ಸೋಮವಾರ, ಜೂನ್ 15, 2015

ಅಧ್ಯಾಯ 11. ಸಾಹಿತ್ಯ ಚಳವಳಿ

ಅಧ್ಯಾಯ 11. ಸಾಹಿತ್ಯ ಚಳವಳಿ

ಇಂದಿನ ಕರ್ನಾಟಕದ ಸಾಹಿತ್ಯದ ಚಳವಳಿಗಳ ಇತಿಹಾಸ ಬರೆಯಲು ಹೊರಟಾಗ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಮೊದಲನೆಯದಾಗಿ ಕರ್ನಾಟಕ ರಾಜ್ಯ ರಚಿತಗೊಂಡಿದ್ದೇ 1956ರಲ್ಲಿ. ಅದಕ್ಕೂ ಮುಂಚೆ ಕರ್ನಾಟಕ ಹಲವಾರು ಪ್ರಾಂತ್ಯಗಳಾಗಿತ್ತು ಮತ್ತು ಬೇರೆ ಬೇರೆ ಆಡಳಿತಕ್ಕೆ ಒಳಪಟ್ಟಿತ್ತು. ಈಗಿನ ಭೌಗೋಳಿಕ ಕರ್ನಾಟಕವನ್ನು ಹಲವಾರು ಶತಮಾನಗಳ ಇತಿಹಾಸವಿರುವ ಒಂದು ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಘಟಕವಾಗಿ ನೋಡುವುದು ಅಸಾಧ್ಯವಾದುದು ಹಾಗೂ ಸಮಸ್ಯಾತ್ಮಕವಾದದ್ದು. ಏಕೆಂದರೆ ಭೌಗೋಳಿಕ ಕರ್ನಾಟಕದ ಒಳಗಡೆ ಹಲವಾರು ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಘಟಕಗಳಿವೆ. ಈ ಘಟಕಗಳ ವ್ಯಾಪ್ತಿ ಪ್ರಸ್ತುತ ಕರ್ನಾಟಕದ ಗಡಿಗಳನ್ನು ಮೀರಿ ಹೋಗುತ್ತಿರುತ್ತದೆ, ಇಲ್ಲಾ ಸಂಕುಚಿತಗೊಳ್ಳುತ್ತಿರುತ್ತದೆ. ಎರಡನೆಯ ಸಮಸ್ಯೆಯೆಂದರೆ ಕರ್ನಾಟಕದ ಸಾಹಿತ್ಯ ಚಳವಳಿಗಳ ಇತಿಹಾಸವನ್ನು, ಕನ್ನಡ ಸಾಹಿತ್ಯ ಚಳವಳಿಗಳ ಇತಿಹಾಸವಾಗಿ ಮಾತ್ರ ಭಾವಿಸಬಹುದಾದ ಅಪಾಯ. ಹೀಗಾದಾಗ ಇಂದಿನ ಕರ್ನಾಟಕದಲ್ಲಿನ ಕೊಡವ, ತುಳು, ತಮಿಳು, ಉರ್ದು ಮತ್ತಿತರ ಭಾಷೆಗಳ ಸಾಹಿತ್ಯದ ಇತಿಹಾಸವನ್ನು ಮೂಲೆಗೆ ತಳ್ಳುವ ಅಪಾಯವಿದೆ. ಮೂರನೆಯದಾಗಿ ಸಾಹಿತ್ಯ ಚಳವಳಿ ಎಂದಾಕ್ಷಣ ಲಿಖಿತ, ಶಿಷ್ಟ ಸಾಹಿತ್ಯಕ್ಕೆ ನಮ್ಮನ್ನು ಸೀಮಿತಗೊಳಿಸಿಕೊಂಡು ಜಾನಪದ, ಮೌಖಿಕ, ಸಿನಿಮಾ ಸಾಹಿತ್ಯ, ಕ್ಯಾಸೆಟ್ ಸಾಹಿತ್ಯ, ಜನಪ್ರಿಯ ಸಾಹಿತ್ಯಗಳ ಇತಿಹಾಸವನ್ನು ವುರೆಯುವ ಅಪಾಯವಿದೆ.
ಮೇಲೆ ತಿಳಿಸಿದ ಮೂಲೆಗುಂಪಾದ ಹಲವಾರು ಇತಿಹಾಸಗಳು ಇನ್ನೂ ಬೆಳಕನ್ನು ಕಾಣಬೇಕಾಗಿರುವುದರಿಂದ, ಈ ದಿಕ್ಕಿನಲ್ಲಿ ಸಂಶೋಧನೆಗಳು ಆಗುವವರೆಗೆ ಇಂಥ ಅಪಾಯಗಳ ನಡುವಿನಲ್ಲೇ ನಾವು ದಾರಿ ಹುಡುಕುತ್ತಾ ಸಾಗಬೇಕಾಗಿದೆ. ಆದ್ದರಿಂದ ಈ ಮೇಲೆ ಪಟ್ಟಿ ಮಾಡಿದ ಎಲ್ಲಾ ಮಿತಿಗಳು ಪ್ರಸ್ತುತ ಲೇಖನದಲ್ಲಿದೆ.
ಸಾಹಿತ್ಯ ಚಳವಳಿ ಹಾಗೂ ಇತಿಹಾಸ
ಚಳವಳಿಗಳ ಇತಿಹಾಸವನ್ನು ಬರೆಯುವುದರಲ್ಲಿ ಹಲವು ಮಾರ್ಗಗಳಿವೆ. ಒಂದು ಗುಂಪು, ಒಂದು ಕಾರ್ಯಸೂಚಿಯನ್ನು ಮುಂದಿಟ್ಟುಕೊಂಡು ಕಾರ್ಯಕ್ರಮಗಳನ್ನು ನಡೆಸಿದರೆ ಅದನ್ನು ಚಳವಳಿಯಾಗಿ ಪರಿಗಣಿಸುವುದು ಒಂದು ಮಾರ್ಗ. ಹಲವಾರು ಗುಂಪುಗಳು/ಜನರು ಹಲವಾರು ಚಾರಿತ್ರಿಕ-ಸಾಮಾಜಿಕ-ಸಾಂಸ್ಕೃತಿಕ ಕಾರಣಗಳಿಗಾಗಿ ನಡೆಸುವ ಕ್ರಿಯೆಗಳನ್ನು ಕಾಲಾನಂತರ ನೋಡಿ ಅವೆಲ್ಲಾ ಒಂದು ಉದ್ದೇಶಕ್ಕಾಗಿ ದುಡಿದಿರುವುದನ್ನು ಗುರುತಿಸಿ, ನಂತರದವರು ಅದನ್ನು ಚಳವಳಿಯಾಗಿ ಪರಿಭಾವಿಸುವುದು ಮತ್ತೊಂದು ಮಾರ್ಗ. ಪ್ರಸ್ತುತ ಲೇಖನ ಈ ಎರಡೂ ಮಾರ್ಗಗಳನ್ನು ಅಳವಡಿಸಿಕೊಂಡಿದೆ.
ಸಾಹಿತ್ಯದ ಇತಿಹಾಸ ರಚನೆಯೆಂದರೆ ಕಾಲಾನುಕ್ರಮದಲ್ಲಿ ಬಂದ ಕೃತಿಗಳ ವಿವರಣೆ, ಇಲ್ಲಾ ಕಾಲಾನುಕ್ರಮದಲ್ಲಿ ಬಂದ ಸಾಹಿತಿಗಳನ್ನು ಕುರಿತ ವಿವರಣೆ, ಇಲ್ಲಾ ಅವುಗಳನ್ನು ಕಾಲಘಟ್ಟಗಳಿಗೆ ವಿಂಗಡಿಸಿಕೊಂಡು ಕೃತಿ ಹಾಗೂ ಕೃತಿಕಾರರ ವಿವರಗಳನ್ನು ದಾಖಲು ಮಾಡುವುದು-ಈವರೆಗೆ ನಡೆದುಕೊಂಡು ಬಂದ ಪದ್ಧತಿ. ಈವರೆಗಿನ ಕನ್ನಡ ಸಾಹಿತ್ಯ ರಚನೆಗಳಲ್ಲಿ, ಕೃತಿ ಹಾಗೂ ಕೃತಿಕಾರರ ಕಾಲಾನುಕ್ರಮ ವಿವರಣೆಯೊಂದಿಗೆ ಅವುಗಳನ್ನು ವಿವಿಧ ಕಾಲಘಟ್ಟಗಳಲ್ಲಿ ವಿಂಗಡಿಸಿಕೊಂಡಿರುವುದನ್ನೂ ಕಾಣಬಹುದು. ಈ ಕಾಲಘಟ್ಟಗಳನ್ನು
1. ಜಾತಿ/ಧರ್ಮ ಆಧರಿಸಿ, ಜೈನಯುಗ, ವೀರಶೈವಯುಗ, ಬ್ರಾಹ್ಮಣ ಯುಗ, ಆಧುನಿಕ ಯುಗ ಎಂದು ವಿಂಗಡಿಸಲಾಗಿದೆ.
2. ಭಾಷೆಯಲ್ಲಿನ ಬದಲಾವಣೆಗಳನ್ನು ಆಧರಿಸಿ ಹಳಗನ್ನಡ ಸಾಹಿತ್ಯ, ನಡುಗನ್ನಡ ಸಾಹಿತ್ಯ, ಹೊಸಗನ್ನಡ ಸಾಹಿತ್ಯ ಎಂದು ವಿಂಗಡಿಸಲಾಗಿದೆ.
3. ಸಾಹಿತ್ಯ ಪ್ರಕಾರಗಳನ್ನು ಆಧರಿಸಿ ಚಂಪೂಯುಗ, ವಚನಯುಗ ಎಂದು ವಿಂಗಡಿಸಲಾಗಿದೆ.
4. ಪ್ರಮುಖ ಕೃತಿಕಾರರನ್ನು ಆಧರಿಸಿ ಪಂಪಯುಗ, ಬಸವಯುಗ, ಕುಮಾರವ್ಯಾಸ ಯುಗ ಎಂದು ಸಾಹಿತ್ಯ ಇತಿಹಾಸ ರಚಿತವಾಗಿದೆ.
5. ಸಾಹಿತ್ಯದಲ್ಲಿ ಪ್ರತಿಬಿಂಬಿತವಾದ ಮನೋಧರ್ಮ, ವಸ್ತು-ವಿಷಯಗಳನ್ನು ಆಧರಿಸಿ ಕೂಡ ಸಾಹಿತ್ಯ ಇತಿಹಾಸ ರಚಿಸಲಾಗಿದೆ. ಉದಾ: ಆಧುನಿಕ ಸಾಹಿತ್ಯದ ಕಾಲ ವಿಂಗಡಣೆ.
ಕರ್ನಾಟಕ ಮತ್ತು ಕನ್ನಡ ಸಾಹಿತ್ಯ
ಪ್ರಸ್ತುತ ಲೇಖನ ಕರ್ನಾಟಕದ ಸಾಹಿತ್ಯ ಚಳವಳಿಗಳನ್ನು ಕುರಿತದ್ದಾದುದರಿಂದ ಇದು ಕನ್ನಡ ಸಾಹಿತ್ಯದ ಪೂರ್ಣ ಇತಿಹಾಸವನ್ನು ನೀಡುವುದಿಲ್ಲ. ಕರ್ನಾಟಕ ಎಂಬ ಭೌಗೋಳಿಕ/ರಾಜಕೀಯ ಘಟಕ ರಚಿತಗೊಂಡಿದ್ದು 1956ರಲ್ಲಾದರೂ, ಸಾಂಸ್ಕೃತಿಕವಾಗಿ ಕರ್ನಾಟಕ ಎಂಬ ಒಂದು ಕಲ್ಪಿತ ಸಮುದಾಯ ರೂಪುಗೊಳ್ಳಲಿಕ್ಕೆ ಆರಂಭವಾಗಿದ್ದು, ರೂಪಿಸಲಿಕ್ಕೆ ಪ್ರಾರಂಭ ಮಾಡಿದ್ದು 19ನೇ ಶತಮಾನದ ಕೊನೆಯ ಭಾಗದಲ್ಲಿ. ಹೀಗೆ 19ನೇ ಶತಮಾನದ ಕೊನೆಯ ಭಾಗದಲ್ಲಿ ಹಾಗು 20ನೇ ಶತಮಾನದ ಆದಿಭಾಗದಲ್ಲಿ ರಚಿತಗೊಂಡ ಕರ್ನಾಟಕ ಎಂಬ ಕಲ್ಪಿತ ಸಮುದಾಯ, ಒಂದು ನಿರ್ದಿಷ್ಟ ಭೌಗೋಳಿಕ ಹಾಗೂ ರಾಜಕೀಯ ಘಟಕವಾಗಿ ಪರಿವರ್ತನೆಗೊಂಡದ್ದು 1956ರಲ್ಲಿ. ಅದಕ್ಕೂ ಮುಂಚೆ ಅದು ಹಲವಾರು ರಾಜಕೀಯ ಘಟಕಗಳಾಗಿ ವಿಂಗಡನೆಯಾಗಿತ್ತು. ಒಡೆಯರ ಆಡಳಿತದಲ್ಲಿದ್ದ ಮೈಸೂರು ಪ್ರಾಂತ್ಯ, ಬ್ರಿಟಿಷರ ಆಡಳಿತದಲ್ಲಿದ್ದ ಮುಂಬೈ-ಕರ್ನಾಟಕ ಪ್ರಾಂತ್ಯ, ಬ್ರಿಟಿಷರ ಮದ್ರಾಸ್ ಪ್ರಾಂತ್ಯದಲ್ಲಿದ್ದ ಮಂಗಳೂರು, ಬಳ್ಳಾರಿ ಪ್ರಾಂತ್ಯಗಳು, ನಿಜಾಮನ ಆಡಳಿತದಲ್ಲಿದ್ದ ಹೈದರಾಬಾದ್-ಕರ್ನಾಟಕ ಪ್ರಾಂತ್ಯಗಳು ಮುಖ್ಯವಾದವು. ಈ ಎಲ್ಲಾ ಪ್ರಾಂತ್ಯಗಳೂ ಸಾಂಸ್ಕೃತಿಕವಾಗಿ ಒಂದು ಎಂಬ ಪರಿಕಲ್ಪನೆ ಮೂಡಿದ್ದು/ಮೂಡತೊಡಗಿದ್ದು ಆಧುನಿಕ ಕನ್ನಡ ಸಾಹಿತ್ಯದ ಆರಂಭದೊಂದಿಗೆ. ಆದ್ದರಿಂದ ಕರ್ನಾಟಕದ ಸಾಹಿತ್ಯ ಚಳವಳಿಗಳ ಈ ಲೇಖನದಲ್ಲಿ ಆಧುನಿಕ ಕನ್ನಡ ಸಾಹಿತ್ಯದ ಚಳವಳಿಗಳನ್ನು ಕುರಿತ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.

ಆಧುನಿಕ ಕನ್ನಡ ಸಾಹಿತ್ಯದ ಉಗಮ
ಕನ್ನಡ ಸಾಹಿತ್ಯ ರಾಜಾಶ್ರಯ ಹಾಗು ಧರ್ಮಾಶ್ರಯಗಳಲ್ಲಿ ಬೆಳೆದು ಬಂದಿತ್ತು. ವಸಾಹತುಶಾಹಿಯ ಪ್ರಭಾವದೊಂದಿಗೆ 19ನೆಯ ಶತಮಾನದಲ್ಲಿ ಹಳೆಯ ಸಾಹಿತ್ಯಕ್ಕಿದ್ದ ರಾಜಾಶ್ರಯ ತಪ್ಪತೊಡಗಿತು. ಬ್ರಿಟಿಷರ ನೇರ ಆಡಳಿತವಿದ್ದ ಪ್ರದೇಶದಲ್ಲಿ ಹಳೆಯ ಸಾಹಿತ್ಯಕ್ಕೆ ಯಾವುದೇ ಆಶ್ರಯವಿರಲಿಲ್ಲ. ಆದರೆ ವಸಾಹತು ಶಿಕ್ಷಣದ ಪರಿಣಾಮವಾಗಿ ಸುಶಿಕ್ಷಿತ ಮಧ್ಯಮ ವರ್ಗವೊಂದರ ಉಗಮವಾಗಿತ್ತು. ಈ ಮಧ್ಯಮ ವರ್ಗವೇ ರಾಷ್ಟ್ರೀಯ ಚಳವಳಿಯಲ್ಲಿ ಭಾಗಿಯಾದದ್ದು ಹಾಗು ತನ್ನ ಮೌಲ್ಯಗಳನ್ನು ಪಸರಿಸಲು ಸಾಹಿತ್ಯವನ್ನೂ ಒಂದು ಮಾಧ್ಯಮವಾಗಿ ಮಾಡಿಕೊಂಡಿದ್ದು.
19ನೆಯ ಶತಮಾನದ ಆದಿಭಾಗದಲ್ಲಿ ವಸಾಹತು ಪ್ರಭುತ್ವ ತನಗೆ ಬೇಕಾದ ಮೌಲ್ಯಗಳನ್ನು ಪಸರಿಸಿ, ಇಲ್ಲಿನ ಪ್ರಜೆಗಳ ವ್ಯಕ್ತಿತ್ವವನ್ನು ತನಗೆ ಬೇಕಾದ ರೀತಿಯಲ್ಲಿ ರೂಪಿಸಲು ವಸಾಹತು ಶಿಕ್ಷಣ ಕ್ರಮವನ್ನು ಆರಂಭಿಸಿತು. ಇದರ ಪರಿಣಾಮವಾಗಿ ಹೊಸ ಮೌಲ್ಯಗಳು, ವಿಚಾರಗಳು ನಮಗೆ ದೊರಕಿದವು. ಈ ಹೊಸ ಮೌಲ್ಯಗಳು ಮತ್ತು ಹಳೆಯ ಮೌಲ್ಯಗಳ ನಡುವಿನ ಸಂಘರ್ಷವು ಹಲವಾರು ಸಾಮಾಜಿಕ, ಸಾಂಸ್ಕೃತಿಕ ಪ್ರಕ್ರಿಯೆಗಳನ್ನು ರೂಪಿಸಿತು. ಅವುಗಳಲ್ಲಿ ಒಂದು ಆಧುನಿಕ ಕನ್ನಡ ಸಾಹಿತ್ಯ. ಇಂಗ್ಲಿಷ್ ಶಿಕ್ಷಣ ಹಾಗು ಸಾಹಿತ್ಯದ ಓದಿನ ಪರಿಣಾಮವಾಗಿ ಸಾಹಿತ್ಯದ ಕಲ್ಪನೆ ಮತ್ತು ಮಾನದಂಡಗಳು ಬದಲಾದವು. ಹೊಸ ಸಾಹಿತ್ಯ ಪ್ರಕಾರಗಳು, ಶೈಲಿಗಳು ಕನ್ನಡಕ್ಕೆ ಬಂದರೂ ಅದರಲ್ಲಿ ಬಿಂಬಿತವಾದ ಮೌಲ್ಯಗಳು ವಸಾಹತೀಕರಿಸಿದ ಯಜಮಾನ ಸಂಸ್ಕೃತಿಯ ಮೌಲ್ಯಗಳಾಗಿರಲಿಲ್ಲ. ಇಲ್ಲಿನ ಮೇಲ್ಜಾತಿಯ, ಮೇಲ್ವರ್ಗದ, ಮಧ್ಯಮ ವರ್ಗದ ಇಂಗ್ಲಿಷ್ ಕಲಿತ ಜನ ಹೊಸ ಪ್ರಕಾರಗಳಲ್ಲಿ, ಶೈಲಿಯಲ್ಲಿ ಪಸರಿಸಿದ್ದು ರಾಷ್ಟ್ರೀಯವಾದಿ ಮೌಲ್ಯಗಳನ್ನು.
ಒಂದು ಹೊಸ ಚಳವಳಿ ರೂಪುಗೊಳ್ಳಲು ಒಂದು ಸಂಸ್ಕೃತಿಯೊಳಗಿನ ವೈರುಧ್ಯಗಳ ಸ್ಫೋಟದ ಜೊತೆಗೆ ಹೊರಗಿನ ಸಂಸ್ಕೃತಿಗಳಲ್ಲಿನ ಕೆಲವು ಅಂಶಗಳೂ ಬೇಕಾಗುತ್ತವೆ. ಆಧುನಿಕ ಕನ್ನಡ ಸಾಹಿತ್ಯ ರೂಪುಗೊಳ್ಳಲು ವಸಾಹತು ಸಂಸ್ಕೃತಿಯ ಪ್ರಭಾವವು ಅತಿಮುಖ್ಯವಾದದ್ದು. ಇದು ಕೇವಲ ಇಂಗ್ಲಿಷ್ ಶಿಕ್ಷಣವಲ್ಲದೆ ಅನುವಾದಗಳ ಮೂಲಕವೂ ಹರಿದು ಬಂತು. ಈ ಒಂದು ಪ್ರಕ್ರಿಯೆಯನ್ನು ಇಂದು ನಾವು ಭಾಷಾಂತರ ಚಳವಳಿ ಎಂದು ಗುರುತಿಸಬಹುದಾಗಿದೆ.
ಭಾಷಾಂತರ ಚಳವಳಿ
ಒಂದು ಸಂಸ್ಕೃತಿ ನಿಂತ ನೀರಾಗಿದ್ದರೆ ಅಳಿಯುತ್ತದೆ, ಅದು ಸತತವಾಗಿ ಹೊಸದನ್ನು ಹೊರಗಿನಿಂದ ಸ್ವೀಕರಿಸುತ್ತಾ ತನ್ನದನ್ನು ಬೇರೆ ಸಂಸ್ಕೃತಿಗಳಿಗೆ ತಲುಪಿಸುತ್ತಾ ಉಳಿಯಬೇಕು. ಎರಡು ಸಂಸ್ಕೃತಿಗಳು ಮುಖಾಮುಖಿಯಾದಾಗ ಈ ಕೊಡು-ಕೊಳೆ ಪ್ರಕ್ರಿಯೆ ಬಿರುಸಾಗಿಯೇ ನಡೆಯುತ್ತದೆ. ವಸಾಹತು ಸಂದರ್ಭದಲ್ಲಿ ಈ ರೀತಿಯಾಗಿ ಎರಡು ಸಂಸ್ಕೃತಿಗಳು ಮುಖಾಮುಖಿಯಾದಾಗ ಭಾಷಾಂತರ ಕ್ರಿಯೆ ದೊಡ್ಡ ಪ್ರಮಾಣದಲ್ಲಿಯೇ ನಡೆಯಿತು. ಈ ಮುಖಾಮುಖಿ ಅಸಮತೋಲನದ ನೆಲೆಯಲ್ಲಿದ್ದುದ್ದರಿಂದ, ಇಂಗ್ಲಿಷ್ ಸಾಹಿತ್ಯ ಕೃತಿಗಳು ಕನ್ನಡಕ್ಕೆ ಹೆಚ್ಚಾಗಿ ಬಂದವು.
19ನೆಯ ಶತಮಾನದ ಕೊನೆಯ ಭಾಗದಲ್ಲಿ ಹಲವಾರು ಪಾಶ್ಚಾತ್ಯ ಸಾಹಿತ್ಯ ಕೃತಿಗಳು ಕನ್ನಡೀಕರಣಗೊಂಡವು. ಮೊದಲು ಪಾಶ್ಚಾತ್ಯ ನಾಟಕಗಳು, ಮುಖ್ಯವಾಗಿ ಷೇಕ್ಸ್ ಪಿಯರನ ನಾಟಕಗಳ ಮಹಾಪೂರವೇ ಕನ್ನಡಕ್ಕೆ ಬಂತು. ಈ ಪ್ರಕ್ರಿಯೆಗೆ ಡೆಪ್ಯೂಟಿ ಚೆನ್ನಬಸಪ್ಪ, ಚುರಮುರಿ ಶೇಷಗಿರಿರಾಯರು, ಬಸವಪ್ಪ ಶಾಸ್ತ್ರಿಗಳು, ಶ್ರೀಕಂಠೇಶ ಗೌಡರು, ಆನಂದರಾಯರು ಹೆಚ್ಚಿನ ಕಾಣಿಕೆ ಸಲ್ಲಿಸಿದ್ದಾರೆ. ನಂತರ ಕಾವ್ಯದ ಅನುವಾದ ಕಾರ್ಯ ಪ್ರಾರಂಭವಾಯಿತು. ಹಟ್ಟಿಯಂಗಡಿ ನಾರಾಯಣರಾಯರು, ಪಂಜೆ ಮಂಗೇಶ ರಾಯರು, ಗೋವಿಂದ ಪೈಗಳು, ಬಿ.ಎಂ.ಶ್ರೀಕಂಠಯ್ಯನವರು ಕಾವ್ಯವನ್ನು ಅನುವಾದಿಸಿದ ವರಲ್ಲಿ ಮುಖ್ಯರು.
ಇದಲ್ಲದೆ ಕಾದಂಬರಿ ಪ್ರಕಾರವು ಇಂಗ್ಲಿಷಿನ ಜೊತೆಗೆ ಬಂಗಾಳಿ ಮತ್ತು ಮರಾಠಿ ಭಾಷೆಯಿಂದಲೂ ಕನ್ನಡಕ್ಕೆ ಅನುವಾದಿತಗೊಂಡಿತು. ಕಲ್ಕತ್ತಾ ಮತ್ತು ಮುಂಬೈ ವಸಾಹತು ಭಾರತದ ಎರಡು ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಾಗಿದ್ದುದರ ಜೊತೆಗೆ ಭಾರತೀಯ ರಾಷ್ಟ್ರೀಯತೆಯ ಕೇಂದ್ರಗಳೂ ಆಗಿದ್ದವು.
ಮುಂಬೈ ಕರ್ನಾಟಕ, ಅಂದರೆ ಈಗಿನ ಧಾರವಾಡ, ಬೆಳಗಾವಿ ಕಾರವಾರದ ಜನರು ಮರಾಠಿ ಕಾದಂಬರಿಗಳನ್ನು, ಕೃತಿಗಳನ್ನು ಕನ್ನಡಕ್ಕೆ ತಂದರು. ದಕ್ಷಿಣ ಕರ್ನಾಟಕದ ಜನ ದೂರದ ಬಂಗಾಳದಲ್ಲಿ ರಚಿತವಾದ ಭಾರತೀಯ ರಾಷ್ಟ್ರೀಯವಾದಿ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿದರು. ಈ ಭಾರತೀಯ ರಾಷ್ಟ್ರೀಯವಾದಿ ಸಾಹಿತ್ಯ ಮೇಲ್ಜಾತಿಯ, ಮೇಲು/ಮಧ್ಯಮ ವರ್ಗದ ಇಂಗ್ಲಿಷ್ ಕಲಿತವರಿಂದ ರಚಿತಗೊಂಡ ಸಾಹಿತ್ಯ. ಈ ಗುಂಪೇ ಭಾರತೀಯ ರಾಷ್ಟ್ರೀಯ ಚಳವಳಿಯ ಮುಂಚೂಣಿಯಲ್ಲಿದ್ದುದು.
ಕನ್ನಡದ ಮೊದಲ ಕಾದಂಬರಿಗಳು
ಕನ್ನಡದಲ್ಲಿ ಕಾದಂಬರಿಗಳು ರಚನೆಗೊಳ್ಳಲು ಮೊದಲುಗೊಂಡಿದ್ದು 19ನೆಯ ಶತಮಾನದ ಕೊನೆಯ ದಶಕದಲ್ಲಿ. ಗುಲವಾಡಿ ವೆಂಕಟರಾಯರ ‘ಇಂದಿರಾಬಾಯಿ’ಯನ್ನು ಕನ್ನಡದ ಮೊಟ್ಟ ಮೊದಲ ಸಾಮಾಜಿಕ ಕಾದಂಬರಿ ಎಂದು ಕರೆಯಲಾಗಿದೆ. ಈ ಮೊಟ್ಟ ಮೊದಲ ಕಾದಂಬರಿಗಳಲ್ಲಿ ಮುಖ್ಯವಾಗಿ ಎರಡು ಪ್ರಭೇದಗಳನ್ನು ಗುರುತಿಸಬಹುದು. ಸಾಮಾಜಿಕ ಕಾದಂಬರಿಗಳು ಹಾಗೂ ಐತಿಹಾಸಿಕ ಕಾದಂಬರಿಗಳು.
ಗುಲವಾಡಿ ವೆಂಕಟರಾಯರು, ಗುಲವಾಡಿ ಅಣ್ಣಾರಾಯರು, ಕೆರೂರು ವಾಸುದೇವಾಚಾರ್ಯರು, ಬೋಳಾರ ಬಾಬುರಾಯರು, ಎಂ.ಎಸ್. ಪುಟ್ಟಣ್ಣ ಮುಂತಾದವರು ಕನ್ನಡದಲ್ಲಿ ಸಾಮಾಜಿಕ ಕಾದಂಬರಿಗಳನ್ನು ರಚಿಸಿದರು. ಇವರು ಭಾರತೀಯ ರಾಷ್ಟ್ರೀಯತೆಯ ಪ್ರಮುಖ ಕಾಳಜಿಯಾದ ಬ್ರಾಹ್ಮಣರ ಆಧುನೀಕರಣವನ್ನು ಕುರಿತು ಬರೆದರು. ಅವರು ತಮ್ಮ ಕಾದಂಬರಿಯಲ್ಲಿ ವಿಧವಾ ವಿವಾಹ, ಬಾಲ್ಯ ವಿವಾಹ ಸಮಸ್ಯೆ, ಸಮುದ್ರಯಾನ ನಿಷೇಧ, ಮಠಗಳ ಅನಾಚಾರ ಮುಂತಾದವುಗಳನ್ನು ಕುರಿತು ಚರ್ಚೆ ನಡೆಸುತ್ತಾರೆ. ಬಹುತೇಕ ಸಾಮಾಜಿಕ ಕಾದಂಬರಿಗಳು ಮಂಗಳೂರು ಪ್ರಾಂತ್ಯದಿಂದ ಬಂದಂಥವು.
ಐತಿಹಾಸಿಕ ಕಾದಂಬರಿಗಳು ಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ರಚಿತಗೊಂಡವು. ಇವರಲ್ಲಿ ಬಿ.ವೆಂಕಟಾಚಾರ್ಯರು ಮತ್ತು ಗಳಗನಾಥರು ಪ್ರಮುಖರು. ಈ ಕಾದಂಬರಿಗಳು ಹಿಂದೂ ಪರಂಪರೆಯನ್ನು ಉಜ್ವಲವಾಗಿ ಚಿತ್ರಿಸುವ, ಇತರೆ ಧರ್ಮೀಯರನ್ನು ಅನ್ಯರನ್ನಾಗಿ, ಶತ್ರುಗಳನ್ನಾಗಿ ದುಷ್ಟರನ್ನಾಗಿ ಚಿತ್ರಿಸುವ, ಹಿಂದೂ-ಭಾರತವನ್ನು  ಕಲ್ಪಿಸಿ ಕೊಳ್ಳುವ ಕಥಾನಕಗಳಾಗಿವೆ. ಅದೇ ಸಮಯದಲ್ಲಿ ಹಿಂದೂ-ಭಾರತದಂತೆ ವಿಜಯನಗರ ಸಾಮ್ರಾಜ್ಯ ವನ್ನು ಆಧಾರವಾಗಿರಿಸಿಕೊಂಡು ಹಿಂದೂ-ಕರ್ನಾಟಕವನ್ನು ಕಲ್ಪಿಸಿಕೊಳ್ಳುವ ಕಥಾನಕಗಳೂ ಈ ಐತಿಹಾಸಿಕ ಕಾದಂಬರಿಗಳಲ್ಲಿವೆ. ಇಂಥ ಪ್ರಯತ್ನಗಳಿಗೆ ಉದಾಹರಣೆಯಾಗಿ ಬಿ. ವೆಂಕಟಾಚಾರ್ಯರ ಆರ್ಯಕೀರ್ತಿ, ಗಳಗನಾಥರ ಕನ್ನಡಿಗರ ಕರ್ಮ ಕಥೆ, ಮಾಧವ ಕರುಣಾವಿಲಾಸ ಕೃತಿಗಳನ್ನು ಹೆಸರಿಸಬಹುದು.
ಹೀಗೆ ಕನ್ನಡ ಸಾಹಿತ್ಯ, ಅನುವಾದ ಚಳವಳಿಯ ಪರಿಣಾಮವಾಗಿ, ವಸಾಹತು ಸಂಸ್ಕೃತಿಗೆ ಮುಖಾಮುಖಿಯಾಗಿ, ಆಧುನಿಕತೆಯನ್ನು ಮೈಗೂಡಿಸಿಕೊಳ್ಳುತ್ತ, ಹೊಸ ಸಾಹಿತ್ಯ ಪ್ರಕಾರಗಳು, ಶೈಲಿಯನ್ನು ರೂಢಿಸಿಕೊಳ್ಳುತ್ತ, ಭಾರತೀಯ ರಾಷ್ಟ್ರೀಯವಾದದ ಪ್ರಮುಖ ಕಾಳಜಿಗಳನ್ನು ತನ್ನದಾಗಿಸಿಕೊಳ್ಳುತ್ತ, ‘ಕರ್ನಾಟಕ’ ಎಂಬ ಕಲ್ಪಿತ ಸಮುದಾಯವನ್ನು ಸೃಜಿಸಿಕೊಳ್ಳತೊಡಗಿತು. ಹೀಗೆ ಬೆಳೆದ ಕನ್ನಡ ಸಾಹಿತ್ಯ ಕಥೆ, ಕಾದಂಬರಿ, ನಾಟಕ, ಕವನ, ವಿಡಂಬನೆ, ವೈಚಾರಿಕ ಬರವಣಿಗೆ ಇತ್ಯಾದಿ ಪ್ರಕಾರಗಳಲ್ಲಿ ವಿಪುಲವಾಗಿ ಮೂಡಿಬಂತು.
ಹೀಗೆ ಮೂಡಿಬಂದ ಸಾಹಿತ್ಯವನ್ನು ಹಲವಾರು ಕಾಲಘಟ್ಟಗಳಾಗಿ, ವಿವಿಧ ಚಳವಳಿಗಳಾಗಿ ವಿಂಗಡಿಸಲಾಗಿದೆ:
1. ನವೋದಯ ಸಾಹಿತ್ಯ
2. ಪ್ರಗತಿಶೀಲ ಸಾಹಿತ್ಯ
3. ನವ್ಯ ಸಾಹಿತ್ಯ
4. ಬಂಡಾಯ ಸಾಹಿತ್ಯ
5. ದಲಿತ ಸಾಹಿತ್ಯ
6. ಮಹಿಳಾ ಸಾಹಿತ್ಯ
7. ಮುಸ್ಲಿಂ ಸಂವೇದನೆಯ ಕನ್ನಡ ಸಾಹಿತ್ಯ
8. ಇತರ ಸಾಹಿತ್ಯ ಚಳವಳಿಗಳು
ಈ ವಿಂಗಡನೆಯಲ್ಲಿ ಹಲವಾರು ಸಮಸ್ಯೆಗಳಿದ್ದರೂ ಮತ್ತು ಹಲವು ಕೃತಿಕಾರರು, ಕೃತಿಗಳು ಈ ವಿಂಗಡನೆಯ ಒಳಗೆ ಬರದಿದ್ದರೂ, ಮಾಹಿತಿಗಾಗಿ ಈ ವಿಂಗಡನೆಯನ್ನು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಹಾಗೇ ಬಳಸಿಕೊಳ್ಳಲಾಗಿದೆ.

ನವೋದಯ ಸಾಹಿತ್ಯ ಚಳವಳಿ
ಕನ್ನಡ ಸಾಹಿತ್ಯದ ಇತಿಹಾಸವನ್ನು ಬರೆಯುವಾಗ 1910ರಿಂದ 1940ರವರೆಗಿನ ಕಾಲದ ಸಾಹಿತ್ಯವನ್ನು ನವೋದಯ ಸಾಹಿತ್ಯವೆಂದು ಸ್ಥೂಲವಾಗಿ ಕರೆಯಬಹುದು. ವಿಮರ್ಶಕರು ಕನಸುಗಾರಿಕೆ, ಆದರ್ಶಪ್ರಿಯತೆ, ದೇಶಭಕ್ತಿ, ಕನ್ನಡಾಭಿಮಾನ, ವ್ಯಕ್ತಿಗತ ಭಾವನೆಗಳ ತಾಕಲಾಟ, ನಿಸರ್ಗಪ್ರಿಯತೆ, ವ್ಯಕ್ತಿನಿಷ್ಠತೆ, ವ್ಯಕ್ತಿತ್ವವಾದ, ಶುದ್ಧಕಲೆ, ಭಾವನೆಗಳ ಸ್ವಚ್ಛಂದ ಲಹರಿ ಮುಂತಾದವುಗಳನ್ನು ನವೋದಯ ಸಾಹಿತ್ಯದ ಲಕ್ಷಣಗಳೆಂದು ಪಟ್ಟಿ ಮಾಡಿದ್ದಾರೆ. ಈ ಕಾಲದ ಅನೇಕ ಪಠ್ಯಗಳು ಈ ಲಕ್ಷಣಗಳ ಆಚೆಯೂ ನಿಲ್ಲುವ ಸಾಧ್ಯತೆಯಿದೆ. ಮುಖ್ಯವಾಗಿ ನಾಟಕ ಸಾಹಿತ್ಯ ಕೆಲ ಭಿನ್ನತೆಗಳನ್ನು ಹೊಂದಿದೆ.
ಚಾರಿತ್ರಿಕವಾಗಿ ನವೋದಯದ ಆರಂಭವನ್ನು ಬಿ.ಎಂ.ಶ್ರೀಕಂಠಯ್ಯನವರ ಇಂಗ್ಲಿಷ್ ಗೀತೆಗಳು ಕೃತಿಯೊಂದಿಗೆ ಗುರುತಿಸಲಾಗಿದೆ. ಅದಕ್ಕೂ ಮೊದಲೇ ಗೋವಿಂದ ಪೈಗಳು, ಪಂಜೆ ಮಂಗೇಶರಾಯರು, ಹಟ್ಟಿಯಂಗಡಿ ನಾರಾಯಣರಾಯರು ಇಂಗ್ಲಿಷ್ ಕವಿತೆಗಳನ್ನು ಅನುವಾದಿಸಿದ್ದರೂ, ಅವುಗಳು ಜಿಡ್ಡುಗಟ್ಟಿದ ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ತೋರಿಸಿರಲಿಲ್ಲ. ಈ ನಿಟ್ಟಿನಲ್ಲಿ ಇಂಗ್ಲಿಷ್ ಗೀತೆಗಳ ಪ್ರಭಾವ ಅಪಾರವಾದುದು. ಇದಕ್ಕೆ ಕಾರಣವೇನೆಂದರೆ ಬಿ.ಎಂ.ಶ್ರೀ.ಯವರು ಕಾವ್ಯಾನುವಾದದ ಜೊತೆಗೆ ಅದನ್ನು ಸ್ವೀಕರಿಸುವಂತಹ ಓದುವ ವರ್ಗವನ್ನು, ಸಾಹಿತ್ಯಕ ವಾತಾವರಣವನ್ನು ಸಿದ್ಧಪಡಿಸಲು ದುಡಿದರು. ಅವರಿಗಿಂತ ಮುಂಚೆ ಬಂದ ಅನುವಾದಗಳು ಇಂಥ ಯಾವುದೇ ಸಾಹಸಕ್ಕೂ ಕೈ ಹಾಕಿರಲಿಲ್ಲ. ಇಂಗ್ಲಿಷ್ ಗೀತೆಗಳು ನಂತರ ಕನ್ನಡದಲ್ಲಿ ಕಾವ್ಯರಚನೆ ಬಿರುಸಾಗಿಯೇ ನಡೆಯಿತು. ಕುವೆಂಪು, ಪಂಜೆ ಮಂಗೇಶರಾಯರು, ಪು.ತಿ.ನರಸಿಂಹಾಚಾರರು, ಆನಂದಕಂದ, ಗೋವಿಂದ ಪೈ, ಡಿ.ವಿ.ಗುಂಡಪ್ಪ, ವಿನಾಯಕ, ಬೇಂದ್ರೆ, ಮಧುರಚೆನ್ನ, ಮುಗಳಿ, ಎಂ.ಆರ್.ಶ್ರೀ ಮುಂತಾದವರು ನವೋದಯ ಕಾಲದಲ್ಲಿನ ಪ್ರಮುಖ ಕವಿಗಳು. ಮಾಸ್ತಿ, ಆನಂದ, ಕುವೆಂಪು, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮುಂತಾದವರು ಕಥಾ ಸಾಹಿತ್ಯವನ್ನು ಈ ಕಾಲದಲ್ಲಿ ಶ್ರೀಮಂತಗೊಳಿಸಿದರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನು ಕನ್ನಡ ಕಥೆಯ ಪಿತಾಮಹ ಎಂದು ಕರೆದಿದ್ದಾರೆ.
ಮೇಲಿನ ಲೇಖಕರ ಕಥಾಸಾಹಿತ್ಯವನ್ನು ನವೋದಯ ಸಾಹಿತ್ಯವೆಂದು ಗುರುತಿಸ ಲಾರಂಭಿಸಿದ್ದು 1940ರ ನಂತರವೇ.ೊ1950ರ ದಶಕದಲ್ಲಿ ಕುವೆಂಪು ಅವರಿಂದ ನವೋದಯ ಪದದ ಬಳಕೆಯಾಗಿದೆ. ಈ ಪದ ‘ಪುನರುಜ್ಜೀವನ’ ಎಂಬ ಪದದ ಪರ್ಯಾಯವಾಗಿ ಬಳಕೆಯಾಗಿದೆ. ನವೋದಯ ಸಾಹಿತ್ಯವನ್ನು ಒಂದು ಚಳವಳಿಯಾಗಿ ಪರಿಗಣಿಸಿ ಅದರ ರೂಪ-ಲಕ್ಷಣಗಳನ್ನು ನಿರ್ವಹಿಸಿದ್ದು 1950ರ ದಶಕದಲ್ಲಿ, ನವ್ಯಸಾಹಿತ್ಯ ಚಳವಳಿ ತನ್ನನ್ನು ನಿರ್ವಚಿಸಿಕೊಳ್ಳುವ ಸಂದರ್ಭದಲ್ಲೇ ನವೋದಯ ಸಾಹಿತ್ಯದ ರೂಪು-ರೇಷೆಗಳನ್ನು ಗುರುತಿಸಿತು ಮತ್ತು ಅದನ್ನು ತೀವ್ರವಾಗಿ ಟೀಕಿಸಿತು.
1930ರವರೆಗಿನ ನವೋದಯ ಸಾಹಿತ್ಯದ ಮುಖ್ಯ ಕಾಳಜಿಗಳು ಕನ್ನಡಾಭಿಮಾನದಿಂದ ರೂಪಿತಗೊಂಡಿವೆ. ಮೈಸೂರು ಪ್ರಾಂತ್ಯದಲ್ಲಿ ರಾಜಭಕ್ತಿ ಸಹ ಒಂದು ಪ್ರಮುಖ ಕಾಳಜಿಯಾಗಿ ಕಾಣುತ್ತದೆ. ಇತರ ಪ್ರಾಂತ್ಯಗಳಲ್ಲಿ ಕನ್ನಡಾಭಿಮಾನ ಹಿಂದೂ ಪುನರುತ್ಥಾನದ ಹಾದಿಯಲ್ಲಿ ಸಾಗಿದೆ. ಆದರೂ ಮಾನವೀಯತೆ, ಧರ್ಮನಿರಪೇಕ್ಷತೆ ಇವು ನವೋದಯದ ಪ್ರಮುಖ ಕಾಳಜಿಗಳಾಗಿದ್ದವು. 1930ರ ನಂತರದ ಕನ್ನಡ ಸಾಹಿತ್ಯವನ್ನು ಗಾಂಧೀಜಿಯ ಭಾರತೀಯ ರಾಷ್ಟ್ರೀಯ ಚಳವಳಿ ಬಹುವಾಗಿ ಪ್ರಭಾವಿಸಿದೆ. ಇಲ್ಲಿಂದ ಕನ್ನಡ ಮಾತೆ, ಭಾರತಾಂಬೆಯ ಕುವರಿಯಾಗಿ ಕಾಣಿಸಿಕೊಳ್ಳಲಾರಂಭಿಸುತ್ತಾಳೆ. ಧಾರವಾಡದಲ್ಲಿದ್ದ ಗೆಳೆಯರ ಗುಂಪಿನ ಸಾಹಿತಿಗಳಾದ ಬೇಂದ್ರೆ, ಮಧುರಚೆನ್ನ, ಮುಗಳಿ, ಗೋಕಾಕರನ್ನು ಅರವಿಂದರ ವಿಚಾರಧಾರೆ ಪ್ರಭಾವಿಸಿದೆ. ಕುವೆಂಪು ಅವರ ಮೇಲೆ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ವಿಚಾರಧಾರೆ ಪ್ರಭಾವ ಬೀರಿದೆ. ಹೀಗೆ ಆಧ್ಯಾತ್ಮಿಕತೆ ಸಹ ನವೋದಯ ಸಾಹಿತಿಗಳ ಒಂದು ಪ್ರಮುಖ ಲಕ್ಷಣವಾಗಿದೆ.
ಇದಲ್ಲದೆ ನವೋಯದ ಕವಿಗಳ ಮೇಲೆ ಇಂಗ್ಲಿಷ್ನ ವರ್ಡ್ಸ್ವರ್ತ್, ಷೆಲ್ಲಿ, ಕೀಟ್ಸ್, ಟೆನ್ನಿಸನ್ ಮುಂತಾದ ಕವಿಗಳ ಪ್ರಭಾವವೂ ಇದೆ. ಅಲ್ಲಿನ ರೋಮ್ಯಾಂಟಿಕ್ ಸಂಪ್ರದಾಯದ ಕಾವ್ಯ ಇಲ್ಲಿ ನವೋದಯವಾಯಿತೆಂಬ ಅಭಿಪ್ರಾಯವೂ ಇದೆ. ಇದಲ್ಲದೆ ಕಥೆಗಾರರ ಮೇಲೆ ಮುಖ್ಯವಾಗಿ ಟಾಲ್ಸ್ಟಾಯ್ ಹಾಗೂ ಟಾಗೋರರ ಪ್ರಭಾವವಿದೆ. ನವೋದಯ ಕಾಲದಲ್ಲಿ ಸಂಸ, ಕುವೆಂಪು ಮುಂತಾದವರು ನಾಟಕಗಳನ್ನು ರಚಿಸಿದ್ದರೂ, ರಂಗಕ್ಕೆ ಅಳವಡಿಸಿ ಯಶಸ್ವಿಯಾದಂಥ ನಾಟಕಗಳನ್ನು ನೀಡಿದವರು ಕೈಲಾಸಂ ಮತ್ತು ಶ್ರೀರಂಗರು. ಇವರಿಬ್ಬರ ನಾಟಕಗಳು ಮುಖ್ಯವಾಗಿ ಬ್ರಾಹ್ಮಣ ಸಂಪ್ರದಾಯದಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸುತ್ತ, ಆಧುನಿಕತೆಯೆಡೆಗೆ ಸಾಗಬೇಕಾದ ಅನಿವಾರ್ಯತೆಯನ್ನು ಮನಗಾಣಿಸುತ್ತವೆ. ಬಿ.ಎಂ.ಶ್ರೀ.ಯವರು ಈ ಕಾಲದಲ್ಲಿ ರುದ್ರನಾಟಕಗಳನ್ನೂ ರಚಿಸಿದ್ದಾರೆ. ಇದಲ್ಲದೆ ಹಲವಾರು ಗೀತನಾಟಕಗಳೂ ಈ ಕಾಲದಲ್ಲಿ ರಚಿತಗೊಂಡವು.
ಶಿವರಾಮ ಕಾರಂತರು ನವೋದಯ ಚಳವಳಿಯಿಂದ ದೂರವಿದ್ದಂತೆ ಕಂಡರೂ ಅವರನ್ನು ಮೇಲಿನ ಗುಂಪಿಗೆ ಸೇರಿಸಬಹುದು. ಕಾರಂತರ ಕಾದಂಬರಿಗಳು ಆಧುನಿಕತೆಯ ಅನಿವಾರ್ಯವನ್ನು ಹೇಳುತ್ತಲೇ ಅದರ ದುಷ್ಪರಿಣಾಮಗಳನ್ನು ಕುರಿತು ಎಚ್ಚರಿಸುತ್ತವೆ. ಕಾರಂತರು ಕಾದಂಬರಿ ಕ್ಷೇತ್ರದಲ್ಲಷ್ಟೇ ಅಲ್ಲದೆ ಸಾಂಸ್ಕೃತಿಕವಾಗಿ ಇನ್ನೂ ಹಲವಾರು ಕಾರ್ಯಗಳನ್ನು ಮಾಡಿದ್ದಾರೆ. ಒಟ್ಟಿನಲ್ಲಿ ಸಂಪ್ರದಾಯವನ್ನು ಸೃಷ್ಟಿಸಿ, ಪರಿಷ್ಕರಿಸಿ, ಆಧುನೀಕರಿಸಿ ಪುನರುತ್ಥಾನಕ್ಕೆ ಅನುವು ಮಾಡಿಕೊಡುವ ಜವಾಬ್ದಾರಿಯನ್ನು ಈ ಪೀಳಿಗೆ ನಿರ್ವಹಿಸಿತು. ಕರ್ನಾಟಕವನ್ನು ಕಟ್ಟುವ, ಭಾರತೀಯ ರಾಷ್ಟ್ರೀಯತೆಗೆ ಸ್ಪಂದಿಸುವ ಗುರುತರವಾದ ಹೊಣೆಯನ್ನು ನಿರ್ವಹಿಸಿದ ಹೆಗ್ಗಳಿಕೆಯೂ ಇವರದೇ. ಈ ಹಿಂದೂ ಧರ್ಮದ ಪುನರುತ್ಥಾನ ಮತ್ತು ಆಧುನಿಕತೆ ಸಕಲ ರೋಗಗಳಿಗೂ ಮದ್ದು ಎಂದು ಹೊರಟ ಇವರಿಗೆ, ಇವೆರಡರಿಂದ ದೂರವಿದ್ದ ವರ್ಗಗಳು, ಜನರು ಕಣ್ಣಿಗೆ ಬೀಳಲಿಲ್ಲ.
ಭಾಷೆಯ ದೃಷ್ಟಿಯಿಂದ ನೋಡಿದರೆ ನವೋದಯದವರು ಮೈಸೂರು, ಶಿವಮೊಗ್ಗ ಕಡೆಯ ಬ್ರಾಹ್ಮಣರ ಭಾಷೆಯನ್ನು ಪರಿಷ್ಕರಿಸಿ ಬಳಸಿದಂತಿದೆ. ಇಂದಿಗೂ ನಮ್ಮ ಸಾಹಿತ್ಯ ಚಳವಳಿಗಳು ಈ ಭಾಷೆಯ ಜಾಲದಿಂದ ತಪ್ಪಿಸಿಕೊಂಡಂತೆ ಕಾಣುವುದಿಲ್ಲ. ಬೇಂದ್ರೆ, ಮಧುರಚೆನ್ನ, ಚಂದ್ರಶೇಖರ ಕಂಬಾರ ಮುಂತಾದ ಸಾಹಿತಿಗಳು ಹಾಗೂ ಇತ್ತೀಚಿನ ಕೆಲ ದಲಿತ ಮತ್ತು ಪ್ರಾದೇಶಿಕ ನೆಲೆಯಿಂದ ಬರೆಯುತ್ತಿರುವ ಸಾಹಿತಿಗಳು ಈ ಮಾತಿಗೆ ಅಪವಾದವಾಗಿದ್ದರೆ, ಆಧುನಿಕ ಸಾಹಿತ್ಯ ಉಗಮವಾಗುವ ಮುಂಚೆ ಸಾಹಿತ್ಯ, ಗಮಕ ಮುಂತಾದ ಕಲೆಗಳ ಮೂಲಕವಾಗಿ ಜನಸಾಮಾನ್ಯರನ್ನು ತಲುಪುತ್ತಿತ್ತು. ನವೋದಯ ಸಾಹಿತ್ಯ ಶಿಷ್ಟ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದರಿಂದ, ಸಾಹಿತ್ಯ ಕೇವಲ ಓದುವ ವರ್ಗದ ಸ್ವತ್ತಾಯಿತು. ನವ್ಯ ಸಾಹಿತಿಗಳು, ನವೋದಯ ಸಾಹಿತಿಗಳನ್ನು ವಾಸ್ತವತೆಗೆ ಬೆನ್ನು ತಿರುಗಿಸಿದ ಪಲಾಯನವಾದಿಗಳು, ಶಾಬ್ದಿಕ ಆಡಂಬರದಲ್ಲಿ ತೊಡಗಿರುವ ಭಾವುಕ ಜೀವಿಗಳೆಂದು ಜರೆದಿದ್ದಾರೆ. ಇದೇ ಆಪಾದನೆಯನ್ನು ಪ್ರಗತಿಶೀಲರೂ ಮಾಡಿದ್ದಾರೆ. ಇದೇನೇ ಇದ್ದರೂ ನವೋದಯ ಸಾಹಿತಿಗಳು ಕನ್ನಡಕ್ಕೆ ಹಲವಾರು ಹೊಸ ಸಾಹಿತ್ಯ ಪ್ರಕಾರಗಳನ್ನು ಮುಖ್ಯವಾಗಿ ಕಾದಂಬರಿ, ಸಾನೆಟ್, ಭಾವಗೀತೆ, ಸಣ್ಣಕಥೆ, ಸಾಮಾಜಿಕ ನಾಟಕಗಳನ್ನು ತಂದಿದ್ದಾರೆ.
ಪ್ರಗತಿಶೀಲ ಸಾಹಿತ್ಯ ಚಳವಳಿ
1930ರ ದಶಕದಲ್ಲಿನ ಕೊನೆಯ ಭಾಗದಲ್ಲಿ ಭಾರತದೆಲ್ಲೆಡೆ ಮುಲ್ಕರಾಜ್ ಆನಂದ್, ಸಜ್ಜಾದ್ ಜಾಹೀರ್, ಪ್ರೇಮಚಂದ್ ಮುಂತಾದ ಸಾಹಿತಿಗಳ ನೇತೃತ್ವದಲ್ಲಿ ಎಡಪಂಥೀಯ ಲೇಖಕರ ಸಂಘಟನೆಗಳು ಹುಟ್ಟಿಕೊಂಡವು. ಮುಖ್ಯವಾಗಿ ಫ್ಯಾಸಿಸಂನ ವಿರುದ್ಧ, ಕೃಷಿ ಕೂಲಿಕಾರರು, ರೈತಾಪಿ ಜನರು, ಕಾರ್ಮಿಕ ವರ್ಗ, ಬಡವರ ಪರವಾಗಿ ಸಾಹಿತ್ಯ ರಚಿಸುವ ಆಶಯವನ್ನು ಈ ಸಂಘಟನೆಗಳು ಹೊಂದಿದ್ದವು. ಇದರ ಪರಿಣಾಮ, 1943ರ ನಂತರ ಕರ್ನಾಟಕದಲ್ಲೂ ಆಗತೊಡಗಿತು. 1943ರಲ್ಲಿ ಮುಂಬೈನಲ್ಲಿ ನಡೆದ 4ನೆಯ ಅಖಿಲಭಾರತ ಪ್ರಗತಿಶೀಲ ಬರಹಗಾರರ ಸಮ್ಮೇಳನದಲ್ಲಿ ಶ್ರೀರಂಗ, ವಿ.ಎಂ.ಇನಾಂದಾರರು, ಕೃಷ್ಣಕುಮಾರರು ಕರ್ನಾಟಕದ ಪರವಾಗಿ ಭಾಗವಹಿಸಿದ್ದರು. ಅದೇ ವರ್ಷ ಮಂಗಳೂರು, ಬೆಂಗಳೂರು, ಶಿವಮೊಗ್ಗಗಳಲ್ಲಿ ಕರ್ನಾಟಕ ಪ್ರಗತಿಶೀಲ ಲೇಖಕರ ಸಂಘಟನೆಗಳು ಹುಟ್ಟಿಕೊಂಡವು. ಇವುಗಳಲ್ಲಿ ಕಾಂತಪ್ಪ ಶೆಟ್ಟರು, ಕುಳಕುಂದ ಶಿವರಾಯರು(ನಿರಂಜನ), ಕುಮಾರ ವೆಂಕಣ್ಣ, ತ.ರಾ.ಸುಬ್ಬರಾವ್(ತ.ರಾ.ಸು.) ವಿ.ಬಿ. ಬಳ್ಳಾರಿ, ಅ.ನ.ಕೃಷ್ಣರಾಯರು, ನಾಡಿಗೇರ ಕೃಷ್ಣರಾಯರು ಸಕ್ರಿಯವಾಗಿದ್ದರು.
ನಂತರದ ದಿನಗಳಲ್ಲಿ ಚದುರಂಗ, ದೇವುಡು, ಎಚ್ಚೆಸ್ಕೆ, ಕೋ.ೊಚೆನ್ನಬಸಪ್ಪ, ಬಸವರಾಜ ಕಟ್ಟೀಮನಿ, ಹಿರೇಮಲ್ಲೂರು ಈಶ್ವರನ್, ಪಾಟೀಲ ಪುಟ್ಟಪ್ಪ ಮುಂತಾದವರು ಸಕ್ರಿಯವಾಗಿ ಉಳಿದರು. ಶ್ರೀರಂಗ, ಅಡಿಗ, ಗೋಕಾಕರು ಅಲ್ಪಕಾಲೀನ ಸಂಬಂಧವನ್ನು ಈ ಚಳವಳಿಯೊಂದಿಗೆ ಹೊಂದಿದ್ದರು. ಶಿವರಾಮ ಕಾರಂತರು ಈ ಚಳವಳಿಯ ಅಂಗಸಂಸ್ಥೆಯಾದ ಭಾರತೀಯ ಜನ ರಂಗಭೂಮಿ ಸಂಸ್ಥೆಯನ್ನು ಉದ್ಘಾಟಿಸಿದ್ದು ಬಿಟ್ಟರೆ ಈ ಚಳವಳಿಯಲ್ಲಿ ಮತ್ತೆ ತಲೆಹಾಕಲಿಲ್ಲ. ಈ ಚಳವಳಿಯಲ್ಲಿ ರಾಷ್ಟ್ರಮಟ್ಟದಲ್ಲಿ ಎರಡು ವಿಭಿನ್ನ ಧಾರೆಗಳನ್ನು ನಾವು ಗುರುತಿಸಬಹುದು. ಒಂದು ಮಾರ್ಕ್ಸ್ನ ವಿಚಾರಧಾರೆಯಿಂದ ಪ್ರಭಾವಿತವಾದದ್ದು, ಮತ್ತೊಂದು ರಾಷ್ಟ್ರೀಯವಾದಿ ಪ್ರಗತಿಶೀಲರದ್ದು. ಕರ್ನಾಟಕದಲ್ಲೂ ಮುಖ್ಯವಾಗಿ ಎರಡು ಬಣಗಳಿದ್ದವು. ಕಟ್ಟೀಮನಿ ಮತ್ತು ನಿರಂಜನರು ಕಟ್ಟಾ ಮಾರ್ಕ್ಸ್ವಾದಿಗಳಾದರೆ ಅ.ನ.ಕೃ ಮತ್ತು ತ.ರಾ.ಸು. ಕನ್ನಡ ರಾಷ್ಟ್ರೀಯತೆಯ ಪರವಾಗಿ ಕೆಲಸ ಮಾಡುತ್ತಾ ಸಾಮಾಜಿಕ ಸಮಸ್ಯೆಗಳನ್ನು ಕುರಿತು ಮಾತನಾಡಿದರು.
ನವೋದಯದವರ ವ್ಯಕ್ತಿಕೇಂದ್ರಿತ ಸೌಂದರ್ಯಾನುಭೂತಿ ಸಾಹಿತ್ಯವನ್ನು ತಿರಸ್ಕರಿಸಿದ ಪ್ರಗತಿಶೀಲರು ತಮ್ಮ ಕಾದಂಬರಿಗಳ ಮೂಲಕ ಮಧ್ಯಮ ವರ್ಗದವರ ಹಾಗು ಕೂಲಿಕಾರ ವರ್ಗದ ಸಮಸ್ಯೆಗಳನ್ನು ಪ್ರತಿಬಿಂಬಿಸತೊಡಗಿದರು. ಆಧುನೀಕರಣದ ಫಲವಾಗಿ ಬಂದ ಸುಶಿಕ್ಷಿತ ಬ್ರಾಹ್ಮಣೇತರ ನವ ಮಧ್ಯಮವರ್ಗ ಹಾಗೂ ಕೈಗಾರೀಕರಣದ ಫಲವಾಗಿ ಹುಟ್ಟಿದ ದುಡಿಯುವ ವರ್ಗ ಈ ಸಮಯಕ್ಕಾಗಲೇ ರೂಪಿತವಾಗಿದ್ದರಿಂದ ಈ ಸಾಹಿತ್ಯ ತಕ್ಕಮಟ್ಟಿಗೆ ಬೇರೂರಿತು. ಸಾಹಿತ್ಯ ಗಿರಣಿಯ ಹೊಗೆಯಿಂದ ತುಂಬಿರಬೇಕು, ದೀನದಲಿತರ ಬಾಳನ್ನು ಬಿಂಬಿಸಬೇಕು, ಸಾಮಾಜಿಕ ಅನ್ಯಾಯಗಳನ್ನು ಬಯಲಿಗೆಳೆಯಬೇಕು ಎಂಬಂತಹ ಆಶಯವನ್ನು ಹೊಂದಿದ ಪ್ರಗತಿಶೀಲರಲ್ಲಿ ಕ್ರಾಂತಿ, ರಕ್ತ, ಕಣ್ಣೀರು ಮುಂತಾದ ಶಬ್ದಗಳು ಧಾರಾಳವಾಗಿ ಬಳಕೆಯಾದವು. ಮುಖ್ಯವಾಗಿ ಕಾದಂಬರಿ ಪ್ರಕಾರದಲ್ಲಿ ಈ ಚಳವಳಿ ಪ್ರಬಲವಾಗಿ ಬೆಳೆಯಿತು. ಕಾವ್ಯದಲ್ಲಿ ಎಕ್ಕುಂಡಿ, ಗಂಗಾಧರ ಚಿತ್ತಾಲರು ಈ ದಿಕ್ಕಿನಲ್ಲಿ ಕೃಷಿ ಮಾಡಿದ್ದರೆ, ಇವರ ಪರೋಕ್ಷ ಪರಿಣಾಮವನ್ನು ಅಡಿಗ, ಕುವೆಂಪು, ಬೇಂದ್ರೆ ಮುಂತಾದವರು ಈ ಸಮಯದಲ್ಲಿ ಬರೆದ ಕವನಗಳಲ್ಲೂ ಕಾಣಬಹುದು.
ಈ ಸಾಹಿತ್ಯದ ಮೇಲೆ ಮುಲ್ಕರಾಜ್ ಆನಂದ್, ಪ್ರೇಮಚಂದ್ ಮುಂತಾದ ಭಾರತೀಯ ಸಾಹಿತಿಗಳ ಪ್ರಭಾವವಿದೆ. ರಶಿಯನ್ ಸಾಹಿತ್ಯದ ಪ್ರಭಾವವೂ ಅಪಾರವಾದುದು. ಟಾಲ್ಸ್ಟಾಯ್, ಡಿಕೆನ್ಸ್, ಝೋಲಾ, ಗಾಲ್ಸ್ ವರ್ದಿ, ಮಾಕ್ಸಿಂ ಗಾರ್ಕಿ, ಮಾಯಕೋವಸ್ಕಿ, ಹರೀಂದ್ರನಾಥ್ ಮುಂತಾದವರ ಸಾಹಿತ್ಯದಿಂದ ನಮ್ಮ ಸಾಹಿತಿಗಳು ಪ್ರೇರಣೆ ಪಡೆದರು. ಆದರೆ ಇವರಲ್ಲಿನ ಎರಡನೆಯ ಗುಂಪು ಮುಖ್ಯವಾಗಿ ಅನಕೃ ಮತ್ತು ತರಾಸು ಈ ಪ್ರಭಾವಗಳಿಂದ ತಪ್ಪಿಸಿಕೊಂಡು ವಿಭಿನ್ನ ಶೈಲಿಯ ಸಾಹಿತ್ಯವನ್ನು ರಚಿಸಿದ್ದಾರೆ. ಅನಕೃ ಅವರು ವೇಶ್ಯಾಸಮಸ್ಯೆಯನ್ನು ಕುರಿತೇ ಹಲವಾರು ಕಾದಂಬರಿಗಳನ್ನು ರಚಿಸಿ ದ್ದಾರೆ. ವೇಶ್ಯಾಸಮಸ್ಯೆಯ ಹೆಸರಿನಲ್ಲಿ ಕಾಮ ಪ್ರಚೋದಿತ ಕಾದಂಬರಿಗಳನ್ನು ರಚಿಸಿದ್ದಾರೆ ಎಂಬ ಆರೋಪವನ್ನೂ ಎದುರಿಸಿದರು. ಇದಲ್ಲದೆ ಕಲಾವಿದನ ಬದುಕನ್ನು ಕುರಿತ ಕಾದಂಬರಿಗಳನ್ನು ರಚಿಸಿದ್ದಾರೆ. ತ.ರಾ.ಸು.ಅವರು ಐತಿಹಾಸಿಕ ಕಾದಂಬರಿಗಳ ರಚನೆಯತ್ತ ಕಾಲಿಟ್ಟರು. ಇವರಿಬ್ಬರೂ ಪ್ರಗತಿಶೀಲ ಚಳವಳಿಯ ಮೂಲೋದ್ದೇಶದಿಂದ ವಿಭಿನ್ನವಾದ ಸಾಹಿತ್ಯ ರಚನೆಯಲ್ಲಿ ಕಾಲಿಟ್ಟರು.
ಕೊನೆಯವರೆಗೂ ತಮ್ಮ ತತ್ವಗಳಿಗೆ ಬದ್ಧರಾಗಿ ನಡೆದ ಸಾಹಿತಿಗಳೆಂದರೆ ನಿರಂಜನರು ಮತ್ತು ಬಸವರಾಜ ಕಟ್ಟೀಮನಿ. ಇವರಿಬ್ಬರೂ ರೈತರ, ಬಡವರ್ಗದ ಹೋರಾಟಗಳನ್ನು ಕುರಿತು, ಜಾತಿ ಸಮಸ್ಯೆಯನ್ನು ಕುರಿತು ಕಾದಂಬರಿಗಳನ್ನು ರಚಿಸಿದ್ದಾರೆ. ಕಟ್ಟೀಮನಿಯವರು ಧರ್ಮದ ಅನಾಚಾರಗಳನ್ನು, ರಾಷ್ಟ್ರೀಯತೆಯ ಹೋರಾಟವನ್ನು ಚಿತ್ರಿಸುವ ಕಾದಂಬರಿ ಗಳನ್ನೂ ರಚಿಸಿದ್ದಾರೆ. ನಾಟಕ ರಂಗದಲ್ಲಿ ಈ ಚಳವಳಿಯ ಸಾಧನೆ ಅತ್ಯಲ್ಪ. ಶ್ರೀರಂಗರ ಕೆಲವು ನಾಟಕ ಗಳನ್ನು ಈ ಚಳವಳಿಗೆ ಸೇರಿದ ಕೃತಿಗಳು ಎಂದು ಸೇರಿಸಬಹುದು. ವಿಮರ್ಶೆಯಂತೂ ತೀರಾ ಹಿಂದುಳಿದಿದೆ. ಇದರ ಗದ್ಯ ಸಾಹಿತ್ಯದ ಭಾಷೆ ಸುಲಲಿತವಾಗಿದ್ದರಿಂದ ಕಾದಂಬರಿ ಸಾಹಿತ್ಯ ಬಹಳ ಜನಪ್ರಿಯವಾಯಿತು. ಓದುವ ವರ್ಗ ಈ ಸಾಹಿತ್ಯಕ್ಕೆ ಇತರೆ ಸಾಹಿತ್ಯ ಚಳವಳಿಗಳಿಗಿಂತ ಹೆಚ್ಚಾಗಿತ್ತು. ಆದರೆ ಅಕಾಡೆಮಿಕ್ ಆವರಣದಲ್ಲಿ ಈ ಚಳವಳಿಗೆ ಮನ್ನಣೆ ಸಿಗಲಿಲ್ಲ. ಈ ಲೇಖಕರಲ್ಲಿ ಯಾರೂ ವಿಶ್ವವಿದ್ಯಾಲಯಗಳ ಅಧ್ಯಾಪಕರಾಗಿರಲಿಲ್ಲ. ದೊಡ್ಡ ದೊಡ್ಡ ಸರಕಾರಿ ಹುದ್ದೆಗಳಲ್ಲಿರಲಿಲ್ಲ.
ಇವರ ನಂತರ ಬಂದ ನವ್ಯ ಸಾಹಿತಿಗಳು, ಕಲಾಪ್ರಜ್ಞೆಯ ಕೊರತೆಯಿಂದ ನರಳಿದ ಸಾಹಿತ್ಯವಾಗಿ ಪ್ರಗತಿಶೀಲರನ್ನು ಗುರುತಿಸಿದ್ದಾರೆ. ಸಾಹಿತ್ಯದ ಮಾನದಂಡಗಳನ್ನು ಮುಂದು ಮಾಡಿ ಕೇವಲ ಸಮಸ್ಯೆಗಳನ್ನು ಕುರಿತು ಬರೆದಾಕ್ಷಣ ಶ್ರೇಷ್ಠ ಸಾಹಿತ್ಯ ರಚಿತವಾಗುವುದಿಲ್ಲ. ಹೆಚ್ಚು ಓದುವ ವರ್ಗವನ್ನು ಪಡೆದು ಜನರನ್ನು ಮುಟ್ಟಿದರೆ ಅದು ಶ್ರೇಷ್ಠ ಸಾಹಿತ್ಯವಲ್ಲ ಎಂದಿದ್ದಾರೆ ಮತ್ತು 1960ರ ದಶಕದ ನಂತರ ಅಕಾಡೆಮಿಕ್ ವಲಯದಲ್ಲಿ ನವ್ಯ ಸಾಹಿತಿಗಳ ಪ್ರಭಾವ ಹೆಚ್ಚಿದ್ದರಿಂದ ಪ್ರಗತಿಶೀಲರ ಸಾಹಿತ್ಯ ಕುರಿತ ಚರ್ಚೆ ತನಗೆ ತಾನೇ ಹಿಂದುಳಿಯಿತು. ಅನಕೃ ಮತ್ತು ತರಾಸು ಅವರು ಚಳವಳಿಯಲ್ಲೇ ವಿಭಿನ್ನ ಮಾರ್ಗ ಹಿಡಿದಿದ್ದರಿಂದ ಚಳವಳಿಯ ಕಾವು ತಣ್ಣಗಾಯಿತು. ಆದರೂ ಈ ಪ್ರಗತಿಶೀಲ ಚಳವಳಿ ಮೃತ್ಯುಂಜಯ, ಚಿರಸ್ಮರಣೆ, ಮಾಡಿ ಮಡಿದವರು ಮುಂತಾದ ಉತ್ತಮ ಕೃತಿಗಳನ್ನು ನೀಡಿದೆ.
ನವ್ಯ ಸಾಹಿತ್ಯ ಚಳವಳಿ
ಪ್ರಗತಿಶೀಲರ ಜನಪ್ರಿಯತೆಗೆ ವಿರುದ್ಧವಾಗಿ ಆ ಸಮಯದಲ್ಲೇ ಕಲೆ, ಶ್ರೇಷ್ಠತೆ ಮುಖ್ಯ, ಜನಪ್ರಿಯತೆಯಲ್ಲ ಎನ್ನುವ ವಾದದೊಂದಿಗೆ ನವ್ಯ ಚಳವಳಿ ಕುಡಿಯೊಡೆಯ ತೊಡಗಿತು. ಮುಖ್ಯವಾಗಿ ಇಂಗ್ಲಿಷ್ ಕಲಿತ ಅಧ್ಯಾಪಕ ವರ್ಗ ಈ ಚಳವಳಿಯ ಮುನ್ನಡೆಯಲ್ಲಿತ್ತು. ಓದುಗರಿಗೆ ಸುಲಭವಾಗಿ ಸಾಹಿತ್ಯ ಅರ್ಥವಾಗಬೇಕಿಲ್ಲ. ಅವರಿಗೆ ‘ಸಂಸ್ಕಾರ’ ಬೇಕು ಎನ್ನುವ ಯುರೋಪು, ಅಮೆರಿಕಾದ ಮಾಡರನಿಸ್ಟ್ ವಿಮರ್ಶಕರ ಅಭಿಪ್ರಾಯವನ್ನು ಈ ಸಾಹಿತ್ಯ ಚಳವಳಿ ತನ್ನದಾಗಿಸಿಕೊಂಡಂತೆ ಕಾಣುತ್ತದೆ. ಈ ಸಾಹಿತ್ಯ ಚಳವಳಿ ಹುಟ್ಟಿತು. ಪ್ರಗತಿಶೀಲರಲ್ಲದೆ, ನವೋದಯದ ಸಾಹಿತಿಗಳನ್ನೂ ಗೇಲಿ ಮಾಡುತ್ತ, ವ್ಯಂಗ್ಯ-ವಿಡಂಬನೆಯನ್ನು ಸ್ಥಾಯಿಭಾವವನ್ನಾಗಿಸಿಕೊಂಡು ಈ ಚಳವಳಿ ಮುನ್ನಡೆಯಿತು.
ಚಾರಿತ್ರಿಕವಾಗಿ ನವ್ಯ ಚಳವಳಿಯ ಆರಂಭ ಮಾಡಿದವರು ಯಾರು ಎಂಬುದರ ಬಗ್ಗೆ ದ್ವಂದ್ವವಿದೆ. ಈ ದ್ವಂದ್ವವನ್ನು ‘ಗೋಕಾಕರು ತಾಂತ್ರಿಕ ನಾವೀನ್ಯತೆ ತಂದರು, ಅಡಿಗರು ವಸ್ತು-ವಿಷಯದಲ್ಲಿ ನಾವೀನ್ಯತೆ ತಂದದ್ದಲ್ಲದೆ ಚಳವಳಿಯನ್ನು ಬೆಳೆಸಲು ನೆರವಾದರು’ ಎಂದು ಬಗೆಹರಿಸಿಕೊಳ್ಳಲಾಗಿದೆ. ಧಾರವಾಡದ ಗೆಳೆಯರ ಗುಂಪಿನ ಸದಸ್ಯರಾಗಿದ್ದ ವಿನಾಯಕ ಕೃಷ್ಣ ಗೋಕಾಕರು ಅಲ್ಲಿನ ಇತರ ಸದಸ್ಯರಂತೆ ಮುಖ್ಯವಾಗಿ ಬೇಂದ್ರೆ ಮತ್ತು ಮಧುರ ಚೆನ್ನರಂತೆ ಅರವಿಂದರ ಪ್ರಭಾವಕ್ಕೆ ಒಳಗಾದರೂ, ಜಾನಪದದ ಪ್ರಭಾವಕ್ಕೆ ಒಳಗಾಗದೆ ತಮ್ಮದೇ ಆದ ಛಾಪಿನ ಹುಡುಕಾಟದಲ್ಲಿದ್ದರು. ಅವರ ಇಂಗ್ಲೆಂಡ್ ಪ್ರವಾಸ ಅದಕ್ಕೆ ತಕ್ಕ ಭೂಮಿಕೆಯನ್ನು ಸಿದ್ಧಪಡಿಸಿತು. 1950ರಲ್ಲಿ ಮುಂಬೈನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅವರು ನವ್ಯ ಕಾವ್ಯದ ಘೋಷಣೆ ಮಾಡಿದರು. ನಂತರ ಆ ಪ್ರಣಾಳಿಕೆಯನ್ನು ನಿರೂಪಿಸುವ ‘ನವ್ಯಕವನ’ಗಳನ್ನು ಹೊರತಂದರು. ಇದೇ ಸಂದರ್ಭದಲ್ಲಿ ಗೋಪಾಲಕೃಷ್ಣ ಅಡಿಗರು ನವೋದಯ ಚಳವಳಿಗೆ ವಿದಾಯ ಹೇಳಿ ಭಿನ್ನ ಮಾರ್ಗ ಹಿಡಿಯುವ ಹವಣಿಕೆಯಲ್ಲಿದ್ದರು. ತಮ್ಮ ನಡೆದು ಬಂದ ದಾರಿ ಕವನ ಸಂಗ್ರಹದಲ್ಲಿ ಅಡಿಗರು ‘ನಡೆದು ಬಂದ ದಾರಿ ಕಡೆಗೆ ತಿರುಗಿಸಬೇಡ, ಕಣ್ಣ ಹೊರಳಿಸಬೇಡ’ ಎಂದು ಘೋಷಿಸುತ್ತ ಹೊಸ ದಿಕ್ಕಿನೆಡೆಗೆ ಸಾಗಿದರು. ಅಡಿಗರು ತಮ್ಮೊಂದಿಗೆ ಇತರರನ್ನೂ ಆ ದಾರಿಯಲ್ಲಿ ಕೊಂಡೊಯ್ದರು. ಕಾವ್ಯದಲ್ಲಿ ರಾಮಚಂದ್ರಶರ್ಮ, ಎ.ಕೆ.ರಾಮಾನುಜನ್, ಸುಮತೀಂದ್ರ ನಾಡಿಗ್, ಚಂದ್ರಶೇಖರ ಕಂಬಾರ ಅವರ ಜೊತೆಗಾರರಾದರು. ಮುಖ್ಯವಾಗಿ ನವೋದಯ ಸಾಹಿತಿಗಳಾಗಿದ್ದ ಜಿ.ಎಸ್.ಶಿವರುದ್ರಪ್ಪ, ಚೆನ್ನವೀರ ಕಣವಿ, ಕೆ.ಎಸ್. ನರಸಿಂಹ ಸ್ವಾಮಿಗಳೂ ನವ್ಯರ ಪ್ರಭಾವಕ್ಕೆ ಒಳಗಾಗಿ ಬದಲಾದರು. ಸದಾಶಿವ, ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಚಿತ್ತಾಲ ಮುಂತಾದವರು ತಮ್ಮ ಕಥೆ-ಕಾದಂಬರಿ ಗಳ ಮೂಲಕ ನವ್ಯಚಳವಳಿಯಲ್ಲಿ ಭಾಗವಹಿಸಿದರು. ನಾಟಕ ಕ್ಷೇತ್ರದಲ್ಲಿ ಗಿರೀಶ್ ಕಾರ್ನಾಡ್, ಕಂಬಾರ ಮತ್ತು ಚಂದ್ರಶೇಖರ ಪಾಟೀಲರು ಮುಖ್ಯರಾಗುತ್ತಾರೆ.
ನವ್ಯ ಸಾಹಿತಿಗಳು ನವೋದಯದ ರಾಷ್ಟ್ರೀಯವಾದಿ ಚಿಂತನೆಗಳ ಮಿತಿಯನ್ನು ಅರಿತಂತೆ ಕಾಣುತ್ತಾರೆ. ಅವರೇ ಹೇಳುವಂತೆ ಸ್ವಾತಂತ್ರ್ಯ ಬಂದ ನಂತರ, ಸ್ವಾತಂತ್ರ್ಯ ಪೂರ್ವದಲ್ಲಿದ್ದ ಕನಸುಗಾರಿಕೆ, ಆದರ್ಶ ಮಾಯವಾಗಿ ವಾಸ್ತವದ ಸಮಸ್ಯೆಗಳು ಎದುರಾಗತೊಡಗಿದವು. ಜೀವನವನ್ನು ರಮ್ಯವಾಗಿ ಪರಿಭಾವಿಸುವ ರೀತಿ ಬಿಟ್ಟು ವ್ಯಂಗ್ಯವಾಗಿ ವಿಡಂಬನಾತ್ಮಕವಾಗಿ ಚಿತ್ರಿಸುವ ದಾರಿಯನ್ನು ನವ್ಯ ಸಾಹಿತಿಗಳು ಹಿಡಿದರು. ನವೋದಯ ಸಾಹಿತಿಗಳಿಗೂ, ನವ್ಯ ಸಾಹಿತಿಗಳಿಗೂ ಇರುವ ಸಾಮ್ಯವೆಂದರೆ ಇಬ್ಬರೂ ವ್ಯಕ್ತಿಕೇಂದ್ರಿತ, ಆತ್ಮಕೇಂದ್ರಿತ ನೆಲೆಯಿಂದ ಸಮಾಜವನ್ನು ನೋಡಿದ್ದು. ನವ್ಯ ಚಳವಳಿ ಕಾವ್ಯಕ್ಷೇತ್ರದಲ್ಲಿ ಗದ್ಯದ ಲಯವನ್ನು ತರುವ ಪ್ರಯತ್ನ ಮಾಡುತ್ತಲೇ, ಕಥಾಕ್ಷೇತ್ರದಲ್ಲಿ ಗದ್ಯವನ್ನು ಪದ್ಯವಾಗಿಸುವ ಹೋರಾಟ ಮಾಡಿತು. ಸಾಹಿತ್ಯ ವಾಚ್ಯವಾಗಕೂಡದು ಸೂಚ್ಯವಾಗಿರಬೇಕು. ಹೇಳುವುದನ್ನು ಹೇಳಿಕೆಯ ರೂಪದಲ್ಲಿ ಹೇಳದೆ ಪ್ರತಿಮೆ, ಸಂಕೇತಗಳ ಮೂಲಕ ಹೇಳಬೇಕೆಂದು ಹೊರಟರು. ವಾಸ್ತವ ಸಂಕೀರ್ಣವಾಗಿರುವಂತೆ, ವಾಸ್ತವದ ಗ್ರಹಿಕೆಯಾದ ಸಾಹಿತ್ಯವೂ ಆ ಅನುಭವವನ್ನು ಸಮಗ್ರವಾಗಿ ಹಿಡಿದಿಡಲು ಸಂಕೀರ್ಣವಾಗಲೇಬೇಕಾಗುತ್ತದೆ ಎಂಬ ನಿಲುವನ್ನು ನವ್ಯ ಸಾಹಿತ್ಯ ತಳೆಯಿತು.
ಈ ಸಾಹಿತ್ಯ ತನ್ನ ನಿಲುವಿನ ಪರಿಣಾಮವಾದ ಸಂಕೀರ್ಣತೆಯಿಂದಾಗಿ ಅದನ್ನು ಅರ್ಥೈಸುವ ವಿಮರ್ಶನ ಪಡೆಯನ್ನು ಕಾವ್ಯ ಪ್ರಕಾರದಲ್ಲಿ ಗದ್ಯ, ಕಾದಂಬರಿಗಳಿಗೆ ಇದು ಅನ್ವಯವಾಗುವುದಿಲ್ಲ. ನವ್ಯ ಸಾಹಿತ್ಯವನ್ನು ಅರ್ಥೈಸುವ ಸಲುವಾಗಿ ಒಂದು ದೊಡ್ಡ ವಿಮರ್ಶಕರ ದಂಡೇ ಕನ್ನಡದಲ್ಲಿ ಸಿದ್ದವಾಯಿತು. ಪಠ್ಯವಿಮರ್ಶೆ ಬಿರುಸಾಗಿ ಸಾಗಿತು. ಜಿ.ಎಸ್.ಆಮೂರ, ಜಿ.ಎಚ್.ನಾಯಕ, ಯು.ಆರ್.ಅನಂತಮೂರ್ತಿ, ಗಿರಡ್ಡಿ ಗೋವಿಂದ ರಾಜ, ಕಿ.ರಂ.ನಾಗರಾಜ, ಎಚ್.ಎಸ್. ರಾಘವೇಂದ್ರರಾವ್, ಎಚ್.ಎಮ್.ಚನ್ನಯ್ಯ ಮುಂತಾದ ವಿಮರ್ಶಕರ ದೊಡ್ಡ ಪಡೆ ನಿರ್ಮಾಣವಾಯಿತು. ಇಂಗ್ಲಿಷಿನ ಟಿ.ಎಸ್. ಎಲಿಯಟ್, ಎಫ್.ಆರ್.ೊಲೀವಿಸ್, ಐ.ಎ.ರಿಚರ್ಡ್ಸ್, ಕ್ಲಿಯಾಂತ್ ಬ್ರೂಕ್ಸ್ ಮುಂತಾದವರ ವಿಚಾರಧಾರೆ ಕನ್ನಡ ಸಾಹಿತಿಗಳ ಸಾಹಿತ್ಯ ತತ್ವದ ತಳಪಾಯವಾಯಿತು. ಇವರ ವಿಮರ್ಶಾ ತತ್ವಗಳು ಎಷ್ಟು ಪ್ರಭಾವ ಬೀರಿದೆಯೆಂದರೆ, ನವ್ಯ ಸಾಹಿತಿಗಳನ್ನು ವಿರೋಧಿಸುವ ಬಂಡಾಯ ದಲಿತ ಸಾಹಿತಿಗಳೂ ಮತ್ತು ಆಳದಲ್ಲೆಲ್ಲೋ ಇದೇ ತತ್ವಗಳನ್ನು ಅಳವಡಿಸಿ ಕೊಂಡಿದ್ದಾರೆನಿಸುತ್ತದೆ. ಅವರು ಅದನ್ನು ಅಳವಡಿಸಿಕೊಂಡಿರುವ ರೀತಿಯನ್ನು ಕುರಿತ ಅಧ್ಯಯನ ಇನ್ನೂ ಆಗಬೇಕಾಗಿದೆ.
ಇದಲ್ಲದೆ ನವ್ಯ ಸಾಹಿತಿಗಳು ಇಂಗ್ಲಿಷಿನ ಟಿ.ಎಸ್.ಎಲಿಯಟ್, ಡಬ್ಲ್ಯು.ಬಿ.ಯೇಟ್ಸ್, ಡಿ.ಎಚ್.ಲಾರೆನ್ಸ್ ಮತ್ತು ಇತರ ಯುರೋಪಿಯನ್ ಸಾಹಿತಿಗಳಾದ ಕಾಫ್ಕ, ಕಾಮು, ಸಾರ್ತ್ರೆ ಮುಂತಾದವರ ಸಾಹಿತಿಗಳ ಪ್ರಭಾವಕ್ಕೂ ಒಳಗಾದರು. ಅಸ್ತಿತ್ವವಾದವು ಇಲ್ಲಿನ ಮಣ್ಣಿಗೆ ಬಂದು, ಇಲ್ಲಿನ ‘ಮಣ್ಣಿನ ವಾಸನೆ’ ಪಡೆಯಿತು. ಮುಖ್ಯವಾಗಿ ನಾಟಕ ರಂಗದಲ್ಲಿ ಅಸಂಗತ ನಾಟಕಗಳು ಅಸಂಖ್ಯವಾಗಿ ರಚಿತಗೊಂಡವು. ಕಂಬಾರ, ನ.ರತ್ನ, ಚಂದ್ರಕಾಂತ ಕುಸನೂರು ಮುಂತಾದವರು ಈ ಅಸಂಗತ ನಾಟಕಗಳ ಚಳವಳಿಯಲ್ಲಿ ಭಾಗವಹಿಸಿದ್ದಾರೆ. ಇದಲ್ಲದೆ ಕಂಬಾರ ಮತ್ತು ಕಾರ್ನಾಡರು ಅಸ್ತಿತ್ವವಾದಿ ಚಿಂತನೆಗಳುಳ್ಳ ನಾಟಕಗಳನ್ನು ರಚಿಸಿದ್ದಾರೆ. ಈ ನಾಟಕಗಳು ರಂಗದ ಮೇಲೂ, ಬೇರೆ ಭಾಷೆಗಳಲ್ಲೂ ಯಶಸ್ವಿಯಾಗಿವೆ. ಆದರೆ 1970ರ ದಶಕದ ನಂತರ ಕಂಬಾರ ಮತ್ತು ಕಾರ್ನಾಡರು ನಿಧಾನವಾಗಿ ಯಕ್ಷಗಾನ ಮತ್ತು ಜಾನಪದಗಳಿಗೆ ಹೊರಳುವ ಯತ್ನ ಮಾಡುತ್ತಾರೆ. ಜರ್ಮನ್ ನಾಟಕಕಾರ ಬ್ರೆಕ್ಟ್ ಕನ್ನಡ ನಾಟಕರಂಗದಲ್ಲಿ ಹೆಚ್ಚು ಪ್ರಚಲಿತವಾಗುವುದರೊಂದಿಗೆ ಪ್ರಭಾವವನ್ನೂ ಬೀರುತ್ತಾನೆ.
ಕಥಾಕ್ಷೇತ್ರದಲ್ಲೂ 1970ರ ದಶಕದಲ್ಲಿ ತೇಜಸ್ವಿ ಮತ್ತು ಲಂಕೇಶ್ ನವ್ಯದ ಹಾದಿ ಯಿಂದ ಪಕ್ಕಕ್ಕೆ ಸರಿದು ಹೊಸ ರೀತಿಯ ನವ್ಯ ಸಾಹಿತ್ಯವನ್ನು ರಚಿಸಿದಂತೆ ಕಾಣುತ್ತದೆ. ತೇಜಸ್ವಿಯವರು ‘ಅಬಚೂರಿನ ಪೋಸ್ಟಾಫೀಸು’ವಿನಲ್ಲಿ ವಿಭಿನ್ನ ದಾರಿ ಹಿಡಿದು ನಡೆದರೆ, ಲಂಕೇಶರ ‘ಮುಸ್ಸಂಜೆಯ ಕಥಾಪ್ರಸಂಗ’ ಸಹ ಆ ದಾರಿಯಲ್ಲಿ ನಡೆಯುತ್ತದೆ. ಅನಂತಮೂರ್ತಿಯವರೂ ಸಹ ತಮ್ಮ ‘ಸೂರ್ಯನ ಕುದುರೆ’ ಮೂಲಕ ವಿಭಿನ್ನ ದಾರಿ ಹಿಡಿದಂತೆ ಕಾಣುತ್ತಾರೆ. ನಂತರದ ಅವರ ಭವ್ಯ, ದಿವ್ಯ ಕಾದಂಬರಿಗಳು ತುಳಿದ ಹಾದಿ ಸಂಪೂರ್ಣ ಭಿನ್ನವಾದದ್ದು. ಕಾವ್ಯಕ್ಷೇತ್ರದಲ್ಲಿ ನವ್ಯ ಸಾಹಿತಿಗಳಾಗಿದ್ದ ಸುಮತೀಂದ್ರ ನಾಡಿಗ್, ಲಕ್ಷ್ಮಿನಾರಾಯಣ ಭಟ್ಟ, ಎಚ್.ಎಸ್.ೊವೆಂಕಟೇಶಮೂರ್ತಿ, ಬಿ.ಆರ್.ೊ ಲಕ್ಷ್ಮಣರಾವ್ ನವ್ಯದ ಸಂಕೀರ್ಣತೆ ಯನ್ನು ಬಿಟ್ಟು, ಹಾಡಲು ಅನುಕೂಲವಾಗುವ ಕವಿತೆಗಳನ್ನು ರಚಿಸುತ್ತಾ ಕ್ಯಾಸೆಟ್ಗಳ ಮೂಲಕ ಓದುಗರನ್ನು ತಲುಪುತ್ತಿದ್ದಾರೆ. ಚಂದ್ರಶೇಖರ ಕಂಬಾರರ ಕಾವ್ಯ, ನವ್ಯದಲ್ಲಿದ್ದರೂ ಮೊದಲಿನಿಂದಲೂ ಜಾನಪದದ ಸೊಗಡನ್ನು ಉಳಿಸಿಕೊಂಡು ವಿಭಿನ್ನ ದಾರಿ ಹಿಡಿಯುವ ಹವಣಿಕೆಯಲ್ಲೇ ಇತ್ತು. ಹೀಗೆ ನವ್ಯ ಸಾಹಿತ್ಯ 1970ರ ದಶಕದಲ್ಲಿ ಪ್ರಾರಂಭವಾದ ಬಂಡಾಯ, ದಲಿತ ಸಾಹಿತ್ಯಗಳೊಂದಿಗೆ ಅನುಸಂಧಾನ ಮಾಡುತ್ತ ನಿಧಾನಕ್ಕೆ ಬೇರೆ ದಿಕ್ಕಿಗೆ ಹೊರಳತೊಡಗಿತು. ಇಂದಿಗೂ ಆ ಸಾಹಿತಿಗಳು ಸಾಹಿತ್ಯ ರಚನೆ ಮಾಡುತ್ತಿದ್ದರೂ ಅದರ ಸ್ವರೂಪವನ್ನು ಗುರುತಿಸುವ ಕೆಲಸ ಆಗಬೇಕಿದೆ. ಇದನ್ನು ಸ್ಥೂಲವಾಗಿ ‘ನವ್ರೋ’ ಸಾಹಿತ್ಯ ಎಂದು ಪರಿಗಣಿಸಬಹುದು. ಇದರ ರೂಪುರೇಷೆಗಳ ನಿರ್ಧಾರ ಇನ್ನೂ ಆಗಬೇಕಿದೆ.
ನವ್ಯ ಸಾಹಿತ್ಯ ಚಳವಳಿ ವ್ಯಕ್ತಿಕೇಂದ್ರಿತವಾದುದು ಎಂಬ ಆರೋಪವಿದ್ದರೂ, ಅವರು ಸಾಮಾಜಿಕ ಸಮಸ್ಯೆಗಳನ್ನು ಗಮನಿಸದೇ ಇರಲಿಲ್ಲ. ಇದಕ್ಕೆ ಕಾರಣ ಅಂದಿನ ಸಾಮಾಜಿಕ ರಾಜಕೀಯ ಪರಿಸ್ಥಿತಿ. ನೆಹರೂ ಬ್ರಾಂಡಿನ ಸಮಾಜ ವಾದದಿಂದ ಭ್ರಮನಿರಸನಗೊಂಡಿದ್ದ ಲೋಹಿಯಾ ಅವರು ಮಾರ್ಕ್ಸ್ ಮತ್ತು ಗಾಂಧಿ ಮಿಶ್ರಿತ ಸಮಾಜವಾದವನ್ನು ಮುಂದೆ ಮಾಡಿದ್ದರು. ಈ ಸಮಾಜವಾದ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿನ ಶಾಂತವೇರಿ ಗೋಪಾಲಗೌಡರಿಂದ ಕರ್ನಾಟಕದ ರಾಜಕೀಯದಲ್ಲಿ ತನ್ನ ಪ್ರಭಾವ ವಲಯವನ್ನು ರೂಪಿಸಿಕೊಂಡಿತು. ಶಿವಮೊಗ್ಗೆಯ ನವ್ಯ ಸಾಹಿತಿಗಳು ಹಾಗು ಇತರರು ಲೋಹಿಯಾವಾದಿಗಳಾದರು. ಇದರಿಂದಾಗಿ ಅವರ ಸಾಹಿತ್ಯ ಸಾಮಾಜಿಕ ರೂಪವನ್ನೂ ತಳೆದಿದೆ. ಅರಿವು-ಬರಹ ಗುಂಪು ಮಾರ್ಕ್ಸ್ವಾದಿ ಧೋರಣೆಗಳನ್ನು ಆಧಾರವಾಗಿಟ್ಟುಕೊಂಡು, ಅದರಲ್ಲಿನ ಹೊಸ ಬೆಳವಣಿಗೆಗಳನ್ನು(ನಿಯೋ ಮಾರ್ಕ್ಸಿಸ್ಟ್ ಮತ್ತು ಪೋಸ್ಟ್ ಸ್ಟ್ರಕರಲಿಸ್ಟ್ ಮಾರ್ಕ್ಸಿಸ್ಟ್), ವಿಚಾರಧಾರೆಗಳನ್ನು ಅಳವಡಿಸಿಕೊಂಡು ಕನ್ನಡ ಸಾಹಿತ್ಯ ಸಂಸ್ಕೃತಿಯ ಆಗುಹೋಗುಗಳನ್ನು ವಿಮರ್ಶಿಸಿತು. ಈ ಗುಂಪು ದಲಿತ ಬಂಡಾಯ ಚಳವಳಿಗಳು ಆರಂಭವಾದ ನಂತರ ಬಂದು, ಇದೀಗ ದೇಶೀವಾದ ಪ್ರಬಲವಾಗುತ್ತಿರುವ ಸಂದರ್ಭದಲ್ಲಿ ‘ಆಧುನಿಕತೆ’ ಭಾರತದಲ್ಲಿ ಇನ್ನು ಅಪರಿಪೂರ್ಣವಾದ ಯೋಜನೆಯಾಗಿರುವುದರಿಂದ ಅದನ್ನು ತಿರಸ್ಕರಿಸಲು ಬರುವುದಿಲ್ಲ ಎಂಬ ಧೋರಣೆಯಡಿ ಕೆಲಸ ಮಾಡುತ್ತಿದೆ ಮತ್ತು ಇದರ ವಿಚಾರದ ಹರಿವು ಬಹಳ ಪ್ರಸಾರಕ್ಕೆ ಬಂದಿಲ್ಲ.
ಬಂಡಾಯ ಸಾಹಿತ್ಯ ಚಳವಳಿ
ನವೋದಯ, ಪ್ರಗತಿಶೀಲ, ನವ್ಯ ಸಾಹಿತಿಗಳಲ್ಲಿ ಬಹುಪಾಲು ಜನರು ಮೇಲ್ಜಾತಿಗಳಿಗೆ ಸೇರಿದ ಜನರಾಗಿದ್ದರು. ಅದರಲ್ಲೂ ಅವರು ಮುಖ್ಯವಾಗಿ ಬ್ರಾಹ್ಮಣರು ಮತ್ತು ಲಿಂಗಾಯಿತರಾಗಿದ್ದರು. ಕುವೆಂಪು ಅವರಂಥವರು ಅಲ್ಲಿ ಇಲ್ಲಿ ಈ ಮಾತಿಗೆ ಅಪವಾದ ವಾಗಿದ್ದರು. ಇದಕ್ಕೆ ಬಹುಮುಖ್ಯ ಕಾರಣ ಅಕ್ಷರ ಸಂಸ್ಕೃತಿ ನಮ್ಮ ಸಮಾಜದಲ್ಲಿನ ಕೆಳಸ್ತರಗಳಿಗೆ ತಲುಪದೇ ಇದ್ದದ್ದು. ಸ್ವಾತಂತ್ರ್ಯದ ನಂತರ ಈ ಕೆಳಸ್ತರಗಳಲ್ಲಿನ ಜನರೂ ಅಕ್ಷರ ಸಂಸ್ಕೃತಿಯೆಡೆಗೆ ಬರತೊಡಗಿದರು. ಹೀಗೆ ಬಂದ ಮೊದಲ ತಲೆಮಾರಿನ ಹಿಂದುಳಿದ ವರ್ಗಗಳು ಮತ್ತು ದಲಿತರು 1970ರ ದಶಕದಲ್ಲಿ ಸಕ್ರಿಯವಾಗಿ ಸಾಹಿತ್ಯ ರಚನೆಗೆ ತೊಡಗಿದರು. ಸಾಮಾಜಿಕ ಬದ್ಧತೆ ಮತ್ತು ಸಾಮಾಜಿಕ ಬದಲಾವಣೆಯಾಗಿ ಸಾಹಿತ್ಯ ಎಂಬ ದೃಷ್ಟಿಕೋನ ಇವರದಾಗಿತ್ತು. 1960ರ ದಶಕದ ಕೊನೆಯ ಭಾಗದಲ್ಲಿ ಹಾವನೂರ ವರದಿ (ಹಿಂದುಳಿದ ವರ್ಗಗಳಿಗೆ ಮೀಸಲಾತಿ) ಜಾರಿಗಾಗಿ ನಡೆದ ಹೋರಾಟ, 1973ರಲ್ಲಿ ಬಸವಲಿಂಗಪ್ಪ ಇಡೀ ಕನ್ನಡ ಸಾಹಿತ್ಯವನ್ನು ಬೂಸಾ ಸಾಹಿತ್ಯ ಎಂದದ್ದು, ಕುವೆಂಪು ಅದನ್ನು ಸಮರ್ಥಿಸಿದ್ದು, ದೇವರಾಜ ಅರಸು ಸರಕಾರ ಭೂ ಸುಧಾರಣಾ ಮಸೂದೆಯನ್ನು ಜಾರಿಗೊಳಿಸಿ ಅಸಂಖ್ಯಾತ ಭೂಹೀನರಿಗೆ ಜಮೀನು ದೊರೆತದ್ದು, ಇವೆಲ್ಲಾ ಮೊದಲ ತಲೆಮಾರಿಗೆ ಅಕ್ಷರ ಪಡೆದ ಯುವಕರನ್ನು ಪ್ರಗತಿಪರವಾಗಿ ಚಿಂತಿಸಲು, ಆ ಚಿಂತನೆಯ ಫಲವಾಗಿ ಸಾಹಿತ್ಯ ರಚಿಸಲು ಪ್ರೇರೇಪಿಸಿತು.
ನವ್ಯರು ವ್ಯಕ್ತಿಗಳ ಭಾವನೆಗಳ ತುಮುಲಕ್ಕೆ, ಅಂತರಂಗದ ವಿವರಗಳಿಗೆ ರೂಪು ಕೊಡುತ್ತಿದ್ದಾಗ, ಬಂಡಾಯ ಸಾಹಿತಿಗಳು ಸಮಾಜದ ವಿಕಾರಗಳನ್ನು ಸಾಹಿತ್ಯದಲ್ಲಿ ಒಡಮೂಡಿಸುವ, ಆ ಮೂಲಕ ಬದಲಾವಣೆಗೆ ನಾಂದಿಯಾಗುವ ಕಾರ್ಯ ಕೈಗೊಂಡರು. ಈ ದೃಷ್ಟಿಯಿಂದಾಗಿ 1974ರಲ್ಲಿ ‘ಬರಹಗಾರರ ಮತ್ತು ಕಲಾವಿದರ ಒಕ್ಕೂಟ’ ಮೈಸೂರಿನಲ್ಲಿ ಜನ್ಮ ತಾಳಿತು. ಇಲ್ಲಿಂದಾಚೆಗೆ ಸಾಹಿತ್ಯವನ್ನು ಬ್ರಾಹ್ಮಣ ಪ್ರಜ್ಞೆ, ಶೂದ್ರ ಪ್ರಜ್ಞೆಯ ದೃಷ್ಟಿ ಪರಿಪಕಲ್ಪನೆಗಳನ್ನಿಟ್ಟುಕೊಂಡು ವಿವೇಚಿಸುವ ವಿಮರ್ಶೆ ಪ್ರಾರಂಭವಾಯಿತು. ಮೊದಲಿಗೆ ಕೆಲ ನವ್ಯ ಸಾಹಿತಿಗಳೂ, ದಲಿತ ಸಾಹಿತಿಗಳೂ ಈ ಬರಹಗಾರರ ಮತ್ತು ಕಲಾವಿದರ ಒಕ್ಕೂಟದಲ್ಲಿ ಇದ್ದರು. ನಂತರ ತುರ್ತುಪರಿಸ್ಥಿತಿಯ ಕಾಲದಲ್ಲಿ ಕೆಲವರು ಅದನ್ನು ವಿರೋಧಿಸದೆ ಆರಾಮವಾಗಿದ್ದರು. ಮತ್ತೆ ಕೆಲವರು ‘ತುರ್ತುಪರಿಸ್ಥಿತಿ’ಯನ್ನು ವಿರೋಧಿಸಿ ಸೆರೆಮನೆಯ ವಾಸಕ್ಕೂ ಈಡಾದರು. ಈ ಕಾಲದಲ್ಲಿ ಸಾಹಿತಿಗಳ ಧ್ರುವೀಕರಣವೂ ಆರಂಭವಾಯಿತು. ಈ ಧ್ರುವೀಕರಣ ಕೊನೆಗೆ 1979ರಲ್ಲಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಸ್ಫೋಟವಾಯಿತು. ದಲಿತ ಸಾಹಿತ್ಯದ ಚರ್ಚೆಗೆ ಅವಕಾಶ ನೀಡದ್ದರಿಂದ ಧರ್ಮಸ್ಥಳ ಸಾಹಿತ್ಯ ಸಮ್ಮೇಳನವನ್ನು ವಿರೋಧಿಸಿ ಪ್ರಗತಿಪರ ಸಾಹಿತಿಗಳು ಬೆಂಗಳೂರಿನಲ್ಲಿ ಮಾರ್ಚ್ 10-11ರಂದು ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನವನ್ನು ನಡೆಸಿದರು. ‘‘ಖಡ್ಗವಾಗಲಿ ಕಾವ್ಯ: ಜನರ ನೋವಿಗೆ ಮಿಡಿವ ಪ್ರಾಣಮಿತ್ರ’’ ಎಂಬ ಘೋಷಣೆಯೊಂದಿಗೆ ಚಳವಳಿ ಆರಂಭವಾಯಿತು. 1983ರಲ್ಲಿ ದಲಿತರು ಬಂಡಾಯ ಚಳವಳಿಯಿಂದ ದೂರವಾಗಿ ತಮ್ಮದೇ ಆದ ಅಸ್ತಿತ್ವವನ್ನು ಸ್ಥಾಪಿಸಿಕೊಂಡರು.
ಬಂಡಾಯ ಸಾಹಿತ್ಯದ ಮೇಲೆ ಮಾರ್ಕ್ಸ್ವಾದ, ಲೋಹಿಯಾವಾದ, ಗಾಂಧಿ, ಅಂಬೇಡ್ಕರರ ಪ್ರಭಾವವಿದೆ. ಬಂಡಾಯದ ತಾತ್ವಿಕ ನೆಲಗಟ್ಟನ್ನು ಸರಿಯಾಗಿ ಗುರುತಿಸಲು ಇನ್ನೂ ಆಗಿಲ್ಲ. ಬರಗೂರು ರಾಮಚಂದ್ರಪ್ಪ ಮಾರ್ಕ್ಸ್ವಾದಿ ದೃಷ್ಟಿಕೋನವನ್ನು ಪ್ರಮುಖವಾಗಿಸಿಕೊಂಡರೆ, ಕಾಳೇಗೌಡ ನಾಗವಾರ ಲೋಹಿಯಾ ವಾದವನ್ನು ಪ್ರಮುಖ ನೆಲಗಟ್ಟಾಗಿಸಿಕೊಳ್ಳುತ್ತಾರೆ. ಸಾಹಿತ್ಯ ಸಾಮಾಜಿಕ ಬದಲಾವಣೆಗೆ ದಾರಿ ಮಾಡಿಕೊಡಬೇಕು ಎನ್ನುತ್ತಲೇ ಅವರ ಪ್ರಥಮ ಸಮ್ಮೇಳನದ ಕರಪತ್ರದಲ್ಲಿ ‘‘ಕಲೆಯಲ್ಲಿ ರಾಜಕಾರಣವು ತತ್ಕ್ಷಣತೆಯನ್ನು ಮೀರಿ ಇಡೀ ಜೀವನೊದರ್ಶನವನ್ನು ಆವರಿಸಿಕೊಂಡಾಗ ಮಾತ್ರ ಶ್ರೇಷ್ಠ ಕೃತಿ ಹುಟ್ಟುತ್ತದೆ’’ ಎಂಬ ನವ್ಯರ ರೀತಿಯ ಸಾಹಿತ್ಯದ ಸಿದ್ಧಾಂತಕ್ಕೆ ಕಟ್ಟುಬಿದ್ದದ್ದು ಕಾಣುತ್ತದೆ. ಇತ್ತೀಚಿನ ಬಂಡಾಯ ವಿಮರ್ಶಕರಾಗಿದ್ದ ರಹಮತ್ ತರೀಕೆರೆಯವರು ‘ಪ್ರತಿ ಸಂಸ್ಕೃತಿ’ ಎಂಬ ಪರಿಕಲ್ಪನೆಗಳನ್ನು ಮುಖ್ಯ ಮಾನದಂಡವಾಗಿ ಬಳಸುತ್ತಿದ್ದರು. ಒಟ್ಟಾರೆ ಬರಗೂರು ರಾಮಚಂದ್ರಪ್ಪ, ಆರ್ಕೆ ಮಣಿಪಾಲ ಮುಂತಾದವರ ಮಾರ್ಕ್ಸ್ವಾದಿ ವಿಮರ್ಶೆಯಿಂದ ಪ್ರಾರಂಭವಾದ ಬಂಡಾಯ ವಿಮರ್ಶೆ ‘‘ಪ್ರತಿ ಸಂಸ್ಕೃತಿ’’, ‘‘ಶಿಷ್ಟ-ಪರಿಶಿಷ್ಟ’’ದವರೆಗೆ ತಲುಪಿತು. ಈ ಬೆಳವಣಿಗೆಯ ದಿಕ್ಕು-ದೆಸೆ, ಕಾರಣ-ಪರಿಣಾಮಗಳ ಸ್ಪಷ್ಟ ಅಧ್ಯಯನ ಇನ್ನೂ ಆಗಬೇಕಿದೆ.
ಬಂಡಾಯ ಸಾಹಿತ್ಯ ಕಾವ್ಯ, ಕಥೆ, ಕಾದಂಬರಿಗಳ ಪ್ರಕಾರದಲ್ಲಿ ಹುಲುಸಾಗಿ ಬೆಳೆದಿದೆ. ಕಥೆಯ ಚೌಕಟ್ಟು ಒಂದೇ, ಕೆಲವೇ ಕೆಲವು ಸಿದ್ಧ ರೂಪಗಳನ್ನು ಹಿಡಿದುಕೊಂಡು ಸಾಹಿತ್ಯ ರಚಿಸುತ್ತಿದ್ದಾರೆ ಎಂಬೆಲ್ಲಾ ಆರೋಪಗಳಿದ್ದರೂ ‘ಬಂಡಾಯ ಸಾಹಿತ್ಯ’ ಸಾಮಾಜಿಕವಾಗಿ 80ರ ದಶಕದಲ್ಲಿ ಕರ್ನಾಟಕದಲ್ಲಿ ಹಲವಾರು ಮನಸ್ಸುಗಳನ್ನು ಪ್ರಗತಿಪರವಾಗಿ ಆಲೋಚಿಸುವ, ದುಡಿಯುವ ಕಾರ್ಯಕ್ಕೆ ಪ್ರೇರೇಪಿಸಿದೆ. ನವ್ಯ ಸಾಹಿತಿಯಾಗಿದ್ದ ಚಂದ್ರಶೇಖರ ಪಾಟೀಲರು ಕವಿಯಾಗಿ, ತಮ್ಮ ‘ಸಂಕ್ರಮಣ’ ಪತ್ರಿಕೆಯ ಮೂಲಕ ಬಂಡಾಯ ಚಳವಳಿಗೆ ಪ್ರೇರಣೆಯಾಗಿ ನಿಂತಿದ್ದಾರೆ. ಬಂಡಾಯದವರಲ್ಲಿ ಬರಗೂರು ರಾಮಚಂದ್ರಪ್ಪ, ಕಾಳೇಗೌಡ ನಾಗವಾರ, ಸರಜೂ ಕಾಟ್ಕರ್, ಬಸವರಾಜ ಸಬರದ, ಆರ್ಕೆ ಮಣಿಪಾಲ, ಸ.ರಘನಾಥ, ಒಡೆಯರ್ ಡಿ.ಹೆಗ್ಗಡೆ, ವಿಷ್ಣುನಾಯಕ ಮುಂತಾದ ಕವಿಗಳಿ ದ್ದಾರೆ.
ಬಂಡಾಯ ಸಾಹಿತ್ಯದಲ್ಲಿ ಮುಖ್ಯವಾಗಿ ಹಲವಾರು ಕಥೆ-ಕಾದಂಬರಿಕಾರರಿದ್ದಾರೆ ಮತ್ತು ಅವರೆಲ್ಲಾ ನಮ್ಮ ಈಗಿನ ಮಹತ್ವದ ಕಥೆಗಾರರೂ ಹೌದು. ಇವರಲ್ಲಿ ಕಾಳೇಗೌಡ ನಾಗವಾರ, ಬರಗೂರು ರಾಮಚಂದ್ರಪ್ಪ, ಬೆಸಗರಹಳ್ಳಿ ರಾಮಣ್ಣ, ಕುಂ.ವೀರಭದ್ರಪ್ಪ, ಚೆನ್ನಣ್ಣ ವಾಲೀಕಾರ, ರಾಜಶೇಖರ ನೀರಮಾನ್ವಿ, ಜಾಣಗೆರೆ ವೆಂಕಟರಾಮಯ್ಯ, ಕಾ.ತ.ಚಿಕ್ಕಣ್ಣ, ಕರೀಗೌಡ ಬೀಚನಹಳ್ಳಿ, ಹೊರೆಯಾಲ ದೊರೆಸ್ವಾಮಿ ಮುಂತಾದವರು ಪ್ರಮುಖರು. ನಾಟಕ ಪ್ರೇಕ್ಷಕರನ್ನು (ಓದುಗರನ್ನು) ನೇರವಾಗಿ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸುವ ಪ್ರಕಾರ. ಈ ಪ್ರಕಾರದಲ್ಲಿ ಬಂಡಾಯ ಸಾಹಿತಿಗಳು ಮಾಡಿರುವ ಕೃಷಿ ಅತ್ಯಲ್ಪವಾದುದು. ಚಂದ್ರಶೇಖರ ಪಾಟೀಲರನ್ನು ಬಿಟ್ಟರೆ ಮತ್ತಾರೂ ಕಣ್ಣಿಗೆ ಬೀಳುವುದಿಲ್ಲ. ಬಂಡಾಯ ಚಳವಳಿಯಲ್ಲಿ ನೇರವಾಗಿ ಭಾಗಿಯಲ್ಲದಿದ್ದರೂ ಟಿ.ಎನ್. ಸೀತಾರಾಮ್ ಅವರ ನಾಟಕಗಳು ಬಂಡಾಯ ಮನೋಧರ್ಮಕ್ಕೆ ಹತ್ತಿರವಾದವುಗಳು. ಆದರೆ ಟಿ.ಎನ್. ಸೀತಾರಾಮ್ ಅವರ ನಾಟಕಗಳಲ್ಲಿ ನಾಯಕ ಕೇವಲ ವ್ಯಕ್ತಿಯಾಗಿ ಅಸಹಾಯಕನಾಗಿ, ಸಿನಿಕನಾಗಿ ನಿರಾಶೆ ಹೊಂದುತ್ತಾನೆ. ನಾಯಕ ಸಮುದಾಯದ ಪ್ರತೀಕವಾಗಿ ಮೂಡುವುದೇ ಇಲ್ಲ. ಆದರೆ ಬಂಡಾಯ ಸಾಹಿತ್ಯ ಚಳವಳಿಯ ಕಾಲದಲ್ಲಿ ಬೀದಿನಾಟಕಗಳು ಬಹಳವಾಗಿ ಪ್ರಚಾರಕ್ಕೆ ಬಂದವು. ಇದರಲ್ಲಿ ಸಿ.ಜಿ.ಕೃಷ್ಣಸ್ವಾಮಿಯಂಥವರ ಸಮುದಾಯದ ತಂಡಗಳ ಮತ್ತು ವಿಜಯಾ ಅವರ ಶ್ರಮವನ್ನು ಗುರುತಿಸಬೇಕಾಗುತ್ತದೆ. ಎಚ್.ಎಸ್.ಶಿವಪ್ರಕಾಶರಂಥ ನಾಟಕಕಾರರು ಬಂಡಾಯ ಮನೋಧರ್ಮದವರೇ ಆದರೂ ಎಡಪಂಥೀಯ ವಿಚಾರಗಳನ್ನು ಸಂಶಯದಿಂದ ನೋಡುತ್ತಾ ಭಕ್ತಿಧಾರೆಗಳನ್ನು ಅಪ್ಪಿಕೊಂಡು ನಾಟಕ ರಚಿಸಿದ್ದಾರೆ. ಬಂಡಾಯ ಸಾಹಿತ್ಯ ಚಳವಳಿ ಮತ್ತು ದಲಿತ ಚಳವಳಿಗಳು ಕನ್ನಡ ನಾಟಕರಂಗಕ್ಕೆ ಮತ್ತೊಂದು ಆಯಾಮವನ್ನು ಮೂಡಿಸಿದೆ. ನಾಟಕಗಳ ಅಭಾವವಿದ್ದರೂ, ನಾಟಕೀಯ ಅಂಶಗಳಿರುವ ಕಥೆಗಳಿಗೆ ಕೊರತೆ ಇಲ್ಲದಿದ್ದರಿಂದ ಈ ಸಮಯದಲ್ಲಿ ಹಲವಾರು ಬಂಡಾಯ/ದಲಿತ ಕಥೆಗಳು, ನಾಟಕವಾಗಿ ಅನುವಾದಗೊಂಡು ಕನ್ನಡ ರಂಗಭೂಮಿಗೆ ಹೊಸ ಆಯಾಮವನ್ನೇ ಮೂಡಿಸಿದೆ. ಈ ಕೆಲಸ ಒಂದು ಚಳವಳಿಯ ಸ್ವರೂಪವನ್ನೇ ಪಡೆದುಕೊಂಡಂತೆ ಕಾಣುತ್ತಿದೆ ಮತ್ತು ಇನ್ನೂ ಸತತವಾಗಿ ಮುಂದುವರೆಯುತ್ತಿದೆ.
ಇತ್ತೀಚೆಗೆ ಬಂಡಾಯ ಸಾಹಿತಿಗಳಲ್ಲಿನ ಆಕ್ರೋಶ, ಸಿಟ್ಟು, ಪ್ರತಿಭಟನೆ ಮಾಯವಾಗಿ ‘ಪ್ರಾದೇಶಿಕತೆ’ ಎಂಬ ನೆಲೆಗಟ್ಟು ಕಥಾನಕಗಳನ್ನು ರೂಪಿಸತೊಡಗಿದೆ. ಪ್ರಾದೇಶಿಕ ಭಾಷೆ ಯಲ್ಲಿ ಅಲ್ಲಿನ ಜೀವನವನ್ನು ನೈಜವಾಗಿ ಎಳೆ ಎಳೆಯಾಗಿ ದಟ್ಟ ವಿವರಗಳೊಂದಿಗೆ ರೂಪಿಸುವಂಥ ಸಾಹಿತ್ಯ ಹೊರಬರುತ್ತಿದೆ. ಈ ಬದಲಾವಣೆ ಬಹಳ ಪ್ರಮುಖದ್ದು ಮತ್ತು ಇನ್ನೂ ಅಧ್ಯಯನಕ್ಕೆ ಒಳಗಾಗಬೇಕಾಗಿದೆ. ಈ ಚಳವಳಿ ಇನ್ನೂ ಜೀವಂತವಾಗಿರುವುದರಿಂದ, ಇದರ ಸ್ವರೂಪ-ವ್ಯಾಖ್ಯಾನಗಳ ವಿವರಣೆ ಸದ್ಯಕ್ಕೆ ಸುಲಭವಾಗಿ ಆಗುವುದಿಲ್ಲ.
ದಲಿತ ಸಾಹಿತ್ಯ ಚಳವಳಿ
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಲಿತ ಸಾಹಿತ್ಯ ಬಹಳ ವಿಶಿಷ್ಟವಾದದ್ದು. ವಚನ ಚಳವಳಿಯ ನಂತರ ಮೊತ್ತ ಮೊದಲ ಬಾರಿಗೆ ಸಾಹಿತ್ಯ ರಚನೆಯು, ಒಂದು ಸಾಮಾಜಿಕ ಚಳವಳಿಯ ಅಂಗವಾಗಿ ಮೂಡಿಬಂದಿತು. ಕರ್ನಾಟಕದ ಇತಿಹಾಸದಲ್ಲಿ ದಲಿತ ಚಳವಳಿ ಮತ್ತು ದಲಿತ ಸಾಹಿತ್ಯ ಚಳವಳಿ ಒಟ್ಟಿಗೇ ಮೂಡಿಬಂದಿದೆ. ದಲಿತ ಸಂಘರ್ಷ ಸಮಿತಿಯ ಉಗಮ ಮತ್ತು ಬೆಳವಣಿಗೆ ದಲಿತ ಸಾಹಿತ್ಯದ ಉಗಮ ಮತ್ತು ಬೆಳವಣಿಗೆಯೂ ಹೌದು. ಆದರೆ ಅವುಗಳು ಇಂದು ಬೇರೆ ಬೇರೆಯಾಗಿ ನಿಂತಿವೆ, ಹಲವಾರು ಚಾರಿತ್ರಿಕ ರಾಜಕೀಯ ಕಾರಣಗಳಿಂದಾಗಿ. ಬಂಡಾಯ ಸಾಹಿತ್ಯ ಚಳವಳಿಯ ಹಿನ್ನೆಲೆಯಾಗಿರುವ 1960 ಮತ್ತು 1970ರ ದಶಕದ ಸಾಮಾಜಿಕ, ರಾಜಕೀಯ ವಾತಾವರಣವೇ ದಲಿತ ಚಳವಳಿಗೂ ಇದೆ. ಅಕ್ಷರ ಕಲಿತ ಮೊದಲ ತಲೆಮಾರು, ಹಾವನೂರ ವರದಿಯ ಪರಿಣಾಮ, ಸಮಾಜವಾದದ ಪ್ರಭಾವ, ಬಸವಲಿಂಗಪ್ಪನವರ ‘ಬೂಸಾ’ ಪ್ರಕರಣ, ದಲಿತರು ‘ಮಲ’ ಹೊರುವುದರ ವಿರುದ್ಧ ನಡೆದ ಹೋರಾಟ, ಭೂ ಮಸೂದೆ -ಇವೆಲ್ಲವುಗಳಿಂದ ದಲಿತರಲ್ಲಿ ಉಂಟಾದ ಎಚ್ಚರದ ಫಲವಾಗಿ 1974ರಲ್ಲಿ ಭದ್ರಾವತಿಯಲ್ಲಿ ‘ದಲಿತ ಸಂಘರ್ಷ ಸಮಿತಿ’ ರೂಪುಗೊಂಡಿತು ಮತ್ತು ‘ದಲಿತ ವಿದ್ಯಾರ್ಥಿ ಒಕ್ಕೂಟ’, ‘ದಲಿತ ಮಹಿಳಾ ಒಕ್ಕೂಟ’, ‘ದಲಿತ ಕಲಾ ಮಂಡಳಿ’, ‘ದಲಿತ ನೌಕರರ ಒಕ್ಕೂಟ’, ‘ದಲಿತ ವೈದ್ಯರ ಒಕ್ಕೂಟ’ ಮುಂತಾದ ಹಲವಾರು ಅಂಗಸಂಸ್ಥೆಗಳನ್ನು ಹುಟ್ಟುಹಾಕಿತು. 1976ರಲ್ಲಿ ‘ದಲಿತ ಬರಹಗಾರರ ಯುವ ಸಂಘಟನೆಯು’ ರೂಪುಗೊಂಡಿತು. ದಲಿತ ಸಂಘರ್ಷ ಸಮಿತಿಯ ವಿಚಾರಧಾರೆ ಗಾಂಧಿ, ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್ವಾದಿ ವಿಚಾರಗಳಿಂದ ರೂಪಿತವಾಗಿದೆ. ಈ ಒಂದು ಸಾಮಾಜಿಕ ಚಳವಳಿಯ ಅಂಗವಾಗಿ ಚಳವಳಿಯಲ್ಲಿದ್ದ ಜನರೇ ಸಾಹಿತ್ಯ ರಚನೆಗೂ ತೊಡಗಿದರು.
ಇದಕ್ಕೆ ಪ್ರೇರಣೆಯಾಗಿ ಇದೇ ಸುಮಾರಿಗೆ ಮಹಾರಾಷ್ಟ್ರದಲ್ಲಿ ಪ್ರಚಲಿತವಾಗಿದ್ದ ದಲಿತ ಸಾಹಿತ್ಯ ಚಳವಳಿಯೂ ಕೆಲಸ ಮಾಡಿದೆ. ಇದಲ್ಲದೆ ತೆಲುಗಿನಲ್ಲಿ ಬಂದ ವಿಪ್ಲವ ಸಾಹಿತ್ಯ, ದಿಗಂಬರ ಸಾಹಿತ್ಯ, ಆಫ್ರಿಕಾದ ಕಪ್ಪು ಜನರ ಸಾಹಿತ್ಯ ಕೂಡ ದೂರದ ಪ್ರಭಾವಗಳಾಗಿವೆ. ಮೊದಲಿಗೆ ಬಂಡಾಯ ಸಾಹಿತಿಗಳ ಒಡನಾಡಿಗಳಾಗಿದ್ದ ದಲಿತ ಸಾಹಿತಿಗಳು ‘ಬರಹಗಾರರು ಮತ್ತು ಕಲಾವಿದರ ಒಕ್ಕೂಟ’ದಲ್ಲಿದ್ದರು. ನಂತರ ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲೂ ಭಾಗವಹಿಸಿದ್ದರು. ಆದರೆ ನಂತರ ಅವರು ಬಂಡಾಯ ಸಾಹಿತ್ಯದಿಂದ ಬೇರೆಯಾಗಿ ತಮ್ಮದೇ ಆದ ಅಸ್ತಿತ್ವವನ್ನು ಸ್ಥಾಪಿಸಿಕೊಂಡರು.
ದಲಿತ ಸಾಹಿತ್ಯದಲ್ಲಿ ಕಾವ್ಯ ಹಾಗು ಸಣ್ಣ ಕಥೆ ಎರಡೂ ಪ್ರಕಾರಗಳಲ್ಲಿ ಹುಲುಸಾದ ಕೃಷಿ ನಡೆದಿದೆ. ಸಿದ್ಧಲಿಂಗಯ್ಯನವರ ಹೊಲೆಮಾದಿಗರ ಹಾಡು (1975) ಕವನ ಸಂಕಲನ ಇಂದಿಗೂ ಮಹತ್ವದ ಕೃತಿಯಾಗಿ ನಿಂತಿದೆ. ಕವನ ಬರೆಯುವುದು ಸಂವಹನಕ್ಕೆ, ಓದುಗರನ್ನು ತಲುಪಲು, ಪ್ರೇರೇಪಿಸಲು ಎಂಬ ಕಾಳಜಿಯಿಂದ ಬರೆದ ಗೀತೆಗಳು ಅವು. ನವ್ಯರಂತೆ ಪದ್ಯ ಅರ್ಥವಾಗಲು ಸಂಸ್ಕಾರ ಬೇಕು, ವಿಮರ್ಶಾ ಪರಿಜ್ಞಾನವಿರಬೇಕು ಎಂಬ ಧೋರಣೆ ಇಲ್ಲಿ ಇಲ್ಲ. ‘‘ಇಕ್ರಲಾ ವದೀರ್ಲಾ, ಈ ನನ್ ಮಕ್ಕಳ ಚರ್ಮ ಎಬ್ರಲಾ’’ ಎಂದು ಸಿದ್ಧಲಿಂಗಯ್ಯ ಬರೆದಾಗ ಕನ್ನಡ ಸಾಹಿತ್ಯ ಲೋಕ ಅಲುಗಾಡಿತು. ದಲಿತ ಲೋಕ ಉತ್ಸಾಹದಿಂದ ಚಳವಳಿಗೆ ಧುಮುಕಿತು. ಸಿದ್ಧಲಿಂಗಯ್ಯನವರ ಸಾವಿರಾರು ನದಿಗಳು (1979), ಕಪ್ಪು ಕಾಡಿನ ಹಾಡು (1983) ಸಹ ಮಹತ್ವಪೂರ್ಣ ಸಂಕಲನಗಳು. ಎಚ್. ಗೋವಿಂದಯ್ಯ ಹಲವಾರು ಕವನಗಳನ್ನು ಬರೆಯದೇ ಇದ್ದರೂ ಮಹತ್ವದ ಕವನಗಳನ್ನು ಬರೆದಿದ್ದಾರೆ. ಇದಲ್ಲದೆ ಕೆ.ಬಿ.ಸಿದ್ಧಯ್ಯ, ಮ.ನ.ಜವರಯ್ಯ, ಇಂದೂಧರ ಹೊನ್ನಾಪುರ, ಅರವಿಂದ ಮಾಲಗತ್ತಿ ಮುಂತಾದವರು ಸಹ ಮಹತ್ವದ ಸಂಕಲನಗಳನ್ನು ಹೊರತಂದಿದ್ದಾರೆ. ಇದಲ್ಲದೆ ಇತ್ತೀಚೆಗೆ ದಲಿತ ಸಾಹಿತಿಗಳ ಹೊಸ ತಲೆಮಾರು ಬಂದಿದೆ. ಇವುಗಳನ್ನು ದಾಖಲಿಸಲು ಇನ್ನೂ ಕಾಲ ಪಕ್ವವಾಗಿಲ್ಲ. ನವ್ಯರ ಉಚ್ಛ್ರಾಯ ಕಾಲದಲ್ಲಿ ಅವರಂತೆಯೇ ಸಾಹಿತ್ಯ ರಚನೆಗೆ ತೊಡಗಿದ ದೇವನೂರ ಮಹಾದೇವ ತಮ್ಮ ದ್ಯಾವನೂರು (1971), ಒಡಲಾಳ, ಕುಸುಮ ಬಾಲೆ ಕಥೆ/ಕಾದಂಬರಿಗಳ ಮೂಲಕ ಇತರ ದಲಿತ ಲೇಖಕರಿಗೆ ಹಾದಿ ತೋರಿಸಿದ್ದಾರೆ. ಇದಲ್ಲದೆ ಅರವಿಂದ ಮಾಲಗತ್ತಿಯವರ ಕ್ರೌರ್ಯ, ಮುಳ್ಳೂರು ನಾಗರಾಜ್ರವರ ಮರಣ ಮಂಡಲ ಮಧ್ಯದೊಳಗೆ, ಮ.ನ.ಜವರಯ್ಯನವರ ಮಾಗಿ ಕಾದಂಬರಿಗಳು ದಲಿತ ಸಾಹಿತ್ಯದ ವಿಶಿಷ್ಟ ದಾಖಲೆಗಳು. ಇದಲ್ಲದೆ ಇತ್ತೀಚೆಗೆ ಬರೆಯುತ್ತಿರುವ ಮೊಗಳ್ಳಿ ಗಣೇಶ್ ಸಹ ಇಂದಿನ ಮಹತ್ವದ ದಲಿತ ಕಥೆಗಾರರಲ್ಲಿ ಒಬ್ಬರು.
ನಾಟಕ ಸಾಹಿತ್ಯದಲ್ಲಿ ಬಂಡಾಯ ಸಾಹಿತಿಗಳಂತೆ ದಲಿತರೂ ಹಿಂದೆ ಬಿದ್ದಿದ್ದಾರೆ. ಸಿದ್ಧಲಿಂಗಯ್ಯನವರ ಏಕಲವ್ಯ ಮುಂತಾದ ನಾಟಕಗಳನ್ನು ಬಿಟ್ಟರೆ ನಾಟಕಗಳು ದಲಿತ ಸಾಹಿತ್ಯದಲ್ಲಿ ಬಹಳ ವಿರಳ. ಆದರೆ ಬಂಡಾಯ ಕಥೆಗಳಂತೆ, ಹಲವಾರು ದಲಿತ ಕಥೆ/ಕಾದಂಬರಿಗಳು ನಾಟಕಗಳಾಗಿ ಅನುವಾದಿತಗೊಂಡಿವೆ. ಇವುಗಳಲ್ಲಿ ಕುಸುಮ ಬಾಲೆಯ ರೂಪಾಂತರವು ಒಂದು ಮಹತ್ವದ ಸಾಂಸ್ಕೃತಿಕ ಸಂಗತಿಯಾಗಿ ಉಳಿದಿದೆ. ಆದರೆ ಬಂಡಾಯ ಮತ್ತು ದಲಿತ ಚಳವಳಿಯ ಚರ್ಚೆಗಳು ಇತರ ಕನ್ನಡದ ಮಹತ್ವದ ನಾಟಕಕಾರರನ್ನು ಪ್ರಭಾವಿಸಿದೆ. ಉದಾಹರಣೆಗೆ ಚಂದ್ರಶೇಖರ ಕಂಬಾರ ಮತ್ತು ಎಚ್.ಎಸ್. ಶಿವಪ್ರಕಾಶ್. ಈ ಚಳವಳಿ ಇನ್ನೂ ಜೀವಂತವಾಗಿರುವುದರಿಂದ ಮತ್ತು ಹೊಸ ಪೀಳಿಗೆಯ ಬರಹಗಾರರು ಈಗ ಬಂದಿರುವುದರಿಂದ, ಇದರ ಸಾಂಸ್ಕೃತಿಕ ರಾಜಕೀಯ ಆಯಾಮಗಳನ್ನು ಗುರುತಿಸಲು ಕಾಯಬೇಕಾಗಿದೆ. ಇಂದು ಆಂಧ್ರಪ್ರದೇಶದ ದಲಿತ ಚಳವಳಿಯ ಇತಿಹಾಸದಲ್ಲಿ ಮಾದಿಗರು ಪ್ರತ್ಯೇಕವಾಗಿ ಸಾಹಿತ್ಯ ಸಂಘಟನೆ ಸ್ಥಾಪಿಸಿಕೊಂಡು ಸಾಹಿತ್ಯ ರಚನೆ ಪ್ರಾರಂಭಿಸಿದ್ದಾರೆ. ಅಂಥ ಬೆಳವಣಿಗೆ ಇಲ್ಲಿ ಆಗುತ್ತದೋ ಇಲ್ಲವೋ ಗೊತ್ತಿಲ್ಲ. ಇಂದು ದಲಿತ ಸಂಘರ್ಷ ಸಮಿತಿ ಚುನಾವಣೆ ರಾಜಕೀಯದ ಪ್ರಶ್ನೆಯಿಂದಾಗಿ ಹಲವಾರು ವಿಭಜನೆಗಳನ್ನು ಕಂಡಿದೆ. ಮಹತ್ವದ ಬರಹಗಾರರನ್ನು ವಿಶ್ವವಿದ್ಯಾಲಯ ಮತ್ತು ಕನ್ನಡ ಸಾಹಿತ್ಯ ಲೋಕವು ತನ್ನೊಳಗೆ ಸೇರಿಸಿಕೊಂಡು ಗೌರವಿಸಿದೆ. ಇಂಥ ಸಂದರ್ಭದಲ್ಲಿ ಕಾವು, ರೊಚ್ಚು, ಉತ್ಸಾಹ ಕಡಿಮೆಯಾಗಿದೆ ಎಂಬಂತೆ ಕಾಣುತ್ತಿದೆ. ಅದರೆ ಯಾವುದಕ್ಕೂ ಕಾಲವೇ ಉತ್ತರಿಸಬಲ್ಲುದು. ದಲಿತ ಸಾಹಿತ್ಯ ಚಳವಳಿಯಲ್ಲಿ ಮಹತ್ವದ ವಿಮರ್ಶಕರು ಇನ್ನೂ ಮೂಡಿಬಂದಿಲ್ಲ ಅಥವಾ ಚಳವಳಿಗೆ ಅದರ ಅಗತ್ಯವಿಲ್ಲವೇನೋ ಎಂಬ ಪ್ರಶ್ನೆಗಳ ಕುರಿತ ಚರ್ಚೆ ಇನ್ನೂ ಆಗಬೇಕಿದೆ. ಆರಂಭದಲ್ಲಿ ಬಂಡಾಯ ಮತ್ತು ದಲಿತ ಸಾಹಿತ್ಯಗಳ ಪ್ರಮುಖ ವಿಮರ್ಶಕರಾಗಿದ್ದವರು ಡಿ.ಆರ್.ನಾಗರಾಜ.
ದಲಿತ ಸಾಹಿತ್ಯದ ಪ್ರಮುಖ ಅಂಶಗಳಲ್ಲಿ ಒಂದು, ಆಧುನಿಕ ಕನ್ನಡ ಸಾಹಿತ್ಯದ ಜಾತ್ಯತೀತ ಮುಖವಾಡವನ್ನು ಕಳಚಿ ಹಾಕಿದ್ದು. ‘ದಲಿತ ಸಾಹಿತ್ಯ’ ಪರಿಕಲ್ಪನೆಯ ವ್ಯಾಖ್ಯಾನಗಳನ್ನು ಮತ್ತು ಅದರ ಮೇಲಿನ ಚರ್ಚೆಯನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಮುಖ್ಯವಾಗಿ ಎರಡು ವಾದಗಳನ್ನು ನಾವು ಗುರುತಿಸಬಹುದು.
1. ದಲಿತರನ್ನು ಕುರಿತ ಸಾಹಿತ್ಯ, ದಲಿತ ಸಾಹಿತ್ಯ.
2. ದಲಿತರೇ ಬರೆದ ಸಾಹಿತ್ಯ, ದಲಿತ ಸಾಹಿತ್ಯ
ಮೊದಲನೆಯದು ವಸ್ತು ಮತ್ತು ದೃಷ್ಟಿಕೋನವನ್ನು ಆಧರಿಸಿ ಮಾಡಿದ ವ್ಯಾಖ್ಯಾನವಾದರೆ, ಎರಡನೆಯದು ಹುಟ್ಟು ಮತ್ತು ಅನುಭವವನ್ನು ಆಧರಿಸಿ ಮಾಡಿದ ವ್ಯಾಖ್ಯಾನ. ಚರ್ಚೆ ಕೊನೆಯಲ್ಲಿ ದಲಿತರೇ ಬರೆದ ಸಾಹಿತ್ಯ ಮಾತ್ರ ದಲಿತ ಸಾಹಿತ್ಯ ಎಂಬಲ್ಲಿ ಬಂದು ನಿಂತಿದೆ. ಬಂಡಾಯ ಮತ್ತು ದಲಿತ ಸಾಹಿತ್ಯದ ನಡುವಿನ ಚರ್ಚೆ ಕೂಡ ಇವರ ಮುಂದುವರಿಕೆಯೇ ಆಗಿದೆ. ಬಂಡಾಯ ಸಾಹಿತಿಗಳು ದಲಿತ ಸಾಹಿತ್ಯವನ್ನು ಬಂಡಾಯ ಸಾಹಿತ್ಯದ ಒಂದು ಭಾಗ ಎಂದು ಪರಿಗಣಿಸುತ್ತಾರೆ. ಅವರ ಪ್ರಕಾರ ಎಲ್ಲಾ ಪ್ರಗತಿಪರ ದಲಿತ ಸಾಹಿತಿಗಳೂ ಬಂಡಾಯ ಸಾಹಿತಿಗಳು; ಆದರೆ ಎಲ್ಲ ಬಂಡಾಯ ಸಾಹಿತಿಗಳೂ ದಲಿತರಲ್ಲ. ಇದನ್ನು ದಲಿತ ಲೇಖಕರು ಒಪ್ಪದೇ ತಮ್ಮದೇ ಆದ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿದ್ದಾರೆ. ಬಂಡಾಯ ಸಾಹಿತಿಗಳಲ್ಲಿ ಬ್ರಾಹ್ಮಣೇತರ ಸವರ್ಣೀಯರಿದ್ದಾರೆ. ಅವರು ಇದುವರೆವಿಗೂ ನಮ್ಮನ್ನು ತುಳಿದವರು, ಅವರ ಜೊತೆ ನಾವು ಹೇಗೆ ಇರುವುದು ಎಂಬುದು ದಲಿತರ ಪ್ರಶ್ನೆ. ಅವರೂ ನಮ್ಮನ್ನು ಶೋಷಿಸುತ್ತಿರುವುದರಿಂದ ಅವರ ವಿರುದ್ಧವೂ ನಮ್ಮ ಹೋರಾಟವಿರುವುದರಿಂದ, ನಾವು ನಮ್ಮದೇ ಆದ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಬೇಕು ಎನ್ನುವುದು ದಲಿತರ ವಾದ. ಇದೇ ವಾದದ ಮುಂದುವರಿಕೆಯಾಗಿ ಇಂದು ಆಂಧ್ರಪ್ರದೇಶದ ಸಾಹಿತ್ಯದಲ್ಲಿ ಮಾಲ ಮತ್ತು ಮಾದಿಗ ಜಾತಿ, ದಲಿತ ಮತ್ತು ಮಹಿಳೆ, ದಲಿತ ಪುರುಷ ಮತ್ತು ದಲಿತ ಮಹಿಳೆ ಎಂಬ ಗುರುತುಗಳು ತಮ್ಮನ್ನು ಸ್ಥಾಪಿಸಿಕೊಳ್ಳಲು ವಾಗ್ವಾದಗಳನ್ನು ನಡೆಸುತ್ತಿವೆ ಮತ್ತು ಈ ಸಾಹಿತ್ಯಕ ಚರ್ಚೆಗಳು ನಮ್ಮ ಸಾಹಿತ್ಯದ ರಾಜಕೀಯ ಸ್ವರೂಪವನ್ನು ಬಿಚ್ಚಿ ತೋರಿಸುತ್ತಾ, ಕಲೆ, ಶ್ರೇಷ್ಠತೆ ಎಂಬ ಪರಿಕಲ್ಪನೆಗಳನ್ನು ಪರೋಕ್ಷವಾಗಿ ಪ್ರಶ್ನಿಸುತ್ತಿವೆ.
ಮಹಿಳಾ ಸಾಹಿತ್ಯ ಚಳವಳಿ
ಮಹಿಳೆಯರು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಸಾಹಿತ್ಯ ರಚನೆ ಮಾಡಿದ ಉದಾಹರಣೆಗಳು ಅಲ್ಲಲ್ಲಿ ಸಿಕ್ಕಿದ್ದರೂ, ವಚನ ಚಳವಳಿಯನ್ನು ಹೊರತುಪಡಿಸಿದರೆ ಅವೆಲ್ಲಾ ಅಪವಾದಗಳಾಗೇ ಉಳಿಯುತ್ತವೆ. ವಚನ ಸಾಹಿತ್ಯದ ಸಂದರ್ಭದಲ್ಲಿ ಬೇರೆ ಬೇರೆ ಜಾತಿ ವರ್ಗಗಳು ಸಾಹಿತ್ಯ ರಚನೆಗೆ ತೊಡಗಿದಂತೆ ವಿಭಿನ್ನ ವೃತ್ತಿಗಳ/ಜಾತಿಗಳ ಮಹಿಳೆಯರೂ ಸಾಹಿತ್ಯ ರಚನೆ ಮಾಡಿದರು. ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಕೂಡ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಯಾವುದೇ ಚಳವಳಿಯಲ್ಲೂ ಮಹಿಳೆಯರು ಪ್ರಮುಖವಾಗಿ ಕಾಣುವುದಿಲ್ಲ. ಇದ್ದರೂ ಅವರೆಲ್ಲೋ ಅಂಚಿನಲ್ಲಿ ನಿಂತಿರುತ್ತಾರೆ. ಇಂದು ಮಹಿಳಾ ಸಾಹಿತ್ಯ ವಿಮರ್ಶಕರು, ಸಂಶೋಧಕರು ಅಂಚಿನಲ್ಲಿ ನಿಂತು ಕಣ್ಮರೆಯಾದ ಮಹಿಳಾ ಸಾಹಿತಿಗಳ ಪರಂಪರೆಯ ನಿರ್ಮಿತಿಯಲ್ಲಿ ತೊಡಗಿದ್ದಾರೆ. ನಂಜನಗೂಡು ತಿರುಮಲಾಂಬ ಮುಂತಾದ ನವೋದಯ ಕಾಲದ ಮಹಿಳಾ ಸಾಹಿತಿಗಳು ಈಗ ಚರ್ಚೆಗೆ ಬರುತ್ತಿದ್ದಾರೆ. ನವ್ಯ ಸಾಹಿತ್ಯದ ಸಂದರ್ಭದಲ್ಲಿ ಪುರುಷರೇ ಮಹಿಳೆಯರ ಹೆಸರಿನಲ್ಲಿ ಕವಿತೆಗಳನ್ನು ಬರೆದದ್ದೂ ಉಂಟು. ಅದರ ಹಿಂದಿನ ಸಾಂಸ್ಕೃತಿಕ ರಾಜಕಾರಣವನ್ನು ಕುರಿತ ಅಧ್ಯಯನ ಇನ್ನೂ ಆಗಬೇಕಿದೆ. ಬಂಡಾಯ ಮತ್ತು ದಲಿತ ಸಾಹಿತ್ಯದಲ್ಲಿ ಕೂಡ ಕೆಲವೇ ಕೆಲವು ಮಹಿಳೆಯರಿದ್ದಾರೆ. ಬಿ.ಟಿ.ಲಲಿತಾನಾಯಕ್ ಮುಂತಾದವರು ಬಂಡಾಯ ಸಾಹಿತ್ಯ ಚಳವಳಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಹಲವಾರು ಚಾರಿತ್ರಿಕ ಕಾರಣಗಳಿಂದಾಗಿ ದಲಿತ ಸಾಹಿತ್ಯ ಚಳವಳಿಗೆ ಮಹಿಳೆಯರ ಪ್ರವೇಶ ಇನ್ನೂ ದೊಡ್ಡ ಪ್ರಮಾಣದಲ್ಲಿ ಆಗಿಲ್ಲ.
ವಿವಿಧ ಚಳವಳಿಗಳೊಂದಿಗೆ ಗುರುತಿಸಿಕೊಂಡಿರುವ, ಯಾವುದೇ ಚಳವಳಿಯೊಂದಿಗೂ ಗುರುತಿಸಿಕೊಂಡಿರದ ಅದರೆ ಸ್ತ್ರೀ ಎಂಬ ನೆಲೆಯಿಂದ 80ರ ದಶಕದಲ್ಲಿ ಸಾಹಿತ್ಯ ರಚಿಸಲು ಆರಂಭಿಸಿದ ಎಲ್ಲರನ್ನೂ ಮಹಿಳಾ ಸಾಹಿತ್ಯ ಚಳವಳಿಗೆ ಸೇರಿದವರೆಂದು ಗುರುತಿಸಬಹುದು. ಇವರಲ್ಲಿ ನವ್ರೋಚಳವಳಿಗೆ ಸೇರಿದವರು, ನವ್ಯರಂತೆ ಬರೆಯುವವರು, ಬಂಡಾಯದ ಜೊತೆಯಲ್ಲಿರುವವರು, ಬಂಡಾಯದ ಜೊತೆಯಲ್ಲಿದ್ದೂ ವಿಭಿನ್ನ ಕಾಳಜಿ ಹೊಂದಿರುವ ಮುಸ್ಲಿಂ ಮಹಿಳಾ ಸಾಹಿತಿಗಳು ಹಾಗೂ ಇತರರನ್ನು ಸೇರಿಸಬಹುದು. ಕನ್ನಡ ಸಾಹಿತ್ಯ/ವಿಮರ್ಶಕ ಲೋಕ ಕೂಡ ಮಹಿಳಾ ಸಾಹಿತಿಗಳನ್ನು ಗಂಭೀರವಾಗಿ ಚರ್ಚೆ ಮಾಡಲು ತೊಡಗಿದ್ದು ಈ ಸಂದರ್ಭದಲ್ಲೇ. ಇದಕ್ಕೂ ಮುಂಚಿನ ಮಹಿಳಾ ಸಾಹಿತಿಗಳನ್ನು ಜನಪ್ರಿಯ ಸಾಹಿತಿಗಳು ಎಂಬ ಹಣೆಪಟ್ಟಿಯೊಂದಿಗೆ, ಜನಪ್ರಿಯತೆ ಮತ್ತು ಶ್ರೇಷ್ಠತೆ ಎರಡೂ ಒಂದಕ್ಕೊಂದು ವಿರುದ್ಧವಾದ ಧ್ರುವಗಳು ಎಂಬ ಅವ್ಯಕ್ತ ವಾದದೊಂದಿಗೆ ಕಡೆಗಣಿಸಿದ್ದರು.
1980ರ ದಶಕದಲ್ಲೇ ಮಹಿಳೆಯರು ಬಹುಸಂಖ್ಯೆಯಲ್ಲಿ ಸಾಹಿತ್ಯ ರಚಿಸಲು ಆರಂಭ ಮಾಡಿದರೂ, ಅವರು ಪುರುಷರು ಹಾಕಿಕೊಟ್ಟ ಸಾಹಿತ್ಯ ಮಾದರಿಗಳು ಮತ್ತು ಸಾಹಿತ್ಯ ಸಿದ್ಧಾಂತಗಳನ್ನು ಆಧರಿಸಿಯೇ ಕೆಲಸ ಮಾಡಿದರು. ಇದಕ್ಕೆ 1. ಅವರು ಇತರ ಚಳವಳಿಗಳೊಂದಿಗೆ ಇರಿಸಿಕೊಂಡ ಸಂಬಂಧಗಳು ಕಾರಣವಿರಬಹುದು, 2. ಕನ್ನಡದಲ್ಲೇ ಅವರಿಗೆ ಮಾದರಿಗಳಿಲ್ಲದಿರುವುದು ಕಾರಣವಿರಬಹುದು, 3. ಅವರು ವಿಭಿನ್ನವಾಗಿ ಬರೆದಿದ್ದರೂ, ವಿಮರ್ಶಕರೆಲ್ಲರೂ ಪುರುಷರಾಗಿದ್ದರಿಂದ ಅದು ಬೆಳಕಿಗೆ ಬಾರದೇ ಹೋಗಿರಬಹುದು. ಈಗ 1990ರ ದಶಕದ ಮಧ್ಯಭಾಗದಲ್ಲಿ ಕನ್ನಡಕ್ಕೆ ಹಲವಾರು ಸ್ತ್ರೀವಾದಿ ಚಿಂತನೆಗಳು ಅನುವಾದವಾಗಿ ಬರತೊಡಗಿವೆ. ಈ ಹೊಸ ವಿಚಾರಗಳು ಇಲ್ಲಿನ ಸಾಂಸ್ಕೃತಿಕ, ಸಾಮಾಜಿಕ ಅಗತ್ಯಗಳಿಗೆ ತಕ್ಕಂತೆ ಮಾರ್ಪಾಟಾಗಿ ಹೊಸ ಸಾಹಿತ್ಯ ಮತ್ತು ಹೊಸ ಮಹಿಳಾ ವಿಮರ್ಶಕ ಪಡೆ ಮೂಡುವ ಕಾರ್ಯ ಇನ್ನೂ ಆಗಬೇಕಿದೆ. ಇದುವರೆವಿಗೂ ಬಂದಿರುವ ಕೆಲ ಪ್ರಮುಖ ಸಾಹಿತಿಗಳೆಂದರೆ ಕಾವ್ಯಕ್ಷೇತ್ರದಲ್ಲಿ ವೈದೇಹಿ, ಶಶಿಕಲಾ ವಸ್ತ್ರದ, ಮಾಲತಿ ಪಟ್ಟಣಶೆಟ್ಟಿ, ಬಿ.ಟಿ. ಲಲಿತಾನಾಯಕ್, ಸ.ಉಷಾ, ಪ್ರತಿಭಾ ನಂದಕುಮಾರ್, ಸರ್ವಮಂಗಳಾ, ಎಚ್.ಎಸ್.ಮುಕ್ತಾಯಕ್ಕ, ವಿಜಯಾದಬ್ಬೆ ಮುಂತಾದವರು. ಕಥಾ ಕಾದಂಬರಿ ಕ್ಷೇತ್ರದಲ್ಲಿ ವೈದೇಹಿ, ಬಿ.ಟಿ.ಲಲಿತಾನಾಯಕ್, ವೀಣಾ ಶಾಂತೇಶ್ವರ, ಗೀತಾ ನಾಗಭೂಷಣ, ಸಾರಾ ಅಬೂಬಕರ್, ಭಾನು ಮುಷ್ತಾಕ್, ಎಚ್.ನಾಗೇಣಿ ಮುಂತಾದ ಮಹಿಳೆಯರಿದ್ದಾರೆ. ನಾಟಕ ಸಾಹಿತ್ಯದಲ್ಲಿ ವಿಜಯಾ ಅವರ ಬೀದಿ ನಾಟಕಗಳು ಮತ್ತು ಎಸ್.ಸಂಧ್ಯಾ, ಎಸ್.ಮಾಲತಿ ಅವರ ನಾಟಕಗಳನ್ನು ಹೆಸರಿಸ ಬಹುದು. ಆದರೆ ಈ ಪ್ರಕಾರದಲ್ಲಿ ಅವರ ಕೃಷಿ ಅತ್ಯಲ್ಪ. ಈ ಚಳವಳಿಯ ಭವಿಷ್ಯ ಉಜ್ವಲವಾಗಿದೆ.
ಮುಸ್ಲಿಮ್ ಸಂವೇದನೆಯ ಸಾಹಿತ್ಯ ಚಳವಳಿ
ಕನ್ನಡ ಸಾಹಿತ್ಯ ಇತಿಹಾಸದಲ್ಲಿ 1980ರ ದಶಕಕ್ಕೂ ಮುಂಚೆ ಕೆಲವು ಮುಸ್ಲಿಂ ಬರಹಗಾರರಿದ್ದರೂ ಅವರೂ ಕೂಡ ಕನ್ನಡ ಸಾಹಿತ್ಯದ ಅಂದಿನ ಪ್ರಮುಖ ಚಳವಳಿಯೊಂದಿಗೆ ಒಂದಾಗಿಯೋ, ಸಹಮತ ಹೊಂದಿಯೊ ಇದ್ದು ಬಿಡುತ್ತಿದ್ದರು. ಇದಕ್ಕೆ ಉದಾಹರಣೆಯಾಗಿ ಕೆ.ಎಸ್.ನಿಸಾರ್ ಅಹಮದ್ ಮತ್ತು ಬಿ.ಎ.ಸನದಿ ಅವರನ್ನು ಹೆಸರಿಸಬಹುದು. ಬಂಡಾಯ ಸಾಹಿತ್ಯದ ಉಗಮದೊಂದಿಗೆ ಹಲವು ಮುಸ್ಲಿಂ ಸಾಹಿತಿಗಳು ಕನ್ನಡದಲ್ಲಿ ಕಥೆ ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಇವರು ತಮ್ಮ ಧರ್ಮದೊಳಗಿನ ಆಗುಹೋಗುಗಳನ್ನು ವೈಚಾರಿಕ ಹಿನ್ನೆಲೆಯಲ್ಲಿ ವಿಮರ್ಶಿಸುತ್ತಾ, ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿಗಳಿಂದಾಗುತ್ತಿರುವ ಅನಾಹುತಗಳನ್ನು ಎತ್ತಿ ಹೇಳುತ್ತಾ, ಹಿಂದೂ ರಾಷ್ಟ್ರೀಯತೆ, ಒಂದು ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಸಬಹುದಾದ ದೌರ್ಜನ್ಯಗಳನ್ನು ಎತ್ತಿ ತೋರಿಸುತ್ತಾರೆ. ಇದರಲ್ಲಿ ಬೊಳುವಾರು ಮಹಮ್ಮದ್ ಕುಂಞ, ಸಾರಾ ಅಬೂಬಕರ್, ಫಕೀರ್ ಮಹಮ್ಮದ್ ಕಟ್ಟಾಡಿ, ಭಾನುಮುಷ್ತಾಕ್, ಅಬ್ದುಲ್ ರಷೀದ್ ಮುಂತಾದವರು ಮುಖ್ಯರಾದವರು. ಈ ಎಲ್ಲ ಸಾಹಿತಿಗಳೂ ದಕ್ಷಿಣ ಕನ್ನಡ ಜಿಲ್ಲೆಯಿಂದ, ಸುತ್ತಮುತ್ತಲಿನಿಂದ, ಕೇರಳದಲ್ಲಿನ ಕಾಸರಗೋಡಿನಿಂದ ಬಂದವರು. ಅದ್ದರಿಂದ ಇವರಲ್ಲಿ ಆ ಧರ್ಮದ, ಕೇರಳದ, ತುಳುನಾಡಿನ ವಿಶಿಷ್ಟ ಸಂಸ್ಕೃತಿಗಳ ವಿಭಿನ್ನ ಸಂಮಿಶ್ರಣಗಳು ಕಾಣಬರುತ್ತದೆ. ಸಂಸ್ಕೃತಿ ತಳೆಯುವ ವಿಭಿನ್ನ ರೂಪ ವಿವಿಧ ಗುರುತುಗಳ ಮೇಲೆ ಅದು ಬೀರುವ ಪರಿಣಾಮಗಳು, ಆ ‘ಗುರುತಿನ’ ಸಮುದಾಯ ಅದರೊಂದಿಗೆ ನಡೆಸುವ ಸಂವಾದ ಇವೆಲ್ಲವುಗಳೂ ಇಲ್ಲಿ ಪ್ರಖರವಾಗಿ ಎದ್ದು ಕಾಣುತ್ತದೆ. ಉತ್ತರ ಕರ್ನಾಟಕದಲ್ಲಿನ ಮುಸ್ಲಿಂ ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚು ವಿವರಗಳು ಕಂಡುಬರುವುದಿಲ್ಲ. ಇದ್ದರೂ ನಮ್ಮ ಅವಜ್ಞೆಗೆ ಈಡಾಗಿರಬಹುದು. ಅವುಗಳನ್ನು ಅಧ್ಯಯನಕ್ಕೆ ಒಳಪಡಿಸಿದರೆ ಕನ್ನಡ ಸಾಹಿತ್ಯ ಚರಿತ್ರೆಯ ಇತರ ಮಗ್ಗುಲುಗಳನ್ನು ನೋಡಲು ಅವಕಾಶವಾಗುತ್ತದೆ.
ಇತರ ಸಾಹಿತ್ಯ ಚಳವಳಿಗಳು
ಹಿಂದೇ ಹೇಳಿದಂತೆ ನಮ್ಮಲ್ಲಿ ಹಲವಾರು ರೀತಿಯ ಸಾಹಿತ್ಯಕ ಚಳವಳಿಗಳು ನಡೆದಿವೆ. ಇಪ್ಪತ್ತನೆಯ ಶತಮಾನದಲ್ಲಿ ಜಾತಿಯಾಧಾರಿತ, ಧಾರ್ಮಿಕ ಸಾಹಿತ್ಯ ರಚನೆಗಳೂ ನಡೆದಿವೆ. ಅವುಗಳೂ ಕರ್ನಾಟಕದ ಸಾಹಿತ್ಯ ಚರಿತ್ರೆಯಲ್ಲಿ ಸ್ಥಾನ ಪಡೆಯಬೇಕಾಗಿದೆ. ಜನಪ್ರಿಯ ಸಾಹಿತ್ಯ ಚಳವಳಿಗಳನ್ನು ಇತರ ಸಾಮಾಜಿಕ, ಚಾರಿತ್ರಿಕ ಘಟನೆಗಳ ಹಿನ್ನೆಲೆಯಲ್ಲಿ ನೋಡುವ ಮತ್ತು ಅವುಗಳು ಅದರಲ್ಲಿ ಭಾಗಿಯಾಗಿರುವ ಬಗೆಯನ್ನು ಗುರುತಿಸುವ ಅಧ್ಯಯನಗಳು ಆಗಬೇಕಿದೆ. ಪತ್ತೇದಾರಿ ಸಾಹಿತ್ಯ ಚಳವಳಿ ಒಂದು ಕಾಲದಲ್ಲಿ ವಿಶಿಷ್ಟವಾದ ಜನಪ್ರಿಯತೆಯನ್ನು ಕರ್ನಾಟಕದಲ್ಲಿ ಪಡೆದಿತ್ತು. ಎನ್. ನರಸಿಂಹಯ್ಯ, ಟಿ.ಕೆ.ರಾಮರಾವ್ ಕರ್ನಾಟಕದ ಅಕ್ಷರಬಲ್ಲ ಜನರ ನಾಲಿಗೆಯ ಮೇಲೆ ಸದಾ ನಲಿಯುತ್ತಿದ್ದ ಕಾಲವೂ ಇತ್ತು. ಇದಲ್ಲದೆ ಇಂದು ಕ್ಯಾಸೆಟ್ ಸಂಸ್ಕೃತಿ ಮತ್ತು ಭಾವಗೀತೆ ಸಂಸ್ಕೃತಿ ಕನ್ನಡದ ಸಾಂಸ್ಕೃತಿಕ ವಾತಾವರಣದಲ್ಲಿ ಆಳವಾಗಿ ಬೇರೂರಿದೆ. ಕನ್ನಡಪರ ಗೀತೆಗಳಿಗೇನೂ ಇದರಲ್ಲಿ ಕೊರತೆಯಿಲ್ಲ. ಇದಲ್ಲದೆ ಸಿನಿಮಾ ಸಾಹಿತ್ಯ ಕೂಡ ಕನ್ನಡದಲ್ಲಿ ಹುಲುಸಾಗಿ ಬೆಳೆದಿವೆ. ಇತ್ತೀಚೆಗಂತೂ ಕೆಲವು ಸಿನಿಮಾಗಳಲ್ಲಿ ಕನ್ನಡ, ಕಾವೇರಿ ಕುರಿತ ಹಾಡುಗಳಿದ್ದೇ ಇರುತ್ತವೆ. ಇಂಥಾ ಸಾಹಿತ್ಯಕ ಚಳವಳಿಗಳ ಕುರಿತು ಅಧ್ಯಯನಗಳು ನಡೆದರೆ ಮಾತ್ರ ಅವುಗಳ ಇತಿಹಾಸವನ್ನು ಬರೆಯಲು ಸಾಧ್ಯ; ಇಲ್ಲವಾದರೆ ನಾವು ಕೇವಲ ಕರ್ನಾಟಕದ ಸಾಹಿತ್ಯ ಚಳವಳಿಗಳ ಕೆಲವೇ ಮುಖವನ್ನು ನೋಡಲು ಸಾಧ್ಯ.
ಇತ್ತೀಚಿನ ಬೆಳವಣಿಗೆಗಳು ಮತ್ತು ಮುಂದೆ
ಸಾಹಿತ್ಯವನ್ನು ಒಂದು ಸಾಮಾಜಿಕ ಸಂಸ್ಥೆಯಾಗಿ ಪರಿಭಾವಿಸಿದರೆ ಈ ಸಂಸ್ಥೆಯ ಸದಸ್ಯತ್ವದ ರೂಪವನ್ನು ಅಧ್ಯಯನ ಮಾಡಿದರೆ, 1970ರ ದಶಕದ ಹಿಂದೆ ಬಹುಪಾಲು ಮೇಲ್ಜಾತಿಗಳವರು ಸಾಹಿತಿಗಳಾಗಿದ್ದಾರೆ. 1970ರ ದಶಕದ ನಂತರ ಪ್ರವೇಶ ಪಡೆಯುತ್ತಿ ರುವವರು ಹಿಂದುಳಿದ, ದಲಿತ ವರ್ಗಗಳಿಗೆ ಸೇರಿದವರಾಗಿದ್ದಾರೆ. 1980ರ ದಶಕದ ಕೊನೆಯ ಭಾಗದವರೆಗೆ ವ್ಯಕ್ತ ರಾಜಕೀಯ ನಿಲುವಿನ ಸಾಹಿತ್ಯ ಬಂಡಾಯ, ದಲಿತ ಸಾಹಿತಿಗಳಿಂದ ಸೃಷ್ಟಿಯಾಯಿತು. ಆದರೆ 1980ರ ದಶಕದ ಮೊದಲ ಭಾಗದಲ್ಲಿ ಪ್ರಾರಂಭವಾದ ಗೋಕಾಕ್ ಚಳವಳಿ ನಂತರದ ವಿಶ್ವಕನ್ನಡ ಸಮ್ಮೇಳನಗಳು ಕನ್ನಡ ಚಳವಳಿಯನ್ನು ಪ್ರಬಲವಾಗಿ ಹುಟ್ಟುಹಾಕಿದವು. ಕನ್ನಡ ಚಳವಳಿ ಪ್ರಬಲವಾಗುತ್ತಿದ್ದಂತೆ ಬಂಡಾಯ ಸಾಹಿತಿಗಳನೇಕರು ಹಿಂದುಳಿದ ದಲಿತರ ಮಾತು ಬಿಟ್ಟು, ಕನ್ನಡಿಗರನ್ನು ಕುರಿತು ಮಾತನಾಡಲಾರಂಭಿಸಿದರು. ಕನ್ನಡದ ರಾಜಕಾರಣ, ಹಿಂದುಳಿದ ವರ್ಗ ಮತ್ತು ದಲಿತರ ರಾಜಕಾರಣ ಒಂದೇ ಎನ್ನುವಂಥ ವಾತಾವರಣ ಇಂದು ನಿರ್ಮಾಣವಾಗಿದೆ.
ಇದರೊಂದಿಗೆ 1980ರ ದಶಕದ ಕೊನೆಯ ಭಾಗದಲ್ಲಿ ಕನ್ನಡ ಪ್ರವೇಶಿಸಿದ ದೇಶಿವಾದ ಇಂದು ಸರ್ವವ್ಯಾಪಿಯಾಗಿದೆ. ಬಂಡಾಯ ಸಾಹಿತಿಗಳು, ದಲಿತ ಸಾಹಿತಿಗಳು, ಕನ್ನಡ ಚಳವಳಿಗಾರರು ಎಲ್ಲರೂ ದೇಶಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ದೇಶಿವಾದ ಆಧುನಿಕತೆಯ ಸಂದರ್ಭದಲ್ಲಿ ಆಧುನಿಕತೆಯನ್ನು ವಸಾಹತುಶಾಹಿ ಜೊತೆ ಸಮೀಕರಿಸಿ ‘‘ಕೆಟ್ಟದು’’ ಎಂಬ ಹಣೆಪಟ್ಟಿ ಹಚ್ಚುತ್ತದೆ. ಆಧುನಿಕಪೂರ್ವ ಒಂದನ್ನು ಇಂದು ಕಲ್ಪಿಸಿಕೊಂಡು ಅದು ಸಕಲ ಸಮಸ್ಯೆಗಳಿಗೂ ಮದ್ದು ಎಂದು ನಂಬಲಾಗುತ್ತದೆ. ಇಂದು ದಲಿತ ರಾಜಕಾರಣ, ಮಹಿಳಾ ರಾಜಕಾರಣ, ಹಿಂದುಳಿದ ವರ್ಗಗಳ ರಾಜಕಾರಣ ದೇಶಿವಾದ ತೆಕ್ಕೆಯಲ್ಲಿ ಕೂತು ಸ್ಥಳೀಯ ಸಂಸ್ಕೃತಿ, ಉಪಸಂಸ್ಕೃತಿ, ಪರ್ಯಾಯ ಸಂಸ್ಕೃತಿ, ದೇಶಿ ಸಂಸ್ಕೃತಿ, ಕಿರು ಸಂಸ್ಕೃತಿ, ಪ್ರತಿ ಸಂಸ್ಕೃತಿ, ಅವೈದಿಕ ಸಂಸ್ಕೃತಿ ಎಂಬ ನೆಲೆಯಲ್ಲಿ ನಿಂತು ‘‘ಸಂಸ್ಕೃತಿ’’ ವಾದವನ್ನು ಮಂಡಿಸುತ್ತಿವೆ. ಈ ‘ಸಂಸ್ಕೃತಿ’ಯ ಪರಿಕಲ್ಪನೆ ಹಿಂದೆ ಹೇಳಿದಂತೆ ಆಧುನಿಕತೆಗೆ ವಿರೋಧಿಯಾದ ‘ಆಧುನಿಕಪೂರ್ವ’ ಎಂದು ಕರೆಯಲ್ಪಡುವ ಒಂದು ರಚನೆ.
ಬಡತನ, ಹಸಿವು, ಅಸಮಾನತೆ, ದೌರ್ಜನ್ಯಗಳಂತಹ ಪ್ರಶ್ನೆಗಳನ್ನೆತ್ತಿಕೊಂಡು ಆಧುನಿಕ ಶಿಕ್ಷಣ ಪಡೆದ (ಮೊಟ್ಟಮೊದಲ ಬಾರಿಗೆ) ಹಿಂದುಳಿದ, ದಲಿತ ವರ್ಗಗಳು ಆಧುನಿಕ ಚೌಕಟ್ಟಿನಲ್ಲಿ ಪ್ರಭುತ್ವದ ಮೇಲೆ ತಮ್ಮ ನ್ಯಾಯಯಯುತ ಪಾಲನ್ನು ನೀಡಲು ಒತ್ತಾಯಿಸಿ ಚಳವಳಿ ನಡೆಸಿದವು. ಈ ಆಶಯಗಳು ಅವರ ಸಾಹಿತ್ಯ ರಚನೆಯಲ್ಲೂ ಮೂಡಿದವು. ಆದರೆ ದೇಶಿವಾದ ಕನ್ನಡದ ಸಂದರ್ಭದಲ್ಲಿ ಸರ್ವವ್ಯಾಪಿಯಾದಂತೆ ಈ ಪ್ರಶ್ನೆಗಳು ಹಿಂದೆ ಸರಿದು ‘‘ಅನನ್ಯತೆ’’, ‘‘ಸಾಂಸ್ಕೃತಿಕ ಅಸ್ತಿತ್ವ’’, ‘‘ಒಳದಾರಿ’’ ಮುಂತಾದ ಪರಿಕಲ್ಪನೆಗಳು ಹುಟ್ಟಿದವು. ಪ್ರಾದೇಶಿಕ ಅನನ್ಯತೆ ಅಥವಾ ಜಾತಿ ಅನನ್ಯತೆಯನ್ನು ಸೂಚಿಸಲು ಅನುವಾಗುವ ಪ್ರಾದೇಶಿಕ ಜಾತಿ ಆಚರಣೆಗಳ ವಿವರಗಳು ಸಾಹಿತ್ಯದಲ್ಲಿ (ಮುಖ್ಯವಾಗಿ ಕಥಾಸಾಹಿತ್ಯದಲ್ಲಿ) ಎದ್ದು ಕಾಣತೊಡಗಿದವು. ಆ ಕಥಾಸಾಹಿತ್ಯ ಮಾನವಶಾಸ್ತ್ರೀಯ ವಿವರಗಳನ್ನು ಕೊಡುವ, ಆ ಮೂಲಕ ಆ ಸಂಸ್ಕೃತಿಯ ಅನನ್ಯತೆ ಕಟ್ಟಿಕೊಳ್ಳುವ ಬರವಣಿಗೆಗಳಾದವು.
ಮತ್ತೊಂದು ಪ್ರಮುಖ ಬದಲಾವಣೆಯೆಂದರೆ, ಸಾಹಿತ್ಯ (ಸಾಂಸ್ಕೃತಿಕ ಮಾನವಶಾಸ್ತ್ರೀ ಯತೆಗೆೆ) ಆಕರವಾಗುತ್ತಿದ್ದಂತೆ, ಸಾಹಿತಿಗಳಿಗಿದ್ದ ತಾರಾಮೌಲ್ಯ ಹೋಗಿ, ಸಂಸ್ಕೃತಿ ವಿಮರ್ಶಕರಿಗೆ ತಾರಾಮೌಲ್ಯ ಬಂದಿತು. 1998ರಲ್ಲಿ ತೀರಿಕೊಂಡ ವಿಮರ್ಶಕ ಡಿ.ಆರ್. ನಾಗರಾಜ್ರ ವಿಮರ್ಶನ ಜೀವನರೇಖೆ ಸೂಚಿಸುವ ಪ್ರಕ್ರಿಯೆ ಇದಕ್ಕೆ ಅತ್ಯುತ್ತಮ ಉದಾಹರಣೆ. ಈ ಎಲ್ಲಾ ಬೆಳವಣಿಗೆಗಳು ಜಾಗತೀಕರಣದ ಸಂದರ್ಭದಲ್ಲಿ ದೇಶಿ, ಜಾನಪದ, ಸ್ಥಳೀಯ ಸಂಸ್ಕೃತಿ, ಕಿರು ಸಂಸ್ಕೃತಿಗಳ ಹೆಸರಿನಲ್ಲಿ ಸರಕಾರೇತರ ಅಧ್ಯಯನ, ಸಾಹಿತ್ಯ ಸಂಸ್ಥೆಗಳು ವಿದೇಶಿ ನೆರವಿನಿಂದ ಮೂಡಿಬರುತ್ತಿರುವ ಸಂದರ್ಭದಲ್ಲಿ ಆಗುತ್ತಿರುವುದರ ಹಿನ್ನೆಲೆಯನ್ನಿಟ್ಟುಕೊಂಡು ಹೆಚ್ಚು ಅಧ್ಯಯನವಾಗಬೇಕಿದೆ. ವಿಮರ್ಶೆಯು ದೇಶಿಮಾರ್ಗ ಹಿಡಿದು ಹೋಗುತ್ತಿರುವ ಸಂದರ್ಭದಲ್ಲಿ ಹಿಂದೆ ಹೇಳಿದಂತೆ ‘‘ಪ್ರಗತಿಪರ ಆಶಯಗಳನಿಟ್ಟುಕೊಂಡು ಸಂಪೂರ್ಣ ಆಧುನಿಕತೆಯ ಭಾಷೆ ಮಾತನಾಡುವವರೂ ಸಕ್ರಿಯವಾಗಿದ್ದಾರೆ.’’
ಇಂದು ದೇಶಿಯಲ್ಲಿ ಎಡದೇಶಿ, ದಲಿತ ದೇಶಿ ಎಂಬ ಪ್ರಭೇದಗಳೂ ಹುಟ್ಟಿಕೊಳ್ಳುತ್ತಿವೆ. ಎಡಪಂಥೀಯರು, ದಲಿತರು ದೇಶಿ ವಿಚಾರಧಾರೆಯನ್ನು ತಮ್ಮ ರಾಜಕಾರಣಕ್ಕೆ ಒಗ್ಗಿಸಿಕೊಳ್ಳುತ್ತಾರೋ, ಇಲ್ಲಾ ದೇಶಿ ವಿಚಾರಧಾರೆ ಎಡಪಂಥೀಯರನ್ನು, ದಲಿತ-ಹಿಂದುಳಿದ ವರ್ಗಗಳನ್ನು ತನ್ನ ರಾಜಕಾರಣಕ್ಕೆ ಒಗ್ಗಿಸಿಕೊಳ್ಳುತ್ತದೋ ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾದ ಸಂಗತಿ. ದೂರದರ್ಶನ ಸಾಹಿತ್ಯ, ಕ್ಯಾಸೆಟ್ ಸಾಹಿತ್ಯ ಮುಂತಾದ ವಿದ್ಯುನ್ಮಾನ ಸಾಹಿತ್ಯದ ಎದುರು ಪುಸ್ತಕ ಮುದ್ರಣ ಆಧಾರಿತ ಸಾಹಿತ್ಯ ಯಾವ ದಿಕ್ಕು ಹಿಡಿಯುತ್ತದೆ ಎಂದು ಕಾದು ನೋಡಬೇಕಾಗಿದೆ. ಏಕೆಂದರೆ ಆಧುನಿಕ ಕನ್ನಡ ಸಾಹಿತ್ಯ ಪ್ರಾರಂಭವಾದದ್ದೇ ಮುದ್ರಣ ಯಂತ್ರ, ಕಾಗದ, ಮಿಶನರಿ ವಸಾಹತುಶಾಹಿ ಚಟುವಟಿಕೆಗಳು ಮತ್ತು ಇಂಗ್ಲಿಷ್ ಶಿಕ್ಷಣ ಪದ್ಧತಿಯಲ್ಲಿ ಬೆಳೆದ ಮೇಲ್ಜಾತಿಗಳ ಉಗಮದೊಂದಿಗೆ. ಇಂದು ಆಧುನಿಕತೆ ವಿರೋಧಿಯಾದ ‘ದೇಶಿ’ವಾದ ಪ್ರಬಲವಾಗಿ ಬೆಳೆಯುತ್ತಿರುವಾಗ, ಆಧುನಿಕತೆಯನ್ನು ಮೀರಿಸುವ ಅತ್ಯಾಧುನಿಕ ಬೆಳವಣಿಗೆ ಗಳು ಜಾಗತೀಕರಣದ ಸಂದರ್ಭದಲ್ಲಿ, ಮಾಹಿತಿ ತಂತ್ರಜ್ಞಾನದ ಸಂದರ್ಭದಲ್ಲಿ ರೂಪು ತಳೆಯುತ್ತಿರುವಾಗ ಆಧುನಿಕ ಕನ್ನಡ ಸಾಹಿತ್ಯ ಮುಂದೇನಾಗುತ್ತದೆ ಎಂಬುದು ಬಹಳ ಕುತೂಹಲಕರವಾದ ಪ್ರಶ್ನೆಯಾಗಬಹುದು.
ಪರಾಮರ್ಶನ ಗ್ರಂಥಗಳು
1. ನಾಗರಾಜು ಡಿ.ಆರ್., 1996. ಸಾಹಿತ್ಯ ಕಥನ, ಹೆಗ್ಗೋಡು: ಅಕ್ಷರ ಪ್ರಕಾಶನ.
2. ಶೇಷಗಿರಿರಾವ್ ಎಲ್.ಎಸ್., 1975. ಹೊಸಗನ್ನಡ ಸಾಹಿತ್ಯ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ
3. ಶ್ರೀನಿವಾಸ ಹಾವನೂರು, ಹೊಸಗನ್ನಡ ಅರುಣೋದಯ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ