ಸೋಮವಾರ, ಜೂನ್ 22, 2015

ಕನ್ನಡ > ಭಾಷೆ > ವ್ಯಾಕರಣ

ಕನ್ನಡ > ಭಾಷೆ > ವ್ಯಾಕರಣ

ವ್ಯಾಕರಣ

‘ಭಾಷಾ ರಚನೆಯ ಚೌಕಟ್ಟು’, ‘ಭಾಷೆಯ ಅಸ್ಥಿಪಂಜರ’ ಎಂಬ ರೂಪ ಗಳಿಂದ ಪರೋಕ್ಷವಾಗಿ ವ್ಯಾಕರಣವನ್ನು ಪರಿಚಯಿಸುವುದು ಸಾಮಾನ್ಯ ಅಭ್ಯಾಸ. ಭಾಷೆಯ ರಚನೆಯಲ್ಲಿ ವ್ಯಾಕರಣದ ಪಾತ್ರವೇನು ಎಂಬ ಪ್ರಶ್ನೆಗೆ ನೇರವಾದ ಸಮರ್ಪಕ ಉತ್ತರ ಕೊಡುವುದು ಕಷ್ಟ. ಬಹಳ ಹಿಂದಿನಿಂದಲೂ ವ್ಯಾಕರಣವನ್ನು ಕುರಿತ ಜಿಜ್ಞಾಸೆ ನಡೆಯುತ್ತಲೇ ಬಂದಿದೆ. ವಿದ್ವಾಂಸರು ಇದನ್ನು ನಿರ್ವಚಿಸುತ್ತ ಬಂದಿದ್ದಾರೆ. ಆದರೂ ಇದರ ಅರ್ಥ ಸಂದಿಗ್ಧತೆ, ಗೊಂದಲ ನಿವಾರಣೆಯಾಗಿಲ್ಲ.
ಗ್ರೀಕ್‌ನ Grammatika ಪದದಿಂದ Grammar ಪದ ನಿಷ್ಪನ್ನವಾಗಿದೆ ಎಂಬುದು ಸಾಮಾನ್ಯ ತಿಳುವಳಿಕೆ. Grammatika ಪದ ಬಳಕೆಯಾಗಿರುವುದು ‘ಬರವಣಿಗೆಯ ಕಲೆ’ ಎಂಬ ಮೂಲಾರ್ಥದಲ್ಲಿ. ಆದರೆ ಇದು ಬಹಳ ಕಾಲ ಭಾಷೆಯ ಸಮಗ್ರ ಅಧ್ಯಯನವನ್ನು ಸೂಚಿಸುವ ಸಡಿಲ ಪ್ರಯೋಗವಾಗಿತ್ತು. ಗ್ರೀಕರಿಗೆ ವ್ಯಾಕರಣ ತತ್ವಶಾಸ್ತ್ರದ ಒಂದು ಭಾಗವಾಗಿತ್ತು. ಮಧ್ಯಕಾಲೀನ ಯುಗದ ಹೊತ್ತಿಗೆ, ಇದು ಭಾಷೆಯ ಸರಿಬಳಕೆಯನ್ನು ಪ್ರತಿಪಾದಿಸುವ, ಅಂಥ ಶಿಷ್ಟ ರೂಪಗಳ ಪಠ್ಯಗಳನ್ನು ನಿರ್ಮಿಸುವ, ನಿಯಮಗಳ ಕಗ್ಗಂಟಾಯಿತು. ಹೀಗಾಗಿ ಹತ್ತೊಂಬತ್ತನೆಯ ಶತಮಾನದವರೆಗೂ ವ್ಯಾಕರಣಕಾರ ಭಾಷೆಯ ನಿಯಮ ನಿರೂಪಕ ಮಾತ್ರ. ವಿಶಾಲಾರ್ಥದಲ್ಲಿ ವ್ಯಾಕರಣ ಕಲೆಯೂ ಹೌದು ವಿಜ್ಞಾನವೂ ಹೌದು. ಜನಸಾಮಾನ್ಯರ ಗ್ರಹಿಕೆಗೆ ನಿಲುಕದಂಥ ಇದರ ಊರ್ಜಿತ ವ್ಯಾಖ್ಯೆಯನ್ನು ಆಧುನಿಕ ಭಾಷಾ ವಿಜ್ಞಾನಿಗಳು ಇನ್ನೂ ಕೊಡ ಬೇಕಿದೆ.


ಕೆಲವು ತಪ್ಪು ಗ್ರಹಿಕೆಗಳು
ಅಕ್ಷರ ನಾಗರಿಕತೆಯ ಕಾಲದಿಂದಲೂ ಸಾಮಾನ್ಯ ಸಿದ್ಧಾಂತವಾಗಿ ಒಂದೊಂದು ಭಾಷೆಗೂ ಅಳವಡುತ್ತ ಬಂದಿರುವ ವ್ಯಾಕರಣದ ಬಗೆಗೆ ಕೆಲವು ತಪ್ಪು ಗ್ರಹಿಕೆಗಳು ಉಳಿದುಕೊಂಡಿವೆ.
1. ವ್ಯಾಕರಣ ಬರಹದ ಭಾಷೆಗಳಿಗೆ ಮಾತ್ರ ಸಂಬಂಧಿಸಿದ್ದು, ಆಡುಭಾಷೆಗಳಿಗೆ ಸಮಗ್ರ ವ್ಯಾಕರಣವಿಲ್ಲ, ಇದ್ದರೂ ಅದು ಆಂಶಿಕವಾದದ್ದು.
2. ಭಾಷೆಯ ತಪ್ಪು ಸರಿಗಳನ್ನು ನಿರ್ಧರಿಸಲೆಂದೇ ಇರುವಂಥದು ಇದು.
3. ವ್ಯಾಕರಣ ಕೆಲವು ಭಾಷೆಗಳಿಗೆ ಇದೆ. ಕೆಲವು ಭಾಷೆಗಳಿಗೆ ಇಲ್ಲ.
4. ಎಲ್ಲ ಭಾಷೆಗಳಿಗೂ ಅನ್ವಯವಾಗುವುದು ವ್ಯಾಕರಣ ಮಾತ್ರ.
5. ಭಾಷೆಯನ್ನು ಕಲಿಯಲು ವ್ಯಾಕರಣ ಅನಿವಾರ್ಯ. ಇತ್ಯಾದಿ. (ವಾರ್ಷ್‌ನೆಯ್ 1977. ಪು. 228)


ವ್ಯಾಕರಣವೆಂದರೇನು?
ವ್ಯಾಕರಣ ಭಾಷೆಯ ಕೇಂದ್ರ; ಅದರ ಹಿಂದಿರುವ ಯಾಂತ್ರಿಕ ಕೌಶಲ ಪ್ರತಿಯೊಂದು ಭಾಷೆಗೂ ತನ್ನ ರಚನೆಯಲ್ಲಿರುವ ಅಂಶಗಳನ್ನು ನಿಯಂತ್ರಿಸಿ ಕೊಳ್ಳಲು ತನ್ನದೇ ಆದ ನಿಯಮ ಮತ್ತು ತತ್ತ್ವಗಳ ವ್ಯವಸ್ಥೆ ಇರುತ್ತದೆ. ಈ ತತ್ತ್ವಗಳು ಮತ್ತು ನಿಯಮಗಳೇ ಆಯಾ ವ್ಯಾಕರಣಗಳ ಜೀವಾಳ. ಭಾಷೆ ಯನ್ನು ಕಲಿಸುವ ಪ್ರಕ್ರಿಯೆಯಲ್ಲಿ ಸಹಜವಾಗಿಯೇ ಇವು ತಾವು ಪಡೆಯುತ್ತವೆ. ಈ ವ್ಯಾಕರಣ ವ್ಯವಸ್ಥೆಯಿಂದಾಗಿ ಯಾವುದೇ ಒಂದು ಭಾಷಿಕ ಸಮುದಾಯದಲ್ಲಿ ಸಂವಹನ ಕ್ರಿಯೆ ಸಾಧ್ಯವಾಗಿದೆ. ಭಾಷೆಯ ಇಂಥ ಸಂಕೀರ್ಣ ವ್ಯವಸ್ಥೆಯನ್ನು ಅನ್ವೇಷಿಸಿ ವಿವರಣೆಯ ಮೂಲಕ ಅನಾವರಣ ಗೊಳಿಸುವುದೇ ವ್ಯಾಕರಣ (ಶ್ಯಾಮಲ ವಿ. 1992, ಪು. 162)
ವ್ಯಾಕರಣ ವಿವರಣಾತ್ಮಕವಾಗಿರಬೇಕು ಎಂಬುದನ್ನು ಬಹುತೇಕ ಇಂದಿನ ಎಲ್ಲ ಭಾಷಾ ವಿಜ್ಞಾನಿಗಳೂ ಒಪ್ಪುತ್ತಾರೆ. ಈ ನಿಟ್ಟಿನಲ್ಲಿ ಗ್ರಾಟ್ಟನ್ ಮತ್ತು ಗುರ್ಯೆ (ಅವರ್ ಲಿವಿಂಗ್ ಲಾಂಗ್ವೇಜ್, 1928) ಅವರ ವಾದ ಗಮನಾರ್ಹ. ‘ಒಂದು ಭಾಷೆಯ ವ್ಯಾಕರಣವೆಂದರೆ ಪಾಂಡಿತ್ಯ ಪ್ರವೀಣರು ಆಡುಗರ ಮೇಲೆ ಹೇರುವಂಥ ನಿಯಮಗಳ ಯಾದಿಯಲ್ಲ. ಅದು ಭಾಷೆಯ ಆಡುನುಡಿ ಮತ್ತು ಬರಹವನ್ನು ಪ್ರತಿನಿಧಿಸುವ ವೈಜ್ಞಾನಿಕ ದಾಖಲೆ’. ಸಂರಚನಾವಾದಿಗಳ ಪ್ರಕಾರ ‘ವ್ಯಾಕರಣ ಭಾಷೆಯ ರಚನಾತ್ಮಕ ಅಂಶಗಳ ಪರಸ್ಪರ ಸಂಬಂಧವನ್ನು, ಪರಿಮಿತಿಯನ್ನು ತಿಳಿಸುವ ವರ್ಗೀಕೃತ ಪರಿಶೋಧಕ ಪಟ್ಟಿ; ವಾಕ್ಯಗಳಲ್ಲಿರುವ ಘಟಕಾಂಶಗಳ ನಿಕಟ ಮತ್ತು ಅಂತಿಮ ಸಂಘಟನೆಯ ಶೋಧ; ಒಟ್ಟಾರೆ, ಧ್ವನಿಮಾಗಳ, ಆಕೃತಿಮಾಗಳ, ಪದಗಳ ಪದವರ್ಗಗಳ, ಪದಪುಂಜಗಳ ಹಾಗೂ ವಾಕ್ಯಾಂಶ ಘಟಕಗಳ ಸಮಾಮ್ನಾಯ’. ಇದನ್ನೇ ನೆಲ್ಸನ್ ಫ್ರಾನ್ಸಿಸ್ (ಸ್ಟ್ರಕ್ಷರ್ ಆಫ್ ಆಮೆರಿಕನ್ ಇಂಗ್ಲಿಶ್) ಅವರು ಇನ್ನೂ ಸರಳವಾಗಿ ಹೀಗೆ ಅಭಿಪ್ರಾಯಿಸಿದ್ದಾರೆ; ‘ಭಾಷಾ ರಚನೆಯ ವಿವಿಧ ಸ್ತರಗಳನ್ನು ಪ್ರತಿನಿದಿಸುವಂಥ ಪದಪುಂಜಗಳಾಗಿ, ವಾಕ್ಯಗಳಾಗಿ ಪದಗಳು ಜೋಡಣೆಗೊಳ್ಳುವ ವಿವಿಧ ಬಗೆಗಳನ್ನು ಅಧ್ಯಯನ ಮಾಡುವುದೇ ವ್ಯಾಕರಣ.’
ವ್ಯಾಕರಣ ಅಧ್ಯಯನದಲ್ಲಿ ಎರಡು ಪ್ರಮುಖ ಹಂತಗಳಿವೆ. ‘ಪದ’ ಅಥವಾ ‘ವಾಕ್ಯ’ ಘಟಕಗಳನ್ನು ನುಡಿಪ್ರವಾಹದಲ್ಲಿ ಗುರುತಿಸುವುದು ಮೊದಲ ಹಂತ. ಈ ಘಟಕಗಳು ಯಾವ ಯಾವ ನಮೂನೆಗಳಿಗೆ ಒಳಗಾಗುತ್ತವೆ ಮತ್ತು ಇವು ಆಗ ಹೊರಚೆಲ್ಲುವ ಅರ್ಥ ಯಾವ ಬಗೆಯದು ಎಂಬುದರ ವಿಶ್ಲೇಷಣೆ ಎರಡನೆಯ ಹಂತ. ಅಧ್ಯಯನ ಪ್ರಾರಂಭದಲ್ಲಿ ಯಾವ ಘಟಕವನ್ನವಲಂಬಿಸಿದೆ ಎನ್ನುವುದಕ್ಕನುಗುಣವಾಗಿ ವ್ಯಾಕರಣ ನಿರ್ವಚನ ವನ್ನು ಮಾಡಲಾಗುತ್ತದೆ. ಬಹಳಷ್ಟು  ವಿಧಾನಗಳು ‘ವಾಕ್ಯ’ವನ್ನು ವ್ಯಾಕರಣ ವಿಶ್ಲೇಷಣೆಯ ಘಟಕವಾಗಿ ಸ್ವೀಕರಿಸುತ್ತವೆ. ಹೀಗಾಗಿ, ‘ವಾಕ್ಯ ರಚನೆಯ ಅಧ್ಯಯನ’ವೆಂದೇ ವ್ಯಾಕರಣವನ್ನು ನಿರ್ವಚಿಸುವುದು ರೂಢಿ. ಆದುದರಿಂದ, ‘ಆಯಾ ಭಾಷೆಯ ಕೆಲವು ಸಾಮಾನ್ಯ ತತ್ತ್ವಗಳ ಆಧಾರದಿಂದ ರೂಪಿಸಲು ಸಾಧ್ಯವಾಗುವಂಥ ವಾಕ್ಯ ರಚನೆಗಳ ಖಾತೆ ವ್ಯಾಕರಣ; ಇದು ವಾಕ್ಯವನ್ನು ಉತ್ಪಾದಿಸುವ ಯೋಜಿತ ಸಾಧನವೂ ಹೌದು’ ಎಂಬ ಅಮೆರಿಕಾದ ಹೆಸರಾಂತ ಭಾಷಾ ವಿಜ್ಞಾನಿ ನೋಮ್ ಚೋಮ್‌ಸ್ಕಿ (ಸಿಂಟಾಕ್ಟಿಕ್ ಸ್ಟ್ರಕ್ಚರ್ಸ್‌, 1957, ಪು. 11) ಅವರ ಅಭಿಪ್ರಾಯವೂ ಈ ವಿಧಾನವನ್ನೇ ಸಮರ್ಥಿಸುತ್ತದೆ. ಹೀಗೆ ‘ಉತ್ಪಾದಿತವಾಗುವ ವಾಕ್ಯಗಳು ವ್ಯಾಕರಣ ಬದ್ಧವಾಗಿರಬೇಕು. ಹೀಗೆ ಆ ಭಾಷೆಯನ್ನಾಡುವ ವ್ಯಕ್ತಿಗಳು ಒಪ್ಪುವಂತಿರಬೇಕು’ ಎಂಬುದನ್ನು ಚೋಮ್‌ಸ್ಕಿ ಹೇಳಲು ಮರೆತಿಲ್ಲ. ಚೋಮ್‌ಸ್ಕಿ ಅವರ ಈ ನಿಲುವು ಎರಡು ಪ್ರಮುಖ ದೃಷ್ಟಿಗಳಿಂದ ಗಹನವಾದುದು. ಒಂದು, ವ್ಯಾಕರಣಕ್ಕೆ ಇದು ಭಾಷಾ ರಚನೆಯಲ್ಲಿ ಗಣ್ಯ ಸ್ಥಾನವನ್ನು ಕಲ್ಪಿಸಿದ್ದು;



ವ್ಯಾಕರಣದ ಬಗೆಗಳು : ತಮ್ಮದೇ ಆದ ವಿಶಿಷ್ಟ ತಾತ್ತ್ವಿಕ ಚಿಂತನೆಗಳಿಂದ ಒಡಮೂಡಿದ ಸಿದ್ಧಾಂತಗಳನ್ನು ಪ್ರತಿಪಾದಿಸುವಂಥ ಅನೇಕ ಬಗೆಯ ವ್ಯಾಕರಣಗಳಿವೆ. ಅವುಗಳಲ್ಲಿ ಕೆಲವನ್ನು ಪ್ರಾತಿನಿಧಿಕವಾಗಿ ಇಲ್ಲಿ ಕೊಡಲಾಗಿದೆ.


ವಿವರಣಾತ್ಮಕ ವ್ಯಾಕರಣ : ‘ಯಾವುದಾದರೊಂದು ಭಾಷೆ ಅಥವಾ ಉಪಭಾಷೆಯ ಒಳರಚನೆಗೆ ಸಂಬಂಧಿಸಿದ ಧ್ವನಿ ಪದ ವಾಕ್ಯಗಳ ವಿಚಾರ ಮತ್ತು ಕಾರ್ಯವನ್ನು ಆ ಭಾಷೆ ಅಥವಾ ಉಪಭಾಷೆಗಳಲ್ಲಿರುವಂತೆಯೇ ವಿವರಿಸಿ ತೋರಿಸುವುದು ವಿವರಣಾತ್ಮಕ ವ್ಯಾಕರಣ’ (ಕೆಂಪೇಗೌಡ, 1993, ಪು. 532) ವಿವರಣಾತ್ಮಕ ವ್ಯಾಕರಣದ ಉದ್ದೇಶ ಯಾವುದೇ ಭಾಷೆಯ ಆಡುನುಡಿ ಅಥವಾ ಬರಹದ ಭಾಷೆಯನ್ನು ಯಥಾವತ್ತಾಗಿ ವಿಶ್ಲೇಷಿಸುವುದು. ಸಮಾಜದಲ್ಲಿ ಭಾಷೆಗಿರುವ ಸ್ಥಾನಮಾನವನ್ನಾಗಲೀ, ಅದರ ಹಿಂದಿನ ಇತಿಹಾಸವನ್ನಾಗಲೀ ಇಲ್ಲವೇ ಮುಂದಿನ ಭವಿಷ್ಯವನ್ನಾಗಲೀ ಇದು ಚರ್ಚಿಸುವುದಿಲ್ಲ. ಭಾಷೆ ಬಳಕೆಯ ಸಾಧುತ್ವ ಅಸಾಧುತ್ವದ ಬಗೆಗೂ ಇದು ಚಕಾರ ಎತ್ತುವುದಿಲ್ಲ. ಹೀಗಾಗಿ, ಭಾಷೆಯ ರಚನೆಯಲ್ಲಿರುವ ಲೋಪದೋಷ ಗಳನ್ನಾಗಲೀ, ವೈಶಿಷ್ಟ್ಯಗಳನ್ನಾಗಲೀ ಎತ್ತಿ ಹಿಡಿಯದೆ ರಚನೆಯ ತಾಜಾತನ ವನ್ನು ಮಾತ್ರ ವಿಶ್ಲೇಷಿಸಿ ತೋರಿಸುವುದರಿಂದ ವಿವರಣಾತ್ಮಕ ವ್ಯಾಕರಣಕ್ಕೆ ಭಾಷಾ ಶಾಸ್ತ್ರದಲ್ಲಿ ಮನ್ನಣೆ ಇದೆ.
ಬೋಧನಾತ್ಮಕ ವ್ಯಾಕರಣ : ಭಾಷೆಯನ್ನು ಬೋಧಿಸುವ ದೃಷ್ಟಿಯಿಂದಲೇ ವಿಶೇಷ ಎಚ್ಚರಿಕೆಯಿಂದ ಸಿದ್ಧಪಡಿಸಿದ ವ್ಯಾಕರಣಗಳು ಬೋಧನಾತ್ಮಕ ವ್ಯಾಕರಣಗಳು. ಮಾತೃಭಾಷೆಯ ಅರಿವನ್ನು ಮೂಡಿಸುವ ಇಲ್ಲವೇ ಅನ್ಯ ಭಾಷೆಯಾಗಿ ಅದನ್ನು ಕಲ್ಪಿಸುವ ಉದ್ದೇಶ ಈ ಬಗೆಯ ವ್ಯಾಕರಣಗಳಲ್ಲಿ ಕಂಡುಬರುತ್ತದೆ. ಶಾಲೆಯ ಕಲಿಕೆಯಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತವೆ. ಹೀಗಾಗಿ ಇವುಗಳನ್ನು ವ್ಯಾಕರಣ ಪದ್ಯಗಳೆಂದೇ ಗುರುತಿಸಲಾಗಿದೆ. ಒಂದು ಭಾಷೆಯನ್ನು ಕಲಿಸಲು ಸಿದ್ಧಪಡಿಸಲಾದ ಇಂಥ ವ್ಯಾಕರಣಗಳು ಮತ್ತೊಂದು ಭಾಷೆಯ ಕಲಿಕೆಗೆ ಸಾಮಾನ್ಯವಾಗಿ ಪ್ರಯೋಜನಕ್ಕೆ ಬರುವುದಿಲ್ಲ.


ನಿರ್ದೇಶಾತ್ಮಕ ವ್ಯಾಕರಣ : ಒಂದು ಭಾಷೆಯ ವ್ಯಾಕರಣಾತ್ಮಕ ರಚನೆ ಗಳನ್ನು ಕಟ್ಟೆಚ್ಚರದಿಂದ ಕಾಪಾಡಿಕೊಳ್ಳುವ ಉದ್ದೇಶದಿಂದ ಸೃಜಿತವಾಗು ವಂಥದು ನಿರ್ದೇಶಾತ್ಮಕ ವ್ಯಾಕರಣ. ಭಾಷೆಯ ಬಳಕೆಯಲ್ಲಿ ಕಂಡು ಬರುವ ತಪ್ಪು ಪ್ರಯೋಗಗಳನ್ನು ಗುರುತಿಸಿ, ಬಳಸಬೇಕಾದ ಸರಿ ಪ್ರಯೋಗವನ್ನು ಎತ್ತಿ ಹಿಡಿದು, ಭಾಷಾ ರಚನೆ ಕಲುಷಿತಗೊಳ್ಳದಂತೆ ನಿಯಮಗಳನ್ನು ನಿರೂಪಿಸಿ ಸದಾ ಭಾಷೆಯ ಬಳಕೆಯನ್ನು ನಿಯಂತ್ರಿಸುವಂಥ ವ್ಯಾಕರಣ ಕೈಪಿಡಿ ಇದು.


ಪರಾಮರ್ಶನ ವ್ಯಾಕರಣ : ಪದಕೋಶವು ಪದಗಳನ್ನು ಒದಗಿಸಿಕೊಡುವ ಹಾಗೆ ಪರಾಮರ್ಶನ ವ್ಯಾಕರಣವು ವ್ಯಾಕರಣಾತ್ಮಕ ರಚನೆಯಲ್ಲಿರುವ ಎಲ್ಲಾ ಅಂಶಗಳ ವಿವರವನ್ನು ಒದಗಿಸಿಕೊಡುತ್ತದೆ. ಆಧುನಿಕ ಇಂಗ್ಲಿಶ್ ಭಾಷೆಗೆ ಸಂಬಂಧಿಸಿದಂತೆ ಪರಾಮರ್ಶನ ವ್ಯಾಕರಣಗಳು ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಬೆಳಕಿಗೆ ಬಂದ ಮೇಲೆ ಪ್ರಾಯಃ ಎಲ್ಲ ಪ್ರಮುಖ ಭಾಷೆಗಳಲ್ಲೂ ಇಂಥ ವ್ಯಾಕರಣಗಳು ಕಾಣಸಿಗುತ್ತವೆ. ಬೋಧನಾತ್ಮಕ ವ್ಯಾಕರಣಗಳಂತೆ ಇವೂ ವ್ಯಾಕರಣ ಕೈಪಿಡಿಗಳ ರೂಪದಲ್ಲಿ ಉಪಯುಕ್ತವೆನಿಸಿವೆ.


ಸೈದ್ಧಾಂತಿಕ ವ್ಯಾಕರಣ : ಎಲ್ಲ ಭಾಷೆಗಳಿಗೂ ಅನ್ವಯವಾಗುವಂಥ ಸಾಮಾನ್ಯ ವ್ಯಾಕರಣ ವಿಧಾನಗಳನ್ನು ರೂಪಿಸುವ ಉದ್ದೇಶ ಸೈದ್ಧಾಂತಿಕ ವ್ಯಾಕರಣದ್ದು. ಹೀಗಾಗಿ, ಇದರ ಸಿದ್ಧಾಂತಗಳು ಯಾವುದೇ ಒಂದು ಭಾಷೆಯ ವ್ಯಾಕರಣಿಕ ವಿವರಗಳ ಮಿತಿಯಲ್ಲಿ ಕೆಲಸ ಮಾಡುವುದಿಲ್ಲ. ಬದಲಾಗಿ, ಮಾನವ ಭಾಷೆಗಳಿಗೆಲ್ಲ ಅನ್ವಯಿಸಲು ಬರುವಂಥ ವ್ಯಾಕರಣ ಸಿದ್ಧಾಂತಗಳನ್ನು ಅನ್ವೇಷಿಸುತ್ತಲೇ ನಿರಂತರವಾಗಿ ಇದು ಗಮನ ಹರಿಸುತ್ತ ಬಂದಿದೆ. ಭಾಷಾ ಸಾರ್ವತ್ರಿಕತೆಯನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಇಂಥ ವ್ಯಾಕರಣಗಳ ಕೊಡುಗೆ ಅಮೂಲ್ಯ.


ಸಾಂಪ್ರದಾಯಿಕ ವ್ಯಾಕರಣ : ಭಾಷಾ ವಿಜ್ಞಾನ ಪೂರ್ವದಲ್ಲಿ ಅಸ್ತಿತ್ವ ದಲ್ಲಿದ್ದ ವ್ಯಾಕರಣದ ಅಧ್ಯಯನ ವಿಧಾನಗಳು, ಮತ್ತು ಭಾಷಾ ರಚನೆಯನ್ನು ವಿಶ್ಲೇಷಿಸಲು ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳು ‘ಸಾಂಪ್ರದಾಯಿಕ ವ್ಯಾಕರಣ’ ಶೀರ್ಷಿಕೆಯಲ್ಲಿ ತಾವು ಪಡೆಯುತ್ತವೆ, ‘ಸಾಂಪ್ರದಾಯಿಕ’ ಕಾಲದ ವ್ಯಾಪ್ತಿ ಎರಡು ಸಾವಿರ ವರ್ಷಗಳಿಗೂ ಹಿಂದಿನದು. ಗ್ರೀಕ್ ಮತ್ತು ರೋಮನ್ ಶಾಸ್ತ್ರೀಯ ವ್ಯಾಕರಣಕಾರರ ಕೃತಿಗಳು, ಪುನರುಜ್ಜೀವನ ಕಾಲದ ಲೇಖಕರ ಬರವಣಿಗೆಗಳು ಹಾಗೂ ಹದಿನೆಂಟನೆಯ ಶತಮಾನದ ನಿರ್ದೇಶ ನಾತ್ಮಕ ವ್ಯಾಕರಣಕಾರರ ಕೊಡುಗೆಗಳು ಈ ಕಾಲದ ತೆಕ್ಕೆಗೆ ಸೇರುತ್ತವೆ. ಹೀಗಾಗಿ, ವೈವಿಧ್ಯಮಯವಾದ ಈ ಎಲ್ಲ ವಿಧಾನಗಳನ್ನು ಸಾಂಪ್ರದಾಯಿಕ ವ್ಯಾಕರಣ ಚೌಕಟ್ಟಿನಲ್ಲಿ ಸಾಮಾನ್ಯೀಕರಿಸುವುದು ದುಸ್ತರವಾದ ಸಂಗತಿ. ಎಲ್ಲ ಭಾಷೆಗಳಲ್ಲೂ ಲ್ಯಾಟಿನ್ ಭಾಷೆಯ ವ್ಯಾಕರಣ ಮಾದರಿಯನ್ನೇ ಹುಡುಕುವ ಅವೈಜ್ಞಾನಿಕ ಸಾಹಸ ಸಾಂಪ್ರದಾಯಿಕ ವ್ಯಾಕರಣಗಳಲ್ಲಿ ಉದ್ದಕ್ಕೂ ಕಾಣಸಿಗುತ್ತದೆ. ಇಷ್ಟಾದರೂ, ಆಧುನಿಕ ಭಾಷಾ ವಿಜ್ಞಾನಿಗಳು ಇಂದು ಬಳಸುತ್ತಿರುವ ಎಷ್ಟೋ ಪರಿಭಾಷೆಗಳ ಮೂಲ ಈ ಸಾಂಪ್ರದಾಯಿಕ ವ್ಯಾಕರಣಗಳಲ್ಲಿರುವಂಥದೆ.
ಈ ಆರು ಬಗೆಗಳ ಜೊತೆಗೆ ಇನ್ನೂ ಹಲವಾರು ವ್ಯಾಕರಣ ಪ್ರಭೇದಗಳು ಚಾಲನೆಯಲ್ಲಿವೆ. ಪರಿವರ್ತನಶೀಲ ಭಾಷೆ ಕಾಲದಿಂದ ಕಾಲಕ್ಕೆ ಬೆಳೆಯುತ್ತ ಹೋದ ಹಾಗೆ ಅದರಲ್ಲಾದ ಧ್ವನಿ, ಪದ, ವಾಕ್ಯ, ಅರ್ಥಗಳ ಬದಲಾವಣೆ ಯನ್ನಾಧರಿಸಿ ರಚಿಸುವ ವ್ಯಾಕರಣವನ್ನು ಐತಿಹಾಸಿಕ ವ್ಯಾಕರಣ ಎನ್ನುತ್ತಾರೆ. ಸಂಬಂಧಿತ ಭಾಷೆಗಳ ರಚನಾತ್ಮಕ ಅಂಶಗಳನ್ನು ಪರಸ್ಪರ ಹೋಲಿಸಿ, ವಿಶ್ಲೇಷಿಸಿ, ವಿವರಿಸುವಂಥದು ತೌಲನಿಕ ವ್ಯಾಕರಣ ಕಾಲ್ಡ್‌ವೆಲ್ ಅವರ ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣ ಇದಕ್ಕೊಂದು ಉತ್ಕೃಷ್ಟ ಉದಾಹರಣೆ. ಭಾಷಾ ವರ್ಗೀಕರಣ ಮತ್ತು ಪುನಾರಚನೆ ಸಂದರ್ಭಗಳಲ್ಲಿ ಈ ಎರಡು ವ್ಯಾಕರಣಗಳ ಉಪಯುಕ್ತತೆ ಹೆಚ್ಚು. ತೌಲನಿಕ ವ್ಯಾಕರಣಕ್ಕೆ ತದ್ವಿರುದ್ಧವಾಗಿ ಭಾಷೆಗಳ ನಡುವಣ ವೈದೃಶ್ಯಾತ್ಮಕ ಅಂಶಗಳನ್ನಾಧರಿಸಿ ಸಿದ್ಧಪಡಿಸುವಂಥದು ವಿಭೇದಾತ್ಮಕ ವ್ಯಾಕರಣ ಭಾಷಾ ಬೋಧನೆಯಲ್ಲಿ ಇದನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಭಾಷೆಯ ಒಳ ರಚನೆಯಲ್ಲಿರುವ ಧ್ವನಿ, ಧ್ವನಿಮಾ, ಆಕೃತಿ, ಆಕೃತಿಮಾ, ಪದ, ಪದಪುಂಜ, ಉಪವಾಕ್ಯ, ವಾಕ್ಯ ಇತ್ಯಾದಿಗಳನ್ನು ವಿವರಿಸಿ, ತೋರಿಸುವಂಥದು ರಚನಾತ್ಮಕ ವ್ಯಾಕರಣ. ಭಾಷೆಯ ರಚನೆಯ ವಿವರಗಳೇ ಇದರ ಜೀವಾಳ. ಹೆಚ್ಚೂ ಕಡಿಮೆ ವಿವರಣಾತ್ಮಕ ವ್ಯಾಕರಣದ ಪಡಿಯಚ್ಚು ಇದು. ವ್ಯವಸ್ಥಿತ ವ್ಯಾಕರಣದಲ್ಲಿ ಭಾಷೆಯ ರಚನಾತ್ಮಕ ಅಂಶಗಳ ಜೊತೆಗೆ ಅವುಗಳ ಸಾಂದರ್ಭಿಕ ಅರ್ಥವನ್ನೂ ವಿಶೇಷವಾಗಿ ಗಮನಿಸಲಾಗುತ್ತದೆ. ಹೆಸರಾಂತ ಭಾಷಾ ವಿಜ್ಞಾನಿಗಳಾದ ಹಾಲಿಡೆ ಮತ್ತು ಫರ್ಥ್‌ರ ಸಿದ್ಧಾಂತಗಳನ್ನು ಆಧರಿಸಿ ಕೆಲವು ಬ್ರಿಟಿಷ್ ಭಾಷಾ ವಿಜ್ಞಾನಿಗಳು ಈ ಬಗೆಯ ವ್ಯಾಕರಣವನ್ನು ರೂಪಿಸಿದ್ದಾರೆ. ಭಾಷೆಯ ವಿವಿಧ ರಚನಾತ್ಮಕ ಅಂಶಗಳು ವಾಕ್ಯದಲ್ಲಿ ಅಡಕಗೊಂಡು ತಮ್ಮ ತಮ್ಮ ಸ್ಥಾನವನ್ನು ಸ್ಥಾಪಿಸಿ ಕೊಂಡಿರುವ ಬಗೆಯನ್ನು ಮತ್ತು ಅವುಗಳ ಮಧ್ಯೆ ಇರುವ ಆಂತರಿಕ ಸಂಬಂಧ ಗಳನ್ನು ವಿವರಿಸಿ ತೋರಿಸುವಂಥದು ಕಾರಕ ವ್ಯಾಕರಣ. ಇದರ ಮೂಲ ಕರ್ತೃ ಚಾರ್ಲ್ಸ್ ಫಿಲ್ಮೋರ್. ಭಾಷೆಯ ಅರ್ಥ, ಧ್ವನಿ ಮತ್ತು ವ್ಯಾಕರಣ ಇವುಗಳನ್ನು ಸ್ತರಾತ್ಮಕವಾಗಿ ವಿಂಗಡಿಸಿಕೊಂಡು ವಿವರಿಸಿ ವಿಶ್ಲೇಷಿಸುವ ಕ್ರಮವನ್ನು ಮೊತ್ತಮೊದಲಿಗೆ ರೂಪಿಸಿದವನು ಅಮೆರಿಕದ ಖ್ಯಾತ ಭಾಷಾ ವಿಜ್ಞಾನಿ ಸಿಡ್ನಿಲ್ಯಾಂಬ್. ಸ್ತರಾತ್ಮಕ ವ್ಯಾಕರಣದಲ್ಲಿ, ಭಾಷೆಯ ಮೂಲ ಹಾಗೂ ಸ್ಥೂಲ ರಚನಾತ್ಮಕ ಅಂಶಗಳನ್ನು ಸ್ತರಾತ್ಮಕಾಗಿ ವಿಶ್ಲೇಷಿಸುವ ಸಾಧ್ಯತೆಯನ್ನು ಈತ ಸ್ಪಷ್ಟಪಡಿಸಿದ್ದಾನೆ. ಭಾಷೆಯ ವಿವಿಧ ಭಾಷಿಕಾಂಶಗಳನ್ನು ರೂಪಾಂತರಿಸುವುದರ ಮೂಲಕ ತಯಾರಿಸಿಕೊಳ್ಳಬಹು ದಾದ ಸಾಧ್ಯತೆಯನ್ನು ರೂಪಾಂತರ ವ್ಯಾಕರಣ ಎತ್ತಿ ಹಿಡಿದಿದೆ. ಅತ್ಯಂತ ವೈಜ್ಞಾನಿಕ  ವಿಧಾನವೆಂದು ಭಾಷಾ ವಿಜ್ಞಾನದಲ್ಲಿ ಖ್ಯಾತಿ ಹೊಂದಿರುವ ಈ ವಿಧಾನದ ಮೂಲ ಪುರುಷ ಈ ಶತಮಾನದ ಅಗ್ರಮಾನ್ಯ ಭಾಷಾ ವಿಜ್ಞಾನಿ ಎಂದು ಹೆಸರು ಮಾಡಿರುವ ಅಮೆರಿಕದ ನೋಮ್ ಚೋಮ್‌ಸ್ಕಿ. ಇದರ ಮುಂದುವರಿದ ರೂಪವೇ ರೂಪಾಂತರ ಉತ್ಪಾದನಾತ್ಮಕ ವ್ಯಾಕರಣ. ಈ ವಿಧಾನದ ಸಹಾಯದಿಂದ ಭಾಷೆಯ ಎಲ್ಲ ರಚನಾತ್ಮಕ ಅಂಶಗಳನ್ನು ಸಮಗ್ರ ಹಾಗೂ ಸಮರ್ಪಕವಾಗಿ ವಿವೇಚಿಸುವುದು ಸಾಧ್ಯ. ಯಾವ ಯಾವ ವ್ಯಾಕರಣ ಘಟಕಗಳ ಸ್ಥಾನದಲ್ಲಿ ಭಾಷೆಯ ಯಾವ ಯಾವ ರೂಪಗಳನ್ನು ಪ್ರತಿಸ್ಥಾಪಿಸಬಹುದು, ಹಾಗೆ ಪ್ರತಿಷ್ಥಾಪಿಸುವುದರ ಮೂಲಕ ಬೇರೆ ಬೇರೆ ವಾಕ್ಯಗಳನ್ನು ಹೇಗೆ ರಚಿಸಿಕೊಳ್ಳಬಹುದು ಎಂಬ ವಿಚಾರಗಳನ್ನು ಪ್ರರೂಪಾತ್ಮಕ ವ್ಯಾಕರಣ ನಿರ್ದೇಶಿಸುತ್ತದೆ. ಇದನ್ನು ಮೊದಲು ಜಾರಿಗೆ ತಂದವನು ಕೆ.ಎಲ್. ಪೈಕ್. ಮುಂದೆ ಈತನ ಶಿಷ್ಯ ಕುಕ್ ಇದನ್ನು ಪ್ರಚಾರಕ್ಕೆ ತರಲು ಶ್ರಮಿಸಿದ್ದಾನೆ. ಜಗತ್ತಿನ ಎಲ್ಲ ಭಾಷೆಗಳಿಗೂ ಅನ್ವಯವಾಗುವಂಥದು ಸಾರ್ವತ್ರಿಕ ವ್ಯಾಕರಣ. ಸಾಂಪ್ರದಾಯಿಕ ವ್ಯಾಕರಣಕಾರರು ಮೊದಲುಗೊಂಡು ಆಧುನಿಕ ಭಾಷಾ ವಿಜ್ಞಾನಿಗಳವರೆಗೆ ಇಂಥ ವ್ಯಾಕರಣಗಳನ್ನು ರೂಪಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಚೋಮ್‌ಸ್ಕಿಯ ವ್ಯಾಕರಣ ಸಿದ್ಧಾಂತಗಳಿಂದಾಗಿ ಇತ್ತೀಚೆಗೆ ಈ ಬಗೆಯ ವ್ಯಾಕರಣಗಳ ಮಹತ್ವದ ಅರಿವು ಉಂಟಾಗುತ್ತಿದೆ.


ವಿಭಜನೆ ಯಾ ಸೃಜನೆ :  ವಾಕ್ಯವನ್ನು ಅನೇಕ ಭಾಗಗಳಾಗಿ ವಿಭಜಿಸುವ ಕ್ರಮವನ್ನು ಸಾಂಪ್ರದಾಯಿಕ ವ್ಯಾಕರಣಕಾರರು ಉದ್ದಕ್ಕೂ ಪ್ರತಿಪಾದಿಸುತ್ತ ಬಂದಿದ್ದಾರೆ. ‘ರಾಮ ರಾವಣನನ್ನು ಕೊಂದನು’ ಈ ವಾಕ್ಯವನ್ನು ಮೊದಲು ಕರ್ತೃಪದ (ರಾಮ) ಮತ್ತು ಕರ್ಮಪದ (ರಾವಣನನ್ನು ಕೊಂದನು) ಎಂದು ಎರಡು ಭಾಗವಾಗಿ ವಿಂಗಡಿಸಿಕೊಳ್ಳುವುದು. ಆಮೇಲೆ ಕರ್ಮಪದದಿಂದ ಮತ್ತೆ ಕ್ರಿಯಾಪದ (ಕೊಂದನು)ವನ್ನು ಬೇರ್ಪಡಿಸುವುದು. ಇದು ವಿಭಜನ ಕ್ರಮ. ಇಂಥ ಸಾಂಪ್ರದಾಯಿಕ ಕ್ರಮ ಬಹಳಷ್ಟು ಭಾಷಾ ವಿಜ್ಞಾನಿಗಳಿಗೆ ರುಚಿಸಲಿಲ್ಲ. ಹೀಗಾಗಿ ಕೆಲವರು ವ್ಯಾಕರಣವನ್ನು ಶುಷ್ಕವೂ, ಅಪ್ರಯೋಜಕವೂ ಅನಾಸಕ್ತಿಕರವೂ ಆದುದೆಂದು ಟೀಕಿಸಿದರು.
ಹೀಗೆ ಟೀಕಿಸುವವರು ಬಹುಮುಖ್ಯವಾಗಿ ಮಾಡುವ ಆರೋಪ ಎಂದರೆ ವಾಕ್ಯಗಳನ್ನು ಕರ್ತೃ, ಕರ್ಮ, ಕ್ರಿಯೆಯ ಆಧಾರದ ಮೇಲೆ ವಿಭಜಿಸಲು ಸಾಂಪ್ರದಾಯಿಕ ವ್ಯಾಕರಣಗಳಲ್ಲಿ ಸರಿಯಾದ ಸಮರ್ಥನೆ ಇಲ್ಲ ಎಂಬುದು. ಇಂಥ ವಿಭಜನೆಯ ಕ್ರಮವನ್ನು ಮಕ್ಕಳು ವಸ್ತುಸ್ಥಿತಿಗೆ ವಿರುದ್ಧವಾಗಿ ಕಂಠಪಾಠ ಮಾಡುವುದರ ಮೂಲಕ ಕಲಿಯಲು ಪ್ರಯತ್ನಿಸುತ್ತಾರೆ. ಲ್ಯಾಟಿನ್ ಮೂಲದ ಈ ಪರಿಭಾಷೆಯನ್ನು ಸರಿಯಾಗಿ ಗ್ರಹಿಸದೆ ಕಂಠಪಾಠ ಮಾಡಿ ಯಾದರೂ ಕರಗತ ಮಾಡಿಕೊಳ್ಳಲು ಹೆಣಗುತ್ತಾರೆ. ಹೀಗೆ ಕಲಿತದ್ದನ್ನು ಅನ್ವಯಿಸಲು ಕೃತಕ ಇಲ್ಲವೆ ಕಲ್ಪಿತ ರಚನೆಗಳಿಗೆ ಮರೆಹೋಗುತ್ತಾರೆ. ಈ ಪ್ರಕ್ರಿಯೆ ಮಗುವಿನ ಆಡುಭಾಷೆಯ ನೈಜ ರಚನೆಗೆ ಭಿನ್ನವಾಗಿ ತೋರುತ್ತದೆ. ಹೀಗಾಗಿ, ಮಗುವಿನ ಆಡುನುಡಿಯಲ್ಲಿ ವ್ಯಾಕರಣದ ಪ್ರಾಯೋಗಿಕ ಉಪಯುಕ್ತತೆ ಯನ್ನು ತೋರಿಸಿಕೊಡುವಂಥ ಪ್ರಯತ್ನಗಳು ಶಾಲೆಯ ಒಳಗಾಗಲಿ ಹೊರಗಾಗಲಿ ಇದ್ದಂತೆ ತೋರುವುದಿಲ್ಲ. ಇದರಿಂದಾಗಿ ಮಕ್ಕಳಲ್ಲಿ ವ್ಯಾಕರಣ ಕೂಡ ಭಾಷೆಯ ಅನಿವಾರ್ಯ ಹಾಗೂ ಕುತೂಹಲಕಾರಿಯಾದ ಅಂಗ ಎಂಬ ಪರಿಜ್ಞಾನ, ಆಸಕ್ತಿ ಮೂಡುವುದೇ ಇಲ್ಲ. ಬದಲಾಗಿ ಬಾಯಿಪಾಠ ಮಾಡಿ ಕಲಿತ ವ್ಯಾಕರಣ ಕೇವಲ ಅಸಂಬದ್ಧ, ನಿರ್ಜೀವ, ಸ್ಮೃತಿ ನಿರ್ವಾಹಕ ವಿಷಯವಾಗಿ ಪರಿಣಮಿಸುತ್ತದೆ.
ಆದರೆ ವಾಸ್ತವವಾಗಿ ಆಗಬೇಕಾದದ್ದು ವಿಶ್ಲೇಷಣೆಯ ತಂತ್ರಗಳನ್ನು ಭಾಷೆಯ ಅನನ್ಯ ಸೃಜನ ಶಕ್ತಿಯಾಗಿ ಮಾರ್ಪಡಿಸಿಕೊಳ್ಳುವಂಥದು. ಮಾತಾಡಲು ಬಲ್ಲ ಒಂದು ಮಗು ಕೂಡ ಪರಿಮಿತವಾದ ವ್ಯಾಕರಣದ ನಮೂನೆಗಳಿಂದ ಅಪರಿಮಿತವಾದ ವಾಕ್ಯಗಳನ್ನು ಸೃಜಿಸಿ ಅಭಿವ್ಯಕ್ತಿಸಬಲ್ಲ ಸಾಮರ್ಥ್ಯ ಪಡೆದಿರಬೇಕು. ವ್ಯಾಕರಣ ಭಾಷೆಯ ಸೂಕ್ಷ್ಮ ಹಾಗೂ ಚಿತ್ತಾ ಕರ್ಷಕ ನೆಲೆಗಳನ್ನು ಗುರುತಿಸಲು ನೆರವಾಗಬೇಕು. ತನ್ನ ಜಡತೆ ಮತ್ತು ಪರುಷತೆಯನ್ನು ನೀಗಿಕೊಂಡು, ಆಡು ಮಾತು ಮತ್ತು ಬರಹದ ಭಾಷೆ ಎರಡು ರೂಪಗಳಲ್ಲಿಯೂ ವ್ಯಾಕರಣ, ನಾಟಕೀಯತೆ, ಹಾಸ್ಯ ಪ್ರಜ್ಞೆಯನ್ನು ಒಡಮೂಡಿಸುವಂತಾಗಬೇಕು. ಹೀಗೆ ವ್ಯಾಕರಣ ದಿನಬಳಕೆಯ ಭಾಷೆಯ ಜೀವಂತ ಭಾಗವಾಗಿ ರೂಪುಗೊಂಡರೆ, ಆಗ ಭಾಷೆಯನ್ನು ಗ್ರಹಿಸುವುದರಲ್ಲಿ, ಆಡುವುದರಲ್ಲಿ, ಓದುವುದರಲ್ಲಿ ಮತ್ತು ಬರೆಯುವುದರಲ್ಲಿ ಹೊಸ ಪ್ರಜ್ಞೆ, ಶಕ್ತಿ, ಶೈಲಿ ಆವಿರ್ಭವಿಸುತ್ತದೆ. ಆಗ ವ್ಯಾಕರಣ ಅಸಂಬದ್ಧ, ಅಸಹಜ, ಶುಷ್ಕ, ಕಠಿಣ ರಚನೆಯ ಕಬ್ಬಿಣದ ಕಡಲೆ ಎನಿಸುವುದಿಲ್ಲ. ಬದಲಾಗಿ ಜೀವಂತಿಕೆಯ, ಅಭಿರುಚಿಯನ್ನು ಹುಟ್ಟಿಸುವಂಥ, ಸುಸಂಬದ್ಧ ಸೃಜನಾತ್ಮಕ ಸಾಮರ್ಥ್ಯವಾಗಿ ಪರಿಣಮಿಸುತ್ತದೆ. ಇದೆಲ್ಲ ವ್ಯಾಕರಣವನ್ನು ನೋಡುವವರ ದೃಷ್ಟಿಕೋನವನ್ನು ಅವಲಂಬಿಸಿದೆ.
ವ್ಯಾಕರಣ ಅಧ್ಯಯನವನ್ನು ಪ್ರಧಾನವಾಗಿ ಎರಡು ಭಾಗಗಳಾಗಿ ವಿಂಗಡಿಸಿ ಕೊಂಡು ಮಾಡುವುದು ರೂಢಿ. ಆ ಎರಡು ಭಾಗಗಳೇ ಆಕೃತಿಮಾ ವಿಜ್ಞಾನ ಮತ್ತು ವಾಕ್ಯವಿಜ್ಞಾನ. ಇವುಗಳನ್ನು ವ್ಯಾಕರಣದ ಎರಡು ಕಣ್ಣುಗಳೆಂದು ಸಾಂಪ್ರದಾಯಿಗಳು, ಎರಡು ಶಾಖೆಗಳೆಂದು ಆಧುನಿಕರು ಪರಿಗಣಿಸಿದ್ದಾರೆ. ಇವೆರಡರ ನಡುವೆ ಅಡ್ಡಗೆರೆ ಎಳೆದು ಬೇರ್ಪಡಿಸುವುದು ಕಷ್ಟ. ಏಕೆಂದರೆ ಭಾಷಾ ರಚನೆಯ ಈ ಎರಡೂ ಸ್ತರಗಳ ಆಂತರಿಕ ಸಂಬಂಧವನ್ನು ತನಿಯಾಗಿ ನಿರ್ವಹಿಸುವ ಯಂತ್ರಕ್ರಿಯೆ ವ್ಯಾಕರಣ.



ವ್ಯಾಕರಣ

ಆಕೃತಿಮಾ ಶಾಸ್ತ್ರ

ವಾಕ್ಯರಚನಾ ಶಾಸ್ತ್ರ



ಆಕೃತಿಮಾ ಶಾಸ್ತ್ರ
ಪದಗಳ ರಚನೆಯನ್ನು ಅಧ್ಯಯನ ಮಾಡುವ ವ್ಯಾಕರಣದ ಶಾಖೆ ಆಕೃತಿಮಾ ವಿಜ್ಞಾನ. ಭಾಷೆಯ ಧ್ವನ್ಯಾತ್ಮಕ ಮತ್ತು ವಾಕ್ಯಾತ್ಮಕ ರಚನೆಗಳ ನಡುವಣ ಸ್ತರ ಇದು. ವಾಕ್ಯರಚನಾ ಶಾಸ್ತ್ರಕ್ಕೆ ಹೆಚ್ಚು ನಿಕಟವಾದದ್ದು. ಪದಗಳ ವ್ಯಾಕರಣವು ಆಕೃತಿಮಾ ವಿಜ್ಞಾನ ಎನಿಸಿದರೆ ವಾಕ್ಯಗಳ ವ್ಯಾಕರಣ ವಾಕ್ಯ ವಿಜ್ಞಾನ ಎನಿಸಿಕೊಂಡಿದೆ. ಆಕೃತಿಮಾ ವಿಜ್ಞಾನವು, ಪದಗಳಲ್ಲಿ ಆಕೃತಿಮಾಗಳು ಅಡಕಗೊಳ್ಳುವ ಬಗೆ ಮತ್ತು ಪದಗಳ ಆಂತರಿಕ ರೂಪವನ್ನು ವಿವೇಚಿಸಿದರೆ, ವಾಕ್ಯ ವಿಜ್ಞಾನವು ಈ ಪದಗಳು ವಾಕ್ಯಗಳಲ್ಲಿ ಅಡಕಗೊಳ್ಳುವ ಬಗೆ ಮತ್ತು ಅವುಗಳ ನಡುವಣ ಪರಸ್ಪರ ಸಂಬಂಧವನ್ನು ವಿವರಿಸುತ್ತದೆ. ಉದಾಹರಣೆಗೆ, ಬಹುವಚನ ಪ್ರತ್ಯಯಗಳು ರೂಪುಗೊಳ್ಳುವ ಬಗೆಯನ್ನು ಆಕೃತಿಮಾ ವಿಜ್ಞಾನ ಚರ್ಚಿಸಿದರೆ, ಉಪಸರ್ಗೀಯ ಪದಪುಂಜಗಳಿಗೆ ಸಂಬಂಧಿಸಿದ ಜಿಜ್ಞಾಸೆ  ವಾಕ್ಯರಚನಾ ಶಾಸ್ತ್ರಕ್ಕೆ ಸೇರುತ್ತದೆ. ಹೀಗಾಗಿ, ಆಕೃತಿಮಾಗಳು ಜತೆಗೂಡಿ ಪದಗಳಾಗುವ ಪರಿಯನ್ನು ವಿಶ್ಲೇಷಿಸುವ ವಿಭಾಗವನ್ನು ಆಕೃತಿಮಾ ಶಾಸ್ತ್ರ ಎಂತಲೂ, ಪದಗಳು ಒತೆಗೂಡಿ ಪದಪುಂಜಗಳಲ್ಲಿ, ವಾಕ್ಯಗಳಲ್ಲಿ ಜೋಡಣೆಯಾಗುವ ಪರಿಯನ್ನು ವಿಶ್ಲೇಷಿಸುವ ವಿಭಾಗವನ್ನು ವಾಕ್ಯರಚನಾ ಶಾಸ್ತ್ರ ಎಂತಲೂ ವ್ಯಾಕರಣದಲ್ಲಿ ಕರೆಯಲಾಗಿದೆ.
unhappiness (un-happi-ness), horses (horse-s), talking (talk- ing) ಮತ್ತು yes (yes) ಈ ಇಂಗ್ಲಿಶ್ ಪದಗಳನ್ನು ಗಮನಿಸಿ. yes ಪದಗಳನ್ನುಳಿದು ಉಳಿದೆಲ್ಲ ಪದಗಳನ್ನು ಬಿಡಿಸಿ ಅವುಗಳ ತುಂಡರಿಸಿದ ಭಾಗಗಳಿಗೆ ಸ್ವತಂತ್ರ ಅರ್ಥವನ್ನು ಕೊಡಬಹುದು. ಆದರೆ yes ಪದದಲ್ಲಿ ಇಂಥ ಆಂತರಿಕ ವ್ಯಾಕರಣಾತ್ಮಕ ರಚನೆಯಿಲ್ಲ. ಅದರ ಸದಸ್ಯ ಧ್ವನಿಗಳನ್ನಷ್ಟೇ ನಾವು  (y), (e), (s) ಎಂದು ವಿಂಗಡಿಸಬಹುದು. ಈ ಯಾವ ಧ್ವನಿಮಾಕ್ಕೂ (ಈ ಪದದ ಸಂದರ್ಭದಲ್ಲಿ) ಒಂಟಿಯಾಗಿ ಸ್ವತಂತ್ರವಾದ ಅರ್ಥವಿಲ್ಲ. ಇದಕ್ಕೆ ವೈದೃಶ್ಯವಾಗಿ ಮೇಲೆ ಹೇಳಿರುವ ಇತರ ಪದಗಳನ್ನೂ ಅವುಗಳ ಭಾಗಗಳನ್ನೂ ನೋಡಿ. horse, talk, ಮತ್ತು happy ಪದಗಳಿಗೆ ಸ್ವತಂತ್ರವಾದ ಅರ್ಥವಿದೆ; ಹಾಗೆಯೇ ಅವುಗಳ ಪ್ರತ್ಯಯಗಳಿಗೆ ಕೂಡ. un- ಗೆ ನಿಷೇಧಾತ್ಮಕ ಅರ್ಥವಿದೆ, -ness ಒಂದು ಬಗೆಯ ಅವಸ್ಥೆ ಅಥವಾ ಗುಣಧರ್ಮವನ್ನು ವ್ಯಕ್ತಪಡಿಸುತ್ತದೆ, -s ಗೆ ಬಹುವಚನ ಪ್ರತ್ಯಾಯರ್ಥವಿದೆ. ಮತ್ತು -ing ಕ್ರಿಯೆಯ ಅವಧಿಯನ್ನು ಸೂಚಿಸುತ್ತದೆ. ಹೀಗೆ ಅರ್ಥಯುಕ್ತ ಕನಿಷ್ಠ ಘಟಕಗಳಾಗಿ ಪದಗಳನ್ನು ವಿಶ್ಲೇಷಿಸುವುದರ ಮೂಲಕ ಆಕೃತಿಮಾ ಗಳನ್ನು ಪಡೆಯಬಹುದು. ಭಾಷೆಯಲ್ಲಿ ಇಂಥ ಆಕೃತಿಮಾಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ವಿಶ್ಲೇಷಿಸಿ ತಿಳಿಸುವುದೇ ಆಕೃತಿಮಾ ವಿಜ್ಞಾನದ ಕೆಲಸ.


ಆಕೃತಿಮಾ ಸಮಸ್ಯೆಗಳು : ಎಲ್ಲ ಭಾಷೆಗಳಲ್ಲಿಯೂ ಮೇಲೆ ತಿಳಿಸಿದಷ್ಟು ಸುಲಭವಾಗಿ ಪದಗಳನ್ನು ಆಕೃತಿಮಾಗಳಾಗಿ ವಿಶ್ಲೇಷಿಸುವುದು ಸಾಧ್ಯವಿಲ್ಲ. ಟರ್ಕಿಷ್‌ನಂಥ ಅಂಟು ಭಾಷೆಗಳು, ಲ್ಯಾಟಿನ್‌ನಂಥ ಪ್ರಾತ್ಯಾಯಿಕ ಭಾಷೆಗಳು ಅನೇಕ ಬಗೆಯ ಆಕೃತಿಮಾತ್ಮಕ ಪ್ರತ್ಯಯಗಳನ್ನು ತೋರ್ಪಡಿಸುತ್ತವೆ. ಬಿಲಿನ್ ಎಂಬ ಆಫ್ರಿಕನ್ ಭಾಷೆಯ ಒಂದು ಕ್ರಿಯಾಪದಕ್ಕೆ 10.000 ವೈಕಲ್ಪಿಕ ರೂಪಗಳನ್ನು ಗುರುತಿಸಲಾಗಿದೆ. ಇಂಗ್ಲಿಶ್‌ನ ಅನಿಯತ ನಾಮಪದ ಹಾಗೂ ಕ್ರಿಯಾಪದಗಳನ್ನು ವಿಶ್ಲೇಷಿಸುವಲ್ಲಿ ಸಾಕಷ್ಟು ಗೊಂದಲವಿದೆ. ಉದಾಹರಣೆಗೆ, -s ಇಂಗ್ಲಿಶ್‌ನ ಅತ್ಯಂತ ಪ್ರಚಲಿತ ಬಹುವಚನ ಪ್ರತ್ಯಯ. ಇದನ್ನು books, trees ಗಳಲ್ಲಿ ಸುಲಭವಾಗಿ ಗುರುತಿಸಬಹುದು. ಆದರೆ ಇದನ್ನು ಇಂಗ್ಲಿಷ್‌ನ foot ಪದದ ಬಹುವಚನ feet ನಲ್ಲಿ ಗುರುತಿಸುವುದು ಹೇಗೆ?
ಟರ್ಕಿಷ್ ಭಾಷೆಯ eviden  (ಅವನ / ಅವಳ ಮನೆಯಿಂದ) ಪದದಲ್ಲಿ ಇನ್ನೊಂದು ಬಗೆಯ ಆಕೃತಿಮಾತ್ಮಕ ಸಮಸ್ಯೆ ಇದೆ. ಈ ಪದವನ್ನು ಇತರ ಸಂಬಂಧಿತ ಪದಗಳೊಡನೆ ಇಟ್ಟು ನೋಡಿದಾಗ ಸಮಸ್ಯೆ ಸ್ಪಷ್ಟವಾಗುತ್ತದೆ. ev‘ಮನೆ’, evi‘ಅವನ / ಅವಳ / ಅದರ ಮನೆ’, evden  ‘ಮನೆಯಿಂದ’ ಈ ಪದಗಳನ್ನು ತೌಲನಿಕವಾಗಿ ಗಮನಿಸಿದಾಗ -i ಪದ್ಯಾಂತಕ್ಕೆ ‘ಅವನ /ಅವಳ / ಅದರ’ ಎಂಬ ಅರ್ಥ ದೊರೆಯುತ್ತದೆ. -den  ಪದಾಂತ್ಯಕ್ಕೆ ‘ಇಂದ’ ಎಂಬ ಅರ್ಥ ಸಿದ್ದಿಸುತ್ತದೆ. ಇವೆರಡರ ಸಂಯೋಗದಿಂದ eviden ಪದವನ್ನು ರೂಪಿಸಬಹುದು. ಆದರೆ ಟರ್ಕಿಷ್‌ನ eviden ಪದದಲ್ಲಿರುವ ಹೆಚ್ಚುವರಿ ‘n’ಆಕೃತಿಯನ್ನು ವಿಶ್ಲೇಷಿಸುವುದೇ ಇಲ್ಲಿನ ಆಕೃತಿಮಾ ಸಮಸ್ಯೆ. ಇದು ತನ್ನಿಂದ ತಾನೇ, ಇಂಗ್ಲಿಶ್‌ನ child ಪದದ ಬಹುವಚನ ರೂಪ child-r-n ನ ‘r’ರೀತಿಯಲ್ಲಿ ಬಂದಿರುವಂಥದು.
ತಾವು ಬಳಕೆಯಾಗುವ ಸಂದರ್ಭಕ್ಕನುಗುಣವಾಗಿ ಕೆಲವು ಆಕೃತಿಮಾಗಳು ಅನೇಕ ಧ್ವನ್ಯಾತ್ಮಕ ರೂಪಗಳನ್ನು ಧರಿಸುವುದು ಕೂಡ ಆಕೃತಿಮಾ ವಿಶ್ಲೇಷಣೆಗೆ ತೊಡಕನ್ನೊಡ್ಡುವಂಥ ಅಂಶವೆ. ಉದಾಹರಣೆಗೆ ಇಂಗ್ಲಿಶ್‌ನ ಭೂತಕಾಲ ಪ್ರತ್ಯಯ ಆಕೃತಿಮಾ {-ed}ಗಮನಿಸಿ ಇದನ್ನು ಅನುಸರಿಸಿ ಬರುವ ಧ್ವನಿಗೆ ಅನುಗುಣವಾಗಿ ಮೂರು ಬಗೆಯಲ್ಲಿ ಇದನ್ನು ಉಚ್ಚರಿಸಬಹುದು. spotedನಲ್ಲಿ -ed ಅನ್ನು ಅನುಸರಿಸಿ ಬಂದಿರುವ ಧ್ವನಿ ‘t’ಆಗಿರುವುದರಿಂದ -ed ಉಚ್ಚಾರಣೆಯಲ್ಲಿ (id) ಎಂದಾಗುತ್ತದೆ. ಹಾಗೆಯೇ walk-ed ಪದದಲ್ಲಿ ಇದನ್ನು ಅನುಸರಿಸಿ ಬಂದಿರುವ ಧ್ವನಿ ‘k’ಅಘೋಷ ವ್ಯಂಜನವಾಗಿರುವುದರಿಂದ -ed ಉಚ್ಚಾರಣೆ (t) ಎಂದಾಗುತ್ತದೆ. ಅಂತೆಯೇ ಇದನ್ನು ಅನುಸರಿಸಿ ಬಂದಿರುವ ಧ್ವನಿ roll-ed  ಪದದಲ್ಲಿ ‘l’ಘೋಷ ವ್ಯಂಜನವಾಗಿರುವುದರಿಂದ ಇದರ ಉಚ್ಚಾರಣೆ (d) ಎಂದಾಗುತ್ತದೆ. ಹೀಗಾಗಿ, ಇಂಗ್ಲಿಷ್‌ನ ಭೂತಕಾಲ ಪ್ರತ್ಯಯ {d}ಆಕೃತಿಮಾಕ್ಕೆ { t, d ಮತ್ತು id} ಎಂಬ ಮೂರು ಆಕೃತಿಮಾ ಪ್ರತ್ಯಯಗಳಿವೆ. ಇಂಥ ಆಕೃತಿಮಾ ವ್ಯತ್ಯಯ ರೂಪಗಳನ್ನೇ ಉಪ ಆಕೃತಿಗಳೆನ್ನುವುದು.


ಪ್ರಾತ್ಯಾಯಿಕ (ಅಂತರ್ಗಮಕ) ಮತ್ತು ಸಾಧಿತ ಆಕೃತಿಮಾ ಶಾಸ್ತ್ರ
ಆಕೃತಿಮಾ ವಿಜ್ಞಾನದಲ್ಲಿ ಸಾಂಪ್ರದಾಯಿಕವಾಗಿ ಗುರುತಿಸುವಂಥ ಎರಡು ಪ್ರಮುಖ ಅಂಗಗಳಿವೆ. ಅವೇ ಪ್ರಾತ್ಯಾಯಿಕ ಆಕೃತಿಮಾವಿಜ್ಞಾನ ಮತ್ತು ಸಾಧಿತ ಆಕೃತಿಮಾವಿಜ್ಞಾನ. ವಾಕ್ಯಗಳಲ್ಲಿ ಏಕವಚನ / ಬಹುವಚನ, ಭೂತಕಾಲ / ವರ್ತಮಾನಕಾಲ ಇತ್ಯಾದಿ ವ್ಯಾಕರಣಾತ್ಮಕ ವೈದೃಶ್ಯಗಳನ್ನು ಅಭಿವ್ಯಕ್ತಿಸಲೋಸ್ಕರ ಪದಗಳು ಪ್ರಾತ್ಯಾಯಿಕವಾಗಿ ಹೇಗೆ ವ್ಯತ್ಯಯಗೊಳ್ಳುತ್ತವೆ ಎಂಬುದನ್ನು ತಿಳಿಸುವಂಥ ಅಧ್ಯಯನವೇ ಪ್ರಾತ್ಯಾಯಿಕ ಆಕೃತಿಮಾ ವಿಜ್ಞಾನ. ಹಳೆಯ ವ್ಯಾಕರಣ ಗ್ರಂಥಗಳಲ್ಲಿ ಈ ವಿಷಯ ಪ್ರಸ್ತಾಪಿಸುವ ಭಾಗವನ್ನು ಅನುಷಂಗಿಕವೆಂದು ಕರೆಯಲಾಗಿದೆ. ಉದಾಹರಣೆಗೆ ‘ಹುಡುಗ’ ಮತ್ತು ‘ಹುಡುಗರು’ ಇವು ಒಂದೇ ಪದದ ಎರಡು ರೂಪಗಳು. ಏಕವಚನ ಅಥವಾ ಬಹುವಚನವೆಂಬ ಇವುಗಳ ನಡುವಣ ವ್ಯತ್ಯಯ ವ್ಯಾಕರಣಾತ್ಮಕವಾದದ್ದು. ಇದೇ ಪ್ರಾತ್ಯಾಯಿಕ ಆಕೃತಿಮಾ ವಿಜ್ಞಾನದ ಕಾರ್ಯ. ಹೊಸ ಪದಗಳನ್ನು ನಿಷ್ಪನ್ನಗೊಳಿಸುವ ಪ್ರಕ್ರಿಯೆಯ ತತ್ತ್ವ ಮತ್ತು ನಿಯಮಗಳನ್ನು ಅಧ್ಯಯನ ಮಾಡುವಂಥದು ಸಾಧಿತ ಆಕೃತಿಮಾ ವಿಜ್ಞಾನ. ಇದು ಒಂದು ಪದವು ವಾಕ್ಯದಲ್ಲಿ ವ್ಯಾಕರಣಾತ್ಮಕವಾಗಿ ನಿರ್ವಹಿಸುವ ಪಾತ್ರವನ್ನು ಗಮನಿಸುವುದಿಲ್ಲ. ಉದಾಹರಣೆಗೆ drink ನಿಂದ drinkable ಅಥವಾ infect ನಿಂದ disinfect ನಂಥ ಹೊಸ ರೂಪಗಳನ್ನು ಪಡೆಯುವಲ್ಲಿ ನಾವು ಕಾಣುವುದು ವ್ಯಾಕರಣಾತ್ಮಕವಾಗಿ ತಮ್ಮದೇ ಆದ ಗುಣಗಳನ್ನುಳ್ಳ ಪದಗಳ ನಿರ್ಮಾಣವನ್ನು ಮಾತ್ರ.
ಪ್ರತ್ಯಯಗಳು ಸಾಧಿತವಾದವುಗಳಾಗಿರಬಹುದು. ಇಲ್ಲವೇ ಪ್ರಾತ್ಯಾಯಿಕ ವಾದವುಗಳಾಗಿರಬಹುದು. ಒಂದು ವರ್ಗದಿಂದ ಇನ್ನೊಂದು ವರ್ಗಕ್ಕೆ ಪದಗಳನ್ನು ಬದಲಾಯಿಸಲು ಬರುವಂಥ ಪ್ರತ್ಯಯಗಳು ಸಾಧಿತ ಪ್ರತ್ಯಯಗಳು. ವ್ಯಾಕರಣಾತ್ಮಕ ಸಂಬಂಧವನ್ನು ಸೂಚಿಸಲು ಬರುವಂಥವು ಪ್ರಾತ್ಯಾಯಿಕ ಪ್ರತ್ಯಯಗಳು. ಇಂಗ್ಲಿಷ್‌ನ laugh, laughs, laughing, laughed – ಈ ಪದಗಳಲ್ಲಿ ಕಂಡು ಬರುವ -s, -ing ಮತ್ತು -ed ಇವು ಪ್ರಾತ್ಯಾಯಿಕ ಪ್ರತ್ಯಯಗಳು. ಪ್ರಾತ್ಯಾಯಿಕ ಭಾಷೆಗಳಲ್ಲಿ ಲಿಂಗ, ವಚನ, ವಿಭಕ್ತಿ, ಪುರುಷ ಮತ್ತು ಕಾಲವಾಚಕ ಇತ್ಯಾದಿ ಪ್ರತ್ಯಯಗಳನ್ನು ಕಾಣಬಹುದು. ಇವು ಹೊಸ ಪದಗಳನ್ನು ಸೃಷ್ಟಿಸುವುದಿಲ್ಲ. ಬದಲಾಗಿ ಲಿಂಗ, ವಚನ, ಕಾಲ ಇತ್ಯಾದಿ ವ್ಯಾಕರಣಾತ್ಮಕ ಸಂಬಂಧಗಳನ್ನು ಸೂಚಿಸಲು ನೆರವಾಗುತ್ತವೆ. girl ಎಂಬ ಇಂಗ್ಲಿಷ್ ಪದ -s ಪ್ರತ್ಯಯವನ್ನು ತೆಗೆದುಕೊಂಡು girls ಎಂದಾಗುವುದರಿಂದ ಏಕವಚನದಿಂದ ಬಹುವಚನ ರೂಪವನ್ನು ಪಡೆಯಿತೇ ವಿನಃ ಎರಡು ಹೊಸಪದಗಳ ಸೃಷ್ಟಿಗೇನೂ ಕಾರಣವಾಗಲಿಲ್ಲ.
ಆದರೆ ಸಾಧಿತ ಪ್ರತ್ಯಯಗಳು ಪ್ರಾತಿಪಾದಿಕಗಳಿಗೆ ಸೇರುವುದರಿಂದ ಹೊಸಪದ ಸೃಷ್ಟಿಗೆ ಕಾರಣವಾಗುತ್ತದೆ. ಉದಾಹರಣೆಗೆ child ಪ್ರಾತಿಪದಿಕಕ್ಕೆ -hood ಎಂಬ ಸಾಧಿತ ಪ್ರತ್ಯಯ ಸೇರುವುದರಿಂದ childhood ಎಂಬ ಹೊಸ ಪದ ಸಿದ್ದಿಸುತ್ತದೆ. ಹಾಗೇಯೇ kind ಪದಕ್ಕೆ ly ಪ್ರತ್ಯಯ ಸೇರಿ kindly ಎಂಬ ಹೊಸ ಪದ ನಿರ್ಮಾಣವಾಗುತ್ತದೆ. ಹೀಗೆ ಪ್ರಾತ್ಯಾಯಿಕ ಪ್ರತ್ಯಯಗಳಿಗಿಂತ ಭಿನ್ನ ನೆಲೆಯಲ್ಲಿ ಸಾಧಿತ ಪ್ರತ್ಯಯಗಳು ಕಾರ್ಯ ನಿರ್ವಹಿಸಿ ಭಾಷೆಯ ಹೊಸ ರೂಪಗಳಿಗೆ ಕಾರಣವಾಗುತ್ತದೆ.
ಪ್ರಾತ್ಯಾಯಿಕ ಮತ್ತು ಸಾಧಿತ ಪ್ರತ್ಯಯಗಳ ನಡುವಣ ಪ್ರಮುಖ ವ್ಯತ್ಯಾಸ ಗಳನ್ನು ಹೀಗೆ ಪಟ್ಟಿಮಾಡಬಹುದು:
1. ಪ್ರಾತ್ಯಾಯಿಕ ಪ್ರತ್ಯಯಗಳು ‘ಪದವರ್ಗ’ವನ್ನು ಬದಲಾಯಿಸುವುದಿಲ್ಲ.
ಉದಾ:
boy boys  (ಎರಡೂ ನಾಮಪದಗಳು)
talk talked (ಎರಡೂ ಕ್ರಿಯಾಪದಗಳು)
loud louder (ಎರಡೂ ವಿಶೇಷಣಗಳು)
ಆದರೆ ಸಾಧಿತ ಪ್ರತ್ಯಯಗಳು ‘ಪದವರ್ಗ’ವನ್ನು ಬದಲಾಯಿಸುತ್ತವೆ.
ಉದಾ: Work ಎಂಬ ಕ್ರಿಯಾಪದಕ್ಕೆ -er ಸಾಧಿತ ಪ್ರತ್ಯಯವನ್ನು ಸೇರಿಸಿ Worker ಎಂಬ ನಾಮಪದವನ್ನು ಪಡೆಯಬಹುದು:
2. ಪ್ರಾತ್ಯಾಯಿಕ ಪ್ರತ್ಯಯಗಳು ಪದಾಂತ್ಯದಲ್ಲಿ ಸೇರುತ್ತವೆ. ಇವುಗಳನ್ನು ಅನುಸರಿಸಿ ಯಾವುದೇ ಪ್ರತ್ಯಯ ಬರುವುದಿಲ್ಲ. ಆದುದರಿಂದ ಇಟ್ಟ ರೂಪ ಸಮಾಪ್ತಿ ಆಕೃತಿಮಾಗಳು.
ಉದಾ: laughs, teaching, friendships, ಇತ್ಯಾದಿ.
3. ಪ್ರಾತ್ಯಾಯಿಕ ಪ್ರತ್ಯಯಗಳು ನಿಶ್ಚಿತ ಪದವರ್ಗದ ಎಲ್ಲ ಪ್ರಾತಿಪದಿಕ ಗಳೊಡನೆ ಸೇರುತ್ತವೆ. ಉದಾ: She laughs, dances, sleeps, dreams. -s ಇಲ್ಲಿ ಇಂಗ್ಲಿಷ್‌ನ ಎಲ್ಲ ಕ್ರಿಯಾಧಾತುಗಳೊಡನೆ ಸೇರುತ್ತದೆ. ಸಾಧಿತ ಪ್ರತ್ಯಯಗಳು ಹಾಗೆ ಸೇರುವುದಿಲ್ಲ.
4. ಪ್ರಾತ್ಯಾಯಿಕ ಪ್ರತ್ಯಯದ ಹಿಂದೆ ಬೇರಾವ ಪ್ರತ್ಯಯಗಳೂ ಇರುವುದಿಲ್ಲ. ಆದರೆ ಸಾಧಿತ ಪ್ರತ್ಯಯಗಳ ಹಿಂದೆ ಬೇರೊಂದು ಸಾಧಿತ ಅಥವಾ ಪ್ರಾತ್ಯಾಯಿಕ ಪ್ರತ್ಯಯ ಇರಬಹುದು.
ಉದಾ:
Come comes (ಪ್ರಾತ್ಯಾಯಿಕ)
teach teaching (ಪ್ರಾತ್ಯಾಯಿಕ)
organ /iz/ation/al (ಮೂರು ಸಾಧಿತ ಪ್ರತ್ಯಯಗಳು)
ಇಂಗ್ಲಿಶ್ ಭಾಷೆಯಲ್ಲಿ ಬರುವ ್ರತ್ಯಯಗಳು ಸಾಧಿತವಾಗಿರಬಹುದು ಇಲ್ಲವೇ ಪ್ರಾತ್ಯಾಯಿಕವಾಗಿರಬಹುದು. ಆದರೆ ಪೂರ್ವ ಪ್ರತ್ಯಯಗಳು ಮಾತ್ರ ಸಾಧಿತವಾದವುಗಳೆ.
ಉದಾ: Pre-(prefix), un- (unkind) ಇತ್ಯಾದಿ.
ಸಾಧಿತ ಪ್ರತ್ಯಯಗಳಲ್ಲಿ ಎರಡು ಬಗೆ, ವರ್ಗ ಪರಿವರ್ತಕ (class changing)  ಮತ್ತು ವರ್ಗ ನಿರ್ವಾಹಕ (class  maintaining)  ಸಾಧಿತ ಪ್ರತ್ಯಯಗಳು. ವರ್ಗ ಪರಿವರ್ತಕ ಸಾಧಿತ ಪ್ರತ್ಯಯಗಳು ಪದದ ವರ್ಗವನ್ನು ಬದಲಾಯಿಸುತ್ತವೆ. ಉದಾ: happy ಎಂಬ ವಿಶೇಷಣಕ್ಕೆ -ness ಎಂಬ ಸಾಧಿತ ಪ್ರತ್ಯಯ ಸೇರುವುದರಿಂದ ಅದು happiness ಎಂಬ ನಾಮಪದವಾಗಿ ಬದಲಾಗುತ್ತದೆ. ಇದೇ ರೀತಿ, humanise ಎಂಬ ಕ್ರಿಯಾಪದಕ್ಕೆ -ation ಎಂಬ ಪರಿವರ್ತಕ ಸಾಧಿತ ಪ್ರತ್ಯಯ ಸೇರಿ humanisatin ಎಂಬ ನಾಮಪದ ಉಂಟಾಗುತ್ತದೆ. ಇನ್ನು ಕೆಲವು ಸಾಧಿತ ಪ್ರತ್ಯಯಗಳು ಪ್ರಾತಿಪದಿಕ ವರ್ಗದಲ್ಲಿ ಯಾವುದೇ ಬದಲಾವಣೆಯನ್ನು ತರುವುದಿಲ್ಲ. ಉದಾ : kind ಒಂದು ವಿಶೇಷಣ. ಇದಕ್ಕೆ un- ಎಂಬ ವರ್ಗ ನಿರ್ವಾಹಕ ಸಾಧಿತ ಪ್ರತ್ಯಯ ಸೇರಿದ ಮೇಲೂ ಇದು unkind ಎಂಬ ವಿಶೇಷಣವಾಗಿಯೇ ಉಳಿಯುತ್ತದೆ. ಇಂಥ ಸಾಧಿತ ಪ್ರತ್ಯಯಗಳನ್ನು ವರ್ಗನಿರ್ವಾಹಕ ಪ್ರತ್ಯಯಗಳೆಂದು ಕರೆಯಲಾಗಿದೆ.
ಆಕೃತಿಮಾ


ಆಕೃತಿಮಾಗಳ ವರ್ಗೀಕರಣ ಸೂಚಕ ರೇಖಾಚಿತ್ರ


ಪ್ರಾತಿಪದಿಕ ಮತ್ತು ಧಾತು
ಪದದಲ್ಲಿರುವ ಪ್ರತ್ಯಯಗಳನ್ನು ಬೇರ್ಪಡಿಸಿದರೆ ಉಳಿಯುವಂಥವು ಪ್ರಾತಿಪಾದಿಕ ಮತ್ತು ಧಾತು. ಇವು ಸಾಂಪ್ರದಾಯಿಕ ವ್ಯಾಕರಣಕಾರರ ಕಾಲದಿಂದಲೂ ಉಳಿದುಕೊಂಡು ಬಂದಿರುವ ಪರಿಭಾಷೆಗಳು. ಪದದ ಎಲ್ಲ ಪ್ರತ್ಯಯಗಳನ್ನು ತೆಗೆದಾಗ ಮೂಲದಲ್ಲಿ ಉಳಿಯುವಂಥದು ಧಾತು. ಗೊತ್ತಾದ ಪ್ರತ್ಯಯ ಪದವನ್ನು ಮಾತ್ರ ಬೇರ್ಪಡಿಸಿದಾಗ ಉಳಿಯುವಂಥದು ಪ್ರಾತಿಪದಿಕ. ಒಂದು ಪದದಲ್ಲಿ ಒಂದಕ್ಕಿಂತ ಹೆಚ್ಚು ಪ್ರತ್ಯಯಗಳಿದ್ದರೆ ಅದರಲ್ಲಿ ಒಂದಕ್ಕಿಂತ ಹೆಚ್ಚು ಪ್ರಾದಿಪಾದಿಕಗಳಿರುತ್ತವೆ. ಆದರೆ ಅವುಗಳಿಗೆಲ್ಲ ಇರುವಂಥದು ಒಂದೇ ಧಾತು. ಉದಾಹರಣೆಗೆ ಲ್ಯಾಟಿನ್ ಭಾಷೆಯ laudationes ‘ಪ್ರಶಂಸೆ’ ಪದವನ್ನು ಗಮನಿಸಿ ಇದರಲ್ಲಿ ಐದು ಆಕೃತಿಮಾ ಗಳಿವೆ: laud ‘ಹೊಗಳಿಕೆ’ -a ‘ಕ್ರಿಯಾಸೂಚಕ’ -t ‘ಪೂರ್ಣಕೃದಂತ ವಿಶೇಷಣ’, -ion ‘ಅಮೂರ್ತಕ್ರಿಯೆ’ ಹಾಗೂ -es ‘ಪ್ರಥಮ ವಿಭಕ್ತಿ ಬಹುವಚನ’ laud- ಈ ಪದದ ಧಾತು ಉಳಿದೆಲ್ಲ ಪ್ರತ್ಯಯಗಳಿಗೆ ಒಟ್ಟಾರೆ ಇರುವಂಥದು laudation ಪ್ರಾತಿಪದಿಕ. ಇದರಲ್ಲಿ ಮುಂದುವರಿದು laudat-ಎಂಬ ಇನ್ನೊಂದು ಪ್ರಾತಿಪದಿಕವನ್ನು ಗುರುತಿಸಬಹುದು. (ಮ್ಯಾಥ್ಯೂಸ್, 1974) ಪ್ರತ್ಯಯೀಕರಣ ಅನಿವಾರ್ಯವಾದ ಭಾಷೆಗಳಲ್ಲಿ ಪ್ರಾತಿಪದಿಕ ಮತ್ತು ಧಾತು ತಮ್ಮಿಂದ ತಾವೇ ಪೂರ್ಣಪದಗಳಾಗಿ ನಿಲ್ಲುವುದಿಲ್ಲ. ಆದುದರಿಂದ ಪ್ರಾತ್ಯಾಯಿಕ ಭಾಷೆಗಳಲ್ಲಿ ಶಬ್ದಿಮ (ಲೆಕ್ಸಿಮ್), ಪ್ರಾತಿಪದಿಕ ಮತ್ತು ಪದರೂಪ ಇವುಗಳನ್ನೆಲ್ಲ ಮುಖ್ಯವಾಗಿ ಗುರುತಿಸ ಬೇಕಾಗುತ್ತದೆ.


ಹಳೆಪದಗಳಿಂದ ಹೊಸ ಪದಗಳ ಸೃಷ್ಟಿ
ಹೊಸ ಪದಗಳ ನಿರ್ಮಾಣದಲ್ಲಿ ನೆರವಾಗುವ ಕೆಲವು ಸಾಮಾನ್ಯ ಪ್ರಕ್ರಿಯೆಗಳನ್ನು ಇಲ್ಲಿ ಹೆಸರಿಸಲಾಗಿದೆ:
1. ಪೂರ್ವ ಪ್ರತ್ಯಯೀಕರಣ : ಪದದ ಆದಿಗೆ ಪೂರ್ವಪ್ರತ್ಯಯವನ್ನು ಸೇರಿಸುವಿಕೆ.
ಉದಾ: dis-obey
2.ಪ್ರತ್ಯಯೀಕರಣ : ಪದಾಂತ್ಯದಲ್ಲಿ ಪ್ರತ್ಯಯವನ್ನು ಸೇರಿಸುವಿಕೆ.
ಉದಾ: kind-ness
3. ಪರಿವರ್ತನೆ : ಪದ ತನ್ನ ರೂಪ ಬದಲಾಯಿಸದೆ ವರ್ಗ ಪರಿವರ್ತನೆಗೆ ಒಳಗಾಗುವಿಕೆ.
ಉದಾ: carpet (ನಾಮಪದ) carpet (ಕ್ರಿಯಾಪದ)
4. ಜೋಡಣೆ : ಎರಡು ಪದಗಳು ಪರಸ್ಪರ ಸೇರುವಿಕೆ.
ಉದಾ: black bird
5. ಪುನರಾವೃತ್ತಿ : ಹೆಚ್ಚೂ ಕಡಿಮೆ ಒಂದೇ ರೂಪದ ಎರಡು ಪದಗಳು ಪುನರಾವರ್ತನೆಗೊಳ್ಳುವಿಕೆ.
ಉದಾ: chitchat, teenyweeny
6. ಹ್ರಸ್ವೀಕರಣ ; ಇಡೀ ಪದದ ಬದಲು ಅದರ ಹ್ರಸ್ವರೂಪವನ್ನು ಪ್ರಯೋಗಿಸುವಿಕೆ.
ಉದಾ: gents, Flu
7. ಆಕ್ರನಿಮ್‌ಸ್ : ಪದಗಳ ಮೊದಲ ಅಕ್ಷರಗಳಿಂದ ಹೊಸಪದವನ್ನು ರೂಪಿಸುವಿಕೆ.
ಉದಾ: Radar (Radio detection and ranging)
8. ಮಿಶ್ರರೂಪ : ಎರಡು ಪದಗಳು ಒಂದರಲ್ಲಿ ಮತ್ತೊಂದು ಲೀನ ವಾಗುವಿಕೆ.
ಉದಾ: brunch (breakfast+lunch)


ಪದಗಳು
ಪದಗಳ ವ್ಯಾವಹಾರಿಕ ಮತ್ತು ಕ್ರಿಯಾತ್ಮಕ ಗುಣಗಳಿಂದಾಗಿ ‘ಪದ ನಿರ್ವಚನ’ ತುಂಬ ಕಷ್ಟ. ಈವರೆಗಿನ ಯಾವ ಪದನಿರ್ವಚನಕ್ಕೂ ಸಾಮಾನ್ಯ ಒಪ್ಪಿಗೆ ದೊರೆತಿಲ್ಲ. ಭಾಷಾ ಶಾಸ್ತ್ರಜ್ಞರಲ್ಲಿಲ್ಲದ ಸಹಮತದಿಂದಾಗಿ ಇಂದಿಗೂ ಇದು ಚರ್ಚೆಯ ಗ್ರಾಸವಾಗಿದೆ. ಹಾಗೆ ನೋಡಿದರೆ ಶ್ರೀ ಸಾಮಾನ್ಯ ತಾನು ಬಳಸುವ ದೈನಂದಿನ ಪದಗಳ ಬಗೆಗೆ ಯಾವ ಗೊಂದಲಕ್ಕೂ ಒಳಗಾಗಿಲ್ಲ.
ಪದಗಳನ್ನು ವಿವರಿಸುವಲ್ಲಿ ನಾಲ್ಕು ಮೂಲಭೂತ ಪ್ರಶ್ನೆಗಳು ಎದುರಾಗುತ್ತವೆ:
1. ಪದಗಳು ಸಾರ್ವತ್ರಿಕವೆ? ಇವು ಕೆಲವು ಭಾಷೆಗಳಲ್ಲಿದ್ದು ಮತ್ತೆ ಕೆಲವು ಭಾಷೆಗಳಲ್ಲಿ ಇಲ್ಲದ ಘಟಕಗಳೆ? ಅಥವಾ ಇವು ಎಲ್ಲ ಭಾಷೆಗಳ ಅವಿನಾಭಾಗವಾಗಿವೆಯೆ? ಇವು ಸಾರ್ವತ್ರಿಕವಾಗಿದ್ದಲ್ಲಿ ಈ ಸಾರ್ವತ್ರಿಕತೆ ಆಕಸ್ಮಿಕವೆ ಇಲ್ಲ ಅನಿವಾರ್ಯವೆ?
2. ಪದ ಯಾವ ಬಗೆಯ ಘಟಕ? ಪದಗಳು ವ್ಯಾಕರಣ ಘಟಕಗಳಾಗಿ, ವ್ಯಾಕರಣದ ಮಾನದಂಡದಿಂದಲೇ ನಿರ್ವಚಿಸಬೇಕಾದಂಥವೆ? ಅಥವಾ ರೂಪ ಮತ್ತು ಅರ್ಥವನ್ನು ಬೆಸೆದುಕೊಂಡ ಪ್ರಾಥಮಿಕ ಚಿಹ್ನೆಗಳು ಮಾತ್ರವೆ?
3. ವಾಕ್ಯಗಳೊಡನೆ ಪದಗಳ ಸಂಬಂಧ ಎಂಥದು ಪ್ರತಿಯೊಂದು ವಾಕ್ಯ ವನ್ನು ಪದಗಳ ಮಟ್ಟಕ್ಕೆ ವಿಭಜಿಸುವುದು ಸಾಧ್ಯವೆ?
4. ಭಾಷೆಯ ರಚನೆಯಲ್ಲಿ ಪದಗಳ ಸ್ಥಾನಮಾನವೇನು? ಸಾಂಪ್ರದಾಯಿಕ ವಾಗಿ ಗುರುತಿಸಿರುವಂತೆ ವ್ಯಾಕರಣದಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆಯೇ?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಳ್ಳಲು ಸಾಧ್ಯವಾಗುವುದು ಪ್ರಾಯಶಃ ಭಾಷಾಶಾಸ್ತ್ರಜ್ಞರು ತಮ್ಮ ತಮ್ಮ ತಾತ್ತ್ವಿಕ ನಿಲುವನ್ನು ವ್ಯಕ್ತ ಪಡಿಸಿದ ಮೇಲೆಯೆ. ಸಸ್ಸೂರ್, ಯಾಕುಬ್‌ಸನ್ ಮುಂತಾದ ರಾಚನಿಕ ಭಾಷಾ ವಿಜ್ಞಾನಿಗಳು ‘ಭಾಷೆಯ ಮತ್ತು ಭಾಷಾ ಬಳಕೆಯ ಭದ್ರ ಬುನಾದಿ’ (ಸಸ್ಸೂರ್, 1916, ಪು. 159) ಎಂದು ಪರಿಗಣಿಸಿದ್ದಾರೆ. ಇದನ್ನು ಒಪ್ಪದ ಗ್ರೇಟ್ ಬ್ರಿಟನ್‌ನ ರಾಬಿನ್ಸ್
ಪದವನ್ನು ‘ವ್ಯಾಕರಣ ಘಟಕ’ ಎಂದೇ ಪ್ರತಿಪಾದಿಸಿದ್ದಾರೆ. (ರಾಬಿನ್ಸ್, 1960). ಟರ್ಕಿಷ್, ವಿಯಟ್ನಾಮೀಸ್, ಚೈನೀಸ್ ಮೊದಲಾದ ವಿವಕ್ತ ಭಾಷೆಗಳ ದೃಷ್ಟಿಯಿಂದ ಪದಗಳ ಬದಲು ಆಕೃತಿಮಾಗಳನ್ನು ಭಾಷೆಯ ಮೂಲ ಘಟಕಗಳೆಂದು ಭಾವಿಸುವವರು ಮ್ಯಾಥ್ಯೂಸ್ (1974, ಪು. 163) ಮತ್ತು ಲಯನ್ಸ್ (1977, ಪು. 72) 1940 ರಿಂದ 1960 ರವರೆಗೆ ಬ್ಲೂಮ್‌ಫೀಲ್ಡನ ಪ್ರಭಾವಕ್ಕೆ ಒಳಗಾಗಿದ್ದ ಅಮೆರಿಕನ್ ಭಾಷಾ ವಿಜ್ಞಾನಿಗಳು ಕೂಡ ಪದದ ಬದಲು ಆಕೃತಿಮಾವನ್ನೇ ವ್ಯಾಕರಣದ ಕನಿಷ್ಠತಮ ಮೂಲಘಟಕ ಎಂದು ಒಪ್ಪುತ್ತಾರೆ. ಉತ್ಪಾದಕ ವ್ಯಾಕರಣದಲ್ಲಿ ತೀರಾ ಅವಜ್ಞೆಗೆ ಒಳಗಾಗಿದ್ದ ಪದಕೋಶ ಮತ್ತು ಆಕೃತಿಮಾ ಶಾಸ್ತ್ರ ಚೋಮ್‌ಸ್ಕಿಯ ಕಾರಣದಿಂದಾಗಿ 1970 ರ ವೇಳೆಗೆ ಭಾಷಿಕ ಸಂಶೋಧನೆಯಲ್ಲಿ ಪ್ರಾಮುಖ್ಯತೆ ಪಡೆದವು. (ಹಾಲ್ 1973, ಅರನಾಫ್, 1976, ಅಂಡ್ರಸನ್ 1982, ಸೆಲ್‌ಕ್ರಿಕ್ 1982) ಇದು ಪದದ ಬಗೆಗಿನ ಆಸಕ್ತಿಯನ್ನು ನವೀಕರಿಸಿತು; ವ್ಯಾಕರಣದಲ್ಲಿ ಪದದ ಪಾತ್ರ ಮತ್ತು ಅರ್ಥವಂತಿಕೆಗೆ ಹೆಚ್ಚು ಆದ್ಯತೆಯನ್ನು ದೊರಕಿಸಿತು. ಆನಂತರ ಮನಃಶಾಸ್ತ್ರೀಯ ಅಧ್ಯಯನಕ್ಕೆ ಇದು ದಾರಿಮಾಡಿಕೊಟ್ಟಿತು. (ಮಿಲ್ಲರ್ ಅಂಡ್ ಜಾನ್ಸ್‌ಸನ್ ಲೈರ್ಡ್‌ 1976) ಇಲ್ಲೆಲ್ಲ ಪದವನ್ನು ಪದಕೋಶ ಜ್ಞಾನದ ಘಟಕ ಶಕ್ತಿಯಾಗಿ ಗಮನಿಸಲಾಯಿತು. ಅದರೆ ಉತ್ಪಾದಕ ವ್ಯಾಕರಣದ ಚೌಕಟ್ಟಿನಲ್ಲಿ ಪದ ಅರ್ಥವಿಜ್ಞಾನ ಘಟಕವಾಗಿ ಚರ್ಚಿತವಾಗದೆ ವ್ಯಾಕರಣ ಘಟಕವಾಗಿಯೇ ಗಮನಸೆಳೆಯಿತು.
ಪದ, ಆಕೃತಿ, ಧ್ವನಿಮಾತ್ಮಕ, ಆಕೃತಿಮಾತ್ಮಕ, ವ್ಯಾಕರಣಾತ್ಮಕ, ಸಂಬಂಧಿ ನೆಲೆಯ ಕೇಂದ್ರಬಿಂದುವಾಗಿರುವುದರಿಂದ ಇದನ್ನು ಯಾವುದೇ ಏಕದೃಷ್ಟಿಕೋನದಿಂದ ಗುರುತಿಸುವುದು ತಪ್ಪು. ಹೀಗಾಗಿ, ವಾಕ್ಯಗಳಿಂದ, ಆಕೃತಿಮಾಗಳಿಂದ, ಪದಗಳನ್ನು ಗುರುತಿಸುವಲ್ಲಿ ಬಹುಮುಖ ವಿಶ್ಲೇಷಣೆ ಅನಿವಾರ್ಯ.


ಪದವರ್ಗಗಳು
ಪ್ರಾಚೀನ ವ್ಯಾಕರಣ ಕಾಲದಿಂದಲೂ ಸಾಂಪ್ರದಾಯಿಕ ‘ವಾಚಕಾಂಗ’ಗಳ ಹೆಸರಿನಲ್ಲಿ ಪದಗಳನ್ನು ವಿಂಗಡಿಸಿಕೊಳ್ಳಲಾಗಿದೆ. ಬಹುತೇಕ ಎಲ್ಲ ವ್ಯಾಕರಣ ಗಳಲ್ಲಿ ಇಂಥ ಎಂಟು ಪದವರ್ಗಗಳನ್ನು ಹೆಸರಿಸಿ ವಿವೇಚಿಸಲಾಗಿದೆ. ಅವಾವು ವೆಂದರೆ: ನಾಮಪದ (ಹುಡುಗ, ಯಂತ್ರ); ಸರ್ವನಾಮ (ಅವಳು, ಅವನು, ಅದು), ವಿಶೇಷಣ (ಸಂತೋಷ, ಮೂರು, ಬಿಳಿ), ಕ್ರಿಯಾಪದ (ಬಾ, ಹೋಗು, ಇರು), ಉಪಸರ್ಗ (ಒಳಗೆ, ಕೆಳಗೆ, ಜೊತೆ), ಸಮುಚ್ಚಯಾ ವ್ಯಯ (ಮತ್ತೆ, ಏಕೆಂದರೆ), ಕ್ರಿಯಾ ವಿಶೇಷಣ (ಬೇಗ, ಆಗಾಗ), ಉದ್ಗಾರವಾಚಕ (ಅಯ್ಯ, alas), ಇನ್ನು ಕೆಲವು ವ್ಯಾಕರಣಗಳಲ್ಲಿ ಅವ್ಯಯಗಳು (ಅಲ್ಲ, ಇಲ್ಲ) ಮತ್ತು ಉಪಪದಗಳನ್ನು (a, an, the) ಬೇರೆಯಾಗಿ ಪಟ್ಟಿ ಮಾಡಿರುವುದಿದೆ.
ಆಧುನಿಕ ಭಾಷಾ ವಿಜ್ಞಾನಿಗಳೂ ಪದವರ್ಗಗಳನ್ನು ಗುರುತಿಸಿದ್ದಾರೆ. ಆದರೆ ‘ವಾಚಕಾಂಗ’ ಶೀರ್ಷಿಕೆಯಡಿಯಲ್ಲಲ್ಲ. ಸಾಂಪ್ರದಾಯಿಕ ವ್ಯಾಕರಣ ಕಾರರು ವಾಚಕಾಂಗಗಳನ್ನು ನಿರ್ವಚಿಸಿರುವ ಬಗೆಗೆ ಇವರಲ್ಲಿ ಉತ್ಸಾಹವಿಲ್ಲ. ‘ನಾಮಪದ ಎಂದರೆ ಯಾವುದೇ ವಸ್ತುವಿನ ಹೆಸರು’ ಎಂಬ ಸಾಂಪ್ರದಾಯಿಕ ವ್ಯಾಕರಣಕಾರರ ಈ ನಿರ್ವಚನವನ್ನು ಆಧುನಿಕ ವಿದ್ವಾಂಸರು ಒಪ್ಪುವುದಿಲ್ಲ. ಏಕೆಂದರೆ, ‘ಸೌಂದರ್ಯ’ ಎನ್ನುವ ನಾಮಪದ ವಸ್ತುವೆ? ‘ಕೆಂಪು’ ಎನ್ನುವ ಬಣ್ಣದ ಹೆಸರು ವಿಶೇಷಣ ಏಕೆ? ನಾಮಪದ ಏಕಾಗಬಾರದು? ಅರ್ಥದ ಆಧಾರದಿಂದ ಮಾಡಲಾದ ನಿರ್ವಚನಗಳಿಗೆ ಇಂಥ ಸಂಗಿದ್ಧತೆ ಎದುರಾಗುತ್ತದೆ. ಆದುದರಿಂದ ಭಾಷೆಯ ರಚನೆಯನ್ನು ಆಧರಿಸಿ ಈಗ ವ್ಯಾಕರಣ ಅಂಶಗಳನ್ನು ನಿರ್ವಚಿಸಲಾಗುತ್ತಿದೆ.
ಸುಸಂಬದ್ಧ ಪದಗಳನ್ನೆಲ್ಲ ಒಂದೇ ವರ್ಗದಡಿಯಲ್ಲಿ ಸಂಸ್ಥಾಪಿಸುವುದು ಆಧುನಿಕ ಭಾಷಾ ವಿಜ್ಞಾನಿಗಳ ಉದ್ದೇಶ. ಒಂದು ವರ್ಗಕ್ಕೆ ಸೇರುವ ಪದಗಳ ವರ್ತನೆ ಒಂದೇ ಬಗೆಯದಾಗಿರಬೇಕು. ಉದಾ, Jump, Walk  ಮತ್ತು cook ಈ ಪದಗಳು ಒಂದೇ ವರ್ಗಕ್ಕೆ ಸೇರುತ್ತವೆ. ಏಕೆಂದರೆ, ಇವುಗಳಲ್ಲಿ ಯಾವುದೇ ಒಂದು ಪದಕ್ಕೆ ಅನ್ವಯವಾಗುವ ವ್ಯಾಕರಣ ಪ್ರತ್ಯಯ ಇತರ ಪದಗಳಿಗೂ ಯಥಾವತ್ತಾಗಿ ಅನ್ವಯವಾಗುತ್ತದೆ. ಪ್ರಥಮ ಪುರುಷ ಏಕ ವಚನ ವರ್ತಮಾನಕಾಲ ಪ್ರತ್ಯಯ ಈ ಎಲ್ಲ ಪದಗಳಿಗೂ ಸೇರುವುದನ್ನು (he Jumps/Walks/cooks) ನೋಡಬಹುದು. ಹಾಗೆಯೇ ಭೂತಕಾಲ ಪ್ರತ್ಯಯ -ed (Jumped/Walked/cooked) ಕೂಡ ಒಂದೇ ರೀತಿಯಲ್ಲಿ ಈ ವರ್ಗದ ಪದಗಳಿಗೆ ಹತ್ತುತ್ತದೆ.


ಪದ ಚಲನೆ
ಪದವರ್ಗಗಳು ಸುಸಂಬದ್ಧವಾಗಿರಬೇಕು. ಹಲವಾರು ಪದವರ್ಗಗಳನ್ನು ಸ್ಥಾಪಿಸುವುದು ಬೇಡವಾದರೆ, ಪ್ರತಿಯೊಂದು ಪದವರ್ಗಕ್ಕೂ ಕೆಲವು ಅನಿಯತ ರೂಪಗಳನ್ನು ಅನುಮತಿಸಬೇಕು. ಉದಾಹರಣೆಗೆ, ಇಂಗ್ಲಿಶ್‌ನ house  ಪದ (s)ೊನಿಂದ ಅಂತ್ಯಗೊಳ್ಳುತ್ತದೆ. ಇದು ಬಹುವಚನದಲ್ಲಿ (z)ೊದಿಂದ ಅಂತ್ಯ ಗೊಳ್ಳುತ್ತದೆ. houses ಅಂದರೆ, ಇದರ ಪದಾಂತ್ಯ ಏಕವಚನದಲ್ಲಿ ಹಾಗೂ ಬಹುವಚನದಲ್ಲಿ (/z/) ಹೀಗೆ, ಇದು ತನ್ನದೇ ಆದ ವರ್ಗದಲ್ಲಿದ್ದರೂ, ಇದು ಹೆಚ್ಚು ಸಂಸರ್ಗ ಹೊಂದಿರುವ ಇತರ ನಾಮಪದಗಳೊಡನೆ ಇದನ್ನು ಸೇರಿಸಲಾಗಿದೆ. ಭಾಷೆಯಲ್ಲಿರುವ ಇಂಥ ಅನಿಯತತೆಯಿಂದಾಗಿ ಪದವರ್ಗಗಳು ಸೈದ್ಧಾಂತಿಕ ನಿರೀಕ್ಷೆಯಂತೆ ನೀಟಾಗಿ ಒಂದೇ ಜ್ಞಾತೀಯ ಗುಂಪಿಗೆ ಸೇರುವುದಿಲ್ಲ. ಪ್ರತಿ ವರ್ಗದಲ್ಲಿಯೂ ವ್ಯಾಕರಣದ ದೃಷ್ಟಿಯಿಂದ ಸಮಾನವಾಗಿ ವರ್ತಿಸುವ ಪದಸಾಂದ್ರತೆ ಇರುತ್ತದೆ. ಆದರೆ ಇಂಥ ವರ್ಗಗಳಲ್ಲೂ ಕೆಲವು ಅನಿಯತ ಪದಗಳು ಇದ್ದು ಅವು ಇತರ ವರ್ಗಗಳಿಗೆ ಸೇರಿದ ಪದಗಳ ರೀತಿಯಲ್ಲಿ ವರ್ತಿಸಬಹುದು. ಉದಾಗೆ. rich ನಾಮವಿಶೇಷಣ, ನಾಮಪದ ದಂತೆ ವರ್ತಿಸ ಬಹುದು. railway ಎಂಬ ನಾಮಪದ, ನಾಮ ವಿಶೇಷಣದಂತೆ ವರ್ತಿಸಬಹುದು. ಹೀಗೆ, ಸ್ಥಿರವಾದ ವರ್ತನೆಯ ವ್ಯಾಕರಣವರ್ಗದ ಕೇಂದ್ರ ನೆಲೆಯಿಂದ ಪದ ಜಾರಿಕೊಂಡು ಅನಿಯತ ವರ್ತನೆಯ ಕಕ್ಷೆಯತ್ತ ವಾಲುವಿಕೆಯನ್ನು ‘ಪದಚಲನೆ’ ಎನ್ನಲಾಗಿದೆ. ಇಂಥ ಚಮತ್ಕಾರಕ್ಕೆ ಇಂಗ್ಲಿಶ್‌ನ ವಿಶೇಷಣಗಳು ಹೆಸರಾದವು.


ಪದಗಳನ್ನು ಗುರುತಿಸುವಿಕೆ
ಪದಗಳನ್ನು ಗುರುತಿಸಲು ಬೇಕಾದ ಅನೇಕ ದಾರಿಗಳನ್ನು ವ್ಯಾಕರಣಕಾರರು ತೋರಿಸಿಕೊಟ್ಟಿದ್ದಾರೆ. ಅವುಗಳಲ್ಲಿ ಮುಖ್ಯವಾದ ಐದು ಇವು:
1. ಸಂಭಾವನಾತ್ಮಕ ವಿರಾಮ : ಎರಡು ಪದಗಳ ನಡುವೆ ಏರ್ಪಡುವ ವಿರಾಮದಿಂದ ಪದಗಳನ್ನು ಗುರುತಿಸಬಹುದು. ಉದಾ: ನಾನು/ ಹಣ್ಣನ್ನು/ ತಿಂದೆನು.
2. ಅವಿಭಾಜ್ಯತೆ : ಪದಗಳು ತಮ್ಮದೇ ಆದ ರಚನೆಯನ್ನು ಹೊಂದಿದ ಘಟಕಗಳಾಗಿರುತ್ತವೆ. ಅವನ್ನು ಬೇಕಾಬಿಟ್ಟಿ ಒಡೆಯಲು ಬರುವುದಿಲ್ಲ. ಉದಾಗೆ: market ಪದವನ್ನು mar-ket ಎಂದು ವಿಭಜಿಸುವುದು ಸರಿಯಲ್ಲ. ಪದಗಳ ಇಂಥ ಅವಿಭಾಜ್ಯತೆಯಿಂದ ಅವನ್ನು ಗುರುತಿಸಬಹುದು.
3. ಕನಿಷ್ಠತಮ ಮುಕ್ತ ರೂಪಗಳು : ಬ್ಲೂಮ್‌ಫೀಲ್ಡ್ ಪದಗಳನ್ನು ‘ಕನಿಷ್ಠತಮ ಮುಕ್ತ ರೂಪಗಳು’ ಎಂದಿದ್ದಾರೆ. ಅಂದರೆ, ಸ್ವತಂತ್ರವಾಗಿ ಪೂರ್ಣಾರ್ಥ ಕೊಡುವ ಆಡುಮಾತಿನ ಕನಿಷ್ಠ ಘಟಕವೇ ಪದ. ಭಾಷೆಯ ಬಹುತೇಕ ಪದಗಳು ಈ ವಿವರಣೆಯ ವ್ಯಾಪ್ತಿಗೆ ಒಳಪಡುತ್ತವೆ. ಆದರೆ ಬರಹದಲ್ಲಿ ಪದಗಳೆಂದು ಕರೆಯಲಾಗುವ ಇಂಗ್ಲಿಷ್‌ನ the ಮತ್ತು of ಆಡುಮಾತಿನಲ್ಲಿ ಸ್ವತಂತ್ರವಾಗಿ ನಿಲ್ಲಲಾರವು.
4. ಧ್ವನ್ಯಾತ್ಮಕ ಎಲ್ಲೆಗಳು : ಒಂದು ಪದದ ಪ್ರಾರಂಭ ಯಾವುದು ಮುಕ್ತಾಯ ಯಾವುದು ಎಂಬುದನ್ನು, ಆ ಪದದ ಧ್ವನ್ಯಾತ್ಮಕ ಗಡಿಗಳಿಂದ ಗುರುತಿಸಲು ಸಾಧ್ಯ. ಉದಾಗೆ: ವೈಲ್ಸ್ ಭಾಷೆಯಲ್ಲಿ ದೀರ್ಘ ಪದಗಳು ಸಾಮಾನ್ಯವಾಗಿ ಉಪಾಂತ್ಯ ವರ್ಣದ ಮೇಲೆ ಬಲಾಘಾತ ಹೊಂದಿರುತ್ತವೆ. ಪದಾಂತ್ಯ ವ್ಯಂಜನದ ಘೋಷಣೆ ಮತ್ತು ಅಘೋಷತೆಯನ್ನಾಧರಿಸಿಯೂ ಕೆಲವು ಭಾಷೆಗಳಲ್ಲಿ ಪದಗಳ ಎಲ್ಲೆಯನ್ನು ನಿರ್ಧರಿಸಬಹುದು.
5. ಅರ್ಥಾತ್ಮಕ ಘಟಕಗಳು : ‘ರಾಮ ಕಾಡಿಗೆ ಹೋದನು’ ಎಂಬ ವಾಕ್ಯದಲ್ಲಿ ಮೂರು ಅರ್ಥಪೂರ್ಣ ಘಟಕಗಳಿವೆ. ಈ ಒಂದೊಂದು ಘಟಕವೂ ಒಂದೊಂದು ಪದಕ್ಕೆ ಸಂವಾದಿಯಾಗಿವೆ. ಪದಗಳ ಎಲ್ಲೆಯನ್ನು ಗುರುತಿಸಲು ಅವುಗಳನ್ನು ಅರ್ಥಪೂರ್ಣ ಘಟಕಗಳಾಗಿ ವಿಂಗಡಿಸಿಕೊಳ್ಳುವುದು ಸರಳ ವಿಧಾನ. ಆದರೆ ಕೆಲವು ಭಾಷೆಗಳು ಹೀಗೆ ವಿಂಗಡಿಸಿಕೊಳ್ಳುವಷ್ಟು ನೀಟಾಗಿರುವುದಿಲ್ಲ. ಉದಾಗೆ ‘switching on’ ಒಂದೇ ಅರ್ಥ ಕೊಟ್ಟರೂ ಇದರಲ್ಲಿ ಎರಡು ಪದಗಳಿವೆ.


ವ್ಯಾಕರಣ ವರ್ಗಗಳು
ಭಾಷೆಯ ವ್ಯಾಕರಣಾಂಶಗಳಾದ ಲಿಂಗ, ವಚನ, ಕಾಲ ಇತ್ಯಾದಿಗಳನ್ನು ವೈದೃಶ್ಯವಾಗಿ ಅಭಿವ್ಯಕ್ತಿಸಲು ಅನೇಕ ಪದದ ಬಗೆಗಳು ಬಳಕೆಯಲ್ಲಿವೆ. ವ್ಯಾಕರಣಾಂಶ ಸೂಚಿಗಳಾದ ಈ ಪದವರ್ಗಗಳು, ವ್ಯಾಕರಣ ಪರಿಕಲ್ಪನೆಗಳಲ್ಲೇ ಪ್ರಾಚೀನವಾದವು. ಆದರೆ ಇವುಗಳ ವಿಶ್ಲೇಷಣೆ ಅನೇಕ ಕೌತುಕಗಳಿಗೆ ಕಾರಣವಾಗುವುದುಂಟು. ಉದಾಗೆ: ಬಹುವಚನ ನಾಮಪದಗಳು ‘ಒಂದಕ್ಕಿಂತ ಹೆಚ್ಚು’ ಎಂಬ ಅರ್ಥಕ್ಕೇ ಸೀಮಿತವಾಗಿಲ್ಲದಿರುವುದು; ಮಾತನಾಡುವ ವ್ಯಕ್ತಿಗೇ ಉತ್ತಮ ಪುರುಷ ಸರ್ವನಾಮ ಅನ್ವಯವಾಗದಿರುವುದು; ಪುಲ್ಲಿಂಗ ನಾಮಪದಗಳು ಯಾವಾಗಲೂ ಪುರುಷ ಸೂಚಕವೇ ಆಗದಿರುವುದು. ಹೀಗೆ, ಇಂಥ ವ್ಯಾಕರಣಿಕ ವಿಕಲ್ಪಗಳಿಂದ, ಒಂದು ಪದದ ವ್ಯಾಕರಣಾಂಶ ಮತ್ತು ಅದರ ಅರ್ಥ ಇವುಗಳ ನಡುವೆ ತಾದಾತ್ಯ್ಮ ಸಾಧ್ಯವಾಗದೇ ಹೋಗಬಹುದು. ವಿಕಲ್ಪಗಳು ಏನೇ ಇರಲಿ, ಲಿಂಗ, ವಚನ, ವಿಭಕ್ತಿ, ಪುರುಷ, ವಾಚ್ಯ, ಕಾಲ ಮತ್ತು ಕ್ರಿಯಾರ್ಥ ಮುಂತಾದವು ವ್ಯಾಕರಣ ವರ್ಗಗಳಾಗಿ ಭಾಷೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿವೆ.


ಲಿಂಗ
ಭಾಷೆಯಲ್ಲಿ ಪದಗಳ ಅರ್ಥವನ್ನು ಆಧಾರವಾಗಿಟ್ಟುಕೊಂಡು ಅವುಗಳ ಲಿಂಗವ್ಯವಸ್ಥೆಯನ್ನು ಗುರುತಿಸುವುದು ರೂಢಿ. ಪುರುಷ ಜಾತಿಯನ್ನು ಸೂಚಿಸುವುದು ಪುಲ್ಲಿಂಗ (ತಂದೆ, ಮಗ, ಹುಡುಗ) ಸ್ತ್ರೀಲಿಂಗ (ತಾಯಿ, ಮಗಳು, ಹುಡುಗಿ). ನಿರ್ಜೀವ ಜಾತಿಯನ್ನು ಸೂಚಿಸುವುದು ನಪುಂಸಕ ಲಿಂಗ (ಪುಸ್ತಕ, ಮನೆ, ಮಗ) ಹೀಗೆ, ಲಿಂಗಸೂಚಕ ಪದಗಳಿಗೂ ಲಿಂಗ ವ್ಯವಸ್ಥೆಗೂ ಯಾವಾಗಲೂ ನಿಯತ ಸಂಬಂಧ ಇರಲೇಬೇಕೆಂದಿಲ್ಲ. ಉದಾಗೆ: ಜರ್ಮನ್ ಭಾಷೆಯಲ್ಲಿ spoon  ಪುಲ್ಲಿಂಗ, fork ಸ್ತ್ರೀಲಿಂಗ ಮತ್ತು knife ನಪುಂಸಕಲಿಂಗ. ಕನ್ನಡದಲ್ಲಿ ನಪುಂಸಕ ಲಿಂಗವನ್ನು ಸೂಚಿಸುವ ‘ಪುಸ್ತಕ’, ‘ನದಿ’ ಪದಗಳು ಹಿಂದಿಯಲ್ಲಿ ಕ್ರಮವಾಗಿ ಪುಲ್ಲಿಂಗ, ಸ್ತ್ರೀಲಿಂಗ ಅರ್ಥವನ್ನು ಸೂಚಿಸುತ್ತವೆ. ಫ್ರೆಂಚ್‌ನ amour ‘ಪ್ರೀತಿ’ ಪದ ಏಕವಚನದಲ್ಲಿ ಪುಲ್ಲಿಂಗವಾಗಿಯೂ ಬಹುವಚನದಲ್ಲಿ ಸ್ತ್ರೀಲಿಂಗವಾಗಿಯೂ ಕಂಡು ಬರುತ್ತದೆ. ಲಿಂಗ ವ್ಯವಸ್ಥೆಯನ್ನು ಮಾನವ/ ಮಾನವೇತರ, ಸಜೀವ/ ನಿರ್ಜೀವ, ಚೇತನ/ ಅಚೇತನ, ಮಹತ್ತರ/ ಅಮಹತ್ತರ ಎಂದೆಲ್ಲ ಪರಿಗಣಿಸಿ ವಿಶ್ಲೇಷಿಸಲಾಗಿದೆ. ಇಂಗ್ಲಿಶ್‌ಗೆ ಏಳು ಬಗೆಯ ಲಿಂಗ ವ್ಯವಸ್ಥೆಯನ್ನು ಸೂಚಿಸಿದರೆ (ಹಾಕೆಟ್, 1976) ಕನ್ನಡದಲ್ಲಿ ಒಂಬತ್ತು ತರದ (ಕೇಶಿರಾಜ, ಶಮದ) ಲಿಂಗವ್ಯವಸ್ಥೆ ಇದೆ ಎಂದು ಕೇಶಿರಾಜ ಹೇಳುತ್ತಾನೆ.
ವಚನ
ವ್ಯಕ್ತಿಗಳ ವಸ್ತುಗಳ ಸಂಖ್ಯೆಯನ್ನು ಸೂಚಿಸುವುದು ವಚನ ವ್ಯವಸ್ಥೆ. ನಾಮಪದ, ವಿಶೇಷಣ, ಸರ್ವನಾಮ (ಕ್ರಿಯಾಪದ) ಭಾಷೆಯಲ್ಲಿ ಈ ವ್ಯವಸ್ಥೆಯನ್ನು ಪ್ರತಿನಿಧಿಸುತ್ತವೆ. ವಚನ ವ್ಯವಸ್ಥೆ ಎಲ್ಲ ಭಾಷೆಗಳಲ್ಲಿಯೂ ಒಂದೇ ತೆರನಾಗಿರುವುದಿಲ್ಲ. ಕನ್ನಡದಲ್ಲಿ ಒಬ್ಬ ವ್ಯಕ್ತಿಯನ್ನು, ಒಂದು ವಸ್ತುವನ್ನು ಸೂಚಿಸಲು (ರಾಮ, ಮರ) ಏಕವಚನವನ್ನು: ಇಬ್ಬರಿಗಿಂತ ಹೆಚ್ಚು ಜನರನ್ನು, ಎರಡಕ್ಕಿಂತ ಹೆಚ್ಚು ವಸ್ತುಗಳನ್ನು (ಜನರು, ಮರಗಳು) ಸೂಚಿಸಲು ಬಹುವಚನವನ್ನು ಬಳಸುತ್ತೇವೆ. ಸಂಸ್ಕೃತ, ಗ್ರೀಕ್, ಲ್ಯಾಟಿನ್ ಇತ್ಯಾದಿ ಭಾಷೆಗಳಲ್ಲಿ ಏಕವಚನ ಬಹುವಚನಗಳ ಜೊತೆಗೆ ದ್ವಿವಚನವೂ ಇದೆ. ಮಲನೇಶಿಯಾದ ಅನ್ನಾಟಂ ದ್ವೀಪ ಭಾಷೆಯೊಂದರಲ್ಲಿ ಏಕವಚನ, ದ್ವಿವಚನ, ತ್ರಿವಚನ ಮತ್ತು ಬಹುವಚನ ಪ್ರಯೋಗಗಳಿವೆ. ಕನ್ನಡದ -ಗಳು ನಪುಂಸಕಲಿಂಗ ಬಹುವಚನ ಪ್ರತ್ಯಯ ಪುಲ್ಲಿಂಗ ಯಾ ಸ್ತ್ರೀಲಿಂಗದೊಡನೆ (ಗುರುಗಳು, ಮಂತ್ರಿಗಳು) ಬರುತ್ತದೆ. ಹಾಗೆಯೇ ಏಕವಚನಕ್ಕೆ ಬದಲಾಗಿ ಬಹುವಚನ ಬಳಕೆ ಗೌರವ ಸೂಚಿಸಲು (ಪ್ರಭುಗಳು, ಸ್ವಾಮಿಗಳು) ಪ್ರಯೋಗವಾಗುವುದುಂಟು. ಇಂಗ್ಲಿಷ್‌ನಲ್ಲಿ ಬಹುವಚನ ರೂಪ ಹೊಂದಿರುವ binaculars, pants ಪದಗಳಲ್ಲಿ ಏಕವಚನಾರ್ಥವನ್ನೂ, ಏಕವಚನದಲ್ಲಿ ಗುರುತಿಸುವ athletics, News ಪದಗಳಲ್ಲಿ ಬಹುವಚನಾರ್ಥವನ್ನು ಕಾಣಬಹುದು.


ವಿಭಕ್ತಿ
ವಾಕ್ಯಗಳಲ್ಲಿ ನಾಮಪದ, ಸರ್ವನಾಮ ಮತ್ತು ಕ್ರಿಯಾಪದಗಳಿಗೆ ಇರುವ ಸಂಬಂಧವನ್ನು ನಿರ್ದೇಶಿಸುವ ರೂಪಗಳನ್ನು ವಿಭಕ್ತಿ ಪ್ರತ್ಯಯಗಳೆಂದು ಗುರುತಿಸಲಾಗಿದೆ. ಇವು ನಾಮಪ್ರಕೃತಿ ಮತ್ತು ಕ್ರಿಯಾಪದಗಳ ನಡುವಣ ಸಂಬಂಧವನ್ನು ಸಾರುತ್ತವೆ. ಒಂದೊಂದು ವಿಭಕ್ತಿಗೂ ಒಂದೊಂದು ಕಾರಕಾರ್ಥವಿರುತ್ತದೆ. ಕಾರಕಾರ್ಥಕ್ಕೆ ಅನುಗುಣವಾಗಿ ವಿಭಕ್ತಿ ಪ್ರತ್ಯಯಗಳು ರೂಪುಗೊಂಡಿವೆ. ಕನ್ನಡದಲ್ಲಿ ಏಳು ಬಗೆಯ ವಿಭಕ್ತಿ ಪ್ರತ್ಯಯಗಳಿವೆ. ಸಂಸ್ಕೃತದಲ್ಲಿ ಅವು ಎಂಟು ಬಗೆ. ಕೆಲವು ಆಫ್ರಿಕನ್ ಭಾಷೆಗಳಲ್ಲಿ ಎರಡೇ ಬಗೆಯ ವಿಭಕ್ತಿ ಇರುವ ಮಾಹಿತಿ ಇದೆ. ಫಿನ್ನಿಷ್ ಭಾಷೆಯಲ್ಲಿ ಹದಿನೈದು ಬಗೆಯ ವಿಭಕ್ತಿ ಪ್ರತ್ಯಯಗಳನ್ನು ಗುರುತಿಸಲಾಗಿದೆ. ಕನ್ನಡದಲ್ಲಿ ನಾಮ ಪ್ರಕೃತಿಯು ಸ್ವತಂತ್ರವಾಗಿ ಬಳಕೆಯಾಗುವುದರಿಂದ ಪ್ರಥಮಾವಿಭಕ್ತಿ  ಪ್ರತ್ಯಯ ವಿಲ್ಲ. ಹಾಗೆಯೇ ತೃತೀಯ ವಿಭಕ್ತಿ ಪ್ರತ್ಯಯವೇ ಪಂಚಮೀ ವಿಭಕ್ತಿಯ ಅಪಾದಾನಕಾರಕ ಸಂಬಂಧವನ್ನು ಸೂಚಿಸುವುದರಿಂದ ಪಂಚಮೀ ವಿಭಕ್ತಿ ಪ್ರತ್ಯಯವಿಲ್ಲ ಎಂಬ ವಾದವಿದೆ. ಉಳಿದಂತೆ, ದ್ವಿತೀಯ ವಿಭಕ್ತಿಗೆ – ಗೆ, ಇಗೆ, ಷಷ್ಠೀ ವಿಭಕ್ತಿಗೆ – ಅ, ಸಪ್ತಮೀ ವಿಭಕ್ತಿಗೆ – ಅಲ್ಲಿ, ಇಲ್ಲಿ, ಇತ್ಯಾದಿ. ಹಾಗೂ ಸಂಬೋಧನಾ ವಿಭಕ್ತಿಗೆ – ಏ ಎಂಬ ವಿಭಕ್ತಿ ಪ್ರತ್ಯಯಗಳಿವೆ. ಇವುಗಳ ಜೊತೆಗೆ (ಸಹವಿಭಕ್ತಿ ಒಟ್ಟಿಗೆ, ಕೂಡ, ಜೊತೆ, ಸಹ ಇತ್ಯಾದಿ), ತೌಲನಿಕ ವಿಭಕ್ತಿ (- ಆಗಿ, ಓಸ್ಕರ) ಸೇರ್ಪಡೆಯಾಗಬೇಕೆಂಬ ಒತ್ತಾಯವಿದೆ.


ಪುರುಷ
ವ್ಯಕ್ತಿಯನ್ನು ನಿರ್ದೇಶಿಸುವ ಪದಗಳೆ ವ್ಯಕ್ತಿವಾಚಕಗಳು ಅಥವಾ ಪುರುಷ ವಾಚಕಗಳು. ಇವುಗಳಲ್ಲಿ ಮುಖ್ಯವಾಗಿ ಮೂರು ಬಗೆ: ಉತ್ತಮ ಪುರುಷ (ಮಾತಾಡುವ ವ್ಯಕ್ತಿಯನ್ನು ನಿರ್ದೇಶಿಸುವಂಥದು), ಮಧ್ಯಮ ಪುರುಷ (ಕೇಳುವ ವ್ಯಕ್ತಿಯನ್ನು ನಿರ್ದೇಶಿಸುವಂಥದು), ಪ್ರಥಮ ಪುರುಷ (ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವನ್ನು ಸೂಚಿಸುವಂಥದು) ಕನ್ನಡದ ಉತ್ತಮ ಪುರುಷದಲ್ಲಿ ನಾನು (ಏ.ವ) ನಾವು (ಬ.ವ) ಮಧ್ಯಮ ಪುರುಷದಲ್ಲಿ ನೀನು (ಏ.ವ) ನೀವು (ಬ.ವ), ಪ್ರಥಮ ಪುರುಷದಲ್ಲಿ ಅವನು (ಏ.ವ.ಪು) ಅವಳು (ಏ.ವ.ಸ್ತ್ರೀ) ಅದು (ಏ.ವ.ನ), ಅವರು (ಬ.ವ.ಪು.ಸ್ತ್ರೀ) ಅವು (ಬ.ವ.ನ), ಇವನು (ಏ.ವ.ಪು) ಇವಳು (ಏ.ವ.ಸ್ತ್ರೀ) ಇದು (ಏ.ವ.ನ), ಇವರು (ಬ.ವ.ಪು.ಸ್ತ್ರೀ) ಇವು (ಬ.ವ.ನ) ಎಂಬ ರೂಪಗಳಿವೆ. ಕನ್ನಡದ ಉತ್ತಮ ಮತ್ತು ಮಧ್ಯಮ ಪುರುಷ ವಾಚಕಗಳಲ್ಲಿ ಲಿಂಗ ಮತ್ತು ವಚನಭೇದವಿದೆ. ಆದರೆ ಲಿಂಗ ಭೇದವಿಲ್ಲ. ಪ್ರಥಮ ಪುರುಷ ವಾಚಕಗಳಲ್ಲಿ ಲಿಂಗ ಮತ್ತು ವಚನಭೇದವಿದೆ. ಈ ಪ್ರಥಮ ಪುರುಷ ವಾಚಕ ಸರ್ವನಾಮಗಳನ್ನು ಮತ್ತೆ ದೂರವರ್ತಿ (ಅವನು, ಅವಳು, ಅದು, ಅವರು) ಮತ್ತು ಸಮೀಪವರ್ತಿ ಭಾಷೆಗಳಲ್ಲಿ (ಇವನು, ಇವಳು, ಇದು, ಇವರು) ಎಂದು ವರ್ಗೀಕರಿಸಲಾಗಿದೆ. ಅಲ್ಗೋನ್ಕ್ವಿಯನ್ ಭಾಷೆಗಳಲ್ಲಿ ನಾಲ್ಕನೇ ಪುರುಷ ವೈದೃಶ್ಯವಿರುವುದು ತಿಳಿದು ಬಂದಿದೆ. (Bloomfield , 1933 ಪು. 257)


ಕಾಲ
ಕರ್ತೃವಿನ ಕ್ರಿಯೆ ನಡೆಯುವ ಕಾಲ ಅಥವಾ ಸಮಯವನ್ನು ಭಾಷೆಯಲ್ಲಿ ಸೂಚಿಸುವ ಕಾಲವ್ಯವಸ್ಥೆ. ಕ್ರಿಯೆಯ ಕಾಲವನ್ನು ಕಾಲಸೂಚಕ ಪ್ರತ್ಯಯಗಳು ನಿರ್ದೇಶಿಸುತ್ತವೆ. ಭೂತಕಾಲ, ವರ್ತಮಾನಕಾಲ, ಭವಿಷ್ಯತ್ ಕಾಲಗಳು ಕ್ರಮವಾಗಿ ನಡೆದ, ನಡೆಯುತ್ತಿರುವ ಮತ್ತು ನಡೆಯಬಹುದಾದ ಕಾಲವನ್ನು ಸೂಚಿಸುತ್ತವೆ. ಈ ವ್ಯವಸ್ಥೆ ಬಹುತೇಕ ಭಾಷೆಗಳಲ್ಲಿ ಕಂಡುಬರುತ್ತದೆ. ಕನ್ನಡ ದಲ್ಲಿ ಭೂತಕಾಲವನ್ನು ಸೂಚಿಸಲು – ದ್- , ಇದ್-, -ತ್, -ಟ್, ಕ್, ಪ್ರತ್ಯಯಗಳನ್ನೂ ವರ್ತಮಾನ ಕಾಲವನ್ನು ಸೂಚಿಸಲು -ತ್ತ್-, ಉತ್ತ್-, ಪ್ರತ್ಯಯಗಳನ್ನು ಹಾಗೂ ಭವಿಷ್ಯತ್ ಕಾಲವನ್ನು ಸೂಚಿಸಲು -ವ್- ಪ್ರತ್ಯಯ ವನ್ನು ಬಳಸಲಾಗತ್ತಿದೆ. ಕೆಲವೊಮ್ಮೆ ಕಾಲವ್ಯವಸ್ಥೆಯನ್ನು ಭೂತಕಾಲ ಮತ್ತು ಅಭೂತಕಾಲ ಎಂದು ಎರಡು ಭಾಗಗಳಾಗಿ ವಿಂಗಡಿಸಿಕೊಳ್ಳುವುದಿದೆ. ಹಾಗೆಯೇ ವರ್ತಮಾನ, ಭೂತ, ಭವಿಷ್ಯತ್ ಕಾಲಗಳ ಒಳಗೇ ಉಪಬೇಧಗಳನ್ನು ಕಲ್ಪಿಸಿರುವುದೂ ಇದೆ. ಕೆಲವು ಭಾಷೆಗಳಲ್ಲಿ ಕಾಲವನ್ನು ಸೂಚಿಸಲು ಕ್ರಿಯಾ ಪದದ ಬದಲು ನಾಮಪದವನ್ನು ಅಥವಾ ವಿಶೇಷಣವನ್ನು ಬಳಸುವುದು ವರದಿಯಾಗಿದೆ (ಹಾಕೆಟ್ 1958, ಪು. 238) ಹೀಗಾಗಿ, ಕಾಲ ವ್ಯವಸ್ಥೆ ಎಲ್ಲ ಭಾಷೆಗಳಲ್ಲಿಯೂ ಒಂದೇ ಬಗೆಯದಾಗಿರುವುದಿಲ್ಲ.


ವಾಚ್ಯ
ಕ್ರಿಯೆ ಕರ್ತೃವಿಗೆ ಅನುಗುಣವಾಗಿದೆಯೇ ಅಥವಾ ಕರ್ಮಕ್ಕೆ ಅನುಗುಣ ವಾಗಿದೆಯೇ ಇಲ್ಲವೇ ಭಾವಕ್ಕೆ ಅನುಗುಣವಾಗಿದೆಯೇ ಎಂಬುದನ್ನು ನಿರ್ದೇಶಿಸುವುದು ವಾಚ್ಯ. ಹೀಗಾಗಿ, ಕರ್ತೃವಾಚ್ಯ, ಕರ್ಮವಾಚ್ಯ ಮತ್ತು ಭಾವವಾಚ್ಯ ಎಂಬ ಮೂರು ಬಗೆಯನ್ನು ವಾಚ್ಯದಲ್ಲಿ ಕಾಣಬಹುದು. ‘ಪ್ರೀತಂ ಓದುತ್ತಾನೆ’. ‘ಪದ್ಮ ಹಾಡುತ್ತಾಳೆ’ – ಈ ವಾಕ್ಯಗಳಲ್ಲಿ ಕರ್ತೃ ಪ್ರಧಾನ. ಕರ್ತೃವಿಗೆ ಅನುಸಾರವಾಗಿ ಓದುವ, ಹಾಡುವ ಕ್ರಿಯೆ ಇಲ್ಲಿ ನಡೆದಿದೆ. ಆದುದರಿಂದ ಇವು ಕರ್ತೃವಿಗೆ ಮಹತ್ವ ಕಲ್ಪಿಸಿರುವ ವಾಕ್ಯಗಳು. ಇದಕ್ಕೆ ಕರ್ತರಿ ಪ್ರಯೋಗವೆಂತಲೂ ಹೆಸರು. ‘ಹಾಡು ಹಾಡಲ್ಪಟ್ಟಿತು’, ‘ಪುಸ್ತಕ ಓದಲ್ಪಟ್ಟಿತು’ ಎಂಬ ವಾಕ್ಯಗಳಲ್ಲಿ ಕರ್ಮ ಪ್ರಧಾನ. ಇವು ಕರ್ಮಕ್ಕೆ ಮಹತ್ವ ಕಲ್ಪಿಸಿದ ವಾಕ್ಯಗಳು. ಆದುದರಿಂದ ಇವು ಕರ್ಮವಾಚ್ಯಗಳು. ಕರ್ಮ ವಾಚ್ಯಕ್ಕೆ ಕರ್ಮಣಿ ಪ್ರಯೋಗವೆಂತಲೂ ಹೆಸರು. ಯಾವ ಕ್ರಿಯೆ ಕರ್ತೃ ಅಥವಾ ಕರ್ಮಕ್ಕನುಸಾರವಾಗಿರದೆ ಭಾವಕ್ಕನುಗುಣವಾಗಿ ನಡೆಯುತ್ತದೆಯೋ ಅದೇ ಭಾವವಾಚ್ಯ. ‘ಶೇಖರ ಹಣ್ಣನ್ನು ತಿಂದನು’. ಎಂಬ ವಾಕ್ಯದಲ್ಲಿ ಕರ್ತೃ ಕರ್ಮಕ್ಕಿಂತ ಭಾವ ಪ್ರಧಾನವಾದುದಾಗಿದೆ. ಈ ಭಾವ ವಾಚ್ಯಕ್ಕೆ ಮಧ್ಯಮ ವಾಚ್ಯ ಎಂದೂ ಹೆಸರು.


ವಾಕ್ಯಗಳು
ಇವನ್ನು ವಿಶ್ಲೇಷಿಸುವುದರ ಮೂಲಕ ಉಪವಾಕ್ಯಗಳು
ಇವನ್ನು ವಿಶ್ಲೇಷಿಸುವುದರ ಮೂಲಕ ಪದಪುಂಜಗಳು
ಇವನ್ನು ವಿಶ್ಲೇಷಿಸುವುದರ ಮೂಲಕ ಪದಗಳು
ಇವನ್ನು ವಿಶ್ಲೇಷಿಸುವುದರ ಮೂಲಕ ಆಕೃತಿಮಾಗಳು
(ಭಾಷೆಯ ದೊಡ್ಡ ಘಟಕ ವಾಕ್ಯದ ಮೂಲಕ ವಿಶ್ಲೇಷಣೆಯನ್ನು ಪ್ರಾರಂಭಿಸಿ ಕನಿಷ್ಟ ಘಟಕ ಆಕೃತಿಮಾದ ಮಟ್ಟದಲ್ಲಿ ಮುಕ್ತಾಯಗೊಳಿಸುವುದು.)


ಆಕೃತಿಮಾಗಳು
ಇವನ್ನು ಬಳಸಿಕೊಂಡು ಪದಗಳು
ವನ್ನು ಬಳಸಿಕೊಂಡು ಪದಪುಂಜುಗಳು
ಇವನ್ನು ಬಳಸಿಕೊಂಡು ಉಪವಾಕ್ಯಗಳು
ಇವನ್ನು ಬಳಸಿಕೊಂಡು ವಾಕ್ಯಗಳು
(ಭಾಷೆಯ ಕನಿಷ್ಠ ಘಟಕ ಆಕೃತಿಮಾದ ಮೂಲಕ ವಿಶ್ಲೇಷಣೆಯನ್ನು
ಪ್ರಾರಂಭಿಸಿ ಭಾಷೆಯ ದೊಡ್ಡ ಘಟಕವಾದ ವಾಕ್ಯ ನಿರ್ಮಾಣ ಮಾಡುವಲ್ಲಿ ಮುಕ್ತಾಯಗೊಳಿಸುವುದು.)



ಕ್ರಿಯಾರ್ಥ
ಭಾಷೆಯನ್ನಾಡುವ ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಕ್ರಿಯೆಯ ಯಾವ ರೂಪ ನಿರ್ದೇಶಿಸುತ್ತದೆಯೋ ಅದೇ ಕ್ರಿಯಾರ್ಥ. ಕ್ರಿಯಾರ್ಥದಲ್ಲಿ ನಾನಾ ಬಗೆಗಳಿವೆ. ‘ಅವನು ಕುಡಿದ’ ಎಂಬ ವಾಕ್ಯದಲ್ಲಿ ಸಂಭಾವ್ಯಾರ್ಥ ಇದೆ. ‘(ಪ್ರಾಯಶಃ) ಅವನು ಬರಲಾರ’ ಎಂಬ ವಾಕ್ಯವು ಸಂದೇಹಾರ್ಥವನ್ನು ಧ್ವನಿಸುತ್ತವೆ. ‘ಈಗ ನೀವು ಇಲ್ಲಿಂದ ಹೋಗಿ’ ಎಂಬ ವಾಕ್ಯದಲ್ಲಿ ಆಜ್ಞಾರ್ಥವಿದೆ. ‘ಇವಳು ಸರಿಯಾಗಿ ಪ್ರೀತಿಸಿದ್ದರೆ ಅವನು ಸಾಯುತ್ತಿರಲಿಲ್ಲ’ ಎಂಬ ವಾಕ್ಯದಲ್ಲಿ ಸಂಕೇತಾರ್ಥವಿದೆ. ಪ್ರೀತಿಸಿದ್ದರೆ ಅವನು ಸಾಯುತ್ತಿರಲಿಲ್ಲ ಎಂಬ ವಾಕ್ಯದಲ್ಲಿ ಸಂಕೇತಾರ್ಥವಿದೆ. ಹೀಗೆ ಕ್ರಿಯಾರ್ಥವು ಭಾಷೆಯಲ್ಲಿ ನಾನಾ ಬಗೆಯಲ್ಲಿ ಕೆಲಸ ಮಾಡುತ್ತದೆ.


ಸಂಧಿ
ಸಂಧಿ ಎಂಬ ಪದವನ್ನು ಸಾಂಪ್ರದಾಯಿಕ ವ್ಯಾಕರಣಕಾರರು ಬಳಸಿರುವುದು ಹೆಚ್ಚು. ಇದರ ಅರ್ಥ ‘ಬೆಸೆಯುವುದು, ಜೋಡಿಸುವುದು, ಸೇರಿಸುವುದು’ ಎಂದು. ಪದದೊಳಗೆ ಆಕೃತಿಮಾಗಳ ನಡುವೆ ವಾಕ್ಯದಲ್ಲಿ ನಡೆಯುವಂಥದು ಆಂತರಿಕ ಸಂಧಿ; ಪದಗಳ ನಡುವೆ ವಾಕ್ಯದಲ್ಲಿ ನಡೆಯುವಂಥದು ಬಾಹ್ಯ ಸಂಧಿ (ಆಂಡ್ರಸನ್, 1986) ಸಂಧಿ, ಸಮಾಸ ಇತ್ಯಾದಿಗಳನ್ನು ಆಧುನಿಕ ಭಾಷಾ ವಿಜ್ಞಾನಿಗಳು ಆಕೃತಿ ಧ್ವನಿಮಾ ವಿಜ್ಞಾನದಲ್ಲಿ ಚರ್ಚಿಸುತ್ತಾರೆ.


ಆಕೃತಿಧ್ವನಿಮಾ ಶಾಸ್ತ್ರ
ಆಕೃತಿಮಾಗಳು ಧ್ವನಿಮಾತ್ಮಕ ಆಕಾರಗಳಲ್ಲಿ ಕಂಡುಬರುವ ಬಗೆಯನ್ನು ಇಲ್ಲವೇ ಧ್ವನಿಮಾತ್ಮಕ ಆಕಾರಗಳು ಆಕೃತಿಮಾಗಳನ್ನು ಪ್ರತಿನಿಧಿಸುವ ಬಗೆಯನ್ನು ವಿಶ್ಲೇಷಿಸಿ ವರ್ಗೀಕರಿಸುವಂಥದೇ ಆಕೃತಿಧ್ವನಿಮಾ ವಿಜ್ಞಾನ. ಅರ್ಥಾತ್ ಆಕೃತಿಮಾತ್ಮಕ ರಚನೆಯ ಧ್ವನಿಮಾತ್ಮಕ ಅಂಶಗಳನ್ನು  ಪರಿಶೀಲಿಸುವ ಅಥವಾ ಆಕೃತಿಮಾತ್ಮಕ ಸಂಘಟನೆಯ ಧ್ವನಿಮಾತ್ಮಕ ಪರಿಣಾಮಗಳನ್ನು ವಿಶ್ಲೇಷಿಸುವ ಕಾರ್ಯ ಆಕೃತಿಧ್ವನಿಮಾ ವಿಜ್ಞಾನಕ್ಕೆ ಸೇರಿದ್ದು. ಆಕೃತಿಮಾ ವಿಜ್ಞಾನ, ಧ್ವನಿಮಾ ವಿಜ್ಞಾನಗಳಂತೆ ಆಕೃತಿಧ್ವನಿಮಾ ವಿಜ್ಞಾನಕ್ಕೆ ಬೇರೆಯೇ ಆದ ಸ್ಥಾನ ಕಲ್ಪಿಸುವಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ ಇವನ್ನು ಒಂದು ಭಾಷೆಯ ಧ್ವನಿ ರಚನೆ ಹಾಗೂ ವ್ಯಾಕರಣದ ನಡುವಣ ಕೊಂಡಿಯಾಗಿ ಪರಿಗಣಿಸುವುದರ ಬಗೆಗೆ ಯಾವುದೇ ಆಕ್ಷೇಪವಿಲ್ಲ.
ವಾಸ್ತವವಾಗಿ ಆಕೃತಿಧ್ವನಿಮಾ ವಿಜ್ಞಾನಕ್ಕೆ, ಭಾಷಾ ವಿಶ್ಲೇಷಣೆಯ ಒಂದು ವಿಭಿನ್ನ ಶಿಸ್ತಿಗೆ, ಮನ್ನಣೆ ದೊರೆತದ್ದು ಧ್ವನಿಮಾ ಸಿದ್ಧಾಂತ ರೂಪಗೊಂಡ ಮೇಲೆಯೇ. ಆಕೃತಿಧ್ವನಿಮಾ ವಿಜ್ಞಾನ ವಿಶ್ಲೇಷಣೆಗೆ ಸವಾಲಾಗುವಂಥ ಅನೇಕ ಸಂದಿಗ್ದತೆಗಳು ಭಾಷೆಯಲ್ಲಿವೆ. ಭಾಷಾ ವಿಜ್ಞಾನ ಮತ್ತು ಮನೋಭಾಷಾ ವಿಜ್ಞಾನಗಳೆರಡಕ್ಕೂ ಇಂಥ ಸಂದಿಗ್ದತೆಗಳು ಚರ್ಚೆಗೆ ಗ್ರಾಸವನ್ನೊದಗಿಸಿವೆ. ಭಾಷೆಗಳಲ್ಲಿನ ಇಂಥ ರಚನಾತ್ಮಕ ವ್ಯತ್ಯಯಗಳನ್ನು ಆಕೃತಿಧ್ವನಿಮಾ ವಿಜ್ಞಾನ ವಿಶ್ಲೇಷಣೆಗೆ ಸ್ವೀಕರಿಸಿದೆ. ಇಂಥ ಲಕ್ಷಣಗಳನ್ನು ಅಪಾರವಾಗಿ ಅಭಿಜಾತ ಭಾಷೆಗಳೆನಿಸಿದ ಸಂಸ್ಕೃತ, ಲ್ಯಾಟಿನ್ ಇತ್ಯಾದಿಗಳಲ್ಲಿ ಕಾಣಬಹುದು. ಹಾಕೆಟ್ ಅಭಿಪ್ರಾಯಿಸಿದಂತೆ ಆಕೃತಿ ಶಾಸ್ತ್ರವು ವ್ಯಾಕರಣ ಮತ್ತು ಧ್ವನಿಮಾ ವ್ಯವಸ್ಥೆಗಳನ್ನು ಒಟ್ಟಾಗಿ ಬೆಸೆಯುವ ಸಂಹಿತೆ.


ವಾಕ್ಯರಚನಾ ಶಾಸ್ತ್ರ
ಅರ್ಥ ಸಂಬಂಧವನ್ನು ತೋರ್ಪಡಿಸಲು ವಾಕ್ಯಗಳಲ್ಲಿ ಪದಗಳು ವಿನ್ಯಾಸ ಗೊಂಡಿರುವ ಬಗೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವುದು ವಾಕ್ಯ ವಿಜ್ಞಾನ. ಭಾಷಾಶಾಸ್ತ್ರದಲ್ಲಿ ಸಿಂಟ್ಯಾಕ್ಸ್ ಎಂದು ಕರೆದು, ಇದರಡಿಯಲ್ಲಿ ವಾಕ್ಯ ವಿಶ್ಲೇಷಣೆ ಮಾಡಲಾಗಿದೆ. ಸಿಂಟ್ಯಾಕ್ಸ್ ಪದ ಗ್ರೀಕ್‌ನ ಸಿಂಟ್ಯಾಕ್ಸಿಸ್‌ನಿಂದ ನಿಷ್ಪನ್ನವಾದುದು. ಸಿಂಟ್ಯಾಕ್ಸಿ ಎಂದರೆ ‘ಅಣಿಗೊಳಿಸುವುದು’ ಎಂದರ್ಥ. ಪದಗಳನ್ನು ಅಣಿಗೊಳಿಸಿ ಭಾಷೆಯ ದೊಡ್ಡ ಘಟಕವಾದ ವಾಕ್ಯವನ್ನು ಕಟ್ಟುವುದರ ಅಧ್ಯಯನ ವಾಕ್ಯರಚನಾ ಶಾಸ್ತ್ರ; ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ವಾಕ್ಯಗಳ ವ್ಯಾಕರಣವೇ ವಾಕ್ಯರಚನಾ ಶಾಸ್ತ್ರ. ಇದು ವಾಕ್ಯರಚನೆಯ ಶಾಸ್ತ್ರ. ವಾಕ್ಯಗಳು ಮತ್ತು ಅವುಗಳ ಒಳರಚನೆಯನ್ನು ವಿವರಿಸಿ ತೋರಿಸುವುದು ಇದರ ಕೆಲಸ. ಯಾವುದೇ ಭಾಷೆಯ ವಾಕ್ಯ ಘಟಕಗಳನ್ನು ಗುರುತಿಸಿ ವಿವರಿಸುವ ಕ್ರಿಯೆಯನ್ನು ‘ವಾಕ್ಯ ವಿಶ್ಲೇಷಣೆ’ ಎಂದರೆ, ಇಂಥ ಘಟಕಗಳನ್ನು ಮತ್ತೆ ಸಂಯೋಜಿಸುವ ಕ್ರಿಯೆಗೆ ‘ವಾಕ್ಯ ಸಂಶ್ಲೇಷಣೆ’ ಎನ್ನುತ್ತಾರೆ.


ವಾಕ್ಯ
ಭಾಷೆಯಲ್ಲಿ ಪೂರ್ಣ ಅರ್ಥ ಕೊಡುವಂತಹ ದೊಡ್ಡ ರಚನೆ ವಾಕ್ಯ. ‘ಯಾವುದೇ ಒಂದು ಆಲೋಚನೆಯ ಸಮಗ್ರ ಅಭಿವ್ಯಕ್ತಿ’ ಎಂಬುದು ವಾಕ್ಯಕ್ಕೆ ಸಾಂಪ್ರದಾಯಿಕ ವ್ಯಾಕರಣಕಾರರು ಕೊಟ್ಟಿರುವ ವಿವರಣೆ. ಆಧುನಿಕರು ಈ ವಿವರಣೆಯನ್ನು ಸಮ್ಮತಿಸುವುದಿಲ್ಲ. ಏಕೆಂದರೆ ಒಂದು ವಸ್ತುವಿನ ಬಗೆಗೆ ಒಂದು ಆಲೋಚನೆಯನ್ನು ಹೊರಹಾಕಬಹುದು. ಆದರೆ ಅದನ್ನು ಸಮಗ್ರ ವಾಕ್ಯ ಎಂದು ಪರಿಗಣಿಸಲು ಬರುವುದಿಲ್ಲ. ‘ಚಳಿಯಾದ ಕಾರಣದಿಂದ ನಾನು ಬಾಗಿಲು ಮುಚ್ಚಿದೆ’ ಇದು ಕನ್ನಡದ ಒಂದು ವಾಕ್ಯ. ಆದರೆ ಇದರಲ್ಲಿ ಒಂದೇ ಆಲೋಚನೆ ಇಲ್ಲ. ಕೆಲವು ವ್ಯಾಕರಣಗಳು ‘ವಾಕ್ಯದಲ್ಲಿ ಕರ್ತೃ ಮತ್ತು ಕ್ರಿಯಾರ್ಥಗಳಿರುತ್ತವೆ’ ಎಂಬ ತಾರ್ಕಿಕ ನಿಲುವನ್ನು ತಳೆದಿವೆ. ಈ ನಿಲುವು ‘ಪುಸ್ತಕ ಮೇಜಿನ ಮೇಲಿದೆ’ ರೀತಿಯ ವಾಕ್ಯಗಳಿಗೆ ಒಪ್ಪಿತವಾಗುತ್ತದೆ. ಏಕೆಂದರೆ ಈ ವಾಕ್ಯದಲ್ಲಿ ಕರ್ತೃ ಮತ್ತು ಕ್ರಿಯಾರ್ಥಗಳು ಸ್ಪಷ್ಟವಾಗಿವೆ. ಆದರೆ ‘Its raining’ ಎಂಬ ಇಂಗ್ಲಿಷ್ ವಾಕ್ಯವನ್ನು ‘ಪುಸ್ತಕ ಮೇಜಿನ ಮೇಲಿದೆ’ ಎಂಬ ಕನ್ನಡ ವಾಕ್ಯದಂತೆ ಕರ್ತೃ ಮತ್ತು ಕ್ರಿಯಾರ್ಥಗಳಾಗಿ ವಿಂಗಡಿಸಲು ಬರುವುದಿಲ್ಲ. ಹಾಗೆಯೇ, ‘Michel asked Mary for pen’ ಈ ವಾಕ್ಯದಲ್ಲಿ ಕರ್ತೃ ಯಾರು? ಮೈಕೆಲ್ಲಾ, ಮೇರಿನಾ ಅಥವಾ ಪೆನ್ನಾ? ಇಲ್ಲವೇ ಇಲ್ಲಿ ಮೂರು ಕರ್ತೃಪದಗಳಿವೆಯೇ?
ಬರಹವುಳ್ಳ ಭಾಷೆಗಳಲ್ಲಿ ಪ್ರಾಯೋಗಿಕವಾಗಿ ವಾಕ್ಯಗಳನ್ನು ಗುರುತಿಸಲು ವಿರಾಮ ಚಿಹ್ನೆಗಳನ್ನು ಬಳಸಲಾಗುತ್ತಿದೆ. ಬಾಲ್ಯದ ಶಾಲೆಯ ಕಲಿಕೆಯಲ್ಲಿಯೇ ಹೀಗೆ ವಾಕ್ಯಗಳನ್ನು ಗುರುತಿಸುವ ಕ್ರಮವನ್ನು ಕರಗತ ಮಾಡಲಾಗುತ್ತದೆ. ಉದಾಗೆ: ಇಂಗ್ಲಿಷ್ ವಾಕ್ಯಗಳು ಸಾಮಾನ್ಯವಾಗಿ ದೊಡ್ಡ ಅಕ್ಷರದಿಂದ ಆರಂಭವಾಗಿ ಪೂರ್ಣವಿರಾಮ ಚಿಹ್ನೆಯೊಡನೆ ಮುಕ್ತಾಯಗೊಳ್ಳುತ್ತದೆ. ಆದರೆ ಸಮಸ್ಯೆ ಇರುವುದು ಎಲ್ಲ ಭಾಷೆಗಳೂ ಈ ವಿಧಾನವನ್ನು ಅನುಸರಿಸದೇ ಇರುವುದರಲ್ಲಿ. ವಾಕ್ಯಗಳನ್ನು ಗುರುತಿಸುವ ಈ ವಿಧಾನ ಏಷಿಯಾದ ಕೆಲವು ಭಾಷೆಗಳಲ್ಲಿಲ್ಲ. ವಾಕ್ಯಗಳನ್ನು ಆಡುಮಾತಿನಲ್ಲಿ ವಾಕ್ಯ ನಿಲುಗಡೆಯ ಸೂತಕವಾದ ಪೂರ್ಣವಿರಾಮದೊಡನೆ ಸ್ವರಲಹರಿ ಲಯ ಹೊಂದದೆ ಹೋಗಬಹುದು. ಏಕೆಂದರೆ ಬರವಣಿಗೆಯಲ್ಲಿರುವಂಥ ಎಚ್ಚರಿಕೆ ಆಡುಭಾಷೆಯಲ್ಲಿ ಇರದಿರಬಹುದು.
ಒಟ್ಟಿನಲ್ಲಿ ‘ವಾಕ್ಯ’ ಪದಪ್ರಯೋಗ ಯಾವಾಗಲೂ ವ್ಯಾಕರಣದಲ್ಲಿ ಚಾಲನೆಯಲ್ಲಿದೆ. ಈವರೆಗೆ ಇನ್ನೂರಕ್ಕೂ ಪ್ರಮುಖ ನಿರ್ವಚನಗಳನ್ನು ವಾಕ್ಯದ ಬಗೆಗೆ ದಾಖಲಿಸಿಕೊಳ್ಳಲಾಗಿದೆ. ಆದರೂ ಇದರ ಖಚಿತ ನಿರ್ವಚನ ಕ್ಕಾಗಿ ವಿದ್ವಾಂಸರು ತಹತಹಿಸುವುದು ನಿಂತಿಲ್ಲ. ವಾಕ್ಯ ವಿಶ್ಲೇಷಣೆಯಲ್ಲಿ ‘ಐದು ಶ್ರೇಣಿ’ಯ ಭಾಷಾ ರಚನೆ ಮಾದರಿಗಳನ್ನು ಬಳಸಿಕೊಳ್ಳಲಾಗಿದೆ:
ಭಾಷೆಯ ರಚನೆಯಲ್ಲಿರುವ ಈ ಶ್ರೇಣಿಯನ್ನು ನೋಡಿದಾಗ, ಆಕೃತಿ ಧ್ವನಿಮಾಗಳು ವ್ಯಾಕರಣ ಅಧ್ಯಯನದ ಅಡಿಗಲ್ಲುಗಳಾದರೆ, ವಾಕ್ಯಗಳು ಅದರ ಮಹಡಿಯ ಮೆಟ್ಟಿಲುಗಳು ಎಂಬುದು ವೇದ್ಯವಾಗುತ್ತದೆ.


ಉಪವಾಕ್ಯಗಳು
ಉಪವಾಕ್ಯಗಳ ರಚನೆಯಲ್ಲಿ ಕಂಡು ಬರುವ ಘಟಕಗಳನ್ನು ಸಾಮಾನ್ಯವಾಗಿ ಅವುಗಳ ಕಾರ್ಯಕ್ಕನುಗುಣವಾಗಿ ಹೆಸರಿಸಲಾಗಿದೆ. ಉದಾಗೆ: ಕರ್ತೃ, ಕರ್ಮ, ಕ್ರಿಯೆ, ಪೂರಕ, ವಿಶೇಷಣ ಇತ್ಯಾದಿ. ಉಪವಾಕ್ಯಗಳಲ್ಲಿರುವ ಈ ಬಗೆಗಳನ್ನು ವಾಕ್ಯ ವಿಶ್ಲೇಷಣೆಯಲ್ಲಿ ಈ ಕೆಳಕಂಡಂತೆ ವಿಭಜಿಸಿ ತೋರಿಸಬಹುದು:
ಕರ್ತೃ + ಕ್ರಿಯೆ: ನಾಯಿ ಓಡುತ್ತಿದೆ.
ಕರ್ತೃ + ಕರ್ಮ + ಕ್ರಿಯೆ: ರಾಮ ಹಣ್ಣನ್ನು ತಿಂದನು.
ಕರ್ತೃ + ಪೂರಕ + ಕ್ರಿಯೆ: ವಾಹನ ಸಿದ್ಧವಾಗಿ ಇದೆ.
ಕರ್ತೃ + ಕರ್ಮ + ಕರ್ಮ + ಕ್ರಿಯೆ: ನಾನು ಕೃಷ್ಣನಿಗೆ ಒಂದು ಪುಸ್ತಕ ಕೊಟ್ಟೆನು.
ತಮ್ಮ ನಿರ್ವಚನ ಪರಿಭಾಷೆಗಳಲ್ಲಿ ಏನೇ ವ್ಯತ್ಯಯವಿದ್ದರೂ ಈ ಬಗೆಯ ವಾಕ್ಯಾಂಶಗಳು ಅಥವಾ ಉಪವಾಕ್ಯಗಳನ್ನು ಹಲವಾರು ವಿಧಾನಗಳು, ವ್ಯಾಕರಣ ವಿಶ್ಲೇಷಣೆಯಲ್ಲಿ ಬಳಸಿಕೊಳ್ಳುತ್ತವೆ. ಭಾಷೆಗಳಲ್ಲಿ ಕೂಡ ಇವುಗಳನ್ನು ಗುರುತಿಸಲು ಒಂದೇ ಕ್ರಮವನ್ನು ಅನುಸರಿಸಲಾಗಿಲ್ಲ. ಉದಾಹರಣೆಗೆ, ಇಂಗ್ಲಿಶ್‌ನಲ್ಲಿ ಪದಾನುಕ್ರಮಣಿಕೆಯನ್ನು ಗುರುತಿಸುವುದು ಮುಖ್ಯ; ಲ್ಯಾಟಿನ್‌ನಲ್ಲಿ ಪದಾನುಕ್ರಮಣಿಕೆಗಿಂತ ಪದಾಂತ್ಯ ಹಾಗೂ ಪ್ರತ್ಯಯಗಳು ಮುಖ್ಯ. ಜಪಾನೀಸ್ ಭಾಷೆಯಲ್ಲಿ ವ್ಯಾಕರಣ ಸಂಬಂಧ ಖಚಿತವಾಗುವುದು ಅವ್ಯಯಗಳ ಪ್ರಯೋಗದಲ್ಲಿ.


ಪದಪುಂಜಗಳು
ಬಹುತೇಕ ಪದಪುಂಜಗಳು ಕೇಂದ್ರ ರಚನೆಯ ವಿಸ್ತರಣೆಗಳಾಗಿರುತ್ತವೆ. ಇವುಗಳನ್ನು ಅಂತಃಕೇಂದ್ರೀಯ ಪದಪುಂಜಗಳೆಂದು ಕರೆಯಲಾಗಿದೆ.
ಉದಾ: ಕಾರುಗಳು
ಆ ಕಾರುಗಳು
ಆ ದೊಡ್ಡ ಕಾರುಗಳು
ಆ ಎಲ್ಲ ದೊಡ್ಡ ಕಾರುಗಳು
ಆ ಎಲ್ಲ ಗ್ಯಾರೇಜಿನಲ್ಲಿರುವ ದೊಡ್ಡ ಕಾರುಗಳು ಇತ್ಯಾದಿ.
ಯಾವ ಪದಪುಂಜಗಳನ್ನು ಈ ರೀತಿಯಲ್ಲಿ ವಿಶ್ಲೇಷಿಸಲು ಬರುವು ದಿಲ್ಲವೋ ಅವು ಬಾಹ್ಯ ಕೇಂದ್ರೀಯ (ಎಕ್ಸೋಸೆಂಟ್ರಿಕ್) ಪದಪುಂಜಗಳು. ಉದಾ: ಕಾರುಗಳ ಒಳಗೆ.


ಪ್ರಧಾನ ಮತ್ತು ಗೌಣ ರಚನೆಗಳು
ವಾಕ್ಯದಲ್ಲಿ ಬರುವ ಎರಡು ಘಟಕಗಳೂ ಸಮಾನ ಅಂತಸ್ತುಳ್ಳವಾಗಿದ್ದರೆ ಸಾಮಾನ್ಯವಾಗಿ ಇಂಥ ರಚನೆಗಳನ್ನು ಪ್ರಧಾನ ರಚನೆಗಳೆಂದು ಗುರುತಿಸ ಲಾಗುವುದು. ವ್ಯಾಕರಣಿಕವಾಗಿ ಇವು ಒಂದೇ ವರ್ಗಕ್ಕೆ ಸೇರುತ್ತವೆ; ರಚನೆ ಯಲ್ಲಿ ತಮ್ಮ ಸ್ಥಾನವನ್ನು ಅಬಾಧಿತವಾಗಿ ಕಾಯ್ದುಕೊಳ್ಳುತ್ತವೆ. ಉದಾಗೆ: ‘ರಾಮನು ಆಡಲು ಹೋದ ಮತ್ತು ಕೃಷ್ಣ ನೋಡಲು ಹೋದ’. ಈ ವಾಕ್ಯವನ್ನು ಗಮನಿಸಿ. ಇಲ್ಲಿ ‘ರಾಮ’ ಮತ್ತು ‘ಕೃಷ್ಣ’ ಕರ್ತೃ ಪದಗಳೂ, ಈ ಕರ್ತೃಪದಗಳ ಕ್ರಿಯೆಗಳೂ, ಒಂದಕ್ಕೆ ಇನ್ನೊಂದು ಸರಿಸಾಟಿಯಾಗಿವೆ. ಆದುದರಿಂದ ಇದು ಪ್ರಧಾನ ರಚನೆ.
ಗೌಣ ರಚನೆಯಲ್ಲಿ ಒಂದು ಘಟಕ ಪ್ರಧಾನವಾಗಿದ್ದರೆ ಇನ್ನೊಂದು ಘಟಕ ಅದರ ಭಾಗವಾಗಿ ಬರುತ್ತದೆ. ಇಂಥ ರಚನೆಯಲ್ಲಿ ವಾಕ್ಯದ ಎರಡು ಘಟಕಗಳೂ ವ್ಯಾಕರಣಾತ್ಮಕ ಸಮಾನತೆಯನ್ನು ಹೊಂದಿರುವುದಿಲ್ಲ. ಆದುದ ರಿಂದಲೇ ಇವುಗಳನ್ನು ಗೌಣರಚನೆಗಳೆಂದು ಕರೆಯುವುದು.
ಉದಾಗೆ: ಕೃಷ್ಣ ಕರೆದಾಗ ರಾಮ ಆಡಲು ಹೋದ.


ರೂಪಾನ್ವಿತಿ
ವಾಕ್ಯದಲ್ಲಿ ಪದಗಳ ನಡುವೆ ಇರುವ ಸಂಬಂಧದ ಕಾಣಿಕೆಯನ್ನು ಸೂಚಿಸುವಂಥದು ರೂಪಾನ್ವಿತಿ. ವಾಕ್ಯದಲ್ಲಿ ಪ್ರಯೋಗದ ಒಂದು ಪದ ತನಗೆ ಒಗ್ಗುವಂತ ಇನ್ನೊಂದು ಪದವನ್ನು ನಿರೀಕ್ಷಿಸುವಂಥ ಪ್ರವೃತ್ತಿ ರೂಪಾನ್ವಿತಿಯಲ್ಲಿ ಕಂಡು ಬರುತ್ತದೆ. ಉದಾ: The man walks ನಲ್ಲಿರುವ man  ಎಂಬ ಏಕವಚನ ನಾಮಪದ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿರುವುದರಿಂದ ಅದು walks ಎಂಬ ಕ್ರಿಯಾಪದ ಏಕವಚನ ರೂಪವನ್ನೇ ಎದುರು ನೋಡುತ್ತದೆ. ಹಾಗಿಲ್ಲವಾದರೆ ವಾಕ್ಯರಚನೆಯಲ್ಲಿ ವ್ಯಾಕರಣ ದೋಷ ಉಂಟಾಗುತ್ತದೆ. ರೂಪಾನ್ವಿತಿಯ ಉದ್ದೇಶ ಭಾಷೆಯಿಂದ ಭಾಷೆಗೆ ಭಿನ್ನವಾಗಿ ರುವುದನ್ನು ಕಾಣಬಹುದು. ಲ್ಯಾಟಿನ್ ಭಾಷೆಯಲ್ಲಿ ಇದು ‘ಪದಸಂಯೋಗ’ವನ್ನು ನಿರ್ಧರಿಸುವ ಅಂಶವಾಗಿದೆ. ಫ್ರೆಂಚ್ ಭಾಷೆಯಲ್ಲಿ ಪದ ಸಂಬಂಧ ತಿಳಿಸುವ ಯಾವ ಕ್ರಿಯೆಯನ್ನು ರೂಪಾನ್ವಿತಿ ಮಾಡುವುದಿಲ್ಲ.


ವಾಕ್ಯ ವಿಶ್ಲೇಷಣೆ
ವಾಕ್ಯದ ವಿವಿಧ ಘಟಕಗಳನ್ನು ವಿಭಜಿಸಿ, ವರ್ಗೀಕರಿಸಿ, ವಿವರಿಸುವುದೇ ವಾಕ್ಯ ವಿಶ್ಲೇಷಣೆ. ಇದರಲ್ಲಿ ಅನೇಕ ಪ್ರಮುಖ ವಿಧಾನಗಳಿವೆ.


ನಿಕಟತಮಾವಯವಗಳ ವಿಶ್ಲೇಷಣೆ
ವಾಕ್ಯರಚನೆಯನ್ನು ಅನಾವರಣಗೊಳಿಸುವ ಸಾರ್ಥಕ ವಿಧಾನಗಳಲ್ಲಿ ಒಂದಾಗಿ ಇದನ್ನು ಬಳಸಲಾಗುತ್ತಿದೆ. ಲಿಯೋನಾರ್ಡ್ ಬ್ಲೂಮ್‌ಫೀಲ್ಡ್ 1939 ರಲ್ಲಿ ಈ ವಿಧಾನವನ್ನು ಪರಿಚಯಿಸಿದ. ಇದನ್ನು ಜನಪ್ರಿಯಗೊಳಿಸಿದ ಕೀರ್ತಿ ಹ್ಯಾರಿಸ್ ಮತ್ತು ವೆಲ್ಸ್ ಅವರಿಗೆ ಸಲ್ಲಬೇಕು. ಈ ವಿಧಾನದ ಪ್ರಮುಖ ಉದ್ದೇಶ, ವಾಕ್ಯದ ಮೂಲ ಅವಯವಗಳನ್ನು ಮತ್ತು ಅವುಗಳ ಪರಸ್ಪರ ಸಂಬಂಧವನ್ನು ಗುರುತಿಸುವುದು. ಈ ವಿಧಾನವು ವಾಕ್ಯ ರಚನೆಯ ವಿವಿಧ ಸ್ತರಗಳಲ್ಲಿ ಹಂತ ಹಂತವಾಗಿ ಕಾರ್ಯೋನ್ಮುಖವಾಗುತ್ತದೆ. ಪ್ರತಿ ಯೊಂದು ಸ್ತರದಲ್ಲೂ ಒಂದು ರಚನೆಯನ್ನು ಅದರ ಪ್ರಮುಖ ಅವಯವಗಳಾಗಿ ವಿಭಜಿಸುತ್ತಾ ಹೋಗುತ್ತದೆ. ವಿಭಜನೆಯ ಪ್ರಕ್ರಿಯೆ ಸಾಧ್ಯವಾಗದ ಮಟ್ಟದಲ್ಲಿ ಇದು ತನ್ನ ಕಾರ್ಯ ನಿಲ್ಲಿಸುತ್ತದೆ. ಉದಾಗೆ: ‘The boys shouted loudly’ ಎಂಬ ಇಂಗ್ಲಿಶ್‌ನ ವಾಕ್ಯವನ್ನು ನಿಕಟತಮಾವಯವ ವಿಶ್ಲೇಷಣೆಗೆ ಒಳಗುಮಾಡಿ ನೋಡಿ:
ಮೊದಲು ವಾಕ್ಯದ ಎರಡು ಪ್ರಮುಖ ಅವಯವಗಳಾದ The boys  ಮತ್ತು shouted loudly  ಎಂಬುದನ್ನು ಗುರುತಿಸಿಕೊಳ್ಳುವುದಕ್ಕೋಸ್ಕರ ವಾಕ್ಯವನ್ನು ಎರಡು ಭಾಗವಾಗಿ ಒಡೆಯುವುದು. ಆಮೇಲೆ ಈ ಎರಡರಲ್ಲಿ ದೊಡ್ಡ ಅವಯವವಾದ shouted loudly ಎಂಬುದನ್ನು Shouted  ಮತ್ತು loudly ಎಂದು ಮತ್ತೆ ಎರಡು ಭಾಗಗಳಾಗಿ ವಿಭಜಿಸುವುದು. ಹೀಗೆ ಮುಂದುವರಿದು ಪ್ರತಿಯೊಂದು ಅವಯವವನ್ನು ವಿಭಜಿಸುತ್ತ ವಿಭಜಿಸಲಾಗದ ಮಟ್ಟದಲ್ಲಿ ಹೋಗಿ ನಿಲ್ಲುವುದು. ಮೇಲಿನ ವಾಕ್ಯವನ್ನು, The boys  ಮತ್ತು shouted loudly ಎಂದು ವಿಭಜಿಸಿಕೊಂಡ ಮೇಲೆ the boys ಅನ್ನು the+boys ಎಂದೂ,  boys ಅನ್ನು boy+s ಎಂದೂ, ಹಾಗೆಯೇ shouted  loudly ಯನ್ನು shouted+loudly ಎಂದೂ, shouted  ಅನ್ನು shouut+ed  ಎಂದೂ, loudly ಯನ್ನು loud+ly ಎಂದೂ ವಿಭಜಿಸಿ ಆದ ಮೇಲೆ ಈ ವಾಕ್ಯದಲ್ಲಿ ಮತ್ತೆ ವಿಭಜಿಸುವಂಥ ಯಾವ ಅವಯವವೂ ಉಳಿಯುವುದಿಲ್ಲ. ಲಂಬರೇಖೆಗಳಿಂದ, ಆವರಣಗಳಿಂದ, ಪಟ್ಟಿಕಗಳಿಂದ ಹಾಗೂ ರೇಖಾಚಿತ್ರಗಳಿಂದ ನಿಕಟತಮ ಅವಯವಗಳನ್ನು ವಿವರಿಸಿ ತೋರಿಸುವುದು ಸಾಧ್ಯ.


ಆವರಣಗಳು
ಮೇಲೆ ಪ್ರಸ್ತಾಪಿಸಿದ ವಾಕ್ಯದ ನಿಕಟತಮಾವಯವಗಳನ್ನು ಆವರಣಗಳ ಮೂಲಕ ಹೀಗೆ ಸ್ಪಷ್ಟಪಡಿಸಬಹುದು:
1. {The boys} {Shouted loudly}
2. {[The boys]} {[Shouted] [Loudly]}
3. {[The[boy][-S]} {[Shout] [-ed] [loud] [-ly]}


ರೇಖಾಚಿತ್ರಗಳು
ರೇಖಾಚಿತ್ರಗಳಲ್ಲಿ ನಾನಾ ಬಗೆಯನ್ನು ಕಾಣಬಹುದು.



1. ಮೇಲ್ಮೈ ರಹಿತ ಪೆಟ್ಟಿಗೆ ರೇಖಾಚಿತ್ರ
ಇದನ್ನೇ ಹೀಗೂ ರಚಿಸಬಹುದು.


3. ವೃಕ್ಷ ರೇಖಾಚಿತ್ರಗಳು







ಒಂದು ವಾಕ್ಯದ ರಚನೆಯನ್ನು ಹೀಗೆ ಪ್ರಾತಿನಿಧಿಕವಾಗಿ, ನಿಕಟತಮವಾಗಿ ತೋರಿಸುವ ವಿಧಾನ ಬಹಳ ಪ್ರಯೋಜನಕಾರಿ. ಆದರೆ ಎಲ್ಲ ವಾಕ್ಯಗಳನ್ನು ಹೀಗೆ IC ಮೂಲಕ ವಿಶ್ಲೇಷಿಸುವುದು ಕಷ್ಟ. ಕೆಲವು ವೇಳೆ ವಾಕ್ಯಗಳನ್ನು ವಿಭಜಿಸುವುದೇ ಕಠಿಣ ಸಮಸ್ಯೆಯಾಗಬಹುದು. ಉದಾಹರಣೆಗೆ, the three old men ವಾಕ್ಯವನ್ನು the+three old men ಎಂದು ವಿಭಜಿಸುವುದೇ, ಅಥವಾ the three+ old men ಎಂದು ವಿಭಜಿಸುವುದೇ ಎಂಬ ಸಂದಿಗ್ಧತೆ ಕಾಡುತ್ತದೆ. ಹೀಗಾಗಿ ನಿಕಟತಮಾವಯವ ಸೂಚಿಸುವಲ್ಲಿ ಮಾಡಿಕೊಂಡಿರುವ ಈ ವಿಭಜನೆಯ ಕ್ರಮ ಭಾಷೆಯ ವ್ಯಾಕರಣಾತ್ಮಕ ರಚನೆಯನ್ನು ಗ್ರಹಿಸುವ ಮಾರ್ಗದಲ್ಲಿ ಬಹುದೂರ ನಮ್ಮನ್ನು ಕರೆದೊಯ್ಯಲಾರದು. ಹೀಗಾಗಿ ನಿಕಟತಮಾವಯವ ವಿಶ್ಲೇಷಣೆಗಳು, ತಾವು ವಾಕ್ಯದ ಯಾವ ಯಾವ ಅಂಶಗಳನ್ನು ಅಥವಾ ಅವುಗಳ ಪರಸ್ಪರ ಸಂಬಂಧವನ್ನು ಸೂಚಿಸುತ್ತಿವೆ ಎಂಬುದಕ್ಕೆ ಯಾವುದೇ ಸಮರ್ಥನೆಯನ್ನಾಗಲಿ ಆಧಾರವನ್ನಾಗಲಿ ಒದಗಿಸುವುದಿಲ್ಲ. ಇದರಿಂದಾಗಿ ಈ ಕೆಲಸವನ್ನು ಯಶಸ್ವಿಯಾಗಿ ಮಾಡುವಂಥ ಪರ್ಯಾಯ ವಿಧಾನಗಳನ್ನು ಕಂಡುಕೊಳ್ಳಬೇಕಾಯಿತು.


ಪದಪುಂಜ ರಚನೆ
ಒಂದು ವಾಕ್ಯವನ್ನು ವಿಭಜಿಸುತ್ತ ಹೋದ ಹಾಗೆ ದೊರೆಯುತ್ತ ಹೋಗುವ ಅವಯವಗಳನ್ನು ಹೆಸರಿಸುವ ವಿಧಾನವನ್ನು ಪದಪುಂಜ ವಿಶ್ಲೇಷಣೆ ಯಲ್ಲಿ ಕಾಣಬಹುದು. ಕರ್ತೃಪದ ಹಾಗೂ ಕ್ರಿಯಾಪದದ ಆಧಾರದ ಮೇಲೆ ಯಾವುದೇ ವಾಕ್ಯವನ್ನು ಸುಲಭವಾಗಿ ವಿಭಜಿಸಬಹುದು. ಆದರೆ ಪದಪುಂಜ ವಿಶ್ಲೇಷಣೆ ಹೀಗೆ ಮಾಡಲು ತನ್ನದೇ ಆದ ಕ್ರಮ ಮತ್ತು ಪರಿಭಾಷೆಯನ್ನು ಸಂಕೇತಾಕ್ಷರಗಳನ್ನು ರೂಪಿಸಿಕೊಂಡಿದೆ. ಉದಾಹರಣೆಯಾಗಿ ಇಂಗ್ಲಿಶ್‌ನ ‘The girl chased the dog’ ವಾಕ್ಯವನ್ನು ಪರಿಗಣಿಸಿ. ಇಡೀ ವಾಕ್ಯಕ್ಕೆ (s) ಎಂದೂ, ಅದರ ಮೊದಲ ವಿಭಜನೆಯಿಂದ ದೊರೆಯುವ The girl  ಮತ್ತು chased the dog ಗಳನ್ನು ಕ್ರಮವಾಗಿ ನಾಮಪುಂಜ (NP) ಮತ್ತು (VP) ಕ್ರಿಯಾಪುಂಜ ಎಂದೂ ಸಂಕೇತಿಸಿಕೊಳ್ಳಲಾಗಿದೆ. ಈ ವಾಕ್ಯವನ್ನು ಮುಂದುವರಿದು ಎರಡನೆಯ ಬಾರಿಗೆ ವಿಭಜಿಸಿದಾಗ chased  ಎಂಬ ಕ್ರಿಯಾಪದ (V) ಮತ್ತು the dog ಎಂಬ ಇನ್ನೊಂದು ನಾಮಪುಂಜ (NP) ದೊರೆಯುತ್ತದೆ. ಮತ್ತೆ ವಿಭಜನೆಯನ್ನು ಮುಂದುವರಿಸಿದಾಗ the+girl ಮತ್ತು the+dog ಎಂಬ ನಿರ್ಧಾರಕ (DET) ಮತ್ತು ನಾಮಪದ ಸಂಯೋಜನ ರೂಪಗಳ ಜೋಡಣೆ ತಿಳಿದುಬರುತ್ತದೆ. ಇದನ್ನೇ ವಾಕ್ಯದ ಪದಪುಂಜ ರಚನೆ ಎನ್ನುವುದು. ಇದನ್ನು ರೇಖಾಚಿತ್ರದ ಮೂಲಕ ಹೀಗೆ ಸೂಚಿಸಬಹುದು:


- ಹೀಗೆ ವಾಕ್ಯದ ಪದಪುಂಜ ರಚನೆಯನ್ನು ಸೂಚಿಸುವ ಚಿಹ್ನೆ ಅಥವಾ ಸಂಕೇತಗಳಿಗೆ ‘ಪದಪುಂಜ ವಿನ್ಯಾಸಕಗಳು’ ಎಂದು ಕರೆಯಲಾಗಿದೆ.


ರೇಖಾಚಿತ್ರ ರಚನೆ
ವಾಕ್ಯದ ವ್ಯಾಕರಣ ಘಟಕಗಳನ್ನು ಸೂಚಿಸಲು ಲಂಬರೇಖೆ ಅಥವಾ ಓರೆ ರೇಖೆಗಳನ್ನು ಬಳಸುವ ವಿಧಾನವನ್ನು ಬಳಕೆಗೆ ತಂದವರು ಅಮೆರಿಕನ್ನರು. 19 ನೇ ಶತಮಾನದಲ್ಲಿ ಇಂಗ್ಲಿಷ್ ಭಾಷಾ ಪಠ್ಯವನ್ನು ಬರೆದ ರೀಡ್ ಮತ್ತು ಕೆಲ್ಲಾಗ್ ರೇಖೆಗಳಲ್ಲಿ ಉದ್ದನೆಯ ಲಂಬರೇಖೆ ಕರ್ತೃ ಮತ್ತು ಕ್ರಿಯಾಪದಗಳ ಎಲ್ಲೆಯನ್ನು ಸೂಚಿಸುತ್ತದೆ; ಹ್ರಸ್ವ ಲಂಬರೇಖೆ ಕ್ರಿಯಾಪದ ಮತ್ತು ಕರ್ಮಪದವನ್ನು ವಿಭಜಿಸುತ್ತದೆ; ಹ್ರಸ್ವ ಓರೆ ರೇಖೆ ಪೂರಕವನ್ನು ಗುರುತಿಸುತ್ತದೆ. ಉಳಿದೆಲ್ಲ ಘಟಕಗಳನ್ನು ವಾಕ್ಯದ ಮುಖ್ಯ ಭಾಗಗಳ ಪಕ್ಕದಲ್ಲಿ ನಮೂದಿಸಿ ತೋರಿಸಲಾಗುತ್ತದೆ. ಉದಾಗೆ, ಇಂಗ್ಲಿಷ್‌ನ ‘The old man called me a crazy inventor’ವಾಕ್ಯವನ್ನು ರೇಖಾಚಿತ್ರದಲ್ಲಿ ಅಳವಡಿಸಲಾಗಿರುವ ಬಗೆಯನ್ನು ಗಮನಿಸಿ:


ಈ ವಿಧಾನ ಪದಗಳ ನಡುವಣ ಸಂಬಂಧವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದರೆ ಪದಾನುಕ್ರಮಣಿಕೆಯಲ್ಲಾಗುವ ವ್ಯತ್ಯಯಗಳನ್ನು ಇದು ಪ್ರತಿನಿಧಿಸಿ ತೋರಿಸಲಾರದು. ಏಕೆಂದರೆ,  I turned off the light ಮತ್ತು I turned the light off ಎಂಬ ಇಂಗ್ಲಿಷ್‌ನ ಈ ಎರಡೂ ವಾಕ್ಯಗಳಿಗೂ ಎಳೆಯಲು ಸಾಧ್ಯವಾಗುವಂಥದು ಒಂದೇ ರೇಖಾಚಿತ್ರ.


ಪದಪುಂಜ ರಚನಾ ನಿಯಮಗಳು
ಪದಪುಂಜ ರಚನಾ ನಿಯಮಗಳು ವಾಕ್ಯ ರಚನೆಯಯನ್ನು ವಿಶ್ಲೇಷಿಸುತ್ತವೆ. ಇವು ವಾಕ್ಯ (S)ಎಂಬ ಸಂಕೇತದಿಂದ ಪ್ರಾರಂಭವಾಗಿ ರಚನೆಗೆ ಅನುಗುಣವಾಗಿ ವಿವರಗಳನ್ನು ಒದಗಿಸುತ್ತ ಕಡೆಗೆ ಆಕೃತಿಮಾಗಳನ್ನು ಸೂಚಿಸುವಲ್ಲಿ ನಿಲ್ಲುತ್ತವೆ. ಆಮೇಲೆ ಈ ಆಕೃತಿಮಾಗಳನ್ನು, ಅವುಗಳಿಗೆ ಪದಪುಂಜ ವಿನ್ಯಾಸಕಗಳನ್ನು ಕೊಡಲು ಅನುಕೂಲವಾಗುವಂತೆ ಸಂಕೇತಿಸಿಕೊಳ್ಳಬೇಕಾಗುತ್ತದೆ. ಪದಪುಂಜದ ರೂಪಾಂತರಣ ಶ್ರೇಣಿ, ವಾಕ್ಯದಿಂದ ಆಕೃತಿಮಾಗಳವರೆಗೆ ಸಾಗುತ್ತದೆ. ಆಗ ಈ ಅಕೃತಿಮಾಗಳೇ ಆ ಪದಪುಂಜ ವಿನ್ಯಾಸಕಗಳಾಗಿ ಗೋಚರಿಸುತ್ತವೆ. ಹೀಗೆ, ಪದಪುಂಜ ನಿಯಮಗಳು ನಿರ್ದೇಶಿಸುವ ವಿನ್ಯಾಸಕಗಳೇ ಪದಪುಂಜ ವಿನ್ಯಾಸಕಗಳು. ಇವುಗಳಿಗೆ ಸ್ವಯಂಚಾಲನೆ ಯುಂಟು.
‘The girl chased the dog’ ಈ ವಾಕ್ಯಕ್ಕೆ ಸಲ್ಲುವ ಪದಪುಂಜ ನಿಯಮಗಳಿವು: ವಾಕ್ಯ –>ನಾಮಪುಂಜ + ಕ್ರಿಯಾಪುಂಜ
ಕ್ರಿಯಾಪುಂಜ–>  ಕ್ರಿಯಾಪದ + ನಾಮಪುಂಜ
ನಾಮಪುಂಜ –> ನಿರ್ಧಾರಕ + ನಾಮಪದ
ಕ್ರಿಯಾಪದ –>    chased
ನಿರ್ಧಾರಕ –>    the
ನಾಮಪದ –>    girl, dog.
ಮೊದಲನೆಯ ನಿಯಮದ ಪ್ರಕಾರ ವಾಕ್ಯವು ನಾಮಪುಂಜ ಮತ್ತು ಕ್ರಿಯಾ ಪುಂಜಗಳನ್ನೊಳಗೊಂಡಿರುವುದು ತಿಳಿಯುತ್ತದೆ. ಎರಡನೆಯದರಲ್ಲಿ ಕ್ರಿಯಾ ಪುಂಜವು ಕ್ರಿಯಾಪದ ಮತ್ತು ನಾಮಪುಂಜಗಳನ್ನು ಹೊಂದಿರುವುದು ಗೊತ್ತಾ ಗುತ್ತದೆ. ಮೂರನೆಯ ನಿಯಮದಲ್ಲಿ ನಾಮಪುಂಜವು ನಿರ್ಧಾರಕ ಮತ್ತು ನಾಮಪದವನ್ನು ಪಡೆದಿರುವುದು ಗೋಚರಿಸುತ್ತದೆ. ಆಮೇಲೆ, ವಾಕ್ಯದಲ್ಲಿರುವ ನಾಮಪದಗಳು. ಕ್ರಿಯಾಪದ ಹಾಗೂ ನಿರ್ಧಾರಕಗಳು ಯಾವುವು ಎಂಬುದು ಸ್ಪಷ್ಟವಾಗುತ್ತದೆ. ಹೀಗೆ,  ಪದಪುಂಜ ರಚನೆಯನ್ನು ರೂಪಿಸುವ ವ್ಯಾಕರಣಗಳನ್ನು ಪದಪುಂಜ ರಚನಾ ವ್ಯಾಕರಣಗಳು ಎಂದು ಕರೆಯಲಾಗಿದೆ.
ಈ ನಿಯಮಗಳನ್ನು ಗಮನಿಸಿದಾಗ ವ್ಯಾಕರಣ ವಿಶ್ಲೇಷಣೆ ಏಕವಾಕ್ಯ ವಿಶ್ಲೇಷಣೆಯ ಹಂತದಿಂದ ಎಷ್ಟು ಎತ್ತರಕ್ಕೆ ಬೆಳದಿದೆ ಎಂಬುದು ಸ್ಪಷ್ಟವಾಗುತ್ತದೆ. ಹೀಗೆ, ವ್ಯಾಕರಣ ನಿಯಮಗಳನ್ನು ಸಾರ್ವತ್ರಿಕಗೊಳಿಸಿ ವಾಕ್ಯ ವಿಶ್ಲೇಷಣೆಯನ್ನು ಸಾಮಾನ್ಯೀಕರಿಸಬೇಕೆಂಬ ಉತ್ಸಾಹ ಇಪ್ಪತ್ತನೆಯ ಶತಮಾನದ ಭಾಷಾ ವಿಜ್ಞಾನಿಗಳಲ್ಲಿ ಕಂಡು ಬರುತ್ತದೆ. 1957 ರಲ್ಲಿ ನೋಮ್ ಚೋಮ್‌ಸ್ಕಿ, ಇಂಥ ಪ್ರಯತ್ನಕ್ಕೆ ತನ್ನ ಸಿಂಟಾಕ್ಟಿಕ್ ಸ್ಟ್ರಕ್ಷರ್ ಕೃತಿಯಲ್ಲಿ ಇಂಬುಕೊಟ್ಟ.
ಮೇಲಿನ ಉದಾಹೃತ ವಾಕ್ಯದಲ್ಲಿ ‘the girl’ ನಾಮಪದವನ್ನು ‘ಮೊದಲ ನಾಮಪುಂಜ’ವಾಗಿಯೂ, ‘the dog’ ನಾಮಪದವನ್ನು ಎರಡನೆಯ ನಾಮಪುಂಜವಾಗಿಯೂ ಕಂಡಿದ್ದೇವೆ. ಇದನ್ನು ತಿರುವು ಮುರುವಾಗಿರಿಸಿದರೆ the dog chased the girl ಎಂಬ ವಿಭಿನ್ನ ವಾಕ್ಯ ಸಿದ್ದಿಸುತ್ತದೆ. ಹೀಗೆಯೇ, ಈ ನಿಯಮಗಳಿಗೆ ಇನ್ನಷ್ಟು ಪದಗಳನ್ನು ಸೇರಿಸುತ್ತ ಹೋಗುವುದರಿಂದ ಹೊಸ ಹೊಸ ವಾಕ್ಯಗಳನ್ನು ಉತ್ಪಾದಿಸುತ್ತ ಹೋಗಬಹುದು:
ಕ್ರಿಯಾಪದ –> chased, saw, Liked
ನಿರ್ಧಾರಕ –> the, a
ನಾಮಪದ –> girl, man, horse
The girl chased the horse
The man saw the girl
The horse saw the man ಇತ್ಯಾದಿ.
ಮೇಲಿನ ನಿಯಮಗಳ ಗುಂಪಿಗೆ ‘went’ ಕ್ರಿಯಾಪದವನ್ನು ಸೇರಿಸಿದರೆ ದೋಷಯುಕ್ತ ವಾಕ್ಯ ಸೃಷ್ಟಿಗೆ ದಾರಿಮಾಡಿಕೊಟ್ಟಂತಾಗುತ್ತದೆ. ಆಗ The girl went the man ವಾಕ್ಯ ಘಟಿಸಬಹುದು. ಉತ್ಪಾದನಾ ಮೂಲ ವ್ಯಾಕರಣ ದಲ್ಲಿ ಇಂಥ ದೋಷಗಳು ಘಟಿಸದಂತೆ ಎಚ್ಚರವಹಿಸಬೇಕು. ದೋಷಮುಕ್ತ ವಾಕ್ಯಗಳನ್ನು ಉತ್ಪಾದಿಸುವಂಥ ನಿಯಮಗಳನ್ನು ರೂಪಿಸುವ ಪ್ರಯತ್ನಗಳು 1957 ರಿಂದೀಚೆಗೆ ಹೆಚ್ಚಿರುವುದನ್ನು ವಾಕ್ಯರಚನಾಶಾಸ್ತ್ರ ಇತಿಹಾಸದಲ್ಲಿ ದರ್ಶಿಸಬಹುದು.


ರೂಪಾಂತರಣ ಉತ್ಪಾದನಾ ವಿಶ್ಲೇಷಣೆ
ಒಂದೇ ಅರ್ಥವುಳ್ಳ ಆದರೆ ಬೇರೆ ಬೇರೆ ವ್ಯಾಕರಣಿಕ ರೂಪವುಳ್ಳ ವಾಕ್ಯಗಳ ನಡುವಣ ಸಂಬಂಧವನ್ನು ತೋರ‌್ಪಡಿಸುವಂಥ ಸಾಮರ್ಥ್ಯವನ್ನು ವ್ಯಾಕರಣಕ್ಕೆ ರೂಪಾಂತರಣ ನಿಯಮಗಳು ಒದಗಿಸಿವೆ. ಉದಾಗೆ, ಕರ್ತರಿ ಮತ್ತು ಕರ್ಮಣಿ ವಾಕ್ಯಗಳ ನಡುವಣ ಸಂಬಂಧವನ್ನು ಈ ನಿಯಮಗಳ ಮೂಲಕ ಹೀಗೆ ವಿವರಿಸಬಹುದು:
The horse chased the man (ಕರ್ತರಿ)
The man was chased by the horse (ಕರ್ಮಣಿ)
ಈ ಎರಡು ವಾಕ್ಯಗಳ ಸಂಬಂಧವನ್ನು ತೋರಿಸಲು ಬೇಕಾಗುವ ಸೂತ್ರ ಇದು:
NP1+V+NP2–>NP2+Aux+Ven+by+NP1
ಇದರಲ್ಲಿ ಮೊದಲನೆಯ ವಾಕ್ಯವನ್ನು ಎರಡನೆಯ ವಾಕ್ಯವಾಗಿ ಬದಲಾಯಿಸಿ ದಾಗ ಮಾಡಿಕೊಳ್ಳಲಾದ ಬದಲಾವಣೆಗಳ ಮಾರ್ಗ ಸೂಚಿ ಇದೆ.
ಈ ಸೂತ್ರದಲ್ಲಿ ನಾಲ್ಕು ಬಗೆಯ ನಿರ್ವಹಣೆ ಇದೆ:
1. ಕರ್ತರಿ ವಾಕ್ಯದಲ್ಲಿರುವ ಮೊದಲ ನಾಮಪುಂಜ (NP1) ವನ್ನು ಕರ್ಮಣಿ ವಾಕ್ಯದ ಅಂತ್ಯದಲ್ಲಿಡಲಾಗಿದೆ.
2. ಕರ್ತರಿ ವಾಕ್ಯದಲ್ಲಿರುವ ಎರಡನೇ ನಾಮಪುಂಜ (NP2) ವನ್ನು ಕರ್ಮಣಿ ವಾಕ್ಯದ ಪ್ರಾರಂಭದಲ್ಲಿಡಲಾಗಿದೆ.
3. ಭೂತಕಾಲ ಕ್ರಿಯಾಪದ (V) ವನ್ನು ಕೃದಂತವಾಗಿ (Ven) ಪರಿವರ್ತಿಸಲಾಗಿದೆ; ಮತ್ತು ಇದರ ಮುಂದೆ ಸಹಾಯಕ ಕ್ರಿಯಾಪದವನ್ನು (Aux) ಸೇರಿಸಲಾಗಿದೆ.
4. by ಎಂಬ ಕೃದಂತವನ್ನು ಕ್ರಿಯಾಪದ ಮತ್ತು ಅಂತಿಮ ನಾಮ ಪುಂಜದ ನಡುವೆ ಸೇರಿಸಲಾಗಿದೆ.
ಈ ನಿಯಮಗಳನ್ನನುಸರಿಸಿ ಇಂಗ್ಲಿಶ್‌ನ ಎಲ್ಲ ನಿಯತ ಕರ್ತರಿ-ಕರ್ಮಣಿ ವಾಕ್ಯಗಳನ್ನು ಉತ್ಪಾದಿಸಬಹುದು. ಉತ್ಪಾದನಾ ವ್ಯಾಕರಣದ ಅನಂತರದ ಬೆಳವಣಿಗೆಯಲ್ಲಿ ಅನೇಕ ಬಗೆಯ ರೂಪಾಂತರಣದ ನಿಯಮಗಳು ಬೆಳಕಿಗೆ ಬಂದಿವೆ. ಅದೇ ಕಾಲಕ್ಕೆ ಅವುಗಳ ಬಗೆಗೆ ಭಿನ್ನಾಭಿಪ್ರಾಯಗಳೂ ವ್ಯಕ್ತವಾಗಿವೆ. ಇತ್ತೀಚಿನ ಉತ್ಪಾದನಾ ವ್ಯಾಕರಣಗಳು ಸಿಂಟ್ಯಾಕ್ಟಿಕ್ ಸ್ಟ್ರಕ್ಷರ್ ನಲ್ಲಿ ಪ್ರಸ್ತಾಪಿಸಿರುವ ಮಾದರಿಗಳಿಗಿಂತ ಭಿನ್ನವಾಗಿಯೂ ಗೋಚರಿಸುತ್ತಿವೆ.
ಉತ್ಪಾದನಾ ವ್ಯಾಕರಣದ ನಿಯಮಗಳನ್ನು ಸಾಂಪ್ರದಾಯಿಕ ವ್ಯಾಕರಣಗಳ ನಿರ್ದೇಶಾತ್ಮಕ ನಿಯಮಗಳೊಡನೆ ಸಮೀಕರಿಸುವಂತಿಲ್ಲ. ನಿರ್ದೇಶಾತ್ಮಕ ನಿಯಮಗಳು ಬಳಕೆಯ ವಿಧಿಗಳನ್ನು ಹೇಳುತ್ತವೆ; ತಿದ್ದುಪಡಿ ಸೂಚಿಸುತ್ತವೆ. ಆದರೆ ಉತ್ಪಾದನಾ ನಿಯಮಗಳು ಇಂಥ ಯಾವ ಸಾಹಸಕ್ಕೂ ಕೈ ಹಾಕುವುದಿಲ್ಲ. ಬದಲಾಗಿ ಅವು ಬಳಕೆಯಲ್ಲಿರುವ ವ್ಯಾಕರಣಿಕ ನಮೂನೆಗಳ ಯಥಾವತ್ತಾದ ರೂಪಗಳನ್ನು ಪರಿಚಯಿಸುತ್ತವೆ.


ಉತ್ಪಾದಕ ಸಂಕೇತಗಳು
ಉತ್ಪಾದನಾ ನಿಯಮಗಳನ್ನು ಮಿತವ್ಯಯವಾಗಿ ನಿರೂಪಿಸಲು ಸಾಧ್ಯ ವಾಗುವಂತೆ ಉತ್ಪಾದಕ ವ್ಯಾಕರಣವು ಕೆಲವು ವಿಶೇಷ ಸಂಕೇತಗಳನ್ನು ರೂಪಿಸಿದೆ. ಆವರಣಗಳು ಈ ನಿಟ್ಟಿನಲ್ಲಿ ಗಮನಿಸಬೇಕಾದಂತವು. (  ), [ ],{ }. ಈ ಆವರಣಗಳಿಗೆ ವಿವಿಧ ಅರ್ಥವನ್ನು ಕಲ್ಪಿಸಲಾಗಿದೆ. ಉದಾಗೆ, ವೃತ್ತಾವರಣಗಳು (  ), ವಾಕ್ಯದಲ್ಲಿರುವ ಐಚ್ಚಿಕ ವ್ಯಾಕರಣಾಂಶವನ್ನು ಒಳಗೊಳ್ಳುತ್ತವೆ. ಆದರೆ, ಈ ವೃತ್ತಾವರಣದ ಅಂಶವನ್ನು ಬಿಟ್ಟರೂ ವಾಕ್ಯ ವ್ಯಾಕರಣ ಬದ್ಧವಾಗಿಯೇ ಇರುತ್ತದೆ.
ನಾಮಪುಂಜ –> ನಿರ್ಧಾರಕ (ನಾಮ ವಿಶೇಷಣ) ನಾಮಪದ.
ಅಂದರೆ, ಈ ನಿಯಮದಲ್ಲಿ ನಾಮಪುಂಜವು ನಿರ್ಧಾರಕ ಅಥವಾ ನಾಮ ವಿಶೇಷಣ ಮತ್ತು ನಾಮಪದವನ್ನು ಒಳಗೊಂಡಿದೆ ಎಂದರ್ಥ. ಇದನ್ನೇ ವ್ಯಾಕರಣದಲ್ಲಿ ಎರಡು ಬೇರೆ ಬೇರೆ ನಿಯಮಗಳಿಂದ ತೋರಿಸಬಹುದು.
1. ನಾಮಪುಂಜ –> ನಿರ್ಧಾರಕ + ನಾಮಪದ
2. ನಾಮಪುಂಜ –> ನಿರ್ಧಾರಕ + ವಿಶೇಷಣ + ನಾಮಪದ
ಈ ಎರಡು ನಿಯಮಗಳನ್ನು ವೃತ್ತಾವರಣ ಸಂಕೇತ ಬಳಸಿಕೊಳ್ಳುವುದರ ಮೂಲಕ ಒಂದೇ ನಿಯಮದಲ್ಲಿ ರೂಪಿಸಿ ಮಿತವ್ಯಯ ಸಾಧಿಸಬಹುದು.
ವಾಕ್ಯ ರಚನೆಯಲ್ಲಿರುವ ಅರ್ಥ ಸಂದಿಗ್ಧತೆಯನ್ನು ನಿವಾರಿಸುವಲ್ಲಿ ಚೋಮ್‌ಸ್ಕಿಯ ಆಳರಚನೆ ಮತ್ತು ಮೇಲ್ಮೆ ರಚನೆ ಕಲ್ಪನೆಗಳು ತುಂಬ ಪರಿಣಾಮಕಾರಿ ಕೆಲಸ ಮಾಡಿವೆ. ಉದಾಹರಣೆಗೆ, ‘Flying planes can be dangerous’ ಎಂಬ ವಾಕ್ಯದ ಮೇಲ್ಮೈ ರಚನೆಯಿಂದ planes which fly can be dangerous’ ಮತ್ತು ‘To fly planes can be dangerous’ ಎಂಬ ಎರಡು ಆಳಸ್ತರದ ವಾಕ್ಯಗಳನ್ನು ರೂಪಿಸಬಹುದು. ಇಂಥ ರಚನೆಗಳ ವಿವರಣೆ ಕಳೆದ ಹಲವಾರು ವರ್ಷಗಳಿಂದ ವಾಕ್ಯ ಉತ್ಪಾದನಾ ಸಿದ್ಧಾಂತದಲ್ಲಿ ಕ್ರಾಂತಿಕಾರಕ ಮಾರ್ಪಾಡುಗಳನ್ನು ತರುತ್ತಿದೆ. ಆದರೂ, ಈ ರಚನೆಗಳ ಮೂಲ ಆಶಯಕ್ಕೆ ಭಾಷಾವಿಜ್ಞಾನದಲ್ಲಿ ಸಾಕಷ್ಟು ಮನ್ನಣೆ ಇದೆ.
ಒಟ್ಟಿನಲ್ಲಿ, ವ್ಯಾಕರಣ, ಪರಂಪರೆಯ ಗೊಡ್ಡು ನಿಯಮಗಳನ್ನು ಹೇರುವಂಥ ಶುಷ್ಕ ವಿಧಾನವೂ ಅಲ್ಲ; ಭಾಷಾ ವಿಜ್ಞಾನದ ಕ್ರಾಂತಿಕಾರಿ ವಿಚಾರಗಳನ್ನೆಲ್ಲ ಮೈಗೂಡಿಸಿಕೊಂಡ ಭಾಷಾಧ್ಯಯನ ಪ್ರಕಾರವೂ ಅಲ್ಲ. ಇವೆರಡೂ ಕಕ್ಷೆಗಳ ನಡುವೆ ನಿರಂತರವಾಗಿ ಭಾಷಾ ರಚನೆಯ ಬೆನ್ನು ಹತ್ತಿ ಅದರ ಪದರ ಪದರಗಳನ್ನು ಆಕೃತಿಮಾತ್ಮಕ ಮತ್ತು ವಾಕ್ಯ ವಿಶ್ಲೇಷಕ ನೆಲೆಯಲ್ಲಿ ಅನಾವರಣಗೊಳಿಸಲು ಕ್ರಿಯಾಶೀಲವಾಗಿರುವಂಥದು.
blogger
delicious
digg
facebook
reddit
stumble
twitter
print
email
ಪುಸ್ತಕ: ಕನ್ನಡ ವಿಶ್ವವಿದ್ಯಾಲಯ ವಿಶ್ವಕೋಶ ೧: ಭಾಷೆ
ಲೇಖಕರು: ಸೋಮಶೇಖರ ಗೌಡ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಕೆ.ವಿ. ನಾರಾಯಣ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ