ಅಧ್ಯಾಯ 18:ರೈತ ಚಳವಳಿ ಚಾರಿತ್ರಿಕ ಆಯಾಮಗಳು
ಕರ್ನಾಟಕದ ಇತಿಹಾಸದಲ್ಲಿ ರೈತ ಹೋರಾಟಗಳು ನಡೆದದ್ದು ಬಹಳ ಕಡಿಮೆ ಬೆರಳೆಣಿಕೆಯಷ್ಟು. ಈ ಸಂಖ್ಯಾಧಾರದಿಂದ ಕರ್ನಾಟಕದ ರೈತರನ್ನು ನಿಷ್ಕ್ರಿಯರು, ಸಂಪ್ರದಾಯವಾದಿಗಳು, ಬಲಾಢ್ಯ ಹೀನರು, ವ್ಯವಸ್ಥೆ ಬದಲಾವಣೆಗೆ ಹಿಂಜರಿಯುವವರು ಎಂದೆಲ್ಲಾ ಹೇಳುವ ಹಾಗಿಲ್ಲ. ಅಥವಾ ಹಾಗೆ ಕರೆಯಲು ಅಸಾಧ್ಯ. ಕಡಿಮೆ ಸಂಖ್ಯೆಯ ಹೋರಾಟಕ್ಕೆ ಕಾರಣಗಳಿವೆ.
ಮೊದಲನೆಯದಾಗಿ ಕರ್ನಾಟಕದ ರೈತರ ಶೋಷಣೆ ಏಕಮುಖವಾಗಿರಲಿಲ್ಲ. ಮೂಲತಃವಾಗಿ ಸ್ವಾತಂತ್ರ್ಯಪೂರ್ವದ ಕರ್ನಾಟಕ ನಾಲ್ಕು ದಿಕ್ಕಿನಲ್ಲಿ ಹರಡಿತ್ತು. ಹಳೆಯ ಮೈಸೂರು ಪ್ರಾಂತ್ಯಕ್ಕೆ ಶಿವಮೊಗ್ಗ, ಬೆಂಗಳೂರು, ಮೈಸೂರು, ಹಾಸನ, ಮಂಡ್ಯ, ಚಿಕ್ಕಮಗಳೂರು ಸೇರಿದ್ದರೆ; ಮಂಗಳೂರು, ಬಳ್ಳಾರಿ ಜಿಲ್ಲೆಗಳೂ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದವು. ಅದರೊಂದಿಗೆ ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಬೊಂಬಾಯಿ ಪ್ರಾಂತ್ಯಕ್ಕೂ, ಬೀದರ್ , ಗುಲಬರ್ಗಾ, ಬಿಜಾಪುರ, ಹೈದರಾಬಾದ್ ಪ್ರಾಂತ್ಯಕ್ಕೂ ಸೇರಿತ್ತು. ಇಲ್ಲಿ ರೈತರು ಮೇಲ್ನೋಟಕ್ಕೆ ಎರಡು ರಾಜ್ಯಗಳಿಂದ ಶೋಷಿತರಾಗಿದ್ದರು: ವಸಾಹತುಶಾಹಿ ರಾಜ್ಯ ಹಾಗೂ ಪ್ರಾಂತೀಯ ರಾಜ್ಯ. ಇದರಿಂದಾಗಿ ವಿಭಿನ್ನ ಶೋಷಣೆಗಳನ್ನು ನಾವು ಕಾಣಬಹುದು.
ಅಲ್ಲದೇ, ಪ್ರಾಂತ್ಯದೊಳಗೆ/ರಾಜ್ಯದೊಳಗೆ ಶೋಷಣೆ ನಡೆಯುತ್ತಿದ್ದ ರೀತಿ ಮಾತ್ರ ವಿಭಿನ್ನವಾಗಿತ್ತು. ಇದಕ್ಕೆ ಕಾರಣ ಆ ಕಾಲದಲ್ಲಿ ಅಳವಡಿಸಿದ್ದ ವಿವಿಧ ಕೃಷಿ ಸಂಬಂಧಗಳು. ಮಾತ್ರವಲ್ಲದೇ ಈ ಸಂಬಂಧಗಳನ್ನು ಏಕ ಕಾಲದಲ್ಲಿ ಜಾರಿಗೆ ತರಲಿಲ್ಲ. ಪ್ರಾಂತೀಯ ರಾಜ್ಯಗಳಲ್ಲಿ ಆಳುವ ಅರಸರು ಬದಲಾದಂತೆಲ್ಲ ಸಂಬಂಧಗಳು ಬದಲಾಗುತ್ತಿದ್ದವು. ಕೆಲವೊಮ್ಮೆ ಸಂಬಂಧಗಳು ಶತಮಾನಕ್ಕೆ ಹಿಂದೆ ಜಾರಿಗೆ ಬಂದವಾಗಿದ್ದವು. ಆದರೆ ವಸಾಹತು ಪ್ರಾಂತ್ಯದಲ್ಲಿ ಸ್ವಲ್ಪ ವಿಭಿನ್ನತೆಯನ್ನು ನಾವು ಕಾಣಬಹುದು. ವಸಾಹತು ರಾಜ್ಯ ತನ್ನ ರಾಷ್ಟ್ರದಲ್ಲಿ ಬಂಡವಾಳಶಾಹಿ ಪುನರುತ್ಪಾದನೆ ಹಾಗೂ ಗಟ್ಟಿಗೊಳಿಸಲು ಪ್ರಾಂತೀಯ ಕ್ಷೇತ್ರದಲ್ಲಿ ಬದಲಾವಣೆ ತಂದದ್ದನ್ನು ನಾವು ಕಾಣುತ್ತೇವೆ. ಆದ ಕಾರಣ ಅದು ಕೃಷಿಯಲ್ಲಿ ‘ರೈತವಾರಿ’, ‘ಜಮೀನ್ದಾರಿ’ ಪದ್ಧತಿಯನ್ನು ಜಾರಿಗೊಳಿಸಿತ್ತು. ಕರ್ನಾಟಕದ ಪ್ರಾಂತ್ಯದಲ್ಲಿ ವಸಾಹತುಶಾಹಿ ‘ರೈತವಾರಿ’ ಪದ್ಧತಿಯನ್ನು ಜಾರಿಗೆ ತಂದರೂ ಅದನ್ನು ಕೂಡಲೇ, ಏಕಮುಖವಾಗಿ ಜಾರಿಗೊಳಿಸಲಿಲ್ಲ. ಅದಕ್ಕಾಗಿ ಕಡಿಮೆ ಎಂದರೆ 40 ವರ್ಷಗಳನ್ನು ತೆಗೆದುಕೊಂಡಿತ್ತು. ಮಾತ್ರವಲ್ಲದೇ, ರೈತವಾರಿ ಪದ್ಧತಿಯನ್ನು ಜಾರಿಗೊಳಿಸುವಾಗ ವಸಾಹತುಶಾಹಿ ‘ನಿಜವಾದ’ ರೈತರನ್ನು ಗುರುತಿಸಲಿಲ್ಲ. ಭೂಮಾಲೀಕರನ್ನು (ಅಥವಾ ವರ್ಗದಾರ) ಮಾತ್ರ ರೈತರೆಂದು ಪರಿಗಣಿಸಿತ್ತು. ಇದರಿಂದಾಗಿ ಒಂದು ಶ್ರೇಣೀಕೃತ ವ್ಯವಸ್ಥೆ ರೈತ-ಭೂಮಾಲೀಕ ಹಾಗೂ ವಸಾಹತುಶಾಹಿ ಬೆಳೆಯಿತು. ಇದು ಪ್ರಾಂತ್ಯ; ಪ್ರಾಂತ್ಯದಿಂದ ವಿಭಿನ್ನವಾಗಿತ್ತಲ್ಲದೆ, ಶೋಷಣೆಯ ಮಟ್ಟದಲ್ಲೂ ವಿಭಿನ್ನತೆಯನ್ನು ತಂದಿತ್ತು. ಇದೇ ರೀತಿಯ ಶ್ರೇಣೀಕೃತ ವ್ಯವಸ್ಥೆಯನ್ನು ನಾವು ಹೈದರಾಬಾದ್, ಮೈಸೂರು ಪ್ರಾಂತ್ಯದಲ್ಲೂ ಕಾಣಬಹುದು. ಆದ ಕಾರಣವೇ ವಿವಿಧ ಗೇಣಿ ವ್ಯವಸ್ಥೆಯನ್ನು ನಾವು ಕಾಣಬಹುದು. ಮದ್ರಾಸ್/ಬೊಂಬಾಯಿ ಪ್ರೆಸಿಡೆನ್ಸಿ ಪ್ರದೇಶದಲ್ಲಿ ಚಾಲಗೇಣಿ, ವಾಯಿದೆಗೇಣಿ, ನಾಡಗೇಣಿ ಇದ್ದರೆ, ಮೈಸೂರು ಪ್ರಾಂತ್ಯದಲ್ಲಿ ಒಳಕಂದಾಯ, ಗುತ್ತಿಗೆ, ಅರೆಕಂದಾಯ, ಮುಕಪ್ಪ, ವಾರಂ ಇತ್ಯಾದಿಗಳನ್ನು ನಾವು ಕಾಣಬಹುದು. ಹೈದಾರಾಬಾದ್ ಪ್ರಾಂತ್ಯದಲ್ಲಿ ಶಿಕ್ಮಿದಾರಿ, ಅಸಮಿಶಿಕ್ಮಿ, ಪಾನ್ ಮಸ್ತ, ತಾಹೀದ್ ಅಥವಾ ಸರ್ ಬಸ್ತಾಗಳನ್ನು ನಾವು ಕಾಣಬಹುದು. ಈ ರೀತಿಯ ವೈವಿಧ್ಯಮಯ ಗೇಣಿ ವ್ಯವಸ್ಥೆ ಅದರೊಂದಿಗೆ ಸೇರಿಕೊಂಡಿದ್ದ ಶೋಷಣೆ ವ್ಯವಸ್ಥೆ ರೈತಪ್ರಜ್ಞೆಯನ್ನು ಕ್ರಾಂತಿಕಾರಿಯಾಗಿ ಅಥವಾ ಸರ್ವವ್ಯಾಪ್ತಿಯಾಗಿ ಬೆಳೆಸಲು ಅವಕಾಶ ನೀಡಲಿಲ್ಲ.
ಎರಡನೆಯದಾಗಿ ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ಕರ್ನಾಟಕದ ಕೃಷಿಯಲ್ಲಿ ಏಕ ರೂಪದ ಬಂಡವಾಳಶಾಹಿ ಬೆಳವಣಿಗೆ ಇರಲಿಲ್ಲ. ಮೂಲತಃ ಮೈಸೂರು ಪ್ರಾಂತ್ಯದಲ್ಲಿ 1830ರ ನಂತರ ಬಂಡವಾಳಶಾಹಿ ಬೆಳವಣಿಗೆಗೆ ಆಯಾಮ ದೊರೆತರೂ, ಸರಂಜಾಮಶಾಹಿ ಅಥವಾ ಊಳಿಗಮಾನ್ಯ ಪದ್ಧತಿಯ ನಾಶಕ್ಕಾಗಿ ಅದು ಯಾವುದೇ ಕಾರ್ಯವನ್ನು ಕೈಗೊಳ್ಳಲಿಲ್ಲ. ಇದಕ್ಕೆ ಕಾರಣವಿದೆ, ಮೈಸೂರು ರಾಜ್ಯ ಮೂಲತಃ ಸರಂಜಾಮಶಾಹಿಯ ಮೇಲೆ ತನ್ನ ಅಸ್ತಿತ್ವವನ್ನು ಕಾಯ್ದಿರಿಸಿ ಅದರ ನಾಶವೆಂದರೆ ರಾಜ್ಯದ ನಾಶವೆಂದಾಗುತ್ತಿತ್ತು. ಆದ ಕಾರಣ ಮೈಸೂರು ಪ್ರಾಂತ್ಯದ ಬಂಡವಾಳಶಾಹಿ ಹಾಗೂ ಸರಂಜಾಮಶಾಹಿ ಜೊತೆ ಜೊತೆಯಾಗಿ ಬೆಳೆದವು, ಸರಂಜಾಮಶಾಹಿಯ ಮೇಲ್ಪದರವಾಗಿ ಬಂಡವಾಳಶಾಹಿ ಬೆಳೆಯಿತು. ಅಲ್ಲದೆ, ಮೈಸೂರು ಸಂಸ್ಥಾನ ಕೃಷಿಯಲ್ಲಿ ಅಳವಡಿಸಿದ ಬಂಡವಾಳಶಾಹಿ ಕೂಡ ಪರಿಪೂರ್ಣವಾಗಿರಲಿಲ್ಲ ಅದು ಅಲ್ಲಲ್ಲಿ ಚದುರಿತ್ತು. ಕೆಲವೇ ಪ್ರದೇಶಕ್ಕೆ ವರ್ಗಕ್ಕೆ, ಜಾತಿಗೆ ಹಾಗೂ ಕೃಷಿ ಉತ್ಪಾದನೆಗೆ ಸೀಮಿತವಾಗಿತ್ತು. ಹೈದರಾಬಾದ್ ಪ್ರಾಂತ್ಯವಂತೂ ಇದಕ್ಕೆ ತದ್ವಿರುದ್ಧವಾಗಿತ್ತು. ಆ ಸಂಸ್ಥಾನ ಮೇಲ್ಮಟ್ಟದಿಂದ ಕೆಳಸ್ತರದವರೆಗೆ ಊಳಿಗಮಾನ್ಯ / ಸರಂಜಾಮಶಾಹಿಯಾಗಿತ್ತು. ವಸಾಹತುಶಾಹಿ ಬೆಳವಣಿಗೆಯಲ್ಲಿ ಮೈಸೂರು ಪ್ರಾಂತ್ಯವನ್ನು ಹೋಲುತ್ತಿತ್ತು. ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ, ಧಾರವಾಡದಲ್ಲಿ ಬೆಳೆಸಿದ ಬಂಡವಾಳಶಾಹಿ ಗ್ರಾಮೀಣ ಮಟ್ಟದ ಸರಂಜಾಮಶಾಹಿ ಊಳಿಗಮಾನ್ಯವನ್ನು ನಾಶಪಡಿಸ ಲಿಲ್ಲ. ಈ ರೀತಿಯ ಬೆಳವಣಿಗೆ ವಿವಿಧ ರೂಪದ ಪ್ರಜ್ಞೆಗೆ ಹಾಗೂ ಸೀಮಿತ ಕಾರ್ಯಾ ಚರಣೆಗೆ ಅವಕಾಶ ಮಾಡಿಕೊಟ್ಟಿತ್ತು ಪ್ರಜ್ಞೆ, ಪ್ರಾಂತೀಯ ಜಾತೀಯ, ಉತ್ಪಾದನ ಹಾಗೂ ವರ್ಗೀಯವಾಗಿತ್ತು.
ಮೂರನೆಯದಾಗಿ, ಸಂಸ್ಕೃತಿಯ ಅಪರಕೀಯತೆ ಕೂಡ ಇನ್ನೊಂದು ಅಂಶ. ಕರ್ನಾಟಕದ ರೈತರು ಹಾಗೂ ಭೂಮಾಲೀಕರು ವಿಶಾಲವಾದ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಒಂದೇ ಆಗಿದ್ದರು. ಈ ಸಾಂಸ್ಕೃತಿಕ ಚೌಕಟ್ಟು ಮೂಲತಃ ಧಾರ್ಮಿಕವಾಗಿತ್ತು. ಆದ ಕಾರಣವೇ ಹೋರಾಟಗಳು ಧಾರ್ಮಿಕ ರೂಪವನ್ನು ಪಡೆಯಲೇ ಇಲ್ಲ. ಇದಕ್ಕೆ ತೀರಾ ವಿರುದ್ಧವಾದುದ್ದನ್ನು ನಾವು ಬಂಗಾಳ, ಮಲಬಾರು ಹಾಗೂ ಪಂಜಾಬ್ಗಳಲ್ಲಿ ಕಾಣುತ್ತೇವೆ. ಇಲ್ಲಿ ಭೂಮಾಲಿಕ ಹಾಗೂ ಗೇಣಿದಾರ ರೈತರು ವಿವಿಧ ಕೋಮು/ಧರ್ಮಗಳಿಗೆ ಸೇರಿದ್ದ ಕಾರಣ, ಶೋಷಣೆಗೆ ಸಾಂಸ್ಕೃತಿಕ ಚೌಕಟ್ಟು ದೊರೆಯಿತಲ್ಲದೆ ಹೋರಾಟಗಳು ತೀವ್ರವಾಗಿ ಬೆಳೆದುದನ್ನು ನಾವು ಕಾಣುತ್ತೇವೆ.
ನಾಲ್ಕನೆಯದಾಗಿ ರಾಷ್ಟ್ರೀಯ ಹೋರಾಟ ಅಥವಾ ರೈತರ ‘ಪಕ್ಷ’ದ ಕೊರತೆ ಇನ್ನೊಂದು ಕಾರಣ. ಮೈಸೂರು ಪ್ರಾಂತ್ಯದಲ್ಲಿ ರಾಷ್ಟ್ರೀಯ ಹೋರಾಟ ಬೆಳೆದದ್ದು ಬಹಳ ತಡವಾಗಿ, 1930ರಲ್ಲಿ. ಅದೂ ಕೂಡ ಆರಂಭದಲ್ಲಿ ಗಡಿ ಪ್ರದೇಶಕ್ಕೆ ಸೀಮಿತವಾಗಿ ಪ್ರೆಸಿಡೆನ್ಸಿ ಪ್ರದೇಶದಲ್ಲಿ ಕಾಂಗ್ರೆಸ್ ಬೆಳೆದಂತೆಲ್ಲ ರೈತರ ಅಂಶಗಳು/ಬೇಡಿಕೆಗಳು ಮತ್ತು ಸಮಸ್ಯೆಗಳು ಬೆಳಕಿಗೆ ಬಂದವು. ಅದರೊಂದಿಗೆ ಗಾಂಧಿ ತನ್ನ ಮೂರು ಹೋರಾಟಗಳಿಂದ ಚಂಪಾರಣ್ಯ, ಖೇಡಾ ಹಾಗೂ ಬಾರ್ಡೋಲಿ ರೈತರನ್ನು ರಾಷ್ಟ್ರೀಯ ಕಕ್ಷೆಯಲ್ಲಿ ತಂದಿದ್ದರು. ಈ ರೀತಿಯ ರಾಷ್ಟ್ರೀಯ ನಾಯಕರ ಕೊರತೆ, ರಾಷ್ಟ್ರೀಯ ಹೋರಾಟದ ಕೊರತೆ ಮೈಸೂರು ಪ್ರಾಂತ್ಯ ಹಾಗೂ ಹೈದರಾಬಾದ್ ಪ್ರಾಂತ್ಯದ ರೈತರಿಗಿತ್ತು. ಈ ಕೊರತೆ ಸ್ವಾತಂತ್ರ್ಯೋತ್ತರ ಕಾಲದಲ್ಲೂ ಮುಗಿಯಲಿಲ್ಲ. ರೈತರು ತಮ್ಮ ಸಮಸ್ಯೆಗಳನ್ನು ವಿವಿಧ ಪಕ್ಷಗಳ ಚೌಕಟ್ಟಿನೊಳಗೆ ಎತ್ತಿದರೇ ಹೊರತು ಒಂದು ‘ಪಕ್ಷ’ವನ್ನು ಕಟ್ಟಿ ರೈತರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಿಲ್ಲ. ಯಾವುದೇ ರೀತಿಯ ಸೈದ್ಧಾಂತಿಕ ನಿಟ್ಟಿಲ್ಲದ ಆದರ್ಶಗಳು ವಿವಿಧ ಪಕ್ಷದೊಳಗೆ ಹರಿದು ಹೋದುದರಿಂದ ರೈತರಿಗೆ ಸ್ವತಂತ್ರವಾದ ಹೋರಾಟಕ್ಕೆ ಅವಕಾಶ ಸಿಗಲಿಲ್ಲ.
ರೈತ ಹೋರಾಟದ ಇತಿಹಾಸದಲ್ಲಿ ಮೊತ್ತಮೊದಲ ರೈತ ಹೋರಾಟ ಮೈಸೂರಿನ ಅರಸ ಚಿಕ್ಕದೇವರಾಯ (1672-1704)ರ ಕಾಲದಲ್ಲಿ ನಡೆಯಿತು. ಇದರಲ್ಲಿ ಲಿಂಗಾಯತ ಜಂಗಮರು ಮುಖ್ಯ ಪಾತ್ರವನ್ನು ವಹಿಸಿದ ಕಾರಣ ಈ ಹೋರಾಟಕ್ಕೆ ಜಾತೀಯ ಬಣ್ಣ ದೊರೆಯಿತು. ಚಿಕ್ಕದೇವರಾಯರ ಧಾರ್ಮಿಕ ನಂಬಿಕೆಗಳು ಜಂಗಮರ ಹೋರಾಟಕ್ಕೆ ಅಣಿ ಮಾಡಿದರೆ, ಸುಂಕ ಹಾಗೂ ಗೇಣಿ ವಿಷಯಗಳು ರೈತರನ್ನು/ಭೂಮಾಲಿಕರನ್ನು ಹೋರಾಟಕ್ಕೆ ಪ್ರೇರೇಪಿಸಿತ್ತು. ಅವರ ಹೋರಾಟದ ನೀತಿಯು ಅತ್ಯಂತ ಕುತೂಹಲಕಾರಿಯಾಗಿತ್ತು. ಮಾರ್ಕ್ವಿಲ್ಕ್ಸ್ ಈ ಘಟನೆಗಳನ್ನು ಈ ರೀತಿ ತಮ್ಮ ಅಧ್ಯಯನದಲ್ಲಿ ವಿಶ್ಲೇಷಿಸಿದ್ದಾರೆ. ಈ ಹೋರಾಟವನ್ನು ಜಂಗಮರನ್ನು ಹತ್ಯೆ ಮಾಡುವುದರ (400ಕ್ಕೆ ಮಿಕ್ಕಿ) ಮುಖಾಂತರ ಹತ್ತಿಕ್ಕಲಾಯಿತು.
ವರ್ಗ ರೂಪದ ರೈತ ಹೋರಾಟವನ್ನು ನಾವು ವಸಾಹತುಶಾಹಿ ಆಳ್ವಿಕೆ ಕಾಲದಲ್ಲಿ ಕಾಣಬಹುದು. ಇದು ವಸಾಹತುಶಾಹಿಗೆ ನೀಡುವ ಗೇಣಿಯಲ್ಲಿ ಆದ ಬದಲಾವಣೆಯಿಂದ ಆರಂಭವಾಯಿತು. ಶಾಸ್ತ್ರೀಯವಾಗಿ ಕರ್ನಾಟಕದ ರೈತರು ಗೇಣಿಯನ್ನು ಎರಡು ರೂಪದಲ್ಲಿ ನೀಡುತ್ತಿದ್ದರು. ಅವುಗಳು ಉತ್ಪಾದನೆ ಹಾಗೂ ಶ್ರಮ. ವಸಾಹತು ಸ್ಥಾಪನೆ ಯೊಂದಿಗೆ ಈ ರೂಪ ಬದಲಾಗಿ ಹಣದ ರೂಪದಲ್ಲಿ ನೀಡುವಂತೆ ಒತ್ತಾಯಿಸಿದಾಗ ರೈತರ ಅತೃಪ್ತಿಗಳು ಪ್ರಕಟವಾದವು. ಪ್ರಪ್ರಥಮವಾಗಿ ಇದು ವ್ಯಕ್ತವಾದದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. 1800ರಲ್ಲಿ ಇದರ ಪ್ರಥಮ ಹೋರಾಟವನ್ನು ಕಾಣಬಹುದು. ಅಂದಿನ ಕಲೆಕ್ವರ್ ಆಗಿದ್ದ ಸರ್ ಥಾಮಸ್ ಮನ್ರೊ ರೈತರ ಹೋರಾಟ ಕುರಿತಂತೆ ಕೂಡ ಅಧ್ಯಯನವನ್ನು ಮಾಡಿದ್ದಾನೆ. ಅದನ್ನು ಹೀಗೆ ವಿವರಿಸಿದ್ದಾನೆ:
ರೈತರನ್ನು ಕಚೇರಿಗೆ ಬರಲು ಒತ್ತಾಯಿಸಿದರೂ ಬರಲು ನಿರಾಕರಿಸುತ್ತಾರೆ. ಹಳ್ಳಿಗಳಿಗೆ ಸೇವಕರನ್ನು ಕಳುಹಿಸಿದಾಗಲೆಲ್ಲ ಹಳ್ಳಿ ಬಿಟ್ಟು ಪಲಾಯನ ಮಾಡುತ್ತಾರೆ. ಕೆಲವೊಮ್ಮೆ ಅಮಲ್ದಾರರಿಗೆ ನೀರು ಹಾಗೂ ಉರಿಕಡ್ಡಿ ಸಿಗದಂತೆ ನೋಡಿಕೊಳ್ಳು ತ್ತಾರೆ. ನಾನು ಕೂಡ ಹಳ್ಳಿಗಳಿಗೆ ಹೋದಾಗ ರೈತರು ಹಳ್ಳಿಗಳನ್ನು ಬಿಟ್ಟು ಪಲಾಯನ ಮಾಡುತ್ತಾರೆ.
ಈ ಹೋರಾಟ ಹಾಗೂ ಚಿಕ್ಕದೇವರಾಯರ ಕಾಲದ ಹೋರಾಟವನ್ನು ಗಮನಿಸಿದಾಗ ಕನ್ನಡದ ರೈತರು ರಾಷ್ಟ್ರೀಯ ಹೋರಾಟಕ್ಕಿಂತ ಮೊದಲೆ ಅಸಹಕಾರ ಚಳವಳಿಯನ್ನು ತಮ್ಮ ತಂತ್ರವನ್ನಾಗಿ ಬಳಸಿದ್ದು ವ್ಯಕ್ತವಾಗುತ್ತದೆ. ಇದೇ ಸುಮಾರಿಗೆ ಬಳ್ಳಾರಿಯ ರೈತರು ಹೋರಾಟ ನಡೆಸಿದ್ದು ಕಾಕತಾಳೀಯವೆನ್ನ ಬಹುದು. ಅವರ ಹೋರಾಟ ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಹೋರಾಟದಿಂದ ವಿಭಿನ್ನವಾಗಿರಲಿಲ್ಲ; ಅಲ್ಲದೆ ಹೋರಾಟದಲ್ಲಿ ಬಂದಂತಹ ಬೇಡಿಕೆಗಳು ಕೂಡ ವಿಭಿನ್ನ ವಾಗಿರಲಿಲ್ಲ. ಭಾರತದ ಇತರ ಪ್ರಾಂತ್ಯಗಳಿಗೆ ಹೋಲಿಸಿದಾಗ ಇವರ ಹೋರಾಟ ಏನೇನು ಸಲ್ಲದು. ಯಾಕೆಂದರೆ ಅವರ ಬೇಡಿಕೆಗಳು ಹಾಗೂ ವ್ಯಾಪ್ತಿ ಸೀಮಿತವಾದಂತೆ ಕಾಣುತ್ತದೆ.
ಇದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1830ರಲ್ಲಿ ರೈತರು ಮತ್ತೊಮ್ಮೆ ಹೋರಾಟವನ್ನು ನಡೆಸಿರುವುದನ್ನು ನಾವು ಕಾಣುತ್ತೇವೆ. ಈ ಹೋರಾಟ 1800ರ ಹೋರಾಟದಿಂದ ವಿಭಿನ್ನವಾಗಿತ್ತಲ್ಲದೆ, ವ್ಯಾಪ್ತಿಯಲ್ಲೂ ವಿಸ್ತಾರವಾಗಿತ್ತು. ಈ ಹೋರಾಟಕ್ಕೆ ಹತ್ತು ಹಲವು ವಿಷಯಗಳಿದ್ದವು. ಬಲಾತ್ಕಾರದ ವಸೂಲಿ, ತಂಬಾಕಿನ ಮೇಲೆ ಏಕಸಾಮ್ಯತೆ, ಕೋರ್ಟಿನ ಉದ್ಘಾಟನೆ, ಸ್ಟಾಂಪ್ ಕಸ್ಟಂ ಡ್ಯೂಟಿ, ದವಸಧಾನ್ಯ ಹಾಗೂ ಪದಾರ್ಥಗಳ ಮೇಲೆ ಹೆಚ್ಚಿನ ಕರ, ಹಾಗೂ ಹೆಚ್ಚುತ್ತಿರುವ ಗೇಣಿಯಿಂದ ಇಲ್ಲಿನ ರೈತರು ಪ್ರಪ್ರಥಮ ಬಾರಿಗೆ ‘‘ಕೂಟ’ಗಳನ್ನು ರಚಿಸಿ ಹೋರಾಟಗಳನ್ನು ನಡೆಸಿದರು. ಈ ಹೋರಾಟ ಹೆಚ್ಚು ಕಡಿಮೆ ಒಂದು ವರುಷ ಕಾಲ ನಡೆಯಿತು. ಅದೇ ಕಾಲದಲ್ಲಿ ರೈತರು ಸರಕಾರಕ್ಕೆ ನೀಡುವ ಗೇಣಿಯನ್ನು ತಡೆೊಹಿಡಿದರು. ಈ ಹೋರಾಟ ಕೇರಳದ ಮಂಜೇಶ್ವರ ದಿಂದ ದಕ್ಷಿಣ ಕನ್ನಡದ ಕುಂದಾಪುರದ ತನಕ ಹರಡಿತ್ತು. ಇದೇ ಸುಮಾರಿಗೆ ಸುಳ್ಯದಲ್ಲೂ ರೈತರು ದಂಗೆ ಎದ್ದರು. ಈ ಹೋರಾಟ ಮೂಲತಃ ಪಾಳೇಗಾರಿಕೆ ಪುನರ್ಸ್ಥಾಪನೆ ಪರವಾಗಿತ್ತು. ಅದಕ್ಕಾಗಿ ವಸಾಹತುಶಾಹಿ ವಿರುದ್ಧ ನೇರವಾಗಿ ಹೋರಾಟ ಮಾಡಿದರೂ, ಸಫಲವಾಗಲಿಲ್ಲ. ವಸಾಹತುಶಾಹಿ ತನ್ನ ಸೈನ್ಯ ಬಲದಿಂದ ಹೋರಾಟವನ್ನು ಹತ್ತಿಕ್ಕಿತು.
ಇದಕ್ಕೆ ಸಮನ್ವಯವಾದ ಉದಾಹರಣೆ ದೊರೆಯುವುದು ಮೈಸೂರು ಪ್ರಾಂತ್ಯದಲ್ಲಿ. ಶಿವಮೊಗ್ಗ ಜಿಲ್ಲೆಯ ನಗರ ಪ್ರದೇಶದಲ್ಲಿ ರೈತರ ಹೋರಾಟ ಬರೀ ಹೋರಾಟವಾಗಿರಲಿಲ್ಲ; ಅದು ದಂಗೆ ಕೂಡ ಆಗಿತ್ತು. ಇದು ಇತಿಹಾಸದಲ್ಲಿ ನಡೆದ ಹೋರಾಟಗಳಲ್ಲಿ ಅತ್ಯಂತ ಪ್ರಬಲ, ತೀಕ್ಷ್ಣ ಹಾಗೂ ವಿಶಾಲವಾಗಿತ್ತು. ಇದು ವಸಾಹತುಶಾಹಿ ಹಾಗೂ ಪ್ರಾಂತೀಯ ರಾಜ್ಯದೊಂದಿಗೆ ನೇರವಾಗಿ ಸಂಘರ್ಷಕ್ಕಿಳಿಯಿತ್ತಲ್ಲದೆ, ಪ್ರಾಂತೀಯ ರಾಜ್ಯದ ಅಧಿಕಾರದ ಅವನತಿಗೂ ಕಾರಣವಾಯಿತು. 1830-1832ರಲ್ಲಿ ನಡೆದ ದಂಗೆ/ಹೋರಾಟ ಪ್ರಾಂತೀಯ ರಾಜ್ಯವನ್ನು ವಸಾಹತುಶಾಹಿ ಮೈಸೂರು ಪ್ರಾಂತ್ಯವನ್ನು ಅಧಿಕಾರದ ನೇರ ಕಕ್ಷೆಗೆ ತಂದಾಗ ಈ ಅಂಶವನ್ನು ಬಿಟ್ಟು ಹಿಡಿಯುವ ಅಧಿಕಾರದಿಂದ ವಂಚಿತರಾದ ಮೈಸೂರು ಸಂಸ್ಥಾನ ಮುಂದೆ 50 ವರುಷಗಳ ಕಾಲ ಹೆಣಗಾಡಬೇಕಾಯಿತು. ಈ ದಂಗೆ/ಹೋರಾಟ ಇನ್ನೊಂದು ಕಾರಣಕ್ಕೆ ಪ್ರಮುಖವಾಗಿದೆ. ಇದರಲ್ಲಿ ಬ್ರಾಹ್ಮಣ ವಿರೋಧಿ ಹೋರಾಟದ ಅಂಶಗಳಿದ್ದವು. ಆದ ಕಾರಣ ಕರ್ನಾಟಕದ ಬ್ರಾಹ್ಮಣ ವಿರೋಧಿ ಹೋರಾಟವನ್ನು 1910-1920ರಲ್ಲಿ ಗುರುತಿಸಿದರೂ, ಆರಂಭದ ಮಜಲನ್ನು ನಾವು ‘ನಗರ ರೈತ ದಂಗೆ’ಯಲ್ಲಿ ಕಾಣಬಹುದು. ಈ ಬ್ರಾಹ್ಮಣ ವಿರೋಧಿತ್ವಕ್ಕೆ ಕಾರಣವಿತ್ತು. ಮೈಸೂರು ಪ್ರಾಂತ್ಯದ ಬ್ರಾಹ್ಮಣರು ರಾಜಕೀಯ ಅಧಿಕಾರಗಳಾದ ಫೌಜುದಾರ ಹಾಗೂ ಇನ್ನಿತರ ಹುದ್ದೆಗಳನ್ನು ಅಲಂಕರಿಸಿದ್ದರು. ಅವರನ್ನು ರಾಜಕೀಯ ಅಧಿಕಾರದಿಂದ ಬದಲಾಯಿಸುವುದರೊಂದಿಗೆ ಇನ್ನಷ್ಟು ವಿಷಯಗಳು ಹೋರಾಟಕ್ಕೆ ಅವಕಾಶ ಮಾಡಿಕೊಟ್ಟವು; ಅತೀ ಹೆಚ್ಚು ಗೇಣಿಯನ್ನು ಒಟ್ಟುಗೂಡಿಸುವ ಷರತ್ ವ್ಯವಸ್ಥೆ, ಬಲಾತ್ಕಾರದ ವಸೂಲಿ ಹಾಗೂ ಹೆಚ್ಚುತ್ತಿರುವ ಗೇಣಿ. ಈ ಹೋರಾಟ/ದಂಗೆ ನಗರದಲ್ಲಿ ಆರಂಭಗೊಂಡರೂ ಮುಂದೆ ಅದು ಮೈಸೂರು, ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಪ್ರದೇಶಕ್ಕೆ ಹರಡಿತ್ತು. ರೈತರು ವಿವಿಧ ತಂತ್ರಗಳನ್ನು ಉಪಯೋಗಿಸಿದ್ದನ್ನು ನಾವು ಕಾಣಬಹುದು. ಕೆಲವೊಮ್ಮೆ ಅಧಿಕಾರಗಳ ಮುಖಕ್ಕೆ ಬೆಂಕಿಯನ್ನು ಇಡುತ್ತಿದ್ದರು; ಇನ್ನು ಕೆಲವೊಮ್ಮೆ ಅಧಿಕಾರಿಗಳ ಮೈತೊಡೆಗಳನ್ನು ಚುಚ್ಚಿ, ಪುಟ್ಟ ಕಲ್ಲುಗಳನ್ನು ನೇತಾಡಿಸುತ್ತಿದ್ದರು. ಅಲ್ಲದೇ ಆಗಾಗ ಕಿವಿಗಳನ್ನು ಹಿಂಡಿ ಆಟವಾಡಿಸುತ್ತಿದ್ದರು. ಈ ರೈತ ದಂಗೆಯನ್ನು ಹತ್ತಿಕ್ಕಲು ಮೈಸೂರು ಸಂಸ್ಥಾನ ವಸಾಹತುಶಾಹಿಯ ಸಹಾಯವನ್ನು ಪಡೆಯಿತು. ಅದಕ್ಕಾಗಿಯೇ ಕಾಯುತ್ತಿದ್ದ ವಸಾಹತುಶಾಹಿ ಸಹಾಯಕ ಸೈನ್ಯ ಪದ್ಧತಿಯನ್ನು ಉಪಯೋಗಿಸಿ ರೈತ ದಂಗೆಯನ್ನು ಹತ್ತಿಕ್ಕಿತ್ತಲ್ಲದೇ ರಾಜ್ಯವನ್ನು ಕಬಳಿಸಿತು.
ಇದಾದ ನಂತರ ಒಂದು ಶತಮಾನ ಕಾಲ ನಮಗೆ ರೈತ ಹೋರಾಟಗಳು ನಡೆದದ್ದು ಕಂಡುಬರುವುದಿಲ್ಲ. ಆದರೆ ರೈತ-ಭೂಮಾಲೀಕ ಪ್ರಜ್ಞೆ ರಾಜಕೀಯ ಚೌಕಟ್ಟು ಮತ್ತು ಸಾಂಘಿಕ ರೂಪದಲ್ಲಿ ಬೆಳೆದದ್ದು ಕಂಡುಬರುತ್ತದೆ. ಇದಕ್ಕೆ ಮೈಸೂರು ಪ್ರಾಂತ್ಯದ ಆರ್ಥಿಕ ಬೆಳವಣಿಗೆ ಕಾರಣ.
1830ರ ದಶಕದಲ್ಲಿ ಆರಂಭಿಸಿದ ಬಂಡವಾಳಶಾಹಿ ಉತ್ಪಾದನ ರೀತಿ ವರ್ಗಪ್ರಜ್ಞೆಯನ್ನು 1890-1910 ಸೃಷ್ಟಿಸಿದ್ದು ಅತ್ಯಂತ ಆಶ್ಚರ್ಯಕರವೆನ್ನಬಹುದು. ಈ ಹಿಂದೆ ಹೇಳಿದಂತೆ ಬಂಡವಾಳಶಾಹಿ ಬೆಳವಣಿಗೆ ಪ್ರಾಂತ್ಯದ ಎಲ್ಲಾ ಒಂದೇ ಕಾಲದಲ್ಲಿ; ಒಂದೇ ರೂಪದಲ್ಲಿ ಹರಡಲಿಲ್ಲ. ಅದು ಕೆಲವು ಸ್ಥಳಗಳಿಗೆ, ವರ್ಗಗಳಿಗೆ ಬೆಳೆಗಳಿಗೆ ಸೀಮಿತವಾಗಿತ್ತು. ಆ ಮೂಲಕ ಅಸಮರ್ಪಕ ಬೆಳವಣಿಗೆ ಕಾರಣವಾಯಿತು. ಈ ಬೆಳೆಗಳಲ್ಲಿ ಕಾಫಿ ಬೆಳೆಯೂ ಒಂದು. ಕಾಫಿ ಒಂದು ವಾಣಿಜ್ಯ ಬೆಳೆಯಲ್ಲದೆ, ಅದು ಬಂಡವಾಳಶಾಹಿ ಬೆಳೆಯೂ ಹೌದು-ಸಂಬಂಧಗಳು ಕೂಡ ಬಂಡವಾಳಶಾಹಿ ರೂಪದಲ್ಲಿರುತ್ತದೆ. ಈ ಬೆಳವಣಿಗೆ ಸೀಮಿತಗೊಂಡಿದ್ದು ಮಲೆನಾಡ ಪ್ರದೇಶಕ್ಕೆ, ಅದರೊಂದಿಗೆ ವರ್ಗ ಪ್ರಜ್ಞೆ ಬೆಳೆಯಿತು. ಆದರೆ ಈ ಪ್ರಜ್ಞೆ ಯಾವುದೇ ನೇರ ಹೋರಾಟಗಳಿಗೆ ಅವಕಾಶ ಮಾಡಿಕೊಡಲಿಲ್ಲ. ಹೋರಾಟ ಪ್ರಜ್ಞೆ ಸಂಸ್ಥೆಗಳನ್ನು ಕಟ್ಟುವುದರ ಮುಖಾಂತರ, ಬೇಡಿಕೆಗಳನ್ನು ಮುಂದಿಡುವುದರ ಮುಖಾಂತರ ಅಥವಾ ರಾಜಕೀಯ ಚೌಕಟ್ಟಿನಲ್ಲಿ ಪ್ರಶ್ನೆಗಳನ್ನು ಎತ್ತುವುದರ ಮುಖಾಂತರ ವ್ಯಕ್ತವಾಗುತ್ತಿತ್ತು. ನೈಜವಾಗಿ ನೋಡುವುದಾದರೆ ಕಾಫಿ ಬೆಳೆಗಾರರು 1890-1910ರ ದಶಕದಲ್ಲಿ ಮೂರು ಸಂಘಟನೆಗಳನ್ನು ಕಟ್ಟಿದ್ದರು. ಬಾಬಾ ಬುಡನ್ ಪ್ಲಾಂಟರ್ಸ್ ಅಸೋಶಿಯೇಷನ್ (ಕಡೂರು); ಸೌತ್ ಮೈಸೂರು ಪ್ಲಾಂಟರ್ಸ್ ಅಸೋಶಿಯೇಷನ್ (ಸಕಲೇಶಪುರ), ನಾರ್ತ್ ಮೈಸೂರು ಸೀಟಿವ್ ಪ್ಲಾಂಟರ್ಸ್ ಅಸೋಶಿಯೇಶನ್ (ಚಿಕ್ಕಮಗಳೂರು). ಅವರ ಮುಖ್ಯವಾದ ಬೇಡಿಕೆಗಳು ಹೀಗಿದ್ದವು. ಚಿಕ್ಕಮಗಳೂರು ಹಾಗೂ ಮಂಗಳೂರಿಗೆ ರೈಲು ಸಂಪರ್ಕ, ಕಾಫಿ ಪ್ಲಾಂಟರ್ಸ್ಗಳಿಗೆ ಸಾಲ, ಐವತ್ತು ಯಾರ್ಡಿನೊಳಗೆ ಕಾಫಿ ಬೆಳೆಯುವುದರ ನಿಷೇಧವನ್ನು ಎತ್ತುವುದು, ಸಾಲ ಮಾಫಿ, ಕಾಫಿ ಪರೀಕ್ಷಾ ತೋಟದ ಉದ್ಘಾಟನೆ, ಕಾಫಿ ಕಳ್ಳತನ ತಡೆಗಟ್ಟಲು ಕಾಯಿದೆ, ಕಾಫಿ ತೋಟಗಳಲ್ಲಿ ಏಲಕ್ಕಿ ಬೆಳೆಸಲು ಅವಕಾಶ. ಈ ಬೇಡಿಕೆಗಳು ಮುಂದೆಯೂ ಬರುತ್ತಿದ್ದವು.
ಬಂಡವಾಳಶಾಹಿ ಬೆಳವಣಿಗೆಯ ವೈರುಧ್ಯದಿಂದ ಹುಟ್ಟಿಕೊಂಡ ಹೋರಾಟವನ್ನು ನಾವು 1920-1931ರಲ್ಲಿ ನೋಡಬಹುದು. ಇದನ್ನು ‘ಇರ್ವಿನ್ ಕಾಲುವೆ’ ರೈತರ ಹೋರಾಟವೆಂದು ಕರೆಯುತ್ತಾರೆ. ಇದು ಮಂಡ್ಯ ಜಿಲ್ಲೆಯಲ್ಲಿ ಕಾಲುವೇ ನೀರಾವರಿಯಿಂದಾಗಿ ಹುಟ್ಟಿಕೊಂಡ ರೈತರ ಹೋರಾಟವಾಗಿತ್ತು. ಇವರ ಹೋರಾಟ ಒಂದು ಜಾಥದ ರೂಪ ವನ್ನು ಪಡೆದಿತ್ತಲ್ಲದೇ, ಶಾಂತ ರೂಪದಿಂದ ವ್ಯಕ್ತವಾಯಿತು. ಮುಖ್ಯವಾದ ಬೇಡಿಕೆಗಳು ಹೀಗಿದ್ದವು: ನೀರಿನ ಕರದಲ್ಲಿ ಕಡಿತ, ಬ್ಲಾಕ್ ವ್ಯವಸ್ಥೆಯ ನಾಶ/ಅಥವಾ ಹಿಂತೆಗೆಯುವುದು; ಕಂದಾಯವನ್ನು ಹೆಚ್ಚಿನ ಕಂತುಗಳಲ್ಲಿ ನೀಡಲು ಅವಕಾಶ ನೀಡುವುದು; ಹಾಗೂ ಸಾಲದ ಬಡ್ಡಿಯಲ್ಲಿ ಕಡಿತ ಮಾಡುವುದು. ಬೆಂಗಳೂರಿಗೆ ಜಾಥವನ್ನು ಕೊಂಡು ಹೋಗುವುದರ ಮುಖಾಂತರ ಈ ಹೋರಾಟ ಸಮಾಪ್ತಿಯಾಯಿತು. ಮುಂದೆ ಮೈಸೂರು ಪ್ರಾಂತ್ಯ/ಸಂಸ್ಥಾನ ಅವರ ಬೇಡಿಕೆಗಳನ್ನು ಮನ್ನಿಸಿತ್ತು.
ಗಾಂಧೀಜಿಯವರ ರಾಷ್ಟ್ರೀಯ ಹೋರಾಟ ಮೈಸೂರು ಪ್ರಾಂತ್ಯದ ಗಡಿ ಪ್ರದೇಶದಲ್ಲಿ ಆರಂಭಗೊಂಡದ್ದನ್ನು ನಾವು ಕಾಣಬಹುದು. ಗಾಂಧೀಜಿಯವರು ರಾಷ್ಟ್ರೀಯ ಹೋರಾಟದಲ್ಲಿ ರೈತರನ್ನು ತರಲು ಕಾರಣಗಳಿದ್ದವು. ರೈತರನ್ನು ರಾಷ್ಟ್ರೀಯ ಹೋರಾಟಕ್ಕೆ ತರುವುದರಿಂದ ಹೋರಾಟಕ್ಕೆ ಇನ್ನಷ್ಟು ಪುಷ್ಟಿ ಸಿಗುತ್ತಿತ್ತು. ಎರಡನೆಯದಾಗಿ ವಿವಿಧ ರೈತ ಹೋರಾಟಗಳು ವಿಭಜನೆಗೆ ಕಾರಣಗಳಾಗಬಹುದಿತ್ತು. ಅಲ್ಲದೇ, ರಾಷ್ಟ್ರೀಯ ಹೋರಾಟ ಒಂದು ಪ್ರಬುದ್ಧ ಹೋರಾಟವಾಗಿ ಹೊರಹೊಮ್ಮುತ್ತಿತ್ತು. ಆದ ಕಾರಣ ರೈತರು ರಾಷ್ಟ್ರೀಯ ಹೋರಾಟದಲ್ಲಿ ಪಾತ್ರ ವಹಿಸಿದರೂ ಅವರಿಗೆ ಒಂದು ಸ್ವತಂತ್ರ ಹೋರಾಟ ನಡೆಸಲು ಅವಕಾಶವಿರಲಿಲ್ಲ. ರೈತರು ಕಾಂಗ್ರೆಸ್ ಪರವಾಗಿಯೂ, ಕಾಂಗ್ರೆಸ್ ರೈತರ ಪರವಾಗಿಯೂ ವಾದಿಸಬೇಕಾದ ಸಂದರ್ಭ ಬಂದುದನ್ನು ನಾವು ಕಾಣಬಹುದು. ಅದೇನೇ ಇದ್ದರೂ ಗಾಂಧೀಜಿ ಕರೆಗೆ ರೈತರು ಮಹತ್ವವನ್ನು ನೀಡುತ್ತಿದ್ದರು. 1930ರ ದಶಕದಲ್ಲಿ ಗಾಂಧೀಜಿಯವರು ಕರೆ ಕೊಟ್ಟ ‘ಅರಣ್ಯ ಸತ್ಯಾಗ್ರಹ’ವನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಸಿರ್ಸಿ ಸಿದ್ಧಾಪುರದಲ್ಲಿ ರೈತರು, ವಿಶೇಷವಾಗಿ ಪರಿಶಿಷ್ಟಜಾತಿ ರೈತರು ನಡೆಸಿದರು. ಇಲ್ಲಿದ್ದ ಮುಖ್ಯ ವಿಷಯ ಅರಣ್ಯದ ಮೇಲಿನ ಹಕ್ಕನ್ನು ಪುನರ್ ಸ್ಥಾಪಿಸುವುದು- ಉರುವಲು ಹಕ್ಕು ಅದರೊಂದಿಗೆ ಗೇಣಿಯ ವಿಷಯವೂ ಕೂಡ ಸೇರಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಗಾಂಧಿ-ಇರ್ವಿನ್ ಸಂಧಾನದೊಂದಿಗೆ ಈ ಹೋರಾಟ ಮುಕ್ತಾಯವಾದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೋರಾಟ ಕೆಲಕಾಲ ನಡೆಯಿತು. ದಿವಾನರು ಸ್ಮಿಟ್ ಸಂಧಾನದಲ್ಲಿ ಮುಂದೆ ಈ ‘ಅರಣ್ಯ ಸತ್ಯಾಗ್ರಹ’ ಸಮಾಪ್ತಿಯಾಯಿತು. ಈ ರೀತಿ ಕರ್ನಾಟಕದ ರೈತರು ಪ್ರಥಮ ಬಾರಿಗೆ ರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸಿದರು. ಮುಂದೆ ‘ಚಲೇಜಾವ್’(1942) ಚಳವಳಿ ಕಾಲದಲ್ಲೂ ರೈತರು, ರೈತ ಕಾರ್ಮಿಕರು ಭಾಗವಹಿಸಿದ್ದನ್ನು ನಾವು ಕಾಣಬಹುದು. ಈ ಕಾಲದಲ್ಲಿ ರೈತರು ಕಂಬಗಳನ್ನು ಕೀಳುವುದು, ಮರಗಳನ್ನು ಕಡಿದು ಉರುಳಿಸುವುದು ಚಿಕ್ಕ ಪುಟ್ಟ ಸೇತುವೆಗಳ ನಾಶ, ಟೆಲಿಗ್ರಾಫ್ ತಂತಿಗಳ ನಾಶ ಮಾಡುವ ತಂತ್ರಗಳನ್ನು ಉಪಯೋಗಿಸಿದ್ದನ್ನು ನಾವು ಕಾಣಬಹುದು.
ವಸಾಹತೋತ್ತರ ಕಾಲಾವಧಿಯಲ್ಲಿ ರೈತ ಹೋರಾಟಕ್ಕೆ ಹೊಸ ಆಯಾಮ ದೊರೆಯಿತು. ವ್ಯವಸ್ಥೆಯ ಬದಲಾವಣೆಯೊಂದಿಗೆ ವೈರುಧ್ಯಗಳು ಬದಲಾದವು, ಅದರೊಂದಿಗೆ ವರ್ಗಗಳೂ ಕೂಡ ಬದಲಾದವು. ಪ್ರಥಮ ಬಾರಿ ಪ್ರಜಾಪ್ರಭುತ್ವ ಸರಕಾರ, ಕೆಳಸ್ತರದ ಊಳಿಗಮಾನ್ಯ/ಸರಂಜಾಮಶಾಹಿ, ಉಳುವವನೆ ಭೂಒಡೆಯ ಇತ್ಯಾದಿ ವಿಷಯಗಳು ರೈತ ಹೋರಾಟದಲ್ಲಿ ಪ್ರಮುಖ ಸ್ಥಾನವನ್ನು ಪಡೆದವು. ಗೇಣಿದಾರರು ಮತ್ತು ಭೂಮಾಲೀಕರ ನಡುವೆ ನಡೆದ ಹೋರಾಟವನ್ನು 1951ರ ಕಾಲದಲ್ಲಿ ನಾವು ಗುರುತಿಸಬಹುದು. ಇದು ಪ್ರಪ್ರಥಮವಾಗಿ ಶಿವಮೊಗ್ಗ ಜಿಲ್ಲೆಯ ಕಾಗೋಡಿನಲ್ಲಿ ಸಮಾಜವಾದಿ ಪಕ್ಷದಡಿಯಲ್ಲಿ ನಡೆಯಿತು. ಗೇಣಿಯನ್ನು ಅಳತೆ ಮಾಡುವ ‘ಕೊಳಗ’ ವಿರುದ್ಧ ರೈತ ಹೋರಾಟ ಆರಂಭಗೊಂಡರೂ, ಬೇರೆ ಬೇರೆ ವಿಷಯಗಳು ಮುಂದೆ ಬಂದವು, ಸಾಲದ ವಿಷಯ, ಗೇಣಿದಾರರಿಗೆ ನೀಡುತ್ತಿರುವ ಕಿರುಕುಳ, ಬಲತ್ಕಾರದ ವಸೂಲಿ, ಉಳುವವನೆ ಭೂಒಡೆಯ ಇತ್ಯಾದಿ. ಡಾ. ರಾಮ್ ಮನೋಹರ ಲೋಹಿಯಾ ಹೋರಾಟಕ್ಕೆ ಪುಷ್ಟಿ ನೀಡಲು ಬಂದಿದ್ದರು. ಹೋರಾಟ ಸಮಾಜವಾದಿಗಳಿಗೆ ಒಂದು ನೆಲೆಯನ್ನು ಸ್ಥಾಪಿಸಲು ಅವಕಾಶ ನೀಡಿದರೂ, ಅದು ಹೆಚ್ಚು ಕಾಲ ಬಾಳಲಿಲ್ಲ. 1970-1980ರ ಸುಮಾರಿಗೆ ಸಮಾಜವಾದಿಗಳು ವಿವಿಧ ಪಕ್ಷದೊಂದಿಗೆ ಸೇರುವುದರಿಂದಾಗಿ ಸಮಾಜವಾದಿ ಪಕ್ಷ ನಿರ್ನಾಮವಾಯಿತು.
ಉತ್ತರ ಕನ್ನಡ ಜಿಲ್ಲೆಯಲ್ಲಿ 1950ರ ದಶಕದಲ್ಲಿ ಸಮಾಜವಾದಿಗಳು ರೈತ ಹೋರಾಟವನ್ನು ನಡೆಸಿದ್ದರು. ಅವರ ಹೋರಾಟ ಗೇಣಿದಾರಿಕೆ ವಿರುದ್ಧ; ಭೂಮಾಲೀಕತ್ವದ ವಿರುದ್ಧ ಆಗಿತ್ತು. ಇದು ಕೂಡ ಬಹಳ ಕಾಲ ಬಾಳಲಿಲ್ಲ. ಕಮ್ಯೂನಿಸ್ಪರು ಕೂಡ ರೈತ ಹೋರಾಟದಿಂದ ವಿಮುಖರಾಗಿರಲಿಲ್ಲ. ಅವರು ತಮ್ಮ ಪ್ರಾಂತೀಯ ರೈತ ಸಂಘಟನೆಗಳ ಮುಖಾಂತರ ಆಗಾಗ್ಗೆ ಹೋರಾಟ ನಡೆಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಖ್ಯವಾಗಿ ಬಂಟವಾಳ, ಕುಂದಾಪುರ, ಸುಳ್ಯ, ಧಾರವಾಡ, ಹಳಿಯಾಳ, ಬಳ್ಳಾರಿಯ ಸಂಡೂರಿನಲ್ಲಿ, ಕೋಲಾರದ ಬಾಗೇಪಲ್ಲಿ, ಶಿಡ್ಲಘಟ್ಟ ಹಾಗೂ ಚಿತ್ರದುರ್ಗದಲ್ಲಿ ಈ ಪ್ರಾಂತೀಯ ರೈತ ಸಂಘಗಳು ಗೇಣಿದಾರರ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ನಡೆಸಿದವು. ಅವರ ಮುಖ್ಯ ಬೇಡಿಕೆಗಳಲ್ಲಿ ಗೇಣಿದಾರರನ್ನು ಒಕ್ಕಲೆಬ್ಬಿಸುವುದನ್ನು ತಡೆಯುವುದು, ಗೇಣಿಯಲ್ಲಿ ಕಡಿತ, ಭೂಮಾಲೀಕತ್ವದ ನಾಶ, ಚಿಕ್ಕ ಹಿಡುವಳಿದಾರರಿಗೆ ಕಂದಾಯದಲ್ಲಿ ಕಡಿತ/ಮಾಪಿ, ಬಡರೈತರಿಗೆ ಬರಡು ಭೂಮಿಯ ಹಂಚಿಕೆ, ಹಾಗೂ ‘ಉಳುವವನೆ ಭೂಒಡೆಯ’ ಎಂಬುವುದನ್ನು ಜಾರಿಗೆ ತರುವುದು. ಅದರೊಂದಿಗೆ ಕೃಷಿ ಕಾರ್ಮಿಕರಿಗೆ ಜೀವನಕ್ಕೆ ಬೇಕಾಗುವ ಕೂಲಿ, ಸಾಲ ಮಾಫಿ, ನೀರಿನ ಕರದಲ್ಲಿ ಕಡಿತ ಹಾಗೂ ಅಧಿಕ ಭೂಮಿಯ ಹಂಚಿಕೆ ಇತ್ಯಾದಿ ವಿಷಯಗಳೂ ಸೇರಿದ್ದವು. ಪ್ರಾಂತೀಯ ರೈತ ಸಂಘಗಳು 1968/79ರಲ್ಲಿ ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ನಿರ್ದಿಷ್ಟ ಕಾರ್ಖಾನೆಗೆ ಕಬ್ಬು ಸಾಗಿಸುವುದರ ವಿರುದ್ಧ; 1972ರಲ್ಲಿ ಕೋಲಾರದಲ್ಲಿ ಭೂ ಆಕ್ರಮಣ ಚಳವಳಿ; ಇತ್ಯಾದಿ ಚಳವಳಿಗಳನ್ನು ಮಾಡಿದರೂ, 1980ರ ದಶಕದಲ್ಲಿ ಹೋರಾಟದಲ್ಲಿ ನಿಸ್ತೇಜತೆಯನ್ನು ಕಾಣಬಹುದು. ಇದಕ್ಕೆ ಕಾರಣಗಳಿಲ್ಲವೆಂದಲ್ಲ
1. ಉಳುವವನೆ ಭೂಒಡೆಯ ಘೋಷಣೆ ಹಾಗೂ ಪಾಲಿಸಿ ರೈತ ಸಂಘಗಳಿಗೆ ಹೊಡೆತ ಬಿತ್ತು
2. ಆರಂಭದಿಂದಲೂ ರೈತ ಸಂಘಗಳು ಎಲ್ಲೆಲ್ಲಾ ಗೇಣಿದಾರರಿದ್ದರೊ ಅಲ್ಲಿಗೆ ಮಾತ್ರ ತಮ್ಮ ಹೋರಾಟವನ್ನು ಸೀಮಿತಗೊಳಿಸಿದ್ದರು.
3. ಕಮ್ಯೂನಿಸ್ಟ್ ಪಕ್ಷಗಳು ಶಾಸ್ತ್ರೀಯ ಧೋರಣೆಗಳ ಮೇಲೆ ನಿಂತ ಕಾರಣ ರೈತಾಪಿಗಳ ಮೇಲೆ ಹೆಚ್ಚು ಗಮನಹರಿಸಲು ಸಾಧ್ಯವಾಗಲಿಲ್ಲ.
4. ಸದಸ್ಯತ್ವವನ್ನು ಹೆಚ್ಚಿಸುವ ಯಾವುದೇ ಕಾರ್ಯಭಾರವನ್ನು ಮಾಡಲಿಲ್ಲ.
5. ರೈತ ಸಂಘಗಳ ರಾಜ್ಯ ಕೆಲವೆ ಪ್ರಾಂತ್ಯಗಳಿಗೆ ಸೀಮಿತವಾಗಿತ್ತು.
ಇದೇ ಸುಮಾರಿಗೆ ಪಕ್ಷಾತೀತ (ಪಕ್ಷ ರಹಿತ) ರೈತ ಸಂಘಟನೆಗಳು ವರ್ಗದ ರೂಪದಲ್ಲಿ ಹುಟ್ಟಿಕೊಂಡವು. ಇದನ್ನು ಮೂಲತಃ 1960ರ ದಶಕದ ಅಂತಿಮ ಹಾಗೂ 1970ರ ದಶಕ ಆದಿಯಲ್ಲಿ ನೋಡಬಹುದು. ಮುಖ್ಯವಾಗಿ ಇದನ್ನು ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲೆಯಲ್ಲಿ ಕಾಣಬಹುದು. ಶಿವಮೊಗ್ಗ ಜಿಲ್ಲೆಯಲ್ಲಿ 1960 ಅಂತ್ಯಕ್ಕೆ ಕಬ್ಬು ಬೆಳಗಾರರ ಸಂಘಟನೆ ಅಸ್ತಿತ್ವಕ್ಕೆ ಬಂದಿತ್ತಲ್ಲದೆ ಬೆಲೆಗಳಿಗಾಗಿ ಆಗಾಗ ಹೋರಾಟ ನಡೆಸಿತ್ತು. ಈ ಬೇಡಿಕೆ ಬೆಳೆಗೆ ಸೀಮಿತವಾಗಿದ್ದ ಕಾರಣ ಅದಕ್ಕೆ ವಿಶಾಲವಾದ ತಳಹದಿ ದೊರೆಯಲೇ ಇಲ್ಲ. 1980ರಲ್ಲಿ ಇದರ ಸ್ವರೂಪ ಬದಲಾಯಿತು. ಅದೇ ಕಾಲಕ್ಕೆ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮಲೆನಾಡು ಪ್ರದೇಶದಲ್ಲಿ ದಕ್ಷಿಣ ಭಾರತ ಸಣ್ಣ ಬೆಳೆಗಾರರ ಬಿಕ್ಕಟ್ಟು ಹುಟ್ಟಿಕೊಂಡಿತ್ತು. ಇದರ ಹೋರಾಟ ಹಾಗೂ ಬೇಡಿಕೆ ಮುಖ್ಯವಾಗಿ ವಾಣಿಜ್ಯ ಬೆಳೆಗಳಿಗಾಗಿತ್ತು. ಮುಖ್ಯವಾಗಿ, ಕಾಫಿ, ಏಲಕ್ಕಿ ಹಾಗೂ ಭತ್ತ ಅಲ್ಲದೇ ಲೇವಿ ತಗಾದೆ, ಭೂ ಸ್ಥಿರ ಆಸ್ತಿಯ ಮುಟ್ಟುಗೋಲು, ಬೆಳೆಗಳನ್ನು ಇಚ್ಛಾನುಸಾರವಾಗಿ ಮಾರುವ ಅಧಿಕಾರಕ್ಕಾಗಿ ಹೋರಾಡುತ್ತಿತ್ತು. ಹೋರಾಟದ ರೀತಿ ಶಾಂತಿಯುತವಾಗಿತ್ತಲ್ಲದೆ, ಕೆಲವೇ ಕ್ಷೇತ್ರಕ್ಕೆ ಸೀಮಿತವಾಗಿದ್ದ ಕಾರಣ ಇದು ಪ್ರಬಲವಾದ ಹೋರಾಟವಾಗಿ ಹೊರಹೊಮ್ಮಿದ್ದಲ್ಲ.
ಇದೇ ಸುಮಾರಿಗೆ ಬಳ್ಳಾರಿಯಲ್ಲೂ ಕಬ್ಬು ಬೆಳೆಗಾರರ ಸಂಘಟನೆ ಅಸ್ತಿತ್ವದಲ್ಲಿತ್ತು. ಇದರ ಬೇಡಿಕೆಗಳು ಸ್ವಲ್ಪ ಮಟ್ಟಿಗೆ ಶಿವಮೊಗ್ಗ ರೈತರ ಬೇಡಿಕೆಗಳಿಗಿಂತ ವಿಭಿನ್ನವಾಗಿತ್ತು. ಅದರ ಬೇಡಿಕೆ ಮುಖ್ಯವಾಗಿ, ಕೃಷಿ ಸಾಲ ಮಾಫಿ, ಕೃಷಿಯನ್ನು ಕೈಗಾರಿಕೆ ಎಂದು ಘೋಷಿಸುವುದು, ಗುಡಿ ಕೈಗಾರಿಕೆಗಳ ಸ್ಥಾಪನೆ, ಕೃಷಿ ಬೆಳೆಗಳಿಗೆ ತೌಲನಿಕ ಬೆಲೆ, ಬಡ್ಡಿಯಲ್ಲಿ ಕಡಿತ, ಕೃಷಿ ಆದಾಯದಲ್ಲಿ ಮಾಫಿ, ಕೃಷಿ ಯಂತ್ರದ ಕರಗಳಲ್ಲಿ ಕಡಿತ, ಮಾರ್ಕೆಟ್ ಸೆಸ್ನಲ್ಲಿ ಕಡಿತ, ನೀರಾವರಿ ಬ್ಯಾಂಕ್ಗಳ ಸ್ಥಾಪನೆ, ಅಕ್ಕಿ/ಭತ್ತದ ಲೇವಿಯನ್ನು ವಾಪಸು ತೆಗೆದುಕೊಳ್ಳುವುದು, ಅಧಿಕಾರಶಾಹಿಯ ಹಸ್ತಕ್ಷೇಪವಿಲ್ಲದೆ ಸಾಲ ಮಂಜೂರು. ಅದೇ ರೀತಿ ಅಖಿಲ ಕರ್ನಾಟಕ ಮಟ್ಟದಲ್ಲೂ ಕಬ್ಬು ಬೆಳೆಗಾರರು ಒಂದು ಸಂಘಟನೆಯನ್ನು ಸ್ಥಾಪಿಸಿದ್ದರು. ಅವರ ಬೇಡಿಕೆಗಳು ಈ ರೀತಿ ಇದ್ದವು : ಲೇವಿ ಬೆಲೆಗಳನ್ನು ಏಕರೂಪತೆ, ಕೈಗಾರಿಕೆ ಹಾಗೂ ಕೃಷಿ ಬೆಲೆಗಳಲ್ಲಿ ಸೌಮ್ಯತೆ, ವಿದ್ಯುತ್ ದರದಲ್ಲಿ ಕಡಿತ, ಖಾಸಗಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಕರಣ, ಸಾಲಕ್ಕಾಗಿ ಸರಿಯಾದ ವ್ಯವಸ್ಥೆ, ಪ್ರತ್ಯೇಕ ಸಕ್ಕರೆ ಬೋರ್ಡ್ನ ಅನುಷ್ಠಾಪನೆ, ಹಾಗೂ ಗ್ರಾಮೀಣ ಬೆಳವಣಿಗೆಗಾಗಿ ಪರ್ಚೆಸ್ ಟ್ಯಾಕ್ಸ್ ಇಷ್ಟೆಲ್ಲ ಸಂಘಟನೆ ಗಳಿದ್ದರೂ ಅವು ಪ್ರಬಲವಾಗಿರಲಿಲ್ಲ. ಅವುಗಳ ಕಾರ್ಯಸಮೇತ ಒಂದು ಕಾರಣವಾದರೆ, ಅವು ಉಪಯೋಗಿಸಿದ ತಂತ್ರಗಳು ಇನ್ನೊಂದು ಕಾರಣವೆನ್ನಬಹುದು. ಮೂಲತಃ ರೈತರ ಬೇಡಿಕೆಗಳು ಮನವಿಗಳನ್ನು ಸಲ್ಲಿಸುವುದರ ಮುಖಾಂತರ ಪರ್ಯವಸಾನಗೊಳ್ಳುತ್ತಿದ್ದವು. ಆದರೆ 1980ರ ದಶಕದ ಈ ಹೋರಾಟದ ನೀತಿಯನ್ನು ಸಂಪೂರ್ಣವಾಗಿ ಬದಲಾಯಿಸಿತು.
1980ರ ದಶಕದ ನಂತರ ನಡೆದ ಹೋರಾಟವನ್ನು ‘‘ನವ ರೈತ’ ಹೋರಾಟವೆಂದು ಕರೆಯುತ್ತಾರೆ. ಇದಕ್ಕೆ ಕಾರಣಗಳಿವೆ:
1. ಈ ಹಿಂದಿನ ಹೋರಾಟಗಳಂತೆ ರೈತ ಹೋರಾಟ ಊಳಿಗಮಾನ್ಯ/ಸರಂಜಾಮಶಾಹಿ ವಿರುದ್ಧವಾಗಿರಲಿಲ್ಲ,
2. ಹೋರಾಟಗಳ ತಳಹದಿ ವಾಣಿಜ್ಯ ಬೆಳೆಗಳನ್ನು ಬೆಳೆಸುವ ರೈತರು ಹಾಗೂ ಮಧ್ಯಮ ರೈತರ ನಡುವೆ ಇತ್ತು
3. ಪಕ್ಷಾತೀತ ನೆಲೆಗಟ್ಟಿನಲ್ಲಿ ಆರಂಭವಾಯಿತು.
4. ಹೋರಾಟದ ಪರಿಕಲ್ಪನೆ ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗದೆ ರಾಜ್ಯ, ದೇಶ, ಅಂತಾರಾಷ್ಟ್ರೀಯ ಸಂಬಂಧಗಳಿಗೂ ವಿಶಾಲ ವಾಗಿತ್ತು.
5. ಆಂತರಿಕ ವೈರುಧ್ಯಗಳಿಗಿಂತ ಬಾಹ್ಯ ವೈರುಧ್ಯಗಳಿಗೆ ಹೆಚ್ಚಿನ ಮಹತ್ವ ನೀಡಿತ್ತು.
6. ಪ್ರಪ್ರಥಮ ಬಾರಿಗೆ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸಂಬಂಧ ಗಳ ವಿಶ್ಲೇಷಣೆ ಮಾಡಿ ಹೊಸ ಸಂವಾದಗಳನ್ನು ಸೃಷ್ಟಿಸಿದವು.
7. ಅಂತಿಮವಾಗಿ ಹೊಸ ತಾತ್ವಿಕ ಸೈದ್ಧಾಂತಿಕ ಚೌಕಟ್ಟನ್ನು ನಿರ್ಮಿಸಲು ಯತ್ನಿಸಿದವು.
ಈ ರೈತ ಹೋರಾಟದ ಆರಂಭದ ಘಟ್ಟವನ್ನು ಮಲಪ್ರಭಾ ಘಟಪ್ರಭಾ ಪ್ರದೇಶದಲ್ಲಿ ನೋಡಬಹುದಾದರೂ, ರೈತ ಹೋರಾಟಕ್ಕೆ ವಿಶಾಲವಾದ ಕಾರಣವಿದೆ. ಮೊದಲನೆಯದಾಗಿ ಇದು ಬಂಡವಾಳಶಾಹಿ ಬೆಳವಣಿಗೆಯಲ್ಲಿ ವೈರುಧ್ಯವನ್ನು ತಂದಿತ್ತು. ‘ಹಸಿರು ಕ್ರಾಂತಿ’ ಶಾಶ್ವತವಾಗಿ ಬಡತನವನ್ನು ಹೋಗಲಾಡಿಸುವ ಬದಲು ವೈರುಧ್ಯಗಳನ್ನು ಸೃಷ್ಟಿಸಿತ್ತು : ಒಂದೆಡೆ ಬಡತನ, ಇನ್ನೊಂದೆಡೆ ಶ್ರೀಮಂತಿಕೆ. ಅದರೊಂದಿಗೆ ವಾಣಿಜ್ಯೀಕರಣಗೊಂಡ ಕೃಷಿಯ ಮಾರುಕಟ್ಟೆಯಲ್ಲಿ ಆಗಾಗ ಏರುಪೇರನ್ನು ಎದುರಿಸಬೇಕಾಗುತ್ತಿತ್ತು. ಎರಡನೆಯ ದಾಗಿ ಲಾಭದಾಯಕವಲ್ಲದ ಕೃಷಿ. ಇದು ಭೂ ಪ್ರಶ್ನೆಗೂ ಸೇರಿಕೊಂಡಿದೆ. ರೈತ ಕುಟುಂಬ ಬೆಳೆದಂತೆಲ್ಲ ಹಿಡುವಳಿಗಳು ಚಿಕ್ಕದಾಗುತ್ತಾ ಹೋಗುತ್ತದೆ. ಅದರೊಂದಿಗೆ ಕೃಷಿ ನಷ್ಟಕ್ಕೀಡಾಗು ತ್ತದೆ. ಮೂರನೆಯದಾಗಿ ಕೃಷಿ ಬೆಳೆಗಳಿಗೂ ಕೈಗಾರಿಕಾ ವಸ್ತುಗಳ ನಡುವಿನ ಅಜಗಜಾಂತರ. ಇದು ಕೈಗಾರಿಕ ವಸ್ತುಗಳ ಬೆಲೆಯನ್ನು ತುಷ್ಟೀಕರಿಸುತ್ತಾ ಕೃಷಿ ಬೆಳೆಗಳ ಬೆಲೆಗಳನ್ನು ಅವಗುಣಗೊಳಿಸುತ್ತದೆ. ಕೈಗಾರಿಕೆಗೆ ಇರುವಂತಹ ಸ್ವಾತಂತ್ರ್ಯ ಮುಖ್ಯವಾಗಿ ಬೆಲೆಗಳನ್ನು ನಿರ್ಧರಿಸುವ, ವಸ್ತುಗಳನ್ನು ಮಾರುವ, ಕೃಷಿಗೆ ಇಲ್ಲ. ಈ ರೀತಿ ಕೃಷಿ ಹಾಗೂ ಕೈಗಾರಿಕೆ ವಿರುದ್ಧ ಹೋರಾಟಕ್ಕೆ ಅವಕಾಶ ಮಾಡಿಕೊಟ್ಟಿತು.
ಮಲಪ್ರಭಾ ಪ್ರದೇಶದಲ್ಲಿ ವರಲಕ್ಷ್ಮೀ ಹತ್ತಿ ಪ್ರಮುಖ ಬೆಳೆಯಾಗಿತ್ತು. ಒಂದು ಕಾಲದಲ್ಲಿ ಇದು ಸಾಕಷ್ಟು ಲಾಭ ಹಾಗೂ ಶ್ರೀಮಂತಿಕೆಯನ್ನು ತಂದಿತ್ತು. 1980ರ ಸುಮಾರಿಗೆ ಇದರ ಬೆಳೆೆ ನೆಲೆ ಕಚ್ಚಿದಾಗ ರೈತರಿಗೆ ಹೋರಾಟವೇ ಮುಖ್ಯ ದಾರಿಯಿಯಿತು. ಜುಲೈ 21, 1980ರಂದು ಮಲಪ್ರಭಾ ರೈತರು ಪೊಲೀಸ್ ಗುಂಡಿಗೆ ಬಲಿಯಾದದ್ದೇ ರೈತ ಹೋರಾಟದ ಉಗಮಕ್ಕೆ ಕಾರಣ. ಈ ಹೋರಾಟದ ಆರಂಭದ ದಿನವನ್ನು ನಾವು ಏಪ್ರಿಲ್ 1980ರಿಂದಲೇ ನೋಡಬಹುದು. ಅದೇ ದಿನಗಳಲ್ಲಿ ಅವರು ಅಸಹಕಾರ ಚಳವಳಿಯನ್ನು ಆರಂಭಿಸಿದ್ದರು. ಮುಖ್ಯವಾಗಿ ಸರಕಾರಕ್ಕೆ ಕಂದಾಯ ಅಥವಾ ಕರ ನೀಡದಿರುವ ಅಸಹಕಾರ ಚಳವಳಿ ಜೂನ್ 1980ರಂದು 13,000ಕ್ಕೂ ಮಿಕ್ಕ ರೈತರು ನವಲುಗುಂದದಲ್ಲೂ ಇದೇ ರೀತಿಯ ಪ್ರತಿಜ್ಞೆಯನ್ನು ಕೈಗೊಂಡಿದ್ದರು. ಜುಲೈ 21 ರಂದು ನವಲಗುಂದ, ನರಗುಂದ ಹಾಗೂ ಸವದತ್ತಿಯಲ್ಲಿ ಬಂದ್ ಆಚರಿಸುವುದರೊಂದಿಗೆ ರೈತ ಹೋರಾಟ ಸರಿಯಾಗಿ ಆರಂಭವಾಯಿತು. ಹೋರಾಟ ಆರಂಭದ ಕೆಲವೇ ದಿನಗಳಲ್ಲಿ 20ಕ್ಕೂ ಹೆಚ್ಚು ರೈತರು ಪೊಲೀಸ್ ಗುಂಡೇಟಿಗೆ ಬಲಿಯಾದರು. ಅದರೊಂದಿಗೆ ಬೇರೆ ಬೇರೆ ಬೇಡಿಕೆಗಳು ಮುಂದೆ ಬಂದವು. ಕೃಷಿ ಬೆಳೆಗಳಿಗೆ ತೌಲನಿಕ ಬೆಲೆ, ನ್ಯಾಯ ಬೆಲೆ ಅಂಗಡಿಗಳ ಸ್ಥಾಪನೆ, ಬೆಳೆಗಳಿಗೆ ವಿಮೆ; ಸರಿಯಾದ ನೀರಿನ ಹಂಚಿಕೆ, ಕಾಲುವೆ, ಉಪ ಕಾಲುವೆಗಳ ರಿಪೇರಿ, ಸಕ್ಕರೆ ಸೆಣಬು ಕಾರ್ಖಾನೆಗಳ ರಾಷ್ಟ್ರೀಕರಣ, ಭೂ ಕಳೆದುಕೊಂಡವರಿಗೆ ಹಣ ಸಹಾಯ ಅಥವಾ ಪರಿಹಾರ ಸಾಲ ಮಾಫಿ, ಕೃಷಿ ಕಾರ್ಮಿಕರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ. ಇತ್ಯಾದಿ. ಈ ಹೋರಾಟ ಒಂದು ಸಮನ್ವಯ ಸಮಿತಿಗೆ ಅವಕಾಶ ಮಾಡಿದರೂ ಅದು ಹೆಚ್ಚು ಕಾಲ ಬಾಳಲಿಲ್ಲ. ಕಾರಣವೆಂದರೆ
1. ಹೋರಾಟ ಒಂದು ವಿಶಾಲವಾದ ತಾತ್ವಿಕ ಚೌಕಟ್ಟನ್ನು ನಿರ್ಮಿಸಲಿಲ್ಲ.
2. ನಿರ್ದಿಷ್ಟವಾದ ನಾಯಕರ ಕೊರತೆ ಇತ್ತು.
3. ಇದರ ವ್ಯಾಪ್ತಿಯೂ ವಿಶಾಲವಾಗಿರಲಿಲ್ಲ.
4. ವೈರುಧ್ಯಗಳನ್ನು ವಿಶ್ಲೇಷಿಸುವ ಅಥವಾ ಅದಕ್ಕಾಗಿ ರೈತರನ್ನು ತಯಾರು ಮಾಡುವ ಯಾವುದೇ ತಂತ್ರಜ್ಞಾನ ಅವರಿಗಿರಲಿಲ್ಲ.
ಕರ್ನಾಟಕ ರೈತ ಹೋರಾಟಗಳಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸಿದ್ದು ಕರ್ನಾಟಕ ರಾಜ್ಯ ರೈತ ಸಂಘ. ಶಿವಮೊಗ್ಗ ಜಿಲ್ಲೆಯ ರೈತ ಹಾಗೂ ಕಬ್ಬು ಬೆಳೆಗಾರರ ಸಂಘಟನೆಯಲ್ಲಿ ಆರಂಭಗೊಂಡ ಈ ರೈತ ಸಂಘಟನೆ ಮುಂದೆ ವಿವಿಧ ಜಿಲ್ಲೆ ರೈತರ ಬೇಡಿಕೆಗಳನ್ನು ಕ್ರೋಡೀಕರಿಸಿ ಸನ್ನದಿನ ರೂಪದಲ್ಲಿ ಮುಂದಿಟ್ಟಾಗ ಅದು ‘ರಾಜ್ಯ ರೈತ ಸಂಘ’ವಾಗಿ ಪರಿವರ್ತಿತವಾಯಿತು. ಸನ್ನದಿನಲ್ಲಿದ್ದ ಬೇಡಿಕೆಗಳು ಈ ರೀತಿ ಇದ್ದವು.
1. ರೈತ ಚಳವಳಿಯಲ್ಲಿ ಭಾಗವಹಿಸಿದ ಎಲ್ಲಾ ರೈತರನ್ನು, ರೈತ ಮುಖಂಡರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು.
2. ರೈತರ ಹತೋಟಿಗೆ ಮೀರಿದ ಸರ್ಕಾರ ವಿರೂಪಗೊಂಡ ಸಾಲನೀತಿ, ಬೆಲೆ ನೀತಿ ಮತ್ತು ಲೇವಿನೀತಿಗಳಿಂದ ರೈತರ ಮೇಲೆ ಹೇರಲ್ಪಟ್ಟ ಎಲ್ಲಾ ಕೃತಕ ಸಾಲಗಳನ್ನೂ, ಎಂದರೆ ಕೃಷಿಗೆ ಕೊಟ್ಟ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್ ಸಾಲಗಳನ್ನು ಪೂರ್ಣವಾಗಿ ಮನ್ನ ಮಾಡಬೇಕು.
3. ಹಣಕಾಸಿನ ಸಂಸ್ಥೆಗಳಿಂದ ಪಡೆದ ರೈತರ ಸಾಲ ಮರುಪಾವತಿಯಾಗದೆ ಹರಾಜಿಗೊಳಪಟ್ಟು ಹಸ್ತಾಂತರಗೊಂಡಿರುವ ಸ್ಥಿರ ಆಸ್ತಿಗಳನ್ನು ವಾಪಸ್ಸು ಕೊಡಬೇಕು.
4. ರೈತರಿಗೆ ಕೊಡುವ ಸಾಲದ ಪ್ರಮಾಣವನ್ನು ಹೆಚ್ಚುತ್ತ ಹೋಗುವ ವ್ಯವಸಾಯದ ವೆಚ್ಚದ ಪ್ರಮಾಣಕ್ಕೆ ತಕ್ಕಂತೆ ಹೆಚ್ಚಿಸಬೇಕು.
5. ಭೂಮಿಯ ಮೇಲಿನ ಕಂದಾಯ, ಅಭಿವೃದ್ದಿ ತೆರಿಗೆ, ನೀರಿನ ತೆರಿಗೆ ಹಾಗೂ ಕೃಷಿ ತೆರಿಗೆಯನ್ನು ರದ್ದು ಮಾಡಬೇಕು.
6. ರೈತರ ಪ್ರತಿಯೊಂದು ಬೆಳೆಗೂ ಕೃಷಿ ಉತ್ಪಾದನಾ ವೆಚ್ಚವನ್ನು ಅನುಸರಿಸಿ ವೈಜ್ಞಾನಿಕವಾಗಿ ಕೈಗಾರಿಕೋದ್ಯಮಿಗಳಲ್ಲಿ ನಿಗದಿ ಮಾಡುವಂತೆ ಮಾನವ ತಾಸುಗಳ ಆಧಾರದ ಮೇಲೆ ಬೆಲೆ ನಿಗದಿಯಾಗಬೇಕು. ನಿಗದಿ ಪಡಿಸಿದ ಬೆಲೆಗೆ ಸರ್ಕಾರವೇ ಕಡ್ಡಾಯವಾಗಿ ಖರೀದಿಸಬೇಕು.
7. ಕೈಗಾರಿಕಾ ವಸ್ತುಗಳ ಮಾರಾಟದ ಬೆಲೆ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಮೀರಕೂಡದು.
8. ಕೈಗಾರಿಕ ಕಾರ್ಮಿಕರಿಗೆ ಕೊಡುತ್ತಿರುವ ಎಲ್ಲಾ ಸೌಲಭ್ಯಗಳು ದೊರಕುವಂತೆ ಕೃಷಿಯನ್ನು ಉದ್ಯೋಗವೆಂದು ಸರ್ಕಾರ ಘೋಷಿಸಬೇಕು. ಪ್ರತಿಯೊಂದು ಕೃಷಿ ಕುಟುಂಬವನ್ನು ಒಂದು ಔದ್ಯೋಗಿಕ ಘಟಕವೆಂದು ಪರಿಗಣಿಸಬೇಕು.
9. ಪ್ರತಿಯೊಬ್ಬ ರೈತನಿಗೂ ಹಾಗೂ ಕೃಷಿ ಕಾರ್ಮಿಕನಿಗೂ 55 ವರ್ಷದ ನಂತರ ನಿವೃತ್ತಿ ವೇತನ ದೊರೆಯಬೇಕು.
10. ರೈತ ಕಾರ್ಮಿಕರಿಗೂ, ಕೈಗಾರಿಕಾ ಕಾರ್ಮಿಕರಿಗೂ ದೊರೆಯುತ್ತಿರುವ ಕೂಲಿ ಹಾಗೂ ಇನ್ನಿತರ ಸೌಲಭ್ಯಗಳು ದೊರೆಯಬೇಕು. ನ್ಯಾಯಬದ್ಧವಾದ ಬೆಲೆ ನೀತಿ ರೂಪಿಸುವ ಜೊತೆಗೆ ನ್ಯಾಯಬದ್ಧವೇತನ ನೀತಿಯನ್ನು ಕೃಷಿ ಕಾರ್ಮಿಕರಿಗೂ ರೂಪಿಸಬೇಕು.
11. ಭೂ ಸುಧಾರಣೆಯಿಂದ ಭೂಮಿ ಕಳೆದುಕೊಂಡ ಭೂ ಮಾಲೀಕರಿಗೆ ಸರ್ಕಾರವೆ ನೇರವಾಗಿ ಒಂದೇ ಕಂತಿನಲ್ಲಿ ಪರಿಹಾರ ಕೊಡತಕ್ಕದ್ದು.
12. ರೈತರ ಬೆಲೆ ವಿಮೆ ಯೋಜನೆಯನ್ನು ಜಾರಿಗೆಗೊಳಿಸಬೇಕು.
13. ಕೃಷಿ ಯೋಗ್ಯ ಭೂಮಿಯನ್ನು ಭೂಹೀನ ಕೃಷಿ ಕಾರ್ಮಿಕರಿಗೆ ನೀಡಬೇಕು. ಬೇಸಾಯ ಕೂಲಿಗಾರರಿಗೆ ಉಚಿತ ಮನೆ, ಉಚ್ಛ ಶಿಕ್ಷಣ, ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ಹಾಗೂ ಅವರಿಗಾಗಿ ಹಳ್ಳಿಗಳಲ್ಲಿ ಸಣ್ಣ ಕೈಗಾರಿಕೆಗಳನ್ನು ಮತ್ತು ಉದ್ಯಮವನ್ನು ಹೆಚ್ಚು ಸಂಖ್ಯೆಯಲ್ಲಿ ಸ್ಥಾಪಿಸಬೇಕು.
14. ರಾಜ್ಯದ ಯೋಜನಾ ವೆಚ್ಚದಲ್ಲಿ ಶೇಕಡಾ 80 ಭಾಗ ಹಣವನ್ನು ದೇಶದ 80 ಜನರಾದ ರೈತರಿಗೆ ಮತ್ತು ಗ್ರಾಮಗಳಿಗೆ ಮೀಸಲಾಗಿಡಿಸಬೇಕು.
15. ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಹುದ್ದೆಗಳಲ್ಲಿ ರೈತರ ಮಕ್ಕಳಿಗೆ ಶೇಕಡಾ 50 ಸೀಟುಗಳನ್ನು ಮೀಸಲಾಗಿರಿಸಬೇಕು.
16. ಕಟ್ಟುಕೊಳ್ಳುವ ಅಥವಾ ಪರ್ಚೇಸ್ ಟ್ಯಾಕ್ಸನ್ನು ರದ್ದುಗೊಳಿಸಬೇಕು.
17. ವಿದ್ಯುತ್ ದರದಲ್ಲಿ ಕಡಿತವಾಗಬೇಕು.
18. ಟ್ರಾಕ್ಟರ್ ಟಿಲ್ಲರ್ ಮೇಲಿರುವ ಎಲ್ಲಾ ನಿರ್ಬಂಧಗಳನ್ನು, ತೆರಿಗೆಗಳನ್ನು ಸಂಪೂರ್ಣ ವಾಗಿ ರದ್ದು ಮಾಡಬೇಕು.
19. ಕಬ್ಬಿನ ಮೇಲಿರುವ ಸೆಸ್ ಹಣವನ್ನು ರಸ್ತೆ ದುರಸ್ತಿಗಾಗಿ, ಸಂಚಾರಕ್ಕಾಗಿ ಉಪ ಯೋಗಿಸಬೇಕು.
ಈ ಬೇಡಿಕೆಗಳು ಶಾಶ್ವತವಾಗಿರಲಿಲ್ಲ. ಆಗಾಗ ಬೇಡಿಕೆಗಳಲ್ಲಿ ಬದಲಾವಣೆಯಾಗಿರು ವುದನ್ನು ನಾವು ಕಾಣುತ್ತೇವೆ. ರೈತ ಸಂಘದ ಬೇಡಿಕೆ ಹಾಗೂ ಹೋರಾಟದ ಸ್ವರೂಪವನ್ನು ಕೇಂದ್ರೀಕರಿಸಿ ಹೋರಾಟವನ್ನು ನಾವು ಐದು ವಿಧವನ್ನಾಗಿ ಮಾಡಬಹುದು.
1. ಸಾಲ ಮರುಪಾವತಿ ಮತ್ತು ಸ್ಥಿರಾಸ್ತಿ, ಚರಾಸ್ತಿ ಪಟಾಕಿನ ವಿರುದ್ಧ ಹೋರಾಟ.
2. ಗ್ರಾಮೀಣ ಸಂಪನ್ಮೂಲಗಳ ಶೋಷಣೆ ವಿರುದ್ಧ ಹೋರಾಟ.
3. ತೌಲನಿಕ ಬೆಲೆ/ವೈಜ್ಞಾನಿಕ ಬೆಲೆಗಳಿಗಾಗಿ ಹೋರಾಟ.
4. ರಾಜಕೀಯ ಅಧಿಕಾರಕ್ಕಾಗಿ ಹೋರಾಟ.
5. ಉದಾರೀಕರಣ ವಿರುದ್ಧ ಹೋರಾಟ.
ಮೊದಲನೇ ಹೋರಾಟ ಸರಕಾರ ಸಾಲ ಮರುಪಾವತಿ ಮಾಡದ ದೇವರ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಮುಟ್ಟುಗೋಲು ಮಾಡಲು ಆರಂಭಿಸುವಾಗ ಪ್ರಾರಂಭವಾಗುವ ಸಾಲ ಮರುಪಾವತಿಯನ್ನು ನಿರಾಕರಿಸುವ ತಂತ್ರ, ಅಧಿಕಾರಿಗಳನ್ನು ಮುತ್ತಿಗೆ ಹಾಕುವ ತಂತ್ರ, ಮುಟ್ಟುಗೋಲು ಹಾಕಿದ ಆಸ್ತಿಯನ್ನು ಬಲಾತ್ಕಾರವಾಗಿ ವಾಪಸ್ ಪಡೆಯುವ ಹಾಗೂ ಅಧಿಕಾರಿಗಳೇ ಸಾಲವನ್ನು ರೈತರ ಪರವಾಗಿ ವಾಪಸ್ ಪಡೆಯುವ ಹಾಗೂ ಅಧಿಕಾರಿಗಳೇ ಸಾಲವನ್ನು ರೈತರ ಪರವಾಗಿ ನೀಡುವಂತೆ ಒತ್ತಾಯಿಸುವ ಅಂಶಗಳು ಇದರಲ್ಲಿ ಸೇರಿದ್ದವು. ಈ ಬೇಡಿಕೆಗಳು ಮತ್ತದರ ಪರವಾಗಿ ಹೋರಾಟಗಳನ್ನು ಜೈಲ್ ಭರೋ(1942), ಪಾದಯಾತ್ರೆ (1982, 1985), ತೆರಿಗೆ ನಿರಾಕರಣ ಚಳವಳಿ ಹಾಗೂ ರೈಲ್ ರಸ್ತೆ ರೋಕೋ ಚಳವಳಿಗಳಲ್ಲಿ ಕಾಣಬಹುದು.
ಎರಡನೇ ಹೋರಾಟದಲ್ಲಿ ಲೂಟಿಯಾಗುತ್ತಿರುವ ಗ್ರಾಮೀಣ ಸಂತ ಉಳಿಸಿ ‘ಗ್ರಾಮೀಣಕರಣ’ಗೊಳಿಸುವುದು. ಇದು ರೈತ ಸಂಘದ ಪ್ರಕಾರ ಗ್ರಾಮ ಸಂಘಕ್ಕೆ ದಾರಿ ಮಾಡಿಕೊಡುತ್ತದೆ. ಅದಕ್ಕಾಗಿ ರೈತ ಸಂಘ ನೈಸರ್ಗಿಕ ಲೂಟಿ (1983), ಮದ್ಯಪಾನ ನಿಷೇಧ (1986, 1991, 1994-95); ಸಾಮಾಜಿಕ ಅರಣ್ಯೀಕರಣ ವಿರುದ್ಧ (1983) ಹೋರಾಟವನ್ನು ನಡೆಸಿತ್ತು.
ರೈತ ಸಂಘದ ಮುಖ್ಯ ಬೇಡಿಕೆ ಕೃಷಿ ಬೆಲೆಗಳಿಗೆ ವೈಜ್ಞಾನಿಕ ಅಥವಾ ತೌಲನಿಕ ಬೆಲೆಯನ್ನು ನಿರ್ಧರಿಸುವುದು. ಇದರಲ್ಲಿ ಇನ್ನೆರಡು ವಿಷಯಗಳು ಅಡಕವಾಗಿದ್ದವು. ಭತ್ತ ಲೆವಿ, ಹಾಗೂ ಲೆವಿ ಬೆಲೆ ಅಂತಿಮ ವಿಶ್ಲೇಷಣೆಗಳ ಹೋರಾಟದ ಮುಖ್ಯ ಉದ್ದೇಶ ಭತ್ತಕ್ಕೆ ಹಾಗೂ ಕಬ್ಬಿಗೆ ತೌಲನಿಕ/ವೈಜ್ಞಾನಿಕ ಬೆಲೆಯಲ್ಲಿ ನಿರ್ಧರಿಸುವುದು ಅಥವಾ ಪಡೆಯುವುದಾಗಿತ್ತು. ಆದ ಕಾರಣ ರೈತ ಹೋರಾಟವನ್ನು ‘ಶ್ರೀಮಂತ ರೈತ ಹೋರಾಟ’ ‘ಕ್ಷುಲಕ ರೈತ ಹೋರಾಟ’ ಅಥವಾ ‘ಎತ್ತು ಬಂಡವಾಳಶಾಹಿ ರೈತರ ಹೋರಾಟ’ವೆಂದು ಕರೆಯುತ್ತಾರೆ. ಕಬ್ಬು, ಭತ್ತ ಬೆಲೆಗೆ ಬೇರೆ ಕೃಷಿ ಉತ್ಪಾದನೆಗಳ ಮೇಲೆ ಹೋರಾಟ ಒತ್ತು ನೀಡಲಿಲ್ಲವೆಂದಲ್ಲ. ನೀಡಿತ್ತು ಆದರೆ ಅದೇ ಕೇಂದ್ರ ಬಿಂದಾಗಿರಲಿಲ್ಲ. ಉದಾಹರಣೆಗೆ ತಂಬಾಕಿನ ಪರವಾಗಿ (1983) ಕಾಫಿ ಬೆಳೆಗಳ ಪರವಾಗಿ (1989), ತೆಂಗಿನ ಕಾಯಿ, ಅಡಿಕೆ, ಜೋಳ, ಹತ್ತಿ ಪರವಾಗಿ ರೈತ ಸಂಘ ಹೋರಾಟ ನಡೆಸಿದ್ದನ್ನು ಕಾಣುತ್ತೇವೆ. ಈ ರೀತಿಯ ಹೋರಾಟ ಮೂಲತಃ ಕೆಳಸ್ತರದ ರೈತ ಸಂಘಟನೆಗಳಿಂದ ಬಂದವು. ಆದರೆ ಕಬ್ಬು ಭತ್ತ ಬೆಲೆಗಾಗಿ ರೈತ ಸಂಘ ಸಾಕಷ್ಟು ಹೋರಾಟಗಳನ್ನು ನಡೆಸಿತ್ತು. ರಸ್ತೆ ತಡೆ (1989) ವಿಧಾನಸೌಧದಲ್ಲಿ ಧರಣಿ (1982) ರ್ಯಾಲಿ (1982, 1992, 1993) ಕಬ್ಬು ಕಾರ್ಖಾನೆಯ ದಿಗ್ಬಂಧನ(1984, 1986, 1989) ಬಂದ್(1982) ಇತ್ಯಾದಿ.
ರಾಜಕೀಯದಲ್ಲಿ ಅದರ ಆಸಕ್ತಿ ಬೆಳೆದದ್ದು 1984ರ ನಂತರ. ಇದರ ಮುಖ್ಯ ಉದ್ದೇಶ ರಾಜಕೀಯದ ಅಧಿಕಾರವನ್ನು ಪಡೆದು ರೈತ ಸರಕಾರವನ್ನು ರಚಿಸುವುದು. ಇದಕ್ಕೆ ಕಾರಣವಿದೆ: ‘‘ಸ್ವಾತಂತ್ರ್ಯೋತ್ತರ ಕಾಲಾವಧಿಯಲ್ಲಿ ಕೈಗಾರಿಕಾ ಬಂಡವಾಳಶಾಹಿ ಹಿಡಿತದಿಂದಾಗಿ ರೈತರು ದ್ವಿತೀಯ ದರ್ಜೆಯ ಪ್ರಜೆಗಳಾಗಿದ್ದಾರಲ್ಲದೇ, ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ. ಆದಕಾರಣ 1984ರ ಪಾರ್ಲಿಮೆಂಟಿನ ಚುನಾವಣೆಯಲ್ಲಿ ಮತದಾರರ ವೇದಿಕೆಯನ್ನು ಸ್ಥಾಪಿಸಿ ಪಕ್ಷಾತೀತವಾಗಿ ಚುನಾವಣೆಯಲ್ಲಿ ಭಾಗವಹಿಸಿತ್ತು. 1987ರಲ್ಲಿ ಕನ್ನಡ ಪಕ್ಷವನ್ನು ರಚಿಸಿತ್ತು. 1989ರಲ್ಲಿ ಅಸೆಂಬ್ಲಿ ಹಾಗೂ ಪಾರ್ಲಿಮೆಂಟಿನ ಚುನಾವಣೆಯಲ್ಲಿ ರೈತ ಸಂಘದ ಹೆಸರಿನಲ್ಲೂ, 1994 ಪಂಚಾಯತಿ ಹಾಗೂ ಅಸೆಂಬ್ಲಿ ಚುನಾವಣೆಯಲ್ಲೂ ಸ್ಪರ್ಧಿಸಿತ್ತು. 1989 ಹಾಗೂ 1994ರ ಅಸೆಂಬ್ಲಿ ಚುನಾವಣೆಯಲ್ಲಿ ತಲಾ 2 ಹಾಗೂ ಒಂದು ಸೀಟನ್ನು ಪಡೆದ ಕಾರಣ ರಾಜಕೀಯದಲ್ಲಿ ಮಹತ್ತರ ಪಾತ್ರವನ್ನು ವಹಿಸಲು ಅಸಾಧ್ಯವಾಯಿತು. ರಾಜಕೀಯದಲ್ಲಿ ದುಮುಕಲಿಕ್ಕಾಗಿ ಕೆಲವು ಚಳವಳಿಗಳನ್ನು ರ್ಯಾಲಿಯನ್ನು ಆಗಾಗ ನಡೆಸಿತು. ಉದಾಹರಣೆಗೆ 1988ರಲ್ಲಿ ರ್ಯಾಲಿ, ಹಾಗೂ ಪಾದಯಾತ್ರೆ (1987) ಜೈಲ್ ಭರೊ ಚಳವಳಿ (1987) ರೈಲ್ ಮತ್ತು ರಾಸ್ತಾ ರೋಕೋ ಇತ್ಯಾದಿಗಳು.
ಉದಾರೀಕರಣದ ವಿರುದ್ಧ ಹೋರಾಟ ರೈತ ಸಂಘಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯನ್ನು ತಂದಿತು. ಉದಾರೀಕರಣ ರೈತ ಸಂಘದ ಪ್ರಕಾರ ಸೇವಾ ಕ್ಷೇತ್ರಗಳಾದ ವಿದ್ಯುಚ್ಛಕ್ತಿ, ಗೃಹ ನಿರ್ಮಾಣ, ಹೆದ್ದಾರಿ ನಿರ್ಮಾಣ, ಬ್ಯಾಂಕ್, ವಿಮೆ, ಆರೋಗ್ಯ, ಕಾನೂನು, ಸೇವೆ, ಪ್ರವಾಸೋದ್ಯಮ, ಸಮೂಹ ಮಾಧ್ಯಮ ಇತ್ಯಾದಿ ಪರಂಗಿ ಕಂಪನಿಗಳ ಖಾಸಗಿ ಒಡೆತನಕ್ಕೊಳಪಡಿಸುತ್ತದೆ. ದೇಶದ ಆಹಾರ ಭದ್ರತೆಯನ್ನು ನಾಶಪಡಿಸುವುದರೊಂದಿಗೆ ನಿರುದ್ಯೋಗವನ್ನು ಸೃಷ್ಟಿಸುತ್ತದೆ, ರೈತರನ್ನು ಒಕ್ಕಲೆಬ್ಬಿಸುತ್ತದೆ, ಜಾನುವಾರು ಸಂಪತ್ತನ್ನು ನಾಶಪಡಿಸುತ್ತದೆ, ಅಭದ್ರ ದಿನಗೂಲಿಗಳನ್ನು ಸೃಷ್ಟಿಸುವುದರೊಂದಿಗೆ ಸಂಸ್ಕೃತಿ ಮೇಲೆ ದಾಳಿ ಇಟ್ಟು ಸ್ಥಳೀಯ ಜನಪದ ಸಂಸ್ಕೃತಿ ಮೇಲೆ ತಾಂಡವವಾಡುತ್ತದೆ; ಹಸಿವು, ದಾರಿದ್ರ್ಯ ಇತ್ಯಾದಿಗಳನ್ನು ಹೆಚ್ಚಿಸುವುದರೊಂದಿಗೆ ಭಾರತವನ್ನು ನವ ವಸಾಹತುಶಾಹಿಯನ್ನಾಗಿ ಮಾಡುತ್ತದೆ. ಈ ಉದಾರೀಕರಣದ ವಿರುದ್ಧವಾಗಿ ರೈತ ರಾಸ್ತಾರೋಕೊ (1991); ರ್ಯಾಲಿ (1992), ತೃತೀಯ ಜಗತ್ತಿನ ರೈತರ ಸಮಾವೇಶ (1993) ವಿದೇಶೀಕರಣ ವಿರೋಧಿ ಸಮಾವೇಶ(1995)ವನ್ನು ನಡೆಸಿತ್ತು. ಅಲ್ಲದೆ ವಿದೇಶಿ ಕಂಪೆನಿಗಳಾದ ಕಾರ್ಗಿಲ್ (1992/93) ಮತ್ತು ಯೂನಿಯನ್ ಕಾರ್ಬೈಡ್ ಮೇಲೆ ನೇರ ಆಕ್ರಮಣವನ್ನು ಮಾಡಿತ್ತು. 1996ರಲ್ಲಿ ಕೊಜೆಂಟ್ರಿಕ್ಸ್ ಹಾಗೂ ವಿಶ್ವ ಸೌಂದರ್ಯ ಸ್ಪರ್ಧೆ ವಿರುದ್ಧ ಚಳವಳಿಯನ್ನು ಮಾಡಿತ್ತು. ಇವೆಲ್ಲ ಹೋರಾಟಗಳು ಕರ್ನಾಟಕ ರೈತರಿಗೆ ಅಖಿಲ ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ನೀಡಲು ಸಹಾಯ ಮಾಡಿದೆ. ಆದರೂ ರೈತ ಇತಿಹಾಸ ಒಂದು ನಿಷ್ಕ್ರಿಯ, ಸಂಪ್ರದಾಯ ಸಮಾಜವಲ್ಲವೆಂದು ಭಾಸವಾಗುತ್ತದೆ. ಇದು ಗ್ರಾಮೀಣ ಬದುಕಿಗೂ ಒಂದು ವಿಶಿಷ್ಟತೆಯನ್ನು ತಂದುಕೊಟ್ಟಿದೆ.
ಪರಾಮರ್ಶನ ಗ್ರಂಥಗಳು
1. ನಾಡಕರ್ಣಿ ಎಂ.ವಿ., 1987. ಫಾರ್ಮರ್ಸ್ ಮೂವ್ಮೆಂಟ್ಸ್ ಇನ್ ಇಂಡಿಯಾ, ದೆಹಲಿ.
2. ಮುಝೂಫರ್ ಅಸ್ಸಾದಿ, 1997. ಪೆಸೆಂಟ್ ಮೂವ್ಮೆಂಟ್ಸ್ ಇನ್ ಕರ್ನಾಟಕ, ದೆಹಲಿ.
3. ಹಳಕಟ್ಟಿ ವಿ.ಎನ್., ‘‘ಕಿಸಾನ್ ಆಫ್ ರೈಸಿಂಗ್ ಇನ್ ಕರ್ನಾಟಕ-ಎ ಬಿಗಿನಿಂಗ್ ಆಫ್ ಪೆಸೆಂಟ್ ಮೂವ್ಮೆಂಟ್’’, ಸ್ಟೇಟ್ ಆ್ಯಂಡ್ ಸೊಸೈಟಿ, ವಾಲ್ಯುಂ 2, ನಂ.3, ಜುಲೈ-ಸೆಪ್ಟೆಂಬರ್, 1980.
blogger
delicious
digg
facebook
reddit
stumble
twitter
print
email
ಪುಸ್ತಕ: ಸಮಕಾಲೀನ ಕರ್ನಾಟಕ ಚರಿತ್ರೆಯ ವಿವಿಧ ಆಯಾಮಗಳು (ಸಂಪಾದಿತ)
ಲೇಖಕರು: ಮುಝಾಫರ್ ಅಸ್ಸಾದಿ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ

ತಾವು ವ್ಯಕ್ತಪಡಿಸುತಿರವ ಸಾಮಾಜಿಕ ಕಳಕಳಿಗೆ ಇಡೀ ಸಮಾಜ ತಮಗೆ ಸದಾ ಚಿರ ಋಣಿಯಾಗಿದೆ ಸರ್
ಪ್ರತ್ಯುತ್ತರಅಳಿಸಿ