯ ರೈತ ಸಂಘವು 1979ರಲ್ಲಿ ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಿತು(ದಾವೆ ನಂ.333 : 1979). ಏಕಸದಸ್ಯ ಸಮಿತಿ ಸಲಹೆಯಂತೆ ಕಾರ್ಖಾನೆಯು 1960-1961 ಮತ್ತು 1961-1962ರ ಸಾಲಿಗೆ ಕಬ್ಬಿನ ಹೆಚ್ಚುವರಿ ಬೆಲೆ ಪಾವತಿಗಾಗಿ ರೈತರಿಗೆ ಸುಮಾರು 15ರಿಂದ 20 ಲಕ್ಷ ಕೊಡಬೇಕಿತ್ತು (ಟಿ.ಆರ್.ಚಂದ್ರಶೇಖರ್, 1987). ಆದರೆ, ಸುಪ್ರೀಂಕೋರ್ಟ್ ನಲ್ಲಿ 18 ವರ್ಷ ದಾವೆ ನಡೆದು ಕೊನೆಗೆ ಅಂದರೆ 1997ರಲ್ಲಿ ಟನ್ವೊಂದಕ್ಕೆ ಕೇವಲ ಮೂವತ್ತೇಳು ಪೈಸೆಯನ್ನು ಹೆಚ್ಚುವರಿ ಬೆಲೆ ನೀಡಬೇಕೆನ್ನುವ ಸುಪ್ರೀಂಕೋರ್ಟಿನ ಆದೇಶ ಬಂದಿದೆ ಎಂದು ಟಿ.ಆರ್. ಚಂದ್ರಶೇಖರ್ ಅವರು ಇತ್ತೀಚೆಗೆ ನನಗೆ ತಿಳಿಸಿದರು. ಪ್ರಜಾಪ್ರಭುತ್ವೀಯ ವ್ಯವಸ್ಥೆಗೆ ಕಳಂಕವಾಗುವಂತೆ ಸರಕಾರದ ರೈತ ವಿರೋಧಿ ವರದಿಗಳು, ಕಾನೂನುಗಳು ಮತ್ತು ಬಂಡವಾಳಶಾಹಿಗಳ ಅಟ್ಟಹಾಸದ ಪರಮಾವಧಿಯಾಗಿರುವ ಕಾರ್ಖಾನೆಗಳ ಆಡಳಿತ ವರ್ಗಗಳು ಈ ದೇಶದ ಬೆನ್ನೆಲುಬಾಗಿರುವ ಶೇ.80ರಷ್ಟು ಜನರ ಆಕಾಂಕ್ಷೆಗೆ ಮಣ್ಣೆರೆಚಿರು ವುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆಯಾಗುವುದರಲ್ಲಿ ಸಂಶಯವಿಲ್ಲ. ಇರುವ ವ್ಯವಸ್ಥೆಯನ್ನು ಪೂರ್ಣವಾಗಿ ಒಪ್ಪಿಕೊಂಡು, ಅದರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿರುವ ಇಂಥ ಉದಾರವಾದಿ ರೈತ ಸಂಘಟನೆಗಳು ದಶಕಗಳವರೆಗೆ ‘ನ್ಯಾಯ’ಕ್ಕಾಗಿ ಕಾಯಬೇಕಾಯಿತು ಎನ್ನುವುದು ವಿಪರ್ಯಾಸವೇನಲ್ಲ.
ಭಾರತೀಯ ಜನತಾ ಪಕ್ಷದ ದಕ್ಷಿಣ-ಕನ್ನಡ ಕೇಂದ್ರಿತ ರೈತ ಚಳವಳಿಗಳು
ಬಲಪಂಥೀಯ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷವು ಭಾರತದ ರಾಜಕಾರಣದಲ್ಲಿ ಒಂದು ಶಕ್ತಿಯಾಗಿ ಬೆಳೆಯುವ ಮೊದಲಿನ ವರ್ಷಗಳಲ್ಲಿ ರೈತಪರವಾದ ಹೋರಾಟವೊಂದನ್ನು ದಕ್ಷಿಣ ಕನ್ನಡದಲ್ಲಿ ಸಂಘಟಿಸಿರುವುದು ತಿಳಿದುಬರುತ್ತದೆ. 1980ರ ದಶಕದಲ್ಲಿ ಸುಳ್ಯ ಹಾಗೂ ಉಡುಪಿ ಪ್ರದೇಶಗಳಲ್ಲಿ ರೈತರನ್ನು ಸಂಘಟಿಸಿ ಹೋರಾಟ ಮಾಡಿದವರಲ್ಲಿ ಪ್ರಮುಖರು ಸದಾನಂದಗೌಡ ಮತ್ತು ಡಾ.ವಿ.ಎಸ್. ಆಚಾರ್ಯ ಅವರು. ಇಬ್ಬರೂ ಭಾರತೀಯ ಜನತಾ ಪಕ್ಷದವರು. ನನ್ನ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸದಾನಂದಗೌಡರೊಂದಿಗಿನ ಸಂದರ್ಶನದಲ್ಲಿ ಪ್ರಸ್ತಾಪಿಸಿದ, ಚರ್ಚಿಸಿದ ಸಂಕ್ಷಿಪ್ತ ವಿವರಗಳನ್ನು ಇಲ್ಲಿ ನೀಡಲಾಗಿದೆ. ಗೇಣಿದಾರರು, ಕೃಷಿ ಕೂಲಿಕಾರರು ‘ಅಕ್ರಮವಾಗಿ’ ಉತ್ತುಕೊಂಡಿದ್ದ ಭೂಮಿಯನ್ನು ಸಕ್ರಮ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತ ಮುಖಂಡರಾಗಿದ್ದ ಸದಾನಂದಗೌಡರ ನೇತೃತ್ವದಲ್ಲಿ ಹೋರಾಟವು 1980-1981ರ ಅವಧಿಯಲ್ಲಿ ನಡೆಯಿತು. ನೂರಾರು-ಸಾವಿರಾರು ಸಂಖ್ಯೆಯಲ್ಲಿನ ಬಡಜನರ ಭೂಮಿಯನ್ನು ಸಕ್ರಮ ಮಾಡಬೇಕೆಂಬ ಬೇಡಿಕೆಯನ್ನು ಸರಕಾರ ತಳ್ಳಿ ಹಾಕಿದಾಗ ಸುಳ್ಯದಿಂದ ಮಂಗಳೂರಿನವರೆಗೆ ಸಾವಿರಾರು ಜನ ರೈತರ ಪಾದಯಾತ್ರೆ ನಡೆಯಿತು. ಇದೇ ಸಂದರ್ಭದಲ್ಲಿ ವಿ.ಎಸ್.ಆಚಾರ್ಯ ಅವರ ನೇತೃತ್ವದಲ್ಲಿ ಕೂಡ ಇದೇ ಉದ್ದೇಶಕ್ಕಾಗಿಯೇ ಉಡುಪಿಯಿಂದ ಮಂಗಳೂರಿನವರೆಗೆ ಪಾದಯಾತ್ರೆ ನಡೆಯಿತು. ಈ ಅವಿರತ ಹೋರಾಟಗಳಿಂದಾಗಿ ‘ಪಟ್ಟೆ’ ಇಲ್ಲದ ಸಾವಿರಾರು ರೈತರಿಗೆ ‘ಪಟ್ಟೆ’ ದೊರೆಯಿತು.
ಮಂಗಳೂರಿನ ಎಂ.ಆರ್.ಪಿ.ಎಲ್. ಅನ್ನು ಕೂಡ ಪರಿಸರ ಹಾಗು ರೈತರಿಗೆ ಸಂಬಂಧಿಸಿದಂತೆ ಬಿ.ಜೆ.ಪಿ. ನೇತೃತ್ವದ ರೈತ ಸಂಘಟನೆಗಳು ಹಾಗೂ ಬಲಪಂಥೀಯ ಪರಿಸರವಾದಿಗಳು 1990ರ ದಶಕದಲ್ಲಿ ಪ್ರತಿಭಟಿಸುತ್ತಿರುವ ವಿಚಾರ ಕೂಡ ಮುಖ್ಯವಾದುದು. ಸಮಸ್ಯೆ ಆರಂಭವಾದದ್ದೇ ಎಂ.ಆರ್.ಪಿ.ಎಲ್. ಎನ್ನುವ ಕಾರ್ಖಾನೆಯು ತನ್ನ ಕಲ್ಮಶ ತುಂಬಿದ, ಉಪಯೋಗಿಸಿ ಬಿಟ್ಟ ನೀರನ್ನು ಸಮುದ್ರಕ್ಕೆ ಬಿಟ್ಟಾಗ. ಸಹಜವಾಗಿಯೇ ಅಲ್ಲಿನ ಮೀನುಗಾರರು ಅದನ್ನು ಪ್ರತಿಭಟಿಸಿದರು. ರಾಜಕೀಯವಾಗಿ ಬಲಾಢ್ಯವಾದ ಬಿಜೆಪಿಯು ಈ ಮೀನುಗಾರರಿಗೆ ಬೆಂಬಲ ನೀಡುವುದರೊಂದಿಗೆ ಹೋರಾಟವನ್ನು ಆರಂಭಿಸಿತೆನ್ನಲಾಗಿದೆ. 1990ರ ದಶಕದಲ್ಲಿ (ಇದು ಇತ್ತೀಚೆಗೆ ನಡೆದ ಕೋಮುಗಲಭೆಗೂ ಕಾರಣವಾಗಿರುವ ವಿಚಾರ ಬೇರೆ). ಎಂ.ಆರ್.ಪಿ.ಎಲ್.ನವರು ತಮ್ಮ ತೈಲವನ್ನು ಪೈಪುಗಳ ಮೂಲಕ ಮಂಗಳೂರಿನಿಂದ ಬೆಂಗಳೂರಿನವರೆಗೆ ಕಳಿಸುವ ಯೋಜನೆ ಆರಂಭಿಸಿದಾಗ ಬಿ.ಜೆ.ಪಿ. ನೇತೃತ್ವದ ರೈತ ಸಂಘದ ಪ್ರತಿಭಟನೆ ಆರಂಭವಾಯಿತು. ಎಂ.ಆರ್.ಪಿ.ಎಲ್.ನ ಪೈಪ್ ಲೈನ್ಗಳು ಮಂಗಳೂರು, ಬಂಟ್ವಾಳ, ವಿಟ್ಲ, ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಸಂದರ್ಭದಲ್ಲಿ ರೈತರ ಸಾವಿರಾರು ಎಕರೆ ತೋಟ ಜಮೀನುಗಳು ನಾಶವಾಗುವ ಹಿನ್ನೆಲೆಯಲ್ಲಿ ರೈತರಿಂದ ಪ್ರತಿಭಟನೆಯಾಯಿತು. ತೋಟ ಜಮೀನುಗಳನ್ನು ಕಳೆದುಕೊಳ್ಳುವ ಭಯ ಒಂದೆಡೆಯಾದರೆ ಮತ್ತೊಂದು ಕಡೆ ಪೈಪ್ ಸೋರಿಕೆಯಿಂದ ಪರಿಸರ ಹಾಳಾಗುವ ಭಯವೂ ರೈತರಿಗಿರು ವುದರಿಂದ ರೈತರನ್ನು ಈ ಭಾಗದಲ್ಲಿ ಸಂಘಟಿಸಲು ಸಾಧ್ಯವಾಯಿತೆನ್ನಬಹುದು.
ಲೇಖನದ ಆರಂಭದಲ್ಲಿ ಚರ್ಚಿಸಿದ ಹಾಗೆ ಭಾರತೀಯ ರಾಜಕೀಯ ಪಕ್ಷಗಳು ಯಾವತ್ತೂ ಉದ್ಯಮಪರವಾಗಿರುತ್ತದೆ ಎನ್ನುವುದಕ್ಕೆ ಬಿಜೆಪಿಯ ಈ ಹೋರಾಟ ಒಂದು ಅಪವಾದದಂತೆ ಹೊರನೋಟಕ್ಕೆ ಕಾಣುತ್ತದೆ. ಬಿಜೆಪಿಯ ರಾಜಕೀಯ ನೀತಿಗಳು ಉದ್ಯಮ-ಕಾರ್ಖಾನೆ-ಬಂಡವಾಳದ ಪರವಾಗಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂ.ಆರ್.ಪಿ.ಎಲ್. ವಿರುದ್ಧ ಹಾಗೂ ರೈತರ ಪರವಾಗಿ ಬಿಜೆಪಿ ಪ್ರತಿಭಟಿಸುತ್ತಿರುವುದು ಆಶ್ಚರ್ಯವೆಂದೆನ್ನಿಸಿದರೂ ಆಶ್ಚರ್ಯವಲ್ಲ, ಅಪವಾದ ಎಂದೆನ್ನಿಸಿದರೂ ಅಪವಾದವಲ್ಲ. ತನ್ನ ಸೈದ್ಧಾಂತಿಕತೆಯನ್ನು ಎಲ್ಲ ವಲಯಗಳಲ್ಲಿಯೂ ಹರಡುವ ಉದ್ದೇಶವನ್ನು ಇಲ್ಲಿ ತಳ್ಳಿ ಹಾಕುವಂತಿಲ್ಲ.
ದಲಿತ ಸಂಘರ್ಷ ಸಮಿತಿಯ ಭೂ ಹೋರಾಟ
ಕರ್ನಾಟಕದ ರಾಜಕಾರಣದಲ್ಲಿ 1970ರ ದಶಕದಿಂದೀಚೆಗೆ ದಲಿತರ ಪರವಾದ ಹೋರಾಟ ಮಾಡುತ್ತಿರುವ ದಲಿತ ಸಂಘರ್ಷ ಸಮಿತಿಯ ಭೂ ಹೋರಾಟಗಳು ನಮ್ಮ ಗಮನ ಸೆಳೆಯುತ್ತವೆ. ಅವುಗಳಲ್ಲಿ ಮುಖ್ಯವಾದವು ಹೀಗಿವೆ.
1. ಸಿದ್ಲಿಪುರ ಭೂ ಹೋರಾಟ : ಭದ್ರಾವತಿ ತಾಲೂಕಿನ ಸಿದ್ಲಿಪುರದಲ್ಲಿ ಭೂಪಾಳಂ ಎನ್ನುವ ಜಮೀನ್ದಾರ ದಲಿತರಿಗೆ ಸೇರಬೇಕಾಗಿದ್ದ 33 ಎಕರೆ ನೀರಾವರಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದನು. ಪರಿಣಾಮವಾಗಿ 1997ರ ಫೆಬ್ರವರಿಯಲ್ಲಿ ಸರದಿ ಸತ್ಯಾಗ್ರಹವನ್ನು ಡಿ.ಎಸ್.ಎಸ್. ಸಂಘಟಿಸಿತು. ಹೀಗಾಗಿ 1978ರ ಡಿಸೆಂಬರ್ನಲ್ಲಿ ದಲಿತರಿಗೆ ತಲಾ ಒಂದೊಂದು ಎಕರೆ ನೀರಾವರಿ ಜಮೀನು ದೊರಕಿತು.
2. ಚಂದಗೋಡು ಭೂ ಹೋರಾಟ : 1979ರ ಜುಲೈ 24ರಂದು ಸರ್ವೆ ನಂ.74ರ 600 ಎಕರೆ ಬಗರ್ ಹುಕುಂ ಭೂಮಿಯಲ್ಲಿ 300 ಎಕರೆಯನ್ನು ಡಿ.ಎಸ್.ಎಸ್. ನೇತೃತ್ವದಲ್ಲಿ ದಲಿತರು ಆಕ್ರಮಿಸಿದರು. ಗ್ರಾಮದ 60 ಕುಟುಂಬಗಳಿಗೆ ತಲಾ 5 ಎಕರೆಯಂತೆ ಜಮೀನು ದಕ್ಕಿತು.
3. ಮೆದಕಿನಾಳ ಭೂ ಹೋರಾಟ: ಲಿಂಗಸೂರಿನ ಮೆದಕಿನಾಳದಲ್ಲಿ 1984ರಿಂದ ಭೂ ಹೋರಾಟ ನಡೆಯುತ್ತಿತ್ತು. ಪರಿಣಾಮವಾಗಿ, 1997ರ ಏಪ್ರಿಲ್ ತಿಂಗಳಲ್ಲಿ 67 ಎಕರೆ ಭೂಮಿ ಭೂರಹಿತ ದಲಿತರಿಗೆ ದೊರೆಯಿತು.
4. ಮಹಮದ್ನಗರ ಭೂ ಹೋರಾಟ: ಕೊಪ್ಪಳ ಜಿಲ್ಲೆಯ ಸುಶೀಲ ಬಾಬು ಮಾರ್ಕ್ ಎಂಬಾತ ಅಲ್ಲಿನ ಸಕ್ಕರೆ ಕಾರ್ಖಾನೆ ಮಾಲೀಕ. ಕೊಪ್ಪಳ ತಾಲೂಕಿನ ಬಸಾಪುರ, ಶಿವಪುರ, ಬಂಡಿ ಹರ್ಲಾಪುರ, ಹತ್ತಿವಟ್ಟಿ, ನಾರಾಯಣಪೇಟೆ, ರಾಜಾರಾಮ ಪೇಟೆ ಮತ್ತು ಮಹಮದ್ ನಗರಗಳ ಕೃಷಿ ಕಾರ್ಮಿಕರು ಸುಶೀಲಕುಮಾರನಿಗೆ ಸೇರಿದ 3770 ಎಕರೆ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು. 1985ರಲ್ಲಿ ಭೂಮಿಗಾಗಿ ಡಿ.ಎಸ್.ಎಸ್. ಮಹಮದ್ ನಗರದಲ್ಲಿ ಚಳವಳಿ ಆರಂಭಿಸಿತು. ಈ ವಿಶಾಲವಾದ ಭೂಮಿಯನ್ನು ಭೂರಹಿತ ದಲಿತರು ಆಕ್ರಮಿಸಿಕೊಂಡು ಗುಡಿಸಲು ಕಟ್ಟಿಕೊಂಡರು. 1987ರ ಜನವರಿ 15ರಂದು ಜಮೀನ್ದಾರರ ಕಡೆಯವರು ಬಾಂಬ್ ಸ್ಫೋಟಿಸಿದರು. 93 ಗುಡಿಸಲುಗಳು ಸುಟ್ಟು ಬೂದಿಯಾದವು. ಅನೇಕರು ಕೈಕಾಲುಗಳನ್ನು ಕಳೆದುಕೊಂಡರು. ಅನಂತರ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತರಲಾಯಿತು. ಮುಂದಿನ ತೀರ್ಮಾನಕ್ಕಾಗಿ ವಿಚಾರಣೆಯನ್ನು ಸ್ಥಳೀಯ ನ್ಯಾಯಾಲಯ ಕೈಗೆತ್ತಿಕೊಂಡಿತು. ಇದೇ ರೀತಿ ಹೊನ್ನಾಳಿ, ಚಂದಗೋಡು, ನಾಗಸಂದ್ರ, ಮರಸನಪಲ್ಲಿ, ಗುಳಹಟ್ಟಿಕಾವಲ್, ದೇವಲಾಪುರ, ಕಾದೇಹಳ್ಳಿ, ಗೆಜ್ಜಲುಗಟ್ಟಾ, ಕವಿತಾಳ ಕಬ್ಬಿನ ಹಳ್ಳಿಗಳಲ್ಲೂ ದಲಿತ ಸಂಘರ್ಷ ಸಮಿತಿಯಿಂದ ಭೂ ಹೋರಾಟಗಳು ನಡೆದವು.
ಸಿ.ಪಿ.ಐ(ಎಂ.ಎಲ್)-ರೆವಲ್ಯೂಷನರಿ ಯೂತ್ ಫೆಡರೇಷನ್(ಆರ್.ವೈ.ಎಫ್) ಎನ್ನುವ ನಕ್ಸಲೈಟ್ ಸಿದ್ಧಾಂತದ ಹಿನ್ನೆಲೆಯಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘಟನೆ. ದಲಿತ ಪರವಾದ ಭೂಮಿ ಹೋರಾಟಗಳನ್ನು ಇದು ಕೈಗೆತ್ತಿಕೊಂಡಿದೆ. 1995ರ ನವೆಂಬರ್ 13ರಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ 800 ಎಕರೆ ಅರಣ್ಯ ಭೂಮಿಯನ್ನು ವಶಪಡಿಸಿಕೊಂಡು ಆರ್.ವೈ.ಎಫ್. ಭೂರಹಿತರಿಗೆ ಹಂಚಿತು. ರೈತ ಹೋರಾಟಗಾರರನ್ನು ಈ ಸಂದರ್ಭದಲ್ಲಿ ಉದ್ದೇಶಿಸಿ ಮಾತನಾಡಿದ ಆರ್.ವೈ.ಎಫ್. ನಾಯಕ ಆರ್. ಮಾನಸಯ್ಯನವರು ‘ಇದು ನಕ್ಸಲ್ ಬರಿ ಹೋರಾಟದ ಮುಂದುವರಿಕೆ’ ಎಂದು ಹೇಳಿರುವುದು ಗಮನಾರ್ಹ.
ಕೊಡಗಿನ ಚಿಕ್ಕ ಅಳುವಾರನ ಹಳ್ಳಿಯ(ಸೋಮವಾರಪೇಟೆ ತಾಲೂಕು) ಸುಮಾರು 300 ಎಕರೆ ಭೂಮಿಯನ್ನು ಸರಕಾರವು ಬಹಳ ಹಿಂದೆ ಯಾವುದೋ ಕಾರ್ಖಾನೆಗೆ ಗೇಣಿ ನೀಡಿತ್ತು. 1997ರಲ್ಲಿ ಈ ಭೂಮಿ ಸರಕಾರದ ವಶಕ್ಕೆ ಬಂದಿತು. ಆಗ ಆ ಭೂಮಿಯನ್ನು ದಲಿತರಿಗೆ ಹಂಚಬೇಕೆಂದು ಆರ್.ವೈ.ಎಫ್. ಆಗ್ರಹಿಸಿತು. ಈ ಸಂದರ್ಭದಲ್ಲಿ ಕೊಡಗಿ ನಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುತ್ತಿದ್ದ ಕೊಡಗು ರಾಜ್ಯ ಮುಕ್ತಿ ಮೋರ್ಛಾ (ಕೆ.ಆರ್.ಎಂ.ಎಂ) ಎನ್ನುವ ಭೂಮಾಲೀಕ ಪರ ಸಂಘಟನೆ ಈ ಭೂ ಹಂಚಿಕೆಯನ್ನು ವಿರೋಧಿಸಿ, ಆ ಭೂಮಿಯನ್ನು ಯಾವುದಾದರೂ ಸಂಶೋಧನಾ ಕೇಂದ್ರಕ್ಕೆ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿತು. ಅಂತಿಮವಾಗಿ ಜಿಲ್ಲಾಡಳಿತವು ಪ್ರಭಾವಶಾಲಿಯಾಗಿದ್ದ ಕೆ.ಆರ್.ಎಂ.ಎಂ.ನ ಒತ್ತಾಯಕ್ಕೆ ಮಣಿಯಿತು. ಪರಿಣಾಮವಾಗಿ ದಲಿತರಿಗೆ ಅಲ್ಲಿ ಭೂಮಿ ದಕ್ಕಲಿಲ್ಲ.
ನಕ್ಸಲೈಟ್ ಹಿನ್ನೆಲೆಯ ರೈತ ಕೂಲಿಕಾರ್ಮಿಕರ ಸಂಘದ ರಾಯಚೂರು ಹೋರಾಟ
ಕರ್ನಾಟಕದ ಅತ್ಯಂತ ಹಿಂದುಳಿದ ಪ್ರದೇಶವೆಂದು ಯಾವತ್ತೋ ಪರಿಗಣಿಸಲಾದ ರಾಯಚೂರು ಪ್ರದೇಶದಲ್ಲಿ ನಕ್ಸಲೈಟ್ ಹಿನ್ನೆಲೆಯ ‘ರೈತ ಕೂಲಿ ಕಾರ್ಮಿಕರ ಸಂಘ’ವು ರೈತರನ್ನು ಸಂಘಟಿಸುವಲ್ಲಿ 1990ರ ದಶಕದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಭಾರತದಲ್ಲಿನ ಪ್ರಜಾಪ್ರಭುತ್ವ ಮಾದರಿಯನ್ನೇ ನಿರಾಕರಿಸುವ ಈ ಸಂಸ್ಥೆ ಸಂಘಟನೆ ಕಡು ಎಡಪಂಥೀಯ ಧೋರಣೆಯನ್ನು ಹೊಂದಿದೆ. ರಾಜಕೀಯವಾಗಿ ಸಿ.ಪಿ.ಐ.(ಎಂ.ಎಲ್.) ಪೀಪಲ್ಸ್ವಾರ್ ಗ್ರೂಪ್ ಎನ್ನುವ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ರೈತ ಕೂಲಿ ಕಾರ್ಮಿಕರ ಸಂಘದ ಜೊತೆ ಜೊತೆಗೆ ಪಿ.ಡಬ್ಲ್ಯೂ.ಜಿ.ಯ ಇನ್ನಿತರ ಘಟಕಗಳಾದ ಕರ್ನಾಟಕ ವಿಮೋಚನಾ ರಂಗ, ಪೀಪಲ್ಸ್ ಡೆಮಾಕ್ರೆಟಿಕ್ ಫಾರಂ, ಪ್ರಗತಿಪರ ವಿದ್ಯಾರ್ಥಿ ಕೇಂದ್ರ ಹಾಗೂ ಪ್ರಗತಿಪರ ಯುವಜನ ಸಂಘಗಳ ಸಹಕಾರದೊಂದಿಗೆ ರೈತರ ಸಮಸ್ಯೆಗಳಿಗೆ ತನ್ನದೇ ಆದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.ೊಈ ಸಂಸ್ಥೆಗಳ ಮುಖವಾಣಿಯಾದ ಜನವಿಮುಕ್ತಿ(ಸೆಪ್ಟೆಂಬರ್ 1998) ಪ್ರಕಾರ
ಕರ್ನಾಟಕ ರೈತ ಕೂಲಿ ಸಂಘದ ಹೋರಾಟವು ರೈತ ಕೂಲಿಗಳಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಚ್ಚಿ ಹೋರಾಟಕ್ಕೆ ಪ್ರೇರೇಪಿಸಿರುವುದಷ್ಟೇ ಅಲ್ಲ, ತನ್ನ ಸ್ಪಷ್ಟ ಸೈದ್ಧಾಂತಿಕ ತಿಳುವಳಿಕೆಯ ಮೂಲಕ ಭೂಮಾಲೀಕತ್ವವನ್ನು ಸಂರಕ್ಷಿಸುತ್ತಿರುವ ಪ್ರಭುತ್ವದ ಸ್ವರೂಪವನ್ನೂ ಬಯಲು ಮಾಡುತ್ತಿದೆ.
ರಾಯಚೂರಿನಲ್ಲಿ ಸಮಸ್ಯೆಯಿರುವುದು ಭೂಮಾಲೀಕರಿಗೂ ಮತ್ತು ಕೃಷಿ ಕೂಲಿಕಾರ ರಿಗೂ ಎಂದು ಸಂಘವು ಅಭಿಪ್ರಾಯಪಟ್ಟರೆ, ಸರಕಾರದ ದೃಷ್ಟಿಯಲ್ಲಿ ಸರಕಾರಕ್ಕೂ ಮತ್ತು ರೈತ ಕೂಲಿಕಾರರ ಸಂಘಕ್ಕೂ ನಡುವೆ ಇರುವ ಭಿನ್ನತೆ-ವೈಮನಸ್ಸುಗಳು ಸಮಸ್ಯೆಯ ಇನ್ನೊಂದು ಮುಖ ಎಂದು ಅಭಿಪ್ರಾಯಪಡಬಹುದು.
…ಪೊಲೀಸ್ ಕಾರ್ಯಾ ಚರಣೆಗಳು ಕಾನೂನು ಸುವ್ಯವಸ್ಥೆ ಕಾಪಾಡು ವುದಕ್ಕಿಂತ ಹೆಚ್ಚಾಗಿ ಹಳ್ಳಿಯ ರೈತರು ಸಂಘ ಕಟ್ಟಿಕೊಳ್ಳದಂತೆ ಅದರಲ್ಲೂ ಕರ್ನಾಟಕ ರೈತ ಕೂಲಿ ಸಂಘಕ್ಕೆ ಸೇರದಿರುವಂತೆ ಮಾಡುವುದಕ್ಕಾಗಿಯೇ ಆಗಿದೆಯೆಂದು.
ರಾಯಚೂರಿನ ಹಳ್ಳಿಗಳಲ್ಲಿ ನಡೆಯುತ್ತಿರುವ ದೌರ್ಜನ್ಯದ ಕುರಿತು ರಚಿಸಲಾದ ಸತ್ಯಶೋಧಕ ಸಮಿತಿಯು ವರದಿ ಮಾಡಿದೆ. ಈ ಸತ್ಯಶೋಧಕ ಸಮಿತಿಯಲ್ಲಿ ಪೀಪಲ್ಸ್ ಡೆಮಾಕ್ರೆಟಿಕ್ ಫಾರಂನ ಪ್ರೊ.ಬಾಬಯ್ಯ ಮೊದಲಾದವರಿದ್ದರೆಂದು 1999ರ ಮೇ-ಜೂನ್ನ ‘ಜನ ವಿಮುಕ್ತಿ’ ಸಂಚಿಕೆಯು ತಿಳಿಸುತ್ತದೆ.
ಭೂಮಿಗೆ ಸಂಬಂಧಿಸಿದ ಪ್ರಶ್ನೆಗಳು ಇಲ್ಲಿ ಗಾಢವಾಗಿವೆ. ಭೂ-ಮಾಲೀಕರು ಅನುಭವಿಸುತ್ತಿದ್ದ ಹೆಚ್ಚುವರಿ ಭೂಮಿ, ಇನಾಮ್ತಿ ಭೂಮಿಗಾಗಿ ರೈತ ಕೂಲಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಅಲ್ಲಿನ ಬಡರೈತರು ಹೋರಾಟ ಮಾಡುತ್ತಿದ್ದಾರೆ. ರಾಯಚೂರಿನ ಜೇಗರ್ ಕರ್ನಲ್ಲಿ 150 ಎಕರೆ ಇನಾಮ್ತಿ ಭೂಮಿಯನ್ನು ಅಲ್ಲಿಯ ಭೂಮಾಲೀಕನೊಬ್ಬ ಅನುಭವಿಸುತ್ತಿದ್ದುದನ್ನು ಸಂಘವು ಪ್ರತಿಭಟಿಸಿ ಹೋರಾಟ ಆರಂಭಿಸಿತು. ಕೂರ್ತಕುಂದಾ, ದೇವಸುಗೂರುಗಳಲ್ಲಿ ಭೂಮಾಲೀಕರು ಆಕ್ರಮವಾಗಿ ಹೆಚ್ಚುವರಿ ಭೂಮಿಯನ್ನು ಅನುಭವಿಸುತ್ತಿದ್ದಾರೆಂದು ಸಂಘವು ದೂರಿರುವುದನ್ನು ನಾವು ಕಾಣಬಹುದು. ಈ ಹಿನ್ನೆಲೆಯಲ್ಲಿ ಭೂರಹಿತರಿಗೆ ಈ ರೀತಿಯ ಭೂಮಿಗಳನ್ನು ಆಕ್ರಮಿಸಿಕೊಳ್ಳಲು ಸಂಘವು ಪ್ರೇರೇಪಿಸಿದಾಗ ಸಮಸ್ಯೆ ಬಿಗಡಾಯಿಸತೊಡಗಿತು. ಭೂಮಾಲೀಕರು ಪೊಲೀಸರ ಸಹಾಯದಿಂದ ಭೂಹೀನ ರೈತರನ್ನು ಬಗ್ಗು ಬಡಿಯುತ್ತಿದ್ದಾರೆಂದು ಸಂಘವು ಆಪಾದಿಸಿತು. ನ್ಯಾಯಕ್ಕಾಗಿ ಹೋರಾಡಿದ ರೈತರನ್ನು ಕಗ್ಗೊಲೆ ಮಾಡುತ್ತಿದೆಯೆಂದು ಕೂಡ ಸಂಘ ಆಪಾದಿಸಿತು. ಇತ್ತೀಚಿನ ಕೆಲವು ಘಟನೆಗಳ ಮೂಲಕ ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಇಲ್ಲಿ ಪ್ರಯತ್ನಿಸಲಾಗಿದೆ. 1998ರ ಸೆಪ್ಟೆಂಬರ್ ತಿಂಗಳ ‘ಜನವಿಮುಕ್ತಿ’ ಪತ್ರಿಕೆಯು ಅಪ್ಪನದೊಡ್ಡಿ ಗ್ರಾಮದ ಭೂಮಾಲೀಕ ನರಸಿಂಹಲು ಮಾಡಿರುವ ಅನ್ಯಾಯ, ಅಕ್ರಮ, ಅತ್ಯಾಚಾರಗಳಿಗೆ ಸೂಕ್ತ ಶಿಕ್ಷೆಯನ್ನು ನೀಡದೆ, ಓಡಿ ಹೋದ ತಹಶೀಲ್ದಾರನ ಕ್ರಮವನ್ನು ಖಂಡಿಸುತ್ತಾ ಈ ರೈತ ಸಂಘವು ‘ಈ ಭೂಮಾಲೀಕನಿಗೆ ಪ್ರಭುತ್ವ ನೀಡದ ಶಿಕ್ಷೆಯನ್ನು ನೀಡಲಾಗಿದೆ’ ಎಂದು ಬರೆಯಿತು. 1999ರ ಮೇ-ಜೂನ್ ಸಂಚಿಕೆಯಲ್ಲಿ ‘ಜನ ವಿಮುಕ್ತಿ’ ಪತ್ರಿಕೆಯು ಅನ್ಯಾಯದ ವಿರುದ್ಧ ಹೋರಾಡಿ ರಾಯಚೂರಿನ ಭೂಮಾಲೀಕರಿಂದ ಹತರಾದ ಕಾಮ್ರೆಡ್ ಬುಡ್ಡಣ್ಣನವರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದೆ. 1997ರಲ್ಲಿ ಊರಿನ ಭೂಮಾಲೀಕರೆಲ್ಲಾ ಒಂದಾಗಿ ದಲಿತರೊಬ್ಬರ ಜಮೀನನ್ನು ಸಾಹುಕಾರನೊಬ್ಬನಿಗೆ ಕಸಿದುಕೊಟ್ಟ ಸಂದರ್ಭದಲ್ಲಿ ಬುಡ್ಡಣ್ಣನವರ ನೇತೃತ್ವದಲ್ಲಿ ರೈತ ಕಾರ್ಮಿಕರ ಸಂಘವು ಪ್ರತಿಭಟಿಸಿದ್ದರ ಸೇಡಿಗಾಗಿ ಭೂಮಾಲೀಕರು ಹಾಗೂ ಪೊಲೀಸರ ನಿರ್ದೇಶನದಂತೆ ಬುಡ್ಡಣ್ಣನವರ ಕೊಲೆ ನಡೆದಿದೆ ಎಂದು ‘ಜನ ವಿಮುಕ್ತಿ’ ಬರೆದಿದೆ.
ಈ ರೀತಿಯ ದೌರ್ಜನ್ಯಗಳ ಕುರಿತು ಪೀಪಲ್ಸ್ ವಾರ್ ಗ್ರೂಪ್ನ ಸತ್ಯಶೋಧಕ ಸಮಿತಿಯೂ ವರದಿ ಮಾಡಿದೆ. ಈ ಸಮಿತಿಯು ಸರಕಾರದ ಮುಂದೆ ಇಟ್ಟ ‘ಒತ್ತಾಯಗಳ’ ಪ್ರಕಾರ ಪೊಲೀಸರ ದೌರ್ಜನ್ಯಗಳು ಎಲ್ಲಾ ಗಲಭೆಗೆ ಕಾರಣ ಎಂದು ಅಭಿಪ್ರಾಯಪಡಲಾಗಿದೆ. ಈ ದೌರ್ಜನ್ಯಗಳ ಬಗ್ಗೆ ಹಾಗೂ ಇದರ ಹಿಂದಿರುವ ಭೂಮಾಲೀಕ-ಪೊಲೀಸ್ ರಾಜಕಾರಣಿ ಪಟ್ಟಭದ್ರ ಮೈತ್ರಿಕೂಟದ ಬಗ್ಗೆ ತನಿಖೆ ನಡೆಯಲು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಯಾಗಬೇಕು. ಹಾಗೂ ದಲಿತರಿಗೆ ಸೇರಬೇಕಾದ ಭೂಮಿಯನ್ನು ವಶಪಡಿಸಿಕೊಂಡು ಅವರ ಸಹಜ ಅಭಿವೃದ್ದಿಗೆ ಅಡ್ಡಿಯೊಡ್ಡುತ್ತಿರುವ ಭೂಮಾಲೀಕರಿಗೆ ಮತ್ತು ಇದಕ್ಕೆ ಬೆಂಬಲಿಸುತ್ತಿರುವ ಪೊಲೀಸ್ ಅಧಿಕಾರಿಗಳ ಮೇಲೆ ಎಸ್.ಸಿ.- ಎಸ್.ಟಿ. ಅಟ್ರಾಸಿಟೀಸ್ ಪ್ರಿವೆನ್ಷನ್ ಆ್ಯಕ್ಟ್- 1995 ಕಾನೂನಿನಡಿ ಕೇಸು ದಾಖಲಿಸಿ, ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಸಮಿತಿ ಒತ್ತಾಯಿಸಿದೆ. ಈ ಸಮಿತಿಯು ಮುಂದು ವರಿಯುತ್ತಾ, ಸಂತ್ರಸ್ತರಾದ ದಲಿತ ರೈತರಿಗೆ ಇದೆ ಕಾನೂನಿನಡಿ ಕೂಡಲೇ ಮಧ್ಯಂತರ ಪರಿಹಾರ ಒದಗಿಸಬೇಕು ಹಾಗೂ ಪೊಲೀಸ್ ದೌರ್ಜನ್ಯಕ್ಕೊಳಗಾದ ರೈತರಿಗೆ ಕೂಡಲೆ ಪರಿಹಾರ ಒದಗಿಸಬೇಕು ಎಂದು ಕೂಡ ಆಗ್ರಹಿಸಿತು. ಎಲ್ಲಾ ಭೂಸಂಬಂಧಿತ ವಿಚಾರ ಗಳನ್ನು ಪರಿಹರಿಸಲು ಕೂಡಲೆ ಕ್ರಮ ತೆಗೆದುಕೊಳ್ಳಬೇಕು. ರೈತರನ್ನು ಬಡ್ಡಿಕೋರರ ಶೋಷಣೆಯಿಂದ ಮುಕ್ತಗೊಳಿಸಲು ಸುಲಭ ದರದ ಸಾಲ ಒದಗಿಸಬೇಕು.
ಭೂ ಸುಧಾರಣೆ ಸಂಪೂರ್ಣವಾಗಿ ಜಾರಿಯಾಗಬೇಕು ಎಂದು ಆಗ್ರಹಿಸಿದ ಈ ಸಮಿತಿಯು ಕರ್ನಾಟಕ ರೈತ ಕೂಲಿ ಕಾರ್ಮಿಕರ ಸಂಘದ ಕಾನೂನುಬದ್ಧ ಚಟುವಟಿಕೆಗಳಿಗೆ ಸರಕಾರ ಸಂಪೂರ್ಣವಾಗಿ ಅವಕಾಶ ಮಾಡಿಕೊಡಬೇಕು ಎಂದು ಸರಕಾರವನ್ನು ಒತ್ತಾಯಿಸಿತು. 1999ರ ಏಪ್ರಿಲ್ 9,10 ಮತ್ತು 11 ರಂದು ಸುಮಾರು 15 ಹಳ್ಳಿಗಳನ್ನು ಸಂದರ್ಶಿಸಿದ ಈ ಸಮಿತಿಯು ‘ಒತ್ತಾಯಗಳ’ ಬಗ್ಗೆ ಚರ್ಚೆ ನಡೆಯುತ್ತಿದ್ದಾಗಲೆ ಪ್ರಕಟವಾದ 1999ರ ಜೂನ್ 26ರ ‘ಡೆಕ್ಕನ್ ಹೆರಾಲ್ಡ್’ ವರದಿ ಗಮನಾರ್ಹವಾಗಿದೆ. ಈ ಪತ್ರಿಕಾ ವರದಿಯು ‘ಉದಯ’ ಎನ್ನುವ ವ್ಯಕ್ತಿಯ ಸಹಿಯಿರುವ ಪತ್ರವೊಂದು ಕಾಮ್ರೆಡ್ ಬುಡ್ಡಣ್ಣನ ಕೊಲೆಯನ್ನು ಹಾಗೂ ಅದರ ಹಿಂದಿನ ದೌರ್ಜನ್ಯಗಳನ್ನು ವಿವರಿಸಿ, ಬಡವರು ಮತ್ತು ಭೂಹೀನ ಕಾರ್ಮಿಕರನ್ನು ದೌರ್ಜನ್ಯ ಮಾಡಿದ ಭೂಮಾಲೀಕ ಸಿದ್ಧನಗೌಡನಿಗೆ ಮರಣ ದಂಡನೆಯನ್ನು ಕೊಡಲಾಗಿದೆ ಎಂದು ತಿಳಿಸಿತು. ಸಿದ್ಧನಗೌಡನ ಕೊಲೆಯನ್ನು ಸಿ.ಪಿ.ಐ.(ಎಂ.ಎಲ್)ಅಂದರೆ ಕಮ್ಯುನಿಷ್ಟ್ ಪಾರ್ಟಿ ಇಂಡಿಯಾ (ಮಾರ್ಕ್ಸಿಸ್ಟ್- ಲೆನಿನಿಸ್ಟ್) ಸಂಘಟನೆ ಮಾಡಿದೆಯೆಂದು ತಿಳಿಸಿದೆ. ಜೊತೆಗೆ ‘ಮುಂದೆ ಯಾರಾದರೂ ಸಿದ್ಧನಗೌಡನ ರೀತಿ ದೌರ್ಜನ್ಯ ಮಾಡಿದರೆ ಅವರಿಗೂ ಇದೇ ಗತಿಯಾಗುವುದು’ ಎಂದು ಈ ಪತ್ರ ಎಚ್ಚರಿಸಿರುವ ವಿಚಾರ ತಿಳಿದುಬರುತ್ತದೆ. ಭೂಮಾಲಿಕರು ಹಾಗೂ ರೈತ ಕೂಲಿ ಕಾರ್ಮಿಕರಿಗೂ ಇರುವ ಭೂ ಸಂಬಂಧ ಪ್ರಶ್ನೆಗಳು ಇಂದು ‘ಪ್ರಜಾಪ್ರಭುತ್ವ ವಾದಿಗಳ’ ಹಾಗೂ ಅದರ ವಿರೋಧಿಗಳ ಸಂಘರ್ಷದ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ರಾಯಚೂರಿನಲ್ಲಿ ನಡೆಯುತ್ತಿರುವ ಭೂಸಂಬಂಧಿ ಪ್ರಶ್ನೆಗಳೇ ಮುಖ್ಯ ಸಾಕ್ಷಿಗಳಾಗುತ್ತವೆ.
ಶಿರಾದ ರೈತರ ಹೋರಾಟ
ಉಳಿದ ರೈತ ಸಂಘಟನೆಗಳಂತೆ ಯಾವುದೇ ನಿರ್ದಿಷ್ಟ ಬಗೆಯ ಸೈದ್ಧಾಂತಿಕ ಹಿನ್ನೆಲೆಗಳಿಲ್ಲದೆ ಸರಕಾರದ ಬೆಲೆ ನೀತಿಯನ್ನು ಹಿಂಸಾತ್ಮಕವಾಗಿ ಸ್ವಯಂಪ್ರೇರಣೆಯಿಂದ 1998ರ ಅಕ್ಟೋಬರ್ ತಿಂಗಳಲ್ಲಿ ಶಿರಾದ ರೈತರು ಪ್ರತಿಭಟಿಸಿದರು. ಶಿರಾವು ಶೇಂಗಾ ಬೆಳೆಗೆ ಬಹಳ ಪ್ರಸಿದ್ಧವಾದುದು. ಶೇಂಗಾ ಬೆಲೆಗಾಗಿ ಹೋರಾಟ ಮಾಡಿದ ಅಪರೂಪದ ಘಟನೆಯಿದು. ಈಗಾಗಲೇ ನಾವು ಗಮನಿಸಿದಂತೆ ಕಬ್ಬು, ಕಾಫಿ, ಭತ್ತ ಬೆಳೆಗಳ ಬೆಲೆಗಳ ಬಗ್ಗೆ ಆಗಾಗ್ಗೆ ಕೆ.ಆರ್.ಆರ್.ಎಸ್. ಅಥವಾ ಇನ್ನುಳಿದ ರೈತ ಸಂಘಟನೆಗಳು ಹೋರಾಟ ಮಾಡಿರುವುದನ್ನು ನೋಡಿದ್ದೇವೆ. ಆದರೆ ಶೇಂಗಾಕ್ಕೆ ಸಂಬಂಧಿಸಿದ ಪ್ರಶ್ನೆಯು 1998ರ ಅಕ್ಟೋಬರ್ನಲ್ಲಿ ಕರ್ನಾಟಕ ರಾಜ್ಯಾದ್ಯಂತ ಚರ್ಚೆಗೆ ಒಳಗಾಯಿತು.
ಶಿರಾದ ಘಟನೆಗೆ ಸಂಬಂಧಿಸಿದ ವಿವರಗಳನ್ನು ಹೇಳುವುದಾದರೆ ಘಟನೆಯು ಆರಂಭಗೊಳ್ಳಲು ಸೂಚನೆ ಸಿಕ್ಕಿದ್ದೇ 1998ರ ಅಕ್ಟೋಬರ್ 27ರಂದು. ಆ ದಿನ ಎಂದಿನಂತೆ ರೈತರು 35,000ಕ್ಕೂ ಹೆಚ್ಚು ಚೀಲ ಕಡಲೆಕಾಯಿಯನ್ನು ಶಿರಾದ ಎ.ಪಿ.ಎಂ.ಸಿ. ಮಾರುಕಟ್ಟೆಗೆ ತಂದರು. ಕೇವಲ ಒಂದು ವಾರದ ಹಿಂದೆ ಕ್ವಿಂಟಾಲ್ಗೆ 1400 ರೂಪಾಯಿ ಇತ್ತು. ಆದರೆ, ನಿರೀಕ್ಷೆಗೂ ಮೀರಿದ ಹೆಚ್ಚಿನ ಫಸಲು ಮಾರುಕಟ್ಟೆಗೆ ಬಂದಾಕ್ಷಣ ಮಾರುಕಟ್ಟೆ ದಲ್ಲಾಳಿಗಳು 1400 ರೂಪಾಯಿ ಇದ್ದ ಬೆಲೆಯನ್ನು ಕೇವಲ 600 ರೂಪಾಯಿಗೆ ಇಳಿಸಿಬಿಟ್ಟರು. ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಬೀಜಕ್ಕೆ ರೂ.1800 ಕೊಟ್ಟು ಖರೀದಿಸಿ, ಸಾವಿರಾರು ರೂಪಾಯಿಗಳನ್ನು ಗೊಬ್ಬರಕ್ಕಾಗಿ ವಿನಿಯೋಗಿಸಿ ಶೇಂಗಾ ಬೆಳೆಗಾಗಿ ಖರ್ಚು ಮಾಡಿದ್ದ ರೈತರ ಹೆಗಲ ಮೇಲೆ ಸಾವಿರಾರು ರೂಪಾಯಿಗಳ ಸಾಲದ ಹೊರೆ ಹೆಗಲೇರಿದಂತೆ ಎಂದರ್ಥ.
ಮಾರುಕಟ್ಟೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸರಕಾರ ಕೂಡ ವಿಫಲವಾಗಿದೆ. ಇದಕ್ಕೆ ಸರಕಾರದ ನೀತಿಗಳೇೊಕಾರಣವಾಗಿವೆ.ೊಕಡಲೆೊಎಣ್ಣೆ ಬೆಲೆ ನಿಯಂತ್ರಿಸುವ ಹೆಸರಿನಲ್ಲಿ ಕಡಲೇಕಾಯಿ ರಫ್ತನ್ನು ಸರಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಅಲ್ಲದೆ ಖಾದ್ಯ ತೈಲ ಆಮದಿನ ಮೇಲಿನ ಸುಂಕವನ್ನು ಕೇಂದ್ರ ಸರಕಾರವು ಶೇ.65 ರಿಂದ ಶೇ.25ಕ್ಕೆ ಇಳಿಸಿದೆ. ಇದು ಸ್ಥಳೀಯ ಎಣ್ಣೆ ಉತ್ಪಾದನೆಯ ಮೇಲೆ ಪ್ರಭಾವ ಬೀರುವುದರಿಂದ ಭಾರತದ ದೊಡ್ಡ ವರ್ತಕರು ಶೇಂಗ ಕೊಳ್ಳಲು ಹಿಂದೇಟು ಹಾಕಿದರು. ಭಾರತದಲ್ಲಿ ಕಡಲೆಬೀಜ ಮಾರುಕಟ್ಟೆಗೆ ಬರುವ ಸಮಯಕ್ಕೆ ಸರಿಯಾಗಿ ಸರಕಾರ ಇತರ ಎಣ್ಣೆ ಕಾಳುಗಳನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲೇ ‘ದುಷ್ಟ ದಲ್ಲಾಳಿಗಳು ಕಡಲೆಕಾಯಿಯ ಬೆಲೆಯನ್ನು ಕ್ವಿಂಟಾಲಿಗೆ 600 ರೂ.ಗೆ ಏಕ್ದಂ ಇಳಿಸಿಬಿಟ್ಟರು’ ಎಂದು 1998ರ ನವೆಂಬರ್ ಸಂಚಿಕೆಯ ‘ಜನ ವಿಮುಕ್ತಿ’ ಪತ್ರಿಕೆ ಬರೆದಿದೆ.
1800 ರೂಪಾಯಿಯಿಂದ ಬೆಲೆಯನ್ನು 600 ರೂಪಾಯಿಗೆ ಇಳಿಸಿದ್ದನ್ನು ರೈತರು ಉಗ್ರವಾಗಿಯೇ ಪ್ರತಿಭಟಿಸಿದರು. ರೈತರ ಆಕ್ರೋಶಕ್ಕೆ ಎಪಿಎಂಸಿ ಕಛೇರಿಯ ಗಾಜುಗಳು ಪುಡಿಪುಡಿಯಾದವು. ಅಲ್ಲಿಯೇ ಬೀಡು ಬಿಟ್ಟಿದ್ದ ತುಮಕೂರಿನ ಉಸ್ತುವಾರಿ ಸಚಿವ ಸತ್ಯನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಉತ್ತಮ ಧಾರಣೆಗಾಗಿ ಮರು ಟೆಂಡರ್ ಹಾಕಿರುವು ದಾಗಿಯೂ, ಇಲ್ಲವಾದಲ್ಲಿ ಬೀಜನಿಗಮವೇ ಒಟ್ಟು ಬೀಜಗಳನ್ನು ಕೊಂಡುಕೊಳ್ಳುವಂತೆ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಆದರೆ ಮಂತ್ರಿಯ ಭರವಸೆ ಈಡೇರಲಿಲ್ಲ. ರೈತರ ಆಕ್ರೋಶ ಮುಗಿಲೇರಿತು. ತಾ. 28ರಂದು 10,000ಕ್ಕೂ ಹೆಚ್ಚಿನ ರೈತರು ಶಿರಾ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸೇರಿ ‘ರಾಸ್ತಾ ರೋಕೋ’ ಪ್ರಾರಂಭಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ರೈತರನ್ನು ಹತ್ತಿಕ್ಕಲು ಪೊಲೀಸರು ಗೋಲಿಬಾರ್ ಮಾಡಿದಾಗ ಕೆಲವು ರೈತರು ಪ್ರಾಣ ಕಳೆದುಕೊಂಡರು. ರೈತರು ಇದರಿಂದ ಕ್ರುದ್ಧರಾಗಿ ಪೊಲೀಸರ ಮೇಲೆ ಹಲ್ಲೆ ಮಾಡಿದರು. ಒಬ್ಬ ಡಿವೈಎಸ್ಪಿ ಹಾಗೂ ಒಬ್ಬ ಪೇದೆ ರೈತರಿಂದ ಹತರಾದರು. ರೈತರ ಆಕ್ರೋಶಕ್ಕೆ ಹತ್ತಾರು ಬಸ್ಸು ಲಾರಿಗಳು ಭಸ್ಮವಾದವು. ಹಿಂಸೆ ಯಿಂದಲೇ ಈ ಪ್ರತಿಭಟನೆ ಮುಗಿಯಿತು. ಇದು ಖಂಡಿತವಾಗಿಯೂ ಸರಕಾರವು ಸ್ಪಷ್ಟವಾದ ಬೆಲೆಯ ನೀತಿಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗದುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಸ್ವಪ್ರೇರಣೆಯಿಂದಲೇ ಈ ಪ್ರತಿಭಟನೆ ನಡೆದಿದೆ ಎನ್ನುವುದಾದರೆ, ಇಂಥ ಸಂದರ್ಭಗಳು ಮತ್ತೊಮ್ಮೆ ಎದುರಾದರೆ ಸ್ವಪ್ರೇರಣೆಯಿಂದ ಪ್ರತಿಭಟನೆಗಳು ಎದುರಾಗುತ್ತದೆ ಎನ್ನಬೇಕಾಗುತ್ತದೆ.
ಏಕೀಕರಣೋತ್ತರ ಕರ್ನಾಟಕದ ಅವಧಿಯಿಂದ ಇಪ್ಪತ್ತನೆಯ ಶತಮಾನದ ಅಂತ್ಯದವರೆಗೂ ಕಂಡ ರೈತ ಚಳವಳಿಗಳ ಸ್ವರೂಪವು ಒಂದೇ ಬಗೆಯದಾಗಿಲ್ಲ. ಪ್ರಸ್ತುಸ್ತ ಲೇಖನದ ಆರಂಭದಲ್ಲಿ ಚರ್ಚಿಸಿದಂತೆ ಅವುಗಳು ಎಡ, ತೀವ್ರ ಎಡ, ಬಲಪಂಥಿಯ ಲಕ್ಷಣಗಳನ್ನು ಹೊಂದಿದ್ದವು. ಪ್ರಾದೇಶಿಕವಾಗಿ ಅವುಗಳ ವೈರುಧ್ಯಗಳನ್ನು ನೋಡಬಹುದಾಗಿದೆ. ಹೀಗಾಗಿ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಕಂಡುಬಂದ ಪ್ರತಿಭಟನೆಗಳ ಕೆಲವು ಮುಖ್ಯ ವಿಷಯಗಳನ್ನು ಈ ಸಂದರ್ಭದಲ್ಲಿ ಚರ್ಚಿಸಲಾಗಿತ್ತು. ಕರ್ನಾಟಕದ ಒಳಗೇ ಇವುಗಳು ಬಹುತೇಕವಾಗಿ ಸ್ಥಳೀಯವಾಗಿ ಹಾಗೂ ಅನೇಕ ಬಾರಿ ವಿವಿಧ ರಾಜಕೀಯ ಪಕ್ಷಗಳ ಸಹವರ್ತಿ ಸಂಘಟನೆಗಳಾಗಿ ಕೆಲಸ ನಿರ್ವಹಿಸಿದವು. ಶಿರಾದಲ್ಲಿ ನಡೆದ ರೈತರ ಪ್ರತಿರೋಧಗಳು ಇದಕ್ಕೆ ಅಪವಾದ ಎಂದು ಕಂಡುಬಂದರೂ ಶೋಷಣೆಗೆ ದಿಢೀರನೇ ಪ್ರತಿಕ್ರಿಯಿಸಿದ ರೈತರ ಸಂವೇದನೆ ಇಲ್ಲಿ ಗಮನಾರ್ಹವಾದುದು. ಉಳಿದೆಡೆ ರೈತ ಸಂವೇದನೆಗಳಿಗೆ ಸೈದ್ಧಾಂತಿಕ ಲೇಪಗಳನ್ನು ನೀಡುವ ಮೂಲಕ ವಿಮರ್ಶೆ ಮಾಡಿದ್ದನ್ನು ಕಾಣಬಹುದು. ರೈತ ಹೋರಾಟದ ಪ್ರಕ್ರಿಯೆಗಳೇ ಕರ್ನಾಟಕದ ಮಟ್ಟಿಗೆ ಇದೇ ಹಾದಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದಾಗಿದೆ.
ಪರಾಮರ್ಶನ ಗ್ರಂಥಗಳು
1. ತಂಬಂಡ ವಿಜಯ್ ಪೂಣಚ್ಚ, 1999. ರೈತ ಚಳವಳಿಗಳು (ಏಕೀಕರಣೋತ್ತರ ಕರ್ನಾಟಕದ ಚಳವಳಿ), ಸಂಪುಟ 6, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
2. ಜನ ವಿಮುಕ್ತಿ, ಕ್ರಾಂತಿಕಾರಿ ಮಾಸಪತ್ರಿಕೆ, ಆಗಸ್ಟ್ 1998. ಸೆಪ್ಟೆಂಬರ್ 1998 ನವೆಂಬರ್ 1998 ಮೇ-ಜೂನ್ 1999, ಶಿವಮೊಗ್ಗ.
3. ಚಂದ್ರಶೇಖರ್ ಟಿ.ಆರ್., 1987. ಕಬ್ಬು ಬೆಳಗಾರರ ಹೋರಾಟ, ಹೊಸಪೇಟೆ.ೊ
blogger
delicious
digg
facebook
reddit
stumble
twitter
print
email
ಪುಸ್ತಕ: ಸಮಕಾಲೀನ ಕರ್ನಾಟಕ ಚರಿತ್ರೆಯ ವಿವಿಧ ಆಯಾಮಗಳು (ಸಂಪಾದಿತ)
ಲೇಖಕರು: ಡಾ. ವಿಜಯ್ ಪೂಣಚ್ಚ ತಂಬಂಡ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ