ರೊಮ್ಯಾಂಟಿಕ್ ಕಾವ್ಯ ಎಂದರೇನು?
ಕನ್ನಡದಲ್ಲಿ ಸುಮಾರು ೧೯೫೦ರ ವೇಳೆಗೆ ನವ್ಯಕಾವ್ಯ ನೆಲೆಗೊಳ್ಳುತ್ತಿದ್ದಾಗ, ಈ ಕಾವ್ಯದ ಪ್ರತಿಪಾದಕರು ಈ ಕಾಲಕ್ಕೆ ಹಿಂದಿನ ಹೊಸಗನ್ನಡ ಸಾಹಿತ್ಯವನ್ನು ‘ರೊಮ್ಯಾಂಟಿಕ್ ಕಾವ್ಯ’ ಎಂದು ಕರೆಯಲು ಮೊದಲು ಮಾಡಿದಂತೆ ತೋರುತ್ತದೆ. ಆಚಾರ್ಯ ಶ್ರೀಯವರ, ‘ಇಂಗ್ಲಿಷ್ ಗೀತೆಗಳು’ ರಚನೆಯಾದಂದಿನಿಂದ ಕನ್ನಡದಲ್ಲಿ ಕಾವ್ಯ ರಚನೆ ಮಾಡಿದ ಕವಿಗಳಾಗಲಿ ಆ ಕಾಲದ ವಿಮರ್ಶಕರಾಗಲಿ, ೧೯೫೦ರ ತನಕ ಚಾಚಿದ ಕಾವ್ಯನಿರ್ಮಿತಿಯನ್ನು ‘ಹೊಸಗನ್ನಡ ಕಾವ್ಯ’ ಎಂದೋ, ‘ಆಧುನಿಕ ಕಾವ್ಯ’ ಎಂದೋ ಕರೆದರೆ ವಿನಾ, ‘ರೊಮ್ಯಾಂಟಿಕ್ ಕಾವ್ಯ’ ಎಂದು ಕರೆದದ್ದು ನಮಗೆ ನೆನಪಿಲ್ಲ. ಆ ಎರಡನ್ನೂ ಒಲ್ಲದೆ ಕುವೆಂಪು ಅವರು ‘ನವೋದಯ ಕಾವ್ಯ’ ಎಂದು ಹೆಸರುಕೊಟ್ಟರು. ಆದರೆ ನವ್ಯಕಾವ್ಯದ ಕವಿಗಳೂ ಹಾಗೂ ವಿಮರ್ಶಕರು ‘ನವ್ಯಕಾವ್ಯ’ಕ್ಕೆ ಹಿಂದಿನ ಕಾವ್ಯ ಮಾರ್ಗವನ್ನು ರೊಮ್ಯಾಂಟಿಕ್ ಕಾವ್ಯ ಎಂದೂ, ‘ರಮ್ಯ ಕಾವ್ಯ’ ಎಂದೂ ಕರೆದರು ಮತ್ತು ಕರೆಯುತ್ತಿದ್ದಾರೆ. ಯಾಕೆಂದರೆ ಇಂಗ್ಲಿಷ್ ಕಾವ್ಯದಲ್ಲಿ ಬಂದ ‘ರೊಮ್ಯಾಂಟಿಕ್’ ಚಳುವಳಿ ಅದಕ್ಕೆ ಹಿಂದಿನ ‘ಕ್ಲಾಸಿಕಲ್’ ಕಾವ್ಯ ಪದ್ಧತಿಯಿಂದ ಬೇರೊಂದು ಭಾವಗೀತಾತ್ಮಕವಾದ ಅಭಿವ್ಯಕ್ತಿಗೆ ಹೇಗೆ ತಿರುಗಿತೋ ಹಾಗೆಯೇ, ಕನ್ನಡದಲ್ಲಿಯೂ ಇಪ್ಪತ್ತನೇ ಶತಮಾನದ ಕಾವ್ಯ, ಅದಕ್ಕೆ ಹಿಂದಿನ ಮಹಾಕಾವ್ಯ ಪ್ರಬಂಧಗಳ ರೀತಿಯನ್ನು ವರ್ಜಿಸಿ ಭಾವಗೀತಾತ್ಮಕವಾದ ಅಭಿವ್ಯಕ್ತಿಗೆ ತಿರುಗಿತು ಎಂಬ ಕಾರಣದಿಂದ ಮಾತ್ರವಲ್ಲದೆ, ಈ ಕಾಲದ ಕಾವ್ಯ ನೇರವಾಗಿ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳಿಂದ ಪ್ರೇರಣೆ ಪಡೆಯಿತೆಂಬ ಕಾರಣದಿಂದಲೂ, ನವ್ಯ ಕವಿಗಳು ಈ ಕಾವ್ಯವನ್ನು ‘ರೊಮ್ಯಾಂಟಿಕ್’ ಎಂದೇ ಕರೆದಂತೆ ತೋರುತ್ತದೆ. ನಿಜ, ಈ ಹೊಸಗನ್ನಡ ಕಾವ್ಯವೇನೋ, ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳಿಂದ ಪ್ರೇರಣೆಯನ್ನು ಪಡೆಯಿತು. ಆದರೆ ಈ ಕಾಲದ ಕನ್ನಡ ಕಾವ್ಯವನ್ನು ಅಷ್ಟು ಮಾತ್ರಕ್ಕೆ ‘ರೊಮ್ಯಾಂಟಿಕ್’ ಎಂದು ಕರೆಯುವುದು ಉಚಿತವೆ? ಹೊಸಗನ್ನಡ ಕವಿತೆ ನಿಜವಾಗಿಯೂ ಆ ರೊಮ್ಯಾಂಟಿಕ್ ಕಾವ್ಯದ ಅನುಕರಣೆ ಅನುಸರಣೆಗಳಾಗಿ ಬಂದಿದೆಯೆ-ಎಂಬ ಪ್ರಶ್ನೆಯನ್ನೆತ್ತಿದರೆ, ಅದಕ್ಕೆ ಉತ್ತರ ತೀರಾ ಬೇರೆಯಾಗುತ್ತದೆ. ಯಾಕೆಂದರೆ ಈ ಹೊಸಗನ್ನಡ ಕಾವ್ಯ ರೊಮ್ಯಾಂಟಿಕ್ ಕಾವ್ಯದಿಂದ ಪಡೆದ ಪ್ರೇರಣೆ ಬಹುಮಟ್ಟಿಗೆ ಅದರ ರೂಪಾಂಶಕ್ಕೆ ಅನ್ವಯಿಸುವ ಮಾತೆ ಹೊರತು ಅಂತಃಸ್ಸತ್ವಕ್ಕೆ ಅಲ್ಲ. ಜೊತೆಗೆ, ಯಾವುದನ್ನು ರೊಮ್ಯಾಂಟಿಕ್ ಕಾವ್ಯದ ತಿರುಳು ಎಂದು ಕರೆಯಬಹುದೊ ಅದೆಲ್ಲವನ್ನೂ ಪರಿಸೀಲಿಸಿ ನೋಡಿದರೆ, ಅದೆಲ್ಲವೂ ಭಾರತೀಯ ಪರಂಪರೆಗೆ ಹೊಸತಾದುದೇನೂ ಅಲ್ಲವೆಂಬುದು ಸ್ಪಷ್ಟವಾಗುತ್ತದೆ. ಆದಕಾರಣ ಪಾಶ್ಚಾತ್ಯ ರೊಮ್ಯಾಂಟಿಕ್ ಕಾವ್ಯದಿಂದ ಪ್ರೇರಣೆ ಪಡೆದ ಮಾತ್ರಕ್ಕೆ, ಅದರ ಅನುಕರಣೆಯಾಗಲಿ ಅನುಸರಣೆಯಾಗಲಿ ಮಾತ್ರವಾಗಿದೆ ಎಂದು ಹೇಳಲಾಗದ ಹೊಸಗನ್ನಡದ ಆಧುನಿಕ ಕಾವ್ಯವನ್ನು ‘ನವೋದಯ ಕಾವ್ಯ’ ಎಂದು ಕುವೆಂಪು ಅವರು ಹೆಸರಿಸಿದ್ದು ತುಂಬಾ ಉಚಿತವಾಗಿದೆ. ಯಾಕೆಂದರೆ ಪಶ್ಚಿಮದ ಪ್ರೇರಣೆಯಿಂದ, ತನ್ನ ಅಂತಃಸ್ಸತ್ವವನ್ನು ತೆರೆದ ಈ ಕಾವ್ಯ ಕನ್ನಡದಲ್ಲಿ ನಿಜವಾಗಿಯೂ ಒಂದು ನವೋದಯವನ್ನೇ ತಂದಿತು.
ಆದರೆ ೧೯೫೦ರ ಸುಮಾರಿನಿಂದ ಪ್ರವರ್ಧಮಾನಕ್ಕೆ ಬಂದ ‘ನವ್ಯ ಕಾವ್ಯ’ ದ ಪ್ರತಿಪಾದಕರು ಮಾತ್ರ, ಅದಕ್ಕೆ ಹಿಂದಿನ ಕಾವ್ಯವನ್ನು ‘ರೊಮ್ಯಾಂಟಿಕ್’ ಎಂದು ಕರೆಯುವುದರಲ್ಲಿ ವಿಶೇಷ ಆಸಕ್ತಿಯನ್ನು ಪ್ರಕಟಿಸಿದ್ದಾರೆ. ನವ್ಯಕಾವ್ಯವನ್ನು ಪ್ರತಿಪಾದಿಸಿದವರು, ತಮಗೆ ಹಿಂದಿನ ಕವಿತೆಯನ್ನು ರೊಮ್ಯಾಂಟಿಕ್ ಎಂದು ಕರೆದಾಗ ಆ ಮಾತಿನ ವ್ಯಾಪ್ತಿಯೇನು, ಉದ್ದೇಶಗಳೇನು ಎಂಬುದನ್ನು ಸರಿಯಾಗಿ ತಿಳಿಯಪಡಿಸುವ ಗೊಡವೆಗೇ ಹೋಗದೆ, ಅದೊಂದು ನಿವಾರಿಸಿಕೊಳ್ಳಬೇಕಾದ ಮನೋಧರ್ಮವೆಂಬಂತೆ ನಡೆದುಕೊಂಡದ್ದು ಸಾಹಿತ್ಯ ವಿಮರ್ಶೆಯ ಆಶ್ಚರ್ಯಗಳಲ್ಲಿ ಒಂದಾಗಿದೆ.
ಸರಿಯಾಗಿ ನೋಡಿದರೆ ‘ರೊಮ್ಯಾಂಟಿಸಿಸಂ’ ಎಂಬುದು ಎಲ್ಲ ಕಾಲದ ಕಾವ್ಯದಲ್ಲಿಯೂ ತಕ್ಕಮಟ್ಟಿಗೆ ಗುರುತಿಸಬಹುದಾದ ಒಂದು ಗುಣ ವಿಶೇಷ. ಆದರೆ ಈ ಒಂದು ಗುಣ ೧೮ನೇ ಶತಮಾನದ ಪೂರ್ವಾರ್ಧದ ಇಂಗ್ಲಿಷ್ ಕಾವ್ಯದಲ್ಲಿ ಅತ್ಯಂತ ಪ್ರಕರ್ಷಾವಸ್ಥೆಯಲ್ಲಿ ಕಾಣಿಸಿಕೊಂಡಿತೆಂಬ ಕಾರಣದಿಂದ ಆ ಕಾಲವನ್ನು ‘ರೊಮ್ಯಾಂಟಿಕ್ ಯುಗ’ವೆಂದು ಕರೆಲಾಗಿದೆ.
‘ರೊಮ್ಯಾಂಟಿಕ್’ ಎಂಬ ಪದದ ನಿಷ್ಪತ್ತಿಯನ್ನು ಗಮನಿಸಿದರೆ ಈ ಮಾತು ಮೂಲತಃ ಒಂದು ಭಾಷೆಯ ಹೆಸರಾಗಿದ್ದಿತು ಎಂಬ ಸಂಗತಿ ಸ್ವಾರಸ್ಯವಾಗಿದೆ: ಎಂಟನೆಯ ಶತಮಾನದಲ್ಲಿ ರೋಮನ್ ಚಕ್ರಾಧಿಪತ್ಯಕ್ಕೆ ಹೊರಗಿನಿಂದ ನುಗ್ಗಿದ ಬರ್ಬರ ಜನಾಂಗದ ಸಂಕರದಿಂದಾಗಿ, ಅಂದಿನ ಅಧಿಕೃತ ಭಾಷೆಯಾದ ಲ್ಯಾಟಿನ್ ಜತೆ ಜತೆಗೆ ಒಂದು ಬಗೆಯ ‘ದೇಶ್ಯ’ ಭಾಷೆ ರೂಪುಗೊಂಡಿತು. ಇದಕ್ಕೆ ‘ರೊಮ್ಯಾನಿಕಾ’ (Lingua Romanica) ಎಂದು ಹೆಸರು. ಈ ಪದದ ಕ್ರಿಯಾವಿಶೇಷಣವಾದ ‘ರೊಮ್ಯಾನಿಸ್’ (Romanice) ಎಂಬುದರಿಂದ ‘ರೋಮಾನ್ಸ್’ ಎಂಬ ನಾಮಪದ ಬಂದಿದೆ. Romanz ಎಂಬುದು ಮೊದಮೊದಲು ಹಳೆಯ ‘ಫ್ರೆಂಚ್ ಭಾಷೆ’ ಎಂಬರ್ಥದಲ್ಲಿ ಬಳಕೆಯಾಗಿ, ಆನಂತರ ಯುರೋಪಿನ ಇತರ-ಸ್ಪೇನಿಷ್ ಮೊದಲಾದ ಲ್ಯಾಟಿನ್ ಭಾಷಾ ಪ್ರಭೇದಗಳಿಗೆ ಅನ್ವಯಿತವಾಯಿತು.[1]
ಹೀಗೆ Romanz (ಅದರ ನಾಮರೂಪ Roman) ಎಂಬುದು ಒಂದು ಭಾಷಾ ವರ್ಗದ ಹೆಸರಾದದ್ದು, ಕ್ರಮೇಣ ಆ ಭಾಷೆಯಲ್ಲಿ ರಚಿತವಾದ ಸಾಹಿತ್ಯಕ ಬರವಣಿಗೆ ಎಂಬ-ಅದರಲ್ಲೂ ಮಧ್ಯಕಾಲೀನ ಫ್ರೆಂಚ್ ಮಹಾ ಕಾವ್ಯಗಳಲ್ಲಿ ಬಳಸಲಾದ ಒಂದು ಪ್ರಾದೇಶಿಕ ಭಾಷಿಕರಚನೆ ಎಂಬ ಅರ್ಥವನ್ನು ಪಡೆಯಿತು. ಹದಿನೇಳನೆಯ ಶತಮಾನದ ಹೊತ್ತಿಗಾಗಲೆ ‘ರೊಮಾನ್ಸ್’ ಎಂದರೆ ‘ಕಟ್ಟುಕತೆ’ ‘ಕಲ್ಪಿತಗಳ ಕಂತೆ’ ‘ಯಕ್ಷ-ಕಿನ್ನರರ ಕತೆಯಂತೆ ವಿಲಕ್ಷಣವಾದ’ ಎಂದೂ, ‘ರೊಮಾನ್ಸ್‌ರ್’ (Romancer) ಎಂದರೆ ಸುಳ್ಳುಗಾರ-ಎಂದೂ ಅರ್ಥವನ್ನು ಪಡೆಯಿತು![2]
ಹದಿನೆಂಟನೆಯ ಶತಮಾನದ ಹೊತ್ತಿಗೆ ‘ರೊಮ್ಯಾಂಟಿಕ್’ ಎಂಬ ಮಾತು ಒಂದು ಬಗೆಯ ನಿಸರ್ಗ ಪರಿಸರವನ್ನು ಸೂಚಿಸುವ ಪದವಾಗಿ ಬಳಕೆಯಾಗತೊಡಗಿತು. ಅದರಲ್ಲೂ ಮಧ್ಯಯುಗದ ರಮ್ಯಕಥಾನಕಗಳಿಗೆ ಹಿನ್ನೆಲೆಯಾದ ಪ್ರಕೃತಿ ವರ್ಣನೆಯನ್ನು ಈ ಪದ ಹೇಗೋ ಸೂಚಿಸಲು ಬಳಕೆಯಾಯಿತು. ಪರ್ವತಗಳು, ಕಂದರಗಳು, ಕಾನನಗಳು, ಪ್ರವಾಹಗಳು, ಗುಹೆಗಳು, ಕಡಲಿನ ಅಥವಾ ಬಯಲಿನ ವಿಸ್ತಾರಗಳು, ಸ್ಮಶಾನದ ಮೇಲೆ ಬಿದ್ದ ಬೆಳದಿಂಗಳ ರಾತ್ರಿಯ ವಿಲಕ್ಷಣತೆಗಳು, ಮರುಭೂಮಿಗಳು, ಬೃಹದಾಕಾರವಾದ ಕಟ್ಟಡಗಳ ಭಗ್ನಾವಶೇಷಗಳು,-ಇಂತಹ ಹಿನ್ನೆಲೆ ಈ ಪದದಿಂದ ಹೇಗೋ ಸೂಚಿತವಾಗತೊಡಗಿತು. ‘ರೊಮ್ಯಾಂಟಿಕ್’ ಎನ್ನುವ ಮಾತಿನಿಂದ ಸೂಚಿತವಾಗುವ ಈ ನಿಸರ್ಗದ ಹಿನ್ನೆಲೆ, ಕಾವ್ಯ ಎನ್ನುವುದು ಸಹಜತೆ ಅಥವಾ ವಾಸ್ತವತೆಯಿಂದ ತೀರಾ ಭಿನ್ನವೆನ್ನುವಂತೆ ತೋರಿಸತೊಡಗಿತು.[3]
ಇದರ ನಡುವೆ ‘ರೊಮ್ಯಾಂಟಿಕ್’ ಎಂದರೆ ಲೋಕವನ್ನು ನೋಡುವ ಒಂದು ವಿಶಿಷ್ಟ ದೃಷ್ಟಿ, ಅಥವಾ ಅನುಭವಗಳನ್ನು ಗ್ರಹಿಸುವ, ಹಾಗೂ ರೂಪಿಸುವ ಒಂದು ವಿಧಾನ ಎಂದೂ ಪರಿಗಣಿತವಾಯಿತು.
ಇದೆಲ್ಲವನ್ನೂ ನೋಡಿದರೆ ‘ರೊಮ್ಯಾಂಟಿಕ್’ ಎನ್ನುವುದು ಮೊದ ಮೊದಲು ಒಂದು ಭಾಷೆಯ ಹೆಸರಾಗಿ, ಬರವಣಿಗೆಯ ಒಂದು ರೀತಿ ಎಂದಾಗಿ, ಅದರಲ್ಲೂ ಯಾವುದೋ ಒಂದು ಬಗೆಯ ನಿಸರ್ಗ ವರ್ಣನೆಯ ಸಂಕೇತವಾಗಿ, ಅದೊಂದು ವಿಶಿಷ್ಟ ಜೀವನಾನುಭವದ ದೃಷ್ಟಿಕೋನವೆಂದಾಗಿ, ೧೮-೧೯ನೆಯ ಶತಮಾನಗಳಲ್ಲಿ ಒಂದು ಸಾಹಿತ್ಯ ಚಳುವಳಿಯ ಹೆಸರಾಗಿ ಬಂದದ್ದು ಸೋಜಿಗವಾಗಿದೆ. ಮೊತ್ತದಲ್ಲಿ ‘ರೊಮ್ಯಾಂಟಿಕ್’ ಎಂಬ ಪದವನ್ನು ಯಾರಾದರೂ ಬಳಸುವುದು ಈಗ ಎರಡು ಅರ್ಥದಲ್ಲಿ ಮಾತ್ರ. ಒಂದು, ಅದೊಂದು ವಿಶಿಷ್ಟ ಮನೋಧರ್ಮ; ಮತ್ತೊಂದು, ಅದು ಒಂದು ಸಾಹಿತ್ಯಕ ಚಳುವಳಿ.
ಹದಿನೆಂಟು-ಹತ್ತೊಂಬತ್ತನೆಯ ಶತಮಾನದಲ್ಲಿ ಇಂಗ್ಲಿಷ್ ಕಾವ್ಯದಲ್ಲಿ ನಡೆದ ಹೊಸ ಪ್ರಯೋಗಗಳನ್ನು ‘ರೊಮ್ಯಾಂಟಿಕ್ ಚಳುವಳಿ’ ಎಂದು ಕರೆದ ಮೇಲೆ, ಆ ಕಾಲದಲ್ಲಿ ರಚಿತವಾದ ಕವಿಕೃತಿಗಳನ್ನೂ, ಕವಿ ಮನೋಧರ್ಮವನ್ನೂ ವಿಶ್ಲೇಷಿಸಿ ‘ರೊಮ್ಯಾಂಟಿಕ್ ಕಾವ್ಯ’ದ ಲಕ್ಷಣಗಳನ್ನು ಪಟ್ಟಿಮಾಡುವ ಪ್ರವೃತ್ತಿ ಸಹಜವಾಗಿ ಬೆಳೆಯಿತು. ಇದು ಒಂದು ಮನೋಧರ್ಮ ಎಂದು ನೋಡಿದವರು, ‘ರೊಮ್ಯಾಂಟಿಸಿಸಂ’ ಎಂಬುದು ‘ಸಾಹಿತ್ಯದಲ್ಲಿ ಒಂದು ಉದಾರ ಪ್ರವೃತ್ತಿ’ ಎಂದೂ, ‘ಭಾವನಾ ಪ್ರಧಾನತೆ’ ಎಂದೂ ‘ಒಂದು ಮನೋರೋಗ’ ಎಂದೂ, ‘ರಸ ನಿಷ್ಠತೆ’ ಎಂದೂ ‘ಪ್ರೇಮ-ಧರ್ಮ-ಸಾಹಸಗಳ ಸಮ್ಮಿಶ್ರಣ’ ಎಂದೂ, ‘ರಹಸ್ಯ ಪ್ರಿಯತೆ’ ಎಂದೂ,[4] ‘ಆದರ್ಶಮಯತೆ’ ಎಂದೂ, ನವುರಾದದ್ದು, ಕೋಮಲವಾದದ್ದು, ಖಿನ್ನವಾದದ್ದು, ಎಂದೂ ಕರೆದಿದ್ದಾರೆ.[5]
ರೊಮ್ಯಾಂಟಿಕ್ ಸಾಹಿತ್ಯ ಚಳುವಳಿಯ ಮುಖ್ಯ ಸಾಧನೆ ಎಂದರೆ, ಜನ ಸಾಮಾನ್ಯ ಜೀವನದ ಸರಳ ಸಾಧಾರಣ ಸಂಗತಿಗಳ ಬಗೆಗೆ ಕೊಟ್ಟ ಗಮನ. ವರ್ಡ್ಸ್‌ವರ್ತ್ ತನ್ನ ‘ಲಿರಿಕಲ್ ಬ್ಯಾಲೆಡ್ಸ್’ಗೆ ಬರೆದ ಮುನ್ನುಡಿಯಲ್ಲಿ ಈ ಒಂದು ಸಂಗತಿಯನ್ನು ಒತ್ತಿ ಹೇಳಿದ್ದಾನೆ. ಜನಸಾಮಾನ್ಯರ ಜೀವನದಿಂದ ವಸ್ತುವನ್ನೆತ್ತಿಕೊಳ್ಳುವುದು, ಮತ್ತು ಅವುಗಳನ್ನು ಜನತೆಯದೇ ಆದ ಭಾಷೆಯನ್ನು ಕಾವ್ಯ ಭಾಷೆಯನ್ನಾಗಿ ಮಾಡಿಕೊಂಡು ವರ್ಣಿಸುವುದು ತನ್ನ ಕಾವ್ಯದ ಉದ್ದೇಶ ಎಂದು ಘೋಷಿಸಿದ್ದಾನೆ.
‘ರೊಮ್ಯಾಂಟಿಕ್ ಕವಿ’ಗಳು ಜನಸಾಮಾನ್ಯರ ಜೀವನದಿಂದ ವಸ್ತುವನ್ನೆತ್ತಿಕೊಂಡು ಕಾವ್ಯರಚನೆ ಮಾಡುವ ಕಡೆಗೆ ವಿಶೇಷ ಗಮನವನ್ನು ಕೊಟ್ಟರೂ, ಅವರ ಕಾವ್ಯ ವಸ್ತುಗಳನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ಅವುಗಳಲ್ಲಿ ಬಹುಮಟ್ಟಿಗೆ ವಾಸ್ತವ ದೂರವಾದ ವಸ್ತುಗಳೇ ವಿಶೇಷವಾಗಿವೆ ಎಂದು ಕೆಲವರು ಟೀಕಿಸಿದ್ದಾರೆ. “ ಈ ಕವಿಗಳು ಆರಿಸಿಕೊಂಡಿರುವ ಬಹುಪಾಲ ವಸ್ತುಗಳೆಲ್ಲ ವಿಲಕ್ಷಣವಾದವು; ಎಲ್ಲಾ ಕನಸು-ಕನಸಾಗಿ ದೂರ ಬಹು ದೂರತೆಯನ್ನು ಮನಸ್ಸಿಗೆ ತರುತ್ತವೆ. ಇವರ ಕಾವ್ಯದ ಮುಖ್ಯ ವಸ್ತುಗಳನ್ನು ಹೀಗೆ ಪಟ್ಟಿ ಹಾಕಬಹುದೇನೋ: ದೂರ ದೂರವನ್ನು ಸೂಚಿಸುವ ಭಗ್ನಾವಶೇಷಗಳ ದಾರುಣತೆ; ಗುಂಭ ಮೌನ; ಅತಿಮಾನುಷ ಸಂಗತಿಗಳು; ಚಳಿಗಾಲದಲ್ಲಿ ಎಲೆಯುದುರಿದ ಕಾನನಗಳ ನೀರುವ ಏಕಾಂತತೆ; ಪ್ರೇತ ಪ್ರಣಯ ಸಂಗತಿಗಳು; ಪ್ರಣಯಿಗಳ ರಹಸ್ಯ ಸಮಾಗಮ; ರಾಗಾನುರಾಗಗಳ ವೈಭವ; ದುಃಖಕಾಮಿಯಾದ ಕ್ರೌರ‍್ಯ; ಭ್ರಮನಿರಸನ; ಸಾವು; ಉನ್ಮಾದ; ಬೆಟ್ಟದ ಅಂಚಿನಲ್ಲಿ ನಡೆಯುವ ಕಾದಾಟಗಳು; ಅಸಾಧ್ಯವಾದದ್ದರ ಅಭಿಲಾಷೆ.”[6]
ರೊಮ್ಯಾಂಟಿಕ್ ಕಾವ್ಯದ ನಾಯಕ ಬಹು ಮಟ್ಟಿಗೆ ಏಕಾಂಗಿ.ಕವಿಯೋ ಅಥವಾ ಅವನ ಕಥಾನಾಯಕನೋ ಒಬ್ಬಂಟಿಯಾಗಿ ಪ್ರಕೃತಿ ರಮ್ಯತೆಯ ನಡುವೆ ಕೈಗೊಳ್ಳುವ ಪಯಣವೇ ಕವಿತೆಯ ವಸ್ತು.[7] ಈ ಏಕಾಂತತೆ ಹಾಗೂ ದೂರಭಾವಗಳು ರೊಮ್ಯಾಂಟಿಕ್ ಮನೋಧರ್ಮದ ಲಕ್ಷಣಗಳೆನ್ನಬಹುದು. ಈ ಏಕಾಂತತೆಯಲ್ಲಿ ಒಂದು ಬಗೆಯ ಅಂತರ್ಮುಖತೆಯೂ, ಯಾವುದೋ ರಹಸ್ಯಾನ್ವೇಷಣ ಪ್ರವೃತ್ತಿಯೂ, ಅನುಭಾವಿಕತೆಯೂ, ಕನಸುಣಿಗತನವೂ ಬೆರೆತುಕೊಂಡಂತೆ ತೋರುತ್ತದೆ.
ರೊಮ್ಯಾಂಟಿಕ್ ಕಾವ್ಯದಲ್ಲಿ ಕಂಡುಬರುವ ಅಂತರ್ಮುಖ ಪ್ರವೃತ್ತಿ ವಾಸ್ತವತೆಯಿಂದ ದೂರ ಸರಿಯುವ ಪ್ರವೃತ್ತಿಯೂ ಆಗಿದೆ ಎಂದು ಟೀಕಿಸುವ ಕೆಲವರು, ಇದೊಂದು ‘ಪಲಾಯನವಾದ’-ಎಂದು ಕರೆದದ್ದೂ ಉಂಟು. ಆದರೆ ವಾಸ್ತವವಾಗಿ ರೊಮ್ಯಾಂಟಿಕ್ ಕವಿ ತಾನು ಒಬ್ಬ ಸಾಧಕ ಎಂದು ಹಲವು ವೇಳೆ ಭಾವಿಸಿದ್ದರಿಂದ, ಅದಕ್ಕೆ ಅನುಗುಣವಾದ ಅಂತರ್ಮುಖತೆಯನ್ನು ಬೆಳೆಯಿಸಿಕೊಂಡದ್ದು ಕಂಡು ಬರುವುದೇ ಹೊರತು, ಬದುಕಿನ ವಾಸ್ತವ ಸಮಸ್ಯೆಗಳಿಗೆ ಹೆದರಿ ತಲೆಮರೆಸಿಕೊಂಡ ಪಲಾಯನ ಪ್ರವೃತ್ತಿ ಎಂದು ಟೀಕಿಸುವುದು ಹುರುಳಿಲ್ಲದ ಮಾತು. ಬಹಿರಂಗಕ್ಕಿಂತ ಅಂತರನುಭವಗಳ ಮೇಲೆ ಅವಲಂಬಿಸುವ ‘ಅನುಭಾವಿಕ’ ಮನೋಧರ್ಮ ಯಾವ ದೇಶದ ಸಾಧಕರಿಗೂ ಹೊಸ ಸಂಗತಿಯಲ್ಲ. ಆ ಅನುಭಾವಿಕತೆಯೂ (Mysticism) ರೊಮ್ಯಾಂಟಿಕ್ ಮನೋಧರ್ಮ ಒಂದು ಪ್ರಧಾನ ಲಕ್ಷಣವೆಂದು ಹಲವರು ಗುರುತಿಸಿದ್ದಾರೆ. ಕವಿ ಬಹಿರಂಗದಿಂದ ಅಂತರಂಗದ ಕಡೆ ಹೊರಳಿದ್ದು, ಬಹಿರಂಗದಿಂದ ತಪ್ಪಿಸಿಕೊಳ್ಳಲೆಂದಲ್ಲ; ಅಂತರಾನುಭವಗಳಲ್ಲಿ ಆಳವಾಗಿ ಬೇರೂರಿ, ಅದರ ಸತ್ವದಿಂದ ಪುಷ್ಟವಾಗಿ ಮತ್ತೆ ಈ ಬಹಿರಂಗವನ್ನು ಸುಧಾರಿಸಬೇಕೆನ್ನುವ ಹಂಬಲದಿಂದ. ಷೆಲ್ಲಿ ಮತ್ತು ಬ್ಲೇಕ್ ಇವರ ಕವಿತೆಗಳಲ್ಲಿ ಇದನ್ನು ಗುರುತಿಸಬಹುದು.[8]
ರೊಮ್ಯಾಂಟಿಕ್ ಕವಿಗಳ ಪಾಲಿಗೆ ಪ್ರಕೃತಿ, ಕೇವಲ ಬಹಿರಂಗವಾದದ್ದಲ್ಲ; ಅದು ಬೇರೊಂದು ಚೈತನ್ಯದ ಆವಿರ್ಭಾವ. ಅದು ಅನೇಕ ರಹಸ್ಯಶಕ್ತಿಗಳ ತವನಿಧಿ. ಕೇವಲ ಅದರ ಬಹಿರಂಗ ಸೌಂದರ್ಯವನ್ನು ವರ್ಣನಾತ್ಮಕವಾಗಿ ನಿರೂಪಿಸುವುದು ದೊಡ್ಡದಲ್ಲ; ಕವಿ ಪ್ರಕೃತಿಯನ್ನು ಪ್ರೀತಿಸಬೇಕು, ಆರಾಧಿಸಬೇಕು, ಅದರಲ್ಲಿ ಅಭಿವ್ಯಕ್ತವಾಗಿರುವ ಪರಾಶಕ್ತಿಯ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಪ್ರಕೃತಿಯನ್ನು ಕುರಿತು ಈ ಉಪಾಸಕ ಮನೋಧರ್ಮ, ಬೇರೆ ಸಾಂಪ್ರದಾಯಿಕವಾದ ಪೂಜೆ ಪ್ರಾರ್ಥನಾದಿ ಯಾವ ಧಾರ್ಮಿಕ ಕ್ರಿಯೆಗಳಿಗೂ ಕಡಿಮೆ ಅಲ್ಲ. ಆದ ಕಾರಣ ಇದು ಒಂದು ಸೌಂದರ್ಯ ಧರ್ಮ-ಎಂದು ಕವಿಗಳು ಸಾರಿದರು. ರೊಮ್ಯಾಂಟಿಕ್ ಕವಿಗಳಲ್ಲಿ ಕಂಡು ಬಂದ ಬಹು ಮುಖ್ಯವಾದ ಸಂಗತಿಗಳು ಎಂದರೆ: ಒಂದು, ಕಾವ್ಯ ವಸ್ತುವನ್ನು ಪುರಾಣ-ಇತಿಹಾಸಗಳ ವಲಯದಿಂದ, ತಮ್ಮ ದೈನಂದಿನ ಸರಳ ಸಾಧಾರಣ ಸಂಗತಿಗಳ ಕಡೆಗೆ ಸ್ಥಳಾಂತರಿಸಿದ್ದು; ಮತ್ತೊಂದು, ದೇವರು ಪೂಜೆ ಇತ್ಯಾದಿ ಭಾವನೆಗಳನ್ನು ದೇವಾಲಯಾದಿಗಳಿಂದ, ನಿಸರ್ಗದ ಕಡೆಗೆ ಸ್ಥಳಾಂತರಿಸಿದ್ದು.
ರೊಮ್ಯಾಂಟಿಕ್ ಕವಿಗಳಲ್ಲಿ ಕಂಡು ಬಂದ ಅನುಭಾವಿಕ ಪ್ರವೃತ್ತಿ, ಮತ್ತು ಅವರು ಪ್ರಕೃತಿಸೌಂದರ್ಯದ ಬಗೆಗೆ ತೋರಿದ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಇದು ಎಷ್ಟೊಂದು ಭಾರತೀಯವಾಗಿದೆ ಎಂಬುದು ಆಶ್ಚರ್ಯದ ಸಂಗತಿ. ಅದರಲ್ಲೂ ಭಾರತೀಯ ಕವಿಗಳಿಗೆ ಇರುವಂತಹ ಸಹಸ್ರಾರು ವರ್ಷಗಳ ಅನುಭಾವಿಕ ಹಿನ್ನೆಲೆಯಿಲ್ಲದ, ಮಾರ್ಗದರ್ಶನಕ್ಕೆ ವಿಶೇಷವಾದ ‘ವಿಭೂತಿ’ಗಳೂ ಇಲ್ಲದ ಪಾಶ್ಚಾತ್ಯ ಪರಂಪರೆಯಲ್ಲಿ, ಈ ರೊಮ್ಯಾಂಟಿಕ್ ಕವಿಗಳಲ್ಲಿ ಕೆಲವರು, ಈ ಅನುಭಾವಿಕ ದೃಷ್ಟಿಯನ್ನು ತಮ್ಮ ಸ್ವಯಂಸಾಧನೆಯಿಂದ ಗಳಿಸಿಕೊಂಡದ್ದು ಒಂದು ಮಹತ್ತಾದ ಸಾಧನೆಯಾಗಿರುವಂತೆಯೇ, ಪಾಶ್ಚಾತ್ಯ ವಿಮರ್ಶಕರನೇಕರಿಗೆ ಇಂಥ ಅನುಭವದ ಕಾವ್ಯಭಿವ್ಯಕ್ತಿಗಳು ಅರ್ಥವಾಗದೆ ಹೋದ ಸಂದರ್ಭಗಳೂ ಉಂಟು. ವರ್ಡ್ಸ್‌ವರ್ತ್‌ನ ಕಾವ್ಯದ ಕೆಲವು ಪಂಕ್ತಿಗಳನ್ನು ಕುರಿತು ಬ್ರಾಡ್ಲೆ ಎಂಬ ವಿಮರ್ಶಕ “For me, I confess, all this is far from being ‘mere poetry’- partly because I do not belive that any such thing as ‘mere poetry’ exists” ಎಂದು ವಿನಮ್ರವಾಗಿ ಒಂದೆಡೆ ಹೇಳಿಕೊಂಡಿದ್ದಾನೆ.
ನಿಸರ್ಗದ ನಡುವೆ ಏಕಾಕಿಯಾಗಿ ಉಪಾಸಕನಂತೆ ಸಂಚರಿಸುವ ಈ ಕಾವ್ಯದ ಕವಿ ಕನಸುಗಾರನಂತೆ ಕಂಡರೆ ಆಶ್ಚರ‍್ಯವಿಲ್ಲ. “ವಾಸ್ತವವಾಗಿ ರೊಮ್ಯಾಂಟಿಕ್ ಕವಿ ಒಬ್ಬ ಕನಸುಗಾರನೇ. ರೊಮ್ಯಾಟಿಸಿಸಂ ಎಂದರೆ ಸುತ್ತಣ ಸಮಾಜದ ಹಾಗೂ ವಾಸ್ತವತೆಯ ಕ್ರೌರ‍್ಯದಿಂದ ನುಗ್ಗು ನುರಿಯಾದ ಭಾವನೆಗಳಿಗೆ ಆಶ್ರಯ ಮತ್ತು ಪೋಷಣೆ ನೀಡುವ ಒಂದು ಸ್ವಪ್ನ ಪ್ರವೃತ್ತಿ”-ಎಂದು ಕೆಲವರು ಈ ಕನಸುಣಿಗತನವನ್ನು ವ್ಯಾಖ್ಯಾನಿಸಿದ್ದಾರೆ. ಕೋಲ್‌ರಿಜ್ ಕವಿ ತನ್ನ ಪಾಲಿಗೆ ಕನಸುಗಳು ಕೇವಲ ನೆರಳುಗಳಲ್ಲ, ತನ್ನ ವ್ಯಕ್ತಿತ್ವದ ತಿರುಳುಗಳೇ ಎನ್ನುತ್ತಾನೆ. ಈ ಬಗೆಯ ಸ್ವಪ್ನ ಮುದ್ರಿತ ಮನೋಧರ್ಮ ಕೆಲವು ರೊಮ್ಯಾಂಟಿಕ್ ಕವಿಗಳಲ್ಲಿ ಅಭಿವ್ಯಕ್ತಿಯನ್ನು ಪಡೆದಿದೆ. ಆನಂತರದ ವಾಸ್ತವವಾದಿ ಸಾಹಿತಿಗಳು ಈ ಸ್ವಪ್ನಕಾಮಿ ಪ್ರವೃತ್ತಿಯನ್ನು ಟೀಕಿಸಿದರು. ಬಾಲ್‌ಜ್ಹಾಕ್‌ನಂತಹ ಕಾದಂಬರಿಕಾರ “ಈ ರೊಮ್ಯಾಂಟಿಕ್ ಸಾಹಿತಿಗಳು ಸಮ್ಮೋಹಕತೆಯ ಸಿಗರೇಟು ಸೇದುವ ಜನ” ಎಂದು ಹಾಸ್ಯ ಮಾಡಿದ್ದಾನೆ.
‘ರೊಮ್ಯಾಂಟಿಸಿಸಂ’ ಎಂಬುದೊಂದು ಅಹಂ ನಿಷ್ಠತೆ. ರೊಮ್ಯಾಂಟಿಕ್ ಕಾವ್ಯ ‘ಅಹಂ ನಿಷ್ಯವಾದ ಕಾವ್ಯ’. ಈ ಕಾಲದ ಭಾವಗೀತೆಗಳನ್ನು ಗಮನಿಸಿದರೆ, ಭಾವಗೀತೆ ವ್ಯಕ್ತಿನಿಷ್ಠ ಕಾವ್ಯವೆಂದು ಏಕೆ ಗುರುತಿಸಲ್ಪಟ್ಟಿತು ಎಂಬುದು ಸ್ಪಷ್ಟವಾಗುತ್ತದೆ. ಈ ಅಹಂನಿಷ್ಠತೆಯಿಂದ ಈ ಕಾವ್ಯ ತನಗಿಂತ ಹಿಂದಿನ ‘ಕ್ಲಾಸಿಕಲ್’ ಮಾದರಿಯಿಂದ, ಮತ್ತು ನಾಟಕ ಸಾಹಿತ್ಯದಿಂದ ಭಿನ್ನವಾಗಿ ನಿಲ್ಲುತ್ತದೆ.
‘ರೊಮ್ಯಾಂಟಿಸಿಸಂ’ನ ಈ ವಿವರಣೆ ಹಾಗೂ ಲಕ್ಷಣಗಳನ್ನು ನೋಡಿದರೆ, ಇವುಗಳಲ್ಲಿ ಬದುಕಿಗೆ ಬೇಡವಾದದ್ದು ಯಾವುದು? ಅಥವಾ ಮನುಷ್ಯನ ಮನೋಧರ್ಮಕ್ಕೆ ಹೊರತಾದದ್ದು ಯಾವುದು? ಸಾಹಸ – ಪ್ರೇಮ – ಏಕಾಂತತೆ – ನಿಸರ್ಗ ಪ್ರಿಯತೆ – ಅನುಭಾವಿಕತೆ – ಅಹಂ ನಿಷ್ಠತೆ-ಆದರ್ಶಪರತೆ ಇವುಗಳನ್ನು ಕಾವ್ಯದ ದೋಷಗಳೆಂದು ಹೇಳುವುದಾದರೆ, ಇವು ಬದುಕಿನ ದೋಷಗಳೂ ಆದಾವು. ಈ ಕೆಲವಂಶಗಳಲ್ಲಿ ಒಂದೆರಡರ ಮೇಲೆ ಕೆಲವು ಕವಿಗಳು ಅನವಶ್ಯಕವಾದ ಆಸಕ್ತಿಯನ್ನು ಪ್ರಕಟಿಸಿದ್ದಿರಲೂಬಹುದು. ಬದುಕಿನ ಇನ್ನೂ ಇತರ ಕೆಲವು ಪ್ರವೃತ್ತಿಗಳನ್ನು ‘ರೊಮ್ಯಾಂಟಿಸಿಸಂ’ ಎಂಬ ಮನೋಧರ್ಮ ಒಳಗೊಳ್ಳದೆ ಇದ್ದಿರಬಹುದು. ಆದರೆ ‘ರೊಮ್ಯಾಂಟಿಕ್’ ಎಂದು ಯಾವ ಮನೋಧರ್ಮವನ್ನು ವಿವರಿಸಲಾಗಿದೆಯೋ ಅದನ್ನು ಒಳಗೊಂಡ ಕವಿತೆಯನ್ನು ಯಾವ ಕಾರಣದಿಂದಲೂ ಕೀಳ್ಗಳೆಯಬೇಕಾಗಿಲ್ಲ. ಈ ಮನೋಧರ್ಮ ಎಲ್ಲ ಕಾಲದಲ್ಲಿಯೂ ಇರುವ, ಇರಬೇಕಾದ ಒಂದು ಮನೋಧರ್ಮವೇ. ಇದು ವಾಸ್ತವತೆಗೆ ವಿರೋಧಿಯಾದುದುದಾಗಲಿ, ಪಲಾಯನ ಪ್ರವೃತ್ತಿಯಾಗಲಿ, ಕೇವಲ ಕನಸುಣಿಗತನವಾಗಲಿ ಅಲ್ಲ. ಈ ಮನೋಧರ್ಮ, ವಾಲ್ಮೀಕಿ, ಹೋಮರ್ ಕವಿಗಳ ಕಾಲದಷ್ಟು ಹಳೆಯದು. ವರ್ಡ್ಸ್‌ವರ್ತನ ಕಾಲಕ್ಕೆ ಇದು ಒಂದು ಸಾಹಿತ್ಯ ಚಳುವಳಿ ಎಂದು ಗುರುತಿಸುವಷ್ಟರ ಮಟ್ಟಿಗೆ ಅಂದಿನ ಕಾವ್ಯದಲ್ಲಿ ಸುಪ್ರಕಟವಾಯಿತು. ಹದಿನೆಂಟು ಹತ್ತೊಂಬತ್ತನೆಯ ಶತಮಾನದಂದು ಕಾವ್ಯಮಾರ್ಗವನ್ನು ‘ರೊಮ್ಯಾಂಟಿಕ್ ಚಳುವಳಿ’ ಎಂದು ಕರೆದ ಮಾತ್ರಕ್ಕೆ, ಆ ಬಗೆಯ ಕಾವ್ಯ ಜಾತಿಯಲ್ಲಿ ‘ರೊಮ್ಯಾಂಟಿಸಿಸಂ’ನ ಸಮಸ್ತ ಲಕ್ಷಣಗಳನ್ನು ವಿಮರ್ಶಕರು ಹುಡುಕಲು ಹೊರಡುತ್ತಾರೆ. ವರ್ಡ್ಸ್‌ವರ್ತ್ ಈ ಕಾಲದ ಬಹು ದೊಡ್ಡ ಕವಿ ಎಂಬ ಒಂದು ವಿಷಯವೇ, ಆತ ರೊಮ್ಯಾಂಟಿಕ್ ಕವಿ ಎಂದು ಹೇಳಲು ಪ್ರಬಲವಾದ ಆಧಾರವಾಗಿಬೇಕಾಗಿಲ್ಲ. ಇಂಗ್ಲಿಷ್ ಸಾಹಿತ್ಯದಲ್ಲಿ ‘ರೊಮ್ಯಾಂಟಿಸಿಸಂ’ ಎಂಬುದು ಕೇವಲ ೧೮-೧೯ನೆಯ ಶತಮಾನದ ಸಾಹಿತ್ಯ ಮನೋಧರ್ಮ ಎಂದು ಹೇಳುವುದು ಎಷ್ಟು ಆಭಾಸವೋ, ಅದಕ್ಕೂ ಮೊದಲು ಅದು ಇರಲೇ ಇಲ್ಲವೆಂದಾಗಲಿ ಅಥವಾ ಅದರ ಮುಂದಿನ ಕಾಲಗಳಲ್ಲಿ ಇರಬಾರದೆಂದಾಗಲಿ, ಇಲ್ಲವೆಂದಾಗಲಿ ಹೇಳುವುದು ಅಷ್ಟೇ ಆಭಾಸ. ‘ರೊಮ್ಯಾಂಟಿಸಿಸಂ’ ಎಂಬುದು ಎಲ್ಲ ಕಾಲದ ಕಾವ್ಯದಲ್ಲೂ ಒಂದಲ್ಲ ಒಂದು ಪ್ರಮಾಣದಲ್ಲಿ ಬೆರೆತುಕೊಂಡಿರುವ ಅಂಶವೇ; ಆದರೆ ಯಾರನ್ನು ನಾವು ರೊಮ್ಯಾಂಟಿಕ್ ಕವಿಗಳೆಂದು ಕರೆದಿದ್ದೇವೆಯೋ, ಆ ಕಾಲದ ಕವಿಗಳಲ್ಲಿ ಈ ಒಂದು ಮನೋಧರ್ಮ ವಿಶೇಷವಾದ ರೀತಿಯಲ್ಲಿ ಪ್ರಕಟವಾಗಿದೆ ಎಂದು ಮಾತ್ರ ಅರ್ಥ. ಹಾಗೆ ನೋಡಿದರೆ ಇಂಗ್ಲಿಷ್ ರೊಮ್ಯಾಂಟಿಕ್ ಸಾಹಿತ್ಯಕ ಚಳುವಳಿಯೊಂದೇ, ರೊಮ್ಯಾಂಟಿಕ್ ಚಳುವಳಿ ಅಲ್ಲ. ಇಡೀ ಯೂರೋಪಿನ ಸಾಹಿತ್ಯ ಹಾಗೂ ಕಲೆಗಳಿಗೆ ಮೂಲ ದ್ರವ್ಯವಾದ ರೊಮ್ಯಾಂಟಿಕ್ ಮನೋಧರ್ಮವೇ, ವರ್ಡ್ಸ್‌ವರ್ತನ ಕಾಲದ ಸಾಹಿತ್ಯ ಚಳುವಳಿಗೂ ಪ್ರೇರಣೆಯಾಯಿತೆಂಬುದನ್ನು ಗಮನಿಸಬೇಕು.
ಈ ಹಿನ್ನೆಲೆಯಿಂದ ನೋಡಿದಾಗ, ಕನ್ನಡದ ನವೋದಯ ಕವಿಗಳ ಕಾವ್ಯಧರ್ಮದಲ್ಲಿ, ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಪ್ರೇರಣೆಯನ್ನು ಗುರುತಿಸಬಹುದುದಾಗಿದೆ. ಆದರೆ ಆ ಪ್ರೇರಣೆಗೆ ಅನುಭವ ರೂಪದ ಪರಂಪರೆ, ಆ ಪಾಶ್ಚಾತ್ಯ ಕವಿಗಳಲ್ಲಿನದಕ್ಕಿಂತ ಮಿಗಿಲಾಗಿ ನಮ್ಮ ಪರಂಪರೆಯಲ್ಲೇ ವಿಶೇಷವಾಗಿತ್ತು ಎನ್ನುವುದು ಗಮನಿಸಬೇಕಾದ ಸಂಗತಿ. ಪ್ರಕೃತಿಪ್ರಿಯತೆ, ಉಪಾಸಕ-ಸಾಧಕ ಮನೋಧರ್ಮ, ಏಕಾಂತತೆ, ಆದರ್ಶಮಯತೆ ಇತ್ಯಾದಿಗಳಿಗೆ ನಮ್ಮ ನವೋದಯ ಕವಿಗಳು ಪಾಶ್ಚಾತ್ಯ ಕವಿಗಳೇ ಋಣಿಯಾಗಬೇಕಾದ ಅಗತ್ಯವೇನೂ ಇಲ್ಲ. ಇಂಥ ಸಮೃದ್ಧವಾದ ಅನುಭವ ಪರಂಪರೆಗೆ ಅಭಿವ್ಯಕ್ತಿಯನ್ನು ನೀಡುವ ರೀತಿ-ತಂತ್ರಗಳನ್ನು ನಮ್ಮ ಕವಿಗಳು ಕಲಿಯಬೇಕಾಗಿತ್ತಷ್ಟೆ. ಈ ಅಭಿವ್ಯಕ್ತಿಯ ಕ್ರಮಕ್ಕೆ ನಮ್ಮವರಿಗೆ ರೊಮ್ಯಾಂಟಿಕ್ ಕಾವ್ಯ ಪ್ರೇರಣೆ ನೀಡಿತು. ಅಷ್ಟೇ ಅಲ್ಲದೆ ನವೋದಯ ಕಾವ್ಯ, ತನ್ನ ಪರಂಪರಾನುಗತವಾದ ಅನುಭವಗಳ ಹಿನ್ನೆಲೆಯಿಂದ, ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳಿಗೆ ನಿಲುಕದ ಅನೇಕ ಅನುಭವದ ಸ್ತರಗಳನ್ನು ಮುಟ್ಟಿದೆ ಎಂಬುದನ್ನು ನಾವು ಗಮನಿಸಬೇಕಾಗಿದೆ. ಹೀಗೆ ಕೇವಲ ರೂಪಾಂಶದಿಂದ ಪ್ರೇರಣೆಪಡೆದ ಹೊಸಗನ್ನಡದ ಆಧುನಿಕ ಕಾವ್ಯ, ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯದ ಅನುಸರಣೆ ಹಾಗೂ ಅನುಕರಣೆ ಮಾತ್ರವಾಗದೆ, ತನ್ನ ಪರಿಸರದ ಅನುಭವಗಳನ್ನು ಸ್ವತಂತ್ರವಾದ ರೀತಿಯಲ್ಲಿ ಸೂರೆಗೈದಿರುವ ಕಾರಣದಿಂದ ಇದನ್ನು ‘ರೊಮ್ಯಾಂಟಿಕ್’ ಕಾವ್ಯ ಎಂದು ಕರೆಯದೆ ‘ನವೋದಯ ಕಾವ್ಯ’ ಎಂದು ಕರೆದಿರುವುದು ಅತ್ಯಂತ ಉಚಿತವಾಗಿದೆ.
ನವೋದಯ-೧೯೭೬
--------------------------------------------------------------------------------
[1] F.L. Lucas: The Decline and Fall of Romantic Ideal, P. 16
[2] ಅಲ್ಲೇ, ಪು. 17.
[3] Stephen Spender : Making of a Poem, P. 98. and L. Aber Crombic Romanticism, P. 14.
[4] F.L. Lucas: The decline and fall of Romantic Ideal, P.24-25.
[5] Cassels, Encylopaedia of Literature, Vol. P. 478
[6] F.L. Lucas: The Decline and Fall of Romantic Ideal P.24-25.
[7] R.A. Foakes: The Romantic Assertion, P.51.
[8] L. Abercrombie, P. 117.
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)
blogger
delicious
digg
facebook
reddit
stumble
twitter
print
email
ಪುಸ್ತಕ: ಸಮಗ್ರ ಗದ್ಯ - 2
ಲೇಖಕರು: ರಾಷ್ಟ್ರಕವಿ ಡಾ|| ಜಿ ಎಸ್ ಶಿವರುದ್ರಪ್ಪ
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ