ಸೋಮವಾರ, ಜೂನ್ 15, 2015

ಅಧ್ಯಾಯ 22: ಗಡಿ ಚಳವಳಿ ಇತ್ತೀಚಿನ ಆಯಾಮಗಳು

ಅಧ್ಯಾಯ 22: ಗಡಿ ಚಳವಳಿ ಇತ್ತೀಚಿನ ಆಯಾಮಗಳು

ಅತಿ ಪ್ರಾಚೀನ ಕಾಲದಿಂದಲೂ ಅಕ್ಕಪಕ್ಕದ ರಾಜ್ಯ ಮತ್ತು ಪ್ರಾಂತ್ಯಗಳ ನಡುವೆ ಗಡಿಗಾಗಿ ಕಲಹಗಳಾಗುತ್ತಲೇ ಇವೆ. ಇಂದಿನ ದಿನಗಳಲ್ಲಿಯೂ ನಡೆಯುತ್ತಿರುವ ಈ ರೀತಿಯ ಘರ್ಷಣೆಗಳಲ್ಲಿ ಕೆಲವಕ್ಕೆ ಆರ್ಥಿಕ ಸ್ಪರ್ಧೆ ಕಾರಣವಾದರೆ, ಮತ್ತೆ ಕೆಲವು ಅಜ್ಞಾನದ ಪರಿಣಾಮಗಳಾಗಿವೆ. ಈ ಹಂತದಲ್ಲಿ ನಮ್ಮ ತಿಳಿವು ಹೆಚ್ಚಿದಂತೆ ಪ್ರಾಂತ್ಯ ಪ್ರಾಂತ್ಯಗಳ ಪರಸ್ಪರ ಅವಲಂಬನೆ ಹಾಗೂ ಅಭಿವೃದ್ದಿಯ ವಿಷಯದಲ್ಲಿ ಹೆಚ್ಚಿನ ಅರಿವು ಮತ್ತು ಮೆಚ್ಚುಗೆಗಳು ಮೂಡುತ್ತವೆ. ಇದಕ್ಕೆ ನಮ್ಮ ರಾಷ್ಟ್ರ ಹಾಗೂ ರಾಜ್ಯಗಳಲ್ಲಿ ನಡೆದ, ನಡೆಯುತ್ತಿರುವ ಚಳವಳಿಗಳೇ ಕಾರಣಗಳಾಗಿವೆ.
ಕರ್ನಾಟಕದಲ್ಲಿ ನಡೆದ ವಚನಕಾರರ ಚಳವಳಿ, ದಾಸರ ಭಕ್ತಿ ಚಳವಳಿ, ಸ್ವಾತಂತ್ರ್ಯ ಚಳವಳಿ, ಕರನಿರಾಕರಣ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ, ವಿವಿಧ ರೈತ ಚಳವಳಿಗಳು, ಏಕೀಕರಣ ಚಳವಳಿ, ಗಡಿನಾಡಿನ ಒಳಿತಿಗಾಗಿ ಚಳವಳಿ, ಹಿಂದುಳಿದ ವರ್ಗಗಳ ಚಳವಳಿ, ದಲಿತ ಮತ್ತು ಬಂಡಾಯ ಚಳವಳಿಗಳು ಇವೆಲ್ಲ ಹೆಚ್ಚು ಪ್ರಸಿದ್ಧವಾಗಿವೆಯಾದರೂ ಭೂದಾನ ಚಳವಳಿ, ಸಹಕಾರ ಚಳವಳಿ, ಖಾದಿ ಚಳವಳಿ, ಹಿಂದಿ ಚಳವಳಿ, ಸಾಮೂಹಿಕ ವಿವಾಹ ಚಳವಳಿ, ಹೈದರಾಬಾದ್ ಕರ್ನಾಟಕದ ಮುಕ್ತಿ ಚಳವಳಿ, ಜವಾಬ್ದಾರಿ ಸರಕಾರ ಚಳವಳಿ, ಪಾನ ನಿರೋಧ ಚಳವಳಿ, ವಯಸ್ಕರ ಶಿಕ್ಷಣ ಚಳವಳಿ, ಕಾನೂನು ನೆರವು ಚಳವಳಿ, ಬ್ರಾಹ್ಮಣೇತರ ಚಳವಳಿ, ಮಹಿಳಾ ವಿಮೋಚನಾ ಚಳವಳಿ, ವಿದ್ಯಾರ್ಥಿ ಚಳವಳಿ, ಕುಟುಂಬ ಯೋಜನಾ ಚಳವಳಿ ಮುಂತಾದ ಚಳವಳಿಗಳು ಕರ್ನಾಟಕದ ಸಾಮಾಜಿಕ ಪರಿವರ್ತನೆಯ ವಿವಿಧ ಕಾಳಜಿಗಳನ್ನು ಪ್ರತಿಬಿಂಬಿಸುತ್ತವೆ. ಇದು ನಿಜ. ಆದರೆ ಅದೇ ರೀತಿಯಲ್ಲಿ ಕರ್ನಾಟಕವು ಚಳವಳಿಗಳಿಂದ ಮುಕ್ತವಾದ ಪ್ರದೇಶ ಎಂಬ ಮಿಥ್ಯೆಯನ್ನು ಹುಸಿಗೊಳಿಸುತ್ತದೆ. ಸಾಮಾನ್ಯವಾಗಿ ಮೇಲೆ ಹೆಸರಿಸಿರುವ ಎಷ್ಟೋ ಚಳವಳಿಗಳು ಹುಟ್ಟುತ್ತಲೇ ಅಡಗಿಹೋಗಿವೆ. ಮತ್ತೆ ಕೆಲವನ್ನು ಚಳವಳಿಗಳೆಂದು ಕರೆಯುವುದೋ, ಬೇಡವೋ ಎಂಬ ಸಂದಿಗ್ಧತೆಯಲ್ಲಿವೆ. ಮೇಲಿನವುಗಳಲ್ಲಿ ಕೆಲವು ಮಾತ್ರ ಕರ್ನಾಟಕಕ್ಕೆ ವಿಶಿಷ್ಟವಾದ ಅಥವಾ ಕರ್ನಾಟಕಕ್ಕೆ ಸೀಮಿವಾದಂತಹ ಚಳವಳಿಗಳಲ್ಲ. ಉದಾಹರಣೆಗೆ ಕ್ವಿಟ್ ಇಂಡಿಯಾ ಚಳವಳಿ, ಸ್ವಾತಂತ್ರ್ಯ ಚಳವಳಿ, ಪಾನನಿರೋಧ ಚಳವಳಿ, ಭೂದಾನ ಚಳವಳಿ ಮುಂತಾದ ಅಖಿಲ ಭಾರತ ಮಟ್ಟದ ವಿಶಾಲ ಚಳವಳಿಯ ಅಂಗವಾಗಿ ಕರ್ನಾಟಕದಲ್ಲಿಯೂ ಕಾಣಿಸಿಕೊಂಡವು. ಆದರೆ ಕೆಲವೇ ಕೆಲವು ಮಾತ್ರ ಖಂಡಿತವಾಗಿಯೂ ಕರ್ನಾಟಕಕ್ಕೆ ವಿಶಿಷ್ಟವೆನಿಸುವಂತಹ ಚಳವಳಿಗಳು. ಉದಾಹರಣೆಗೆ 12ನೆಯ ಶತಮಾನದಲ್ಲಿ ಉಂಟಾದಂತಹ ವಚನಕಾರರ ಚಳವಳಿಯು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಹಾಗೆ 1956ರ ಭಾಷಾವಾರು ಪ್ರಾಂತ್ಯ ರಚನೆಯಲ್ಲಿ ಕರ್ನಾಟಕಕ್ಕೆ ಆದಂತಹ ಅನ್ಯಾಯದ ವಿರುದ್ಧ ಬೃಹತ್ ಪ್ರಮಾಣದಲ್ಲಿ ರಾಜ್ಯದಾದ್ಯಂತ ಗಡಿನಾಡಿನ ರಕ್ಷಣೆಗಾಗಿ ಚಳವಳಿಗಳು ನಡೆದವು. ಅವು ಇಂದಿಗೂ ಸಹ ನಿಲ್ಲದೆ ನಡೆದುಕೊಂಡು ಬರುತ್ತಲಿವೆ. ಪ್ರಸ್ತುತ ಈ ಲೇಖನದಲ್ಲಿ ನಮ್ಮ ರಾಜ್ಯದ ಏಕೀಕರಣದ ನಂತರ ಗಡಿಪ್ರದೇಶ ದಲ್ಲಿ ಗಡಿಯ ರಕ್ಷಣೆಗೆ ಹಾಗೂ ನೆರೆಯರಾಜ್ಯ ಸೇರಿರುವಂತಹ ಕನ್ನಡ ಪ್ರದೇಶಗಳನ್ನು ಪಡೆಯುವುದಕ್ಕಾಗಿ ನಡೆದಿರುವ, ನಡೆಸಿಕೊಂಡು ಬರುತ್ತಿರುವ ಚಳವಳಿಗಳನ್ನು ಅಧ್ಯಯನ ಮಾಡಲಾಗಿದೆ.
ಸುಮಾರು ಎರಡು ಸಾವಿರ ವರ್ಷಗಳ ಚರಿತ್ರೆ ಹಾಗೂ ಸಂಸ್ಕೃತಿಯನ್ನು ಪಡೆದಿರುವ ಕರ್ನಾಟಕವನ್ನು ಆಳಿಹೋದ ಶಾತವಾಹನರು, ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು ಹಾಗೂ ವಿಜಯನಗರದ ಅರಸರು ಈ ಪ್ರಾಚೀನ ನಾಡಿನ ಶೌರ್ಯ ಸಾಹಸ, ಸ್ವಾತಂತ್ರ್ಯ ಪ್ರೇಮ, ಪ್ರಜಾನುರಾಗ, ಸರ್ವಸಮನ್ವಯ ದೃಷ್ಟಿ ಹಾಗೂ ಧವಳಕೀರ್ತಿಯನ್ನು ಮೆರೆಸಿ ಮರೆಯಾಗಿದ್ದಾರೆ. ಇಮ್ಮಡಿ ಪುಲಿಕೇಶಿ, ವಿಕ್ರಮಾದಿತ್ಯ, ನೃಪತುಂಗ, ಧ್ರುವ, ಇಮ್ಮಡಿ ಪ್ರೌಢದೇವರಾಯ ಹಾಗೂ ಕೃಷ್ಣದೇವರಾಯ ಮೊದಲಾದ ಕರ್ನಾಟಕದ ಚಕ್ರವರ್ತಿಗಳು ಪ್ರಪಂಚದ ಮಹಾನ್ ಚಕ್ರವರ್ತಿಗಳಿಗೆ ಸಮನಾಗಿರುತ್ತಾರೆ.
ಕನ್ನಡಕ್ಕೆ ಅಂದಿನ ಕಾಲದಲ್ಲಿಯೇ ಸಂಸ್ಕೃತದ ಸ್ಥಾನವನ್ನು ದೊರಕಿಸಿಕೊಟ್ಟ ಪಂಪ, ರನ್ನರು; ಕನ್ನಡವನ್ನು ಜನವಾಣಿಯನ್ನಾಗಿ ಮಾಡಿದಂತಹ ಬಸವ, ಅಲ್ಲಮ, ಚೆನ್ನಬಸವ, ಅಕ್ಕಮಹಾದೇವಿಯರು; ಶ್ರೀಸಾಮಾನ್ಯನನ್ನು ಅಸಾಮಾನ್ಯನಾಗಿ ಚಿತ್ರಿಸಿದ ಹರಿಹರ; ಸತ್ಯವೇ ಶಿವನೆಂದು ಸಾರಿದ ರಾಘವಾಂಕ; ಅಲ್ಲಮ ಪ್ರಭುವಿನ ಸಂಪ್ರದಾಯವನ್ನು ನಿರೂಪಿಸಿದ ಚಾಮರಸ; ಶ್ರೀಕೃಷ್ಣನ ವಿರಾಟ್ಸ್ವರೂಪವನ್ನು ತೋರಿಸಿದ ಕುಮಾರವ್ಯಾಸ; ಕಲ್ಲನ್ನು ಕಲೆಯನ್ನಾಗಿ ಮಾಡಿದ ಜಕಣಾಚಾರ್ಯ ಮೊದಲಾದವರು ಕನ್ನಡಿಗರು. ವಿಶ್ವವಿಖ್ಯಾತರು. ಇವುಗಳ ಜೊತೆಗೆ ಕುಳಿತಲ್ಲಿಯೇ ಕಾವ್ಯವನ್ನು ರಚಿಸಿದ ಕೀರ್ತಿ ಕರ್ನಾಟಕದ ಜನಪದ ಕವಿಗಳಿಗೆ ಸಲ್ಲುತ್ತದೆ.
ಹಿಂದೊಮ್ಮೆ ಕರ್ನಾಟಕದ ಗಡಿಯು ಹಿಮಾಲಯದವರೆಗೂ ಹಬ್ಬಿತ್ತು. ಸಿಂಹಳವೂ ಸಹ ಕರ್ನಾಟಕದ ಒಂದು ಭಾಗವೇ ಆಗಿತ್ತು. ಕರ್ನಾಟಕದ ಸೈನ್ಯ ಅಂದಿನ ಕಾಲದಲ್ಲಿಯೇ ಜಗತ್ ಪ್ರಸಿದ್ಧವಾಗಿತ್ತು. ಔರಂಗಜೇಬನನ್ನು ಎದುರಿಸಿ ಶಿವಾಜಿ ಮಗ ರಾಜರಾಮನಿಗೆ ಆಶ್ರಯವಿತ್ತ ಕೆಳದಿ ಚೆನ್ನಮ್ಮಾಜಿ, ಸ್ವತಃ ಶಿವಾಜಿ ಮಹಾರಾಜನ ಸೈನ್ಯವನ್ನೇ ಎದುರಿಸಿದ ಬೆಳವಡಿ ಮಲ್ಲಮ್ಮ, ಆಂಗ್ಲರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮವನ್ನು ಹೂಡಿದ ಪ್ರಥಮ ಸ್ವಾತಂತ್ರ್ಯಯೋಧೆ ಕಿತ್ತೂರ ಚೆನ್ನಮ್ಮ ಕನ್ನಡದವರೆ. ಪರಾಕ್ರಮದಲ್ಲಿ, ಪ್ರತಾಪದಲ್ಲಿ, ಪರಧರ್ಮ ಸಹಿಷ್ಣುತೆಯಲ್ಲಿ, ಪರೋಪಕಾರದಲ್ಲಿ, ಪ್ರಜಾಪಾಲನೆಯಲ್ಲಿ, ಧರ್ಮ ಸಾಹಿತ್ಯ ಹಾಗೂ ಸಂಸ್ಕೃತಿಗಳ ಪೋಷಣೆಯಲ್ಲಿ ಹಾಗೂ ಪರಮರ್ಧವನ್ನು ಸಮನ್ವಯವಾಗಿ ಕಂಡಂತಹ ಕನ್ನಡದ ಸಾಮ್ರಾಟರಿಗೆ ಸರಿ ಸಮನಾಗಿ ಸಿಗುವುದು ಅಪರೂಪ.
ಇತಿಹಾಸ ಅಧ್ಯಯನದಿಂದ ತಿಳಿದು ಬರುವ ಹಾಗೆ, ಭರತಖಂಡವನ್ನು ಬೆಳಗಿದಂತಹ ಕನ್ನಡನಾಡು ಕಾಲದ ಕ್ರೂರ ಚಕ್ರಕ್ಕೆ ಸಿಲುಕಿ ಸಂಸ್ಥಾನಗಳಾಗಿ ಹಂಚಿ ಹೋದದ್ದು ಐತಿಹಾಸಿಕ ದುರಂತವೆಂದು ಹೇಳಬಹುದು. ಇದರಿಂದಾಗಿ ಕನ್ನಡಿಗರ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಕೈಗಾರಿಕೆಗಳ ಪ್ರಗತಿಯು ಕುಂಠಿತಗೊಂಡು ಕನ್ನಡ ನಾಡಿನಲ್ಲಿಯೂ ಅವರು ಅಲ್ಪಸಂಖ್ಯಾತರಾಗಿ ಬಾಳಬೇಕಾಯಿತು. ಅಂದು ಅವರ ಕೂಗನ್ನು ಕೇಳುವವರೇ ಇಲ್ಲದಾಯಿತು. ಈ ಹಂತದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟವು ಕರ್ನಾಟಕದ ಏಕೀಕರಣ ಚಳವಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರೇರಣೆ ನೀಡಿತು. ಕರ್ನಾಟಕದ ಏಕೀಕರಣ ಚಳವಳಿಯೂ ಸಹ ಸ್ವಾತಂತ್ರ್ಯ ಸಂಗ್ರಾಮದ ಒಂದು ಅಂಗವಾಗಿಯೇ ಬೆಳೆಯಲಾರಂಭಿಸಿತು.
ಕನ್ನಡದ ಪ್ರಥಮ ಗ್ರಂಥವೆಂದು ಕರೆಸಿಕೊಳ್ಳುವ ಕವಿರಾಜಮಾರ್ಗವು(ಸು.850) ಕರ್ನಾಟಕದ ಮೇರೆಯನ್ನು ಕುರಿತು,1
ಕಾವೇರಿಯಿಂದಮಾ ಗೋ |
ದಾವರಿವರಮಿರ್ದ ನಾಡದಾ ಕನ್ನಡದೊಳ್ |
ಭಾವಿಸಿದ ಜನಪದಂ ವಸು |
ಧಾವಲಯವಿಲೀನವಿಶದವಿಷಯ ವಿಶೇಷಂ | (1-36)2
ಅದರೊಳಗಂ ಕಿಸುವೊಳಲಾ |
ವಿದಿತ ಮಹಾಕೊಪಣನಗರದಾ ಪುಲಿಗೆರೆಯಾ |
ಸದಭಿಸ್ತುತಮಪ್ಪೊಂಕುಂ |
ದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್ | (1.32)3
ಎಂದು ಗುರುತಿಸಿದೆ. ಅಲ್ಲಿಂದ ಇಲ್ಲಿಯವರೆಗೆ ನಮ್ಮ ರಾಜ್ಯವನ್ನು ಹತ್ತಾರು ರಾಜವಂಶ ದವರು ಹಾಗೂ ವಿದೇಶಿಯರು ಆಳ್ವಿಕೆ ನಡೆಸಿದರು. ವಿದೇಶಿಯರಿಂದ ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯ ದೊರಕಿ ಐದು ದಶಕಗಳೇ ಕಳೆದವು. ಕರ್ನಾಟಕ ರಾಜ್ಯ ಅಸ್ತಿತ್ವದಲ್ಲಿ ಬಂದ ಸಂಭ್ರಮದ ನೆನಪಿನಿಂದ ನಾವು ಪ್ರತಿ ವರ್ಷವೂ ಆಚರಿಸಿಕೊಂಡು ಬರುತ್ತಿರುವ ಕನ್ನಡ ರಾಜ್ಯೋತ್ಸವಕ್ಕೆ ಅರವತ್ತು ವಸಂತಗಳು ಸಂಧಿಸುತ್ತಿದ್ದರೂ(ಸುವರ್ಣ ಕರ್ನಾಟಕ ದಿನಾಚರಣೆ ಯನ್ನು ಆಚರಿಸುತ್ತಿರುವ ಇಂದಿನ ದಿನದಲ್ಲಿಯೂ) ಕರ್ನಾಟಕದ ಭೌಗೋಳಿಕ ಗಡಿಗಳು ಮಾತ್ರ ಚರ್ಚೆಗೆ, ವಿವಾದಕ್ಕೆ ಇನ್ನೂ ಕಾರಣವಾಗುತ್ತಿರುವುದು ವಿಪರ್ಯಾಸವೇ ಸರಿ. ಉತ್ತಮ ಸಂಸ್ಕೃತಿಗೆ, ಸಂಸ್ಕಾರಕ್ಕೆ ಕಾರಣವಾಗಬೇಕಾದ ಭಾಷೆಗೆ ಎಲ್ಲಿಯೂ ಯಾವ ಬಗೆಯ ಲಕ್ಷ್ಮಣ ರೇಖೆಯೂ ಇರುವುದು ಕಂಡುಬರುವುದಿಲ್ಲ. ಇತಿಹಾಸದಲ್ಲಿ ನಾವೆಲ್ಲ ತಿಳಿದಿರುವ ಹಾಗೆ ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿದ್ದ ಕನ್ನಡದ ನೆಲಕ್ಕೆ ಈಗಿನ ಭೌಗೋಳಿಕ ಗಡಿಗಳು ಸಂಪೂರ್ಣವಾಗಿ ಬೇರೆಯೇ. ಇದಕ್ಕೆ ಮೂಲಕಾರಣ ಇತಿಹಾಸ. ಆದರೆ ಕನ್ನಡದ ಪ್ರಾದೇಶಿಕ ಪರಿಸರದಲ್ಲಿ ಮೂಡಿಬಂದ ಸಂಸ್ಕೃತಿಯ ಬೆಳಕನ್ನು ಹಾಗೂ ಭೌಗೋಳಿಕ ಗಡಿಗಳನ್ನು ಸ್ವಲ್ಪವೂ ಗಮನದಲ್ಲಿಟ್ಟುಕೊಳ್ಳದೆ ಗುರುತಿಸುವುದು ಸಾಧ್ಯವೆನಿಸು ತ್ತದೆ.
1947ರಲ್ಲಿ ದೇಶವು ಸ್ವತಂತ್ರವಾದ ನಂತರ ದೇಶದಲ್ಲಿ, ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಭಾಷಾವಾರು ಪ್ರಾಂತ ರಚನೆಗೆ ಹೆಚ್ಚಿನ ಬೇಡಿಕೆ ಉಂಟಾಯಿತು. ಇದರ ಅಂಗವಾಗಿ ಚಳವಳಿಗಳು ನಡೆಯಲಾರಂಭಿಸಿದವು. ಪ್ರಮುಖವಾಗಿ ಆಂಧ್ರ ಪ್ರದೇಶದಲ್ಲಿ ಶ್ರೀ ಪೊಟ್ಟಿ ಶ್ರೀರಾಮುಲು ಅವರ ಮುಂದಾಳತ್ವದಲ್ಲಿ ಬೃಹತ್ ಪ್ರಮಾಣದ ಪ್ರತ್ಯೇಕ ರಾಜ್ಯ ಚಳವಳಿ ನಡೆಯಲಾರಂಭಿಸಿತು. ಚಳವಳಿ ಯಾವ ಸ್ವರೂಪ ಪಡೆಯಿತೆಂದರೆ ಪೊಟ್ಟಿ ಶ್ರೀರಾಮುಲು ಅವರು ಉಪವಾಸ ಕೈಗೊಂಡು ಉಪವಾಸದ ಸ್ಥಳದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳ ಮುಂದೆಯೇ ಮಡಿದರು. ಇಂತಹ ಸಂದರ್ಭದಲ್ಲಿ ನೆಹರು ನೇತೃತ್ವದ ಕೇಂದ್ರ ಸರ್ಕಾರವು ಭಾಷಾವಾರು ಪ್ರಾಂತ್ಯ ರಚನೆಗೆ ಆದ್ಯತೆ ನೀಡಿ ಮೂರು ಸದಸ್ಯರೊಳ ಗೊಂಡ ಒಂದು ಗಡಿ ರಚನಾ ಆಯೋಗವನ್ನು ರಚಿಸಿತು. ನಿಯೋಗದ ಜವಾಬ್ದಾರಿಯನ್ನು ಅಂದು ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದ ಹೆಚ್.ವಿ.ಪಾಟಸ್ಕರ್ ಅವರು ವಹಿಸಿಕೊಂಡರು. ಇವರ ಜೊತೆಗೆ ಹೃದಯನಾಥ ಕುಂಜ್ರು ಮತ್ತು ಸರದಾರ ಫಣಿಕ್ಕರ್ ಅವರು ಸದಸ್ಯರಾಗಿದ್ದರು. ಈ ಸಮಯದಲ್ಲಿ ನಿಯೋಗದ ಮುಂದೆ ಮರಾಠಿ, ತೆಲುಗು, ಕನ್ನಡ, ತಮಿಳು, ಮಲಯಾಳಿ ಭಾಷಿಕರು ತಮ್ಮ ತಮ್ಮ ಬೇಡಿಕೆಯನ್ನು ಮುಂದಿಟ್ಟು ಹೋರಾಡಿ ಕೊನೆಗೆ ತಮ್ಮದೇ ಆದ ಒಂದು ಒಪ್ಪಂದಕ್ಕೆ ಬಂದರು. ಇದರ ಅಂಗವಾಗಿ 1953ರಲ್ಲಿ ಭಾರತದಲ್ಲಿಯೇ ಪ್ರಥಮವಾಗಿ ಆಂಧ್ರಪ್ರದೇಶವು ಭಾಷೆಯ ಆಧಾರದ ಮೇಲೆ ಪ್ರತ್ಯೇಕ ರಾಜ್ಯವಾಗಿ ರೂಪಗೊಂಡಿತು. ಇದಾದ ನಂತರ 1956ರಲ್ಲಿ ರಾಷ್ಟ್ರೀಯ ಪುನಾರಚನಾ ಆಯೋಗದ ಅನ್ವಯದಂತೆ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳ ಉದಯವಾಯಿತು. ಇಷ್ಟಕ್ಕೇ ಈ ಸಮಸ್ಯೆ ಕೊನೆಗೊಂಡಿತೆಂದು ಹೇಳಲು ಸಾಧ್ಯವಾಗುವುದಿಲ್ಲ. ಆಂಧ್ರ, ತಮಿಳು ನಾಡು, ಕೇರಳ, ಮಹಾರಾಷ್ಟ್ರ ರಾಜ್ಯಗಳೊಂದಿಗೆ ಕರ್ನಾಟಕದ ಗಡಿ ಪ್ರದೇಶಗಳ ಸಮಸ್ಯೆಯು ಹೆಚ್ಚಾಯಿತು, ಮುಷ್ಕರ, ಹೋರಾಟ, ಚಳವಳಿಗಳು ನಿರಂತರವಾಗಿ ನಡೆಯಲಾರಂಭಿಸಿದವು. ಕರ್ನಾಟಕ ಸರ್ಕಾರವು ಇದರ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಮನವಿ ರೂಪದಲ್ಲಿ ಸಲ್ಲಿಸಿತು.
ಫಜಲ್ ಆಲಿ ಆಯೋಗ
 ರಾಷ್ಟ್ರೀಯ ಪುನಾರಚನಾ ಆಯೋಗದ ನಿರ್ಣಯವು ಉಭಯ ರಾಜ್ಯಗಳಿಗೆ ಹೆಚ್ಚಿನ ಸಮಸ್ಯೆಯನ್ನು ತಂದೊಡ್ಡಿತು. ಅದರಲ್ಲಿಯೂ ಕನ್ನಡಿಗರ ಒತ್ತಾಯಕ್ಕೆ ಮನ್ನಣೆ ನೀಡಿ ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಫಜಲ್ ಆಲಿಯವರ ನೇತೃತ್ವದಲ್ಲಿ ಮತ್ತೊಂದು ಆಯೋಗವನ್ನು ನೇಮಿಸಿತು. ಇದರಿಂದಾಗಿ ಕನ್ನಡಿಗರಿಗೆ ಹಾರಿಹೋದ ಪ್ರಾಣ ಮರಳಿ ಬಂದಂತಾಯಿತೆನ್ನಬಹುದು. ಫಜಲ್ ಆಲಿ ಆಯೋಗವು ಸುಮಾರು 38 ಸಾವಿರ ಮೈಲು ಸಂಚರಿಸಿ 104 ಸ್ಥಳಗಳಲ್ಲಿ ವಿಚಾರಣೆ ನಡೆಸಿ, ಸುಮಾರು ಒಂಬತ್ತು ಸಾವಿರ ಗಡಿನಾಡಿನ ಜನರನ್ನು ಸಂದರ್ಶಿಸಿತು. ಈ ಸಮಯದಲ್ಲಿ ಕರ್ನಾಟಕದ ರಾಜಕಾರಣಿಗಳು, ಸಾಹಿತಿಗಳು, ಸ್ವಾಮೀಜಿಗಳು, ವ್ಯಾಪಾರಿಗಳು, ಕಾರ್ಮಿಕರು ಹಾಗೂ ಅಲ್ಪಸಂಖ್ಯಾತ ಮುಖಂಡರುಗಳು ಸಂಪೂರ್ಣ ಏಕೀಕೃತ ಕರ್ನಾಟಕ ರಾಜ್ಯದ ನಿರ್ಮಾಣವನ್ನು ಬೆಂಬಲಿಸಿ ನಿಂತರು.4 ಮೈಸೂರು ಸಂಸ್ಥಾನದ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ಕರ್ನಾಟಕ ಏಕೀಕರಣಕ್ಕೆ ತಮ್ಮ ಸಂಪೂರ್ಣ ಒಪ್ಪಿಗೆಯನ್ನು ನೀಡಿದರು. ಈ ಸಮಯದಲ್ಲಿ ಮೈಸೂರು ಸಂಸ್ಥಾನದಲ್ಲಿ ಕೆಲವರು ಕರ್ನಾಟಕದ ಏಕೀಕರಣವನ್ನು ವಿರೋಧಿಸಿದರು.5 ಆದೋನಿ, ಆಲೂರು, ಸೊಲ್ಲಾಪುರ, ಜತ್ತಿ, ಕಾಸರಗೋಡು, ಮಡಕಶಿರ, ಹೊಸೂರುಗಳನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಈ ಭಾಗದ ಜನತೆ, ರಾಜಕಾರಣಿಗಳು, ಸಾಹಿತಿಗಳು, ವಿದ್ಯಾರ್ಥಿಗಳು, ವ್ಯಾಪಾರಸ್ಥರೂ ಮತ್ತು ಉದ್ಯಮಿಗಳು ಫಜಲ್ ಆಲಿ ಆಯೋಗವನ್ನು ನೇರವಾಗಿ ಕಂಡು ಒತ್ತಾಯಿಸಿದರು. ಇಂಥ ಸಮಯದಲ್ಲಿಯೇ ಉತ್ತರ ಕರ್ನಾಟಕದಲ್ಲಿ ಕರ್ನಾಟಕ ವಿದ್ಯಾರ್ಥಿ ಪರಿಷತ್ ಜನ್ಮ ತಾಳಿದ್ದು.
ಕರ್ನಾಟಕ ವಿದ್ಯಾರ್ಥಿ ಪರಿಷತ್ತಿನ ಐತಿಹಾಸಿಕ ಸಭೆ
 ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದಂತಹ ಪರಿಷತ್ತು, ಏಕೀಕರಣದ ನಂತರವೂ ನೆರೆಯ ರಾಜ್ಯಗಳಲ್ಲಿಯೇ ಉಳಿದಂತಹ ಅಚ್ಚಕನ್ನಡದ ಪ್ರದೇಶ ಗಳನ್ನು ಮರಳಿ ಪಡೆಯಲು ಮುಂದಾಯಿತು. ಮುಂದಿನ ಕಾರ್ಯದ ಬಗ್ಗೆ ಚರ್ಚಿಸಲು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳನ್ನು ಸಂಘಟಿಸಿ ಬೃಹತ್ಪ್ರದರ್ಶನವನ್ನು ಏರ್ಪಡಿಸಿತು. ಕರ್ನಾಟಕದ ಏಕೀಕರಣಕ್ಕಾಗಿ ಜೈಲುವಾಸವನ್ನು ಅನುಭವಿಸಿದಂತಹ ಶ್ರೀ ಅನ್ನದಾನಯ್ಯ ಪುರಾಣಿಕರ ಪ್ರಯತ್ನದ ಫಲವಾಗಿ ಹೈದ್ರಾಬಾದಿನಲ್ಲಿ ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತಿನ ಪ್ರಥಮ ಅಧಿವೇಶನವು 1956ನೆಯ ಫೆಬ್ರವರಿ 7ನೆಯ ತಾರೀಕು ನಡೆಯಿತು. ಈ ಐತಿಹಾಸಿಕ ಅಧಿವೇಶನವು ನಿಜಾಮ ಕಾಲೇಜಿನಲ್ಲಿ ಡಾ.ಮೇಲ್ಕೋಟಿಯವರ ಅಧ್ಯಕ್ಷತೆಯಲ್ಲಿ ಸೇರಿತು. ಕೇಂದ್ರ ಸಚಿವರಾಗಿದ್ದಂತಹ ಕೆ.ಸಿ.ರೆಡ್ಡಿಯವರು ಈ ಅಧಿವೇಶನ ವನ್ನು ಉದ್ಘಾಟಿಸಿದರು. ಕರ್ನಾಟಕದ ಎಲ್ಲಾ ಭಾಗಗಳಿಂದ ವಿದ್ಯಾರ್ಥಿ ಪ್ರತಿನಿಧಿಗಳು ಈ ಮಹತ್ವದ ಅಧಿವೇಶನಕ್ಕೆ ಬಂದಿದ್ದರು. ಅಖಿಲ ಕರ್ನಾಟಕ ವಿದ್ಯಾರ್ಥಿ ಪ್ರತಿನಿಧಿಗಳನ್ನು ಒಂದು ವೇದಿಕೆಯ ಮೇಲೆ ಸೇರಿಸಲು ಸ್ವಾಗತಾಧ್ಯಕ್ಷರಾದ ಅನ್ನದಾನಯ್ಯ ಪುರಾಣಿಕರು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಕರೆತಂದಿದ್ದರು. ಇವರಿಗೆ ಕಾರ್ಯದರ್ಶಿಗಳಾಗಿದ್ದಂತಹ ದೇವೇಂದ್ರ ಕುಮಾರ ಹಕಾರಿಯವರು ಹೆಚ್ಚಿನ ಸಹಕಾರ ನೀಡಿದರು. ರಾಷ್ಟ್ರಕವಿ ಕುವೆಂಪು ಅವರು ಈ ಮಹತ್ವದ ಅಧಿವೆೀಶನಕ್ಕೆ ವಿಶೇಷ ಸಂದೇಶವೊಂದನ್ನು ಕಳುಹಿಸಿದ್ದರು. ಕರ್ನಾಟಕದ ಚರಿತ್ರೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಪ್ರತಿನಿಧಿಗಳು ಮೊಟ್ಟಮೊದಲ ಬಾರಿಗೆ ಒಂದೆಡೆಗೆ ಸೇರಿ ಅಖಂಡ ಕರ್ನಾಟಕದ ನಿರ್ಮಾಣದ ಬಗ್ಗೆ ಚರ್ಚಿಸಿದರು. ತರುವಾಯ ಕರ್ನಾಟಕ ವಿದ್ಯಾರ್ಥಿ ಪ್ರತಿನಿಧಿಗಳು ಅಖಂಡ ಕರ್ನಾಟಕವನ್ನು ಕೂಡಲೇ ರಚಿಸಬೇಕೆಂದು ಕೇಂದ್ರ ಸರ್ಕಾರವನ್ನು ಒಗ್ಗಟ್ಟಿನಿಂದ ಒತ್ತಾಯಪಡಿಸಿದರು. ಈ ಅಧಿವೇಶನವು ಯಶಸ್ವಿ ಯಾಗಲು ಮೈಸೂರು ರಾಜ್ಯದ ಮಂತ್ರಿಗಳ ಪಾತ್ರ ಮುಖ್ಯವಾಗಿತ್ತು. ಮಾನ್ಯರಾದ ಅಣ್ಣಾ ರಾವ್ ಗಣಮುಖಿ, ಡಾ.ಮೇಲ್ಕೋಟಿ, ವೈ.ವಿರೂಪಾಕ್ಷಪ್ಪ, ಪ್ರೊ.ಭೀಮಸೇನರಾವ್, ಮಾನ್ವಿ ನರಸಿಂಗರಾವ್, ಸಿದ್ಧಯ್ಯ ಪುರಾಣಿಕ ಮೊದಲಾದವರು ಈ ಹಂತದಲ್ಲಿ ತುಂಬಾ ನೆರವಾದರು. ಈ ರೀತಿಯ ಚರಿತ್ರಾರ್ಹವಾದಂತಹ ವಿದ್ಯಾರ್ಥಿ ಅಧಿವೇಶನದಿಂದ ಕರ್ನಾಟಕದ ಎಲ್ಲಾ ಪ್ರದೇಶಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿತು. ಕರ್ನಾಟಕ ಏಕೀಕರಣದ ಜೊತೆಗೆ ಬಳ್ಳಾರಿಯು ಕರ್ನಾಟಕದಲ್ಲಿ ಉಳಿಯಲು ಅನುವಾಯಿತು.
ಏಕೀಕೃತ ಕರ್ನಾಟಕದಲ್ಲಿ ಬಳ್ಳಾರಿ
 ಆಂಧ್ರ ಪ್ರಾಂತ್ಯ ರಚನೆ ಮಾಡಲು ನಿರ್ಧರಿಸಿದ ಕೇಂದ್ರ ಸರ್ಕಾರ, ಬಳ್ಳಾರಿ ಜಿಲ್ಲೆಯ ಬಗೆಗೆ ಖಚಿತವಾದ ನಿರ್ಧಾರ ಮಾಡುವುದು ಅನಿವಾರ್ಯವಾಗಿತ್ತು. 1921ರಲ್ಲಿ ತಾತ್ಕಾಲಿಕವೆಂದು ಎನ್.ಸಿ.ಕೇಳ್ಕರ್ರ ಶಿಫಾರಸ್ಸಿನ ಮೇಲೆ ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಸೇರಿದ್ದ ಬಳ್ಳಾರಿ ಜಿಲ್ಲೆಯ ಆದವಾನಿ, ಆಲೂರು, ರಾಯದುರ್ಗ, ತಾಲ್ಲೂಕುಗಳು ಎಂದೆಂದಿಗೂ ತಮ್ಮದೇ ಆಗಿ ಉಳಿಯುವುದೆಂಬ ಕನಸು ತೆಲುಗರದಾಗಿತ್ತು. ಅದಕ್ಕಾಗಿ ಅವರು ಪ್ರಬಲ ಹೋರಾಟ ನಡೆಸಲೂ ಸಿದ್ಧರಾಗಿದ್ದರು. 1921ರಲ್ಲಿ ತಿಲಕರು ಕಾಲವಾದ ಮರುವರ್ಷ, ಭಾಷಾವಾರು ಪ್ರಾಂತೀಯ ಕಾಂಗ್ರೆಸ್ ಸಮಿತಿಗಳನ್ನು ರಚಿಸಲು ತೀರ್ಮಾನಿಸಿದಾಗ ಬಳ್ಳಾರಿ ಯಾವ ಪಿ.ಸಿ.ಸಿ.ಗೆ ಸೇರಬೇಕೆಂಬ ಪ್ರಶ್ನೆ ಉಂಟಾಯಿತು. ಆಂಧ್ರರು ಬಳ್ಳಾರಿ ಜಿಲ್ಲೆ ಆಂಧ್ರ ಪ್ರ.ಕಾ.ಸಮಿತಿಯ ವ್ಯಾಪ್ತಿಯಲ್ಲಿ ಬರಬೇಕೆಂದು ವಾದಿಸಿದರು. ಕನ್ನಡಿಗರು ಇಡೀ ಜಿಲ್ಲೆ ಕೆ.ಪಿ.ಸಿ.ಸಿ.ವ್ಯಾಪ್ತಿಯಲ್ಲಿ ಬರಬೇಕೆಂದು ಹಠ ಹಿಡಿದರು. ಆಗ ಎ.ಐ.ಸಿ.ಸಿ.ಅಧ್ಯಕ್ಷರು ಎನ್.ಸಿ.ಕೇಳ್ಕರ್ರನ್ನು ಈ ವಿವಾದದ ಇತ್ಯರ್ಥ ಮಾಡಲು ಕೋರಿದರು. ಅವರು ಜಿಲ್ಲೆಯ ಭಾಷಾವಾರು ಜನಸಂಖ್ಯೆಯನ್ನು ಪರಿಶೀಲಿಸಿ, ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕನ್ನು ಒಳಗೊಂಡು ಪಶ್ಚಿಮದ ತಾಲೂಕುಗಳು ಸಿರಗುಪ್ಪ, ಹೊಸಪೇಟೆ, ಹಡಗಲಿ, ಹರಪನಹಳ್ಳಿ, ಕೂಡ್ಲಿಗಿ ಕೆ.ಪಿ.ಸಿ.ಸಿ. ವ್ಯಾಪ್ತಿಯಲ್ಲಿರಬೇಕೆಂದು, ಪೂರ್ವದ ಮೂರು ತಾಲೂಕುಗಳು ಆದವಾನಿ, ಆಲೂರು, ರಾಯದುರ್ಗ ಎ.ಪಿ.ಸಿ.ಸಿ. ವ್ಯಾಪ್ತಿಯಲ್ಲಿರಬೇಕೆಂದು ತೀರ್ಪು ಕೊಟ್ಟರು. ಜೆ.ವಿ.ಪಿ.ಸಮಿತಿಯು ಬಳ್ಳಾರಿ ಜಿಲ್ಲೆಯು ಕರ್ನಾಟಕಕ್ಕೆ ಸೇರುವುದರ ಬಗೆಗೆ ಒಲವು ತೋರಿತ್ತು. 1952ರ ಚುನಾವಣೆಯಲ್ಲಿ ಕನ್ನಡ ಪರ ಅಭ್ಯರ್ಥಿಗಳು ಸೋತು ತೆಲುಗು ಪರ ಅಭ್ಯರ್ಥಿ ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಆರಿಸಿ ಬಂದಿದ್ದರು. ಜನಗಣತಿಯ ಕಾಲದಲ್ಲಿ ನಡೆಯಿತೆನ್ನಲಾದ ಅಪ್ರಾಮಾಣಿಕ ಚಟುವಟಿಕೆಗಳು ತೆಲುಗರ ಪರವಾಗಿದ್ದವು. ಆದರೆ ಬಳ್ಳಾರಿ ಜಿಲ್ಲೆಯು ತೆಲುಗರ ಮತ್ತು ಕನ್ನಡಿಗರ ಪಣದ ವಸ್ತುವಾಗಿತ್ತು. ಆಂಧ್ರ ಪ್ರಾಂತ್ಯ ರಚನೆಯ ಬಗ್ಗೆ ವರದಿ ಸಲ್ಲಿಸಲು ಕೇಂದ್ರ ಸರ್ಕಾರ ರಾಜಾಸ್ಥಾನದ ಶ್ರೇಷ್ಠ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ವಾಂಛೂ ಅವರನ್ನು ನೇಮಿಸಿತು. 5.1.1953ರಂದು ನೇಮಕಗೊಂಡ ಆಯೋಗವು 31.1.1953 ರೊಳಗೆ, ಅಂದರೆ ಕೇವಲ 29 ದಿನಗಳಲ್ಲಿ ವರದಿ ನೀಡಬೇಕಾಗಿತ್ತು. ಕಾರ್ಯ ಮಾತ್ರ ಅಧಿಕವಾಗಿತ್ತು.
1949ರಲ್ಲಿ ಮದ್ರಾಸ್ ಸರಕಾರವು ನೇಮಿಸಿದ್ದ ಆಂಧ್ರ ವಿಭಜನಾ ಸಮಿತಿಯ ಸದಸ್ಯರಲ್ಲಿ ಕನ್ನಡಿಗರು ಯಾರೂ ಇರಲಿಲ್ಲ. ಆ ಸಮಿತಿಯು ನೀಡಿದ್ದ ವರದಿಯ ಪ್ರಕಾರ ಕೇಳ್ಕರ್ರ ವರದಿಯನ್ವಯದ ಆಲೂರು, ಆದವಾನಿ ಮತ್ತು ರಾಯದುರ್ಗ ತಾಲ್ಲೂಕುಗಳು, ಇಡೀ ಚಿತ್ತೂರು ಮತ್ತು ಅನಂತಪುರ ಜಿಲ್ಲೆಗಳನ್ನು ಸೇರಿಸಿ ಆಂಧ್ರ ಪ್ರಾಂತದ ರಚನೆಯಾಗಬೇಕೆಂದು ಶಿಫಾರಸ್ಸು ಮಾಡಿತ್ತು. ಬಳ್ಳಾರಿ ತಾಲ್ಲೂಕು ಆಂಧ್ರ ಪ್ರಾಂತಕ್ಕೆ ಸೇರಬೇಕೆಂದು ಅದು ಪ್ರಸ್ತಾಪಿಸಿರಲಿಲ್ಲ. ವಾಂಛೂ ಅವರನ್ನು ಅನೇಕ ಸಂಘ, ಸಂಸ್ಥೆಗಳವರು, ರಾಜಕೀಯ ಪಕ್ಷಗಳವರು ಭೇಟಿ ಮಾಡಿ ಮನವಿಗಳನ್ನು ಸಲ್ಲಿಸಿದರು. ವಾಂಛೂ ಬಳ್ಳಾರಿ ಜಿಲ್ಲೆಯು ಆಂಧ್ರದೊಡನೆ ಸೇರಲು ಹಲವು ತೊಂದರೆಗಳಿರುವುದನ್ನು ಗಮನಿಸಿದರು. ಆಂಧ್ರ ಪರ ವಾದಿಸಿದವರು ಬಳ್ಳಾರಿ ಜಿಲ್ಲೆಯು ಇಡಿಯಾಗಿ ಆಂಧ್ರಕ್ಕೆ ಸೇರಬೇಕೆಂದು ಒತ್ತಾಯಿಸಿದರು. ವಿಜಯನಗರ ಅರಸರ ಕಾಲದಿಂದಲೂ ಅದು ತೆಲುಗರಿಗೆ ಸೇರಿದ್ದು ಎಂಬುದು ಅವರ ನಂಬಿಕೆಯಾಗಿತ್ತು. ಆಲೂರು, ಆದವಾನಿ ಮತ್ತು ರಾಯದುರ್ಗಗಳಲ್ಲದೆ ಬಳ್ಳಾರಿ ನಗರ ಸೇರಿದಂತೆ ಬಳ್ಳಾರಿ ತಾಲ್ಲೂಕು ಸಹ ತೆಲುಗು ಭಾಷಿಕರೇ ಬಹುಸಂಖ್ಯಾತರಾಗಿರುವ ಪ್ರದೇಶವಾದ್ದರಿಂದ ಬಳ್ಳಾರಿ ಜಿಲ್ಲೆಯು ಇಡಿಯಾಗಿ ಆಂಧ್ರಕ್ಕೆ ಸೇರಬೇಕೆಂಬ ಅವರ ವಾದವನ್ನು ಕನ್ನಡಿಗರು ಎಂದೂ ಒಪ್ಪಲು ಸಾಧ್ಯವಿರಲಿಲ್ಲ. ಇತಿಹಾಸ ಕಾಲದಿಂದ ಈವರೆಗೆ ನಿರಂತರವಾಗಿ ಬಳ್ಳಾರಿ ಜಿಲ್ಲೆಯು ಕನ್ನಡಿಗರದೇ ಎಂದು ಕನ್ನಡಿಗರು ಸಾಬೀತು ಮಾಡಲು ಪ್ರಯತ್ನಿಸಿದರು.
ವಾಂಛೂ ಅನೇಕರ ವಾದ, ಪ್ರತಿವಾದಗಳನ್ನು ಕೇಳಿ ಮನವಿಗಳನ್ನು ಅಭ್ಯಸಿಸಿ, ಬಳ್ಳಾರಿ ಜಿಲ್ಲೆಯಲ್ಲಿನ ವಾಸ್ತವ ಪರಿಸ್ಥಿತಿಯನ್ನು ಖುದ್ದು ನೋಡಿ ಸಿದ್ಧಪಡಿಸಿದ ವರದಿಯನ್ನು 7.2.1953ರಂದು ಸರ್ಕಾರಕ್ಕೆ ಸಲ್ಲಿಸಿದರು. ವಾಂಛೂ ಕರ್ನಾಟಕ ಏಕೀಕರಣ ಸಮಿತಿಯು ಸದಸ್ಯರ ನಿಯೋಗಕ್ಕೆ ಸಂದರ್ಶನದ ಅವಕಾಶ ನಿರಾಕರಿಸಿದರು. ಗದಗಿನಿಂದ ಬಂದ ಅವಕಾಶ ಬೇಡಿಕೆಯ ಪತ್ರವನ್ನು ಗಮನಿಸಿದ ವಾಂಛೂ ಗದಗ ಇರುವುದು ಬೊಂಬಾಯಿ ಪ್ರಾಂತ್ಯದಲ್ಲಿ ಅಲ್ಲಿನ ಜನರಿಗೂ ಆಂಧ್ರ ಸಮಸ್ಯೆಗೂ ಸಂಬಂಧವಿಲ್ಲ ಎಂಬ ಕಾರಣ ನೀಡಿದರು. ಆದರೆ ಕೆ.ಪಿ.ಸಿ.ಸಿ.ಅಧ್ಯಕ್ಷ ನಿಜಲಿಂಗಪ್ಪನವರ ನೇತೃತ್ವದ ನಿಯೋಗವನ್ನು ಬೇಟಿ ಮಾಡಿದರೆಂದು ತಿಳಿದಿದೆ(ಜೀವನ, ಮಾರ್ಚ್ 1953).ೊಅವರ ವರದಿಯ ಪ್ರಕಾರ ಹೈದರಾಬಾದ್ ಮತ್ತು ಮದ್ರಾಸ್ ರಾಜ್ಯಗಳಲ್ಲಿ ಮಾತ್ರ ಸೇರಿರುವ ತೆಲುಗು ಅಧಿಕ ಜನರ ಮಾತೃಭಾಷೆಯಾಗಿರುವ 11 ಜಿಲ್ಲೆಗಳನ್ನು ಮಾತ್ರ ಕೂಡಿಸಿ ಆಂಧ್ರ ಪ್ರಾಂತ ರಚನೆ ಮಾಡಬಹುದೆಂದೂ, ಬಳ್ಳಾರಿ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಆಂಧ್ರಕ್ಕೆ ಸೇರಿಸಬಹುದಾದರೂ ಅಲ್ಲಿಯೂ ಕನ್ನಡಿಗರ ಸಂಖ್ಯೆ ತೀರಾ ಗೌಣವಾಗಿಲ್ಲ ಎಂದೂ ತಿಳಿಸಿದರು. ಹೊಸದಾಗಿ ಕಾಣಿಸಿಕೊಂಡಿದ್ದ ಬಳ್ಳಾರಿ ತಾಲ್ಲೂಕಿನ ಸಮಸ್ಯೆಯ ಬಗೆಗೆ ಅವರು ಯಾವುದೇ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯ ವಾಗಲಿಲ್ಲ. ಹೈದರಾಬಾದ್ ಮತ್ತು ಮದ್ರಾಸ್ ಸರ್ಕಾರಗಳು ಸಂಯುಕ್ತವಾಗಿ ಕೈಗೊಂಡಿದ್ದ ತುಂಗಭದ್ರಾ ಅಣೆಕಟ್ಟಿನ ಮುಗಿಯಬೇಕಾದ ಕೆಲಸ, ಅದರ ಬಳಕೆಯ ಪಾಲು ಇತ್ಯಾದಿಗಳ ಬಗೆಗೂ ವಾಂಛೂ ಅವರು ಸ್ಪಷ್ಟವಾದ ತೀರ್ಪು ಕೊಡಲಾಗಲಿಲ್ಲ. ಬಳ್ಳಾರಿ ಜಿಲ್ಲೆಯನ್ನು ಇಡಿಯಾಗಿ ಕರ್ನಾಟಕ ಪ್ರಾಂತ ನಿರ್ಮಾಣವಾಗುವವರೆಗೆ ಆಂಧ್ರದೊಡನೆಯೇ ಸೇರಿಸ ಬಹುದೆಂದು ತೀರ್ಮಾನಿಸಿದರೆ ಕನ್ನಡಿಗರು ಪ್ರಬಲವಾಗಿ ವಿರೋಧಿಸುವವರಿದ್ದರು. ಇನ್ನೂ ಕರ್ನಾಟಕ ಪ್ರಾಂತ್ಯ ನಿರ್ಮಾಣದ ನಿರ್ಧಾರವೇ ಆಗಿಲ್ಲದಿದ್ದುದರಿಂದ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ, ಮೂರು ತಾಲ್ಲೂಕುಗಳನ್ನು ಆಂಧ್ರಕ್ಕೆ ನೀಡಿದರೆ ಉಳಿದ ತಾಲ್ಲೂಕುಗಳ ಭವಿಷ್ಯವು ಅತಂತ್ರವಾಗುತ್ತಿತ್ತು. ಅವುಗಳಲ್ಲಿ ಆರು ತಾಲ್ಲೂಕುಗಳು ಸ್ಪಷ್ಟವಾಗಿ ಕನ್ನಡದವೇ ಆಗಿದ್ದುದರಿಂದ ಮೈಸೂರಿನ ಜೊತೆ ಸೇರಿಸುವುದು ಕಷ್ಟವಾಗಿರಲಿಲ್ಲ. ಆದರೆ ಬಳ್ಳಾರಿ ನಗರ ಮತ್ತು ತಾಲ್ಲೂಕುಗಳು ಹೊಸ ಸಮಸ್ಯೆಯನ್ನು ಸೃಷ್ಟಿಸಿದ್ದವು. ವಾಂಛೂ ಅವರು ಹೊಸ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಲಿಲ್ಲ.
ವಾಂಛೂ ಅವರ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ 25.3.1953ರಂದು ಪ್ರಕಟಿಸಿದ ನಿರ್ಧಾರ ಕೆಳಕಂಡಂತಿತ್ತು.
1. ಬಳ್ಳಾರಿ ಜಿಲ್ಲೆಯನ್ನು ಆಂಧ್ರ ಅಥವಾ ಕರ್ನಾಟಕಕ್ಕೆ ಸೇರಿಸುವ ಸಂದರ್ಭದಲ್ಲಿ ಅದನ್ನು ಒಂದೇ ಘಟಕವೆಂದು ಪರಿಗಣಿಸಲು ಸಾಧ್ಯವಿಲ್ಲ.
2. ಬಳ್ಳಾರಿ ಜಿಲ್ಲೆಯಲ್ಲಿ ತೆಲುಗರು ಅಧಿಕ ಸಂಖ್ಯಾತರಾಗಿರುವ ಆಲೂರು, ಆದವಾನಿ ಮತ್ತು ರಾಯದುರ್ಗ ತಾಲ್ಲೂಕುಗಳನ್ನು ಆಂಧ್ರ ಪ್ರಾಂತ್ಯದಲ್ಲಿ ಸೇರಿಸಬಹುದು.
3. ಹರಪನಹಳ್ಳಿ, ಹಡಗಲಿ, ಹೊಸಪೇಟೆ, ಕೂಡ್ಲಿಗಿ, ಸೊಂಡೂರು ಮತ್ತು ಸಿರಗುಪ್ಪ ಈ ಆರು ತಾಲ್ಲೂಕುಗಳಲ್ಲಿ ಕನ್ನಡಿಗರು ಅಧಿಕ ಸಂಖ್ಯಾತರಾಗಿರುವುದರಿಂದ ಅವುಗಳನ್ನು ಮೈಸೂರು ರಾಜ್ಯಕ್ಕೆ ಸೇರಿಸಬಹುದು.
ಬಳ್ಳಾರಿ ತಾಲ್ಲೂಕು ಮಿಶ್ರಭಾಷೆಯ ಪ್ರದೇಶವೆಂದು ವಾದಗ್ರಸ್ತವಾದ್ದರಿಂದ ಆ ಬಗ್ಗೆ ಯಾವ ತೀರ್ಮಾನವನ್ನೂ ಮಾಡಲಿಲ್ಲ.
ಮಿಶ್ರಾ ಆಯೋಗ
 ಬಳ್ಳಾರಿ ತಾಲ್ಲೂಕಿನ ಸಮಸ್ಯೆಯು ಭಾಷಾತ್ಮಕ ಮಾತ್ರವಾಗಿರದೆ, ತುಂಗಭದ್ರಾ ಅಣೆಕಟ್ಟಿಗೆ ಸಂಬಂಧಿಸಿದಂತೆಯೂ ಇತ್ತು. ಇದನ್ನು ಬಗೆಹರಿಸಲು ಭಾರತದ ರಾಷ್ಟ್ರಪತಿಗಳು ಹೈದರಾಬಾದ್ನ ಮುಖ್ಯ ನ್ಯಾಯಾಧೀಶ ಎಲ್.ಎಸ್.ಮಿಶ್ರಾ ಅವರನ್ನು ನೇಮಿಸಿದ ಅಜ್ಞೆಯು 21.4.1953ರಂದು ಪ್ರಕಟವಾಯಿತು. 23.4.1953ರಿಂದ ಕಾರ್ಯಾರಂಭ ಮಾಡಿ 15.5.1953ರ ಒಳಗೆ ವರದಿಯನ್ನು ಸಲ್ಲಿಸಬೇಕೆಂದು ಎಲ್.ಎಸ್.ಮಿಶ್ರಾ ಅವರನ್ನು ಕೋರಲಾಯಿತು.
25.3.1953ರಂದು ಆಂಧ್ರ ಪ್ರಾಂತ್ಯ ರಚನೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಚರ್ಚೆ ಮತ್ತು ಮಿಶ್ರಾ ಸಮಿತಿಯ ನೇಮಕವಾದ ನಂತರ ಕನ್ನಡಿಗರ ಅತೃಪ್ತಿ ಅಸಂತೋಷಗಳು ಅಧಿಕವಾದವು. ಕೆ.ಪಿ.ಸಿ.ಸಿ.ಯ ನಾಯಕರಿಗೂ ಅದರ ಕಾವು ತಟ್ಟಿತ್ತು. ಹೈದರಾಬಾದಿನ (ನಾನಲ ನಗರ)ಲ್ಲಿ ನಡೆದ ವಾರ್ಷಿಕ ಕಾಂಗ್ರೆಸ್ ಅಧಿವೇಶನದ ಫಲಶ್ರುತಿಯೂ ಕೆ.ಪಿ.ಸಿ.ಸಿ. ನಾಯಕರು ಮತ್ತು ಇತರ ಪಕ್ಷೇತರ ಕರ್ನಾಟಕ ಏಕೀಕರಣವಾದಿಗಳಿಗೆ ನೋವುಂಟು ಮಾಡಿದ್ದವು. ಇದೇ ನೋವಿನ ವಾತಾವರಣದಲ್ಲಿ 19.04.1953ರಂದು ಹುಬ್ಬಳ್ಳಿಯಲ್ಲಿ ಕೆ.ಪಿ.ಸಿ.ಸಿ.ಯ ವಿಶೇಷ ಸಭೆಯನ್ನು ನಡೆಸಲು ಏರ್ಪಾಡಾಗಿತ್ತು. ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳು 1951ರ ಮೇ ತಿಂಗಳಿನಲ್ಲೇ ಸ್ಥಾಪಿಸಿ, ಆ ನಂತರ ಗಣರಾಜ್ಯದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆಗೂ ಇಳಿದಿದ್ದ ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು ಪ್ರಬಲವಾಗುತ್ತಿತ್ತು. ಚುನಾವಣೆಯಲ್ಲಿ ಸೋತರೂ ಕರ್ನಾಟಕ ಏಕೀಕರಣದ ಬೇಡಿಕೆಗೆ ಪ್ರಬಲವಾದ ಚಾಲನೆಯನ್ನು ಒದಗಿಸಿತು. ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು ಒದಗಿಸಿತು. ಆಂಧ್ರ ಪ್ರಾಂತ್ಯ ರಚನೆಯ ಸಂಬಂಧ ವಾಂಛೂ ಸಮಿತಿಯ ನೇಮಕವಾಗಿ, ಸದ್ಯಕ್ಕೆ ಕರ್ನಾಟಕ ಪ್ರಾಂತ ರಚನೆ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತಿ ದ್ದಾಗಲೇ ಕಾಂಗ್ರೆಸ್ನ ಧೋರಣೆಗಳನ್ನು ಸಂಪೂರ್ಣವಾಗಿ ವಿರೋಧಿಸಿ ತನ್ನದೇ ಆದ ರೀತಿಯಲ್ಲಿ ಅದು ಪ್ರತಿಭಟನೆಯನ್ನು ಪ್ರಕಟಿಸಲಾರಂಭಿಸಿತು. ಸಮಾಜವಾದಿ ಮತ್ತು ಕಮ್ಯುನಿಸ್ಟ್ ಪಕ್ಷಗಳು ಏಕೀಕರಣ ಬೇಡಿಕೆಯನ್ನು ಪ್ರಧಾನವಾಗಿಸಿದವು. ಎಸ್.ಗೋಪಾಲ ಗೌಡರು ಬಿ.ವಿ.ಕಕ್ಕಿಲಾಯ, ಅಳವಂಡಿ ಶಿವಮೂರ್ತಿಸ್ವಾಮಿ ಮುಂತಾದ ರಾಜಕೀಯ ಪಟುಗಳು ಶತಾಯಗತಾಯ ಕರ್ನಾಟಕ ಏಕೀಕರಣವನ್ನು ಸಾಧಿಸಲೇಬೇಕೆಂದು ಪಣ ತೊಟ್ಟಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಜನತೆಯನ್ನು ಉದ್ದೇಶಿತ ಕಾರ್ಯಗಳಿಗೆ ಅಣಿಗೊಳಿಸಿದರು. ಅವರ ನೆರವಿಗೆ ಅನೇಕ ಜನನಾಯಕರು ಮುಂದೆ ಬಂದರು. ಜಯ ದೇವಿತಾಯಿ ಲಿಗಾಡೆ, ಶಾಂತಿನಾಥ ಇಂಗಳೆ, ಇಂಚಗೇರಿಯ ಮಹಾದೇವಪ್ಪ ಮುರುಗೋಡು, ಚನ್ನಪ್ಪವಾಲಿ, ತಲ್ಲೂರ ರಾಯನಗೌಡ, ಕೋಟ ರಾಮಕೃಷ್ಣ ಕಾರಂತ, ಹೊಸಮನಿ ಸಿದ್ದಪ್ಪ, ಕೋ.ಚೆನ್ನಬಸಪ್ಪ ಮುಂತಾದ ಪ್ರಮುಖರು ಪಕ್ಷೇತರ ಕರ್ನಾಟಕ ಏಕೀಕರಣ ಹೋರಾಟದ ಸಂಘಟನೆಯನ್ನು ಬೆಂಬಲಿಸಿದರು.
ಮಿಶ್ರಾ ಆಯೋಗ ಮನವಿಗಳು
 ಎಲ್.ಎಸ್.ಮಿಶ್ರಾ ತಕ್ಷಣವೇ ಕಾರ್ಯಾರಂಭ ಮಾಡಿದರು. 27.04.53ರಂದು ಬಳ್ಳಾರಿಯಲ್ಲಿ ಎಲ್.ಎಸ್.ಮಿಶ್ರಾ ಅವರು ಕಚೇರಿಯನ್ನು ತೆರೆದು ವಿಚಾರಣೆಯನ್ನು ಆರಂಭಿಸಿದರು. ಬಳ್ಳಾರಿ ತಾಲ್ಲೂಕಿನ ಸಮಸ್ಯೆಯ ಬಗೆಗೆ ಮನವಿಗಳನ್ನು ಸ್ವೀಕರಿಸಲಾಯಿತು. ಅಂಕಿ ಅಂಶ ಸಂಗ್ರಹಣಾ ಕಾರ್ಯಕ್ಕೆ ಐ.ಎ.ಎಸ್.ಅಧಿಕಾರಿಯೊಬ್ಬರನ್ನು ನೇಮಿಸಲಾಯಿತು. 1.5.1953ರಿಂದ 8.5.1953ರವರೆಗೆ ಬಳ್ಳಾರಿಯಲ್ಲೇ ವಿಚಾರಣೆ ನಡೆಯಿತು. ಮುಂದೆ ಪ್ರಸ್ತಾಪಿಸುವ ಪಂಚಮುಖಿ ಅವರ ದಾಖಲೆಯ ಪ್ರಕಾರ 9.5.53ರಂದೂ ಮಿಶ್ರಾ ಮನವಿಗಳನ್ನು ಸ್ವೀಕರಿಸಿ ಸಂದರ್ಶನಕ್ಕೆ ಅವಕಾಶ ನೀಡಿದರು. ನಂತರದ ಎರಡು ದಿನಗಳು ಮೈಸೂರಿನಲ್ಲಿ ವಿಚಾರಣೆ ನಡೆಸಿದ ಮಿಶ್ರಾ ಹೈದಾರಾಬಾದ್ನಲ್ಲಿ ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದ ಕಾಗದ ಪತ್ರಗಳನ್ನೂ ಪರಿಶೀಲಿಸಿದರು. ಮಿಶ್ರಾ ಅವರಿಗೆ ವ್ಯಕ್ತಿಗಳು, ಸಂಘ ಸಂಸ್ಥೆಗಳಿಂದ ಬಂದ ಮನವಿಗಳಲ್ಲಿ ಕರ್ನಾಟಕದ ಪರ 222 ಮತ್ತು ಆಂಧ್ರದ ಪರ 132 ಇದ್ದವು. ಕೆ.ಪಿ.ಸಿ.ಸಿ.ಯ ಉಪಸಮಿತಿಯ ಪರವಾಗಿ ಎಸ್.ನಿಜಲಿಂಗಪ್ಪ ಮನವಿ ಸಲ್ಲಿಸಿದರು. ಮೈಸೂರು ಸರ್ಕಾರವು ತನ್ನ ವಿಶೇಷಾಧಿಕಾರಿ ಶೇಷಗಿರಿರಾವ್ ಅವರ ಮೂಲಕ ಮನವಿ ಸಲ್ಲಿಸಿತು. ಮದ್ರಾಸ್ ಸರ್ಕಾರ ಇಬ್ಬರು ಮಂತ್ರಿಗಳನ್ನು ಕಳುಹಿಸಿತು. ಬಳ್ಳಾರಿ ಜಿಲ್ಲಾ ಕರ್ನಾಟಕ ಕ್ರಿಯಾಸಮಿತಿಯ ಪದಾಧಿಕಾರಿಗಳು, ಬಳ್ಳಾರಿ ಶಹರ ಮತ್ತು ಗ್ರಾಮಾಂತರ ಪ್ರದೇಶದಿಂದಲೂ ಅನೇಕ ಸಂಘ ಸಂಸ್ಥೆಗು ಮನವಿಗಳನ್ನು ಸಲ್ಲಿಸಿದವು. ಮಿಶ್ರಾ ಅವರು ಮನವಿಗಳನ್ನು ಸ್ವೀಕರಿಸಿದ್ದು ಮಾತ್ರವಲ್ಲದೆ ಸಾವಿರಕ್ಕೂ ಹೆಚ್ಚು ಜನರನ್ನು ಸಂದರ್ಶಿಸಿ, ಅವರ ಅಭಿಪ್ರಾಯಗಳನ್ನು ದಾಖಲಿಸಿದರು. ಬಳ್ಳಾರಿ ನಗರ ಮತ್ತು ಅದರ ನೆರೆೆಯ ಹಳ್ಳಿಗಳಲ್ಲಿ ಖುದ್ದಾಗಿ ಸಂಚರಿಸಿ ಅಲ್ಲಿನ ಪರಿಸ್ಥಿತಿಯನ್ನು ಅಭ್ಯಸಿಸಿದರು. ಅವರ ಪ್ರಕಾರ ಎಲ್ಲ ಹಳ್ಳಿಗಳಲ್ಲೂ ಎರಡೂ ಪಕ್ಷಗಳ ಜನರಿದ್ದು, ಪರಸ್ಪರ ಘರ್ಷಣೆ ನಡೆಯುತ್ತಲೇ ಇದ್ದವು. ಬಳ್ಳಾರಿ ನಗರದಲ್ಲಿ ಕನ್ನಡ, ತೆಲುಗು ಮತ್ತು ಉರ್ದು ಮನೆ ಮಾತಾಗಿ ಹೊಂದಿದ ಮಿಶ್ರ ಜನಸಂಖ್ಯೆಯಿದ್ದು, ಬಹುತೇಕ ಜನರಿಗೆ ಎಲ್ಲಾ ಮೂರು ಭಾಷೆಗಳೂ ತಿಳಿದಿದ್ದವು. ಮನವಿ ಸಲ್ಲಿಸಿದವರಲ್ಲಿ ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯ ನಿವೃತ್ತ ನಿರ್ದೇಶಕ ಆರ್.ಎಸ್. ಪಂಚಮುಖಿಯವರೂ ಒಬ್ಬರಾಗಿದ್ದರು. ಅವರು ದಾಖಲಿಸಿರುವಂತೆ 5.5.1953ರಂದು ಅವರಿಗೆ ಬಳ್ಳಾರಿ ಕರ್ನಾಟಕಕ್ಕೆ ಸೇರಬೇಕಾದ ಔಚಿತ್ಯದ ಬಗೆಗೆ ತಿಳುವಳಿಕೆ ನೀಡಬೇಕೆಂದು ತಂತಿ ಸಂದೇಶ ಬಂದಿತು. 9.5.1953ರಂದು ಪಂಚಮುಖಿಯವರು ಮಿಶ್ರಾ ಅವರನ್ನು ಕಾಣಲು ಹೋದಾಗ, ವಿಚಾರಣೆ ನಡೆಸುತ್ತಿದ್ದ ಕಟ್ಟಡದ ಹೊರಗೆ ಸಾವಿರಾರು ಜನರ ಗುಂಪು ಸೇರಿತ್ತು. ಆ ಗುಂಪಿನಲ್ಲಿ ಕರ್ನಾಟಕ ಮತ್ತು ಅಂಧ್ರ ಪರವಾದಿಗಳ ಎರಡೂ ಜನರಿದ್ದು ಪರ ಮತ್ತು ವಿರೋಧಿ ಘೋಷಣೆಗಳಿಂದ ವಾತಾವರಣವು ಅತ್ಯಂತ ಗಂಭೀರವಾಗಿತ್ತು. ಸಾವಿರಾರು ಜನರು ಮನವಿ ನೀಡಲು ನಿಂತಿದ್ದರು. ವಿಚಾರಣೆಯ ಸಂದರ್ಶನದಲ್ಲಿ ಪಂಚಮುಖಿಯವರ ಸಂದರ್ಶನಕ್ಕೆ ಅವಕಾಶ ನೀಡದೆ ಮನವಿಯನ್ನು ಮಾತ್ರ ಸ್ವೀಕರಿಸಲು ಒಪ್ಪಿದರು. ಆದರೆ ಅನೇಕ ನಾಯಕರ ಒತ್ತಾಯದ ಮೇರೆಗೆ ಕೇವಲ ಮೂರು ನಿಮಿಷಗಳ ಕಾಲಾವಕಾಶ ನೀಡಿ ತಾವು ಈಗಾಗಲೇ ಆಂಧ್ರದ ಪ್ರತಿನಿಧಿಗಳಿಂದ ಮತ್ತು ಅವರು ಒದಗಿಸಿದ ಕೆಲವು ಗ್ರಂಥಗಳಿಂದ ಅಲ್ಲಿನ ಇತಿಹಾಸದ ಬಗೆಗೆ ತಿಳಿದಿರುವುದುದಾಗಿಯೂ, ಕೇವಲ ಹೊಸ ವಿಚಾರಗಳಿದ್ದರೆ ಮಾತ್ರ ತಿಳಿಸಬೇಕಾಗಿಯೂ ಸೂಚಿಸಿದರು. ಪಂಚಮುಖಿ ಅವರು ವಿಜಯನಗರ ಕಾಲದ ಶಾಸನಗಳ, ಸಾಹಿತ್ಯ ಕೃತಿಗಳ ಮತ್ತು ವಾಸ್ತುಶಿಲ್ಪಗಳ ಮೂಲಕ ಆ ಭಾಗವು ಎಷ್ಟರಮಟ್ಟಿಗೆ ಕನ್ನಡದ್ದೇ ಆಗಿತ್ತು, ಕನ್ನಡದವರದೇ ಆಗಿತ್ತು ಎಂದು ಮನವರಿಕೆ ಮಾಡಿದರು. ಆ ಸಂಬಂಧವಾಗಿ ಹಿರಿಯ ಇತಿಹಾಸಕಾರರ ಅಭಿಪ್ರಾಯಗಳು, ಪ್ರಕಟವಾಗು ತ್ತಿರುವ ಕೃತಿಗಳು ಮತ್ತು ಛಾಯಾ ಚಿತ್ರಗಳನ್ನೆಲ್ಲ ಮಿಶ್ರಾ ಅವರ ಗಮನಕ್ಕೆ ತಂದರು. ಪ್ರಾಗೈತಿಹಾಸಿಕ ಯುಗದಿಂದ 1799ರವರೆಗೆ ಅದು ಹೇಗೆ ಕನ್ನಡಿಗರದೇ ಆಗಿತ್ತು ಎಂದು ಮನವರಿಕೆ ಮಾಡಿದರು. ಕಳೆದ ಕೆಲವು ವರ್ಷಗಳಿಂದೀಚೆಗೆ ವ್ಯಾಪಾರ/ವಾಣಿಜ್ಯ/ನೌಕರಿಗೆ ಸಂಬಂಧಿಸಿದಂತೆ ನೆರೆ ಹೊರೆಯ ಪ್ರಾಂತ್ಯಗಳಿಂದ ಬಂದು ಬಲಗೊಂಡ ಜನ, ಆ ನೆಲ ಮೊದಲಿನಿಂದಲೂ ತಮ್ಮದೇ ಆಗಿತ್ತು ಎಂದು ಹಕ್ಕು ಸ್ಥಾಪಿಸಲು ಪ್ರಯತ್ನಿಸುತ್ತಿರುವುದನ್ನು ಪಂಚಮುಖಿ ಬಯಲಿಗೆಳೆದರು. ಮೂರು ನಿಮಿಷಗಳ ಅವಕಾಶ ನೀಡಿ ನಲವತ್ತು ನಿಮಿಷಗಳಿಗೂ ಹೆಚ್ಚು ಕಾಲ ಪಂಚಮುಖಿ ಅವರ ವಾದವನ್ನು ಕೇಳಿದ ಮಿಶ್ರಾ ಅವರೆಗೆ ಕೇಳಿ ತಿಳಿದು ರೂಪಿಸಿಕೊಂಡಿದ್ದ ಅಭಿಪ್ರಾಯವನ್ನು ಬದಲಿಸಿಕೊಳ್ಳಲೇಬೇಕಾಗಿದೆಯೆಂಬ ಮಾತನ್ನಾಡಿದರು. ಅನೇಕ ಪ್ರಶ್ನೆಗಳನ್ನು ಕೇಳುತ್ತಾ ತಮ್ಮ ಕುತೂಹಲ ಮತ್ತು ಆಸಕ್ತಿಗಳನ್ನು ವ್ಯಕ್ತಪಡಿಸಿದರು.
ಬಳ್ಳಾರಿ ನಗರದಲ್ಲಿ ತೆಲುಗರ ಸಂಖ್ಯೆ ಅಧಿಕವೆನಿಸಿದರೂ (ಮಿಶ್ರ ಭಾಷೆಯ ಜನ ವಾಸಿಸುವ ನಗರವಾದ್ದರಿಂದ) ಇಡಿಯಾಗಿ ಬಳ್ಳಾರಿ ತಾಲ್ಲೂಕಿನಲ್ಲಿ ಕನ್ನಡಿಗರ ಸಂಖ್ಯೆಯೇ ಅಧಿಕವಾಗಿರುವುದರಿಂದ ಇಡೀ ತಾಲ್ಲೂಕನ್ನು ಒಂದು ಘಟಕವಾಗಿ ಪರಿಗಣಿಸಬೇಕು ಎಂಬುದು ಕನ್ನಡಿಗರ ಪ್ರಮುಖ ವಾದವಾಗಿತ್ತು. ಬಳ್ಳಾರಿ ನಗರದ ಕನ್ನಡೇತರರು ವಲಸೆ ಬಂದು ನೆಲೆಗೊಂಡವರೆಂದು ತಿಳಿಸಲಾಗಿತ್ತು. ಕೇಳ್ಕರ್ ವರದಿಯ ಪ್ರಕಾರವೂ ಬಳ್ಳಾರಿ ತಾಲ್ಲೂಕು ಕರ್ನಾಟಕಕ್ಕೆ ಸೇರಿತ್ತು. ಆದರೆ ಆಂಧ್ರದವರು ಬಳ್ಳಾರಿಯ ಆಂಧ್ರದೊಡನೆ ಹೆಚ್ಚು ಸಂಪರ್ಕ ಪಡೆದಿದೆ, ಅಲ್ಲಿನ ಶಿಕ್ಷಣ ಮಾಧ್ಯಮ, ವ್ಯಾಪಾರ ವ್ಯವಹಾರಗಳ ಭಾಷೆಯೆಲ್ಲಾ ತೆಲುಗು ಆಗಿದೆ ಎಂಬ ವಾದವನ್ನು ಮುಂದೊಡ್ಡಿದರು. ಜನರ ಅಭಿಪ್ರಾಯಗಳು ಗೊಂದಲ ಕಾರಿ ಎನಿಸಿದಾಗ ಮಿಶ್ರ 1951ರ ಜನಗಣತಿಯ ಅಂಕಿ-ಅಂಶಗಳನ್ನು ಪರಿಶೀಲಿಸಿದರು. ಆ ಪ್ರಕಾರ ಬಳ್ಳಾರಿ ನಗರ ಮತ್ತು ತಾಲ್ಲೂಕುಗಳಲ್ಲಿನ ಪ್ರಮುಖ ಭಾಷಾ ವರ್ಗದ ಜನಸಂಖ್ಯೆ ಕೆಳಗಿನಂತಿತ್ತು.


ಮೇಲಿನ ಅಂಕಿ ಅಂಶಗಳ ಪ್ರಕಾರ ಬಳ್ಳಾರಿ ನಗರದಲ್ಲಿ ಮಾತ್ರ ಕನ್ನಡಿಗರ ಪ್ರಮಾಣ ಉಳಿದ ಭಾಷಿಕರ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ಇತರ ಭಾಷಿಕರ ಸಂಖ್ಯೆಯೇ ಅಧಿಕವಾಗಿದ್ದು ನಂತರದ ಸ್ಥಾನ ತೆಲುಗರದಾಗಿ ಕೊನೆಯ ಸ್ಥಾನ ಕನ್ನಡಿಗರದಾಗುತ್ತದೆ. ಆದರೆ ನಗರದ ಜನಸಂಖ್ಯೆಯಲ್ಲಿ ವ್ಯಾಪಾರ ಮತ್ತು ಉದ್ಯೊಗಗಳಿಗೆ ಬಂದಿದ್ದ ತಾತ್ಕಾಲಿಕ ನೆಲೆಯ ಜನರೂ ಇರುತ್ತಾರೆಂಬುದನ್ನು ಮರೆಯುವಂತಿರಲಿಲ್ಲ. ಮಿಶ್ರಾ ಅವರೇ ನಿರ್ಧರಿಸಿದ ಪ್ರಕಾರ ಇಡಿಯಾಗಿ ಬಳ್ಳಾರಿ ತಾಲ್ಲೂಕಿನಲ್ಲಿ ಕನ್ನಡಿಗರ ಪ್ರಮಾಣ ಶೇಕಡ 52.52. ತೆಲುಗರ ಪ್ರಮಾಣ 25.29 ಮತ್ತು ಇತರರ ಪ್ರಮಾಣ 22.19. ಇದರಿಂದ ತಾಲ್ಲೂಕಿನಲ್ಲಿ ಕನ್ನಡಿಗರೇ ಬಹುಸಂಖ್ಯಾತರು ಎಂಬುದು ನಿರ್ಧಾರವಾಯಿತು. ತಕರಾರು ಇದ್ದುದೆಲ್ಲಾ ರೂಪನಗುಡಿ, ಬಳ್ಳಾರಿ ಮತ್ತು ಮೋಕಾ ಫಿರ್ಕಾಗಳಿಗೆ ಸಂಬಂಧಿಸಿದಂತೆ ಮಾತ್ರ. ಈ ಪ್ರದೇಶಗಳಲ್ಲಿ ಉರ್ದು ಮನೆ ಮಾತಾಗಿವುಳ್ಳ ಮುಸಲ್ಮಾನರ ಸಂಖ್ಯೆಯೂ ಅಧಿಕವೇ ಆಗಿರುವುದನ್ನು ಗಮನಿಸಿದ ಮಿಶ್ರಾ ಅವರು ಹಳ್ಳಿ ಫಿರ್ಕಾ, ತಾಲ್ಲೂಕು ಹೀಗೆ ಯಾವ ದೃಷ್ಟಿಯಿಂದ ನೋಡಿದರೂ, ಬಳ್ಳಾರಿ ನಗರ ಮತ್ತು ತಾಲ್ಲೂಕು ಭಾಷಿಕವಾಗಿ ಆಂಧ್ರಕ್ಕೆ ಸೇರಲು ಸಾಧ್ಯವಿಲ್ಲ. ಆಂಧ್ರರದು ನ್ಯಾಯುತವಾದ ಬೇಡಿಕೆಯಲ್ಲ ಎಂಬ ಅಭಿಪ್ರಾಯಕ್ಕೆ ಬಂದರು. 1981ರಿಂದ 1951ರವರೆಗೆ ನಡೆದ ಜನಗಣತಿಯ ಅಂಕಿ-ಅಂಶಗಳ ಪ್ರಕಾರ ಎಲ್ಲ ಸಂದರ್ಭಗಳಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡಿಗರು ಅರ್ಧಕ್ಕಿಂತಲೂ ಅಧಿಕವಾಗಿರು ವುದನ್ನು ಮಿಶ್ರ ಸಮಿತಿ ಗುರುತಿಸಿತು. ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ಜಿಲ್ಲಾ ಮ್ಯಾನ್ಯುಯಲ್ (1872), ಬಳ್ಳಾರಿ ಜಿಲ್ಲಾ ಗೆಜೆಟಿಯರ್(1904) ಮತ್ತು ಇಂಪೀರಿಯಲ್ ಗೆಜೆಟಿಯರ್ ಆಫ್ ಇಂಡಿಯಾ(1908)ಗಳಲ್ಲಿ ಬಳ್ಳಾರಿ ತಾಲ್ಲೂಕಿನ ಪ್ರಚಲಿತ ಭಾಷೆಯು ಕನ್ನಡ ಎಂದು ನಿರ್ವಿವಾದವಾಗಿ ದಾಖಲಾಗಿದ್ದು, ಈಚಿನ ಜನಗಣತಿಯ ಅಂಕಿ-ಅಂಶಗಳಲ್ಲಿ ಮಾತ್ರ ಕೆಲವು ವೈಪರೀತ್ಯಗಳು ಕಂಡುಬಂದಿವೆ ಎಂದು ಮಿಶ್ರಾ ತಿಳಿಸಿದರು. ಐತಿಹಾಸಿಕ ಅಂಶಗಳು, ಸಾಂಸ್ಕೃತಿಕ ಸಂಬಂಧಗಳು, ಆಡಳಿತಾನುಕೂಲ, ಆರ್ಥಿಕ ಪ್ರಗತಿ ಇತ್ಯಾದಿ ಎಲ್ಲ ಅಂಶಗಳನ್ನೂ ಗಮನದಲ್ಲಿರಿಸಿಕೊಂಡು ಮಿಶ್ರಾ ಅವರು ಮೇಲೆ ಹೇಳಿದ ಮಾತುಗಳಿಂದ, ಬಳ್ಳಾರಿ ತಾಲ್ಲೂಕು ಸಂಪೂರ್ಣವಾಗಿ ಕೆಲವು ತಾತ್ಕಾಲಿಕ ಮಧ್ಯ ಕಾಲದ ಏರ್ಪಾಡುಗಳಿಗೆ ಒಳಪಟ್ಟು ಮೈಸೂರಿಗೆ ಸೇರಬೇಕೆಂದು ವಿಶದವಾಗುತ್ತದೆ ಎಂದು ಅಂತಿಮ ತೀರ್ಪು ನೀಡಿ ತಾತ್ಕಾಲಿಕ ಮಧ್ಯಕಾಲೀನ ಏರ್ಪಾಡುಗಳಿಗೂ ಕೆಲವು ಸಲಹೆಗಳನ್ನು ನೀಡಿದರು.
1953ನೆಯ ಮೇ 18ರಂದು ಮಿಶ್ರಾ ಅವರು ಭಾರತ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿಯನ್ನು ಕೇಂದ್ರ ಸರ್ಕಾರದ ಸಚಿವ ಸಂಪುಟದ ಸಭೆ 1953ನೆಯ ಮೇ 20ರಂದು ಸ್ವೀಕರಿಸಿತು. ನಿಯಮಿತ ಕಾಲಾವಧಿಯಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಿ ತ್ವರೆಯಿಂದ ವರದಿ ಸಲ್ಲಿಸಿದ ಮಿಶ್ರರಿಗೆ ಕೃತಜ್ಞತೆಯನ್ನರ್ಪಿಸಿದ ಸರ್ಕಾರ, ಮಿಶ್ರಾ ಅವರ ವರದಿಯನ್ನು ಅಂಗೀಕರಿಸಿರುವುದನ್ನು ಪ್ರಕಟಿಸಿತು. ಆಂಧ್ರ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ಕಾರ್ಯದರ್ಶಿ ಪಿ.ವಿ.ಜಿ.ರಾಜು ಅವರುಗಳೆಲ್ಲರೂ ಮಿಶ್ರಾ ವರದಿಯನ್ನು ಒಪ್ಪಿಕೊಂಡರು. ಬಳ್ಳಾರಿ, ಕೋಲಾರ, ಮಡಿಕೇರಿ, ಚಿತ್ರದುರ್ಗ ಜಿಲ್ಲೆಯ ಕೆಲವು ಭಾಗಗಳ ಬೇಡಿಕೆ ಮುಂದಿಟ್ಟು ಹೋರಾಟ ನಡೆಸುತ್ತಿದ್ದ ವಿಶಾಲಾಂಧ್ರ ಚಳವಳಿಗಾರರೂ ಸಹ, ಆಂಧ್ರ ರಚನೆ ವಿಳಂಬವಾಗ ದಿರಲಿ ಎಂಬ ಕಾರಣದಿಂದ ತಮ್ಮ ಬೇಡಿಕೆಗಳನ್ನು ಕೈ ಬಿಟ್ಟರು. ಈ ಸಂದರ್ಭದಲ್ಲಿ ಆಂಧ್ರದ ಕಮ್ಯುನಿಸ್ಟ್ ನಾಯಕ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ಪಿ.ಸುಂದರಯ್ಯ ಅವರ ಪಾತ್ರ ಮುಖ್ಯವಾಗಿತ್ತು.
ಮಿಶ್ರಾ ವರದಿಯ ಅಂಗೀಕಾರದ ನಂತರ ಆಂಧ್ರಪ್ರದೇಶ ರಚನೆಯ ದಿನ ದೂರವಿಲ್ಲ ವೆಂಬುದು ಖಚಿತವಾಯಿತು. ಆದರೆ ಕರ್ನಾಟಕ ಪ್ರಾಂತ್ಯ ರಚನೆಯ ಮಾತು ದೂರವೇ ಉಳಿಯಿತು. ಹುಬ್ಬಳ್ಳಿಯ ಘಟನೆಯ ನಂತರವೂ ಕೇಂದ್ರ ಸರ್ಕಾರದ ನಾಯಕರು ಕರ್ನಾಟಕ ಪ್ರಾಂತ್ಯ ರಚನೆಯ ಬಗೆಗೆ ತೀವ್ರವಾದ ಆಸಕ್ತಿ ತೋರಿಸಲಿಲ್ಲ. ಇದರಿಂದ ಕರ್ನಾಟಕದ ಜನತೆಯ ಅಸಹನೆ ಹೆಚ್ಚುತ್ತಿತ್ತು. ಮಿಶ್ರಾ ಅವರ ವರದಿಯು ಬಳ್ಳಾರಿ ತಾಲ್ಲೂಕನ್ನು ಒಡೆಯುತ್ತದೆಂಬ ಸಂಶಯ ಬಹುತೇಕ ಕನ್ನಡಿಗರಿಗಿದ್ದರೂ, ವರದಿ ಪ್ರಕಟವಾಗಿ ಅದು ಸ್ವೀಕಾರವಾದ ನಂತರ ಆ ಸಂಶಯವೇನೋ ನಿವಾರಣೆಯಾಯಿತು. ಬಳ್ಳಾರಿ ತಾಲ್ಲೂಕು ಮೈಸೂರಿನಲ್ಲೇ ಉಳಿಯುವುದೆಂದು ಸಂತೋಷವಾಯಿತು.
ಈ ಘಟ್ಟದಲ್ಲಿ ಒಂದು ಸಮಸ್ಯೆ ಉದ್ಭವಿಸಿತು. ಬಳ್ಳಾರಿ ತಾಲೂಕು ಆಡಳಿತ ಮತ್ತು ಭಾಷಾ ದೃಷ್ಟಿಯಿಂದ ಕರ್ನಾಟಕ ಪ್ರದೇಶವೆಂದು ಮಿಶ್ರಾ ಆಯೋಗ ತೀರ್ಪು ಕೊಟ್ಟಿದ್ದರಿಂದ, ಅದು ಆಂಧ್ರ ಪ್ರಾಂತ್ಯಕ್ಕೆ ಸೇರಬೇಕೆಂಬ ವಾದ ತಿರಸ್ಕೃತವಾಯಿತು. ಇನ್ನೂ ಕರ್ನಾಟಕ ಪ್ರಾಂತ ರಚನೆಯ ಆಲೋಚನೆಯೂ ಇರಲಿಲ್ಲ. ಬಳ್ಳಾರಿಯ 6 ತಾಲ್ಲೂಕುಗಳು ಆಂಧ್ರದಲ್ಲಿ ಸೇರಲು ಇಚ್ಚಿಸಲಿಲ್ಲ. ಹಾಗಾದರೆ ಕರ್ನಾಟಕ ಪ್ರಾಂತ್ಯ ರಚನೆ ಆಗುವವರೆಗೆ ಬಳ್ಳಾರಿ ಎಲ್ಲಿರಬೇಕು ಈ ಪ್ರಶ್ನೆ ಬಂದಾಗ ವಿಧಿಯಿಲ್ಲದೆ ನೆರೆಯ ಮೈಸೂರು ಸೀಮೆಗೆ ಸೇರಿಕೊಳ್ಳು ವುದೊಂದೇ ಉಳಿದಿದ್ದ ದಾರಿ. ಆದರೆ ಮೈಸೂರು ಸೀಮೆಯಲ್ಲಿ ಸೇರಿಸಿಕೊಳ್ಳುವುದಕ್ಕೆ ಅಂದಿನ ಸರ್ಕಾರ ಸಂಪೂರ್ಣ ಸಿದ್ಧವಿರಲಿಲ್ಲ. ಮದ್ರಾಸಿನಲ್ಲಿ ಉಳಿಸಿಕೊಳ್ಳಲು ರಾಜಾಜಿ ಸಿದ್ಧವಿರ ಲಿಲ್ಲ. ಆಗ ಬಳ್ಳಾರಿ ಕರ್ನಾಟಕ ಕ್ರಿಯಾಸಮಿತಿ ಮಾಡಿದ ಪ್ರಚಂಡ ಪ್ರಯತ್ನ ಉಲ್ಲೇಖಾರ್ಹ. ಮುಖ್ಯಮಂತ್ರಿ ಹನುಮಂತಯ್ಯನವರಿಗೆ ಏಕೀಕರಣಕ್ಕೂ, ಬಳ್ಳಾರಿ ಮೈಸೂರಿ ನಲ್ಲಿ ಸೇರುವುದಕ್ಕೂ ಸಮ್ಮತಿಯಿತ್ತು. ಆದರೆ ಹಳೇ ಮೈಸೂರಿನ ಕೆಲವು ಶಾಸಕರಿಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದ್ದರಿಂದ ಬಳ್ಳಾರಿ ಕರ್ನಾಟಕ ಕ್ರಿಯಾಸಮಿತಿಯ ನಿಯೋಗವೊಂದು ಮುಖ್ಯಮಂತ್ರಿಗಳನ್ನು, ಅವರ ಸಚಿವ ಸಂಪುಟದ ಸದಸ್ಯರನ್ನು ಶಾಸಕರನ್ನು ಭೇಟಿ ಮಾಡಿತು. ಆ ನಿಯೋಗದಲ್ಲಿ ಸಮಿತಿ ಅಧ್ಯಕ್ಷ ಶ್ರೀ ಜಂತಕಲ್ಲು ಗಾದಿಲಿಂಗಪ್ಪ ಇತರ ಪದಾಧಿಕಾರಿಗಳಾದ ಹರಗಿನಡೋಣಿ ಸಣ್ಣ ಬಸವಗೌಡ, ಅಲ್ಲಂ ಕರಿಬಸಪ್ಪ, ಕೊಳಗಾನಹಳ್ಳಿ ಲಿಂಗಣ್ಣ, ಬಿ.ಎಂ.ರೇವಣಸಿದ್ದಯ್ಯ, ಮುಸ್ಲಿಮರ ಮುಖಂಡ ಮಾಜಿ ನಗರ ಸಭಾಧ್ಯಕ್ಷ ಅಬ್ದುಲ್ ರಜಾಕ್ ಸಾಹೇಬ್, ಕ್ರಿಯಾ ಸಮಿತಿ ಕಾರ್ಯದರ್ಶಿ ಕೋ.ಚೆನ್ನಬಸಪ್ಪ, ಗಡಿಗಿ ಮರಿಸ್ವಾಮಪ್ಪ ಮುಂತಾದ ಸುಮಾರು 15 ಜನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಳ್ಳಾರಿ ಜಿಲ್ಲೆಯನ್ನು ಮೈಸೂರಿನಲ್ಲಿ ಸೇರಿಸಿಕೊಳ್ಳಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು. ತರುವಾಯ ನಿಯೋಗದಲ್ಲಿದ್ದವರಲ್ಲಿ 5 ಸದಸ್ಯರು ಶ್ರೀ ಅಲ್ಲಂ ಕರಿಬಸಪ್ಪ, ಶ್ರೀ ಅಬ್ದುಲ್ ರಜಾಕ್ ಸಾಬ್, ಕೋ.ಚೆನ್ನಬಸಪ್ಪ, ಗಡಿಗಿ ಮರಿಸ್ವಾಮಪ್ಪ, ಬಿ.ಎಂ.ರೇವಣಸಿದ್ಧಯ್ಯ ಮೈಸೂರು ಶಾಸನ ಸಭೆಯ ಬಹುತೇಕ ಎಲ್ಲ ಸದಸ್ಯರನ್ನು ಅವರಿದ್ದಲ್ಲಿಗೆ ಹೋಗಿ ಖುದ್ದಾಗಿ ಕಂಡು ಬಳ್ಳಾರಿ ಜಿಲ್ಲೆಯನ್ನು ಮೈಸೂರು ರಾಜ್ಯಕ್ಕೆ ಸೇರಿಸಿಕೊಳ್ಳಬಹುದೆಂಬ ಮನವಿಗೆ ಸಹಿ ಪಡೆದು ಮಾನ್ಯ ಮುಖ್ಯಮಂತ್ರಿಗಳಿಗೆ ಅರ್ಪಿಸಲಾಯಿತು. ಆ ಒಪ್ಪಿಗೆಯ ಮನವಿಯ ಆಧಾರದ ಮೇಲೆ ಮೈಸೂರು ವಿಧಾನಸಭೆ ಬಳ್ಳಾರಿಯನ್ನು ಮೈಸೂರಿನಲ್ಲಿ ವಿಲೀನ ಮಾಡಬೇಕೆಂದು ಸರ್ವಾನುಮತದ ಗೊತ್ತುವಳಿ ಯನ್ನು ಅಂಗೀಕರಿಸಿತು. ಈ ಗೊತ್ತುವಳಿಯನ್ನು ಕೇಂದ್ರ ಸಕಾರ್ರಕ್ಕೆ ಕಳಿಸಲಾಯಿತು.
ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು
 ಆಂಧ್ರ ಪ್ರಾಂತ್ಯ ರಚನೆಯ ನಿರ್ಧಾರ, ಕರ್ನಾಟಕ ರಾಜ್ಯ ರಚನೆಯ ವಿಳಂಬ, ದ್ವಿಕರ್ನಾಟಕ ಸ್ಥಾಪನೆಗೆ ನಾಯಕರ ಮತ್ತು ಸರ್ಕಾರದ ವಿಳಂಬ ಧೋರಣೆ, ಹುಬ್ಬಳ್ಳಿಯ ಗೋಲಿಬಾರ್ ಇತ್ಯಾದಿಗಳಿಂದ ಪ್ರೇರಿತರಾಗಿ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣವೇ ಆಗಬೇಕೆಂದು ಹಂಬಲಿಸುತ್ತಿದ್ದ ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳ ನಾಯಕರು ಶತಾಯಗತಾಯ ಏಕೀಕರಣವನ್ನು ಸಾಧಿಸಬೇಕೆಂಬ ದೃಢ ಸಂಕಲ್ಪದಿಂದ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತನ್ನು ಸ್ಥಾಪಿಸಿದರು. ಅ.ಕ.ರಾ.ನಿ.ಪರಿಷತ್ತಿನ ಮೊದಲ ಅಧಿವೇಶನವು 28.5. 1953ರಂದು ದಾವಣಗೆರೆಯಲ್ಲಿ ನಡೆಯಿತು. ಅಧಿವೇಶನದ ಅಧ್ಯಕ್ಷತೆಯನ್ನು ಕೆ.ಆರ್. ಕಾರಂತರು ವಹಿಸಿದ್ದರು. ಲೋಕಸಭಾ ಸದಸ್ಯ ಅಳವಂಡಿ ಶಿವಮೂರ್ತಿ ಸ್ವಾಮಿಗಳು ಉದ್ಘಾಟನೆ ಮಾಡಿದರು. ಕೆ.ಆರ್.ಕಾರಂತರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಆವರೆಗಿನ ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ಘಟ್ಟಗಳನ್ನು ಗುರುತಿಸಿ ಈಗ ಕರ್ನಾಟಕ ಪ್ರಾಂತ್ಯ ನಿರ್ಮಾಣಕ್ಕೆ ಯಾವ ಅಡ್ಡಿಗಳೂ ಇಲ್ಲ. ನೂತನ ಆಂಧ್ರ ಪ್ರಾಂತ್ಯದ ಭವಿಷ್ಯವನ್ನು ಕಾದು ನೋಡಿ, ಅನಂತರ ಬೇರೆ ಬೇರೆ ಪ್ರಾಂತ್ಯಗಳ ರಚನೆಗೆ ಕೈ ಹಾಕುವುದೆಂದು ಕೆಲವು ನಾಯಕರು ಯೋಚಿಸುತ್ತಿದ್ದಾರೆ. ಇಂಥ ಯೋಚನೆ ಸಾಧುವಾದುದಲ್ಲ. ಏಕೆಂದರೆ ಒಂದು ಪ್ರಾಂತ್ಯದ ಸಮಸ್ಯೆ ಇನ್ನೊಂದು ಪ್ರಾಂತ್ಯಕ್ಕಿರಲಾರದು. ಒಂದರ ಸಾಧಕ ಬಾಧಕಗಳು ಇನ್ನೊಂದಕ್ಕಿರಲಾರವು ಎಂದು ುನವರಿಕೆ ಮಾಡಿದರು. ಕರ್ನಾಟಕ ರಾಜ್ಯ ನಿರ್ಮಿಸುವುದು ಕನ್ನಡಿಗರ ಜನ್ಮಸಿದ್ಧ ಹಕ್ಕು ಎಂದು ಕರೆ ನೀಡಿದ ಕಾರಂತರು ಕನ್ನಡ ನಾಡಿನ ಇತಿಹಾಸದಲ್ಲಿ ಇದೊಂದು ಸಂಧಿಕಾಲ. ಈಗ ಎಲ್ಲ ಪಕ್ಷ, ಪ್ರತಿಪಕ್ಷಗಳಲ್ಲಿಯೂ ತಾಳ್ಮೆ, ಸಹನೆ, ಸೌಹಾರ್ದತೆ, ಪರಸ್ಪರ ವಿಶ್ವಾಸ, ದೂರದೃಷ್ಟಿ ಅಗತ್ಯ. ಒಂದು ಪಕ್ಷ ಮತ್ತೊಂದು ಪಕ್ಷವನ್ನು ಕೆರಳಿಸುವ ಭಾವಾತಿರೇಕ ಪ್ರದರ್ಶನಕ್ಕೆ ಎಡೆಗೊಡಬಾರದು. ಎಲ್ಲರೂ ನಿಷ್ಠೆಯಿಂದ ದೃಢತೆಯಿಂದ, ಪ್ರತಿಜ್ಞಾಬದ್ಧರಾಗಿ ನಿಂತಲ್ಲಿ ಕರ್ನಾಟಕ ಪ್ರಾಂತ್ಯ ನಿರ್ಮಾಣ ನಾಳಿನ ಕನಸಾಗುಳಿಯದೆ ಇಂದಿನ ನನಸಾಗುವುದರಲ್ಲಿ ಸಂದೇಹವಿಲ್ಲ ಎಂದು ದೃಢಪಡಿಸಿದರು. (ಪ್ರಬುದ್ಧ ಕರ್ನಾಟಕ, ಸಂಪುಟ 35, ಸಂಚಿಕೆ 1, 1953, ಮೈಸೂರು, ಪು.123).
ದಾವಣೆಗೆರೆಯಲ್ಲಿ ಸ್ಥಾಪಿತವಾದ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ (ಕೆಲವರು ‘ಅಖಂಡ’ದ ಬದಲಿಗೆ ಅಖಿಲ ಎಂದು ಉಲ್ಲೇಖಿಸಿದ್ದಾರೆ) ಮೊದಲ ಅಧ್ಯಕ್ಷರಾಗಿ ಕೆ.ಆರ್.ಕಾರಂತರೂ ಕಾರ್ಯದರ್ಶಿಗಳಾಗಿ ಬಿ.ವಿ.ಕಕ್ಕಿಲ್ಲಾಯರೂ ಆಯ್ಕೆಯಾದರು. ಶಾಂತವೇರಿ ಗೋಪಾಲಗೌಡರು ಉಪಾಧ್ಯಕ್ಷರಲ್ಲೊಬ್ಬರಾಗಿ ಆಯ್ಕೆಯಾದರು. ಅಕರಾನಿ ಪರಿಷತ್ತಿನ ಮೊದಲ ಅಧಿವೇಶನ ದಾವಣಗೆರೆಯಲ್ಲಿ ನಡೆಯುವುದಕ್ಕೆ ಒಂದು ವಾರ ಮೊದಲು, 1953ನೆಯ ಮೇ 20ರಂದು ಲೋಕಸಭೆಯಲ್ಲಿ ಬಳ್ಳಾರಿ ತಾಲ್ಲೂಕಿನ ಸಮಸ್ಯೆಯನ್ನು ಕುರಿತು ಎಲ್.ಎಸ್.ಮಿಶ್ರಾ ಅವರು ಸಲ್ಲಿಸಿದ್ದ ವರದಿಯು ಸ್ವೀಕೃತವಾಗಿತ್ತು. ಬಳ್ಳಾರಿ ತಾಲ್ಲೂಕು ಮೈಸೂರು ರಾಜ್ಯಕ್ಕೆ ಸೇರಬೇಕೆಂಬ ಮಿಶ್ರಾ ಅವರ ಸಲಹೆ ಸ್ವೀಕೃತವಾಗಿ, ಆ ಸಮಸ್ಯೆ ಬಗೆಹರಿದಿತ್ತು. ಕರ್ನಾಟಕದ ಎಲ್ಲೆಡೆ ಏಕೀಕರಣದ ಬಗೆಗೆ ಜಾಗೃತಿ ಮೂಡಿತ್ತು. 1953ನೆಯ ಜುಲೈ 26ರಂದು ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲದಲ್ಲಿ ಕನ್ನಡಿಗರ ಸಮ್ಮೇಳನ ನಡೆಯಿತು. ಆ ಮೊದಲು 1949ರಲ್ಲೂ ಒಮ್ಮೆ ಅಲ್ಲೇ ಕನ್ನಡಿಗರ ಸಮ್ಮೇಳನ ನಡೆದಿತ್ತು. ಬಿ.ಶಿವಮೂರ್ತಿಶಾಸ್ತ್ರಿಗಳು ಮತ್ತು ಸಿದ್ವನಹಳ್ಳಿ ಕೃಷ್ಣಶರ್ಮರು ಆಗ ಕೊಳ್ಳೇಗಾಲ ತಾಲ್ಲೂಕು, ತಾಳವಾಡಿ ಪಿರ್ಕಾ ಮತ್ತು ಬರಗೂರು ಅರಣ್ಯಭಾಗಗಳು ಮೈಸೂರಿಗೆ ಸೇರಬೇಕೆಂದು ಒತ್ತಾಯಿಸಿದ್ದರು. 1953ನೆಯ ಜುಲೈ 26ರಂದು ನಡೆದ ಸಮ್ಮೇಳನದ ಸ್ವಾಗತಾಧ್ಯಕ್ಷ ರಾಗಿದ್ದ ಶಾಸನಸಭಾ ಸದಸ್ಯ ಎಸ್.ಸಿ. ವಿರೂಪಾಕ್ಷಯ್ಯನವರು ತಲಕಾಡು ಗಂಗರ ಕಾಲದಿಂದ ಟಿಪ್ಪುವಿನ ಪತನದವರೆಗೆ ಕರ್ನಾಟಕದ ಭಾಗವೇ ಆಗಿದ್ದ ಕೊಳ್ಳೇಗಾಲ ತಾಲ್ಲೂಕು, ತಾಳವಾಡಿ ಫಿರ್ಕಾ ಮತ್ತು ಬರಗೂರು ಅರಣ್ಯ ಭಾಗಗಳು ಕರ್ನಾಟಕಕ್ಕೆ ಸೇರಬೇಕೆಂದು ಅಂಕಿ ಅಂಶಗಳ ಸಹಿತ ಮಂಡಿಸಿದರು. ಆ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷತೆ ವಹಿಸಿದ್ದವರು ಬೆಂಗಳೂರು ನಗರದ ಮಾಜಿ ಮೆಯರ್ ಆರ್.ಅನಂತರಾಮ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬಿ.ಶಿವಮೂರ್ತಿ ಶಾಸ್ತ್ರಿ ಮುಂತಾದ ಗಣ್ಯರು ಭಾಷಣಕಾರರಾಗಿ ಆಗಮಿಸಿದ್ದರು.
ಮಿಶ್ರಾ ವರದಿ ಸ್ವೀಕಾರ
1953ನೆಯ ಮೇ 20ರಂದು ಎಲ್.ಎಸ್.ಮಿಶ್ರಾ ಅವರ ವರದಿಯನ್ನು ಲೋಕಸಭೆಯು ಸ್ವೀಕರಿದ ವಾರ್ತೆಯನ್ನು ಅದೇ ದಿನ ರಾತ್ರಿ 9 ಗಂಟೆಗೆ ಆಕಾಶವಾಣಿಯು ಪ್ರಸಾರ ಮಾಡಿತು. ಅದನ್ನು ಕೇಳಿದ ಬಳ್ಳಾರಿಯ ಕನ್ನಡಿಗರು ಸಂತೋಷದಿಂದ ಹೂವಿನ ಮತಾಪುಗಳನ್ನು ಹಚ್ಚಿ ಸಂಭ್ರಮಪಟ್ಟರು. ಆದರೆ ಗಲಭೆಯಾಗಬಹುದೆಂಬ ಕಾರಣದಿಂದ ಹರ್ಷೋದ್ಗಾರಗಳಿಗೆ ಪೊಲೀಸರು ತಡೆಯೊಡ್ಡಿದರು. 22ನೆಯ ತಾರೀಕಿನಿಂದ ಬಳ್ಳಾರಿಗೆ ಧಾವಿಸಿದ ತೆಲುಗು ಭಾಷೆಯ ಕೆಲವು ನಾಯಕರು ಪ್ರಚೋದನಾತ್ಮಕ ಭಾಷಣಗಳನ್ನು ಮಾಡತೊಡಗಿದರು. ಕಾಮಿರೆಡ್ಡಿ ಎಂಬುವವರು ಬಳ್ಳಾರಿಯ ಸಾಂಬಮೂರ್ತಿ ಮೈದಾನದಲ್ಲಿ ಮಿಶ್ರಾ ವರದಿಯ ತೀರ್ಪನ್ನು ವಿರೋಧಿಸಿ ಆಮರಣಾಂತ ಉಪವಾಸವನ್ನು ಆರಂಭಿಸಿದರು. ವರದಿಯನ್ನೊಪ್ಪಿದ ಆಂಧ್ರದ ನಾಯಕರನ್ನೂ ಟೀಕಿಸಿದರು. ತಮ್ಮ ಉಪವಾಸ ಸತ್ಯಾಗ್ರಹದಿಂದ ಯಾವ ಪ್ರಯೋಜನವೂ ಆಗದೆಂದು ಮನವರಿಕೆಯಾದ ನಂತರ ಕಾಮಿರೆಡ್ಡಿ ಅವರು 51ನೆಯ ದಿನ ತಮ್ಮ ಉಪವಾಸವನ್ನು ಮುಕ್ತಾಯಗೊಳಿಸಿದರು.
1953ನೆಯ ಆಗಸ್ಟ್ 13ರಂದು ಅಂಧ್ರ ಪ್ರಾಂತ್ಯ ಮಸೂದೆಯು ಲೋಕಸಭೆಯಲ್ಲಿ ಪ್ರಸ್ತಾಪಿತವಾಯಿತು. ಬಳ್ಳಾರಿಯ ಪ್ರಶ್ನೆಯ ಬಗೆಹರಿದಿದೆಯೆಂದು ಪ್ರಧಾನಿ ನೆಹರೂ ಅವರು ಲೋಕಸಭೆಯಲ್ಲಿ ಸ್ಪಷ್ಟಪಡಿಸಿದರು. ಮಸೂದೆಯ ಮೇಲೆ ಚರ್ಚೆಯನ್ನು ಆರಂಭಿಸಲು ಗೃಹಮಂತ್ರಿ ಕೆ.ಎನ್.ಕಾಟ್ಜೂ ಅವಕಾಶ ಮಾಡಿದರು. ಸ್ವೀಕೃತವಾಗಿರುವ ವಾಂಛೂ ಮತ್ತು ಮಿಶ್ರಾ ಅವರ ವರದಿಗಳನ್ನು ಪ್ರಸ್ತಾಪಿಸಿದ ಕಾಟ್ಜೂ ಅವರು ಬಳ್ಳಾರಿ ತಾಲ್ಲೂಕಿನ ಸಮಸ್ಯೆಯೂ ಬಗೆಹರಿದಿದೆ ಎಂಬುದನ್ನು ಸ್ಪಷ್ಟಪಡಿಸಿದರು.
ಮೈಸೂರಿನೊಡನೆ ಬಳ್ಳಾರಿ ವಿಲೀನ
 ಇಂತಹ ಬೇಡಿಕೆ, ಪ್ರತಿಭಟನೆ, ಬಂಧನ ಇತ್ಯಾದಿ ಗೊಂದಲದ ಸನ್ನಿವೇಶದಲ್ಲಿ ಕರ್ನಾಟಕ ಏಕೀಕರಣದ ಮೊದಲ ಹಂತವಾಗಿ ಬಳ್ಳಾರಿ ಜಿಲ್ಲೆಯ ಏಳು ತಾಲ್ಲೂಕುಗಳು ಮೈಸೂರು ರಾಜ್ಯದೊಂದಿಗೆ ವಿಲೀನಗೊಂಡು, ಏಕೀಕರಣ ಪ್ರಕ್ರಿಯೆ ಆರಂಭವಾಯಿತು. 1953ನೆಯ ಅಕ್ಟೋಬರ್ 1ರಂದು 1953ನೆಯ ಸೆಪ್ಟೆಂಬರ್ 30ರ ರಾತ್ರಿ 12 ಘಂಟೆ ಆದಾಗ ಬಳ್ಳಾರಿ ನಗರದ ಕೋಟೆಯ ಮೇಲೆ 21 ತೋಪುಗಳನ್ನು ಹಾರಿಸಿ, ಮಂಗಳವಾದ್ಯಗಳ ಮೊಳಗಿನೊಂದಿಗೆ ಬಳ್ಳಾರಿ ಜಿಲ್ಲೆಯು ಮೈಸೂರು ರಾಜ್ಯದೊಂದಿಗೆ ವಿಲೀನಗೊಂಡಿತು. ಕರ್ನಾಟಕದ ಎಲ್ಲ ಪತ್ರಿಕೆಗಳೂ 1953ನೆಯ ಅಕ್ಟೋಬರ್ 1ರಂದು ವಿಶೇಷ ಸಂಚಿಕೆಗಳನ್ನು ಪ್ರಕಟಿಸಿ ಬಳ್ಳಾರಿ ಜಿಲ್ಲೆಯ ಕನ್ನಡಿಗರನ್ನು ಮೈಸೂರು ರಾಜ್ಯಕ್ಕೆ ಆದರದಿಂದ ಸ್ವಾಗತಿಸಿದವು. ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆ.ಹನುಮಂತಯ್ಯ ನವರು ತಮ್ಮ ವಿಶೇಷ ಸಂದೇಶದಲ್ಲಿ ಬಳ್ಳಾರಿ ಜಿಲ್ಲೆಯ ಕನ್ನಡಿಗರನ್ನು ತುಂಬು ಪ್ರೀತಿಯಿಂದ ಸ್ವಾಗತಿಸಿದರು. ಒಂದೇ ಭಾಷೆಯ ಮತ್ತು ಸಂಸ್ಕೃತಿಯ ಜನ ಬಹುವರ್ಷಗಳ ನಂತರ ಒಂದಾದ ಸಂದರ್ಭದಲ್ಲಿ ಕೋ.ಚೆನ್ನಬಸಪ್ಪ, ಅ.ನ.ಕೃ., ತಿ.ತಾ.ಶರ್ಮ, ತೊಗರಿ ಸರ್ವಮಂಗಳಮ್ಮ ಮುಂತಾದ ಗಣ್ಯರು ವಿಶೇಷ ಲೇಖನಗಳ ಮೂಲಕ ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿರಿಮೆ, ಗರಿಮೆಗಳನ್ನು ಕನ್ನಡಿಗರಿಗೆ ಪರಿಚಯಿಸಿದರು. ಬೆಂಗಳೂರಿನ ಪೂರ್ಣಿಮಾ ಅಡ್ವರ್ಟೈಜಿಂಗ್ ಸಂಸ್ಥೆಯು ಬಳ್ಳಾರಿ ವಿಲೀನಗೊಂಡ ಸಂದರ್ಭಕ್ಕೆ ವೆಲ್ಕಂ ಬಳ್ಳಾರಿ ಎಂಬ ಸ್ಮರಣ ಸಂಚಿಕೆಯನ್ನು ಪ್ರಕಟಿಸಿತು. ಅದರ ಮೂಲಕ ಮೈಸೂರಿನ ಮಹಾರಾಜರು, ಮುಖ್ಯಮಂತ್ರಿ ಕೆ.ಹನುಮಂತಯ್ಯ, ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹೆಚ್. ಕೆ.ವೀರಣ್ಣಗೌಡ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಸ್.ನಿಜಲಿಂಗಪ್ಪ, ಮೈಸೂರು ಛೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಎಂ.ವಿ.ಕೃಷ್ಣಮೂರ್ತಿ ಅವರುಗಳಲ್ಲದೆ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಕರ್ನಾಟಕದ ಡಿ.ಪಿ.ಕರಮರ್ಕರ್, ಎಂ.ವಿ.ಕೃಷ್ಣಪ್ಪ ಮುಂತಾದವರು ಬಳ್ಳಾರಿ ಜಿಲ್ಲೆಯು ಮೈಸೂರಿಗೆ ಸೇರಿದ್ದನ್ನು ಸ್ವಾಗತಿಸಿದ ಸಂದೇಶಗಳು ಪ್ರಕಟವಾದವು. ರಾಷ್ಟ್ರಕವಿ ಎಂ.ಗೋವಿಂದ ಪೈ, ಅ.ನ.ಕೃ, ಪಿ.ಬಿ.ದೇಸಾಯಿ, ಎಂ.ಜಿ.ವೆಂಕಟೇಶಯ್ಯ, ಡಾ.ಎಸ್.ಶ್ರೀಕಂಠಶಾಸ್ತ್ರಿ, ಪಿ.ರಮಾನಂದ್, ಕೋ.ಚನ್ನಬಸಪ್ಪ, ಸಿ.ವ.ಚನ್ನವೇಶ್ವರ, ಬೀಚಿ, ಪಿ.ಎಲ್.ಸ್ವಾಮುಯೆಲ್, ವೈ.ಮಹಾಬಲೇಶ್ವರಪ್ಪ, ಎಂ.ನರಸಿಂಹಯ್ಯ, ಡಾ.ಆರ್.ನಾಗನಗೌಡ ಮುಂತಾದವರು ಆ ಸ್ಮರಣ ಸಂಚಿಕೆಗೆ ಅತ್ಯಮೂಲ್ಯ ಲೇಖನಗಳ ಕೊಡುಗೆ ನೀಡಿ ಬಳ್ಳಾರಿ ಜಿಲ್ಲೆಯ ಸರ್ವ ತೋಮುಖ ಹಿರಿಮೆ ಗರಿಮೆಗಳನ್ನು ದಾಖಲಿಸಿದರು. ಅದೇ ಸಂಚಿಕೆಯಲ್ಲಿ ಬಳ್ಳಾರಿ ಜಿಲ್ಲೆಯು ಮೈಸೂರಿಗೆ ಸೇರಲು ಕಾರಣವಾದ ಮಿಶ್ರಾ ಅವರ ವರದಿಯನ್ನು ಕೋ.ಚೆನ್ನಬಸಪ್ಪನವರು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದರು.
ರೈತ ಪತ್ರಿಕೆಯ 1953ನೆಯ ಜನವರಿ2ರ ವಿಶೇಷ ಸಂಚಿಕೆಯು ಬಳ್ಳಾರಿಯಲ್ಲಿ ಪ್ರಚಂಡ ವಿಲಯನ ಮಹೋತ್ಸವವೆಂದು, ಆ ಸಂದರ್ಭವನ್ನು ಹೀಗೆ ದಾಖಲಿಸಿದೆ.
1953ನೆಯ ಸೆಪ್ಟೆಂಬರ್ 30ನೆಯ ದಿನರಾತ್ರಿ 12 ಗಂಟೆ 1 ನಿಮಿಷಕ್ಕೆ ಬಳ್ಳಾರಿ ಮೈಸೂರಿಗೆ ಸೇರಿದುದರ ಘನ ಸಮಯದ ಗುರುತಾಗಿ 21 ಗುಂಡುಗಳನ್ನು ಹಾರಿಸಿದರು. ವಿಜಯ ಮಂದಿರದ ಐದನೇ ಅಂತಸ್ತಿನ ಮೇಲೆ ನಗಾರಿ ನೌಬತ್ತು ಕಹಳೆಗಳನ್ನು ಹಿಡಿಯಲಾಯಿತು. ಬಳ್ಳಾರಿ ಗುಡ್ಡದ ಮೇಲೆ ದೊಡ್ಡ ದೊಡ್ಡ ಕಕ್ಕಡ ದೀಪಗಳನ್ನು ಹಚ್ಚಿ, ಅಲ್ಲಿಂದಲೂ ಇಪ್ಪತ್ತೊಂದು ಔಟುಗಳನ್ನು ಹಾರಿಸಿದರು. ಅಲ್ಲಿಂದ ಕನ್ನಡಿಗರ ಜಯಸೂಚಕವಾದ ಬೆಲೂನುಗಳನ್ನು ಹಾರಿಸಲಾಯಿತು. ಮಧ್ಯರಾತ್ರಿ ಯಿಂದ ಹಿಡಿದು ಬೆಳಗಾದವರೆಗೆ ಬಳ್ಳಾರಿ ನಗರ ಉತ್ಸಾಹದ ಕಡಲಿನಲ್ಲಿ ಮುಳುಗಿದ್ದಿತು. ಕನ್ನಡಿಗರ ಆನಂದೋತ್ಸಾಹಗಳನ್ನು ವರ್ಣಿಸುವುದು ಹೇಗೆ ಸಾಧ್ಯ? ಸಾವಿರಾರು ಬಡ ಜನರಿಗೆ ಅನ್ನ ಹಾಕಲಾಯಿತು.
1953ನೆಯ ಅಕ್ಟೋಬರ್ 1ರಂದು ಬೆಳಗ್ಗೆ ಬಳ್ಳಾರಿಯಲ್ಲಿ ನಡೆದ ಸಂತಸದ, ಸಂಭ್ರಮದ ಕಾರ್ಯಕ್ರಮವನ್ನು ರೈತ ಪತ್ರಿಕೆ ಹೀಗೆ ವರದಿ ಮಾಡಿದೆ.
ಬಳ್ಳಾರಿ ನಗರ ಸುಪ್ರಭಾತದ ಮಂಗಳ ವಾದ್ಯಗಳೊಡನೆ ಕಣ್ತೆರೆಯಿತು. ಎಲ್ಲ ದೇವಾಲಯ, ಚರ್ಚು, ಮಸೀದಿಗಳಲ್ಲಿ ಪೂಜೆ, ಪ್ರಾರ್ಥನೆ, ನಮಾಜುಗಳ ಮಂಗಳ ವಾದ್ಯದಿಂದ ಪ್ರತಿಧ್ವನಿತವಾಗುತ್ತಿದ್ದವು. ಹಿರಿಯರು, ಕಿರಿಯರು, ಹೆಂಗಸರು, ಮಕ್ಕಳು ಹೊಸ ಉಡುಪುಗಳಿಂದ ಶೋಭಿತರಾಗಿ, ಗಂಡಭೇರುಂಡ ಧ್ವಜವನ್ನು ಮನೆ ಮನೆಗಳ ಮೇಲೆ ಹಾರಿಸಿ ಜೈ ಕರ್ನಾಟಕ ಮಾತೆ ಎಂದು ಮಾಡುತ್ತಿದ್ದು ಘೋಷ ಎಂಥವರನ್ನು ಹರ್ಷಪುಲಕಿತರ ನ್ನಾಗಿ ಮಾಡಿತು. ಅಲ್ಲಲ್ಲಿ ಹಾರಿಸುತ್ತಿದ್ದ ಔಟು, ಪಟಾಕಿಗಳು ಕನ್ನಡ ಜಯಭೇರಿಯನ್ನು ದಿಂಗತಕ್ಕೆ ಸಾರುತ್ತಿದ್ದಿತು. ಬೆಳಗಿನ ಜಾವ ಎರಡು ಮೂರು ಸಾವಿರ ವಿದ್ಯಾರ್ಥಿಗಳ ಹಾಗೂ ಸ್ವಯಂ ಸೇವಕ ದಳದವರ ಪ್ರಭಾತಫೇರಿ ನಡೆಯಿತು. ಊರಿನಲ್ಲೆಲ್ಲಾ ಕನ್ನಡ ಬಾಲಕ ವೃಂದದ ಜಯಗೋಷ ತುಂಬಿತ್ತು. ಕರ್ನಾಟಕ ಮಾತಕೀ ಜೈ, ಭುವನೇಶ್ವರಿ ದೇವೀಕಿ ಜೈ, ಮೈಸೂರು ಸರಕಾರ ಜಿಂದಾಬಾದ್ ಎಂಬ ಘೋಷಣೆಗಳ ಮೊಳಗು ಓತಪ್ರೋಕೇಳಿಸುತ್ತಿತ್ತು. ಸಾಂಬಮೂರ್ತಿ ಮೈದಾನದಲ್ಲಿ ಧ್ವಜವಂದನೆಯೊಡನೆ ಬೆಳಗಿನ ಕಾರ್ಯಕ್ರಮ ಮುಕ್ತಾಯ ವಾಯಿತು.
1953ನೆಯ ಅಕ್ಟೋಬರ್ 2ರಂದು ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆ. ಹನುಮಂತಯ್ಯ ಅವರು ಬಳ್ಳಾರಿಯ ಬಿ.ಡಿ.ಎ.ಮೈದಾನದಲ್ಲಿ ನಡೆದ ಬಳ್ಳಾರಿ ಮೈಸೂರು ವಿಲೀನ ಸಮಾರಂಭದಲ್ಲಿ ಭಾಗವಹಿಸಿ ಕರ್ನಾಟಕ ಏಕೀಕರಣದಲ್ಲಿ ಇದು ಮೊದಲ ಹೆಜ್ಜೆ ಎಂದು ತಿಳಿಸುತ್ತಾ ನನ್ನ ಮನಸ್ಸನ್ನು ದೇಹವನ್ನು ನಿಮ್ಮ ಸೇವೆಗೆ ಮುಡಿಪಾಗಿ ಇಡುತ್ತೇನೆ ಎಂದು ಬಳ್ಳಾರಿಯ ಜನತೆಗೆ ಆಶ್ವಾಸನೆ ನೀಡಿದರು.
ಸಮಾರಂಭದಲ್ಲಿ ಎಚ್.ಸಿದ್ಧವೀರಪ್ಪ, ಟಿ.ಚನ್ನಯ್ಯ, ಜೋಳದರಾಶಿ ದೊಡ್ಡನಗೌಡ, ಬಿ.ಶಿವಮೂರ್ತಿಶಾಸ್ತ್ರಿ, ಟೇಕೂರು ಸುಬ್ರಹ್ಮಣ್ಯಂ, ಡಾ.ನಾಗನಗೌಡ ಮುಂತಾದ ಗಣ್ಯರು ಭಾಗವಹಿಸಿದ್ದರು. ಆಲೂರು, ರಾಯದುರ್ಗ, ಆದವಾನಿ ತಾಲ್ಲೂಕುಗಳ ವಿನಾ ಉಳಿದ ಬಳ್ಳಾರಿ ಜಿಲ್ಲೆಯಲ್ಲಿ ಇಡಿಯಾಗಿ ವಿಜಯದ ದಿನವನ್ನು ಹಬ್ಬದಂತೆ ಆಚರಿಸಲಾಯಿತು.
ಕರ್ನಾಟಕದ ಉತ್ತರದ ಗಡಿ
 ಬೀದರ್ ನಗರವನ್ನು ಸಂಪೂರ್ಣವಾಗಿ ಆಂಧ್ರಪ್ರದೇಶಕ್ಕೆ ಸೇರಿಸಬೇಕೆಂಬ ಕುತಂತ್ರವನ್ನು ಬೀದರಿನ ಕನ್ನಡಿಗರು ಸಂಪೂರ್ಣವಾಗಿ ಭಗ್ನಗೊಳಿಸಿದರು. ನೆರೆಯ ಮಹಾರಾಷ್ಟ್ರಕ್ಕೆ ಸೇರಿದಂತಹ ಸೊಲ್ಲಾಪುರ, ಜತ್ ಪ್ರದೇಶಗಳನ್ನು ಕರ್ನಾಟಕದಲ್ಲಿ ಮರಳಿ ಪಡೆಯಲು ಬೀದರ್ನ ಜನರು ಹೋರಾಟಕ್ಕಿಳಿದರು. ಇದೇ ಸಂದರ್ಭದಲ್ಲಿ ಬೀದರ್ ನಗರದಲ್ಲಿ ಕಲ್ಬುರ್ಗಿಯ ಅಸಿಸ್ಟೆಂಟ್ ಕಮೀಷನರ್ ಆಗಿದ್ದಂತಹ ಸಿದ್ಧಯ್ಯ ಪುರಾಣಿಕರ ಪ್ರಯತ್ನದ ಫಲವಾಗಿ ಕನ್ನಡ ಸಾಹಿತ್ಯ ಸಮ್ಮೇಳನವು ಉತ್ತಂಗಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಅದೇ ಕಾಲಕ್ಕೆ ಎಸ್.ನಿಜಲಿಂಗಪ್ಪನವರ ಮುಖಂಡತ್ವದಲ್ಲಿ ಕರ್ನಾಟಕ ಏಕೀಕರಣ ಸಮ್ಮೇಳನವೂ ಸಹ ನಡೆಯಿತು. ಇಲ್ಲಿ ಏಕೀಕರಣಗೊಂಡ ನಂತರ ಕರ್ನಾಟಕದ ಹೊರಗುಳಿದ ಕನ್ನಡದ ಪ್ರದೇಶವನ್ನು ಪಡೆಯುವ ತೀರ್ಮಾನಕ್ಕೆ ಬರಲಾಯಿತು.
1956ರ ರಾಜ್ಯ ಪುನರ್ವಿಂಗಡನಾ ಆಯೋಗದ ಶಿಫಾರಸ್ಸಿನಂತೆ ಭಾರತದ ಭೂಪಟದಲ್ಲಿ ಅನೇಕ ಗಡಿ ಹೊಂದಾಣಿಕೆಗಳು ಭಾಷಾವಾರು ಪ್ರಾಂತಗಳ ರಚನೆಯ ಮೂಲಕ ಇತ್ಯರ್ಥವಾದವೆಂದುಕೊಂಡವು. ಅದರಂತೆ ನ್ಯಾಯ-ಅನ್ಯಾಯಗಳನ್ನು ಪರಿಗಣಿಸದಂತೆ ಭಾರತದ ಅನೇಕ ರಾಜ್ಯಗಳು ಪುನರ್ವಿಂಗಡನಾ ಆಯೋಗದ ಶಿಫಾರಸ್ಸುಗಳನ್ನು ಮನ್ನಿಸಿ ಅಂದು ಜಾರಿಗೆ ತಂದ ಕಾನೂನಿಗೆ ತಲೆಬಾಗಿದವು. ರಾಷ್ಟ್ರೀಯ ಪುನರ್ವಿಂಗಡನಾ ಆಯೋಗದ ಶಿಫಾರಸ್ಸಿನಿಂದಾಗಿ ಕರ್ನಾಟಕಕ್ಕೆ ಆದ ನಷ್ಟ ತುಂಬದಿದ್ದರೂ ಅದನ್ನು ಮೊದಲು ಸ್ವಾಗತಿಸಿದ್ದು ಕರ್ನಾಟಕವೇ ಎಂಬುದು ಇಲ್ಲಿ ಸ್ಮರಣೀಯವಾಗಿದೆ.
ಆದರೆ ನೆರೆಯ ಮಹಾರಾಷ್ಟ್ರ ಎಂದಿನಂತೆ ದುರಾಗ್ರಹದ ಬೇಡಿಕೆಗಳನ್ನು ಮುಂದಿಟ್ಟಿತು. ಸಂವಿಧಾನಾತ್ಮಕ ಘಟನೆಯನ್ನು ಅವಮಾನಗೊಳಿಸಿತು. ಪ್ರಪಂಚದಲ್ಲಿಯೇ ಬೃಹತ್ ಪ್ರಜಾಪ್ರಭುತ್ವದ ಉನ್ನತ ಮಟ್ಟದ ಸಂಕೇತವಾದ ಲೋಕಸಭೆಯ ಅಂತಿಮ ತೀರ್ಮಾನವನ್ನು ಧಿಕ್ಕರಿಸಿತು. ಇಷ್ಟೇ ಅಲ್ಲದೆ ತನ್ನ ಕಿಡಿಗೇಡಿತನದ ಮೂಲಕ ಕರ್ನಾಟಕದ ಕೆಲ ಭಾಗಗಳನ್ನು ಇಂದಿಗೂ ಕಬಳಿಸಲು ಕಂಕಣತೊಟ್ಟು ನಿಂತಿರುವುದು ನಾಡಿನ ಸ್ವಾಭಿಮಾನಿಗಳಿಗೆ ದುಃಖದ ಜೊತೆಗೆ ಸ್ವಾಭಿಮಾನ ತರುವ ಸಂಗತಿಯಾಗಿದೆ.
ರಾಷ್ಟ್ರೀಯ ಪುನಾರಚನಾ ಆಯೋಗದ ವಿರುದ್ಧ ಮಹಾರಾಷ್ಟ್ರೀಯರ ಪ್ರತಿಭಟನೆ ಮುಗಿಲು ಮುಟ್ಟುತ್ತಿದ್ದಂತೆ ಮೊದಲು ಸುಮ್ಮನಿದ್ದಂತಹ ಕರ್ನಾಟಕ ತನ್ನ ನೆಲದ ಉಳಿವಿಗಾಗಿ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆಯನ್ನು ನಡೆಸಲಾರಂಭಿಸಿತು. ಇದರಿಂದಾಗಿ ಮಹಾ ರಾಷ್ಟ್ರೀಯರು 1966ರಲ್ಲಿ ಮುಂಬೈಯ ಮುಖ್ಯಮಂತ್ರಿಗಳ ಸರಕಾರಿ ನಿವೇಶನದ ಆವರಣ ದಲ್ಲಿ ಆಮರಣಾಂತರ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಕಾಂಗ್ರೆಸ್ಸೇತರರೊಬ್ಬರನ್ನು ಕೂರಿಸುವ ನಾಟಕ ಹೂಡಿತು. ಮಹಾರಾಷ್ಟ್ರೀಯರ ಈ ಆಮರಣಾಂತರ ಉಪವಾಸಕ್ಕೆ ಹೆದರಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಅಲ್ಲಿಗೆ ಬೇಟಿ ನೀಡುವಂತೆಯೂ ಮಾಡಿತು. ಅಂದು ಪ್ರಧಾನಿಯವರು ಮಹಾರಾಷ್ಟ್ರೀಯರಿಗೆ ನೀಡಿದ ಆಶ್ವಾಸನೆ ಎಂದರೆ ಗಡಿ ಸಮಸ್ಯೆಯನ್ನು ಬಗೆಹರಿಸಲು ಏಕಸದಸ್ಯ ಆಯೋಗವೊಂದನ್ನು ರಚಿಸಲಾಗುವುದೆಂದು. ಪ್ರಧಾನಿಯವರ ನಿಲುವಿಗೆ ಅಂದು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಂತಹ ವಿ.ಪಿ.ನಾಯಕ್ ಸಂಪೂರ್ಣ ಒಪ್ಪಿಗೆ ನೀಡಿದರು. ಅಷ್ಟೇ ಅಲ್ಲದೇ ಆಯೋಗವು ನೀಡುವ ತೀರ್ಮಾನಕ್ಕೆ ಸಂಪೂರ್ಣ ಬದ್ಧರಿರುವುದಾಗಿಯೂ ಹೇಳಿದರು. ಕರ್ನಾಟಕವೂ ಸಹ ಈ ತೀರ್ಮಾನಕ್ಕೆ ಒಪ್ಪಿಕೊಂಡಿತು. ಈ ಎರಡು ರಾಜ್ಯಗಳ ಒಪ್ಪಿಗೆಯ ಜೊತೆಗೆ ಕೇರಳ, ಆಂಧ್ರ, ತಮಿಳುನಾಡಿನ ಗಡಿ ಸಮಸ್ಯೆಗೆ ಸೂಕ್ತ ಉತ್ತರ ದೊರಕಿಸಲು ರಚನೆಗೊಂಡಂತಹ ಏಕಸದಸ್ಯ ಆಯೋಗವೇ ಮೆಹರ್ ಚಂದ್ ಮಹಾಜನ್ (ಮಹಾಜನ್ ಆಯೋಗ) ಆಯೋಗ. ಇದು 1966ನೆಯ ಅಕ್ಟೋಬರ್ 25ರಂದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಬೆಳಗಾವಿ-ಕಾರವಾರಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸುವ ಔದಾರ್ಯವನ್ನು ಮಹಾಜನ್ ಅವರು ತೋರಬಹುದೆಂಬ ಆಸೆಯಿಂದ ಮಹಾರಾಷ್ಟ್ರದ ಪ್ರತಿಯೊಬ್ಬ ರಾಜಕೀಯ ಮುಖಂಡರೂ ಸಹ ಮಹಾಜನ್ ಅವರ ಮೇಲೆ ಪ್ರಭಾವವನ್ನು ಬೀರಲು ಪ್ರಯತ್ನಿಸಿದರು. ಇದೇ ವೇಳೆಗೆ ರಾಜ್ಯ ಪುನರ್ವಿಂಗಡನಾ ಆಯೋಗದ ವರದಿಗೆ ಅಸಂಗತವಾದ ರೀತಿಯಲ್ಲಿ ಕೆಲವು ಸಣ್ಣ-ಪುಟ್ಟ ಗಡಿ ಹೊಂದಾಣಿಕೆಗಳನ್ನು ಮಹಾಜನ್ ಆಯೋಗವು ಸೂಚಿಸಿತು. ಮಹಾಜನ್ ಅವರು ವರದಿಯನ್ನು ಸಿದ್ಧಪಡಿಸಲು ಸಂಬಂಧಪಟ್ಟ ಗಡಿ ಪ್ರದೇಶಗಳಲ್ಲಿ ಸಂಚರಿಸಿದಾಗ 8572 ಜನರಿಂದ ಸಂದರ್ಶನ ಪಡೆದು 3240 ಬೇಡಿಕೆಗಳನ್ನು ಸ್ವೀಕರಿಸಿದರು. ಅಂತಿಮವಾಗಿ ನಿರ್ಣಯಿಸಿದ ತಮ್ಮ ವರದಿಯ ಪ್ರತಿಯನ್ನು 1967ನೆಯ ಆಗಸ್ಟ್ 28ರಂದು ಕೇಂದ್ರ ಸರ್ಕಾರಕ್ಕೆ ಒಪ್ಪಿಸಿದರು. ಸುಮಾರು ಮೂರು ತಿಂಗಳುಗಳ ಕಾಲ ಮೂಲೆಯಲ್ಲಿಯೇ ಬಿದ್ದಿದ್ದಂತಹ ವರದಿಯು ಮಹಾರಾಷ್ಟ್ರೀಯರ ಒತ್ತಾಯದ ಮೇಲೆ 1967ನೇ ನವೆಂಬರ್ 4ರಂದು ಪ್ರಕಟವಾಯಿತು. ವರದಿಯಲ್ಲಿ ಕರ್ನಾಟಕಕ್ಕೆ ಅನೇಕ ಹಾನಿಗಳಾಗಿದ್ದರೂ ಸಹ ಕೊಟ್ಟ ಭಾಷೆಗೆ ತಪ್ಪಬಾರದೆಂಬ ಸದುದ್ದೇಶ ದಿಂದ ಕರ್ನಾಟಕವು ವರದಿಯನ್ನು ಸ್ವಾಗತಿಸಿತು. ಆದರೆ ನೆರೆಯ ಮಹಾರಾಷ್ಟ್ರವು ಮತ್ತೆ ಕಾಳಸರ್ಪದಂತೆ ಹೆಡೆಯೆತ್ತಿ ನಿಂತಿತ್ತು. ಮುಷ್ಕರ, ಪ್ರತಿಭಟನೆ, ಸಭೆ, ಮೆರವಣಿಗೆ, ಘೇರಾವೋ, ಗೂಂಡಾಗಿರಿ, ಅವಾಚ್ಯ ಘೋಷಣೆ ಹಾಗೂ ಅವಿವೇಕತನದ ಪ್ರದರ್ಶನಕ್ಕೆ ಅನುವು ಮಾಡಿ ಶಿವಸೇನೆಯನ್ನು ಎತ್ತಿ ಕಟ್ಟುವ ಮೂಲಕ ಕನ್ನಡಿಗರನ್ನು ಕನ್ನಡದ ನೆಲದಲ್ಲಿಯೇ ಚಿತ್ರಹಿಂಸೆಗೆ ಗುರಿಮಾಡಿತು. ಬೆಳಗಾವಿ-ಕಾರವಾರಗಳನ್ನು ಮಹಾರಾಷ್ಟ್ರಕ್ಕೆ ಸೇರಿಸದ ವರದಿಗೆ ಹಾಗೂ ವ್ಯಕ್ತಿಗೆ ಧಿಕ್ಕಾರ ಎಂದು ಸತ್ಯಕ್ಕೆ ಅಪ್ಪಟ ಚರಮಗೀತೆ ಹಾಡಿತು. ಇಷ್ಟೇ ಅಲ್ಲದೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕ ಸದಸ್ಯ ಆಯೋಗದ ತೀರ್ಪನ್ನೂ ಒಪ್ಪುವುದಲ್ಲದೆ ಕೇಂದ್ರ ಸರ್ಕಾರವೂ ಸಹ ಅದನ್ನು ಅನುಷ್ಠಾನಕ್ಕೆ ತರಬೇಕೆಂದು ಹೇಳಿಕೆ ನೀಡಿದ್ದರೂ, ಅವರೇ ಬೆಳಗಾವಿ ಮತ್ತು ಕಾರವಾರಗಳು ತಮಗೆ ದೊರೆಯಲಿಲ್ಲವೆಂಬ ಕಾರಣದಿಂದ ನಾಗಪುರದಲ್ಲಿ ನಡೆದ ಶಾಸನಸಭೆಯ ಉಭಯ ಅಧಿವೇಶನದಲ್ಲಿ ಮಹಾಜನ್ ಆಯೋಗದ ವರದಿಯನ್ನು ತಿರಸ್ಕರಿಸುವ ನಿರ್ಣಯವನ್ನು ಮಂಡಿಸಿದ್ದು ಅವರ ಹೊಣೆ ಗೇಡಿತನವಾಗಿತ್ತು ಎನ್ನಬಹುದು.
ಏಕ ಸದಸ್ಯ ಆಯೋಗದ ಮುಂದೆ ಕರ್ನಾಟಕವು ಮಹಾರಾಷ್ಟ್ರದಿಂದ 516 ಹಳ್ಳಿಗಳು ಬರಬೇಕೆಂದು ಬೇಡಿಕೆ ಸಲ್ಲಿಸಿತ್ತು. ಆದರೆ ಮಹಾರಾಷ್ಟ್ರದಿಂದ ಮಹಾರಾಷ್ಟ್ರೀಯರೇ ಸ್ವಯಂ ನಿರ್ಣಯದ ಆಧಾರದ ಮೇಲೆ 216 ಹಳ್ಳಿಗಳನ್ನು ಬಿಟ್ಟುಕೊಡಲು ಒಪ್ಪಿದ್ದರು. ಆದರೆ ಆಯೋಗದ ಶಿಫಾರಸ್ಸಿನ ಅನ್ವಯ 216 ಹಳ್ಳಿಗಳು ಮಾತ್ರ ಕರ್ನಾಟಕಕ್ಕೆ ಪುನರ್ವಿಲೀನ ಗೊಳ್ಳಲು ಶಿಫಾರಸ್ಸಾಗಿ, ಸೊಲ್ಲಾಪುರ ನಗರವನ್ನು ಒಳಗೊಂಡು 256 ಹಳ್ಳಿಗಳ ಪ್ರಶ್ನೆಯನ್ನು ಕೈ ಬಿಡಲಾಗಿರುವುದು ತಿಳಿದಿರುವ ವಿಷಯವೆ. ಪರಿಸ್ಥಿತಿಯು ಮೇಲಿನ ರೀತಿಯಲ್ಲಿದ್ದರೂ ಆಯೋಗವು ಶಿಫಾರಸ್ಸು ಮಾಡದೇ ಇರುವ ಕಾರಣ ಕರ್ನಾಟಕವು ಆ ಪ್ರಶ್ನೆಯನ್ನು ಎತ್ತಲಿಲ್ಲ. ಆದರೆ ಮಹಾರಾಷ್ಟ್ರವು ಕಾರವಾರ ನಗರ ಪೂರ್ಣ ಮತ್ತು 300 ಹಳ್ಳಿಗಳು, ಸೂಪಾ ಹಾಗೂ ಹಳಿಯಾಳ ಪ್ರದೇಶಗಳು ತಮಗೆ ಸೇರಬೇಕೆಂದು ಬೇಡಿಕೆ ಸಲ್ಲಿಸಿತು. ಭಾಷೆಯ ದೃಷ್ಟಿಯಿಂದ ಈ ಭಾಗದಲ್ಲಿ ಕೊಂಕಣಿ ಮಾತನಾಡುವವರಿದ್ದರೂ ಸಹ ಕೊಂಕಣಿ ಭಾಷೆಯನ್ನು ಮರಾಠಿ ಭಾಷೆಯ ಒಂದು ಉಪಭಾಷೆಯೆಂದು ಪರಿಗಣಿಸಿ ಆ ಭಾಗವನ್ನೆಲ್ಲಾ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮೊಂಡುವಾದವನ್ನು ಹೂಡಿತ್ತು. ಆದರೆ ಆಯೋಗವು ಕೊಂಕಣಿ ಭಾಷೆಯು ಮರಾಠಿ ಭಾಷೆಯ ಉಪಭಾಷೆಯಲ್ಲ ಅದೊಂದು ಸ್ವತಂತ್ರ ಭಾಷೆ ಎಂದು ನಿರ್ಣಯಿಸಿ ತ್ತಲ್ಲದೆ, ಜಾತಿವಾದಿತ್ವದ ಹಾಗೂ ಭಾಷಾ ದುರಭಿಮಾನದ ಪ್ರಶ್ನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿತು. ನಂತರ ಮಹಾರಾಷ್ಟ್ರವು ಕೇಳಿದಂತಹ 814 ಹಳ್ಳಿಗಳಲ್ಲಿ 513 ಹಳ್ಳಿಗಳ ಪ್ರಶ್ನೆ ಇತ್ಯರ್ಥವಾಗದೇ ಉಳಿದು ನಿಪ್ಪಾಣಿಯನ್ನೊಳಗೊಂಡ 262 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸುವ ಶಿಫಾರಸ್ಸು ಮಾಡಿತ್ತು.
ನಿಪ್ಪಾಣಿ ನಗರವು ಕರ್ನಾಟಕದ ಅತ್ಯಂತ ಹೆಚ್ಚಿನ ಆದಾಯವನ್ನು ತರುವ ನಗರಗಳ ಲ್ಲೊಂದಾಗಿದೆ. ನಿಪ್ಪಾಣಿ ಹಾಗೂ ಅದರ ಸುತ್ತ ಮುತ್ತಲಿನ ಪ್ರದೇಶವು ಅತ್ಯಂತ ಫಲವತ್ತಾದ ಭೂಮಿಯನ್ನೊಳಗೊಂಡಿದ್ದು ತಂಬಾಕು ಬೆಳೆಗೆ ಭಾರತದಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿ ಉತ್ಕೃಷ್ಟವಾಗಿ ಬೆಳೆಯುವ ಅರಿಶಿಣ, ತಂಬಾಕು, ಮೆಣಸಿನಕಾಯಿ, ಕಬ್ಬು ಕರ್ನಾಟಕದ ಯಾವ ಭಾಗಗಳಲ್ಲಿಯೂ ಬೆಳೆಯಲು ಸಾಧ್ಯವಾಗಿರುವುದಿಲ್ಲ. ಇದರಿಂದಾಗಿಯೇ ಮೇಲಿನ ಪದಾರ್ಥಗಳ ವಹಿವಾಟಿನಲ್ಲಿ ಇಂದಿಗೂ ಸಹ ನಿಪ್ಪಾಣಿ ನಗರವು ಭಾರತದಲ್ಲಿಯೇ ಒಂದು ಅತ್ಯಂತ ದೊಡ್ಡ ವ್ಯಾಪಾರಿ ಸ್ಥಳವೆಂದು ಹೆಸರು ಪಡೆದಿದೆ. ಈ ಭಾಗದಲ್ಲಿ ಆಯೋಗವು ಮಹಾರಾಷ್ಟ್ರಕ್ಕೆ ವರ್ಗಾಯಿಸುವಂತೆ ಸೂಚಿಸಿರುವ ನಾಗಪುರ ಮತ್ತು ಬೆಳಗಾವಿ ತಾಲ್ಲೂಕುಗಳ ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಹಾಗೂ ಕಬ್ಬನ್ನು ಬೆಳೆಯಲಾಗುತ್ತಿದೆ. ಆಯೋಗದ ಶಿಫಾರಸ್ಸಿನಂತೆ ಈ ಭಾಗಗಳನ್ನು ಮಹಾರಾಷ್ಟ್ರಕ್ಕೆ ಕೊಟ್ಟಿದ್ದೇ ಆದರೆ ಕರ್ನಾಟಕಕ್ಕೆ ತುಂಬ ಹಾನಿಯುಂಟಾಗುತ್ತದೆ ಎಂದು ವಿಷಾದದಿಂದಲೇ ಹೇಳಬೇಕಾಗಿದೆ. ಮಹಾಜನ್ ಅವರು ತಮ್ಮ ವರದಿಯಲ್ಲಿ ಈ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ವರ್ಗಾಹಿಸಲು ಶಿಫಾರಸ್ಸು ಮಾಡಿದ್ದಾರೆ.
ಇಂದು ನಾವು ಕರ್ನಾಟಕದ ಗಡಿ ಸಂಬಂಧಿತ ಚಳವಳಿಗೆ ಸಂಬಂಧಿಸಿದಂತೆ ಬರೆಯುವಾಗ ಪ್ರಮುಖವಾಗಿ ಎರಡು ಅಂಶಗಳನ್ನು ಗಮನಿಸಬೇಕಾಗುತ್ತದೆ. ಅವುಗಳೆಂದರೆ,
1. ಪ್ರಾಕೃತಿಕವಾಗಿ ಹಾಗೂ ಭಾವನಾತ್ಮಕವಾಗಿ ಕರ್ನಾಟಕದಲ್ಲಿಯೇ ಇರುವ, ಕೆಲವು ರಾಜಕಾರಣಿ ಗಳ ಸ್ವಾರ್ಥದಿಂದ ನೆರೆಯ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಚಳವಳಿ ನಡೆಸುತ್ತಿರುವ ಬೆಳಗಾವಿಯಂತಹ ಗಡಿ ಪ್ರದೇಶ.
2. ಶತಮಾನಗಳ ಇತಿಹಾಸವನ್ನು ತಿರುಗಿಸಿದರೆ ಅಂದಿನಿಂದಲೂ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದಂತಹ ಕಾಸರಗೋಡು ಕೇರಳಕ್ಕೆ ಸೇರಿಸಿರುವುದನ್ನು ವಿರೋಧಿಸಿ, ಕರ್ನಾಟಕಕ್ಕೆ ಸೇರಿಸಬೇಕೆಂದು ಹೋರಾಡುತ್ತಿರುವ ಕಾಸರಗೋಡು, ಆದವಾನಿ, ಆಲೂರು, ಮಡಕಶಿರಾ, ರಾಯದುರ್ಗಗಳಂಥ ಕನ್ನಡ ಗಡಿ ಪ್ರದೇಶಗಳಿಗೆ ಸಂಬಂಧಿಸಿದ ವಿಚಾರ.
ಮೇಲಿನ ವಿಚಾರದಿಂದ ತಿಳಿದುಬರುವುದು, ಇರುವುದನ್ನು ಉಳಿಸಿಕೊಳ್ಳುವ ಜಾಣ್ಮೆ ಯೊಂದಾದರೆ, ಬರಬೇಕಾದುದನ್ನು ಪಡೆದುಕೊಳ್ಳುವ ಧೀಮಂತ ಸಾಹಸ ಇನ್ನೊಂದು ಕಡೆ ಎಂಬುದು. ಈ ಎರಡು ಸಫಲತೆಯನ್ನು ಪಡೆಯಲು ಕನ್ನಡಿಗರಾದ ನಾವು ತುಂಬ ಎಚ್ಚರಿಕೆಯಿಂದಲೂ ಬುದ್ದಿವಂತಿಕೆಯಿಂದಲೂ ಶಕ್ತಿಮೀರಿ ಕಾರ್ಯಪ್ರವೃತ್ತರಾಗುವುದು ಆವಶ್ಯಕವಾಗಿದೆ. ಈ ಸಮಸ್ಯೆಗಳು ಹೆಚ್ಚಾಗಿ ರಾಜಕೀಯಕ್ಕೆ ಹತ್ತಿರವಾದದ್ದು. ಇದು ಯಾವುದೇ ಸನ್ನಿವೇಶದಲ್ಲಿಯೂ ರಾಜಕೀಯದಿಂದ ಭಿನ್ನವಾಗಿರುವುದಿಲ್ಲ. ಈ ದೃಷ್ಟಿಯಿಂದ ನಮ್ಮ ರಾಜಕಾರಣಿಗಳು ಪ್ರತಿಯೊಂದು ಸನ್ನಿವೇಶದಲ್ಲಿಯೂ ಮಹತ್ವದ ನಿರ್ಣಯ ಕೈಗೊಂಡು ಮುನ್ನಡೆಯಬೇಕಾಗಿದೆ. ಮಹಾಜನ್ ವರದಿಯೇ ಅಂತಿಮವೆಂದು ಹೇಳುತ್ತಿರುವ ಕರ್ನಾಟಕ, ಇದಕ್ಕೆ ಸಂಬಂಧಿಸಿದ ಪೂರಕ ಮಾಹಿತಿಯನ್ನು ಸಂಗ್ರಹಿಸಿ ಗಡಿನಾಡಿನ ಜನರಲ್ಲಿ ಅರಿವಿನ ಕಾರ್ಯಕ್ರಮ ಮಾಡುವ ಅಗತ್ಯವಿದೆ. ಕೇವಲ ರಾಜಕಾರಣಿಗಳು ವಿಧಾನಸೌಧದಲ್ಲಿ ಕುಳಿತು ಮಹಾಜನ್ ವರದಿ ಅಂತಿಮ ಎಂದರೆ ಸಾಲದು. ಇದಕ್ಕೆ ಆ ಭಾಗದ ನಾಡಿನ ಜನರ ಧ್ವನಿ ಸೇರಿದಾಗ ಅದಕ್ಕೆ ಹೆಚ್ಚಿನ ಮಹತ್ವ ಬರುತ್ತದೆ.
ಹೈದರಾಬಾದ್ ಕರ್ನಾಟಕದ ಹೋರಾಟ
 ಹೈದರಾಬಾದ್ ಕರ್ನಾಟಕಕ್ಕೆ ಸೇರಿದ ಕಲ್ಬುರ್ಗಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಪ್ರದೇಶಗಳು ಚಾರಿತ್ರಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕವಾಗಿ ಪ್ರಖ್ಯಾತವಾದ ಪ್ರದೇಶಗಳು. ಬೀದರ್ ಜಿಲ್ಲೆಯಲ್ಲಿ ಕಲ್ಯಾಣ(ಇಂದಿನ ಬಸವ ಕಲ್ಯಾಣ)ವು ಚಾಲುಕ್ಯ ಚಕ್ರವರ್ತಿಗಳ ರಾಜಧಾನಿಯಾಗಿತ್ತು. ವಿಶ್ವಧರ್ಮ ಪ್ರತಿಪಾದಕ ಬಸವಣ್ಣನ ಕರ್ಮಭೂಮಿ ಕಲ್ಯಾಣ. ಕಲ್ಬುರ್ಗಿ ಜಿಲ್ಲೆಯ ಮಳಖೇಡವು ರಾಷ್ಟ್ರಕೂಟ ಸಾಮ್ರಾಟರ ರಾಜಧಾನಿ. ಕನ್ನಡದ ಪ್ರಥಮ ಗ್ರಂಥವೆಂದು ಕರೆಸಿಕೊಂಡಿರುವ ಕವಿರಾಜಮಾರ್ಗದ ಕರ್ತೃ ಶ್ರೀವಿಜಯ ಹಾಗೂ ಆಶ್ರಯದಾತ ನೃಪತುಂಗ ಮಹಾರಾಜನ ಕೇಂದ್ರ ಸ್ಥಾನವಾಗಿತ್ತು. ರಾಷ್ಟ್ರಕೂಟರ ಚಕ್ರವರ್ತಿ ಗಳಾದಂತಹ ಧ್ರುವ, ಗೋವಿಂದ, ಕೃಷ್ಣ ಮೊದಲಾದವರು ಕನ್ನಡನಾಡಿನ ಗಡಿಯನ್ನು ಹಿಮಾಲಯದವರೆಗೂ ವಿಸ್ತರಿಸಿದ್ದು ತಿಳಿದುಬರುತ್ತದೆ. ಕೊಪಣ ನಗರವು (ಇಂದಿನ ಕೊಪ್ಪಳ) ಕನ್ನಡದ ಗಂಡು ಮೆಟ್ಟಾಗಿತ್ತೆಂದು ಹೇಳಬಹುದು. ಈ ಪ್ರದೇಶವು ಅಚ್ಚಗನ್ನಡ ಚಕ್ರವರ್ತಿಗಳ ಅಚ್ಚುಮೆಚ್ಚಿನ ನಾಡಾಗಿತ್ತು.
ಈ ಮೇಲಿನ ಇತಿಹಾಸದಿಂದ ಕರ್ನಾಟಕದ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಈ ಪ್ರದೇಶದ ಕೊಡುಗೆಯನ್ನು ಕುರಿತು ಚರ್ಚಿಸುವುದು ಅವಶ್ಯಕವಾಗಿದೆ. ಭಾರತವು ಸ್ವತಂತ್ರವಾದ ನಂತರ ಹೈದರಾಬಾದ್ ವಿಮೋಚನೆಯ ಹೋರಾಟವನ್ನು ಈ ಭಾಗದ ಜನರು ನಡೆಸಬೇಕಾಯಿತು. ಹೈದರಾಬಾದ್ ವಿಲೀನದ ಆಂದೋಲನದಲ್ಲಿ ಈ ಭಾಗದ ಜನರು ಪ್ರಮುಖ ಪಾತ್ರವನ್ನು ವಹಿಸಿದರು. ಹೈದರಾಬಾದಿನಲ್ಲಿ 1954ರಲ್ಲಿ ಜರುಗಿದಂತಹ ಅಖಿಲ ಕರ್ನಾಟಕದ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಅನ್ನದಾನಯ್ಯ ಪುರಾಣಿಕರು ಈ ಭಾಗದವರು. ಹೈದರಾಬಾದ್ ವಿಮೋಚನಾ ಹೋರಾಟ ನೇತಾರರಾಗಿ ಹಾಗೂ ಏಕೀಕರಣ ನಂತರ ನೆರೆಯ ಮಹಾರಾಷ್ಟ್ರ ನಂತರ ಆಂಧ್ರ ಪ್ರದೇಶದಲ್ಲಿ ಸೇರಿದ ಕನ್ನಡ ಪ್ರದೇಶಗಳನ್ನು ಪಡೆಯಲು ನಡೆದಂತಹ ಚಳವಳಿಯ ಮುಖಂಡತ್ವವನ್ನು ಅಳವಂಡಿ ಶಿವಮೂರ್ತಿ, ಜನಾರ್ದನ ದೇಸಾಯಿ, ಗುಡಗುಂಟಿ ರಾಮಾಚಾರ್ಯರು, ಕೃಷ್ಣಾಚಾರ ಜೋಶಿ, ಜಗನ್ನಾಥ ರಾವ್ ಚಂಡರಕಿ, ಅಣ್ಣರಾವ್ ಗಣಮುಖಿ, ವೈ.ವಿರೂಪಾಕ್ಷಪ್ಪ, ಚಂದ್ರಶೇಖರ ಪಾಟೀಲ, ರಾಂಪುರ, ಅಬ್ಬಗೇರಿ ವಿರೂಪಾಕ್ಷಪ್ಪ, ಸರ್ದಾರ ಶರಣಗೌಡರು, ವೀರೇಂದ್ರ, ಚಂದ್ರಶೇಖರ ಶಾಸ್ತ್ರಿ, ಮುದ್ನಾಳ, ಅವರಾದಿ, ಸೊಗವೀರಶರ್ಮ, ಗುರುಸಿದ್ಧ ಶಾಸ್ತ್ರಿ, ವೀರೇಶ್ವರ ಶಾಸ್ತ್ರಿ ಮೊದಲಾದವರ ಹೋರಾಟ ಸ್ಮರಣೀಯವಾದದು. ಅಂದು ಆಂಧ್ರಕ್ಕೆ ಸೇರಲಿದ್ದ ಬೀದರ್ ಜಿಲ್ಲೆಯನ್ನು ಉಳಿಸಿ ಕರ್ನಾಟಕಕ್ಕೆ ಸೇರುವಂತೆ ಹೋರಾಡಿದವರಲ್ಲಿ ಆರ್.ವಿ.ಬೀಡಪ್, ಪ್ರಭುರಾವ್, ವಕೀಲ ಭೀಮಣ್ಣ ಖಂಡ್ರೆ, ಕಪ್ಪೀಕರ್ ಮೊದಲಾದ ಹೆಸರುಗಳನ್ನು ಸೂಚಿಸ ಬಹುದು.
ಉತ್ತರ ಕರ್ನಾಟಕದ ಗಡಿಭಾಗದಲ್ಲಿ ಕನ್ನಡ ಭಾಷೆಯನ್ನು ಪೋಷಿಸಿ ಬೆಳೆಸಲು ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಿ, ಕನ್ನಡಿಗರಲ್ಲಿ ಜಾಗೃತಿಯನ್ನುಂಟುಮಾಡಿದಂತಹ ಡಿ.ಕೆ. ಭೀಮಸೇನರಾವ್, ತವಗ ಭೀಮಸೇನರಾವ್, ಕಪಟರಾಳ ಕೃಷ್ಣರಾವ್, ಮಾನ್ವಿ ನರಸಿಂಗ ರಾವ್ ಹಾಗೂ ಸಿದ್ಧಯ್ಯ ಪುರಾಣಿಕ್, ಪಾಂಡುರಂಗರಾವ್ ದೇಸಾಯಿ ಮೊದಲಾದವರು ಬೀದರ್ನಲ್ಲಿ ‘ರೈತ ಪರಿಷತ್ತ’ನ್ನು ಸ್ಥಾಪಿಸಿಕೊಂಡು ಗಡಿ ನಿರ್ಣಯಕ್ಕಾಗಿಯೇ ಸರ್ಕಾರದಿಂದ ನೇಮಕಗೊಂಡಿದ್ದಂತಹ ‘ಫಜಲ್ ಆಲಿ’ ಆಯೋಗದ ಎದುರಿಗೆ ಕರ್ನಾಟಕದ ಗಡಿ (ಅವರ ಮೇರೆಯ ಬಗ್ಗೆ) ಪ್ರದೇಶಗಳ ಬಗ್ಗೆ ವಾದ ಮಾಡಿರುವುದು ಕಂಡುಬರುತ್ತದೆ. ನಂತರ ಈ ರೈತ ಪರಿಷತ್ತನ್ನು ಬೆಳೆಸಿ ಪೋಷಿಸಿಕೊಂಡು ಕರ್ನಾಟಕ ಏಕೀಕರಣಕ್ಕೆ ಅಮೂಲ್ಯ ಕೊಡುಗೆ ನೀಡಲು ಕಾರಣರಾದಂತಹ ಈ ಭಾಗದ ಗಣ್ಯರು ಹಲವರು. ಇವರ ಸಕ್ರಿಯ ಪಾತ್ರದಿಂದ ಗಡಿನಾಡಿನಲ್ಲಿ ನಾಡಿನ ಬಗ್ಗೆ ಅರಿವುಂಟಾಗಿ ಕನ್ನಡ ನಾಡು ಇಂದು ಈ ಸ್ಥಿತಿಯಲ್ಲಿರು ವಂತಾಯಿತು. ಅವರುಗಳೆಂದರೆ ಅಗಡಿ ಸಂಗಣ್ಣ, ಸಂಕ್ಲಾಪುರ, ಕೃಷ್ಣಾಚಾರ್ಯ, ಲಿಂಗಣ್ಣ, ಹಂಪೀಕರ, ಬಂಗಾರಶೆಟ್ಟಿ, ಬೇವೂರು, ವಿರೂಪಾಕ್ಷಯ್ಯ, ಇಟಗಿ ದೇಸಾಯಿ, ಮಧ್ವರಾವ್, ಶಾಸ್ತ್ರಿ, ಗೋರೆಬಾಳ, ಅನ್ಸರಿ, ಜೋಶಿ, ಶಾಂತರಸ, ಗುರುಪಾದ ಮಠ ಮೊದಲಾದವರ ಶ್ರಮ ಅಮೂಲ್ಯವಾದದು. ತಮ್ಮ ಕೀರ್ತನೆಯ ಮೂಲಕ ಕರ್ನಾಟಕದ ಗಡಿಯನ್ನು ಗುರುತಿಸುತ್ತಿದ್ದಂತಹ, ಅದರ ಮೂಲಕ ಈ ಭಾಗದ ಜನರಿಗೆ ಉಪದೇಶಿಸುತ್ತಿದ್ದಂತಹ ಪ್ರವಚನಾಚಾರ್ಯರಾದ ದಿ.ರಾಮಾಚಾರ್ಯ ಮತ್ತು ಲಿಂ.ಪಂಡಿತರತ್ನ ಕಲ್ಲಿನಾಥ ಶಾಸ್ತ್ರಿ ಪುರಾಣಿಕರು ಮೊದಲಾದವರ ಸೇವೆ ಅಮೂಲ್ಯವಾದದು ಹಾಗೂ ಚರಿತ್ರೆಯಲ್ಲಿ ಸ್ಮರಣೀಯವಾದದ್ದು ಆಗಿದೆ.
ಕರ್ನಾಟಕ ಏಕೀಕರಣದ ನಂತರವೂ ಗಡಿಭಾಗ ಸಮಸ್ಯೆಯಾಗಿಯೇ ಉಳಿಯಿತು. ಕನ್ನಡದ ಗಡಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ಹೈದರಾಬಾದ್ ಕರ್ನಾಟಕ ಪ್ರತ್ಯೇಕವಾಗಿ ನಡೆಯದೆ, ಚಳವಳಿಯನ್ನು ಮಹಾನ್ ಹೋರಾಟದ ಒಂದು ಭಾಗವಾಗಿ ಮುಂದುವರಿಸಿಕೊಂಡು ಬಂದಿತು. ಈ ಭಾಗದ ಕನ್ನಡ ಸಾಹಿತ್ಯ ಪರಿಷತ್ತಿನ ಮುಖಾಂತರ ಬೀದರ್, ಗುಲ್ಬರ್ಗಾ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ನಾಡಹಬ್ಬ ಹಾಗೂ ವಿಶೇಷ ಕಾರ್ಯಕ್ರಮಗಳ ಮೂಲಕ ಕನ್ನಡಿಗರಲ್ಲಿ ಜಾಗೃತಿಯನ್ನು ಉಂಟುಮಾಡಿದವರೆಂದರೆ ಮಾನ್ವಿ ನರಸಿಂಗರಾಯರು ಹಾಗೂ ಸಿದ್ಧಯ್ಯ ಪುರಾಣಿಕರು. 1948ರಲ್ಲಿ ಕಲ್ಬುರ್ಗಿಯಲ್ಲಿ ರೆವರೆಂಡ್ ಉತ್ತಂಗಿ ಚೆನ್ನಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಜೊತೆಗೆ ಕರ್ನಾಟಕ ಏಕೀಕರಣ ಸಮ್ಮೇಳನವು ನಡೆಯಿತು. ಇಲ್ಲಿ ಗಡಿ ರಕ್ಷಣೆಗಾಗಿ
1. ಕನ್ನಡ ಶಾಲೆಗಳನ್ನು ತೆರೆಯುವುದು.
2. ಕನ್ನಡ ಪಾಠ ಮಾಡುವ ಶಿಕ್ಷಕರಿಗೆ ವಿಶೇಷ ಸೌಲಭ್ಯ ನೀಡುವುದು. ಉದಾಹರಣೆಗೆ ಉಚಿತ ಮನೆ, ಹೆಚ್ಚಿನ ಸಂಬಳ ಇತ್ಯಾದಿ.
3. ಗಡಿನಾಡಿನ ಕನ್ನಡ ಜನತೆಗೆ ಕಡಿಮೆ ಬೆಲೆಯಲ್ಲಿ ದವಸ ಧಾನ್ಯ ಹಾಗೂ ಬಟ್ಟೆಗಳ ಸೌಲಭ್ಯವನ್ನು ಒದಗಿಸುವುದು.
4. ಸರ್ಕಾರಿ ಆರೋಗ್ಯ ಕೇಂದ್ರ ತೆರೆದು ಉಚಿತವಾಗಿ ಔಷಧಿಗಳನ್ನು ವಿತರಿಸುವುದು. ಇತ್ಯಾದಿ ಮೂಲಭೂತ ಸೌಕರ್ಯ ಕುರಿತ ಬೇಡಿಕೆಯ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ನಿರ್ಣಯಗಳ ಅನ್ವಯ ಗಡಿನಾಡಿನ ಅಭಿವೃದ್ದಿಗೆ ಶ್ರಮಿಸಲು ಮುಂದಾಗಬೇಕೆಂದು ಸರ್ಕಾರಕ್ಕೆ ಸೂಚಿಸಲಾಯಿತು.
ಕರ್ನಾಟಕ ಮತ್ತು ಮಹಾರಾಷ್ಟ್ರ
 ಮಹಾರಾಷ್ಟ್ರೀಯರ ಹಾಗೆ ನಾವು ನೋಡುವುದಾದರೆ ಮಹಾಜನ ವರದಿಯಂತೆ ಕರ್ನಾಟಕಕ್ಕೆ ಬರಬೇಕಾದ ಕನ್ನಡ ಗಡಿಭಾಗಗಳು ಸೊಲ್ಲಾಪುರದ ಪ್ರದೇಶದಲ್ಲಿಯೇ ಇವೆ. ಆದರೆ ನಾವು ಅವುಗಳನ್ನು ಪಡೆಯಲು ಉಗ್ರವಾದ ಹೋರಾಟ ಮಾಡುವುದಿರಲಿ, ಆ ಪ್ರದೇಶಗಳಿಗೆ ಹೊರನಾಡ ಕನ್ನಡ ಪ್ರದೇಶಗಳೆಂದು ಕರೆಯುತ್ತಿದ್ದೇವೆ. ಆದರೆ ಮಹಾ ರಾಷ್ಟ್ರೀಯರು ಕರ್ನಾಟಕದಿಂದ ತಮ್ಮದೆಂದು ಕೇಳುತ್ತಿರುವ ಪ್ರದೇಶಗಳಿಗೆ ಹೊರ ಮಹಾರಾಷ್ಟ್ರ ಎಂದು ಹೆಸರಿಡದೆ ‘ಸೀಮಾ’ ಭಾಗಗಳೆಂದು ಕರೆದುಕೊಳ್ಳುತ್ತಿದ್ದಾರೆ (ಸೀಮಾ ಎಂದರೆ ಎಲ್ಲೆಯನ್ನು ಗುರುತಿಸುವ ಗೆರೆ. ಗಡಿ, ಮೇರೆ. ಗಡಿಯನ್ನು ನಿರ್ದೇಶಿಸುವ ಸ್ಥಳದಲ್ಲಿರುವ ಹಳ್ಳ, ಹೊಲ ಮುಂತಾದವು. ಒಟ್ಟಾರೆ ಮೇರೆಯನ್ನು ಸೂಚಿಸುವ ರೇಖೆ ಎಂದರ್ಥ).ಇದೇ ನಮ್ಮ ಹಾಗೂ ಅವರ ದೃಷ್ಟಿಕೋನಗಳಿಗಿರುವ ಪ್ರಮುಖ ವ್ಯತ್ಯಾಸ.
ಅಕ್ಕಲಕೋಟೆ, ದಕ್ಷಿಣ ಸೊಲ್ಲಾಪುರ ಹಾಗೂ ಜತ್ ತಾಲ್ಲೂಕುಗಳು ಕರ್ನಾಟಕಕ್ಕೆ ಸೇರಬೇಕೆಂದು ಸ್ವತಃ ಮಹಾರಾಷ್ಟ್ರ ಸರ್ಕಾರವೇ ಒಪ್ಪಿಕೊಂಡಿರುವುದಲ್ಲದೆ ಮಹಾಜನ್ ವರದಿಯು ಕಾರ್ಯರೂಪಕ್ಕೆ ಬಂದರೆ ಮೇಲಿನ ಎಲ್ಲ ಭಾಗಗಳೂ ಸಹ ಕರ್ನಾಟಕಕ್ಕೆ ಸೇರಲಿವೆ. ಸೊಲ್ಲಾಪುರ ಜಿಲ್ಲೆಯಲ್ಲಿ ಸೊಲ್ಲಾಪುರ ನಗರ ಪೂರ್ಣವಾಗಿ ಕನ್ನಡ ಮಾತನಾಡುವವರ ಸಂಖ್ಯೆ ಇಂದಿಗೂ ನೂರಕ್ಕೆ ಎಪ್ಪತ್ತೈದರಷ್ಟು. ಆದುದರಿಂದ ಮಹಾರಾಷ್ಟ್ರೀಯರು ಸೊಲ್ಲಾಪುರ ನಗರವನ್ನು ಆ ತಾಲ್ಲೂಕಿನಿಂದ ಬೇರ್ಪಡಿಸಿ ನಗರ ಸುತ್ತಲೂ ಇರುವ ಸುಮಾರು ಇಪ್ಪತ್ತು ಗ್ರಾಮಗಳನ್ನು ನೆರೆ ತಾಲ್ಲೂಕಿನಲ್ಲಿನ ಮರಾಠಿ ಪ್ರಾಧಾನ್ಯವಿರುವ ನಲ್ವತ್ತು ಗ್ರಾಮಗಳೊಂದಿಗೆ ಸೊಲ್ಲಾಪುರ ನಗರವನ್ನು ಸೇರಿಸಿ ಅದಕ್ಕೆ ಉತ್ತರ ಸೊಲ್ಲಾಪುರ ತಾಲ್ಲೂಕೆಂದು ಹೆಸರಿಸಿದ್ದಾರೆ. ಈ ರೀತಿಯಲ್ಲಿ ಮರಾಠಿಗರು ಕನ್ನಡದ ಪ್ರದೇಶಗಳನ್ನು ತನ್ನ ಪ್ರದೇಶವನ್ನಾಗಿ ಪರಿವರ್ತಿಸಿಕೊಳ್ಳಲು ಎಷ್ಟು ಬೇಗ ಸಾಧ್ಯವೋ ಅಷ್ಟೇ ಶೀಘ್ರವಾಗಿ ನಿರ್ಣಯಗಳನ್ನು ಬದಲಾಯಿಸಿಕೊಂಡು ಬರುತ್ತಿದ್ದಾರೆ. ಮೇಲಿನ ಎರಡು ತಾಲ್ಲೂಕುಗಳ ಆಡಳಿತ ಕಛೇರಿಗಳು ಇಂದಿಗೂ ಸೊಲ್ಲಾಪುರ ನಗರದಲ್ಲಿಯೇ ಇದೆ. ಇದರ ಉದ್ದೇಶವೆಂದರೆ ತಾಲ್ಲೂಕನ್ನು ಘಟಕವಾಗಿ ಪರಿವರ್ತಿಸಿದರೆ ಸೊಲ್ಲಾಪುರವು ಕರ್ನಾಟಕಕ್ಕೆ ಸೇರದಂತೆ ಎಚ್ಚರಿಕೆ ವಹಿಸುವುದು. 1956ರ ಭಾಷಾವಾರು ಪ್ರಾಂತ್ಯ ರಚನೆಯ ನಂತರ ಈ ನಗರಗಳಲ್ಲಿ ಕನ್ನಡದ ಬೇರನ್ನೇ ಕಿತ್ತು ಒಗೆಯುವ ಕೆಲಸ ನಡೆಯಿತು. ಇದಕ್ಕೆ ಸಾಕ್ಷಿಯಂತೆ ಇಲ್ಲಿ ಕೆಲವು ಪ್ರಮುಖ ಉದಾಹರಣೆಗಳನ್ನು ನೀಡಬಹುದು. ಸೊಲ್ಲಾಪುರದಲ್ಲಿ ಸ್ಥಾಪಿತವಾಗಬೇಕಾಗಿದ್ದಂತಹ ಇಂಜಿನಿಯರಿಂಗ್ ಕಾಲೇಜನ್ನು ಕಿತ್ತು ಸತಾರಾ ಜಿಲ್ಲೆಯ ಕರಾಡಕ್ಕೆ ಕೊಂಡೊಯ್ದರು. ಸರ್.ಎಂ.ವಿಶ್ವೇಶ್ವರಯ್ಯನವರು ಮುಂಬಯಿ ಸರಕಾರದ ಎಂಜಿನಿಯರ್ ಹುದ್ದೆಯಲ್ಲಿದ್ದಾಗ ಯೋಜಿತಗೊಂಡಿದ್ದಂತಹ ಅಕ್ಕಲಕೋಟೆ ತಾಲ್ಲೂಕಿನ ಬೋರಿನದಿಗೆ ಅಣೆಕಟ್ಟು ಕಟ್ಟುವುದನ್ನು ನಳದುರ್ಗಕ್ಕೆ ವರ್ಗಾಯಿಸಿದರು. ಏಕೆಂದರೆ ಈ ಯೋಜನೆಯಿಂದ ಸೊಲ್ಲಾಪುರದ ಎರಡು ಕನ್ನಡ ತಾಲ್ಲೂಕುಗಳು ಸಂಪೂರ್ಣವಾಗಿ ನೀರುಂಡು ಸಮೃದ್ಧವಾಗಿ ಬೆಳೆ ಕೊಡುವಂತಿದ್ದವು. ಇದನ್ನು ಅವರು ಸಹಿಸಿಕೊಳ್ಳಲಿಲ್ಲ. ಹಾಗೆಯೇ ಸೊಲ್ಲಾಪುರದ ರೈಲ್ವೆ ಭಾಗವು ಮೊನ್ನೆಯವರೆಗೆ ಸಿಕಂದರಾಬಾದ್-ಹುಬ್ಬಳ್ಳಿ ವಿಭಾಗಗಳೊಂದಿಗೆ ಜೋಡಿಸಲಾಗಿತ್ತು. ಆದರೆ ಮಹಾರಾಷ್ಟ್ರೀಯರು ಅದನ್ನು ಕಿತ್ತು ಮುಂಬಯಿಯಿಂದ ಮಧ್ಯೆ ರೈಲ್ವೆ ವಿಭಾಗಕ್ಕೆ ಜೋಡಿಸಿಕೊಂಡರು. ಇಲ್ಲಿ ಸ್ಥಾಪಿಸಬೇಕೆಂದಿ ದ್ದಂತಹ ರೈಲ್ವೆ ಲೋಕೋಮೋಟಿವ್ ಕಾರ್ಖಾನೆಯನ್ನು ಪುಣೆಯ ಹತ್ತಿರದ ಧೊಂಡದಲ್ಲಿ ಪ್ರಾರಂಭಿಸಿದರು. ಇದಕ್ಕೆ ಪ್ರಮುಖ ಕಾರಣವೆಂದರೆ ಕನ್ನಡ ಪ್ರದೇಶವಾಗಿರುವ ಸೊಲ್ಲಾಪುರ ನಗರವನ್ನು ಮೂರನೇ ದರ್ಜೆಯ ನಗರವನ್ನಾಗಿ ಮಾರ್ಪಡಿಸುವುದು. ಅಧಿಕ ಸಂಖ್ಯೆಯಲ್ಲಿ ಕನ್ನಡಿಗರೇ ಇರುವ ಸೊಲ್ಲಾಪುರವು ಮುಂದೆ ಯಾವುದಾದರೂ ಆಯೋಗ ರಚನೆಯಾಗಿ ಅಥವಾ ಮಹಾಜನ್ ವರದಿ ಜಾರಿಗೆ ಬಂದರೆ ಕರ್ನಾಟಕಕ್ಕೆ ಸೇರಿಸಬಹುದೆಂಬ ಭಯದಿಂದ ಈ ರೀತಿ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಈಗಾಗಲೇ ಮಹಾಜನ್ ವರದಿಯ ಪ್ರಕಾರ ಸೊಲ್ಲಾಪುರ ಸಂಪೂರ್ಣವಾಗಿ ಕರ್ನಾಟಕಕ್ಕೆ ಸೇರಿಸಲು ಶಿಫಾರಸ್ಸಾಗಿರುತ್ತದೆ.
1970-71ನೇ ಸಾಲಿನಲ್ಲಿ ಬೆಳಗಾವಿ-ಸೊಲ್ಲಾಪುರಗಳಲ್ಲಿ ಉಂಟಾದಂತಹ ಚಳವಳಿ ಯಿಂದಾಗಿ ಅಂದು ಕರ್ನಾಟಕದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಸರ್ಕಾರಕ್ಕೆ ಒಂದು ಸವಾಲಾಗಿಯೇ ಮಾರ್ಪಟ್ಟಿತು. ಆಗ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯ ಗಳೆರಡಕ್ಕೂ ಮಾತುಕತೆಯು ನಡೆದು ಈ ಕೆಳಗಿನ ಪ್ರದೇಶಗಳನ್ನು ಬಿಟ್ಟುಕೊಡಬೇಕೆಂದು ಮಹಾರಾಷ್ಟ್ರವು ಕೇಳಿಕೊಂಡಿತು. ಆದರೆ ಅದು ಕೈಗೂಡಲು ಸಾಧ್ಯವಾಗಲಿಲ್ಲ. ಅಂದು ಮಂಡಿಸಿದಂತಹ ಮಹಾರಾಷ್ಟ್ರೀಯರ ಬೇಡಿಕೆಗಳೆಂದರೆ
1. ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ 20,386 ಜನಸಂಖ್ಯೆ ಇರುವಂತಹ 84 ಹಳ್ಳಿಗಳು
2. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ 96,920 ಜನಸಂಖ್ಯೆಯುಳ್ಳ 206 ಹಳ್ಳಿಗಳು
3. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ 50,670 ಜನಸಂಖ್ಯೆಯುಳ್ಳ 10 ಗ್ರಾಮಗಳು
4. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ 1,86,601 ಜನಸಂಖ್ಯೆಯುಳ್ಳ 41 ಹಳ್ಳಿಗಳು
5. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ 30,420 ಜನಸಂಖ್ಯೆಯುಳ್ಳ 18 ಹಳ್ಳಿಗಳು
6. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ 90,903 ಜನಸಂಖ್ಯೆಯುಳ್ಳ 50 ಹಳ್ಳಿಗಳು
7. ಉತ್ತರ ಕನ್ನಡ ಜಿಲ್ಲೆಯ ಸೂಪಾ ತಾಲ್ಲೂಕಿನ 28,541 ಜನಸಂಖ್ಯೆಯುಳ್ಳ 120 ಹಳ್ಳಿಗಳು.
8. ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ 50, 303 ಜನಸಂಖ್ಯೆಯಿರುವ 28 ಹಳ್ಳಿಗಳು
9. ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ 76,928 ಜನಸಂಖ್ಯೆಯುಳ್ಳ 49 ಹಳ್ಳಿಗಳು
10. ಬೀದರ್ ಜಿಲ್ಲೆಯ ಸಂತಪುರ್ ತಾಲ್ಲೂಕಿನ 69,996 ಜನಸಂಖ್ಯೆಯುಳ್ಳ 69 ಹಳ್ಳಿಗಳು
11. ಗುಲ್ಬರ್ಗಾ ಜಿಲ್ಲೆಯ ಆಳಂದಾ ತಾಲ್ಲೂಕಿನ 6,978 ಜನಸಂಖ್ಯೆಯುಳ್ಳ 8 ಹಳ್ಳಿಗಳು. ಕರ್ನಾಟಕಕ್ಕೆ ಮಹಾರಾಷ್ಟ್ರೀಯರು ತಾವಾಗಿಯೇ ಬಿಟ್ಟುಕೊಡಲು ಒಪ್ಪಿಗೆ ನೀಡಿದಂತಹ ಪ್ರದೇಶಗಳು ಕೇವಲ ಬಂಜರು ಭೂಮಿಗಳು ಮಾತ್ರ. ಇವು ಸದ್ಯಕ್ಕೆ ಯಾವುದೇ ರೀತಿಯ ಪ್ರಯೋಜನಕ್ಕೂ ಬಾರದ ಪ್ರದೇಶಗಳೆಂದು ಸರ್ವೇಕ್ಷಣೆಯಿಂದ ತಿಳಿದು ಬಂದಿದೆ. ಪ್ರತಿವರ್ಷವು ಬರಗಾಲಕ್ಕೆ ಒಳಗಾಗುತ್ತಿರುವ ಈ ಪ್ರದೇಶಗಳೆಂದರೆ,
1. ಸೊಲ್ಲಾಪುರ ಜಿಲ್ಲೆಯ ಸೊಲ್ಲಾಪುರ ತಾಲ್ಲೂಕಿನ 1 ಲಕ್ಷ 20 ಸಾವಿರದ 679 ಜನಸಂಖ್ಯೆ ಇರುವ 65 ಹಳ್ಳಿಗಳು
2. ಸೊಲ್ಲಾಪುರ ಜಿಲ್ಲೆಯ ಮಂಗಳವಾಡ ತಾಲ್ಲೂಕಿನ 80,920 ಜನಸಂಖ್ಯೆಯುಳ್ಳ 9 ಹಳ್ಳಿಗಳು
3. ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲ್ಲೂಕಿನ 1,71,403 ಜನಸಂಖ್ಯೆಯುಳ್ಳ 99 ಹಳ್ಳಿಗಳು
4. ದಕ್ಷಿಣ ಸತಾರಾ ಜಿಲ್ಲೆಯ ಜಿಲ್ ತಾಲ್ಲೂಕಿನ 80,867 ಜನಸಂಖ್ಯೆಯುಳ್ಳ 44 ಹಳ್ಳಿಗಳು
5. ಕೊಲ್ಲಾಪುರ ಜಿಲ್ಲೆಯ ಶಿರೋಳ್ ತಾಲ್ಲೂಕಿನ 80,607 ಜನಸಂಖ್ಯೆಯುಳ್ಳ 19 ಹಳ್ಳಿಗಳು
6. ಕೊಲ್ಲಾಪುರ ಜಿಲ್ಲೆಯ ಗಡಿಂಗ್ಲಬ್ ತಾಲ್ಲೂಕಿನ 57,026 ಜನಸಂಖ್ಯೆಯುಳ್ಳ 24 ಗ್ರಾಮಗಳು.
ಈ ಮಧ್ಯೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನ್ಯಾಯವಾಗಿ ಸೇರಬೇಕಾದ ಪ್ರದೇಶಗಳ ಬಗ್ಗೆ 1957 ಮಾರ್ಚ್ 31ರಂದು ಕರ್ನಾಟಕ ಸರ್ಕಾರವು ಈ ಕೆಳಕಂಡ ಪ್ರದೇಶಗಳ ಬೇಡಿಕೆಯ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಅವುಗಳೆಂದರೆ,
1. ಸೊಲ್ಲಾಪುರ ಪೂರ್ತಿ ನಗರ
2. ಸಂಪೂರ್ಣವಾಗಿ ಜತ್ ತಾಲ್ಲೂಕು
3. ಸಂಪೂರ್ಣ ದಕ್ಷಿಣ ಸೊಲ್ಲಾಪುರ ತಾಲ್ಲೂಕು
4. ಕೊಲ್ಲಾಪುರ ಜಿಲ್ಲೆಯ ಚಂದಗಡ್ ತಾಲ್ಲೂಕು
5. ಸಂಪೂರ್ಣ ಅಕ್ಕಲಕೋಟೆ ತಾಲ್ಲೂಕು
 ಈ ಎರಡು ರಾಜ್ಯಗಳ ಜೊತೆಗೆ ಇತರ ರಾಜ್ಯಗಳೊಂದಿಗೆ ಉದ್ಭವಿಸಿದಂತಹ ಸಮಸ್ಯೆಗಳಿಗೆ ಅಂತಿಮ ತೆರೆ ಎಳೆಯಲು ಕೇಂದ್ರ ಸರ್ಕಾರವು 1966ರಲ್ಲಿ ಮೊದಲೆ ತಿಳಿಸಿರುವ ಹಾಗೆ ಮಹಾಜನ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ನೇಮಿಸಿತು. ಈ ವರದಿಯ ಪ್ರಕಾರ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲು ಶಿಫಾರಸ್ಸಾದ ಪ್ರದೇಶಗಳೆಂದರೆ,
1. ಖಾನಾಪುರ ತಾಲ್ಲೂಕಿನ ವ್ಯಾಪಾರಿ ಕೇಂದ್ರವಾದ ನಂದಗಡ ಹಾಗೂ ಅದರ ಸುತ್ತಮುತ್ತಲಿನ ಅರಣ್ಯ ಹಾಗೂ ಕಬ್ಬು ಹೆಚ್ಚಾಗಿ ಬೆಳೆಯುವ ಪ್ರದೇಶ. ಈ ತಾಲ್ಲೂಕಿನ ಪಶ್ಚಿಮ ಹಾಗೂ ದಕ್ಷಿಣ ಭಾಗದ ಭತ್ತ ಬೆಳೆಯುವ ಭೂ ಪ್ರದೇಶ.
2. ಬೆಳಗಾವಿ ತಾಲ್ಲೂಕಿನ ಪಶ್ಚಿಮ ಭಾಗ
3. ಚಿಕ್ಕೋಡಿ ತಾಲ್ಲೂಕಿನ ನಿಪ್ಪಾಣಿ ಮತ್ತು ಸುತ್ತಮುತ್ತಲಿನ ಪ್ರದೇಶ
4. ಲೋಂಡ (ರೈಲ್ವೆಗೆ ಉಪಯೋಗಿಸುವ ಕಲ್ಲಿದ್ದಲಿನ ಗಣಿ ಪ್ರದೇಶ)
5. ಪ್ರಮುಖವಾಗಿ 75,000 ಎಕರೆ ನೀರಾವರಿಯಾಗಬಹುದಾದ ಫಲವತ್ತಾದ ಭೂಮಿ ಹಾಗೂ ಮಲಪ್ರಭ ಮೇಲ್ದಂಡೆ ಯೋಜನೆ ಸಂಪೂರ್ಣವಾಗಿ.
6. 5,900 ಎಕರೆ ನೀರಾವರಿಯಾಗಬಹುದಾದ ತಟ್ಟಿಹಳ್ಳ ಯೋಜನೆ.
7. 600 ಎಕರೆ ನೀರಾವರಿಯಾಗಬಹುದಾದ ಚೌನಕಟ್ಟಿ ಕೆರೆ ಯೋಜನೆ.
8. ಬೆಳಗಾವಿ ತಾಲ್ಲೂಕು ರಕ್ಕಸಕೊಪ್ಪದಲ್ಲಿ ಅಂದಿನ ಕಾಲದಲ್ಲಿಯೇ ಒಂದು ಕೋಟಿ ರೂಪಾಯಿಯ ವೆಚ್ಚದಿಂದ ನೀರು ಸರಬರಾಜು ಕೇಂದ್ರವನ್ನು ನಿರ್ಮಿಸಿ ಅಲ್ಲಿಂದಲೇ ಬೆಳಗಾವಿ ನಗರಕ್ಕೆ ನೀರನ್ನು ಪೂರೈಸಲಾಗುತ್ತಿದೆ. ಈ ಹಳ್ಳಿಯು ಕರ್ನಾಟಕ ಮತ್ತು ಮಹಾರಾಷ್ಟ್ರಗಳೆರಡಕ್ಕೂ ಇಂದು ನೀರು ಸರಬರಾಜಿನ ಕೇಂದ್ರ. ಈ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಮಹಾಜನ್ ಅವರು ಶಿಫಾರಸ್ಸು ಮಾಡಿದ್ದಾರೆ.
9. ಆಗಿನ ಕಾಲದಲ್ಲಿಯೇ ಒಂದು ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿ ಕಟ್ಟಿಸಿದ ಹಿಂಡಲಗ ಜೈಲು ಮಹಾರಾಷ್ಟ್ರಕ್ಕೆ.
10. ನಿಪ್ಪಾಣಿ ನಗರ ಮತ್ತು ಸುತ್ತಮುತ್ತಲ 40 ಹಳ್ಳಿಗಳು. ಮಹಾರಾಷ್ಟ್ರಕ್ಕೆ ಈ ಭಾಗದಲ್ಲಿ ಅಧಿಕವಾಗಿ ಬೆಳೆಯವ ತಂಬಾಕು ಮತ್ತಿತರ ಬೆಳೆಗಳ ಮಾರಾಟದಿಂದ ನಿಪ್ಪಾಣಿ ಮಾರುಕಟ್ಟೆಯಿಂದಲೇ ರಾಜ್ಯಕ್ಕೆ ಸಂದಾಯವಾಗುವ 30 ಕೋಟಿ ರೂಪಾಯಿಗಳು ನೆರೆಯ ಮಹಾರಾಷ್ಟ್ರಕ್ಕೆ(1998ರ ಅಂಕಿ-ಅಂಶಗಳ ಪ್ರಕಾರ).
ಮೇಲ್ಕಂಡ ಅಂಶಗಳನ್ನು ಗಮನಿಸಿದರೆ ಕರ್ನಾಟಕಕ್ಕೆ ಬರಬಹುದಾದ ಯಾವೊಂದು ಪ್ರದೇಶವನ್ನು ಮಹಾಜನ್ ಅವರು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವರ್ಗಾಯಿಸುವ ಶಿಫಾರಸ್ಸು ಮಾಡಲಿಲ್ಲ. ಅಷ್ಟೇ ಅಲ್ಲದೆ ಮಹಾರಾಷ್ಟ್ರೀಯರಿಗೆ ಬೇಡವಾಗಿದ್ದಂತಹ ಹಳ್ಳಿಗಳನ್ನು ಕರ್ನಾಟಕಕ್ಕೆ ವರ್ಗಾಯಿಸಿ, ಕರ್ನಾಟಕದ ಸಂಪದ್ಭರಿತ ಪ್ರದೇಶಗಳನ್ನು (ಬೆಳಗಾವಿಯನ್ನು ಹೊರತುಪಡಿಸಿ) ಮಹಾರಾಷ್ಟ್ರಕ್ಕೆ ವರ್ಗಾಯಿಸುವ ಶಿಫಾರಸ್ಸುಗಳ ವರದಿಯನ್ನು ಮಾತ್ರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಇಂದಿಗೂ ಮಹಾರಾಷ್ಟ್ರೀಯರು ತಮ್ಮ ರ್ದುನಡತೆಯನ್ನು ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖಾಂತರ ತೋರಿಸುತ್ತಾ ಬರುತ್ತಿದ್ದಾರೆ. ತಮ್ಮದೆಂದು ಕೇಳುತ್ತಿರುವ ಬೆಳಗಾವಿಯನ್ನು ಪಡೆಯುವುದಂತೂ ಕನಸಿನ ಮಾತೇ ಸರಿ. ನೆರೆಯ ಮಹಾರಾಷ್ಟ್ರೀಯರೇ ಈ ವಾದವನ್ನು ಸ್ವಲ್ಪವೂ ಒಪ್ಪುವುದಿಲ್ಲ. 1957ರಲ್ಲಿ ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಪ್ರಶ್ನೆಗೆ ಚಾಲನೆ ನೀಡಿ ವಾಸ್ತವವಲ್ಲದ ಬೇಡಿಕೆಯನ್ನು ಮಹಾರಾಷ್ಟ್ರೀಯರ ಮನಸ್ಸಿನ ಮೇಲೆ ಮೂಡಿಸಿತು. ಮೊದಲೆ ಚರ್ಚಿಸಿದ ಹಾಗೆ ಇದೊಂದು ರಾಜಕೀಯ ಪ್ರೇರಿತ ಅಂಶವಾಗಿ ಪರಿವರ್ತನೆಗೊಂಡಿದೆ.
ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಮಹಾರಾಷ್ಟ್ರೀಯರು ತಮ್ಮದೆಂದು ವಾದಿಸುತ್ತಿರುವುದಕ್ಕೆ ಅವರು ನೀಡುವ ಹೇಳಿಕೆ ಹಾಸ್ಯಾಸ್ಪದವಾಗಿದೆ.
1. ಬೆಳಗಾವಿ ನಗರ ಕನ್ನಡ ಹಳ್ಳಿಗಳಿಗಿಂತ ಮರಾಠಿ ಭಾಷಿಕ ಹಳ್ಳಿಗಳಿಂದಲೇ ಹೆಚ್ಚು ಆವೃತವಾಗಿದೆ.
2. ಸಾಂಸ್ಕೃತಿಕ ಪರಂಪರೆ ಮರಾಠಿಮಯವಾಗಿದೆ. ಮನೆಗಳ ಒಡೆತನ ಮರಾಠಿ ಭಾಷಿಕರದ್ದೇ ಹೆಚ್ಚು.
3. ಬೆಳಗಾವಿ ನಗರ ಕರ್ನಾಟಕದ ಇತರ ಭಾಗಗಳಿಗಿಂತ ದಕ್ಷಿಣದಲ್ಲಿರುವ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಜತೆಗೆ ನಿಕಟ ಸಂಬಂಧ ಹೊಂದಿದೆ.
೪. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕು ಎಂದು ಬೆಳಗಾವಿ ಪುರಸಭೆ ಹಲವಾರು ಸಲ ನಿರ್ಣಯಗಳನ್ನು ಅಂಗೀಕರಿಸಿದೆ. ಇದೇ ಕಾರಣಕ್ಕೆ ಮೈಸೂರು ಸರ್ಕಾರ ಈ ಪುರಸಭೆಯನ್ನು ‘ಸೂಪರ್ ಸೀಡ್’ ಮಾಡಿದೆ. ಇದು 2006 ಜನವರಿಯಲ್ಲಿ ಬೆಳಗಾವಿ ನಗರಪಾಲಿಕೆಯು ಮೇಯರ್ ಅಶೋಕ ಮೋರೆಯವರ ನೇತೃತ್ವದಲ್ಲಿ ಬೆಳಗಾವಿ ಸೇರಿದಂತೆ ಅದರ ಸುತ್ತಮುತ್ತಲಿನ ಕನ್ನಡ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಿತು. ಅಂದು ಕರ್ನಾಟಕದ ಮುಖ್ಯಮಂತ್ರಿ ಯಾಗಿದ್ದ ಎನ್.ಧರ್ಮಸಿಂಗ್ ಅವರು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾನೂನು ತಜ್ಞರ ನೆರವಿನೊಂದಿಗೆ ಬೆಳಗಾವಿ ನಗರಪಾಲಿಕೆಯನ್ನು ‘ಸೂಪರ್ ಸೀಡ್’ ಮಾಡಿದರು.
5. ಬೆಳಗಾವಿ ಸುತ್ತಮುತ್ತಲಿನ ಬಹುತೇಕ ಎಲ್ಲಾ ಹಳ್ಳಿಗಳಲ್ಲಿ ಮರಾಠಿ ಭಾಷಿಕರೇ ಹೆಚ್ಚಾಗಿದ್ದಾರೆ.
6. ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಮೈಸೂರು ರಾಜ್ಯದಲ್ಲಿಯೇ ಮುಂದುವರಿಯ ಬೇಕು ಎಂಬ ಆ ರಾಜ್ಯದ ವಾದವನ್ನು ಒಪ್ಪಲು ಸಾಧ್ಯವೇ ಇಲ್ಲ. ಬೆಳಗಾವಿ ಸುತ್ತ ಆರು ಜಿಲ್ಲೆಗಳು ಬರುತ್ತವೆ. ಈ ಪೈಕಿ ರತ್ನಗಿರಿ, ಕೊಲ್ಲಾಪುರ ಪೂರ್ಣ ಮರಾಠಿ ಜಿಲ್ಲೆಗಳು, ಬೆಳಗಾವಿ ಮತ್ತು ಕಾರವಾರ ಕನ್ನಡ ಮರಾಠಿ ದ್ವಿಭಾಷಾ ಜಿಲ್ಲೆಗಳು. ಧಾರವಾಡ ಮತ್ತು ವಿಜಾಪುರ ಮಾತ್ರ ಕನ್ನಡ ಜಿಲ್ಲೆಗಳು.
7. ರಾಜ್ಯ ಪುನರ್ ವಿಂಗಡನಾ ಆಯೋಗ ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ಮತ್ತು ನಗರ ತಾಲ್ಲೂಕನ್ನು ಆಂಧ್ರ ಪ್ರದೇಶಕ್ಕೆ ಸೇರ್ಪಡೆ ಮಾಡುವಂತೆ ಸೂಚಿಸಿತ್ತು. ಆದರೆ ಸಂಸತ್ತು ಅದನ್ನು ಅಂಗೀಕರಿಸದೇ ಮೈಸೂರು ರಾಜ್ಯಕ್ಕೆ ಸೇರಿಸಲು ನಿರ್ಣಯ ಕೈಗೊಂಡಿತು. ಅದೇ ರೀತಿ ಆಯೋಗ ಬೆಳಗಾವಿ ಮತ್ತು ಬೆಳಗಾವಿ ತಾಲ್ಲೂಕುಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡೆ ಮಾಡಿದೆ. ಇದು ನ್ಯಾಯಸಮ್ಮತವಲ್ಲ.
8. ಬೆಳಗಾವಿ ಸಹ್ಯಾದ್ರಿ ಪರ್ವತಗಳ ಪೂರ್ವದಲ್ಲಿದ್ದು ಕೊಂಕಣದ ಜತೆಗೆ ಹೊಂದಿಕೊಂಡಿದೆ. ರತ್ನಗಿರಿಯ ದಕ್ಷಿಣ ಭಾಗ ವ್ಯಾಪಾರ, ವಹಿವಾಟು, ಸಾಮಾಜಿಕ, ಭಾಷೆ, ಸಂಸ್ಕೃತಿ ಮತ್ತು ಧಾರ್ಮಿಕವಾಗಿ ಬೆಳಗಾವಿ ಜತೆಗೆ ಸಂಬಂಧ ಹೊಂದಿದೆ. ಕೊಂಕಣ ಬೆಳಗಾವಿಯ ವ್ಯಾಪಾರ ವಹಿವಾಟು ಸಂಬಂಧ ಅತ್ಯಂತ ಪುರಾತನವಾದದ್ದು.
9. ಬೆಳಗಾವಿ ಆಡಳಿತಾತ್ಮಕವಾಗಿ ಕೇಂದ್ರಸ್ಥಾನ ಅಲ್ಲಿಯೇ. ಬೆಳಗಾವಿ ಜಿಲ್ಲೆಯ ಗಡಿಪೂರ್ವ ದಲ್ಲಿ 60 ಮೈಲು, ಉತ್ತರದಲ್ಲಿ 70 ಮೈಲು, ಈಶಾನ್ಯ ದಿಕ್ಕಿನಲ್ಲಿ ಸುಮಾರು 100 ಮೈಲುಗಳಿಗೂ ಹೆಚ್ಚು ಚಂದಗಡ ತಾಲ್ಲೂಕನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ಮೇಲೆ ದಕ್ಷಿಣ ಹಾಗೂ ಪಶ್ಚಿಮದಲ್ಲಿ 20 ಮೈಲು ಹಾಗೂ 7-8 ಮೈಲು.
10. ಮರಾಠಿ ಭಾಷಿಕರನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳಲಾಗುತ್ತದೆ. ಮರಾಠಿ ಭಾಷಿಕರ ಸಮಸ್ಯೆಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಮೈಸೂರು ರಾಜ್ಯ ಸರ್ಕಾರ ಕಾನೂನು ರೂಪಿಸುತ್ತದೆ. ಆದರೆ ನಿಯಮಾವಳಿಗಳನ್ನು ಎಂದೂ ಮರಾಠಿಯಲ್ಲಿ ಪ್ರಕಟ ಮಾಡಿಲ್ಲ.
11. ಬೆಳಗಾವಿ ತಮ್ಮದು ಎಂಬ ಕನ್ನಡಿಗರ ವಾದ ತಳಬುಡವಿಲ್ಲದ್ದು. ನಗರದೊ ಲಿಂಗಾಯತರು ಕೆಲವು ಹಿತಾಸಕ್ತಿಗಳನ್ನು ಹೊಂದಿದ್ದು ಬೆಳಗಾವಿ ಕರ್ನಾಟಕದ್ದು ಎಂದು ಸಾಧಿಸಲು ಹೊರಟಿದ್ದಾರೆ. ನಗರದಲ್ಲಿ ಕನ್ನಡಿಗರಿಗಿಂತ ಮರಾಠಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಗರದಲ್ಲಿ ಕೇವಲ 15 ಪ್ರಾಥಮಿಕ ಶಾಲೆಗಳಿದ್ದು, ಇದರಲ್ಲಿ 8,021 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ನಗರದಲ್ಲಿ ಯಾವ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ (ಆಧಾರ : ಮಹಾಜನ ವರದಿ, ಡಾ.ಓಂಕಾರ ಕಾಕಡೆ, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ, ಬೆಂಗಳೂರು).
ಮೇಲಿನ ಉರುಳಿಲ್ಲದ, ಹಾಸ್ಯಾಸ್ಪದವಾದ ವಾದವನ್ನು ಮಂಡಿಸುತ್ತಾ, ಇದಕ್ಕಾಗಿ ನೇಮಕಗೊಂಡ ಆಯೋಗಗಳ ಮುಂದೆ ತಮ್ಮದೆಯಾದ ವಿಚಾರ ಮಂಡಿಸುತ್ತಿದೆ. ಆದರೆ ಇದುವರೆವಿಗೂ ಯಾವ ಆಯೋಗವು ಸಹ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಹೇಳಿದೆಯೇ ವಿನಾ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಯಾವ ಒಂದೇ ಒಂದು ಕಾರಣದಿಂದಲೂ ಹೇಳಿಲ್ಲ. ಭಾಷೆಯ ಆಧಾರದ ಮೇಲೆ ನಮ್ಮದೆಂದು ಹೇಳುವುದಾದರೆ ಈ ರಾಷ್ಟ್ರದಲ್ಲಿ ಹಲವಾರು ಗಡಿಸಮಸ್ಯೆಗಳು ಜನ್ಮ ತಾಳುತ್ತವೆ.
ಏಕೆಂದರೆ ಭಾಷೆ ಎಂಬುದು ರಾಷ್ಟ್ರದಲ್ಲಿ ಪ್ರಚಲಿತವಿರುವ ಎಲ್ಲಾ ಶೈಕ್ಷಣಿಕ ಮಾಧ್ಯಮಕ್ಕೆ ಅರ್ಹವಾಗಲಾರದೆನ್ನಬಹುದು. ಅಲ್ಲದೆ ಅನೇಕ ಭಾಷೆಗಳಿಗೆ ಲಿಪಿಯೇ ಇಲ್ಲ. ಪ್ರತಿ ಯೊಬ್ಬನೂ ತಮ್ಮ ತಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆಯಲು ಬಯಸಿದರೆ ಅದೊಂದು ಬಿಡಿಸಲಾರದ ಸಮಸ್ಯೆಯೇ ಆಗುತ್ತದೆ. ಒಂದರ್ಥದಲ್ಲಿ ಭಾಷಾ ಅಲ್ಪಸಂಖ್ಯಾತರು ಯಾವುದೇ ರಾಜ್ಯದಲ್ಲಿ ಅನಿವಾರ್ಯ. ಅಲ್ಲದೆ ಅವರು ಮೂಲತಃ ಅಲ್ಪಸಂಖ್ಯಾತರೇ ಆಗಿರುತ್ತಾರೆ. ಆದ್ದರಿಂದ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳು ಪರಸ್ಪರ ಅಂತರ್ ಸಂಬಂಧ ಹೊಂದಿದ ಸಮಸ್ಯೆಗಳಾಗಿವೆ. ಉಭಯತರರಲ್ಲಿ ಅನ್ಯೋನ್ಯತೆ, ಪ್ರೀತಿ ವಿಶ್ವಾಸಗಳು ಪರಸ್ಪರವಾಗಿ ವರ್ಧಿಸಬೇಕೇ ಹೊರತು ಪ್ರತ್ಯೇಕ ವಸಾಹತುಗಳನ್ನು ನಿರ್ಮಿಸಿಕೊಂಡು ರಾಷ್ಟ್ರದ ಭಾವೈಕ್ಯತೆಗೆ ಧಕ್ಕೆ ಉಂಟುಮಾಡುವ ಪರಿಸ್ಥಿತಿ ತಲೆದೋರಬಾರದು. ಇಂದು ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನದಲ್ಲಿ ವಿಶಿಷ್ಟ ಹಕ್ಕುಗಳನ್ನು ನೀಡಲಾಗಿದೆ ನಿಜ. ಆದರೆ ಅದರ ಅರ್ಥ ಅವರನ್ನು ಈ ದೇಶದ ವಿಶೇಷ ಪ್ರಜೆಗಳನ್ನಾಗಿ ಪರಿಗಣಿಸಲಾಗಿದೆ ಎಂದಲ್ಲ. ಇದು ಕೇವಲ ತಾತ್ಕಾಲಿಕ ಅನುಕೂಲದ ಅವಕಾಶ ಮಾತ್ರ ಎಂಬುದನ್ನು ಅಲ್ಪಸಂಖ್ಯಾತರು (ಬೆಳಗಾವಿ ಮರಾಠಿಗರು) ತಿಳಿಯಬೇಕು. ಕನ್ನಡ ನಾಡಿನಲ್ಲಿ ಕನ್ನಡ ಪ್ರಮುಖ ಭಾಷೆ. ಅಲ್ಲಿ ಇತರ ಭಾಷೆಗಳ ಸ್ಥಾನ ಎಂದೆಂದಿಗೂ ದ್ವಿತೀಯ ಸ್ಥಾನ ಎಂಬುದನ್ನು ಬೆಳಗಾವಿಯಲ್ಲಿರುವ ಮರಾಠಿಗರು ಮರೆಯಬಾರದು. ಅವರು ತಾವಿರುವ ರಾಜ್ಯಗಳನ್ನೇ ತಮ್ಮ ‘ಮಾತೃಭೂಮಿ’ ಎಂದು ಆಯಾ ರಾಜ್ಯದ ಭಾಷೆಯೇ ತಮಗೂ ಪ್ರಮುಖ ಭಾಷೆ ಎಂದು ಗೌರವಿಸಬೇಕು. ಇದು ಬೆಳಗಾವಿಯ ನಮ್ಮ ಮರಾಠಿ ಬಂಧುಗಳಿಗೆ ತಿಳಿದಿದ್ದರೆ ಈ ಸಮಸ್ಯೆ ಉದ್ಭವಿಸುವುದೇ ಇಲ್ಲ.
ಕೇರಳ ಮತ್ತು ಕರ್ನಾಟಕ
 ಕಾಸರಗೋಡು ಪಟ್ಟಣವು ಪ್ರಸಿದ್ಧ ಚಂದ್ರಗಿರಿ ನದಿಯ ದಡದಲ್ಲಿ ನಿರ್ಮಿತವಾಗಿದೆ. ಇತಿಹಾಸದಲ್ಲಿ ಈ ರಾಜ್ಯವನ್ನು ಕನ್ನಡದ ಪ್ರಥಮ ರಾಜವಂಶವಾದಂತಹ ಕದಂಬರ ದೊರೆ ಮಯೂರವರ್ಮನು ಸಮುದ್ರ ಕಿನಾರೆಯಿಂದ 64 ಭಾಗಗಳಾಗಿ ವಿಂಗಡಿಸಿ ಪ್ರತಿಯೊಂದು ಪ್ರಾಂತ್ಯಗಳನ್ನು ಒಬ್ಬೊಬ್ಬ ಬ್ರಾಹ್ಮಣ ಗವರ್ನರ್ ಆಳ್ವಿಕೆಗೆ ಒಳಪಡಿಸಿದನು. ಈ 64 ಭಾಗಗಳಲ್ಲಿ ಕಾಸರಗೋಡು ಒಂದು ಎಂದು ಇತಿಹಾಸದಲ್ಲಿ ತಿಳಿದುಬರುತ್ತದೆ. ಶಾಸನಗಳ ಪ್ರಕಾರ ಕಾಸರಗೋಡನ್ನು ಕನ್ನಡದ ಪ್ರಸಿದ್ಧ ಪಾಳೇಗಾರ ವಂಶವಾಗಿದ್ದಂತಹ ಕೆಳದಿಯ ಇಕ್ಕೇರಿ ನಾಯಕರ ದೊರೆ ಶಿವಪ್ಪ ನಾಯಕನು ನಿರ್ಮಿಸಿದನೆಂದು ತಿಳಿದುಬರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದಿಗೂ ಶಿವಪ್ಪ ನಾಯಕನು ಕಾಸರಗೋಡಿನಲ್ಲಿ ಕಟ್ಟಿಸಿರುವ ಕೋಟೆಯನ್ನು ನೋಡಬಹುದು. ಇಂದು ಈ ಕೋಟೆ ಯಾವುದೇ ರೀತಿಯ ರಕ್ಷಣೆ ಇಲ್ಲದೆ ಅವನತಿಯ ಅಂಚಿನಲ್ಲಿದೆ. ಇಂತಹ ಐತಿಹಾಸಿಕ ಇತಿಹಾಸವನ್ನು ಹೊಂದಿರುವಂತಹ ಕನ್ನಡದ ನೆಲ ಇಂದು ಕೆಲವು ಜನರ ಸ್ವಾರ್ಥದಿಂದಾಗಿ ಹಾಗೂ ರಾಜಕೀಯ ಪ್ರಭಾವದಿಂದ ನೆರೆಯ ಕೇರಳ ರಾಜ್ಯದಲ್ಲಿ ವಿಲೀನಗೊಂಡಿದ್ದು ವಿಪರ್ಯಾಸವೆ ಸರಿ. ಶತಮಾನಗಳಿಂದಲೂ ಕನ್ನಡ ನಾಡಿನೊಂದಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆದು ಬರುತ್ತಿದ್ದಂತಹ ಕಾಸರಗೋಡು ಎಂಬ ಸುಂದರ ಮನೆಯನ್ನು 1955ರಲ್ಲಿ ನೇಮಕಗೊಂಡ ರಾಷ್ಟ್ರೀಯ ಪುನಾರಚನಾ ಆಯೋಗವು ಕೇರಳಕ್ಕೆ ಸೇರಿಸುವ ಶಿಫಾರಸ್ಸನ್ನು ಮಾಡಿತು.
ಅಂದು ದಕ್ಷಿಣ ಕನ್ನಡಜಿಲ್ಲೆಯಲ್ಲಿ ಕಾಂಗ್ರೆಸ್ ಸಂಸ್ಥೆಯ ಸ್ಥಾಪಕ ರೂವಾರಿಯಾಗಿದ್ದಂತಹ ಕಾರ್ನಾಡ ಸದಾಶಿವರಾಯರು, ಮೂಡಬಿದ್ರಿ ಉಮೇಶರಾಯರು ಆಯೋಗದ ತೀರ್ಪಿಗೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದರು. ಇವರುಗಳ ಜೊತೆಯಲ್ಲಿಯೇ ಸ್ವಾತಂತ್ರ್ಯ ಯೋಧರಾದಂತಹ ದೇವಪ್ಪಾಳ್ವರು, ಶ್ರೀಧರ ಕಕ್ಕಿಲ್ಲಾಯರು ಹಾಗೂ ರಾಷ್ಟ್ರೀಯ ಪಕ್ಷಗಳ ಎಲ್ಲಾ ಮುಖಂಡರೂ ತಮ್ಮ ತಮ್ಮ ಪಕ್ಷಗಳಿಗೆ ರಾಜಿನಾಮೆ ಯಿತ್ತು ‘ಕರ್ನಾಟಕ ಸಮಿತಿ’ಯನ್ನು ರೂಪಿಸಿಕೊಂಡು ಕಾಸರಗೋಡಿಗಾಗಿ ಹೋರಾಟಕ್ಕಿಳಿ ದರು. ವಿದ್ಯಾರ್ಥಿಗಳು ಶಾಲೆ ಕಾಲೇಜುಗಳನ್ನು ಬಹಿಷ್ಕರಿಸಿದರು. ಮಹಿಳೆಯರು ಅದರ ಲ್ಲಿಯೂ ಕೆಲ ಮಹಿಳೆಯರಂತೂ ಹಸುಗೂಸುಗಳನ್ನು ಕಂಕುಳಲ್ಲಿ ಎತ್ತಿಕೊಂಡೇ ಸೆರೆಮನೆ ಸೇರಿದರು. ಹಳ್ಳಿಯಿಂದ ನಗರದವರೆವಿಗೂ ಪ್ರತಿಯೊಂದು ಸ್ಥಳದಲ್ಲಿಯೂ ಜಾತಿ ಧರ್ಮದ ಭೇದವಿಲ್ಲದೆ ಕಾಸರಗೋಡಿನ ಜನತೆಯು ಹೋರಾಟಕ್ಕಿಳಿಯಿತು. ಇಂತಹ ಸಂದರ್ಭ ದಲ್ಲಿಯೇ ಕಾಸರಗೋಡಿನ ಕಿಡಿಯಾಗಿ ಇಂದಿಗೂ ಹರೆಯದ ಹುಡುಗನಂತೆ ಕಾಸರಗೋಡು ಕರ್ನಾಟಕದೊಂದಿಗೆ ವಿಲೀನವಾಗಬೇಕೆಂದು ಹೋರಾಡಿಕೊಂಡು ಬರುತ್ತಿರುವ ನಾಡಿನ ಪ್ರಸಿದ್ಧ ಸಾಹಿತಿ, ಕವಿ ಡಾ.ಕಯ್ಯರ ಕಿಞ್ಞಣ್ಣರೈ ತಮ್ಮ ಲೇಖನಿಯಿಂದ ಕ್ರಾಂತಿಕಾರಿ ಗೀತೆಯನ್ನು ರಚಿಸಿದರು. ಆ ಗೀತೆಯನ್ನು ಧಾರವಾಡದಲ್ಲಿ ನಡೆದಂತಹ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲಿಗೆ ಹಾಡಿದರು. ಅಲ್ಲಿ ನೆರೆದಿದ್ದಂತಹ ಪ್ರತಿಯೊಬ್ಬನ ಹೃದಯದಲ್ಲೂ ಮನೆ ಮಾಡಿನಿಂತ ಕವಿತೆ ಹೀಗಿದೆ.
ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ
 ಎಲ್ಲರೂ ಎದ್ದೆದ್ದು ಓಡಿ ಬನ್ನಿ
 ಕನ್ನಡದ ಗಡಿಕಾಯೆ, ಗುಡಿಕಾಯೆ, ನುಡಿಕಾಯೆ
 ಕಾಯಲಾರೆನೆ ಸಾಯೆ ಓ ಬನ್ನಿ -ಬೆಂಕಿ ಬಿದ್ದಿದೆ ಮನೆಗೆ!
ಹಾರೆಗುದ್ಲಿ ಕೊಡಲಿ ನೊಗ ನೇಗಿಲೆತ್ತುತಲಿ
 ನೆಲದಿಂದ ಹೊಲದಿಂದ ಹೊರಟು ಬನ್ನಿ
 ಕನ್ನಡದ ನಾಡಿಂದ, ಕಾಡಿಂದ, ಗೂಡಿಂದ
 ಕಡಲಿಂದ, ಸಿಡಿಲಿಂದ ಗುಡುಗಿಬನ್ನಿ ಬೆಂಕಿಬಿದ್ದಿದೆ ಮನೆಗೆ!
ಅಕ್ಕಂದಿರೆ ಅಣ್ಣಂದಿರೆ, ತಂಗಿಯರೆ ತಮ್ಮಂದಿರೆ
 ಬೆಂಕಿಯನ್ನಾರಿಸಲು ಬೇಗ ಬನ್ನಿ
 ಕನ್ನಡದ ಒಲವೊಂದೆ ಛಲವೊಂದೆ, ನೆಲವೊಂದೆ
 ನಾಡ ನುಳಿಸುವೆನಂದರೆ ಓಡಿ ಬನ್ನಿ ಬೆಂಕಿ ಬಿದ್ದಿದೆ ಮನೆಗೆ!
ಇಂಥಹ ಕ್ರಾಂತಿಕಾರಕ ಪದಗಳೊಡನೆ ದುಃಖಕರವಾದ ಅಭಿಮಾನದ ಅಂಶವನ್ನು ತುಂಬಿ ನಾಡಿನ ಜನತೆಗೆ ಕಾಸರಗೋಡು ನಮ್ಮದೆಂಬ ಮನೋಭಾವನೆ ಮೂಡಿಸಿದರು. ಇಂದಿಗೂ ಸಹ ರೈಯವರು ಮೇಲಿನಂತಹ ನೂರಾರು ಕವಿತೆಗಳನ್ನು ರಚಿಸಿ ಅಲ್ಲಿನ ಜನತೆಗೆ ಸ್ಫೂರ್ತಿ ನೀಡುತ್ತಾ ಬರುತ್ತಿದ್ದಾರೆ, ಹೋರಾಟದ ಸೆಲೆಯಾಗಿದ್ದಾರೆ.
ಕಾಸರಗೋಡಿನಲ್ಲಿ 1948ನೇ ಡಿಸೆಂಬರ್ನಲ್ಲಿ ಕನ್ನಡ ನಾಡು ಉದಯವಾಗಲಿ ಎಂದು ಹಿಗ್ಗಿ ಹಾಡಿದ ಚಾರಿತ್ರಿಕ ಮಹತ್ವವುಳ್ಳ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ, ಹಾಗೆಯೇ ಹನ್ನೊಂದನೇ ಕರ್ನಾಟಕ ಏಕೀಕರಣ ಸಮ್ಮೇಳನಗಳು ವಿಜೃಂಭಣೆಯಿಂದ ನಡೆದಿದ್ದವು. ಆದರೆ ಕರ್ನಾಟಕ ಉದಯವಾದಾಗ ಕಾಸರಗೋಡಿನ ಎರಡು ಲಕ್ಷ ಕನ್ನಡಿಗರು ತಬ್ಬಲಿಗಳಾಗಿ ದುಃಖದಿಂದ ಕಣ್ಣೀರಿನ ಕೋಡಿ ಹರಿಸಬೇಕಾಯಿತು. ಕಾಸರಗೋಡಿನ ಕನ್ನಡಿಗರಿಗೆ 30-09-1955ನೇ ದಿನವನ್ನು ದುರಂತ ವಿಷಯ ಕೇಳಿದ ದಿನವೆನ್ನಬಹುದು. ಅಂದು ಮಧ್ಯಾಹ್ನದ ವೇಳೆಗೆ ದೆಹಲಿಯಿಂದ ಕ್ಷೇತ್ರದ ಪಾರ್ಲಿಮೆಂಟ್ ಸದಸ್ಯರಾಗಿದ್ದಂತಹ ಕೆ.ಎಸ್. ಹೆಗ್ಡೆಯ ವರಿಂದ ಬಂದಂತಹ ತಂತಿ ಸಂದೇಶವು ಕಾಸರಗೋಡನ್ನು ಕೇರಳ ರಾಜ್ಯಕ್ಕೆ ಸೇರಿಸುವಂತೆ ತ್ರಿಸದಸ್ಯ ಆಯೋಗದ ಸದಸ್ಯರಲ್ಲಿ ಒಬ್ಬರಾದ, ಅದರಲ್ಲಿಯೂ ಕೇರಳದವರೇ ಆದ ಕೆ.ಎಂ.ಪಣಿಕ್ಕರ್ ಅವರ ಶಿಫಾರಸ್ಸಿನಂತೆ ನಡೆದು ಹೋಗಿದೆ ಎಂದು ತಂತಿ ಸಂದೇಶವನ್ನು ಕಳುಹಿಸಿದರು. ಇದನ್ನು ತಿಳಿದ ತಕ್ಷಣವೇ ಹಿರಿಯ ನಾಯಕರಾದ ಮೂಡಬಿದ್ರೆ ಉಮೇಶ ರಾಯರ ಕಛೇರಿಯಲ್ಲಿ ಸಭೆ ಸೇರಿ ಅನ್ಯಾಯದ ಶಿಫಾರಸ್ಸಿನ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಿ ಪ್ರಕಟಿಸಲು, ಸತ್ಯಾಗ್ರಹವನ್ನು ಕೈಗೊಳ್ಳಲು ಏಕಕಂಠದಿಂದ ತೀರ್ಮಾನಿಸಿದರು. ಇದರ ಮುಂದಿನ ಕ್ರಮಕ್ಕಾಗಿಯೇ ಕಾಸರಗೋಡಿನಲ್ಲಿ ‘ಕರ್ನಾಟಕ ಪ್ರಾಂತೀಕರಣ ಸಮಿತಿ’ ಯನ್ನು ರಚಿಸಿಕೊಂಡರು. ಪ್ರಾರಂಭದಲ್ಲಿ ಈ ಸಮಿತಿಯ ಅಧ್ಯಕ್ಷರಾಗಿ ಉಮೇಶರಾಯರು ಆಯ್ಕೆಯಾದರು. ಕಾರ್ಯದರ್ಶಿಯಾಗಿ ಕಳ್ಳಿಗೆ ಮಹಾಬಲ ಭಂಡಾರಿಯವರನ್ನು ಆಯ್ಕೆ ಮಾಡಲಾಯಿತು. ತಾಲ್ಲೂಕಿನಾದ್ಯಂತ ಉಗ್ರ ಪ್ರತಿಭಟನಾ ಮೆರವಣಿಗೆಗಳು ನಡೆಯುತ್ತಾ ಬಂದವು. ಶಾಲಾ-ಕಾಲೇಜುಗಳಿಂದ ವಿದ್ಯಾರ್ಥಿ ಗಳು ಹೊರಬಂದರು. ಸರ್ಕಾರಿ ಕಛೇರಿಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಲಾಯಿತು. ಕೋರ್ಟಿನ ಮುಂದೆ ಉಪವಾಸ ಸತ್ಯಾಗ್ರಹಗಳು ನಡೆದವು. ಇದರಿಂದಾಗಿ 1000ಕ್ಕೂ ಹೆಚ್ಚು ಜನರು ಪೊಲೀಸರ ಬಂಧಿಗಳಾದರು. ಇವರಲ್ಲಿ ಹಲವಾರು ಮಂದಿಗೆ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಯಿತು.
ಮೇಲ್ಕಂಡ ಸಮಯದಲ್ಲಿ ಕಾಸರಗೋಡಿನ ಮಹಿಳೆಯರ ಪಾತ್ರ ಅಮೋಘವಾದುದು. ಕಡಲತೀರದ ರಾಣಿ ಎಂದೇ ಹೆಸರುವಾಸಿಯಾಗಿರುವ ಉಳ್ಳಾಲರಾಣಿ ಅಬ್ಬಕ್ಕಳ ಈ ನಾಡಿನಲ್ಲಿ ಇಲ್ಲಿನ ಮಹಿಳೆಯರು ರಾಷ್ಟ್ರೀಯ ಪುನಾರಚನಾ ಆಯೋಗದ ತೀರ್ಮಾನವನ್ನು ಕೇಳಿ ಸುಮ್ಮನೇ ಕುಳಿತುಕೊಳ್ಳುವಂತೆ ಮಾಡಲಿಲ್ಲ. ಕಾಸರಗೋಡು ತಾಲ್ಲೂಕು ಕರ್ನಾಟಕ ಪ್ರಾಂತೀಕರಣ ಸಮಿತಿಯು ಪ್ರತ್ಯೇಕವಾಗಿ ಒಂದು ಮಹಿಳಾ ವಿಭಾಗವನ್ನು ಸ್ಥಾಪಿಸಿ ಆಯೋಗದ ತೀರ್ಪಿನ ವಿರುದ್ಧ ಉಗ್ರ ಹೋರಾಟಕ್ಕೆ ಮುಂದಾಯಿತು. ಶ್ರೀಮತಿ ಕೆ.ಪಿ.ಸರಸ್ವತಿ ಬಾಯಿಯವರು ಮೊದಲು ಅಧ್ಯಕ್ಷರಾದರು. ಸುಹಾಸಿನಿ ಭಂಡಾರಿಯವರು ಕಾರ್ಯದರ್ಶಿ ಯಾದರು. 1956ನೇ ಜನವರಿ 26ರಂದು ಮಹಿಳೆಯರು ಕಾನೂನು ಉಲ್ಲಂಘನೆ ಮಾಡಿ ಬಂಧನಕ್ಕೊಳಗಾಗುವುದೆಂದು ನಿರ್ಧರಿಸಿಕೊಂಡರು. 26ನೇ ಜನವರಿ ಸಂಜೆ ಸರ್ಕಾರದ ಕ್ರಿಮಿನಲ್ ಕಾನೂನು ಸಂಹಿತೆಯ 144ನೇ ಸೆಕ್ಷನ್ ಪ್ರಕಾರ ಯಾವುದೇ ರೀತಿಯ ಸಭೆ ಸಮಾರಂಭ ಮೆರವಣಿಗೆಗಳನ್ನು ನಡೆಸಬಾರದೆಂದು ನಿಷೇಧಿಸಿತು. ಇಂತಹ ಸಂದರ್ಭದಲ್ಲಿ ಮಹಿಳೆಯರು ಧೀರತನದಿಂದ ಆಯೋಗದ ತೀರ್ಪಿನ ಸದಸ್ಯರಾಗಿದ್ದಂತಹ ಕೇರಳದ ಕೆ.ಎಂ. ಪಣಿಕ್ಕರ್ ಅವರ ವಿರುದ್ಧ ಧಿಕ್ಕಾರ ಕೂಗಿದ್ದರು. ಅವರ ಭೂತದಹನ ಮಾಡಿದರು. ಪ್ರತಿಭಟನೆಯು ತೀವ್ರವಾದಂತೆ ಪೊಲೀಸರು ಇವರನ್ನು ಬಂಧಿಸಿದರು. ಇಂತಹ ಸಮಯದಲ್ಲಿ ಬಂಧನಕ್ಕೊಳಗಾದ ಪ್ರಮುಖ ಮಹಿಳಾ ಮುಖಂಡರೆಂದರೆ ಕಮಲಾಶೆಟ್ಟಿ, ಪಾರ್ಥ, ಜೆ.ಪರಮೇಶ್ವರಿ ಭಟ್, ರಾಧಾ ಕಾಮತ್, ಕೆ.ಪಿ.ಸರಸ್ವತಿಬಾಯಿ, ಸುಹಾಸಿನಿ ಭಂಡಾರಿ, ವಿದ್ಯಾರ್ಥಿನಿಯಾಗಿದ್ದಂತಹ ಯು.ಎಮ್.ಲತಾ ಅವರು. ಇವರಲ್ಲಿ ಶ್ರೀಮತಿ ಪರಮೇಶ್ವರಿ ಭಟ್ಟರು ತಮ್ಮ ಹಸುಗೂಸಿನೊಂದಿಗೆ ಜೈಲುವಾಸ ಅನುಭವಿಸಿರುವುದು ಸೆರೆಮನೆ ದಾಖಲೆಗಳಿಂದ ತಿಳಿದುಬರುತ್ತದೆ.
ಮಂಗಳೂರಿನಲ್ಲಿ ಜಿಲ್ಲಾ ನಾಯಕರು ಪಕ್ಷಭೇದ ಮರೆತು ಸಭೆ ಸೇರಿದರು. ಕಾಸರ ಗೋಡಿನ ಬಗ್ಗೆ ಚಿಂತಿಸಿ ಅದನ್ನು ಪಡೆಯುವುದರ ಬಗ್ಗೆ ಹೋರಾಡಲು ಜಿಲ್ಲಾ ಸಂಘಟನೆಯನ್ನು ರಚಿಸಿಕೊಂಡರು. ಅಧ್ಯಕ್ಷರನ್ನಾಗಿ ಅಂದಿನ ಲೋಕಸಭಾ ಸದಸ್ಯರಾಗಿದ್ದ ಕೆ.ಆರ್.ಆಚಾರ್ ಅವರನ್ನು ನೇಮಿಸಿ ಶಾಂತಿಯುತ ಸತ್ಯಾಗ್ರಹಗಳ ಜೊತೆಗೆ ಉಗ್ರ ಪ್ರತಿಭಟನೆಗಳನ್ನು ನಡೆಸಿದರು. ಇಂತಹ ಸಂದರ್ಭದಲ್ಲಿ ತಮಿಳುನಾಡಿನ (ಅಂದು ಮದ್ರಾಸ್ ಪ್ರಾಂತ್ಯ) ಮುಖ್ಯಮಂತ್ರಿಯಾಗಿದ್ದಂತಹ ಕಾಮರಾಜ್ ಹಾಗೂ ಕೇಂದ್ರ ಮಂತ್ರಿಗಳಾಗಿದ್ದಂತಹ ಲಾಲ್ ಬಹದ್ದೂರ್ ಶಾಸ್ತ್ರಿ(ನೆಹರು ಮಂತ್ರಿಮಂಡಲ)ಯವರು ಮಂಗಳೂರಿಗೆ ಬರುವ ಕಾರ್ಯಕ್ರಮವಿದ್ದಿತು. ಇಂತಹ ಸಂದರ್ಭದಲ್ಲಿ ಮಂಗಳೂರು ಹಾಗೂ ಕಾಸರಗೋಡಿನ ಅಸಂಖ್ಯಾತ ಕನ್ನಡಿಗರು ಬೃಹತ್ ಮೆರವಣಿಗೆ ನಡೆಸಿ ಗಣ್ಯರಿಗೆ ಮನವಿ ಸಲ್ಲಿಸಿದರು. ಇಷ್ಟೆಲ್ಲಾ ಹೋರಾಟಗಳು ನಡೆದರೂ ಕಾಸರಗೋಡಿನ ಕನ್ನಡಿಗರಿಗೆ ಘೋರ ಅನ್ಯಾಯವಾಯಿತು. ಏಕೆಂದರೆ ಕಾಸರಗೋಡು ಕುರಿತ ಕರಡು ಪ್ರಾಂತ್ಯ ಪುನರ್ವಿಂಗಡನಾ ಮಸೂದೆಯು ಲೋಕಸಭೆ ಮತ್ತು ರಾಜ್ಯಸಭೆಯ ಸಮ್ಮತಿ ಪಡೆದು ಶಾಸನವಾಗಿ ಹೊರಹೊಮ್ಮಿತು. ಒಂದರ್ಥದಲ್ಲಿ ಅಂದು ಕಾಸರಗೋಡು ತಾಲ್ಲೂಕಿನ ಕನ್ನಡ ಪ್ರದೇಶವು ಕೆ.ಎಂ.ಪಣಿಕ್ಕರ್ ಅವರಿಂದಾಗಿ ಕೇರಳಕ್ಕೆ ದಾನವಾಗಿ ಸಂದಿತ್ತೆನ್ನಬಹುದು. 1.11.1956ಕ್ಕೆ ಕಾಸರಗೋಡು ಶಾಸ್ತ್ರೋಕ್ತವಾಗಿ, ಜನಾಭಿಪ್ರಾಯಕ್ಕೆ ಪ್ರಜಾಪ್ರಭುತ್ವ ತತ್ವಗಳಿಗೆ ವಿರೋಧವಾಗಿ ಕೇರಳಕ್ಕೆ ಸೇರಿದಾಗ ಕಾಸರಗೋಡಿನ ಕನ್ನಡ ಜನರೆಲ್ಲರೂ ಆ ಕೆಟ್ಟದಿನವನ್ನು ಕರಾಳದಿನವಾಗಿ ಆಚರಿಸಿದರು. ಆ ದಿನವನ್ನು ಇಂದಿಗೂ ಸಹ ಕರಾಳ ದಿನವಾಗಿಯೇ ಆಚರಿಸಿಕೊಂಡು ಬರಲಾಗುತ್ತಿದೆ.
1967ನೆಯ ಸೆಪ್ಟಂಬರ್ ತಿಂಗಳಿನಲ್ಲಿ ಕಾಸರಗೋಡಿನ ಸಾವಿರಾರು ಕನ್ನಡಿಗರು ಬೆಂಗಳೂರಿಗೆ ಬೃಹತ್ ಜಾಥಾ ಹೊರಟರು. ಸುಮಾರು 10 ಬಸ್ಸುಗಳಲ್ಲಿ ಮಡಿಕೇರಿ ಮಾರ್ಗವಾಗಿ ಬರುವಾಗ ಮಡಿಕೇರಿಯಲ್ಲಿ ನಗರಸಭಾ ಸದಸ್ಯರು ಹಾಗೂ ರಸ್ತೆಯ ಪಕ್ಕದಲ್ಲಿ ಸಿಗುವ ಗ್ರಾಮಗಳ ಜನರು ಇವರಿಗೆ ಸ್ವಾಗತ ಸಮಾರಂಭ ನಡೆಸಿ ಶುಭ ಕೋರಿದರು. ಕಾಸರಗೋಡು ಉಳಿವಿಗಾಗಿ ತಮ್ಮೆಲ್ಲರ ಬೆಂಬಲ ವ್ಯಕ್ತಪಡಿಸಿದರು. ಮರುದಿನ ಬೆಂಗಳೂರು ನಗರದಲ್ಲಿ ಬೃಹತ್ ಜಾಥಾ ನಡೆಸಿ ನಂತರ ವಿಧಾನ ಸಭೆ ನಡೆಯುತ್ತಿರುವ ಸಮಯದಲ್ಲಿಯೇ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದರು. ಧರಣಿ ನಡೆಯುತ್ತಿದ್ದಂತಹ ಸ್ಥಳಕ್ಕೆ ಆಗಮಿಸಿದ ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಹಾಗೂ ಅವರ ಸಹೋದ್ಯೋಗಿಗಳಾಗಿದ್ದಂತಹ ಕೆ.ಆರ್.ಆಚಾರ್, ಕೆ.ಬಾಲಕೃಷ್ಣರಾಯರು ತನ್ನ ನಾಡಿನ ಜನತೆಗೆ ಸಾಂತ್ವನದ ಮಾತನಾಡಿದ್ದಲ್ಲದೆ ನಾನೂ ಸಹ ನಿಮ್ಮವನೇ ಎಂಬ ಭರವಸೆಯ ಮಾತನ್ನು ಒತ್ತಿ ಒತ್ತಿ ಹೇಳಿ ಸಭೆಗೆ ಹಾಗೂ ಜಾಥಾಕ್ಕೆ ಹೊಸ ಚೈತನ್ಯ, ಹುಮ್ಮಸ್ಸನ್ನು ಮೂಡಿಸಿದರು ಎಂದು ಪ್ರಜಾವಾಣಿ ದಿನಪತ್ರಿಕೆ(18.09.1967)ಯಲ್ಲಿ ಉಲ್ಲೇಖಿಸ ಲಾಗಿದೆ.
1957-1962-1967ರಲ್ಲಿ ನಡೆದಂತಹ ಮಹಾ ಚುನಾವಣೆಯಲ್ಲಿ ಕರ್ನಾಟಕ ಪ್ರಾಂತೀಕರಣ ಸಮಿತಿಯು ಕಾಸರಗೋಡಿನಲ್ಲಿ ಅಭ್ಯರ್ಥಿಗಳನ್ನೂ ಚುನಾವಣಾ ಕಣಕ್ಕಿಳಿಸಿತು. ಮಿಕ್ಕ ಕ್ಷೇತ್ರಗಳಲ್ಲಿ ಕಾಸರಗೋಡನ್ನು ಕರ್ನಾಟಕಕ್ಕೆ ವಿಲೀನಗೊಳಿಸಲು ಸಮ್ಮತಿಸುವಂತಹ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಉಮೇದುವಾರರ ಪರವಾಗಿ(ಕನ್ನಡನಾಡಿನ ಹಿರಿಮೆ ಗರಿಮೆಗಳನ್ನು ಸೇರಿಸಿಕೊಂಡು, ಕಾಸರಗೋಡು ಕನ್ನಡನಾಡಿನ ಅವಿಭಾಜ್ಯ ಅಂಗವೆಂದು ಅರಿವು ಮೂಡಿಸುವುದಕ್ಕಾಗಿ) ಮಾಡಿರುವ ಭಾಷಣಗಳು ಇಂದು ಇತಿಹಾಸದಲ್ಲಿ ಉಲ್ಲೇಖಿತವಾಗಿದೆ. ಉತ್ಸಾಹಿ ಕಾರ್ಯಕರ್ತರು ಕಾಸರಗೋಡಿನ ಮೂಲೆ ಮೂಲೆಗಳಲ್ಲಿ ಸಂಚರಿಸಿ, ಮನೆಮನೆಗಳನ್ನು ಸಂದರ್ಶಿಸಿ ಕಾಸರಗೋಡು ಕನ್ನಡ ನಾಡೆಂಬ ಕೂಗಿನ ಚಳವಳಿಗೆ ಪ್ರಚಾರ ಕೊಟ್ಟರು. ಚುನಾವಣೆ ಸಂದರ್ಭದಲ್ಲಿ ತಮ್ಮ ಅಭ್ಯರ್ಥಿಯ ಪರವಾಗಿ ಮತ ಯಾಚನೆ ಮಾಡುತ್ತಿದ್ದಂತಹ ಸಂದರ್ಭದಲ್ಲಿ ಜನರಿಗೆ “ಕಾಸರಗೋಡಿನ ಶ್ರೀಮಂತ ಸಂಸ್ಕೃತಿ ಪರಂಪರೆಯು, ಕೇರಳದ ನೆರೆ ನೀರಿನಲ್ಲಿ ಕೊಚ್ಚಿ ಹೋಗಬಾರದು. ನಾವು, ನಮ್ಮ ಮಕ್ಕಳು ನಮ್ಮತನವನ್ನು ಮರೆಯಬಾರದು” ಎಂಬ ಕಳಕಳಿಯ ಮಾತುಗಳನ್ನು ಹೇಳಿ ಜನರಲ್ಲಿ ಪ್ರೀತಿ, ಅಭಿಮಾನದ ಜೊತೆಗೆ ಕ್ರಾಂತಿಕಾರಕ ಮನೋಭಾವನೆಯನ್ನು ಸೃಷ್ಟಿಸಲು ಪ್ರಯತ್ನಿಸಿದರು.
ಇಂತಹ ಸಂದರ್ಭದಲ್ಲಿಯೇ ಮಹಾಜನ್ ಅವರು(ಏಪ್ರಿಲ್ ತಿಂಗಳು) ಮಂಗಳೂರಿಗೂ, ಕಾಸರಗೋಡಿಗೂ ಭೇಟಿ ನೀಡಿ ಸಾಕ್ಷ್ಯ ಸಂಗ್ರಹ ಮಾಡಿದರು. ಕರ್ನಾಟಕ ಸಮಿತಿಯ ಪರವಾಗಿ ಮಹಾಜನ್ ಆಯೋಗಕ್ಕೆ ಸಲ್ಲಿಸಲಾಗಿದ್ದ ವರದಿಗಳನ್ನು ಸುಮಾರು ಎರಡು ತಿಂಗಳಿಗಿಂತಲೂ ಹೆಚ್ಚು ದಿನ ಶ್ರಮ ವಹಿಸಿ ತಯಾರಿಸಿದರು. ಆಗ ಕರ್ನಾಟಕ ಸಮಿತಿಯ ಆಧ್ಯಕ್ಷರು ಬಿ.ಎನ್.ಕಕ್ಕಿಲ್ಲಾಯರಾಗಿದ್ದರು. ಕರ್ನಾಟಕ ಸರ್ಕಾರವು ಮಹಾಜನ ವರದಿ ಕಾರ್ಯ ಪ್ರಾರಂಭಿಸುವುದಕ್ಕೂ ಮೊದಲೇ ಅದರ ತೀರ್ಪಿಗೆ ಬದ್ಧರಾಗಿರುವುದಾಗಿ ತಿಳಿಸಿತು. ನಂತರ 1967ರಲ್ಲಿ ವರದಿಯು ಪ್ರಕಟಗೊಂಡಾಗ ಕಾಸರಗೋಡು ಕರ್ನಾಟಕಕ್ಕೆ ಸೇರಿಸುವಂತೆ ತೀರ್ಮಾನಿಸಲಾಗಿತ್ತು. ಇದರಿಂದ ಕಾಸರಗೋಡಿನ ಜನತೆಗೆ ಸಂತೋಷವಾಗುವಷ್ಟರಲ್ಲಿಯೇ ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿಸಲಿಲ್ಲವೆಂದು ಮರಾಠಿಗಳು ಮಹಾಜನ ವರದಿಯ ಜಾರಿಯ ವಿರುದ್ಧ ಉಗ್ರ ಚಳವಳಿ ಮಾಡಿದ್ದಲ್ಲದೆ, ವರದಿಗೆ ಮೊದಲು ಒಪ್ಪಿಗೆ ನೀಡಿ ನಂತರ ಒಪ್ಪುವುದಿಲ್ಲವೆಂದು ಸಾರಿ, ಮಾತಿಗೆ ತಪ್ಪಿದರು.
ಇಂದು ಡಾ.ಕಯ್ಯರ ಕಿಞ್ಞಣ್ಣ ರೈ ಅವರ ಅಧ್ಯಕ್ಷತೆಯಲ್ಲಿ ಮುನ್ನಡೆದುಕೊಂಡು ಬರುತ್ತಿರುವ ‘ಕರ್ನಾಟಕ ಏಕೀಕರಣ ಸಮಿತಿ’ಯು ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ, ಕನ್ನಡ ಜನರಿಗೆ ಕೇರಳ ಸರ್ಕಾರದಿಂದ ಹಾಗೂ ಸರ್ಕಾರಿ ನೌಕರರಿಂದ ಆಗುತ್ತಿರುವ ಅನ್ಯಾಯವನ್ನು ಕೇರಳ ಸರ್ಕಾರಕ್ಕೆ ಮತ್ತು ಕರ್ನಾಟಕ ಸರ್ಕಾರಕ್ಕೆ ಎಚ್ಚರಿಸುತ್ತಾ ಬರುತ್ತಿದೆ. ಇಂದಿಗೂ ಕಾಸರಗೋಡಿನಲ್ಲಿ ಕನ್ನಡಿಗರ ಏಕಮಾತ್ರ ಕಾವಲುಗಾರ ‘ಕರ್ನಾಟಕ ಏಕೀಕರಣ ಸಮಿತಿ’ ಎಂದರೆ ಹೆಮ್ಮೆಯ ಮಾತೆ ಸರಿ.
ನಮ್ಮ ಗಡಿನಾಡಿನಲ್ಲಿ ಕನ್ನಡದ ಪ್ರದೇಶದಲ್ಲಿದ್ದೂ ನೆರೆಯ ರಾಜ್ಯಕ್ಕೆ ಸೇರಲು ಹೋರಾಡುತ್ತಿರುವ ಸಹೋದರ ಸಹೋದರಿಯರಿಗೆ ಅಜಂತೆಯ ಚಿತ್ರಕಲಾ ವೈಭವ, ಬೇಲೂರು, ಹಳೆಬೀಡು, ಸೋಮನಾಥಪುರ, ತಲಕಾಡು, ಬಾದಾಮಿ, ವಿಜಯನಗರಗಳ ಶಿಲ್ಪ ವೈಭವ, ಮೈಸೂರು ಬೆಂಗಳೂರು ಅರಮನೆಗಳ ಸುಂದರ ಸೊಬಗಿನ ವೈಭವ ತಿಳಿದಿಲ್ಲವೆನ್ನಬಹುದು. ಕರ್ನಾಟಕ ಸಂಗೀತದ ನಾದವೈಭವ ಸಾವಿರಾರು ವರ್ಷಗಳಿಂದ ಬೆಳೆದುಬಂದಿರುವ ಸಾಹಿತ್ಯ ಸಂಸ್ಕೃತಿಗಳ ವೈಭವವನ್ನು ಮರೆಯುತ್ತಿರುವುದೇಕೆ ಅನ್ನಿಸುತ್ತದೆ. ಕನ್ನಡದ ಗಡಿ ಪ್ರದೇಶಗಳು, ಅದು ಬೆಳಗಾವಿಯೇ ಆಗಿರಲಿ, ಕಾಸರಗೋಡೇ ಆಗಲಿ ಅಥವಾ ಆಂಧ್ರದ ಗಡಿಭಾಗಗಳೇ ಆಗಲಿ ಇವುಗಳೆಲ್ಲವೂ ವೀರರ ಭೂಮಿಗಳು. ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಆ ಭಾಗದ ಊರು ಊರುಗಳಲ್ಲಿ ಕಂಡುಬರುವ ವೀರಗಲ್ಲುಗಳು, ಕನ್ನಡದ ಶಾಸನಗಳು ಪ್ರಾಣತ್ಯಾಗ ಮತ್ತು ಬಲಿದಾನ ವಿಷಯಗಳನ್ನು ಸಾರುತ್ತಾ ನಿಂತಿವೆ. ಇದನ್ನೇ ಡಾ.ಬಿ.ಆರ್.ಅಂಬೇಡ್ಕರ್ರವರು ಹೇಳಿದ್ದಾರೆ. ‘ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸ ಲಾರರು’ ಎಂದು ಈ ಮಾತು ಸರ್ವಕಾಲಕ್ಕೂ ಪ್ರಸ್ತುತವೆನಿಸಿಕೊಳ್ಳುತ್ತದೆ. ಈ ಹಂತದಲ್ಲಿ ಕನ್ನಡಿಗರು ಎಚ್ಚರಗೊಳ್ಳಬೇಕಾದ ಪ್ರಮುಖ ಅಂಶಗಳು ಈ ಕೆಳಗಿನಂತೆ ಗುರುತಿಸ ಬಹುದಾಗಿದೆ.
ಇಂದು ಒಂದರ್ಥದಲ್ಲಿ ಜಾತಿ, ಕುಲ, ಪಂಥ, ಧರ್ಮಗಳ ಭಾವನೆಗಳಿಂದ ಹೊರತಾಗಿ, ನಾಡು, ನುಡಿಯ ಏಳ್ಗೆಯ ಗರ್ಭದಲ್ಲಿ ಬೆಳೆಯುತ್ತಿರುವ ನಾವು ನಮ್ಮ ನಾಡದೇವಿಯನ್ನು ಪೋಷಿಸುವುದರ ಮೂಲಕ ನಮ್ಮನ್ನು ನಾವೇ ಪೋಷಿಸಿಕೊಳ್ಳಬೇಕಾಗಿದೆ. ಕೇವಲ ಗತಕಾಲದ ಇತಿಹಾಸದ ವೈಭವೀಕರಿಸಿದ ಅಂಶವನ್ನು ಉದ್ಗರಿಸುವುದರಿಂದ ಯಾವ ಪ್ರಯೋಜನವೂ ಆಗಲಾರದು. ಕೇವಲ ಸಭೆ ಸಮ್ಮೇಳನಗಳಲ್ಲಿ ಘೋಷಣೆ, ಕಪ್ಪುಬಾವುಟ ಪ್ರದರ್ಶನ, ಸಭಾತ್ಯಾಗ, ಮುಷ್ಕರ, ಘೇರಾವೋ, ಕ್ರೌರ್ಯ ಮಾಡುವುದರಿಂದ ಏನಾದೀತು? ಕುರುಡರಿಗೆ ರೇಬನ್ ಗ್ಲಾಸ್ ಹಾಕಿದರೆ ಆಗುವ ಪರಿಣಾಮವಾದರೂ ಏನು? ಮೊದಲು ಅವರಿಗೆ ಕಣ್ಣನ್ನು ಜೋಡಿಸಿ ಅವರ ಜೀವನಕ್ಕೆ ಚೈತನ್ಯ ನೀಡಬೇಕಾಗಿದೆ. ಅವರ ನರನಾಡಿಯಲ್ಲಿ ನವ ಚೈತನ್ಯವನ್ನು ಉಂಟುಮಾಡಬೇಕಾಗಿದೆ. ಈ ಕಾರ್ಯ ಇಂದಿನ ದಿನದಲ್ಲಿ ನಮ್ಮ ರಾಜ್ಯದ ಗಡಿ, ನೆಲ, ಜಲದ ಉಳಿವಿಗಾಗಿ ಹಚ್ಚಾಗಿ ನಡೆಯಬೇಕಾಗಿದೆ. ಈ ಹಂತದಲ್ಲಿ ಭಾರತೀಯ ಸಂಸ್ಕೃತಿಗೆ ಕರ್ನಾಟಕದ ಕೊಡುಗೆಯನ್ನು ನೀಡಿ ಅಮರರಾದ ಧಾರ್ಮಿಕ ಮಹಾಪುರುಷರು, ಸಾಹಿತಿಗಳು, ಸಾಂಸ್ಕೃತಿಕ ಸಾಧಕರು ಅನುಸರಿಸಿದ, ಸಾರಿದ ತಪೋನಿಷ್ಠೆ ನಮ್ಮಲ್ಲಿ ಅಳವಡಿಸಬೇಕಾಗಿದೆ. ಜಗತ್ತಿನ ಗಮನವನ್ನು ಇಂದಿಗೂ ತನ್ನತ್ತಾ ಸೆಳೆದು ನಿಂತಿರುವ ವಾಸ್ತು ಶಿಲ್ಪಗಳ ಆಗಾಧ ಸಾಮರ್ಥ್ಯದ ಅಮರ ಸಂಕೇತಗಳಿಗೆ, ನಮ್ಮ ಕೊಡುಗೆಯನ್ನು ನೀಡ ಬೇಕಾಗಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿರುವ ಶಾಸನಗಳು, ಕೈಫಿಯತ್ತುಗಳು ಹಾಗೂ ಸಾಂಸ್ಕೃತಿಕ ಸ್ಥಳಗಳ ಬಗ್ಗೆ ಆಳವಾದ ಅಧ್ಯಯನ ನಡೆಯಬೇಕಾಗಿದೆ. ಪ್ರಾಚೀನ ಪರಂಪರೆಯ ಉಜ್ವಲ ಇತಿಹಾಸವನ್ನೊಳಗೊಂಡ ಸಾಹಿತ್ಯ ಸೃಷ್ಟಿಯನ್ನು ಉಳಿಸಿಕೊಳ್ಳಲು ನಮ್ಮ ಪಾಲಿನ ಕರ್ತವ್ಯವನ್ನು ಅನುವುಗೊಳಿಸಬೇಕಾಗಿದೆ. ಭಾರತದ ಯಾವ ರಾಜ್ಯಗಳಲ್ಲಿಯೂ ದೊರೆಯ ದಷ್ಟು ನೈಸರ್ಗಿಕವಾಗಿ ದೊರೆತಿರುವ ಕರ್ನಾಟಕದ ಜಲಸಂಪತ್ತು ಇವುಗಳ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆಯಬೇಕಾಗಿದೆ. ಭಾರತದಲ್ಲಿ ಮೊದಲನೇ ವರ್ಗದ 22 ಖನಿಜಗಳಲ್ಲಿ 16 ಖನಿಜಗಳು ಕರ್ನಾಟಕದಲ್ಲಿಯೇ ದೊರೆಯುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಈ ಸಂಪತ್ತಿನ ಪೂರ್ಣ ಪ್ರಯೋಜನ ಕರ್ನಾಟಕಕ್ಕೆ ದೊರೆಯು ವಂತೆ ನೋಡಿಕೊಳ್ಳಬೇಕಾಗಿದೆ.
ಕರ್ನಾಟಕದಲ್ಲಿ ಹರಿಯುತ್ತಿರುವ ಕೃಷ್ಣಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಭೀಮಾ, ವರದಾ, ಕಾವೇರಿ, ಶರಾವತಿ, ಕಾಳಿ, ಅಘನಾಶಿನಿ, ನೇತ್ರಾವತಿ, ಕಪಿಲೆ, ತುಂಗಭದ್ರಾ, ಹೇಮಾವತಿ ಮುಂತಾದ ನದಿಗಳ ಪ್ರಯೋಜನವನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯ ಬೇಕಾಗಿದೆ. ಕೋಲಾರದಲ್ಲಿ ಚಿನ್ನದಗಣಿ ಇದ್ದರೆ, ರಾಯಚೂರಿನಲ್ಲಿ ಹಟ್ಟಿ ಚಿನ್ನದಗಣಿ ಇದ್ದರೆ, ಮಲೆನಾಡಿನಲ್ಲಿ ಅರಣ್ಯ ಸಂಪತ್ತಿದೆ. ಚಿತ್ರದುರ್ಗದಲ್ಲಿ ತಾಮ್ರ ದೊರಕಿದರೆ, ಬಳ್ಳಾರಿಯಲ್ಲಿ ಖನಿಜ ಸಂಪತ್ತಿದೆ. ಇವುಗಳ ಸದುಪಯೋಗದ ಕಾರ್ಯ ಹೆಚ್ಚು ಹೆಚ್ಚಾಗಿ ಇಂದು ನಡೆಯಬೇಕಾಗಿದೆ.
ಜಗತ್ತಿನ ಅದ್ಭುತಗಳಲ್ಲೊಂದು ಎಂದು ಹೆಸರಾಗಿರುವ ವಿಜಾಪುರ ಗೋಳಗುಮ್ಮಟದ ಜೊತೆಗೆ, ಐಹೊಳೆ, ಪಟ್ಟದಕಲ್ಲು, ಬಾದಾಮಿ, ಬೇಲೂರು, ಹಳೇಬೀಡು, ಹಂಪೆ, ಶ್ರವಣ ಬೆಳಗೊಳ, ಸೋಮನಾಥಪುರ, ತಲಕಾಡುಗಳಂಥ ನೂರಾರು ಶಿಲ್ಪಕಲೆಗಳ ಅದ್ಭುತ ಸಂಕೇತಗಳ ರಕ್ಷಣೆಯಾಗಬೇಕಾಗಿದೆ. ಅಪಾರ ಸಮುದ್ರ ದಂಡೆಯನ್ನು ಪಡೆದಿರುವ ನಮ್ಮ ರಾಜ್ಯ ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆಯ, ಗೊಬ್ಬರದ, ಸಾಗಾಣಿಕೆಯ, ಚಿಕ್ಕಬಂದರುಗಳ ಹಾಗೂ ಅಂತಾರಾಷ್ಟ್ರೀಯ ಬಂದರುಗಳನ್ನು ಸ್ಥಾಪಿಸಿ ಅಭಿವೃದ್ದಿ ಕಾರ್ಯವನ್ನು ಸಾಧಿಸಬೇಕಾಗಿದೆ. ಇವುಗಳೆಲ್ಲದರ ಲ್ಲಿಯೂ ಮುಖ್ಯವಾದದ್ದು ಆಹಾರ ಧಾನ್ಯ ಹಾಗೂ ವಾಣಿಜ್ಯ ಪದಾರ್ಥಗಳ ಹೆಚ್ಚು ಉತ್ಪಾದನೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ.
ಈಗಿರುವ ಅನೇಕ ಸರ್ಕಾರಿ ಉದ್ದಿಮೆಗಳನ್ನು ಸುಸ್ಥಿತಿಯಲ್ಲಿ ಉಳಿಸಿಕೊಂಡು, ನೈಸರ್ಗಿಕ ಸಂಪತ್ತನ್ನು ಬಳಸಿಕೊಂಡು ಅನೇಕ ಹೊಸ ಹೊಸ ಉದ್ದಿಮೆಗಳನ್ನು ಪ್ರಾರಂಭಿಸಬೇಕಿದೆ. ಹೊರನಾಡಿನಿಂದ ಬಂದು ಕರ್ನಾಟಕವನ್ನು, ಅದರಲ್ಲೂ ರಾಜಧಾನಿ ಬೆಂಗಳೂರನ್ನು ಆಕ್ರಮಿಸಿಕೊಂಡು ಕನ್ನಡಿಗರನ್ನೇ ಅಲ್ಪಸಂಖ್ಯಾತರನ್ನಾಗಿ ಮಾಡಿರುವ ಔದ್ಯಮಿಕರ ಆಮದನ್ನು ತಡೆಗಟ್ಟಬೇಕಾಗಿದೆ. ಭಾರತದಲ್ಲಿ ಎಲ್ಲಿಯೂ ಅವಕಾಶ ಸಿಗದೇ ಇರುವ ಉದ್ಯಮಿಗಳಿಗೆ, ಕೂಲಿಕಾರರಿಗೆ, ವ್ಯಾಪಾರಿಗಳಿಗೆ ಕರ್ನಾಟಕದಲ್ಲಿ ಆಶ್ರಯ ದೊರೆಯುತ್ತಿರುವುದನ್ನು ಪ್ರತಿಬಂಧಿಸದೇ ಹೋದರೆ ಈ ನಾಡು ತನ್ನ ಮೂಲ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದು. ನೆರೆಯ ರಾಜ್ಯಗಳಿಂದ ವಲಸೆ ಬಂದು ನೆಲೆಸಿರುವವರಿಗೆ ಉದ್ಯಮಗಳಲ್ಲಿ ಅವಕಾಶ ನೀಡು ತ್ತಿರುವ ಅಧಿಕಾರಿಗಳಿಗೆ ಹಾಗೂ ಅನ್ಯ ಭಾಷೆಯಲ್ಲಿ ತಯಾರಾದ ಚಲನಚಿತ್ರಗಳಿಗೆ ಹೆಚ್ಚಿನ ಪ್ರೋನೀಡುತ್ತಿರುವವರಿಗೆ ತಕ್ಕ ಪಾಠವನ್ನು ಕಲಿಸುವ ಮುಖೇನ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಆಜ್ಞೆಯನ್ನು ಅನುಷ್ಠಾನಕ್ಕೆ ತರಬೇಕಾಗಿದೆ.
ರಾಜ್ಯದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು, ಗ್ರಾಮಾಂತರ ಪ್ರದೇಶಗಳಲ್ಲಿ ಸಣ್ಣ ಕೈಗಾರಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಿ, ನಿರುದ್ಯೋಗಿ ಪದವೀಧರರಿಗೆ, ತಕ್ಕಮಟ್ಟಿನ ಪರಿಹಾರವನ್ನು ಒದಗಿಸಬೇಕಾಗಿದೆ. ಬಡತನದ ಪರಮಾವಧಿಯನ್ನು ಅನುಭವಿಸುತ್ತಿರುವ ರೈತ ಕೂಲಿಕಾರ, ಕೂಲಿಕಾರರಿಗೆ ಉದ್ಯೋಗಾವಕಾಶ ವನ್ನು ಒದಗಿಸುವುದಲ್ಲದೆ, ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲದ ಬೆಲೆಯನ್ನು ನಿಗದಿಪಡಿಸಿ ಅವರಲ್ಲಿ ವಿಶ್ವಾಸ ಹೆಚ್ಚಿಸಬೇಕಾಗಿದೆ. ಜೊತೆಗೆ ಲಂಚ, ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ ಇತ್ಯಾದಿ ಘಾತುಕ ಕೃತ್ಯದಲ್ಲಿ ತೊಡಗಿರುವ ಅಧಿಕಾರಿಗಳನ್ನು ಕಂಡು ಹಿಡಿದು, ಮುಲಾಜಿಲ್ಲದೆ ಶಿಕ್ಷಿಸುವ ದಿಟ್ಟ ಕ್ರಮವನ್ನು ಆಡಳಿತ ಸುಧಾರಣೆಯ ಮೂಲಕ ತರಬೇಕಾಗಿದೆ. ಸ್ವಾರ್ಥಕ್ಕಾಗಿ ಜಾತಿ, ಉಪಜಾತಿಗಳನ್ನು ಪೋಷಿಸುತ್ತಾ ಜಾತಿಯ ಆಧಾರದ ಮೇಲೆ ಸಮಾಜ ವನ್ನು ಇಬ್ಭಾಗಿಸಿ, ಅಜ್ಞ ಜನರ ದುರುಪಯೋಗಪಡಿಸಿಕೊಳ್ಳುವ ರಾಜಕೀಯ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಸಮಾಜದಿಂದ ದೂರವಿಡಬೇಕಾಗಿದೆ. ಮುಖ್ಯವಾಗಿ ಗಡಿ ಪ್ರದೇಶದಲ್ಲಿ ಕನ್ನಡ ಶಾಲೆ, ಕನ್ನಡ ಶಿಕ್ಷಕರ ಕೊರೆತೆ ಇಲ್ಲದಂತೆ ನೋಡಿಕೊಳ್ಳಬೇಕಾಗಿದೆ. ಹಾಗೆಯೇ ಈ ಭಾಗಗಳಲ್ಲಿ ಜನರು ಎದುರಿಸುತ್ತಿರುವ ಆರೋಗ್ಯ, ವಸತಿ, ಆಹಾರದಂತಹ ಮೂಲಭೂತ ಸೌಕರ್ಯದ ಕಡೆಗೆ ಹೆಚ್ಚಿನ ಅದ್ಯತೆ ನೀಡಬೇಕಾಗಿದೆ. ಈ ಾಗದ ಜನರಲ್ಲಿ ಕನ್ನಡ ನಾಡಿನ ಬಗ್ಗೆ ಹೆಮ್ಮೆ ಮೂಡಿಸುವ ಕೆಲಸ ತ್ವರಿತಗತಿಯಲ್ಲಿ ಮಾಡಬೇಕಾಗಿದೆ. ಕೇವಲ ರಾಜಕೀಯ ಪಕ್ಷಗಳ ವ್ಯಾಮೋಹಕ್ಕೆ ಒಳಗಾಗಿ ನಿರುಪಯುಕ್ತ ವ್ಯಕ್ತಿಗಳನ್ನು ಚುನಾಯಿಸುವ ಅನಿಷ್ಟ ಪದ್ಧತಿಯನ್ನು ಇನ್ನಾದರೂ ಕೈಬಿಟ್ಟು, ಯೋಗ್ಯತೆ ಇರುವ ಹಾಗೂ ಸಮಾಜದ(ಕ್ಷೇತ್ರದ) ಹಿತರಕ್ಷಣೆಯನ್ನು ಕಾಪಾಡಬಲ್ಲ ಯಾವುದೇ ವ್ಯಕ್ತಿಯಿರಲಿ, ಅಂಥವರನ್ನು ಚುನಾಯಿಸುವ ಪ್ರಜ್ಞೆ ಮತದಾರರಲ್ಲಿ ಮೂಡಬೇಕಾಗಿದೆ. ಕೊನೆಯದಾಗಿ ಕರ್ನಾಟಕ ರಾಜ್ಯ ನಿರ್ಮಾಣವಾಗಿ 60 ವರ್ಷಗಳು ಗತಿಸಿವೆ. ರಾಜ್ಯ ಪುನರ್ವಿಂಗಡನಾ ಆಯೋಗದ ಅಚಾತುರ್ಯದ ಮೂಲಕ ಅನ್ಯ ರಾಜ್ಯಗಳೊಂದಿಗೆ ಸೇರ್ಪಡೆಯಾಗಿರುವ ಕನ್ನಡ ಪ್ರದೇಶಗಳು ಪುನಃ ಕರ್ನಾಟಕ ರಾಜ್ಯದಲ್ಲಿ ಸಮಾವೇಶಗೊಳ್ಳುವಂತೆ ಹೋರಾಡಬೇಕಾಗಿದೆ. ಇದಕ್ಕೆ ರಾಜಕೀಯದ ಜೊತೆ ಸಂಸ್ಕೃತಿಯು ಪ್ರಮುಖ ಪಾತ್ರ ವಹಿಸಬೇಕಾಗಿದೆ.
ಸುಖದ ಮೂಲ ಧರ್ಮ, ಧರ್ಮದ ಮೂಲ ಅರ್ಥ, ಅರ್ಥದ ಮೂಲ ರಾಜ್ಯ ಎಂದು ದಂಡ ನೀತಿಯನ್ನು ರಾಷ್ಟ್ರಕ್ಕೆ ಸಾರಿದ ಚಾಣಕ್ಯನು ಮೇಲಿನದನ್ನು ಎಷ್ಟೋ ಶತಮಾನಗಳ ಹಿಂದೆ ಸಾರಿದ್ದರೂ ಇಂದಿಗೂ ಸಹ ಪ್ರಸ್ತುತವೆನಿಸುತ್ತದೆ. ಇಂದು ನಮ್ಮ ನಾಡು ಎಲ್ಲಾ ರೀತಿಯಲ್ಲಿಯೂ ಏಕೀಕರಣಗೊಂಡಿದೆ. ಅದು ರಾಜಕೀಯ ಏಕೀಕರಣವಿರಬಹುದು ಅಥವಾ ಅಖಂಡ ಕರ್ನಾಟಕದ ಸಾಂಸ್ಕೃತಿಕ ಏಕೀಕರಣವಿರಬಹುದು. ಆದರೂ ಸಹ ಕರ್ನಾಟಕ ಸಂಪೂರ್ಣವಾಗಿ ಏಕೀಕರಣ ಹೊಂದಿದೆ ಎಂದು ಧೈರ್ಯವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಕನ್ನಡನಾಡಿನ ನೆಲ ಜಲಗಳು ವಿವಾದಗಳ ಸುಳಿಯಲ್ಲಿ ಸಿಲುಕಿದೆ. ಇದು ನಮ್ಮ ಕನ್ನಡ ಹಾಗೂ ರಾಷ್ಟ್ರೀಯತೆಯ ಅಧೋಗತಿಗೆ ಹಿಡಿದ ಕನ್ನಡಿಯಾಗಿದೆ. ನಿಜ ಹೇಳಬೇಕೆಂದರೆ ಕನ್ನಡ ನಾಡಿನಲ್ಲಿ ಬೆಳೆದು ಜೀವನ ನಡೆಸುತ್ತಿದ್ದೂ ಕನ್ನಡ ನಾಡು ನುಡಿಯನ್ನು ಮರೆಯುತ್ತಿರುವವರನ್ನು ಆ ಭಾಷೆಯನ್ನು ಅಲಕ್ಷ್ಯದಿಂದ ಕಾಣುತ್ತಿರುವವರನ್ನು ಏನೆಂದು ಕರೆಯೋಣ. ನನ್ನ ದೃಷ್ಟಿಯಲ್ಲಿ ಅವರನ್ನು ಹಿಟ್ಲರ್ ಮುಸಲೋನಿಗಳಂತೆ ಹೊರದೂಡಲು ಯತ್ನಿಸಬೇಕು. ಇಂದು ಕರ್ನಾಟಕದ ಗಡಿಯ ಉದ್ದಗಲಕ್ಕೂ ಮೇಲಿನ ತೊಂದರೆ ಕಾಣುತ್ತಿದೆ. ಬೆಳಗಾವಿ, ಕೋಲಾರ, ಬಳ್ಳಾರಿಗಳಲ್ಲಿ ಮರಾಠಿಗರು, ತೆಲುಗರು ಕನ್ನಡದ ಮಣ್ಣಿನಲ್ಲಿ ತಿಂದು ತೇಗುತ್ತಿದ್ದರೂ ಕನ್ನಡದ ಬಗ್ಗೆ ಕಿಂಚಿತ್ತೂ ಪ್ರೀತಿ ಇಲ್ಲ. ಈ ಪ್ರದೇಶಗಳಲ್ಲಿ ಕನ್ನಡದ ಕಾರ್ಯಕ್ರಮಗಳು ನಡೆುುವುದಕ್ಕೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆಲ್ಲಾ ಕನ್ನಡಿಗರಲ್ಲಿರುವ ಅಭಿಮಾನ ಶೂನ್ಯತೆಯೇ ಕಾರಣವೆನ್ನಿಸುತ್ತದೆ. ಹೀಗಾಗಬಾರದು. ಇಂಥ ಸಂದರ್ಭದಲ್ಲಿ ರಾಜ್ಯದ ಎಲ್ಲಾ ರಾಜಕೀಯ ಪಕ್ಷದವರು, ಸಾಹಿತಿಗಳು, ಚಿಂತಕರು, ಒಗ್ಗಟ್ಟಿನಿಂದ ಹೋರಾಡಿ ಜಯಗಳಿಸಬೇಕಾಗಿದೆ.
ಟಿಪ್ಪಣಿಗಳು:
1. ‘ಕನ್ನಡ’ ಎಂಬುದು ದೇಶ ಹಾಗೂ ಭಾಷಾವಾಚಕವಾಗಿ ‘ಕವಿರಾಜಮಾರ್ಗ’ದಲ್ಲಿಯೇ, ಪ್ರಯೋಗವಾಗಿರು ವುದನ್ನು ಗಮನಿಸಬಹುದು. ದೇಶದ ಹೆಸರನ್ನು ಸೂಚಿಸುವ ಬಹುಪರಿಚಿತವಾದ ಇಲ್ಲಿಯ ಉಲ್ಲೇಖ ಮಹತ್ವವಾಗಿದೆ.
2. ಪದ್ಯ-1-36ರ ಸಾರಾಂಶವೆಂದರೆ : ‘‘ಕಾವೇರಿ ನದಿಯಿಂದ ಆ ಗೋದಾವರಿ ನದಿಯವರೆಗೆ ಇರುವ ಆ ನಾಡು ಪ್ರಸಿದ್ಧವಾದ ಜನಪದವೆನಿಸಿದೆ. ಭೂಮಂಡಲದೊಳಗೆ ಸೇರಿರುವ ನಿರ್ಮಲ ರಾಜ್ಯ ವಿಶಿಷ್ಟವೆನಿಸಿದೆ. ಆ ‘ಕನ್ನಡ’ದ ತಿರುಳು ಪ್ರದೇಶಗಳನ್ನು ಪದ 1-37ರಲ್ಲಿ ವಿವರಿಸಲಾಗಿದೆ.
3. ಕಿಸುವೊಳಲಾ (ಬಿಜಾಪುರ ಜಿಲ್ಲೆಯ ಪಟ್ಟದಕಲ್ಲು), ಕೊಪಣನಗರ(ಕೊಪ್ಪಳನಗರ), ಪುಲಿಗೆರೆಯಾ (ಧಾರವಾಡ ಜಿಲ್ಲೆಯ ಲಕ್ಷ್ಮೇಶ್ವರ), ಒಂಕುಂದ (ಬೆಳಗಾಂ ಜಿಲ್ಲೆಯ ಈಗಿನ ಒಕ್ಕುಂದ) ಇವುಗಳ ನಡುವಿನ ನಾಡೇ ಆ ಕನ್ನಡದ ತಿರುಳಾದ ಪ್ರದೇಶ.
ಮೇಲಿನ ಎರಡು ಪದ್ಯಗಳಲ್ಲಿ ಕನ್ನಡ ಶಬ್ದ ದೇಶವಾಚಕವಾಗಿಯೇ ಇರುವುದು ಗಮನಿಸಬಹುದಾಗಿದೆ.
4. ಸ್ವಾತಂತ್ರ್ಯ ಬಂದ ನಂತರ ಭಾಷಾವಾರು ಆಧಾರದ ಮೇಲೆ ಪ್ರತ್ಯೇಕವಾಗಿ ನಿರ್ಮಾಣಗೊಂಡ ಕನ್ನಡ ಪ್ರದೇಶವನ್ನು ‘ಮೈಸೂರು ರಾಜ್ಯ’ ಎಂದು ಕರೆಯಲಾಗುತ್ತಿತ್ತು. 1971ರ ನವೆಂಬರ್ನಲ್ಲಿ ದಿವಂಗತ ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ‘ಕರ್ನಾಟಕ’ ಎಂದು ನಾಮಕರಣ ಮಾಡಿದರು.
5. ಕರ್ನಾಟಕ ಏಕೀಕರಣವನ್ನು ಮೈಸೂರು ಸಂಸ್ಥಾನದ ಜನರು ವಿರೋಧಿಸುವುದಕ್ಕೆ ಪ್ರಮುಖ ಕಾರಣ ಸಂಪನ್ಮೂಲ ಹಾಗೂ ರಾಜಕೀಯ. ಮೈಸೂರು ಸಂಸ್ಥಾನವು ಭೌಗೋಳಿಕವಾಗಿ ಶ್ರೀಮಂತ ಪ್ರದೇಶ. ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಹಾಗೂ ರಾಜಕೀಯವಾಗಿ ಉಜ್ವಲವಾಗಿ ಮುನ್ನಡೆಯುತ್ತಿತ್ತು. ಆದರೆ ಉತ್ತರ ಕರ್ನಾಟಕದ ಶೇ.90 ಭಾಗ ಭೂಮಿ ಬಂಜರು ಪ್ರದೇಶವಾಗಿತ್ತು. ಬಡತನ ಹೇಳತೀರದಾಗಿತ್ತು. ಇಂಥ ಸಂದರ್ಭದಲ್ಲಿ ಮೈಸೂರು ಅಖಂಡ ಕರ್ನಾಟಕದೊಂದಿಗೆ ವಿಲೀನ ಗೊಂಡರೆ ಮೈಸೂರು ಸಂಸ್ಥಾನದ ಸಂಪತ್ತು ಕೈ ಜಾರುತ್ತದೆ ಎನ್ನುವುದು ಒಂದಾದರೆ, ಜಾತಿ ಆಧಾರಿತ ರಾಜಕೀಯ ಎರಡನೆಯದು. ಮೈಸೂರು ಸಂಸ್ಥಾನದಲ್ಲಿ ಪ್ರಬಲ ಕೋಮಿನವರು ಒಕ್ಕಲಿಗರು. ಆದರೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಿಂಗಾಯತರು ಇಲ್ಲ. ಪ್ರಾಬಲ್ಯ ಕಳೆದುಕೊಳ್ಳಬಹು ದೆಂಬುದು ಎರಡನೆಯದು. ಇದಕ್ಕಾಗಿ ಕೆಲವು ಮೈಸೂರು ಪ್ರಾಂತ್ಯದ ರಾಜಕಾರಣಿಗಳು ಅಖಂಡ ಕರ್ನಾಟಕ ಏಕೀಕರಣವನ್ನು ವಿರೋಧಿಸಿದರೆಂದು ಹೇಳಬಹುದು.
ಪರಾಮರ್ಶನ ಗ್ರಂಥಗಳು
1. ಮಹದೇವ ಬಣಕಾರ, 1980. ಮಹಾಜನ ವರದಿಯು ಕಾರ್ಯಗತವಾಗದಿದ್ದರೂ ಕಾಸರಗೋಡು ಕೇರಳದಲ್ಲಿ ಉಳಿಯದು, ಬೆಳಗಾವಿ-ಮಹಾರಾಷ್ಟ್ರಕ್ಕೆ ಹೋಗದು
2. ಚಿನ್ನಸ್ವಾಮಿ ಸೋಸಲೆ ಎನ್., 1999. ಏಕೀಕರಣ ನಂತರ ಕರ್ನಾಟಕದಲ್ಲಿ ಗಡಿ ಚಳವಳಿ, ಪ್ರಸಾರಾಂಗ : ಕನ್ನಡ ವಿಶ್ವವಿದ್ಯಾಲಯ, ಹಂಪಿ
3. ಗೋಪಾಲರಾವ್ ಎಚ್.ಎಸ್., ಕರ್ನಾಟಕ ಏಕೀಕರಣ ಇತಿಹಾಸ, ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
4. ಬೆಳಗಾವಿ ಬೆಳಕು, ಅಖಿಲ ಭಾರತ 70ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಸ್ಮರಣ ಗ್ರಂಥ
5. ಕರ್ನಾಟಕಕ್ಕೆ ಶುಭವಾಗಲಿ, ಡಿ.ದೇವರಾಜ ಅರಸು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, 1976
 6. ಆಲೂರು ವೆಂಕಟರಾವ್, ಕರ್ನಾಟಕ ಗತವೈಭವ, ಸಮಾಜ ಪುಸ್ತಕಾಲಯ, ಧಾರವಾಡ, 1956
blogger
delicious
digg
facebook
reddit
stumble
twitter
print
email
ಪುಸ್ತಕ: ಸಮಕಾಲೀನ ಕರ್ನಾಟಕ ಚರಿತ್ರೆಯ ವಿವಿಧ ಆಯಾಮಗಳು (ಸಂಪಾದಿತ)
ಲೇಖಕರು: ಡಾ. ಎನ್. ಚಿನ್ನಸ್ವಾಮಿ ಸೋಸಲೆ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಡಾ. ವಿಜಯ್ ಪೂಣಚ್ಚ ತಂಬಂಡ
ಸಂಪುಟ ಸಂಪಾದಕರು: ಡಾ. ಎನ್. ಚಿನ್ನಸ್ವಾಮಿ ಸೋಸಲೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ