ಶನಿವಾರ, ಜೂನ್ 27, 2015

ಹೈದರಾಬಾದ್ ಕರ್ನಾಟಕ ವಿಮೋಚನಾ : ಹೋರಾಟ ಕೆಲವು ಟಿಪ್ಪಣಿಗಳು

ಹೈದರಾಬಾದ್ ಕರ್ನಾಟಕ ವಿಮೋಚನಾ : ಹೋರಾಟ ಕೆಲವು ಟಿಪ್ಪಣಿಗಳು*

[* ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗವು 2006ರಲ್ಲಿ ಪ್ರಕಟಿಸಿದ ‘‘ಹೈದ್ರಾಬಾದ್ ಕರ್ನಾಟಕದಲ್ಲಿ ರಾಜಕೀಯ ಚಳವಳಿಗಳು 1946-2000’’ ಎಂಬ ಕೃತಿಯಿಂದ ಈ ಲೇಖನವನ್ನು ಆಯ್ದುಕೊಳ್ಳಲಾಗಿದೆ.ೊಪ್ರಸ್ತುತ ಲೇಖನವನ್ನು ಬಳಸಿಕೊಳ್ಳಲು ಅನುವು ಮಾಡಿದ ಡಾ.ಬಿ.ಸಿ. ಮಹಾಬಲೇಶ್ವರಪ್ಪ ಅವರಿಗೆ ಕೃತಜ್ಞತೆಗಳು. -ಸಂ.]
ಹೈದರಾಬಾದ್ ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿ ವೈವಿಧ್ಯಮಯ ವಾಗಿದ್ದು, ಸಂಶೋಧಕರಿಗೆ ಒಂದು ಚಿನ್ನದ ಗಣಿಯಾಗಿದೆ. ಈ ಭಾಗದ ಸನ್ನತಿ, ಗುರುಸಣಗಿ, ಹುಣಸಗಿ, ಮಸ್ಕಿ, ಕೊಪ್ಪಳ, ಕಾಳಗಿ, ನಾಗಾವಿ, ಅರಳನೂರು, ಸೇಡಂ ಪ್ರದೇಶಗಳು ಶಿಲಾಯುಗದ ಕುರುಹುಗಳಾಗಿವೆ. ಮೌರ್ಯರ ಕಾಲಕ್ಕೆ ಇವೆಲ್ಲವುಗಳು ಬೌದ್ಧ ಕೇಂದ್ರಗಳಾಗಿ ಕಂಗೊಳಿಸಿದವು. ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ವಚನಕಾರರು, ತತ್ವಪದಕಾರರು, ಸೂಫಿಸಂತರು, ವಿಜಯನಗರ, ಬಹಮನಿ ಮತ್ತು ನಿಜಾಮರು ಹೈದ್ರಾಬಾದ್ ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯ ಬೆಳವಣಿಗೆಯ ಪರಂಪರೆಗೆ ಕೊಡುಗೆ ಸಲ್ಲಿಸಿದ್ದಾರೆ. ಕೃಷ್ಣಾ, ಭೀಮಾ, ಕಾಗಿನ, ಕಾರಂಜಾ, ಬೆಣ್ಣೆತೊರಾ ಮುಂತಾದ ನದಿಗಳು ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳು ಇಲ್ಲಿನ ಇತಿಹಾಸವನ್ನು ಶ್ರೀಮಂತಗೊಳಿಸಿವೆ. ಗುಲಬರ್ಗಾದ ಏಳು ಗುಮ್ಮಟಗಳ ಕೋಟೆ, ನಾಗಾವಿಯ ವಿಶ್ವವಿದ್ಯಾಲಯ, ಬೀದರಿನ ಮದರಸಾ, ಮುದಗಲ್ ಮತ್ತು ರಾಯಚೂರಿನ ಕೋಟೆ ಕೊತ್ತಲಗಳು, ಹಂಪಿಯ ಸ್ಮಾರಕಗಳು, ದಕ್ಷಿಣ ಕಾಶಿಯೆಂದು ಪ್ರಸಿದ್ಧವಾಗಿರುವ ಹಳೆಯ ದೇವಾಲಯಗಳು ಹೈದರಾಬಾದ್ ಕರ್ನಾಟಕ ಧರ್ಮ, ಕಲೆ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಅಲ್ಲದೇ, ನೃಪತುಂಗನ ಆಸ್ಥಾನಕವಿ ಶ್ರೀವಿಜಯನ ‘ಕವಿರಾಜಮಾರ್ಗ’, ಭೀಮಕವಿಯ ‘ಬಸವಪುರಾಣ’, ಆರನೇ ವಿಕ್ರಮಾದಿತ್ಯನ ಕಾಲದ ವಿಜ್ಞಾನೇಶ್ವರನು ರಚಿಸಿತ ‘ಮಿತಾಕ್ಷರ’(ಹಿಂದೂ ಉತ್ಕೃಷ್ಟ ಕಾನೂನು ಗ್ರಂಥ), ಮಹಾವೀರಾಚಾರ್ಯರ ‘ಗಣಿತ ಶಾಸ್ತ್ರ’, ಆದಿಲ್‌ಶಾಹಿ ಕಾಲದ ರಫಿಉದ್ದೀನ್ ಸಿರಾಜ್ ರಚಿಸಿದ ‘ತಝರೆಂತುಲ್ ಮುಲಕ್’ ಎನ್ನುವ ಪರ್ಶಿಯನ್ ಕೃತಿ ಇತ್ಯಾದಿ ಗ್ರಂಥಗಳು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸಾಹಿತ್ಯ, ವಿಜ್ಞಾನ ಮತ್ತು ಇತಿಹಾಸದ ಆಕರಗಳಾಗಿವೆ. ಬೌದ್ಧ, ಜೈನ, ವೈಷ್ಣವ, ವೀರಶೈವ ಮತ್ತು ಇಸ್ಲಾಂ ಧರ್ಮಗಳ ಸಂಗಮ ಹೈದ್ರಾಬಾದ್ ಕರ್ನಾಟಕ ಪ್ರದೇಶವಾಗಿದೆ. ಇಲ್ಲಿನ ಸಿರಿ ‘ಬಿದರಿಕಲೆ’ ಮತ್ತು ಹನ್ನೆರಡನೇ ಶತಮಾನದಲ್ಲಿ ಸಮಾಜೋ-ಧಾರ್ಮಿಕ ಕ್ರಾಂತಿಗೆ ಭಕ್ತಿಭಂಡಾರಿ ಬಸವಣ್ಣ, ಅಲ್ಲಮಪ್ರಭು ಅಧ್ಯಕ್ಷತೆಯಲ್ಲಿ ಅನುಭವಮಂಟಪವನ್ನು ಸ್ಥಾಪಿಸಿ, ಇಡೀ ಸಾಮಾನವ ಕುಲವನ್ನು ಅಂತಃಕರುಣೆಯಿಂದ ಕೂಡಿದ ಕಾಯಕ ನಿಷ್ಠೆಯನು ಮೆರೆಯುವ ದಾಸೋಹದ ಪ್ರಭಾವಕ್ಕೆ ತಂದು ವಿಶ್ವ ಸಂಸ್ಕೃತಿಯ ವಿಕಾಸದಲ್ಲಿ ಹೊಸಹೊಳಪು ನೀಡಿದ್ದು ವಿಶೇಷ. ಹೈದ್ರಾಬಾದ್ ಕರ್ನಾಟಕ ಪ್ರದೇಶವು ದಾಸ ಸಾಹಿತ್ಯದ ಮತ್ತು ಸೂಫಿಧರ್ಮದ ಕಣಜವಾಗಿದೆ. ಇದೇ ರೀತಿ ಕನ್ನಡ, ಸಂಸ್ಕೃತ ಸಾಹಿತ್ಯದ ಮೇರುಕೃತಿಗಳಿಗೂ ಸ್ಫೂರ್ತಿದಾಣ ಹೈದ್ರಾಬಾದ್ ಕರ್ನಾಟಕ ಪ್ರದೇಶ, ಪಂಪ, ಪೊನ್ನ, ಶಿವಕೋಟ್ಯಾಚಾರ್ಯ, ಲಕ್ಷ್ಮೀಶ, ದೇವರ ದಾಸಿಮಯ್ಯ, ವಿಜಯದಾಸರು ತಮ್ಮ ಏರು ಕೃತಿಗಳನ್ನು ನೀಡಿದ್ದು ಇದೇ ಪರಿಸರದಲ್ಲಿ. ಕಾಲಪ್ರಪಂಚದಲ್ಲಿ ಆಳಂದ ಶಂಕರರಾವ್, ಎಸ್.ಎಂ.ಪಂಡಿತ, ಕೃಷ್ಣಕಾಣಿಹಾಳ್ ಮುಂತಾದವರು ಕುಂಚಬ್ರಹ್ಮದಲ್ಲಿ ಮಾಡಿದ ಸೇವೆ ವಿಶ್ವಖ್ಯಾತಿಯಾಗಿದೆ. ವಿ.ಜಿ.ಅಂದಾನಿಯವರು ಮತ್ತು ಜಿ.ಎಸ್.ಖಂಡೇರಾವ್ ಕಲ್ಬುರ್ಗಿಯ ‘ಐಡಿಯಲ್ ಫೈನಾರ್ಟ್ ಸಂಸ್ಥೆ’ಯ ಮೂಲಕ ಈ ಪರಂಪರೆಯನ್ನು ಕಾಯ್ದುಕೊಂಡಿದ್ದಾರೆ. ಈ ಪ್ರದೇಶವು. 1347ರಲ್ಲಿ ಬಹಮನಿ ರಾಜ್ಯದ ಸ್ಥಾಪನೆಯನ್ನು ಕಂಡಿತು. ಇದರಿಂದಾಗಿ ಇಡೀ ಪ್ರದೇಶವು ಮುಸ್ಲಿಮರ ಆಳ್ವಿಕೆಗೆ ಒಳಗಾಯಿತು. ಮುಂದೆ ನಿಜಾಮರ ಆಳ್ವಿಕೆಗೆ(1724-1948) ತುತ್ತಾದಾಗ ಇಲ್ಲಿನ ಆಡಳಿತದ ಸ್ಥಿತಿಗತಿಯಲ್ಲಿ ತೀವ್ರವಾದ ಬದಲಾವಣೆಯಾಯಿತು. ಇಂದು ಈ ಪ್ರದೇಶವು ಹಿಂದೂ ಮುಸ್ಲಿಮ ಸಂಸ್ಕೃತಿಯ ಭಾವೈಕ್ಯದ ಪ್ರತೀಕವಾಗಿದೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಕಾಡ್ಗಿಚ್ಚಿನಂತೆ ದೇಶಾದ್ಯಂತ ಹಬ್ಬಿದ ರಾಷ್ಟ್ರೀಯತೆಯ ಉನ್ಮಾದದ ಅನುಭವವು ಸ್ವಾತಂತ್ರ್ಯಾನಂತರ ಚಾರಿತ್ರಿಕ ಸಂಶೋಧ, ಚರಿತ್ರೆಯ ಪುನರ್‌ವ್ಯಾಖ್ಯಾನದ ಕೆಲಸದಲ್ಲಿ ಬಂದಷ್ಟು ಮತ್ತಾವ ಕೆಲಸದಲ್ಲೂ ಉಂಟಾ ಗಿಲ್ಲ. ಬ್ರಿಟಿಷ್ ಸಾಮ್ರಾಜ್ಯವು ಭಾರತದಲ್ಲಿ ಅಸ್ತಂಗತವಾದಿ ತಕ್ಷಣ ನಮ್ಮ ರಾಷ್ಟ್ರೀಯ ಇತಿಹಾಸಕಾರರು ಬ್ರಿಟಿಷ್ ಸಾಮ್ರಾಜ್ಯಶಾಹಿ, ವಸಾಹತುಶಾಹಿ ಚರಿತ್ರೆಯನ್ನು ಪುನರ್ ರೂಪಿಸುವ ಚಳವಳಿಯನ್ನೇ ಪ್ರಾರಂಭಿಸಿದರು. ಭಾರತದ ರಾಷ್ಟ್ರೀಯ ಚಳವಳಿಯ ಸಂದೇಶ ಹಾಗೂ ಹೋರಾಟದ ಸ್ಫೂರ್ತಿಯ ಪ್ರವಾಹದೋಪಾದಿಯಲ್ಲಿ ಚಾರಿತ್ರಿಕ ಸಂಶೋಧನೆ ಕಾರ್ಯದೊಳಗೆ ಪ್ರವೇಶಿಸಿತು. ಈ ರೀತಿಯಲ್ಲಿ ಹರಿದುಬಂದ ಸಾಹಿತ್ಯದಲ್ಲಿ ರಾಷ್ಟ್ರೀಯ ಪ್ರಜ್ಞೆ ಹಾಗೂ ದೇಶಭಕ್ತಿಯ ಕಿಚ್ಚು ಆಳವಾಗಿ ಬೇರೂರಿತ್ತು. ಅದು ಬ್ರಿಟಿಷ್ ಸಾಮ್ರಾಜ್ಯಶಾಹಿ, ವಸಾಹಾತುಶಾಹಿ ಕುರುಹುಗಳನ್ನೆಲ್ಲಾ ನೆಲಸಮ ಮಾಡಿತು.
ಇಂತಹ ಚಳವಳಿ ಹಾಗೂ ಪ್ರಜ್ಞೆ ಕೇವಲ ಸ್ವಾತಂತ್ರ್ಯಪೂರ್ವದ ಇತಿಹಾಸವನ್ನು ತಿರಸ್ಕರಿಸುವುದರಲ್ಲಿ ಸಮಾಧಾನಪಟ್ಟುಕೊಳ್ಳದೆ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಮತ್ತೊಮ್ಮೆ ಹೊಸದಾಗಿ ಹಾಗೂ ರಾಷ್ಟ್ರೀಯ ದೃಷ್ಟಿಕೋನದಲ್ಲಿ ಪುನಃರೂಪಿಸುವ ಕೆಲಸ ದಲ್ಲೂ ತೊಡಗಿತು. ಸ್ವಾತಂತ್ರ್ಯ ನಂತರದ ಮೊದಲ ದಶಕದಲ್ಲಿ ಪಟ್ಟಾಭಿ ಸೀತಾರಾಮಯ್ಯ ಅವರು ‘ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಚರಿತ್ರೆ’, ತಾರಾಚಂದ್‌ರವರ ರಾಷ್ಟ್ರೀಯ ಭಾವ್ಯಕತೆ ಸ್ವರೂಪದ ಪ್ರಕಟಣೆಗಳು ಬೆಳಕು ಕಂಡವು. ಇತಿಹಾಸ ಸಂಶೋಧನೆಯ ಎರಡನೇ ಹಂತದಲ್ಲಿ ಭಾರತದ ಇತಿಹಾಸಕಾರರು ಸ್ವಾತಂತ್ರ್ಯ ಚಳವಳಿಯ ಪ್ರಾದೇಶಿಕ ಆಯಾಮವನ್ನು ಕುರಿತು ಬರೆದರು. ಚಾರಿತ್ರಿಕ ಸಂಶೋಧನೆಯ ಮೂರನೇ ಹಂತದಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯ ಸ್ವರೂಪದ ತೀಕ್ಷ್ಣ ವಿಶ್ಲೇಷಣೆ ನಡೆಯಿತು. ನಾಲ್ಕನೇ ಹಂತದಲ್ಲಿ ಚಾರಿತ್ರಿಕ ಸಂಶೋಧನೆಯಲ್ಲಿ ದೊಡ್ಡ ಪ್ರವಾಹವೇ ಸಂಭವಿಸಿತು. ಚರಿತ್ರೆಯ ಪರಿಕಲ್ಪನೆ, ಅಧ್ಯಯನ ವಿಧಾನ ಅಧ್ಯಯನದ ಸಾಧನ, ಸ್ವಾತಂತ್ರ್ಯ ಚಳವಳಿಗಾರರು ಅನುಸರಿಸಿದ ವಿಧಾನ, ಮಾರ್ಗ ಮುಂತಾದವುಗಳನ್ನು ಕುರಿತು ಮುಕ್ತ ಚರ್ಚೆ ನಡೆಯಿತು ಹಾಗೂ ಅನೇಕ ಗ್ರಂಥಗಳು ಪ್ರಕಟಗೊಂಡವು. ಕೊನೆಯ ಹಂತದಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಬಲಗೊಳಿಸಿದ ಉಪಚಳವಳಿಯನ್ನು ಕುರಿತು ಆಳವಾದ ಅಧ್ಯಯನಗಳು ನಡೆದವು.
ಅಧ್ಯಯನದ ಮಹತ್ವ ಹಾಗೂ ವ್ಯಾಪ್ತಿ
ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸವು ಒಂದು ಮಹಾಕಾವ್ಯವಾಗಿದೆ. ಚಳವಳಿಯಲ್ಲಿ ಭಾಗವಹಿಸಿದ್ದ ಮಹಾನ್ ವ್ಯಕ್ತಿಗಳು, ಅವರು ರೂಪಿಸಿದ ತತ್ವಗಳು, ಅವರು ರೂಪಿಸಿದ ಮಹಾ ಆದರ್ಶಗಳ, ಗುರಿಗಳ, ಮಹತ್ವದ ಘಟನೆಗಳ, ನಾಟಕೀಯ ಏರುಪೇರುಗಳ ಬೃಹತ್ ದಾಖಲೆ ಇದಾಗಿದೆ. ಪ್ರಾಯಶಃ ಸ್ವಾತಂತ್ರ್ಯ ಚಳವಳಿಯಲ್ಲಿ ಸಂಭವಿಸಿದ ಅಂತಹ ಒಂದು ನಾಟಕೀಯ ಘಟನೆಯೆಂದರೆ ಭಾರತದ ಗಣರಾಜ್ಯದಲ್ಲಿ ವಿಲೀನಗೊಳ್ಳದೆ ಸ್ವತಂತ್ರ ಸಂಸ್ಥಾನವಾಗಿ ಇರಲು ಬಯಸಿದ್ಧ ಹೈದ್ರಾಬಾದ್ ನಿಜಾಮನ ಹುಚ್ಚು ಸಾಹಸವಾಗಿದೆ. ಇಡೀ ಭಾರತದೇಶ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯಗಳಿಸಿದ ಮಹಾ ಸಂತೋಷ ಸಾಗರದಲ್ಲಿ ಮುಳುಗಿದ್ದಾಗ ನಿಜಾಮನ ಸಂಸ್ಥಾನದಲ್ಲಿ ಜನರು ಆಂತಕದಲ್ಲಿದ್ದರು. ಈ ಘಟನೆಯ ಸರ್ಕಾರ ಮತ್ತು ಜನತೆ ಹಾಗೂ ಸಂಸ್ಥಾನದ ಎರಡು ಕೋಮುಗಳ ನಡುವೆ ಘರ್ಷಣೆ ಸ್ಫೋಟಕ್ಕೆ ಕಾರಣವಾಯಿತು. ನಿಜಾಮನ ಸಂಸ್ಥಾನದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟವು ರಾಜಕೀಯ ದಾಸ್ಯದಿಂದ ಬಿಡುಗಡೆಯನ್ನು ಗಳಿಸುವ ಜೊತೆಗೆ ವಿಚ್ಛಿದ್ರಕಾರಿ ಶಕ್ತಿಗಳ ದಮನದ ಗುರಿಯನ್ನೂ ಹೊಂದಿತ್ತು.
ದುರದೃಷ್ಟದ ಸಂಗತಿಯೆಂದರೆ ಇಂತಹ ಸ್ವಾತಂತ್ರ್ಯ ಸಂಗ್ರಾಮದ ವೀರಗಾಥೆಯ ಚಾರಿತ್ರಿಕ ಹಾಗೂ ರಾಷ್ಟ್ರೀಯ ಮಹತ್ವವು ಇದುವರೆಗೂ ಬೆಳಕಿಗೆ ಬಂದಿಲ್ಲ ಎಂಬುದನ್ನು ಗಮನಿಸಬಹುದಾಗಿದೆ. ನಿಜಾಮ ಸಂಸ್ಥಾನದಲ್ಲಿ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಾದ ಬೀದರ್, ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳಲ್ಲಿ ನಡೆದ ಹೋರಾಟವು ಭಾರತದ ಸ್ವಾತಂತ್ರ್ಯ ಹೋರಾಟದ ಅಂತಿಮ ಮಜಲಾಗಿದೆ. ಈ ಹೋರಾಟವು ಹಲವಾರು ದೃಷ್ಟಿಯಿಂದ ಮಹತ್ವದಾಗಿದೆ. ಭಾರತದ ಉಳಿದ ಭಾಗಗಳಲ್ಲಿ ನಡೆದದ್ದಕ್ಕಿಂತ ವಿಭಿನ್ನವಾಗಿ ಸಂಪ್ರದಾಯವಾದಿ ಹಾಗೂ ಸರ್ವಾಧಿಕಾರಿ ಸರ್ಕಾರ ಮತ್ತು ಮಂತಾಂಧತೆಯಿಂದ ಹುಚ್ಚಾಗಿದ್ದ ಕೋಮುಶಕ್ತಿಯ ವಿರುದ್ಧ ಇಲ್ಲಿ ಹೋರಾಟವು ನಡೆಯಿತು. ಈ ಪ್ರದೇಶದ ಜನರ ಸ್ವಾತಂತ್ರ್ಯದ ಬಗೆಗಿದ್ದ ಅದಮ್ಯವಾದ ಬಯಕೆ ಹಾಗೂ ಅದಕ್ಕಾಗಿ ಎಂತಹ ಬಲಿದಾನಕ್ಕೂ ಹೆದರದವರ ವೀರಗಾಥೆಯಾಗಿದೆ. ಗುಲಾಮಗಿರಿ ಹಾಗೂ ಮತಾಂಧತೆಯ ಸಂಕೋಲೆಯಲ್ಲಿ ಬಂಧಿಯಾಗಿದ್ದ ಭಾರತವನ್ನು ಬಿಡುಗಡೆ ಗೊಳಿಸಲು ಪಣತೊಟ್ಟು ಕೊನೆಯಿಲ್ಲದ ಕಷ್ಟ-ನಷ್ಟ, ನೋವು-ಸಂಕಟ ಅನುಭವಿಸಿದ ರಾಷ್ಟ್ರೀಯವಾದಿಗಳ ಹೋರಾಟ ಇದಾಗಿದೆ.
ಪ್ರಸ್ತುತ ಅಧ್ಯಯನಕ್ಕೆ ಕಾರಣವಾದ ಅಂಶಗಳು ಹಲವಾರು, ಮೊದಲನೆಯದಾಗಿ ಸ್ವಾತಂತ್ರ್ಯ ಚಳವಳಿಯ ಪರವಾಗಿ ಹಾಗೂ ವಿರುದ್ಧವಾಗಿ ಕೆಲಸ ಮಾಡಿದ ಶಕ್ತಿಗಳನ್ನು ಗುರುತಿಸುವುದು. ಎರಡನೆಯದಾಗಿ ಸ್ವಾತಂತ್ರ್ಯ ಸಂಪಾದನೆಯ ಸಾಧನೆಯಲ್ಲಿ ಕಾಂಗ್ರೆಸ್ ಸಂಸ್ಥೆಗೆ ಸಂಪೂರ್ಣ ಕೀರ್ತಿತರುವ ಉತ್ಸಾಹದಲ್ಲಿ ಇತಿಹಾಸಕರಾರರಿಂದ ಅಲಕ್ಷ್ಯಕ್ಕೆ ಗುರಿಯಾಗಿದ್ದ ಇತರ ಪ್ರಸಿದ್ಧ ಸಂಸ್ಥೆಗಳಾದ ಆರ್ಯಸಮಾಜ, ಹಿಂದೂ ಮಹಾಸಭಾ ಹಾಗೂ ನಾಗರಿಕ ಸ್ವಾತಂತ್ರ್ಯ ಸಂಘಗಳು ವಹಿಸಿದ ಪಾತ್ರವು ಇಲ್ಲಿ ಗಮನಾರ್ಹವಾಗಿದೆ.
ಭಾರತದಲ್ಲಿ ಸ್ವಾತಂತ್ರ್ಯ ಚಳವಳಿಯ ಸೌಮ್ಯವಾದಿ, ಅಹಿಂಸಾವಾದಿಯಾಗಿತ್ತೇ ಹೊರತು ಉಗ್ರವಾದಿಯಾಗಿರಲಿಲ್ಲ ಎಂಬುದು ಈ ಚಳವಳಿಯ ಒಂದು ವಿಶೇಷತೆಯಾಗಿದೆ. ಆದರೆ ಹೈದ್ರಾಬಾದ್ ರಾಜ್ಯದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯು ಸೌಮ್ಯವಾದಿಗಿಂತ ಹೆಚ್ಚಾಗಿ ಉಗ್ರ-ಹಿಂಸಾವಾದಿಯಾಗಿದ್ದು ಕ್ರಾಂತಿ ಸ್ವರೂಪ ಪಡೆದಿತ್ತು. ಹೈದ್ರಾಬಾದ್ ಕರ್ನಾಟಕದ ಸ್ವಾತಂತ್ರ್ಯ ಚಳವಳಿಯು ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಉಳಿದ ಭಾಗಗಳಲ್ಲಿ ನಡೆದ ಚಳವಳಿಗಿಂತ ವಿಭಿನ್ನವಾಗಿತ್ತು. ಏಕೆಂದರೆ ಇಲ್ಲಿ ಜನರು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟ ನಡೆಸಿದರು. ಭಾರತವು ಸ್ವಾತಂತ್ರ್ಯ ಗಳಿಸಲು ನಡೆಸಿದ ಮಹಾಸಂಗ್ರಾಮದಲ್ಲಿ ಇದು ‘ಅಂತಿಮ ಹೋರಾಟ’ ಎಂಬ ಹಿರಿಮೆಗೆ ಅರ್ಹವಾಗಿದೆ. ಇತಿಹಾಸಕಾರರ ಗಮನಕ್ಕೆ ಬಾರದೆ, ಕಣ್ಮರೆಯಾಗುತ್ತಿದ್ದ ಈ ಚಳವಳಿಗೆ ಸಂಬಂಧಿಸಿದ ವಿವರ ದಾಖಲೆ, ಆಕರ, ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.
ಭಾರತದ ಗಣರಾಜ್ಯದಲ್ಲಿ ನಿಜಾಮನ ಸಂಸ್ಥಾನ ವಿಲೀನಗೊಂಡ ತಕ್ಷಣ ಹೋರಾಟ ನಿಲ್ಲಲಿಲ್ಲ. ಈ ಪ್ರದೇಶದಲ್ಲಿ, ಅದು ಭಾಷಾವಾರು ಪ್ರಾಂತ್ಯರಚನೆಯ ಚಳವಳಿಯಾಗಿ ರೂಪಾಂತರಗೊಂಡಿತು. ಅಂತಿಮವಾಗಿ ಈ ಹೋರಾಟವು ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನೊಳಗೊಂಡ ಅಖಂಡ ಕರ್ನಾಟಕದ ಉದಯದಲ್ಲಿ ಪರ್ಯಾವಸಾನಗೊಂಡಿತು.
ಹೈದ್ರಾಬಾದ್ ಕರ್ನಾಟಕ ಕುರಿತ ಅಧ್ಯಯನಗಳ ಒಂದು ಸಮೀಕ್ಷೆ
ಹೈದ್ರಾಬಾದ್ ಕರ್ನಾಟಕದ ಚರಿತ್ರೆ ಬಗ್ಗೆ ಈವರೆಗೆ ಪ್ರಕಟವಾದ ಗ್ರಂಥ ರಾಶಿಯನ್ನು ವಿವರವಾಗಿ ಅವಲಕೋಕಿಸಿದಾಗ ಈ ಪ್ರದೇಶದ ಸ್ವಾತಂತ್ರ್ಯ ಸಂಗ್ರಾಮದ ಆಳ ಹರವುಗಳನ್ನು ಚಾರಿತ್ರಿಕ ಚೌಕಟ್ಟಿನಲ್ಲಿ ಹಿಡಿದಿಡಲು ಸಾಧ್ಯವಾಗಿಲ್ಲ ಎಂದು ವಿದಿತವಾಗುತ್ತದೆ. ಜೀವನಚರಿತ್ರೆ, ಆತ್ಮಚರಿತ್ರೆ, ಲೇಖನಗಳು, ಕಥೆ, ಕಾದಂಬರಿ, ನಾಟಕ ಇತ್ಯಾದಿಗಳು ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟವಾದ ಗ್ರಂಥಗಳು ಸಾಕಷ್ಟಿವೆ ಮುಖ್ಯವಾಗಿ ‘ಆರದ ದೀಪ’, ‘ಪ್ರಗತಿಗಾಗಿ ಸ್ವಾತಂತ್ರ್ಯ’, ಚಂದ್ರಶೇಖರ ಪಾಟೀಲರ ಪರಿಚಯ, ಡಾ.ಚುರ್ಚಿಹಾಳಮಠ ಸ್ಮರಣ ಸಂಚಿಕೆ, ‘ಪ್ರಭುರಾವ್ ಕಾಂಬ್ಲೆವಾಲೆ’, ‘ಶಿರೂರು ವೀರಭದ್ರಪ್ಪ’, ‘ಗವಿದೀಪ್ತಿ’, ‘ರಾಷ್ಟ್ರವೀರ’, ‘ರಾಯಚೂರಿನ ಸ್ವಾತಂತ್ರ್ಯ ಆಂದೋಳನ’, ‘ಪ್ರಾಂತಃಸ್ಮರಣೀಯರು’, ‘ಹೈದ್ರಾಬಾದ್ ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮ್ ಔರ್ ಆರ್ಯಸಮಾಜ‘, ‘ಹೈದ್ರಾಬಾದ್ ಆರ್ಯೊಂಕಿ ಸಾಧನ್ ಔರ್ ಸಂಘರ್ಷ’, ‘ರಾಷ್ಟ್ರೀಯ ಶಿಕ್ಷಣ’, ‘ಹೈದ್ರಾಬಾದ್ ಕರ್ನಾಟಕದಲ್ಲಿ ರಾಷ್ಟ್ರೀಯತೆಯ ಉದಯ’, ‘ಬಡೆಸಾಬ್ ಪುರಾಣ’, ‘ನಾಯಿ ಮತ್ತು  ಪಿಂಚಣಿ’, ‘ಸ್ವಾತಂತ್ರ್ಯ ವೀರ ಮತ್ತು ಇತರ ಕಥೆಗಳು’, ವಿನಾಯಕರಾವ್ ಅಭಿನಂದನ ಗ್ರಂಥ ಮುಂತಾದವು ಹರಾಟದ ಕೆಲವು ಆಯ್ದ ಘಟನೆಗಳ ವಿವರವನ್ನು ಮಾತ್ರ ಒದಗಿಸುತ್ತವೆ. ಮೇಲಾಗಿ ಈ ಕೃತಿಗಳಲ್ಲಿ ಬಹಳಷ್ಟು ಕಥೆಯನ್ನು ಹೇಳುವ ಸಾಹಿತ್ಯ ಕೃತಿಗಳಾಗಿವೆ. ಈ ಬರಹಗಳಲ್ಲಿ ಘಟನೆ-ವಿವರಗಳಿಗೆ ಚಾರಿತ್ರಿಕ ಹಾಗೂ ಕಾಲಾನುಕ್ರಮಣಿಕೆಗೆ ಮಹತ್ವ ನೀಡಿಲ್ಲ. ಈ ಎಲ್ಲ ಬರಹಗಳನ್ನು ಕೇವಲ ನಮ್ಮ ಅಧ್ಯಯನದ ಒಂದು ಪ್ರಮೇಯವನ್ನು ರೂಪಿಸಿಕೊಳ್ಳಲು ಬಳಸಿಕೊಳ್ಳಬಹುದು. ಈ ಭಾಗದ ಮಹಾಸಂಗ್ರಾಮದ ಪೂರ್ಣಚಿತ್ರವನ್ನು ಇವು ನೀಡಲಾರವು. ಕೆಲವು ಬರಹಗಳಂತೂ ಕೇವಲ ಸಣ್ಣಪುಟ್ಟ ಘಟನೆಗಳನ್ನು ವಿವರಣೆಗೆ ತೃಪ್ತಿಪಟ್ಟುಕೊಂಡಿದೆ.
‘ಒಂದು ಯುಗದ ಅಂತ್ಯ’, ಸ್ವಾಮಿ ರಮಾನಂದತೀರ್ಥರ ‘ಆತ್ಮಚರಿತ್ರೆ’ ಹಾಗೂ ಎನ್ ರಮೇಶನ್‌ರವರ ಸಂಪಾದಕತ್ವದಲ್ಲಿ ರಚಿತವಾದ ಮೂರು ಸಂಪುಟಗಳ ಹೈದ್ರಾಬಾದ್ ಸ್ವಾತಂತ್ರ್ಯ ಸಂಗ್ರಾಮ, ಸೂರ್ಯನಾಥ ಕಾಮತ್ ಸಂಪಾದಿಸಿರುವ ‘ಸ್ಮೃತಿಗಳು’ ಮುಂತಾ ದವು ಸಹ ಈ ಪ್ರದೇಶದ ಮೂಲೆೆ ಮೂಲೆಗಳಲ್ಲಿ ಜನ ನಡೆಸಿದ್ದ ಸ್ವಾತಂತ್ರ್ಯ ಸಂಗ್ರಾಮದ ಸಂಪೂರ್ಣ ವಿವರವನ್ನು ಒಳಗೊಂಡಿಲ್ಲ. ಚರಿತ್ರೆಯಲ್ಲಿ ‘ವಸ್ತುನಿಷ್ಠತೆ’ಯನ್ನು ಕಾಯ್ದು ಕೊಳ್ಳುವ ದೃಷ್ಟಿಯಿಂದ ಹೈದ್ರಾಬಾದ್ ಕರ್ನಾಟಕದ ಚರಿತ್ರೆಗೆ ಸಂಬಂಧಿಸಿದ ಈ ಸ್ಮೃತಿಗಳು, ಕೃತಿಗಳನ್ನು ಸರಿಯಾಗಿ ಪರಾಮರ್ಶಿಸಬೇಕಾಗಿದೆ. ಹೋರಾಟಗಾರರು ಪ್ರತಿ ನಿಧಿಸಿದ್ದ ಸಂಸ್ಥೆ ಅಥವಾ ಅವರ ಮುಂದಾಳುಗಳ ಬಗೆಗಿನ ಭಾವನಾತ್ಮಕ ನಿಷ್ಠೆಯಿಂದ ಈ ಸ್ಮೃತಿಗಳು ಮುಕ್ತವಾಗಿಲ್ಲ. ವ್ಯಕ್ತಿಗಳ ವೈಯಕ್ತಿಕ ನಿಲುವು, ನಿರ್ಧಾರ, ಪೂರ್ವಗ್ರಹಪೀಡಿತ ವಿಚಾರಗಳ ಈ ಬರಹಗಳಲ್ಲ ವ್ಯಾಪಕವಾಗಿ ಕಂಡುಬರುತ್ತಿರುವುದರಿಂದ ಹೈದ್ರಾಬಾದ್ ಕರ್ನಾಟಕದ ಏಕೀಕರಣದ ಚರಿತ್ರೆಯನ್ನು ಪುನಃ ಹೊಸದಾಗಿ ಪರಿವೀಕ್ಷಿಸುವ ಅವಶ್ಯಕತೆ ಇದೆ.
ಅಧ್ಯಯನ ವಿಧಾನ ಮತ್ತು ಆಕರಗಳು
ಹೈದ್ರಾಬಾದ್ ಕರ್ನಾಟಕದ ಬಗ್ಗೆ ಸಂಶೋಧನೆ ಮಾಡುವ ಸಂಬಂಧದಲ್ಲಿ ಚಾರಿತ್ರಿಕ ವಿಧಾನವನ್ನು ಅನುಸರಿಸಬಹುದಾಗಿದೆ. ಸೂಕ್ತವೆಂದು ಕಂಡುಬರುವ ಘಟನೆಗಳನ್ನು ವಿವರಿಸಲು ಸರ್ವೆವಿಧಾನ ತಂತ್ರವನ್ನೂ ಬಳಸಲಾಗಿದೆ. ಚಾರಿತ್ರಿಕ ವಿಧಾನದ ಮೂಲ ನಿಯಮದಂತೆ ಈ ಅಧ್ಯಯನದಲ್ಲಿ ಸಮಕಾಲೀನ ಹಾಗೂ ತೀರ ಸಮಕಾಲೀನ ದಾಖಲೆ- ಕಡತಗಳನ್ನು ಆಕರವಾಗಿ ಬಳಸಲಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ರಾಜಕೀಯ ಮತ್ತು ಸಾಂಸ್ಕೃತಿಕ ವಿಲೀನದ ಇತಿಹಾಸದ ಪುನಃರಚನೆಯಲ್ಲಿ ಬಳಸಿದ ಆಕರಗಳನ್ನು ಮಾಹಿತಿಗಳನ್ನುೊಪ್ರಾಥಮಿಕ ಹಾಗೂ ದ್ವಿತೀಯ ಮೂಲಾಧರಗಳೆಂದು ಎರಡು ಭಾಗಗಳಾಗಿ ವಿಂಗಡಿಸಬಹುದು.
ಪತ್ರವ್ಯವಹಾರ, ಶಾಸಕಾಂಗಗಳಲ್ಲಿನ ನಡವಳಿಕೆ, ವಾರ್ತಾಪತ್ರಿಕೆ, ವಾರಪತ್ರಿಕೆ, ಜನಪದ ಹಾಡುಗಳು, ನ್ಯಾಯಾಲಯದ ಕಡತ, ಹೈದ್ರಾಬಾದ್‌ನ ರಾಜ್ಯ ಪತ್ರಗಾರದಲ್ಲಿನ ದಾಖಲೆಗಳು, ರಾಜ್ಯಪುನಃರಚನೆ ಆಯೋಗದ ವರದಿ, ಸ್ವಹಸ್ತ ಲಿಖಿತ ವಿವರಗಳು, ಧ್ವನಿ ಸುರುಳಿಗಳು, ಆತ್ಮಚರಿತ್ರೆ, ಭಾವಚಿತ್ರಗಳು, ದಿನಚರಿಗಳು ಈ ಪ್ರದೇಶದ ಕರ್ನಾಟಕ ಸಂಘಟದ ಕಾರ್ಯಚಟುವಟಿಕೆಗಳ ವಿವರ, ಗುಲಬರ್ಗಾದ ಯುವಕ ಸಂಘ, ಉದ್‌ಗೀರ್‌ನ ವೀರಶೈವ ಪರಿಷತ್‌ನ ಗೊತ್ತುವಳಿಗಳು, ಗಡಿ ಚಳವಳಿಯ ಶಿಬಿರಾಧಿಪತಿಗಳ ವ್ಯಕ್ತಿಗತ ಕಡತಗಳು, ಸ್ಮೃತಿಗಳು, ಪ್ರಶಸ್ತಿ ಪತ್ರಗಳು ಮುಂತಾದವುಗಳು ಈ ಅಧ್ಯಯನದಲ್ಲಿ ಉಪಯೋಗಿಸಿದ ಪ್ರಾಥಮಿಕ ಅಥವಾ ಮೂಲಾಧಾರಗಳಾಗಿವೆ.
ಈ ಮೇಲೆ ವಿವರಿದ ವರ್ಗಿಕೃತ ಆಕರಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ನನ್ನ ಅಧ್ಯಯನ ಸಂದರ್ಭದಲ್ಲಿ ರಾಷ್ಟ್ರೀಯವಾದಿಗಳು ಹಾಗೂ ರಜಾಕಾರರು ತಮಗೆ ಸಂಬಂಧಿಸಿದವರಿಗೆ ಬರೆದ ಪತ್ರಗಳ ಮೂಲ ಪ್ರತಿಗಳು ದೊರಕಿವೆ. ಈ ಪತ್ರಗಳು ಅಂದಿನ ರಜಾಕಾರರು ನಡೆಸಿದ್ದ ಹತ್ಯಾಕಾಂಡದ ಮೇಲೆ ವಿವರವಾದ ಬೆಳಕು ಚೆಲ್ಲುತ್ತವೆ. ನಿಜಾಮ ಸರ್ಕಾರ ಹಾಗೂ ರಜಾಕಾರರ ವಿರುದ್ಧ ನಡೆದ ಗಡಿ ಚಳವಳಿಯಲ್ಲಿ ಸಕ್ರಿಯವಾಗಿ ಪಾಲುಗೊಂಡಿದ್ದ ಚಂದ್ರಶೇಖರ ಪಾಟೀಲ ಮಹಾಗಾಂ, ಅಳವಂಡಿ ಶಿವಮೂರ್ತಿಸ್ವಾಮಿ, ಶರಣಗೌಡ ಇನಾಂದಾರ್ ಮುಂತಾದವರು ನಡೆಸಿದ ಶೌರ್ಯಗಳನ್ನು ಕುರಿತು ರಚಿತವಾಗಿದ್ದ ಜನಪದ ಹಾಡುಗಳ ಸಂಗ್ರಹ ಈ ನಿಟ್ಟಿನಲ್ಲಿ ಮುಖ್ಯವಾದವು.
ಈ ಅಧ್ಯಯನದಲ್ಲಿ ದಿನಪತ್ರಿಕೆ ನಿಯತಕಾಲಿಕೆಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗಿದೆ. ಸಂಯುಕ್ತ ಕರ್ನಾಟಕ, ಲೋಕಮಾತಾ, ಲೋಕವಾಣಿ, ಶರಣ ಸಂದೇಶ, ದಿ ಹಿಂದೂ, ಡೆಕನ್ ಕ್ರಾನಿಕಲ್, ನಗರಿಕ, ಶಿಯಾಸತ್ ರಹಬರ್ ಐದಖನ್, ಇಮ್ರೋಜ್ ಮುಂತಾದ ಪತ್ರಿಕೆಗಳ ಹಳೇ ಸಂಚಿಕೆಗಳು ಗಮನಾರ್ಹವಾಗಿದೆ.
ಇಲ್ಲಿ ಬಳಸಿರುವ ಆಕರಗಳಲ್ಲಿ ಪ್ರಾಯಶಃ ಅತ್ಯಂತ ಮಹತ್ವದವುಗಳೆಂದರೆ ‘ಸ್ವಲಿಖಿತ ದಾಖಲೆಗಳು’, ಹೈದ್ರಾಬಾದ್ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಜೊತೆ ಸುದೀರ್ಘವಾದ ಸಂದರ್ಶನಗಳನ್ನು ನಡೆಸಲಾಯಿತು. ಈ ಕಾಲದಲ್ಲಿ ಬಿತ್ತರಗೊಂಡ ವಿವರಗಳನ್ನು ಈ ಸಂಶೋಧಕ ಸ್ವಹಸ್ತದಿಂದ ಬರೆದುಕೊಂಡು ವಿಷಯ ಸತ್ಯತೆಯ ಬಗ್ಗೆ ಅವರುಗಳ ರುಜು ಪಡೆಯಲಾಗಿದೆ. ಈ ಬಗೆಯಲ್ಲಿ ಸಿದ್ಧವಾದ ಸಾಹಿತ್ಯವನ್ನೇ ಸ್ವಲಿಖಿತ ದಾಖಲೆಗಳು ಎಂದು ಕರೆಯಲಾಗಿದೆ. ಹೀಗೆ ಆಕರಗಳ ಸಂಗ್ರಹಕ್ಕೆ ವಸ್ತುನಿಷ್ಠೆ ವಿಧಾನಗಳನ್ನು ಅನುಸರಿಸಲಾಗಿದೆ. ಈ ಕಾರ್ಯದಲ್ಲಿ ಈ ಸಂಶೋಧಕನು  ಆರ್ಯಸಮಾಜ ಹಾಗೂ ಕಾಂಗ್ರೆಸ್ ಇನ್ನೂ ಮುಂತಾದ ಸಂಸ್ಥೆಗಳಿಗೆ ಸೇರಿದ್ದ ಮುಂದಾಳು ಗಳಾಗಿದ್ದ ಹಕಿಖತ್‌ರಾವ್, ಬಿಟಗುಪ್ಪಿಕರ್, ರಾಮಚಂದ್ರ ವೀರಪ್ಪ, ರಘುನಾಥ ಡಗೆ, ಎಸ್.ನಿಜಲಿಂಗಪ್ಪ, ಎಂ.ಚನ್ನಾರೆಡ್ಡಿ, ರಾಮಕೃಷ್ಣ ಹೆಗೆಡೆ, ವೀರೇಂದ್ರಪಾಟೀಲ್, ದತ್ತಾತ್ರೇಯರಾವ್ ಅವರಾದಿ, ಜಗನ್ನಾಥರಾವ್ ಚಂದ್ರಿಕಿ, ಕೊಲ್ಲೂರು ಮಲ್ಲಪ್ಪ ವಿಶ್ವನಾಥರೆಡ್ಡಿ ಮುದ್ನಾಳ, ವಿ.ವಿ.ದೇವಗಲಗಾಂವ್‌ಕರ್, ನಾರಾಯಣ ಕನ್ನಿಹಾಳ್, ವಿದ್ಯಾದರ ಗುರೂಜಿ, ಕಲ್ಯಾಣರಾವ್ ಮುರುಗತ್ತಿ, ಶಂಕರಶೆಟ್ಟಿ ಪಾಟೀಲ್, ಎ.ವಿ.ಪಾಟೀಲ್, ಸಂಗಪ್ಪ ರಟಗಲ್, ರಾಜಾವೆಂಕಟಪ್ಪ ನಾಯಕ, ಆರ್.ಜಿ.ಜೋಷಿ, ಎಚ್.ನಿಜಲಿಂಗಪ್ಪ, ಪಾಟೀಲ್ ಪುಟ್ಟಪ್ಪ, ಸಿ.ಎಂ.ಚುರ್ಚಿಹಾಳಮಠ್, ಸರದಾರ್ ಶರಣಗೌಡ ಇನಾಂದಾರ್, ಶಿವಮೂರ್ತಿಸ್ವಾಮಿ ಅಳವಂಡಿ, ಪೂಜ್ಯ ಶರಣಬಸಪ್ಪ ಅಪ್ಪ, ಹಜತ್ ಸಜ್ಜದ್ ನಶೀನ್ ಖಾಜಾ ನಿಜಾಮಿ, ಸಯ್ಯದ್ ಮೆಹಬುಲ್ಲಾಹಸನ್, ನ್ಯಾಯವಾದಿ ಅಲ್ಲಾವುದ್ದೀನ್, ಮಟಮಾರಿ ನಾಗಪ್ಪ, ಶಾಂತರಸ, ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳು ಮುಂತಾದವರನ್ನು ಸಂದರ್ಶಿಸಿದ ಪಠ್ಯಗಳು ಮಹತ್ವದ್ದಾಗಿದೆ.
ಹೀಗೆ ನಡೆಸಿದ ಸಂದರ್ಶನಗಳ ಮೂಲಕ ಸಿದ್ಧಪಡಿಸಿದ ಸಾಹಿತ್ಯವು ಸ್ವಲಿಖಿತ ದಾಖಲೆ, ಧ್ವನಿಸುರುಳಿ ಹಾಗೂ ಟಿಪ್ಪಣಿಗಳ ರೂಪದಲ್ಲಿ ಒಟ್ಟು ನಲವತ್ತು ಸ್ವಲಿಖಿತ ದಾಖಲೆಗಳು ಹಾಗೂ ಧ್ವನಿಸುರುಳಿಗಳಿದ್ದಾವೆ. ನಾವು ಸಂದರ್ಶಿಸಿದ ಹಾಗೂ ಸಂಪರ್ಕಿಸಿದ ವ್ಯಕ್ತಿಗಳು ಸಮಾಜದ ವಿವಿಧ ವರ್ಗಗಳಿಗೆ ಸೇರಿದವರಾಗಿದ್ದಾರೆ. ಈ ದಾಖಲೆಗಳು ಈ ನಿಟ್ಟಿನಲ್ಲಿ ಗಮನಾರ್ಹವಾದುದು. ಈ ಅಂಶಗಳನ್ನು ಕೆಳಗಿನಂತೆ ವಿವರಿಸಬಹುದಾಗಿದೆ.
ನಿಜಾಮ ಸಂಸ್ಥಾನ ಹಾಗೂ ಬ್ರಿಟಿಷರು
ಸ್ವತಂತ್ರ ಅಧಿಕಾರವನ್ನು ಘೋಷಿಸಿಕೊಳ್ಳುವ ಒಂದೇ ಒಂದು ಅವಕಾಶವನ್ನು ನಿಜಾಮರು ಬಿಡುತ್ತಿರಲಿಲ್ಲ. ಪ್ರಾರಂಭದಿಂದಲೂ ತಮಗೆ ದೈವದತ್ತ ಅರಸೊತ್ತಿಗೆ ಅಧಿಕಾರವಿದೆ ಎಂದು ಅವರು ನಂಬಿದ್ದರು. ರಾಜಕೀಯ ಸಿದ್ಧಾಂತಗಳಲ್ಲಿ ನಿಜಾಮರು ಸ್ಟುವರ್ಟ್ ಲೂಯಿಸ್ ಮತ್ತು ಕೈಸರ ಅರಸರನ್ನು ಮೀರಿಸಿದ್ದರು. ವಿಸ್ತರಣಾವಾದಿಗಳು ಹಾಗೂ ಯುದ್ಧ ನಿಪುಣರಾದ ಪೇಶ್ವೆಗಳ ಅಧೀನದಲ್ಲಿದ್ದ ಮರಾಠರ, ಮೈಸೂರಿನ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಏಳ್ಗೆ ಬ್ರಿಟಿಷರಿಗೂ ಮತ್ತು ನಿಜಾಮರಿಗೂ ಶಾಂತಿಯಿಂದಿರಲು ಬಿಡಲಿಲ್ಲ. 1798ರಲ್ಲಿ ನಿಜಾಮನು ರಕ್ಷಣೆಗಾಗಾ ಸಹಾಯಕ ಸೈನಪದ್ಧತಿ ಒಪ್ಪಂದಕ್ಕೆ ಸಹಿ ಹಾಸಿದನು. ಭಾರತದಲ್ಲಿ ಬ್ರಿಟಿಷರು ತಮ್ಮ ಪರಮಾಧಿಕಾರವನ್ನು ಕಾಯ್ದುಕೊಳ್ಳಲು ಮತ್ತು ಮರಾಠ ಮತ್ತು ಮೈಸೂರು ಶಕ್ತಿಗಳನ್ನು ನಿಯಂತ್ರಿಸಲು ಹೈದ್ರಾಬಾದ್ ಸಂಸ್ಥಾನವನ್ನು ಒಂದು ಬಫೆರ್ ರಾಜ್ಯವನ್ನಾಗಿ ಬಳಸಿದನು. 1857 ಸ್ವಾತಂತ್ರ್ಯ ಸಂಗ್ರಾಮದ ಅಲೆಗಳನ್ನು ದಕ್ಷಿಣ ಭಾರತದಲ್ಲಿ ತಡೆದಿದ್ದನ್ನು ಗಮನಿಸಿದರೆ, ಬ್ರಿಟಿಷರಿಗೆ ನಿಜಾಂ ಶಕ್ತಿಯ ಅನಿವಾರ್ಯತೆ ಗೊತ್ತಾಗುತ್ತದೆ. ಪ್ರಥಮ ಮಹಾಯುದ್ಧದ ಸಮಯದಲ್ಲಿ ನಿಜಾಂನು ಬ್ರಿಟನ್ನಿಗೆ 375 ಲಕ್ಷ ಹಣ ಹಾಗೂ ಸೇನಾ ತುಕಡಿಗಳನ್ನು ಕಳಿಸಿದನು. ನಿಜಾಮನಿಗೆ ಸೈನ್ಯ ಯುರೋಪ್ ಮತ್ತು ಟರ್ಕಿಯ ರಣರಂಗದಲ್ಲಿ ಮುಸ್ಲಿಮ ವಿರುದ್ಧ ಹೋರಾಡಿತು ದ್ವಿತೀಯ ಮಹಾಯುದ್ಧದದಲ್ಲಿ ಹೈದ್ರಾಬಾದಿನ ಎಲ್ಲಾ ಉದ್ದಿಮೆಗಳು ಯುದ್ಧೋಪಕರಣ ಉತ್ಪಾದನೆಯಲ್ಲಿ ತೊಡಗಿದ್ದವು. ಹೀಗೆ ನಿಜಾಂ ಸಂಸ್ಥಾನ ತನ್ನ ಅಸ್ತಿತ್ವ ರಕ್ಷಿಸಿಕೊಳ್ಳಲು ಬ್ರಿಟಿಷ್ ಸಾಮ್ರಾಜ್ಯದ ಅನನ್ಯ ಭಕ್ತರಾಗಿದ್ದರು. ಇದಕ್ಕೆ ಪ್ರತಿಯಾಗಿ ಬ್ರಿಟಿಷ್ ಸರ್ಕಾರವು ನಿಜಾಂರಿಗೆ ‘ಹೀಟ್ ಏಕ್ಸಾಲ್ಟೆಡ್ ಹೈನೆಸ್’ ಹಾಗೂ ‘ಫೇತ್‌ಫುಲ್ ಅಲೈ ಅಫ್ ದಿ ಬ್ರಿಟಿಷ್ ಗೌರ್ನಮೆಂಟ್’ ಎಂಬ ಬಿರುದುಗಳನ್ನು ನೀಡಿ ಗೌರವಿಸಿತು. ಈ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರ ನಿಜಾಮನಿಗೆ ಅನೇಕ ಸವಲತ್ತುಗಳನ್ನು ಮತ್ತು ಆಂತರಿಕ ಅಧಿಕಾರವನ್ನು ನೀಡಿತು. ನಿಜಾಮ ಸ್ವತಂತ್ರವಾದ ಧ್ವಜ, ರಾಷ್ಟ್ರಗೀತೆ, ಸೈನ್ಯ, ನಾಣ್ಯ, ಸಾರಿಗೆ, ರೈಲ್ವೆ, ಅಂಚೆ, ಅಕಾಶವಾಣಿ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದನು. ಬದುಕಿನಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಸಂಪತ್ತು ಮತ್ತು ಅಧಿಕಾರವನ್ನೇ ಬಯಸುತ್ತಿದ್ದ ಮೀರ್ ಉಸ್ಮಾನ್ ಅಲಿಖಾನ್ ಬಹಾದ್ದೂರ್, 1911ನೆಯ ಆಗಸ್ಟ್ 29ರಂದು ಅಧಿಕಾರಕ್ಕೆ ಬಂದನು. ಸ್ವಾತಂತ್ರ್ಯ ಸಂಗ್ರಾಮದ ಕಥಾವಸ್ತು ಇವರ ಆಳ್ವಿಕೆಯಾಗಿದೆ.
ಇವನು ಕೃಶ, ವಾಮನ ಆಕಾರ ಕನ್ನಡಕಧಾರಿ. ಹಲವಾರು ಭವ್ಯ ಅರಮನೆಗಳಿದ್ದರೂ ಅತಿ ಚಿಕ್ಕದಾದುರಲ್ಲಿ ಅವರ ವಾಸ, ತೆಳು ಕಡ್ಡಿಯ ಕನ್ನಡಕ, ತಾಜ ಮಹಲ್‌ದ ಗುಮ್ಮಟದಂತೆ ಕಾಣುವ ರುಮಾಲು ಸುತ್ತುತ್ತಿದ್ದರು. ಸರ್ಕಾರಿ ಸಮಾರಂಭಗಳಿಗೆ ಮಾತ್ರ ಬಿಳಿ ಬಣ್ಣದ ಉದ್ದನೆಯ ಕೋಟು ಧರಿಸುತ್ತಿದ್ದರು. ಅದಕ್ಕೆ ಪದಕ ಹಾಗೂ ಆರು ಹೆವನ್ಸಲೈಟು ಅವರ ಗೈಡು ಎಂಬ ಶಬ್ದಗಳುಳ್ಳ ಭಾರತೀಯ ಸಂಸ್ಥಾನಿಕರ ಲಾಂಛನ ಅಂಟಿಸಲಾಗಿರುತ್ತಿತ್ತು. ಸೂರ್ಯ ಕಿರಣಗಳು ಕ್ಷಿತಿಜವನ್ನು ಮುತ್ತುವುದಕ್ಕೆ ಮೊದಲೇ ನಿಜಾಮ ಏಳುತ್ತಿದ್ದನು. ಪ್ರಾರ್ಥನೆಯ ನಂತರದ ಸುಗಂಧ ಪರಿಮಳ ಭರಿತ ನೀರಿನಿಂದ ಸ್ನಾನ ಮಾಡುತ್ತಿದ್ದರು. ಸೋಪು ಉಪಯೋಗಿಸುತ್ತಿರಲಿಲ್ಲ. ಆದರೆ ‘ರಿತಾ’ ಎಂಬ ಕಾಯಿಯ ಪುಡಿ ಹಚ್ಚಿಕೊಳ್ಳುತ್ತಿದ್ದರು. ಹಾಲುಕುಡಿದನಂತರ ಚಿನ್ನದ ತಟ್ಟೆಯಲ್ಲಿ ಅತ್ಯಂತ ಸಾದಾ ಊಟ ಮಾಡುತ್ತಿದ್ದರು. ಸರ್ಕಾರಿ ಸಮಾರಂಭಗಳಲ್ಲಿ ಅತಿಥಿಗಳಿಗೆ ಅವರು ಹಿಂದಿನ ರಾತ್ರಿ ಮುತ್ತುಗಳನ್ನು ತಿಂದ ನವಿಲುಗಳ ಮಾಂಸವನ್ನು ಉಣಬಡಿಸುವಲ್ಲಿ ಬಹಳಷ್ಟು ಖುಷಿಪಡುತ್ತಿದ್ದರು. ಸಾಮಾನ್ಯವಾಗಿ ಅವರ ಪ್ರೀತಿಯ ಖಾದ್ಯಗಳೆಂದರೆ ಪರಿಮಳಭರಿತ ‘ಮುಗಲೈ ಪಿಲೆ’ ಹಾಗೂ ಚಿಗರೆ ಮಾಂಸದ ಕಬಾಬ್. ಇಡೀ ದಿನ ಸರ್ಕಾರಿ ಕಾಗದ ಪತ್ರಗಳೊಂದಿಗೆ ವ್ಯವಹರಿಸುತ್ತಿದ್ದರು. ಉರ್ದು ಮತ್ತು ಪರ್ಶಿಯನ್ ಭಾಷೆಯ ಉಪಾಸಕರಾಗಿದ್ದರು. ಇವರ ಕಾಲದಲ್ಲಿ ನ್ಯಾಯಾಂಗ ವ್ಯವಸ್ಥೆ ಪರಿಣಾಮಕಾರಿಯಾಗಿತ್ತು.
ಹೈದ್ರಾಬಾದ್ ಸಂಸ್ಥಾನದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ನಡೆದ ಏಕೀಕರಣ ಹೋರಾಟದ ಚರಿತ್ರೆಯನ್ನು ಪೂರ್ಣವಾಗಿ ಅರಿಯಲು ಹಾಗೂ ಅದರ ಮಹತ್ವ ಗುರುತಿಸಲು ಈ ಸಂಸ್ಥಾನ ಹಾಗೂ ಪ್ರದೇಶಗಳಲ್ಲಿದ್ದ ಸರ್ಕಾರದ ಸ್ವರೂಪ ಮತ್ತು ಆಳ್ವಿಕೆಗಳ ಚಾರಿತ್ರಿಕ ಅರಿವು ಅಗತ್ಯ. ಭಾರತದಲ್ಲೇ ಅತ್ಯಂತ ಶ್ರೀಮಂತವೂ ಆಗಿದ್ದ ಹೈದ್ರಾಬಾದ್ ಸಂಸ್ಥಾನವನ್ನು ಮಿರ್ ಖಮರುದ್ದೀನ್ ಚಿನ್ ಖಲಿಚ್‌ಖಾನ್ ಎಂಬುವನು ಸ್ಥಾಪಿಸಿದನು. ಇವನು ಔರಂಗಜೇಬನ ಸೈನಾಧಿಪತಿಯಾಗಿದ್ದ ಖಾಜಿ ಉದ್ದೀನ್ ಖಾನ್ ಫರೋಜ್ ಜಂಗ್‌ನ ಮಗನಾಗಿದ್ದ ಫಿರೋಜ್ ಜಂಗ್‌ನು ಮೊದಲ ಖಲೀಪ ಅಬುಬಕರ್‌ನ ವಂಶಸ್ಥ ಎಂಬ ಪ್ರತೀತಿ ಇತ್ತು. ಔರಂಗಚೇಬನ ಮರಣಕ್ಕೆ ಆರುವರ್ಷ ಮೊದಲು ಅಂದರೆ 1713ರಲ್ಲಿ ಚಕ್ರವರ್ತಿ ಫರೂಕ್‌ಶಿಯಾರ್ ಮಿರ್ ಖಮರುದ್ದೀನ್‌ನನ್ನು ನಿಜಾಮ-ಉಲ್-ಮುಲ್ಕಫಿರೋಜ್ ಜಂಗ್ ಎಂಬ ಬಿರುದಿನೊಂದಿಗೆ ದಖ್ಖನ್‌ನ ಸುಬೇದಾರ್‌ನನ್ನಾಗಿ ನೇಮಿಸಿದ್ದ. ಇವನು ಉತ್ತರದ ಮಾಳವದಿಂದ ದಕ್ಷಿಣದ ತಿರುಚಿನಾಪಳ್ಳಿಯವರೆಗೆ ಹರಡಿದ್ದ ಇಡೀ ದಖನ್ ಭಾಗವನ್ನು ಆಳುತ್ತಿದ್ದ. ಮುಂದೆ ಮೊಗಲ್ ಸುಲ್ತಾನ ಮಹಮದ್ ಶಹಾ ಇವನಿಗೆ ‘ಅಸಪ್ ಜಹಾ’ ಎಂಬ ಬಿರುದನ್ನು ನೀಡಿದನು. ಇವನು ವಂಶಸ್ಥರು ಇಂದಿಗೂ ಇದೇ ‘ಅಸಪ್ ಜಹಾ’ ಎಂಬ ಬಿರುದಿನಿಂದಲೇ ಗುರುತಿಸಲ್ಪಡುತ್ತಾರೆ. 1724ರಲ್ಲಿ ಶಿಖಾರ್‌ಖೇಡ್ ಎಂಬ ಯುದ್ಧದಲ್ಲಿ ಮುಖೇರಿಜ್‌ಖಾನ್‌ನನ್ನು ಸೋಲಿಸಿ ನಿಜಾಮನು ಸ್ವತಂತ್ರ ಹೈದ್ರಾಬಾದ್ ಸಂಸ್ಥಾನವನ್ನು ದಕ್ಷಿಣ ಭಾರತದಲ್ಲಿ ಸ್ಥಾಪಿಸಿದನು. ದೆಹಲಿಯ ಚಕ್ರವರ್ತಿ ಜೊತೆಗಿನ ಸಂಬಂಧವನ್ನು ಕಡಿದು ಹಾಕಿಕೊಂಡನು. ಹೀಗೆ ಸ್ವತಂತ್ರ ರಾಜ್ಯವನ್ನು ಘೋಷಿಸಿ ಹೈದ್ರಾಬಾದ್ ನಗರವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಅಲ್ಲಿ ಅರಮನೆ ನಿರ್ಮಿಸಿದ್ದನು. ಹೀಗೆ 1707ರಲ್ಲಿ ಔರಂಗಜೇಬನ ಮರಣದ ನಂತರ ಉಂಟಾದ ಮೊಗಲ್ ಸಾಮ್ರಾಜ್ಯದ ವಿಘಟನೆಯೊಂದಿಗೆ ಅಸಪ್‌ಜಹಾನ ವಂಶಸ್ಥರ ಆಳ್ವಿಕೆ ಪ್ರಾರಂಭವಾಯಿತು.
1724 ರಿಂದ ಸೆಪ್ಟೆಂಬರ್ 13, 1948ರ ಪೋಲಿಸ್ ಕಾರ್ಯಾಚರಣೆಯವರೆಗೆ ಹೈದ್ರಾಬಾದ್ ಸಂಸ್ಥಾನವನ್ನು ಆಳಿದ ಏಳು ನಿಜಾಮರ ವಿವರ ಹೀಗಿದೆ.
1. ಮಿರ್ ಖಮರುದ್ದೀನ್ ಚಿನ್ ಖಿಲಜಿ ಖಾನ್(1724-1748)
2. ನವಾಬ್ ನಿಜಾಮ್ ಅಲಿಖಾನ್ (1761-1903)
3. ನವಾಬ್ ಸಿಕಂದರ್ ಬಹಾದ್ದೂರ್ (1804-1828)
4. ನಸೀರು ದೌಲಾ ಬಹಾದ್ದೂರ್ (1829-2857)
5. ಅಪಜಾಲುದೌಲಾ ಬಹಾದ್ದೂರ್ (1857-1869)
6. ಮಿರ್ ಮೆಹಬೂಬ್ ಅಲಿಖಾನ್ ಬಹಾದ್ದೂರ್ (18679-1911)
7. ನವಾಬ್ ಮಿರ್ ಉಸ್ಮಾನ್ ಆಲಿಖಾನ್ ಬಹಾದ್ದೂರ್ (1911-1948)
ಬದುಕಿನಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಸಂಪತ್ತು ಮತ್ತು ಅರವನ್ನೇ ಒಲೈಸುತ್ತಿದ್ದ ಮೀರ್ ಉಸ್ಮಾನ್ ಅಲಿಖಾನ್ ಬಹಾದ್ದೂರ್ ಆಗಸ್ಟ್ 29, 1911ರಂದು ಅಧಿಕಾರಕ್ಕೆ ಬಂದನು. 1937ರಿಂದ 1948ರವರೆಗೆ ಈತನ ಆಸ್ಥಾನದಲ್ಲಿ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿದವರ ವಿವರ ಹೀಗಿದೆ.
1. ಅಕ್ಬರ್ ಹೈದರಿ
2. ಸರ್ ಮಿರ್ಜಾಇಸ್ಮಾಯಿಲ್
3. ಚಟ್ಟಾರಿಯ ನವಾಬ
4. ಮಿರ್ ಲಿಯಾಕ್ ಅಲಿ
‘ಮಜ್ಲೀಸ್-ಎ-ಇಥ್ಥೈಹಾದ್-ಉಲ್-ಮುಸ್ಲಿಮೀನ್’ ಸಂಸ್ಥೆಯ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದವರೆಂದರೆ ನವಾಬ್ ಬಹಾದ್ದೂರ್ ಯಾರ್ ಜಂಗ್ ಮತ್ತು ಕಾಸಿಮ್ ರಜವಿ. ನಿಜಾಮನ ಆಶೀರ್ವಾದ ಹೊಂದಿದ್ದ ಇಥ್ಥೈಹಾದ್ ಸಂಸ್ಥಾನದ ರಾಜಕೀಯ ಹಾಗೂ ಧಾರ್ಮಿಕ ಹಿತಾಸಕ್ತಿಗಳನ್ನು ಪೋಷಿಸುತ್ತಿದ್ದ ಬಹುಮುಖ್ಯ ಕೋಮುಶಕ್ತಿಯಾಗಿತ್ತು.
ತನ್ನ ಸ್ವತಂತ್ರ್ಯ ಅಧಿಕಾರವನ್ನು ಘೋಷಿಸಿಕೊಳ್ಳುವ ಒಂದೇ ಒಂದು ಅವಕಾಶವನ್ನೂ  ನಿಜಾಮನು ಬಿಡುತ್ತಿರಲಿಲ್ಲ. ಬ್ರಿಟಿಷ್ ರೆಸಿಡೆಂಟ್‌ನ ಸಲಹೆಯನ್ನೂ ಧಿಕ್ಕರಿಸಿ ತನ್ನದೇ ‘ಫಸಲಿ’ಯಲ್ಲಿ ಪರಮಾನ್‌ಗಳನ್ನು ಜಾರಿಗೊಳಿಸುತ್ತಿದ್ದ. ಆದರೆ ವಿಸ್ತರಣಾವಾದಿಗಳು ಹಾಗೂ ಯುದ್ಧ ನಿಪುಣರಾದ ಪೇಶ್ವೆಗಳ ಅಧೀನದಲ್ಲಿದ್ದ ಮರಾಠರು ನಿಜಾಮನನ್ನು ಶಾಂತಿ ನೆಮ್ಮದಿಯಿಂದಿರಲು ಬಿಡಲಿಲ್ಲ. 1761ರ ಪಾಣಿಪತ್ ಕದನದ ವಿನಾಶಕಾರಿ ಪರಿಣಾಮ, ವಿದೇಶಿ ಆಕ್ರಮಣಕಾರರ ರಾಜಕೀಯ ಪ್ರಭುತ್ವ ಹಾಗೂ ಮೈಸೂರಿನಲ್ಲಿ ಹೈದಾರಾಲಿಯ ರಾಜಕೀಯ ಚಾಣಾಕ್ಷತನವಾಗಲಿ ಅಥವಾ ನಾನಾ ಫಡ್ನವೀಸ್‌ನ ರಾಜಕೀಯ ಮುತ್ಸದ್ದಿತನವಾಗಲಿ ಅಥವಾ ಮಿಲಿಟರಿ ಜ್ಞಾನವಾಗಲಿ ನಿಜಾಮನಿಗಿರಲಿಲ್ಲ. ಇದರಿಂದಾಗಿ ನೆರಹೊರೆಯ ರಾಜಕೀಯ ಶತ್ರುಗಳ ಆಕ್ರಮಣವನ್ನು ತಡೆಯಲು ಹಾಗೂ ತನ್ನ ಸ್ವಾತಂತ್ರ್ಯ ಮತ್ತು ಸೀಮಿತ ಸಾರ್ವಭೌಮತ್ವವನ್ನು ಕಾಯ್ದುಕೊಳ್ಳಲು ಅಂದು ಪ್ರವರ್ಧಮಾನಕ್ಕೆ ಬರುತ್ತಿದ್ದ ಬ್ರಿಟಿಷರ ನೆರವನ್ನು ಸಹಜವಾಗಿ ನಿಜಾಮನು ಬಯಸಿದನು. ಬ್ರಿಟಿಷ್ ಗೌವರ್ನರ್ ಜನರಲ್ ಲಾರ್ಡ್‌ವೆಲ್ಲೆಸ್ಲಿಯ ‘ಸಹಾಯಕ ಸೈನ್ಯ’ ಪದ್ಧತಿಯನ್ನು ಒಪ್ಪಂದಕ್ಕೆ 1798ರಲ್ಲಿ ನಿಜಾಮನು ಸಹಿ ಹಾಕಿದನು. ನಿಜಾಮನು ತನ್ನ ಸ್ವಾತಂತ್ರ್ಯವನ್ನು ಬ್ರಿಟಿಷರಲ್ಲಿ ಒತ್ತೆ ಇಟ್ಟನು. ಈ ಒಪ್ಪಂದದ ಪ್ರಕಾರ ನಿಜಾಮನು 6 ಬ್ಯಾಟಲಿಯನ್ ಸೈನಿಕರಿಂದ ಕೂಡಿದ್ದ ಸಹಾಯಕ ಸೈನ್ಯದ ವಾರ್ಷಿಕ ಖರ್ಚು 24,17,000 ರೂಪಾಯಿಗಳನ್ನು ಭರಿಸಬೇಕಾಯಿತು. ನಿಜಾಮ ಮತ್ತು ಪೇಶ್ವೆಯ ನಡುವಿನ ರಾಜಕೀಯ ಸಂಬಂಧವನ್ನು ನಿರ್ಧರಿಸುವ ಅಧಿಕಾರ ಬ್ರಿಟಿಷರ ಪಾಲಾಯಿತು.
ರಾಜಕೀಯ ನೀತಿಗಳು
ಪ್ರಾರಂಭವಾದ ದಿನಗಳನ್ನು ಬಿಟ್ಟರೆ ನಾಲ್ಕನೇ ನಿಜಾಮನು ನಾಸಿರುದೌಲನು 1826 ರಿಂದಲೂ ಬ್ರಿಟಿಷರ ಜೊತೆ ಸೌಹಾರ್ದಯುತ ರಾಜಕೀಯ ಸಂಬಂಧವನ್ನು ಕಾಯ್ದುಕೊಂಡಿದ್ದನು. ನಿಜಾಮನು ತನ್ನ ಬಾಹ್ಯ ಸಾರ್ವಭೌಮತ್ವವನ್ನು ಬ್ರಿಟಿಷರಿಗೆ ಒಪ್ಪಿಸಿ ಬಿಟ್ಟಿದ್ದನು. ನಿಜಾಮನ ಆಸ್ಥಾನದಲ್ಲಿ ಬ್ರಿಟಿಷರ ರೆಸಿಡೆಂಟನು ಚಕ್ರವರ್ತಿಯ ಸೈನ್ಯದ ಮೇಲಾಧಿಕಾರಿಯಾಗಿದ್ದನು. ದಮನ ಹಾಗೂ ಓಲೈಸುವ ನೀತಿಗೆ ಅನುಗುಣವಾಗಿ, ಮರಾಠ ಹಾಗೂ ಮೈಸೂರು ರಾಜಕೀಯ ಶಕ್ತಿಗಳ ಅಧಿಕಾರ ವಿಸ್ತರಿಸಿದಂತೆ, ತಮ್ಮ ಆರ್ಥಿಕ ಹಿತಾಸಕ್ತಿ ಮತ್ತು ದಕ್ಷಿಣ ಭಾರತದಲ್ಲಿ ತಮ್ಮ ಪರಮಾಧಿಕಾರವನ್ನು ಕಾಯ್ದುಕೊಳ್ಳಲು ಹೈದ್ರಾಬಾದ್ ಸಂಸ್ಥಾನವನ್ನು ಬ್ರಿಟಿಷರು ಒಂದು ಬರಪ್ ರಾಜ್ಯವನ್ನಾಗಿ ಬಳಸಿದರು. ಈ ಕಾರಣದಿಂದಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಸಿಡಿದೆದ್ದ ಹೈದರಾಲಿ ಮತ್ತು ಮರಾಠರಿಗೆ ನಿಜಾಮನು ನೆರವು ನೀಡಲಿಲ್ಲ. ಟಿಪ್ಪುಸುಲ್ತಾನನು ಸೋತ ನಂತರ 1796ರಲ್ಲಿ ಬ್ರಿಟಿಷರು ಮತ್ತು ನಿಜಾಮನ ನಡುವೆ ಉಂಟಾದ ಒಪ್ಪಂದದ ಪ್ರಕಾರ ಇಂದು ಹೈದ್ರಾಬಾದ್ ಕರ್ನಾಟಕ ಎಂದು ಕರೆಯುವ ಬೀದರ್, ಗುಲಬರ್ಗಾ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಬ್ರಿಟಿಷರು ನಿಜಾಮನಿಗೆ ಕಾಣಿಕೆಯಾಗಿ ನೀಡಿದರು. ಇದರಿಂದಾಗಿ ಹೈದ್ರಾಬಾದ್ ಸಂಸ್ಥಾನದ ಆಂತರಿಕ ವ್ಯವಹಾರದಲ್ಲಿ ನಿಜಾಮನಿಗೆ ಸಂಪೂರ್ಣ ಅಧಿಕಾರ ನೀಡಲಾಯಿತು.
1857ರ ದಂಗೆ ಮತ್ತು ಪರಿಣಾಮ
ಐದನೇ ನಿಜಾಮನ ಪ್ರಧಾನಮಂತ್ರಿ ಒಂದನೇ ಸಾಲಾರ್ ಜಂಗನು ಮೌನವಾಗಿ ಬಿಟ್ಟಿದಂತೆ ಬ್ರಿಟಿಷರ ಆಳ್ವಿಕೆ ಮತ್ತು ದಾಸ್ಯದಿಂದ ಮುಕ್ತರಾಗಲು ಪೇಶ್ವೆ ನಾನಾ ಸಾಹೇಬನ ಕರೆಯಂತೆ ಹಮ್ಮಿಗೆ ಕೆಂಚನಗೌಡ, ಮುಂಡರಿಗೆ ಭೀಮರಾವ್, ಸುರುಪುರದ ರಾಜ ವೆಂಕಟಪ್ಪ ನಾಯಕ ಮುಂತಾದವರ ಜೊತೆಗೆ ಏಕಕಾಲದಲ್ಲಿ ಹೈದ್ರಾಬಾದ್, ಮದರಾಸು, ಮೈಸೂರು, ತಿರುವಾಂಕೂರು ಹಾಗೂ ಕೊಚ್ಚಿನ್ ರಾಜ್ಯಗಳೂ ಸಹ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದಾಗಿ ಸ್ಪಂದಿಸುತ್ತಿದ್ದವು. ಆದರೆ ನಿಜಾಮನು ಬ್ರಿಟಿಷರೆಂಬ ಅಂಕುಶ ವನ್ನು ಸಣ್ಣಪುಟ್ಟ ಸಂಸ್ಥಾನಗಳನ್ನು ಹತ್ತಿಕ್ಕಲು ಬಳಸುತ್ತಿದ್ದನು. ಇಷ್ಟಾದರೂ ಸಹ ಸುರಪುರದ ಮತ್ತು ಹಲಗಲಿಯ ಬೇಡರು ಮತ್ತು ಇತರ ವೀರರು ವೀರಾವೇಶದಿಂದ ಹೋರಾಡಿ ಬ್ರಿಟಿಷ್ ಸೈನ್ಯದಲ್ಲಿ ಉನ್ನತ ಅಧಿಪತಿಯಾಗಿದ್ದ ಕ್ಯಾಪ್ಟನ್ ನ್ಯೂಬರಿಯನ್ನು ಕೊಂದುಹಾಕಿದನು. ಬ್ರಿಟಿಷರು ಮತ್ತು ನಿಜಾಮನೂ ಒಂದುಗೂಡಿ ದೇಶಭಕ್ತಿ ಉನ್ಮಾದದಿಂದ ನಡೆಸಿದ ಜನರ ಹೋರಾಟವನ್ನು ದಮನ ಮಾಡಿದರು. ಇಷ್ಟಾದರೂ ಸಹ ಸುರಪುರದ ರಾಜಾ ವೆಂಕಟಪ್ಪ ನಾಯಕನು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಹುತಾತ್ಮನಾದನು.
ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಬೇಕೆಂಬ ದಕ್ಷಿಣ ಭಾರತದ ಜನತೆಯ ಅಭಿಲಾಷೆಯು ನಿಜಾಮ ನವಾಬ್ ಅಫ್‌ಜಾಲುದೌಲ ಮತ್ತು ದಿವಾನ ಸರ್ ಸಾಲಾರ್‌ಜಂಗ್‌ರವರ ಬ್ರಿಟಿಷ್ ಪರ ನೀತಿಯಿಂದಾಗಿ ಈಡೇರಿರಲಿಲ್ಲ. 1858ರಲ್ಲಿ ಬಾಂಬೆ ಪ್ರಾಂತದ ಗೌವರ್ನರನು ಗವರ್ನರ್ ಜನರಲ್‌ಗೆ ಬರೆದ ಒಂದು ಪತ್ರದಲ್ಲಿ ನಿಜಾಮನು ಕೈ ಬಿಟ್ಟರೆ ಎಲ್ಲವೂ ಕೈ ಬಿಟ್ಟಂತೆ ಎಂದು ಒಕ್ಕಣೆ ಬರೆದಿದ್ದ. ನಿಜಾಮನು ಬ್ರಿಟಿಷರ ಅತ್ಯಂತ ನಿಷ್ಟಾವಂತ ಹಿಂಬಾಲಕನಾಗಿದ್ದುದರಿಂದಲೇ 1857ರ ಸಂಗ್ರಾಮದ ಅಲೆಗಳು ದಕ್ಷಿಣ ಭಾರತದಲ್ಲಿ ಸಂಪೂರ್ಣ ಹರಡಲಿಲ್ಲ.
1857ರ ದಂಗೆಯ ನಂತರ ಬ್ರಿಟಿಷ್ ರೆಸಿಡೆಂಟನು ನಿಜಾಮನಿಗೆ ಅಸಪ್ ಜಹಾ ಧ್ವಜ ಹಾಗೂ ತನ್ನ ರಾಷ್ಟ್ರಗೀತೆಯೊಂದಿಗೆ ಕಂದಾಯ, ಹಣದ ಮುದ್ರಣ, ಪೋಲಿಸು, ಬ್ಯಾಂಕು, ಸಾರಿಗೆ, ಉದ್ದಿಮೆ ಮುಂತಾದ ಕ್ಷೇತ್ರಗಳಲ್ಲಿ ಪೂರ್ಣ ಅಧಿಕಾರವನ್ನು ನೀಡಲಾಗಿತ್ತು. ಆದರೆ ಸೇನಾಪಡೆ ಹಾಗೂ ರಾಜಕೀಯ ಸಂಬಂಧ ಕುರಿತಂತೆ ನಡೆಯಬೇಕಾಗಿತ್ತು.
1926ರಲ್ಲಿ ನಿಜಾಮನು ತನ್ನ ಸ್ವತಂತ್ರ ಅಧಿಕಾರ ಹಾಗೂ ಬ್ರಿಟಿಷರಿಗೆ ಸಮಾನವಾದ ಸ್ಥಾನಮಾನ ಪಡೆಯಲು ಮಾಡಿದ ಯತ್ನವನ್ನು ಗೌವರ್ನರ್ ಜನರಲ್ ಲಾರ್ಡ್ ರೀಡಿಂಗ್ ಸಮರ್ಥವಾಗಿ ಹತ್ತಿಕ್ಕಿದ್ದಲ್ಲದೆ. ಇಥ್ಥೆಹಾದ್‌ನ ಮತಾಂಧತೆಯಿಂದ ಮೆರೆಯುತ್ತಿದ್ದ  ನಿಜಾಮನ ದುರಾಡಳಿತವನ್ನು ನಿಯಂತ್ರಿಸಲು ಹಲವಾರು ಕ್ರಮ ಕೈಗೊಂಡನು. ಹೈದ್ರಾಬಾದ್ ಸಂಸ್ಥಾನದ ಆಂತರಿಕ ವ್ಯವಹಾರಗಳಲ್ಲಿ ನಿರ್ಣಾಯಕ ಹಸ್ತಕ್ಷೇಪ ನಡೆಸಲು ಬೇಕಾದ ತನ್ನ ಪರಮಾಧಿಕಾರವನ್ನು ಘೋಷಿಸುವುದರ ಜೊತೆಗೆ ಮಾರ್ಚ್ 27, 1927ರಂದು ಪರಿಸ್ಥಿತಿಯನ್ನು ಹತೋಟಿಗೆ ತರಲು ನಾಲ್ವರ ಬ್ರಿಟಿಷ್ ಅಧಿಕಾರಿಗಳನ್ನು ನೇಮಿಸಲಾಯಿತು. ವೈಸರಾಯನು ತನ್ನ ಒಂದು ಸಂದೇಶದಲ್ಲಿ ನಿಜಾಮನ ಸ್ಥಾನಮಾನವು ಭಾರತದ ಉಳಿದೆಲ್ಲಾ ಸಂಸ್ಥಾನಿಕರ ಸ್ಥಾನಮಾನಕ್ಕಿಂತ ಯಾವುದೇ ವಿಧದಲ್ಲಿ ಭಿನ್ನವಲ್ಲ ಎಂದು ಘೋಷಿಸಿದನು. ಬ್ರಿಟಿಷರ ನೇರ ಮೇಲ್ವಿಚಾರಣೆಯಲ್ಲಿ ನಿಜಾಮನು ಆಡಳಿತ ನಡೆಸಬೇಕಾಯಿತು.
ಇದೇ ವೇಳೆಗೆ 1930ರಲ್ಲಿ ಮಹಾತ್ಮಗಾಂಧಿಯವರ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಜನತೆಯ ಅಸಮಾಧಾನವು ಉಗ್ರಪ್ರತಿಭಟನೆ ರೂಪದಲ್ಲಿ ಸ್ಫೋಟಗೊಂಡಿತ್ತು. ಸುಮಾರ 80,000 ರೈತರು ಗುಜರಾತ್‌ನ ಬಾರ್ಡೋಲಿಯಲ್ಲಿ ಭೂಕಂದಾಯ ಕೊಡಲು ನಿರಾಕರಿಸಿ ಬ್ರಿಟಿಷ ಸರ್ಕಾರದ ದಮನಕಾರಿ ನೀತಿಯನ್ನು ಧೈರ್ಯದಿಂದ ಧಿಕ್ಕರಿಸಿದ್ದರು. ಅಸಹಕಾರ ಚಳವಳಿಯಲ್ಲಿ ‘ಜನತೆಗೆ ಪ್ರಾತಿನಿಧ್ಯ ಕೊಡುವವರೆಗೆ ತೆರಿಗೆ ನೀಡುವುದಿಲ್ಲ’ ಎಂದು ದೊಡ್ಡ ಧ್ವನಿಯಲ್ಲಿ ಜನತೆ ಘೋಷಿಸಿತು. ಹೈದ್ರಾಬಾದ್ ಸಂಸ್ಥಾನದಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು ಬ್ರಿಟಿಷ್ ಸರ್ಕಾರದ ನೆರವು ಬೇಕೇ ಬೇಕು ಎಂಬುದು ನಿಜಾಮನಿಗೆ ಮನದಟ್ಟಾಯಿತು. ಇದರಿಂದಾಗಿ ನಿಜಾಮನು ಬ್ರಿಟಿಷರ ‘ನಿಷ್ಠಾವಂತ’ ಸಾಮಂತನಾಗಿ ಉಳಿದುಕೊಂಡು ತನ್ನ ಸಂಸ್ಥಾನದಲ್ಲಿ ‘ಕೋಮುವಾದಿ ಹಾಗೂ ದಮನಕಾರಿ’ ನೀತಿಯನ್ನು ನಿರ್ಭೀತಿಯಿಂದ ಜಾರಿಗೆ ತಂದನು. ಬ್ರಿಟಿಷರಿಗೆ ಬೇಕಾದುದು ಕೂಡ ಇದೇ ಆಗಿತ್ತು. ಬ್ರಿಟಿಷ್ ರೆಸಿಡೆಂಟರ್ ಹಾಗೂ ಇತ್ತೆಹಾದ್ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಕೊನೆಯ ನಿಜಾಮ ಮಿರ್ ಉಸ್ಮಾನ್ ಅಲಿಖಾನ್ ಬಹಾದ್ದೂರನು ಜನತೆಯ ಅಶೋತ್ತರಗಳಿಗೆ ಕಿವುಡನಾಗಿದ್ದನು. ಜನರು ನಿಜಾಮನ ನೇತೃತ್ವದಲ್ಲಿ ಜನಪ್ರಿಯ ಸರ್ಕಾರ ರಚಿಸುವ ಕನಸು ಕಟ್ಟಿದ್ದರು.
ಸಂವಿಧಾನಾತ್ಮಕ ಸುಧಾರಣೆಗಳು
ಭಾರತದಲ್ಲಿನ ಉಳಿದೆಲ್ಲಾ ಸಂಸ್ಥಾನಗಳಂತೆ ಹೈದ್ರಾಬಾದ್ ಸಂಸ್ಥಾನವೂ ಕೂಡ ಮಧ್ಯಯುಗೀನ ಪ್ರತಿಗಾಮಿ ಸರ್ವಾಧಿಕಾರಿ ಪರಂಪರೆಯ ಪಳೆಯುಳಿಕೆಯಾಗಿತ್ತು. ಆಡಳಿತ ವ್ಯವಸ್ಥೆಯ ಸಾರಸಗಟಾಗಿ ಸರ್ವಾಧಿಕಾರಿ ಸ್ವರೂಪದ್ದಾಗಿತ್ತು. ನಿಜಾಮನಿಗೆ ಸಲಹೆ ಮಾರ್ಗದರ್ಶನ ನೀಡುತ್ತಿದ್ದ ಮತ್ತು ಆತನ ನೇರ ನಿಯಂತ್ರಣದಲ್ಲಿದ್ದ ಕಾರ್ಯಾಂಗ ನೌಕರಶಾಹಿ ಆಡಳಿತ ವ್ಯವಸ್ಥೆ ಮೇಲೆ ಸಂಪೂರ್ಣ ಅಧಿಕಾರ ಹೊಂದಿತ್ತು. ನಿಜಾಮನು ಆಸ್ಥಾನದಲ್ಲಿ ಬ್ರಿಟಿಷ್ ಸರ್ಕಾರದ ಒಬ್ಬ ಪ್ರತಿನಿಧಿಯು ಹೈದ್ರಾಬಾದ್‌ನಲ್ಲಿ ನೆಲೆಸಿರುತ್ತಿದ್ದನು. ಅವನನ್ನು ರೆಸಿಡೆಂಟ್ ಬಹಾದ್ದೂರ್ ಎಂದು ಸಂಬೋಧಿಸಲಾಗುತ್ತಿತ್ತು. ಹೈದ್ರಾಬಾದ್ ಸಂಸ್ಥಾನದ ಆಡಳಿತವು ಇವನ ಸಲಹೆ ಮಾರ್ಗದರ್ಶನಕ್ಕೆ ಅನುಗುಣವಾಗಿ ನಡೆಯುತ್ತಿತ್ತು. ವಾಸ್ತವವಾಗಿ ಹೈದ್ರಾಬಾದ್ ಸಂಸ್ಥಾನದಲ್ಲಿ  ಒಬ್ಬರಲ್ಲದೆ ಇಬ್ಬರು ಅಂದರೆ ನಿಜಾಮ ಮತ್ತು ಬ್ರಿಟಿಷರು ಅಧಿಕಾರ ನಡೆಸುತ್ತಿದ್ದರು.
ಮೊದಲನೆಯ ಮಹಾಯುದ್ಧವನ್ನು ಅನುಸರಿಸಿ ಸಂಭವಿಸಿದ ದೌಲತ್ ಶಾಸನ ಜಲಯನ್‌ವಾಲಾಬಾಗ್ ಹತ್ಯಾಕಾಂಡ, ಖಿಲಾಫತ್ ಚಳವಳಿಗಳ ಪರಿಣಾಮವಾಗಿ ಬ್ರಿಟಿಷರ ದಮನಕಾರಿ ನೀತಿಯು ಸ್ವಲ್ಪಟ್ಟಿಗೆ ಸೌಮ್ಯವಾಗಿಬಿಟ್ಟಿತು ಮತ್ತು ಅವರು ಮಾಂಟಿಗೋ ಚೇಮ್ಸ್‌ಪೋರ್ಡ್ ಸುಧಾರಣೆಗಳನ್ನು ಜಾರಿಗೆ ತಂದರು. ಭಾರತದಲ್ಲಿ ಜವಾಬ್ದಾರಿ ಸರ್ಕಾರ ರಚಿಸುವ ದಿಕ್ಕಿನಲ್ಲಿ ಬ್ರಿಟಿಷರು ತೆಗೆದುಕೊಂಡ ಪ್ರಥಮ ಹೆಜ್ಜೆ ಇದಾಗಿತ್ತು. ಬ್ರಿಟಿಷ್ ಭಾರತದಲ್ಲಿ ಜರುಗುತ್ತಿದ್ದ ಈ ಬದಲಾವಣೆಗಳ ಪರಿಣಾಮದಿಂದ ಹೈದ್ರಾಬಾದ್ ಸಂಸ್ಥಾನವು ಮುಕ್ತವಾಗಿರುವಂತಿಲ್ಲ. ಬದಲಾಗುತ್ತಿದ್ದ ರಾಜಕೀಯ ಏರುಪೇರುಗಳ ಗತಿ ದಿಕ್ಕುಗಳನ್ನು ಗಮನಿಸಿ 1919ರಲ್ಲಿ ನಿಜಾಮನು ಸಂಸ್ಥಾನದಲ್ಲಿ ರಾಜಕೀಯ ಸುಧಾರಣೆಗಳನ್ನು ತರಲು ಸಲಹೆ ಸೂಚನೆ ನೀಡಲು ಸರ್ ಅಲಿ ಇಮಾಮ್ ಆಯೋಗವನ್ನು ರಚಿಸಿದನು. ಈ ಆಯೋಗವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮೊದಲೇ ಸರ್ ಅಲಿ ಇಮಾಮ್‌ರವರು ರಾಜೀನಾಮೆ ನೀಡಿದರು. ಅನಂತರ ನಿಜಾಮನು ಆರ್.ಬಿ.ಮುಗ್ದಮ್ ಆಯೋಗವನ್ನು ಅದೇ ಉದ್ದೇಶಕ್ಕಾಗಿ ನೇಮಿಸಿದನು. ಆಡಳಿತ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳ ಸಂಸ್ಥಾನದಲ್ಲಿ ರಾಜಕೀಯ ಸುಧಾರಣೆಗಳನ್ನು ಒತ್ತಾಯಿಸುವ ಸಲುವಾಗಿ 1921ರಲ್ಲಿ ರೂಪುಗೊಂಡಿದ್ದ ರಾಜಕೀಯ ಸುಧಾರಣಾ ಸಂಘದ ಸ್ಥಾಪನೆಗೆ ನಿಜಾಮನು ಅನುಮತಿ ನೀಡಲಿಲ್ಲ. ಆದ್ದರಿಂದ ಾಷ್ಟ್ರೀಯವಾದಿಗಳಾಗಿದ್ದ ವಾಮನ ನಾಯಕ್, ವೈ.ಎಂ.ಕಾಳೆ, ವಿನಾಯಕರಾವ್, ವಿದ್ಯಾಲಂಕಾರ್ ಮತ್ತು ಕಾಶಿನಾಥ ರಾವ್ ವೈದ್ಯ ಮುಂತಾದವರು ಸಂವಿಧಾನಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸು ವಂತೆ ನಿಜಾಮನ ಮೇಲೆ ಒತ್ತಡ ಹೇರುವ ಸಲುವಾಗಿ ಸಂಸ್ಥಾನದದ್ಯಂತ ಜನರ ಗಮನ ಸೆಳೆಯಲು ಕರಪತ್ರ ಮುದ್ರಿಸುವ ಭೂಗತ ಚಟುವಟಿಕೆಗಳನ್ನು ಪ್ರಾರಂಭಿದರು. 1932ರಲ್ಲಿ ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸುವ ಸಲುವಾಗಿ ‘ಹಿಂದೂ ಉನ್ನತ ಸಮಿತಿ’ಯನ್ನು ರಾಷ್ಟ್ರೀಯವಾದಿಗಳು ಪ್ರಾರಂಭಿಸಿದರು. ರಾಷ್ಟ್ರೀಯವಾದಿ ಮುಸ್ಲಿಮ ನಾಯಕರುಗಳಾದ ಬ್ಯಾರಿಸ್ಟರ್ ಅಕ್ಬರ್ ಅಲಿಖಾನ್, ಮಿರ್ಜಾ ಜಹೀದ್‌ಬೇಕ್, ಅಬುಹಸನ್ ಸಯ್ಯದ್ ಅಲಿ ಮೊದಲಾದವರು ಹಿಂದೂಗಳ ಜೊತೆ ಸೇರಿ ಹೈದ್ರಾಬಾದ್ ಸಂಸ್ಥಾನದ ಉಚ್ಚ ನ್ಯಾಯಾಲಯದಲ್ಲಿ ನಿವೃತ ನ್ಯಾಯಾಧೀಶ ಸರ್, ನಜಾಮತ್ ಜಂಗ್‌ರವರ ಅಧ್ಯಕ್ಷತೆಯಲ್ಲಿ 1934ರಲ್ಲಿ ‘ಸಂಸ್ಥಾನ ನಾಗರೀಕ ಲೀಗ್’ ಸ್ಥಾಪಿಸಿ ಚುನಾವಣೆ ನಿಯಮದ ಆಧಾರದ ಮೇಲೆ ವಿಧಾನಸಭೆ ನಾಗರೀಕ ಎಂದು ಒತ್ತಾಯಿಸ ತೊಡಗಿದರು. ಕಾನೂನಿನ ಕಣ್ಣಿನಲ್ಲಿ ಎಲ್ಲಾ ಹೈದ್ರಾಬಾದಿಗಳು ಸಮಾನ; ಎಲ್ಲರಿಗೂ ಪೂರ್ಣನಾಗರಿಕ ಹಕ್ಕುಗಳು ದತ್ತವಾಗಬೇಕು ನಾಗರಿಕರ ಜೀವ ಮತ್ತು ಧಾರ್ಮಿಕ ಸ್ವಾತಂತ್ರ್ಯಗಳನ್ನು ಒದಗಿಸಬೇಕು ಎಂದು ಲೀಗು ಘೋಷಸಿತು; ಚುನಾಯಿತ ಸದಸ್ಯರಿರುವ ವಿಧಾನಸಭೆಗೆ ಕಾರ್ಯಾಂಗವು ವಿಧೇಯವಾಗಿರುವುದು ಅವಶ್ಯಕ ಎಂದು ಲೀಗ್ ಒತ್ತಾಯಿಸಿ ಲೀಗ್ ಸ್ವತಂತ್ರ ನ್ಯಾಯಾಂಗದ ಪರಮಾಧಿಕಾರದಲ್ಲಿ ನಂಬಿಕೆ ಇಟ್ಟಿತು. ಲೀಗ್‌ನ ಈ ಬಗೆಯ ಕಾರ್ಯಚಟುವಟಿಕೆಗಳಿಂದ ನಿಜಾಮನು ‘ಕಪ್ಪುಸುತ್ತೋಲೆ’ ಹೊರಡಿಸಿ ಲೀಗನ್ನು ನಿಷೇಧಿಸಿದನು.
ಈ ಮಧ್ಯೆ ಬ್ರಿಟಿಷ್ ಸರ್ಕಾರವು 1935ರಲ್ಲಿ ಒಂದು ಕಾನೂನನ್ನು ಜಾರಿಗೊಳಿಸಿ ಪ್ರಾಂತೀಯ ಸ್ವಾಯತ್ತತೆಯನ್ನು ಘೋಷಿಸಿತು. ಹೈದ್ರಾಬಾದ್ ಸಂಸ್ಥಾನದಲ್ಲಿನ ಜನರಿಗೂ ಸಹ ಇದನ್ನು ಪಡೆಯುವ ಅಭಿಲಾಷೆ ಸಹಜವಾಗಿ ಮೂಡಿಬಂತು. ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವ ಸ್ವಾತಂತ್ರ್ಯಬೇಕು ಎಂಬ ಭಾವನೆ ಹೈದ್ರಾಬಾದ್‌ನ ನಾಗರಿಕಲ್ಲೂ ಮೂಡಿಬಂತು. ಈ ಬಗೆಯ ರಾಜಕೀಯ ಬೆಳವಣಿಗೆಯಿಂದ ಉತ್ಸಾಹಿತರಾದ ಪ್ರಾಂತೀಯ ಸಾಹಿತ್ಯ ಸಮಾವೇಶಗಳನ್ನು ಸಂಘಟಿಸುತ್ತಿದ್ದ, ರಾಜ್ಯದ ಹೊರಗೆ ಹೈದ್ರಾಬಾದ್ ಸಂಸ್ಥಾನ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಿದ್ದ ಜನರ ಮನಸ್ಸಿನಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚುವುದರಲ್ಲಿ ಯಶಸ್ವಿಯಾಗಿದ್ದ ಹೈದ್ರಾಬಾದ್ ಸಂಸ್ಥಾನದ ರಾಷ್ಟ್ರೀಯವಾದಿಗಳು 1938ರಲ್ಲಿ ನಾಗರಿಕ ಮತ್ತು ರಾಜಕೀಯ ಹಕ್ಕುಗಳಿಗಾಗಿ ಆರ್ಯಸಮಾಜ, ಹಿಂದೂ ಮಹಾಸಭಾ, ರಾಜ್ಯ ಕಾಂಗ್ರೆಸ್‌ಗಳ ನೇತೃತ್ವದಲ್ಲಿ ಸತ್ಯಾಗ್ರಹ ಚಳವಳಿ ಪ್ರಾರಂಭಿಸಲು ನಿಶ್ಚಿಯಿಸಿದರು. ಈ ಸತ್ಯಾಗ್ರಹದ ಪರಿಣಾಮವಾಗಿ 1938ರಲ್ಲಿ ನಿಜಾಮನು ‘ದೇವದೂತ ಸಿದ್ಧಾಂತ’ವನ್ನು ಕೈಬಿಡಬೇಕಾಯಿತು. ಅಂತಿಮವಾಗಿ ದಿವಾನ್ ಬಹಾದ್ದೂರ್ ಆರ್ವಮುದ್ದು ಅಯ್ಯಂಗಾರ್‌ರವರ ಅಧ್ಯಕ್ಷತೆಯಲ್ಲಿ ಒಂದು ಸುಧಾರಣೆ ಯೋಜನೆ ರೂಪಿಸಿಕೊಡಲು  ಸಂವಿಧಾನಾತ್ಮಕ ಸುಧಾರಣಾ ಆಯೋಗವನ್ನು ನೇಮಿಸಿದನು. ನಿಜಾಮನು ತನ್ನ ಸಾರ್ವ ಭೌಮತ್ವವನ್ನು ಸಂಪೂರ್ಣವಾಗಿ ಜನತೆಗೆ ವರ್ಗಾಯಿಸಲು ಸಿದ್ಧನಿರಲಿಲ್ಲ. ಆದರೆ ರಾಜ್ಯ ಸರ್ಕಾರದ ಮಟ್ಟದಲ್ಲಿ ವಿವಿಧ ಹಿತಾಸಕ್ತಿಗಳ ಗುಂಪುಗಳಿಗೆ ಅವಕಾಶ ನೀಡಲು ಸಿದ್ಧನಿದ್ಧನು. ಈ ನಂಬಿಕೆಗಳ ಹಿನ್ನೆಲೆಯಲ್ಲಿ ಆಯೋಗವು ತನ್ನ ಕಲಹೆ ನೀಡಬೇಕಾಗಿತ್ತು.
ಈ ಆಯೋಗವು 88 ಸದಸ್ಯರಿರುವ ಪ್ರಜಾಪರಿಷತ್ತಿನಲ್ಲಿ ಶೇ.12ರಷ್ಟಿರುವ ಮುಸ್ಲಿಮರಿಗೆ ಶೇ.50ರಷ್ಟು ಪ್ರಾತಿನಿಧ್ಯವಿರಬೇಕೆಂದು ಸಲಹೆ ಮಾಡಿತು. ಇನ್ನು ಉಳಿದ ಶೇ.50ರಷ್ಟು ಸದಸ್ಯತ್ವವನ್ನು ಕ್ರಿಶ್ಚಿಯನ್ನರೂ ಸೇರಿದಂತೆ ಹಿಂದೂಗಳು ಹೊಂದಬಹು ದಾಗಿತ್ತು. ಯಾರು ವಾರ್ಷಿಕ ರೂ.100ಗಳಷ್ಟು ಭೂಕಂದಾಯ ಸಲ್ಲಿಸುತ್ತಿದ್ದಾರೊ ಅವರಿಗೆ ಮಾತ್ರ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿತ್ತು. ನಿಜಾಮನು ರೂಪಿಸಿದ್ದ ‘ಪ್ರಜಾಪರಿಷತ್’ ನಲ್ಲಿನ 88 ಸದಸ್ಯರ ವಿವರ ಹೀಗಿತ್ತು.
ಚುನಾಯಿತ ಸದಸ್ಯರು                                          42
ಸರ್ಕಾರದಿಂದ ನೇಮಿಸಲ್ಪಟ್ಟವರು                           28
ಸರ್ ಐ ಖಾಸ್‌ನಿಂದ ನೇಮಿಸಲ್ಪಟ್ಟವರು                   03
ಜಮೀನ್ದಾರರು                                                     05
ಕಾರ್ಯಾಂಗ ಮಂಡಳಿ ಸದಸ್ಯರು                            10
ಒಟ್ಟು 88
ಪ್ರಜಾಪ್ರಭುತ್ವದ ಬೇಡಿಕೆಯನ್ನು ಜನರ ಅಶೋತ್ತರಗಳಿಗೆ ಮನ್ನಣೆಯನ್ನೂ ನಿಜಾಮನು ಈ ಬಗೆಯಲ್ಲಿ ಪೂರೈಸಿದನು ಸ್ವಾಮಿ ರಮಾನಂದತೀರ್ಥರ ನಾಯಕತ್ವದ ರಾಜ್ಯ ಕಾಂಗ್ರೆಸ್ಸು ಈ ಸೂತ್ರವನ್ನು ಸಂಪೂರ್ಣವಾಗಿ ತಿರಸ್ಕರಿಸಿತು. ನಿಜಾಮನು ಇಂಥ ಕೋಮುವಾದಿ ಸುಧಾರಣೆ ಮೂಲಕ ರಾಷ್ಟ್ರೀಯವಾದಿ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾನೆ ಎಂದು ಅದು ಘೋಷಿಸಿತು. ಈ ಬಗೆಯ ಸುಧಾರಣೆ ಮೂಲಕ ಹಿಂದೂಗಳಲ್ಲಿ ಭಿನ್ನಾಭಿಪ್ರಾಯ ಮೂಡಿಸುವುದು ಅವನ ಉದ್ದೇಶವಾಗಿತ್ತು. ಈ ಸುಧಾರಣೆಯಿಂದ ಸಂಸ್ಥಾನದ ಬಹುಸಂಖ್ಯಾತ ಸಮುದಾಯಕ್ಕೆ ಮುಸ್ಲಿಮ ಸಮುದಾಯ ಶರಣಾಗಬೇಕಾದೀತು ಎಂಬ ಕಾರಣಕ್ಕಾಗಿ ಇಥ್ಥಹಾದ್ ಕೂಡ ತಿರಸ್ಕರಿಸಿತು. ಸಂವಿಧಾನಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸುವುದರಲ್ಲಿ ನಿಜಾಮನು ಅನುಸರಿಸುತ್ತಿದ್ದ ವಿಳಂಬ ನೀತಿಯಿಂದಾಗಿ ದೇಶಭಕ್ತರಿಗೆ ಸತ್ಯಾಗ್ರಹ ಬಿಟ್ಟು ಬೇರೆ ಮಾರ್ಗವೇ ಇಲ್ಲದಂತಾಯಿತು. ಆಗಿಂದಾಗ್ಗೆ ನಿಜಾಮನು ರಾಷ್ಟ್ರೀಯವಾದಿ ಹೋರಾಟಗಾರರ ಬಂಧನಕ್ಕೆ ಫರ್ಮಾನ್‌ಗಳನ್ನು ಹೊರಡಿಸುತ್ತಿದ್ದನು. ನಿಜಾಮನ ಈ ನೀತಿಯನ್ನು ವಿರೋಧಿಸಲು ವಿನಾಯಕರಾವ್ ವಿದ್ಯಾಲಂಕಾರ್‌ರವರ ನಾಯಕತ್ವದಲ್ಲಿ ವಕೀಲರ ವೇದಿಕೆಯನ್ನು ನಿರ್ಮಿಸಲಾಯಿತು. ಇವೆಲ್ಲಾ ಬೆಳವಣಿಗೆಗಳು ರಾಷ್ಟ್ರೀಯವಾದಿಗಳು ಹಾಗೂ ನಿಜಾಮನ ಪಡೆಗಳ ನಡುವೆ ಘರ್ಷಣೆಗೆ ಕಾರಣವಾದವು.
ಸಾಮಾನ್ಯ ಜನರ ಸ್ಥಿತಿಗತಿಗಳು
ಇತಿಹಾಸದ ಅಧ್ಯಯನವೆಂದರೆ ಘಟನೆಗಳ ಕಾರ್ಯಾಕಾರಣ ಸಂಬಂಧದ ಅಧ್ಯಯನ ಘಟನೆಗಳ ಸ್ಫೋಟಕ್ಕೆ ಸನ್ನಿವೇಶವು ಕಾರಣವಾಗಿರುತ್ತದೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಜನರಿಗೆ ಪ್ರೇರಣೆ ನೀಡಿದ ಅಂಶಗಳಾವುವು ಎಂಬುದನ್ನು ಅರ್ಥಮಾಡಿಕೊಳ್ಳಲು ಅಂದು ಹೈದ್ರಾಬಾದ್ ಸಂಸ್ಥಾನದಲ್ಲಿ ಮುಖ್ಯವಾಗಿ ನಮ್ಮ ಅಧ್ಯಯನವು ಒಳಗೊಳ್ಳುವ ಪ್ರದೇಶದಲ್ಲಿ ಜನರ ಸ್ಥಿತಿಗತಿ ಹೇಗಿತ್ತು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಹೈದ್ರಾಬಾದ್ ಕರ್ನಾಟಕದ ರಾಜಕೀಯ ಹಾಗೂ ಸಾಂಸ್ಕೃತಿಕ ಪರಂಪರೆಯು ರಾಷ್ಟ್ರಕೂಟರು, ಚಾಲುಕ್ಯರು, ಕಲ್ಯಾಣದ ಕಲಚೂರಿಗಳು, ವಿಜಯನಗರ, ಬಹಮನಿ ಮುಂತಾದ ಪ್ರಭುತ್ವ ಗಳು ಬಳಿವಳಿಯಾಗಿ ನೀಡಿದ ಭವ್ಯ ಪರಂಪೆಯಾಗಿತ್ತು. ಅನಾದಿಕಾಲದಿಂದಲೂ ಈ ಪ್ರದೇಶದ ಸಂಸ್ಕೃತಿಯನ್ನು ಕೃಷ್ಣಾ, ಭೀಮಾ, ಕಾಗಿನ ಮುಂತಾದ ನದಿಗಳು ಉಪನದಿಗಳ ಶ್ರೀಮಂತಗೊಳಿಸುತ್ತಾ ಬಂದಿವೆ. 1926ರಲ್ಲಿ ಮುಂಬಯಿಯಲ್ಲಿ ನಡೆದ  ಎರಡನೇ ಹೈದ್ರಾಬಾದ್ ರಾಜಕೀಯ ಸಮಾವೇಶದ ಅಧ್ಯಕ್ಷರೂ ಹಾಗೂ ಪ್ರಸಿದ್ಧ ವಿದ್ವಾಂಸರೂ ಆಗಿದ್ದ ವೈ.ಎಮ್.ಕಾಳೆಯವರು ಈ ಪ್ರದೇಶದ ಸಾಂಸ್ಕೃತಿಕ ಪರಂಪರೆಯು ಗಟ್ಟಿಯಾದ ಹಿಂದು ಮುಸ್ಲಿಮ ಸೌಹಾರ್ದತೆ ಮೇಲೆ ನಿಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರದೇಶದಲ್ಲಿರುವ ಗ್ರೀಕ್ ಕಲೆಯ ಅವಶೇಷ, ಎಲ್ಲೋರ ಗುಹೆಗಳಲ್ಲಿ ಅರಳಿ ನಿಂತಿರುವ ಕಲಾಸ್ಮಾರಕ, ಅಜಂತಾ ವರ್ಣಚಿತ್ರಗಳು, ಹಿಂದೂ ಬೌದ್ಧ ವಾಸ್ತುಶಿಲ್ಪ ಮುಂತಾದವು ಪ್ರತಿಯೊಬ್ಬರನ್ನೂ ಆಶ್ಚರ್ಯಚಕಿತರನ್ನಾಗಿಸುತ್ತವೆ.
12ನೆಯ ಶತಮಾನದಲ್ಲಿ ಶ್ರೀ ಬಸವೇಶ್ವರವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಧಾರ್ಮಿಕ ಚಳವಳಿಗೆ ಭದ್ರ ನೆಲೆಯಾಗಿದ್ದ ಈ ಪ್ರದೇಶವು 1347ರಲ್ಲಿ ಬಹುಮನಿ ಸಾಮ್ರಾಜ್ಯದ ಸ್ಥಾಪನೆಯನ್ನು ಕಂಡಿತು.
ಕೊನೆಯ ನಿಜಾಮನ ಆಳ್ವಿಕೆಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶವು ಸಾಮಾಜಿಕ ವಿಷಮತೆ, ರಾಜಕೀಯ ಏರುಪೇರುಗಳು, ಆರ್ಥಿಕ ಶೋಷಣೆ ಹಾಗೂ ಧಾರ್ಮಿಕ ಅತ್ಯಾಚಾರಗಳನ್ನು ಅನುಭವಿಸಿತು. ಈ ಬಗೆಯ ಸ್ಥಿತಿಗತಿಗಳು ಆರ್ಯಸಮಾಜ, ಹಿಂದೂ ಮಹಾಸಭಾ ಹಾಗೂ ರಾಜ್ಯ ಕಾಂಗ್ರೆಸ್‌ನ ಗಮವನ್ನು ಸೆಳೆದವಲ್ಲದೆ ಮಿರ್ ಉಸ್ಮಾನ್ ಅಲಿಖಾನ್ ಬಹಾದ್ದೂರ್ ಮತ್ತು ಆತನ ಇತ್ತೇಹಾದ್ ಸೃಷ್ಟಿಸಿದ್ದ ಭಯೋತ್ಪಾದಕತೆ ಹಾಗೂ ಕೋಮುವಾದದ ವಿರುದ್ಧ ಪವಿತ್ರ ಯುದ್ಧ ಘೋಷಿಸುವಂತೆ ಮೂಲಭೂತ ಹಕ್ಕುಗಳಿಗಾಗಿ ಹೋರಾಡುವಂತೆ ಪ್ರೇರಣೆ ನೀಡಿದವು.
ಧಾರ್ಮಿಕ ಸ್ಥಿತಿ
ಮುಸ್ಲಿಮ ಸಾಮ್ರಾಜ್ಯ ನಿರ್ಮಿಸಲು ಬೇಕಾದ ನೀತಿಗಳನ್ನು ನಿಜಾಮ ಮತ್ತು ಅವನ ಇತ್ತೇಹಾದ್ ರೂಪಿಸುತ್ತಿದ್ದವು. ಇಡೀ ಮುಸ್ಲಿಮ ವಿಶ್ವಕ್ಕೆ ಸಾಮ್ರಾಟನಾಗುವ ಮಹಾದಾಸೆ ನಿಜಾಮನದಾಗಿತ್ತು. ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ರ್ಯವಿರಲಿಲ್ಲ. ಅವರಿಗೆ ದೇವಾಲಯ ನಿರ್ಮಿಸಿಕೊಳ್ಳಲು ಅವಕಾಶವಿರಲಿಲ್ಲ. ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಇರಲಿಲ್ಲ. ಧಾರ್ಮಿಕ ಆಚರಣೆಗಳಿಗೆ ಪ್ರೋಗಣೇಶನ ಹಬ್ಬ ಬಸವ ಜಯಂತಿಗಳ ಸಂದರ್ಭಗಳಲ್ಲಿ ಮೆರವಣಿಗೆ ನಡೆಯುವಂತಿರಲಿಲ್ಲ. ಗುಲಬರ್ಗಾದಲ್ಲಿ ಶ್ರೀ ಶರಣಬಸವೇಶ್ವರ ದೇವಾಲಯದ ಗೋಪುರದ ಕಳಸ ಸ್ಥಾಪಿಸಲು ಅನುಮತಿ ನೀಡಲಿಲ್ಲ. ರಾಜ ಮಹಾರಾಜರ ಪ್ರೋಮೆರೆಯುತ್ತಿದ್ದ ಧಾರ್ಮಿಕ ಸಂಸ್ಥೆಗಳಾದ ಮಠಗಳು ದೇವಾಲಯಗಳು, ಆಶ್ರಮಗಳು ಈ ರಾಜರ ಆಳ್ವಿಕೆಯಲ್ಲಿ ನಿರ್ಲಕ್ಷಕ್ಕೆ ಒಳಗಾದವು. ಹಿಂದೂಗಳನ್ನು ಮುಸ್ಲಿಮರಾಗಿ ಮತಾಂತರಿಸುವ ಕಾರ್ಯ ಹಾಗೂ ದೇವಾಲಯಗಳನ್ನು ಮಸೀದಿಗಳಾಗಿ ಮಾಡುವ ಕಾರ್ಯವು ರಾಜಾಕಾರರ ನೇತೃತ್ವದಲ್ಲಿ ತೀವ್ರಗತಿಯಲ್ಲಿ ಮುಂದುವರಿದವು. ನವಾಬನು ಆಡಳಿತದ ಸೂತ್ರಗಳನ್ನು ಬಹುತೇಕ ಮುಸ್ಲಿಮ ಅಧಿಕಾರಿಗಳ ವಶಕ್ಕೆ ಕೊಟ್ಟಿದ್ದನು. ಇದರಿಂದ ಸಂಸ್ಥಾನದ ಪ್ರದೆಗಳ ಮೇಲೆ ಉಂಟಾಗಬಹುದಾದ ದುಷ್ಟಪರಿಣಾಮಗಳ ಬಗ್ಗೆ ಅವನು ತಲೆ ಕೆಡಿಸಿಕೊಳ್ಳಲಿಲ್ಲ. ಖಜಾನೆಗೆ ಕಂದಾಯ ಸಂದಾಯವಾದರೆ ನಿಜಾಮನಿಗೆ ಸಾಕಾಗಿತ್ತು. ಅಧಿಕಾರಿಗಳು, ಜಹಗೀರ್‌ದಾರರು, ಇತ್ತೇಹಾರ್‌ನ ಅನುಯಾಯಿಗಳು ಇವರಿಗೆ ಬದುಕಿಗಿಂತ ಸಂಪತ್ತಿನ ಮೋಹ ಅತಿಯಾಗಿತ್ತು. ಹೈದ್ರಾಬಾದ್ ಸಂಸ್ಥಾನದಲ್ಲಿ ಮುಸ್ಲಿಮರು ಗ್ರಾಮಾಂತರ ಪ್ರದೇಶಗಳಿಗಿಂತ ಹೆಚ್ಚಾಗಿ ಸಣ್ಣ ದೊಡ್ಡ ನಗರಗಳಲ್ಲಿ ನೆಲೆಸಲು ಬಯಸುತ್ತಿದ್ದರು. ಗ್ರಾಮಾಂತರ ಪ್ರದೇಶಗಳಲ್ಲಿ ಮಸೀದಿ ನಿರ್ಮಿಸಲು ಉಚಿತ ವಾಗಿ ಹಣಕಾಸು ನೆರವು ನೀಡಲಾಗುತ್ತಿತ್ತು. ಬ್ರಿಟಿಷರ ಆಡಳಿತಗಾರರ ಸಮುದಾಯಕ್ಕೆ ಸೇರಿದ್ದ ಕ್ರಿಶ್ಚಿಯನ್ನರ ಬಗ್ಗೆ ನಿಜಾಮನ ಅಧಿಕಾರಿಗಳು ಮೃದುವಾಗಿರುತ್ತಿದ್ದರು. ಗ್ರಾಮಾಂತರ ಪ್ರದೇಶಗಳಲ್ಲಿನ ಜನರು ಎಷ್ಟು ಮುಗ್ಧರಾಗಿದ್ದರೆಂದರೆ ಅವರು ನಿಜಾಮನನ್ನು ದೇವರೆಂದೇ ಪರಿಗಣಿಸಿದ್ದರು ಮತ್ತು ಅವನು ಗ್ರಾಮಗಳಿಗೆ ಭೇಟಿ ನೀಡಿದಾಗ ‘ನಜರಾನ’ವನ್ನು ಸಲ್ಲಿಸುತ್ತಿದ್ದರು.
ಆರ್ಥಿಕ ಪರಿಸ್ಥಿತಿ
ಭಾರತದಲ್ಲಿದ್ದ 565 ಸಂಸ್ಥಾನಗಳಲ್ಲಿ ಹೈದ್ರಾಬಾದ್ ಸಂಸ್ಥಾನ 82,689 ಚದರ ಮೈಲಿ ವಿಸ್ತೀರ್ಣವುಳ್ಳ ಬೃಹತ್ ಸಂಸ್ಥಾನವೆಂಬ ಕೀರ್ತಿಪಡೆದಿತ್ತು. 1941ರ ಜನಗಣತಿ ಪ್ರಕಾರ ಹೈದ್ರಾಬಾದ್ ಸಂಸ್ಥಾನದ ಜನಸಂಖ್ಯೆ 1,63,38,539 ಇತ್ತು. ನಿಜಾಮನ ಖಾಸಗಿ ಆಸ್ತಿಯ ವಿಸ್ತೀರ್ಣ 8,109 ಚದರ ಮೈಲಿಗಳಷ್ಟಿತ್ತು. ಇದರಿಂದ ವಾರ್ಷಿಕ 2,50,00,000 ರೂಪಾಯಿ ವರಮಾನ ಬರುತ್ತಿತ್ತು. ಇಷ್ಟೆಲ್ಲಾ ಸಂಪನ್ಮೂಲಗಳಿದ್ದರೂ ಜನರ ಜೀವನಮಟ್ಟವು ಅತ್ಯಂತ ಕೆಳಮಟ್ಟದ್ದಾಗಿತ್ತು. ಅವರ ಜೀವನಮಟ್ಟವು ಪ್ರಾಣಿಗಳಿಗಿಂತ ಹೀನಾಯವಾಗಿತ್ತು. ಜಮೀನ್ದಾರಿ ಪಾಳೆಗಾರರು, ಬ್ರಿಟಿಷರು ಹಾಗೂ ನಿಜಾಮ ಹೀಗೆ ಮೂರು ವಿಧದ ಅಧಿಕಾರಿಗಳಿಂದ ಶೋಷಣೆಗೆ ಒಳಗಾಗಿದ್ದ ಜನರ ಜೀವನಮಟ್ಟವು ಉತ್ತಮವಾಗಿರಲು ಹೇಗೆ ಸಾಧ್ಯ ಸುಮಾರು 25.629 ಚದುರ ಮೈಲಿ ವಿಸ್ತೀರ್ಣ ಜಮೀನಿನ ಮೇಲೆ ಅಧಿಕಾರ ಪಡೆದಿದ್ದ ಜಮೀನ್ದಾರಿ ಪಾಳೆಗಾರಿಕೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಆರ್ಥಿಕ ಸ್ವಾತಂತ್ರ್ಯವೇ ಇರಲಿಲ್ಲ. ಜಮೀನ್ದಾರಿ ಪೈಗಳ ಕೃಪೆಯಲ್ಲಿ ರೈತರು ಬದುಕಬೇಕಾಗಿತ್ತು. ಜಮೀನ್ದಾರಿ ಪಾಳೆಗಾರಿಕೆ, ಸಾಂಪ್ರದಾಯಿಕ ಗುಲಾಮಿತನ ಜೀತದ ದುಡಿಮೆ, ಅವಮಾನವೀಯ ಹಾಗೂ ಭ್ರಷ್ಟ ಆಡಳಿತದಿಂದಾಗಿ ಆರ್ಥಿಕತೆಯು ಜರ್ಜರಿತವಾಗಿತ್ತು. ಸಾಮಾನ್ಯ ಜನರಿಂದ ಜಮೀನ್ದಾರರು ಜಮೀನನ್ನು ಮೋಸ ಕಪಟಗಳಿಂದ ಕಬಳಿಸುತ್ತಿದ್ದರು. ಅಧಿಕಾರಿಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದ ಇವರು ಜನರ ಗಮನಕ್ಕೆ ತಾರದೆ ಜಮೀನನ್ನು ತಮ್ಮ ಹೆಸರಿನಲ್ಲಿ ನೊಂದಾಯಿಸಿಕೊಂಡು ಕಾನೂನಿನ ಪ್ರಕಾರ ಮಾಲೀಕರಾಗಿ ಬಿಡುತ್ತಿದ್ದರು.
ಅಭಿವ್ಯಕ್ತಿ ಸ್ವಾತಂತ್ರ್ಯ
ನಿಜಾಮನ ಸರ್ವಾಧಿಕಾರಿ ಆಳ್ವಿಕೆಯಲ್ಲಿ ಮೂಲಭೂತ ಹಕ್ಕುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಂಘ ಕಟ್ಟಿಕೊಳ್ಳುವ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಸಮಾನ ಅವಕಾಶಗಳ ಸ್ವಾತಂತ್ರ್ಯ ಮುಂತಾದ ಹಕ್ಕುಗಳನ್ನು ನಾಗರಿಕರಿಂದ ಕಿತ್ತುಕೊಳ್ಳಲಾಗಿತ್ತು. ರಾಷ್ಟ್ರೀಯವಾದಿಗಳ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗಿತ್ತು. ನಿಜಾಮನ ಕಾರ್ಯಾಂಗ ಮಂಡಳಿ ಸದಸ್ಯರನ್ನು ಚುನಾವಣೆ ಆಧಾರದ ಮೇಲೆ ಆರಿಸಬೇಕು ಎಂದು ಒತ್ತಾಯಿಸುತ್ತಿದ್ದವರ ಮೇಲೂ ಕಣ್ಣಿಡಲಾಗಿತ್ತು. ಅವರನ್ನು ಕಾರಣ ಅಜ್ಞೆ ಇಲ್ಲದೆ ಬಂಧಿಸಲಾಗುತ್ತಿತ್ತು. ಮೊಗಲಾಯಿ ಅಧಿಕಾರಿಗಳು ಈ ರೀತಿಯಲ್ಲಿ ಬಂಧಿಸಿದವರನ್ನು ಕ್ರೂರವಾಗಿ ಹಿಂಸಿಸುತ್ತಿದ್ದರು.
ಪತ್ರಿಕೆಗಳು
ಸಾರ್ವಜನಿಕಾಭಿಪ್ರಾಯದ ಪ್ರತಿಬಿಂಬ ಹಾಗೂ ಪ್ರಜಾಪ್ರಭುತ್ವಾದಿ ಸರ್ಕಾರದ ನಾಲ್ಕನೇ ಸ್ತಂಭವಾದ ಪತ್ರಿಕೆಗಳು ಸ್ವಾತಂತ್ರ್ಯ ರಾಷ್ಟ್ರೀಯತೆ ಕುರಿತು ಬರಹ ಪ್ರಕಟಿಸುವಂತಿರಲಿಲ್ಲ. ಜಮೀನ್ದಾರಿ ಪಾಳೆಗಾರಿಕೆಯ ಕರಾಳಮುಖ, ರಜಾಕಾರದ ಹಾವಳಿ, ತೆಲಂಗಾಣದಲ್ಲಿ ಕಮ್ಯುನಿಸ್ಟರ ಭಯೋತ್ಪಾದಕತೆ ಮುಂತಾದ ಸಂಪಾದಕೀಯಗಳನ್ನು ಬರೆಯುತ್ತಿದ್ದ ರಾಷ್ಟ್ರೀಯವಾದಿ ಮುಸ್ಲಿಮ ತರುಣ ಇಮ್ರೋಜ್ ಉರ್ದು ದಿನಪತ್ರಿಕೆಯ ಸಂಪಾದಕ ಶ್ರೀ ಶೋಬುಲ್ಲಾಖಾನ್‌ನನ್ನು ರಜಾಕಾರರು 1948ರ ಆಗಸ್ಟ್ 21ರಂದು ಕ್ರೂರವಾಗಿ ಕೊಲೆಗೈದು ಸರ್ಕಾರದ ನೀತಿಯನ್ನು ಕುರಿತು ಟೀಕೆ ಟಿಪ್ಪಣಿ ಮಾಡಲು ನೀಜಾಮನು ಅವಕಾಶ ಕೊಡುತ್ತಿರಲಿಲ್ಲ. ಹೈದ್ರಾಬಾದ್ ಸಂಸ್ಥಾನದಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳು ಎ.ಐ.ಸಿ.ಸಿ.ಯ ನಿರ್ಣಯಗಳನ್ನಾಗಲಿ, ಆರ್ಯ ಸಮಾಜ ಅಥವಾ ರಾಜ್ಯ ಕಾಂಗ್ರೆಸ್‌ನ ವಿಚಾರಗಳನ್ನಾಗಲಿ ಪ್ರಕಟಿಸಲು ಅನುಮತಿ ಇರಲಿಲ್ಲ. ನಿಜಾಮನ ಆಳ್ವಿಕೆ ಪರವಾಗಿ ಬರೆಯುತ್ತಿದ್ದ ಮತ್ತು ಇತ್ತೇಹಾದ್ ಅನ್ನು ವೈಭವೀಕರಿಸುತ್ತಿದ್ದ ಪತ್ರಿಕೆಗಳ ಸಭಾವನೆ ಕೊಡಲಾಗುತ್ತಿತ್ತು. ಸ್ವರಾಜ್ಯಕ್ಕಾಗಿ ನಡೆಯುತ್ತಿದ್ದ ಜನಾಂದೋಲನದ ಪರವಾಗಿದ್ದ ಪತ್ರಿಕೆಗಳನ್ನು ಕೋಮುವಾದಿಗಳೆಂದು ನಿಜಾಮನು ನಿಷೇಧ ಹೇರುತ್ತಿದ್ದನು. ನಿಜಾಮ ಈ ರೀತಿಯ ದಮನಕಾರಿ ನೀತಿಯಿಂದಾಗಿ 1935ರಲ್ಲಿ 35ರಷ್ಟಿದ್ದ ಪತ್ರಿಕೆಗಳ ಸಂಖ್ಯೆಯು 1945ರಲ್ಲಿ 22ಕ್ಕೆ ಇಳಿದವು. ಮುದ್ರಣ ಕಾಗದವನ್ನಾಗಲಿ ಅಥವಾ ಮುದ್ರಣ ಕಾರ್ಯಕ್ಕಾಗಲಿ ಅನುಮತಿ ಕೊಡುವಾಗ ಗೃಹ ಸಚಿವಾಲಯವು ತಾರತಮ್ಯ ನೀತಿ ಅನುಸರಿಸುತ್ತಿತ್ತು. 1939ರವರೆಗೆ ನಿಜಾಮನ ಆಳ್ವಿಕೆ ಇದ್ದ ಹೈದ್ರಾಬಾದ್ ಕರ್ನಾಟಕದಲ್ಲಿ ಒಂದಾದರೂ ಕನ್ನಡ ಪತ್ರಿಕೆ ಪ್ರಸಾರವಾಗುತ್ತಿರಲಿಲ್ಲ. ಮತ್ತು ಸಂಸ್ಥಾನದ ಹೊಕಗಿನ ಬ್ರಿಟಿಷ್ ಭಾರತದಿಂದ ಭೂಗತವಾಗಿ ಪತ್ರಿಕೆಗಳನ್ನು ತರಿಸಿಕೊಳ್ಳಬೇಕಾಗಿತ್ತು.
ಶಿಯಾಸತ್, ಇಮ್ರಾಜ್ ಮತ್ತು ಮುಶೀರ್ ಐ ದಖನ್ ಎಂಬ ಉರ್ದು ಭಾಷೆಯ ಪತ್ರಿಕೆಗಳು, ದಖನ್ ಕ್ರಾನಿಕಲ್ ಎಂಬ ಇಂಗ್ಲಿಷ್ ಪತ್ರಿಕೆ, ಮರಾಠ ಮತ್ತು ಕೇಸರಿ ಎಂಬ ಮರಾಠಿ ಭಾಷೆಯ ಪತ್ರಿಕೆಗಳು, ಹೈದ್ರಾಬಾದ್ ಕರ್ನಾಟಕ ನಾಗರಿಕ, ಶರಣಸಂದೇಶ, ಲೋಕವಾಣಿ ಎಂಬ ಕನ್ನಡ ಪತ್ರಿಕೆಗಳು, ಗೋಲ್ಕಂಡ ಮತ್ತು ವಿಭೂತಿ ಎಂಬ ತೆಲಗು ಪತ್ರಿಕೆಗಳು, ಆರ್ಯಭಾನು ಎಂಬ ಹಿಂದಿ ಪತ್ರಿಕೆಗಳು ರಾಷ್ಟ್ರೀಯವಾದಿ ಸ್ಪೂರ್ತಿಯಿಂದ ಕೂಡಿದ್ದವು. ನಿಜಾಮ ವಿಜಯ್, ವಕ್ತ್ ಮಿಜಾಮ್ ಪೈಸ್ ಅಕ್ಬರ್ ಶಹೀಪಾ ಮತ್ತು ರಹಬರ್ ಐ ದಖನ್ ಎಂಬ ಉರ್ದು ಪತ್ರಿಕೆಗಳು ನಿಜಾಮನ ನೀತಿಯನ್ನು ಹಾಹೊಗಳು ತ್ತಿದ್ದವು. ನಿಜಾಮನ ಪ್ರತ್ಯೇಕತಾವಾದವನ್ನು ಹಾಗೂ ಹಿಂದೂಗಳನ್ನು ಮುಸ್ಲಿಮರಾಗಿ ಮತಾಂತರಿಸುವ ಇತ್ತೆಹಾದ್ ತತ್ವವನ್ನು ಜನಪ್ರಿಯಗೊಳಿಸಲು ಶ್ರಮಿಸುತ್ತಿದ್ದ ಪತ್ರಿಕೆಗಳಿಗೆ ಆಸ್ಥಾನದಿಂದ ಆಪಾರ ಅನುದಾನ ಸಿಗುತ್ತಿತ್ತು. ನಿಜಾಮನ ಆಸ್ಥಾನದಲ್ಲಿ ಇಂಥ ಪತ್ರಿಕೆಗಳ ಸಂಪಾದಕರಿಗೆ ಅಮೋಘ ಸ್ವಾಗತ ದೊರೆಯುತ್ತಿತ್ತು. ದಕ್ಷಿಣದ ರಾಷ್ಟ್ರೀಯತೆಯ ಪ್ರತಿಮೂರ್ತಿಯಾದ ಚಕ್ರವರ್ತಿ ನಿಜಾಮನು ದೀರ್ಘಕಾಲ ಬಾಳಲಿ ಎಂಬ ಗೋಷಣೆಯು ಈ ಎಲ್ಲಾ ಪತ್ರಿಕೆಗಳ ಮಾರ್ಗಸೂಚಿಯಾಗಿತ್ತು.
ರಾಜಕೀಯ ಸಮಾವೇಶಗಳು ಮತ್ತು ನಿಜಾಮನ ಫರ್ಮಾನುಗಳು
ಪಂಡಿತ ಜವಾಹರಲಾಲ್ ನೆಹರೂ ಅವರು ಹೈದ್ರಾಬಾದ್ ಸಂಸ್ಥಾನದಲ್ಲಿ ರಾಜಕೀಯ ಸಮಾರಂಭಗಳನ್ನು ತಿಳಿದವರೇ ಇಲ್ಲ ಎಂದು ಒಂದು ಕಡೆ ಹೇಳಿದ್ದಾರೆ. ಅಲ್ಲಿೊಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಸಹ ಅನುಮಾನದಿಂದ ನೋಡಲಾಗುತ್ತಿತ್ತು ಎಂದಿದ್ದಾರೆ. ಹೈದ್ರಾಬಾದ್ ಸಂಸ್ಥಾನದೊಳಗೆ ರಾಷ್ಟ್ರೀಯ ನಾಯಕರಿಗೆ ಪ್ರವೇಶವಿರಲಿಲ್ಲ. ಮಹಾತ್ಮಗಾಂಧಿಯವರು 1934ರಲ್ಲಿ ಹೈದ್ರಾಬಾದ್ ಸಂಸ್ಥಾನಕ್ಕೆ ಭೇಟಿ ಕೊಡುತ್ತಾರೆ ಎಂಬ ಸುದ್ದಿಯು ಆಡಳಿತ ವರ್ಗದಲ್ಲಿ ಆತಂಕ ಸೃಷ್ಟಿಸಿಬಿಟ್ಟಿತು. ಹೈದರಾಬಾದ್ ಸಂಸ್ಥಾನದ ಆಡಳಿತ ವ್ಯವಸ್ಥೆ ಅನುಸರಿಸುತ್ತಿದ್ದ ಪ್ರಜಾಪ್ರಭುತ್ವ ವಿರೋಧಿ ಹಾಗೂ ದಮನಕಾರಿ ವಿಧಾನಗಳು ಎಲ್ಲಿ ಬಹಿರಂಗಗೊಂಡು ಬಿಡುತ್ತವೊ ಮತ್ತು ಆಸಪ್‌ಜಹಾನ ಪರಮಾಧಿಕಾರಕ್ಕೆ ಎಲ್ಲಿ ಕುತ್ತು ಬಂದು ಬಿಡುತ್ತದೊ ಎಂಬ ಭಯ ಸೃಷ್ಟಿಯಾಯಿತು.
ಸಂಸದೀಯ ಪ್ರಜಾಪ್ರಭುತ್ವ ಸ್ಥಾಪನೆಯನ್ನು ಒತ್ತಾಯಿಸುವ ಸಲುವಾಗಿ ಮಹಾತ್ಮ ಗಾಂಧಿಯವರು ಅಸಹಕಾರ ಚಳವಳಿಯನ್ನು ದೇಶಾದ್ಯಂತ ಪ್ರಾರಂಭಿಸಲು ಕರೆಕೊಟ್ಟಾಗ ನಿಜಾಮನು 1921ನೆಯ ಸೆಪ್ಟೆಂಬರ್ 8ರಂದು ಒಂದು ಫರ್ಮಾನನ್ನು ಹೊರಡಿಸಿದನು. ರಾಜಕೀಯ ಸಮಾವೇಶ ಅಥವಾ ರಾಜಕೀಯ ಸ್ವರೂಪದ ಯಾವುದೇ ಸಭೆ ಸಮಾರಂಭಗಳನ್ನು ಸರ್ಕಾರದ ಕಾರ್ಯಾಂಗ ಮಂಡಳಿಯ ಅನುಮತಿ ಇಲ್ಲದೆ ನಡೆಸಕೊಡದು ಮತ್ತು ಇಂಥ ಸಭೆ ಸಮಾರಂಭಗಳ ನಡವಳಿಕೆ, ಕಾರ್ಯಕ್ರಮ ಪಟ್ಟಿಯನ್ನು ಕಾರ್ಯಾಂಗ ಮಂಡಳಿಯ ಅನುಮೋದನೆಗಾಗಿ ಮುಂಚಿತವಾಗಿ ಸಲ್ಲಿಸಬೇಕು ಎಂಬ ಒಕ್ಕಣಿಕೆಯು ಆ ಫರ್ಮಾನಿ ನಲ್ಲಿತ್ತು. ಮೋತಿಲಾಲನೆಹರು ಮತ್ತು ಡಾ.ಅನ್ಸಾರಿಯವರ ಮರಣದ ನಿಮಿತ್ತ ಸಂತಾಪಸೂಚಕ ಸಭೆಗಳಿಗೂ ಕೂಡ ಅನುಮತಿ ನಿರಾಕರಿಸಲಾಯಿತು.
ಇದೇ ರೀತಿ ಕಾರ್ಯಾಂಗವು ದಿನಾಂಕ 1357ನೆಯ ಡಿಸೆಂಬರ್ 21ರಂದು  ಪಾಸಲಿ ಯಲ್ಲಿ ಘಸ್ತಿ ಸಂಖ್ಯೆ 53 ಆಜ್ಞೆಯೊಂದನ್ನು ಜಾರಿಗೊಳಿಸಿತು. ಉರ್ದು ಭಾಷೆಯಲ್ಲಿರುವ ಮೂಲ ಬರಹ ರಾಜ್ಯ ಗೆಜೆಟಿಯರ್‌ನಲ್ಲಿ ಪ್ರಕಟವಾಗಿದೆ. ಅದರ ಕನ್ನಡ ರೂಪ ಹೀಗಿದೆ:
ಯಾವುದೇ ವ್ಯಕ್ತಿ ಸಾರ್ವಜನಿಕ ಸಮಾರಂಭ ನಡೆಸಲು ಇಚ್ಚಿಸಿದರೆ ಆ ಸಮಾರಂಭ ಉದ್ದೇಶವನ್ನು ಲಿಕಿತ ರೂಪದಲ್ಲಿ ಹೈದ್ರಾಬಾದ್ ಅಥವಾ ಅದರ ಸುತ್ತಮುತ್ತಲಾದರೆ ಪೊಲೀಸು ಕಮೀಷನ್‌ರವರಿಗೆ ಮತ್ತು ಉಳಿದ ಸ್ಥಳಗಳಲ್ಲಾದರೆ ಸಂಬಂಧಿಸಿದ ಕಲೆಕ್ಟರ್‌ರವರಿಗೆ ಹತ್ತು ದಿನ ಮುಂಚೆ ಅನುಮತಿಗಾಗಿ ಸಲ್ಲಿಸಬೇಕು.
ಕಮೀಷನ್‌ರ ಅಥವಾ ಕಲೆಕ್ಟರ್‌ರವರಿಗೆ ಉದ್ದೇಶಿತ ಸಮಾರಂಭ ಅಥವಾ ಸಮಾವೇಶವು ಸರ್ಕಾರದ ವಿರುದ್ಧ ಪ್ರಚೋದನೆ ಉಂಟು ಮಾಡುವಂಥಹದು ಎಂದು ಅನ್ನಿಸಿದರೆ ಅನುಮತಿ ಕೊಡಲಾಗುತ್ತಿರಲಿಲ್ಲ. ಈ ಆದೇಶವನ್ನು ಉಲ್ಲಂಘಿಸುವವರಿಗೆ 200 ರೂಪಾಯಿ ದಂಡ ಜೊತೆಗೆ ಒಂದು ತಿಂಗಳು ಜೈಲುವಾಸ ಅಥವಾ ಅಧಿಕಾರಿಗಳಿಗೆ ಸರಿಯೆನಿದ ಯಾವುದೇ ಶಿಕ್ಷೆ ಎಂದು ನಿರ್ಧರಿಸಲಾಗಿತ್ತು.
ನಿಜಾಮ ಸರ್ಕಾರವು 1933ನೆಯ ಏಪ್ರಿಲ್ 24ರಂದು ಒಂದು ಸಂದೇಶ ಹೊರಡಿಸಿ ರಾಜಕೀಯ ಸಭೆ ಎಂದರೆ ಯಾವುದು ಎಂಬ ಕೆಳಕಂಡ ವ್ಯಾಖ್ಯೆ ನೀಡಿತು.
ನಿಜಾಮ ಸಂತೋಷದಿಂದ ತಿಳಿಸುವುದೇನೆಂದರೆ ರಾಜಕೀಯ ಸಭೆಗಳು ಎಂದರೆ ಕೋಮು ಸಂಘರ್ಷಕ್ಕೆ ಅಥವಾ ಸರ್ಕಾರ ವಿರೋಧಿ ಭಾವನೆಗೆ ಪ್ರಚೋದನೆ ನೀಡುವಂತಹವು
ಎಂದು ವ್ಯಾಖ್ಯೆ ನೀಡಿತು.
ರಾಷ್ಟ್ರೀಯವಾದಿಗಳ ಚಟುವಟಿಕೆಗಳನ್ನು ಹತ್ತಿಕ್ಕಲು ನಿಜಾಮನು ರಾಜಕೀಯ ಎಂಬ ಪದವನ್ನು ತನಗೆ ಬೇಕಾದ ಉದ್ದೇಶಕ್ಕೆ ತಕ್ಕಂತೆ ವ್ಯಾಖ್ಯಾನಿಸಿದವು. ಉದಾಹರಣೆಗೆ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಕಮ್ಯುನಿಸ್ಟ್ ರಷ್ಟವು ಇಂಗ್ಲೆಂಡ್ ವಿರುದ್ಧ ಯುದ್ಧ ಮಾಡುತ್ತಿತ್ತು. ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡ ನಿಜಾಮನು ನಿಜಾಮ ಕರ್ನಾಟಕ ಪರಿಷತ್ ಚಟುವಟಿಕೆಗಳೆಂದು ತೀರ್ಮಾನಿಸಿ ಸಾರ್ವಜನಿಕ ಹಿತರಕ್ಷಣೆ ಕಾನೂನಿನ್ವಯ ಅದರ ಮುಂದಾಳುಗಳನ್ನೆಲ್ಲಾ ವಾರೆಂಟ್ ಇಲ್ಲದೆ ಬಂಧಿಸಿದನು. ವಾಸ್ತವಿಕವಾಗಿ ಈ ಫರ್ಮಾನುಗಳು ಇತ್ತೆಹಾದ ಚಟುವಟಿಕೆಗಳಿಗೆ ಅನ್ವಯವಾಗುತ್ತಿರಲಿಲ್ಲ. ನಿಜಾಮ ಪಕ್ಷವಾದ ಇತ್ತೆಹಾದ್ ತನಗೆ ಇಷ್ಟಬಂದ ರೀತಿಯಲ್ಲಿ ನಡೆದುಕೊಳ್ಳಬಹುದಿತ್ತು. ಜವಾಬ್ದಾರಿ ಸರ್ಕಾರವನ್ನು ಯಾರೂ ಒತ್ತಾಯಿಸಿಕೂಡದು. ಏಕೆಂದರೆ ಅಲ್ಲಾಹ- ಹಜರತ್’ಗೆ ಮಾತ್ರ ಪ್ರಜೆಗಳನ್ನು ಆಳುವ ಹಕ್ಕಿದೆ ಎಂದು ನಿಜಾಮನು ಘೋಷಿಸಿದನು. ಹೈದ್ರಾಬಾದ್ ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರಕ್ಕಾಗಿ ಒತ್ತಾಯಿಸುವುದು ಪಕ್ಷ ರಾಜಕೀಯವಾಗುತ್ತದೆ. ಮತ್ತು ಅದು ನಿಜಾಮನಿಗೆ ಅವಿಧೇಯತೆ ತೋರಿದಂತೆ ಎಂದು ನಿಜಾಮನು ಘೋಷಿಸಿದನು.
ಕನ್ನಡ ಭಾಷೆ
ಹೈದ್ರಾಬಾದ್ ಸಂಸ್ಥಾನದಲ್ಲಿನ 1.6ಕೋಟಿ ಜನಸಂಖ್ಯೆಯು ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೌಹಾರ್ದತೆಯಿಂದ ಬದುಕುತ್ತಿದ್ದ ಒಂದು ದೊಡ್ಡ ಭಾರತೀಯ ಸಮುದಾಯವಾಗಿತ್ತು. ಇದರಲ್ಲಿ 70 ಲಕ್ಷ ಜನ ತೆಲುಗರು, 40 ಲಕ್ಷ ಜನ ಮರಾಠಿಗರು ಮತ್ತು 20 ಲಕ್ಷ ಜನ ಕನ್ನಡಿಗರು ಇದ್ದರು. ನಿಜಾಮನ ಮಲತಾಯಿ ಧೋರಣೆಯಿಂದಾಗಿ ಕನ್ನಡ ಭಾಷೆಯ ಬೆಳವಣಿಗೆಯು ಕುಂಟಿತಗೊಂಡಿತ್ತು. ಆಳುವ ವರ್ಗದ ಭಾಷೆಯಾದ  ಉರ್ದುವನ್ನು ಆಡಳಿತ ಭಾಷೆಯನ್ನಾಗಿ ಹೇರಲಾಗಿತ್ತು ಮತ್ತು ಪ್ರಾಥರ್ಮಿಕ ಶಾಲೆಯಿಂದ  ಸ್ನಾತಕೋತ್ತರ ಪದವಿ ಮಟ್ಟದವರೆಗೆ ಶಿಕ್ಷಣ ಮಾಧ್ಯಮವು ಉರ್ದು ಭಾಷೆಯಾಗಿತ್ತು. 1948ರವರೆಗೆ ನಿಜಾಮನ ಆಳ್ವಿಕೆಯಲ್ಲಿ ಹೈದ್ರಾಬಾದ್ ಕರ್ನಾಟಕದಲ್ಲಿ ಕನ್ನಡ ಭಾಷೆ ಸಾಹಿತ್ಯವು ಪೂರ್ಣ ನಿರ್ಲಷ್ಯಕ್ಕೆ ಗುರಿಯಾಯಿತು.
ನೌಕರಿಯಲ್ಲಿ ಮೀಸಲಾತಿ
ಸ್ವತಂತ್ರ್ಯ ಹೈದ್ರಾಬಾದ್ ಸ್ಥಾಪನೆಯನ್ನು ಸಾಧಿಸಲಿಕ್ಕಾಗಿ ಸಂಸ್ಥಾನದ ಸರ್ಕಾರಿ ನೌಕರಿ ಗಳಲ್ಲಿ ಶೇ.80ರಷ್ಟು ನೌಕರಿಗಳನ್ನು ಶೇ.12 ರಷ್ಟಿದ್ದ ಮುಸ್ಲಿಮರಿಗೆ ಮೀಸಲಿರಿಸ ಲಾಗಿತ್ತು. ಉಳಿದ ನೌಕರಿಗಳನ್ನು ಶೇ.88ರಷ್ಟು ಜನಾಂಗದವರು ಹಂಚಿಕೊಳ್ಳಬೇಕಾಗಿತ್ತು. ಮೀಸಲಾತಿ ನೀತಿಗನುಗುಣವಾಗಿ 1354ರಲ್ಲಿ ನಿಜಾಮನು ನೇಮಿಸಿದ್ಧ ನಾಗರೀಕ ಸೇವಾ ಪಟ್ಟಿಯು ಕುತೂಹಲಕಾರಿಯಾಗಿದೆ.


(ವಿವರಣೆ : ಆಯ್ದ ಕೆಲವು ಇಲಾಖೆಗಳ ವಿವರ)
ಶಿಕ್ಷಣ
ಹೈದ್ರಾಬಾದ್ ಕರ್ನಾಟಕ ಪ್ರದೇಶದ ಶೈಕ್ಷಣಿಕ ಹಿಂದುಳಿದಿರುವಿಕೆಯು ಪ್ರಸಿದ್ಧ ನಾಣ್ಣುಡಿಯಾಗಿ ಬಿಟ್ಟಿದೆ. ಭಾರತದ ಉಳಿದ ಭಾಗ ಪಾಶ್ಚಿಮಾನ್ಯ ಶಿಕ್ಷಣದ ಪ್ರಭಾವದಿಂದ ಗಣನೀಯ ಪ್ರಗತಿ ಹೊಂದುತ್ತಿದ್ದರೆ ಹೈದ್ರಾಬಾದ್ ಕರ್ನಾಟಕವು ವಿಶ್ವದಲ್ಲಿನ ಬೆಳವಣಿಗೆಗೆ ಸ್ಪಂದಿಸಿದ ಮೌಢ್ಯದಲ್ಲಿ ಮುಳುಗಿಬಿಟ್ಟಿತು. ಅಕ್ಷರಜ್ಞಾನದ ನಿರ್ಲಕ್ಷ್ಯದಿಂದಾಗಿ ಜನತೆಯು ಬಡತನ ಮತ್ತು ಅನಾರೋಗ್ಯದಿಂದ ನರಳುತ್ತಿತ್ತು. 1875-76ರಲ್ಲಿ ಪ್ರಾರಂಭವಾಗಿದ್ದ ಆಂಗ್ಲ ಭಾರತೀಯ ಭಾಷಾ ಸಂಯುಕ್ತ ಶಾಲೆಗಳನ್ನೆಲ್ಲಾ ನಿಜಾಮನು 1917ರಲ್ಲಿ ಉರ್ದು ಶಿಕ್ಷಣ ಮಾಧ್ಯಮದ ಉಸ್ಮಾನಿಯ ಪ್ರೌಢಶಾಲೆಗಳಾಗಿ ಪರಿವರ್ತಿಸಿ ದನು. ಪ್ರಧಾನವಾಗಿ ಗ್ರಾಮೀಣ ಲಕ್ಷಣವನ್ನು ಹೊಂದಿದ್ದ ಹೈದ್ರಾಬಾದ್ ಸಂಸ್ಥಾನದಲ್ಲಿ ಜನರ ಶಿಕ್ಷಣಕ್ಕೆ ಯಾವುದೇ ಅನುಕೂಲಗಳನ್ನು ಒದಗಿಸಿರಲಿಲ್ಲ. 19ನೇ ಶತಮಾನದ ಕೊನೆ ಭಾಗದಲ್ಲಿ ಹೈದ್ರಾಬಾದ್ ನಗರದಲ್ಲಿ ಪ್ರಾರಂಭವಾಗಿದ್ದ ಕೆಲವು ಶಾಲೆಗಳು ಶ್ರೀಮಂತ ಮತ್ತು ಉನ್ನತ ಮಧ್ಯಮ ವರ್ಗದ ಮುಸ್ಲಿಮ ಸಮುದಾಯದ ಹಾಗೂ ಕೆಲವೇ ಕೆಲವು ಶ್ರೀಮಂತ ಹಿಂದೂ ಮನೆತನಗಳ ಮಕ್ಕಳಿಗೆ ಮಾತ್ರ ಶಿಕ್ಷಣ ಒದಗಿಸುವ ಕೇಂದ್ರಗಳಾಗಿದ್ದವು.
1931ರಲ್ಲಿ ಹೈದ್ರಾಬಾದ್ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಮಟ್ಟವೆಂದರೆ ಮುಖ್ತಾಬ್ ಮಾಧ್ಯಮಿಕ ಶಾಲೆ ಆಗಿತ್ತು. ಇಂಥ ಶಾಲೆಗಳ ಸಂಖ್ಯೆಯನ್ನು ಬೆರಳಲ್ಲಿ ಎಣಿಸಬಹುದಿತ್ತು. ಶಾಲಾ ಅಧ್ಯಾಪಕರು ಮಾಸಿಕ ಮೂರು ರೂಪಾಯಿ ಸಂಬಳ ಪಡೆಯು ತ್ತಿದ್ದರು ಕೊಪ್ಪಳ ಮತ್ತು ರಾಯಚೂರು ವಿಭಾಗದ ವಿದ್ಯಾರ್ಥಿಗಳು ಪ್ರೌಢಶಾಲಾ ಶಿಕ್ಷಣಕ್ಕಾಗಿ ಬರದೂರದ ಗುಲಬರ್ಗಾಕ್ಕೆ ಹೋಗಬೇಕಾಗಿತ್ತು. ಇಲ್ಲವೇ ಹೈದ್ರಾಬಾದ್‌ಗೆ ಹೋಗಬೇಕಾಗಿತ್ತು. ಇಡೀ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಶೈಕ್ಷಣಿಕ ಅವಶ್ಯಕತೆ ಪೂರೈಸಲು ಗುಲಬರ್ಗಾದಲ್ಲಿ ಒಂದೇ ಒಂದು ಪ್ರೌಢಶಾಲೆಯನ್ನು 1932ರಲ್ಲಿ ಇಂಟರ್ ಮಿಡಿಯೆಟ್ ಕಾಲೇಜಾಗಿ ಉನ್ನತ ದರ್ಜೆಗೇರಿಸಲಾಯಿತು. ಹದಿನಾರು ಜಿಲ್ಲೆಗಳನ್ನು ಹೊಂದಿದ್ದ ಇಡೀ ಹೈದ್ರಾಬಾದ್ ಸಂಸ್ಥಾನದಲ್ಲಿ ಸಾಹಿತ್ಯ ಮತ್ತು ವಿದ್ಯಾರ್ಜನೆಯ ಕೇಂದ್ರವಾಗಿ ಹೈದ್ರಾಬಾದ್ ನಗರದಲ್ಲಿ 1917ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯವು ಸ್ಥಾಪಿಸಲ್ಪಟ್ಟಿತು.
ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಅವುಗಳಿಗೆ ಯಾವುದೇ ಬಗೆಯ ಪ್ರೋನಿಜಾಮನು ಒಡ್ಡಿದ ಎಲ್ಲಾ ಬಗೆಯ ಆಂತಕಗಳನ್ನೂ ಎದುರಿಸಿ ಹೈದ್ರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಸ್ಥಾಪಿಸಿದ್ದ ರಾಷ್ಟ್ರೀಯ ಸಾಲೆಗಳಿಗೆ ಸರ್ಕಾರದ ಮನ್ನಣೆ ಪಡೆದುಕೊಳ್ಳಲು ಸ್ವಾಮಿ ರಮಾನಂದತಿರ್ರು ದೆಡ್ಡ ಹೋರಾಟ ನಡೆಸಬೇಕಾಯಿತು. ಹೈದ್ರಾಬಾದ್ ಕರ್ನಾಟಕದ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಕೆಳಗಿನ ಪಟ್ಟಿಯಿಂದ ತಿಳಿದುಕೊಳ್ಳಬಹುದು.


1930ರಲ್ಲಿ ನಡೆದ ಸಂಸ್ಥಾನವಾದ ಮದರಾಸಿನಲ್ಲಿದ್ದ ಸಾಕ್ಷರತೆ ಶೇ.10.8. ಆದರೆ ಹೈದ್ರಾಬಾದ್ ಸಂಸ್ಥಾನದಲ್ಲಿದ್ದ ಸಾಕ್ಷರತೆ ಪ್ರಮಾಣ ಕೇವಲ ಶೇ.7. ಶಾಲೆಯಲ್ಲಿ ಹಿಂದೂ ಮುಸ್ಲಿಮ ವಿದ್ಯಾರ್ಥಿಗಳ ಅನುಪಾತ 1:2 ಇತ್ತು. ಆದರೆ ಇವೆರಡು ಜನಾಂಗಗಳ ಅನುಪಾತವು 8:1 ಇತ್ತೆಂಬುದು ಗಮನಾರ್ಹವಾಗಿದೆ.
15ನೇ ಆಗಸ್ಟ್ 1947ರಂದು ಭಾರತಕ್ಕೆ ದೊರೆತ ಸ್ವಾತಂತ್ರ್ಯವು ಅಪೂರ್ಣವಾಗಿತ್ತು. ಏಕೆಂದರೆ ಹೈದ್ರಾಬಾದ್ ನಿಜಾಮನು ಸೇರಿಸಿಕೊಂಡು ಹಲವಾರು ಸಂಸ್ಥಾನಾಧಿಪತಿಗಳು ಸ್ವಾತಂತ್ರ್ಯ ಘೋಷಿಸಿಕೊಳ್ಳಲು ಹವಣಿಸುತ್ತಿದ್ದವು. ಭಾರತದ ಒಕ್ಕೂಟದಲ್ಲಿ ವಿಲೀನಗೊಳ್ಳಲು ಸದ್ದರಿರಲಿಲ್ಲ. ಇದರಿಂದಾಗಿ ಭಾರತದ ಅಖಂಡತೆ ದೊಡ್ಡ ಕುತ್ತು ಉಂಟಾಯಿತು. ಹೈದ್ರಾಬಾದ್ ಸಂಸ್ಥಾನದ ಪ್ರಜೆಗಳಿಗೆ ಇದೊಂದು ಸವಾಲಾಗಿ ಪರಿಣಮಿ ಸಿತು. ಅವರೆಲ್ಲರೂ ಸಂಸ್ಥಾನವನ್ನು ಭಾರತ ಒಕ್ಕೂಟದೊಳಗೆ ವಿಲೀನಗೊಳಿಸ ಬೇಕೆಂದು ಒತ್ತಾಯಿಸುತ್ತಿದ್ದರು. ಜವಾಬ್ದಾರಿ ಸರ್ಕಾರದ ರಚನೆಯನ್ನೂ ಒತ್ತಾಯಿಸುತ್ತಿದ್ದರು. ಹೈದ್ರಾಬಾದ್ ಸಂಸ್ಥಾನದ ಕಾಂಗ್ರೆಸ್ ಕ್ರಿಯಾಶೀಲ ನೇತಾರಸ್ವಾವಿ ರಮಾನಂದ ತೀರ್ಥರವರು ಈ ಸವಾಲನ್ನು ಸ್ವೀಕರಿಸಿದರು. ನಿಜಾಮನ ಕೋಮುವಾದಿ ಸರ್ವಾಧ%
blogger
delicious
digg
facebook
reddit
stumble
twitter
print
email
ಪುಸ್ತಕ: ಸಮಕಾಲೀನ ಕರ್ನಾಟಕ ಚರಿತ್ರೆಯ ವಿವಿಧ ಆಯಾಮಗಳು (ಸಂಪಾದಿತ)
ಲೇಖಕರು: ಬಿ.ಸಿ.ಮಹಾಬಲೇಶ್ವರಪ್ಪ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಡಾ. ವಿಜಯ್ ಪೂಣಚ್ಚ ತಂಬಂಡ
ಸಂಪುಟ ಸಂಪಾದಕರು: ಡಾ. ಎನ್. ಚಿನ್ನಸ್ವಾಮಿ ಸೋಸಲೆ

4 ಕಾಮೆಂಟ್‌ಗಳು: