ಕಾವ್ಯಮೀಮಾಂಸೆ (ಕಳೆದ ೨೫ ವರ್ಷಗಳಲ್ಲಿ : ಸು. ೧೯೪೦-೧೯೬೫)
-೫-
ಸಂಸ್ಕೃತದಿಂದ, ಇಂಗ್ಲಿಷಿನಿಂದ, ಗ್ರೀಕ್‌ನಿಂದ, ಬಂಗಾಳಿಯಿಂದ, ಮರಾಠಿಯಿಂದ, ಹಿಂದಿಯಿಂದ ಅನುವಾದಗೊಂಡಿರುವ ಕಾವ್ಯಮೀಮಾಂಸೆಗೆ ಸಂಬಂಧಪಟ್ಟ ಲೇಖನಗಳೂ ಪುಸ್ತಕಗಳೂ ತಕ್ಕಮಟ್ಟಿನ ಪ್ರಮಾಣದಲ್ಲಿ ಬಂದಿರುವುದು ವಿಶೇಷದ ಸಂಗತಿ. ಡಾ. ಕೆ. ಕೃಷ್ಣಮೂರ್ತಿಗಳ, ಕೆ.ವಿ. ಸುಬಣ್ಣನವರ ಅನುವಾದದ ವಿಷಯವನ್ನೂ; ಕೌಲಗಿ ಶೇಷಾಚಾರ್ಯರು ಮರಾಠಿಯಿಂದ “ಸಂಸ್ಕೃತ ಸಾಹಿತ್ಯಾಚ ಇತಿಹಾಸ” ಎಂಬ ಪುಸ್ತಕವನ್ನು “ಅಲಂಕಾರಶಾಸ್ತ್ರ” ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿರುವ ವಿಷಯವನ್ನೂ ಆಗಲೇ ಪ್ರಸ್ತಾಪಿಸಲಾಗಿದೆ. ಹಡ್ಸನ್ನನ ‘An Introduction to study of the literature’ಅನ್ನು, ಅಬರ್‌ಕ್ರೊಂಬಿಯ ‘Principles of Literary Criticism’ಅನ್ನೂ, ಸಿ.ಪಿ.ಕೆ.ಯವರು “ಸಾಹಿತ್ಯ ಪ್ರವೇಶ” ಮತ್ತು “ಸಾಹಿತ್ಯ ವಿಮರ್ಶೆಯ ತತ್ವಗಳು” ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಸಿ. ಮಹಾದೇವಪ್ಪನವರು ಷೆಲ್ಲಿಯ ‘Defence of Poetry’ಯನ್ನು ‘ಷೆಲ್ಲಿಯ ಕಾವ್ಯಸಮರ್ಥನೆ’ ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ ಈ ಎರಡೂ ಬಹು ಉಪಯುಕ್ತವಾದ ಅನುವಾದ ಕೃತಿಗಳಾಗಿವೆ. ಸಿ.ಪಿ.ಕೆ. ಯವರ ಎರಡೂ ಅನುವಾದಗಳೂ ಸರಳವಾಗಿ, ಸುಲಲಿತವಾಗಿ, ನಿರ್ದುಷ್ಟವಾಗಿವೆ. ಹಡ್ಸನ್ ಬರೆದ ಪುಸ್ತಕ ಇಂಗ್ಲಿಷಿನಲ್ಲಿ, ಅದು ಮೊದಲು ಪ್ರಕಟವಾದ ಕಾಲ ೧೯೧೦ ಎಂದ ಮೇಲೆ, ಈ ಐವತ್ತು ವರ್ಷಗಳ ನಂತರ ಬದಲಾದ ಕಾವ್ಯಪರಂಪರೆಯ ವಿಮರ್ಶನ ಪ್ರಜ್ಞೆಗೆ ಅಗತ್ಯವಾದ ವಿಷಯಗಳನ್ನು ಈ ಪುಸ್ತಕವಾಗಲಿ, ಅದರ ಅನುವಾದವಾಗಲಿ ಒದಗಿಸಲಾರದೆಂಬುದನ್ನು ಒಪ್ಪಿಕೊಂಡು, ಸಾಹಿತ್ಯದಲ್ಲಿ ಪ್ರವೇಶಿಸುವ ವಿದ್ಯಾರ್ಥಿಗೆ ಪ್ರಾಥಮಿಕ ಮೂಲತತ್ವಗಳ ತಳಹದಿಯನ್ನು ಇದು ಸಮರ್ಥವಾಗಿ ಕೊಡುವಷ್ಟು ಪ್ರಯೋಜನಕಾರಿಯಾಗಿದೆಯೆಂದು ಹೇಳಬಹುದು. ಎರಡನೆಯದಾಗಿ ಹಡ್ಸನ್ ಬರೆದ ಈ ಪುಸ್ತಕ ರಚಿತವಾಗಿರುವುದು ಇಂಗ್ಲಿಷ್ ಸಾಹಿತ್ಯ ಚರಿತ್ರೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಮತ್ತು ಆ ಕಾವ್ಯಪರಂಪರೆಯಿಂದ ಎತ್ತಿಕೊಂಡ ದೃಷ್ಟಾಂತಗಳಿಂದ ಪುಷ್ಟವಾಗಿ. ಸಿ.ಪಿ.ಕೆ. ಅವರು ಆ ಕೃತಿಯಲ್ಲಿರುವ ಸಾಹಿತ್ಯತತ್ವಗಳನ್ನು ಮಾತ್ರ ಅನುವಾದರೂಪದಲ್ಲಿ ಕೊಟ್ಟಿದ್ದಾರೆ, ಅಥವಾ ಸಂದರ್ಭೋಚಿತವಾಗಿ ಬರುವ ಇಂಗ್ಲಿಷ್ ಕಾವ್ಯಗಳ ನಿದರ್ಶನಗಳನ್ನು ಯಥಾವತ್ತಾಗಿ ಕೊಡದೆ, ಆ ಸಂದರ್ಭಗಳಲ್ಲಿ ಭಾರತೀಯ ಕವಿ ಕಾವ್ಯಗಳಿಂದ ನಿದರ್ಶನಗಳನ್ನು ಕೊಟ್ಟಿದ್ದರೆ, ಅಥವಾ ಕಡೆಯ ಪಕ್ಷ ಅಡಿ ಟಿಪ್ಪಣಿಗಳಲ್ಲಾದರೂ ನಮ್ಮ ಸಾಹಿತ್ಯ ಪರಂಪರೆಯ ಘಟ್ಟಗಳನ್ನೋ ಸಂಗತಿಗಳನ್ನೊ, ನೆನಕೆಯನ್ನೋ, ಸಂವಾದಿಯಾಗಿ ಸೂಚಿಸಿದ್ದ್ದರೆ ಈ ಪುಸ್ತಕದ ಅರ್ಥಮೌಲ್ಯ ಇನ್ನೂ ಹೆಚ್ಚಾಗಬಹುದಾಗಿತ್ತು. ಯಾವ ಪುಸ್ತಕವನ್ನಾದರೂ ಅನುವಾದ ಮಾಡುವುದು, ಇಂಗ್ಲಿಷ್‌ನಿಂದ ನೇರವಾಗಿ ಆ ಪ್ರಯೋಜನವನ್ನು ಪಡೆಯಲಾರದವರಿಗಾಗಿ; ಆದ್ದರಿಂದ ಅನುವಾದಗಳಲ್ಲಿ ಸಾಮಾನ್ಯ ಓದುಗನಿಗೆ ಅದರ ತತ್ವಾಂಶಗಳು ಅರ್ಥವಾಗುವಂತಿದ್ದು, ಅದರ ಸಮರ್ಥನೆಗೆಂದು ಬಳಸಿದ ನಿದರ್ಶನಗಳು ಅರ್ಥವಾಗದಂತಿದ್ದರೆ ಅಥವಾ ಅಪರಿಚಿತವಾದರೆ, ಅನುವಾದದಂತಹ ಸಾಹಸ ಕಾರ್ಯದ ಪ್ರಯೋಜನದಲ್ಲಿ ಎಷ್ಟು ಕೊರತೆಯಾಗುವುದೆಂಬುವುದನ್ನು ಹೇಳಬೇಕಾಗಿಲ್ಲ. ಹಡ್ಸನ್ನನ ಈ ಕೃತಿಗಿಂತ ಅಬರ್ ಕೋಂಬಿಯ ‘ಸಾಹಿತ್ಯ ವಿಮರ್ಶೆಯ ಮೂಲತತ್ವಗಳು’ ಹೆಚ್ಚು ಪ್ರೌಢವಾದ, ಉಪಯುಕ್ತವಾದ ಗ್ರಂಥ. ಈ ಎರಡು ಅನುವಾದ ಕೃತಿಗಳಿಂದ ಕಾವ್ಯಮೀಮಾಂಸೆಯ ಸಾಹಿತ್ಯಕ್ಕೆ ವಿಶೇಷ ಲಾಭವಾಗಿದೆ. ಸಿ.ಪಿ.ಕೆ. ಯವರು ಸಮರ್ಥರಾದ ಅನುವಾದಕರೆಂಬುದನ್ನು ಈ ಎರಡೂ ಪುಸ್ತಕದ ಭಾಷೆ-ಶೈಲಿಗಳು ಪ್ರಕಟಪಡಿಸುತ್ತವೆ.
ಸಿ. ಮಹಾದೇವಪ್ಪನವರ ‘ಷೆಲ್ಲಿಯ ಕಾವ್ಯಸಮರ್ಥನೆ’ Defence of poetry ಯ ಅನುವಾದ. ಷೆಲ್ಲಿ ಕೇವಲ ವಿಮರ್ಶಕನಲ್ಲ; ಅತ್ಯಂತ ಶಕ್ತನಾದ ಕವಿ. ಆದ್ದರಿಂದ ಆತನ ಕಾವ್ಯಮಯವಾದ ಈ ಬರವಣಿಗೆಯನ್ನು ಅನುವಾದಿಸುವುದು ಸುಲಭವಲ್ಲ. ಮಹಾದೇವಪ್ಪನವರ ಅನುವಾದದ ಮೊದಲು ವಾಕ್ಯವೇ ಹೀಗಿದೆ: “ಚಿದ್ ವ್ಯಾಪಾರಗಳನ್ನು ಬುದ್ಧಿ, ಪ್ರತಿಭೆಗಳೆಂದು ಎರಡು ಬಗೆಯಾಗಿ ಪರಿಣಮಿಸುವ ಒಂದು ವಿಧಾನದ ರೀತ್ಯಾ ಬುದ್ಧಿ ಒಂದು ಭಾವಕ್ಕೂ ಮತ್ತೊಂದು ಭಾವಕ್ಕೂ ಇರುವ ಆಲೋಚನೆ ಮಾಡುವ ಒಂದು ಚಿಂತನೆಯೆಂದೆಣಿಸಬಹುದು.” ಈ ಕನ್ನಡ ಅನುವಾದ ಅರ್ಥವಾಗಬೇಕಾದರೆ Defence of poetry ಯ ಇಂಗ್ಲಿಷ್ ಮೂಲದ ಮೊದಲ ವಾಕ್ಯವನ್ನು ಓದುವ ಪ್ರಸಂಗ ಬರಬಹುದು. ಅನುವಾದದ ಭಾಷೆ ಕ್ಲೇಶರಹಿತವಾಗಿ ಇರಬೇಕಾದುದು ಅಗತ್ಯ. ಈ ಪುಸ್ತಕವನ್ನು ಮುನ್ನುಡಿ ಮತ್ತು ಸಹಾಯಕ ವಿವರಣೆಗಳೊಂದಿಗೆ ಅನುವಾದ ಮಾಡಿಕೊಟ್ಟಿರುವ ಮಹಾದೇವಪ್ಪನವರ ಶ್ರಮ ಮತ್ತು ಉದ್ದೇಶಗಳನ್ನು ಮೆಚ್ಚಬೇಕು.
ಬಾಲಸುಬ್ರಮಣ್ಯ ಅವರು ಗ್ರೀಕ್ ಮೂಲದಿಂದ ಅನುವಾದ ಮಾಡಿರುವ “ಅರಿಸ್ಟಾಟಲನ ಕಾವ್ಯಮೀಮಾಂಸೆ” ಎಂಬ ಗ್ರಂಥ, ಮತ್ತು “ಹೊರೇಸನ ಸಾಹಿತ್ಯ ವಿಮರ್ಶೆ”ಯನ್ನು ಕುರಿತು ಪ್ರಬುದ್ಧ ಕರ್ಣಾಟಕ (೪೨-೪;೪೨-೨/೧೯೬೧-೧೯೬೨)ದಲ್ಲಿ ಪ್ರಕಟವಾದ ಎರಡು ಲೇಖನಗಳು ಪ್ರಶಂನೀಯವಾಗಿವೆ. ಇಗ್ರಾಂಬೈವಾಟರ್ ಅವರು ಸಂಪಾದಿಸಿರುವ ‘ಅರಿಸ್ಟಾಟಲ ಕಾವ್ಯಮೀಮಾಂಸೆ’ಯ ಗ್ರೀಕ್ ಮೂಲ ಈ ಅನುವಾದಕ್ಕೆ ಆಧಾರ ಎಂದು ಲೇಖಕರು ಹೇಳಿಕೊಂಡಿದ್ದಾರೆ. ಭಾರತೀಯ ಕಾವ್ಯಸಿದ್ಧಾಂತಕ್ಕೂ ಅರಿಸ್ಟಾಟಲ್‌ನ ಕಾವ್ಯಸಿದ್ಧಾಂತಕ್ಕೂ ಇರುವ ಸಾಮ್ಯವನ್ನು ಉದ್ದಕ್ಕೂ ಸ್ಥೂಲವಾಗಿ ಸೂಚಿಸಿದ್ದಾರೆ. ಕಾವ್ಯಮೀಮಾಂಸೆಯ ತೌಲನಿಕ ಅಧ್ಯಯನದಲ್ಲಿ ಈ ಗ್ರಂಥದಿಂದಾಗುವ ಪ್ರಯೋಜನವು ಅಷ್ಟಿಷ್ಟಲ್ಲ. ಭಾರತೀಯ ಕಾವ್ಯಮೀಮಾಂಸೆಗೆ ಭರತಮುನಿ ಹೇಗೋ ಕಾವ್ಯಮೀಮಾಂಸೆಗೆ ಅರಿಸ್ಟಾಟಲ್ ಹಾಗೆ. ಇಂಥ ಕೃತಿಯನ್ನು ಸುಬ್ರಮಣ್ಯ ಅವರು ಅನುವಾದಿಸಿರುವ ರೀತಿ ಅತ್ಯಂತ ಖಚಿತವೂ, ನಿರ್ದುಷ್ಟವೂ ಆಗಿ ಮೂಲಕೃತಿಯ (ಅದರ ಭಾಷೆ ನಮಗೆ ಗೊತ್ತಿಲ್ಲದಿದ್ದರೂ) ಅಭಿಪ್ರಾಯವೇನೆಂಬುದನ್ನು ತಿಳಿಯಪಡಿಸುತ್ತದೆ. ಬರವಣಿಗೆಯ ಶೈಲಿ ಸಂಸ್ಕೃತ ಇಂಗ್ಲಿಷ್ ಮತ್ತು ಗ್ರೀಕ್ ಸಂಸ್ಕಾರದಿಂದಾಗಿ ಪಾರಿಭಾಷಿಕವಾಗಿ ಶಾಸ್ತ್ರೀಯ ಶೈಲಿಯ ಸಮರ್ಪಕವಾದ ಒಂದು ನಿದರ್ಶನದಂತಿದೆ. ‘ಹೊರೇಸನ ಸಾಹಿತ್ಯ ವಿಮರ್ಶೆ’ಯನ್ನು ಕುರಿತು ಅನುವಾದ ಈ ಮೇಲಿನದಕ್ಕೆ ಭಿನ್ನವಾಗಿ, ತಿಳಿಯಾಗಿ ವಿನೋದಶೀಲವಾಗಿ, ವಿನೂತನವಾಗಿದೆ.
ಹಿಂದಿ ಭಾಷೆಯಿಂದ ಕಾವ್ಯಮೀಮಾಂಸೆಗೆ ಸಂಬಂಧಪಟ್ಟ ಎರಡು ಪುಸ್ತಕಗಳು ಬಂದಿವೆ. ಒಂದು “ಡಾ|| ನಗೇಂದ್ರರ ಶ್ರೇಷ್ಠ ಪ್ರಬಂಧಗಳು”. ಇದನ್ನು ಮೇ. ರಾಜೇಶ್ವರಯ್ಯ ಮತ್ತು ಪ್ರಧಾನ್ ಗುರುದತ್ ಇವರು ಅನುವಾದಿಸಿದ್ದಾರೆ. ಇನ್ನೊಂದು ವಿನೋಬಾ ಅವರ ‘ಸಾಹಿತ್ಯ ಮತ್ತು ಸಾಹಿತಿ’ ಎಂಬ ಕಿರುಕೃತಿ. ಇದನ್ನು ಅನುವಾದ ಮಾಡಿದವರಾರೋ ತಿಳಿಯದು. “ಡಾ|| ನಗೇಂದ್ರರ ಶ್ರೇಷ್ಠ ಪ್ರಬಂಧಗಳು” ಎಂಬ ಪುಸ್ತಕದಲ್ಲಿ ಕಾವ್ಯ ಎಂದರೇನು, ‘ರಸಸ್ವರೂಪ’ ‘ಕರುಣರಸಾಸ್ವಾದನೆ’ ಮತ್ತು ‘ಸಾಹಿತ್ಯದಲ್ಲಿ ಆತ್ಮಾಭಿವ್ಯಕ್ತಿ’-ಈ ಲೇಖನಗಳು ನೇರವಾಗಿ ಕಾವ್ಯಮೀಮಾಂಸೆಗೆ ಸಂಬಂಧಿಸಿದವುಗಳು. ಈ ಪ್ರಬಂಧಗಳಲ್ಲಿ ಪ್ರತಿಪಾದಿತವಾಗಿರುವ ವಿಷಯವ್ಯಾಪ್ತಿಯಲ್ಲಿ, ಡಾ|| ನಗೇಂದ್ರರು ಪಾಶ್ಚಾತ್ಯ ಮತ್ತು ಭಾರತೀಯ ಕಾವ್ಯಮೀಮಾಂಸೆಯನ್ನು ತೌಲನ ಕ್ರಮದಲ್ಲಿ ಮನಸ್‌ಶಾಸ್ತ್ರೀಯವಾದ ಅರಿವಿನ ಹಿನ್ನೆಲೆಯಲ್ಲಿ ಸಮರ್ಥವಾಗಿ ವ್ಯಾಖ್ಯಾನಿಸಿದ್ದಾರೆ ಎನ್ನಿಸುತ್ತದೆ. ‘ರಸಸ್ವರೂಪ’ ಎಂಬ ಪ್ರಬಂಧದಲ್ಲಿ, ರಸಾನುಭವದ ‘ಅಲೌಕಿಕತೆ’ಯನ್ನು ಎತ್ತಿಹಿಡಿಯುವಲ್ಲಿ, ಐ.ಎ. ರಿಚರ್ಡ್ಸ್ ಅವರ ಮತವನ್ನು ಕೂಲಂಕಷವಾಗಿ ವಿಮರ್ಶಿಸಿ ಭಾರತೀಯ ಕಾವ್ಯಮೀಮಾಂಸೆ ರಸಾನುಭವದ ‘ಅಲೌಕಿಕತೆ’ಯ ಬಗ್ಗೆ ಹೇಳಿರುವ ಮಾತುಗಳು ಎಷ್ಟು ಮಹತ್ವದವುಗಳೆಂಬುದನ್ನು ಸ್ಥಾಪಿಸಿದ್ದಾರೆ. ಕಾವ್ಯಮೀಮಾಂಸೆಯ ಈ ಪ್ರಬಂಧಗಳ ಜೊತೆಗೆ ಹಿಂದೀ ಸಾಹಿತ್ಯದಲ್ಲಿ ಬಂದ ಸಾಹಿತ್ಯಕ ಚಳುವಳಿಗಳಾದ ‘ಛಾಯಾವಾದ’ ‘ಪ್ರಯೋಗವಾದ’ಗಳನ್ನು ಕುರಿತು ಲೇಖನಗಳೂ ಇಲ್ಲಿವೆ. ಡಾ. ನಗೇಂದ್ರರು ನಿದರ್ಶನಕ್ಕಾಗಿ ಕೊಡುವ ಹಿಂದೀ ಕವಿಗಳ ಕೃತಿಗಳ ಬಗೆಗೆ ಅಡಿಟಿಪ್ಪಣಿಯಲ್ಲಿ ವಿವರಣಾತ್ಮಕ ಸೂಚನೆಗಳನ್ನು ಅನುವಾದಕರು ನೀಡಿದ್ದಾರೆ. ಕಾವ್ಯಮೀಮಾಂಸೆಯಲ್ಲಿ ಪರಿಚಿತವಾದ ಪರಿಭಾಷೆಯನ್ನೇ ಬಳಸಿರುವುದರಿಂದ ವಿಷಯನಿರೂಪಣೆ ಅಕ್ಲಿಷ್ಟವಾಗಿ, ಅರ್ಥವ್ಯಕ್ತಿಯನ್ನುಳ್ಳದ್ದಾಗಿದೆ. ಅನುವಾದದ ಭಾಷೆ ಈ ಕೃತಿ ಬೇರೊಂದು ಭಾಷೆಯ ಅನುವಾದವೆಂದು ತೋರದಷ್ಟು ಸೊಗಸಾಗಿದೆ.
ವಿನೋಬಾರವರ ‘ಸಾಹಿತ್ಯ-ಸಾಹಿತಿ’ ಎಂಬ ಚಿಕ್ಕ ಕೃತಿಯಲ್ಲಿ “ಜೀವನ ನಿಷ್ಠೆಯ ಪ್ರಕಾಶನಾರ್ಥ ಸಾಹಿತ್ಯ; ಜೀವನಿಷ್ಠೆ ಸಾಹಿತ್ಯಎರಡೂ ಏಕರೂಪವಾಗಬೇಕು….ಅರ್ಥ ಎಂದರೆ ಜೀವನ, ವಾಕ್ ಎಂದರೆ ಸಾಹಿತ್ಯ”-ಹೀಗೆ ಸಾಹಿತ್ಯ ಸೂಕ್ತಿ ಸದೃಶವಾದ ಅನೇಕ ಮಾತುಗಳು ಇದರಲ್ಲಿವೆ.
ಎ.ಅರ್. ಕೃಷ್ಣಶಾಸ್ತ್ರಿಗಳು ಬಂಗಾಳಿಯಿಂದ ಅನುವಾದಿಸಿರುವ “ರವೀಂದ್ರನಾಥ್ ಠಾಕೂರ್ ನಿಬಂಧ ಮಾಲಾ”ದ ಎರಡನೆಯ ಭಾಗದಲ್ಲಿ ‘ಸಾಹಿತ್ಯ’ವನ್ನು ಕುರಿತು ಪ್ರಬಂಧದಲ್ಲಿ ಠಾಕೂರರ ಕಾವ್ಯಮೀಮಾಂಸೆಯನ್ನು ಗುರುತಿಸಬಹುದು.[1] “ಸಾಧಾರಣದ ವಸ್ತುವನ್ನು ವಿಶೇಷ ಭಾವದಲ್ಲಿ ತನ್ನದನ್ನಾಗಿ ಮಾಡಿಕೊಂಡು, ಅದೇ ಸಾಧನದಿಂದಲೇ ಅದನ್ನು ಮತ್ತೆ ವಿಶೇಷ ಭಾವದಲ್ಲಿ ಸಾಧಾರಣದ್ದಾಗಿ ಮಾಡಿಬಿಡುವುದು ಸಾಹಿತ್ಯದ ಕೆಲಸ” (ಪು. ೨೬೪)-ಎಂಬ ಮಾತಿನಲ್ಲಿ ಕಾವ್ಯಮೀಮಾಂಸೆಯೆಲ್ಲ ಅಡಕವಾಗಿದೆ. ‘ಸಾಹಿತ್ಯದ ದಾರಿಯಲ್ಲಿ’ ಮತ್ತು ‘ಸಾಹಿತ್ಯದ ಸ್ವರೂಪ’ ಎಂಬ ಎರಡೂ ಭಾಗಗಳಲ್ಲಿ ಕವಿ ರವೀಂದ್ರರ ಕಾವ್ಯಮೀಮಾಂಸೆಯನ್ನು ಕಾಣಬಹುದು. ಹೊಸಗನ್ನಡ ಗದ್ಯದ ಶಿಲ್ಪಿವರೇಣ್ಯರಾದ ಎ.ಅರ್. ಕೃಷ್ಣಶಾಸ್ತ್ರಿಗಳ ಈ ಅನುವಾದದ ವಿಚಾರದಲ್ಲಿ ಯಾವ ಪ್ರಶಂಸೆಯ ಮಾತುಗಳನ್ನು ಆಡುವುದೂ ಅನಾವಶ್ಯಕ.
ಮೇಲೆ ಅವಲೋಕಿಸಿದ ಈ ಅನುವಾದ ಲೇಖನ-ಕೃತಿಗಳನ್ನು ನೋಡಿದರೆ ಎಷ್ಟೊಂದು ಕಡೆಯಿಂದ ಕಾವ್ಯಮೀಮಾಂಸೆಯ ಸಾಹಿತ್ಯ ಕನ್ನಡಕ್ಕೆ ಬಂದಿದೆ ಎನ್ನುವ ಸಂಗತಿ ಕುತೂಹಲಕಾರಿಯಾಗಿದೆ.
-೬-
ಇತ್ತೀಚಿಗೆ ‘ಚಂಡೆಮದ್ದಳೆ’ಯೊಂದಿಗೆ ಬಂದ ನವ್ಯ ಕಾವ್ಯ ಕನ್ನಡ ಕಾವ್ಯಮೀಮಾಂಸೆಗೆ ತಂದಿರುವ ರಂಗು-ರೂಪಗಳು ಅತ್ಯಂತ ಗಮನಾರ್ಹವಾಗಿವೆ. ಯಾವ ಒಂದು ಸಾಹಿತ್ಯಕ ಚಳುವಳಿ ಬಂದರೂ ಅದು ತನ್ನ ಅಂತರಂಗದಿಂದಲೇ ತನಗೆ ಸಮರ್ಥನೀಯವಾದ ಕಾವ್ಯತತ್ವಗಳನ್ನು ಆವಿಷ್ಕಾರ ಮಾಡಿಕೊಳ್ಳುತ್ತದೆ. ನವ್ಯ ಕಾವ್ಯಕ್ಕೂ ಈ ಮಾತು ಒಪ್ಪುತ್ತದೆ. ಕನ್ನಡಕ್ಕೆ ಉದ್ದಕ್ಕೂ ಬಂದ ಪ್ರೇರಣೆಗಳ ಹಾಗೆ ನವ್ಯ ಕಾವ್ಯಕ್ಕೂ ಪಶ್ಚಿಮದಿಂದಲೆ ಪ್ರೇರಣೆ ಬಂದಿದೆ. ಈ ಕಾವ್ಯಮೀಮಾಂಸೆಯ ಬಹುತೇಕ ಅಂಶಗಳೂ ಅಲ್ಲಿಂದಲೇ ಬಂದಿವೆ. ಎಜ್ರಾ ಪೌಂಡ್, ಇಲಿಯಟ್, ಯೇಟ್ಸ್, ಇತ್ಯಾದಿಯವರ ಕಾವ್ಯ ಸಂಪ್ರದಾಯದಿಂದ ಪ್ರೇರಿತವಾದ ಕವಿತೆ, ಆಯಾ ಕವಿಗಳು ತಮ್ಮ ಪರಂಪರೆಯನ್ನು ತಾವೇ ಅರ್ಥಮಾಡಿಕೊಳ್ಳಲೋ, ಅರ್ಥಮಾಡಿಕೊಡಲೋ ನಡೆಸಿದ ಕಾವ್ಯಮೀಮಾಂಸೆಯ ವಿಚಾರಗಳು ನಮ್ಮ ನವ್ಯ ಕವಿಗಳಲ್ಲೂ ಪ್ರತಿಫಲಿತವಾಗಿವೆ, ಗೋಪಾಲಕೃಷ್ಣ ಅಡಿಗ, ಗೋಕಾಕ್, ಕುರ್ತುಕೋಟಿ, ಯು.ಅರ್. ಅನಂತಮೂರ್ತಿ, ಕೆ. ನರಸಿಂಹಮೂರ್ತಿ, ರಾಮಚಂದ್ರಶರ್ಮ ಮತ್ತು ಎಸ್.ಬಿ.. ಮಿಣಜಿಗಿ ಇವರ ಲೇಖನಗಳಲ್ಲಿ ಮತ್ತು ಪುಸ್ತಕಗಳಲ್ಲಿ ಈ ನವ್ಯ ಕಾವ್ಯಮೀಮಾಂಸೆಯನ್ನು ಗುರುತಿಸಬಹುದಾಗಿದೆ.
ಕಾವ್ಯವೆಂದರೇನು, ಕಾವ್ಯ ಹೇಗಿರಬೇಕು ಎನ್ನುವ ಬಗೆಗೆ ಎಜ್ರಾ ಪೌಂಡ್ ಹೇಳುವ ಈ ಎರಡು ಮಾತುಗಳು ಗಮನಾರ್ಹವಾಗಿವೆ: “ಮೊದಲನೆಯದಾಗಿ ಕವಿಯಲ್ಲಿ ಸಮಕಾಲೀನ ಪ್ರಜ್ಞೆ ಇರಬೇಕೆಂಬುದು. ಎರಡನೆಯದಾಗಿ ಕಾವ್ಯದಲ್ಲಿ ಗದ್ಯದ ಸತ್ವವಿರಬೇಕೆಂಬುದು.”[2] ಈ ಹೇಳಿಕೆಯ ಪ್ರಕಾರ ಕಾವ್ಯವೆಂಬುದು ಕವಿಯ ವಾಸ್ತವ ಜೀವನದ ವೈಯಕ್ತಿಕಾನುಭವದ ತೀವ್ರತೆಯ ಅಭಿವ್ಯಕ್ತಿ. ಗತಕಾಲದ ಸ್ಮರಣೆಯಿಂದಲೋ, ಭವಿಷ್ಯದ ಕನಸಿನಿಂದಲೋ ಸ್ಫೂರ್ತಿ ಪಡೆದು ನಿರ್ಮಿತವಾಗುವ ಭಾವಾವೇಶಗಳ ಉದ್ಗಾರವಲ್ಲ. ಹಾಗೆಂದಮಾತ್ರಕ್ಕೆ ನವ್ಯಕವಿಗೆ ಭೂತ ಹಾಗೂ ಭವಿಷ್ಯಗಳು ನಿರ್ಲಕ್ಷ್ಯದ ವಸ್ತುಗಳೆಂದು ಅರ್ಥವಲ್ಲ. ಯಾವುದು ಸಮಕಾಲೀನವೋ ಅಥವಾ ವರ್ತಮಾನವೋ ಅದು ಭೂತ-ಭವಿಷ್ಯಗಳನ್ನು ಒಳಗೊಳ್ಳುವ ಒಂದು ಅಖಂಡ ಮಧ್ಯಬಿಂದು ಎಂಬುದು ಅವನ ಪ್ರಜ್ಞೆಗೆ ಗೋಚರಿಸುತ್ತದೆ. ಇದನ್ನೇ ಇಲಿಯಟ್ ಚಾರಿತ್ರಿಕ ಪಜ್ಞೆ (Historical sense) ಅಥವಾ ಪರಂಪರೆಯ ಅರಿವು ಎನ್ನುತ್ತಾನೆ. “ಪರಂಪರೆಯೆಂದರೆ ತಲೆ ತಲಾಂತರದಿಂದ ಆನುವಂಶಿಕವಾಗಿ ಬಂದ ಆಸ್ತಿಯಲ್ಲ; ಭೂತದ ಕೈಯಿಂದ ಅಷ್ಟು ಸಲೀಸಾಗಿ ವರ್ತಮಾನದ ಕೈಗೆ ಎಟಕುವ ಅಜ್ಜ ನಟ್ಟಮಾವಿನ ಮರದ ಹಣ್ಣಲ್ಲ. ಕವಿಯಾದವನು ಅತ್ಯಂತ ಶ್ರಮದಿಂದ ಮನನಮಾಡಿ ಸಾಧಿಸಿಕೊಳ್ಳಬೇಕಾದ ಜವಾಬ್ದಾರಿಯಿಂದ ಕೂಡಿದ ಅರಿವು.”[3] ಹೀಗಾಗಿ “ಎಲ್ಲ ಕಲೆಯ ಮೂಲದ್ರವ್ಯವೂ ಕಲೆಗಾರನ ವೈಯಕ್ತಿಕ ಅನುಭವವೇ ಹೊರತು ಬೇರೆ ಅಲ್ಲ. ಈ ಅನುಭವಗಳನ್ನು ಪಡೆಯುವುದು ಇಂದ್ರಿಯಗಳ ಮನಸ್ಸಿನ ಕೆಳಪದರುಗಳಿಗಿಳಿದು ಅಲ್ಲಿ ತುಂಬಿಕೊಂಡಿರುವ ವ್ಯಕ್ತಿ ಮತ್ತು ಅವನ ಜನಾಂಗದ ಆರ್ಧಸ್ಮೃತ ಅಥವಾ ವಿಸ್ಮೃತ ಭಾವಾನುಭವ ಸಂವೇದನೆಗಳೊಡನೆ ಸಮರಸಗೊಂಡು ಮಾಗಿ ಸ್ವಪ್ರದರ್ಶನಕ್ಕೆ ತಕ್ಕ ನಿಮಿಷವನ್ನು ಕಾಯುತ್ತಿರುತ್ತದೆ….ಕವಿಯ ಮನಸ್ಸಿನೊಳಗೇ ಇರುವಾಗ ಈ ಅನುಭವ ಅಮೂರ್ತ, ಅಸ್ತವ್ಯಸ್ತ, ರೂಪಹೀನ. ಅದಕ್ಕೆ ತಕ್ಕ ಶರೀರವನ್ನು ಸೃಷ್ಟಿಸಿ ಅದನ್ನು ಕಲೆಯಾಗಿ ಮಾರ್ಪಡಿಸುವುದು ಕಲೆಗಾರನ ಕೆಲಸ….ಈ ಶರೀರವನ್ನು ಕವಿ, ತನ್ನ ಮನಸ್ಸಿಗಿಂತ ಭಿನ್ನವಾದ ಹೊರಜಗತ್ತಿನ ವಸ್ತು ಗುಚ್ಛಗಳಲ್ಲಿ, ಘಟನಾ ಸರಣಿಯಲ್ಲಿ, ಕ್ರಿಯಾಪರಂಪರೆಯಲ್ಲಿ, ವಿಶಿಷ್ಟ ಸನ್ನಿವೇಶಗಳಲ್ಲಿ ಸೃಷ್ಟಿಸುತ್ತಾನೆ. ಹೀಗೆ ಕವಿಯ ಅನುಭವ ಅಥವಾ ಭಾವ ಯಾವ ಯಾವ ವಸ್ತುರೂಪದಲ್ಲಿ ಮೈತಳೆಯುತ್ತದೆಯೋ ಅದನ್ನು ಆ ಭಾವದ, ಅನುಭವ ವಸ್ತು ಪ್ರತಿರೂಪ ಅಥವಾ ವಸ್ತು ವ್ಯತಿಕರ ಎನ್ನಬಹುದು ಎಂಬ ಇಲಿಯಟ್ಟನ ಅಭಿಪ್ರಾಯವನ್ನು ಇಲ್ಲಿ ನೆನೆಯಬಹುದು.”[4] ಕವಿಯ ಅನುಭವಕ್ಕೆ ಇನ್ನೂ ಮುಖ್ಯವಾದದ್ದು ಪ್ರಾಮಾಣಿಕತೆ. ತನ್ನ ಅನುಭವಕ್ಕೆ ಬಾರದ, ಬೇರೆ ಯಾವುದೋ ಆದ ಭಾವನೆ-ಆಲೋಚನೆಗಳನ್ನು ತನ್ನದೆಂದು ಭ್ರಮಿಸದ ಸ್ವಾತ್ಮಪರೀಕ್ಷಾನಿಷ್ಠವಾದ ಒಂದು ಪ್ರಾಮಾಣಿಕತೆ. “ಸ್ವಾನುಭವಕ್ಕೆ ಪ್ರಾಮಾಣಿಕವಾಗಿರುವುದು ಸಾಹಿತ್ಯದ ಅತ್ಯಂತ ಅವಶ್ಯವಾದ ಮೂಲಾಂಶ ಎಂಬುದೊಂದು; ಹೀಗೆ ಪ್ರಾಮಾಣಿಕನಾಗಬೇಕಾದರೆ ಲೌಕಿಕವಾದ ಅಥವಾ ಆಧ್ಯಾತ್ಮಿಕವಾದ ಯಾವುದೇ ಹೊರಗಡೆಯ ಪ್ರಭುಶಕ್ತಿ ಇರಲಿ ಅದರಿಂದಲೂ ಮನಸ್ಸಿನಲ್ಲಿ ಪ್ರತಿಫಲಿತವಾಗುವ ಜೀವನದ ಪ್ರತಿಮೆಯನ್ನು ವಿಕೃತಗೊಳಿಸುವ ಎಲ್ಲ ಭಾವೋದ್ರೇಕ ಪೂರ್ವಗ್ರಹಗಳಿಂದಲೂ ಕವಿ ಸ್ವಂತಂತ್ರನಾಗಿರುವುದು ಅತ್ಯಾವಶ್ಯಕವಾದ ಪೂರ್ವಭಾವಿ ಅಗತ್ಯ.”[5] ಈ ಪ್ರಜ್ಞೆಯುಳ್ಳ ಕವಿಗೆ ಕಾವ್ಯಕ್ಕೆ ಇದು ವಸ್ತು, ಇದು ವಸ್ತುವಲ್ಲ, ಇದು ಸುಂದರ, ಇದು ಸುಂದರವಲ್ಲ ಎನ್ನುವ ಪಕ್ಷಪಾತ ಉಳಿಯುವುದಿಲ್ಲ. “ರೊಮ್ಯಾಂಟಿಕ್ ಕವಿಗಳು ಹೆಚ್ಚಾಗಿ ಸುಂದರ ದಿವ್ಯ ದೃಶ್ಯಗಳನ್ನು ವರ್ಣಿಸಿದರೆ ಇಲಿಯಟ್ ಸೌಂದರ್ಯಗಳ ಅಸೌಂದರ್ಯಗಳ ಕೆಳಗಿರುವ ಅತೃಪ್ತಿ ನಿರಾಸೆ ಭಯ ಪಶ್ಚಾತ್ತಾಪ ದೈವಿಕತೆಯ ಕಣಸು ಇವುಗಳನ್ನು ಚಿತ್ರಿಸುತ್ತಾನೆ.”[6] ಎಂಬ ನವ್ಯ ಕಾವ್ಯದ ವಸ್ತುವಿಮರ್ಶೆಯನ್ನು ಇಲ್ಲಿ ನೆನೆಯಬಹುದು. ಹೀಗೆ ಕವಿ ಮನೋಧರ್ಮ, ಕಾವ್ಯವಸ್ತುವಿನ ವಿಚಾರದಲ್ಲಿ ಪ್ರಾಮಾಣಿಕತೆ ಮತ್ತು ಸಮಕಾಲೀನತೆಯನ್ನು ಈ ಕಾವ್ಯಮೀಮಾಂಸೆ ಎತ್ತಿಹಿಡಿಯುತ್ತದೆ.
ಇನ್ನು ಕಾವ್ಯದ ಅಭಿವ್ಯಕ್ತಿ ಅಥವಾ ಭಾಷಾರೂಪ ಹೇಗಿರಬೇಕು ಎಂಬುದನ್ನು ಕುರಿತು ಕೆಲವು ಮಾತುಗಳನ್ನು ನೋಡಬಹುದು: ಯಾವುದೋ ಒಂದು ವಸ್ತುವನ್ನು ಕುರಿತು ಕೇವಲ ವಿಸ್ಮಯದ ನೆಲೆಯಲ್ಲಿ ಉದ್ದುದ್ದನೆಯ ಉಪನ್ಯಾಸ ಕೊಡುವುದು ಕಾವ್ಯವಲ್ಲ. “ಕಾವ್ಯವೆಂಬುದು ಅನುಭವಕ್ಕೆ ಆಕಾರ ಕೊಡುವ ಕೆಲಸ; ಅದು ಅವನ (ಕವಿಯ) ಭಾಷಣವಲ್ಲ.”[7] ಎಜ್ರಾಪೌಂಡ್ “ಕಾವ್ಯದಲ್ಲಿ ಗದ್ಯದ ಸತ್ವವಿರಬೇಕು” ಎಂದು ಹೇಳಿದ್ದರ ಅರ್ಥ ಅದು ಗದ್ಯದ ಅರ್ಥವ್ಯಕ್ತಿಯನ್ನು ಅಳವಡಿಸಿಕೊಳ್ಳಬೇಕು ಎನ್ನುವ ಅರ್ಥದಲ್ಲಿ. ನವ್ಯ ಕವಿಗಳಿಗಿಂತ ಹಿಂದಿನ ರೊಮ್ಯಾಂಟಿಕ್ ಕವಿಗಳು “ಬುದ್ಧಿಭಾವನೆಗಳನ್ನು, ಕಲ್ಪನೆ ವಿಚಾರಗಳನ್ನು ಗದ್ಯ ಪದ್ಯಗಳ ಪ್ರತ್ಯೇಕ ಉದ್ಯಮಗಳೆಂದು ಭಾವಿಸಿದ್ದರು. ಗದ್ಯದ ಅನೇಕ ಗುಣಗಳಿಂದ ಪದ್ಯ ಆಲಿಪ್ತವಾಗಿಯೇ ಉಳಿಯಬೇಕಾಯಿತು….ಆದರೆ ಪೌಂಡ್ ಗದ್ಯದ ಅರ್ಥವ್ಯಕ್ತಿಯನ್ನೂ ಸಂಭಾಷಣೆಗಳ ಚಾತುರ‍್ಯವನ್ನೂ ಕವಿತೆಯಲ್ಲಿ ನಿರೀಕ್ಷಿಸಿ ಒಂದು ಹೊಸ ಸಂಭಾವನೆಯನ್ನು ಸೂಚಿಸಿದ.”[8] ಎಂದರೆ ಕಾವ್ಯದ ಭಾಷೆ ಸಂಗೀತದ ಪಾರವಶ್ಯ ಹಾಗೂ ಗೇಯತೆಯಿಂದ ತಪ್ಪಿಸಿಕೊಂಡು ದಿನಬಳಕೆಯ ಆಡುಮಾತಿಗೆ ಸಮೀಪವಾಯಿತು. ನವ್ಯ ಕಾವ್ಯದ ಪ್ರಕಾರ ಭಾಷೆ ಎಂದರೆ ಆಡುಮಾತಿಗೆ ಸಮೀಪವಾದದ್ದು ಅಥವಾ ಮಾತಾಡಿಕೊಂಡ ಹಾಗಿರುವ ಭಾಷೆಯೆ. “ಆಡುವ ಮಾತಿನ ಪರಿಪಾಕದ ಮಿತಿಯಲ್ಲಿ ತಮ್ಮ ಅನುಭವದ ಪರಿಪೂರ್ಣಾವತಾರಕ್ಕೆ ಈ ಕವಿ ನಡೆಸುವ ಪ್ರಯತ್ನ ಸದ್ಯದ ಕನ್ನಡ ಸಾಹಿತ್ಯದಲ್ಲಿ ಅನ್ಯನ ರೀತಿಯದು”[9] ಎಂದು ಅಡಿಗರ ಕಾವ್ಯವನ್ನು ಕುರಿತು ಈ ವಿಮರ್ಶೆ ನವ್ಯಕಾವ್ಯದಲ್ಲಿ ಕಾವ್ಯದ ಭಾಷೆ ಹೇಗಿರಬೇಕೆಂಬುದರ ವ್ಯಾಖ್ಯಾನವಾಗಿದೆ. ಇಂಥ ಮಾತಿನ ಸಾರಾಂಶ “ಭಾಷೆಯಲ್ಲಿ ಸಂಭವಿಸದುದು ಕಾವ್ಯವಲ್ಲ”[10] ಎಂಬುದು. ಹಾಗಾದರೆ ಇದು ಹೊಸ ಸೂತ್ರವೇನು? ಎಲ್ಲ ಕಾವ್ಯವೂ ಭಾಷೆಯಲ್ಲಿ ಅಲ್ಲದೆ ಇನ್ನಾವುದರಲ್ಲಿ ಸಂಭವಿಸುತ್ತದೆ ಎನ್ನಬಹುದು. ಅದಕ್ಕೆ ಉತ್ತರ ಇದು: “ಉತ್ತಮ ಕಾವ್ಯದಲ್ಲಿ ಕವಿ ತನಗೆ ತಾನೇ ಮಾತನಾಡಿಕೊಳ್ಳುತ್ತಿದ್ದಾನೆ ಎನ್ನಿಸುತ್ತದೆ. ಅಥವಾ ತನ್ನಂಥವರ ಜೊತೆ ಮಾತನಾಡುತ್ತಿದ್ದಾನೆ ಎನ್ನಿಸುತ್ತದೆ. ಇನ್ನೂ ಉತ್ತಮಕಾವ್ಯದಲ್ಲಿ, ಇಲ್ಲಿ ಈ ಕವನದಲ್ಲಿಯೇ ಕವಿ ತಾನು ಭಾವಿಸುವ ಕ್ರಮವನ್ನು ಅಭಿನಯಿಸಿ ತೋರಿಸುತ್ತಿದ್ದಾನೆ ಎನ್ನಿಸುತ್ತದೆ. ಕವಿ ತನ್ನ ಅಂತರಂಗವನ್ನು, ಜೀವನದ ಅಂತರಾಳಗಳಲ್ಲಿ ಹುದುಗಿರುವ ಸತ್ಯವನ್ನು ಅನ್ವೇಷಿಸುವ, ಬಗೆಯುವ, ರೀತಿಯಿದು. ಭಾಷೆಯಲ್ಲಿ ಭಾವಾಭಿನಯವಾಗಬೇಕು ಎನ್ನುವ ಮಾತಿನ ಅರ್ಥ ಇದು.”[11] “ಈ ರೀತಿಯ ಬದಲಾವಣೆ ಭಾಷೆಯಲ್ಲಿ ತನ್ನೆಲ್ಲ ಪಾರಂಪರಿಕ ಹಾಗೂ ಅಜ್ಞಾತದ ಆಳ-ಸ್ತರಗಳನ್ನೆಲ್ಲ ಒಳಗೊಂಡು ಸಂಭವಿಸಬೇಕು. ಇಂಥ ಎಚ್ಚರವೇ ನವ್ಯಕಾವ್ಯದ ಜೀವಾಳವಾಗಿದೆ.”[12] ಅಲ್ಲದೆ ಕವಿಗೆ “ಬೇರೆ ಬೇರೆ ಸ್ಥಳ ಹಾಗೂ ಕಾಲಗಳಲ್ಲಿ ಬೇರೆ ಬೇರೆಯವರು ಪಡೆದ ಅನುಭವಗಳ ಸಂದರ್ಭದಲ್ಲಿ ತನ್ನದೇ ಅನುಭವದ ಒಂದು ಸುಸಂಬದ್ಧರಚನೆಯನ್ನು ಕಾಣುವ ವೈಯಕ್ತಿಕ ತೀವ್ರತೆ”[13] ಇರುವುದರಿಂದ ಕವಿ ಭಾಷೆಯಲ್ಲಿ ಬಳಸುವ ಸಂಕೇತ-ಪ್ರತೀಕ-ಪ್ರತಿಮೆಗಳ ಸಂಯೋಜನೆಯಿಂದ ಒಂದು ರೀತಿಯ ಸಂಕೀರ್ಣತೆ ಕಂಡುಬರುತ್ತದೆ. ನವ್ಯಕವಿ ವಾಸ್ತವವಾಗಿ ಬದುಕಿನ ಸಂಕೀರ್ಣತೆಯನ್ನು-ಏಕೆಂದರೆ, ಇಂದಿನ ಬದುಕು ಹಿಂದಿನದಕ್ಕಿಂತ ಸಂಕೀರ್ಣವಾಗಿರುವುದರಿಂದ-ಪ್ರಕಟಿಸುತ್ತಾನೆ. ಅಲ್ಲದೆ ಈ ಕಾವ್ಯ ಬದುಕಿನ ಬಗ್ಗೆ ಯಾವ ತಾತ್ವಿಕ ಉಪದೇಶಗಳನ್ನಾಗಲಿ, ನಿರ್ದೇಶನವನ್ನಾಗಲಿ ನೀಡುವ ಹವ್ಯಾಸದ್ದಲ್ಲ; ಬದುಕಿನ ಬಗ್ಗೆ ಸಂವೇದನೆಗಳನ್ನು ತೀವ್ರಗೊಳಿಸಿ ಎಚ್ಚರವನ್ನು ಹುಟ್ಟಿಸುವ ಉದ್ದೇಶ ಉಳ್ಳದ್ದು. “ಪೂರ್ಣತೆಯ, ಪ್ರಗತಿಯ, ಭ್ರಮೆಯನ್ನು ಹುಟ್ಟಿಸಿ ಬದುಕನ್ನು ಸರಳ ಮಾಡಿಸುವ ಕಾವ್ಯಕ್ಕಿಂತ, ಅಪೂರ್ಣತೆಯ ಪ್ರಜ್ಞೆಯನ್ನು ಉಳಿಸಿ, ನೋಯಿಸಿ, ಕುದಿಸಿ, ಬೆಳಕನ್ನು ಕಾಣಲು ಕತ್ತಲಲ್ಲೇ ತಡಕುತ್ತ ನಡೆಯಬೇಕಾದ ಅನಿವಾರ‍್ಯವನ್ನು ಜೀವಕ್ಕೆ ಕಲಿಸುವ ಕಾವ್ಯ ಶ್ರೇಷ್ಠವಾದುದು”[14]-ಎಂಬುದು ಇದರ ವಾದ. ಒಂದು ಮಾತಿನಲ್ಲಿ ಹೇಳುವುದಾದರೆ, “ಬಳಕೆ ಮಾತು, ಛಂದಸ್ಸಿನಲ್ಲಿಯ ನವೀನ ಪ್ರಯೋಗ, ಪ್ರತಿಮಾ ಪ್ರಧಾನತೆ, ವಾಸ್ತವಿಕ ಚಿತ್ರಸೃಷ್ಟಿ, ಪಾರಿಭಾಷಿಕ ಶೈಲಿ,-ಈ ಎಲ್ಲ ಮಾತಿನಲ್ಲಿಯೂ ಆಧುನಿಕ ಕಾವ್ಯವು ಕ್ರಮೇಣ ಅಸ್ಥೆವಹಿಸಿದ್ದನ್ನು ನಾವು ಕಾಣಬಹುದಾಗಿದೆ. ಇವೆಲ್ಲವುಗಳ ಸಮಯೋಚಿತ ಪ್ರಜ್ಞೆಯನ್ನೆ ನಾವು ‘ನವ್ಯಪ್ರಜ್ಞೆ’ ಎಂದು ಕರೆಯಬಹುದು.”[15]
ಇದು ಸಂಗ್ರಹವಾಗಿ ಹೇಳಬಹುದಾದ ನವ್ಯಕಾವ್ಯಮೀಮಾಂಸೆ. ಇಲ್ಲಿ ಪ್ರಧಾನವಾದದ್ದು ‘ಸಮಕಾಲೀನಪ್ರಜ್ಞೆ’ ಮತ್ತು ‘ಆಡುಮಾತಿನ ಬಳಕೆ’. ಈ ಎರಡೂ ಒಂದಕ್ಕೊಂದು ಪೂರಕವಾದ ಅಂಶಗಳು. ಕಾವ್ಯದ ವಸ್ತು ಭಾಷೆಗಳನ್ನು ಇಷ್ಟರಮಟ್ಟಿಗೆ ಮಣ್ಣಿನ ಹತ್ತಿರಕ್ಕೆಳತಂದು ‘ಮಣ್ಣಿನ ವಾಸನೆ’ ಹೊಡೆಯಬೇಕೆಂಬ ತೀವ್ರವಾದ ಹಂಬಲ ಪ್ರಕಟವಾದದ್ದು ಇದರ ವಿಶೇಷತೆ. ಬಹು ಮುಖ್ಯವಾದ ವ್ಯತ್ಯಾಸವೆಂದರೆ ಭಾಷೆಯ ಬಗ್ಗೆ ಕವಿಗಿರಬೇಕಾದ ಪ್ರಜ್ಞೆಯನ್ನು ಕುರಿತದ್ದು. ಬಹುಶಃ ಹಿಂದಿನ ಕವಿಗಳಿಗೂ ಈ ಕವಿಗಳಿಗೂ ಇರುವ ಮುಖ್ಯವಾದ ಅಂತರ ಇಲ್ಲಿಯೇ ಎಂದು ತೋರುತ್ತದೆ-ಭಾಷೆಯ ವಿಚಾರಕ್ಕೆ ಕೊಟ್ಟ ಪ್ರಾಮುಖ್ಯತೆಯಲ್ಲಿ. ಏಕೆಂದರೆ ಕಾವ್ಯ ಮೂಲತಃ ಭಾಷೆ; ಈ ಭಾಷೆ ಅಂತರನುಭವಕ್ಕೆ ಕೊಟ್ಟ ಆಕಾರ. ಆದ್ದರಿಂದ ಅನುಭವದ ಪ್ರಾಮಾಣಿಕತೆ, ವಿಶಿಷ್ಟತೆ ವ್ಯಕ್ತವಾಗುವುದು ಕವಿ ಎಷ್ಟರಮಟ್ಟಿಗೆ ಭಾಷೆಯೊಂದಿಗೆ ಹೋರಾಡಿ ತನ್ನದೇ ಆದ ಅಭಿವ್ಯಕ್ತಿಯನ್ನು ನಿರ್ಮಿಸಿಕೊಂಡಿದ್ದಾನೆ ಎನ್ನುವುದರಮೇಲೆ. ಪ್ರಾಚೀನಾಲಂಕಾರಿಕನಾದ ವಾಮನನು ಹೇಳಿದ “ರೀತಿರಾತ್ಮಾಕಾವ್ಯಸ್ಯ” ಎಂಬ ಕಾವ್ಯತತ್ವದ ಒಂದು ಪುನರವತಾರ ಅಥವಾ ಪುನರ್‌ವ್ಯಾಖ್ಯಾನ ಇಂದಿನಬದಲಾದ ಪರಿಸರದ ಹಿನ್ನೆಲೆಯಲ್ಲಿ ಆದ ಹಾಗೆ ತೋರುತ್ತದೆ. ಒಟ್ಟಿನಲ್ಲಿ ನವ್ಯಕಾವ್ಯ ಹಿಂದಿನ ಕಾವ್ಯತತ್ವಗಳಾದ ಸೌಂದರ್ಯ, ಆದರ್ಶ, ವ್ಯಕ್ತಿನಿಷ್ಠತೆಗೆ, ಗೇಯತೆ, ಇವುಗಳ ವಿರುದ್ಧ ಉದ್ದೇಶಪೂರ್ವಕವಾಗಿ ಬೇರೆ ದಾರಿ ಹಿಡಿದು, ವಾಸ್ತವತೆ, ಸಂಕೀರ್ಣತೆ, ಪ್ರಾಮಾಣಿಕತೆ, ಗದ್ಯಾತ್ಮಕತೆ, ಮತ್ತು ಬದುಕಿನ ಬಗ್ಗೆ ತಾಳಿದ ಹೊಸ ಎಚ್ಚರ ಇವುಗಳನ್ನು ಮೂಲಸಾಮಗ್ರಿಯನ್ನಾಗಿ ಮಾಡಿಕೊಂಡಿತು.ಇದರಿಂದಾದ ಲಾಭವೆಷ್ಟು, ಹಾನಿಯೆಷ್ಟು ಎಂಬುದು ಕಾವ್ಯವಿಮರ್ಶೆಗೆ ಸಂಬಂಧಿಸಿದ ಪ್ರಶ್ನೆಯೆ ಹೊರತು, ಕಾವ್ಯಮೀಮಾಂಸೆಗಲ್ಲ. ಈ ನವ್ಯ ಕಾವ್ಯಮೀಮಾಂಸೆ ತುಂಬ ಕುತೂಹಲಕರವಾಗಿದೆ, ವಿಚಾರ ಪ್ರಚೋದಕವಾಗಿದೆ.
-೭-
ಕಾಲದಿಂದ ಕಾಲಕ್ಕೆ ಕಾವ್ಯದಲ್ಲಿ ಆಗುವ ಬದಲಾವಣೆಗಳು ಕಾವ್ಯಮೀಮಾಂಸೆಯ ಮೇಲೂ ಪರಿಣಾಮ ಮಾಡುತ್ತವೆ. ಯಾಕೆಂದರೆ ಕಾವ್ಯದಲ್ಲಾಗುವ ಬದಲಾವಣೆಗಳು ಕವಿ ಮನೋಧರ್ಮದಲ್ಲಾಗುವ ಬದಲಾವಣೆಗಳು; ಕವಿ ಮನೋಧರ್ಮದಲ್ಲಾಗುವ ಬದಲಾವಣೆಗಳು ಆ ಕಾಲಧರ್ಮದಲ್ಲಾಗುವ ಬದಲಾವಣೆಗಳು. ಈ ಕಾಲ ಎನ್ನುವುದು ಅಂದಂದಿನ ಜನಸಮಷ್ಟಿಯಲ್ಲಿ ಮೂಲಭೂತವಾಗಿ ಆದ ನಂಬಿಕೆಗಳ, ಮೌಲ್ಯಗಳ, ಸಂಸ್ಕಾರಗಳನ್ನವಲಂಬಿಸಿದೆ. ಹೀಗೆ ಕಾಲ ಅಥವಾ ಯುಗಧರ್ಮ ಅಂದಂದಿನ ಕಾವ್ಯಮೀಮಾಂಸೆಯನ್ನು ರೂಪಿಸುತ್ತದೆ.
ಕಾವ್ಯ ಎಂಬುದು ಕವಿಯ ಕರ್ಮ. ಕವಿ ಉಳಿದವರಿಗಿಂತ ವಿಶೇಷ ಸಂವೇದನಾ ಶೀಲನಾದವನು. ಅವನು ತನ್ನ ಪ್ರತಿಭಾ ಬಲದಿಂದ ತನ್ನ ಸುತ್ತಣ ಲೋಕದ ಸಂವೇದನಾರೂಪವಾದ ಅನುಭವಗಳಿಗೆ ಶಬ್ದಾರ್ಥರೂಪದಲ್ಲಿ ಅಭಿವ್ಯಕ್ತಿಯನ್ನು ಕೊಡುತ್ತಾನೆ. ಈ ಕಲಾರೂಪವಾದ ಅಭಿವ್ಯಕ್ತಿ ಸಹೃದಯರಲ್ಲಿ ಅಥವಾ ಓದುಗರಲ್ಲಿ ಒಂದು ಬಗೆಯ ರಸಾನುಭವವನ್ನುಂಟು ಮಾಡುವುದರ ಮೂಲಕ ಅಸ್ವಾದ್ಯವಾಗುತ್ತದೆ. ಸ್ಥೂಲವಾಗಿ ಹೇಳುವುದಾದರೆ ಇದಿಷ್ಟೇ ಕಾವ್ಯಮೀಮಾಂಸೆ; ಕವಿ-ಕಾವ್ಯ-ವಿಚಾರ. ಈ ವಿಚಾರದಲ್ಲಿ ಪ್ರಾಚೀನರಿಂದ ಆಧುನಿಕರ ತನಕ ಭಿನ್ನಾಭಿಪ್ರಾಯವಿಲ್ಲ; ದಿವ್ಯರಿಂದ ಹಿಡಿದು ನವ್ಯರ ತನಕ ಇದು ಅಂಗೀಕೃತವಾಗುವ ಅಭಿಪ್ರಾಯ.
ಆದರೆ ಭಿನ್ನಾಭಿಪ್ರಾಯ ತಲೆದೋರುವುದು, ಕಾವ್ಯದ ಪ್ರಯೋಜನವನ್ನು ಕುರಿತ ಪ್ರಶ್ನೆ ಬಂದಾಗ, ಕಾವ್ಯಕ್ಕೆ ಜೀವನದೊಂದಿಗೆ ಇರಬೇಕಾದ ಸಂಬಂಧಗಳ ಮಾತು ಬಂದಾಗ. ಯಾವ ಕಾಲದ ಕಾವ್ಯನಿರ್ಮಿತಿಯೂ ಮೂಲತಃ ಅಂದಂದಿನ ‘ಕಾವ್ಯ ಪ್ರಯೋಜನ’ವನ್ನು ಕುರಿತ ಜನದ ನಂಬಿಕೆ ಕಲ್ಪನೆಗಳ ಮೇಲೆ ನಿಂತಿದೆಯೆಂಬುದು ಸ್ವಾರಸ್ಯವಾಗಿದೆ. ನಿದರ್ಶನಕ್ಕೆ ನಮ್ಮ ಪ್ರಾಚೀನಲಂಕಾರಿಕರ ಪ್ರಕಾರ ಮತ್ತು ಕವಿಗಳ ಪ್ರಕಾರ ಕಾವ್ಯ ಎಂಬುದು ಚತುರ್ವಿಧ ಫಲಪ್ರಾಪ್ತಿಗೆ ಸಾಧಕವಾದದ್ದು. ಅದರಲ್ಲಿಯೂ ಮೋಕ್ಷವೇ ಪರಮಫಲ ಎಂದು ತಿಳಿದದ್ದು. ಹೀಗೆ ಆಧ್ಯಾತ್ಮಿಕ ಪ್ರಯೋಜನವನ್ನೇ ಯಾವಾಗ ಕಾವ್ಯ ಗುರಿಯಾಗಿ ಇರಿಸಿಕೊಂಡಿತೋ,ಆಗ ಧರ್ಮಪ್ರಸಾರಕ್ಕೆ, ತತ್ವಬೋಧೆಗೆ ಕಾವ್ಯ ಒಂದು ಮಾಧ್ಯಮವಾಗಬೇಕಾಯಿತು. ಕಾವ್ಯದಲ್ಲಿ ರಸವೊಂದೇ ಪ್ರಧಾನವಲ್ಲವೆ, ನೀತಿ ತತ್ವ ಧರ್ಮಗಳು ಇರಬೇಕೇ ಇರಬಾರದೆ, ಇದ್ದರೆ ಹೇಗಿರಬೇಕು ಎನ್ನುವ ಪ್ರಶ್ನೆಗಳು ಪ್ರಾಚೀನಾಲಂಕಾರಿಕರಲ್ಲಿ ಎದ್ದರೂ, ಅದೂ ಗೌಣವಾಗಿ ಧರ್ಮವೇ ಕಲಾಸ್ಫೂರ್ತಿಯಾದ ಈ ದೇಶದಲ್ಲಿ, ಧರ್ಮವನ್ನೆ ಕಾವ್ಯದ ಗುರಿಯನ್ನಾಗಿ ಹೇಳುವ ಅಭ್ಯಾಸ ಮುಂದಾಯಿತು. ಇದರಿಂದ ಕವಿ, ಕವಿಯ ವ್ಯಕ್ತಿತ್ವಗಳನ್ನು ಕುರಿತು ಕಾವ್ಯಮೀಮಾಂಸೆ ಹೇಳಿತು: ಕವಿ ಶುಚಿಯಾಗಿರಬೇಕು, ನಿಷ್ಠಾವಂತನಾಗಿರಬೇಕು, ಇತ್ಯಾದಿ ಇತ್ಯಾದಿ. ಹೀಗಾಗಿ ಕವಿ ಒಬ್ಬ ಸಾಧಕ, ದಿವ್ಯವಾಣಿಯ ಉಪಾಸಕ, ಮಾಧ್ಯಮ, ಲಿಪಿಕಾರ. ಕಾವ್ಯವೆಂಬುದೊಂದು ದಿವ್ಯಕೃಪಾರೂಪವಾದುದು; ಪ್ರತಿಭೆ ಎಂಬುದೊಂದು ದೈವಕೃಪೆ; ಅದರ ಮಾಧ್ಯಮವಾಗಿ ಕವಿ, ಸ್ಫೂರ್ತಿಯ ಕ್ಷಣಗಳಲ್ಲಿ ಕಾವ್ಯವನ್ನು ರಚಿಸುತ್ತಾನೆ. ಇಂಥ ಕಾವ್ಯನಿರ್ಮಿತಿಗೆ ವಸ್ತು ಉದಾತ್ತವಾಗಿರಬೇಕು; ಉದಾತ್ತನ ಚಾರಿತ್ರ್ಯವೇ ಉಳಿದವರಿಗೆ ಮಾರ್ಗದರ್ಶನವಾದೀತು. ಹೀಗಾದಾಗ ಕಾವ್ಯ ಧರ್ಮಾರ್ಥಕಾಮ ಮೋಕ್ಷಗಳನ್ನು ಸಾಧಿಸುತ್ತದೆ. ಕಾವ್ಯಪಾರಾಯಣದಿಂದ ವೇದಾಪಾರಾಯಣದ ಫಲ, ಗಂಗಾದಿ ತೀರ್ಥಸ್ನಾನ ಫಲ ಇತ್ಯಾದಿಗಳು ಲಭಿಸುತ್ತವೆ.
ಈ ಶತಮಾನದ ಹೊತ್ತಿಗೆ ಬಂದ ನವೋದಯ ಕವಿಗಳ ಕಾಲಕ್ಕೆ ಆಗಲೇ ಕಾವ್ಯ ವಸ್ತುವಿನಲ್ಲಿ, ಕವಿಯ ರೀತಿಯಲ್ಲಿ ಬದಲಾವಣೆಯಾಯಿತು. ಸಾಮಾನ್ಯವಾದ ವಸ್ತು, ಸಾಮಾನ್ಯರ ಭಾಷೆ, ಇದು ಕಾವ್ಯದ ಮೂಲಸಾಮಗ್ರಿ. ಒಗಟು, ಬೆಡಗು, ಚಮತ್ಕಾರ, ಪಾಂಡಿತ್ಯ ಕಡಿಮೆಯಾಯಿತು. ದೈನಂದಿನ ಸರಳ ಸಾಧಾರಣ ಬದುಕೂ, ಸಂಗತಿಯೂ ಕಾವ್ಯವಾಗಬಲ್ಲುದು; ದೈನಂದಿನ ಸಾಮಾನ್ಯ ಜನದ ಭಾಷೆಯೂ ಕಾವ್ಯಭಾಷೆಯಾಗಬಲ್ಲುದು. ಇದು ನವೋದಯ ಕನ್ನಡ ಕವಿಗಳ-ಅವರಿಗೆ ಪ್ರಚೋದನೆಯಾದ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ-ಕಾವ್ಯಮೀಮಾಂಸೆ. ಕಾವ್ಯಕ್ಕೆ ಏನು ಬೇಕಾದರೂ ವಸ್ತುವಾಗಬಲ್ಲದು ಎಂದು ಪ್ರಾಚೀನಾಲಂಕಾರಿಕರು ಘೋಷಿಸಿದ್ದರೂ, ಕಾವ್ಯಕ್ಕೆ ವಸ್ತುವಾಗತಕ್ಕವು ಕೆಲವೇ ಎಂಬಂತೆ ನಮ್ಮ ಹಳೆಯ ಕವಿಗಳು ನಡೆದುಕೊಂಡರು. ಇದಕ್ಕೆ ಅಪವಾದರೂಪವಾದ ಕವಿಗಳೂ ಕೃತಿಗಳೂ ಇಲ್ಲವೆಂದಲ್ಲ; ಇದ್ದರೂ ವಿರಳ. ಆದರೆ ನವೋದಯ ಕವಿಗಳು ಕಾವ್ಯ ವಸ್ತುವಿನ ಬಗ್ಗೆ ಮತ್ತು ಅಭಿವ್ಯಕ್ತಿಯ ರೀತಿಯ ಬಗ್ಗೆ ತಾಳಿದ ಎಚ್ಚರ, ಮಾಡಿತೋರಿಸಿದ ರಚನೆ ತೀರಾ ಭಿನ್ನವಾಗಿದೆ. ವಸ್ತು-ರೀತಿಯಲ್ಲಿ ವೈವಿಧ್ಯವನ್ನು ತಂದರೂ ಈ ಕಾಲದ ಕವಿಗಳು ಒಂದು ರೀತಿಯ ಆದರ್ಶವಾದಿಗಳೇ. ಕಾವ್ಯ ಎಂಬುದೊಂದು ಅಪೌರುಷೇಯವಾದ ಕ್ರಿಯೆ ಎಂಬ ಹಿಂದಿನ ನಂಬಿಕೆಯನ್ನು ಇವರು ಪೋಷಿಸಿಕೊಂಡರು. ಪ್ರಕೃತಿಯಲ್ಲಿ ಪರಾಶಕ್ತಿಯನ್ನು ಸೌಂದರ‍್ಯದ ಮೂಲಕ ದರ್ಶಿಸುವ, ಕಾವ್ಯವೆಂಬುದು ಸೌಂದರ್ಯೋಪಾಸನೆ ಎನ್ನುವ, ಒಂದು ನವೀನ ಧಾರ್ಮಿಕತೆ ಇವರಲ್ಲಿ ಬಂದಿತು. ಹಿಂದಿನ ಕವಿಗಳ ಧಾರ್ಮಿಕತೆ ಬಹುಮಟ್ಟಿಗೆ ಅವರವರು ಹುಟ್ಟಿ ಬಂದ ಮತ-ಧರ್ಮ ಸಂಬಂಧಿಯಾದದ್ದಾದರೆ, ನವೋದಯ ಕವಿಗಳಿಗೆ ಸೌಂದರ‍್ಯಧರ್ಮ ಪ್ರಧಾನವಾಯಿತು. ಪ್ರಕೃತಿ ಸೌಂದರ‍್ಯಾರಾಧನೆ, ಯಾವ ಧಾರ್ಮಿಕ ಪೂಜಾವಿಧಿಗಿಂತಲೂ ಕಡಿಮೆಯಾದುದಲ್ಲ ಎಂಬ ಶ್ರದ್ಧೆ ಪ್ರಧಾನವಾಯಿತು. ಹಿಂದಿನ ಹಾಗೆ, ಕಾವ್ಯಗಳಿಂದಲೆ ಕವಿಯ ಜಾತಿ ಮತ ದೇಶಗಳನ್ನು ಗುರುತಿಸುವುದು ಈ ಕವಿಗಳಲ್ಲಿ ಸಾಧ್ಯವಿಲ್ಲವೆಂಬಷ್ಟರಮಟ್ಟಿಗೆ ಈ ಕವಿಗಳ ಮನೋಧರ್ಮ ಸಾರ್ವತ್ರಿಕವಾದದ್ದು ಇಲ್ಲಿನ ವಿಶೇಷ. ಇದರ ಜೊತೆಗೆ ಭಾರತೀಯ ಪರಂಪರೆಯ ಹಿನ್ನೆಲೆ,ಅರವಿಂದರು, ವಿವೇಕಾನಂದರು, ಗಾಂಧಿ, ಮೊದಲಾದ ವಿಭೂತಿ ಪುರುಷರ ತಾತ್ವಿಕ ಪುಷ್ಟಿಯಲ್ಲಿ ಮತ್ತು ಪಾಶ್ಚಾತ್ಯ ರೊಮ್ಯಾಂಟಿಕ್ ಕವಿಗಳಾದ ಷೆಲ್ಲಿ, ಕೀಟ್ಸ್, ವರ್ಡ್ಸ್‌ವರ್ತ್ ಮೊದಲಾದ ಕವಿಗಳ ಕಾವ್ಯಧರ್ಮದ ರುಚಿಯಲ್ಲಿ ಈ ನವೋದಯ ಕವಿಗಳ ಕಾವ್ಯಮೀಮಾಂಸೆ ಬಹುಮಟ್ಟಿಗೆ ತಾತ್ವಿಕವಾಯಿತು. ಕವಿಯ ಸೌಂದರ‍್ಯಾನುಭವ ಒಂದು ರಸತಪಸ್ಸು; ಕವಿ ಒಬ್ಬ ವಿಭೂತಿ; ಕಾವ್ಯ ಕವಿಯ ದರ್ಶನದ ಅಭಿವ್ಯಕ್ತಿ; ಕವಿಯ ದರ್ಶನದಲ್ಲಿ ಆಲೋಕಸತ್ಯಗಳೂ ಪ್ರಕಟವಾಗುತ್ತವೆ; ಕಾವ್ಯ ಎಂಬುದು ಸಚ್ಚಿದಾನಂದದ ಮಂತ್ರ; ಕಾವ್ಯ ಆತ್ಮಶ್ರೀಯನ್ನೂ, ಸಾಮಾಜಿಕ ಕಲ್ಯಾಣವನ್ನೂ, ಎಲ್ಲರಲ್ಲಿಯೂ ರಸದರ್ಶನವನ್ನುಂಟುಮಾಡುವುದರ ಮೂಲಕ ಜಡತೆಯನ್ನು ಹೋಗಲಾಡಿಸಿ ಚೈತನ್ಯವನ್ನೂ ಆತ್ಮಸಂಸ್ಕಾರವನ್ನೂ ಪ್ರಚೋದಿಸುತ್ತದೆ-ಎಂಬುದು ಈ ಕಾವ್ಯಮೀಮಾಂಸೆಯ ಮುಖ್ಯಾಂಶಗಳು. ಹೀಗಾಗಿ ಕವಿ ಮತ್ತು ಕಾವ್ಯಪ್ರಯೋಜನದ ವಿಚಾರದಲ್ಲಿ ನವೋದಯ ಕವಿಗಳ ವಿಚಾರಗಳು ಪರಂಪರಾಗತವಾಗಿವೆ; ಧ್ಯೇಯಾತ್ಮಕವಾಗಿವೆ. ಜೊತೆಗೆ ಮನಸ್‌ಶಾಸ್ತ್ರದ ಪರಿಚಯದಿಂದ ಎಷ್ಟೋ ಹೊಸ ಕೀಲಿಕೈಗಳು ಇವರಿಗೆ ದೊರೆತರೂ, ಅದರಿಂದಲೂ ಸಹ ಇವರು ಅಪೌರುಷೇಯಾಂಶಗಳ ನಂಬಿಕೆಯನ್ನೆ ಪೋಷಿಸಿಕೊಂಡರು. ಕಾವ್ಯ ಎಂಬುದು ವಿರಾಡ್ ಮನಸ್ಸಿನ ಅಭಿವ್ಯಕ್ತಿ; ಅದರಲ್ಲಿ ವ್ಯಕ್ತವಾಗಿವುದು ‘ಸಮಷ್ಟಿಚಿತ್’ ಇತ್ಯಾದಿ ಮಾತುಗಳಲ್ಲಿ ಅವರು ಮನಸ್‌ಶಾಸ್ತ್ರದ ಮಾತುಗಳಿಗೂ ಯೌಗಿಕ ಪರಿಭಾಷೆಯ ಬಣ್ಣ ಬರುವಂತೆ ಮಾಡಿದರು. ಇಲ್ಲಿ ಯೋಗ ವಿಜ್ಞಾನಕ್ಕೆ ಮನೋವಿಜ್ಞಾನ ನೆರವಾಯಿತು. ಕವಿಯ ವಿಚಾರದಲ್ಲಿಯೂ, ಅದೇ ಶುಚಿಯ, ಧ್ಯಾನದ, ತಪಸ್ಸಿನ ಮಾತು ಪ್ರಧಾನವಾಯಿತು. ಆತ್ಮೋದ್ಧಾರವೇ ಕಾವ್ಯಪ್ರಯೋಜನದ ಪಲ್ಲವಿಯಾಯಿತು. ಆದರೆ ಈ ನವೋದಯ ಕಾಲದ ಕವಿಗಳು, ಕಾವ್ಯವಿರ್ಮಶಕರು, ಪ್ರಾಚೀನಾಲಂಕಾರಿಕರ ಅಭಿಪ್ರಾಯಗಳನ್ನೂ ತತ್ವಗಳನ್ನೂ ಪುನರ್‌ಪರಿಶೀಲಿಸಿ, ಅವು ಇಂದಿಗೂ ಸಾರ್ವಕಾಲಿವಾದವುಗಳೆಂದು ಅಂಗೀಕರಿಸಿದರು. ಈ ಪರಂಪರೆಯ ಪ್ರಜ್ಞೆ ಕವಿಗೆ, ಕಾವ್ಯಕ್ಕೆ ಕಾವ್ಯಮೀಮಾಂಸೆಗೆ ಅಗತ್ಯವಾದದ್ದು, ಸತ್ವದಾಯಕವಾದದ್ದು ಎಂಬ ವಿಷಯವನ್ನು ಎತ್ತಿಹಿಡಿದರು. ಪ್ರಾಚೀನದ್ದು ಮಾತ್ರವಲ್ಲ, ಪಾಶ್ಚಾತ್ಯರಿಂದ ಬಂದ ಹೊಸ ಹೊಸ ಆಲೋಚನೆಗಳನ್ನೂ ಭಾವನೆಗಳನ್ನೂ ಅನುದ್ವಿಗ್ನರಾಗಿ ಎತ್ತಿಕೊಂಡು ಪರಿಶೀಲಿಸಿ ತೌಲನಕ್ರಮದಲ್ಲಿ ಅಭ್ಯಾಸ ಮಾಡಿ, ಭಾರತೀಯ ಕಾವ್ಯಮೀಮಾಂಸೆ ಪಾಶ್ಚಾತ್ಯ ಕಾವ್ಯಮೀಮಾಂಸೆಗಿಂತ ಯಾವ ಯಾವ ದಿಕ್ಕುಗಳಲ್ಲಿ ಮುಂದುವರಿದಿದೆ ಎಂಬುದನ್ನೂ, ಪಾಶ್ಚಾತ್ಯ ಕಾವ್ಯಮೀಮಾಂಸೆಯ ಸಹಾಯದಿಂದ ಮತ್ತು ನಮ್ಮದರೊಂದಿಗೆ ಅದನ್ನು ಸಮನ್ವಯಿಸಿಕೊಂಡು ನೋಡುವುದರಿಂದ ಎಂಥ ಲಾಭವಿದೆ ಎಂಬುದರ ನಿರ್ದೇಶನವನ್ನೂ ನೀಡಿ ಕಾವ್ಯಮೀಮಾಂಸೆಯ ಕ್ಷೇತ್ರವನ್ನು ಫಲವತ್ತಾಗಿ ಮಾಡಿದರು.
ಕನ್ನಡ ಕಾವ್ಯದಲ್ಲಿ ಮೂರನೆಯದೊಂದು ಘಟ್ಟ ನವ್ಯಕವಿಗಳ ಕಾಲದ್ದು. ಈ ನವ್ಯಕಾವ್ಯ ಪಾಶ್ಚಾತ್ಯ ಪ್ರೇರಣೆಯಿಂದ ಕಾವ್ಯದ ರೂಪ-ಸ್ವರೂಪದ ಬಗ್ಗೆ ಹೇಗೋ ಹಾಗೆ ಕಾವ್ಯಮೀಮಾಂಸೆಯನ್ನೂ ರೂಪಿಸಿಕೊಂಡಿತು. ನವೋದಯ ಕವಿತೆಯಂತೆ, ಇದರಬದಲಾವಣೆಯೂ ಕಾವ್ಯದ ವಸ್ತು-ರೀತಿಗಳು ಕುರಿತದ್ದೇ. ಆದರೆ ನವೋದಯ ಕವಿಗಳು ಸರಳ ಸಾಧಾರಣತೆಯ ಕಡೆಗೆ ತಮ್ಮ ಗಮನವನ್ನು ತಿರುಗಿಸಿದ್ದರೂ ಮುಖ್ಯವಾಗಿ ಅವರದು ಸೌಂದರ್ಯಪರವಾದ ದೃಷ್ಟಿಯಾಗಿತ್ತು. ನವ್ಯಕವಿಗಳು ಆ ಸೌಂದರ್ಯ ಪ್ರಿಯತೆಯನ್ನು ನಿರಾಕರಿಸಿ ಜೀವನದ ಆತೃಪ್ತಿಯ, ನಿರಾಶೆಯ, ಬೇಸರದ, ಬೀಭತ್ಸದ ಕಡೆಗೆ ಹಾಯಿಸಿದರು. ಕಾವ್ಯ ಕೇವಲ ಸುಂದರಾ ಸುಂದರಗಳನ್ನು ಕುರಿತದ್ದಲ್ಲ; ಈ ಎರಡರ ಹಿಂದಿರುವ ಅತೃಪ್ತಿ, ಭಯ, ನಿರಾಶೆಗಳನ್ನು ತೆರೆದು ತೋರತಕ್ಕದ್ದು ಎನ್ನುವುದು ಈ ಕಾವ್ಯಮೀಮಾಂಸೆಯ ಪಲ್ಲವಿಯಾಗಿದೆ. ಕಾವ್ಯ ವಾಸ್ತವ ಹಾಗೂ ಸಂಕೀರ್ಣವಾದ ಬದುಕಿನ ಅಭಿವ್ಯಕ್ತಿ. ಅನುಭವದ ಸರಳ ಮುಖವನ್ನು ಸರಳಗೊಳಿಸಿದ ಅನುಭವವನ್ನು ವ್ಯಕ್ತಿಪಡಿಸಿದರೆ ಕಾವ್ಯ ಸಾರ್ಥಕವಾಗುವುದಿಲ್ಲ ಅಥವಾ ಅನುಭವಕ್ಕೆ ಒಗ್ಗದ, ಬಾರದ ತತ್ವಗಳನ್ನೋ ವೇದಾಂತವನ್ನೋ ಕುರಿತು, ಅದೇ ತನ್ನ ಅನುಭವವೆಂದು ಭ್ರಮೆಗೊಂಡು ಉಜ್ವಲವಾದ ಮಾತುಗಳಲ್ಲಿ ನೆಯ್ಯುವುದು ಕಾವ್ಯವಲ್ಲ. ಜೀವನದ ತೀವ್ರವಾದ ತುಡಿತವನ್ನು, ಅದು ಇದ್ದಂತೆಯೇ ಒಪ್ಪಿಕೊಂಡು ಅದರ ಪದರ ಪದರಗಳನ್ನೂ ಅನುಭವಿಸಿ, ಆ ಸಂಕೀರ್ಣಾನುಭವವನ್ನು ಆಡುಮಾತಿಗೆ ಸಮೀಪವಾದ ಭಾಷೆಯಲ್ಲಿ ಹಿಡಿದು, ಕವಿ ಮಾತಾಡಿದಹಾಗಿರುವ ರೀತಿಯಲ್ಲಿ ಅಭಿವ್ಯಕ್ತಪಡಿಸಿದರೆ ಅದು ನಿಜವಾದ ಕಾವ್ಯವಾಗುತ್ತದೆ. ಇದು ನವ್ಯ ಕಾವ್ಯಮೀಮಾಂಸೆ. ಇದರ ಪ್ರಕಾರ ಕಾವ್ಯ ಬದುಕಿನ ಬಗ್ಗೆ ಸಂವೇದನೆಗಳನ್ನೂ ದೃಷ್ಟಿಕೋನಗಳನ್ನೂ ತೆರದು ಓದುಗನ ತಿಳಿವಿನಪರಿಧಿಯನ್ನು ವಿಸ್ತರಿಸಬೇಕು. ಇನ್ನೊಂದು ವಿಚಾರವೆಂದರೆ, ಈ ಕಾವ್ಯಮೀಮಾಂಸೆ ಕವಿಯ ವ್ಯಕ್ತಿತ್ವದ ಬಗೆಗೂ ಕಾವ್ಯ ನಿರ್ಮಿತಿಯ ಬಗೆಗೂ ಕೆಲವು ಅಂಶಗಳನ್ನು ಹೇಳುತ್ತದೆ. ಕಾವ್ಯೋದ್ದೇಶ ವಾಸ್ತವ ಪ್ರಜ್ಞೆಯ ಪ್ರಚೋದನೆಯಾದದ್ದರಿಂದ ಹಿಂದಿನಂತೆ ಕವಿಗೆ, ಕಾವ್ಯಕರ್ಮಕ್ಕೆ ಅಂಟಿಕೊಂಡ ಆದರ್ಶದ, ಆಧ್ಯಾತ್ಮಿಕವಾದ ನಂಬಿಕೆಗಳು ಇಲ್ಲಿ ಉದುರಿಹೋದವು. ಕವಿ ಒಬ್ಬ ಮನುಷ್ಯ; ಅವನು ದೈವೀಕೃಪೆಗೆ ಒಳಗಾದವನೆಂದು ತಿಳಿಯುವ ಅಗತ್ಯವಿಲ್ಲ; ಅವನು ಸೂಕ್ಷ್ಮ ಸಂವೇದನಾಶೀಲ- ನೆಂಬುದಷ್ಟೇ ನಿಜ. ಅವನು ‘ಮಡಿ’ಯಾಗಿರಬೇಕು, ಶುಚಿಯಾಗಿರಬೇಕು ಎಂಬ ಮಾತುಗಳಿಗೆ ಇಲ್ಲಿ ಸ್ಥಳವಿಲ್ಲ. ಅವನ ವ್ಯಕ್ತಿಜೀವನಕ್ಕೂ, ಕಾವ್ಯಜೀವನಕ್ಕೂ ಸಂಬಂಧ ಕಲ್ಪಿಸಬಾರದು. ವ್ಯಕ್ತಿಯ ಶೀಲಾಶ್ಲೀಲ, ನೈತಿಕ, ಅನೈತಿಕ ಭಾವನೆಗಳಿಗೂ ‘ಕವಿ’ಗೂ ಸಂಬಂಧವಿಲ್ಲ. ಕವಿ ವ್ಯಕ್ತಿಯ ಮಡಿ-ಮೈಲಿಗೆಗಳು ಅವನ ಕಾವ್ಯಶಕ್ತಿಯನ್ನು ನಿರ್ಣಯಿಸಲಾರವು. ಕಾವ್ಯ ಎನ್ನುವುದು ಕವಿ ಬದುಕನ್ನು ಜೀವಂತವಾಗಿ, ತೀವ್ರವಾಗಿ ಅನುಭವಿಸಿದ್ದರ ಅಭಿವ್ಯಕ್ತಿ. ಅಲ್ಲಿ ಅಪೌರುಷೇಯವಾದದ್ದೇನೂ ಇಲ್ಲ. ಕವಿ ಸ್ಫೂರ್ತಿಯಿಂದಲೂ ಬರೆಯಬಹುದು; ಆದರೆ ಕವಿ ಕೇವಲ ಸ್ಫೂರ್ತಿಯಿಂದಲೇ ಕಾವ್ಯ ಬರೆಯುವುದಿಲ್ಲ; ಅಲ್ಲದೆ ಸ್ಪೂರ್ತಿ ಎಂಬುದು ನವ್ಯಕವಿಗೆ ಹಿಂದಿನವರು ಭಾವಿಸಿದಂತೆ ದೈವಿಕವಾದದ್ದಲ್ಲ; ಅದೊಂದು ಮಾನಸಿಕ ಚಟುವಟಿಕೆಯಲ್ಲದೆ ಹೆಚ್ಚೇನಲ್ಲ. ಕಾವ್ಯ, ಸುಪ್ತಪ್ರಜ್ಞೆಯಲ್ಲಿ ಹೊಯ್ದಾಡುತ್ತಿರುವ ಭಾವನೆಗಳಿಗೆ ಆಕಾರ ನೀಡುವ ‘ಸಾವಯವ ಶಿಲ್ಪದಸಮಗ್ರೀಕರಣ’ ತಂತ್ರ. ಅದೊಂದು ವಿಶೇಷ ಶ್ರಮದಿಂದ, ನಿರಂತರ ಚಿಂತನೆಯಿಂದ ರೂಪಗೊಂಡ ಶಿಲ್ಪ; ಯಾವುದೋ ಒಂದು ಸಲೀಸಾದ ಅಥವಾ ತನಗಿಂತ ಹಿಂದಿನವರು ಸಿದ್ಧಪಡಿಸಿದ ಅಥವಾ ತಾನೇ ಸಿದ್ಧಪಡಿಸಿಟ್ಟುಕೊಂಡ ಪಡಿಯಚ್ಚಿನಲ್ಲಿ ಹರಿದುಬರತಕ್ಕದ್ದಲ್ಲ. ಒಂದೊಂದು ಕವಿತೆಯೂ, ಕವಿ ಭಾಷೆಯೊಂದಿಗೆ ನಡೆಯಿಸಿದ ಹೋರಾಟದ ಪರಿಣಾಮ.
ಈ ನವ್ಯ ಕಾವ್ಯಮೀಮಾಂಸೆ ಸ್ವಾರಸ್ಯವಾಗಿದೆ; ಪೌರುಷೇಯವಾಗಿದೆ. ಆದರೆ ಹಿಂದಿನವರ ಕಾವ್ಯತತ್ವಗಳ ಬಗೆಗೆ ಒಂದು ಬಗೆಯ ಸ್ಪರ್ಧೆಯಿಂದ ಎಂಬಂತೆ, ಕಾವ್ಯ ಹಾಗೂ ಕಾವ್ಯಮೀಮಾಂಸೆಯ ದಿಕ್ಕು ಬದಲಾಗಿದೆ; ಹಿಂದಿನವರ ಎಷ್ಟೋ ಭಾವನೆಗಳಿಗೆ ಅಪಾರ್ಥ ಕಲ್ಪಿಸುವ, ಲಘುವಾಗಿ ಟೀಕಿಸುವ ಮಾತುಗಳೂ ಇದರಲ್ಲಿ ಬಂದಿವೆ. ಆದರೂ ನಿಚ್ಚಳವಾದ ಬುದ್ಧಿಯನೆಲೆಗಟ್ಟಿನ ಮೇಲೆ ವಾಸ್ತವ ಪ್ರಜ್ಞೆಯಿಂದ ಕಟ್ಟಿ ನಿಲ್ಲಿಸಿದ ಈ ಕಾವ್ಯಮೀಮಾಂಸೆ ತನ್ನ ನಾವೀನ್ಯತೆಯಿಂದಲೂ ಪೌರುಷದಿಂದಲೂ ತುಂಬ ವಿಚಾರಪ್ರದವಾಗಿದೆ.
-೮-
ಕಳೆದ ಕಾಲುಶತಮಾನದಲ್ಲಿ ಬೆಳೆದಿರುವ ಕನ್ನಡದ ಕಾವ್ಯಮೀಮಾಂಸೆಯನ್ನು ಗಮನಿಸಿದರೆ, ಈ ವಿಚಾರ ಸಾಹಿತ್ಯ ತಕ್ಕಮಟ್ಟಿಗೆ ಬೆಳೆದಿದೆ ಎನ್ನುವುದು ಕಾಣುತ್ತದೆ. ಕಾವ್ಯಮೀಮಾಂಸೆಯ ಸಾಹಿತ್ಯದ ಅನುವಾದ ಆಶಾದಾಯಕವಾಗಿದ್ದರೂ ತೃಪ್ತಿಕರವಾಗಿಲ್ಲ. ಪಾಶ್ಚಾತ್ಯ ಕಾವ್ಯಮೀಮಾಂಸೆಯ ಕೃತಿಗಳ ಅನುವಾದ ಏನೇನೂ ಸಾಲದು. ಆ ದಿಕ್ಕಿನಲ್ಲಿ ಪ್ರಮುಖ ವಿಚಾರವಂತರ ಸಾಹಿತ್ಯಮೀಮಾಂಸೆಯನ್ನು ಕುರಿತ ಗ್ರಂಥಗಳು ಇನ್ನೂ ಹೆಚ್ಚಾಗಿ ಅನುವಾದವಾಗಬೇಕಾಗಿದೆ. ಕಡೆಯ ಪಕ್ಷ ಸಾಹಿತ್ಯ ಮೀಮಾಂಸೆಯನ್ನು ಅತ್ಯುತ್ತಮವಾದ ಲೇಖನಗಳನ್ನಾದರೂ ಅನುವಾದ ಮಾಡಿ ಸಂಗ್ರಹ ರೂಪದಲ್ಲಿ ತರಬೇಕು. ಇದರ ಜೊತೆಗೆ ಭಾರತೀಯ ಕಾವ್ಯಮೀಮಾಂಸೆಯನ್ನು ಕುರಿತು, ಅನುವಾದವಾಗದೆ ಇರುವ ಪ್ರಮುಖ ಲಕ್ಷಣ ಗ್ರಂಥಗಳೆಲ್ಲದರ ಅನುವಾದ ನಡೆಯಬೇಕು. ಭರತಮುನಿಯ ನಾಟ್ಯಶಾಸ್ತ್ರ ಇನ್ನೂ ಕನ್ನಡಕ್ಕೆ ಬಂದಿಲ್ಲ. ಭಾರತೀಯ ಕಾವ್ಯಮೀಮಾಂಸೆಯನ್ನು ಕುರಿತು ಭಾರತೀಯ ಮಹಾ ವಿದ್ವಾಂಸರು ಇಂಗ್ಲಿಷ್‌ನಲ್ಲಿ ರಚಿಸಿರುವ ಗ್ರಂಥಗಳ ಕನ್ನಡ ಅನುವಾದವೂ ನಡೆಯಬೇಕು; ಹಾಗೆಯೆ ಕುವೆಂಪು ಅವರ “ರಸೋವೈಸಃ”, ಪು.ತಿ.ನ. ಅವರ “ಕಾವ್ಯ ಕುತೂಹಲ”, ತೀ.ನಂ.ಶ್ರೀಯವರ ‘ಭಾರತೀಯ ಕಾವ್ಯಮೀಮಾಂಸೆ’ ಇಂಥ ಗ್ರಂಥಗಳು ಇತರ ಭಾರತೀಯ ಭಾಷೆಗಳಿಗೂ, ಇಂಗ್ಲಿಷಿಗೂ ಸಮರ್ಥರಾದವರಿಂದ ಅನುವಾದವಾಗಬೇಕು. ಭಾರತೀಯ ಹಾಗೂ ಪಾಶ್ಚಾತ್ಯ ಕಾವ್ಯಮೀಮಾಂಸೆಯನ್ನು ತೌಲನ ಕ್ರಮದಲ್ಲಿ ವಿವೇಚಿಸುವ ಪ್ರಮಾಣ ಗ್ರಂಥ ಇನ್ನೂ ಬರಬೇಕಾಗಿದೆ. ಮನಸ್‌ಶಾಸ್ತ್ರದ ಸಹಾಯದಿಂದ ಭಾರತೀಯ ಕಾವ್ಯಮೀಮಾಂಸೆಯ ಎಷ್ಟೋ ಸಂಗತಿಗಳ ವಿವರವಾದ ಪರಿಶೀಲನೆ ನಡೆಯಬೇಕಾಗಿದೆ. ಅದಕ್ಕಿಂತ ಮಿಗಿಲಾಗಿ ಸಾಹಿತ್ಯ ಮತ್ತು ವಿಮರ್ಶಾ ಕ್ಷೇತ್ರದಲ್ಲಿ ತೊಡಗಿರುವ ಸೃಜನಶೀಲ ಸಾಹಿತಿಗಳಿಗೆ, ಪಾಶಾತ್ಯ ಕಾವ್ಯಮೀಮಾಂಸೆಯ ಜೊತೆಗೆ ಭಾರತೀಯ ಕಾವ್ಯಮೀಮಾಂಸೆಯ ಪರಿಚಯವೂ ಸಮರ್ಪಕವಾಗಿ ಆಗಿ, ಪಶ್ಚಿಮದಿಂದ ಎರವಲು ತಂದ ಮಾತಿನಲ್ಲೋ, ಅನುವಾದಮಾಡಿಕೊಂಡ ಮಾತಿನಲ್ಲೋ ವಿಮರ್ಶೆಯ ಪರಿಭಾಷೆಗಳನ್ನು ನಿರ್ಮಿಸುವ ಹವ್ಯಾಸ ತಪ್ಪಿ, ಎಷ್ಟೋ ಭಾರತೀಯ ಕಾವ್ಯಮೀಮಾಂಸೆಯ ಮಾತುಗಳನ್ನೆ ಕಾವ್ಯಮೀಮಾಂಸೆ ಮತ್ತು ಕಾವ್ಯ ವಿಮರ್ಶೆಯಲ್ಲಿ ಬಳಸುವ ಪರಿಣತಿ ಬರಬೇಕು. ಹಾಗಾದಾಗ ಇವತ್ತು ಒಂದೊಂದು ಭಾವನೆ, ಕಲ್ಪನೆಗಳಿಗೆ ಬಳಸಲಾಗುತ್ತಿರುವ ಸಾಹಿತ್ಯ ಮೀಮಾಂಸೆಯ ಪದಗಳಲ್ಲಿ ಒಂದು ಏಕರೂಪತೆಯಿರುವಂತಾಗಿ, ಅವರವರು ತಮಗೆ ಮನಸ್ಸಿಗೆ ಬಂದ ಪದವನ್ನು ಉಪಯೋಗಿಸುವುದರಿಂದಾಗುವ ಗೊಂದಲ ತಪ್ಪೀತು. ಇನ್ನು ಮೇಲೆ ಕನ್ನಡದ ಕಾವ್ಯಮೀಮಾಂಸೆಯ ವಲಯದಲ್ಲಿ ಆಗಬೇಕಾಗಿರುವ ಕೆಲಸದಮುಂದೆ, ಇದುವರೆಗೂ ಆಗಿರುವ ಕೆಲಸ ಏನೇನೂ ಅಲ್ಲ,ಎಂಬಂತೆ ತೋರುತ್ತದೆ. “ಆ ಕೆಲಸದಲ್ಲಿ ಭಾರತೀಯ ಕಾವ್ಯಮೀಮಾಂಸೆ ನಮ್ಮ ರಸಚೇತನದ ಗುಡಿಗೆ ಅಡಿಗಲ್ಲಾಗಿ ನಿಲ್ಲಬೇಕಾಗುತ್ತದೆ. ಏಕೆಂದರೆ ಭಾರತೀಯ ಕಾವ್ಯಮೀಮಾಂಸೆಯ-ಕವಿ, ಸಹೃದಯ, ಕಾವ್ಯಸ್ವರೂಪ, ಉದ್ದೇಶ, ಪ್ರಯೋಜನ, ಅಲಂಕಾರ, ರೀತಿ, ಧ್ವನಿ, ರಸ ಇತ್ಯಾದಿಗಳ-ಕೂಲಂಕಷವೂ ಹೃದಯಸ್ಪರ್ಶಿಯೂ ಆದ ಪರಿಚಯವಿಲ್ಲದೆ ನಮ್ಮ ಮುಂದಣ ಉತ್ತಮ ಕಾವ್ಯವಿಮರ್ಶೆ ಸಂಭವಿಸಲಾರದು.”[16]
ಗತಿಬಿಂಬ-೧೯೬೯
--------------------------------------------------------------------------------
[1] ಡಾ. ಎ.ಎನ್. ನರಸಿಂಹಯ್ಯನವರು ೧೯೪೦ರಲ್ಲಿ ಪ್ರಕಟಿಸಿದ “ಸಾಹಿತ್ಯ” ರವೀಂದ್ರರ ಸಾಹಿತ್ಯ ವಿಚಾರಗಳನ್ನು ಕುರಿತ ಪುಸ್ತಕ, ಕೃಷ್ಣಶಾಸ್ತ್ರಿಗಳ ಅನುವಾದದಲ್ಲಿರುವುದಕ್ಕಿಂತ ಹೆಚ್ಚು ಸಂಗತಿಗಳನ್ನುಳ್ಳದ್ದಾಗಿದೆ. ಇಲ್ಲಿ ೧೯೪೨ ರಿಂದ ಬಂದ ಕೃತಿಗಳನ್ನು ಮಾತ್ರ ಗಮನದಲ್ಲಿರಿಸಿಕೊಂಡಿರುವುದರಿಂದ ಆ ವಿಚಾರವನ್ನು ಇಲ್ಲಿ ಪ್ರಾಸ್ತಾಪಿಸಿಲ್ಲ.
[2] ಕೆ.ಡಿ. ಕುರ್ತುಕೋಟಿ: ಮನ್ವಂತರ-೨. ನವ್ಯಕಾವ್ಯ ಪ್ರಯೋಗ, ಪು. ೧೪.
[3] ಎಸ್.ಬಿ. ಮಿಣಜಗಿ: ಮನ್ವಂತರ-೩. ಟಿ.ಎಸ್. ಇಲಿಯಟ್ ಕವಿಯ ವಿಮರ್ಶೆಯ ವಿಚಾರಗಳು, ಪು. ೧೪.
[4] ಗೋಪಾಲಕೃಷ್ಣ ಅಡಿಗ: ಮಣ್ಣಿನ ವಾಸನೆ, ಪು. ೧೨೧-೧೨೨.
[5] ಅಲ್ಲೇ ಪು. ೭೬.
[6] ಕೆ. ನರಸಿಂಹಮೂರ್ತಿ: ಅಡಿಗರ ‘ಚಂಡೆ-ಮದ್ದಳೆ’ಯ ಹಿನ್ನುಡಿಯಲ್ಲಿ, ಪು. ೬೦.
[7] ಗೋಪಾಲಕೃಷ್ಣ ಅಡಿಗ: ಮಣ್ಣಿನ ವಾಸನೆ, ಪು. ೧೨೧.
[8] ಕೆ.ಡಿ. ಕುರ್ತುಕೋಟಿ: ಮನ್ವಂತರ-೨. ನವ್ಯಕಾವ್ಯ ಪ್ರಯೋಗ, ಪು. ೧೪-೧೫.
[9] ಯು.ಅರ್. ಅನಂತಮೂರ್ತಿ, ಅಡಿಗರ ‘ಭೂಮಿಗೀತ’ದ ಮುನ್ನುಡಿಯಲ್ಲಿ. ಪು. ೫.
[10] ಅಲ್ಲೇ, ಪು. ೫.
[11] ಯು.ಅರ್. ಅನಂತಮೂರ್ತಿ, ಅಡಿಗರ ‘ಭೂಮಿಗೀತ’ದ ಮುನ್ನುಡಿಯಲ್ಲಿ ಪು. ೭. (ನೋಡಿ. Three Voices of Poetry: T.S. Eliot)
[12] ಗೋಪಾಲಕೃಷ್ಣ ಅಡಿಗ: ‘ನವ್ಯ ಕಾವ್ಯದಲ್ಲಿ ವಿಚಾರ ಪ್ರಣಾಲಿ’. ಸಂಕ್ರಮಣ -೧೩ (೧೯೭೭) ಪು. ೩೪.
[13] ಅಲ್ಲೇ, ಪು. ೩೭.
[14] ಯು.ಅರ್. ಅನಂತಮೂರ್ತಿ: ಅಡಿಗರ ‘ಭೂಮಿಗೀತ’ದ ಮುನ್ನುಡಿಯಲ್ಲಿ ಪು. ೧೦.
[15] ಗೋಕಾಕ್: ನವ್ಯತೆ ಹಾಗು ಕಾವ್ಯಜೀವನ, ಪು. ೪೬.
[16] ಕುವೆಂಪು: ತೀ.ನಂ. ಶ್ರೀಯವರ ಭಾರತೀಯ ಕಾವ್ಯಮೀಮಾಂಸೆಯ ಮುನ್ನುಡಿಯಲ್ಲಿ, ಪು. IX.
blogger
delicious
digg
facebook
reddit
stumble
twitter
print
email
ಪುಸ್ತಕ: ಸಮಗ್ರ ಗದ್ಯ - 2
ಲೇಖಕರು: ರಾಷ್ಟ್ರಕವಿ ಡಾ|| ಜಿ ಎಸ್ ಶಿವರುದ್ರಪ್ಪ
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ