ಸೋಮವಾರ, ಜೂನ್ 15, 2015

ಅಧ್ಯಾಯ 23: ಜಲಸಂಬಂಧಿ ಚಳವಳಿ

ಅಧ್ಯಾಯ 23: ಜಲಸಂಬಂಧಿ ಚಳವಳಿ

ಕರ್ನಾಟಕದಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ನದಿಗಳಿವೆ. ಇವುಗಳಿಗೆ ಪ್ರಾಚೀನ ಕಾಲದಿಂದಲೂ ಆಳರಸರು ಅಣೆಕಟ್ಟುಗಳನ್ನು ನಿರ್ಮಿಸುತ್ತಿದ್ದರು. ಕೆರೆ, ಕಟ್ಟೆಗಳನ್ನು ನಿರ್ಮಿಸಿದ ಬಗ್ಗೆ ಶಾಸನಗಳ ಉಲ್ಲೇಖಗಳಿವೆ. ಇಂಥ ನಿರ್ಮಾಣಗಳು ಸಮಸ್ಯೆಯ ನಿವಾರಣೋಪಾಯದ ದ್ಯೋತಕವಾಗಿರಬೇಕು. ಹೀಗೆ ನಿರ್ಮಿಸಿದ ಅಣೆಕಟ್ಟು ಮತ್ತು ಕೆರೆಗಳಿಂದ ಪಡೆಯುವ ನೀರಿಗಾಗಿ ಚೋಳ-ಪಾಂಡ್ಯರ ನಡುವಿನ ಕಾದಾಟವು ಕಾವೇರಿ ನದಿ ನೀರಿನ ಇತಿಹಾಸವನ್ನು ತೋರಿಸುತ್ತದೆ. ಕರ್ನಾಟಕದಲ್ಲಿ ಕೃಷಿ, ಉದ್ದಿಮೆ, ಕುಡಿಯಲು ನೀರನ್ನು ಬಳಸಿಕೊಳ್ಳುವಾಗ ಕದನ, ಯುದ್ಧ, ಹೋರಾಟ ಮೊದಲಾದವು ನಡೆದರೂ ‘ಚಳವಳಿ’ ಎಂಬುದು ಸಾಮೂಹಿಕ ಆಂದೋಲನಗಳಿಂದ ಕೂಡಿದೆ.
ಕರ್ನಾಟಕದ ಕೆಲವು ನದಿಗಳು ವಿವಾದಗಳಿಂದ ಕೂಡಿವೆ. ನದಿ ಹರಿಯುವಾಗ ರಾಜ್ಯದ ಗಡಿ ದಾಟುವುದು ಸಹಜ. ಹೀಗೆ ನದಿ ಗಡಿ ದಾಟುವಾಗ ಅಣೆಕಟ್ಟು ನಿರ್ಮಾಣದಲ್ಲಿ ಜಂಟಿ ಯೋಜನೆ ರೂಪಿಸಿ ನೀರನ್ನು ಹಂಚಿಕೊಳ್ಳುವಲ್ಲಿ ವಿವಾದಗಳೆದ್ದು ಚಳವಳಿಗಳು ಸಂಭವಿಸುತ್ತವೆ. ಕರ್ನಾಟಕದ ಮಟ್ಟಿಗೆ ನಾವು ಕಾವೇರಿ, ಕೃಷ್ಣ ಮತ್ತು ತುಂಗಭದ್ರಾ ನದಿಗಳ ವಿವಾದಗಳನ್ನು ಪ್ರಸ್ತುತ ಲೇಖನದಲ್ಲಿ ಚರ್ಚಿಸಲಾಗಿದೆ.
ಕಾವೇರಿ ಜಲವಿವಾದ ಮತ್ತು ಚಳವಳಿ
 ಕರ್ನಾಟಕದ ಕೊಡಗಿನ ಭಾಗಮಂಡಲ(ತಲಕಾವೇರಿ)ದಲ್ಲಿ ಹುಟ್ಟುವ ಕಾವೇರಿ ನದಿಗೆ ಮುಖ್ಯವಾಗಿ ಕೃಷ್ಣರಾಜ ಸಾಗರ (ಕೆ.ಆರ್.ಎಸ್.) ಮತ್ತು ಮೆಟ್ಟೂರು ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಈ ನದಿ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಮಹತ್ವ ಪಡೆದಿದೆ. ನದಿ ನೀರು ಹಂಚಿಕೊಳ್ಳುವಲ್ಲಿ ವಿವಿಧ ರಾಜವಂಶಗಳಿಗೆ ಸ್ಪರ್ಧೆ ನಡೆದಿದ್ದು, ಚೋಳ-ಪಾಂಡ್ಯರ ಕಾಲದಿಂದಲೂ ಈ ವಿವಾದವನ್ನು ಗುರುತಿಸಬಹುದು. ಶತಮಾನದಿಂದ ಸಮಸ್ಯೆಯ ಸುಳಿಯಲ್ಲಿರುವ ಕಾವೇರಿ ನದಿಯು ದಕ್ಷಿಣ ಕರ್ನಾಟಕದ ಜನರ ಜೀವನದಿಯಾಗಿದೆ. ಹೀಗಾಗಿ ಈ ಜಲ ವಿವಾದವು ಒಂದು ಜನಾಂಗಕ್ಕೆ, ಪ್ರದೇಶಕ್ಕೆ ಸೀಮಿತವಾಗಿಲ್ಲ. ಸಮಗ್ರ ಕರ್ನಾಟಕದ ಜನತೆಗೂ ಅನ್ವಯಿಸುತ್ತದೆ. ಕೆಲವು ರಾಜಕಾರಣಿಗಳು ಇಂಥ ವಿವಾದಗಳನ್ನು ರಾಜಕೀಯಗೊಳಿಸಿ ವಿವಾದ, ಚಳವಳಿಗಳನ್ನು ನಡೆಸುತ್ತಾರೆ. ಫಲಾನುಭವಿಗಳಾದ ರೈತರು ಇಲ್ಲಿ ನಿರ್ಣಾಯಕ ಘಟ್ಟವನ್ನು ತಲುಪುತ್ತಾರೆ. ರೈತರ ಚಳವಳಿಗಳು ಹೆಚ್ಚು ಪರಿಣಾಮ ಬೀರಿದಂತಿಲ್ಲ. ಇದು ಎರಡು ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡಿನ ನೀರಿನ ಹಂಚಿಕೆಯ ವಿವಾದವಾಗಿದೆ. ಕೆಲವು ರಾಜಕಾರಣಿಗಳು ದಕ್ಷಿಣ ಕರ್ನಾಟಕದ ಕಾವೇರಿಯಿಂದ ಒಕ್ಕಲಿಗರು ಮತ್ತು ಉತ್ತರ ಕರ್ನಾಟಕದ ಕೃಷ್ಣಾ ನದಿಯಿಂದ ಲಿಂಗಾಯತರು ಹೆಚ್ಚಿನ ಫಲಾನುಭವಿಗಳಾದರೆ, ಉಳಿದವರ ಪಾಡೇನು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಹುಶಃ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಲು ಹವಣಿಸುತ್ತಿರುವರು. ಹೀಗೆ ಇಬ್ಭಾಗವಾದರೆ ಅದು ಈ ಎರಡು ಕೋಮುಗಳ ಪ್ರಾಬಲ್ಯದಿಂದ ಸಾಧ್ಯ. ಆಗಲೇ ಕೃಷ್ಣಾ ಮತ್ತು ಕಾವೇರಿಗಳು ಮೇಲಿನವರಿಗೆ ಪ್ರತಿನಿಧಿ ರೂಪದಲ್ಲಿ ಜೀವನದಿಗಳಾಗುತ್ತವೆ.
ಕಾವೇರಿ ನದಿ ನೀರಿನ ಬಗ್ಗೆ ತಮಿಳುನಾಡು ಮತ್ತು ಕರ್ನಾಟಕಗಳ ನಡುವೆ ವಿವಾದ ವಾಗಿದೆ. ಜೊತೆಗೆ ಕೇರಳ ಹಾಗೂ ಪುದುಚೇರಿಗಳನ್ನು ಹೆಸರಿಸಬಹುದು. ಕರ್ನಾಟಕ ಮತ್ತು ಕೇರಳ ಕಾವೇರಿ ನದಿಯ ಮೇಲ್ಭಾಗದ ರಾಜ್ಯಗಳಾದರೆ, ತಮಿಳುನಾಡು ಮತ್ತು ಪುದುಚೇರಿ ಕೆಳಭಾಗದ ರಾಜ್ಯಗಳಾಗಿವೆ. ಕರ್ನಾಟಕದಲ್ಲಿ ಈ ನದಿಯ ಉದ್ದ ಸು.380 ಕಿ.ಮೀ.ಗಳು. ಕಬಿನಿ, ಹೇಮಾವತಿ, ಹಾರಂಗಿ, ಲಕ್ಷ್ಮಣತೀರ್ಥ, ಸುವರ್ಣಾವತಿ, ಶಿಂಷಾ ಹಾಗೂ ಆರ್ಕಾವತಿಗಳು ಕಾವೇರಿಯ ಉಪನದಿಗಳಾಗಿವೆ. ಇದರ ನೀರಿನ ಬಳಕೆ ಪ್ರಮಾಣ ಕರ್ನಾಟಕದಲ್ಲಿ 355 ರಿಂದ 425 ಟಿ.ಎಂ.ಸಿ, ಕೇರಳದಿಂದ 147 ಟಿ.ಎಂ.ಸಿ. ತಮಿಳುನಾಡಿನಿಂದ 201 ಟಿ.ಎಂ.ಸಿ. ಎಂದು ಅಂದಾಜಿಸಲಾಗಿದೆ.
ಕಾವೇರಿ ಸಮಸ್ಯೆ ಬಗ್ಗೆ 1891ರಲ್ಲಿ ಪ್ರಜಾಪ್ರತಿನಿಧಿ ಸಭೆಯಲ್ಲಿ ಮೈಸೂರಿನ ದಿವಾನರು ಕಾಲುವೆಗಳ ಪೂರ್ಣ ಉಪಯೋಗದ ಬಗ್ಗೆ ಉಭಯ ರಾಜ್ಯಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಅಂತಿಮ ತೆರೆ ಎಳೆದರು. ಮೇಲಿನಂತೆ ಪ್ರಜಾಪ್ರತಿನಿಧಿ ಸಭೆಯಲ್ಲಿ ಕಾವೇರಿ ವಿವಾದದ ಬಗ್ಗೆ ಪ್ರಶ್ನಿಸಿದವರು ಆಗ್ಮಲ ಸದಸ್ಯ ಹಾಗೂ ತೋಟಗಾರರ ಸಂಘದ ಎಲಿಯಟ್ ಎಂಬುವನು. ಇವನು ಕಾವೇರಿ ನೀರನ್ನು ಬಳಸಿಕೊಳ್ಳುವ ಸಂಪೂರ್ಣ ಹೊಣೆಗಾರಿಕೆ ಮೈಸೂರಿಗಿದೆ ಎಂದನು. ಮೈಸೂರನ್ನು ಮದ್ರಾಸ್ನ ಒಂದು ಪ್ರಾಂತವಾಗಿ ಮಾಡಲು ಯೋಜಿಸಲಾಯಿತು. ದೂರದ ಹಾದಿ ಸವೆಸುವಾಗ ನದಿನೀರು ಆವಿಯಾಗಿ ಇಂಗುತ್ತದೆ. ಬರಗಾಲದ ವಿರುದ್ಧ ಸೆಣಸಾಡುವ ಸರ್ಕಾರದ ಶಕ್ತಿ ಕುಂದುತ್ತದೆ ಎಂದಲ್ಲದೆ, ಮೈಸೂರು ಸಂಸ್ಥಾನವು ತನ್ನ ಗಡಿಯೊಳಗಿನ ನೀರನ್ನು ಪಡೆಯಬೇಕೆಂದರು.
1892ರ ಒಪ್ಪಂದ
 ಮೈಸೂರು ರಾಜ ಸಂಸ್ಥಾನವು 1831 ರಿಂದ 1881ರವರಗೆ ಬ್ರಿಟೀಷರ ನೇರ ಆಡಳಿತಕ್ಕೆ ಒಳಗಾದಾಗ ಅನೇಕ ನೀರಾವರಿ ಯೋಜನೆಗಳನ್ನು ಕೈಗೊಂಡಿತು. ಇದನ್ನು ಮದ್ರಾಸ್ ಸರ್ಕಾರ ವಿರೋಧಿಸಿತು. ಈ ಸಂಬಂಧ ಮೈಸೂರು ಮತ್ತು ಮದ್ರಾಸ್ ಪ್ರಾಂತ್ಯಗಳ ನಡುವೆ 1892ರಲ್ಲಿ ಒಪ್ಪಂದವಾಯಿತು. ಇದರ ತೀರ್ಮಾನದಂತೆ ಮೈಸೂರು ಸರ್ಕಾರವು ಮದ್ರಾಸ್ ಸರ್ಕಾರದ ಅನುಮತಿ ಇಲ್ಲದೆ ಹೊಸ ನೀರಾವರಿ ಯೋಜನೆಗಳನ್ನು ಹಮ್ಮಿಕೊಳ್ಳಬಾರದೆಂದು ಈ ಒಪ್ಪಂದದಲ್ಲಿ ತಿಳಿಸಲಾಗಿದೆ. ಇದರಿಂದ ಮೈಸೂರಿಗೆ ಕೆಲವು ಹಕ್ಕುಗಳು ಮೊಟುಕಾದವು. ಆದುದರಿಂದ ಕರ್ನಾಟಕಕ್ಕೆ ಇದರಿಂದ ಅನನುಕೂಲವಾಗಿತ್ತು. 1911ರಲ್ಲಿ ಮೈಸೂರು ಸರ್ಕಾರ ಕೃಷ್ಣರಾಜ ಸಾಗರ ಅಣೆಕಟ್ಟನ್ನು ಪ್ರಾರಂಭಿಸಿತು. ಇದನ್ನು ವಿರೋಧಿಸಿದ ತಮಿಳುನಾಡು ಮೆಟ್ಟೂರು ಅಣೆಕಟ್ಟು ನಿರ್ಮಿಸಲು ಮುಂದಾಯಿತು.
1892 ಮತ್ತು 1924ರಲ್ಲಿ ಏರ್ಪಟ್ಟ ಮದ್ರಾಸ್ ಮೈಸೂರುಗಳ ಎರಡು ಒಪ್ಪಂದಗಳು ತಮಿಳುನಾಡಿಗೆ ಅನುಕೂಲವಾಗಿ, ಕರ್ನಾಟಕಕ್ಕೆ ಅನನುಕೂಲವಾಗಿದ್ದವು. ಈ ಒಪ್ಪಂದದ ಪ್ರಕಾರ ಕರ್ನಾಟಕವು ಕಾವೇರಿ ಪರಿಸರದಲ್ಲಿ ಯಾವುದೇ ಜಲವಿದ್ಯುತ್ ಯೋಜನೆ ಕೈಗೊಳ್ಳಬಾರದು. ತನ್ನ ನೀರಾವರಿ ಕ್ಷೇತ್ರದ ವ್ಯಾಪ್ತಿಯನ್ನು ವಿಸ್ತರಿಸಬಾರದೆಂಬ ನಿರ್ಬಂಧ ಹೇರಲಾಯಿತು. ಈ ಒಪ್ಪಂದದ ಕಲಮು 2ರಂತೆ : ಮೈಸೂರು ಸರ್ಕಾರ ಮದ್ರಾಸ್ ಸರ್ಕಾರದ ಪೂರ್ವಾನುಮತಿ ಇಲ್ಲದೆ, ಅಥವಾ ನಿಯಮ 4ರಲ್ಲಿ ಹೇಳಿರುವಂತೆ: ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಯಾವುದೇ ಹದಿನೈದು ಮುಖ್ಯ ನದಿಗಳಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸುವಂತಿಲ್ಲ. ಕಲಾಮು 3ರ ಪ್ರಕಾರ ಪಡೆದಿರುವ ಹಕ್ಕುಗಳ ಮಿತಿ ಹೊರತುಪಡಿಸಿ ಮದ್ರಾಸ್ನ ಅನುಮತಿಯನ್ನು ನಿರಾಕರಿಸದೆ ಒಂದು ನಿರ್ಧಾರಕ್ಕೆ ಬರಲು ಸೂಚಿಸಿತ್ತು.
ಅನುಭೋಗದ ಹಕ್ಕು
 ಮೈಸೂರು ಹಿಂದೆ ಮಳೆಯ ನೀರನ್ನು ನೀರಾವರಿಗಿಂತ ಹೆಚ್ಚಾಗಿ ಉಪಯೋಗಿಸಿಲ್ಲ. ಮಳೆಯ ನೀರನ್ನೇ ಆಶ್ರಯಿಸಬೇಕಾಗಿತ್ತು. ನೀರನ್ನು ಅನುಭವಿಸುವ ಹಕ್ಕು ಬರುವವರೆಗೆ ಅನುಭೋಗದ ಹಕ್ಕು ಇರುತ್ತದೆ.
ಚಿರಭೋಗದ ಹಕ್ಕು
 ಪೋಲಾಗಿ ಹರಿದು ಹೋಗುವ ನೀರಿನ ಮೇಲೆ ಮದ್ರಾಸ್ ನೀರಾವರಿ ಯೋಜನೆಗಳ ಮೇಲೆ ಚಿರಭೋಗದ ಹಕ್ಕನ್ನು ಮದ್ರಾಸ್ ಸ್ಥಾಪಿಸುವಂತಿಲ್ಲ. ಸಿ.ಜಿ.ಫೆನ್ವಿಕ್ ಈ ಬಗ್ಗೆ ಪುರಾತನ ಕಾಲದಿಂದ ಬಂದಿರುವ ಈ ಸಾರ್ವಭೌಮ ಹಕ್ಕಿನಿಂದಾಗಿ ಮೇಲ್ದಂಡೆ ನೀರಿನ ಮೇಲೆ ಪ್ರಭುತ್ವ ಸಾಧಿಸಿರುವ ರಾಜ್ಯಗಳು ಕೆಳದಂಡೆ ರಾಜ್ಯಗಳ ಬಗ್ಗೆ ಚಿಂತಿಸುವುದಿಲ್ಲ. 1892ರ ಒಪ್ಪಂದವು ಮೇಲ್ದಂಡೆ ನದಿ ತೀರದ ರಾಜ್ಯಗಳ ಮೇಲೆ ಕೆಳದಂಡೆ ನದಿ ತೀರದ ರಾಜ್ಯ ತೊಂದರೆಯನ್ನು ಅನುಭವಿಸಿರಲಿ, ಇಲ್ಲದಿರಲಿ ನಿಷೇಧಾಧಿಕಾರ ಚಲಾಯಿಸುವ ಹಕ್ಕು ನೀಡಿದೆ.
1924ರ ಒಪ್ಪಂದ
1909ರಲ್ಲಿ ಕೆ.ಆರ್.ಎಸ್. ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ಮೈಸೂರು ರಾಜ್ಯದ ಮುಂದಿಟ್ಟಾಗ ಮದ್ರಾಸ್ ಸರ್ಕಾರ ಅನುಮತಿ ನೀಡಿತು. ತರುವಾಯ ತಮಿಳುನಾಡು ಮೆಟ್ಟೂರು ಅಣೆಕಟ್ಟನ್ನು ನಿರ್ಮಿಸಲು ಮುಂದಾಯಿತು. ಈ ಎರಡು ಪ್ರಾಂತ್ಯಗಳ ವಿವಾದವನ್ನು ಗ್ರಿಫಿನ್ಸ್ ಪರಿಶೀಲಿಸಿ ತಮ್ಮ ತೀರ್ಪನ್ನು ನೀಡಿದರು. ಮದ್ರಾಸಿನ ನೀರಾವರಿಗೆ ಸಾಕಷ್ಟು ನೀರನ್ನು ಮೈಸೂರು ಬಿಡಬೇಕೆಂದು ಇವರು ಸೂಚಿಸಿದರು. ಮದ್ರಾಸ್ ಸರ್ಕಾರ ಭಾರತ ಸರ್ಕಾರಕ್ಕೆ (ಕಾರ್ಯದರ್ಶಿಗೆ) ಅಪೀಲನ್ನು ಸಲ್ಲಿಸಿತು. ಆ ಪ್ರಕಾರ 1924ನೆಯ ಫೆಬ್ರವರಿ 18ರಲ್ಲಿ ಹೊಸ ಒಪ್ಪಂದಕ್ಕೆ ಬರಬೇಕಾಯಿತು.
ಒಪ್ಪಂದದ ಅಂಶಗಳು
1924ರ ಒಪ್ಪಂದದಂತೆ ಮುಖ್ಯ ನದಿಗೆ ಅಡ್ಡಲಾಗಿ ಮದ್ರಾಸ್ ಸರ್ಕಾರ ಹೊಸ ಅಣೆಕಟ್ಟುಗಳನ್ನು ನಿರ್ಮಿಸುವಂತಿಲ್ಲ. 3,01,000 ಎಕರೆಗಿಂತ ಹೆಚ್ಚಿನ ಪ್ರದೇಶವನ್ನು ನೀರಾವರಿಗೊಳಪಡಿಸುವಂತಿಲ್ಲವೆಂದು ಮೈಸೂರು ರಾಜ್ಯ ಅಭಿಪ್ರಾಯಪಟ್ಟಿತು. 1,10,000 ಎಕರೆ ಪ್ರದೇಶವನ್ನು ಮೈಸೂರು ಸರ್ಕಾರಕ್ಕೆ ನಿಗದಿಪಡಿಸಬೇಕಾಯಿತು. ಕಾವೇರಿ ಮತ್ತು ಅದರ ಉಪನದಿಗಳಿಗೆ ಜಲಾಶಯವನ್ನು ನಿರ್ಮಿಸುವುದರ ಮೂಲಕ ನೀರಾವರಿಗೊಳಪಡಿಸ ಬಹುದಾಗಿತ್ತು. ಮದ್ರಾಸ್ ಸರ್ಕಾರ ಮೈಸೂರಿಗೆ ಕೆ.ಆರ್.ಎಸ್. ನಿರ್ಮಿಸಲು ಅನುಮತಿಸಿತು. 1924ನೆಯ ಫೆಬ್ರವರಿ 18ರ ಒಪ್ಪಂದವನ್ನು ಪುನರ್ವಿಮರ್ಶಿಸಲು 1974ನೆಯ ಫೆಬ್ರವರಿ 18ಕ್ಕೆ 50 ವರ್ಷಗಳೆಂದು ನಿಗದಿಪಡಿಸಲಾಯಿತು. 1956ರಲ್ಲಿ ಸೆಕ್ಷನ್ 108ರಲ್ಲಿ ಅವಕಾಶ ಕಲ್ಪಿಸಿತು. 1957ನೆಯ ನವೆಂಬರ್ 1ರೊಳಗೆ ಕಾರ್ಯಗತವಾಗಲು ಅಭಿಪ್ರಾಯಿಸಿತು. 1947ರವರೆಗೂ ಕಾವೇರಿ ಸಮಸ್ಯೆ ಬ್ರಿಟಿಷ್ ರೆಸಿಡೆಂಟ್ ಕೈಯಲ್ಲಿದ್ದು, ಉಭಯ ರಾಜ್ಯಗಳು ಅವರ ತೀರ್ಮಾನಕ್ಕೆ ಬದ್ಧವಾಗಿದ್ದವು. ಅನಂತರ ಸಮಸ್ಯೆ ದ್ವಿಗುಣಗೊಂಡಿತು.
1924ರ ಒಪ್ಪಂದವನ್ನು ತಮಿಳುನಾಡು ಉಲ್ಲಂಘಿಸಿ ಭವಾನಿ ಮತ್ತು ಅಮರಾವತಿ ಅಣೆಕಟ್ಟುಗಳನ್ನು ನಿರ್ಮಿಸುವಾಗ ಮೈಸೂರು ಸರ್ಕಾರದ ಗಮನಕ್ಕೆ ತರಲಿಲ್ಲ. ತಂಜಾವೂರು ಪ್ರದೇಶದಲ್ಲಿನ ಆಧುನೀಕರಣ ನೀರಾವರಿ ಯೋಜನೆಯ ವಿವರಗಳನ್ನು ತಿಳಿಸಲಿಲ್ಲ. ಹೀಗಾಗಿ ಮೈಸೂರು ಸರ್ಕಾರವು ಸಹಾ ಕೆಲವು ಯೋಜನೆಗಳನ್ನು ಕೈಗೊಂಡಿತು. ಪಂಚವಾರ್ಷಿಕ ಯೋಜನೆಗಳ ಮೂಲಕ ಇದನ್ನು ಅಭಿವೃದ್ದಿಪಡಿಸಲಾಯಿತು. 1950ರ ದಶಕದಲ್ಲಿ ತಮಿಳುನಾಡು ಕೇಂದ್ರದಿಂದ ಅನೇಕ ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡಿತು. ಕರ್ನಾಟಕ ಇದನ್ನು ಖಂಡಿಸುತ್ತಲೇ ಬಂದಿದೆ. ಕೊನೆಗೆ 1974ಕ್ಕೆ 1924ರ ಒಪ್ಪಂದದ ಕಾಯಿದೆ ಮುಗಿದಾಗ ವಿವಾದವೆದ್ದಿತು. 1974ರ ನವೆಂಬರ್ 29ರಂದು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಿಂದ ತಮಿಳುನಾಡು, ಕರ್ನಾಟಕ ಹಾಗೂ ಕೇರಳ ಮುಖ್ಯಮಂತ್ರಿಗಳು ಸಭೆ ಸೇರಿ ಕಾವೇರಿ ಕಣಿವೆ ಪ್ರಾಧಿಕಾರ ರಚನೆಗೆ ಒಪ್ಪಿಕೊಂಡರೂ ಅಸ್ತಿತ್ವಕ್ಕೆ ಬರಲಿಲ್ಲ.
1976ರ ಬರಗಾಲದಲ್ಲಿ ಕಾವೇರಿ ನದಿ ನೀರನ್ನು ಹಾಗೂ ಉಳಿದ ಕಾಲದಲ್ಲಿ ದೊರೆಯುವ ಹೆಚ್ಚುವರಿ ನೀರನ್ನು ತಮ್ಮ ನಡುವೆ ಹಂಚಿಕೊಳ್ಳಲು ಸಮಿತಿಯೊಂದನ್ನು ರೂಪಿಸಲು ಸಂಬಂಧಿಸಿದ ರಾಜ್ಯಗಳು ಒಪ್ಪಿಕೊಂಡವು. ನೀರಾವರಿ ವಿಸ್ತರಣೆ ಇಮ್ಮಡಿ ಗೊಳ್ಳುತ್ತಾ ಹೋಯಿತು. ತಮಿಳುನಾಡು, ಪಾಂಡಿಚೇರಿ ಹಾಗೂ ಕರ್ನಾಟಕಕ್ಕಾಗಿ ನೀರು ಸಂಗ್ರಹದ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಸದ್ಯ ಇರುವ ಅಚ್ಚುಕಟ್ಟು ಪ್ರದೇಶ, ಹೊಸ ಪ್ರದೇಶಗಳ ರಕ್ಷಣೆಯ ಹಿನ್ನೆಲೆಯಲ್ಲಿ ಉತ್ತಮ ನೀರಿನ ಪೂರೈಕೆ, ಕಷ್ಟಕಾಲದಲ್ಲಿ ಅಚ್ಚುಕಟ್ಟು ಮತ್ತು ಹೊಸ ಪ್ರದೇಶಗಳಿಗೆ ಅನ್ಯಾಯವಾಗದಂತೆ ಸಮಾನ ನೀರು ಹಂಚಲು ಸಾಧ್ಯವಾಗುವ ಸೂತ್ರವೊಂದನ್ನು ಶಿಫಾರಸ್ಸು ಮಾಡಲು ಹಾಗೂ ಮುಂದಿನ ಉಪಯೋಗಕ್ಕಾಗಿ ಲಭ್ಯವಿರುವ ನೀರಿನ ಹೆಚ್ಚಳವನ್ನು ನಿರ್ಧರಿಸುವ ಯೋಜನೆಯಿತ್ತು.
ನ್ಯಾಯಮಂಡಳಿ
 ಅಂತರ್ ರಾಜ್ಯ ನದಿ ನೀರು ವಿವಾದ ಕಾಯ್ದೆ 1956ರ ಸೆಕ್ಷನ್ 4ರ ಪ್ರಕಾರ ಕಾನೂನುಬದ್ಧ ಕರ್ತವ್ಯವನ್ನು ಪೂರ್ತಿ ಮಾಡಲು ವಿವಾದದ ನ್ಯಾಯನಿರ್ಣಯಕ್ಕಾಗಿ ನ್ಯಾಯಮಂಡಳಿಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಸುಪ್ರೀಂಕೋರ್ಟಿನ ಆದೇಶದ ಮೇರೆಗೆ ಕೇಂದ್ರ ಸರ್ಕಾರವು 1990ನೆಯ ಜೂನ್ 7ರಂದು ಕಾವೇರಿ ನ್ಯಾಯಮಂಡಳಿಯನ್ನು ನೇಮಿಸಿತು. ನ್ಯಾಯಮೂರ್ತಿಗಳಾದ ಚಿತ್ತತೋಷ್ ಮುಖರ್ಜಿ ಅಧ್ಯಕ್ಷರಾಗಿ, ಎಸ್.ಡಿ.ಅಗರ್ವಾಲ ಮತ್ತು ಎನ್.ಎಸ್.ರಾವ್ ಸದಸ್ಯರಾಗಿದ್ದರು. ಇದರ ಕಾರ್ಯ ಜುಲೈ 28ರಿಂದ ಪ್ರಾರಂಭಿಸಿ, ತಮಿಳುನಾಡಿನ ಕೋರಿಕೆ ಮೇರೆಗೆ 1991ನೆಯ ಜೂನ್ 25ರಂದು ಮಧ್ಯಂತರ ಆಜ್ಞೆಯನ್ನು ನೀಡಿತು. 1980ರಿಂದ 1990ರವರೆಗೆ ಮೆಟ್ಟೂರು ಜಲಾಶಯಕ್ಕೆ ಹರಿದ ನೀರಿನ ಪ್ರಮಾಣದ ಆಧಾರದ ಮೇಲೆ 205 ಟಿ.ಎಂ.ಸಿ ನೀರನ್ನು ತಮಿಳುನಾಡಿಗೆ ಕರ್ನಾಟಕ ಜೂನ್ನಿಂದ ಮೇ ತಿಂಗಳವರೆಗೆ ಬಿಡಲೇಬೇಕೆಂದು ತನ್ನ ಮಧ್ಯಂತರ ಆದೇಶದಲ್ಲಿ ತಿಳಿಸಿತು. ಅದರಂತೆ ಪ್ರತಿ ತಿಂಗಳು ಬಿಡುವ ನೀರಿನ ಪ್ರಮಾಣವನ್ನು ಗೊತ್ತುಪಡಿಸಿತು. ಈ ಆಜ್ಞೆಯನ್ನು 11.7 ಲಕ್ಷ ಎಕರೆ ನೀರಾವರಿಯನ್ನು ಮತ್ತೆ ವಿಸ್ತರಿಸಬಾರದೆಂದೂ ತಿಳಿಸಿತು. ಕರ್ನಾಟಕ ಮಂಡಿಸಿದ ‘ಡಿಸೆಟ್ರೆಸ್ ಫ್ರೀ’ಯನ್ನು ನ್ಯಾಯಮಂಡಳಿ ತಿರಸ್ಕರಿಸಿತು. ಕರ್ನಾಟಕ ಇದನ್ನು ಚಳವಳಿ, ಹೋರಾಟಗಳನ್ನು ನಡೆಸು ವುದರ ಮೂಲಕ ವಿರೋಧಿಸಿತು.
1991ನೆಯ ಡಿಸೆಂಬರ್ 12ರಂದು ಕೇಂದ್ರ ಜನಸಂಪನ್ಮೂಲ ಖಾತೆ ಸಚಿವ ವಿ.ಸಿ.ಶುಕ್ಲಾ ಸಂಸತ್ನಲ್ಲಿ ಕಾವೇರಿ ನದಿ ನೀರು ವಿವಾದ ನ್ಯಾಯಮಂಡಳಿ ನೀಡಿದ ಮಧ್ಯಂತರ ಆಜ್ಞೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದರು. ಈ ಸಂದರ್ಭದಲ್ಲಿ ಸಂಭವಿಸಿದ ಕಾವೇರಿ ದೊಂಬಿಗಳಿಂದ ಎಸ್.ೊಬಂಗಾರಪ್ಪನವರು ನೈತಿಕವಾಗಿ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದರು. 1994-95ರಲ್ಲಿ ತಂಜಾವೂರಿನ ಪ್ರದೇಶದಲ್ಲಿ ಕುರುವೈ ಬೆಳೆ ವಿಸ್ತೀರ್ಣ ಸುಮಾರು 4 ಲಕ್ಷ ಹೆಕ್ಟೇರ್ಗೆ ಹೆಚ್ಚಿರುತ್ತದೆ.
ಕರ್ನಾಟಕವು ಕಾವೇರಿ ಜಲಾನಯನ ಪ್ರದೇಶದಲ್ಲಿ ತನ್ನ ನೀರಾವರಿ ಹಕ್ಕು ಹಾಗೂ ಯೋಜನೆಗಳನ್ನು ರಕ್ಷಿಸಲು ಸುಗ್ರೀವಾಜ್ಞೆಯನ್ನು ಘೋಷಿಸಿತು. ಇದನ್ನು ಅಸಿಂಧು ಎಂದು ಸುಪ್ರೀಂಕೋರ್ಟ್ 1991ನೆಯ ನವೆಂಬರ್ 22ರಂದು ರಾಷ್ಟ್ರಪತಿಗೆ ಸಲಹೆ ನೀಡಿತು. ಕಾವೇರಿ ನ್ಯಾಯಮಂಡಳಿಗೆ ಮಧ್ಯಂತರ ಆದೇಶ ನೀಡುವ ಅಧಿಕಾರವಿದೆ ಎನ್ನಲಾಯಿತು. ಹೀಗೆ ಕರ್ನಾಟಕದ ದಿಟ್ಟೊನಿಲುವಿನಿಂದ ಸುಪ್ರೀಂಕೋರ್ಟ್ 1995ನೆಯ ಡಿಸೆಂಬರ್ 28ರಂದು ಪ್ರಧಾನಮಂತ್ರಿಗೆ ಸಲಹೆ ನೀಡಿ, ‘ತಮಿಳುನಾಡಿಗೆ ನೀರು ಬಿಡುವ ವಿಷಯದ ಬಗ್ಗೆ ಎರಡು ದಿನಗಳೊಳಗೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ತ್ವರಿತವಾಗಿ ತೀರ್ಮಾನ ತೆಗೆದುಕೊಳ್ಳಬೇಕು’ ಎಂದಿತು. ಮುಖ್ಯಮಂತ್ರಿಗಳ ಸಭೆ ಡಿಸೆಂಬರ್ 30ರಂದು ನಡೆದು ವಿಫಲಗೊಂಡಾಗ, ತಮಿಳುನಾಡಿಗೆ 6 ಟಿ.ಎಂ.ಸಿ. ನೀರಿನ ಬಿಡುಗಡೆಗೆ ಕರ್ನಾಟಕ ಸರ್ಕಾರಕ್ಕೆ ಪ್ರಧಾನಮಂತ್ರಿ 1996ನೆಯ ಜನವರಿ 1ರಂದು ಸಲಹೆ ನೀಡಿದಾಗ ಇದು ಫಲಿಸಿತು.
ತಜ್ಞರ ತಂಡ ನೇಮಕ
 ಕಾವೇರಿ ನೀರಿನ ವಾಸ್ತವಿಕ ಅಂಶವನ್ನು ತಿಳಿಯಲು ತ್ರಿಸದಸ್ಯ ತಜ್ಞರ ತಂಡವನ್ನು ಜನವರಿ 1996ರಲ್ಲಿ ಕೇಂದ್ರ ಸರ್ಕಾರ ನೇಮಿಸಿತು. ವೈ.ಕೆ.ಅಲಫ್ ಅಧ್ಯಕ್ಷರಾಗಿದ್ದರು, ಭರತ್ ಸಿಂಗ್ ಮತ್ತು ಕೆಪ್ರಿಹಾನ್ಸ್ ಸದಸ್ಯರಾಗಿದ್ದರು. ಈ ತಂಡ ಎರಡು ರಾಜ್ಯಗಳಿಗೆ ಭೇಟಿ ನೀಡಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಜನವರಿಯಿಂದ ಮೇ ತಿಂಗಳವರೆಗೆ ಕರ್ನಾಟಕವು 11.4 ಟಿ.ಎಂ.ಸಿ ನೀರು ತಮಿಳುನಾಡಿಗೆ ಲಭ್ಯವಾಗುವಂತೆ ಆಸಕ್ತಿ ವಹಿಸಲು ಶಿಫಾರಸ್ಸು ಮಾಡಿತು.
ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಇನ್ನೂ (1997 ಅಕ್ಟೋಬರ್) ಪ್ರಕಟವಾಗಿಲ್ಲ. ಕರ್ನಾಟಕ ಸರ್ಕಾರ ಒಂದು ಸ್ಪಷ್ಟೀಕರಣ ನೀಡಿ, 1995ನೇ ಸಾಲನ್ನು ಬಿಟ್ಟರೆ, ಪ್ರತಿವರ್ಷವೂ ಕರ್ನಾಟಕ 205 ಟಿ.ಎಂ.ಸಿ.ಗಿಂತ ಹೆಚ್ಚು ನೀರನ್ನು ತಮಿಳುನಾಡಿಗೆ ಬಿಟ್ಟಿದೆಯೆಂದು ತಿಳಿಸಿತು. ತಮಿಳುನಾಡು ಸರ್ಕಾರ ಇದನ್ನು ಒಪ್ಪದೇ, ಕರ್ನಾಟಕ ಸರ್ಕಾರ 1996-97ರ ಆಗಸ್ಟ್ ಅವಧಿಯಲ್ಲಿ ತಮಿಳುನಾಡಿಗೆ ಬರಬೇಕಾದಷ್ಟು ನೀರನ್ನು ಬಿಟ್ಟಿಲ್ಲವೆಂದು 1997ರ ಸೆಪ್ಟೆಂಬರ್ನಲ್ಲಿ ತಿಳಿಸಿತು. ಇದೇ ತಿಂಗಳ 30ರಂದು ಸಂಬಂಧಪಟ್ಟ ರಾಜ್ಯಗಳ ನೀರಾವರಿ ಸಚಿವರ ಸಭೆ ನವದೆಹಲಿಯಲ್ಲಿ ನಡೆದಾಗ, ಕಾವೇರಿ ಪ್ರಾಧಿಕಾರದ ರಚನೆಗೆ ತಮಿಳುನಾಡು ಸಚಿವರು ಬೆಂಬಲಿಸಿದರೆ ಅದನ್ನು ಕರ್ನಾಟಕದ ಸಚಿವರು ಬಲವಾಗಿ ವಿರೋಧಿಸಿದರು. ನ್ಯಾಯಮಂಡಳಿಯ ಅಂತಿಮ ತೀರ್ಪು ಹೊರಬೀಳು ವವರೆಗೆ ತಾತ್ಕಾಲಿಕ ಸಮನ್ವಯ ಸಮಿತಿ ರಚನೆಗೆ ಕರ್ನಾಟಕ ಸಲಹೆ ನೀಡಿತ್ತು.
ಪ್ರಚಲಿತ ಕಾವೇರಿ ಸಮಸ್ಯೆ
 ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಬಿ.ಜೆ.ಪಿ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಮತ್ತು ಅನಂತರದಲ್ಲಿ ಕಾವೇರಿ ಸಮಸ್ಯೆ ಬಿಕ್ಕಟ್ಟಾಗಿಯೇ ಮುಂದುವರೆದಿತ್ತು. ಒಂದು ರೀತಿಯಲ್ಲಿ ಇದು ರಾಜಕೀಯದ ನಿರ್ಣಾಯಕ ಪಾತ್ರವೂ ಆಗಿತ್ತು. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕರುಣಾನಿಧಿಯವರು ಬಿ.ಜೆ.ಪಿ ಸರ್ಕಾರದ ಕಾರ್ಯಸೂಚಿ ಕಾವೇರಿ ವಿವಾದದ ವಿಷಯದಲ್ಲಿ ಕರ್ನಾಟಕದ ಪರಿವಾಗಿದೆ ಎಂದು (1998ನೆಯ ಮಾರ್ಚ್ 3) ತಿಳಿಸಿದರು. ಹೊಸ ರಾಷ್ಟ್ರೀಯ ಜಲನೀತಿ ಆಧರಿಸಿ ಉಭಯ ರಾಜ್ಯಗಳು ವಿವಾದವನ್ನು ಬಗೆಹರಿಸಿಕೊಳ್ಳಲು ಸೂಚಿಸಿದರಲ್ಲದೆ, ಕಾವೇರಿ ಪ್ರಾಧಿಕಾರದ ರಚನೆಯ ಪರವಾಗಿ ಸಂಯುಕ್ತರಂಗ ಸರ್ಕಾರವಿದೆ ಎಂದು ಆಪಾದಿಸಿದರು. ಕಾಮಗಾರಿ ಸಚಿವ ದೊರೆ ಮುರುಗನ್ ಸುಪ್ರೀಂಕೋರ್ಟ್ನಲ್ಲಿ 1998ನೆಯ ಮಾರ್ಚ್ 30ರಂದು ಅಂತರ್ ರಾಜ್ಯ ಜಲವಿವಾದ ಕಾಯ್ದೆಯ 6 ಎ ವಿಧಿಯ ಅನ್ವಯ ರಚಿತವಾದ ಕರಡು ಯೋಜನೆ ಜಾರಿಗೆ ತರಲು ಒತ್ತಾಯಿಸಿದರು.
ಮಧ್ಯಂತರ ತೀರ್ಪಿನ ಜಾರಿ, ಕಾವೇರಿ ಜಲ ಪ್ರಾಧಿಕಾರ ರಚನೆಯನ್ನು ವಿರೋಧಿಸಿದ ಕರ್ನಾಟಕ ಪ್ರತ್ಯೇಕ ಸಮಿತಿಯನ್ನು ಬಯಸಿತ್ತು. ರಾಜ್ಯಮಟ್ಟದ ಜಲಪ್ರಾಧಿಕಾರದ ಅಗತ್ಯವಿದ್ದು, ನದಿ ನೀರು ಹಂಚಿಕೊಳ್ಳುವಾಗ ಹಲವು ಕಚೇರಿಗಳು ವಹಿಸಿಕೊಂಡಿದ್ದು, ಪ್ರಾಧಿಕಾರದ ಅಗತ್ಯದ ಬಗ್ಗೆ ಜೆ.ಪಿ.ಶರ್ಮರು ಹೇಳಿದ್ದಾರೆ. ಉದ್ದೇಶಿತ ರಾಷ್ಟ್ರೀಯ ಜಲನೀತಿಯನ್ನು ಪ್ರಕಟಿಸದಿರುವ ಹಿನ್ನೆಲೆಯಲ್ಲಿ ಕಾವೇರಿ ಜಲವಿವಾದ ಬಗ್ಗೆ ನ್ಯಾಯಪಂಚಾಯ್ತಿ ನೀಡಿದ ಮಧ್ಯಂತರ ತೀರ್ಪನ್ನು ಜಾರಿಗೊಳಿಸಲು ಅಧಿಸೂಚನೆ ಕಂಡುಬರಲಿಲ್ಲ. ಇದರಿಂದ ಬೇಸತ್ತು ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು (1998ನೆಯ ಏಪ್ರಿಲ್ 9) ರಾಷ್ಟ್ರೀಯ ಜಲನೀತಿ ರೂಪಿಸಲು ಸಲಹೆ ನೀಡಿದರು. ನಂತರ ನಂಜೇಗೌಡರು ರಾಷ್ಟ್ರೀಯ ಜಲನೀತಿಯ ಮಾರ್ಗಸೂಚಿ ಜಾರಿಗೆ ಬಾರದೇ ಕಾವೇರಿ ಪ್ರಾಧಿಕಾರ ರಚನೆ ಮಾಡಿದರೆ ಪಕ್ಷ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಕಾವೇರಿ ವಿವಾದವನ್ನು ನ್ಯಾಯಾಂಗದ ಮೂಲಕವೇ ಇತ್ಯರ್ಥಪಡಿಸಿಕೊಳ್ಳಲು ತೀರ್ಮಾನಿಸಿತು.
ಕಾವೇರಿ ಜಲವಿವಾದಗಳ ನ್ಯಾಯಮಂಡಳಿಯು 1991ರ ಜೂನ್ 28ರಂದು ನೀಡಿದ ಮಧ್ಯಂತರ ಆಜ್ಞೆಯಂತೆ ಕರ್ನಾಟಕ ತಮಿಳುನಾಡಿಗೆ 205 ಟಿ.ಎಂ.ಸಿ. ನೀರು ಬಿಡುವ ಬಗೆಗೆ ಉಂಟಾದ ಅಡಚಣೆಯಿಂದ ಹೆಚ್.ಡಿ.ದೇವೇಗೌಡ ಅವರು ಅಧಿಕಾರ ಕಳೆದುಕೊಳ್ಳುವ ದಿನಗಳಲ್ಲಿ ಕೆಂದ್ರವು ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದುಕೊಟ್ಟಿತು. ಇದು ತಮಿಳುನಾಡು ಸುಪ್ರೀಂಕೋರ್ಟ್ ಮುಂದೆ ಮಾಡಿದ ಮನವಿಗೆ ಅನುಗುಣವಾಗಿತ್ತು. ಈ ಮುಚ್ಚಳಿಕೆ ಪರವಾಗಿ ಕರ್ನಾಟಕದ ನ್ಯಾಯವಾದಿಗಳಾದ ಎಫ್.ಎಸ್.ನಾರಿಮನ್, ಅನಿಲ್ ದಿವಾನ್, ವಿಜಯ್ ಶಂಕರ್, ಎಸ್.ಎಸ್.ಜವಳಿ ಮತ್ತು ಮೋಹನ್ ವಿ.ಕಾತರಕಿ ಅವರುಗಳಿದ್ದರು.
ಕಾವೇರಿ ವಿವಾದಕ್ಕೆ ರಾಜಕೀಯ ಲೇಪ ಹಚ್ಚುವುದು ಗಮನಾರ್ಹ. ಎಲ್ಲ ರಂಗಗಳಲ್ಲಿ ತಮಿಳುನಾಡಿನ ಹಿತಾಸಕ್ತಿಗಳಿಗೆ ವಾಜಪೇಯಿ ಸರ್ಕಾರ ದ್ರೋಹ ಬಗೆದಿರುವುದರಿಂದ ಬೆಂಬಲವನ್ನು ವಾಪಸ್ ಪಡೆಯುವಂತೆ ಡಾ. ಸುಬ್ರಮಣಿಯನ್ ಸ್ವಾಮಿ ಜಯಲಲಿತಾಗೆ ಕುಮ್ಮಕ್ಕು ನೀಡಿದರು(1998ನೆಯ ಜುಲೈ 25). ಇಂಥ ಅನೇಕ ಘಟನೆಗಳು ತೆರೆಮರೆಯಲ್ಲಿ ಸಂಭವಿಸಿವೆ. ಹೀಗಾಗಿ ಕಾವೇರಿ ಸಮಸ್ಯೆ ಇತ್ಯರ್ಥವಾಗದೆ ಮುಂದುವರೆದಿದೆ.
ಕೇಂದ್ರದ ಪರಿಷ್ಕೃತ ಕರಡು ಯೋಜನೆಯ ಕೆಲ ನಿಯಮಗಳು ಅಂಗೀಕಾರ ವಿರುದ್ಧವಾಗಿವೆ. ಇದಕ್ಕೆಂದು ಸಭೆ ಸೇರಿದವರಲ್ಲಿ ಎಸ್.ಬಂಗಾರಪ್ಪ, ವೀರಪ್ಪಮೊಯ್ಲಿ, ರಾಮಕೃಷ್ಣ ಹೆಗಡೆ, ಅನಂತಕುಮಾರ್, ಬಾಬಾಗೌಡ ಪಾಟೀಲ್, ಕೆ.ಎಸ್.ಈಶ್ವರಪ್ಪ, ಎಚ್.ಕೆ.ಪಾಟೀಲ್, ಟಿ.ಬಿ.ಜಯಚಂದ್ರ, ವಿ.ಎಲ್.ಪಾಟೀಲ್, ಬಿ.ಮುನಿಯಪ್ಪ ಇತರರು ಭಾಗವಹಿಸಿದ್ದರು. ಇವರು ಪರಸ್ಪರ ಸಹಕಾರದೊಂದಿಗೆ ಬಗೆಹರಿಸಿಕೊಳ್ಳಲು ತೀರ್ಮಾನಿಸಿ ದರು. ತರುವಾಯ 1998ನೆಯ ಆಗಸ್ಟ್ 7ರಂದು ಪ್ರಧಾನಿ ಎ.ಬಿ.ವಾಜಪೇಯಿ ಅಧ್ಯಕ್ಷತೆಯಲ್ಲಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಿತು. ಕಾವೇರಿ ಪ್ರಾಧಿಕಾರದ ಬದಲು ಸಮನ್ವಯ ಸಮಿತಿ ರಚಿಸಬೇಕೆಂದು ಕರ್ನಾಟಕ ಹೇಳಿದರೆ, ತಮಿಳುನಾಡು ಇದನ್ನು ವಿರೋಧಿಸಿತು. ಇದಲ್ಲದೆ ಕಾವೇರಿ ನದಿನೀರು ಪ್ರಾಧಿಕಾರ ಯೋಜನೆಯಲ್ಲಿ ಬರುವ 11 ಮಂದಿ ಸದಸ್ಯರ ಪ್ರಾಧಿಕಾರ, 10 ಮಂದಿ ಹತೋಟಿ ಸಮಿತಿ, ಜಲಾಶಯಗಳ ನಿರ್ವಹಣೆ, ಅಚ್ಚುಕಟ್ಟು ಪ್ರದೇಶವನ್ನು ಕರ್ನಾಟಕ 11.2 ಲಕ್ಷ ಎಕರೆಗಿಂತ ಹೆಚ್ಚು ವಿಸ್ತರಿಸ ಬಾರದೆನ್ನುವುದನ್ನು ಸದಾ ವಿರೋಧಿಸಲಾಗಿದೆ. ತಮಿಳುನಾಡು ಇವುಗಳಿಗಾಗಿ ಬಿಗಿಪಟ್ಟು ಹಿಡಿದಿದೆ. ಜಯಲಲಿತಾ ಅವರು 1998ನೆಯ ಆಗಸ್ಟ್ 12 ರೊಳಗೆ ಗೆಜೆಟ್ ಪ್ರಕಟಿಸದಿದ್ದರೆ ವಾಜಪೇಯಿ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂತೆಗೆದುಕೊಳ್ಳಲು ಬೆದರಿಕೆ ಹಾಕಿದರು. ಪ್ರಧಾನಿ ಇದಕ್ಕೆ ಮಣಿಯಲಿಲ್ಲ. ಕಾವೇರಿ ಕಣಿವೆ ಪ್ರಾಧಿಕಾರ ರಚನೆ ಮತ್ತು ಉಸ್ತುವಾರಿ ಸಮಿತಿಯನ್ನು ವಿರೋಧಿಸಿ ಕಾಂಗೈ ಧುರೀಣರು 1998ನೆಯ ಆಗಸ್ಟ್ 10ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರಧಾನಿಗಳ ನೇತೃತ್ವದ ಪ್ರಾಧಿಕಾರ ಹಾಗೂ ಉಸ್ತುವಾರಿ ಸಮಿತಿ ರಚನೆಗೆ ರಾಜ್ಯ ಸರ್ಕಾರ ಒಪ್ಪಿರುವುದನ್ನು ಜನತೆಗೆ ಬಗೆದ ದ್ರೋಹವೆಂದು ಮಲ್ಲಿಕಾರ್ಜುನ ಖರ್ಗೆಯವರು ಹೇಳಿದರು. ಇದನ್ನು ಅವೈಜ್ಞಾನಿಕ ಕ್ರಮವೆಂದು ರೈತ ಸಂಘ ಆರೋಪಿಸಿದೆ. ಹೀಗೆ ಒಂದಕ್ಕೊಂದು ಸಮಸ್ಯೆಗಳು ಸೇರಿಕೊಂಡು ಕಾವೇರಿ ಬಿಕ್ಕಟ್ಟು ಪರಿಹಾರವಾಗದೆ ಕಗ್ಗಂಟಾಗಿದೆ.
13ನೇ ಲೋಕಸಭೆ ಚುನಾವಣೆಗಳು ಮುಗಿದ ಬೆನ್ನ ಹಿಂದೆಯೇ ಕಾವೇರಿ ವಿವಾದ ತೀವ್ರಗೊಂಡಿತು. ಕಾವೇರಿ ನ್ಯಾಯಮಂಡಳಿ ನೀಡಿರುವ ಮಧ್ಯಂತರ ಆದೇಶದನ್ವಯ 1999ನೆಯ ಸೆಪ್ಟೆಂಬರ್ 14ರವರೆಗೆ ಕರ್ನಾಟಕ 121.40 ಟಿ.ಎಂ.ಸಿ. ನೀರನ್ನು ತಮಿಳುನಾಡಿಗೆ ಬಿಡಬೇಕಿತ್ತು. ಅದರಲ್ಲಿ 106.20 15.20 ಟಿ.ಎಂ.ಸಿ ನೀರು ಕಡಿಮೆ ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು 20 ಟಿ.ಎಂ.ಸಿ. ನೀರಿಗಾಗಿ ಕರ್ನಾಟಕವನ್ನು ಒತ್ತಾಯಿಸಿ ಚಳವಳಿ ನಡೆಸಿತು. ಕೇಂದ್ರಕ್ಕೆ ಒತ್ತಡ ತಂದಾಗ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಜಡ್.ಎ.ಹಸನ್ ಅವರು ಕರ್ನಾಟಕವು ತಮಿಳುನಾಡಿಗೆ ನೀರು ಬಿಡುವಂತೆ ಸೂಚಿಸಿದರು. ಕಾವೇರಿ ಕಣಿವೆ ಪ್ರದೇಶದಲ್ಲಿ 65 ಟಿ.ಎಂ.ಸಿ. ನೀರು ಸಂಗ್ರಹಣೆ ಕಡಿಮೆಯಾಗಿದ್ದು, ಮೆಟ್ಟೂರು ಜಲಾಶಯದಲ್ಲಿ ಹಾಲಿ 25 ಟಿ.ಎಂ.ಸಿ. ನೀರು ಸಂಗ್ರಹಣೆಯಾಗಿದೆ. ತಮಿಳುನಾಡು ತನ್ನ ಪಾಲಿನ ನೀರು ಕೇಳಿದರೆ, ಕರ್ನಾಟಕದಲ್ಲಿ ಮಳೆಯಾದರೆ ಬಿಡಲಾಗುವುದೆಂದು ತಿಳಿಸಿದರು.
ರಾಜ್ಯಕ್ಕೆ ನೀರಿಲ್ಲದಿರುವಾಗ ತಮಿಳುನಾಡಿಗೆ ನೀರು ಬಿಡಲಾಗುವುದಿಲ್ಲವೆಂದು ಸರ್ಕಾರ ಸ್ಪಷ್ಟಪಡಿಸಿತು. ತಂಜಾವೂರು ಜಿಲ್ಲೆಯಲ್ಲಿ ‘ಕುರುವೈ’ ಬೆಳೆ ರಕ್ಷಣೆಗಾಗಿ 25 ಟಿ.ಎಂ.ಸಿ. ನೀರು ಬಿಡುವಂತೆ ಪ್ರಧಾನಿಗಳನ್ನು ತಮಿಳುನಾಡು ಒತ್ತಾಯಿಸಿತು. ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಮಿಶ್ರಾ ಅವರು ಅಂದಿನ ನೀರಾವರಿ ಸಚಿವ ಕೆ.ಎನ್.ನಾಗೇಗೌಡ ಮತ್ತು ಮುಖ್ಯ ಕಾರ್ಯದರ್ಶಿ ಭಟ್ಟಾಚಾರ್ಯ ಅವರನ್ನು ಸಂಪರ್ಕಿಸಿದ್ದು, ಕರುಣಾನಿಧಿ ಮತ್ತು ಜೆ.ಎಚ್.ಪಟೇಲರೂ ಸೇರಿ ನಡೆಸಿದ ಮಾತುಕತೆಗಳು ವಿಫಲವಾದವು.
ತಮಿಳುನಾಡಿಗೆ ನೀರು ಬಿಟ್ಟರೆ ಹೋರಾಟ ಮಾಡುವುದಾಗಿ ಅನೇಕ ಸಂಘಟನೆಗಳು ಹೇಳಿದವು. ರೈತಸಂಘ ಎಚ್.ಎನ್.ನಂಜೇಗೌಡ, ಎಸ್.ಎಂ.ಕೃಷ್ಣ ಮೊದಲಾದವರನ್ನು ಹೆಸರಿಸಬಹುದು. ಆಗಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ತಮಿಳುನಾಡಿಗೆ ನೀರು ಬಿಡಲಾಗುವುದಿಲ್ಲ ಎಂದಾಗ ಪ್ರಧಾನಿಗಳು ಸಾಧ್ಯವಾದರೆ ಸಹಾಯ ಮಾಡಿ ಎಂದಿದ್ದರು. ಅದರಂತೆ ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ಆದೇಶದಂತೆ ಪ್ರಸ್ತುತ ಹಂಗಾಮಿನಲ್ಲಿ ಸೆ.14ರವರಗೆ ತಮಿಳುನಾಡಿಗೆ 126.23 ಟಿ.ಎಂ.ಸಿ. ನೀರು ಬಿಡಬೇಕಾಗಿತ್ತು. ಇದರಲ್ಲಿ 108.46 ಟಿ.ಎಂ.ಸಿ. ನೀರು ಮಾತ್ರ ಬಿಡಲಾಗಿದೆ. ಉಳಿದ 17.77 ಟಿ.ಎಂ.ಸಿ. ನೀರು ಬಿಡಲಾಗಿಲ್ಲ. 1999ನೆಯ ಸೆಪ್ಟೆಂಬರ್ 24ರಂದು ಕಾವೇರಿ ವಿವಾದ ಚರ್ಚೆಗೆ ದೆಹಲಿಯಲ್ಲಿ ಉಸ್ತುವಾರಿ ಸಮಿತಿ ಸಭೆ ನಡೆಯಿತು. ತಮಿಳುನಾಡಿನ ಸಂಭಾ ಮತ್ತು ಕುರುವೈ ಬೆಳೆಗಳು ಒಣಗುತ್ತಿದ್ದು ದರಿಂದ ನೀರು ಒದಗಿಸಬೇಕಾಗಿತ್ತು. 1999ನೆಯ ಆಗಸ್ಟ್ 24ರಂದು ಪ್ರಧಾನಿ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ತೀರ್ಮಾನ ರೈತರ ಹಿತಚಿಂತನೆಗಾಗಿ ತಮಿಳುನಾಡಿಗೆ 9 ಟಿ.ಎಂ.ಸಿ. ನೀರು ಬಿಡುವಂತೆ ಹೇಳಿತು. ಕರ್ನಾಟಕದ ವಿರೋಧಿ ಕ್ರಮವನ್ನು ತಮಿಳುನಾಡಿನ ಎಲ್ಲ ಪಕ್ಷಗಳು ಖಂಡಿಸಿದವು. ಕರ್ನಾಟಕದಲ್ಲಿ ನೀರಿಲ್ಲದಿರುವಾಗ 9 ಟಿ.ಎಂ.ಸಿ. ನೀರು ಹೇಗೆ ಬಿಡಬೇಕೆಂದು ಕರ್ನಾಟಕ ವ್ಯಕ್ತಪಡಿಸಿತು. 1999ನೆಯ ಆಗಸ್ಟ್ 25ರಂದು ಈ ಸಂಬಂಧ ಮಳವಳ್ಳಿಯ ವಕೀಲರು ಪ್ರತಿಭಟನೆ ನಡೆಸಿದರು. ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಪ್ರಧಾನಿಗಳು 9 ಟಿ.ಎಂ.ಸಿ. ನೀರು ಬಿಡಲು ಸೂಚಿಸಿದರು. ಕನ್ನಡ ಚಳವಳಿಯ ವಾಟಾಳ್ ಪಕ್ಷವು ತೀವ್ರವಾಗಿ ಇದನ್ನು ಪ್ರತಿಭಟಿಸಿತು.
ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಕಣಿವೆಯಲ್ಲಿನ ಜಲಾಶಯಗಳ ನೀರಿನ ಪ್ರಮಾಣವನ್ನು ಅಧ್ಯಯನ ಮಾಡಿ ವರದಿ ಸಿದ್ಧಪಡಿಸಿದ ಜಲಸಂಪನ್ಮೂಲ ಸಚಿವಾಲಯದ ಜಡ್.ಎ. ಹಸನ್ ನೇತೃತ್ವದ ತಂಡದ ಸಲಹೆಯಂತೆ, ಪ್ರಧಾನಿಗಳು ಸೆಪ್ಟೆಂಬರ್ನಲ್ಲಿ 3, ಮುಂದಿನ ತಿಂಗಳಲ್ಲಿ 6 ಟಿ.ಎಂ.ಸಿ. ನೀರು ಬಿಡಲು ಸೂಚಿಸಿದರು. ಮಂಡ್ಯ ಜಿಲ್ಲೆಯ ರೈತರು ಬೆಳೆಗಳು ಒಣಗುತ್ತಿವೆ ಎಂದಾಗ ನೀರಿನ ಸಮಸ್ಯೆ ತೀವ್ರಗೊಂಡಂತಿತ್ತು. ಇಂದಿಗೂ ಕಾವೇರಿ ನದಿ ನೀರಿನ ವಿವಾದ ವಿವಿಧ ರೂಪದಲ್ಲಿ ಸಮಸ್ಯೆಯ ಕಗ್ಗಂಟಾಗಿದ್ದು ಚಳವಳಿಗಳು ನಡೆಯುವುದು ಸಾಮಾನ್ಯವಾಗಿದೆ.
ತುಂಗಭದ್ರಾ ಜಲಾಶಯಕ್ಕಾಗಿ ಚಳವಳಿ
 ಸ್ವಾತಂತ್ರ್ಯಪೂರ್ವದಲ್ಲಿ ಬಳ್ಳಾರಿ ಜಿಲ್ಲೆ ಮದ್ರಾಸ್ ಆಧಿಪತ್ಯದಲ್ಲಿತ್ತು. ಇದಕ್ಕೆ ಅನಂತಪುರ, ಕರ್ನೂಲು ಮತ್ತು ಕಡಪಾ ಜಿಲ್ಲೆಗಳು ಸೇರಿದ್ದವು. ಇವುಗಳನ್ನು ‘ರಾಯಲ ಸೀಮೆ’ ಎಂದು ಕರೆಯುತ್ತಾರೆ. ಪ್ರಸ್ತುತ ಪ್ರದೇಶಗಳಲ್ಲಿ ಮೊದಲಿನಿಂದಲೂ ಬರಗಾಲ ಕಾಡುತ್ತಿತ್ತು. ಇದನ್ನು ತಪ್ಪಿಸಲು ಅಣೆಕಟ್ಟನ್ನು ಕಟ್ಟಲು ಯೋಜಿಸಿದರಲ್ಲದೆ, ಕೃಷಿಯಿಂದ ಜನಜೀವನವನ್ನು ಸುಧಾರಿಸುವ ಪ್ರಯತ್ನವಿತ್ತು. ಮದ್ರಾಸ್ ಆಧಿಪತ್ಯ ಮತ್ತು ಹೈದರಾಬಾದ್ ನಿಜಾಮ ಸರ್ಕಾರಗಳ ಜಂಟಿ ಪ್ರಯತ್ನದಿಂದ 1945ರಲ್ಲಿ ತುಂಗಭದ್ರಾ ಯೋಜನೆಯನ್ನು ಆರಂಭಿಸಲಾಯಿತು. 1953ರಲ್ಲಿ ರಾಜ್ಯಗಳ ವಿಂಗಡಣೆಯಿಂದಾಗಿ ಆಂಧ್ರಪ್ರದೇಶ ಮತ್ತು ಮೈಸೂರು ರಾಜ್ಯಗಳ ನಡುವೆ ವಿವಾದ ಏರ್ಪಟ್ಟಿತು. ಇದರ ಪರಿಹಾರಕ್ಕಾಗಿ ವಾಂಛೂ ಕಮಿಟಿಯನ್ನು ನೇಮಿಸಲಾಯಿತು.
ವಾಂಛೂ ಅವರು ಬಳ್ಳಾರಿ ಪರಿಸ್ಥಿತಿಯನ್ನು ಸಮಗ್ರವಾಗಿ ಅರಿತು ವರದಿ ಸಿದ್ಧಪಡಿಸಿದರು. ಬಳ್ಳಾರಿಯ ಮೂರು ತಾಲೂಕುಗಳು ಆಂಧ್ರಕ್ಕೆ ಸೇರಬೇಕೆಂದಾಗ ಕನ್ನಡಿಗರು ವಿರೋಧಿಸಿದರು. ಆ ಸಮಯಕ್ಕೆ ಹೈದರಾಬಾದ್ ಮತ್ತು ಮದ್ರಾಸ್ ಸರ್ಕಾರಗಳು ಸಂಯುಕ್ತವಾಗಿ ಕೈಗೊಂಡಿದ್ದ ತುಂಗಭದ್ರಾ ಅಣೆಕಟ್ಟೆಯ ಮುಗಿಯಬೇಕಾದ ಕೆಲಸ, ಅದರ ಬಳಕೆಯ ಪಾಲು ಇತ್ಯಾದಿಗಳ ಬಗೆಗೂ ವಾಂಛೂ ಅವರು ಸ್ಪಷ್ಟವಾದ ತೀರ್ಪು ನೀಡಲಿಲ್ಲ.
ಅಣೆಕಟ್ಟೆಯ ವಿವಾದ ಮತ್ತು ಮಿಶ್ರಾ ಆಯೋಗ
 ತುಂಗಭದ್ರಾ ಅಣೆಕಟ್ಟಿನ ಸಮಸ್ಯೆಯನ್ನು ಪರಿಹರಿಸಲು ರಾಷ್ಟ್ರಪತಿಗಳು ಹೈದರಾಬಾದ್ನ ಮುಖ್ಯ ನ್ಯಾಯಾಧೀಶ ಎಲ್.ಎಸ್.ಮಿಶ್ರಾ ನೇತೃತ್ವದಲ್ಲಿ ಆಯೋಗ ರಚಿಸಲು ಸೂಚಿಸಿದಂತೆ 1953ನೆಯ ಏಪ್ರಿಲ್ 23ರಂದು ಆಜ್ಞೆಯಾಯಿತು. ಅದರಂತೆ 1953ನೆಯ ಏಪ್ರಿಲ್ 23ರಲ್ಲಿ ಆರಂಭಿಸಿ 1953ನೆಯ ಮೇ 15ರೊಳಗೆ ವರದಿ ಸಲ್ಲಿಸಬೇಕೆಂದು ಸೂಚಿಸಲಾಯಿತು. 1953ನೆಯ ಏಪ್ರಿಲ್ 19ರಂದು ಹುಬ್ಬಳ್ಳಿಯಲ್ಲಿ ಕೆ.ಪಿ.ಸಿ.ಸಿ. ವಿಶೇಷ ಸಭೆ ನಡೆದಾಗ ಈ ಕುರಿತು ಗಂಭೀರವಾದ ಚರ್ಚೆಗಳು ನಡೆದಿದ್ದವು.
1953ನೆಯ ಮೇ 20ರಲ್ಲಿ ಎಲ್.ಎಸ್.ಮಿಶ್ರಾ ವರದಿಯನ್ನು ಲೋಕಸಭೆಯು ಸ್ವೀಕರಿಸಿದಾಗ ಬಳ್ಳಾರಿ ಜಿಲ್ಲೆಯ ಜನ ಸಂತೋಷಪಟ್ಟರು. ಆಂಧ್ರದವರು ಇದನ್ನು ವಿರೋಧಿಸಿ ಚಳವಳಿ ನಡೆಸಿದರು. 1953ನೆಯ ಆಗಸ್ಟ್ 13ರಂದು ಆಂಧ್ರ ಪ್ರಾಂತ್ಯ ಮಸೂದೆ ಲೋಕಸಭೆಯಲ್ಲಿ ಪ್ರಸ್ತಾಪಿತವಾಯಿತಲ್ಲದೆ, ಬಳ್ಳಾರಿ ಗಡಿ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿದಂತಾಯಿತು. ಬಳ್ಳಾರಿ ಮೈಸೂರು ರಾಜ್ಯಕ್ಕೆ ಸೇರಿದರೂ ತುಂಗಭದ್ರಾ ವಿವಾದ ಮುಂದುವರೆದಿತ್ತು. ಈ ಯೋಜನೆಯು ಮದ್ರಾಸ್ ಮತ್ತು ಹೈದರಾಬಾದ್ ಸರ್ಕಾರಗಳು ಜಂಟಿಯಾಗಿ ಆರಂಭಿಸಿದ ಯೋಜನೆಯಾಗಿದೆ. ಆಂಧ್ರ ರಾಜ್ಯ ರಚನೆ ಸಂದರ್ಭದಲ್ಲಿ ಅಪೂರ್ಣವಾಗಿತ್ತು. 1953ನೆಯ ಅಕ್ಟೋಬರ್ 1ರಲ್ಲಿ ಮೈಸೂರಿನೊಡನೆ ಬಳ್ಳಾರಿ ವಿಲೀನವಾದಾಗ, ವ್ಯಾಪಕ ಹಿಂಸಾಚಾರ, ಭುಗಿಲೆದ್ದ ಘಟನೆಗಳಿಗೆ ಮಿತಿ ಇರಲಿಲ್ಲ. 1955ನೆಯ ಅಕ್ಟೋಬರ್ 10ರಂದು ಫಜಲ್ ಅಲಿ ಆಯೋಗ ಬಳ್ಳಾರಿ, ಸಿರುಗುಪ್ಪ, ಹೊಸಪೇಟೆ ತಾಲೂಕುಗಳಲ್ಲದೆ, ತುಂಗಭದ್ರಾ ಅಣೆಕಟ್ಟೆಯಿರುವ ಮಲ್ಲಾಪುರ ಉಪತಾಲೂಕಿನ ಸ್ವಲ್ಪ ಭಾಗಗಳನ್ನು ಬಿಟ್ಟು ಈಗ ಇರುವ ಮೈಸೂರು ರಾಜ್ಯ ಕರ್ನಾಟಕದ ರಾಜ್ಯ ರಚನೆಯಲ್ಲಿ ಸೇರಲು ತೀರ್ಮಾನಿಸಿತು.
ನಂತರ ಈ ತೀರ್ಮಾನದ ಬಗ್ಗೆ ಬಳ್ಳಾರಿಯಲ್ಲಿ ರಾಜ್ಯ ಪುನರ್ವಿಂಗಡನಾ ಆಯೋಗದ ವರದಿಯ ವಿರುದ್ಧ ಚಟುವಟಿಕೆಗಳು ಚುರುಕಾಗಿ ನಡೆದವು. ಮಿಶ್ರಾ ತೀರ್ಪನ್ನು ಒಪ್ಪಿ 1955ನೆಯ ನವೆಂಬರ್ 10ರಂದು ಹಂಪಿಯಲ್ಲಿ ಸಭೆ ನಡೆಸಿ ಚಳವಳಿಯ ವಿಧಿ ವಿಧಾನಗಳ ಬಗ್ಗೆ ಚರ್ಚಿಸಿದರು. ತುಂಗಭದ್ರಾ ಜಲಾಯಶವೇ ಹೊಸದಾಗಿ ಸೃಷ್ಟಿಸಲಾದ ಸಮಸ್ಯೆಯಾಗಿದ್ದಿತು.
ನೀರಿನ ಸತ್ಯಾಗ್ರಹ
 ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನವರು ಶಾಂತಿ ಮತ್ತು ಅಹಿಂಸೆ ಮೂಲಕ ಸತ್ಯಾಗ್ರಹ ಆರಂಭಿಸಿದರು. ಸಿರುಗುಪ್ಪ ತಾಲೂಕು ಕೊಂಚೆಗೇರಿಯಲ್ಲಿ ಯರ್ರಿತಾತ ನೇತೃತ್ವದ 58 ಜನರ ತಂಡ 1955ನೆಯ ನವೆಂಬರ್ 16ರ ಬೆಳಗ್ಗೆ 9 ಗಂಟೆಗೆ ನೀರಿನ ಸತ್ಯಾಗ್ರಹ ಆರಂಭಿಸಿದರು. ಬಂಧಿತರಾದವರನ್ನು ಕೋರ್ಟಿಗೆ ಹಾಜರು ಪಡಿಸಿದರು. 1955ನೆಯ ನವೆಂಬರ್ 16 ರಿಂದ 1955ನೆಯ ನವೆಂಬರ್ 30ಕ್ಕೆ 15 ತಂಡಗಳನ್ನು 542 ಜನರು ಬಂಧಿತರಾಗಿದ್ದರು. 1955ನೆಯ ಡಿಸೆಂಬರ್ 8ರ ವೇಳೆಗೆ 1200 ಜನ ಬಂಧಿತರಾದರು.
ಅನಂತಪುರ ಜಿಲ್ಲೆ, ಗುತ್ತಿ ತಾಲೂಕಿನ ಪಾಲ್ತೂರು ಗ್ರಾಮದ ಸತ್ಯಾಗ್ರಹಿ ದಂಡಾ ಚೆನ್ನಬಸಪ್ಪನವರು ಒಂದು ಶಿಫಾರಸ್ಸಿನ ಪ್ರತಿಭಟನಾರ್ಥವಾಗಿ ಕಾಲುವೆಯ ಮೂರು ಹಿಡಿ ಮಣ್ಣನ್ನು ಆ ಕಡೆ ಹಾಕಿ, ಪಕ್ಕದ ಹೊಲಕ್ಕೆ ಮೂರು ಮೊಗಸೆ ನೀರು ಸುರಿದದ್ದನ್ನು ಅಪರಾಧವೆಂದು ಪರಿಗಣಿಸಿ ಸರ್ಕಾರ 18 ದಿನ ಸೆರೆಯಲ್ಲಿಟ್ಟಿತು. ಈ ದಂಡಾ ಚೆನ್ನಬಸಪ್ಪ ನವರಿಗೆ ನ್ಯಾಯಾಧೀಶರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದೇಕೆಂದು ಕೇಳಿದಾಗ ‘ಕರ್ನಾಟಕದ ಎಲ್ಲೆ ಬಳ್ಳಾರಿ ಜಿಲ್ಲೆಗೇ ಮುಗಿಯುವುದಿಲ್ಲ. ನಾನು ಆಂಧ್ರದಲ್ಲಿದ್ದರೂ ಕನ್ನಡಿಗನೇ’ ಕರ್ನಾಟಕದ ಹಿತರಕ್ಷಣೆ ನನ್ನ ಹೊಣೆ ಎನ್ನುತ್ತಾರೆ. 1955ನೆಯ ಸೆಪ್ಟೆಂಬರ್ನಲ್ಲಿ ಎಸ್.ಗೋಪಾಲಗೌಡರು ಮತ್ತು ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಹನುಮಂತಯ್ಯ ನವರು ಒಂದಾದ ಕನ್ನಡಿಗರನ್ನು ಅಭಿನಂದಿಸಿದರು. 1955ನೆಯ ನವೆಂಬರ್ 1ರಂದು ಅಸ್ತಿತ್ವಕ್ಕೆ ಬಂದ ವಿಶಾಲ ಮೈಸೂರು ಇಂಥಾ ಸಮಸ್ಯೆಗಳನ್ನು ನಿವಾರಿಸಿತು.
ಮದ್ರಾಸ್ ಮತ್ತು ನಿಜಾಮ ಸರ್ಕಾರಗಳ ಜಂಟಿ ಯೋಜನೆಯಿಂದ 1945ರಲ್ಲಿ ಆರಂಭವಾದ ತುಂಗಭದ್ರಾ ಯೋಜನೆ 1958ರಲ್ಲಿ ಮುಗಿಯಿತು. 1956ರಲ್ಲಿ ಆಂಧ್ರಪ್ರದೇಶ ಕರ್ನಾಟಕ ರಾಜ್ಯಗಳ ಜಂಟಿ ಯೋಜನೆಯಾಯಿತು. ಆಗ 133 ದಶಲಕ್ಷ ಘನ ಅಡಿ ನೀರು ಸಂಗ್ರಹವಿತ್ತು. 1985ರಲ್ಲಿ 115.61 ಸಹಸ್ರ ದಶಲಕ್ಷ ಘನ ಅಡಿ ನೀರು ಇದ್ದು, 5-23 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿಯ ಅನುಕೂಲವಿದೆ. 1986ಕ್ಕೆ 35 ವರ್ಷಗಳಲ್ಲಿ 22 ಟಿ.ಎಂ.ಸಿ. ನೀರು ಹೂಳಿನಿಂದ ಮುಚ್ಚಿಹೋಗಿದ್ದು, ಇಂದು 108 ಟಿ.ಎಂ.ಸಿ. ನೀರು ಮಾತ್ರ ಸಂಗ್ರಹಿಸುತ್ತಿದೆ ಎಂದು ಜನರ ಪ್ರತಿರೋಧವಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ
 ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾಬಲೇಶ್ವರ ಬೆಟ್ಟದ ರಮಣೀಯ ವನಸಿರಿಯ ಮಡಿಲಲ್ಲಿ ಜನ್ಮ ತಳೆದು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಸುಮಾರು 1400 ಕಿ.ಮೀ. ಹರಿದು ಕೊನೆಗೆ ಬಂಗಾಳಕೊಲ್ಲಿಯನ್ನು ಸೇರುವ ಕೃಷ್ಣಾ ದಕ್ಷಿಣ ಭಾರತದ ಎರಡನೇ ದೊಡ್ಡ ನದಿಯಾಗಿದೆ. ಈ ನದಿಗೆ 1969ರಲ್ಲಿ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿ ಗ್ರಾಮದ ಬಳಿ ಅಣೆಕಟ್ಟನ್ನು ನಿರ್ಮಿಸಲಾಯಿತು. ಇದಲ್ಲದೆ, ಮುದ್ದೇಬಿಹಾಳ ತಾಲೂಕಿನ ಸಿದ್ಧಾಪುರ ಮತ್ತು ಬಾಚಿಹಾಳ ಗ್ರಾಮಗಳ ಬಳಿ 10,637.52ೊಮೀ. ಉದ್ದದ ನಾರಾಯಣಪುರ ಜಲಾಶಯ ವನ್ನು ನಿರ್ಮಾಣ ಮಾಡಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಕೃಷಿ ಕ್ರಾಂತಿಗೆ ನಾಂದಿಯಾಗುವುದೆಂಬ ಕನಸು ಉತ್ತರ ಕರ್ನಾಟಕದ್ದಾಗಿದೆ. ಇಲ್ಲಿನ ಬರಪೀಡಿತ ಪ್ರದೇಶಗಳಾದ ಬಸವನ ಬಾಗೇವಾಡಿ, ಇಂಡಿ, ಮುದ್ದೇಬಿಹಾಳ, ಸಿಂದಗಿ ಮತ್ತು ಗುಲ್ಬರ್ಗಾ ಜಿಲ್ಲೆಯ ಜೇವರ್ಗಿ, ಶಹಾಪುರ ಮತ್ತು ಸುರಪುರ ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕುಗಳ ಸು.6.22 ಲಕ್ಷ ಹೆಕ್ಟೇರ್ ನಿವ್ವಳ ಕೃಷಿ ಭೂಮಿಯಾಗಲಿದೆ.
ಆಯೋಗ ನೇಮಕ ಮತ್ತು ತೀರ್ಪು
 ಕೃಷ್ಣಾ ನದಿ ನೀರಿನ ಹಂಚಿಕೆಗಾಗಿ ಮೂರು ರಾಜ್ಯಗಳ ನಡುವೆ ವಿವಾದ ಉಂಟಾಯಿತು. ಇದಕ್ಕೆ ಪರಿಹಾರ ಕಂಡುಹಿಡಿಯಲು ಕೇಂದ್ರ ಸರ್ಕಾರವು 1969ರಲ್ಲಿ ನ್ಯಾಯಮೂರ್ತಿ ಆರ್.ಎಸ್.ಬಚಾವತ್ ಅಧ್ಯಕ್ಷತೆಯಲ್ಲಿ ನ್ಯಾಯ ಮಂಡಳಿಯನ್ನು ನೇಮಿಸಿತು. ತನ್ನ ವರದಿಯನ್ನು 1973ರಲ್ಲಿ ಇದು ಸಲ್ಲಿಸಿತು. ಈ ವರದಿಯು, ಮಹಾರಾಷ್ಟ್ರಕ್ಕೆ ಸಂತಸ ವನ್ನುಂಟುಮಾಡಿದರೆ, ಕರ್ನಾಟಕಕ್ಕೆ ಆತಂಕವನ್ನುಂಟುಮಾಡಿತು. ಬಚಾವತ್ ನ್ಯಾಯ ಮಂಡಳಿಯ ವರದಿಯ ಪ್ರಕಾರ ಮಹಾರಾಷ್ಟ್ರ 565 ಟಿ.ಎಂ.ಸಿ., ಕರ್ನಾಟಕ 695 ಟಿ.ಎಂ.ಸಿ. ಹಾಗೂ ಆಂಧ್ರಪ್ರದೇಶ 800 ಟಿ.ಎಂ.ಸಿ. ಪ್ರಮಾಣದ ನೀರನ್ನು ಪ್ರತಿವರ್ಷ 2000ನೆಯ ಮೇ 31ವರೆಗೆ ಉಪಯೋಗಿಸಲು ಅವಕಾಶವಾಯಿತು. ಅನಂತರ ತೀರ್ಪನ್ನು ಪರಿಷ್ಕರಿಸಲು ಅವಕಾಶವಿದೆ.
ಆರ್.ಎಸ್.ಬಚಾವತ್ ಆಯೋಗದ ತೀರ್ಪಿನಂತೆ ಕರ್ನಾಟಕಕ್ಕೆ ಈ ಯೋಜನೆಯಲ್ಲಿ 173 ಟಿ.ಎಂ.ಸಿ., 1. ಟಿ.ಎಂ.ಸಿ = 1000 ಅಡಿ ಉದ್ದ X 10,000 ಅಡಿ ಎತ್ತರ X 1000 ಘನ ಅಡಿ ಅಗಲ ಸಂಗ್ರಹಣೆಗೊಂಡ ನೀರಿನ ಪ್ರಮಾಣ ಅಥವಾ ಹತ್ತು ಸಾವಿರ ಹೆಕ್ಟೇರು ಭೂಮಿಗೆ ಹರಿಯುವ ನೀರಿನ ಪ್ರಮಾಣ ನಿಗದಿಯಾಗಿದ್ದು, ಪ್ರಥಮ ಹಂತದಲ್ಲಿ 119 ಟಿ.ಎಂ.ಸಿ. ಹಾಗೂ ದ್ವಿತಿಯ ಹಂತದಲ್ಲಿ 54 ಟಿ.ಎಂ.ಸಿ. ಬಳಸಿಕೊಳ್ಳಲು ಯೋಜಿಸಿದೆ. ಪ್ರಥಮ ಹಂತದ 119 ಟಿ.ಎಂ.ಸಿ. ನೀರಿನಲ್ಲಿ 100.36 ಟಿ.ಎಂ.ಸಿ. ನೀರನ್ನು ಕಾಲುವೆಗಳ ಮೂಲಕ ಪಡೆಯಬಹುದಾಗಿದ್ದು, ಉಳಿದ 18.64 ಟಿ.ಎಂ.ಸಿ. ನೀರು ಜಲಾಶಯದಲ್ಲಿ ನಷ್ಟವಾಗುವುದೆಂಬ ಅಂದಾಜಿದೆ.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳು ಕ್ರಮವಾಗಿ 12, 886 ಮತ್ತು 18,475 ಚದರ ಮೈಲಿ ಜಲಾನಯನ ಪ್ರದೇಶ ಹೊಂದಿದ್ದು, 42.19 ಮತ್ತು 37.86 ಟಿ.ಎಂ.ಸಿ. ಗರಿಷ್ಠ ಜಲಸಂಪನ್ಮೂಲ ಸಂಗ್ರಹಣಾ ಸಾಮರ್ಥ್ಯ ಹಾಗೂ 29.73 ಮತ್ತು 30.69 ಟಿ.ಎಂ.ಸಿ. ವಾಸ್ತವಿಕ ಸಂಗ್ರಹಣ ಸಾಮರ್ಥ್ಯ ಹೊಂದಿರುತ್ತವೆ. ಈ ಜಲಾಶಯಗಳ ನಿರ್ಮಾಣದಿಂದ ಕ್ರಮವಾಗಿ ಸು.136 ಮತ್ತು 41 ಗ್ರಾಮಗಳು ಮತ್ತು ಇವುಗಳ 21, 290 ಮತ್ತು 15, 698 ಹೆಕ್ಟೇರ್ ಭೂ ಪ್ರದೇಶ ಮುಳುಗಡೆಯಾಗಿದೆ. ಇದರಿಂದ 1.80 ಲಕ್ಷ ಹಾಗೂ 0.48 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಆಲಮಟ್ಟಿ ಹಿನ್ನೀರಿನಿಂದ ಬಾಗಲಕೋಟೆ ನಗರ ಮುಳುಗಡೆಯಾಗುವುದರಿಂದ ಸುಮಾರು 12,000 ಕುಟುಂಬಗಳು ನಿರಾಶ್ರಿತವಾಗಿವೆ. ಇಲ್ಲಿ ಸಮೀಪದಲ್ಲಿ ಪುನರ್ವಸತಿ ಕಲ್ಪಿಸುವ ಯೋಜನೆ ಅನುಷ್ಠಾನ ದಲ್ಲಿದ್ದು, 4500 ಎಕರೆ ಪ್ರದೇಶ ಇದಕ್ಕೆ ಮೀಸಲಾಗಿದೆ.
ಎರಡನೇ ಹಂತ
 ಕೃಷ್ಣಾನದಿ ಕಣಿವೆಯಲ್ಲಿ ಆಂಧ್ರದ ನಾಗಾರ್ಜುನ ಸಾಗರವು ಸಹ ದೊಡ್ಡ ಯೋಜನೆ ಯಾಗಿದೆ. ಇದು ಭಾರತದ ಬೃಹತ್ ವಿವಿಧೋದ್ದೇಶ ಯೋಜನೆಗಳಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ಆಲಮಟ್ಟಿ ಅಣೆಕಟ್ಟು ಎರಡನೇ ಸ್ಥಾನದಲ್ಲಿದೆ. ಪ್ರಥಮ ಹಂತದಲ್ಲಿ 509 ಮೀಟರ್ ಎತ್ತರಕ್ಕೆ ಆಲಮಟ್ಟಿ ಅಣೆಕಟ್ಟನ್ನು ನಿರ್ಮಿಸುವುದಾಗಿತ್ತು. ಆದರೆ ಮೇಲೆ 15 x 15.24 ಮೀ.ಎತ್ತರದ 26 ಕ್ರೆಸ್ಟ್ ಗೇಟ್ಗಳನ್ನು ಸ್ಥಾಪಿಸುವುದರೊಂದಿಗೆ 512.20 ಮೀಟರ್ಗಳವರೆಗೆ ನೀರು ಸಂಗ್ರಹಿಸಿ, ಆಲಮಟ್ಟಿ ಎಡದಂಡೆ ನಾಲೆಯಿಂದ 0.16ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿದೆ. ನಾರಾಯಣ ಪುರ ಜಲಾಶಯ ಪೂರ್ಣಗೊಳಿಸಿ ಎಡದಂಡೆ ನಾಲೆಯಿಂದ 4.09 ಲಕ್ಷ ಹೆಕ್ಟೇರ್ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ. ಕರ್ನಾಟಕ ಪ್ರಥಮ ಹಂತದಲ್ಲಿ ಕೃಷ್ಣಾ ನದಿಯಿಂದ 119 ಟಿ.ಎಂ.ಸಿ. ಜಲಸಂಪನ್ಮೂಲ ಬಳಿಸಿಕೊಂಡು 4.25 ಲಕ್ಷ ಹೆಕ್ಟೇರ್ ನಿವ್ವಳ ಕೃಷಿ ಭೂಮಿಗೆ ಮೇ 31,2000ದೊಳಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕಾಗಿತ್ತು. ಆದರೆ ಇನ್ನು ಆಗಿಲ್ಲದಿರುವುದು ದುರದೃಷ್ಟಕರ.
ಕೃಷ್ಣಭಾಗ್ಯ ಜಲನಿಗಮ
 ವಿಶ್ವಬ್ಯಾಂಕು ನೀಡಬೇಕಾದ 165 ದಶಲಕ್ಷ ಅಮೆರಿಕನ್ ಡಾಲರ್ ಸಾಲದ ಮೊತ್ತವನ್ನು 45 ದ.ಲಕ್ಷ ಡಾಲರ್ಗಳಿಗೆ ಕಡಿಮೆ ಮಾಡಿತು. ಹೀಗಾಗಿ ಕೃಷ್ಣ ಮೇಲ್ದಂಡೆ ಯೋಜನೆಯ ಪ್ರಥಮ ಹಂತದ ಎರಡನೆಯ ಘಟ್ಟದ ಕಾಮಗಾರಿಗಳನ್ನು ನಿಲ್ಲಿಸಲಾಯಿತು. 2000ನೆಯ ಮೇೊ31ರೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಕ್ರಿ.ಶ.1995-96ರಲ್ಲಿ ಕೃಷ್ಣಭಾಗ್ಯ ಜಲ ನಿಗಮ ಸ್ಥಾಪಿಸಿತು. ಎರಡು ವರ್ಷಗಳಲ್ಲಿ ಇದು ಸು.689.48 ಕೋಟಿ ರೂಪಾಯಿಗಳನ್ನು ನೀರಾವರಿ ಬಾಂಡ್ ಡಿಬೆಂಚರ್ಗಳ ಮುಖಾಂತರ ಕ್ರೋಡೀಕರಿಸಿದ್ದು, ಕ್ರಿ.ಶ.1997-98ರಲ್ಲಿ ಸು.750 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ.
ಅಣೆಕಟ್ಟೆಯ ಎತ್ತರದ ವಿವಾದ
 ಕೃಷ್ಣ ನದಿ ಮೇಲ್ದಂಡೆಯ ರಾಜ್ಯಗಳಾದ ಕರ್ನಾಟಕ ಮತ್ತು ಮಹಾರಾಷ್ಟ್ರ ನೀರಾವರಿ ಉದ್ದೇಶಗಳಿಗೆ ಅಣೆಕಟ್ಟೆಗಳನ್ನು ನಿರ್ಮಿಸಿರುವುದು ಕೆಳದಂಡೆಯ ರಾಜ್ಯವಾದ ಆಂಧ್ರ ಪ್ರದೇಶಕ್ಕೆ ಅತೃಪ್ತಿಯಿದೆ. ಜುರಾಲ ಅಣೆಕಟ್ಟೆಯ ಎತ್ತರವನ್ನು ಮತ್ತಷ್ಟು ಹೆಚ್ಚಿಸಲು ಆಂಧ್ರಪ್ರದೇಶ ಪ್ರಯತ್ನಿಸುತ್ತಿದ್ದರೆ, ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ಮತ್ತಷ್ಟು ಹೆಚ್ಚಿಸಲು ಕಾರ್ಯೋನ್ಮುಖವಾಗಿವೆ.
ಆಲಮಟ್ಟಿ ಅಣೆಕಟ್ಟು ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯಭಾಗ. ಇದು ಸುಮಾರು 516 ಮೀಟರ್ಗಳಷ್ಟು ಇದೆ. ಇದಕ್ಕೆ ನಿಗದಿಪಡಿಸಿರುವ 173 ಟಿ.ಎಂ.ಸಿ. ನೀರನ್ನು ಈಗಿರುವ ಎತ್ತರವನ್ನು ಸಾಕೆಂದು ನಿರ್ಧರಿಸಲಾಗಿದೆ. ಈ ಅಣೆಕಟ್ಟೆಯನ್ನು ಎರಡನೇ ಹಂತದಲ್ಲಿ ನದಿ ಮಟ್ಟದಿಂದ 524.256 ಮೀಟರ್ ಎತ್ತರಕ್ಕೆ ನಿರ್ಮಿಸಿ ಈ ಕಣಿವೆಯ 54 ಟಿ.ಎಂ.ಸಿ. ಜಲಸಂಪನ್ಮೂಲ ಬಳಸಿಕೊಂಡು ಸು. 1.97 ಲಕ್ಷ ಹೆಕ್ಟೇರ್ ನಿವ್ವಳ ಕೃಷಿಭೂಮಿಗೆ ಹಾಗು 2.30 ಲಕ್ಷ ಹೆಕ್ಟೇರ್ ಗರಿಷ್ಠ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿಗಳು ನಡೆಯುತ್ತಿವೆ. ಬಚಾವತ್ ಆಯೋಗ ನಿಗದಿ ಮಾಡಿರುವ ಕಾಲಮಿತಿಗೆ ಅಂದರೆ 2000ನೆಯ ಮೇ 31ಕ್ಕೆ ಮುಗಿಯುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿ 524 ಮೀಟರ್ ಹೆಚ್ಚಿಸಿದರೆ, 112 ಟಿ.ಎಂ.ಸಿ. ನೀರಲ್ಲದೆ, ವಿದ್ಯುಚ್ಛಕ್ತಿ ಉತ್ಪಾದನೆಗೆ ಅನುಕೂಲವಾಗುತ್ತದೆ.
ಆಂಧ್ರಪ್ರದೇಶವು ನಾಗಾರ್ಜುನ ಸಾಗರ ಅಣೆಕಟ್ಟೆಯಲ್ಲಿ ಹೆಚ್ಚಿನ ನೀರಿನ ಸಂಗ್ರಹಣೆಗಾಗಿ ಕ್ರೆಸ್ಟ್ ಗೇಟುಗಳನ್ನು ಹಾಕಿರುವುದು ಬಚಾವತ್ ತೀರ್ಪಿಗೆ ವಿರುದ್ಧವಾಗಿದೆ. ಇದನ್ನು ಕರ್ನಾಟಕ ಎತ್ತಿಹಿಡಿದು ಇಂಥ 15 ಕೃಷ್ಣಾ ಯೋಜನೆಗಳನ್ನು ಆಂಧ್ರವು ನಿರ್ಮಿಸಿ ಹೆಚ್ಚು ನೀರನ್ನು ಬಳಸುತ್ತಿದೆಯೆಂದೂ ವಾದಿಸುತ್ತಿದೆ.
ಆಂಧ್ರದ ಅಭಿಪ್ರಾಯವು ಹೀಗಿದೆ
1. ಆಲಮಟ್ಟಿ ಅಣೆಕಟ್ಟೆಯ ಎತ್ತರ 516 ಮೀಟರ್ಗಳನ್ನು ಕರ್ನಾಟಕ ಮೀರಬಾರದು.
2. ಈ ಅಣೆಕಟ್ಟೆಯನ್ನು ಹೆಚ್ಚಿಸಿದರೆ ತನ್ನ ಬೇಸಾಯದ ಕಾರ್ಯಕ್ರಮ ಕುಂಠಿತಗೊಳ್ಳುತ್ತದೆ.
3. ಅಣೆಕಟ್ಟೆಯ ಎತ್ತರವನ್ನು ಮತ್ತಷ್ಟು ಹೆಚ್ಚಿಸಿದರೆ ಬಚಾವತ್ ತೀರ್ಪಿನ ಉಲ್ಲಂಘನೆಯಾಗುತ್ತದೆ; ಮತ್ತು ಆಂಧ್ರಪ್ರದೇಶಕ್ಕೆ ಕೃಷ್ಣಾೊನೀರಿನ ಪ್ರಮಾಣ ಸಹಜ ವಾಗಿ ಕುಗ್ಗುತ್ತದೆ.
ಉಭಯ ರಾಜ್ಯಗಳ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು, ಪ್ರಧಾನ ಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡರು 1996ನೆಯ ಆಗಸ್ಟ್ 10ರಂದು ಸರ್ವಪಕ್ಷಗಳ ಸಭೆಯನ್ನು ಕರೆದರು. ಚರ್ಚೆಗಳು ವಿಫಲವಾಗಿ, ಆಂಧ್ರಪ್ರದೇಶ ತನ್ನ ರಾಜಕೀಯ ಅಸ್ತ್ರವನ್ನು ಬಳಸಿ ದೇವೇಗೌಡರ ಕೇಂದ್ರ ಸರ್ಕಾರವನ್ನೇ ಉರುಳಿಸುವ ಹುನ್ನಾರ ನಡೆಸಿದಂತಿತ್ತು.
ಆಂಧ್ರದ ನೀರಿನ ಪಾಲು
1967 ರಿಂದ 1997ನೆಯ ಮಾರ್ಚ್ 31ಕ್ಕೆ ಕೃಷ್ಣಾ ಮೇಲ್ದಂಡೆ ಯೋಜನೆಗೆ 2452.82 ಕೋಟಿ ರೂ. ವೆಚ್ಚಾಗಿದೆ. 1995ಕ್ಕೆ ಮುಗಿಯಬೇಕಿದ್ದ ಯೋಜನೆ 33 ವರ್ಷ ಕಳೆದರೂ ಮುಗಿದಿಲ್ಲ. ಪ್ರಥಮ ಹಂತದಲ್ಲಿ 119 ಟಿ.ಎಂ.ಸಿ. ನೀರು ಕರ್ನಾಟಕ ಪಡೆಯಬೇಕಿದ್ದು, ಕೇವಲ 60 ಟಿ.ಎಂ.ಸಿ ಮಾತ್ರ ಬಳಸಿದೆ. ಉಳಿದ 60 ಟಿ.ಎಂ.ಸಿ. ಎರಡನೇ ಹಂತದ 54 ಟಿ.ಎಂ.ಸಿ. ಜಲಸಂಪನ್ಮೂಲ ಅಂದರೆ 110ರಿಂದ 114 ಟಿ.ಎಂ.ಸಿ ಆಂಧ್ರ ಪಾಲಾಗುತ್ತಿದೆ. ಕರ್ನಾಟಕ ಬಚಾವತ್ ತೀರ್ಪಿನ ಪ್ರಕಾರ ಕೃಷ್ಣ ಮೇಲ್ದಂಡೆ
‘ಎ’ ಯೋಜನೆಯಡಿ 173 ಟಿ.ಎಂ.ಸಿ. ಜಲಸಂಪನ್ಮೂಲವನ್ನು 2000ನೆಯ ಮೇ 31ರೊಳಗೆ ಬಳಸಿಕೊಳ್ಳಲೇಬೇಕು. ಪೂರ್ಣಪ್ರಮಾಣದ ನೀರು ಕರ್ನಾಟಕ ಬಳಸಿಕೊಂಡರೆ 110 ಟಿ.ಎಂ.ಸಿ. ನೀರನ್ನು ಕೈತಪ್ಪುವುದೆಂಬ ಭೀತಿ ಆಂಧ್ರಕ್ಕಿದೆ.
ಪ್ರಚಲಿತ ಸಮಸ್ಯೆ
 ಕರ್ನಾಟಕದ ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸುವುದನ್ನು ವಿರೋಧಿಸುತ್ತಿರುವ ಆಂಧ್ರಪ್ರದೇಶವು ಸ್ವತಃ ತೆಲುಗು ಗಂಗಾ, ಜುರಾ, ಶ್ರೀಶೈಲಂ ಬಲದಂಡೆನಾಲೆ, ಶ್ರೀಶೈಲಂ ಎಡದಂಡೆ ನಾಲೆ, ಭೀಮಾ ಏತ ನೀರಾವರಿ, ಪುಲಿಚಿಂತಲ ಡ್ರೈವರ್ಸ್ನ ಯೋಜನೆ, ಗಾವೇಲುನಗರಿ, ವೆಲಿಗೊಂಡನಾಲೆ ಮುಂತಾದವುಗಳನ್ನು ಕೈಗೊಂಡಿದ್ದು ಸಂವಿಧಾನ ಬಾಹಿರ ಎಂದು ಕರ್ನಾಟಕ ಹೇಳಿದ್ದರೂ, ಅದು ಕಾನೂನು ಉಲ್ಲಂಘಿಸಿದೆ. ನಂತರ ಆಲಮಟ್ಟಿಯ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವುದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ ಅನೇಕರು ಧರಣಿ ಸತ್ಯಾಗ್ರಹ ಮಾಡಿದ್ದಾರೆ.
ಕೃಷ್ಣಾನದಿ ನೀರನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಏನೆಲ್ಲಾ ಪ್ರಯತ್ನಗಳು ನಡೆಯುತ್ತಿವೆ. 1994ರವರೆಗೆ ಸುಮ್ಮನಿದ್ದ ಆಂಧ್ರ ಏಕಾಏಕಿ ತಕರಾರು ಎತ್ತಿದೆ. ಅಣೆಕಟ್ಟೆಯ ಎತ್ತರವನ್ನು ಹೆಚ್ಚಿಸುವ ಕರ್ನಾಟಕ ಕಾಮಗಾರಿಯನ್ನು ನಿಲ್ಲಿಸಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ವರ್ಷಗಳಿಂದ ಅನೇಕ ಸಂಘಟನೆಗಳು ಸೇರಿ ಕೃಷ್ಣಾ ಮೇಲ್ದಂಡೆಯ ಆಲಮಟ್ಟಿಯಲ್ಲಿ ಕರಸೇವೆಯಲ್ಲಿ ನಿರತವಾಗಿರುವುದು ಗಮನಾರ್ಹ. ಹೀಗಾಗಿ ಇದು ಅಂತರ್ ರಾಜ್ಯ ಸಮಸ್ಯೆ ಎದುರಿಸುವಂತೆ, ಆಂತರಿಕ ಸಮಸ್ಯೆಗಳನ್ನು ರಾಜ್ಯದಲ್ಲಿ ಎದುರಿಸಬೇಕಾಗುತ್ತದೆ. 2000 ಮೇ ಒಳಗೆ 734 ಟಿ.ಎಂ.ಸಿ. ನೀರನ್ನು ಕರ್ನಾಟಕ ಬಳಸಿಕೊಳ್ಳುವುದು ಅಸಾಧ್ಯ ಎಂದು ಅಂದಿನ ನೀರಾವರಿ ಮಂತ್ರಿ ಎಚ್.ಕೆ. ಪಾಟೀಲ್ ಹೇಳಿರುವುದು ಆತಂಕಕಾರಿ ಸಂಗತಿಯಾಗಿದೆ.
ಆಲಮಟ್ಟಿ ಅಣೆಕಟ್ಟೆಗೆ ಸಂಬಂಧಿಸಿದಂತೆ ‘ಕೃಷ್ಣಾ ಮೇಲ್ದಂಡೆ ಯೋಜನೆ ಹೋರಾಟ ಸಮಿತಿ’ ಸೇರಿದಂತೆ ಇಂಥ ಹಲವಾರು ಸಂಘಟನೆಗಳು ಬಂದ್, ಸತ್ಯಾಗ್ರಹ ನಡೆಸಿ ತಮ್ಮ ಕಿಚ್ಚನ್ನು ವ್ಯಕ್ತಪಡಿಸಿದರೂ ಸಮಸ್ಯೆ ತಿಳಿಯಾಗಿಲ್ಲ. ಬಿ.ಜೆ.ಪಿ.ಪಕ್ಷದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಆಲಮಟ್ಟಿಯ ಸ್ಥಿತಿ ಯಥಾರೀತಿ ಕಾಪಾಡಿಸಿಕೊಂಡು ಬರುವಂತಾಗಿದೆ. ಏಪ್ರಿಲ್ 2000ದ ಮೊದಲ ವಾರದಲ್ಲಿ ಯರವಾಳ ಸ್ವಾಮಿಗಳು ಉಪವಾಸ ಸತ್ಯಾಗ್ರಹ ಮಾಡಿರುವುದನ್ನು ಸ್ಮರಿಸಬಹುದು. ಒಟ್ಟಾರೆ ಹೇಳುವುದಾದರೆ ಉತ್ತರ ಕರ್ನಾಟಕದ ಜೀವನದಿಯಾದ, ಕೃಷ್ಣಾದಿಂದ ನೀರಾವರಿ ಅಭಿವೃದ್ದಿ ಮಾಡಿಕೊಳ್ಳಲು ಜನಸಾಮಾನ್ಯರು ಜಾಗೃತಿಗೊಳ್ಳಬೇಕಾಗಿದೆ. ಆಗಲೇ ಪ್ರಯೋಜನ ಫಲಿಸಿದಂತಾಗುವುದು.
ಇತರ ಜಲವಿವಾದ ಕುರಿತ ಚಳವಳಿಗಳು
 ಕರ್ನಾಟಕ ರಾಜ್ಯದ ಆಂತರಿಕ ಜಲಸಮಸ್ಯೆ ಒಂದೆಡೆಯಾದರೆ, ಅಂತರ್ ರಾಜ್ಯ ಜಲಸಮಸ್ಯೆ ಇನ್ನೊಂದೆಡೆಯಾಗುತ್ತದೆ. ಆಂತರಿಕವಾಗಿ ನೋಡುವುದಾದರೆ ಅಣೆಕಟ್ಟು, ಸಣ್ಣಕೆರೆ, ಕಾಲುವೆ, ಬಾವಿ, ಕುಡಿಯುವ ನೀರು ಮೊದಲಾದವುಗಳನ್ನು ಹೆಸರಿಸಬಹುದು.
ಬೃಹತ್, ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆಗಳಲ್ಲಿ ಜಲಸಮಸ್ಯೆಯ ಘಟನೆಗಳು ವ್ಯಾಪಕವಾಗಿ ಸಂಭವಿಸಿವೆ. ತುಂಗಾ ತಿರುವು (ಭದ್ರಾ ಮೇಲ್ದಂಡೆ), ತುಂಗಭದ್ರಾ ಕಾಲುವೆ, ಕಬಿನಿ, ನೇತ್ರಾವತಿ, ಹಿಪ್ಪರಗಿ ಬಂದಾರ, ಹಾರಂಗಿ, ಹುಲಿಕೆರೆ (ಕೊಪ್ಪಳ), ಮುಲ್ಲಮಾರಿ ಮೇಲ್ದಂಡೆ, ಘಟಪ್ರಭಾ ನೀರಾವರಿ ಯೋಜನೆ, ಮಾರ್ಕಂಡೇಯ, ಹರಿನಾಲಾ, ದೂಧಗಂಗಾ, ಹೇಮಾವತಿ, ರಂಗಯ್ಯನದುರ್ಗ, ವಾಣಿವಿಲಾಸಸಾಗರ ಮತ್ತು ಕಾರಂಜಾ ಯೋಜನೆಗಳಲ್ಲಿ ನೀರನ್ನು ವಿತರಿಸಿಕೊಳ್ಳಲು ಇತರ ನಾನಾ ಕಾರಣಗಳಿಗಾಗಿ ಚಳವಳಿಗಳು ಸಂಭವಿಸಿವೆ.
ಇವುಗಳ ಪೈಕಿ ಭದ್ರಾ ಮೇಲ್ದಂಡೆ ಯೋಜನೆಗಾಗಿ ಜನರ ಹೋರಾಟ ಮತ್ತು ಚಳವಳಿಗಳು ವ್ಯಾಪಕವಾಗಿ ನಡೆದಿವೆ. ಆದರೆ ಸರ್ಕಾರ ಬಂಡವಾಳಶಾಹಿ ದೊರೆಗಳ ಪರವಾಗಿ ‘ತುಂಗಾ ತಿರುವು’ ಎಂಬ ಯೋಜನೆಯನ್ನು ರೂಪಿಸಿದೆ. ಮೊದಲಿನಂತೆ ಯೋಜನೆ ಕೈಗೊಂಡರೆ ಅಪಾರ ಪ್ರಮಾಣದ ಕಾಫಿತೋಟ ಮತ್ತು ಅರಣ್ಯ ನಾಶವಾಗುತ್ತದೆಂಬ ಅಂದಾಜಿದೆ.
ಭದ್ರಾ ಮೇಲ್ದಂಡೆ ಯೋಜನೆಯಿಂದ 20 ಟಿ.ಎಂ.ಸಿ. ನೀರಿನ ಲಭ್ಯತೆಯನ್ನು ಬಜಾವತ್ ಆಯೋಗದ ‘ಎ’ ಸ್ಕೀಂನಡಿ ಮುಗಿಸಬೇಕಿತ್ತು. ಆದರೆ ಆಗಲಿಲ್ಲ. ಬಚಾವತ್ ‘ಬಿ’ ಸ್ಕೀಂ 2000ನೆಯ ಮೇ 31ರಂದು ಜಾರಿಗೆ ಬಂದಾಗ 183 ಟಿ.ಎಂ.ಸಿ. ನೀರು ಲಭ್ಯವಾಗಲಿದೆ. ಇದರ ವ್ಯಾಪ್ತಿಗೆ ಬರುವ ಚಿತ್ರದುರ್ಗ, ತುಮಕೂರು, ಬಳ್ಳಾರಿ ಮತ್ತು ಕೋಲಾರ ಜಿಲ್ಲೆಗಳ ಕೆಲವು ಭಾಗಗಳಿಗೆ ನೀರಾವರಿಯಾಗಲಿದೆ.
ಇಂದು ಕಾವೇರಿ, ಕೃಷ್ಣಾ ಜಲವಿವಾದಗಳು ಬಗೆಹರಿದಿಲ್ಲ. ಇದರಂತೆ ಇನ್ನೂ ಅನೇಕ ಸಮಸ್ಯೆಗಳಿವೆ. ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಬೀದರ್, ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ ತೀವ್ರ ಹಾಹಾಕಾರವಿದೆ. ಇವುಗಳಂತೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಬೆಳಗಾವಿ, ದಕ್ಷಿಣಕನ್ನಡ, ಉತ್ತರ ಕನ್ನಡ, ಬಿಜಾಪುರ, ಗದಗ, ಬೆಂಗಳೂರು ಮೊದಲಾದ ಜಿಲ್ಲೆಗಳ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಬೇಸಿಗೆಯಲ್ಲಿ ಪ್ರತಿನಿತ್ಯ ಚಳವಳಿ, ಬಂದ್, ಹೋರಾಟಗಳು ಸರ್ವೇಸಾಮಾನ್ಯವಾಗಿ ನಡೆಯುವುದು ಕಂಡುಬರುತ್ತವೆ.
ಉಪಸಂಹಾರ
 ದಖನ್ ಪ್ರಸ್ಥಭೂಮಿಯಲ್ಲಿರುವ ಕರ್ನಾಟಕ ಎಲ್ಲ ದೃಷ್ಟಿಯಿಂದಲೂ ಸುರಕ್ಷಿತ ಹಾಗೂ ಸಮೃದ್ಧವಾಗಿರುವ ರಾಜ್ಯ. ಇತಿಹಾಸ ಪೂರ್ವಕಾಲದಿಂದಲೂ ಜಲಸಂಪತ್ತಿನ ಬಳಕೆಯಾಗಿದೆ. ವಿಶೇಷವಾಗಿ ಮೌರ್ಯ, ಶಾತವಾಹನ, ಗಂಗ, ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ವಿಜಯನಗರ, ಮೈಸೂರು ಅರಸರು ಮತ್ತು ಬ್ರಿಟಿಷರ ಅವಧಿಯಲ್ಲಿ ಕೈಗೊಂಡ ನೀರಾವರಿ ಕಾರ್ಯಗಳು ಗಮನಾರ್ಹವಾಗಿವೆ.
ಪ್ರಾಚೀನ ಕಾಲದಿಂದಲೂ ಜಲಸಂಪತ್ತಿಗಾಗಿ ಹೋರಾಟಗಳು ನಡೆದಿವೆ. ನದಿ, ಕೆರೆ, ಕಟ್ಟೆಗಳನ್ನು ಉದಾಹರಿಸಬಹುದು. ಕಾವೇರಿ ನದಿ ಶತಮಾನಗಳಿಂದ ಸಮಸ್ಯೆ ಸೃಷ್ಟಿಸಿಕೊಂಡು ಬಂದಿದೆ. ಚೋಳರು ಮತ್ತು ಪಾಂಡ್ಯರು ಮೊದಲಿನಿಂದಲೂ ಇದಕ್ಕಾಗಿ ಹೋರಾಡುತ್ತಿದ್ದರು. ತರುವಾಯ ಬ್ರಿಟಿಷರು ಲಾಭ ತರುವ ಯೋಜನೆಗಳನ್ನು ಮಾತ್ರ ಕೈಗೊಳ್ಳುತ್ತಿದ್ದರು. ಭಾರತ ಸರ್ಕಾರ ಪಂಚವಾರ್ಷಿಕ ಯೋಜನೆಗಳ ಮೂಲಕ ನೀರಾವರಿ ಅಭಿವೃದ್ದಿಯನ್ನು ಕೈಗೊಂಡಿದೆ. ಇಂದು ಕರ್ನಾಟಕದಲ್ಲಿ 146ಕ್ಕೂ ಹೆಚ್ಚು ನೀರಾವರಿ ಯೋಜನೆಗಳಿವೆ ಆದರೂ ನೀರಿಗಾಗಿ ಒತ್ತಾಯ ಪಡಿಸುವುದು ಕೆಲವು ಭಾಗಗಳಲ್ಲಿ ಕಂಡುಬರುತ್ತದೆ.
ಕಾವೇರಿ ನದಿ ನೀರು ವಿವಾದ ಶತಮಾನದಷ್ಟು ಹಳೆಯದಾದರೂ ಇತ್ಯರ್ಥವಾಗಿಲ್ಲ. ಇದರಂತೆ ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸು ವುದನ್ನು ಆಂಧ್ರ ವಿರೋಧಿಸುತ್ತಿದೆ. ಇದನ್ನು ಯಥಾ ರೀತಿ ಕಾಪಾಡಿಕೊಂಡು ಬರಲು ಸೂಚಿಸಲಾಗಿದೆ. ಎತ್ತರವನ್ನು ಹೆಚ್ಚಿಸಲು ಸಂಘಟನೆಗಳು ಶಕ್ತಗೊಂಡು ಚಳವಳಿ ನಡೆಸುತ್ತಿವೆ. ಸ್ವಾತಂತ್ರ್ಯ ನಂತರ ಈ ಚಳವಳಿಗಳು ಸಂಭವಿಸಿರುವುದು ಹೆಚ್ಚು. ಇಂದು ಜಲವಿದ್ಯುತ್ ಉತ್ಪಾದನೆಗಾಗಿ ಪರ-ವಿರೋಧ ಚಳವಳಿಗಳು ನಡೆಯುತ್ತಿವೆ.
ಇಂದು ವಿವಿಧ ರಾಜ್ಯಗಳ ನಡುವೆ ಜಲವಿವಾದಗಳು ನಡೆದರೆ ಸಂವಿಧಾನದ ನಿಯಮಗಳ ಪ್ರಕಾರ ಇತ್ಯರ್ಥಪಡಿಸಿಕೊಳ್ಳಬೇಕು. ಸಂವಿಧಾನದ 263ನೇ ವಿಧಿ ಅನ್ವಯ ಭಾರತ ಒಕ್ಕೂಟದ ಯಾವುದೇ ರಾಜ್ಯಗಳ ನಡುವೆ ಉಂಟಾಗುವ ವಿವಾದಗಳನ್ನು ಬಗೆ ಹರಿಸಲು ಅವಕಾಶವಿದೆ. 1990ರಲ್ಲಿ ನ್ಯಾಯಮಂಡಲಿ ಸ್ಥಾಪನೆಯಾದರೂ ಅಂತರ ರಾಜ್ಯಗಳ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲು ಹಿನ್ನಡೆ ಸಾಧಿಸಿದೆ. ಅಂತರರಾಜ್ಯಗಳ ನಡುವೆ ಸಂಭವಿಸುವ ಜಲವಿವಾದ ಚಳವಳಿಗಳನ್ನು ಬಗೆಹರಿಸಲು 262ನೇ ವಿಧಿ ಅನ್ವಯ ಸಂಸತ್ತಿಗೆ ಕಾನೂನು ಮಾಡಲು ಅಧಿಕಾರವಿದೆ. ಇದರಂತೆ 1956ರಲ್ಲಿ ಸಂಸತ್ತು ‘ಅಂತರರಾಜ್ಯ ಜಲವಿವಾದಗಳ ಕಾಯ್ದೆ’ಯನ್ನು ಅಂಗೀಕರಿಸಿತು. ವಿವಾದಕ್ಕೊಳಗಾದ ರಾಜ್ಯವು ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದಾಗ ನ್ಯಾಯಮಂಡಳಿಯನ್ನು ಕೇಂದ್ರ ಸರ್ಕಾರ ರಚಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ. 1956ರಲ್ಲಿ ಸಂಸತ್ತು ‘ನದಿ ಮಂಡಲಿಗಳ ಕಾಯ್ದೆ’ಯನ್ನು ಜಾರಿಗೆ ತಂದಿತು. ಇದು ಅಂತರರಾಜ್ಯ ನದಿಗಳ ನಿರ್ವಹಣೆ ಹಾಗೂ ಅಭಿವೃದ್ದಿಗೆ ನದಿ ಮಂಡಲಿಗಳನ್ನು ಕೇಂದ್ರ ಸರ್ಕಾರ ರಚಿಸಲು ಅವಕಾಶವಿದೆ. ಇದಲ್ಲದೆ, ಸಂವಿಧಾನದ 7ನೇ ಅನುಸೂಚಿ ಎಂಟ್ರಿ 56ರ ಪ್ರಕಾರ ‘ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಂತರರಾಜ್ಯ ನದಿಗಳನ್ನು ಮತ್ತು ಕಣಿವೆಗಳನ್ನು ನಿರ್ವಹಿಸುವ ಹಾಗೂ ಅಭಿವೃದ್ದಿಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ.’
ಒಟ್ಟಾರೆ ಜಲವಿವಾದಗಳು ಇಂದು ರಾಜಕೀಯ ರೂಪ ಪಡೆದಿರುವುದರಿಂದ ಇತ್ಯರ್ಥಗೊಳ್ಳುವಲ್ಲಿ ವಿಳಂಬವಾಗುವುದು ಸಹಜ. ಹೀಗಾಗಿ ಕೇಂದ್ರ ಸರ್ಕಾರವು ಸಂವಿಧಾನದ ಚೌಕಟ್ಟಿನಲ್ಲಿ ಮತ್ತು ಸುಪ್ರೀಂ ಕೋರ್ಟ್ ಮೊದಲಾದ ನ್ಯಾಯ ಮಂಡಳಿ ಗಳು ಸಹಾ ಶೀಘ್ರವಾಗಿ ತೀರ್ಮಾನ ಕೈಗೊಂಡರೆ ನದಿ ನೀರು ವಿವಾದಗಳನ್ನು ಬಗೆಹರಿಸಬಹುದು. ರಾಷ್ಟ್ರದ ಏಕತೆ ಮತ್ತು ಸಮಗ್ರತೆ ಕಾಪಾಡಲು ಜಲವಿವಾದಗಳನ್ನು ಪರಸ್ಪರ ಮಾತುಕತೆ, ಒಪ್ಪಂದಗಳ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ.
ಪರಾಮರ್ಶನ ಗ್ರಂಥಗಳು
1. ಗೋಪಾಲರಾವ್ ಎಚ್.ಎಸ್., 1998. ಕರ್ನಾಟಕ ಏಕೀಕರಣ ಇತಿಹಾಸ, ಬೆಂಗಳೂರು: ನವಕರ್ನಾಟಕ ಪ್ರಕಾಶನ.
2. ಗೋವಿಂದಯ್ಯ ಟಿ., 1997. ರಾಜಕೀಯ ಸುಳಿಯಲ್ಲಿ ಆಲಮಟ್ಟಿ ಅಣೆಕಟ್ಟು, ಭಾಗ 1, ಬೆಂಗಳೂರು: ಸಮಾಜ ವಿಜ್ಞಾನ ಸಂಶೋಧನ ಸಂಸ್ಥೆ.
3. ನಂಜಣ್ಣನವರ ಎಸ್.ಎಸ್., 1995. ಕರ್ನಾಟಕದ ಜಲಸಂಪನ್ಮೂಲಗಳು, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.
4. ವಿರೂಪಾಕ್ಷಿ ಪೂಜಾರಹಳ್ಳಿ, 1999. ಜಲಸಂಬಂಧಿ ಚಳವಳಿಗಳು, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
blogger
delicious
digg
facebook
reddit
stumble
twitter
print
email
ಪುಸ್ತಕ: ಸಮಕಾಲೀನ ಕರ್ನಾಟಕ ಚರಿತ್ರೆಯ ವಿವಿಧ ಆಯಾಮಗಳು (ಸಂಪಾದಿತ)
ಲೇಖಕರು: ಡಾ. ವಿರೂಪಾಕ್ಷಿ ಪೂಜಾರಹಳ್ಳಿ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ