ಸೋಮವಾರ, ಜೂನ್ 15, 2015

ಅಧ್ಯಾಯ 25 : ಮಹಿಳಾ ಚಳವಳಿ(womens movement)

ಅಧ್ಯಾಯ 25 : ಮಹಿಳಾ ಚಳವಳಿ

ಮಹಿಳಾ ಚಳವಳಿ ಹಾಗು ಅದರ ಸೈದ್ಧಾಂತಿಕ ಬೆನ್ನೆಲುಬಾದ ಸ್ತ್ರೀವಾದವು ಪಶ್ಚಿಮ ಮೂಲದಿಂದ ಗುರುತುಗೊಂಡರೂ ಜಾಗತಿಕವಾದುದು. ಪುರುಷ ಪ್ರಾಧಾನ್ಯತೆಯು ಜಾಗತಿಕವಾದುದು ಎನ್ನುವ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಕ್ರಿಯೆಯಾಗಿ ರೂಪುಗೊಂಡ ಸ್ತ್ರೀವಾದ ಮತ್ತು ಅದರ ‘ಆಕ್ಟಿವಿಸಂ’ನ್ನು ಜಾಗತಿಕವಾಗಿ ಪರಿಭಾವಿಸಲಾಗಿದ್ದು, ಅದರ ಆಧಾರದ ಮೇಲೆ ಮಹಿಳಾ ಸಮುದಾಯದ ‘ಏಕತೆ’ ಹಾಗು ‘ಸೋದರಿಕೆ’ಯ ಪರಿಕಲ್ಪನೆಯನ್ನು ಬೆಳೆಸಲಾಗಿದೆ. ಆದರೆ 20ನೆಯ ಶತಮಾನದ ಕೊನೆಯ ದಶಕಗಳಲ್ಲಿ ಆಧುನಿಕೋತ್ತರ ಸ್ತ್ರೀವಾದವು ಪುರುಷ ಪ್ರಾಧಾನ್ಯತೆ ಜಾಗತಿಕ ಗುಣಲಕ್ಷಣವನ್ನು ಹೊಂದಿದ್ದರೂ, ಅದು ಭಿನ್ನಕಾಲ-ಸಮಾಜಗಳಲ್ಲಿ ಭಿನ್ನ ರೂಪದಲ್ಲಿ ವ್ಯಾಪಿಸಿದ್ದೆಂಬ ತಿಳುವಳಿಕೆಯ ಹಿನ್ನೆಲೆಯಲ್ಲಿ ಅದನ್ನು ಸ್ಥಳೀಕರಿಸಿ ವಿವರಿಸುವ, ಇದನ್ನನುಸರಿಸಿ ಭಾರತದಲ್ಲಿಯೂ ಸಹ ವಿಶ್ಲೇಷಿಸುವ ಪ್ರಯತ್ನಕ್ಕೆ ತೊಡಗಿತು.1 ಅದುವರೆಗಿನ ಆಧುನಿಕೋತ್ತರ ಸ್ತ್ರೀವಾದವು ಅದನ್ನು ಸ್ತ್ರೀವಾದದ ಪಶ್ಚಿಮ ಕೇಂದ್ರಿತ ಗುಣವನ್ನು ಪ್ರಶ್ನಿಸುತ್ತ, ಅದು ಪ್ರತಿಪಾದಿಸುತ್ತಿದ್ದ ಪುರುಷ ಪ್ರಾಧಾನ್ಯತೆಯ ಮಾದರಿ ಹಾಗೂ ಅದಕ್ಕೆ ಪ್ರತಿಯಾಗಿ ಮಂಡಿಸುತ್ತಿದ್ದ ಸ್ತ್ರೀವಾದದ ತಾತ್ವಿಕತೆಯಲ್ಲಿನ ಪಶ್ಚಿಮದ ಯಾಜಮಾನ್ಯವನ್ನು ಗುರುತಿಸಿ, ಭಾರತೀಯ ಸ್ತ್ರೀವಾದದ ‘ಏಕತೆ’ ಮತ್ತು ‘ಸೋದರಿಕೆ’ ಪರಿಕಲ್ಪನೆಯನ್ನು ಪುನರಾಲೋಚನೆಗೊಡ್ಡಿತು. ಪುರುಷ ಪ್ರಾಧಾನ್ಯತೆಯ ಯಾಜಮಾನ್ಯದ ವಿರುದ್ಧ ಸ್ತ್ರೀವಾದವು ಮಂಡಿಸುವ ಪ್ರತಿರೋಧವೂ ಕೂಡ ಹೇಗೆ ಪಶ್ಚಿಮದ ಯಾಜಮಾನ್ಯದ ತಳಹದಿಯ ಮೇಲೆ ನಿಂತಿದೆ ಎಂಬುದನ್ನು ವಿವರಿಸುವಾಗ ಭಾರತೀಯ ಸಮಾಜದ ವೈದಿಕ ಯಾಜಮಾನ್ಯವನ್ನು ವಿಶೇಷವಾಗಿ ಗಮನಿಸಿ ವಿಶ್ಲೇಷಿಸತೊಡಗಿತು. ಭಾರತೀಯೊಸ್ತ್ರೀವಾದದ ಏಕಾಕಾರದ ವೈಚಾರಿಕ ಆಕೃತಿಯನ್ನು ವಿದ್ರೋಹಗೊಳಿಸಿ ಸ್ಥಳೀಯ ಅಗತ್ಯಗಳ ಹಿನ್ನೆಲೆಯಲ್ಲಿ ಸ್ತ್ರೀವಾದವನ್ನು ಪುನರ್ವ್ಯಾಖ್ಯಾನಿಸಲು ಬಯಸಿತು. ಅದಕ್ಕನುಗುಣವಾಗಿ ಮಹಿಳಾ ಚಳವಳಿಯ ಸ್ವರೂಪವನ್ನು, ಸಫಲತೆಯನ್ನು ವಿಮರ್ಶಿಸಿತು.
ಭಾರತದ ಮಹಿಳಾ ಚಳವಳಿ ಹಾಗು ಸ್ತ್ರೀವಾದದ ಇತಿಹಾಸವನ್ನು ಗಮನಿಸುವುದಾದರೆ ಅದನ್ನು ಸ್ಥಳೀಕರಿಸುವ ಪ್ರಯತ್ನವೊಂದು ವಸಾಹತು ಸಂದರ್ಭದಲ್ಲಿಯೇ ಗುರುತುಗೊಳ್ಳುತ್ತದೆ. ಆದರೆ ಇದು ಆಧುನಿಕೋತ್ತರ ಸ್ತ್ರೀವಾದದ ಸೈದ್ಧಾಂತಿಕತೆಗಿಂತ ಭಿನ್ನ ನೆಲೆಯನ್ನು ಹೊಂದಿದ್ದಾಗಿದೆ. ವಸಾಹತು ಸಂದರ್ಭದಲ್ಲಿ ಭಾರತೀಯ ಸ್ತ್ರೀಯಲ್ಲಿ ಸಂಸರ್ಗದಿಂದಾಗಿ ಉಂಟಾಗಬಹುದಾದ ಪರಿಣಾಮವನ್ನು ನಿಯಂತ್ರಿಸುವ ಉದ್ದೇಶದಿಂದಾಗಿ ಪಾಶ್ಚಾತ್ಯ ಶಿಕ್ಷಣ ಹಾಗು ಚಿಂತನಾಕ್ರಮಗಳಿದಿಂದಾಗಿ ಸುಧಾರಣಾವಾದವು ಮಹಿಳಾ ಸಮಸ್ಯೆಯನ್ನು ಸ್ಥಳೀಕರಿಸಿ ಪರಿಹಾರವನ್ನು ನೀಡಲೆತ್ನಿಸಿತು.2 ಅದಕ್ಕನುಗುಣವಾಗಿ ಭಾರತದ ಮಹಿಳೆಯ ಸ್ಥಾನಮಾನದ ಪ್ರಶ್ನೆಯನ್ನು ನಿರ್ವಚಿಸಿತು. ಆ ಚಟುವಟಿಕೆಯೇ ಭಾರತದ ಮಹಿಳಾ ಚಳವಳಿಯ ಮೊದಲ ಘಟ್ಟವಾಗಿ ಗುರುತುಗೊಂಡಿತು.
ಆಧುನಿಕೋತ್ತರ ಸ್ತ್ರೀವಾದವು ಪಶ್ಚಿಮದ ಯಾಜಮಾನ್ಯನನ್ನು ಪ್ರಶ್ನಿಸುತ್ತ ಪೌರ್ವಾತ್ಯ ರಾಷ್ಟ್ರಗಳ ಸಂದರ್ಭವನ್ನು ಮುನ್ನೆಲೆಗೆ ತಂದಾಗ ಅದರ ಪ್ರಭಾವ ಭಾರತದ ಸ್ತ್ರೀವಾದದ ಮೇಲೆ ಕೂಡ ಬಿದ್ದಿತು. ಅದರ ಪರಿಣಾಮವಾಗಿ ಒಂದೆಡೆ ಭಾರತೀಯ ಸ್ತ್ರೀವಾದ ಮತ್ತು ಅದರ ಆಕ್ಟಿವಿಸಂನ್ನು ನಿರ್ವಚಿಸುವ ಕೆಲಸ ಆರಂಭಗೊಂಡರೆ, ಇನ್ನೊಂದೆಡೆ ಭಾರತದ ಸ್ತ್ರೀವಾದ ಮತ್ತು ಅದರ ಅಕ್ಟಿವಿಸಂನಲ್ಲಿನ ನಗರ ಕೇಂದ್ರಿತ, ಮೇಲುಜಾತಿ ಹಾಗೂ ವರ್ಗಗಳ ಯಾಜಮಾನ್ಯನನ್ನು ಪ್ರಶ್ನಿಸುವ ನೆಲೆಯೊಂದು ಕಾಣಿಸಿಕೊಂಡಿತು. ಗ್ರಾಮೀಣ ಹಾಗೂ ಕೆಳಜಾತಿ ವರ್ಗಗಳ ಚಳವಳಿಯೊಂದನ್ನು ರೂಪಿಸಬೇಕಾದ ಅಗತ್ಯವನ್ನು ಮನಗಾಣಲಾಯಿತು. ಪಶ್ಚಿಮದ ಯಾಜಮಾನ್ಯವನ್ನು ಪ್ರತಿರೋಧಿಸುತ್ತ ತೃಣಮೂಲ ಸ್ತ್ರೀವಾದ ಹಾಗು ಮೇಲುವರ್ಗ ಕೇಂದ್ರಿತವಾದ ಭಾರತದ ಸ್ತ್ರೀವಾದವನ್ನು ಪ್ರತಿರೋಧಿಸುತ್ತ ದಲಿತ ಸ್ತ್ರೀವಾದದ ಸೈದ್ಧಾಂತಿಕತೆಗಳು ಮುಂಚೂಣಿಗೆ ಬಂದಿತು.3 ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸ್ತ್ರೀವಾದದ ಜಾಗತಿಕ ಮತ್ತು ಸ್ಥಳೀಕರಣದ ಪರಿಕಲ್ಪನೆಯನ್ನು ಗಮನಿಸುವುದಾದರೆ ಅದು ಸಾಪೇಕ್ಷವಾದುದು. ಪಶ್ಚಿಮದ ಎದುರು ಭಾರತವು ಸ್ಥಳೀಕರಣವನ್ನು ಪ್ರತಿನಿಧಿಸುತ್ತಿದ್ದರೆ, ಭಾರತದ ಸ್ತ್ರೀವಾದವೆಂಬ ಏಕಾಕಾರದ ಮುಂದೆ ದಲಿತ ಹಾಗು ತೃಣಮೂಲ ಸ್ತ್ರೀವಾದವು ಸ್ಥಳೀಕರಣವನ್ನು ಪ್ರತಿನಿಧಿಸುತ್ತದೆ. ಅಂತೆಯೇ ಭಾರತದ ಮಹಿಳಾ ಚಳವಳಿಯನ್ನು ಸ್ಥಳೀಕರಿಸುವ ಇನ್ನೊಂದು ಮಾದರಿಯಾಗಿ ಕರ್ನಾಟಕದಲ್ಲಿನ ಮಹಿಳಾ ಚಳವಳಿಯನ್ನು ಗಮನಿಸಬಹುದಾಗಿದೆ. ಆದರೆ ಅದಕ್ಕೆ ಪೂರ್ವದಲ್ಲಿ ಭಾರತ ಮಹಿಳಾ ಚಳವಳಿ ಕುರಿತ ಕೆಲವು ವಿಚಾರಗಳನ್ನು ಸಂಕ್ಷೇಪದಲ್ಲಿ ಪ್ರಸ್ತಾಪಿಸುವುದು ಉಪಯುಕ್ತವಾಗುತ್ತದೆ.
ಮಹಿಳಾ ಚಳವಳಿ ಎಂದರೇನು?
‘ಚಳವಳಿ’ ಎಂಬುದೊಂದು ಆಧುನಿಕ ಪರಿಕಲ್ಪನೆ, ಸಾಮುದಾಯಿಕ ಬದಲಾವಣೆಗಾಗಿ (ಒಮ್ಮೊಮ್ಮೆ ಆಗುತ್ತಿರುವ ಬದಲಾವಣೆಯನ್ನು ಪಡೆಯುವುದಕ್ಕಾಗಿ) ಸಾಮುದಾಯಿಕ ಒತ್ತಡವೊಂದನ್ನು ರೂಪಿಸಿ ಕಾರ್ಯೋನ್ಮುಖವಾಗಬಹುದೆಂಬ ವೈಚಾರಿಕ ಆಕೃತಿ ಹಾಗೂ ಕ್ರಿಯೆಯೊಂದು ರೂಪುಗೊಂಡದ್ದೇ ಆಧುನಿಕ ಸಮಾಜದಲ್ಲಿ.4 ಭಾರತದಲ್ಲಿಯಾದರೂ ಆಧುನಿಕತೆಯೊಂದಿಗೇ ಚಳವಳಿಯ ಸಾಧ್ಯತೆಗಳು ತೆರೆದುಕೊಂಡದ್ದು. ಇದಕ್ಕೆ ಹೋಲುವ ಕೆಲವು ಉದಾಹರಣೆಗಳನ್ನು ಆಧುನಿಕ ಪೂರ್ವ ಸಮಾಜದಲ್ಲಿ ಕಾಣಬಹುದಾದರೂ ಅವು ಚಳವಳಿ ಎನ್ನುವ ಆಧುನಿಕ ಅರ್ಥದಲ್ಲಿ ರೂಪುಗೊಂಡವೇನಲ್ಲ. ಉದಾಹರಣೆಗೆ ಭಕ್ತಿ ಚಳವಳಿ.
ಆಧುನಿಕ ಭಾರತದಲ್ಲಿ ಸುಧಾರಣಾವಾದಿ, ರಾಷ್ಟ್ರೀಯವಾದಿ, ಕಾರ್ಮಿಕ, ರೈತ, ದಲಿತ, ಭಾಷಾ ಇತ್ಯಾದಿ ವಿಷಯ ಕೇಂದ್ರಿತವಾದ ಹಲವು ಚಳವಳಿಗಳು ಸಾಕಷ್ಟು ಪ್ರಭಾವಶಾಲಿಯಾಗಿ ಕಂಡುಬರುತ್ತವೆ. ಅವುಗಳಲ್ಲಿ ರಾಷ್ಟ್ರೀಯವಾದಿ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿ ಅಳವಡಿಸಿದ ‘ಅಹಿಂಸೆ’ ಮತ್ತು ‘ಸತ್ಯಾಗ್ರಹ’ಗಳೆಂಬ ಮಹತ್ವದ ಚಳವಳಿಯ ಪರಿಕರಗಳು ವಿಶ್ವದ ಗಮನ ಸೆಳೆದಿವೆ. ಅಲ್ಲದೆ ಚಿಪ್ಕೊ ಹಾಗೂ ಪಾನ ನಿಷೇಧ ಚಳವಳಿ ಯಲ್ಲಿ ಮಹಿಳೆಯರು ಮರವನ್ನು ತಬ್ಬಿ ನಿಲ್ಲುವ ಹಾಗೂ ಮನೆಗಳಲ್ಲಿ ಅಡುಗೆ ಮಾಡದಿರುವಂತಹ ವಿಶಿಷ್ಟ ಮಾದರಿಯ ಪ್ರತಿಭಟನೆಯನ್ನು ಆವಿಷ್ಕರಿಸಿಕೊಂಡಿದ್ದಾರೆ.
ಸಮಾಜ ವಿಜ್ಞಾನವು ಚಳವಳಿ ಎಂಬುದನ್ನು ‘ತನ್ನದೇ ಆದ ಸೈದ್ಧಾಂತಿಕತೆಯೊಂದಿಗೆ ನಿರ್ದಿಷ್ಟ ಗುರಿಗಳನ್ನು ಹೊಂದಿ ಕೈಗೊಳ್ಳಲಾಗುವ ಸಾಮುದಾಯಿಕ ಒತ್ತಾಯ’ ಎಂಬುದಾಗಿ ವಿವರಿಸಿಕೊಳ್ಳುತ್ತದೆ.5 ಈ ವ್ಯಾಖ್ಯಾನವನ್ನು ಲಿಂಗ ಸಂಬಂಧೀ ನೆಲೆಯಿಂದ ವಿವರಿಸಿಕೊಳ್ಳುವ ಮೂಲಕ ಮಹಿಳಾ ಚಳವಳಿಯ ವ್ಯಾಖ್ಯೆಯನ್ನು ಪಡೆಯಬಹುದಾಗಿದೆ. ಅಂದರೆ ‘ಪುರುಷ ಪ್ರದಾನ ಲಿಂಗ ವ್ಯವಸ್ಥೆಯನ್ನು ಸಮಸ್ಯೀಕರಿಸಿಕೊಂಡು, ಆ ವ್ಯವಸ್ಥೆಯಲ್ಲಿ ತಾರತಮ್ಯ ಕ್ಕೊಳಗಾದ ಮಹಿಳೆಯರ ಹಕ್ಕುಗಳು ಮತ್ತು ಸವಲತ್ತುಗಳನ್ನು ಊರ್ಜಿತಗೊಳಿಸಲು ಕೈಗೊಳ್ಳಲಾಗುವ ಸಾಂಘಿಕ ಪ್ರಯತ್ನವನ್ನು ಮಹಿಳಾ ಚಳವಳಿ’ ಎನ್ನಬಹುದು.
ಮಹಿಳಾ ಚಳವಳಿಯ ಆರಂಭ
 ಮೇಲಿನ ಅರ್ಥದಲ್ಲಿ ಭಾರತದ ಮಹಿಳಾ ಚಳವಳಿಯನ್ನು ಗುರುತಿಸುವುದಾದರೆ ಅದನ್ನು 1820ರ ಆಸುಪಾಸಿನಲ್ಲಿ ಆರಂಭಗೊಂಡ ಸ್ತ್ರೀ ಶಿಕ್ಷಣದ ಪ್ರಸ್ತಾಪದೊಂದಿಗೆ ಆರಂಭಿಸಬಹುದಾಗಿದೆ.6 ಭಾರತವನ್ನೊಂದು ಏಕೀಕೃತ ಆಡಳಿತ ಘಟಕವಾಗಿ ತನ್ನ ಸ್ವಾಮ್ಯಕ್ಕೆ ಒಳಪಡಿಸಿಕೊಂಡ ನಂತರ ಬ್ರಿಟಿಷ್ ಸರ್ಕಾರವು ಕೈಗೆತ್ತಿಕೊಂಡ ಮುಖ್ಯ ವಿಚಾರಗಳಲ್ಲಿ ಸ್ತ್ರೀ ಶಿಕ್ಷಣವು ಒಂದು. ಹಾಗಾಗಿ ಇದಕ್ಕೆ ಭಾರತೀಯ ವ್ಯಾಪ್ತಿಯ ಚಾಲನೆ ಇರುವುದನ್ನು ಕಾಣಬಹುದು. ಪ್ರಭುತ್ವವು ತನ್ನ ಅಗತ್ಯಕ್ಕಾಗಿ ಕೈಗೆತ್ತಿಕೊಂಡ ಈ ವಿಚಾರವು ಮುಂದೆ ಕಾಣಿಸಿಕೊಂಡ ಮಹಿಳಾ ಚಳವಳಿಗೆ ಪ್ರೇರಕಾಂಶವಾಯಿತು. ಮುಂದೆ 1917ರಲ್ಲಿ ಅಖಿಲ ಭಾರತ ವ್ಯಾಪ್ತಿಯ ಮಹಿಳಾ ಸಂಘಟನೆಗಳು ಮಂಡಿಸಿದ ಮತದಾನದ ಹಕ್ಕೊತ್ತಾಯವು ಎಲ್ಲ ಅರ್ಥದಲ್ಲಿಯೂ ಭಾರತದ ಮಹಿಳಾ ಚಳವಳಿಯ ಮುಖ್ಯ ಮೈಲುಗಲ್ಲಾಯಿತು. ಹೀಗೆ ಬೆಳೆದುಬಂದ ಭಾರತದ ಮಹಿಳಾ ಚಳವಳಿಯನ್ನು ಮಹಿಳಾಪರ ಕಾಳಜಿಯೊಂದಿಗಿನ ಸುಧಾರಣಾ ಚಳವಳಿ, ಮಹಿಳೆಯರೇ ಮುನ್ನಡೆಸಿದ ಮಹಿಳಾ ಚಳವಳಿ ಹಾಗೂ ಪುರುಷರ ನೇತೃತ್ವದ ಸಾಮಾಜಿಕ ಚಳವಳಿಗಳಲ್ಲಿನ ಮಹಿಳೆಯರ ಪಾಲ್ಗೊಳ್ಳುವಿಕೆ ಎಂದು ಮೂರು ನೆಲೆಗಳಲ್ಲಿ ಗುರುತಿಸಲಾಗಿದೆ.7
ಸ್ತ್ರೀ ಶಿಕ್ಷಣದ ಆರಂಭಿಕ ದಿನಗಳಲ್ಲಿ ಸ್ತ್ರೀ ಸುಧಾರಣಾ ಚಟುವಟಿಕೆಯು ಹಿಂದೂ, ಪಾರ್ಸಿ, ಮುಸ್ಲಿಂ ಇತ್ಯಾದಿ ಧರ್ಮಾಧಾರಿತ ವಿಭಜನಾ ಸ್ವರೂಪದೊಂದಿಗೇ ಕಾಣಿಸಿಕೊಂಡಿತು. ಅದರ ಆಧಾರದ ಮೇಲೆ ಮಹಿಳಾ ಮಂಡಳಗಳ ರಚನೆ, ಕಾರ್ಯಚಟುವಟಿಕೆಗಳು ನಡೆದವು. ಆಯಾ ಧಾರ್ಮಿಕ ಸಮುದಾಯದ ಮುಖಂಡರು ಆಯಾ ಸಮುದಾಯದ ಮಹಿಳಾ ವಿಷಯಗಳನ್ನು ಕೈಗೆತ್ತಿಕೊಂಡು ಅಭಿಪ್ರಾಯ ರೂಪಿಸಲು ತೊಡಗಿದರು. ಈ ದೃಷ್ಟಿಯಿಂದ ನೋಡುವುದಾದರೆ ಭಾರತದ ಮಹಿಳಾ ಚಳವಳಿಯ ಆರಂಭವೇ ಏಕಾಕಾರದ ಗ್ರಹಿಕೆಯಿಂದ ಹೊರಟದ್ದಲ್ಲ.
ಇಷ್ಟಾಗಿಯೂ ಭಾರತದ ಮಹಿಳಾ ಚಳವಳಿಯ ಆರಂಭವು ಭಾರತವನ್ನೊಂದು ಏಕೀಕೃತ ಆಡಳಿತ ಘಟಕವಾಗಿ ಪರಿಭಾವಿಸತೊಡಗಿದ ಆಧುನಿಕ ಸಂದರ್ಭದಲ್ಲಾದ್ದರಿಂದ ಸಹಜವಾಗಿಯೇ ಅದಕ್ಕೆ ಏಕೀಕೃತ ರೂಪವೊಂದು ಸಿದ್ದಿಸಿತು. ಬ್ರಿಟಿಷರು ಪರಿಚಯಿಸಿದ ಆಧುನಿಕ ಶಿಕ್ಷಣ, ಆಡಳಿತ, ನ್ಯಾಯಾಂಗ ವ್ಯವಸ್ಥೆ ಇತ್ಯಾದಿಗಳು ಮಹಿಳಾ ವಿಷಯವನ್ನು ರಾಷ್ಟ್ರವ್ಯಾಪಿ ನೆಲೆಯಲ್ಲಿ ಗ್ರಹಿಸಲು ಅನುವಾಗಿಸಿತು. ರಾಷ್ಟ್ರೀಯವಾದಿ ಚಿಂತನೆಯು ಸ್ತ್ರೀ ಸುಧಾರಣೆಯನ್ನು ತನ್ನ ಕಾರ್ಯವ್ಯಾಪ್ತಿಯೊಳಗೆ ಅಧಿಕೃತಗೊಳಿಸಿಕೊಂಡಿದ್ದು ಇದರ ಏಕಾಕಾರದ ಗ್ರಹಿಕೆಗೆ ಖಚಿತ ಸ್ವರೂಪ ನೀಡಿತು. ಎಡಪಂಥೀಯ ಚಿಂತನೆಗಳು ಕೂಡ ಈ ಏಕಾಕಾರದ ಗ್ರಹಿಕೆಗೆ ಹೊರತಾಗಿರಲಿಲ್ಲ.
ಭಾರತದ ಸಂದರ್ಭದಲ್ಲಿ ಮಹಿಳಾ ಚಳವಳಿಯ ಅಧ್ಯಯನವು ರಾಷ್ಟ್ರೀಯವಾದಿ ಹೋರಾಟದ ಅಧ್ಯಯನದ ಭಾಗವಾಗಿ ಆರಂಭಗೊಂಡಿತು.9 ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿನ ಮಹಿಳೆಯರ ಪಾತ್ರವನ್ನು ದಾಖಲಿಸುವುದರೊಂದಿಗೆ ಮಹಿಳಾ ಚಳವಳಿಯ ದಾಖಲೀಕರಣವು ಆರಂಭಗೊಂಡು, ನಂತರದಲ್ಲಿ ಇನ್ನಿತರ ನೆಲೆಗಳಿಗೆ ವಿಸ್ತಾರಗೊಂಡಿತು. ಈ ಅಂಶವು ಕೂಡ ಭಾರತದ ಮಹಿಳಾ ಚಳವಳಿಯ ಏಕೀಕೃತ ಗ್ರಹಿಕೆಗೆ ನೆರವಾಯಿತು.
ಮೇಲಿನ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಕರ್ನಾಟಕದ ಸಂದರ್ಭವನ್ನು ಗಮನಿಸು ವುದಾದರೆ, ಅದಕ್ಕೆ ಒಂದು ನೆಲೆಯಲ್ಲಿ ಅಖಿಲ ಭಾರತ ಮಹಿಳಾ ಚಳವಳಿಯನ್ನು ಪ್ರತಿನಿಧಿ ಸುವ ಸ್ವರೂಪವಿರುವಂತೆ ಇನ್ನೊಂದು ಕಡೆ ಅದಕ್ಕೆ ತನ್ನದೇ ಆದ ಕೆಲವು ಸ್ಥಳೀಯ ಆಯಾಮಗಳಿರುವುದೂ ಕಂಡುಬರುತ್ತದೆ. ಹಾಗಾಗಿ ಕರ್ನಾಟಕದಲ್ಲಿನ ಮಹಿಳಾ ಚಳವಳಿಯ ಅಧ್ಯಯನವು ಏಕಕಾಲಕ್ಕೆ ಭಾರತದ ಮಹಿಳಾ ಚಳವಳಿಯನ್ನು ಪುನಾರಚಿಸುವ ಹಾಗು ಶ್ರೀಮಂತಗೊಳಿಸುವ ಎರಡೂ ದೃಷ್ಟಿಯಿಂದಲೂ ಉಪಯುಕ್ತವಾಗಿದೆ.
ಸ್ತ್ರೀ ಶಿಕ್ಷಣ
 ಭಾರತದ ಮಹಿಳಾ ಚಳವಳಿಯಲ್ಲಿ ಗುರುತುಗೊಳ್ಳುವ ಸ್ತ್ರೀಪರ ಸುಧಾರಣಾ ಚಟುವಟಿಕೆಗಳಿಂದ ಕರ್ನಾಟಕದ ವಿವರಗಳನ್ನು ಪರಿಶೀಲಿಸುವುದಾದರೆ, ಇಲ್ಲಿನ ಮಹಿಳಾ ಚಳವಳಿಯ ಆರಂಭವು ಕರ್ನಾಟಕವೆಂಬ ಏಕೀಕೃತ ಆಡಳಿತ ಘಟಕಕ್ಕಿಂತ ಹಿಂದಿನದು. ವಸಾಹತುಶಾಹಿ ಆಳ್ವಿಕೆಯು ತನ್ನ ಅನುಕೂಲಕ್ಕಾಗಿ ಕರ್ನಾಟಕವನ್ನು 20ಕ್ಕೂ ಹೆಚ್ಚಿನ ಆಡಳಿತ ವಿಭಾಗಗಳಲ್ಲಿ ಹಂಚಲಾಗಿತ್ತು. ಹಾಗಾಗಿ ವಸಾಹತು ಸಂದರ್ಭದ ಸ್ತ್ರೀಪರ ಸುಧಾರಣಾ ಚಟುವಟಿಕೆಯ ವಿವರಗಳನ್ನು ಆಯಾ ಆಡಳಿತ ಭಾಗಗಳ ಹಿನ್ನೆಲೆಯಲ್ಲಿಯೇ ಅರಿಯಬೇಕಾಗುತ್ತದೆ. ಅದಕ್ಕನುಗುಣವಾಗಿ ಸ್ತ್ರೀ ಶಿಕ್ಷಣ, ಮಹಿಳಾ ಸಂಬಂಧೀ ಕಾನೂನುಗಳ ರಚನೆ, ಸಾರ್ವಜನಿಕ ಸಂದರ್ಭದಲ್ಲಿನ ಮಹಿಳೆಯ ಪಾತ್ರ ಇತ್ಯಾದಿಗಳನ್ನು ಗುರುತಿಸಬೇಕಾಗುತ್ತದೆ.
ಕರ್ನಾಟಕದಲ್ಲಿನ ಸ್ತ್ರೀ ಶಿಕ್ಷಣದ ಕ್ಷೇತ್ರದಲ್ಲಿ ಲಂಡನ್ ಮಿಷನ್ ಸ್ಕೂಲಿನ ಸ್ಥಾನವು ಮಹತ್ವದ್ದು. ಇದು ಕ್ರಮವಾಗಿ 1833ರಲ್ಲಿ ಬಳ್ಳಾರಿಯಲ್ಲಿ, 1835ರಲ್ಲಿ ಬೆಳಗಾವಿ ಹಾಗು 1840ರಲ್ಲಿ ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಅವಕಾಶ ಕಲ್ಪಿಸಿತು. ಆ ನಂತರದಲ್ಲಷ್ಟೇ ದೇಶಿಯರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಕೈ ಜೋಡಿಸಿದರು. ಮಾದರಿ ರಾಜ್ಯವೆಂದು ಹೆಸರಾಗಿದ್ದ ಮೈಸೂರು ಸಂಸ್ಥಾನದಲ್ಲಿ ಶ್ರೀ ಚಾಮರಾಜೇಂದ್ರ ಒಡೆಯರ ಕಾಲದಲ್ಲಿ ಸ್ತ್ರೀ ಶಿಕ್ಷಣವು ಮಹತ್ವದ ಪ್ರಗತಿ ಸಾಧಿಸಿತು. ಅವರ ಅಸ್ಥಾನದಲ್ಲಿದ್ದ ಅಂಬಿಯಲ್ ನರಸಿಂಹಯ್ಯಂಗಾರ್ ಸ್ತ್ರೀ ಶಿಕ್ಷಣದ ಚಾಂಪಿಯನ್ ಎನಿಸಿಕೊಂಡರು.9 ಈ ಸಂಬಂಧಿತವಾಗಿ ಹಲವು ವಾದ ವಿವಾದಗಳಿಗೆ, ಆರೋಪಗಳಿಗೂ ಒಳಗಾದರು. ಹತ್ತು ವರ್ಷದ ಮೇಲಿನ ವಯಸ್ಕ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರಾಕರಿಸುತ್ತಿದ್ದ ಸಾಮಾಜಿಕ ಸಂದರ್ಭದಲ್ಲಿ ಪ್ರೋಇವರು 50 ರೂ.ಗಳ ವಿದ್ಯಾರ್ಥಿ ವೇತನವನ್ನು ನೀಡಲಾರಂಭಿಸಿದರು. ಇವರ ಪ್ರಯತ್ನದಿಂದಾಗಿ ಮೈಸೂರಿನ ಬಾಲಿಕಾ ಪಾಠಶಾಲೆ ಮಹಾರಾಣಿಯವರ ಕಾಲೇಜಾಯಿತು.
1867ರ ಸುಮಾರಿಗೆ ಮೈಸೂರು ಸಂಸ್ಥಾನದಲ್ಲಿ ಮೂರು ಸರ್ಕಾರಿ ಹಾಗೂ ಕೆಲವು ಅನುದಾನಿತ ಹೆಣ್ಣುಮಕ್ಕಳ ಶಾಲೆಗಳಾದರೆ, ಧಾರವಾಡ ಚಾಪುಗಳಲ್ಲಿ ತಲಾ ಐದು, ಉತ್ತರ ಕನ್ನಡದಲ್ಲಿ ಎರಡು ಹೀಗೆ ಕರ್ನಾಟಕದಾದ್ಯಂತ ಹೆಣ್ಣು ಮಕ್ಕಳ ಶಾಲೆಗಳು ಕಾಣಿಸಿಕೊಂಡವು. 1895-96ರಲ್ಲಿ ಮಹಿಳಾ ಶಿಕ್ಷಣ ತರಬೇತಿ ಶಾಲೆಯೊಂದು ಧಾರವಾಡದಲ್ಲಿ ಆರಂಭವಾಯಿತು. 1921-22ರಲ್ಲಿ ಮೈಸೂರು ಸಂಸ್ಥಾನದಲ್ಲಿ ಮೂರು ಇಂಡಸ್ಟ್ರಿಯಲ್ ಸ್ಕೂಲ್ ಫಾರ್ ಗರ್ಲ್ಸ್ ಆರಂಭಗೊಂಡವು.10
ವ್ಯಕ್ತಿಗತ ವಿವರಗಳನ್ನು ಗಮನಿಸುವುದಾದರೆ 1906ರಲ್ಲಿ ಶ್ರೀರಂಗಮ್ಮ ಮತ್ತು ರುಕ್ಮಿಣಮ್ಮ ಎಂಬುವರು ಮೊದಲ ಬಿ.ಎ.ಆನರ್ಸ್ ಪದವಿ ಗಳಿಸಿದರು. 1902ರಲ್ಲಿ ಇಂದಿರಮ್ಮ ಎಂಬ ಒಕ್ಕಲಿಗ ಮಹಿಳೆ ಶಾಲೆಯ ಬ್ರಾಹ್ಮಣ ವಿದ್ಯಾರ್ಥಿನಿಯರ ವಿರೋಧದ ನಡುವೆಯೂ ಶಿಕ್ಷಣ ಪಡೆದು ಪದವಿ ಗಳಿಸಿದರು. ಮುಂದೆ ಬೆಂಗಳೂರಿನ ಪ್ರಥಮ ಮಹಿಳಾ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.11 ಈ ಘಟನೆಯು ಸಹ ಕರ್ನಾಟಕದ ಸ್ತ್ರೀ ಶಿಕ್ಷಣದ ಸಂದರ್ಭದಲ್ಲೊಂದು ಮೈಲುಗಲ್ಲಾಯಿತು. ಸುಧಾರಣಾವಾದದ ಪರಿಣಾಮವಾಗಿ ಮೇಲ್ವರ್ಗದ ಮಹಿಳೆಯರಿಗೆ ತೆರೆದುಕೊಂಡ ಶಿಕ್ಷಣವು ಇಲ್ಲಿಂದ ಮುಂದೆ ಹಂತ ಹಂತವಾಗಿ ಉಳಿದ ವರ್ಗಗಳಿಗೂ ವಿಸ್ತರಣಗೊಳ್ಳತೊಡಗಿತು. ಸ್ತ್ರೀ ಶಿಕ್ಷಣದ ದಿಕ್ಕಿನಲ್ಲಿ ಆರ್.ಕಲ್ಯಾಣಮ್ಮ, ಬಾಗೀರಥಿ ಬಾಯಿ ಪುರಾಣಿಕ ಮುಂತಾದವರು ಮಹಿಳಾ ಸಮಾಜಗಳ ಮೂಲಕ ಕೆಲಸ ಮಾಡಿದರು.
ಸ್ತ್ರೀ ಉದ್ಯೋಗ
 ಸ್ತ್ರೀ ಶಿಕ್ಷಣದ ಮುಂದುವರಿಕೆಯಾಗಿ ಉದ್ಯೋಗದ ಪ್ರಸ್ತಾಪವು ಅದರ ಬೆನ್ನಿನಲ್ಲೇ ಕಾಣಿಸಿಕೊಂಡಿತು. ಪ್ರಾಥಮಿಕ ಶಿಕ್ಷಣ ಹಾಗು ದಾದಿ ವೃತ್ತಿಯಲ್ಲಿ ಮಹಿಳೆ ಯರೇ ಹೆಚ್ಚು ಸೂಕ್ತ ಎಂಬ ಅಭಿಪ್ರಾಯವು ಜನಜನಿತವಾಯಿತು. ಅದನ್ನನುಸರಿಸಿ ಶಿಕ್ಷಣ, ವೈದ್ಯಕೀಯ ಇತ್ಯಾದಿ ಸೇವಾ ಕ್ಷೇತ್ರಗಳಲ್ಲಿ ಮಹಿಳೆಯರ ಉದ್ಯೋಗ ಅವಕಾ ಗಳು ತೆರೆದುಕೊಂಡವು. ಸ್ತ್ರೀ ಶಿಕ್ಷಣದ ಅಗತ್ಯವನ್ನು ಮನಗಂಡು ಅಂಬಿಯಲ್ ನರಸಿಂಹಯ್ಯಗಾರ್ ಶಿಕ್ಷಕಿಯರಿಗೆ ಶೇ.25ರಷ್ಟು ಹೆಚ್ಚಿನ ವೇತನ ನೀಡುವುದರ ಮೂಲಕ ಹೆಣ್ಣು ಮಕ್ಕಳನ್ನು ಉದ್ಯೋಗಕ್ಕೆ ಆಕರ್ಷಿಸಿದರು. ಹೆಣ್ಣು ಮಕ್ಕಳ ಉನ್ನತ ಶಿಕ್ಷಣದ ವಿಚಾರವು ಸಮಾಜದಲ್ಲಿ ಹಂತೊಹಂತವಾಗಿ ಮಾನ್ಯತೆ ಗಳಿಸುತ್ತ ಹೋದಂತೆ ಅದನ್ನನುಸರಿಸಿ ಉದ್ಯೋಗದ ಅವಕಾಶಗಳು ತೆರೆದುಕೊಳ್ಳತೊಡಗಿದವು.
ಇಷ್ಟಾಗಿಯೂ ಈ ಕಾಲಘಟ್ಟದಲ್ಲಿ ಸ್ತ್ರೀಯರ ಉದ್ಯೋಗದ ವಿಸ್ತರಣೆ ಹೆಚ್ಚಿನದೇನಾಗಿರಲಿಲ್ಲ. ಅದನ್ನು ವೃತ್ತಿಪರತೆಯ ಯಶಸ್ಸಿನ ಅಥವಾ ಸ್ತ್ರೀಯ ವ್ಯಕ್ತಿತ್ವದ ವಿಸ್ತರಣೆಯ ದೃಷ್ಟಿಯಿಂದ ನೋಡಲಾಗಲಿಲ್ಲ. ಸ್ತ್ರೀ ಶಿಕ್ಷಣವೇ ಆದರ್ಶ ಗೃಹಿಣಿಯೊಬ್ಬಳ ನಿರ್ಮಾಣದ ಗುರಿಯನ್ನು ಮಾತ್ರ ಹೊಂದಿದ್ದುದಾದ್ದರಿಂದ ಅಂತಹ ಶಿಕ್ಷಿತ ಸ್ತ್ರೀಯನ್ನು ‘ಆದರ್ಶ ಗೃಹಿಣಿ’ಯಾಗಿಯೇ ಉಳಿಸಿಕೊಳ್ಳಲು ಈ ಸಂದರ್ಭವು ಬಯಸಿತು. ಉಳಿದಂತೆ ಕುಟುಂಬದ ಅನಿವಾರ್ಯತೆ, ಸಾಮಾಜಿಕ ಅಗತ್ಯ ಹಾಗು ಸ್ತ್ರೀಯ ಸಂಕಷ್ಟದಲ್ಲಿ ಮಾತ್ರ ಉದ್ಯೋಗವನ್ನು ಎತ್ತಿ ಹಿಡಿಯಲಾಯಿತು. ಹಾಗೆ ನೋಡಿದರೆ ಈ ಘಟ್ಟದಲ್ಲಿ ಉದ್ಯೋಗಕ್ಕಿಂತ ಸಾರ್ವಜನಿಕ ಸೇವೆಯಲ್ಲಿ ಮಹಿಳೆಯರನ್ನು ಹೆಚ್ಚು ಪ್ರೋಸುಧಾರಣಾವಾದಿ ಚಟುವಟಿಕೆ, ರಾಷ್ಟ್ರೀಯ ಹೋರಾಟ, ನಾಡು-ನುಡಿಯ ಏಳಿಗೆ ಇತ್ಯಾದಿ ಕ್ಷೇತ್ರದಲ್ಲಿ ಇವರನ್ನು ವಿಶೇಷವಾಗಿ ತೊಡಗಿಸಲಾಯಿತು.
ಮಹಿಳಾ ಸಂಘಟನೆ
 ಕರ್ನಾಟಕದಲ್ಲಿ ಕೂಡ ಮಹಿಳಾ ಸಮಾಜಗಳ ಆರಂಭವು ಪಾಶ್ಚಿಮಾತ್ಯ ಜೀವನ ಶೈಲಿಯ ಭಾಗವಾಗಿಯೇ ಆರಂಭಗೊಂಡಿತು. ಆಧುನಿಕ ಸಮಾಜದ ಪ್ರತಿಷ್ಠಿತ ವರ್ಗ ಅಭಿರುಚಿಗೆ ಅನುಗುಣವಾಗಿ ಟೆನ್ನಿಸ್, ಪಿಯಾನೋ, ಇಂಗ್ಲಿಷ್ ಕಲಿಕೆ ಇತ್ಯಾದಿಗಳಿಗೆ ತಮ್ಮ ಸ್ತ್ರೀಯರನ್ನು ಒಗ್ಗಿಸಲು ಈ ಸಮಾಜಗಳು ಆರಂಭಗೊಂಡವು. ಮುಂದೆ 1880ರ ಸುಮಾರಿಗೆ ಬ್ರಹ್ಮಸಮಾಜ, ಅರ್ಯಸಮಾಜ, ಪ್ರಾರ್ಥನಾ ಸಮಾಜ ಮುಂತಾದ ರಾಷ್ಟ್ರೀಯ ಸಂಘಟನೆಗಳ ಶಾಖೆಗಳು ಕರ್ನಾಟಕದಲ್ಲೂ ಆರಂಭಗೊಂಡು ದೇಶಿಯ ನೆಲೆಯಲ್ಲಿ ಮಹಿಳಾ ಸಂಘಟನೆಗೆ ಭಿನ್ನ ಧ್ಯೇಯೋದ್ದೇಶಗಳನ್ನು ಒದಗಿಸಿದವು.12
 1870ರಲ್ಲಿ ಬೆಂಗಳೂರಿನಲ್ಲಿ ಹಾಗೂ 1880ರಲ್ಲಿ ಮಂಗಳೂರಿನಲ್ಲಿ ಬ್ರಹ್ಮ ಸಮಾಜದ ಶಾಖೆಗಳು ಆರಂಭಗೊಂಡವು. ಹಾಗೆಯೇ 1870ರಲ್ಲಿ ಮಂಗಳೂರಿನಲ್ಲಿ ಪ್ರಾರ್ಥನಾ ಸಮಾಜದ ಶಾಖೆ ಹಾಗೂ 1880ರಲ್ಲಿ ಮೈಸೂರಿನಲ್ಲಿ ಆರ್ಯ ಸಮಾಜದ ಶಾಖೆ ಮೊದಲಿಗೆ ಆರಂಭಗೊಂಡವು. 1886ರಲ್ಲಿ ಥಿಯೋಸಾಫಿಕಲ್ ಸೊಸೈಟಿ ಏಕ ಕಾಲಕ್ಕೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಕಾರ್ಯಾರಂಭಿಸಿದವು. ಈ ಸಂಘಟನೆಗಳು ಮುಖ್ಯವಾಗಿ ಸ್ತ್ರೀ ಶಿಕ್ಷಣ, ವಿಧವಾ ವಿವಾಹ, ಬಾಲ್ಯವಿವಾಹ ನಿಷೇಧ ಇತ್ಯಾದಿ ವಿಷಯಗಳತ್ತ ಗಮನಹರಿಸಿದವು.
ಮುಂದೆ 20ನೇ ಶತಮಾನದ ಮೊದಲ ದಶಕಗಳಲ್ಲಿ ಮಹಿಳೆಯರೇ ಮುಂದುವರಿದು ಸ್ತ್ರೀ ಸಮಾಜಗಳನ್ನು ರೂಪಿಸತೊಡಗಿದರು. ಅವುಗಳಲ್ಲಿ ಬೆಂಗಳೂರಿನ ಶಾರದಾ ಸ್ತ್ರೀ ಸಮಾಜ ಹಾಗು ಮಹಿಳಾ ಸೇವಾ ಸಮಾಜಗಳು 1913ರಲ್ಲಿ ಆರಂಭಗೊಂಡವು. ಈ ಸಂಸ್ಥೆಗಳ ಕಾರ್ಯ ಚಟುವಟಿಕೆಗಳು ಸುಧಾರಣಾವಾದಿ ಚಟುವಟಿಕೆಗೆ ಪೂರಕವಾಗಿದ್ದು, ಹೊಲಿಗೆ, ಕಸೂತಿ, ಗೃಹಕೃತ್ಯಗಳ ತರಬೇತಿ, ಹಿಂದಿ ಕಲಿಕೆ ಮುಂತಾದ ಶಿಕ್ಷಣವನ್ನು ನೀಡಲಾರಂಭಿಸಿದವು.
ಈ ಕಾಲಘಟ್ಟದ ಮಹಿಳಾ ಸಂಘಟನೆಗಳು ಹಲವು ಭಿನ್ನ ನೆಲೆಯಲ್ಲಿ ಕೆಲಸವನ್ನು ಮಾಡಲಾರಂಭಿಸಿದ್ದು ಕಂಡುಬರುತ್ತದೆ. 1915ರಲ್ಲಿ ಮಹಿಳಾ ಸಂಘಟನೆಗಳು ಒಂದೆಡೆ ಸೇರಿ ಮಹಾಯುದ್ಧ ಸಂದರ್ಭಕ್ಕೆ ಅಗತ್ಯವಾದ ಕಾರ್ಯಯೋಜನೆಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಿ ಕಾರ್ಯೋನ್ಮುಖವಾಗಿದ್ದವು. 1919ರಲ್ಲಿ ಮತ್ತೊಮ್ಮೆ ಸೇರಿ ಮಿತ್ರರಾಷ್ಟ್ರಗಳ ಪರವಾಗಿ ಶುಭಕಾಮನೆ ಸಲ್ಲಿಸಿದ್ದವು. ಅಂತೆಯೇ 1925ರಲ್ಲಿ ಮೈಸೂರಿನಲ್ಲಿ ಮಹಿಳಾ ಸಮ್ಮೇಳನ ಆಯೋಜಿಸಿ ವಿವಿಧ ವಿಷಯಗಳನ್ನು ಚರ್ಚಿಸಿ ಗೊತ್ತುವಳಿ ಸ್ವೀಕರಿಸಿದ್ದವು.13
ಹೀಗೆ ಅಂದಿನ ದಿನಗಳಲ್ಲಿ ಭಾರತೀಯ ಸ್ತ್ರೀ ಸಮಾಜ, ಶಾರದಾ ಸ್ತ್ರೀ ಸಮಾಜ, ವನಿತಾ ಸದನ, ಸರಸ್ವತಿ ಸದನ, ವನಿತಾ ಸೇವಾ ಸಮಾಜ, ವೀರಶೈವ ಮಹಿಳಾ ಜ್ಞಾನ ಮಂದಿರ, ಅಕ್ಕನ ಬಳಗ ಇತ್ಯಾದಿ ಹೆಸರಿನ ಹಲವು ಮಹಿಳಾ ಸಂಸ್ಥೆಗಳು ಆರಂಭಗೊಂಡು ತಮ್ಮದೇ ಆದ ಧ್ಯೇಯೋದ್ದೇಶದೊಂದಿಗೆ ಕೆಲಸ ಮಾಡತೊಡಗಿದವು. 1930ರಲ್ಲಿ ಆಲ್ ಇಂಡಿಯಾ ವುಮೆನ್ಸ್ ಕಾನ್ಫರೆನ್ಸಿನ ಕರ್ನಾಟಕ ಶಾಖೆಯು ಆರಂಭಗೊಂಡಿತು. ಶ್ಯಾಮಲಾದೇವಿ ಮುಂತಾದವರು ಅವರ ಸಕ್ರಿಯ ಕಾರ್ಯಕರ್ತರಾದರು. ಮುಂದೆ ಈ ಸಂಸ್ಥೆಗಳೇ ರಾಷ್ಟ್ರೀಯೊಹೋರಾಟೊಹಾಗೂ ಏಕೀಕರಣ ಚಟುವಟಿಕೆಗಳಲ್ಲೂ ಭಾಗವಹಿಸಿದವು.
ಮಹಿಳಾ ಕಾನೂನುಗಳು
 ಈಗಾಗಲೇ ಗಮನಿಸಿರುವಂತೆ ಕರ್ನಾಟಕವು ಹಲವು ಆಡಳಿತ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದರಿಂದ ಆಯಾ ಪ್ರಾಂತ್ಯಗಳ ಆಡಳಿತವು ಹೊರಡಿಸಿದ ಕಾಯ್ದೆಗಳಿಗೆ ಅನುಗುಣವಾಗಿ ತಮ್ಮನ್ನು ತೆರೆದುಕೊಂಡವು. ಅದರಂತೆ ಮೈಸೂರು ಸಂಸ್ಥಾನದಲ್ಲಿ ಕೂಡ 1892ರಲ್ಲಿ ನಾಚ ಸಂಪ್ರದಾಯಕ್ಕೆ ವಿದಾಯ ಹೇಳಲಾಯಿತು. ಈಗಾಗಲೇ ಈ ವೃತ್ತಿಯಲ್ಲಿದ್ದ ಮಹಿಳೆಯರಿಗೆ ಸಹಾಯಧನವನ್ನು ಮುಂದುವರೆಸುವುದು ಹಾಗು ಮುಂದೆ ತೆರನಾಗುವ ದೇವಸ್ಥಾನಗಳ ಆ ಸ್ಥಾನಗಳನ್ನು ಯಾರನ್ನೂ ನೇಮಿಸದಿರುವುದು ಎಂಬ ನಿಬಂಧನೆಯೊಂದಿಗೆ ಮೈಸೂರು ಸರ್ಕಾರವು ಅ ಸಂಪ್ರದಾಯವನ್ನು ನಿಷೇಧಿಸಿತು. ಅಂತೆಯೇ 1894ರಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಯನ್ನು ಜಾರಿಗೊಳಿಸಿತು. 1907ರಲ್ಲಿ ವಿಡೋ ಹೋಂಗಳನ್ನು ತೆರೆಯಿತು. ಉಳಿದಂತೆ ಬ್ರಿಟಿಷ್ ನೇರ ಆಳ್ವಿಕೆಗೆ ಒಳಪಟ್ಟಿದ್ದ ಪಾಂತ್ರ್ಯಗಳಲ್ಲಿ ಜಾರಿಗೆ ಬಂದವು. ಪತ್ರಿಕೆ ಮತ್ತು ಸಾಹಿತ್ಯ, ಕರ್ನಾಟಕದ ಸಂದರ್ಭದಲ್ಲಿ ಗಮನಿಸಬಹುದಾದ ಇನ್ನೊಂದು ಮುಖ್ಯ ವಿಚಾರ, ಮಹಿಳೆಯರು ಪತ್ರಿಕೋದ್ಯಮ ಮತ್ತು ಸಾಹಿತ್ಯಕ್ಷೇತ್ರಕ್ಕೆ ಪ್ರವೇಶಿಸಿದ್ದು ಹಾಗೂ ಆ ಮಾಧ್ಯಮಗಳನ್ನು ಮಹಿಳಾ ಸುಧಾರಣಾ ಪ್ರಣಾಳಿಕೆಯ ವೇದಿಕೆಯಾಗಿ ಬಳಸಿಕೊಂಡಿದ್ದು. 1888ರಲ್ಲಿ ಮೈಸೂರಿನಿಂದ ಹೊರಡುತ್ತಿದ್ದ ‘ಕರ್ನಾಟಕ ವಾಣಿ ವಿಲಾಸ ಪತ್ರಿಕೆ’ಯನ್ನು ಮಹಿಳಾ ಪತ್ರಿಕೆಯಾಗಿ ಗುರುತಿಸಲಾಗಿದೆ.14 ಅಲ್ಲಿಂದ ಮುಂದಕ್ಕೆ ಮಹಿಳೆಯರನ್ನು ಪತ್ರಿಕೆಯ ಓದುಗರಾಗಿ ಹಾಗೂ ಬರಹಗಾರರಾಗಿ ಗುರುತಿಸಿಕೊಂಡ ಕನ್ನಡ ಪತ್ರಿಕೋದ್ಯಮವು ಮಹಿಳಾ ಪತ್ರಿಕೋದ್ಯಮಕ್ಕೆ ಸಾಕಷ್ಟು ಅವಕಾಶ ಕಲ್ಪಿಸಿತು. ತಮ್ಮ ಪತ್ರಿಕೆಗಳೇ ಮಹಿಳಾ ವಿಷಯಗಳ ಕುರಿತ ಬರಹಗಳಿಗೆ ವಿಶೇಷ ಸ್ಥಾನವನ್ನು ಕಲ್ಪಿಸುತ್ತ, ಮಹಿಳಾ ಅಂಕಣಗಳನ್ನು ಆರಂಭಿಸಿತು. ಅವುಗಳ ನಿರ್ವಹಣಾ ಜವಾಬ್ದಾರಿಯನ್ನು ಮಹಿಳೆಯರಿಗೇ ನೀಡಿತು. ಪರಿಣಾಮವಾಗಿ ತಿರುಮಲಾಂಬ, ಕಲ್ಯಾಣಮ್ಮ, ಶ್ಯಾಮಲಾದೇವಿ, ಜಯಲಕ್ಷ್ಮಮ್ಮ, ಸರಸ್ವತಿ ಬಾಯಿ ರಾಜವಾಡೆ ಮುಂತಾದವರು ಪತ್ರಿಕಾ ಸಂಪಾದಕರಾಗಿ, ಅಂಕಣಕಾರರಾಗಿ ಮುಂಚೂಣಿಗೆ ಬಂದರು. ಮಹಿಳಾ ವಿಷಯಗಳಿಗೆ ಮೀಸಲಾದ ಸತಿ ಹಿತೈಷಿಣಿ, ಸರಸ್ವತಿ ಮುಂತಾದ ಮಹಿಳಾ ಪತ್ರಿಕೆಗಳು ಆರಂಭಗೊಂಡವು.14 ಈ ಅವಕಾಶವನ್ನು ಬಳಸಿಕೊಂಡು ಅವರು ಮಹಿಳಾ ವಿಷಯವನ್ನು ವಿಶೇಷವಾಗಿ ಪ್ರಸ್ತಾಪಿಸತೊಡಗಿದರು. ಮಹಿಳಾ ಸಂಘಟನೆಗಳ ಸಭೆ, ಸಮಾರಂಭಗಳ ವರದಿಗಳು ಕಾಣತೊಡಗಿದವು ಪತ್ರಿಕೆಗಳಲ್ಲಿ ಕೂಡ ಆಯಾ ಪಾಂತ್ರ್ಯಗಳ ಆಡಳಿತಾತ್ಮಕ ನಿಲುವಿನ ಗುಣವಾಗಿ ಕರ್ನಾಟಕದ ಪ್ರಾಂತ್ಯಗಳಲ್ಲಿ ಮಹಿಳಾ ಸುಧಾರಣಾ ಕಾನೂನು ಜಾರಿಗೆ ಬಂದಿತು. ಉದಾಹರಣೆಗೆ 1829ರಲ್ಲಿ ಸತಿ ನಿಷೇಧ, 1929ರಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಇತ್ಯಾದಿಗಳು ಕರ್ನಾಟಕದ ಬ್ರಿಟಿಷ್ ಆದಿಪತ್ಯದ ಪ್ರಾಂತ್ಯಗಳಿಗೂ ಅನ್ವಯಗೊಂಡವು.
ಪತ್ರಿಕೆಗಳಲ್ಲಿ ಮಹಿಳೆಗೆ ದೊರೆತ ಪ್ರೋಹಾಗೂ ಅನುಭವದಿಂದಾಗಿ ಆಧುನಿಕ ಲೇಖಕಿಯರು ಕಾಣಿಸಿಕೊಂಡರು. ಸಾಹಿತ್ಯ ಸ್ಪರ್ಧೆಯ ನಿಮಿತ್ತದೊಂದಿಗೆ ಶಾಂತಾಬಾಯಿ ನೀಲಗಾರ, ತಿರುಮಲಾಂಬ, ತಿರುಮಲೆ ರಾಜಮ್ಮ, ಕಲ್ಯಾಣಮ್ಮ, ಶ್ಯಾಮಲಾದೇವಿ, ಸರಸ್ವತಿ ಗೌಡ, ಸರಸ್ವತಿಬಾಯಿ ರಾಜವಾಡೆ ಮುಂತಾದವರು ಗಂಭೀರವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರು. ಹಾಗೂ ತಮ್ಮ ಸಾಹಿತ್ಯವನ್ನು ಮಹಿಳಾ ವಿಷಯಗಳ ಪ್ರಸ್ತುತಿಗೆ, ವಿಮರ್ಶೆಗೆ, ಪ್ರಚಾರಕ್ಕೆ ಪೂರಕವಾಗುವಂತೆ ನಿರ್ವಹಿಸಿದರು. ಸ್ತ್ರೀ ಶಿಕ್ಷಣ, ವಿಧವಾ ಸಮಸ್ಯೆ, ಅಸಮ ವಿವಾಹದ ಮುಂತಾದ ವಿಷಯಗಳನ್ನು ವಸ್ತುವಾಗಿಸಿಕೊಂಡು ವೈಚಾರಿಕ ಬರಹಗಳನ್ನು, ನಾಟಕ, ಕಾದಂಬರಿ, ಸಣ್ಣಕತೆ, ಕಾವ್ಯ ಇತ್ಯಾದಿ ಸೃಜನಶೀಲ ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ಮಹಿಳಾ ರಾಜಕಾರಣದ ಪ್ರಣಾಳಿಕೆಯ ಅನಾವರಣಕ್ಕೆ ಬಳಸಿಕೊಂಡರು.
ರಾಷ್ಟ್ರೀಯ ಹೋರಾಟ
 ಭಾರತದ ಮಹಿಳಾ ಚಳವಳಿಯ ಒಂದು ಪ್ರಧಾನ ಧಾರೆಯು 1930ರ ದಶಕದ ವೇಳೆಗೆ ರಾಷ್ಟ್ರೀಯ ಹೋರಾಟದೊಳಗೆ ತನ್ನನ್ನು ವಿಲೀನಗೊಳಿಸಿಕೊಂಡಂತೆ ಕರ್ನಾಟಕದಲ್ಲೂ ಕೂಡ ಹಲವು ಮಹಿಳಾ ನಾಯಕಿಯರು ರಾಷ್ಟ್ರೀಯ ಹೋರಾಟದಲ್ಲಿ ಉದಯಿಸಿದರು. ಅವರಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ರಾಷ್ಟ್ರೀಯ ನಾಯಕಿಯಾಗಿ ವಿಜೃಂಭಿಸಿದರೆ, ಉಮಾಬಾಯಿ ಕುಂದಾಪುರ, ಕೃಷ್ಣಬಾಯಿ ಪಂಜೀಕರ್ ಮುಂತಾದವರು ರಾಷ್ಟ್ರೀಯ ನೆಲೆಯಲ್ಲಿ ಗಮನ ಸೆಳೆದರು. ಉಳಿದಂತೆ ಬಳ್ಳಾರಿ ಸಿದ್ದಮ್ಮ, ನಾಗಮ್ಮ ಪಾಟೀಲ್, ಸುಬ್ಬಮ್ಮ ಜೋಯಿಸ್, ಯಶೋಧರಮ್ಮ ದಾಸಪ್ಪ. ಪದ್ಮಾವತಿ ಬಿದರಿ, ಲಕ್ಷಮ್ಮ, ಮುದ್ದಮ್ಮ, ಕೊಡಗಿನ ಗೌರಮ್ಮ ಮುಂತಾದ ಅಸಂಖ್ಯ ಮಹಿಳೆಯರು ಅಸಹಕಾರ ಚಳವಳಿ, ಧ್ವಜ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ ಇತ್ಯಾದಿಗಳಲ್ಲಿ ಧೈರ್ಯದಿಂದ ಮುನ್ನುಗ್ಗಿದರು. ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು, ರೈತ ಮಹಿಳೆಯರು ರಾಷ್ಟ್ರೀಯ ಹೋರಾಟದೊಂದಿಗೆ ತಮ್ಮನ್ನು ಗುರುತಿಸಿಕೊಂಡರು. ಬ್ರಿಟಿಷ್ ಆಳ್ವಿಕೆಯ ವಿರುದ್ಧದ ಹೋರಾಟವನ್ನು ಕಾರ್ಮಿಕ ಸಂಘಟನೆಗಳು ತಮ್ಮದೇ ಆದ ನೆಲೆಯಲ್ಲಿ ನಡೆಸುತ್ತಿದ್ದು, ಈೊಹೋರಾಟಗಳಲ್ಲಿ ಕೂಡ ಭಾಗೀರತಮ್ಮ ಚೆಂಗಲಾರಾಧ್ಯ ಮುಂತಾದ ಮಹಿಳೆಯರು ಭಾಗವಹಿಸಿದ್ದರು. ಹೀಗೆ ರಾಷ್ಟ್ರೀಯ ಹೋರಾಟದಲ್ಲಿನ ಮಹಿಳಾ ಚಟುವಟಿಕೆಯು ಕರ್ನಾಟಕದ ಸಂದರ್ಭದಲ್ಲಿಯು ಗಮನಾರ್ಹವಾದುದಾಗಿತು್ತ.15
ಕರ್ನಾಟಕ ಏಕೀಕರಣ
 ರಾಷ್ಟ್ರೀಯ ಹೋರಾಟದ ಜೊತೆ ಜೊತೆಗೆ ಕರ್ನಾಟಕದಲ್ಲಿ ಕಾಣಿಸಿಕೊಂಡ ಇನ್ನೊಂದು ಸಂಗತಿ ಏಕೀಕರಣ ಚಳವಳಿ. ಬ್ರಿಟೀಷ್ ಹಿತಾಸಕ್ತಿಗನುಗುಣವಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ಜನತೆಯನ್ನು ಒಗ್ಗೂಡಿಸಬೇಕೆಂಬ ಈ ಹೋರಾಟವನ್ನು ಅಂದಿನ ನಾಯಕರು ರಾಷ್ಟ್ರೀಯ ಹೋರಾಟಕ್ಕೆ ಪೂರಕವಾಗಿಯೇ ರೂಪಿಸಿಕೊಂಡರು. ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಬಿ.ಎಂ.ಶ್ರೀಕಂಠಯ್ಯ ಮುಂತಾದವರು ಮುನ್ನಡೆಸಿದ ಈ ಹೋರಾಟದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿತ್ತು. ರಾಷ್ಟ್ರೀಯ ಹೋರಾಟದ ಹಲವು ನಾಯಕಿಯರು, ಲೇಖಕಿಯರು, ಸಮಾಜ ಸೇವಾಕರ್ತೆಯರೂ ಆಗಿದ್ದ ಅಂದಿನ ಬಹುತೇಕ ಎಲ್ಲ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಈ ಹೋರಾಟಕ್ಕೆ ಸ್ಪಂದಿಸಿದರು. ಭಾರತಾಂಬೆಯ ಬಿಡುಗಡೆಯಂತೆಯೇ, ಕನ್ನಡಾಂಬೆಯ ಒಗ್ಗೂಡುವಿಕೆಯೂ ತಮ್ಮ ಆದ್ಯ ಕರ್ತವ್ಯವೆಂದು ಸ್ವೀಕರಿಸಿದರು.
ಗಡಿ ಪ್ರಾಂತ್ಯವಾಗಿದ್ದ ಸೊಲ್ಲಾಪುರದಲ್ಲಿ ಜಯದೇವಿತಾಯಿ ಲಿಗಾಡೆ, ಬಳ್ಳಾರಿಯಲ್ಲಿ ಅಲ್ಲಂ ಸುಮಂಗಳಮ್ಮ, ತೊಗರಿ ಸರ್ವಮಂಗಳಾಂಬ, ಹೈದರಾಬಾದ್ ಕರ್ನಾಟಕದಲ್ಲಿ ವಿಮಲಾಬಾಯಿ ಮೇಲ್ಕೊಟೆ, ಶ್ರೀಮತಿ ಕಾಡಮ್ಮ, ಪದ್ಮಾವತಿ ದೇವಿ ಅಂಗಡಿ ಸಾವಿತ್ರಿ ಬಾಯಿ ನಾಗನಗೌಡ ಮುಂತಾದ ಮಹಿಳೆಯರು ಏಕೀಕರಣಕ್ಕಾಗಿ ದುಡಿದರು.16 ಅರಸೀಕೆರೆಯಲ್ಲಿ ನಡೆದ ಸರ್ವಪಕ್ಷಗಳ ಸಭೆ ಕಾಂಗ್ರೆಸ್ ಉಪಸಮಿತಿ ನೀಡಿದ್ದ ಏಕೀಕರಣ ಕುರಿತ ವರದಿಯನ್ನು ತಿರಸ್ಕರಿಸಿದಾಗ ಬಳ್ಳಾರಿ ಸಿದ್ಧಮ್ಮನವರು ಆ ಸಭೆಯ ಅಧ್ಯಕ್ಷತೆ ವಹಿಸಿದ್ದರು ಎಂಬ ವಿಚಾರವು ಏಕೀಕರಣ ಹೋರಾಟದಲ್ಲಿ ಮಹಿಳೆಯರು ಹೊಂದಿದ್ದ ನೀಡಿದ ಪ್ರಾಶಸ್ತ್ಯವನ್ನು ತಿಳಿಸುತ್ತದೆ. ಏಕೀಕರಣ ಚಿಂತನೆಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಳಿವು-ಉಳಿವಿನ ಸಂಗತಿಯನ್ನು ಮಹಿಳೆಯೊಂದಿಗೆ ಸಮೀಕರಿಸಿದ್ದರಿಂದ ಹಾಗೂ ಸಂಸ್ಕೃತಿಯ ರಕ್ಷಕರಾಗಿ, ವಾಹಕರಾಗಿ ಮಹಿಳೆಯರನ್ನು ಗುರುತಿಸಿದ್ದರಿಂದ ಅಂದಿನ ಮಹಿಳೆಯರು ಅದನ್ನು ಉತ್ಸಾಹದಿಂದ ಹೆಗಲಿಗೇರಿಸಿಕೊಂಡರು. ಏಕೀಕರಣದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಶ್ರೀಮಂತಿಕೆಯು ಮೂಲಧನಗಳಲ್ಲಿ ಒಂದಾಗಿದ್ದರಿಂದ ಸಹಜವಾಗಿಯೇ ಅಂದಿನ ಬಹುಪಾಲು ಲೇಖಕಿಯರು ಏಕೀಕರಣಕ್ಕೆ ಹೆಗಲು ಕೊಟ್ಟರು. ಮಹಿಳಾ ಗೋಷ್ಠಿಗಳ ಹಾಗು ಮಹಿಳಾ ಸಂಘಟನೆಗಳ ವೇದಿಕೆಗಳನ್ನು ಏಕೀಕರಣದ ವೇದಿಕೆಗಳಾಗಿ ಬಳಸಿಕೊಂಡರು. ಅಕ್ಕನ ಬಳಗ, ಶಾರದಾ ಕರ್ನಾಟಕ ಕನ್ಯಾಶಾಲೆ ಮುಂತಾದ ಮಹಿಳಾ ಸಂಘಟನೆಗಳು ತನ್ನ ಉದ್ದೇಶಗಳಲ್ಲಿ ಕನ್ನಡದ ಪ್ರಶ್ನೆಯನ್ನು ಮೊದಲಿನದಾಗಿ ಗುರುತಿಸಿಕೊಂಡಿತು.
ಹೀಗೆ ವಸಾಹತು ಸಂದರ್ಭದಲ್ಲಿ ಕರ್ನಾಟಕದ ಮಹಿಳೆಯರು ಮಹಿಳಾ ಸಂಬಂಧಿತ ಹಾಗೂೊಇನ್ನಿತರ ಕ್ಷೇತ್ರಗಳೆರಡಕ್ಕೂ ತಮ್ಮನ್ನು ತೊಡಗಿಸಿಕೊಂಡು ಚಟುವಟಿಕೆ ನಿರತರಾದರು. ಈ ಚಟುವಟಿಕೆಯ ಸೈದ್ಧಾಂತಿಕ ಹಿನ್ನೆಲೆಯು ಸುಧಾರಣಾವಾದ ಹಾಗೂ ರಾಷ್ಟ್ರೀಯ ವಾದದ್ದಾಗಿದ್ದಿತು. ಅಂದಿನ ಮಹಿಳೆಯರು ತಮಗೆ ಒದಗಿಸಿದ ಅವಕಾಶವನ್ನು ಸಾಕಷ್ಟು ಸಮರ್ಥವಾಗಿ ಬಳಸಿಕೊಂಡರು. ಸೀಮಿತ ಅವಕಾಶದೊಳಗೆ ಅಪಾರವಾದ ಅನುಭವವನ್ನು ತಮ್ಮದಾಗಿಸಿಕೊಂಡರು. ಆ ಮೂಲಕ ಮಹಿಳಾ ರಾಜಕಾರಣ ಹಾಗೂ ಭಾರತದ ರಾಜಕಾರಣಗಳೆರಡರಲ್ಲೂ ತಮ್ಮ ಗುರುತನ್ನು ಉಳಿಸಿದರು.
ಸ್ವಾತಂತ್ರ್ಯೋತ್ತರ ಕಾಲದ ಮಹಿಳಾ ಚಳವಳಿ
 ಸ್ವಾತಂತ್ರ್ಯೋತ್ತರ ಮೊದಲ ದಶಕಗಳು ಭಾರತದ ಮಹಿಳಾ ಚಳವಳಿಯ ಸಂದರ್ಭ ದಲ್ಲಿ ಹೆಚ್ಚಿನ ಸಾಂಘಿಕ ಚಟುವಟಿಕೆಗೆ ಹೊರತಾದುದು ಎಂಬ ಅಭಿಪ್ರಾಯವಿದೆ ಹಾಗೂ ಇದಕ್ಕೆ ಕಾರಣವನ್ನು ಹೀಗೆ ಗುರುತಿಸಲಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಮಹಿಳಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಹಲವು ನಾಯಕಿಯರು ಸ್ವಾತಂತ್ರ್ಯಾನಂತರದಲ್ಲಿ ಪ್ರಭುತ್ವ ನಿರ್ದೇಶಿತ ಕಲ್ಯಾಣ ಕಾರ್ಯಕ್ರಮಗಳ ಅಳವಡಿಕೆಯ ಕಾರ್ಯ ಚಟುವಟಿಕೆಗಳಲ್ಲಿ ನಿರತರಾದರು. ಈ ಪ್ರಕ್ರಿಯೆಯಿಂದ ಹೊರಗುಳಿದ ಇನ್ನು ಕೆಲವರು ಸ್ವಾತಂತ್ರ್ಯೋತ್ತರ ಭಾರತದ ಸಂದರ್ಭವನ್ನು ಕಾಯ್ದು ನೋಡುವ ಅಭಿಲಾಷೆಯುಳ್ಳವರಾದರು. ಅಲ್ಲದೆ ಒಂದು ಗುಂಪು ತನ್ನನ್ನು ಎಡಪಂಥೀಯ ಹೋರಾಟಗಳಲ್ಲಿ ಗುರುತಿಸಿಕೊಂಡಿತು. ಈ ಎಲ್ಲದರೊಂದಿಗೆ ಶಿಕ್ಷಿತ ಮಧ್ಯಮ ವರ್ಗದ ಮಹಿಳೆಯರು ಸಂವಿಧಾನಾತ್ಮಕ ಸವಲತ್ತುಗಳ ಬಳಕೆಯ ಕಡೆಗೆ ಗಮನಹರಿಸಿ ವೈಯಕ್ತಿಕ ಸಾಧನೆಯಲ್ಲಿ ನಿರತರಾದರು. ಇಂತಹ ಸನ್ನಿವೇಶದೊಪರಿಣಾಮವಾಗಿ ಮಹಿಳೆಯರ ಸಾಂಘಿಕ ಚಟುವಟಿಕೆಯು ಹಿನ್ನಡೆ ಸಾಧಿಸಿತು.
ಮೇಲಿನ ವಿಚಾರಗಳ ಹಿನ್ನೆಲೆಯಲ್ಲಿ ಕರ್ನಾಟಕ ಸಂದರ್ಭವನ್ನು ಗ್ರಹಿಸಬಹುದಾದರೂ ಅದರೊಂದಿಗೆ ಕರ್ನಾಟಕದ ಒಂದು ವಿಶೇಷತೆಯನ್ನು ಗಮನಿಸಬೇಕಾಗುತ್ತದೆ. ಸ್ವಾತಂತ್ರ್ಯ ನಂತರದಲ್ಲಿ ಮಹಿಳೆಯರ ರಾಜಕೀಯ ಚಟುವಟಿಕೆಯು ಬಹುತೇಕ ಕರ್ನಾಟಕ ಏಕೀಕರಣದಲ್ಲಿ ಕೇಂದ್ರೀಕೃತಗೊಂಡುದಾಯಿತು. ರಾಷ್ಟ್ರೀಯ ಹೋರಾಟದ ಅನುಭವ ದೊಂದಿಗೆ ಅದೇ ತನ್ಮಯತೆಯಿಂದ ಮಹಿಳೆಯರು ಕರ್ನಾಟಕದ ಒಗ್ಗೂಡುವಿಕೆಗೆ ಗಮನ ಹರಿಸಿದರು. 1956ರ ಏಕೀಕರಣ ರಚನೆಯೊಂದಿಗೆ ಈ ಚಟುವಟಿಕೆಯು ಒಂದು ನಿಲುಗಡೆಯನ್ನು ಕಂಡಿತು.
ಅಂತೆಯೇ ಸ್ವಾತಂತ್ರ್ಯ ಪೂರ್ವದ ಅನೇಕ ಮಹಿಳಾ ಸಂಘಟನೆಗಳು ಈ ಹಂತದಲ್ಲಿ ಪ್ರಮುಖ ಮಹಿಳಾ ಶಿಕ್ಷಣ ಸಂಸ್ಥೆಗಳಾಗಿ ಬೆಳೆದವು. ಹೊಸ ಅವಕಾಶಗಳಿಗೆ ಅನುಗುಣವಾಗಿ ಶಿಕ್ಷಣವನ್ನು ಮಹಿಳೆಯರಿಗೆ ಒದಗಿಸತೊಡಗಿದವು. ಹೀಗಾಗಿ ಈ ದಶಕಗಳಲ್ಲಿ ಶಿಕ್ಷಿತ ಸ್ತ್ರೀಯರು ಹಾಗು ಉದ್ಯೋಗಸ್ಥ ಮಹಿಳೆಯರು ಹೆಚ್ಚು ಹೆಚ್ಚು ಕಾಣಿಸಿಕೊಂಡರಾದರೂ ವಿಶೇಷವಾದ ಸಾಂಘಿಕ ಚಟುವಟಿಕೆ ಕಂಡುಬರುವುದಿಲ್ಲ. ಹಾಗಾಗಿ ಇದನ್ನು ನಿಷ್ಕ್ರಿಯ ಕಾಲವೆನ್ನುವುದಕ್ಕಿಂತ ‘ಸ್ವಾಯತ್ತ ಮಹಿಳಾ ಚಳವಳಿಯ ಪೂರ್ವಸ್ಥಿತಿ’ ಎಂದು ಗುರುತಿಸ ಬಹುದಾಗಿದೆ.
ಈ ಪೂರ್ವಸ್ಥಿತಿ ಕಾಲಕ್ಕೆ ಸಂಬಂಧಿಸಿದ ಮೂರು ಮುಖ್ಯ ಅಂಶಗಳನ್ನು ರಾಷ್ಟ್ರೀಯ ನೆಲೆಯಲ್ಲಿ ಈ ರೀತಿ ಗುರುತಿಸಲಾಗಿದೆ.
1. ಸ್ವಾತಂತ್ರ್ಯೋತ್ಸವಕ್ಕಿಂತ ದೇಶ ವಿಭಜನೆಯ ವಿಷಾದ
2. ಮಹಿಳೆಯರ ಸಂಗತಿಗಳು ಸ್ವತಂತ್ರ ಭಾರತದಲ್ಲಿ ಅಧಿಕಾರಶಾಹಿಗೆ ಬಳಸಲ್ಪಟ್ಟಿದ್ದರ ಬಗ್ಗೆ ಅಸಮಾಧಾನ.
3. ಕಾಂಗ್ರೆಸಿನ ಆಳ್ವಿಕೆಯ ಬಗ್ಗೆ ಕೆಲವರಿಗೆ ಸಮ್ಮತಿ ಇದ್ದರೆ ಇನ್ನು ಕೆಲವರಿಗೆ ಅಸಮಾಧಾನ. ಇದರಿಂದಾಗಿ ಎಡಪಂಥೀಯ ವೇದಿಕೆಗಳಲ್ಲಿ ಹೆಚ್ಚಿದ ಮಹಿಳೆಯರ ಪಾಲ್ಗೊಳ್ಳುವಿಕೆ.17 ಈ ಪೂರ್ವ ಸಂಗತಿಗಳೇ ಮುಂದೆ ಸ್ವಾಯತ್ತ ಮಹಿಳಾ ಚಳವಳಿಗೆ ಚಾಲನೆ ನೀಡಿದವು.
1975ರ ಅಂತಾರಾಷ್ಟ್ರೀಯ ಮಹಿಳಾ ವರ್ಷಾಚರಣೆಯು ಮಹಿಳಾ ಚಳವಳಿಯ ಸಂದರ್ಭದಲ್ಲಿ ಮತ್ತೊಂದು ಮೈಲುಗಲ್ಲಾಯಿತು. ಈ ಹಂತದಲ್ಲಿ ಒಂದೆಡೆ ಸರ್ಕಾರದ ಮಹಿಳಾಭಿವೃದ್ದಿಯ ಕಾರ್ಯಕ್ರಮಗಳು ಜಾಗೃತಗೊಂಡಂತೆ ಇನ್ನೊಂದೆಡೆ ಸ್ವಾಯತ್ತ ಮಹಿಳಾ ಸಂಘಟನೆಗಳು ಕಣಕ್ಕಿಳಿದವು. ಇದಕ್ಕನುಗುಣವಾಗಿ ಕರ್ನಾಟಕದಲ್ಲಿ ಮಹಿಳಾ ಚಳವಳಿಯ ಹೊಸ ಅಲೆಯೊಂದು ಬಲವಾಗಿ ಎದ್ದಿತು. 1975ರಲ್ಲಿ ‘ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವುಮೆನ್’ನ ಕರ್ನಾಟಕ ಶಾಖೆ ಬೆಂಗಳೂರಿನಲ್ಲಿ ಸಮ್ಮೇಳನ ನಡೆಸಿತು. ಮಧ್ಯಮ ವರ್ಗದ ಉದ್ಯೋಗಸ್ಥ ಮಹಿಳೆಯರನ್ನು ಒಳಗೊಂಡಂತೆ ಕರ್ನಾಟಕದಲ್ಲಿನ ಎಲ್ಲ ವರ್ಗದ ದುಡಿಯುವ ಮಹಿಳೆಯರು ಇಲ್ಲಿ ಸಮಾವೇಶಗೊಂಡರು. 1979ರಲ್ಲಿ ಸಿ.ಪಿ.ಟಿ.ಯ ಮಹಿಳಾ ಶಾಖೆಯು ಮಂಗಳೂರಿನಲ್ಲಿ ರಾಜ್ಯಮಟ್ಟದ ದುಡಿಯುವ ಮಹಿಳೆಯರ ಸಮ್ಮೇಳನ ನಡೆಸಿ, ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ರಚಿಸಿತು. ಈ ಸಮನ್ವಯದ ನೇತೃತ್ವದಲ್ಲಿ ಇದುವರೆಗೆ ಗಂಧದ ಕಡ್ಡಿ, ಬೀಡಿ, ಸಿದ್ಧ ಉಡುಪು ತಯಾರಿಕೆ, ಬ್ಯಾಂಕಿಂಗ್, ಕಛೇರಿಗಳು, ಅಂಗನವಾಡಿ ಮಹಿಳೆಯರ ಹಕ್ಕುಗಳು ಇತ್ಯಾದಿ ಕುರಿತ ಹೋರಾಟಗಳು ನಡೆದುಬಂದಿವೆ. 1981ರಲ್ಲಿ ಬೆಂಗಳೂರಿನಲ್ಲಿ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆಯ ಮೊದಲ ಸಮ್ಮೇಳನ ನಡೆದು ಮುಂದೆ ಇದು ಜನವಾದಿ ಮಹಿಳಾ ಸಂಘಟನೆ ಎಂದು ಹೆಸರಲಾಯಿತು.18
 1975ರ ನಂತರದಲ್ಲಿ ಸಮತಾ, ವಿಮೋಚನಾ, ಜಾಗೃತಿ, ಮಾನಸ, ಮಹಿಳಾ ಜಾಗೃತಿ, ಹೆಂಗಸರ ಹಕ್ಕಿನ ಸಂಘ, ಮಾನಿನಿ ಮುಂತಾದ ಹಲವು ಸ್ವಾಯತ್ತ ಮಹಿಳಾ ಸಂಘಟನೆಗಳೂ ತಲೆ ಎತ್ತಿದ್ದವು. ಈ ಸಂಘಟನೆಗಳು ಸ್ಥಳೀಯ ಮಹಿಳಾ ಸಮಸ್ಯೆಗಳಿಗೆ ಸ್ಪಂದಿಸುತ್ತ ಜನಜಾಗೃತಿ, ಕಾನೂನು-ಹೋರಾಟ, ಕೌನ್ಸಿಲಿಂಗ್ ಇತ್ಯಾದಿಗಳಲ್ಲಿ ಕೈಹಾಕಿದವು. ಇವುಗಳಲ್ಲಿ ಕೆಲವು ತಮ್ಮ ಚಟುವಟಿಕೆಯ ಭಾಗವಾಗಿ ವಾರ್ತಾಪತ್ರಗಳನ್ನು, ಮಹಿಳಾ ಪತ್ರಿಕೆಗಳನ್ನು ಆರಂಭಿಸಿದವು. ಸಮತಾ, ಅಚಲ, ಮಾನಸ, ಜಾಗೃತಿ, ಜನವಾದಿ ಮುಂತಾದ ಪತ್ರಿಕೆಗಳನ್ನು ಈ ದಿಕ್ಕಿನಲ್ಲಿ ಗುರುತಿಸಬಹುದು. ಈ ಪತ್ರಿಕೆಗಳ ಮೂಲಕ ಬೌದ್ದಿಕ ಚರ್ಚೆ, ಸಂಘಟನೆಯ ಚಟುವಟಿಕೆಗಳ ಕುರಿತ ಮಾಹಿತಿ ಹಾಗೂ ಸಂಪರ್ಕ ಜಾಲವನ್ನು ಈಡೇರಿಸತೊಡಗಿದವು.
ಈ ಸಂದರ್ಭದಲ್ಲಿ ಮಹಿಳಾ ಚಳವಳಿಗೆ ಚಾಲನೆ ನೀಡಿದ ಪ್ರಮುಖ ವಿಷಯಗಳೆಂದರೆ ವರದಕ್ಷಿಣೆ, ಅತ್ಯಾಚಾರ, ವಧೂದಹನ, ಮಹಿಳಾ ಮೀಸಲಾತಿ, ಸೌಂದರ್ಯ ಸ್ಪರ್ಧೆ, ಸಮೂಹ ಮಾಧ್ಯಮಗಳಲ್ಲಿ ಅಶ್ಲೀಲತೆ, ಕೌಟುಂಬಿಕ ಹಿಂಸೆ, ಮರುಕಳಿಸಿದ ಸತಿಪದ್ಧತಿ ಮುಂತಾದವು. ರಾಷ್ಟ್ರಿಯ ವ್ಯಾಪ್ತಿಯಲ್ಲಿ ಕಂಡುಬರುವ ಈ ಎಲ್ಲ ಹೋರಾಟಗಳಿಗೂ ಕರ್ನಾಟಕದ ಸ್ವಾಯತ್ತ ಮಹಿಳಾ ಸಂಸ್ಥೆಗಳು ತಮ್ಮ ದನಿಗೂಡಿಸಿದವು. ಸ್ಥಳೀಯವಾಗಿ ವರದಕ್ಷಿಣೆ, ಅತ್ಯಾಚಾರ, ಕೌಟುಂಬಿಕ ಹಿಂಸೆಯಂತಹ ಘಟನೆಗಳು ನಡೆದಾಗ ಅವುಗಳಿಗೆ ಸ್ಪಂದಿಸಿದವು. ಕಾನೂನು ಕ್ರಮಕ್ಕಾಗಿ ಒತ್ತಾಯಿಸಿದವು. ಅಲ್ಲದೆ ಎಡಪಂಥೀಯ ವೇದಿಕೆಗಳಲ್ಲಿ ಬೀಡಿ, ಸಿದ್ಧ ಉಡುಪು ಅಂಗನವಾಡಿ, ರೈತ ಕೂಲಿ ಕಾರ್ಮಿಕ ಮಹಿಳೆಯರ ಹೋರಾಟಗಳು ಮುಂದುವರಿದಿವೆ.
ಸ್ವಾಯತ್ತ ಸಂಘಟನೆಗಳ ಕಾಲದಲ್ಲಿಯೇ ಮಹಿಳಾ ಅಭಿವೃದ್ದಿ ಪರಿಕಲ್ಪನೆಯನ್ನು ಹೊಂದಿದ ಹಲವು ಪ್ರಭುತ್ವ ನಿರ್ದೇಶಿತ ಕೆಲಸಗಳು ಆಂದೋಲನದ ರೂಪದಲ್ಲಿ ಕಾಣಿಸಿಕೊಂಡವು. ಅದರಂತೆ ಕರ್ನಾಟಕದಲ್ಲಿಯೂ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಆಯೋಗ ಇತ್ಯಾದಿಗಳು ಕಾರ್ಯ ನಿರತವಾದವು. 1980 ರಿಂದೀಚೆಗೆ ಎನ್ಜಿಓಗಳ ದೊಡ್ಡ ಸಂಘಟನಾ ಜಾಲವೊಂದು ಆರಂಭಗೊಂಡು ಮಹಿಳಾ ಸಾಕ್ಷರತೆ, ಅರಿವು, ಆರೋಗ್ಯ, ಉಳಿತಾಯ, ಹೂಡಿಕೆ, ಗೃಹೋದ್ಯೋಗ ಇತ್ಯಾದಿ ಕಾರ್ಯಕ್ರಮಗಳಿಗೆ ಕೈಹಾಕಿದವು. ಇವುಗಳೊಂದಿಗೆ ಮಹಿಳೆಯರು ಮುನ್ನುಗ್ಗಿ ಪಾನನಿಷೇಧ, ಪರಿಸರ ರಕ್ಷಣೆ, ಲಾಟರಿ ನಿಷೇಧ ಹಾಗೂ ಸರಕು ಸಂಸ್ಕೃತಿಯ ವಿರುದ್ಧದ ಹೋರಾಟದಲ್ಲಿ ವಿಶೇಷವಾಗಿ ತೊಡಗಿಸಿಕೊಂಡಿದ್ದಾರೆ.
ಈ ಕಾಲದ ಇನ್ನೊಂದು ಮಹತ್ವದ ಸಂಗತಿ ಎಂದರೆ ಸ್ತ್ರೀವಾದಿ ಸಾಹಿತ್ಯ ಹಾಗು ಮಹಿಳಾ ಅಧ್ಯಯನದ ಜ್ಞಾನೋತ್ಪಾದನೆಯು ಆರಂಭಗೊಂಡುದು. ಸ್ತ್ರೀವಾದಿ ಧೋರಣೆಯನ್ನು ಹೊಂದಿದ ವೀಣಾಶಾಂತೇಶ್ವರ, ವಿಜಯಾದಬ್ಬೆ, ಸುಮಿತ್ರಾಬಾಯಿ, ವೈದೇಹಿ ಮುಂತಾದವರು ಮಹಿಳಾ ಸಂವೇದನೆಯ ಸಾಹಿತ್ಯ ಹಾಗೂ ವೈಚಾರಿಕ ಬರಹಗಳ ರಚನೆಯಲ್ಲಿ ತೊಡಗಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸ್ತ್ರೀವಾದ, ಸ್ತ್ರೀವಾದಿ ವಿಮರ್ಶೆ ಮಹಿಳಾ ಅಧ್ಯಯನ, ಜಂಡರ್ ಸ್ಪಡೀಸ್ಗಳನ್ನು ಪಠ್ಯಕ್ರಮದಲ್ಲಿ ಕರ್ನಾಟಕದಲ್ಲಿ ಅಧಿಕೃತಗೊಳಿಸಲಾಗಿದೆ. ಚಿ.ನ.ಮಂಗಳಾ ಅವರು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮೊತ್ತ ಮೊದಲ ಬಾರಿಗೆ ಮಹಿಳಾ ಅಧ್ಯಯನವನ್ನು ಅಧ್ಯಯನ ಶಿಸ್ತಾಗಿ ಪ್ರಚುರಪಡಿಸಿದರು. ಯುಜಿಸಿ ನೆರವಿನೊಂದಿಗೆ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಅಧ್ಯಯನ ಕೇಂದ್ರಗಳು ಆರಂಭವಾಗಿ ಬೋಧನೆ, ಸಂಶೋಧನೆಗಳೆರಡೂ ಆರಂಭಗೊಂಡವು. ಮಹಿಳಾ ಸ್ಥಿತಿಗತಿ ಸುಧಾರಣೆ ಹಾಗು ಸಮಾಜದಲ್ಲಿ ಲಿಂಗ ಸಮಾನತೆಯನ್ನು ತರುವುದಕ್ಕೆ ಅಗತ್ಯವಾದ ಜ್ಞಾನೋತ್ಪಾದನೆಯನ್ನು ಹಲವು ಸ್ತ್ರೀವಾದಿಗಳು ಕೈಗೊಂಡರು.
ಹೀಗೆ ಕರ್ನಾಟಕದ ಮಹಿಳಾ ಚಳವಳಿಯು ಸ್ಥಳೀಯ ಹಾಗು ರಾಷ್ಟ್ರೀಯ ನೆಲೆಗಳೆರಡರಿಂದಲೂ ತನ್ನನ್ನು ಗುರುತಿಸಿಕೊಂಡು ಮುಂದುವರೆದಿದೆ. ಸ್ತ್ರೀವಾದದ ಜಾಗತಿಕ ಜ್ಞಾನ, ಭಾರತೀಯ ಸಂದರ್ಭ ಹಾಗೂ ಕರ್ನಾಟಕದ ಜರೂರನ್ನು ಗಮನದಲ್ಲಿಟ್ಟ ಕೊಂಡು ತನ್ನನ್ನು ರೂಪಿಸಿಕೊಂಡಿದೆ. ಸೌಂದರ್ಯ ಸ್ಪರ್ಧೆಯಂತಹ ವಿಚಾರದಲ್ಲಿ ತಾನೇ ಮುಂದೆ ನಿಂತು ಅತಿಥೇಯವಾಗಿ ರಾಷ್ಟ್ರೀಯ ಮಟ್ಟದ ಚಳವಳಿಯನ್ನು ಸಮರ್ಥವಾಗಿ ನಿರ್ವಹಿಸಿದೆ.
ಪರಾಮರ್ಶನ ಗ್ರಂಥಗಳು
1. ಗಾಯತ್ರಿ ಎನ್., 1998. ಮಹಿಳಾ ಚಳವಳಿಯ ಮಜಲುಗಳು, ಬೆಂಗಳೂರು: ನವಕರ್ನಾಟಕ ಪ್ರಕಾಶನ,
2. ಸೂರ್ಯನಾಥ್ ಕಾಮತ್, 1993. ‘‘ಮೈಸೂರಿನಲ್ಲಿ ಮಹಿಳಾ ಪುರೋಗಾಮನದ ಹರಿಕಾರ ನರಸಿಂಹಯ್ಯಂಗಾರ’’, ಇತಿಹಾಸ ದರ್ಶನ, ಸಂಪುಟ 8.
 3. ಸೂರ್ಯನಾಥ್ ಕಾಮತ್(ಸಂ), 1986. ಕರ್ನಾಟಕ ರಾಜ್ಯ ಗೆಜೆಟಿಯರ್, ಬೆಂಗಳೂರು: ಕರ್ನಾಟಕ ಸರ್ಕಾರ,
4. ಸೂರ್ಯನಾಥ್ ಕಾಮತ್, 1993. ‘‘ಮೈಸೂರಿನಲ್ಲಿ ಮಹಿಳಾ ಪುರೋಗಾಮನದ ಹರಿಕಾರ ನರಸಿಂಹಯ್ಯಂಗಾರ’’, ಇತಿಹಾಸ ದರ್ಶನ, ಸಂಪುಟ 8.
 5. ಅಕ್ಕಿ ಎನ್.ಬಸವರಾಜ್, ಸದಾಶಿವಯ್ಯ ವೈ.ಆರ್., 1995. ‘‘ಪ್ರಥಮ ವಿಶ್ವ ಸಮರದಲ್ಲಿ ಮೈಸೂರು ಪ್ರಾಂತ್ಯದ ಪಾತ್ರ’’, ಇತಿಹಾಸ ದರ್ಶನ, ಸಂಪುಟ 10.
 6. ಉಷಾರಾಣಿ ಎಸ್., 2002. ಮಹಿಳಾ ಮತ್ತು ಮಾಧ್ಯಮ, ಮೈಸೂರು: ರಾಗೌ ಟ್ರಸ್ಟ್ ಪ್ರಕಾಶನ.
7. ಉಷಾ ಎಂ., 1999. ಮಹಿಳೆ ಮತ್ತು ಪತ್ರಿಕೆ, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
8. ಸೂರ್ಯನಾಥ ಕಾಮತ್, 1980. ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು, ಮೈಸೂರು: ಗೀತಾ ಬುಕ್ಹೌಸ್.
9. ಗೋಪಾಲ್ರಾವ್ ಎಚ್.ಎಸ್., 1996. ಕರ್ನಾಟಕ ಏಕೀಕರಣ ಇತಿಹಾಸ, ಬೆಂಗಳೂರು: ನವಕರ್ನಾಟಕ ಪ್ರಕಾಶನ.
1೦. ಗಾಯತ್ರಿ ಎನ್., 1998. ಮಹಿಳಾ ಚಳವಳಿಯ ಮಜಲುಗಳು, ಬೆಂಗಳೂರು: ನವಕರ್ನಾಟಕ ಪ್ರಕಾಶನ,
blogger
delicious
digg
facebook
reddit
stumble
twitter
print
email
ಪುಸ್ತಕ: ಸಮಕಾಲೀನ ಕರ್ನಾಟಕ ಚರಿತ್ರೆಯ ವಿವಿಧ ಆಯಾಮಗಳು (ಸಂಪಾದಿತ)
ಲೇಖಕರು: ಡಾ. ಎಂ. ಉಷಾ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಡಾ. ವಿಜಯ್ ಪೂಣಚ್ಚ ತಂಬಂಡ
ಸಂಪುಟ ಸಂಪಾದಕರು: ಡಾ. ಎನ್. ಚಿನ್ನಸ್ವಾಮಿ ಸೋಸಲೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ