ಶನಿವಾರ, ಜೂನ್ 20, 2015

ವಿಮರ್ಶೆಯ ಪೂರ್ವ-ಪಶ್ಚಿಮ (4)

ವಿಮರ್ಶೆಯ ಪೂರ್ವ-ಪಶ್ಚಿಮ

ವಿಮರ್ಶಕನಿಗೆ ಪ್ರಧಾನವಾದದ್ದು ಜಿಜ್ಞಾಸೆಯ ಭಾವನೆ. ಆತನಿಗೆ ತನ್ನ ವಿಮರ್ಶೆಯಿಂದ ಒಂದು ಕಡೆ ಕವಿಗೂ ಮತ್ತೊಂದು ಕಡೆ ಸಹೃದಯರಿಗೂ ಉಪಕಾರ ಮಾಡುತ್ತಿದ್ದೇನೆಂಬ ಅಹಂಕಾರವಿರಬಾರದು. ಹೊಸರೀತಿಯ ಕೃತಿಯನ್ನು ನೋಡುವಾಗಲೂ ಅಷ್ಟೇ. “ಎಷ್ಟೋ ಜನ ವಿಮರ್ಶಕರು ತಾವು ಕಲಿಯತಕ್ಕದ್ದೇನೂ ಇಲ್ಲವೆಂದೇ ಭಾವಿಸುತ್ತಾರೆ. ಒಂದು ಹೊಸ ಸಾಹಿತ್ಯ ಪ್ರಕಾರ ಬಂದಾಗ ಅದನ್ನು ಸಾಕಷ್ಟು ವಿನಯದಿಂದ ಒಪ್ಪಿಕೊಳ್ಳಲು ನಿರಾಕರಿಸುವುದೂ ಉಂಟು. ಕವಿ ಶೈಲಿಯ ಅಂತರಾಳದಲ್ಲಿರುವ ಆತ್ಮದ ದನಿಗೆ ಕಿವಿಗೊಡುವಷ್ಟು ಸಹನೆಯೂ ಅವರಿಗಿರುವುದಿಲ್ಲ.”[1] ಎನ್ನುವ ಮಾತು ಅಂಥ ಅಹಂಮನ್ಯ ವಿಮರ್ಶಕರಿಗೆ ಅನ್ವಯಿಸುತ್ತದೆ. ಅಸೂಯೆ ಇಲ್ಲದ, ಉದಾರಿಗಳಾದ ವಿಮರ್ಶಕರಿಂದ ರಸಕ್ಕೆ ಚ್ಯುತಿ ಬರುವುದಿಲ್ಲ. ಕವಿ ಕೃತಿಯೊಂದರ ವಿಮರ್ಶೆ ಮಾಡುವ ಮೊದಲು ಅದರ ಸ್ವರೂಪವನ್ನರಿಯುವ ಹಂಬಲ ಬೇಕು. “ಕೃತಿಯನ್ನು ಕುರಿತು ಆತನಲ್ಲಿ ಮೊದಲು ಇಷ್ಟವಿರಬೇಕು. ಹಾಗೆ ಇಷ್ಟವಿದ್ದಾಗಲೆ ಆತನಿಗೆ ಅದನ್ನು ಕುರಿತು  ವಿಶ್ಲೇಷಿಸಲು ಸಾಧ್ಯವಾಗುವುದು. ಕೃತಿಯ ವಿಚಾರದಲ್ಲಿ ಮೊದಲೇ ಪೂರ್ವಗ್ರಹದಿಂದ ಕುರುಡಾಗುವ ಸಂಭವವಿದೆ.”[2] ಆದಕಾರಣ ಸಾಹಿತ್ಯ ವಿಮರ್ಶಕ ಕೃತಿಯ ಆಸ್ವಾದನದಿಂದ ತಕ್ಷಣವೇ ಪ್ರಚೋದಿತವಾದ ಭಾವಗಳಿಂದಲ್ಲದೆ ಬೇರೆಯಾಗಿ ಮೊದಲೇ ನಿರ್ಮಿಸಿಕೊಂಡ ಭಾವಗಳಿಂದ ಕೃತಿಯನ್ನು ಅವಲೋಕಿಸುವುದು ಸಮರ್ಪಕವಾಗಿ ತೋರುವುದಿಲ್ಲ. ಕೃತಿಯ ಅನುಭವವನ್ನು ಮೊದಲು ತಾನು, ತನಗಾಗಿ ಸವಿದು, ಅನಂತರ ಸಹೃದಯರಿಗಾಗಿ ವ್ಯಾಖ್ಯಾನಿಸುವ ಪವಿತ್ರ ಮಾಧ್ಯಮ ಎನ್ನುವ ಅರಿವು ಆತನಿಗಿರಬೇಕು. ಜೊತೆಗೆ ಸಹೃದಯರ ವಿಚಾರದಲ್ಲಿಯೂ ಅವನಿಗೆ ಗೌರವ ಬೇಕು. ಓದುಗರೆಲ್ಲ ಮಂಕರೆಂದೂ, ಆದ್ದರಿಂದ ತಾನು ಅವರ ಮತಿಗೆ ಬೆಳಕನ್ನು ಹಿಡಿಯುತ್ತಿದ್ದೇನೆಂದೂ, ತನ್ನ ವಿಮರ್ಶೆಯಿಲ್ಲದಿದ್ದರೆ ಅವರಿಗೆ ಕೃತಿಯ ಮಹಿಮೆ ಗೊತ್ತೇ ಆಗುವುದಿಲ್ಲವೆಂದೂ ಭಾವಿಸಬಾರದು. ಒಂದು ವೇಳೆ ಹಾಗೆ ಭಾವಿಸಿದರೆ, ‘ತನ್ನ ಕೋಳಿ ಕೂಗಿದ್ದರಿಂದಲೇ ಬೆಳಗಾಯಿತು. ತನ್ನ ಅಗ್ಗಿಷ್ಟಿಕೆಯಿಂದಲೇ ಊರವರಿಗೆ ಬೆಂಕಿ ದೊರೆಯುತ್ತದೆ’ ಎಂದು ಭಾವಿಸಿದ ಮುದುಕಿಯ ಕತೆಯಂತಾಗುತ್ತದೆ ವಿಮರ್ಶಕನ ಪಾಡು! “ವಿಮರ್ಶಕನ ಕಾರ‍್ಯ ಸಹೃದಯರಿಗೆ ಓದಿ ಹೇಳುವುದಲ್ಲ; ಅವರು ತಾವೇ ಓದಿ ಆಸ್ವಾದಿಸಲು ನೆರವಾಗುವುದಷ್ಟೆ; ಅವರ ಗ್ರಹಣಶಕ್ತಿಗೆ ತಾನು ಅಡ್ಡಿಯಾಗದಿರುವಿಕೆಯಿಂದ, ಓದುಗರ ರಸಜ್ಞತೆಯನ್ನು ಆತ ಗೌರವಿಸಬೇಕು. ಅವನು ವಿಮರ್ಶೆಯನ್ನು ಬರೆಯುತ್ತಿರುವುದು ತನ್ನ ಕಲ್ಪನಾಚಾತುರ‍್ಯ, ತನ್ನ ಜಾಣತನ, ತನ್ನ ವಿದ್ವತ್ತು ಅಥವಾ ಸೂಕ್ಷ್ಮಜ್ಞತೆಯನ್ನು ಪ್ರದರ್ಶಿಸುವುದಕ್ಕಲ್ಲ, ಕೃತಿಯ ಮಹಿಮೆಯನ್ನು ಪ್ರಕಟಿಸುವುದಕ್ಕಾಗಿ.”[3] ವಿಮರ್ಶಕ ಕೃತಿಯ ದಿಗ್ದರ್ಶನಕಲ್ಲದೆ, ತನ್ನ ವಿದ್ವತ್ಪ್ರದರ್ಶನಕ್ಕೆ ನಿಂತರೆ  ದೇವರನ್ನೆ ಹಿಂದಿಕ್ಕಿ ಮುಂದೆ ಮೆರೆಯುವ ಪೂಜಾರಿಯಾಗುತ್ತಾನೆ. “ಅವನ ಕೆಲಸ ಓದುಗರು ತನ್ನ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುವಂತೆ ಶಾಸನ ಮಾಡುವುದಲ್ಲ; ವಿವರಿಸುವುದು, ದೀಪ್ತಗೊಳಿಸುವುದು.”[4] ಎಮರ್ಸನ್ ಹೇಳುವಂತೆ “ವಿಮರ್ಶಕನ ಉದ್ದೇಶ ತಿಳಿವಳಿಕೆ ನೀಡುವುದಲ್ಲ. ಪ್ರಚೋದಿಸುವುದು.[5] ವಿಮರ್ಶಕನ ವಿಮರ್ಶೆಯನ್ನೋದಿ ಸಹೃದಯರು ತಾವೇ ಅದನ್ನು ಓದುವಂಥ ಪ್ರಚೋದನೆಯನ್ನೊ, ಸಹೃದಯರು ಮೊದಲೇ ಓದಿದ್ದರೆ, ಆ  ಬಗ್ಗೆ ಹೊಸದಾದ ವಿಚಾರ ಪ್ರಚೋದನೆಯನ್ನೋ ಪಡೆಯುವುದಾದರೆ ಅಂಥ ವಿಮರ್ಶೆ ನ್ಯಾಯವಾಗಿ ಮಾಡಬೇಕಾದುದನ್ನು ಮಾಡಿದಂತಾಗುತ್ತದೆ.
ವಿಮರ್ಶೆ ತಪ್ಪು ದಾರಿಗೆ ಹೋಗದಂತೆ ನೋಡಿಕೊಳ್ಳುವುದು ಎಲ್ಲ ಸಾಹಿತ್ಯದಲ್ಲಿಯೂ ಆಗಬೇಕಾದ ಒಂದು ದೊಡ್ಡ ಕೆಲಸ. ಇದಕ್ಕೆ ಕಾರಣ ‘ವಿಮರ್ಶೆ’ ಎಂಬ ಮಾತಿನ ಭಾವವನ್ನೇ ತಪ್ಪಾಗಿ ತಿಳಿದದ್ದೂ ಒಂದು. ವಿಮರ್ಶೆ ಮಾಡುವುದು-ಎಂದರೆ ಹೇಗೋ ಏನೋ ಮತ್ತೊಂದನ್ನು ಖಂಡಿಸುವುದು, ಹಿಡಿದು ಚೂರು ಚೂರು ಮಾಡುವುದು ಎಂಬ ಅರ್ಥವೂ ತಿಳಿಯದವರಲ್ಲಿ ಪ್ರಚಲಿತವಾಗಿದೆ.  ವಾಸ್ತವವಾಗಿ “ವಿಮರ್ಶೆ ಕ್ಷುಲ್ಲಕ ಟೀಕೆ ಅಲ್ಲ; ಕೂದಲು ಸೀಳುವ ಕೆಲಸವೂ; ಅಲ್ಲ; ಏತಕ್ಕೆ ಕೆಲವು ರುಚಿಸಿತು, ಏತಕ್ಕೆ ಕೆಲವು ರುಚಿಸಲಿಲ್ಲ ಎನ್ನುವುದನ್ನು ಆಂಶಿಕವಾಗಿಯಾದರೂ ನೋಡುವ ಶಕ್ತಿ. ಅದೊಂದು ಅಂತರ್ದೃಷ್ಟಿ-ಅರ್ಧ ಅಯತ್ನಪೂರ್ವಕವಾದುದು. ಇನ್ನರ್ಧ ಪ್ರಯತ್ನಪೂರ್ವಕವಾದುದು.”[6] ಕವಿಕೃತಿಯಲ್ಲಿ ಕೇವಲ ದೋಷಾನ್ವೇಷಣೆಗೆ ಹೊರಡುವವರು, ಅದರಲ್ಲೇ ರುಚಿ ಕಂಡವರು. ಅದೊಂದು ಬಗೆಯ ವ್ಯಾಧವೃತ್ತಿ. ವಿಮರ್ಶೆಯಲ್ಲಿ ಈ ಬಗೆಯ ವ್ಯಾಧವೃತ್ತಿ ಸಲ್ಲದು. ಇಂಥವರನ್ನು ಕುರಿತು ಕವಿ ಹೇಳುತ್ತಾನೆ :
“ಇಲ್ಲಿ ಹುಗಲಿಲ್ಲ, ನಿನಗೆ, ಓ ಬಿಯದ :
ಇದು ಪಕ್ಷಿಕಾಶಿ!”[7]
ಎಂದು ಕಾವ್ಯಲೋಕವನ್ನು ಪ್ರವೇಶಿಸುವ ಸಹೃದಯನಿಗೆ ಅಥವಾ ವಿಮರ್ಶಕನಿಗೆ ಕವಿ ಹೇಳುವ ಎಚ್ಚರಿಕೆ ಇದು. ಕಲಾ ಲೋಕ ಒಂದು ಪವಿತ್ರ ಕ್ಷೇತ್ರವಿದ್ದ ಹಾಗೆ. ಇಲ್ಲಿಗೆ ‘ಕೊಲ್ವ ಬತ್ತಳಿಕೆ ಬಿಲ್ಲು ಬಾಣ’ಗಳನ್ನು ಹೊತ್ತ ವ್ಯಾಧರಿಗೆ ಪ್ರವೇಶವಿಲ್ಲ. ಓದುಗರು ಇಲ್ಲಿಗೆ ಬರಬೇಕಾದರೆ -
ಕೊಲ್ವ ಬತ್ತಳಿಕೆ ಬಿಲ್ಲುಬಾಣವನು
 ಅಲ್ಲೆ ಇಟ್ಟು ಬಾ;
ಬಿಂಕದುಕುತಿಯನು ಕೊಂಕು ಯುಕುತಿಯನು
 ಎಲ್ಲ ಬಿಟ್ಟು ಬಾ;
ಮೈಯ್ಯ ತೊಳೆದು ಬಾ, ಕಯ್ಯ ಮುಗಿದು ಬಾ,
ಹಮ್ಮನುಳಿದು ಬಾ;[8]
ಹೀಗೆ ಬರಬೇಕೆಂದು ಕವಿಯ ಆಶಯ. ಈ ಬಗೆಯ ಶ್ರದ್ಧೆಯಿಂದ ಕಾವ್ಯಲೋಕವನ್ನು ಪ್ರವೇಶಿಸಿದರೆ ಕಾವ್ಯದ ರಸಾನುಭವ ಸಾಧ್ಯ. ಆದಕಾರಣ ವಿಮರ್ಶೆಯ ಸಮಸ್ತ ಉಪಕರಣಗಳನ್ನೂ ಹೇರಿಕೊಂಡು, ಕವಿಯ “ಪ್ರಾಣ ಪಕ್ಷಿಕುಲ”ಗಳನ್ನು ಬೇಟೆಯಾಡಿ, ಅದರ ಸೊಗಸನ್ನು ಕಾಣಲು ಯತ್ನಿಸುವ ರಭಸಮತಿಗಳಾದ ವಿಮರ್ಶಕರನ್ನು ಕುರಿತದ್ದು ಈ ಎಚ್ಚರಿಕೆ. ವಿನಯಶೀಲರಲ್ಲದ, ರಭಸಮತಿಗಳಾದ, ಕೇವಲ ಅಳೆದು ತೂಗಿ ಬೆಲೆ ಕಟ್ಟಿ ಕೃತಿಯ ಲಲಾಟಲಿಪಿಯನ್ನು ಕೊರೆಯುತ್ತೇವೆನ್ನುವ ವಿಮರ್ಶಕರ ಅಹಂಕಾರದ ವಿಲಾಸ ಬಗೆಬಗೆಯಾಗಿದೆ. ಕೆಲವರಂತೂ ಮೊಸರಲ್ಲಿ ಕಲ್ಲು ಹುಡುಕುವ “ಒಲ್ಲದ ಗಂಡ”ರು! ವಿಮರ್ಶಕರಲ್ಲಿ ಸತೃಣಾಭ್ಯ ವ್ಯವಹಾರಿಗಳು, ಅರೋಚಿಗಳು ಎಂದು ಎರಡು ರೀತಿಯವರನ್ನು ಇಲ್ಲಿ ನೆನೆಯಬಹುದು.[9] ಸತೃಣಾಭ್ಯ ವ್ಯವಹಾರಿಗಳು ಎಂದರೆ, ಸಿಕ್ಕಿದ್ದನ್ನೆಲ್ಲಾ ಮೇದು, ಅದೂ ಚೆನ್ನ ಇದೂ ಚೆನ್ನ ಎಂದು ತಲೆ ಹಾಕುವ ಕೌಲೆ ಬಸವಗಳು. ಇವರಿಗೆ ಅಂಥ  ವಿವೇಚನೆ ಇಲ್ಲ. ಇಂಥವರ “ವಿಮರ್ಶೆ”ಯಿಂದ ಯಾವ ಪ್ರಯೋಜನವೂ ಇಲ್ಲ. ಮತ್ತೊಂದು ಬಗೆಯವರು ಈ “ಅರೋಚಿ”ಗಳು. ಅರೋಚಿಗಳು ಎಂದರೆ ವಿವೇಚನಾಶೀಲರು, ಯಾವುದನ್ನೂ ಸುಲಭವಾಗಿ ಒಪ್ಪದವರು. ಈ ಅರೋಚಿಗಳ ಗುಂಪಿಗೆ “ಪ್ರಿಗ್” ಎನ್ನುವರನ್ನೂ ಸೇರಿಸಬಹುದು. ಇಂಗ್ಲಿಷ್ ಭಾಷೆಯಲ್ಲಿ  Prig ಎಂದರೆ “ಅತಿ ಸಂಪ್ರದಾಯಬದ್ಧನಾದವನು, ಇತರರಿಗೆ ನೀತಿಬೋಧೆ ಮಾಡುವವನು, ಶುದ್ಧ  ಕಳ್ಳ” ಎಂದು ಅರ್ಥ. ಈ ಮಾತಿಗೆ ಡಬ್ಲ್ಯೂ ಎಚ್. ಆಡೆನ್ ಅವರು ಮಾಡುವ ಬೇರೆಯಾದ ವ್ಯಾಖ್ಯಾನ ಇದು: ಪ್ರಿಗ್ ಎಂದರೆ ವಿಮರ್ಶಕರಲ್ಲಿ ಒಬ್ಬ. ಅವನಿಗೆ  ಸಧ್ಯದಲ್ಲಿ ವಾಸ್ತವವಾಗಿ ಇರುವ ಯಾವ ಕವಿತೆಯೂ ಚೆನ್ನಾಗಿಲ್ಲ. ಏನಾದರೂ ಅಂಥ ಕವಿತೆ ಇದ್ದರೆ ಅದನ್ನು ಆತನೇ ಬರೆಯಬೇಕು. ಆದರೆ ಬರೆಯಲಾಗುತ್ತಿಲ್ಲ![10] ಇವನೂ ಒಂದು ಬಗೆಯ ಅರೋಚಿಯೇ. ಇದರ ಜೊತೆಗೆ ಕೆಲವು ಜನ ಬೇರೆಯ ವೈಯಕ್ತಿಕವಾದ ದೋಷಗಳಿಂದಲೂ “ಕು-ವಿಮರ್ಶೆ”ಯನ್ನು ಮಾಡುವುದುಂಟು. “ಒಂದು ಉತ್ತಮ ಕಾವ್ಯವನ್ನು ನೋಡಿ ಕಾವ್ಯ ಹೀಗಿರಬೇಕೆಂದು ಕಲಿತ ವಿಮರ್ಶಕ ಇನ್ನೊಂದು ಉತ್ತಮ ಕಾವ್ಯ ಬೇರೆಯ ರೀತಿಯದಾದ ಕಾರಣದಿಂದ ಅದು ಚೆನ್ನಾಗಿಲ್ಲ ಎಂದು ಹೇಳುವ ಸಂಭವ ಬಹಳ. ಸಾಲದ್ದಕ್ಕೆ ವಿಮರ್ಶಕ ತನ್ನ ಕಲ್ಪನೆಗೆ ಅನುಸಾರವಾದ ಕೃತಿಯನ್ನು ಒಪ್ಪುವುದು, ಹಾಗಲ್ಲದ್ದನ್ನು ತೆಗಳುವುದು ತೀರ ಸಂಭವನೀಯ…. ಮತ್ತೆ ಕೆಲವರು ನಾವು ಬಹು ಬುದ್ಧಿವಂತರು ಎಂದು, ಹತ್ತು ಜನ ಚೆನ್ನಾಗಿದೆ ಎಂದ ಕೃತಿಯಲ್ಲಿ ಇಲ್ಲದ ತಪ್ಪನ್ನು ಹುಡುಕುವರು; ಹತ್ತುಜನ ಚೆನ್ನಾಗಿಲ್ಲ ಎಂದದ್ದರಲ್ಲಿ ಗುಣ ಇದೆ ಎಂದು ಮುಷ್ಕರ ಮಾಡುವರು. ಕೆಲವರು ವಿಮರ್ಶೆಯ ಕೆಲಸ ತಪ್ಪು ಹುಡುಕುವುದು ಎಂಬಂತೆ ನಡೆಯುತ್ತಾರೆ. ನೂರು ಒಳ್ಳೆಯ ಗುಣವಿದ್ದರೂ ಗಣನೆಗೆ  ತಾರದೆ ಎಲ್ಲೋ ಸಿಕ್ಕಿದ ಒಂದು ತಪ್ಪನ್ನು ದೊಡ್ಡದು ಮಾಡುತ್ತಾರೆ.”[11]
ಇಂಥವರನ್ನು ಕುರಿತು ರಾಜರತ್ನಂ ಅವರು ‘ರತ್ನ’ನ ಬಾಯಲ್ಲಿ  ಹೇಳಿಸಿದ್ದಾರೆ:
ಅರ‍್ತ ಮಾಡ್ಕಂಡ್ ಇಂಗಲ್ ಇಂಗೆ
 ಅನ್ನೋರ್ ಮಾತು ಗಂಗೆ!
ಅರ‍್ತ್ ಆಗ್ದಿದ್ರು ಸಿಕ್ದಂಗ್ ಅನ್ನಾದ್
 ಚಂದ್ರನ್ ಮಕ್ಕ್ ಉಗದಂಗೆ.[12]
ಎಂದು. ಕೆಲವರಿದಾರೆ, ಅವರು ಕೃತಿಯನ್ನು ಸಹಾನುಭೂತಿಯಿಂದ ಓದಿ ಅರ್ಥಮಾಡಿಕೊಂಡು, ಗುಣಗಳನ್ನೂ ದೋಷಗಳನ್ನೂ ವಿವೇಚಿಸಿ ‘ಹೀಗಲ್ಲ ಹೀಗೆ’ ಎಂದು ಕವಿಗೂ ಒಂದು ರೀತಿಯಲ್ಲಿ ಸರಿಯಾದ ದಾರಿಯನ್ನು ನಿರ್ದೇಶಿಸುತ್ತಾರೆ. ಅಂಥವರ ಮಾತು “ಗಂಗೆ”ಯಂತೆ ನಿರ್ಮಲವೂ, ಕೊಳೆಯನ್ನು ತೊಳೆಯುವ ಉದ್ದೇಶದಿಂದ ಕೂಡಿದುದೂ ಆಗಿರುತ್ತದೆ. ಕವಿ ಕೃತಿಯಲ್ಲಿರುವ ದೋಷಗಳ ಬಗೆಗೆ ಕಣ್ಣು ಮುಚ್ಚಿ “ಸತೃಣಾಭ್ಯ ವ್ಯವಹಾರಿ”ಗಳಾಗದೆ, ಅದನ್ನೂ ಎತ್ತಿ ಹೇಳುವ ನಯವಾದ ರೀತಿ ಇದು. ಆದರೆ ಬೇರೆ ಕೆಲವರಿದ್ದಾರೆ. ಅರ್ಥವಾಗದಿದ್ದರೂ ಅಸಹನೆ, ಅಸೂಯೆಗಳಿಂದ ಬಾಯಿಗೆ ಬಂದ ಹಾಗೆ ಆಡುತ್ತಾರೆ. ಅಂಥವರ ಮಾತು ಚಂದ್ರನ ಮುಖಕ್ಕೆ ಉಗಿದಂತೆ. ಅವರ ದೋಷ ಅವರ ಮುಖಕ್ಕೇ ಬಂದು ಬಡಿಯುತ್ತದೆ. ದೋಷವನ್ನು ತೋರಿಸಿ ಸುಖಿಸುವ ಪ್ರವೃತ್ತಿ ಬೆಳೆದಷ್ಟು ಅಂಥವರಿಂದ ವಿಮರ್ಶೆಗೆ ಅಪಾಯ ಹೆಚ್ಚು. ಕೃತಿಯಲ್ಲಿ ಗುಣವನ್ನು ಬಿಟ್ಟು ಕೇವಲ ದೋಷವನ್ನೇ ಗ್ರಹಿಸುವವರನ್ನು ಕುರಿತು ಕವಿ ರನ್ನ “ಸಾರಣೆಯಂತಿರೆ ಕಸಮನೆ ಪಿಡಿವರ್ ಕೆಲರ್ ಮಹಾಪುರುಷರ್ಕಳ್” – ಎನ್ನುತ್ತಾನೆ.[13] ಇಂಥ ವಿಮರ್ಶಕರು ಜರಡಿಗಳಿದ್ದಂತೆ; ಕೇವಲ ಕಸವನ್ನು ಮಾತ್ರ ಹಿಡಿದುಕೊಳ್ಳುವ ದುರದೃಷ್ಟಶಾಲಿಗಳು. ಕಲಾ ಕೃತಿಯಲ್ಲಿ ದೋಷಕ್ಕಿಂತ ಗುಣಗಳನ್ನು ಎತ್ತಿ ತೋರಿಸುವುದು ಒಳ್ಳೆಯದು. “ನಿಜವಾದ ವಿಮರ್ಶಕ ದೋಷಗಳಿಗಿಂತ ಗುಣಗಳನ್ನು ಎತ್ತಿ ತೋರಿಸುವವನಾಗಿರಬೇಕು. ಕಲಾ ಕೃತಿಯಲ್ಲಿ ಯಾವುವು ನಿಜವಾಗಿಯೂ ಸಹೃದಯರ ಗಮನಕ್ಕೆ ಬರಲು ಯೋಗ್ಯವಾದುವೋ ಅಂಥ ಸುಪ್ತ ಸೌಂದರ್ಯವನ್ನು ತೆರೆದುತೋರಿಸುವಂತಿರಬೇಕು.”[14] ಏಕೆಂದರೆ “ಉತ್ತಮವಾದುದನ್ನು ಬೆರಳಿಟ್ಟು ತೋರುವುದು ಹೇಗೆ ವಿಮರ್ಶೆಯೋ ಹಾಗೆಯೇ ಅನುತ್ತಮವಾದುದನ್ನು ಮುಚ್ಚುವುದೂ ಒಂದು ತೆರನಾದ ವಿಮರ್ಶೆಯೇ.”[15] ದೋಷಗಳನ್ನು ಮುಚ್ಚಿ ಗುಣಗಳನ್ನು ಮಾತ್ರ ತೋರುವುದು “ಒಂದು ತೆರನಾದ ವಿಮರ್ಶೆ” ಅಷ್ಟೇ. ವಿಮರ್ಶಕ ಗುಣದೋಷಗಳೆರಡನ್ನೂ ನಿಷ್ಪಕ್ಷಪಾತವಾದ ದೃಷ್ಟಿಯಿಂದ ವಿವೇಚಿಸಿ ಕೃತಿಯ ಉತ್ತಮತೆ ಅದರ ಗುಣಗಳಿಂದ, ಗುಣಗಳ ಮೇಲೆ ನಿಂತಿದೆಯೇ ಹೊರತು ದೋಷಗಳ ಮೇಲೆ ಅಲ್ಲ ಎನ್ನುವುದನ್ನು ಸಹೃದಯರ ಮನಮುಟ್ಟುವಂತೆ ಸಮರ್ಥಿಸಿ ತೋರಬೇಕು. ಏಕೆಂದರೆ, ಗುಣಗಳನ್ನು ಅವಜ್ಞೆಗೈದು ಕೇವಲ ದೋಷಗಳನ್ನು ತೋರಿಸುವುದು ಹೇಗೆ ಪಕ್ಷಪಾತ ವಿಮರ್ಶೆಯಾಗುವುದೋ, ಹಾಗೆಯೇ ಕೇವಲ ಗುಣಗಳನ್ನೇ ಎತ್ತಿ ಹೇಳಿ ದೋಷಗಳ ಬಗೆಗೆ ಕಣ್ಣು ಮುಚ್ಚಿಕೊಳ್ಳುವುದೂ ಅಷ್ಟೇ ಪಕ್ಷಪಾತ ವಿಮರ್ಶೆಯಾಗುತ್ತದೆ. ಥಾಮಸ್ ಎಡಿಸನ್ ಹೇಳಿದಂತೆ “ಸಾಹಿತ್ಯಾಭಿರುಚಿ ಎಂದರೆ ಕೃತಿಯಲ್ಲಿನ ಸೊಗಸನ್ನು ಸಂತೋಷದಿಂದಲೂ, ಅಸಮರ್ಪಕತೆಗಳನ್ನು ಅತೃಪ್ತಿಯ ಭಾವದಿಂದಲೂ ವಿವೇಚಿಸುವ ಶಕ್ತಿ.”[16]
ಹಾಗಾದರೆ, ಸಮಸ್ತಲಕ್ಷಣಸಂಪನ್ನನಾದ ಅತ್ಯುತ್ತಮ ವಿಮರ್ಶಕ ಇದಾನೆಯೇ? ಅದಕ್ಕೆ ಉತ್ತರ : “ಇಲ್ಲ; ಎಂದಾದರೂ ಅಂಥವನು ಇರಲೂ ಇಲ್ಲ. ಕೆಲವು ವೇಳೆ ವಿಮರ್ಶಕ ತನ್ನ ಕೃತಿಯಿಂದ ಯಶಸ್ವಿಯಾದದ್ದೂ ಉಂಟು, ಅಯಶಸ್ವಿಯಾದದ್ದೂ ಉಂಟು. ಅತ್ಯುತ್ತಮ ವಿಮರ್ಶಕರೆನಿಸಿಕೊಂಡವರೂ ಸಹ ಸಫಲರಾದದ್ದಕ್ಕಿಂತ ವಿಫಲರಾದದ್ದೇ ಹೆಚ್ಚು!”[17]
ಕೃತಿ ಪರಿಶೀಲನೆ
“ಕಲೆ ಎನ್ನುವುದು ಆರಂಭವಾದ ಹೊತ್ತಿನಲ್ಲೆ ಅದನ್ನು ಸವಿದ ರಸಿಕತೆಯೂ ಅದರ ಒಂದು ವಿಮರ್ಶೆಯೂ ಆರಂಭವಾದವು… ಕಲೆ ಬೆಳೆದ ಹಾಗೆ ವಿಮರ್ಶೆಯೂ ಬೆಳೆದು ಬಂದಿದೆ.”[18] ವಿಮರ್ಶೆ ಎನ್ನುವುದು ವಿವಿಧಾನುಭವದ ಸ್ತರಗಳಿಂದ ಕೂಡಿದ ಸಾಹಿತ್ಯದ ಅಧ್ಯಯನದ ಪರಿಣಾಮ. ಸಾಹಿತ್ಯಾಸ್ವಾದನದಲ್ಲಿ ಒದಗಿದ ರಸಾನುಭವದ ಸ್ತರಗಳನ್ನು, ಗುಣ-ದೋಷಗಳನ್ನು, ಕುರಿತು ನಡೆಸುವ ವಿವೇಚನೆಯಿಂದಲೆ ಒದಗಿದ ಸಮಸ್ಯೆಗಳಿಗೆ ಕಂಡುಕೊಂಡ ಉತ್ತರದಿಂದಲೆ, ವಿಮರ್ಶೆಯ ಹಲವು ಸೂತ್ರಗಳು ವಿಮರ್ಶಕನಿಗೆ ಗೋಚರವಾಗುತ್ತದೆ. ಆದಕಾರಣ ನಾವು ವಿಮರ್ಶೆಯ ತತ್ವಗಳು ಎಂದು ಯಾವುವನ್ನು ಕರೆಯುತ್ತೇವೆಯೋ ಅವು ವಿಶೇಷ ಸಾಹಿತ್ಯಾಸ್ವಾದನದ ಪರಿಣಾಮದಿಂದ ಮೂಡಿದುವಲ್ಲದೆ ಸಾಹಿತ್ಯದ ಮಾಪನಕ್ಕೆ ಬಹಿರಂಗದಿಂದ ತಂದವಲ್ಲ. ಕಾಲದಿಂದ ಕಾಲಕ್ಕೆ ಸಾಹಿತ್ಯವನ್ನು ಕುರಿತು ಓದುಗನ ಅನುಭವ ವಿಸ್ತರಿಸಿದಂತೆ ವಿವೇಚನೆ ವಿಶ್ಲೇಷಣೆ ಇವುಗಳ ಕ್ರಮಬದಲಾಯಿಸಿದಂತೆ, ವಿಮರ್ಶೆಯ ತತ್ವಗಳೂ ಬದಲಾಯಿಸುತ್ತವೆ. ಕಾವ್ಯವನ್ನು ಕುರಿತು ಕವಿಕ್ರಿಯೆಯನ್ನು ಕುರಿತು ಅಂದಂದಿನ ಕಾಲಕ್ಕೆ ಇದ್ದ ಮೂಲಭೂತವಾದ ತಿಳಿವಳಿಕೆಯ ಪ್ರಭಾವ ಮತ್ತು ಪರಿಣಾಮಗಳಿಂದ ಅಂದಂದಿನ ವಿಮರ್ಶೆಯ ಶಕ್ತಿಯೂ ಮಿತಗೊಳಿಸಲ್ಪಟ್ಟಿರುವುದುಂಟು. ಪಾಶ್ಚಾತ್ಯ ವಿಮರ್ಶೆಯ ಇತಿಹಾಸವನ್ನು ಗಮನಿಸಿದರೆ, ಯಾವುದನ್ನು Imagination ಎಂದು ಕರೆಯತ್ತೇವೆಯೋ ಅಂಥ ಒಂದು ಸೃಷ್ಟಿಶೀಲವಾದ ಶಕ್ತಿ ಕವಿಗೆ ಉಂಟೆನ್ನುವ ವಿಚಾರವೇ ಹದಿನೇಳನೇ ಶತಮಾನದ ತನಕ ಖಚಿತವಾಗಿರಲಿಲ್ಲ. ಅರಿಸ್ಟಾಟಲಿನ ಕಾಲದಿಂದ ೧೭ನೇ ಶತಮಾನದ ತನಕ ಕವಿ ಏನಿದ್ದರೂ Imitator, ಅನುಕರಣಶೀಲ ಎಂಬ ಭಾವನೆಯೇ ಪ್ರಧಾನವಾಗಿತ್ತು. ಕವಿ ಏನಿದ್ದರೂ ಚೆನ್ನಾಗಿ  ಅನುಕರಿಸಬಲ್ಲನೇ ಹೊರತು ಆತ ಹೊಸತೊಂದನ್ನು ಸೃಜಿಸಬಲ್ಲ ಎನ್ನುವ ಒಂದು ಭಾವನೆಗೆ ಬಲವಿಲ್ಲದುದಕ್ಕೆ ಮುಖ್ಯ ಕಾರಣ, ಅಂದಿನ ತತ್ವಶಾಸ್ತ್ರದಲ್ಲಿ ಮಾನವ ಮನಸ್ಸು ಏನನ್ನಾದರೂ ಸೃಜಿಸಲು ಸಾಧ್ಯವಿಲ್ಲ, ಅದು ಸುಮ್ಮನೆ ಏನನ್ನಾದರೂ ಗ್ರಹಿಸಬಲ್ಲದು ಎನ್ನುವ ಸಿದ್ಧಾಂತ ಪ್ರಬಲವಾಗಿದ್ದುದು. ೧೮ನೆ ಶತಮಾನದ ಹೊತ್ತಿಗೆ ಈ ಭಾವನೆಗಳೆಲ್ಲಾ ತಲೆಕೆಳಗಾದುವು. ಕಾವ್ಯ ಎನ್ನುವುದು ಕೇವಲ ಭಾಷೆಯಲ್ಲಿ ನಡೆದ ಅನುಕರಣವಲ್ಲ, ಅದೊಂದು ಕಲ್ಪನಾಸೃಷ್ಟಿ ಎನ್ನುವ ಸಿದ್ಧಾಂತ ರೂಪಿತವಾಯಿತು. ಅಲ್ಲಿಂದ ಮುಂದೆ ವಿಮರ್ಶೆಯ ದೃಷ್ಟಿಯೇ ಬದಲಾಯಿಸಿತು. ಇಪ್ಪತ್ತನೆಯ ಶತಮಾನದಲ್ಲಿ ಮನಶ್ಯಾಸ್ತ್ರದ ಪ್ರಯೋಗ ಪರಿಶೀಲನೆಗಳ ಪ್ರಭಾವ, ಕವಿಜೀವನದ ವಿವರಗಳು, ಕವಿ ಮನೋಮಂದಿರದ ಪರಿಶೀಲನೆ ಇವುಗಳು ವಿಮರ್ಶೆಯ ಕ್ಷೇತ್ರವನ್ನೇ ವಿಸ್ತರಿಸಿವೆ. ಭಾರತೀಯ ಕಾವ್ಯ ಮೀಮಾಂಸೆಯಲ್ಲಿಯೂ ಸಹ ನಾಟ್ಯದಲ್ಲಿ ರಸಕ್ಕೆ ಇರುವ ಪ್ರಾಧಾನ್ಯತೆ ಕಾವ್ಯದಲ್ಲೂ ಉಂಟೆಂಬ ಸಿದ್ಧಾಂತ ಅಂಗೀಕೃತವಾಗುವ ತನಕ, ಅಲಂಕಾರ ಪ್ರಸ್ಥಾನದಿಂದ ಧ್ವನಿ ಸಿದ್ಧಾಂತದ ತನಕ, ಕಾವ್ಯದ ಜೀವಾಳ ಯಾವುದು ಎನ್ನುವ ಬಗೆಗೆ ವ್ಯಕ್ತವಾಗಿರುವ ಆಲಂಕಾರಿಕರ ಮತಗಳು ಅಂದಂದಿನ ಕಾವ್ಯ ವಿಮರ್ಶೆಯ ಬೆಳವಣಿಗೆಯನ್ನು ಸೂಚಿಸುತ್ತವೆ. ಕಾವ್ಯವನ್ನು ಕುರಿತ ಸಿದ್ಧಾಂತಗಳು ಬೆಳೆದಂತೆ, ವ್ಯತ್ಯಸ್ತವಾದಂತೆ, ವಿಸ್ತರಿಸಿದಂತೆ, ಕಾವ್ಯವನ್ನು ಕುರಿತ ವಿಮರ್ಶೆಯ ತತ್ವಗಳೂ ಕಾಲದಿಂದ ಕಾಲಕ್ಕೆ ಬೆಳೆದಿವೆ, ಪುನರ್ ನಿರ್ಮಾಣಗೊಂಡಿವೆ, ಮಾರ್ಪಾಡು ಹೊಂದಿವೆ. ವಿಚಾರ ಶಕ್ತಿಯ ಸಾಧನ ಸಾಮಗ್ರಿಗಳು ಹೆಚ್ಚಿದಂತೆ ವಿಚಾರದ ರೀತಿಯಲ್ಲಿಯೂ ಗಮನಾರ್ಹವಾದ ಮಾರ್ಪಾಡುಗಳಾಗುವುದು ಸಹಜವೆ.
ವಿಮರ್ಶೆಯ ಇತಿಹಾಸ ಹೀಗಿರುವಾಗ ಸ್ಪಷ್ಟವಾಗುತ್ತದೆ-ವಿಮರ್ಶೆಗೆ ಇಂಥದೇ ಎಂಬ ಖಚಿತವಾದ ನಿಯಮಗಳನ್ನು ಹೇಳಲು ಬರುವುದಿಲ್ಲ ಎಂಬುದು. ಆದರೆ ವಿಮರ್ಶಕನಾದವನು ಅಲ್ಲಲ್ಲಿಗೆ ಉಚಿತವಾಗುವಂಥ, ಅನ್ವಯವಾಗುವಂಥ ಕೆಲವು ನಿಯಮಗಳನ್ನು ಕಂಡುಕೊಳ್ಳಬೇಕು. ಡಾಕ್ಟರ್ ಜಾನ್‌ಸನ್ ಮೂರು ಬಗೆಯ ವಿಮರ್ಶಕರನ್ನು ಗುರುತಿಸುತ್ತಾನೆ; “ಕೆಲವರಿದ್ದಾರೆ, ಅವರಿಗೆ ವಿಮರ್ಶೆಯ ಯಾವ ನಿಯಮಗಳೂ ಗೊತ್ತಿಲ್ಲ. ಆದರೆ ಅವರು ತಮ್ಮ ಸಹಜವಾದ ಅಭಿರುಚಿಯಿಂದ ಆಸ್ವಾದಿಸಿ ಕೃತಿಯನ್ನು ಕುರಿತು ತೀರ್ಪು ಹೇಳುತ್ತಾರೆ. ಇವರು ಮೊದಲನೆಯವರು. ಮತ್ತೆ ಕೆಲವರಿದ್ದಾರೆ. ಅವರು ವಿಮರ್ಶೆಯ ನಿಯಮಗಳನ್ನು ಬಲ್ಲವರು. ಅವರು ಆ ನಿಯಮಗಳಿಂದಲೇ ಕೃತಿಯ ಬೆಲೆಯನ್ನು ನಿರ್ಣಯಿಸತಕ್ಕವರು; ಇವರು ಎರಡನೆಯವರು. ಬೇರೆ ಕೆಲವರಿದ್ದಾರೆ. ಅವರು ವಿಮರ್ಶೆಯ ನಿಯಮಗಳನ್ನು ಬಲ್ಲವರು;  ಆದರೂ ಅವರು ನಿಯಮಾತೀತರು. ಈ ಮೂರು ದರ್ಜೆಯ ತೀರ್ಪುಗಾರರಲ್ಲಿ ಲೇಖಕರು ಒಪ್ಪಿಸಬೇಕಾದದ್ದು ಈ ಮೂರನೆಯವರನ್ನು; ಅದನ್ನು ಬಿಟ್ಟರೆ ಮೊದಲನೆಯವರನ್ನು; ಆದರೆ ಎರಡನೆಯವರಿದ್ದಾರಲ್ಲ ಅವರನ್ನು ಲೆಕ್ಕಕ್ಕೇ ಇಟ್ಟುಕೊಳ್ಳಬೇಡಿ.”[19]
ಜಾನ್ಸನ್‌ನ ಈ ಹೇಳಿಕೆ, ಮೂರು ಬಗೆಯ ವಿಮರ್ಶಕರನ್ನು ಬಹು ಸ್ವಾರಸ್ಯವಾಗಿ ವರ್ಣಿಸುತ್ತದೆ. ಯಾವ ನಿಯಮಗಳನ್ನೂ ತಿಳಿಯದ ಕೇವಲ ಸಹಜಾಭಿರುಚಿಯಿಂದ ಕೃತಿಯ ಬೆಲೆಯನ್ನು ಕಟ್ಟುವ ವಿಮರ್ಶೆ ಎಷ್ಟೋ ಸಲ ಮುಗ್ಧವೂ, ಪ್ರಾಮಾಣಿಕವೂ, ಸಮರ್ಪಕವೂ, ಆಗಿರುವುದುಂಟು. ಇದರ ಜೊತೆಗೆ ಹಿಂದೆ ಪ್ರಚಲಿತವಾಗಿದ್ದ ಸಪ್ರಮಾಣ (Inductive) ವಿಮರ್ಶೆ ಮತ್ತು ನಿರ್ಣಾಯಕ ವಿಮರ್ಶೆ (Judicial criticism) ಎಂಬ ಎರಡು ವಿಧಾನಗಳನ್ನು ಹೆಸರಿಸಬಹುದು. ಸಪ್ರಮಾಣ ವಿಮರ್ಶೆ ಎಂದರೆ, ನಿರ್ದಿಷ್ಟವಾದ ಕೆಲವು ನಿದರ್ಶನಗಳಿಂದ ಸಾಮಾನ್ಯ ಸೂತ್ರಗಳನ್ನು ಕಂಡುಕೊಳ್ಳುವ ಬಗೆ. ಎಂದರೆ ಈ ಬಗೆಯ ವಿಮರ್ಶಕ, ಕೃತಿಯ ಅವಲೋಕನಕ್ಕೆ ಪೂರ‍್ವಭಾವಿಯಾಗಿ, ಸಿದ್ಧವಾದ ಕೆಲವು ನಿಯಮಗಳಿವೆ ಎಂಬುದನ್ನು ಒಪ್ಪುವುದಿಲ್ಲ. ಕೃತಿಯನ್ನು ನೇರವಾಗಿ ವಿಜ್ಞಾನಿ ಪ್ರಕೃತಿಯನ್ನು ಹೇಗೋ ಹಾಗೆ ಅವಲೋಕಿಸಿ ಯಾವ ನಿಯಮಗಳಿಗೆ ಅನುಸಾರವಾಗಿ ಆ ಕೃತಿ ಕಲಾವಿದನ ಪ್ರತಿಭೆಯಿಂದ ರಚಿತವಾಗಿರುವುದೋ ಆ ನಿಯಮಗಳನ್ನು ಕಂಡುಕೊಳ್ಳುತ್ತಾನೆ. ಆದರೆ ನಿರ್ಣಾಯಕ ವಿಮರ್ಶಕ ಕೃತಿಯ ಅವಲೋಕನಕ್ಕೆ ಕೆಲವು ನಿರ್ದಿಷ್ಟ ನಿಯಮಗಳನ್ನಿರಿಸಿಕೊಂಡು ಹೊರಡುತ್ತಾನೆ. ಲೋಕದಲ್ಲಿ ಒಬ್ಬ ವ್ಯಕ್ತಿ ಹೇಗೆ ಸರ್ಕಾರದ, ಸಮಾಜದ, ಧರ್ಮದ ಕೆಲವು ನಿಯಮಗಳಿಂದ ಬದ್ಧನೋ ಹಾಗೆಯೆ ಕೃತಿಯೂ ಕೆಲವು ಬಹಿರಂಗದ ನಿಯಮಗಳಿಂದ ಬದ್ಧವಾಗಿರಬೇಕು ಎಂದು ಭಾವಿಸುವವನು. ಈ ವಿಮರ್ಶಕನ ಗಮನ ಆಧಾರ ಕಲ್ಪನೆಗಳ ಮೇಲೆ.[20] ಜಾನ್‌ಸನ್ ಹೇಳಿದ ಎರಡನೆಯ ದರ್ಜೆಯ ವಿಮರ್ಶಕರ ಗುಂಪಿಗೆ ಇವರನ್ನು ಸೇರಿಸಬಹುದು. “ತಮಗೆ ಆಧಾರವಾಗಿ ದೊರೆತ ಕೆಲವು ನಿಯಮಗಳಿಗೆ ಅಥವಾ ತಮಗೆ ರುಚಿಸಿದ ಕೆಲವು ಸಿದ್ಧಾಂತಗಳಿಗೆ ಅನುಸಾರವಾಗಿ ಕವಿಗಳನ್ನೂ ಕೃತಿಗಳನ್ನೂ ವಿಂಗಡಿಸುವ ಒಂದು ರೂಕ್ಷವಿಧಾನ ಇದು.”[21] ಜಾನ್ಸನ್ ಹೇಳಿದ ಮೂರನೆ ವರ್ಗದವರು, ನಿಜವಾಗಿಯೂ ಗೌರವಾರ್ಹರು.
ಇಂದು ಪಾಶ್ಚಾತ್ಯ ವಿಮರ್ಶಾಸಾಹಿತ್ಯವನ್ನೋದಿದರೆ ಅದರ ವೈವಿಧ್ಯ ವಿಸ್ತಾರಗಳು ನಮ್ಮನ್ನು ಚಕಿತಗೊಳಿಸುತ್ತವೆ. ಒಂದು ಕೃತಿಯನ್ನು ಕುರಿತು ಪುಸ್ತಕದ ಮೇಲೆ ಪುಸ್ತಕಗಳು ರಚಿತವಾಗಿವೆ. ವಿಮರ್ಶೆಯ ಹಾದಿಯಲ್ಲಿ ಅವರು ಅನುಸರಿಸಿರುವ ವಿಧಾನಗಳು, ಅತ್ಯಂತ ವೈಯಕ್ತಿಕವಾದ ರೀತಿಯಿಂದ ಹಿಡಿದು ಅತಿ ವೈಜ್ಞಾನಿಕವಾಗುವತನಕವೂ ವಿವಿಧವಾಗಿವೆ. ಆ ಬಗೆಯ ವಿಮರ್ಶೆಯ ವಿಧಾನಗಳು, ನಮ್ಮಲ್ಲಿ ಇನ್ನೂ ಸಾಕಷ್ಟು ಬಳಕೆಗೆ ಬಂದಿಲ್ಲ. ನಮ್ಮ ಸಾಹಿತ್ಯ ವಿಮರ್ಶೆಯ ವಿಧಾನಗಳನ್ನು ನಮ್ಮದೇ ಆದ ರೀತಿಯಲ್ಲಿ ರೂಪಿಸಿಕೊಳ್ಳುವ ಮುನ್ನ ಬೇರೆಯ ಕಡೆ ಬೆಳೆದಿರುವ ಸಮೃದ್ಧವಾದ ಸಾಹಿತ್ಯ ವಿಮರ್ಶೆಯ ರೀತಿಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.
ಕೃತಿಯೊಂದನ್ನು ಓದಿ ಮುಗಿಸಿದಾಗ ಸಮರ್ಥನಾದ ಸಹೃದಯನೊಬ್ಬ ಅದನ್ನು ಕುರಿತು ಪರಿಭಾವಿಸಿದಾಗ, ಕೃತಿ ತನ್ನ ಮೇಲೆ ಮಾಡಿದ ಪರಿಣಾಮಗಳನ್ನು ಸಮಾಲೋಚಿಸಿದಾಗ, ಅದನ್ನು ಕುರಿತು ಯಾರಿಗಾದರೂ ಬೇರೆಯವರಿಗೆ ತನ್ನ ಅನುಭವವನ್ನು ಹೇಳಲು ಮೊದಲು ಮಾಡಿದಾಗ ಆತ ವಿಮರ್ಶೆಯ ಹಾದಿಯಲ್ಲಿದ್ದಾನೆ ಎಂದು ಹೇಳಬಹುದು. ಈ ಕ್ರಿಯೆಯಲ್ಲಿ ಒಂದು ಕೃತಿ ತನ್ನ ಮನಸ್ಸಿನ ಮೇಲೆ ಮಾಡಿದ ಪರಿಣಾಮವೇನು ಎನ್ನುವುದೇ ಮೊದಲ ಹೆಜ್ಜೆ. ಕೃತಿಯ ಅವಲೋಕನದಿಂದ ಆತನಿಗೆ ‘ಏನೋ’ ಅನಿಸುತ್ತದೆ. ಈ ಅನಿಸಿಕೆ ಅಥವಾ ಒಂದು ರೀತಿಯ ಭಾವನೆ, ಕೆಲವು ವೇಳೆ ಕೃತಿಯ ಪ್ರಭಾವದ ಒಟ್ಟು ಪರಿಣಾಮರೂಪವಾದದ್ದೋ, ಕೆಲವು ವೇಳೆ ಕೃತಿಯ ಅನುಭವವನ್ನು ಕುರಿತ ದೀರ್ಘವಾದ ಪರಿಭಾವನೆಯ ಪರಿಣಾಮವೋ ಆಗಿರುವುದುಂಟು. ಕೃತಿಯ ಪರಿಣಾಮವನ್ನು ಮತ್ತೊಬ್ಬರಿಗೆ ವಿವರ ವಿವರವಾಗಿ ವರ್ಣಿಸಿ ಹೇಳದೆ, ಒಂದು ಮಾತಿನಲ್ಲಿ ಸೂತ್ರವೆಂಬಂತಹ ರೂಪದಲ್ಲಿ ಹೇಳುವ ಕೆಲವು ಮಾತುಗಳನ್ನು ನಾವು ವಿಮರ್ಶೆಯ ಒಂದು ವಿಧಾನವೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಕಾಳಿದಾಸನ ಕೃತಿಗಳನ್ನು ಕುರಿತು “ಉಪಮಾ ಕಾಳಿದಾಸಸ್ಯ” ಎಂದದ್ದು; ಭಾರವಿಯನ್ನು ಕುರಿತು “ಭಾರವೇರರ್ಥಗೌರವಂ” ಎಂದದ್ದು ಈ ರೀತಿಯದು. “ಅಸಗನ ದೇಸೆ” “ಪಂಪನ ಗೀರ್ಗುಂಫದ ಪೆಂಪು” “ಗುಣನಂದಿಯ ತೊಂಡು” “ಗಜಾಂಕುಶರಾಜನ ಚಿತ್ತವೃತ್ತಿ”, “ಪೊನ್ನನೊಳ್ ಸನ್ನಿದಮಾದ ಜಾಣ್ಣುಡಿ” ಇಂಥ ಮಾತುಗಳು, ನಮ್ಮ ಹಳಗನ್ನಡ ಕಾವ್ಯದ ಮೊದಲ ಭಾಗದ ಸತ್ಕವಿಪ್ರಶಂಸೆಯಲ್ಲಿ ಬರುತ್ತವೆ. ಆಯಾ ಕವಿಗಳ ಕೃತಿಗಳಲ್ಲಿ ಕಂಡುಬರುವ ಯಾವುದೋ ಒಂದು ವಿಶಿಷ್ಟಗುಣವನ್ನು ಆಯಾ ಕವಿಗಳ ಕಾವ್ಯದ ಜೀವಾಳ ಎಂಬಂತೆ ಎತ್ತಿ ಹೇಳಿರುವ ರೀತಿ ಇದು. “ಕಾವ್ಯಗಳಲ್ಲೆಲ್ಲ ನಾಟಕ ರಮ್ಯವಾದುದು, ಅದರಲ್ಲೂ ಶಾಕುಂತಲ; ಅದರಲ್ಲೂ ನಾಲ್ಕನೆಯ ಅಂಕ, ಅದರಲ್ಲೂ ನಾಲ್ಕನೆಯ ಶ್ಲೋಕ” ಎನ್ನುವ ಚಮತ್ಕಾರದ ಮಾತು ಇಂಥದೇ. ಇಲ್ಲೆಲ್ಲಾ ಕಾಲದಿಂದ ಕಾಲಕ್ಕೆ ಕವಿಗಳು ಅಥವಾ ವಿಮರ್ಶಕರು, ಪೂರ್ವ ಕವಿ ಕೃತಿಗಳನ್ನು ಕುರಿತು ತಾಳಿದ ಒಂದು ಭಾವನೆಯೆ ಪ್ರಧಾನವಾಗಿದೆ. ಇದನ್ನು ಭಾವನಾವಿಮರ್ಶೆ ಎನ್ನಬಹುದೇನೋ. ಪಂಪನನ್ನು ಕುರಿತು ಒಬ್ಬ ಕವಿ “ಪಂಪನ ದೇಸಿ” ಎಂದರೆ, ಮತ್ತೊಬ್ಬ “ಪಂಪನ ಗೀರ್ಗುಂಫದ ಪೆಂಪು” ಎನ್ನುತ್ತಾನೆ. ಮತ್ತೊಬ್ಬನು “ಪಂಪನ ಗುಣಂ” ಎನ್ನುತ್ತಾನೆ,. ಎಂದರೆ ಒಂದೇ ಕವಿಕೃತಿಯನ್ನು ಕುರಿತು ಬೇರೆ ಬೇರೆ ಕವಿಗಳು ತಾಳಿದ ಭಾವನೆಯ ಉದ್ಗಾರಗಳಿವು. ಇವುಗಳಲ್ಲಿ ಕೆಲವು ಬರಿದೇ ಪರಂಪರಾಗತವಾಗಿಯೂ ಬಂದಿವೆ – ‘ಉಪಮಾ ಕಾಳಿದಾಸಸ್ಯ. ಎನ್ನುವಂಥವು. ಈ ಮಾತುಗಳಲ್ಲಿ ಎಷ್ಟೋ ಕೇವಲ ಅನಿಸಿಕೆಯ ಮಾತುಗಳು; ವಿಮರ್ಶೆಯ ಮಾತುಗಳಲ್ಲ. ವಿಮರ್ಶೆ ಎನ್ನುವುದು ಆರಂಭವಾಗುವುದು ಮೊದಲು ವೈಯಕ್ತಿಕ ಅನಿಸಿಕೆಯಾಗಿಯೆ. ಆದರೆ ಅದು ಸಮರ್ಪಕವಾದ ತೀರ್ಮಾನದ ರೂಪವನ್ನು ತಾಳಿದಾಗ ‘ವಿಮರ್ಶೆ’ ಎನ್ನುವ ಸಾರ್ಥಕವಾದ ಅರ್ಥವನ್ನು ಪಡೆಯುತ್ತದೆ. ಆದರೆ ಇಂಥ ‘ಭಾವನೆ’ಯ ಮಾತುಗಳೂ ದೀರ್ಘಕಾಲದ ಪರಿಣಾಮದಿಂದ, ಸಮರ್ಪಕವಾದ ವಿಮರ್ಶನ ಮತಿಯಿಂದ ಮೂಡಿದರೆ, ಅಮೂಲ್ಯವಾದ ವಿಮರ್ಶೆಯ ಸೂಕ್ತಿಗಳೂ ಆಗುವುದರಲ್ಲಿ ಸಂದೇಹವಿಲ್ಲ. ಕೃತಿಯೊಂದನ್ನು ಕುರಿತು ವಿಮರ್ಶೆಗೆ ತೊಡಗತಕ್ಕವರು ಇಂಥ ಭಾವನಾವಿಮರ್ಶೆಯ ‘ಸೂಕ್ತಿ’ಗಳನ್ನು ನೋಡುವುದು ಒಳ್ಳೆಯದು.
ಇಂಥ ಭಾವನಾವಿಮರ್ಶೆ ಕೇವಲ ಲಿಖಿತವಾದ ಗ್ರಂಥಗಳಲ್ಲಿ ಎಂತೋ, ಅಂತೆಯೆ ಜನಜೀವನದ ದಿನಬಳಕೆಯ ಮಾತುಗಳಲ್ಲಿಯೂ ಕೆಲವು ಪ್ರಚಲಿತವಾಗಿರುವುದುಂಟು. ‘ಮಾಘ ಓದಿ ಮಗ ಕೆಟ್ಟ’ ಎನ್ನುವ ಮಾತು, ಮಾಘನ ಕಾವ್ಯದಲ್ಲಿ ಶೃಂಗಾರ ಅತಿಯಾಯಿತು ಎಂಬ ಭಾವನೆಯನ್ನು ವ್ಯಂಗ್ಯವಾಗಿ ಸೂಚಿಸುತ್ತದೆ. ರಾಮಾಯಣ ಭಾರತಗಳನ್ನು ಕುರಿತು, ಸರ್ವಜ್ಞನ ಹೆಸರಿನಲ್ಲಿ ಮಾಡಿದ ಟೀಕೆ ಇದು – “ಸೋದರರ ವಧೆಯನ್ನು, ಹಾದರದ ಕಥೆಯನ್ನು ಆದರಿಸಿ ಪುಣ್ಯಕಥೆಯೆಂದು ಹೇಳುವರು.” ಇದು ಅನಾರೋಗ್ಯಕರವಾದ ಮನಸ್ಸಿನಿಂದ ಬಂದ ಭಾವನಾ ವಿಮರ್ಶೆ. ಈ ಬಗೆಯ ಮಾತುಗಳು ಎಷ್ಟೋ ಸಲ ಕೇವಲ ಲೋಕಾಭಿರಾಮದ, ಅನಿಸಿಕೆಯ ಮಾತುಗಳಾಗಿರುತ್ತವೆ. ವಿಮರ್ಶಕನಾದವನು ಅಂಥ ಮಾತುಗಳ ಬೆಲೆಯನ್ನು ತೂಗಿ, ಜನರ ಅಭಿರುಚಿಯನ್ನು ತಿದ್ದಬೇಕಾಗುತ್ತದೆ.
ಕವಿಕೃತಿಯ ಅರ್ಥ ವಿವರಣೆಗೆಂದು ಪಂಡಿತರಾದವರು ಬರೆದ ಟೀಕೆ, ಟಿಪ್ಪಣಿ, ವೃತ್ತಿ, ವ್ಯಾಖ್ಯಾನಗಳನ್ನೂ ಇಲ್ಲಿ ನೆನೆಯಬಹುದು. ಸಹೃದಯರಿಗಾಗಿ, ಕಾವ್ಯಗಳಲ್ಲಿ ಬರುವ ಸಂದಿಗ್ಧವಾದ ಸಂದರ್ಭಗಳನ್ನೋ ಕ್ಲಿಷ್ಟತೆಗಳನ್ನೋ ಬಿಡಿಸಿ ಕವಿಕೃತಿಯ ರಸಾನುಭವಕ್ಕೆ ನೆರವಾಗುವ ಈ ಪ್ರಯತ್ನ ಸಂಸ್ಕೃತ ಸಾಹಿತ್ಯದಲ್ಲಿ ವಿಪುಲವಾಗಿ, ಪರಂಪರಾಗತವಾಗಿ ಬೆಳೆದಿದೆ. ಕಾವ್ಯ ಹಾಗೂ ಶಾಸ್ತ್ರಗ್ರಂಥಗಳಿಗೆ ವೃತ್ತಿ ವ್ಯಾಖ್ಯಾನಗಳನ್ನು ಬರೆಯುವ ಪದ್ಧತಿಯಲ್ಲಿ ವಿಮರ್ಶೆಯ ಒಂದು ಪರಿಯನ್ನು ನಾವು ಗುರುತಿಸಬಹುದು. ಅವುಗಳನ್ನು ಬರೆದ ಘನವಿದ್ವಾಂಸರ ಬುದ್ಧಿಕುಶಲತೆಯನ್ನೂ, ಚಮತ್ಕಾರಗಳನ್ನೂ ಅವುಗಳಲ್ಲಿ ಕಾಣಬಹುದಾಗಿದೆ. ಜೊತೆಗೆ ಭಾರತೀಯ ಅಲಂಕಾರ ಶಾಸ್ತ್ರವನ್ನು ಗಮನಿಸಿದರೆ, ನಮ್ಮ ಆಲಂಕಾರಿಕರು, ಎತ್ತಿಕೊಳ್ಳುವ ನಿದರ್ಶನಗಳಿಂದ, ನೀಡುವ ವ್ಯಾಖ್ಯಾನಗಳಿಂದ ಅಲಂಕಾರ ಶಾಸ್ತ್ರದಲ್ಲಿಯೇ ಒಂದು ರೀತಿಯ ಪರೋಕ್ಷ ವಿಮರ್ಶಾ ವಿಧಾನ ಬೆಳೆದುಬಂದಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಹೀಗಾಗಿ ಭಾರತೀಯ ವಿಮರ್ಶೆ ಒಂದು ಕಡೆ ಕವಿ ಕೃತಿಗಳನ್ನು ಕುರಿತ ಟೀಕೆ ಟಿಪ್ಪಣಿ ಭಾಷ್ಯಗಳ ರೂಪದಲ್ಲಿ ಬಂದರೆ, ಮತ್ತೊಂದು ಕಡೆ ಕಾವ್ಯಮೀಮಾಂಸೆಯ ಒಂದು ಅಂಗವಾಗಿ ಆಲಂಕಾರಿಕರು, ಅಲಂಕಾರ, ಗುಣ, ದೋಷ ರೀತಿ, ರಸ, ಧ್ವನಿ ಮೊದಲಾದವುಗಳನ್ನು ವಿಶದಪಡಿಸುವ ಸೋದಾಹರಣ ಪದ್ಧತಿಯಲ್ಲಿ ಬೆಳೆದುಬಂದಿದೆ. ಆಲಂಕಾರಿಕರು ಒಂದೊಂದು ಸಲ ಪ್ರಧಾನ ರಸವನ್ನು ನಿರ್ದೇಶಿಸುವಾಗ ಇಡೀ ಕಾವ್ಯವನ್ನು ಕುರಿತು ಒಂದು ಮಾತು ಆಡುವುದುಂಟು. ಆದರೂ ನಮ್ಮ ಆಲಂಕಾರಿಕರು, ಕಾವ್ಯದ ಪ್ರಧಾನ ಗುಣ ಮಹಾ ಕವಿಗಳ ವಾಣಿಯಲ್ಲಿ ಕಂಡುಬರುತ್ತದೆ[22] ಎಂದು ಹೇಳಿದರೂ, ನಿದರ್ಶನಗಳನ್ನು ಕೊಡುವಾಗ ಅವರ ಗಮನ ಕೇವಲ ಶೃಂಗಾರದ-ಅದರಲ್ಲೂ ಶೃಂಗಾರವೆನ್ನಲಾಗದ – ಪ್ರಣಯ ಪ್ರಪಂಚದ, ಎಷ್ಟೋ ವೇಳೆ ತೀರಾ ಸಾಧಾರಣ ಅಭಿರುಚಿಯ ಪದ್ಯಗಳ ಕಡೆಗೆ. ಅದರ ಬದಲು ದೊಡ್ಡ ದೊಡ್ಡ ಕವಿಕೃತಿಗಳಿಂದ ನಿದರ್ಶನಗಳನ್ನು ಎತ್ತಿಕೊಂಡಿದ್ದರೆ, ಎಷ್ಟು ಸೊಗಸಾದ ವಿಮರ್ಶೆಯ ಮಾದರಿ ಬೆಳೆಯಬಹುದಾಗಿತ್ತು ಎನ್ನಿಸುತ್ತದೆ. ಇದರ ಹೊರತು ಕವಿಕೃತಿಗಳನ್ನೇ ಪ್ರತ್ಯೇಕವಾಗಿರಿಸಿಕೊಂಡು ಅವುಗಳ ಬೆಲೆಯನ್ನು ನಿರ್ಣಯಿಸುವ ಪದ್ಧತಿ ನಮ್ಮಲ್ಲಿ ಬೆಳೆದು ಬರಲಿಲ್ಲ. ಇದಕ್ಕೆ ಕಾರಣವನ್ನು ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ‍್ಯರು ಹೀಗೆ ಊಹಿಸುತ್ತಾರೆ : “ನಮ್ಮಲ್ಲಿ ಹಿಂದೆ ದುಷ್ಟ ಗ್ರಂಥಗಳು ಪ್ರಚಾರವಾಗುವುದಕ್ಕೆ ಅವಕಾಶವಿರಲಿಲ್ಲ. ಕವಿಯಾಗಬೇಕೆಂದವನು ತನ್ನ ಶಕ್ತಿಯನ್ನು ಸಭೆಗಳ ಮುಂದೆ ಸ್ಥಾಪಿಸಬೇಕಾಗಿತ್ತು. ತಿಳಿದವರ ಸಭೆಗಳು, ಅದರಲ್ಲೂ ಇತರ ಕವಿಗಳು ಇರುತ್ತಿದ್ದಂಥವು; ಇಂಥ ಸಭೆಗಳ ಮುಂದೆ ಬಹಳ ಒಳ್ಳೆಯ ಕಾವ್ಯವಲ್ಲದೆ ಯಾವುದೂ ಉಳಿಯುತ್ತಿರಲಿಲ್ಲ. ಇದಾದ ಮೇಲೆ ಇದು ಒಳ್ಳೆಯ ಗ್ರಂಥ, ಇದು ಅಲ್ಲ ಎಂದು ಹೇಳಬೇಕಾಗಿರಲಿಲ್ಲ… ಒಳ್ಳೆಯದಲ್ಲದ ಗ್ರಂಥಕ್ಕೆ ಉಳಿವೇ ಇಲ್ಲ…. ಹೀಗೆ ಸಭೆಗಳ ನಿರ್ದಾಕ್ಷಿಣ್ಯ ತಿರಸ್ಕಾರದಿಂದಲೂ, ಪ್ರತಿಗಳನ್ನು ಮಾಡುವುದರಲ್ಲಿ ಇದ್ದ ಕಷ್ಟಗಳಿಂದಲೂ ಒಳ್ಳೆಯ ಗ್ರಂಥಗಳು ಮಾತ್ರ ಪ್ರಾಚುರ್ಯಕ್ಕೆ ಬಂದು ಜನರಲ್ಲಿ ಒಳ್ಳೆಯ ಗ್ರಂಥಗಳ ವಿನಾ ಇತರ ರೀತಿಯ ಸಾಹಿತ್ಯ ವಿಮರ್ಶೆಯ ಗ್ರಂಥಗಳು ನಿರ್ಮಾಣವಾಗಲಿಲ್ಲ.”[23]- ಈ ಹೇಳಿಕೆಯಲ್ಲಿ ಗಮನಾರ್ಹವಾದ ಒಂದೆರಡು ಅಂಶಗಳಿವೆ. ಮೊದಲನೆಯದಾಗಿ ಕಂಠವನ್ನು ಹಿಡಿದು ಓಲೆಯಗರಿಯ ಮೇಲೆ ಬರೆಯುವುದೇ ದುಸ್ತರವಾದ ಕೆಲಸ; ಇದರಿಂದ ಕೃತಿ ರಚನೆಗೆ ಒಂದು ಬಗೆಯ ಮಿತಿ ಉಂಟಾಗುತ್ತಿತ್ತು. ಎರಡನೆಯದಾಗಿ ಪಂಡಿತರ ಸಭೆಗಳಲ್ಲಿ ಅವುಗಳನ್ನೋದಿ ಅಲ್ಲಿ ಶಿಫಾರಸು ಪಡೆದು ಜನತೆಯ ಮುಂದೆ ಬರುವಲ್ಲಿ ಸಾಕಷ್ಟು ಜರಡಿ ಹಿಡಿಯುವ ಕೆಲಸ ನಡೆಯುತ್ತಿತ್ತು. ಆದರೆ “ಇಂಥ ಸಭೆಗಳ ಮುಂದೆ ಬಹಳ ಒಳ್ಳೆಯ ಕಾವ್ಯವಲ್ಲದೆ, ಯಾವುದೂ ಉಳಿಯುತ್ತಿರಲಿಲ್ಲ” ಎನ್ನುವ ಮಾತೂ, ಜನಕ್ಕೆ “ಇದು ಒಳ್ಳೆಯ ಗ್ರಂಥ, ಇದು ಅಲ್ಲ ಎಂದು ಹೇಳಬೇಕಾಗಿರಲಿಲ್ಲ” – ಎನ್ನುವ ಮಾತೂ ಚರ್ಚಾಸ್ಪದವಾದುವು. ಪಂಡಿತ ಮಂಡಲಿಯ ಮುಂದೆ ಕಾವ್ಯಗಳು ಅವರ ಅಂಗೀಕಾರದ ಮುದ್ರೆಯನ್ನು ಪಡೆಯಬೇಕಾಗಿದ್ದುದು ನಿಜ; ಆದರೆ ಪಂಡಿತ ಮಂಡಲಿಯ ಮೂಲಕ ಬಂದ ಕಾವ್ಯಗಳೆಲ್ಲವೂ ಒಳ್ಳೆಯ ಕಾವ್ಯವೇ ಎಂದೂ, ಒಳ್ಳೆಯದಲ್ಲದ ಕಾವ್ಯ ಯಾವುದೂ ಉಳಿಯುತ್ತಲೇ ಇರಲಿಲ್ಲವಾದ ಕಾರಣ, ಉಳಿದಿರುವುದೆಲ್ಲ ಒಳ್ಳೆಯ ಕಾವ್ಯವೇ ಎಂದೂ ಹೇಳುವ ಧೈರ್ಯ ನಮಗಿಲ್ಲ. ಸಂಪ್ರದಾಯನಿಷ್ಠವಲ್ಲದ ರೀತಿಯಲ್ಲಿ ಬರೆಯಬಲ್ಲಂಥ ಸ್ವತಂತ್ರ ಕವಿಗಳೇನಾದರೂ ಇದ್ದಿದ್ದ ಪಕ್ಷದಲ್ಲಿ ಅಂಥವರ ಎಷ್ಟೋ ಒಳ್ಳೆಯ ಕೃತಿಗಳಿಗೂ ಈ ಸಭೆಗಳ ನಿರ್ಣಯದಿಂದ ಉಳಿಗಾಲವಿಲ್ಲದೆ ಹೋಗಿರುವ ಸಂಭವವೂ ಇದ್ದಿರಬಹುದು. ಸಾವಿರ ವರ್ಷಗಳ ಹಳಗನ್ನಡ ಗ್ರಂಥ ಸಮುದಾಯವನ್ನು ನೋಡಿದರೆ “ಒಳ್ಳೆಯದಲ್ಲದ ಕಾವ್ಯ ಯಾವುದೂ ಉಳಿಯುತ್ತಲೇ ಇರಲಿಲ್ಲ” ಎನ್ನುವ ಮಾತನ್ನು ನಂಬುವುದು ಕಷ್ಟವಾಗುತ್ತದೆ. ಜೊತೆಗೆ ಜನರಿಗೆ “ಇದು ಒಳ್ಳೆಯ ಗ್ರಂಥ, ಇದು ಅಲ್ಲ ಎಂದು ಹೇಳಿಕೊಡಬೇಕಾಗಿರಲಿಲ್ಲ” ಎನ್ನುವ ಮಾತೂ ಚರ್ಚಾಸ್ಪದ. ಅದರ ಬದಲು ಅನ್ನಿಸುತ್ತದೆ: ಜನಕ್ಕೆ ಯಾವುದು ಒಳ್ಳೆಯ ಗ್ರಂಥ, ಯಾವುದು ಅಲ್ಲ ಎನ್ನುವುದನ್ನು ಯಾರಾದರೂ ಹೇಳಿಕೊಟ್ಟಿದ್ದರೆ ಚೆನ್ನಾಗಿತ್ತು. ಆಗ ಜನರ ವಿವೇಚನಾಶಕ್ತಿಯ ಪರಿಣಾಮದಿಂದಲಾದರೂ ಇನ್ನೂ ಒಳ್ಳೆಯ ಗ್ರಂಥಗಳು ನಮ್ಮಲ್ಲಿ ಬರಬಹುದಾಗಿತ್ತು. ಉತ್ತಮ ವಿಮರ್ಶೆಯ ಪದ್ಧತಿಯ ಅಭಾವದಿಂದಾಗಿ ಸಾವಿರ ವರ್ಷ ಕವಿಗಳ ಹಾಗೂ ಸಹೃದಯರ ಅಭಿರುಚಿ ಕೇವಲ ಸಂಪ್ರದಾಯದ ಜಾಡಿನಲ್ಲೇ ನಡೆದಿರುವುದು ಎಲ್ಲರಿಗೂ ಸ್ಪಷ್ಟವಾಗಿ ಕಾಣುವ ವಿಚಾರ. ಆದರೆ ಹಳಗನ್ನಡ ಕಾವ್ಯದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ನವೀನ ಪ್ರಯೋಗಗಳು ನಡೆದಿವೆ ಎನ್ನುವ ವಿಚಾರದ ಬಗೆಗೆ ಗೌರವವನ್ನೂ ಪ್ರಶಂಸೆಯನ್ನೂ ಸೂಚಿಸದಿರುವುದು ತಪ್ಪಾಗುತ್ತದೆ.[24]
ಕೃತಿಯೊಂದನ್ನು ನೇರವಾಗಿಸಿಕೊಂಡು ಅದನ್ನು ವರ್ಣಿಸುವ, ಅಥವಾ ವ್ಯಾಖ್ಯಾನಿಸುವ ಪದ್ಧತಿ ಹಿಂದೆ ನಮ್ಮಲ್ಲಿ ಬೆಳೆಯಲಿಲ್ಲ. ಈಚೆಗೆ ಆಧುನಿಕ ಸಾಹಿತ್ಯ ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ಬೆಳೆದಿದೆ. ವರ್ಣನೆ, ವ್ಯಾಖ್ಯಾನ ಹೆಚ್ಚು ಕಡಿಮೆ ಜೊತೆ ಜೊತೆಯಲ್ಲೇ ನಡೆಯುವ ಕ್ರಿಯೆಗಳು. ಇದು ಅತ್ಯಂತ ಶುದ್ಧವಾದ ವಿಮರ್ಶೆ ಎಂದೂ ಕರೆಯಲ್ಪಡುತ್ತಿದೆ. ಏಕೆಂದರೆ ಈ ಬಗೆಯ ವಿಮರ್ಶೆಯಲ್ಲಿ, ಕೃತಿಗಳನ್ನು ನೇರವಾಗಿ ನೋಡಿ ಅದರ ರಸ ಸ್ಥಾನಗಳನ್ನು ವರ್ಣಿಸಿ, ವ್ಯಾಖ್ಯಾನಿಸಿ ನಿರೂಪಿಸುವುದೇ ಪ್ರಧಾನ. “ಕೇವಲ ರಸದೃಷ್ಟಿಯಿಂದ ದೂರವಾದ, ಧಾರ್ಮಿಕವೋ, ರಾಜಕೀಯವೋ, ಆರ್ಥಿಕವೋ ಆದ ಸಿದ್ಧಾಂತಗಳಿಗೆ ಅನುಸಾರವಾಗಿ ಕೃತಿಯನ್ನು ಗಮನಿಸದೆ, ಕಲಾಕೃತಿ ಹೇಗಿದೆಯೋ ಹಾಗೆ ಇರಿಸಿಕೊಂಡು ನೇರವಾಗಿ ನೋಡಿ ವ್ಯಾಖ್ಯಾನಿಸುವ ಪ್ರಯತ್ನ…”[25] ಇದು. ಈ ವಿಮರ್ಶನ ವಿಧಾನದಲ್ಲಿ “ನಿಜವಾದ ವಿಮರ್ಶಕ ಕಾವ್ಯದ ಅಂತರಂಗವನ್ನು ನೇರವಾಗಿ ನೋಡುತ್ತಾನೆ; ಆಗಲೇ ಸಿದ್ಧವಾದ ಬಹಿರಂಗದ ನಿಯಮಗಳನ್ನು ಅನ್ವಯಿಸಿ ನೋಡುವುದಿಲ್ಲ. ಏಕೆಂದರೆ ಅವನಿಗೆ ಗೊತ್ತು, ಈ ಬಗೆಯ ವ್ಯಕ್ತಿ ನಿಷ್ಠ ವಿಧಾನದಿಂದಲೇ ತಾನು ಕಾವ್ಯದ ಭಾವವನ್ನು ಗ್ರಹಿಸಬಲ್ಲೆನೆಂದು.”[26] ಕವಿಯ ಪ್ರಧಾನವಾದ ಆಶಯವೇನು? ಅದನ್ನು ಎಷ್ಟರಮಟ್ಟಿಗೆ ತಾನು ಗ್ರಹಿಸುವುದು? ತಾನು ಗ್ರಹಿಸಿದ್ದನ್ನು ಸಹೃದಯರಿಗೆ ಯಾವ ರೀತಿಯಲ್ಲಿ ವಿವರಿಸಿದರೆ ಚೆನ್ನಾಗಿರುತ್ತದೆ? ಈ ಪ್ರಶ್ನೆಗಳೇ ವರ್ಣನಾ ವಿಮರ್ಶೆಯಲ್ಲಿ ತೊಡಗುವವನಿಗೆ ಪ್ರಕೃತ. ಕವಿ ಹಾಗೆ ಬರೆಯಬೇಕಾಗಿತ್ತು, ಹೀಗೆ ಬರೆಯಬೇಕಾಗಿತ್ತು ಎಂಬ ಆಕ್ಷೇಪಣೆಗಳನ್ನು ಹಾಕುವುದೂ ಇಲ್ಲಿ ಅನುಚಿತ. ಏಕೆಂದರೆ ಕೃತಿ ಆಗಲೇ ರಚಿತವಾಗಿ ಮುಗಿದಿದೆ. ಅದನ್ನು ತನ್ನ ಮುಂದಿಟ್ಟುಕೊಂಡು ವಿಮರ್ಶಿಸುವಾಗ ‘ತಾನು ಅದೇ ಕೃತಿಯನ್ನು ಬರೆದಿದ್ದರೆ ಹೇಗೆ ಬರೆಯುತ್ತಿದ್ದೆನೋ ಹಾಗೆ, ಆ ಕವಿ ಬರೆದಿಲ್ಲ’ ವೆಂದು ಕೃತಿಯನ್ನು ಆಕ್ಷೇಪಿಸುವುದು ಸರಿಯಲ್ಲ; ಸಾಧುವೂ ಅಲ್ಲ. “ಇಲ್ಲಿ ವಿಮರ್ಶೆ ಕವಿಯ ದೃಷ್ಟಿಯನ್ನು ಪ್ರಧಾನವಾಗಿರಿಸಿಕೊಂಡು ಪ್ರವರ್ತಿಸುತ್ತದೆ. ಕೃತಿಯಲ್ಲಿರುವ ಪಾತ್ರಗಳನ್ನೂ ಅಂದಿನ ಪರಿಸರವನ್ನೂ ಗಮನದಲ್ಲಿರಿಸಿಕೊಂಡು, ಕವಿಯ ಮೂಲಭಾವದಾಳಕ್ಕೆ ಹೊಕ್ಕುನೋಡಲು ಪ್ರಯತ್ನಿಸುತ್ತದೆ. ಆದಕಾರಣ ಕೃತಿಯೊಂದನ್ನು ಕಲಾವಿದನ ಅನುಭವದ ಸಮಗ್ರರೂಪವೆಂಬಂತೆ ಗಮನಿಸುವುದೇ ಹೊರತು ಕೇವಲ ಅಂಶ ಅಂಶಗಳಲ್ಲಿ ಮಾತ್ರ ಅಲ್ಲ…. ಯಾವ ವಿಮರ್ಶಕ ಉತ್ತಮ ವ್ಯಾಖ್ಯಾನಕಾರನೋ ಆತ ತನ್ನ ಒಳಗಣ್ಣಿನಿಂದ ಕೃತಿನಿಷ್ಠವಾದ ಅಂತರಂಗ ಸತ್ಯವನ್ನು ಅರಿಯಬಲ್ಲ”[27] ಇಂಥ ರಸಜ್ಞತೆ, ಸೂಕ್ಷ್ಮದೃಷ್ಟಿಗಳಿಂದ ವರ್ಣನೆ ಮತ್ತು ವ್ಯಾಖ್ಯಾನಗಳು ಸ್ವಾರಸ್ಯವಾಗುತ್ತವೆ; ಸ್ವಾದುವಾಗುತ್ತವೆ. ಕನ್ನಡದಲ್ಲಿ ಕುವೆಂಪು ಅವರ ‘ಕಾವ್ಯವಿಹಾರ’, ತೀ. ನಂ. ಶ್ರೀಯವರ ‘ಕಾವ್ಯ ಸಮೀಕ್ಷೆ’, ಮಾಸ್ತಿಯವರ ‘ಆದಿಕವಿ ವಾಲ್ಮೀಕಿ’, ‘ಭಾರತ ತೀರ್ಥ’, ಈ ಪುಸ್ತಕಗಳು ಇಂಥ ವಿಮರ್ಶೆಯ ಮಾದರಿಗಳೆಂದು ಹೆಸರಿಸಬಹುದು.

--------------------------------------------------------------------------------

[1] J.M. Murray : The Problem of Style, p. 15

[2] G. Bosa : A Primer of Criticism, p. 60

[3] Helen Gardner : The Business of Criticism, p. 18

[4] J. Reeves : The Critical Sense, p. 13

[5] Hudson : Introduction to the Study of Literature, p. 267

[6] J. Reeves. The Critical Sense, p. 13

[7] ಕುವೆಂಪು : ಪಕ್ಷಿಕಾಶಿ, ಪು. ೧

[8] ಕುವೆಂಪು : ಪಕ್ಷಿಕಾಶಿ, ಪು. ೧

[9] ವಾಮನ ತನ್ನ “ಕಾವ್ಯಾಲಂಕಾರ ಸೂತ್ರ”ದಲ್ಲಿ (೧, ೨, – ೩) ಕವಿಗಳನ್ನು ಕುರಿತು ಈ ಮಾತನ್ನು ಹೇಳಿದ್ದಾನೆ. ಈ ಮಾತುಗಳ ವಿವರಣೆಗೆ ಆರ್. ನರಸಿಂಹಾಚಾರ್ಯರ History of Kannada Language,  ಪು. ೧೩೫ ನೋಡಿ.

[10] W.H. Auden : “By the prig, I mean the critic for whom no actual poem is good enough since the only one that would be is the poem he would like to write himself but cannot.” – Making, Knowing and Judging, p. 20-21

[11] ಮಾಸ್ತಿ ವೆಂಕಟೇಶ ಅಯ್ಯಂಗಾರ್ : ನವ್ಯ ಸಾಹಿತ್ಯ ನಿರ್ಮಾಣ. ಕಾವ್ಯಾಲಯ ಪ್ರಕಾಶನ – “ನವ್ಯ ಸಾಹಿತ್ಯದಲ್ಲಿ ನಿರೋಗ ವಿಮರ್ಶೆ”, ಪು. ೩೦-೩೧

[12] ಜಿ.ಪಿ. ರಾಜರತ್ನಂ : ರತ್ನನ ಪದಗಳು, ಪು. ೧೧

[13] ಅಜಿತನಾಥ ಪುರಾಣ, ೧-೧೯

[14] Hudson : Introduction to the Study of Literature, p. 287

[15] ಕುವೆಂಪು : ಕಾವ್ಯ ವಿಹಾರ, ಪು. ೮೩

[16] W.B. Worsfold : Judgement in Literature, p. 90

[17] J.M. Murray : The Problem of Style, p. 8

[18] ಮಾಸ್ತಿ ವೆಂಕಟೇಶ ಅಯ್ಯಂಗಾರ್. ನವ್ಯ ಸಾಹಿತ್ಯ ನಿರ್ಮಾಣ : ‘ನವ್ಯ ಸಾಹಿತ್ಯದಲ್ಲಿ ನಿರೋಗ ವಿಮರ್ಶೆ’ ಪು. ೨೯

[19] Edited by Dobson : Diary of Madame d’ Arbaly p. 183

[20] Hudson : Introduction to the Study of Literature p. 270

[21] Warren & Welleck : The Theory of Literature p. 263

[22] ಪ್ರತೀಯಮಾನಂ ಪುನರನ್ಯದೇವ
 ವಸ್ತ ಸ್ತಿ ವಾಣೀಷು ಮಹಾಕವೀನಾಮ್
 ಯತ್ತತ್ಪ್ರಸಿದ್ಧಾವಯವಾತಿರಿಕ್ತಂ
 ವಿಭಾತಿಲಾವಣ್ಯಮಿವಾಙ್ಗನಾಸು                                – ಧ್ವನ್ಯಾಲೋಕ. ಕಾರಿಕೆ ೪

[23] ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿಮರ್ಶೆ : ೧ ‘ಸಾಹಿತ್ಯದಲ್ಲಿ ವಿಮರ್ಶೆಯ ಸ್ಥಾನ’ ಪು. ೨,೩

[24] ಹಿಂದಿನ ಕವಿಗಳ ಕಾವ್ಯ ಪರಂಪರೆಯ ಒಂದು ವಿಶಿಷ್ಟ ಲಕ್ಷಣವಾಗಿರುವ ಸತ್ಕವಿಪ್ರಶಂಸೆ, ಕುಕವಿ ನಿಂದೆಯ ವಿಭಾಗದಲ್ಲಿ ಒಂದು ಬಗೆಯ ವಿಮರ್ಶೆ ಬೆಳೆದು ಬಂದಿರುವುದನ್ನು ನಾವು ಗುರುತಿಸಬಹುದು. ಕಾವ್ಯಾರಂಭ ಭಾಗಗಳಲ್ಲಿ ಎಲ್ಲ ಕವಿಗಳೂ, ಉತ್ತಮವಾದ ಕಾವ್ಯ ಯಾವುದು; ಉತ್ತಮವಲ್ಲದ ಕಾವ್ಯ ಯಾವುದು, ಯಾವ ಯಾವ ಗುಣಗಳಿಂದ ಕೃತಿ ಉತ್ತಮವಾಗುತ್ತದೆ, ಕಾವ್ಯಕ್ಕೆ ನಿಜವಾದ ಶ್ರೋತೃ ಯಾರು….. ಹೀಗೆ ಒಂದು ರೀತಿಯಲ್ಲಿ ಕವಿ-ಕಾವ್ಯ-ಸಹೃದಯ ದೃಷ್ಟಿಯಿಂದ ಕಾವ್ಯ ಮೀಮಾಂಸೆಯ ಒಂದು ಪರಂಪರೆಯೇ ಬಂದಿದೆ. ಕವಿಗಳ ಇಂಥ ಪ್ರಸ್ತಾವನೆಗಳ ಮೇಲೆ ಭಾರತೀಯ ಲಾಕ್ಷಣಿಕರ ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸಬಹುದಾದರೂ, ನಮ್ಮ ಕವಿಗಳೂ ಸ್ವತಂತ್ರವಾಗಿ ಆಲೋಚಿಸಿ, ಕವಿ-ಕಾವ್ಯ ವಿಮರ್ಶೆಯ ಪರವಾಗಿ ಕೆಲವು ಮಾತುಗಳನ್ನು ಹೇಳಬಲ್ಲವರಾಗಿದ್ದರು ಎಂಬುದು ತಿಳಿಯುತ್ತದೆ. ಆದರೆ ಈ ತಿಳಿವಿನಿಂದ ಅವರ ಉದ್ದೇಶ ಸತ್ಕಾವ್ಯ ನಿರ್ಮಾಣದ ಪರವಾಗಿದ್ದರೂ, ಅದರಿಂದ ಅವರವರ ಕೃತಿಗಳೆಲ್ಲಾ ಸತ್ಕಾವ್ಯಗಳೇ ಆಗಿವೆ ಎಂದು ಹೇಳಲಾಗುವುದಿಲ್ಲ. ಅದರಲ್ಲೂ ‘ಕುಕವಿ ನಿಂದೆ’ಯಲ್ಲಿ ಒಂದು ಕಡೆ ಕಾವ್ಯ ದೋಷಗಳು, ಅಂದು ಕವಿಗಳು ಯಾವ ಮನೋಭಾವದೊಂದಿಗೆ ಸೆಣಸಬೇಕಾಗಿ ಬಂತೆಂಬುದರ ಸ್ವಾರಸ್ಯವಾದ ವಿವರಣೆಗಳ ಜೊತೆಗೆ, ಒಂದು ರೀತಿಯ ವಿಡಂಬನ ಕಾವ್ಯ ಬೆಳೆದು ಬಂದಿದೆ ಎಂಬುದು ಸ್ವಾರಸ್ಯವಾದ ಸಂಗತಿ. ಒಟ್ಟಿನಲ್ಲಿ ಪ್ರಾಚೀನ ಕವಿಗಳ ಕಾವ್ಯ ಪ್ರಸ್ತಾವನೆಗಳಲ್ಲಿ ಪರೋಕ್ಷವಾದ ವಿಮರ್ಶೆಯ ದೃಷ್ಟಿಯನ್ನು ಗುರುತಿಸಬಹುದಾಗಿದೆ.

[25] S.L. Bethell : Essay on Literary Criticism. p. 20

[26] F.W. Roe : Carlyle : As a critic of Literature, p. 55

[27] ಅಲ್ಲೇ. p. 60
& Ml : �% P( New Roman”;mso-ascii-theme-font:minor-bidi;mso-hansi-font-family:”Times New Roman”; mso-hansi-theme-font:minor-bidi;mso-bidi-font-family:Tunga’>[27]     R. Sadasiva Iyer : A Hand Books of Literary Criticism, p. 45

[28] Hudson : Introduction to the Study of Literature, p. 267

[29] R. Sadasiva Iyer : A Hand Book of Literary Criticism, p. 12

blogger
delicious
digg
facebook
reddit
stumble
twitter
print
email
ಪುಸ್ತಕ: ಸಮಗ್ರ ಗದ್ಯ- 3
ಲೇಖಕರು: ರಾಷ್ಟ್ರಕವಿ ಡಾ|| ಜಿ ಎಸ್ ಶಿವರುದ್ರಪ್ಪ
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ