ಸೋಮವಾರ, ಜೂನ್ 15, 2015

ಅಧ್ಯಾಯ 20:ರೈತ ಚಳವಳಿ ಇತ್ತೀಚಿನ ಆಯಾಮಗಳು

ಅಧ್ಯಾಯ 20:ರೈತ ಚಳವಳಿ ಇತ್ತೀಚಿನ ಆಯಾಮಗಳು

ರೈತ ನೇರವಾಗಿ ಬೇಸಾಯದಲ್ಲಿ ತೊಡಗಿರುವವನು, ಕೃಷಿ ನಿರತನಾಗಿರುವವನು, ರೈತ ಎಂಬುದು ಇಂದಿನ ಸ್ಥೂಲಕಲ್ಪನೆ. ಸಾಂಪ್ರದಾಯಿಕ ಕಲ್ಪನೆಯೇ ಬೇರೆ. ಆ ಸೂತ್ರದ ರೀತಿ ಭೂಮಾಲೀಕರು ಭೂಕಂದಾಯ ತರುವ ಗೇಣಿ ಫಸಲಿನ ಮಾಲೀಕರು. ಇವರೆಲ್ಲ ರೈತಾಪಿ ವಲಯದವರೆ. ಆದರೆ ಅವರನ್ನು ನೇರವಾಗಿ ರೈತ (ಪ್ರತ್ಯಕ್ಷ ರೈತ) ಎನ್ನುವುದು ಕಷ್ಟವಾಗುತ್ತದೆ. ಸ್ವತಃ ಒಕ್ಕಲುತನದಲ್ಲಿಯೇ ಗೆಯ್ಮೆ ಮಾಡುವ ಬಿತ್ತಿ ಬೆಳೆ ತೆಗೆಯುವ ವ್ಯಕ್ತಿ ನಿಜವಾದ ರೈತನೆನಿಸುತ್ತಾನೆ. ಉತ್ತಿಸಿ, ಬಿತ್ತಿಸಿ, ಬೆಳೆಯನ್ನು ತಾನೆಲ್ಲೊ ಇದ್ದು ಕೊಂಡು ಪಡೆಯುವವನು ಪರೋಕ್ಷ ರೈತ ಇಲ್ಲವೆ ಅನುಭೋಗದಾರನೆನ್ನ ಬೇಕಾಗುತ್ತದೆ.
ರೈತರ ಚಳವಳಿ ಅಥವಾ ಚಳವಳಿ ಎನ್ನುವಲ್ಲಿ ನಿರ್ದಿಷ್ಟ ಗುರಿ, ಸಿದ್ಧಾಂತದ ಪ್ರಕರಣವಿದ್ದು, ಹೋರಾಟ ನಡೆಯುವುದಿರುತ್ತದೆ. ಅದರಲ್ಲಿ ರೈತ ಕಾಯಕ ಮಾಡುವ ವರೆಲ್ಲರಿಗೂ ಪಾಲುದಾರಿಕೆ ಇರಬಲ್ಲದು. ಇದು ಅಹಿಂಸಾತ್ಮಕವಾಗಿರಬಹುದು. ಹಿಂಸಾತ್ಮಕ ಪ್ರವೃತ್ತಿಗಳೂ ಸೇರಿಕೊಂಡು ಚಳವಳಿಯ ಅರ್ಥವನ್ನು ಹಾಳುಗೆಡುವಬಹುದು. ಅಹಿಂಸಾತ್ಮಕ ‘ಗಾಂಧೀಪ್ರಣೀತ’ ವಿಧಾನವನ್ನು ‘ರೈತ ಸತ್ಯಾಗ್ರಹ’ವೆನ್ನಬಹುದು. ಇದು ಪ್ರಜ್ಞೆಯನ್ನು ಕಾಡಿ ಸಲ್ಲಬೇಕಾದ ಸವಲತ್ತನ್ನು ಪಡೆದುಕೊಳ್ಳುವಂಥದಾಗಿರುತ್ತದೆ. ಚಳವಳಿಯ ಈ ಮಾರ್ಗದಲ್ಲಿಯೂ ‘ಗುರಿ’ ಇರುತ್ತದೆ. ಒಟ್ಟಾರೆ ಧ್ಯೇಯ, ಶ್ರಮ, ಪ್ರಾಮಾಣಿಕತೆ ನಿಷ್ಠೆಯಿಂದ ನಿರಂತರ ಅನುಸರಣೆಯೇ ಚಳವಳಿಯಲ್ಲಿರುತ್ತದೆ. ರೈತ ದಂಗೆ ಬಂಡಾಯದಲ್ಲಿ ಸೈದ್ಧಾಂತಿಕ ಹಿನ್ನೆಲೆ ನಿರಂತರವಿರಬೇಕೆಂಬುದಿಲ್ಲ. ತತ್ಕಾಲದ ಸಾಮಾನ್ಯ ಪ್ರೇರಣೆ ಅಥವಾ ಕಾರಣವೊಂದು ಸಿಕ್ಕರೆ ಸಾಕು. ಶೋಷಣೆ ವಿರುದ್ಧ ಪ್ರದರ್ಶನ, ಪ್ರತಿಭಟನೆ, ಬಹಿಷ್ಕಾರ, ಲೂಟಿ, ಹಿಂಸಾಚಾರ ಈ ಎಲ್ಲವೂ ಇಲ್ಲಿ ಸೇರಿಕೊಳ್ಳಬಹುದು. ಕೋಪ ತೀರಿದರೆ ಬಂಡಾಯ ನಿಂತು ಹೋಗಿ ಬಿಡಬಹುದು. ಅಂದರೆ ತಕ್ಷಣದ ಉದ್ದೇಶಕ್ಕೆ ಶಮನ ಹಾದಿ ತುಸು ಕಂಡರೂ ಸಾಕು ದಂಗೆಯ ರಭಸ, ಇಳಿಮುಖವಾಗಬಹುದು. ಬೆಲೆಗಳ ಏರಿಳಿತಗಳಿಂದ ಘಾಸಿಗೊಂಡ ರೈತರ ಮನಸ್ಸು, ಬೆಂಬಲ ಬೆಲೆ, ಸಾಲದ ಸವಲತ್ತು, ಬಡ್ಡಿ ಮನ್ನಾ, ಸಬ್ಸಿಡಿ, ಇತ್ಯಾದಿಗಳು ಒದಗಿದ ಸಂದರ್ಭದಲ್ಲಿ ಶಾಂತಗೊಳ್ಳಬಹುದು. ಆದರೆ ಚಳವಳಿ, ಸಾರ್ವಕಾಲಿಕ ಉದ್ದೇಶದೊಡನೆ, ರೈತರ ಸಮಸ್ಯೆಗಳ ಸಂದರ್ಭಗಳಲ್ಲಿ ಕಾರ್ಯಶೀಲವಾಗುತ್ತದೆ.
ಕರ್ನಾಟಕದಲ್ಲಿ  ಕರ ನಿರಾಕರಣೆಯೂ ಚಳವಳಿಯ ಭಾಗವಾಗಿ ಮೂಡಿ ಬಂದಿದೆ. 12ನೆಯ ಶತಮಾನದಲ್ಲಿ ಒಕ್ಕಲಿಗ ಮುದ್ದಯ್ಯನು, ರಾಜನು ಹಾಕಿದ ಹೆಚ್ಚಿನ ಕರಭಾರವನ್ನು ಪ್ರತಿಭಟಿಸಿದ ಕರ ನಿರಾಕರಣೆಯ 12ನೆಯ ಶತಮಾನದ ಮೊದಲ ರೈತನಾಗಿದ್ದಾನೆ. ರಾಜನ ಸೇವಕರ ದಬ್ಬಾಳಿಕೆಗೆ ಮಣಿಯದೆ ರಾಜನ ಎದುರೇ ಹೋಗಿ ಸಕಾರಣವಾಗಿ, ದಿಟ್ಟವಾಗಿ, ಕರ ನಿರಾಕರಿಸುತ್ತಾನೆ.
ಅಯ್ಯ ಮೂರಡಿ ಮಣ್ಣಿಗೆ ಆರು ಹೊನ್ನ ತೆತ್ತು ನಾನೊಕ್ಕಲು ನೀನೊಡೆಯ ಮೀರಿಕೊಂಡಿಹೆನೆಂದಡೆ ಮುನ್ನವ ಸಿದ್ಧಾಯ ಸೆರೆಗೆ ನಾನೊಳಗು
ಎಂದು ಹೇಳುವ ಮೂಲಕ ರಾಜನ ಅನ್ಯಾಯದ ವಸೂಲಿಯನ್ನು ಖಂಡಿಸಿದ್ದಾನೆ. ಸೆರೆಗೂ ಸಿದ್ಧ ಎಂದಿದ್ದಾನೆ. ಇದು ಒಂದು ಗುರಿಯ ಅಳವಿನಲ್ಲಿ ಮಾಡಿದ ‘ಸತ್ಯಾಗ್ರಹ’ದ ಬಗೆ ಆಗಿದೆ.
ಜಗತ್ತಿನಲ್ಲಿ ಮಾರ್ಕ್ಸ್, ಲೆನಿನ್, ಮಾವೋ ಸಿದ್ಧಾಂತಗಳ ಹಿನ್ನೆಲೆಯಲ್ಲಿ ರೈತ ಕಾರ್ಮಿಕ ಹಾಗೂ ಭೂಮಾಲೀಕರ ನಡುವಣ ಸಂಘರ್ಷಗಳು ಬಂಡಾಯ, ಕ್ರಾಂತಿ ಎಂಬ ಹೆಸರುಗಳಲ್ಲಿ  ವ್ಯಕ್ತಗೊಂಡವು. ಭಾರತದಲ್ಲಿ ಬ್ರಿಟಿಷರ ಮುನ್ನವೂ ರೈತ ಹೋರಾಟಗಳು ನಡೆದದ್ದುಂಟು. ಜಾಟ್ ರೈತರು, ರೈತ ಸತ್ನಾಮಿಗಳು, ಆದಿವಾಸಿ ಸಂತಾಲರು, ನೀಲಿ ಬೆಳೆಗಾರರು, ಕುಣಬಿಗಳು, ಕೇರಳದ ಮಾಪಿಳ್ಳೆ ಮುಂತಾದವರ ದಂಗೆಗಳು ನಡೆದವು. ಟೆನೆನ್ಸಿ ಚಳವಳಿ, ಗುಜರಾತಿನ ಕರೊನಿರಾಕರಣ ಚಳವಳಿ(ಬಾರ್ದೋಲಿ), ವಾರಲಿ ಆದಿವಾಸಿ ರೈತರ ಹೋರಾಟ, ಬಂಗಾಲದ ತೇಭಾಗ ಚಳವಳಿ, ಶ್ರೀ ಕಾಕುಳಂ ನಕ್ಸಲೀಯ ಹೋರಾಟ ಇತ್ಯಾದಿಗಳು ರೈತಪರ ಹೋರಾಟಗಳೆ ಆಗಿದ್ದವು.
ಸ್ವಾತಂತ್ರ್ಯ ಪೂರ್ವದ ಕರ್ನಾಟಕದ ರೈತ ಚಳವಳಿಗಳು
ಭಾರತದ ರೈತ ಹೋರಾಟಗಳನ್ನು ಒಟ್ಟಾರೆಯಾಗಿ ನೋಡಲಿ, ಕರ್ನಾಟಕದ ರೈತ ಹೋರಾಟಗಳನ್ನು ಪ್ರಾದೇಶಿಕವಾಗಿ ನೋಡಿರಲಿ ಇವೆಲ್ಲಕ್ಕೂ ಹೋರಾಟಗಳ ಚರಿತ್ರೆಯೊಂದು ಪ್ರೇರಕ ಹಿನ್ನೆಲೆಯಾಗಿರುವುದು ಕಾಣುತ್ತದೆ. ಅಂದರೆ ಹೋರಾಟಗಳು ಪ್ರಜ್ಞಾ ಪರಂಪರೆಯ ನೆಲಗಟ್ಟನ್ನು ಒದಗಿಸುತ್ತದೆ. ರೈತ ಶೋಷಣೆಯ ವಿರುದ್ಧ ವರ್ತಮಾನದ ಚಳವಳಿಗಳನ್ನಷ್ಟೆ ಸಡಗರಿಸಿ ಹೇಳಿದರೆ, ಪಂಥೀಯ ದೋಷವು ಅದಕ್ಕೆ ತಟ್ಟಬಹುದು. ಸಮನ್ವಯ ನೆಲೆ ಕುಸಿಯಬಹುದು. ಅಂತೇ ಸಂದುಹೋದ ಸದ್ಫಲಿತ ಚಳವಳಿಯಿಂದಲೂ ಬೇಕಾದ್ದನ್ನು ಗ್ರಹಿಸುವದು ಸಾಂಸ್ಕೃತಿಕ ಜಾಯಮಾನವಾಗಬೇಕು. ಕರ್ನಾಟಕದ ರೈತ ಹೋರಾಟಗಳು ಭಾರತದ ರೈತ ಹೋರಾಟಗಳಿಂದ ಪ್ರಭಾವಿತವೆಂದರೆ ಅದು ಆಧುನಿಕ ಹೋರಾಟಗಳ ದೃಷ್ಟಿಯಿಂದ ಸರಿಹೋದೀತು. ರೈತನ ಶಕ್ತಿ ಸ್ಥಾನವನ್ನು ಭಾರತೀಯ ಶಕ್ತಿಕೂಟದಲ್ಲಿ ಗಮನಿಸಿದರೆ ಶೋಷಣ ಶಕ್ತಿಕೂಟವಾದ ಜಮೀನುದಾರ ಸಾಹುಕಾರ ಹಾಗೂ ಆಳುವ ವರ್ಗದ ಶೋಷಣೇ ವಿರುದ್ಧ ಸಂಘಟಿತರಾಗುವುದು, ಆಗ ನಡೆಸುವ ಪ್ರಗತಿಪರ ಹೋರಾಟದ ನೆಲೆಯೇ ರೈತ ಶಕ್ತಿಯ ನೆಲೆ1 ಎಂದು ಹೇಳಿರುವು ದುಂಟು. ಇದನ್ನು ಆಧುನಿಕ ಪರಿಕಲ್ಪನೆಯಲ್ಲಿ ವಿಸ್ತಾರಗೊಂಡ ರೈತರ ಚಳವಳಿಯ ಒಂದು ತಾತ್ವಿಕ ನೆಲೆ ಎನ್ನಬಹುದು. ಕಾರಣ ಅಂದಿನ ಒಡೆಯ-ರೈತ ಇಂದಿನ ಒಡೆಯ-ರೈತ ಇವರ ಕುರಿತ ಪರಿಕಲ್ಪನೆಗಳನ್ನು ಆಯಾ ವರ್ತಮಾನದ ಸಾಂಸ್ಕೃತಿಕ ನಿಲುವಿನ ಮೂಲಕ ಗ್ರಹಿಸಬೇಕಾಗುತ್ತದೆ.
ಇನ್ನು ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿ ಕಂದಾಯ ಹೆಚ್ಚಳದ ನಿಬಂಧನೆ, ಹೊಸ ತೆರಿಗೆಗಳ ಕಾರಣ ನಡೆದ ದಿಟ್ಟ ಮಾತಿನ ರೈತರ ಚಳವಳಿ2, ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಕಂದಾಯ ನಿಷ್ಕರ್ಷೆಗೆ ಬಳಸಿದ ಕಾಣಿಕೆ ಪದ್ಧತಿ, ಅಮಲ್ದಾರರ ಕಿರುಕುಳ ವಸೂಲಿ ವಿಧಾನ3 ಇತ್ಯಾದಿಗಳಿಂದಾಗಿ ನಡೆದ ರೈತ ಚಳವಳಿ ಅಧಿಕಾರ ಶಾಹಿಯ ಕುತಂತ್ರಗಳಿಗೆ ಎದುರು ನಿಂತ ತೀವ್ರ ಪ್ರತಿಭಟನೆ ಆಗಿತ್ತು. ಸಂಗೊಳ್ಳಿರಾಯಣ್ಣನ ಬಂಡಾಯವೂ ರೈತರ ಸುಲಿಗೆ ಮಾಡಿದ ಕುಲಕರ್ಣಿ ವಿರುದ್ಧವಾಗಿ ಆರಂಭವಾದದ್ದು, ರೈತ ಬಲವೆಲ್ಲ ಸೈನ್ಯ ಬಲವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಕಸುವು ನೀಡಿದ ಆಂಗ್ಲರೆದುರಿನ ಬಂಡಾಯವಾಗಿತ್ತು.4 ಧಾನ್ಯ ರೂಪದ ಬದಲು ಹಣದ ರೂಪದಲ್ಲಿ ರೈತರು ಭೂಕಂದಾಯ ನೀಡಬೇಕೆಂದು ಆಂಗ್ಲ ಕಲೆಕ್ಟರ್ ಮಾಡಿದ ಒತ್ತಾಯದ ಕಿರುಕುಳಗಳ ಕಾರಣ ಕೊಡಗು ಮತ್ತು ಅಮರಸುಳ್ಯ-ಬಂಡಾಯ ಹುಟ್ಟಿಕೊಂಡಿತು(1836-37). ಕನ್ನಡ ಜಿಲ್ಲೆಯ ಜಂಗಲ್ ಸವಲತ್ತು ಹೋರಾಟ(1890)ದಲ್ಲಿ ಕರ ನಿರಾಕರಣೆ5 ಉತ್ತರ ಕನ್ನಡ ಜಿಲ್ಲೆಯ ವನದುಃಖ ವಿರೋಧಿ ಚಳವಳಿ ಹಾಗೂ ಹುಲಬನ್ನಿ-ಕರನಿರಾಕರಣಾ (1930) ಚಳಿವಳಿಗಳಿಗೆ ಅರಣ್ಯ ಇಲಾಖೆಯ ಕಿರುಕುಳ ಹಾಗೂ ಭೂಕಂದಾಯ ವಸೂಲಿಗೆ ಜಪ್ತಿ ಕ್ರಮದ ಬಗೆಯೆ6 ಕಾರಣವಾಗಿದ್ದುವು. ಹಿರೇಕೆರೂರಿನಲ್ಲಿ ಶಿರಸಿ-ಸಿದ್ಧಾಪುರ ತಾಲೂಕಿನಲ್ಲಿ ಬೆಳೆ ಹಾನಿಕಾರಣ ಕಂಗಾಲಾದ ರೈತರ (ಆರ್ಥಿಕ ಕಾರಣ) ಕರ ನಿರಾಕರಣ ಚಳವಳಿ(1931)7  ಇದಕ್ಕೆ  ರೈತ ಸಂಘಟನೆಗಳು ಕಿಸಾನ್ ಸಭಾದ ರೂಪದಲ್ಲಿ  ಚಳವಳಿಯನ್ನು ಒದಗಿಸಿದವು. ಇಂಥ ಹೋರಾಟಗಳು ಮೈಸೂರು ಪ್ರದೇಶದಲ್ಲಿ ಕರಾವಳಿ ಪ್ರದೇಶ, ಶಿವಮೊಗ್ಗ, ಕೋಲಾರ ಮುಂತಾದ ಪ್ರದೇಶಗಳಲ್ಲಿ ನಡೆದವು, ಫಲವಾಗಿ ಮೈಸೂರು ಪ್ರಜಾಪ್ರತಿನಿಧಿ ಸಭಾಧಿವೇಶನದಲ್ಲಿ (ಜೂನ್ 1931) ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಕಂದಾಯ ಮಾಫಿ ಹಾಗೂ ಕಂದಾಯ ಕಂತುಗಳ ಹೆಚ್ಚಳದ ಕುರಿತು ಚರ್ಚಿಸಲಾಯಿತು. ಅಂದರೆ ರೈತರ ದೂರು ದುಮ್ಮಾನಗಳಿಗೆ ಸರ್ಕಾರವು ಎಚ್ಚರ ಗೊಂಡು ಸ್ಪಂದಿಸಿದ ಬಗೆ ಈ ಅಧಿವೇಶನದಲ್ಲಿ ಕಂಡುಬರುತ್ತದೆ.8
1931-32ರ ಇರ್ವಿನ್ ನಾಲಾ (ಈಗಿನ ವಿಶ್ವೇಶ್ವರಯ್ಯ ನಾಲಾ) ರೈತ ಚಳವಳಿ ಎಚ್.ಕೆ.ವೀರಣ್ಣಗೌಡ, ಎಚ್.ಕೆ.ಪುಟ್ಟಣ್ಣನವರ ನೇತೃತ್ವದಲ್ಲಿ ಫಲಪ್ರದವಾದ ಬೇಸಾಯ ಗಾರರ ಚಳವಳಿ ಎಂದು9 ಕರೆಸಿಕೊಂಡಿದೆ. ಕಾರಣವೆಂದರೆ ರೈತರು ಕೃಷ್ಣರಾಜಸಾಗರದಿಂದ ಒದಗುವ ನೀರನ್ನು ತಮ್ಮ ಭೂಮಿಯಲ್ಲಿ ವರ್ಷ ಪರ್ಯಾಯ ಬೆಳೆ ಬೆಳೆವ ಪದ್ಧತಿಯಾದ ಬ್ಲಾಕ್ಸಿಸ್ಟಂ ಕೃಷಿ ಅನುಸರಣೆ ಮಾಡಿ ಬೇಸಾಯ ಮಾಡಬೇಕು. ನೀರಾವರಿ ಜಮೀನುಗಳಿಗೆ ಕೊಡಬೇಕಾದ ಕಂದಾಯ ಅಣೆಕಟ್ಟು ನೀರಾವರಿ ಸೌಲಭ್ಯ ಒದಗಿಸಿದ ಕಾರಣ ಕೊಡಬೇಕಾದ ಕಾಂಟ್ರಿಬ್ಯೂಷನ್ ಹಣ ಅದನ್ನು ಕೊಡಲು ತಡಮಾಡಿದರೆ, ನೀಡಬೇಕಾದ ಬಡ್ಡಿ ಇತ್ಯಾದಿ ಬಗ್ಗೆ ಆದ ಸರ್ಕಾರಿ ಹುಕುಂ ರೈತರಿಗೆ ತ್ರಾಸದಾಯಕವೆನಿಸಿತ್ತು. ಶಾಸಕಾಂಗ ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದರೂ ಸಮರ್ಪಕ ಪರಿಹಾರ ದೊರೆಯಲ್ಲಿಲ್ಲವಾದ ಕಾರಣ ಈ ರೈತ ಚಳವಳಿ ರೂಪುಗೊಂಡಿತು. ಈ ಇರ್ವಿನ್ ನಾಲಾ ಪ್ರದೇಶದ ರೈತ ಚಳವಳಿಯು ನಾಲ್ಕುಸಾವಿರ ರೈತರು ಪಾಲ್ಗೊಂಡು ಮದ್ದೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ ದಿವಾನರನ್ನು ಬೇಟಿ ಮಾಡಿ ಪರಿಹಾರ ಪಡೆದ ರೈತರ ಶಿಸ್ತಿನ ಚಳವಳಿ ಆಗಿತ್ತು. ಇರ್ವಿನ್ ನಾಲಾ ಚಳವಳಿಯ ಕುರಿತಂತೆ ಮೈಸೂರು ಪ್ರಜಾಪ್ರತಿನಿಧಿ ಸಭಾಧಿವೇಶನದಲ್ಲಿ ನಡೆದ ಚರ್ಚೆಗಳು10 ಪರಿಹಾರಕ್ಕೆ ಕಾರಣವಾಗಿದ್ದವು. 1931-32ರಿಂದ ನಡೆದ ಚಳವಳಿಯ ಪ್ರತಿಧ್ವನಿ 1934ರವರೆಗೂ ಕೇಳಿಬರುತ್ತಿದ್ದುದಕ್ಕೆ ಅದು ಬೀರಿದ ಪ್ರಭಾವವೇ ಕಾರಣವಾಗಿತ್ತು. ಈ ಚಳವಳಿಯೊಂದು ಸ್ವಾತಂತ್ರ್ಯ ಪೂರ್ವದ ಮೈಸೂರು ಸಂಸ್ಥಾನದ ಮುಖ್ಯವಾದ ಶಿಸ್ತಿನ ರೈತ ಚಳವಳಿ ಆಗಿತ್ತು.
ಕ್ರಿ.ಶ.1936ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷದ ಅಂಗ ಸಂಸ್ಥೆಯಾಗಿ ಕಿಸಾನ್ ಸಭಾ ಹುಟ್ಟಿಕೊಂಡಿತು. ಭಾರತ್ ಕಿಸಾನ್ ಕಾಂಗ್ರೆಸ್ ಕೂಡ ಇತ್ತು. 1937ರಲ್ಲಿ ಇವೆರಡರ ನಡುವೆ ಅಭಿಪ್ರಾಯ ಭೇದ ಕಾಣಿಸಿಕೊಂಡರೂ ಇವು ಧಾನ್ಯ ಧಾರಣೆಗಳ ಕುಸಿತ, ತೆರಿಗೆ ಹೆಚ್ಚಳ, ಸಾಲದ ಕಿರುಕುಳ ಇತ್ಯಾದಿಗಳಿಂದಾಗಿ ರೈತ ಹೋರಾಟಗಳು ವ್ಯಾಪಕವಾಗಿ ನಡೆಯಲು ಬೆಂಬಲ ಕೊಟ್ಟವು.11 1937­-39ರ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಶ್ರೀ ಎಸ್.ನಿಜಲಿಂಗಪ್ಪನವರ ನೇತೃತ್ವದಲ್ಲಿ ಹಿರಿಯೂರಿನ ವಾಣಿವಿಲಾಸ ಸಾಗರ ಪ್ರದೇಶದ ರೈತರಿಗೆ ಕೃಷಿ ಬ್ಯಾಂಕ್ ಸೌಲಭ್ಯ, ಚಳ್ಳಕೆರೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಸ್ಥಾಪನೆ ಸಂಬಂಧ ನಡೆದ ರೈತ ಸಮ್ಮೇಳನಗಳು ರೈತ ಜಾಗೃತಿಗೆ ಕಾರಣವಾದುವು. 1939-42ರ ಈಸೂರು ಗ್ರಾಮದ ರೈತ ಚಳವಳಿಯು, ಉತ್ತರ ಕನ್ನಡ ಜಿಲ್ಲೆ, ಧಾರವಾಡ ಜಿಲ್ಲೆ, ಹಿರೆಕೆರೂರು ತಾಲೂಕು ರೈತರ ಕರ ನಿರಾಕರಣ ಚಳವಳಿಗೆ ಬೆಂಬಲ ತೋರಿದ ಚಳವಳಿ ಆಗಿತ್ತು. 1939ರ ರಾಮದುರ್ಗದ ಕರ ನಿರಾಕರಣ ಚಳವಳಿಯು ಸಂಸ್ಥಾನಿಕರ ಕಾರಭಾರಿಯ ಕಿರುಕುಳದ ದಬ್ಬಾಳಿಕೆ ಎದುರು ಕರಬಂದಿ ಚಳವಳಿ (ಕರನಿರಾಕರಣ) ಮೂಲಕ ಹೋರಾಡಿ ದುರಂತದ ನಡುವೆಯೂ ಸಂಸ್ಥಾನಿಕರನ್ನು ಮಣಿಸಿದ ಚಳವಳಿ ಆಗಿದೆ.12 ಇದಕ್ಕೆ ಸ್ವಾತಂತ್ರ್ಯ ಹೋರಾಟದ ಸ್ಪರ್ಶವೂ ಇತ್ತು.
ಸ್ವಾತಂತ್ರ್ಯೋತ್ತರ ಕಾಲದ ರೈತ ಚಳವಳಿಗಳು
ಸ್ವಾತಂತ್ರ್ಯೋತ್ತರ ಕಾಲದ ರೈತ ಚಳವಳಿಗಳಲ್ಲಿ ಮೊದಲ ಗಮನಾರ್ಹ ಚಳವಳಿಯು ಶಿವಮೊಗ್ಗ ಜಿಲ್ಲೆಯ ಕಾಗೋಡು ರೈತ ಚಳವಳಿ (1950-51) ಆಗಿದೆ. ಕಾಗೋಡಿನ ಗೇಣಿದಾರ ರೈತರು ಆ ಹಳ್ಳಿಯ ಜಮೀನುದಾರರ ಹಾಗೂ ಸರ್ಕಾರದ ವಿರುದ್ಧ ಒಂದು ವರ್ಷ ಕಾಲ ಸಂಘಟಿತ ಹೋರಾಟ ಮಾಡಿದ ಚಳವಳಿ ಇದು. ಸೋಷಲಿಸ್ಟ್ ನಾಯಕ ರಾಮಮನೋಹರ ಲೋಹಿಯಾ ಅವರೂ ಕೂಡ ಕಾಗೋಡಿಗೆ ಬಂದು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಶಾಂತವೇರಿ ಗೋಪಾಲಗೌಡರು ಸಕ್ರಿಯವಾಗಿ ಚಳವಳಿಗೆ ಸ್ಫೂರ್ತಿ ತುಂಬಿದ್ದರು. ಈ ಚಳವಳಿಯ ಮೂಲ ಕಾರಣವೆಂದರೆ ಗೇಣಿ ಭತ್ತವನ್ನು ‘ಕೊಳಗ’ ಅಳತೆ ಪ್ರಮಾಣದಲ್ಲಿ ಅಳೆಯುವ ಸಂಬಂಧದಲ್ಲಿ ಸಂಘರ್ಷ ಉಂಟಾದುದೇ ಆಗಿತ್ತು. ಭೂ ಮಾಲಿಕ ದಣಿಗಳಲ್ಲಿ ಕೊಳಗಕ್ಕೆ ಮೂರು ಸೇರು ಎಂಬ ರೂಢಿಗೆ ಬದಲಾಗಿ ಗೇಣಿ ಅಳೆಸಿಕೊಳ್ಳುವ ಕೊಳಗವು ಮೂರೂವರೆ ಸೇರು ಅಥವಾ ನಾಲ್ಕು ಸೇರಿನದು ಆಗಿತ್ತು. ಅವರು ಹೊರಗೆ ಕೊಡಲು ಅಳೆಯುವ ಕೊಳಗ ಮಾತ್ರ ಮೂರು ಸೇರಿನದಾಗಿತ್ತು. ಸರಕಾರದ ಕೊಳಗದ ಲೆಕ್ಕವೂ ಕೂಡ ಹೀಗೆಯೆ ಮೂರು ಸೇರಿನದಾಗಿ ವ್ಯತ್ಯಾಸ ಎದ್ದು ಕಾಣುತ್ತಿತ್ತು. ಎರಡನೆಯ ಕಾರಣವಾಗಿ ದೇಗುಲ ಸಂಬಂಧದ ಉತ್ಸವ ಕಾಣಿಕೆ ‘ಪರಾಳ’ವನ್ನು ಗೇಣಿ ಒಕ್ಕಲುಗಳಾದ ದೀವರು ನೀಡಿದ್ದರೂ ವಸೂಲಿಯ ನಂತರ ಅವರ ಹೆಸರೇ ಆ ಸಂಬಂಧವಾಗಿ ನಮೂದುಗೊಳ್ಳದೇ ಇದ್ದದ್ದೂ ಅಂಥ ಸಾಮಾಜಿಕ ಮೇಲಾಳಿಕೆ. ಭೇದದ ವಿರುದ್ಧ ಸೆಟೆದೆದ್ದ ಕಿಚ್ಚೂ ಸಂಘರ್ಷಕ್ಕೆ ಎಡೆ ಮಾಡಿತ್ತು. ಕಾಗೋಡಿನ ದೀವರು ಮತ್ತು ಧಣಿಗಳ ಮುಖಾಮುಖಿಯಲ್ಲಿ ಶುದ್ಧ ಆರ್ಥಿಕ ಪ್ರಶ್ನೆ ಹಾಗೂ ಸಾಮಾಜಿಕ ತಾರತಮ್ಯ ಅಡಕವಾಗಿತ್ತು.
ಕಾಗೋಡಿನ ರೈತರದು ಆರ್ಥಿಕ ಬೇಡಿಕೆಯ ಹೋರಾಟವೆಂದರೂ ತಮ್ಮ ಬದುಕಿನ ಮುಖ್ಯ ಆಸರೆಯಾಗಿದ್ದ ಗೇಣಿ ಜಮೀನನ್ನೆ ಪಣವಾಗಿಟ್ಟು ಹೋರಾಟಕ್ಕೆ ಬಂದದ್ದು ಆತ್ಮಶಕ್ತಿಯ ಪ್ರದರ್ಶನವಾಗಿತ್ತು. ನೆರೆಯ ಹಳ್ಳಿಯ ದೀವರೂ ಈ ಹೋರಾಟಕ್ಕೆ ಬಂದದ್ದು ಕಾಗೋಡು ರೈತರ ಆರ್ಥಿಕ ಮೂಲದ ಹೋರಾಟಕ್ಕೆ ಸಾಮಾಜಿಕ ಆಯಾಮವನ್ನು ಕೊಟ್ಟಂಥದ್ದಾಗಿತ್ತು. ಆದರೆ ಧಣಿ ಒಕ್ಕಲಿನ ಸಂಬಂಧದಲ್ಲಿ ತೇಪೆ ಹಚ್ಚುವ ಸುಧಾರಣೆಯನ್ನು ಈ ಹೋರಾಟವು ಗಮನಕ್ಕಿರಿಸಿಕೊಂಡಿತೇ ವಿನಾ ಆ ಪಾಳೇಗಾರಿಕೆ ಅವಶೇಷವು ಉಳಿಯದಂತೆ ಮಾಡಲು ಆ ಕಾಲದಲ್ಲಿ  ಅದಕ್ಕೆ ಸಾಧ್ಯವಾಗಲಿಲ್ಲ ಎಂಬ ಅಭಿಪ್ರಾಯವನ್ನು ಜಿ. ರಾಜಶೇಖರ್ ಅವರು ತಮ್ಮ ಕೃತಿಯಲ್ಲಿ ಮಂಡಿಸಿದ್ದಾರೆ.13 ಈ ಚಳವಳಿ ಗೇಣಿದಾರರಿಗೆ ಪೂರ್ಣ ಫಲ ತರದಿದ್ದರೂ 1954, 1961 ಮತ್ತು 1974ರ ಭೂಸುಧಾರಣಾ ಕಾನೂನುಗಳನ್ನು ಈ ಗೇಣಿದಾರರ ಚಳವಳಿಯ ಹಿನ್ನೆಲೆಯನ್ನು ಲಕ್ಷ್ಯದಲ್ಲಿರಿಸಿಕೊಂಡು ತರಲಾಯಿತು. ಕಾಗೋಡು ಚಳವಳಿ ಸಂಬಂಧದ ವಿಧಾನಸಭಾ ನಡವಳಿಕೆಗಳು 1951-52ರವರೆಗೂ ನಡೆದು ಗೇಣಿದಾರರ ಪರ ಚರ್ಚೆಗಳು ಆದವು14 ಇನಾಂ ರದ್ಧತಿ, ಭೂ ಸುಧಾರಣೆ, ಲೆವಿ ಸಂಕಷ್ಟಗಳ ಬಗ್ಗೆಯೂ ಚರ್ಚೆಗಳು ನಡೆದವು.
ಏಕೀಕರಣ ಪೂರ್ವ ರೈತ ಚಳವಳಿಗಳಲ್ಲಿ ಧಣಿ ಮತ್ತು ಒಕ್ಕಲು ಸಂಬಂಧಗಳು ಭಾವನಾತ್ಮಕ ಸಂಬಂಧಗಳನ್ನು ತೀರ ಕಳಚಿಕೊಂಡಿದ್ದುವು ಎನ್ನುವಂತಿಲ್ಲ. ಕಿಸಾನ್ಸಭಾ ಹಾಗೂ ಪ್ರತ್ಯೇಕ ರೈತ ಸಂಘಟನೆಗಳು ರೈತರಲ್ಲಿ ರಾಜಕೀಯ ಪ್ರಜ್ಞೆ, ಹಕ್ಕಿನ ಪ್ರಜ್ಞೆಗಳನ್ನು ಎಚ್ಚರಗೊಳಿಸುವಲ್ಲಿ ಯಶಸ್ವಿಯಾದರೂ ಅದು ಸಂಪೂರ್ಣವಾಗಿ ಬೇರುಗೊಳ್ಳಲಿಲ್ಲ. ಏಕೀಕರಣೋತ್ತರ ಚಳವಳಿಗಳ ತೀವ್ರತೆ, ಭರಾಟೆ, ಖಾರವಂತಿಕೆ, ಪರಿಹಾರದ ಹಕ್ಕೊತ್ತಾಯ ಗಳಿಗೆ ಏಕೀಕರಣ ಪೂರ್ವ ಚಳವಳಿಗಳು ತಾವು ಅನುಭವಿಸಿದ ಸೋಲು, ಪಡೆದ ಗೆಲವು ಗಳನ್ನು ಮುಂದಿಟ್ಟು ಅವುಗಳಿಗೆ ಸ್ವಯಂ ಭೂವೇದಿಕೆಯನ್ನು ನಿರ್ಮಿಸಿಕೊಳ್ಳಲು ಒತ್ತಾಸೆಯಾದುವು, ಜೊತೆಗೆ ಜಾಗತಿಕ ಜಗತ್ತಿನ ಸ್ಪರ್ಧಾ ಆಯಾಮಗಳೂ ಪ್ರೇರಣೆಯಾದುವು ಎಂಬುದನ್ನು ಮರೆಯುವಂತಿಲ್ಲ. ಏಕೀಕರಣದ ಸಂಘಟನೆಗಳಿಗೂ ಈ ಸಮಯದ ರೈತ ಚಳವಳಿಗಳು ಸಾಕಷ್ಟು ನೆರವಾಗುತ್ತ ರೈತ ಸಂಘಟನೆಯ ನೆಲೆಯೂ ವಿಸ್ತರಿಸಿತೆನ್ನಬೇಕು.
ಕರ್ನಾಟಕ ಏಕೀಕರಣೋತ್ತರ ರೈತ ಚಳವಳಿಗಳು (1959-2006)
ಭೂಸುಧಾರಣೆಯ ಮಹತ್ವದ ಮಜಲಿನ ವಿಕಾಸಕ್ಕೆ ಕಾಗೋಡು ರೈತ ಚಳವಳಿ ಒಂದು ಸನ್ನೆಗೋಲು ಆಗಿ ಬಂದಿತು. ಗೇಣಿ ಶಾಸನ, ಗೇಣಿ ಹಕ್ಕು, ಭೂ ಸುಧಾರಣೆ, ಇನಾಂ ರದ್ದತಿ ಕುರಿತ ಮಸೂದೆ ಹಾಗೂ ತಿದ್ದುಪಡಿಗಳು, ಈ ಸಂಬಂಧದ ಚರ್ಚೆಗಳು ನಮ್ಮ ಶಾಸನ ಸಭೆಗಳಲ್ಲಿ 1953ರಿಂದ 1955ರವರೆಗೆ ನಡೆದವು. ಆ ಚರ್ಚೆಗಳು ಕೃಷಿ ಬದುಕಿನ ವಿವಿಧ ಆಯಾಮಗಳತ್ತ ತೀವ್ರಗಮನ ಹರಿಸಿವೆ. ಸಲಹೆಗಳೂ ಒದಗಿವೆ. ಆ ಸಂಬಂಧ ಒಪ್ಪಿದ ವರದಿಗಳೂ ವ್ಯಾಪಕ ವಿಮರ್ಶೆಗೊಳಗಾಗಿವೆ. 29.2.1065ರ ವಿಧಾನ ಸಭಾಧಿವೇಶನದಲ್ಲಿ15 ಮೈಸೂರು ಗೇಣಿ ಕಾನೂನುಗಳ ತಿದ್ದುಪಡಿ ವಿಧೇಯಕ 1965 ಅನ್ನು ಕಂದಾಯ ಸಚಿವ ಎಂ.ವಿ.ಕೃಷ್ಣಪ್ಪ ಅವರು ನಿಲುವಳಿ ಸೂಚನೆ ಮಂಡಿಸುತ್ತ ವಿವರಣೆ ನೀಡಿದರು. ಎಸ್.ಗೋಪಾಲಗೌಡರು ರಾಜ್ಯದ ವಿವಿಧ ಪ್ರದೇಶದಲ್ಲಿ ಏಕೀಕರಣದ ಮುನ್ನ ಇದ್ದ ಗೇಣಿ ಶಾಸನಗಳ ವಿವರ ಹಾಗೂ ಟೆನೆನ್ಸಿ ಅನುಭವದಾರನಿಗೆ ಜಮೀನು ಖಾಯಂ ಮಾಡಬೇಕೆನ್ನುವ ಕಾನೂನಿಗೆ ವಿರುದ್ಧವಾಗಿ ಚಾಲೂಗೇಣಿ ಪದ್ಧತಿ ಮುಂದುವರಿದಿರುವುದು ಅದರಿಂದ ಗೇಣಿಯನ್ನು 50 ಸೇರಿನ ಖಂಡುಗದಂತೆ ಕಾಲು ಭಾಗದ ಬದಲು ಅಳೆಸಿಕೊಳ್ಳುತ್ತಿರುವುದು ಕಾನೂನು ವಿರುದ್ಧ ಗೇಣಿ ಒಕ್ಕಲುಗಳನ್ನು ಬಿಡಿಸುತ್ತಿರುವುದು ರೈತರು ಹಿಂದಿನಿಂದಲೂ ಉಳುವೆ ಮಾಡುತ್ತಿದ್ದರೂ ಅವರು ಹೆಸರು ಇರುವ ಯಾವ ರಿಜಿಸ್ಟರೂ ಇಲ್ಲದೆ ದಾಖಲೆ ರಹಿತವಾಗಿರುವುದು ಇಂಥ ಕಡೆ ಭೂಸುಧಾರಣೆ ಮಾಡುತ್ತೇನೆಂದವರು ಈವರೆಗೂ ಜಾರಿಗೆ ತಂದಿಲ್ಲ ಎಂದೆಲ್ಲ ಆಕ್ಷೇಪ ಸಹಿತ ಪ್ರತಿಪಾದನೆ ಇಟ್ಟರು. ಅವರ ಜೊತೆಗೆ ಸಿದ್ದಯ್ಯ ಕಾಶಿಮಠ,  ಸಿ.ಜೆ.ಮುಕ್ಕಣ್ಣಪ್ಪ, ಕಡಿದಾಳ್ ಮಂಜಪ್ಪ, ಬಿ.ಭಾಸ್ಕರಶೆಟ್ಟಿ ಮುಂತಾದವರು ಈ ಚರ್ಚೆಯಲ್ಲಿ ಪಾಲ್ಗೊಂಡರು. ಆಗ ಕಂದಾಯ ಸಚಿವರು ಈ ಅಂಶಗಳ ಬಗೆಗೆಲ್ಲ ಸೂಕ್ತಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ನಿರ್ಣಯಕ್ಕೆ ಸಭೆಯ ಸಮ್ಮತಿ ಪಡೆದರು. ಇಲ್ಲಿ ಧಣಿ ಒಕ್ಕಲು ಸಂಬಂಧ ಹದಗೆಟ್ಟಾಗ ಚಳವಳಿಕಾರಕವಾಗುವ ಸನ್ನಿವೇಶವಾಗುವುದು ಗಮಕ್ಕೆ ಬರುತ್ತದೆ. ಭೂ ಸುಧಾರಣೆ ವಿಧೇಯಕವು ಸಮಸ್ಯೆಗಳ ಪರಿಹಾರಕ್ಕೆ ಚಳವಳಿಗಳ ದಮನಕ್ಕೆ ಅನುಕೂಲಿಸುವ ಮಾಧ್ಯಮ ಎಂದು ಆಳುವವರ ಮಾತಾಗಿತ್ತು. ಅದರ ಜಾರಿ ಆದಾಗ ಮಾತ್ರ ಉಳುವ ರೈತ ಚಳವಳಿಗೆ ಹೋಗುವುದಿಲ್ಲ ಎಂದು ತಾತ್ವರ್ಯವಾಗುತ್ತದೆ. ಮುಂದೆ ನಡೆದ ವರುಣಾ ಚಳವಳಿ ಮಲಪ್ರಭಾ ಹೋರಾಟದ ಕೆಚ್ಚು ಈ ಹೊತ್ತಿಗೆ ಗರಿಗಟ್ಟಿರಲಿಲ್ಲ. ಆದರೆ ಅನ್ಯಾಯವನ್ನು ಪ್ರಶ್ನಿಸುವ ಚಳವಳಿಯ ಪೂರ್ವಭಾವಿ ಮನಸ್ಸು ಗಳು ಇಲ್ಲಿ ಕೆಲಸ ಮಾಡಿದೆ.
ರೈತ ಸಂಘದ ಹೋರಾಟಗಳು
ಏಕೀಕರಣೋತ್ತರ ಚಳವಳಿಗಳು ಪ್ರಬಲವಾಗಲು ಕರ್ನಾಟಕ ಪ್ರಾಂತ ರೈತ ಸಂಘ ಅಸ್ತಿತ್ವಕ್ಕೆ ಬಂದದೂ ಒಂದು ಕಾರಣವಾಯಿತು. 1956ರ ಏಪ್ರಿಲ್ 1ರಲ್ಲಿ ‘ಉಳುವವನೇ ಹೊಲದೊಡೆಯ’ ಎಂಬ ಸಾಗುವಳಿ ಕಾಯಿದೆ ತಿದ್ದುಪಡಿ ಜಾರಿಗೊಳ್ಳದಿರಲು ಜಿಲ್ಲೆಗಳ ಜಮೀನುದಾರರು ಶಾಸಕರು ಆಡಳಿತ ಪಕ್ಷದ ಮುಖಂಡರು ಕಾರಣ ಎಂಬ ಆರೋಪ ರೈತ ಸಂಘದ್ದಾಗಿತ್ತು. ಈ ಕ್ರಾಂತಿಕಾರಿ ಮಸೂದೆಯ ಫಲವಾಗಿ ಸರ್ಕಾರವು ಜೋಡಿ ಇನಾಂ ಅನ್ನು ರದ್ದು ಮಾಡಿತು. ಆದರೆ ರೈತರ ಬಳಿ ದಾಖಲೆಗಳು ಇಲ್ಲದೆ ಕೇವಲ ಬಾಯ್ಟರ್ಯಲ್ಲಿ ಭೂಮಿ ವಾರಸುದಾರಿಕೆ ಇದ್ದ ಸಂದರ್ಭದಲ್ಲಿ ಸಮಸ್ಯೆ ಶುರುವಾಗಿತ್ತು. ಉತ್ಕೃಷ್ಟ ಜಮೀನುಗಳು  ಇನಾಂದಾರರಿಗೆ ಹೋಗಿದ್ದ ಕಾರಣ ರೈತ ಸಂಘಗಳ ಪ್ರತಿಭಟನೆ ಬೆಳೆಯಲಾಗಿ ಆ ಇನಾಂ ಮುಕ್ತಾಯವಾಯಿತು. ಪ್ರತಿಭಟನೆಗೆ ಫಲೊಲಭಿಸಿತು. ಭೂ ಸುಧಾರಣಾ ವಿಧೇಯಕ ಪರಿಶೀಲನಾ ಸಮಿತಿಯ ವರದಿಯೂ ಬಂದಿತು. ಗೇಣಿಪಾವತಿಗೆ ರಸೀದಿ ಕೊಡಲಾಗಿ ಗೇಣಿ ಹಕ್ಕುದಾರರ ಅಸ್ತಿತ್ವ ಗಟ್ಟಿಗೊಂಡಿತು. ಸರ್ವೆ ಮತ್ತು ರೀಸೆಟಲ್ಮೆಂಟ್ ವರದಿ ಬಂದು ಆ ಬಗ್ಗೆ  ದೀರ್ಘ ಚರ್ಚೆಯಾಗಿ ಕರಭಾರ ಕಡಿಮೆ ಮಾಡಬೇಕೆಂಬ ಬೇಡಿಕೆಗೆ ಸರ್ಕಾರ ಒಪ್ಪಬೇಕಾದ ಪರಿಸ್ಥಿತಿ ಬಂತು. ಶಾಸಕರ ಸದನದ ಒಳಗೆ ಧರಣಿ ಕುಳಿತು ರೈತರ ಪರವಾದ ವಾಕ್ಚಳವಳಿ ಮಾಡಿದ ಪ್ರತಿಫಲ ಇದಾಗಿತ್ತು. ಇದಲ್ಲದೆ ಏಕೀಕರಣೋತ್ತರ ಚಳವಳಿಯ ಸ್ವರೂಪಗಳು ನಿಖರಗೊಳ್ಳಲಾರಂಭಿಸಿದುವು. ಈ ಸಂದರ್ಭದಲ್ಲಿ ಮಧುಗಿರಿ ತಾಲೂಕಿನ ಕಬ್ಬು ಬೆಳೆಗಾರರ ಪ್ರತಿಭಟನೆ ಒಂದು ಪ್ರಮುಖ ಚಳವಳಿಯಾಗಿತ್ತು. ಪೊಲೀಸ್ ಅತಿರೇಕಗಳೂ ಕಂಡುಬಂದುವು. ಚವಳಿಗೆ ಹೊಸ ಆಯಾಮಗಳು ದೊರಕಲೂ ಅದು ನೆರವಾಯಿತು.
ಈ ದಶಕದ ಮಧ್ಯ ಭಾಗದವರೆಗೆ ರೈತ ಹೋರಾಟಗಳು ಬಹುತೇಕ ಭೂ ಸುಧಾರಣಾ ಸಂಬಂಧದ ಹೋರಾಟಗಳಾಗಿದ್ದುವು. ಬಳ್ಳಾರಿ ಜಿಲ್ಲೆ ಸೊಂಡೂರು 1973ರ ಇನಾಂ ಜಮೀನು ರದ್ದಿಯಾತಿ ಮಸೂದೆ ಈ ಹೋರಾಟಗಳ ಪ್ರತಿಫಲವೇ ಆಗಿತ್ತು. ಶಾಸಕರು ರೈತರ ಪರ ಗಟ್ಟಿಯಾಗಿ ದನಿ ಎತ್ತಿದ್ದೂ ಇದಕ್ಕೆ ಕಾರಣವಾಗಿತ್ತು. ಸಚಿವ ಎನ್. ಹುಚ್ಚಮಾಸ್ತಿಗೌಡರು ಮಂಡಿಸಿದ ಈ ಮಸೂದೆ ಹಾಗೂ ತದನಂತರದ ಜಂಟಿ ಪರಿಶೀಲನಾ ಸಮಿತಿ ವರದಿ ರೀತ್ಯ16 12 ವರ್ಷಗಳ ಕಾಲ ಸ್ವತಃ ಸಾಗುವಳಿ ಮಾಡಿದ ಗೇಣಿ ಒಕ್ಕಲುಗಳು ರಕ್ಷಿತ ಗೇಣಿದಾರರೆಂಬ ಪರಿಗಣನೆ ಹಾಗೂ ಶರತ್ತಿಗನುಗುಣವಾಗಿ ಅವರೆಲ್ಲ ಜಮೀನು ಹಕ್ಕುದಾರರಾಗುವಿಕೆ ಸರ್ವೇಸೆಟಲ್ಮೆಂಟ್ ರೀತ್ಯಾ ಕೊಡಬೇಕಾದ ಭೂಕಂದಾಯ ಇನಾಮುದಾರರಿಗೆ ಕೊಡಬೇಕಾದ ಪರಿಹಾರ ಇನಾಮುದಾರರ ಜಮೀನು ಭಾಗದಲ್ಲಿ ವಾಸಿಸುತ್ತಿದ್ದ ಗೇಣಿದಾರರ ಮನೆ ನಿವೇಶನಗಳು ಅವರ ಸ್ವಂತ ವಾರಸುದಾರಿಕೆಗೆ ನೀಡುವ ವಿಷಯ ಇತ್ಯಾದಿ ವಿವರಗಳೆಲ್ಲ ಇವೆ. ಉಳುವವನೆ ನೆಲದೊಡೆಯ ಎಂಬ ಹೋರಾಟಕ್ಕೆ ಒಂದು ತಾತ್ವಿಕ ಚೌಕಟ್ಟನ್ನು ಈ ಮಸೂದೆಯು ನೀಡಿತು. ಸೊಂಡೂರು  ರೈತರು ಭೂ ಚಳವಳಿಯು 1973ರಲ್ಲಿ ನಡೆಯುವಲ್ಲಿ ರಾಜ್ಯ ಸಮಾಜವಾದಿ ಪಕ್ಷ ಮತ್ತು ರೈತ ಸಂಘಗಳ ನೇತೃತ್ವದಲ್ಲಿ ಹಿಂದುಳಿದ ಮಹಿಳೆಯರು ಹಾಗೂ ದಲಿತರೂ ಪಾಲ್ಗೊಂಡಿ ದ್ದರು. ಆದರೆ ಧಾರ್ಮಿಕ ದತ್ತಿ ಇನಾಂ(ಸೊಂಡೂರು ದೇಗುಲಗಳು) ರದ್ದಿಯಾತಿಯ ಸಂದರ್ಭದಲ್ಲಿ ಆಹಿಂಸಾತ್ಮಕ ಚಳವಳಿ ರೂಪುಗೊಳ್ಳಲು ಒಂದು ಸಾಂಸ್ಕೃತಿಕ ಸಹನೆ ಅಂತರ್ಗತವಾಗಿದ್ದುದು ಕಾರಣವಾಗಿತ್ತು.
ವರುಣಾನಾಲಾ ಚಳವಳಿ


ಮೈಸೂರು ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಕೃಷ್ಣರಾಜಸಾಗರ ದಿಂದ ಬಲದಂಡೆ ನಾಲೆಯೊಂದನ್ನು ರೂಪಿಸಿ ಕೃಷಿಗೆ ಒದಗಿಸುವ ಪ್ರಯತ್ನಕ್ಕೆ ಕ್ರಿ.ಶ. 1911ರ ವೇಳೆಗೆೊನಾಂದಿ ಬಿದ್ದಿತ್ತು.ೊಕಾರ್ಯಪಾಲಕ ಅಭಿಯಂತರರಾಗಿದ್ದ ಬಿ. ಸುಬ್ಬರಾವ್ ತಮ್ಮ ವರದಿಯಲ್ಲಿ ಕೃಷ್ಣರಾಜಸಾಗರದ ಬಲದಂಡೆಯಲ್ಲಿ ತೂಬು ಇಡಬಹುದೆಂದು ಹೇಳಿದ್ದರು, ಆದರೆ ಎಡದಂಡೆ ನಾಲೆ ಅಂದರೆ ವಿಶ್ವೇಶ್ವರಯ್ಯ ನಾಲೆ ಬೇಗ ಕಾರ್ಯಗತವಾಯಿತು.  ಬಲದಂಡೆ ನಾಲೆ  ವರುಣಾನಾಲೆ ಎನಿಸಿತು. ಎಡದಂಡೆ ನಾಲೆಯ ಮೂಲಕ ನೀರು ಪಡೆಯುತ್ತಿದ್ದು ತಮ್ಮ ಕೃಷಿ ಕಾರ್ಯಕ್ಕೆ ನೀರು ಸರಬರಾಜು ಕಡಿಮೆ ಆಗುವುದೆಂದು  ಮಂಡ್ಯ ಜಿಲ್ಲೆಯಲ್ಲಿ  ಎಪ್ಪತ್ತರ ದಶಕದಲ್ಲಿ(1970) ನಡೆದ ಒಂದು ಪ್ರಮುಖ ರೈತ ಚಳವಳಿಯೇ ವರುಣಾ ನಾಲಾ (ವಿರೋಧ) ಚಳವಳಿ ಎನಿಸಿದೆ.
ಬಿ. ಸುಬ್ಬರಾಯರ ವರದಿಯ ರೀತ್ಯಾ ಈ ನಾಲೆಯಿಂದ ಮೈಸೂರು ನಂಜನಗೂಡು ತಾಲೂಕಿನ ವಿಶಾಲವಾದ ಅಚ್ಚುಕಟ್ಟು ಪ್ರದೇಶ ಮತ್ತು ಕಪಿಲಾನದಿಯ ಹುಲ್ಲಹಳ್ಳಿ ಅಣೆಕಟ್ಟಿಗೆ ನೀರೊದಗಣಿ ಆಗುತ್ತದೆ. ಹುಲ್ಲಹಳ್ಳಿಯಿಂದ ಕಾಲುವೆಯನ್ನು ಟಿ. ನರಸೀಪುರ ತಾಲೂಕುವರೆಗೂ ವಿಸ್ತರಿಸಬಹುದು. ಬ್ರಿಟಿಷ್ ಆಡಳಿತವಿರುವ ಗಡಿಯವರೆಗಿನ ಕಾವೇರಿ ಬಲದಂಡೆ ಜಮೀನುಗಳ ಸಾಗುವಳಿಗೆ ಅನುಕೂಲವಾಗುತ್ತದೆ ಎಂದಿತ್ತು. ಕರ್ಪೂರ ಶ್ರೀನಿವಾಸರಾವ್ ಪ್ರಾತಿನಿಧಿಕ ಸಮಿತಿಯು  ದಕ್ಷಿಣ ದಂಡೆ(ಕೆ.ಆರ್.ಎಸ್)ಯ ಈ ಮೇಲುನಾಲೆಯಿಂದಲೆ ಗರಿಷ್ಠ 40 ಸಾವಿರ ಎಕರೆ ಸಾಗುವಳಿಯಾಗುತ್ತದೆ ಎಂದೆಲ್ಲ ಹೇಳಿತ್ತು. ಆದರೆ ನಾಲಾ ವೆಚ್ಚ ಒಂದು ಕೋಟಿ ಆಗುತ್ತದೆ. ತುರ್ತು ಅವಶ್ಯಕತೆ ಸದ್ಯಕ್ಕಿಲ್ಲ. ಮುಂದೆ ಅಗತ್ಯ ಬಂದಾಗ ಈ ಬಗ್ಗೆ ಗಮನಿಸಬಹುದು ಎಂಬ ಸಲಹೆ ನೀಡಿತು. ಕೃಷ್ಣರಾಜಸಾಗರದಿಂದ ವಿದ್ಯುತ್ ಉತ್ಪಾದನೆಗೆ ಆಗಿ ಮಿಗಿತಾಯದ ಜಲಸಂಗ್ರಹವನ್ನು ವಿಶ್ವೇಶ್ವರಯ್ಯ ನಾಲಾ (ಎಡದಂಡೆ ನಾಲೆ) ಕೆಳಗಿನ 24 ಸಾವಿರ ಎಕರೆ ಪ್ರದೇಶದ ಸಾಗುವಳಿಗೆಂದು ನಿಗದಿಗೊಳಿಸಲಾಗಿತ್ತು. ಈ ಹಿನ್ನೆಲೆಗಳಲ್ಲಿ 1963ರಲ್ಲಿ ದೊಡ್ಡ ನೀರಾವರಿ ಯೋಜನೆಗಳ ನಿಯಂತ್ರಣ ಮಂಡಲಿಯು ನಡೆಸಿದ ಸಭೆಯಲ್ಲಿ ಬಲದಂಡೆ ಮೇಲು ನಾಲೆಯು ಕಾರ್ಯರೂಪಕ್ಕೆ ಬರುವಂತೆ ಮಾಡಲು ನಿರ್ಣಯ ಕೈಗೊಂಡಿತು. ಅಂದಾಜು ವೆಚ್ಚ ನಿರ್ಧರಿಸಿತು. ಆದರೆ 1995ರಲ್ಲಿ ಹಾಗೆ ಪುನರ್ಜೀವಗೊಳ್ಳುವಲ್ಲಿ, ಅದರ ವಿರುದ್ಧ ಸಚಿವ ಎಚ್.ಕೆ.ವೀರಣ್ಣಗೌಡರು ದನಿ ಎತ್ತಲಾಗಿ ಆ ಕೆಲಸ ಮುಂದು ಹೋಯಿತು. ಆದರೆ 1967ರಲ್ಲಿ ಆರ್.ಎಲ್.ರಾಜು ಸಮಿತಿಯ ಬಲದಂಡೆ ಮೇಲು ನಾಲಾ ಕಾರ್ಯದಲ್ಲಿನ ಸಮಸ್ಯೆಗಳನ್ನು  ಪರಿಶೀಲಿಸಿ ವರದಿ ಕೊಟ್ಟಿತು. ಅದರ ರೀತ್ಯಾ ವಿಶ್ವೇಶ್ವರ ನಾಲಾ ಅಚ್ಚುಕಟ್ಟು ಪ್ರದೇಶಕ್ಕೆ ಶೇ. 75ರಷ್ಟು ಬೆಳೆ ಮಾದರಿಗನುಗುಣವಾಗಿ, ನೀರೊದಗಣಿಗೆ ಧಕ್ಕೆಯಾಗದಂತೆ ವರುಣಾ ನಾಲಾ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಒದಗಿಸಬಹುದು ಎಂದಾಗಿತ್ತು. ಇದರಿಂದ 135 ಕಿ.ಮೀ. ಉದ್ದದ ವರುಣಾನಾಲೆಯು ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಪ್ರದೇಶಗಳ ಸಾಗುವಳಿಗೆ ಅನುಕೂಲವಾಗುತ್ತಿತ್ತು. ಈ ಹಿನ್ನೆಲೆಗಳಲ್ಲಿ 1967ರಲ್ಲಿ ನಿಜಲಿಂಗಪ್ಪನವರ ಕಾಲದಲ್ಲಿೊವೀರೇಂದ್ರ ಪಾಟೀಲರು ಮಂತ್ರಿಯಾಗಿದ್ದಾಗ ಈ ವರುಣಾ ನಾಲೆಗೆ ಶಂಕುಸ್ಥಾಪನೆ ಆಯಿತು. ಆದರೆ ವಿಶ್ವೇಶ್ವರ ನಾಲೆಯಲ್ಲಿ  ನೀರು ಸಾಲದೆ ಆ ಹೊತ್ತಿಗೆ ವರ್ಷ ವರ್ಷ ಶೇಕಡ 20-40ರಷ್ಟು ಭಾಗ ಬೆಳೆ ನಷ್ಟವಾಗುತ್ತಿದ್ದ ಸಂದರ್ಭವಾಗಿತ್ತು. ಮುಗ್ದುಂ ಸಮಿತಿಯ ವರದಿಯೂ ಮಂಡ್ಯ ಜಿಲ್ಲೆಯ ರೈತರಿಗೆ ಹಿತವೆನಿಸಿರಲಿಲ್ಲವೆನ್ನಲಾಗಿದೆ. 1976ರಲ್ಲಿ ೊದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರದಿಂದ ಮರುಣಾ ನಾಲಾ ನಿರ್ಮಾಣದ ಪ್ರಸ್ತಾಪ ಮತ್ತೆ ಮುಂದಾಯಿತು. ಮಂಡ್ಯದ ಜನರ ಪ್ರತಿಭಟನೆ ಶುರುವಾಯಿತು. 1977ರಲ್ಲಿ ವರುಣಾ ನಾಲಾ ನಿರ್ಮಾಣದ ವೆಚ್ಚವನ್ನು ಭರಿಸಲು ಸಚಿವ ಸಂಪುಟದ ಸಭೆಯ ಸಮ್ಮತಿ ಒದಗಿತು. ಆದರೆ ಸಂಪುಟದಲ್ಲಿದ್ದ ಸಚಿವ ಎಸ್.ಎಂ. ಕೃಷ್ಣ ಅವರು ಇದನ್ನು ವಿರೋಧಿಸಿ ಮೈಸೂರು ಜಿಲ್ಲೆಯವರ ಒತ್ತಾಯ ವಿಲ್ಲದಿದ್ದರೂ ಅರಸು ಅವರೇ ಸೃಷ್ಟಿಸಿದ ಸಮಸ್ಯೆ ಎಂದೂ ಟೀಕಿಸಿದರು. ಮಂಡ್ಯ ಜಿಲ್ಲೆಯ ನಾಯಕರು ಈ ಯೋಜನೆ ಕೈಬಿಡಲು ಕೇಳಿಕೊಂಡರೂ ದೇವರಾಜ ಅರಸರು ಅದಕ್ಕೆ ಮಣಿಯಲಿಲ್ಲ. ಮಂಡ್ಯದ ಜನರಲ್ಲಿ ಕೋಪ ಬೆಳೆಯಿತು. ಕೆ.ವಿ. ಶಂಕರೇಗೌಡರು ಈ ಯೋಜನೆಯ ಬಗ್ಗೆ ತಜ್ಞರ  ಸಮಿತಿಯಿಂದ ಮಾಹಿತಿಗೆ ಒತ್ತಾಯವಿಟ್ಟರು. ಆ ಕಾರಣ ರೂಪುಗೊಂಡ ಎ.ಕೆ. ಚಾರ್ ಸಮಿತಿಯು ಮಂಡ್ಯ, ಮೈಸೂರು ಜಿಲ್ಲೆ ಕೃಷ್ಣರಾಜಸಾಗರದ ಅಚ್ಚುಕಟ್ಟು ಪ್ರದೇಶ ಹಾಗೂ ಪ್ರಸ್ತಾಪಿತ ವರುಣಾ ನಾಲಾ ಅಚ್ಚುಕಟ್ಟು ಪ್ರದೇಶಕ್ಕೆ ಸಂಚಾರ ಹೋಗಿ ಅಹವಾಲುಗಳನ್ನು ಸ್ವೀಕರಿಸಲಾರಂಭಿಸಿತು. ಈ ಹೊತ್ತಿಗೆ ಮಂಡ್ಯ ಜಿಲ್ಲೆಯಲ್ಲಿ ಪ್ರತಿಭಟನೆ ಆರಂಭವಾಗಿತ್ತು. ವರುಣಾ ನಾಲಾ ಯೋಜನೆಯ ಪರ ಮತ್ತು ವಿರೋಧದ ಅಹವಾಲುಗಳನ್ನು ಸಮಿತಿಯು ಮಂಡ್ಯ ಜಿಲ್ಲೆ ಹಾಗು ಮೈಸೂರು ಜಿಲ್ಲೆಯ ರೈತರು ಸಂಸದರು ವಿಧಾನಸಭಾ ಸದಸ್ಯ ರೊಡನೆ ಸಂಪರ್ಕಿಸಿ ಗಮನಿಸಿತು. ವರುಣಾ ನಾಲಾ ಯೋಜನೆಯನ್ನು ವಿರೋಧಿಸುತ್ತಿದ್ದ ವರೂ ಕೂಡ ಒಂದು ವೇಳೆ ವಿಶ್ವೇಶ್ವರ ನಾಲಾ ಅಚ್ಚುಕಟ್ಟಿನ ಅಗತ್ಯಗಳನ್ನು ಪೂರೈಸಿದ ನಂತರವೂ ಹೆಚ್ಚಿನ ನೀರು ಉಳಿಯುವುದಾದರೆ ಆಗ ವರುಣಾ ನಾಲಾ ಯೋಜನೆಯನ್ನು  ಪರಿಶೀಲಿಸಬಹುದೆಂಬ ಅಭಿಮತ ಹೊಂದಿದ್ದರು. ಕಾವೇರಿ ಬೇಸಿನ್ನ ಬಹುಭಾಗದಲ್ಲಿ ಹಳೇ ಕೃಷಿ ವಿಧಾನದ ಮುಂದುವರಿದ ಬಳಕೆ ನೀರಿನ ಅದಕ್ಷ ಅನಗತ್ಯ ಬಳಕೆಯಾಗುತ್ತಿರುವುದು. ಇದನ್ನು ಸರಿಪಡಿಸಿದರೆ, 1964-1974ರ ವರೆಗಿನ  ವಿ.ಸಿ ನಾಲೆಯ ನೀರು ಸರಬರಾಜಿಗೆ ಅಡ್ಡಿ ಆಗುವುದಿಲ್ಲ ಎಂದು ಸಮಿತಿಯು ವಿಶ್ಲೇಷಿಸಿ ವರದಿ ನೀಡಿತು. ವಿಶ್ವೇಶ್ವರಯ್ಯ ನೇತೃತ್ವದ ಸಮಿತಿಯ ವರದಿಯಲ್ಲಿ ವರುಣಾ ಮೇಲು ನಾಲೆಯ (ಕಾವೇರಿ ಬಲದಂಡೆ) ಪ್ರಸ್ತಾಪ ಮಾಡಲಾಗಿದೆ ಎಂದೂ ಹೇಳಿತು.
ಸಮಿತಿಯು ಈ ವರದಿಯ ಕಾರ್ಯಕಲಾಪದಲ್ಲಿ ತೊಡಗಿದ್ದಾಗ ವರುಣಾ ನಾಲಾ ನಿರ್ಮಾಣ ಮಂಡ್ಯ ಜಿಲ್ಲೆಗೆ ಮಾರಕ ಎಂದು ಜಿಲ್ಲೆಯ ಎಲ್ಲ ಜನತೆ ಬೃಹತ್ ಚಳವಳಿಗೆ 1977ನೆಯ ಜೂನ್ 8ರಲ್ಲಿ ಮುಂದಾಯಿತು. ಮಂಡ್ಯ ಬಂದ್ ಆಚರಿಸಲಾಯಿತು. 1977ನೆಯ ಜುಲೈ 17ರಂದು ಕೆ.ವಿ.ಶಂಕರೇಗೌಡ ಅವರ ನೇತೃತ್ವದಲ್ಲಿ ವಿಧಾನಸೌಧದ  ಮುಂದೆ ಮುಷ್ಕರ ನಡೆಯಿತು. ವರುಣಾ ನಾಲಾ ವಿರೋಧ ಹೋರಾಟ ಸಮಿತಿ ರೂಪುಗೊಂಡಿತು. 1977ನೆಯ ಜೂನ್ 23ರಂದು ಪಂಜಿನ ಮೆರವಣಿಗೆ ನಡೆಯಿತು. ವಿವಿಧ ಕಛೇರಿಗಳ ಮುಂದೆ 1977ನೆಯ ಅಕ್ಟೋಬರ್ 24ರಂದು ಧರಣಿ ಸತ್ಯಾಗ್ರಹ ನಡೆಯಿತು. 1977ನೆಯ ಅಕ್ಟೋಬರ್ 25ರಂದು 10 ಸಾವಿರ ರೈತರ ಮೌನ ಮೆರವಣಿಗೆ ನಡೆಯಿತು. 1977ನೆಯ ಅಕ್ಟೋಬರ್  26ರಂದು ರೈತರ ಬೃಹತ್ ಚಡ್ಡಿ ಮೆರವಣಿಗೆಯೂ ನಡೆಯಿತು. ಮಂಡ್ಯ ಜಿಲ್ಲೆಯ ರೈತ ಮಹಿಳೆಯರೆಲ್ಲ ಮೊದಲ ಬಾರಿ ಎನ್ನುವಂತೆ 1977ನೆಯ ಅಕ್ಟೋಬರ್ 31ರಂದು ಐತಿಹಾಸಿಕ ಮೆರವಣಿಗೆ ನಡೆಸಿದರು. ಬೆಂಗಳೂರಿಗೆ 1977ನೆಯ ನವೆಂಬರ್ 4ರಂದು ಇಂದಿರಾಗಾಂಧಿ ಅವರು ಬಂದು ಭಾಷಣ ಮಾಡುತ್ತಿದ್ದಾಗ ವರುಣಾನಾಲಾ ವಿರೋಧಿ ರೈತರು ಕಪ್ಪು ಬಾವುಟ ತೋರಿ ಪ್ರತಿಭಟನೆ ವ್ಯಕ್ತ ಮಾಡಿದರು. ಮಂಡ್ಯ ಜಿಲ್ಲೆಯಾದ್ಯಂತ ಗ್ರಾಮ ಗ್ರಾಮಗಳಲ್ಲಿ ತಾಲೂಕುಗಳಲ್ಲಿ ಪ್ರತಿಭಟನಾ ಸಭೆಗಳು, ಉಪವಾಸ ಸತ್ಯಾಗ್ರಹಗಳು ನಡೆದವು.  1977ನೆಯ ನವೆಂಬರ್ 24ರಂದು ಸಹಸ್ರಾರು ರೈತರು ಬೃಹತ್ ಮೆರವಣಿಗೆಯಲ್ಲಿ  ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಹೋಗಿ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ರಾಜ್ಯಪಾಲರನ್ನು ಭೇಟಿ ಮಾಡಿದರು. ಎಸ್.ಎಂ. ಕೃಷ್ಣ ಅವರು ಸಚಿವ ಸಂಪುಟ ದಿಂದ ಹೊರಬಂದರು. ಇಂಥ ಸನ್ನಿವೇಶದಲ್ಲಿ ರೂಪುಗೊಂಡ ಎ.ಕೆ.ಚಾರ್ ಸಮಿತಿಯು ಸಮಸ್ಯೆಗಳನ್ನು ಪರಿಶೀಲಿಸಿ ಕೊಟ್ಟ ವರದಿ ಈ ಮೊದಲೇ ಹೇಳಿರುವಂತೆ ಬಂದಿತು. ಇದನ್ನು ಮಂಡ್ಯ ಜಿಲ್ಲಾ ರೈತ ಸಮೂಹವು ಹೇಳಿ ಬರೆಸಿದ ವರದಿ ಎಂದು ಟೀಕಿಸಿತು. ಚಳವಳಿಯನ್ನು ಉಗ್ರವಾಗಿ  ಮುಂದುವರಿಸಿತು. ಕೆ.ವಿ. ಶಂಕರೇಗೌಡರು ಆಮರಣಾಂತ ಉಪವಾಸ ಸತ್ಯಾಗ್ರಹ ನಿರ್ಧಾರ ಮಾಡಿದರು. ಆಗ ಮುಖ್ಯಮಂತ್ರಿ ದೇವರಾಜ ಅರಸು ಅವರು 1977ನೆಯ ಡಿಸೆಂಬರ್ 10ರಂದು ಮಂಡ್ಯ ಜಿಲ್ಲೆಯ ರೈತ ಮುಂದಾಳುಗಳನ್ನು ಸಭೆ ಕರೆದು ಚರ್ಚಿಸಿ ನಂತರ ಸಮಸ್ಯೆ ಪರಿಶೀಲನೆ ಮತ್ತು ಪರಿಹಾರ ಸಂಬಂಧ ಹೆಚ್.ಎಂ. ಚನ್ನಬಸಪ್ಪನವರ ನೇತೃತ್ವದ ಸಮಿತಿಯನ್ನು ನೇಮಿಸಿದರು. ಅದರಿಂದಲೂ ಪ್ರಗತಿ ಕಾಣಲಿಲ್ಲ. ನಂತರ 1978ನೆಯ ಮೇ 5ರಲ್ಲಿ ಐ.ಎಮ್.ಮುಗ್ದಂ ಸಮಿತಿ ನೇಮಕವಾಗಿ 1979ನೆಯ ಜನವರಿ 5ರಲ್ಲಿ ಅದು ತನ್ನ ವರದಿಯನ್ನು ಸಲ್ಲಿಸಿತು. ಆ ಬಗ್ಗೆ ಶಾಸಕರು ಜಿಲ್ಲೆಯ ರೈತ ಪ್ರತಿನಿಧಿಗಳನ್ನು ಕರೆಸಿ ಚರ್ಚಿಸಿ ತಳೆದ ಸರ್ವಸಮ್ಮತ ತೀರ್ಮಾನವೆಂದರೆ ವರುಣಾ ನಾಲೆಯನ್ನು ಕೆ.ಆರ್.ಎಸ್.ನ ಬಲದಂಡೆಯಲ್ಲಿ ಕಟ್ಟಬೇಕು. ವಿ.ಸಿ.ನಾಲಾ ಅಚ್ಚುಕಟ್ಟಿನಲ್ಲಿ 1 ಲಕ್ಷ 91 ಸಾವಿರ ಎಕರೆ ಸಾಗುವಳಿಗೆ ಸರ್ಕಾರ ಸಮ್ಮತಿಸಬೇಕು. ಹಾಗೂ ಆಧುನೀಕರಣಗೊಳಿಸಬೇಕು  ಎಂಬುದಾಗಿ ಸರ್ಕಾರಿ ಆಜ್ಞೆಯೂ ಹೊರಬಿದ್ದಿತು.
ವರುಣಾ ನಾಲಾ ನಿರ್ಮಾಣ ಹಾಗೂ ಚಳವಳಿಯ ಹಿನ್ನೆಲೆ, ಮುನ್ನೆಲೆಗಳನ್ನು ಗಮನಿಸಿದರೆ ಶಾಸನ ಸಭೆಗಳ ನಡವಳಿಕೆಗಳನ್ನು ನೋಡಿದರೆ ಒಂದು ಜಿಲ್ಲೆಯ ರೈತರಿಗೆ ಮೊದಲೊದಗಿದ ಸೌಲಭ್ಯ, ಪ್ರಗತಿ ಕುಂಠಿತವಾಗದೆ ಬೆಳೆಯುತ್ತ ಬರಲೆಂಬ ಆಶಯ, ಇನ್ನೊಂದು ಜಿಲ್ಲೆಯ ರೈತರಿಗೆ ಮೊದಲಿನಿಂದ ವಂಚಿತವಾಗಿದ್ದ ಸೌಲಭ್ಯ ಅವಕಾಶ ಒದಗಿದಾಗ ಪರಿಸ್ಥಿತಿ ಸುಧಾರಿಸಿರುವಾಗ ತಮಗೂ ಒದಗಲಿ ಎಂಬ ಆಕಾಂಕ್ಷೆ ಎರಡೂ ಸಹಜವಾದದ್ದೇ. ರೈತರ ನಡುವೆ ನೀರೊದಗಿಸುವಲ್ಲಿ ಬಾಹ್ಯ ತಿಕ್ಕಾಟಗಳೇ ಕಾಣುತ್ತವೆ. ಆದರೆ ಕಳೆದ 50 ವರ್ಷಗಳ ನಂತರ ಕಾರ್ಯಾರಂಭವಾಗಿ  ತುಸು ಸಮಾಧಾನ ಒದಗಿದರೂ ವರುಣಾ ನಾಲೆಯ ಕೆಲಸ ಸಂಪೂರ್ಣಗೊಳ್ಳದಿರುವಲ್ಲಿ ಅದರ ಪ್ರಸ್ತಾಪ ಜೀವಂತವೇ ಆಗಿದೆ. 1977ರಲ್ಲಿ ಚಳವಳಿಯ ಬಿರುಸು ಒಂದು ಜಿಲ್ಲೆಗೆ ಒತ್ತುಗೊಂಡಿದ್ದರೆ, ಇಂದು ಆ ನಾಲೆಗೆ ನೀರು ಬಿಡುಗಡೆಯ ಸಂಬಂಧಗಳ ಚಳವಳಿಯ ಕಾವು ಪತ್ರಿಕಾ ಹೇಳಿಕೆ ರೈತ ಸಮಾವೇಶ ಇತ್ಯಾದಿಗಳು ಉಭಯ ಜಿಲ್ಲೆಗಳಲ್ಲಿ ಸಮಸಮ ಬಿರುಸುಗೊಂಡಿರುವುದು ಕಾಣುತ್ತದೆ. ಒಂದು ರೀತಿಯಲ್ಲಿ  ಕಾವೇರಿಯ ಉತ್ತರ ದಂಡೆ, ದಕ್ಷಿಣ ದಂಡೆಯ ಉಭಯ ರೈತ ಕಳವಳದ ಚಳವಳಿ ವಿಶೇಷ ಸಂದರ್ಭವೆನಿಸುತ್ತದೆ. ಪ್ರಜ್ಞೆಗಳ ಪಾತಳಿಯಲ್ಲಿರುವ ಆರ್ಥಿಕ ಹಾಗೂ ಆಧುನಿಕ ಸವಲತ್ತುಗಳಿಗೆ ಸಾವಧಾನ ಹೋರಾಟ ವೆನಿಸುವಂತಿವೆ. ರಕ್ತ ಸಂಬಂಧೀ ಬಾಂಧವ್ಯವನು್ನ ಮೀರಿದ ಅಸ್ತಿತ್ವದ ಹೋರಾಟ ಇದು. ಸಾವಧಾನವಿತ್ತೆಂದರೆ ಅದೊಂದು ರೀತಿಯಲ್ಲಿ ರಕ್ತಬಾಂಧವ್ಯದ ಸಾಂಪ್ರದಾಯಿಕ ಸಾಂಸ್ಕೃತಿಕ ಒತ್ತಡದ ಫಲವಾಗಿತ್ತೆನಿಸುತ್ತದೆ. ಇತ್ತ ದರಿ, ಅತ್ತ ಪುಲಿ ಎಂಬ ಸಂದರ್ಭವಾಗಿ ಶಾಸಕರು ಸಾಮರಸ್ಯದ ನೆಲೆಗಾಗಿ ಅರಸಿರುವುದೂ ಗಮನಕ್ಕೆ ಬರುತ್ತದೆ.
ಕ್ರಿ.ಶ. 1976-80ರ ಅವಧಿಯಲ್ಲಿ  ನಡೆದ ಮಲಪ್ರಭಾ ಪೂರ್ವ ಚಳವಳಿಗಳಲ್ಲಿ ಸತ್ಯಾಗ್ರಹ, ಮುಷ್ಕರ ಹಾಗೂ ಹೋರಾಟಗಳು ಜಾಗೃತ ಜಗತ್ತಿನ ನೆಲೆಗಳ ಪೂರ್ವಭಾವಿ ಚಿತ್ರಣವನ್ನು ನೀಡುವಂತಿವೆ. ಹೋರಾಟಗಳಿಗೆ ಹೊಸ ಆಯಾಮಗಳ ಸನ್ನೆಗೋಲಿನಂತೆ ಕಾಣುತ್ತವೆ. ಸಾಗರ ತಾಲೂಕಿನಲ್ಲಿ ಲೆವಿ ಬಲವಂತ ವಸೂಲಿ, ತಿಪಟೂರು, ರೆಗ್ಯುಲೇಟೆಡ್ ಮಾರುಕಟ್ಟೆಗಳಲ್ಲಿ ತೂಕ ಮತ್ತು ಅಳತೆಗಳಲ್ಲಿ ಮೋಸ ಹಾಗೂ ಮುಗ್ಧ ರೈತರಿಗೆ ಹಿಂಸೆ, ಅರಣ್ಯ ಜಮೀನನ್ನು ಸಾಗುವಳಿ ಮಾಡುತ್ತಿರುವ ಭೂಹೀನ ರೈತರಿಗೆ ಸಾಗುವಳಿ ಚೀಟಿ, ಲಂಬಾಣಿ ರೈತರಿಂದ ಮುಖ್ಯಮಂತ್ರಿಗಳಿಗೆ ಸಹಸ್ರಾರು ಮನವಿ, ವಿಧಿಸಿದ ಕಂದಾಯ ಹೆಚ್ಚಳ ಕಡಿತಕ್ಕೆ, ಕೃಷಿ ಕೂಲಿ ವಂಚನೆ, ವಿದ್ಯುತ್ದರದ ಹೆಚ್ಚಳ, ಹತ್ತಿ ಬೀಜದ ಬೆಲೆ ನಿರ್ಧಾರಕ್ಕೆ ವಿಳಂಬ, ಕಬ್ಬು ಕೊಟ್ಟರೂ ಕಾರ್ಖಾನೆಯ ಹಣ ಪಾವತಿಸದಿರುವುದು ಇತ್ಯಾದಿ ಕುರಿತು ರೈತರ ಪ್ರತಿಭಟನೆ ಹೋರಾಟಗಳು ಜರುಗಿದುವು. ಉಭಯ ಸದನಗಳ ಶಾಸಕರು ಈ ಬಗ್ಗೆ ಸರ್ಕಾರದ ಮುಂದೆ ಚರ್ಚೆ ನಡೆಸಿದರು. ಈ ಸಂದರ್ಭಗಳಿಗೆ ಸಾಕ್ಷಿಯಾಗಿ 1977ರ ಘಟಪ್ರಭಾ ಎಡದಂಡೆ ನಾಲಾ ಅಚ್ಚುಕಟ್ಟಿನ ರೈತರು ಹೆಚ್ಚಿನ ನೀರು ಬಿಡುಗಡೆಗೆ ಒತ್ತಾಯಿಸಿ ಮಾಡಿದ ಉಪವಾಸ ಸತ್ಯಾಗ್ರಹ, ವರಲಕ್ಷ್ಮಿ ಹತ್ತಿ ಬೆಲೆ ತಾರತಮ್ಯದ ವಿರುದ್ಧ ವಿಧಾನಸೌಧದ ಮುಂದೆ ರೈತರ ಉಪವಾಸ ಸತ್ಯಾಗ್ರಹ, ಸಾಲ ಸೌಲಭ್ಯಕ್ಕಾಗಿ ತಿಪಟೂರು ತಾಲೂಕಿನ 30 ಹಳ್ಳಿಳ ರೈತರು ಜಾಥಾ ಬಂದು ತಾಲೂಕು ಆಫೀಸಿನ ಮುಂದೆ ಮಾಡಿದ ಸತ್ಯಾಗ್ರಹ ಆಲೂಗಡ್ಡೆ ಬೆಳೆಗಾರರಿಗೆ ಬೆಲೆ ಕುಸಿತದಿಂದ ಆಗಿರುವ ನಷ್ಟ ಸಾಲಕ್ಕೆ ಪರಿಹಾರ ನೀಡಲು ಬೆಂಬಲ ಬೆಲೆ ನೀಡಲು ಶಾಸಕರ ಒತ್ತಾಯ, ಬ್ಯಾಂಕುಗಳು ಅಲ್ಪ ಸಾಲ ವಸೂಲಿಗಾಗಿ ರೈತರ ಮನೆ ಜಪ್ತಿ ಮಾಡುವ ಬಗ್ಗೆ ಶಾಸಕರ ವಿರೋಧ, ಭೂಕಂದಾಯ ಬಾಕಿ ಕೈಬಿಡಬೇಕೆಂದು  ರೋಣ ತಾಲೂಕಿನ ರೈತರ ಉಪವಾಸ ಸತ್ಯಾಗ್ರಹ, 1979ರಲ್ಲಿ ಬಾಗಲಕೋಟೆ ಮುಚಕಂಡಿ ಕೆರೆ ಅಚ್ಚಕಟ್ಟು ಜಮೀನು ಸಾಗುವಳಿದಾರ  ದಲಿತ ರೈತರು ಸ್ವಾಧೀನಾನುಭವ ಹಕ್ಕಿನ ಮಂಜೂರಾತಿ ಬಯಸಿ ಮಾಡಿದ ಉಪವಾಸ ಸತ್ಯಾಗ್ರಹ, ಕೊಡಗು ಜಿಲ್ಲೆ ತಿತಿಮತಿ ಅರಣ್ಯದ ಗೇಣಿ ರೈತರನ್ನು ಒಕ್ಕಲೆಬ್ಬಿಸಿದಾಗ ಮಾಡಿದ ಹೋರಾಟ, 1978-79ರಲ್ಲಿ ಭೂಮಿಯ ಸ್ವಾಧೀನಾನುಭವಕ್ಕೆ  ಹಳಿಯಾಳ ತಾಲೂಕು ರೈತರ ಚಳವಳಿ (1979) ಕೃಷಿ ಕಾರ್ಮಿಕರಾಗಿ ಕನಿಷ್ಠ ಕೂಲಿ, ಹೆರಿಗೆ ಭತ್ಯೆ ಕೇಳಿದಾಗ ಪೊಲೀಸರಿಂದ ಬಂಧನಕ್ಕೆ ಬಳಗಾದ ತಾತಗುಣಿ ಎಸ್ಟೇಟ್ನ ದಲಿತ ಕೃಷಿ ಕಾರ್ಮಿಕರ ಹೋರಾಟ (1978-79) ಹಾಗೂ ವಿಧಾನಸಭಾಧಿವೇಶನದಲ್ಲಿ ಆ ಕುರಿತು ನಡೆದ ಚರ್ಚೆ, ಬಳ್ಳೊಳ್ಳಿ ಕ್ಷೇತ್ರದ 90 ಹಳ್ಳಿಗಳಲ್ಲಿ ವಿದ್ಯುತ್ ಕೊರತೆಯಿಂದಾಗಿ ಆದ ಬೆಳೆ ನಷ್ಟ. ಆ ಬಗ್ಗೆ 10 ಸಾವಿರ ರೈತರು  ಜಿಲ್ಲಾಧಿಕಾರಿಗಳ ಕಛೇರಿ, ಕೆ.ಇ.ಬಿ. ಅಭಿಯಂತರ ಕಛೇರಿ ಎದುರು ಮಾಡಿದ ಉಪವಾಸ ಸತ್ಯಾಗ್ರಹ (1980) ಇತ್ಯಾದಿಗಳು ರೈತಸಂಘದ ಪುನರುಜ್ಜೀವನಕ್ಕೆ ಹಾಗೂ ಮಲಪ್ರಭಾ ರೈತ ಚಳವಳಿಯ ಸ್ಫೋಟಕ್ಕೆ ಪೂರ್ವಭಾವಿ ಜಾಗೃತಿಯ ಸನ್ನೆಗೋಲುಗಳಾದುವು ಎಂದೇ ಹೇಳಬೇಕಾಗುತ್ತದೆ. ರೈತರ, ಕೃಷಿ ಕಾರ್ಮಿಕರ ಹೋರಾಟದ ನೆಲೆಗಳು ಮನೋವೈಜ್ಞಾನಿಕ ಸೂಕ್ಷ್ಮಗಳನ್ನು ಒಳಗೊಂಡು ವೈಜ್ಞಾನಿಕ ಅಂಗಳದಲ್ಲಿ ವಿಕಸಿಸಿರುವುದೂ ಇಲ್ಲೆಲ್ಲ ಕಾಣಬರುತ್ತದೆ.
ಮಲಪ್ರಭಾ ರೈತರ ಹೋರಾಟ (1980)
ಹಿನ್ನೆಲೆ : ಮಲಪ್ರಭೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಹುಟ್ಟುತ್ತದೆ. ಸವದತ್ತಿ, ರಾಮದುರ್ಗ, ನರಗುಂದ ತಾಲೂಕುಗಳಲ್ಲಿ ಹರಿದು ಬಿಜಾಪುರ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಕೃಷ್ಣಾ ನದಿಗೆ ಸೇರುತ್ತದೆ. ಮಲಪ್ರಭಾ ಜಲಾಶಯ ಯೋಜನೆಗೆ 1960ರಲ್ಲಿಯೇ ಶಂಕುಸ್ಥಾಪನೆ ಆಗಿ ನಿರ್ಮಾಣ ಆರಂಭವಾದರೂ 1967ರವರೆಗೂ ನಿಧಾನಗತಿಯಲ್ಲಿ ಕಾರ್ಯಸಾಗಿ ಬಂದಿತ್ತು. ಈ ಪ್ರದೇಶ ನಿರಂತರ ಮಳೆ ಅಭಾವದ ಬರಪೀಡಿತ ಪ್ರದೇಶವಾಗಿತ್ತು. ರೈತರು ಸಾಂಪ್ರದಾಯಿಕವಾಗಿ ಜೋಳ ಅಥವಾ ಹತ್ತಿ ಅಥವಾ ಅವೆರಡರ ಮಿಶ್ರ ಬೆಳೆಯನ್ನು ಸ್ವಂತ ಸಂಪನ್ಮೂಲ ಬಳಸಿ ಪಡೆಯುತ್ತಿದ್ದರು. ಕಪ್ಪು ಮಣ್ಣಿನ ಪ್ರದೇಶವಾಗಿ ವಿಸ್ತಾರವಾದ ಹಿಡುವಳಿಯಾಗಿತ್ತು. 30 ಕೋಟಿ ರೂ. ಯೋಜನೆ ಎಂದು ಶುರುವಾಗಿ 1980ರ ವೇಳೆಗೆ 163ಕೋಟಿ ರೂ. ಖರ್ಚು ಮಾಡಿದ ಮೇಲೂ ನರಗುಂದ, ನವಲಗುಂದ, ಸವದತ್ತಿ ಮತ್ತು ರಾಮದುರ್ಗ ತಾಲೂಕಿನ ಕೆಲವು ಹಳ್ಳಿಗಳಿಗೆ ಮಾತ್ರ ನೀರು ಒದಗಿತ್ತು. ಯೋಜನೆ ಅಪೂರ್ಣವೆನಿಸಿತ್ತು. ಈ ಕಪ್ಪು ಭೂಮಿಯು ನೀರು ಬಸಿಯುವ ಗುಣ ಹೊಂದಿರಲಿಲ್ಲ. ಉಪಕಾಲುವೆ, ಚಿಟು ಕಾಲುವೆಗಳಲ್ಲಿ  ನೀರು ಹಾಯಲಿಲ್ಲ. ಹರಿದ ನೀರು ಎಲ್ಲೋ ಹೋಗಿ ಮಡುವಾಗಿ ನಿಂತು ಭೂಮಿ ಕ್ಷಾರಗೊಂಡಿತು. ಬೆಳೆ ವಿಫಲವಾಯಿತು. ಕೆಲೊವೇಳೆ ಮನಸ್ವಿ ನೀರು ಬಿಡುಗಡೆಗೊಂಡು ಭೂ ಫಲವತ್ತಿನ ಮೇಲ್ಮಣ್ಣು ಕೊಚ್ಚಿಹೋಗಿ ತಗ್ಗುಗಳು ಉಂಟಾಗಿದ್ದುವು. ಈ ಪ್ರದೇಶಕ್ಕೆ ಅಪರಿಚಿತವಾಗಿದ್ದ ಪಾರ್ಥೇನಿಯಂ ಕಳೆ ಬೆಳೆದು ರೈತರಿಗೆ ಸಮಸ್ಯೆ ಆಗಿತ್ತು.  ಸರ್ಕಾರ ಈ ಬಗ್ಗೆ ಗಮನ ಹರಿಸಲಿಲ್ಲ. 1976ರಲ್ಲಿ ನೀರು ಬಂದರೂ ಪೂರ್ವಾನ್ವಯವಾಗಿ 1974ರಿಂದಲೇ ಸರ್ಕಾರವು ರೈತರ ಮೇಲೆ ಕರಭಾರವನ್ನು ಹೊರಿಸಿತ್ತು. ಭ್ರಷ್ಟಾಚಾರ ಅಧಿಕಾರಿಗಳ ದರ್ಪ ರೈತರನ್ನು ಕೆರಳಿಸತೊಡಗಿತ್ತು. ವಾಣಿಜ್ಯ ಬೆಳೆಯ ಆರ್ಥಿಕ ಲಾಭದತ್ತ ರೈತರ ಗಮನ ಹರಿಯಲು ವರಲಕ್ಷ್ಮಿ ಹತ್ತಿ, ಹೈಬ್ರಿಡ್ ಜೋಳ ನೆಲಗಡಲೆಯನ್ನು ಬೆಳೆಯಲಾರಂಭಿಸಿದರು. ಮಾರುಕಟ್ಟೆಯಿಂದ ಕೊಂಡ ಕ್ರಿಮಿನಾಶಕ ರಸಗೊಬ್ಬರ ಹಾಗೂ ಅದರ ಬಳಕೆಯ ವಿಧಾನದ ಅವಜ್ಞೆ, ಕೊಂಡ ಬೀಜಗಳ ವಿಫಲತೆ ಇವೆಲ್ಲ ರೈತರಿಗೆ ಸಂಕಷ್ಟಗಳನ್ನೊಡ್ಡಿತು. 1974-75ರಲ್ಲಿ ವರಲಕ್ಷ್ಮಿ ಹತ್ತಿಗೆ ದೊರಕಿದ ಭಾರಿ ಬೆಲೆಯಿಂದಾಗಿ ಅದು ಜನಪ್ರಿಯಗೊಂಡು ರೈತರೂ ಸಾಲ ಮಾಡಿ ಆ ಹತ್ತಿ ಬೆಳೆಯ ತೊಡಗಿದರು. ಸರ್ಕಾರವೂ ಅದನ್ನು ಉತ್ತೇಜಿಸಿತು. ಆದರೆ ಮುಂದೆ ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಇತ್ಯಾದಿಗಳ ಬೆಲೆ ಏರಿ, ಬ್ಯಾಂಕ್ ಸಾಲವೂ ತಪ್ಪಿ ಖರ್ಚು ಹೆಚ್ಚಿತು. ನೀರಿನ ಕರ ಅಭಿವೃದ್ದಿ ಕರ ಮನ್ನಾಮಾಡಿ ಸ್ವಾಧೀನ ಮಾಡಿಕೊಂಡ ಭೂಮಿಗೆ ಪರಿಹಾರ ಕೇಳಿಕೊಂಡ ರೈತರ ಮನವಿಗೆ ಸರ್ಕಾರ ಸ್ಪಂದಿಸಲಿಲ್ಲ. 1978-80ರಲ್ಲಿ ಹತ್ತಿ ಬೆಲೆ ಅರ್ಧಕ್ಕರ್ಧ ಕುಸಿದು ರೈತರು ಕಂಗಾಲಾದರು. ಶೇಕಡ 71 ಭಾಗದಷ್ಟು ಜನ ಸಾಲಗಾರರಾಗಿ ದಿವಾಳಿಯೇಳುವಂತಾಯಿತು. ಹಿಡುವಳಿಯ ಸಣ್ಣ ಭಾಗಕ್ಕೆ  ನೀರು ಬಂದರೂ ಇಡೀ ಹಿಡುವಳಿಯ ಮೇಲೆ ಲೆವಿ ಹಾಕಲಾಗಿತ್ತು. ಎಸ್. ಆರ್. ಬೊಮ್ಮಾಯಿ ನೇತೃತ್ವದ ಪರಿಶೀಲನಾ ಸಮಿತಿಯೂ ರೈತರ ಆರೋಪಗಳಲ್ಲಿ ಸತ್ಯಾಂಶವಿದೆ ಎಂದಿತು. ರೈತರ ಅಸಮಾಧಾನ ಹೇಗಿತ್ತೆಂದರೆ ನೀರು ಕೊಟ್ಟಿರಲಿ, ಬಿಟ್ಟಿರಲಿ ಲೇವಿ ಕೊಡುವುದಿಲ್ಲ ಎನ್ನುವಷ್ಟು ಮಟ್ಟಿಗೆ  ವಿರೋಧ ಬೆಳೆದಂತಾಗಿತ್ತು. ಏರಿಸಿದ್ದ ನೀರಿನ ದರದಲ್ಲಿ ಸರ್ಕಾರ ರಿಯಾಯಿತಿ ತೋರಿದರೂ ರೈತರಿಗೆ ನಂಬುಗೆ ಬರಲಿಲ್ಲ. ಈ ರೈತರ ಸಮಸ್ಯೆಗಳ ಬಗ್ಗೆ ರಾಜ್ಯ, ರಾಷ್ಟ್ರೀಯ ನಾಯಕರಾಗಲಿ ಸುದ್ದಿ ಮಾಧ್ಯಮಗಳಾಗಲಿ, ಆಸಕ್ತಿ ತೋರಿಸಿರಲಿಲ್ಲ. ಆಧಿಕಾರ ವರ್ಗವಂತು ನಿರ್ಲಕ್ಷ್ಯ, ಒರಟು ವರ್ತನೆ ತೋರಿತು. ರೈತರು ಅಂತೇ ಸಂಘಟನೆಗೆ ತೊಡಗಿದರು. 1980ರಲ್ಲಿ ಪಕ್ಷಾತೀತ ಸಂಸ್ಥೆಯಾಗಿ ಮಲಪ್ರಭಾ ನೀರಾವರಿ ಪ್ರದೇಶ ರೈತರ ಸಮನ್ವಯ ಸಮಿತಿಯು ಅಸ್ತಿತ್ವಕ್ಕೆ ಬಂದಿತ್ತು. ಹೋರಾಟಕ್ಕೆ ಅಣಿಯಾಯಿತು. ನರಗುಂದಕ್ಕೆ ಮುಖ್ಯಮಂತ್ರಿ ಗುಂಡೂರಾಯರು 14.4.1980ರಲ್ಲಿ  ಬಂದಾಗ ಸಮಿತಿ ರೈತರ ಸಮಸ್ಯೆಗಳ ಕುರಿತು ಮನವಿ ಅರ್ಪಿಸಿದರೂ ಅದೆಲ್ಲ ರಾಜಕಾರಣವೆಂದು ಆರೋಪಿಸಿ ನಿರ್ಲಕ್ಷಿಸಲಾಯಿತು. ಮಲಪ್ರಭ ರೈತರ  ಕುರಿತು ಯಾವ ಸುದ್ದಿಗಳೂ ರಾಷ್ಟ್ರದ ಯಾವುದೇ ಪತ್ರಿಕೆಗಳಲ್ಲಿ ಸ್ಥಾನ ಪಡೆಯಲಿಲ್ಲ. ಯಾವಾಗ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳು ಅಗ್ನಿಗೆ ಆಹುತಿಯಾಗ ತೊಡಗಿದುವೋ ಆಗ ಅವು ಎಚ್ಚೆತ್ತು ರೈತರ ಸಂಕಷ್ಟಗಳ ಕುರಿತು ಪ್ರಕಟಿಸಲಾರಂಭಿಸಿದುವು. ರೈತರ ಸತ್ಯಾಗ್ರಹ, ಅರೆ ಬೆತ್ತಲೆ ಮೆರವಣಿಗೆ, ಮಳೆಯಲ್ಲಿ ಬಾರುಕೋಲು ಚಳವಳಿಗಳು ಎಲ್ಲರ ಗಮನಕ್ಕೆ ಬಂದರೂ ಸರ್ಕಾರ ಸಮಸ್ಯೆಗೆ ಪರಿಹಾರ ನೀಡಲಿಲ್ಲ. ಕೊನೆಗೆ ರೈತ ಮುಖಂಡರು ಕರ ನಿರಾಕರಣೆಗೆ ಕರೆ ಕೊಡಲು ತೀರ್ಮಾನಿಸಿದರು. 10 ಸಾವಿರ ರೈತರ ಬೃಹತ್ ಮೆರವಣಿಗೆ 30.6.1980ರಂದು ನರಗುಂದದಲ್ಲಿ ನಡೆಯಿತು. ನರಗುಂದ, ರೋಣ, ಸವದತ್ತಿ, ನವಲಗುಂದ, ರಾಮದುರ್ಗ ತಾಲೂಕು ರೈತರೆಲ್ಲ ಸೇರಿದ ಸಮಿತಿ ಯೊಂದು ರೂಪುಗೊಂಡು 13 ಹಕ್ಕೊತ್ತಾಯಗಳನ್ನು ಮುಂದಿಟ್ಟಿತು. ಮುಖ್ಯವಾಗಿ ನಾಲೆ ಮತ್ತು  ಕಾಲುವೆಗಳ ರಿಪೇರಿ, ಜಮೀನು ಸಮತಟ್ಟು ಮಾಡುವಿಕೆ, ಪಾರ್ಥೇನಿಯಂ ನಿರ್ಮೂಲನ, ಬೆಳೆ ವಿಮಾ ಯೋಜನೆ ಜಾರಿ,  ವರಲಕ್ಷ್ಮಿ ಹತ್ತಿಗೆ ಕ್ವಿಂಟಾಲಿಗೆ ಕನಿಷ್ಠ 600-800 ರೂ. ಬೆಲೆ ನೀಡಿಕೆ, ಅಗತ್ಯ ಕೃಷಿ ಪರಿಕರಗಳಿಗೆ ರಿಯಾಯಿತಿ ಹಾಗೂ ಸಬ್ಸಿಡಿ ನೀಡಿಕೆ, ಅಭಿವೃದ್ದಿ ಕರ ರದ್ದಿಯಾತಿ ಇತ್ಯಾದಿಗಳು ಹಕ್ಕೊತ್ತಾಯದ ಕರಪತ್ರದಲ್ಲಿ ಮಂಡಿತವಾಗಿದ್ದುವು. ಇವನ್ನೆಲ್ಲ ರೈತರು ಸರ್ಕಾರಿ ಅಧಿಕಾರಿಗಳಿಗೆ ಕೊಟ್ಟು ನರಗುಂದದಲ್ಲಿ ಸತ್ಯಾಗ್ರಹ ಆರಂಭಿಸಿದರು. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಈ ಬಗೆಗೆಲ್ಲ ಸಾರ್ವಜನಿಕರ ಗಮನಕ್ಕೆ ಬರುವಂತೆ ಮಾಡಿದರು. ನರಗುಂದದಲ್ಲಿ ಜೂನ್ 30ರಂದು 10 ಸಾವಿರ ರೈತರ ಮೆರವಣಿಗೆ ನಡೆಯಿತು. ನರಗುಂದ, ನವಲುಗುಂದ, ಸವದತ್ತಿ ಬಂದ್ ಆಚರಣೆಗೆ 21.7.1980ರಂದು ಕರೆ ಇತ್ತಂತೆ, ರೈತರು ಎತ್ತಿನ ಬಂಡಿ, ಟ್ರಾಕ್ಟರ್ ಹಾಗೂ ಕಾಲುನಡಿಗೆಯಲ್ಲಿ  ಬಂದು ಈ ತಾಲೂಕುಗಳಲ್ಲಿ ಸೇರಿದರು. ಸವದತ್ತಿಯ ಹಾಗೂ ನವಲುಗುಂದದ ತಹಸೀಲ್ದಾರರು ರೈತರ ಮನವಿಗೆ ಸ್ಪಂದಿಸಿ ಕಛೇರಿ ಮುಚ್ಚಿ ಅವರ ಸಭೆ ನಡೆಯಲು ಅವಕಾಶ ನೀಡಿದರು. ಆದರೆ ನವಲುಗುಂದದಲ್ಲಿ ಕಿಡಿಗೇಡಿಗಳು ಹರಡಿದ ಸುದ್ದಿಯಿಂದಾಗಿ ರೈತರ ರೋಷ ಉಕ್ಕಿ ನೀರಾವರಿ ಇಲಾಖಾ ಕಛೇರಿಯನ್ನು ಹಾಳುಗೆಡವಿದರು. ಪೊಲೀಸರು ನಿಯಂತ್ರಣಕ್ಕಾಗಿ ಗುಂಡು ಹಾರಿಸಲು ತರುಣನೊಬ್ಬ ಆಹುತಿಯಾದ. ಅದೇ ದಿನ ನರಗುಂದದಲ್ಲಿ ಅಮಲ್ದಾರರು ಬಾಗಿಲಲ್ಲಿ ಅಡ್ಡ ಮಲಗಿದ್ದ ರೈತರನ್ನು ತುಳಿದುಕೊಂಡು ಹೋದಾಗ ರೊಚ್ಚಿಗೆದ್ದ ರೈತರು ಕಛೇರಿಗೆ ನುಗ್ಗಲೆಳಸಿದರು. ಆಗ ಸಬ್ಇನ್ಸ್ಪೆಕ್ಟರ್ ಗುಂಡು ಹಾರಿಸಲಾಗಿ ತರುಣ ರೈತ ಬಲಿಯಾದ. ರೈತರು ಆ ಸಬ್ಇನ್ಸ್ಪೆಕ್ಟರ್ನನ್ನು ಅಟ್ಟಿಸಿಕೊಂಡು ಹೋಗಿ ಕೊಂದುಬಿಟ್ಟರು. ಇನ್ನೊಬ್ಬ ಪೋಲಿಸನೂ ಬಲಿಯಾದ. ಅಮಲ್ದಾರರಿಗೂ ಏಟುಗಳು ಬಿದ್ದುವು, ನಂತರ ರೈತರು ಹಳ್ಳಿಗಳಿಗೆ ಹಿಂದಿರುಗಿದರು. ನರಗುಂದ, ನವಲುಗುಂದಗಳಲ್ಲಿ ಕರ್ಫ್ಯೂ ಜಾರಿಯಾಯಿತು. ಈ ಘಟನೆಗಳಿಂದ ದಿಗ್ಭ್ರಮೆಗೊಂಡ ಮುಖ್ಯಮಂತ್ರಿಗಳು 1980ನೆಯ ಜುಲೈ 23ರಂದು ಸ್ಥಳಕ್ಕೆ ಬಂದು ಕೆಂಪೇಗೌಡ ಏಕಸದಸ್ಯ ವಿಚಾರಣಾ ಆಯೋಗವನ್ನು ನೇಮಿಸಿದರು. 1980ನೆಯ ಜುಲೈ 30ರಂದು 85 ಕೋಟಿಗಳಷ್ಟು ರಿಯಾಯಿತಿಯನ್ನು ರೈತರಿಗೆ ಮೀಸಲಿಟ್ಟು ಘೋಷಿಸಲಾಯಿತು. ನಂತರ ಬೊಮ್ಮಾಯಿ (ವಿರೋಧ ಪಕ್ಷದ ನಾಯಕ) ಹಾಗು ಕೃಷಿ ಕಂದಾಯ ಸಚಿವ ಬಂಗಾರಪ್ಪನವರ ನೇತೃತ್ವದ ಸಮಿತಿಗಳನ್ನು ನೇಮಿಸಿತು. ಇವುಗಳ ಮಧ್ಯಂತರ ವರದಿಗನುಸಾರವಾಗಿ ರೈತರಿಗೆ ಸರ್ಕಾರವು ಕಾಲುವೆ ರಿಪೇರಿ, ನೀರಿನ ಕರ ವಸೂಲಿ ಮುಂದೂಡಿಕೆ, ವಿದ್ಯುತ್ದರ ಇಳಿಕೆ, ತಕಾವಿ ಸಾಲದ ರದ್ದು ಪರಿಹಾರಗಳನ್ನು ನೀಡಿತು.17
ಕರ್ನಾಟಕ ರೈತ ವಲಯ ಹಾಗೂ ರಾಜಕೀಯ ವಲಯದಲ್ಲಿ ಈ ಚಳವಳಿ ಬಹಳ ಪ್ರಭಾವಿ ಪರಿಣಾಮವನ್ನು ಉಂಟುಮಾಡಿತು. ರೈತರ ಬೇಡಿಕೆಗಳಿಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಬೃಹತ್ ರೈತ ಸಮಾವೇಶ, ಸಭೆ, ಮೆರವಣಿಗೆ, ಗೋಲಿಬಾರ್ಗೆ ಕಾರಣವಾಗುವಂಥ ಬಂದ್ಗಳು ನಡೆದುವು. ಕರ್ನಾಟಕ ರಾಜ್ಯ ರೈತ ಸಂಘ ಈ ಸಮಯದಲ್ಲಿ ತನ್ನ ಪ್ರಚಂಡ ಸಂಘಟನೆ ಹಾಗೂ ಹೋರಾಟದ ಮೌಲ್ಯವನ್ನೂ ಪ್ರಸ್ತುತಗೊಳಿಸಿತು. ವಿಧಾನಸಭಾ ನಡವಳಿಕೆಗಳಲ್ಲಿ (22.7.1980)18
ಮಲಪ್ರಭಾ ರೈತ ಚಳವಳಿ ಸಂಬಂಧದಲ್ಲಿ  ನಡೆದ ಗೋಲಿಬಾರ್, ರೈತರ ಬೇಡಿಕೆಗಳು, ಅಧಿಕಾರಿಗಳ ವರ್ತನೆಗಳು, ನ್ಯಾಯಾಂಗ ತನಿಖೆ ವಿಷಯ, ಬೆಳೆದ ಬೆಳೆಗೆ ಬೇಕಾದ ಯೋಗ್ಯ ಬೆಲೆ, ಅಭಿವೃದ್ದಿಕರ, ರೈತರ ಉಪವಾಸ ಸತ್ಯಾಗ್ರಹ, ಬಲವಂತ ಕರವಸೂಲಿ, ಧಾರವಾಡ, ಗದಗ, ಬೀದರ್ ಮುಂತಾದ ಕಡೆ ನಡೆದ ರೈತರ ಚಳವಳಿ ಲಾಠಿ ಚಾರ್ಜು, ಸವಳು ಭೂಮಿಯಲ್ಲಿ ಪೂರ್ತಿಯಾಗಿ ತೆರಿಗೆ ವಸೂಲಿ ರೈತರ ಈ ಸಂಘಟಿತ ಚಳವಳಿಯಲ್ಲಿ ರೈತರು ಬಳಕೆದಾರರು ಕಾರ್ಮಿಕ ವರ್ಗದವರು, ಬಡವರು ಮುಂತಾದವರೆಲ್ಲ ಸೇರಿ ಯಾವ ರಾಜಕಾರಣವೂ ಸೇರದೆ ಏಕಾಏಕಿ ಇಂಥ ಜನ ಬೇಸತ್ತು ಚಳವಳಿ ಪ್ರಾರಂಭ ಮಾಡಿದುದು ಸಂತೋಷದ ವಿಷಯ”
ಎಂದಿರುವ ಮಾತು ವಿರೋಧ ಪಕ್ಷದ ಸದಸ್ಯರು ಮಾಡಿದ ಧರಣಿ, ಮುಷ್ಕರ, ರೈತರು ಮತ್ತು ಬಳಕೆದಾರರನ್ನು ರಾಜಕೀಯ ಪಕ್ಷಗಳವರು ನಿರ್ಲಕ್ಷಿಸಿದ ಕಾರಣ ಅವರೇ ತಮ್ಮ ಸಮಸ್ಯೆಗಳನ್ನು ತಾವೇ ಎತ್ತಿಕೊಂಡಿರುವ ವಿಷಯ, ಸರ್ಕಾರ ಘೋಷಿಸಿದ ರಿಯಾಯಿತಿಗಳು, ಕೆಂಪೇಗೌಡ ಆಯೋಗದ ವರದಿ, ಕರ್ತವ್ಯ ಲೋಪ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಇತ್ಯಾದಿ ವಿಷಯಗಳ ಮೇಲೆ ಶಾಸಕರು ಚರ್ಚೆ ನಡೆಸಿ ಪರಿಹಾರೋಪಾಯಗಳನ್ನು ಸೂಚಿಸಿದ್ದು ಕಂಡುಬರುತ್ತದೆ.
ಮಲಪ್ರಭಾ ರೈತರ ಹೋರಾಟವು ಮೊದಲಿಗೆ ಪ್ರಾದೇಶಿಕವಾಗಿ ರೂಪುಗೊಂಡರೂ ಸುತ್ತಲ ಪ್ರದೇಶದ ರೈತರ ಸಮಸ್ಯೆಗಳೂ ಸಮಸ್ಪಂದಿಯಾಗಿ ಕೂಡಿ ವ್ಯಾಪಕತೆ ಪಡೆಯಿತು. ಕಪ್ಪು ಮಣ್ಣಿನ ಪ್ರದೇಶದ ಬಡ ಕೃಷಿ ಜೀವಿಗಳ ನೋವು, ಸರ್ಕಾರಿ ಅಧಿಕಾರಿಗಳ, ಸುದ್ದಿ ಮಾಧ್ಯಮಗಳ, ರಾಜಕೀಯ ಪಕ್ಷಗಳ ನಿರ್ಲಕ್ಷ್ಯಕ್ಕೆ ಜಡತ್ವಕ್ಕೆ ಕೊಟ್ಟ ಛಡಿ ಏಟು. ಇದು ಇಡೀ ಕರ್ನಾಟಕ ರೈತ ಚಳವಳಿಯ ಮೇಲೆ ಪ್ರಭಾವ ಬೀರಿತು, ಅನುರಣನ ಚಳವಳಿ ಗಳನ್ನು ಸೃಷ್ಟಿಸಿತು. ಈ ರೈತರ ಬೇಡಿಕೆಗಳೆಲ್ಲ ಮೇಲ್ವರ್ಗದ ರೈತರ ಬೇಡಿಕೆಗಳು. ಕೃಷಿ ಕೂಲಿಗಳಿಗಾಗಿ ಏನೂ ಕೇಳಿಲ್ಲ ಅಂತಾಗಿ ಉಳ್ಳ ರೈತರ ಚಳವಳಿ ಎನ್ನುವುದುಂಟು. ಆದರೆ ಈ ಮಾತು ಮುಂದೆ ಜಾಗೃತಿಗೊಂಡ ರೈತ ಸಂಘದ 19 ಬೇಡಿಕೆಗಳ ವಿಷಯ ಕುರಿತು ಒಂದು ಅಭಿಪ್ರಾಯವೇ ವಿನಾ, ಮಲಪ್ರಭಾ ರೈತ ಹೋರಾಟಕ್ಕೆ ಅಷ್ಟಾಗಿ ಅನ್ವಯವೆನಿ ಸುವುದಿಲ್ಲ. ಚಳವಳಿಗೆ ಬಂದ ಎಲ್ಲರೂ ಟ್ರಾಕ್ಟರು, ಕಾರುಗಳಲ್ಲಿ ಬಂದವರಲ್ಲ. ಎತ್ತಿನ ಬಂಡಿ, ಕಾಲುನಡಿಗೆಯಲ್ಲಿ ಬಂದ ಸಾಮಾನ್ಯ ರೈತರೇ ಹೆಚ್ಚಿಗಿದ್ದರು ಎಂಬುದನ್ನು ಗಮನಿಸಬೇಕು. ಇದು ನಿಜವಾದ ಸಾಮಾನ್ಯ ರೈತರ ಹೋರಾಟ.
ವಿಧಾನಸಭಾ ಅಧಿವೇಶನಗಳ ಚರ್ಚೆಗಳನ್ನು ಧರಣಿ, ಮುಷ್ಕರಗಳನ್ನು ಗಮನಿಸಿದರೆ ಪಕ್ಷ ರಾಜಕೀಯ ಬಿಟ್ಟು ರೈತರ ಮಕ್ಕಳಂತೆ ಸರ್ಕಾರದ ಅಧಿಕೃತ ಭವನದೊಳಗೇ ನ್ಯಾಯ ಪರಿಹಾರಕ್ಕೆ ಹೋರಾಡಿದ್ದರೆನಿಸುತ್ತದೆ. ಸುದ್ದಿ ಮಾಧ್ಯಮಗಳು ತಡವಾಗಿಯಾದರೂ ಎಚ್ಚೆತ್ತು ಟೀಕೆ, ಟಿಪ್ಪಣಿ, ಸಲಹೆಗಳ ಮೂಲಕ ರೈತರ ಸಮಸ್ಯೆಗಳನ್ನು ಸಾರ್ವಜನಿಕರಿಗೆ ಅರ್ಥೈಸಿಕೊಟ್ಟವು. ಈ ಹೋರಾಟ ಕರ್ನಾಟಕದ ರೈತ ಹೋರಾಟಗಳಿಗೆ ಹೊಸ ದನಿಯೊಂದನ್ನು ಕೊಟ್ಟು ಐತಿಹಾಸಿಕ ಹಿರಿಮೆಯನ್ನು ಪಡೆಯಿತು.
ಗಂಗಾವತಿ-ಮುದ್ದೇಬಿಹಾಳ ರೈತ ಚಳವಳಿ ಹಾಗೂ ಗೋಲಿಬಾರ್ 1980ರಲ್ಲಿ ಮಲಪ್ರಭಾ ಚಳವಳಿಯ ಸಮಯದಲ್ಲಿಯೇ ನಡೆಯಿತು. ಬೆಲೆ ಏರಿಕೆ ಬಿಸಿ ತಾಗಿದ ರೈತರು ಮತ್ತು ಗ್ರಾಹಕರು ಕೂಡಿ ನಡೆಸಿದ ಚಳವಳಿ ಇದು. ರೈತರಿಗೆ ಪೆಟ್ರೋಲ್ ಲಭ್ಯತೆಯ ಸಂಕಷ್ಟಗಳು, ಬೆಳೆಗಳಿಗೆ ಅನಿಶ್ಚಿತ ಬೆಲೆಗಳು, ವ್ಯಾಪಾರಿಗಳ ಮೋಸ, ಬ್ಯಾಂಕಿನ ಸಾಲದ ತಕರಾರು ಇವೆಲ್ಲದರ ಗೋಜಲಿನಲ್ಲಿ ಬೆಲೆ ಏರಿಕೆಯೊಂದು ನೆಪವಾಗಿ ಈ ರೈತ ಚಳವಳಿಗೊಂದು ರೂಪ ಸಿಕ್ಕಿತು. ಈ ಸಂಬಂಧದಲ್ಲಿ ಆದ ಗೋಲಿಬಾರ್ ಬಂದ್ ಮೆರವಣಿಗೆ ಚಳವಳಿ ಕುರಿತೆಲ್ಲ 28.7.1980ರ ವಿಧಾನ ಸಭಾಧಿವೇಶನದಲ್ಲಿ19 ಹಾಗೂ ವಿಧಾನ ಪರಿಷತ್ತಿನ ಕಾರ್ಯಕಲಾಪಗಳಲ್ಲಿ ನಿಲುವಳಿ ಸೂಚನೆ ಚರ್ಚೆಗಳಾದವು. ಕರ್ನಾಟಕದ ಉದ್ದಗಲಕ್ಕೂ ರೈತ ಚಳವಳಿ ಹಬ್ಬಿದ ಬಗ್ಗೆ ಪೊಲೀಸ್ ಅತ್ಯಾಚಾರಗಳ ಬಗ್ಗೆ ಹಾಗೂ ಮಲಪ್ರಭಾ ನೀರಾವರಿ ರೈತರ ಸಮಸ್ಯೆಗಳ ಕುರಿತು ವಿಶ್ಲೇಷಿಸಿದ್ದಾರೆ. ನಲುಗಿ ಹೋಗಿದ್ದ ರೈತ ಮಲಪ್ರಭಾ ರೈತ ಹೋರಾಟದ ನಂತರ ಸಂಘಟಿತನಾದ, ಸ್ವಾಭಿಮಾನ ತೋರಿದ. ಇದರ ಫಲವಾಗಿ ಶಿವಮೊಗ್ಗ, ಬಿಜಾಪುರ, ಬಳ್ಳಾರಿ, ಬೆಳಗಾವಿ ಇತ್ಯಾದಿ ಕಡೆ ಕಬ್ಬು ಬೆಳೆಗಾರರ ಚಳವಳಿಗಳು ಜಾಗೃತಗೊಂಡವು. ರೈತ ಸಂಘಟನೆಗೆ ತಾತ್ವಿಕ ಅಸ್ತಿಭಾರವೂ ಒದಗಿತು.20 ರೈತ ಸಮ್ಮೇಳನಗಳು ನಡೆದವು. ರೈತ ಸಂಘ ತನ್ನ 19 ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟಿತು. ಈ ಬೇಡಿಕೆಗಳು ರೈತ ಸಮುದಾಯದ ಎಲ್ಲ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡಿದ್ದುವು. 12.12.80ರಂದು ಪ್ರಗತಿಪರ ಪ್ರಜಾಸತ್ತಾತ್ಮಕ ರಂಗವು ಬೆಂಗಳೂರಿನಲ್ಲಿ ರೈತ ಸಮ್ಮೇಳನವನ್ನು ಏರ್ಪಡಿಸಿತು. ನರಗುಂದದಿಂದ ಬೆಂಗಳೂರಿಗೆ 16.1.1981ರಂದು ರೈತರ ಜಾಥಾವು ರೈತ ಜ್ಯೋತಿ ಸಹಿತವಾಗಿ ಹೊರಟಿತು. ಆದರೆ ಚಳವಳಿ ರಾಜಕೀಯ ವಾಸನೆಯಿಂದ ಕೂಡಿದ್ದೆಂದು ವಿಧಾನಸೌಧಕ್ಕೆ ಬಂಧ ರೈತ ಮುಖಂಡರಿಗೆ ಮುಖ್ಯ ಮಂತ್ರಿಗಳ ಭೇಟಿ ದೊರಕಲಿಲ್ಲ. ಹೀಗೆಯೇ ನಿಪ್ಪಾಣಿ ತಂಬಾಕು ಬೆಳೆಗಾರರ ಹೋರಾಟ (1981) ವಿದ್ಯುತ್ ಕೇಂದ್ರಕ್ಕಾಗಿ ವಶಪಡಿಸಿಕೊಂಡ ರೈತರ ಜಮೀನಿಗೆ ಬೆಳೆ ಪರಿಹಾರ ಕೊಡದ ಕಾರಣ ನಡೆದ ರಾಯಚೂರು ರೈತರ ಹೋರಾಟ (1981) ಜಮೀನುದಾರರು ದಲಿತ ರೈತರನ್ನು ಭೂ ಸಾಗುವಳಿಯಿಂದ ಒಕ್ಕಲೆಬ್ಬಿಸಿದರೂ, ಪೊಲೀಸರೂ ನಿಷ್ಕ್ರಿಯರಾಗಿದ್ದ ಕಾರಣ ನಡೆದ ಗಂಗಾವತಿ, ಬಳ್ಳಾರಿ, ನಾಗನಾಯಕನ ಕೋಟೆಯ ದಲಿತ ರೈತರ ಹೋರಾಟ ಗಳು (1981-82) ಗಮನಾರ್ಹವಾದುವು.
ನಿಪ್ಪಾಣಿ ಹೊಗೆಸೊಪ್ಪು ಬೆಳೆಗಾರರ ಹೆದ್ದಾರಿ ಚಳವಳಿಗೆ (1981) ವರ್ತಕರು ಹೊಗೆ ಸೊಪ್ಪು ತೂಕದಲ್ಲಿ ಮಾಡುತ್ತಿದ್ದ ಮೋಸ, ಬೆಲೆಗಳಲ್ಲಿ ಕೃತಕ ಏರಿಳಿತ ಗುಣ ನಿರ್ಧಾರ ದಲ್ಲಿ ಮೋಸವಲ್ಲದೆ, 1980ರಲ್ಲಿ ತಂಬಾಕಿನ ಬೆಲೆ ಕುಸಿತವೂ ಕಾರಣವಾಗಿತ್ತು. ಹೀಗೆ ಬಹು ಶೋಷಿತ ರೈತ ವರ್ಗವನ್ನು ಮಹಾರಾಷ್ಟ್ರದ ಶೇತ್ಕರಿ ಸಂಘಟನೆಯ ನೇತಾರ ಶ್ರೀ ಶರತ್ ಜೋಷಿಯವರು ಜಾಗೃತಿಗೊಳಿಸಿ 1981ರ ಮಾರ್ಚ್ ತಿಂಗಳಿನಲ್ಲಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಸ್ತಾರೋಕೋ ಚಳವಳಿಯನ್ನು ಆರಂಭಿಸಿದರು. 24ದಿನಗಳ ಕಾಲ ಸತತವಾಗಿ ಈ ಚಳವಳಿ ನಡೆಯಿತು. ಸರ್ಕಾರ ಶರದ್ ಜೋಷಿಯವರನ್ನು ಬಂಧಿಸಿತು. ವರ್ತಕರು ಗೂಂಡಾಗಳಿಂದ ರೈತರ ಮೇಲೆ ಕಲ್ಲು ಬೀರಿಸಿದರು. ರೈತರನ್ನು ಚದುರಿಸಲು ಆತುರಾತುರವಾಗಿ ಪೊಲೀಸರು 24.3.1981ರಂದು ಗೋಲಿಬಾರ್ ಮಾಡಿದರು, 11 ಜನರು ಸತ್ತು 600 ಜನ ಗಾಯಗೊಂಡರು. ಈ ಬಗೆಗೆಲ್ಲ ವಿಧಾನ ಸಭೆಯ ಕಲಾಪಗಳಲ್ಲಿ ತೀವ್ರ ಚರ್ಚೆ ಆಯಿತು.21  ಮುಂದೆ ಅಕ್ಟೋಬರ್ 1984ರಿಂದ ನಿಪ್ಪಾಣಿಯಲ್ಲಿ ತಂಬಾಕಿನ ಬಹಿರಂಗ ಹರಾಜು ಶುರುವಾದದ್ದು ಈ ಚಳವಳಿಯ ಫಲಶ್ರುತಿಯಾಗಿತ್ತು. ಈ ಚಳವಳಿಯಲ್ಲಿ ವರ್ಗಸಂಘರ್ಷದ ಛಾಯೆಯೂ ಕಾಣಿಸುತ್ತದೆ. ಖಾಸಗಿ ವರ್ತಕರು ರೆಗ್ಯುಲೇಟೆಡ್ ಮಾರ್ಕೆಟ್ಯಾರ್ಡ್ಗೆ ಬಂದು ತಂಬಾಕುಕೊಳ್ಳದ ಕಾರಣ ಹೊರಗಡೆ ಅಕ್ರಮ ನಡೆಯುವ ಕಡೆ ವಿಧಿ ಇಲ್ಲದೆ ರೈತರು  ಆ ವ್ಯಾಪಾರಿಗಳಿಗೆ ಮಾರುತ್ತಿದ್ದಾರೆ. ಮಾರುಕಟ್ಟೆ ನಿಯಮಗಳಂತೆ ನಿಯಂತ್ರಣವಿಲ್ಲವಾಗಿದೆ. ಹೀಗಾಗಿ ರೈತರು ಬೆಂಬಲ ಬೆಲೆಗೆ ಒತ್ತಾಯವಿಟ್ಟಿದ್ದಾರೆ. ಆಂಧ್ರವು ಟ್ಯೊಬ್ಯಾಕೊ ಬೋರ್ಡ್ ಸ್ಥಾಪನೆ ಮಾಡಿ ಬೆಂಬಲ ಬೆಲೆ ನೀಡಲು ಹಾಗೂ ಸೂಕ್ತ ಬೆಲೆಯನ್ನು ರೈತರಿಗೆ ಒದಗುವಂತೆ ಮಾಡಿದೆ. ಅದೇ ರೀತಿ ರಾಜ್ಯ ಸರ್ಕಾರ ಮಾಡಲಿ. ಖರೀದಿ ಮಾಡಿದ ಮೇಲೂ ವರ್ತಕರು ಹಣಕೊಡದೆ ಸತಾಯಿಸುವುದು ಸರ್ಕಾರದ ಗಮನಕ್ಕೆ  ಬಂದರೂ ಕ್ರಮ ತೆಗೆದುಕೊಂಡಿಲ್ಲ. ಇದು ಹುಣಸೂರು ಪಿರಿಯಾಪಟ್ಟಣ ತಾಲೂಕು ತಂಬಾಕು ಬೆಳೆಗಾರರಿಗೂ ಅನ್ವಯವಾದ  ತೊಂದರೆಯೇ ಆಗಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಶಾಸಕರ ಆಗ್ರಹಪೂರ್ವಕ ಸಲಹೆಗೆ ಸರ್ಕಾರ ಮುಂದಾಗುವ ಬಗ್ಗೆ ತಿಳಿಸಿತು.
ಮಂಡ್ಯದ ಆಧುನಿಕ ರೈತ ಚಳವಳಿಗಳು 1982-89ರ ಅವಧಿಯಲ್ಲಿ ರೈತರಿಗೆ ಕಬ್ಬಿಗೆ ಸರಿಯಾದ ಬೆಲೆೊಕೊಡಿಸುವಲ್ಲಿ, ಬೆಂಗಳೂರು ಚಲೋ ಕಾರ್ಯಕ್ರಮ, ರೈತ ಸಂಘಟನೆಗಳಲ್ಲಿ  ತಮಟೆ ಚಳವಳಿ ಮಾಡಿ ಬಲವಂತ ಸಾಲ ವಸೂಲಾತಿ ನಿಲ್ಲಿಸುವಲ್ಲಿ, ಕಬ್ಬಿನ ತೂಕ ಮಾಡುವಲ್ಲಿ  ಆಗುವ ಮೋಸ ನಿಲ್ಲಿಸುವಲ್ಲಿ, ರೈತ ಮಹಿಳೆಯರ ಸಂಘಟನೆ ಮಾಡುವಲ್ಲಿ, ತಮಿಳುನಾಡಿಗೆ ಕಾವೇರಿ ನೀರಿನ ಹೆಚ್ಚು ಬಿಡುಗಡೆಗೆ ಪ್ರತಿಭಟನೆ ತೋರುವಲ್ಲಿ, ಸಾರಾಯಿ, ಲಾಟರಿ, ವಿರುದ್ಧದ ಹೋರಾಟಗಳಲ್ಲಿ, ಬೀದಿನಾಟಕ ಹಾಗೂ ಹೋರಾಟದ ಹಾಡುಗಳ ಮೂಲಕ ರೈತ ಜಾಗೃತಿ ಮಾಡುವಲ್ಲಿ, ಡಂಕೆಲ್ ಗ್ಯಾಟ್ ಒಪ್ಪಂದವನ್ನು ವಿರೋಧಿಸುವಲ್ಲಿ, ಸರ್ಕಾರದ ಎದುರು ನಗುವ ಚಳವಳಿಯನ್ನು ರೂಪಿಸಿ ರೈತ ಮುಂದಾಳುಗಳ ಪಡೆಯನ್ನು ನಿರ್ಮಿಸುವಲ್ಲಿ ತಮ್ಮ ವಿಶಿಷ್ಟ ಪಾತ್ರವನ್ನು ತೋರಿವೆ.22
ನಾಗಸಮುದ್ರ-ಮುಂಗೋಟೆಯ ರೈತ ಚಳವಳಿ(1982) ಕಬ್ಬು ಬೆಳೆಗಾರರು ಬೇಡಿಕೆಗಳ ಜೊತೆಯಲ್ಲಿ ಕಬ್ಬಿಗೆ ಯೋಗ್ಯ ಬೆಲೆ ನಿಗದಿ ಕುರಿತು ಮಾಡಿದ ಸತ್ಯಾಗ್ರಹ ಸ್ವರೂಪದ್ದಾಗಿತ್ತು. ಸಹಕಾರಿ ಸಾಲವನ್ನು ನಿರಾಕರಿಸಿ ಕಂದಾಯ ಅಧಿಕಾರಿಗಳು ಗ್ರಾಮಗಳಿಗೆ ವಸೂಲಾತಿಗೆ ಹೋದಾಗ ಘೇರಾವೊಗಳು ನಡೆದು ಪೊಲೀಸ್ ಮೊಕದ್ದಮೆಗಳೂ ಆಗಿದ್ದುವು. ರೈತ ಸಂಘದ ಮೇಲ್ವರ್ಗದ ಬಣ ಹಾಗೂ ಸಾಮಾನ್ಯ ವರ್ಗದ ಬಣಗಳ ನಡುವೆ ಕೆಲ ಮಟ್ಟಿಗೆ  ರಾಜಕೀಯವು ಬೆರೆತು ನಡೆದ ಪ್ರತಿಭಟನೆಯ ಪರಿಣಾಮವಾಗಿ ಗೋಲಿಬಾರ್ ನಡೆದು ಸದನಗಳಲ್ಲಿ ಚರ್ಚಿತಗೊಂಡದ್ದೂ ಆಗಿತ್ತು. ರೈತ ಸಂಘಕ್ಕೆ ಸವಾಲು ಶಕ್ತಿಯೊಂದು ಸನಾತನ ನೆಲೆಯಲ್ಲಿ ಹುಟ್ಟಿಕೊಂಡಿತ್ತು. ಆದರೆ ಅದು ಅಧಿಕಾರಿಗಳತ್ತಲೇ ವಾಲಿದ ವರ್ಗವಾಗಿತ್ತು.
ಮಂಡ್ಯ ಜಿಲ್ಲೆ ಗೆಜ್ಜಲಗೆರೆ ರೈತ ಸತ್ಯಾಗ್ರಹ ಹಾಗೂ ಗೋಲಿಬಾರ್ (1982), ಬೆಳೆದ ಕಬ್ಬು ಹಾಗೂ ಭತ್ತಕ್ಕೆ ಸೂಕ್ತ ಬೆಲೆ ಬಯಸಿ ಮಾಡಿದ ಸತ್ಯಾಗ್ರಹ ರಸ್ತೆಬಂದ್ ಮಾಡಿದ ಸಂದರ್ಭದಲ್ಲಿ ನಡೆದ ಗೋಲಿಬಾರ್ ಆಗಿತ್ತು. ವಿಧಾನಸಭಾಧಿವೇಶನದಲ್ಲಿಯೂ (24.11.1982) ಇದು ಚರ್ಚಿತವಾಯಿತು. ಹೀಗೆಯೇ ಕಾಳಮುದ್ದನ ದೊಡ್ಡಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಬಡ ರೈತರ ಉಪವಾಸ ಸತ್ಯಾಗ್ರಹವು ಸರಬರಾಜಾದ ಒಪ್ಪಿಗೆ ಕಬ್ಬು ಹಾಗೂ ಒಪ್ಪಿಗೆಯೇತರ ಕಬ್ಬಿನ ಬೆಲೆ ನಿಗದಿ ಸಂಬಂಧದಲ್ಲಿ ನಡೆದ ಸತ್ಯಾಗ್ರಹವಾಗಿದೆ. ಇದೊಂದು ಕಾಂಟ್ರಾಕ್ಟ್ ಬಗೆಯಲ್ಲಿ  ರಿಯಾಯಿತಿಗಳ ನಡುವಣ ಸಂಘರ್ಷವಾಗಿತ್ತು. ತುಮಕೂರು, ತಿಪಟೂರು ತಾಲೂಕು ದರಖಾಸ್ತು ಜಮೀನು ರೈತರ ಜಾಥಾವು(1983) ಕಾನೂನಿನ ಚೌಕಟ್ಟಿನೊಳಗೆ 1977ರಲ್ಲಿ ಭೂಹಿನ ರೈತರಿಗೆ ವಿತರಿಸಿದ್ದ ಜಮೀನನ್ನು 1983ರಲ್ಲಿ ರದ್ದುಗೊಳಿಸಿದ ವಿರುದ್ಧ ಆ ರೈತಾಪಿ ಜನರು ಕಮೀಷನರಲ್ಲಿಗೆ ಹೋಗಿ ಅಹವಾಲು ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಆಗ ಮುಖ್ಯಮಂತ್ರಿಗಳ ಭೇಟಿಗೆ ಕಾಲ್ನಡಿಗೆಯಲ್ಲಿ ಬಂದ ರೈತರ ಜಾಥಾ ಶಾಂತಿಯುತವಾಗಿ  ನಡೆದುಕೊಂಡು ದುದಾಗಿತ್ತು.
ಈ ಎಂಬತ್ತರ ದಶಕವು ರೈತ ಸಂಘಟನೆ ಹಾಗೂ ಚಳವಳಿಗಳ, ರೈತ ಜಾಗೃತಿಯ ಸುವರ್ಣಾವಧಿಯವು. ಅರ್ಥಾತ್ ಚಳವಳಿಗಳ ಸುವರ್ಣ ಯುಗಕ್ಕೆ ನಾಂದಿ ಇಟ್ಟ ಅವಧಿಯವು ಎನ್ನಬಹುದು. ಅದು ಹಳ್ಳಿಗಾಡಿನ ರೈತರ ಸಾಮೂಹಿಕ ಸಂವೇದನೆಯ ಯುಗವಾಗಿತ್ತು. ಹಳೆಯ ತಲೆಮಾರಿನ ರೈತ ನಾಯಕರ ಜೊತೆಗೆ ವರ್ತಮಾನದ ತರುಣ ರೈತ ನಾಯಕ ವೃಂದವೂ ಬೆಳೆದು ಹೋರಾಟಗಳ ಆಯಾಮವನ್ನು ವಿಸ್ತರಿಸಿದುವು. ಹಳ್ಳಿಗಳಲ್ಲಿ  ಯೋಜನೆಗಳ ಹಣ ತೊಡಗಿಸುವಿಕೆ, ಸಣ್ಣ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆ, ಉದ್ಯೋಗ ಲಭ್ಯತೆ, ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ, ಕೃಷಿ ಕಾರ್ಮಿಕರಿಗೆ ಸರಿಯಾದ ಕೂಲಿ, ಸಾಲದಿಂದ ಮುಕ್ತಿ ಇದಕ್ಕಾಗಿ ಹೋರಾಟ ಎಂಬ ಪ್ರಾಥಮಿಕ ನಿಲುವು ರೈತ ಸಂಘಟನೆಯದಾಗಿತ್ತು. ಲೆವಿನೀತಿ, ಬೆಲೆನೀತಿ, ಬೆಳೆಗಳಿಗೆ ವೈಜ್ಞಾನಿಕ ಬೆಲೆನಿಗದಿ ಇವು ಸೂಕ್ತವಾಗಿ ರೂಪುಗೊಳ್ಳಬೇಕು. ಭೂ ಕಂದಾಯ, ನೀರಿನ ಕರ, ಅಭಿವೃದ್ದಿ ತೆರಿಗೆ, ಆದಾಯ ತೆರಿಗೆ, ಇವೆಲ್ಲ ಪಾಳೇಗಾರ ಸಂಸ್ಕೃತಿಯ ಕುರುಹು ಹಾಗೂ ಅವೈಜ್ಞಾನಿಕ. ಬೇರೆ ಕಸಬುಗಳಲ್ಲಿ  ಉತ್ಪಾದನೆಗೆ ಮಾತ್ರ ತೆರಿಗೆ ಇದೆ. ಹಾಗಾಗಿ ಭೂಕಂದಾಯ, ನೀರು ತೆರಿಗೆ ರದ್ದಾಗಬೇಕು ಎಂಬುದು ಸಂಘಟನೆಯ ನಿಲುವಾಗಿತ್ತು. ರೈತ ಹೋರಾಟ ಕೇವಲ ಸಾಲ ರದ್ದಿಯಾತಿ ಬೆಳೆಗಳ ಬೆಲೆ ನಿಗದಿ, ಅನ್ಯಾಯದ ತೆರಿಗೆ ರದ್ದಿಯಾತಿಗಾಗಿ ನಡೆಯುವ ಸೀಮಿತ ಉದ್ದೇಶದ ಹೋರಾಟವಲ್ಲ, ಅಸಮಾನತೆ ವಿರುದ್ಧ ಘನತೆ ಗಾಂಭೀರ್ಯಗಳಿಂದ ಬದುಕುವ ವ್ಯಕ್ತಿಗಳ ನಿರ್ಮಾಣ, ಮೋಸ ಭ್ರಷ್ಟಾಚಾರಗಳ ವಿರುದ್ಧ  ಹೋರಾಟ, ಸರ್ಕಾರದ ಶಾಸಕರ ರಾಜಕೀಯ ಪಕ್ಷಗಳ ಲಕ್ಷ್ಯವು ಈ ದಿಸೆಯಲ್ಲಿ ಉಪೇಕ್ಷೆ ಇಲ್ಲದೆ ಒದಗಲಿ, ರೈತರು ಪ್ರಜ್ಞಾವಂತರಾಗಿ ಆಂದೋಲನ ನಡೆಸಿದಾಗ ಅಸಮಾನತೆ ನಿರ್ಮೂಲನ, ಸ್ವಾತಂತ್ರ್ಯದ ನಂತರವೂ ರೈತರ ಶ್ರಮದ ಲೂಟಿಯಾಗದೆ ಗೌರವ, ಸಮಾನತೆ ಸ್ಥಾನ ದೊರಕಲು ಹೋರಾಟವಿದೆ ಎಂದೆಲ್ಲ ರೈತ ಸಂಘವು ಪ್ರಕಟಿಸಿರುವ ಕೃತಿಗಳ ಆಶಯದಲ್ಲಿದೆ.23 1980-2000ದವರೆಗಿನ ಹೋರಾಟದ ಹೆಜ್ಜೆಗಳನ್ನು ಗುರುತಿಸುತ್ತ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಭ್ರಷ್ಟಾಚಾರ ವಿರುದ್ಧ ಹೋರಾಡಿ ಕಬ್ಬು ಬೆಳೆಗಾರರಿಗೆ ಭಾರತದಲ್ಲೇ ಅತಿ ಹೆಚ್ಚಿನ ಬೆಲೆ ಕೊಡಿಸಿದ್ದು, 1989ರಿಂದ 1994ರ ವರೆಗಿನ ಸರ್ಕಾರದ ರೈತರ ಬಾಕಿ ವಸೂಲಿ ನಿಲ್ಲಿಸಿದ್ದು, ತುಂಡುಭೂಮಿ ಕಾಯಿದೆ ರದ್ದು ಮಾಡಿಸಿದ್ದು, ಬಗರ್ ಹುಕುಂ ಸಾಗುವಳಿಯನ್ನು ಸಕ್ರಮ ಮಾಡುವ ಕಾನೂನು, ಆಶ್ರಯ ಯೋಜನೆ ಜಾರಿ, 1991ರಲ್ಲಿ ಗೊಬ್ಬರ ಬೆಲೆ ಏರಿಕೆ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ, 1992ರಲ್ಲಿ ಕಾರ್ಗಿಲ್ ಬೀಜ ಕಂಪೆನಿ ವಿರುದ್ಧ ಸತ್ಯಾಗ್ರಹ, 1993ರಲ್ಲಿ ಡಂಕೆಲ್ ವರದಿಯ ವಿರುದ್ಧ ದೆಹಲಿಯಲ್ಲಿ  ಬೆಂಗಳೂರಿನ ಅಂತಾರಾಷ್ಟ್ರೀಯ ರೈತ ಸಮಾವೇಶದಲ್ಲಿ  ಪೇಟೆಂಟ್ ವಿರುದ್ಧ ಘೋಷಣೆ, ಡಬ್ಲು.ಟಿ.ಓ.ದ(ವಿಶ್ವ ವ್ಯಾಪಾರಿ ಸಂಸ್ಥೆ) ಚಟುವಟಿಕೆಯ ಸಾಧಕ ಭಾದಕಗಳ ಬಗ್ಗೆ ರೈತರಿಗೆ ತಿಳುವಳಿಕೆ ಇವೆಲ್ಲ ರೈತರ ಹೋರಾಟದ ಫಲಶ್ರುತಿ  ಆಗಿದೆ  ಎಂದೂ ಆ ಕೃತಿಗಳು ಪ್ರಸ್ತಾಪಿಸಿವೆ.24 ರೈತರನ್ನು ಹೀಗೆಲ್ಲ ಸಿದ್ಧಗೊಳಿಸಿದ್ದು ಒಂದು ಕ್ರಾಂತಿಕಾರಕ ಮಾರ್ಪಟು ಎನಿಸುತ್ತದೆ. ಇಂಥ ಪ್ರಯತ್ನಗಳ ದನಿಯಾಗಿ ರೈತೊವೃಂದದಿಂದಲೂ ಶಾಸಕರಾಗಿ ಹೋಗಿ ಉಭಯ ಸದನಗಳಲ್ಲಿ ರೈತರ ಪರ ದಿಟ್ಟ ದಾಷ್ಟೀಕದ ಬೇಡಿಕೆಗಳನ್ನಿಟ್ಟು ಸಾಧಿಸಿದುದೂ ಇದೆ.
ಗ್ಯಾಟ್ ಒಪ್ಪಂದ-ಡಂಕೆಲ್ ಪ್ರಸ್ತಾವನೆ ವಿರೋಧ ಚಳವಳಿಗಳು (1993-94)
1942ರಲ್ಲಿ ಅಮೆರಿಕವೂ ಸೇರಿದಂತೆ 23 ದೇಶಗಳು ಜಿನೀವ, ಸ್ವಿಟ್ಸರ್ಲೆಂಡ್ನಲ್ಲಿ ಸೇರಿ ನಿಯೋಜಿತವಾದ ಪರಸ್ಪರ ವ್ಯಾಪಾರ ವ್ಯವಹಾರಗಳ ಒಪ್ಪಂದವಿಲ್ಲದೆ 1948ರಲ್ಲಿ 123 ಸದಸ್ಯ ರಾಷ್ಟ್ರಗಳು ಇದರಲ್ಲಿ  ಪಾಲ್ಗೊಂಡಿವೆ. ವಿಶ್ವದಲ್ಲಿ ನಡೆಯುವ ವ್ಯಾಪಾರ ದಲ್ಲಿ ಶೇಕಡ 90ಕ್ಕೂ ಮೀರಿದ ಪ್ರಮಾಣದ ವ್ಯಾಪಾರ ಈ ದೇಶಗಳ ನಡುವೆ ನಡೆಯುತ್ತದೆ. ಭಾರತವೂ ಗ್ಯಾಟ್ ಒಪ್ಪಂದದ ಸ್ಥಾಪಕ ಸದಸ್ಯ ರಾಷ್ಟ್ರವಾಗಿದೆ.25
ಅಂತಾರಾಷ್ಟ್ರೀಯ ವ್ಯಾಪಾರ ನಡೆಸಲು ಪರಸ್ಪರ ಸ್ವೀಕೃತವಾದ ನಿಯಮಗಳನ್ನೊಳಗೊಂಡ ಒಪ್ಪಂದವೇ ಗ್ಯಾಟ್ ಒಪ್ಪಂದ ಅರ್ಥಾತ್ ಬಹುರಾಷ್ಟ್ರೀಯ ವ್ಯಾಪಾರ ಪದ್ಧತಿಯಲ್ಲಿ ಆಮದು ರಫ್ತು ಸುಂಕಗಳ ಮತ್ತು ವ್ಯಾಪಾರದ ಬಗ್ಗೆ ಮಾಡಿಕೊಳ್ಳುವ ಸಾಮಾನ್ಯ ಒಪ್ಪಂದವೇ ಗ್ಯಾಟ್. ಗ್ಯಾಟ್ನ ಮಹಾನಿರ್ದೇಶಕ ಅರ್ಥರ್ ಡಂಕೆಲ್ 1991ರಲ್ಲಿ ಕ್ರಿಯಾ ಯೋಜನೆಯ ಪ್ರಸ್ತಾಪನೆಯನ್ನು ಇಟ್ಟಾಗ ಅದರಲ್ಲಿ ಮಾತುಕತೆಗಳ ಫಲಿತಾಂಶ ಸಮ್ಮತಿ ಹಾಗೂ ಅಸಮ್ಮತಿಯಾದ ಪ್ರಸ್ತಾಪಗಳಿದ್ದು ಅದನ್ನು ಡಂಕೆಲ್ ಪ್ರಸ್ತಾವನೆ ಎನ್ನುತ್ತಾರೆ. ಅದು ಅನೇಕ ಸಲಹೆಗಳ ಮೊತ್ತ. ಮುಂದೆ ಅವು ಪರಿಷ್ಕರಣಕ್ಕೊಳಗಾಗಿವೆ. ಕೃಷಿ ಸಂಬಂಧಕ್ಕೆ ಇವುಗಳನ್ನು ಅನ್ವಯಿಸಿ ನೋಡಿದರೆ ಕೃಷಿ ಅಗತ್ಯ ವಸ್ತುಗಳು ಹಾಗೂ ಉತ್ಪನ್ನಗಳ ಹಕ್ಕನ್ನು ಬಹುರಾಷ್ಟ್ರೀಯ ಸಂಸ್ಥೆಗಳು ತಮ್ಮ ಹಿಡಿತದಲ್ಲಿಟ್ಟುಕೊಂಡು ರೈತನನ್ನು ತಮ್ಮ ತಾಳಕ್ಕೆ ಕುಣಿಯುವಂತೆ, ಅಡಿಯಾಳಾಗಿರುವಂತೆ ಮಾಡುತ್ತವೆ. ಈ ಕಾರಣಕ್ಕಾಗಿ ಅವನ್ನು ವಿರೋಧಿಸುವ  ಸ್ವಾವಲಂಭಿ, ಸ್ವಾಭಿಮಾನಿ ಚಳವಳಿಯೇ ಗ್ಯಾಟ್ ಡಂಕೆಲ್ ಸೂಚನಾವಳಿ ವಿರೋಧ ಚಳವಳಿ ಅನ್ನುತ್ತಾರೆ. ಊಳಿಗಮಾನ್ಯದ ಯಜಮಾನ ಸಂಸ್ಕೃತಿಯ ಬೃಹತ್ ಜಮೀನ್ದಾರಿ ವ್ಯವಸ್ಥೆಯ ಆಧುನಿಕ ರೂಪವಿದು. ಜೀತದಾಳುಗಳ ಪುನರ್ನವೀಕರಣ, ಬಹುರಾಷ್ಟ್ರೀಯ ವ್ಯಾಪಾರಶಾಹಿ ಎಂಬ ಟೀಕೆ ಈ ಬಗ್ಗೆ ಇದೆ. ಇದನ್ನು ರಾಜಕೀಯ ಐತಿಹಾಸಿಕ ಹಿನ್ನೆಲೆಯಲ್ಲಿ ಗಮನಿಸಿದರೆ ಅದ ಹೂರಣ ಹೊರಬೀಳುತ್ತದೆ ಎನ್ನುವುದುಂಟು26 1995ರಲ್ಲಿ ಜನ್ಮ ತಳೆದ ಡಬ್ಲು.ಟಿ.ಒ.(ವಿಶ್ವವ್ಯಾಪಾರ ಸಂಘಟನೆ) ಗ್ಯಾಟ್ನ ಉತ್ತರಾಧಿಕಾರಿ ಆಗಿದ್ದು, ಬಲಿಷ್ಠರಾಷ್ಟ್ರಗಳ ಪಕ್ಷಪಾತಿ ಆಗಿದೆ. ಜಗತ್ತಿನ ಒಟ್ಟು ರಫ್ತಿನ ಪ್ರಮಾಣದಲ್ಲಿ ಭಾರತದ ಪಾಲು ಕಳೆದ 42 ವರ್ಷಗಳಿಂದ ಗ್ಯಾಟ್ನ ಸದಸ್ಯ ರಾಷ್ಟ್ರವಾಗಿದ್ದೂ ಶೇ. 3.5ರಿಂದ ಶೇ. 0.5ಕ್ಕೆ ಕುಸಿದಿದೆ. ಅಭಿವೃದ್ದಿಶೀಲ ರಾಷ್ಟ್ರಗಳು 1986-1991ರ ವರೆಗೆ ತೋರಿದ ಅಸಮ್ಮತಿಗೆ ಡಂಕೆಲ್ ಪ್ರಸ್ತಾವನೆ ಲಕ್ಷ್ಯ ನೀಡಿಲ್ಲ ಎಂಬ ಮಾತುಗಳೂ ಇವೆ.27 ಬೇಸಾಯಗಾರರಿಗೆ ಸಬ್ಸಿಡಿ ಕಡಿತ ಮಾಡಬೇಕೆನ್ನುವ ಡಂಕೆಲ್ ಪ್ರಸ್ತಾಪ ರಸಗೊಬ್ಬರ ಹಾಗೂ ಬೀಜಗಳ ಸಬ್ಸಿಡಿ ಬಗೆಗೆ ಚಕಾರವೆತ್ತಿಲ್ಲ. ಬಹುರಾಷ್ಟ್ರೀಯ ಸಂಸ್ಥೆಗಳ ದರಗಳೊಡನೆ ನಮ್ಮ ರೈತರ ಸ್ವರ್ಧಿಗಳಾಗುವ ಸಂಭವವಿಲ್ಲದೆ ಸ್ವಾವಲಂಬನೆಗೆ ಧಕ್ಕೆ ಒದಗುತ್ತದೆ. 1991ರಿಂದ ಜಾರಿಗೆ ಬಂದ ಉದಾರೀಕರಣದ ಪರಿಣಾಮವೆಂದರೆ 1992-93ರಲ್ಲಿ ರಸಗೊಬ್ಬರಗಳಿಗೆ ಲಭ್ಯವಿದ್ದ ಸಬ್ಸಿಡಿಯನ್ನು ಸರ್ಕಾರ ಕಡಿಮೆಗೊಳಿಸಿತು. ಇದರ ಜೊತೆಗೆ ವಿದ್ಯುತ್ ದರದ ರಿಯಾಯಿತಿ ನೀಡಿಕೆಯನ್ನು ರೈತರಿಗೆ ತೆಗೆಯಲು ವಿಶ್ವಬ್ಯಾಂಕ್ ಒತ್ತಡ ತಂದಿತು. ಇನ್ನು ಪೇಟೆಂಟ್ ಹಕ್ಕುಗಳನ್ನು ವ್ಯಾಪಾರಿ ಸಂಸ್ಥೆಗಳು ತೆಗೆದುಕೊಳ್ಳುತ್ತ ಹೋದರೆ ರೈತರಿಗೆ ತಾವು ಬಳಸುವ ಬೀಜಗಳಿಗೆ ಕಾಲಕ್ರಮೇಣ ಸ್ವಾಮ್ಯ ಸಾಧಿಸಲಾಗುವುದಿಲ್ಲ. ಭಾರತದ ಬೇಸಾಯ ಪೂರ್ಣ ಪರಾವಲಂಬಿ ಆಗಬೇಕಾಗುತ್ತದೆ. ವಿಶೇಷತಃ ಅಭಿವೃದ್ದಿ ಹಾಗೂ ಅಭಿವೃದ್ದಿ ಸಾಧಕ ರಾಷ್ಟ್ರಗಳ ನಡುವೆ ತೀವ್ರ ವಿವಾದಕ್ಕೆ ಈಡಾಗಿರುವ ವ್ಯಾಪಾರ ಸಂಬಂಧದ ಬೌದ್ದಿಕ ಹಕ್ಕು (ಪೇಟೆಂಟ್) ಕುರಿತಾಗಿ ಇದೆ. ಇದೇನೇ ಇರಲಿ ಜಗತ್ತಿನ ಬದಲಾವಣೆಗಳಿಗೆ ಸಮರ್ಪಕ  ಎಚ್ಚರದೊಡನೆ ನಮ್ಮ ರೈತಾಪಿ ವರ್ಗವನ್ನು ಸಿದ್ಧಮಾಡಬೇಕಿದೆ. ಇಂದು ಪೇಟೆಂಟ್ ಮಸೂದೆಯು ಮಂಡಿತವಾಗಿದೆ.
ಇನ್ನೂ 1-3-1993ರ ವಿಧಾನ ಸಭಾಧಿವೇಶನದಲ್ಲಿ28 ಡಂಕೆಲ್ ಪ್ರಸ್ತಾವನೆಯನ್ನು ವಿರೋಧಿಸಲು ದೆಹಲಿಗೆ ಹೊರಟ ರೈತರ ಬಂಧನದ ಪ್ರಸ್ತಾಪವಾಗಿ ವಿವರಗಳನ್ನು ಶಾಸಕರು ಚರ್ಚಿಸಿದ್ದಾರೆ.
ಕರ್ನಾಟಕದ ಎಲ್ಲ ರೈತ ನಿಲ್ದಾಣಗಳಲ್ಲಿ ರೈತರು ಉಪವಾಸ ಕುಳಿತಿದ್ದಾರೆ. ಅನೇಕರನ್ನು ಬಂಧಿಸಲಾಗಿದೆ. ಅನೇಕರಿಗೆ ಅನ್ನಹಾರ ಸಿಕ್ಕಿಲ್ಲ, ಬೆಳೆದ ಬೆಳೆಗೆ ಬೆಲೆ ಇಲ್ಲ. ಗೊಬ್ಬರದ ಬೆಲೆ ಏರಿಕೆ ತಮಗೆ ಡಂಕೆಲ್ ಪ್ರಸ್ತಾಪದಿಂದ ಕಷ್ಟ. ಈ ಬಗೆಗೆಲ್ಲ ಪ್ರಧಾನಿಯ ಬಳಿ ತಿಳಿಸಲು ಮನವಿ ಮಾಡಲು, ದೆಹಲಿಗೆ ಹೊರಟಿದ್ದ ರೈತರನ್ನು ಹಾಗೂ ಅವರ ನಾಯಕರನ್ನು ಬಂಧಿಸಲಾಗಿದೆ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು, ಕರ್ನಾಟಕ ರಾಜ್ಯ ರೈತ ಸಂಘವು ಮಾರ್ಚ್ೊ3 ಮತ್ತು 4ರಂದು ದೆಹಲಿಯ ಬೋಟ್ಕ್ಲಬ್ ಮೈದಾನದಲ್ಲಿ ಮತ ಪ್ರದರ್ಶನ ನಡೆಸಲು ಕರೆ ನೀಡಿದೆ. ಕರ್ನಾಟಕದ ವಿವಿಧ ಕಡೆಗಳಿಂದ 15,000 ರೈತರು ಈ ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ರೈತರು ಹೊರಟಾಗ ಟೆಕೆಟ್ ರಹಿತರು ಎಂದು ಪ್ರವಾಸ ಮಾಡಲು ರೈಲ್ವೆಯವರು ತಡೆದರು. ಈ ಸಂದರ್ಭದಲ್ಲಿ 850 ಚಳವಳಿಗಾರರನ್ನು ಬಂಧಿಸಿ 28.2.93ರಂದು ಬಿಡುಗಡೆ ಮಾಡಲಾಯಿತು.
ಹೀಗೆಲ್ಲ ಮಾತುಗಳ ಮಂಡನೆಯಾದ ಮೇಲೆ ಶಾಸಕರ ಧರಣಿಯೂ ನಡೆಯಿತು.
ಪಶ್ಚಿಮ ರಾಷ್ಟ್ರಗಳು ತಮ್ಮ ರೈತರಿಗೆ ಆಂತರಿಕ ಬೆಂಬಲವಲ್ಲದೆ ರಫ್ತು ಸಬ್ಸಿಡಿಯನ್ನು  (ಗ್ರೀನ್ ಹೆಲ್ಪ್,ಬ್ಲೂ ಹೆಲ್ಪ್) ನೀಡಿ ರಕ್ಷಿಸಿವೆ. ಇನ್ನೊಂದು ಅಂಶವೆಂದರೆ ಸರ್ಕಾರದಿಂದ ನೇರವಾಗಿ ಧನ ಸಹಾಯವಾಗುತ್ತ ಬಂದರೂ ಅದು ಶ್ರೀಮಂತ ಹಾಗೂ ಪ್ರಭಾವಿ ರೈತ ವರ್ಗಕ್ಕೆ ದಕ್ಕಿ ಸಣ್ಣ ರೈತರಿಗೆ ಅಷ್ಟಾಗಿ ಲಭ್ಯವಾಗುವುದಿಲ್ಲ. ಈ ಕಾರಣ ಸೇಫ್ಟಿ ನೆಟ್  ರೂಪುಗೊಳ್ಳಬೇಕು. ಕೃಷಿ ಮೇಲಿನ ಒಪ್ಪಂದದ ನೆವದಲ್ಲಿ ಯಾವುದೇ ದೇಶಗಳು ತಮ್ಮ ಉತ್ಪನ್ನಗಳನ್ನು ಇನ್ನೊಂದು ದೇಶದಲ್ಲಿ ರಾಶಿ ಸುರಿದು ಕೃತಕ ಬೆಲೆ ರೂಪಿಸಿ ಏರುಪೇರು ಮಾಡಬಾರದು. ದೋಹಾ ಹಾಗೂ ಕಾನ್ಕುನ್ ಡಬ್ಲೂ.ಟಿ.ಒ ಸಮ್ಮೆಳನಗಳಲ್ಲಿ  ಶ್ರೀಮಂತ ರಾಷ್ಟ್ರಗಳ ನಿರ್ಣಯವನ್ನು ಕೃಷಿ ಸಬ್ಸಿಡಿ ಸಂಬಂಧದಲ್ಲಿ  ಪ್ರಶ್ನಿಸಿದ ಜಿ.22 ರಾಷ್ಟ್ರಗಳಲ್ಲಿ  ಚೀನಾ, ಜಪಾನ್, ದಕ್ಷಿಣ ಕೊರಿಯಾ ಜೊತೆ ಭಾರತವೂ ಸೇರಿ ಏಸಿಯನ್ ಪ್ಲಸ್ಫ್ಲೋರ್ ಸಂಘಟನೆ ಆಗಿ ನಾಫ್ಟಾಗೆ ತೀವ್ರ ಸ್ಪರ್ಧೆ ಒಡ್ಡಿವೆ. ಗ್ಯಾಟ್ ಒಪ್ಪಂದದ ಷರತ್ತು ಜನವರಿ 1-2005ರಿಂದ ಸಂಪೂರ್ಣವಾಗಿ ಜಾರಿಯಾಗಿರುವ ಕಾರಣ ಭಾರತವು ತನ್ನ ರೈತರ ಹಿತಾಸಕ್ತಿಯನ್ನು ರಕ್ಷಿಸಲು ಸ್ಪರ್ಧೆಗೆ ಅವರನ್ನು ಸಿದ್ಧಗೊಳಿಸಬೇಕು. ಜಗತ್ತಿನ ಜೊತೆ ಸಾಗಬೇಕು. ಆದರೆ ಕೃಷಿ ಹಾಗೂ ಕೃಷಿ ಉದ್ಯಮ ಜಾಗತೀಕರಣದ ನೆಪದಲ್ಲಿ ವಿದೇಶಿಯ ಉತ್ಪನ್ನಗಳಿಗೆ ಮಾರಾಟದ ವಸಾಹತು ಭಾರತ ಆಗಬಾರದು. ವಿಶ್ವವ್ಯಾಪಾರ ಸಂಘಟನೆ ಜಗತ್ತಿನ ರೈತರೆಲ್ಲರ ಹಿತಕಾಯದೆ ಸವಲತ್ತಿನ ವರ್ಗಗಳನ್ನು ತನ್ನೊಳಗೆ ಅಡಗಿಸಿ ಸಾಧಿಸತೊಡಗಿದೆ.  ಆದ್ದರಿಂದ ಇಡೀ  ವಿಶ್ವವೇ ಒಂದು ಗ್ರಾಮ ಎಂಬ ಪ್ರತಿಪಾದನೆಗೆ ಬೆಂಬಲ ಕ್ಷೀಣಿಸುತ್ತಿದೆ. ಕ್ಯಾನ್ಕುನ್ ಸಮಾವೇಶದಲ್ಲಿ ರೈತರ ಪರವಾಗಿ ಎತ್ತಿದ ನಮ್ಮ ದನಿ ಹೀಗೆ ಪ್ರಬಲವಾಗಿ ಕೇಳಿಸಲಾಗಿ ಏಸಿಯಾನ್ (ಬ್ಯಾಂಕಾಕ್) ಸಮಾವೇಶದಲ್ಲಿೊಮಣಿಸಬೇಕಾದವರನ್ನು ಮಣಿಸಿತು. ಅಭಿವೃದ್ದಿ ಸಿದ್ದಿ ರಾಷ್ಟ್ರಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ರಾಷ್ಟ್ರೀಕರಣ ಹಾಗೂ ಗ್ರಾಮೀಣ ಕರಣವೂ ಮೂಲಭೂತವಾದದ ಸೋಂಕಿಲ್ಲದೆ ಜಾಗತೀಕರಣದ ದೋಷಗಳಿಗೆದುರು ನಿಲ್ಲಬೇಕು. ಇದು ರೈತರ ಆತ್ಮವಿಶ್ವಾಸಕ್ಕೆ ಅಸ್ತಿಭಾರವಾಗಿ ಚಳವಳಿಯ ಹುರುಪನ್ನು ಕ್ರಿಯಾ ಶೀಲವಾಗಿಡುತ್ತದೆ.
ಇನ್ನು ರೈತ ಚಳವಳಿಯ ಸಂದರ್ಭಗಳಲ್ಲಿ ಹೊರ ರಾಜ್ಯ ಕಬ್ಬು ಸಾಗಾಣಿಕೆ ನಿಷೇಧ ತತ್ಫಲವಾಗಿ ಆಕರಿಸಿದ ನಷ್ಟ (1996), ಕಳ್ಳಂಬೆಳ್ಳ ಅಚ್ಚುಕಟ್ಟುದಾರರ ಮೇಲೆ ಪೊಲೀಸ್ ದೌರ್ಜನ್ಯ (1997), ಅಭಯಾರಣ್ಯದ ಹಿಂದುಳಿದ ರೈತರ ಹೋರಾಟ (1997) ಗೋಕಾಕ್, ದಲಿತ ರೈತರ ಹೋರಾಟಗಳು, ಚನ್ನಪಟ್ಟಣ ಮತ್ತು ರಾಮನಗರದ ರೇಷ್ಮೆ ಗೂಡುಗಳ ತೂಕದಲ್ಲಿ ಮೋಸದ ವಿರುದ್ಧ ಪ್ರತಿಭಟನೆಗಳು, ಕಂದಾಯ ನಿರಾಕರಣೆ,  ಗ್ರಾನೈಟ್ ಸಾಗಾಣಿಕೆ ವಿರೋಧ ಚಳವಳಿ (1984-98) ರಾಯಚೂರು ದಲಿತ ಕೃಷಿ ಕಾರ್ಮಿಕರ ಹೋರಾಟ (1998) ಇವುಗಳ ಸಾಲಿನಲ್ಲಿ ನಮ್ಮ ಗಮನ ಸೆಳೆಯುವ ಪ್ರಮುಖ ರೈತ ಸತ್ಯಾಗ್ರಹವೆಂದರೆ (1980-2000) ಬಾಗೂರು-ನವಿಲೆ-ಹೇಮಾವತಿ ಪ್ರದೇಶದ ಸುರಂಗದ ಕಾರಣ ತೆಂಗಿನ ಮರಗಳು ಒಣಗಲಾಗಿ ರೈತರು ಎಚ್ಚೆತ್ತು ಮಾಡಿದ ಚಳವಳಿ.
ಹಾಸನ ಜಿಲ್ಲೆ ಬಾಗೂರು-ನವಿಲೆ ಪ್ರದೇಶವು ತೆಂಗಿನ ತೋಟಗಳಿಗೆ ಪ್ರಸಿದ್ದಿ. ಪ್ರತಿವರ್ಷ ಪ್ರತಿಮರವು 120ಕ್ಕೂ ಮೀರಿ ಕಾಯಿ ಒದಗಿಸುತ್ತಿತ್ತು. ಸುರಂಗದ ಕಾರಣ ಇಳುವರಿಯೂ ಹತ್ತನೇ ಒಂದು ಭಾಗಕ್ಕೆ ಕುಸಿದು ಬಿಟ್ಟಿತು. ಈ ವಿಷಯ ಮೊದಲಿಗೆ ತಿಳಿಯದೆ ತೆಂಗಿನ ಮರಕ್ಕೆ ರೋಗವೆಂದು ಔಷಧಿ ಹೊಡೆದರೂ ಫಲವಾಗಲಿಲ್ಲ. ಬೋರ್ವೆಲ್ ತೋಡಿದಾಗ ಅವೂ ಬತ್ತಿಹೋಗಲಾರಂಭಿಸಿದುವು. ಅಂತರ್ಜಲವು ಬತ್ತಿ ಬಸಿದು ಹೇಮಾವತಿಗೆ ಸೇರಿಹೋಗುತ್ತಿತ್ತು. ಕೆರೆ ಬಾವಿಗಳು ಒಣಗಿ ಆಹಾರ ಬೆಳೆಗಳೂ ಒಣಗಿ ರೈತರು ಕಂಗಾಲಾದರು. ಹೇಮಾವತಿ ಯೋಜನೆಯಡಿ ಸಕ್ಕರೆ ಕಾರ್ಖಾನೆಗೆ ಕಬ್ಬು ಬೆಳೆದು ಒದಗಿಸುವ ಸಲುವಾಗಿ ಏತ ನೀರಾವರಿ ಯೋಜನೆ ಸಲುವಾಗಿ ತೆಗೆದುಕೊಂಡ ಕ್ರಮಗಳಿಂದಾಗಿ ಬಾಗೂರು-ನವಿಲೆ ಪ್ರದೇಶದ ರೈತರಿಗೆ ನೀರಿನ ಸೌಕರ್ಯಕ್ಕೆ ಕೊರತೆ ಆಗಿತ್ತು. ಒಂದು  ಭಾಗದ ರೈತರ ಬದುಕಿಗೆ ಬೇಕಾದ ತಂಪು ಇನ್ನೊಂದು ಭಾಗದ ರೈತರ ಬದುಕಿಗೆ ಘಾಸಿಯಾಗದಂತೆ ನೋಡಿಕೊಳ್ಳಬೇಕಾದ ಸರ್ಕಾರ ಅಥವಾ ಅಧಿಕಾರಿ ವಲಯವು ತಾಂತ್ರಿಕ ತಜ್ಞರ ಸೂಕ್ತ ಸಲಹೆಯನ್ನು ಗಮನಿಸದಿದ್ದುದೇ ಈ ಎಲ್ಲ ತೊಂದರೆಗಳಿಗೆ ಕಾರಣವಾಗಿತ್ತು. ಈ ಬಗ್ಗೆ 14-7-1980ರ ವಿಧಾನಸಭಾ ನಡವಳಿಕೆಗಳಲ್ಲಿ ಚರ್ಚೆಗಳು ನಡೆದಿವೆ. ಎಂ. ಸದಾನಂದಸ್ವಾಮಿಯವರ ಬಾಗೂರು-ನವಿಲೆ ಸುರಂಗದ ಕುರಿತಾದ ವರದಿಯೂ ಪ್ರಸ್ತಾಪಿಸಿದೆ.29 ಈ ನಂತರ 15.4.1998ರಿಂದ ಬಾಗೂರು- ನವಿಲೆ ಪ್ರದೇಶದ ರೈತರು ತುಮಕೂರು ಜಿಲ್ಲೆಯ ಕೆಲಭಾಗಗಳಿಗೆ ಕುಡಿವ ನೀರಿಗಾಗಿ-ವ್ಯವಸಾಯಕ್ಕಾಗಿ ಹೇಮಾವತಿ ನೀರನ್ನು ಬಾಗೂರು-ನವಿಲೆ ಸುರಂಗದ ಮೂಲಕ ಹಾಯಿಸಲಾಗಿ ಬೆಳೆೊಹಾನಿಗೀಡಾಯಿತೆಂದು ಚಳವಳಿ ಆರಂಭಿಸಿದರು. ಕಾಲುವೆಯ ದಂಡೆಯ ಮೇಲೆ ಧರಣಿ ಕುಳಿತರು. ಆಗ ತುಮಕೂರು ಜಿಲ್ಲಾ ರೈತರು ಕಾಲುವೆ ನೀರು ಹರಿವಿಗಾಗಿ ಒತ್ತಾಯಿಸಿ ಚಳವಳಿ ಆರಂಭಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆರೋಕೊ ಚಳವಳಿ ನಡೆಸಿದರು. ಈ ಬಗೆಗೆ ವಿಧಾನ ಪರಿಷತ್ತಿನ 10-11-1998ರ ನಡವಳಿಕೆಗಳ ಚರ್ಚೆಗಳಲ್ಲಿ ವಿವರಗಳು ಮಂಡಿತವಾಗಿದೆ30 ಈ ಚಳವಳಿ ಸಂದರ್ಭದಲ್ಲಿ ರೈತರ ಮೇಲೆ ಪೋಲಿಸರು ನಡೆಸಿದ ದೌರ್ಜನ್ಯ ಅದರಿಂದಾಗಿ ಚಳವಳಿಕಾರರು 144 ಸೆಕ್ಷನ್ ಜಾರಿಯ ನಡುವೆಯೂ ಹಿಂಸಾ ಕೃತ್ಯಕ್ಕಿಳಿದಾಗ ಪೊಲೀಸರ ಲಾಠಿ ಚಾರ್ಜ್, ಮಹಿಳೆಯರ ಮೇಲೆ ದೈಹಿಕವಾಗಿ ಹಲ್ಲೆ, ಬೆಂಗಳೂರಿನಲ್ಲಿ ಈ ಸಂಬಂಧ ರೈತರ ಚಳವಳಿ ಇವೆಲ್ಲ ನಡೆದುವು. ಈ ಕಾರಣ ಉಭಯ ಸದನಗಳಲ್ಲಿ ಶಾಸಕರು ಸಮರ್ಥವಾಗಿ ವಿಷಯವನ್ನು ಮಂಡಿಸಿ ರೈತರ ನೋವು, ಸಂಕಷ್ಟಗಳನ್ನು ಅಂದರೆ ಬಾಗೂರು-ನವಿಲೆ ಹಾಗೂ ತುಮಕೂರು ಪ್ರದೇಶದ ಉಭಯ ರೈತರಿಗೆ ಸಮಾಧಾನವಾಗುವಂತೆ ಕಾರ್ಯಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಾಯ ಹಾಕಿದುದು ಗಮನಾರ್ಹವಾಗಿದೆ.
ಕ್ರಿ.ಶ. 1970-2000ದ ಅವಧಿಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ರೈತ ಚಳವಳಿಗಳಲ್ಲಿ ಭೂ ಸುಧಾರಣೆ ಮಸೂದೆ ಅನ್ವಯ ಜಮೀನ್ದಾರಿ ಪದ್ಧತಿ ರದ್ದಿಯಾತಿ, ಗೇಣಿದಾರರಲ್ಲಿ ಜಾಗೃತಿ, ಸರ್ಕಾರಿ ಜಮೀನಿನಲ್ಲಿ ಅಕ್ರಮ ಸಾಗುವಳಿ ಮಾಡುತ್ತಿದ್ದ ಹಿಂದುಳಿದ ರೈತರ ಸಾಗುವಳಿಯನ್ನು ಸಕ್ರಮಗೊಳಿಸುವುದು. ಉಳುವವನಿಗೆ ಭೂಮಿ ಎಂಬುದಕ್ಕೆ ಪೂರಕ ಚಳವಳಿ, ರೈತಾಪಿ ಗೇಣಿ ಒಕ್ಕಲುಗಳನ್ನು ಒಕ್ಕಲೆಬ್ಬಿಸುವುದರ ವಿರುದ್ಧ ಕಾಲ್ನಡಿಗೆ ಚಳವಳಿ,ೊ‘ಮನೆಅಡಿ’ ಹಕ್ಕಿಗೆ ಹೋರಾಟ ಕಾರ್ಖಾನೆಯ ಕಶ್ಮಲಪೂರಿತ ನೀರನ್ನು ಸಮುದ್ರಕ್ಕೆ ಬಿಡುವ ತೋಟಗಳ ಮೂಲಕ ಪೈಪಿನಲ್ಲಿ ಸಾಗಿಸುವಲ್ಲಿ ತೈಲ ಸೋರಿಕೆ ಇವುಗಳಿಂದ ಬೆಳೆ ಹಾನಿ, ಜಲಮಾಲಿನ್ಯದ ವಿರುದ್ಧ ರೈತರು ಹಾಗೂ ಮೀನು ಗಾರರ ಜಂಟಿ ಪ್ರತಿಭಟನೆಗಳು ಕೆಚ್ಚಿನ ಹೋರಾಟಗಳೆನಿಸಿವೆ.
ಇವುಗಳಲ್ಲದೆ ವಿದ್ಯುತ್ ಅಸಮರ್ಪಕ ಪೂರೈಕೆ ವಿರುದ್ಧ ಬಡಬನಹಳ್ಳಿ ರೈತ ಪ್ರತಿಭಟನೆ (1999), ಶುಂಠಿ ಬೆಳೆಯ ದರ ಕುಸಿತದ ಕಾರಣ ಉತ್ತರ ಕೊಡಗಿನ ರೈತ ಪ್ರತಿಭಟನೆ (2000), ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಬೇಡಿ ಮಾಡಿದ ಧಾರವಾಡದ ರೈತ ಜನಶಕ್ತಿ ಪ್ರತಿಭಟನಾ ರ್ಯಾಲಿ (2000), ಕೊಡಗಿನ ಕಾಫಿ, ಹಾಸನದ ಆಲೂಗೆಡ್ಡೆಯ ಬೆಲೆ ಕುಸಿತಕ್ಕೆ ಪರಿಹಾರ ಬಯಸಿ ಪ್ರತಿಭಟನೆ (2000), ಮೆಕ್ಕೆ ಜೋಳ ಖರೀದಿಯಲ್ಲಿ ಮಾಡುವ ಅನ್ಯಾಯದ ವಿರುದ್ಧ ಕೊಪ್ಪಳದಲ್ಲಿ ರೈತರ ಉಗ್ರ ಪ್ರತಿಭಟನೆ, ಪೋಲಿಸದಿಂದ ಲಾಠಿ ಪ್ರಹಾರ, ಗಾಳಿಯಲ್ಲಿ ಗುಂಡು ಹಾರಿಸಿದ್ದು (2000), ಗಂಗಾವತಿಯಲ್ಲಿ ಭತ್ತಕ್ಕೆ  ಸೂಕ್ತಬೆಲೆಗಾಗಿ ಬಂದ್ ಆಚರಣೆ, ಹಿಂಸಾಚಾರ, ಲಾಠಿಪ್ರಹಾರ, ನಿಷೇಧಾಜ್ಞೆ  (2000) ಇತ್ಯಾದಿಗಳು ಹನಿಹನಿ ರೈತ ಚಳವಳಿಗಳಂತೆ ಕಾಣುತ್ತವೆ. ಇವು ಕೃಷಿಕಾರರ ವಿವಿಧ ಸಮಸ್ಯೆಗಳ ತೀವ್ರ ಸಂವೇದನೆಯ ಚಿತ್ರ, ಸಂಕೀರ್ಣ ಹಂತಗಳಲ್ಲಿ ಗೋಚರಿಸುತ್ತವೆ.
ಈ ಸಂದರ್ಭದ ವಿಧಾನಸಭಾ ಕಲಾಪಗಳಲ್ಲಿ 7-11-2000, ಭತ್ತದ ಖರೀದಿ ವ್ಯವಸ್ಥೆ ಬೆಂಬಲ ಬೆಲೆ, ಸರ್ಕಾರದ ಮಾರುಕಟ್ಟೆಯ ಪ್ರವೇಶ, ಬೆಲೆ ಕುಸಿತ ತಡೆಯಲು ಆವರ್ತನಿಧಿ ಸ್ಥಾಪನೆ ಇತ್ಯಾದಿಗಳು ಪ್ರಸ್ತಾಪವಾಗಿ ರೈತರಿಗೆ ಪರಿಹಾರ ಒದಗಿಸುವ ಬಗೆಯಾಗಿ ಮಂಡಿತವಾದವು. ವಿಶ್ವವಾಣಿಜ್ಯ ಒಪ್ಪಂದದ ಪರಿಣಾಮಗಳ ಕುರಿತೂ ಚರ್ಚೆ ಆಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈ ಬಗ್ಗೆ ಚಳವಳಿ ಹಮ್ಮಿಕೊಳ್ಳು ವುದಾಗಿ ಪ್ರಕಟಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಬೆಲೆ ಕುಸಿತದ ಕಾರಣ ಹೊಸದುರ್ಗದ ತೆಂಗು ಬೆಳೆಗಾರರೂ ಸೇರಿದಂತೆ ಟೊಮ್ಯಾಟೊ, ಈರುಳ್ಳಿ, ಮೆಕ್ಕೆ ಜೋಳವನ್ನು ವಿವಿಧ ಕಡೆಯ ರೈತರು ಬೀದಿಗೆ ಸುರಿದು ಪ್ರತಿಭಟನೆ ಮಾಡಿದರು. ತಾಲೂಕು ಕಛೇರಿ ಮುಂದೆ ತೆಂಗಿನಕಾಯಿಗಳನ್ನೂ ರಾಶಿ ಹಾಕಿ ಬೆಂಕಿಹಚ್ಚಿ ಪ್ರತಿಭಟಿಸಿದರು. ಗುಲ್ಬರ್ಗಾ ಜಿಲ್ಲೆಯಲ್ಲಿ ತೊಗರಿ ಬೆಳೆ, ಸೂಳ್ಯದಲ್ಲಿ ಕೃಷಿ ಉತ್ಪನ್ನಗಳ ಪಾಡೂ ಹೀಗೆಯೇ ಪ್ರತಿಭಟನೆಗೆ ಎಡೆಗೊಟ್ಟಿತ್ತು(2000). ಮೆಕ್ಕೆಜೋಳವನ್ನು ತಂದು ಬಳ್ಳಾರಿಯ ಎಪಿಎಂಸಿಯಲ್ಲಿ ತಾತ್ಕಾಲಿಕ ದಾಸ್ತಾನು ಸಂಗ್ರಹಕ್ಕೆ ರೈತರು ಬಯಸಿದಾಗ ಗೋಡೌನ್ ಕೊರತೆ ಎಂದು ಖರೀದಿ ನಿಲ್ಲಿಸಿದ್ದ ಅಧಿಕಾರಿಗಳೆದುರು ಆಗ್ರಹಿಸಿ ಪ್ರತಿಭಟನೆ ಮಾಡಿದರು. ಉದ್ರಿಕ್ತ ರೈತರು ಮಾರುಕಟ್ಟೆಯ ಎಲ್ಲ ಪ್ರವೇಶದ್ವಾರಗಳನ್ನು ಬಂದ್ ಮಾಡಿದರು. ನಂತರ ಖರೀದಿ ಪ್ರಾರಂಭಗೊಂಡು ದಾಸ್ತಾನು ಸಂಗ್ರಹಕ್ಕೂ ಅಧಿಕಾರಿಗಳು ಒಪ್ಪಿದಾಗ ಪ್ರತಿಭಟನೆ ನಿಂತಿತು. ಹೀಗೆಯೇ ಕೊಡಗು-ಹಾಸನ ಜಿಲ್ಲೆಯ ಕಾಫಿ ಬೆಳೆಗಾರರು ಕಾಫಿಬೆಲೆ ಕುಸಿತದ ವಿರುದ್ಧ ಮಾಡಿದ ಪ್ರತಿಭಟನಾಸಭೆ, ಉತ್ತರ ಕರ್ನಾಟಕದಲ್ಲಿ ಭತ್ತದ ಬೆಲೆ ಕುಸಿತದ ಕಾರಣ ಮಾಡಿಕೊಂಡ ಪ್ರಜ್ಞೆ ಕೆದಕುವ ಪ್ರತಿಭಟನೆಯ ಪ್ರತೀಕವಾದ ಆತ್ಮಹತ್ಯೆ, ಪಿರಿಯಾಪಟ್ಟಣದ ತಂಬಾಕು ಬೆಳೆಗಾರರ ಪ್ರತಿಭಟನೆ, ಧಾರವಾಡದ ಜಿಲ್ಲಾಧಿಕಾರಿಗಳ ಕಛೇರಿಗೆ ಖರೀದಿ ಕೇಂದ್ರದ ಅವ್ಯವಸ್ಥೆ, ಅಧಿಕಾರಿಗಳ ದುರ್ವರ್ತನೆ ಕಾರಣ ಆಲೂಗೆಡ್ಡೆ ರೈತರ ಮುತ್ತಿಗೆ, ಹೊನ್ನಾವರ ತಾಲೂಕು ಅರಣ್ಯದಲ್ಲಿ ಸಾಗುವಳಿ ಮಾಡುತ್ತಿದ್ದ ಬಡರೈತರನ್ನು ಒಕ್ಕಲೆಬ್ಬಿಸಲು ಅರಣ್ಯಾಧಿಕಾರಿಗಳು ಪೊಲೀಸ್ ಬಲ ಬಳಸಿದ ವಿರುದ್ಧ ವಿಧಾನಸಭೆಯಲ್ಲಿ  ಶಾಸಕರ ಧರಣಿ, ಮೆಣಸಿನಕಾಯಿಯನ್ನು ಬೆಂಗಳೂರಿನ ಎಪಿಎಂಸಿ ಯಾರ್ಡಿನಲ್ಲಿ ಕೊಳ್ಳದಿದ್ದಾಗ ರೈತರು ಅದನ್ನು ದಾರಿಯಲ್ಲಿ ಚಲ್ಲಿ ತೋರಿದ ಪ್ರತಿಭಟನೆ, ಮಂಡ್ಯ ಸಕ್ಕರೆ ಕಾರ್ಖಾನೆ ಕಬ್ಬಿನ ಬೆಳೆಗೆ ಮುಂಗಡ ಕಡಿತಗೊಳಿಸಿದ ಕಾರಣ ರೈತಸಂಘದ ಪ್ರತಿಭಟನೆ, ಈರುಳ್ಳಿ ಬೆಲೆ ಕುಸಿತದ ವಿರುದ್ಧ ನವಲುಗುಂದ, ಹುಬ್ಬಳ್ಳಿಯಲ್ಲಿ ರಸ್ತೆತಡೆ ಚಳವಳಿ, ರೇಷ್ಮೆಬೆಳೆಯ ರೇಷ್ಮೆಗೂಡು ಮಾರಾಟ ಸಂಬಂಧದ ಅವ್ಯವಹಾರಗಳ ವಿರುದ್ಧ ರಾಮನಗರ, ಕೊಳ್ಳೆಗಾಲ ಚಾಮರಾಜನಗರದ ರೈತರ ಪ್ರತಿಭಟನೆ, ಅಂಗಾಂಶ ಕೃಷಿ  ಪದ್ಧತಿಯಲ್ಲಿ ಬೆಳೆದ ಬಾಳೆಯ ಇಳುವರಿ ನಷ್ಟಕ್ಕೆ ಅಮೆರಿಕನ್ ಸೀಡ್ ಕಂಪೆನಿ ಪರಿಹಾರ ನೀಡದಿದ್ದುದಕ್ಕೆ ರೈತರ ಪ್ರತಿಭಟನೆ. ಕರಿಮೆಣಸು ಮತ್ತು ಕಾಫಿ ಬೆಲೆ ಕುಸಿತ ವಿರುದ್ಧ ಹೋರಾಟ, ಈರುಳ್ಳಿ ಆಲೂಗಡ್ಡೆ, ಭತ್ತ ಜೋಳದ ಬೆಳೆಗಳಿಗೆ ಧಾರವಾಡ ಜಿಲ್ಲಾ ರೈತರ ಪ್ರತಿಭಟನೆ, ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ಸಂಬಂಧದಲ್ಲಿ ಸರ್ಕಾರಿ ನಿಲುವನ್ನು ವಿರೋಧಿಸಿ ಕ್ರೈಸ್ಟ್ಗೇಟ್ ಅಳವಡಿಸಲು ಒತ್ತಾಯಿಸಿ ಮಾಡಿದ ಕರಸೇವೆ ಇತ್ಯಾದಿಗಳು 1999-2000ದ ಅವಧಿಯಲ್ಲಿ ನಡೆದ ರೈತ ಹೋರಾಟಗಳಾಗಿವೆ. ಇಲ್ಲಿ ಸಮಸ್ಯೆಗಳೂ ವೈವಿಧ್ಯಮಯ, ಸಂಕೀರ್ಣ. ಹೋರಾಟದ ಸ್ವರೂಪಗಳೂ ವಿವಿಧ ಬಗೆಯಲ್ಲಿ ವ್ಯಕ್ತಗೊಂಡಿವೆ. ರೈತರು ಹೋರಾಟಗಳಿಗೆ ಅಧಿಕಾರಿ ವರ್ಗ ಸರ್ಕಾರ ಸಹಿತವಾಗಿ ಗಮನ ಹರಿಸಲೇಬೇಕಾದ ಸ್ಥಿತಿ ನಿರ್ಮಾಣವಾದದ್ದು ವಿಶೇಷ. ಇಲ್ಲಿ ಶಾಸಕರ ಬೆಂಬಲವೂ ರೈತರ ಪರವಾಗಿ ವ್ಯಕ್ತವಾದದ್ದಕ್ಕೆ ರಾಜಕೀಯ ಲೇಪನ ಮಾಡುವಂತಿಲ್ಲ. ಕಾರಣ ಹಾಗಿತ್ತು ಅವರ ಕಾಳಜಿಯ ಬಗ್ಗೆ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿಗಳ ವಿಧೇಯಕವು ವಿಧಾನಸಭೆಯ ಅಧಿವೇಶನದಲ್ಲಿ ಸುದೀರ್ಘ ಚರ್ಚೆಗೊಳಪಟ್ಟು ಅದರ ಇತಿಮಿತಿಗಳನ್ನು ಪರಿಶೀಲಿಸಿ ಗೇಣಿದಾರರ ರಕ್ಷಣೆಗಾಗಿ ತೀರ್ಮಾನಗೊಂಡ ವಿಷಯವಾಗಿತ್ತು.31 ಇದೆಲ್ಲ ರೈತ ಹೋರಾಟಗಳು ಶಾಸಕರ ಪ್ರಜ್ಞೆಯ ಆಳವನ್ನು ಕೆದಕಿದ ಕಾರಣವೆ ಆಗಿತ್ತೆನ್ನಬೇಕು. ತತ್ಫಲವಾಗಿ ಅಕ್ರಮ ಸಾಗುವಳಿಯನ್ನು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಸಕ್ರಮಗೊಳಿಸುವಿಕೆ, ಭೂಮಾಲೀಕ ಹಾಗೂ ಗೇಣಿದಾರರಿಗೆ ಅನ್ಯಾಯವಾಗದಂಥ ಸಮಾಧಾನಕರ ತೀರ್ಮಾನ, ಕೃಷಿ ಪಾಸ್ ಪುಸ್ತಕದ ವಿತರಣೆಗಳು ಆದವು.
ರೈತರ ಆತ್ಮಹತ್ಯೆಗಳು
1996ರಿಂದ 2006ರವರೆಗೆ ಅಲ್ಲಲ್ಲಿ ನಡೆದುವು. ಆದರೆ 2000ದ ನಂತರ 2003ರಲ್ಲಿ ರೈತರ ಸರಣಿ ಆತ್ಮಹತ್ಯೆಗಳು ಮಳೆವಿಫಲತೆ, ಬೆಳೆಹಾನಿ, ಸತತ ಬರದ ಬೇಗೆ, ಸಾಲದ ಬಾಧೆ, ಬೆಲೆ ಕುಸಿತ, ಹತಾಶೆ, ಜುಗುಪ್ಸೆಗಳಿಂದಾಗಿ ನಡೆದವು. ಮಾನವಾಗಿ ಬಡತನದಲ್ಲಿಯೂ ಬದುಕಿದ ಬಾಳಿಗೆ ಬೇರೆ ದಾರಿಯಿಲ್ಲದೆ ಸರೀಕರೆದುರು, ಸಾಲದಿಂದಾಗಿ ಜಪ್ತಿ ಇತ್ಯಾದಿ ಕಾಟಗಳಿಂದ ಮಾನ ಹರಾಜಾಯಿತೆಂದು ಆತ್ಮಹತ್ಯೆ ಮಾಡಿಕೊಂಡ ರೈತರೇ ಹೆಚ್ಚು. ಅದು ಕೈಯಾರೆ ಕಳೆದುಕೊಂಡ ಜೀವದಸ್ತಿತ್ವ. ಸ್ವಯಂ ಜೀವಹಾನಿ, ಕೈಯಾರೆ ಅಪ್ಪಿದ ಸಾವು ಎಂದೆಲ್ಲ ಇಲ್ಲಿ ಹೇಳಬಹುದು. ರೈತರು ಸಾಮಾಜಿಕ ಹಾಗೂ ಸರ್ಕಾರ ಪ್ರಜ್ಞೆಯನ್ನು ಕೆದಕಲು ರೈತರು ತೋರಿದ ಪ್ರತಿಭಟನೆಯ ಒಂದು ರೂಪ ಆತ್ಮಹತ್ಯೆ ಎನ್ನುವಂತಾಗಿತ್ತು. ಹೀಗೆ ಸರಣಿ ಆತ್ಮಹತ್ಯೆಗಳು ನಡೆದ ಮೇಲೆ ಸರ್ಕಾರ ಹಾಗೂ ಸುದ್ದಿ ಮಾಧ್ಯಮಗಳು ಎಚ್ಚೆತ್ತವು. ಪರಿಹಾರ ಸಮಿತಿ ಹಾಗೂ ವರದಿಗಳ ಅನ್ವಯ ಪರಿಹಾರದತ್ತ ಗಮನ ಕೇಂದ್ರೀಕೃತವಾಯಿತು. ಈ ಆತ್ಮಹತ್ಯೆಗಳು ನೇಣು, ಕರೆಗೆ ಬಲಿ, ವಿಷಪ್ರಾಶನ, ಕ್ರಿಮಿನಾಶಕ ಸೇವನೆ, ಅತಿ ಮದ್ಯಪಾನ, ವಿದ್ಯುತ್ ಸ್ಪರ್ಶ ಇತ್ಯಾದಿಗಳ ಮೂಲಕವಾಗಿ ನಡೆದುವು. 1998ರ ವಿಧಾನಸಭಾಧಿವೇಶನದಲ್ಲಿ32 ರೈತರ ಆತ್ಮಹತ್ಯೆಗಳ ಬಗ್ಗೆ ಪ್ರಸ್ತಾಪ ಹಾಗೂ ಹೆಚ್ಚಿನ ಪರಿಹಾರಕ್ಕೆ ಶಾಸಕರ ಧರಣಿಯೂ ನಡೆಯಿತು. ಸಭಾತ್ಯಾಗಗಳು ನಡೆದವು. ವಿಚಾರಸಂಕಿರಣಗಳಲ್ಲಿಯೂ ಈ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ನಂತರ ಪರಿಹಾರ ರೂಪವಾಗಿ ರೈತರ  ಸಂಪರ್ಕಕೇಂದ್ರ, ಆವರ್ತನಿಧಿ, ರೈತ ಕಾಯಕ ಕೆರೆ, ರೈತಸಂತೆ, ಯಶಸ್ವಿನಿ ಇತ್ಯಾದಿ ಯೋಜನೆಗಳನ್ನು ರೈತರಿಗಾಗಿ ರೂಪಿಸಲಾಯಿತು. ಆತ್ಮಹತ್ಯೆಯ ರೈತನ ಕುಟುಂಬಕ್ಕೆ ಅರ್ಹವಾದವುಗಳಿಗೆ ಒಂದು ಲಕ್ಷ ರೂ.ಗಳ ಪರಿಹಾರ ಧನವನ್ನು ನೀಡಲಾಯಿತು. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಸಹಕಾರಿ ಸಂಘಗಳಲ್ಲಿನ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಭರವಸೆ ನೀಡಿತ್ತು.
ಮುಂದೆ ಬಹುರಾಷ್ಟ್ರೀಯ ಕಂಪೆನಿಗಳೂ ಸಿದ್ಧಪಡಿಸಿದ ಬಿ.ಟಿ ಹತ್ತಿ ತಳಿ ಅಂದರೆ ಕುಲಾಂತರಿ ತಳಿಗಳ ವಿರುದ್ಧ ರೈತ ಸಂಘಟನೆಗಳು ಚಳವಳಿ ನಡೆಸಿದುವು. ಮಣ್ಣಿನಲ್ಲಿರುವ ಬ್ಯಾಸಿಲಸ್ ತುರಿಂಜಿ ಎನ್ಸಿಸ್ ಎಂಬ ಬ್ಯಾಕ್ಟೀರಿಯವು ಹೊಂದಿರುವ ಪ್ರೋಕೆಲವು ನಿರ್ದಿಷ್ಟ ಕೀಟಗಳನ್ನು ಕೊಲ್ಲುವಂಥ ನಂಜು ಆಗಿದೆ. ಇಂಥ ಬಿ.ಟಿ ವಂಶವಾಹಿ ಕಣವನ್ನು ಹತ್ತಿ ಬೀಜಕ್ಕೆ  ಸೇರಿಸಿ ಅದನ್ನು ಕೀಟಬಾಧೆ ರಕ್ಷಿತ ಮಾದರಿ ಹತ್ತಿ ಬೀಜವನ್ನು ರೂಪಿಸಲಾಗುತ್ತದೆ. ಈ ಜೈವಿಕ ಮಾರ್ಪಾಟಿನ ಹತ್ತಿಯಲ್ಲಿರುವ ಬಿ.ಟಿ ಟಾಕ್ಸಿನ್ ಪರಿಣಾಮಕಾರಿ ಕೀಟವಾಗಿ ಕೆಲಸ ಮಾಡುತ್ತದೆ.33 ಈ ಬಿ.ಟಿ. ಹತ್ತಿಯನ್ನು ಬೆಂಬಲಿಸಿದವರು ಪಾರಂಪರಿಕ ಕೀಟನಾಶಕಗಳ ಬಳಕೆಯ ಕಡಿತ, ಪರಿಸರ ನಿರ್ವಹಣೆ, ಉತ್ಪನ್ನವೆಚ್ಚ, ಮಿಗಿತಾಯ, ಸುಧಾರಿಸಿದ ಇಳುವರಿ, ರೈತರ ಆರೋಗ್ಯ ಸುಧಾರಣೆ, ಗ್ರಾಹಕರಿಗೆ ಸುಲಭ ಬೆಲೆಗೆ ಉತ್ತಮ ಉತ್ಪನ್ನ ಲಭ್ಯತೆ ಇತ್ಯಾದಿ ಉಪಯೋಗಕಾರಕ ವಾದವನ್ನು ಮುಂದಿಡುತ್ತಾರೆ. ವಿರೋಧಿಸುವವರು, ಬಿ.ಟಿ. ಹತ್ತಿಯ ಟಾಕ್ಸಿನ್ಗಳು ಗಿಡದ ಮೇಲ್ಭಾಗದಲ್ಲಿ ಮಾತ್ರ ಕಾಣಿಸಿಕೊಂಡು ಉಳಿದ ಭಾಗಗಳಲ್ಲಿ ಸಮರ್ಥ ನಿರೋಧ ಶಕ್ತಿಯಾಗಿ ಕೆಲಸ ಮಾಡುವುದಿಲ್ಲ. ಅಲರ್ಜಿಕಾರಕವಾಗಿದೆ. ಸ್ಥಳೀಯ ಜೈವಿಕ ವೈವಿಧ್ಯತೆಯ ಮೇಲೆ ಹಾನಿಕಾರಕ ಪರಿಣಾಮವನ್ನು ಉಂಟುಮಾಡುತ್ತದೆ. ಈ ತಳಿಯ ವಿಪರೀತ ಬಳಕೆಯಿಂದ ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಕೃಷಿ ಸಂಶೋಧನ ಸಂಸ್ಥೆಗಳ ನಡುವೆ ಲಾಬಿ ಏರ್ಪಡುತ್ತದೆ. ಕೃಷಿಯ ಮೇಲೆ ಕೈಗಾರಿಕೋದ್ಯಮವು ಸವಾರಿ ಮಾಡುತ್ತದೆ. ಜಗತ್ತಿನ ಬೇರೆಡೆ ಈ ಬೀಜ ಕಂಪೆನಿ ಹೇಳಿದ್ದ ಮಟ್ಟಕ್ಕಿಂತ ಇಳುವರಿ ಕಡಿಮೆಯಾಗಿ ಅಲ್ಲಿನ ರೈತರು ಬಿ.ಟಿ. ಹತ್ತಿಗೆ ಬೆಂಕಿ ಇಟ್ಟರು ಎಂದೆಲ್ಲ ವಾದವಿಡುತ್ತಾರೆ.
ಭಾರತದಲ್ಲಿ ಈ ಬಗ್ಗೆ ಪ್ರಯೋಗ ನಡೆದರೂ ಅನುಮಾನವಾಗಿ ಗುಜರಾತಿನ ಸುಮಾರು 9 ಸಾವಿರ ಎಕರೆಯಲ್ಲಿನ ವಿಪುಲವಾಗಿ ಬೆಳೆದು ನಿಂತ ಜೊತೆಗೆ ಅಲ್ಲಿ ಅದು ಅಕ್ರಮ ಬೆಳೆ ಆಗಿತ್ತು. ಬಿ.ಟಿ ಹತ್ತಿ ಎಳೆಗಳನ್ನು ಸುಡಲು ಕೇಂದ್ರ ಸರ್ಕಾರ ನಿರ್ಧರಿಸಿತು. ಇದು ರೈತರಲ್ಲಿ ಅಸಮಾಧಾನವನ್ನು ಉಂಟು ಮಾಡಿತು. ಅದು ಬಹುರಾಷ್ಟ್ರೀಯ ಕಂಪೆನಿಯಾದ ಮಾನ್ಸಾಂಟೊ ಹಾಗೂ ಮಹಾರಾಷ್ಟ್ರದ ಮಾಯ್ಕ ಕಂಪೆನಿ ತಯಾರಿಸಿದ ವಿಶೇಷ ತಳಿಯ ಹತ್ತಿಯಾಗಿತ್ತು. ಗುಜರಾತಿನಂತೆ ಬೇರೆಡೆ ಈ ಹತ್ತಿಯ ಇಳುವರಿ ಹೆಚ್ಚಿದ, ಕಡಿಮೆಯಾಗಿದ್ದ ಕಾರಣ ಬೆಂಕಿ ಹಾಕಿದ್ದುಂಟು. ಕರ್ನಾಟಕದಲ್ಲಿ ರೈತ ನಾಯಕರು ಈ ಬೆಳೆಗೆ ಬೆಂಕಿ ಕೊಟ್ಟರು. ರೈತ ಸಂಘದ ನಾಯಕ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ ರೀತ್ಯ ಭಾರತಕ್ಕೆ ಇದು ಸೂಕ್ತ ಬೆಳೆ ಅಲ್ಲ. ಭಾರತದ ಕೃಷಿಯನ್ನು ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಸಂಚು ಇದು. ರಾಸಾಯನಿಕರಹಿತ ಪೀಡೆ ನಿಯಂತ್ರಣ ಪದ್ಧತಿ ನಮ್ಮಲ್ಲಿದ್ದು ಈಗ ರೈತರ ನಡುವೆ ಜನಪ್ರಿಯವಾಗುತ್ತಿದೆ. ಇಂಥ ಸ್ವಾವಲಂಬನೆಯನ್ನು ಬಹುರಾಷ್ಟ್ರೀಯ ಕಂಪೆನಿಗಳು ನಾಶ ಮಾಡಲೆತ್ನಿಸುತ್ತಿವೆ. ಈ ಹತ್ತಿ ಕೃಷಿಯಿಂದ ಜಾನುವಾರುಗಳು ರೋಗಕ್ಕೀಡಾಗುವ ಆತಂಕವಾಗಿದೆ. ಈ ವಂಶವಾಹಿ ವರ್ಗಾವಣೆ ನೈಸರ್ಗಿಕವಲ್ಲ. ನಮ್ಮ ಜೈವಿಕ ವ್ಯವಸ್ಥೆ ಹಾಳಾಗುತ್ತದೆ. ಈ ಕಾರಣಗಳಿಂದ ರೈತ ಸಂಘವು ರಾಜ್ಯದಾದ್ಯಂತ ಬಿ.ಟಿ. ಹತ್ತಿ ತಿರಸ್ಕರಿಸಲು ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿತು. ಅದರಂತೆ 9-8-2002ರಂದು ರೈತ ಸಂಘದ ಸಾವಿರಾರು ರೈತರು ಪ್ರೊ. ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ನಗರದ ರೈಲು ನಿಲ್ದಾಣದಿಂದ ಮಾನ್ಸಾಂಟೋ ಕೇಂದ್ರದವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆಯನ್ನು ನಡೆಸಿದರು. ರೈತರ ನಿಯೋಗವೊಂದು ಕಂಪೆನಿಯ ನಿರ್ದೇಶಕರಲ್ಲಿಗೆ ಹೋಗಿ ತೆರವು ಮಾಡಲು ಪತ್ರವನ್ನು ನೀಡಿತು. ಒಟ್ಟಾರೆ ರೈತರ ಈ ಪ್ರತಿಭಟನೆಯಲ್ಲಿ ದೇಶೀಕರಣ ಹಾಗೂ ಬಿ.ಟಿ. ತಂತ್ರಜ್ಞಾನಕ್ಕೆ ಪರ್ಯಾಯವಾಗಿ ಸ್ಥಳೀಯ ತಳಿಗಳನ್ನು ನಮ್ಮ ಕೃಷಿ ವಿಜ್ಞಾನಿಗಳು ಅಭಿವೃದ್ದಿಪಡಿಸಲಿ ಎಂಬ ಗುರಿ ಇತ್ತು.
ನೀರಾ ಚಳವಳಿ


ನೀರಾ, ತೆಂಗಿನ ಮರದಿಂದ ಸೂರ್ಯೋದಯದ ಮುನ್ನ ಇಳಿಸುತ್ತಿದ್ದ ಪೇಯ. ಅದು ಹೆಂಡವಲ್ಲ. ಸದ್ದಿಲ್ಲದೆ ನಡೆಯುತ್ತಿದ್ದ ಇದರ ಇಳಿಕೆ ಬಳಕೆಯಿಂದ ಸಾಕಷ್ಟು ಆದಾಯವೂ ಇತ್ತು. ಅಮಲು ಅಥವಾ ನಿಶೆ ತರದಿದ್ದ ಈ ಪೇಯವನ್ನು ಹೆಂಡವಾಗಿ ಪರಿವರ್ತಿಸಿ ಮಾರತೊಡಗಿದಾಗ ಸರ್ಕಾರ ಪರವಾನಗಿಯನ್ನು ಈ ಹಿಂದೆ ರದ್ದು ಮಾಡಿ ಎಚ್ಚರಿಸಿತ್ತು. ಆದರೆ ತೆಂಗಿನ ನುಸಿರೋಗ ತಗುಲಿದಾಗ ಕಾಯಿಯ ಇಳುವರಿ ಹಾಗೂ ಆದಾಯ ಎರಡೂ ಕುಸಿಯಿತು. ರೈತರಿಗೆ ಪರ್ಯಾಯ ತೋಚಿರಲಿಲ್ಲ. ಆಂಧ್ರ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ನೀರಾ ಹಾಗೂ ನೀರಾ ಉತ್ಪನ್ನಗಳಿಂದ ಒದಗುತ್ತಿದ್ದ ಆದಾಯ ಗಮನಕ್ಕೆ ಬಂತು. ನುಸಿರೋಗಕ್ಕೆ ನೀರಾ ಇಳಿಕೆ ಒಂದು ಮದ್ದು ಎಂಬ ಭಾವನೆ ಬೆಳೆಯಿತು. ಇದಕ್ಕೆ ರಾಜ್ಯ ರೈತ ಸಂಘದ ಎರಡೂ ಬಣಗಳೂ ರೈತರ ಬೆಂಬಲಕ್ಕೆ ನಿಂತು ನೀರಾ ಚಳವಳಿಗೆ ಸ್ವರೂಪ ಕೊಟ್ಟವು. ರೈತ ಸಂಘದ ನಾಯಕರು ಹಳ್ಳಿಗಳಲ್ಲಿ ತೆಂಗಿನ ಮರಗಳಿಗೆ ಮಡಕೆ ಕಟ್ಟಿ ನೀರಾ ಇಳಿಸತೊಡಗಿದರು. ರಾಜಕೀಯ ಪಕ್ಷಗಳೂ ನೀರಾ ಸಂದರ್ಭವನ್ನು ಕೈಗೆತ್ತಿಕೊಂಡವು. ರೈತ ಸಂಘ ಹಾಗೂ ಸರ್ಕಾರದ ನಡುವೆ ಸಂವಾದವೂ ನಡೆಯಿತು. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ನೀರಾ ಇಳಿಸಲು ಅನುಮತಿ ನೀಡುವ ಬಗ್ಗೆ ಚರ್ಚೆಗಳು ನಡೆದುವು.34 ಧರಣಿ ಸತ್ಯಾಗ್ರಹಗಳೂ ನಡೆದವು. ಸರ್ಕಾರವು ಸಾಧಕ ಬಾಧಕ ನೋಡಿ ನಿರ್ಧಾರಕ್ಕೆ ಬರಬೇಕಾಯಿತು. ಈ ಸಂದರ್ಭದಲ್ಲಿಯೇ ವಿಠಲೇನ ಹಳ್ಳಿಯಲ್ಲಿ ನೀರಾ ಇಳಿಸಿ ಚನ್ನಪಟ್ಟಣಕ್ಕೆ ಒಯ್ದು ಮಾರಾಟ ಮಾಡುತ್ತಿದ್ದ ರೈತರ ಬಂಧನ, ವಿಠಲೇನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿ ಕಲ್ಲು ತೂರಾಟ ನಡೆದಾಗ ಪೊಲೀಸರು ಮಾಡಿದ ಗೋಲಿಬಾರ್ಗೆ ರೈತನೊಬ್ಬ ಸಾವಿಗೀಡಾದದ್ದು (8-10-2001) ಮಾಜಿ ಸಂಸದ ಜಿ.ಮಾದೇಗೌಡರು ರೈತರ ಮೇಲಿನ ಈ ದೌರ್ಜನ್ಯದ ವಿರುದ್ಧ ರಾಜ್ಯವ್ಯಾಪಿ ಚಳವಳಿ ಹಮ್ಮಿಕೊಳ್ಳುವ ಬಗ್ಗೆ ಹೇಳಿದ್ದು(13-10-2001), ನೀರಾ ಇಳಿಕೆ ಮತ್ತು ಮಾರಾಟಕ್ಕೆ ಸರ್ಕಾರದ ಅನುಮತಿ ದೊರೆತದ್ದು(28-10-2001), ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಿಠಲೇನಹಳ್ಳಿಯಲ್ಲಿ ಆದ ಗೋಲಿಬಾರ್ನಿಂದ ರೈತರು ಮೃತಪಟ್ಟ ಕಾರಣಕ್ಕೆ ಪ್ರತಿಭಟಿಸಿ ‘ಬೆಂಗಳೂರು ಚಲೊ’ ಪಾದಯಾತ್ರೆಯನ್ನು ಪಶ್ಚಾತ್ತಾಪ  ಪಾದಯಾತ್ರೆ ಎಂದು ಮಾಡಿದ್ದು (1.11.2001) ಇವೆಲ್ಲ ಸರಣಿಯಾಗಿ ನಡೆದುವು. ನೀರಾ ಸಂಬಂಧ ಸರ್ಕಾರ ಕೊಟ್ಟ ಪರವಾನಗಿಯನ್ನು ಸಾಧಕ ಬಾಧಕ ಗಮನಿಸಿ ತಾತ್ಕಾಲಿಕವಾಗಿ ಕೊಟ್ಟಿರುವುದಾಗಿತ್ತು. ಗೋಲಿಬಾರ್ ಪ್ರಕರಣದ ವಿಚಾರಣೆಗೆ ನ್ಯಾಯ ಮೂರ್ತಿಯೊಬ್ಬರ ನೇತೃತ್ವದ ವಿಚಾರಣಾ ಆಯೋಗವನ್ನು ಸರ್ಕಾರ ನೇಮಿಸಿತು. ರೈತರಿಗೆ ನಿಜವಾದ ನೀರಾದಿಂದ ಆದಾಯ ಖಚಿತವಾಗುತ್ತ ಬಂದರೆ ಅದೊಂದು ಸಮಾಧಾನಕರ ಮಾರ್ಗವಾಗಿ ಮುಂದುವರಿಯಬಹುದು ಎಂದಾಗಿತ್ತು.
ಕಾವೇರಿ ಚಳವಳಿ
ಕನ್ನಡನಾಡಿನ ಬದುಕನ್ನು ಪ್ರಾಗೈತಿಹಾಸಿಕ ಕಾಲದಿಂದಲೂ ಹಸನುಗೊಳಿಸಿರುವ ನದಿಗಳಲ್ಲಿ ಕಾವೇರಿ ಮುಖ್ಯ ನದಿ. ತಮಿಳುನಾಡಿಗೂ ಹಾಗೆಯೇ ವರದಾಯಿನಿ. ಕೊಡಗಿನ ‘ತಲಕಾವೇರಿ’ಯಲ್ಲಿ ಉದ್ಭವವಾಗಿ ಕನ್ನಡನಾಡಿನಿಂದ ಪೂರ್ವದ ಕವಲಾಗಿ ತಮಿಳುನಾಡಿಗೆ ಹರಿದು ಪೂಂಪಟ್ಟಣದ ಬಳಿ ಬಂಗಾಳಕೊಲ್ಲಿಗೆ ಕಾವೇರಿ ಸೇರುತ್ತಾಳೆ. ಪೌರಾಣಿಕವಾಗಿ ಅಗಸ್ತ್ಯ-ಕಾವೇರಿಯರ ಸಂಬಂಧ ಕರ್ನಾಟಕದಲ್ಲಿದೆ.
ಕಾವೇರಿ ಕಣಿವೆ ಪ್ರದೇಶದಲ್ಲಿ ಕರ್ನಾಟಕದ ಗಡಿ ಹಾಗೂ ಕಾವೇರಿ ಹರಿವಿನ ಮಾಪನದ ಕೇಂದ್ರ ಬಿಳುಗುಂಡ್ಲುವಿನ ನಡುವಣ ಮಧ್ಯಂತರ ಜಲಾನಯನ  ಪ್ರದೇಶದಲ್ಲಿದೆ. ಬಿಳುಗುಂಡ್ಲು ಮತ್ತು ಮೆಟ್ಟೂರು ನಡುವಣ ಕೆಳಗಣ ಮಧ್ಯಂತರ ಜಲಾನಯನ ಪ್ರದೇಶದಿಂದ ಒದಗುವ ಒಳಹರಿವಿನ ಅಳತೆಯನ್ನು ಲೆಕ್ಕಕ್ಕೆ ಹಿಡಿಯುವ ವಿಷಯದಲ್ಲಿ ಆಂಗ್ಲರ ಪ್ರೆಸಿಡೆನ್ಸಿ ಕಾಲದಿಂದ ಹಿಡಿದು ಈವರೆಗೂ ಕರ್ನಾಟಕಕ್ಕೆ ನ್ಯಾಯ ದೊರಕಿದೆ ಎನಿಸುವುದಿಲ್ಲ. ಇದಕ್ಕೆಲ್ಲ ಪರಿಹಾರವಾಗಿ ಗಂಗಾ-ಕಾವೇರಿ ಸಂಗಮ ಯೋಜನೆಯನ್ನು ಸೂಚಿಸುವುದಿದ್ದರೂ ಅದೊಂದು ಮಹಾ ಬೃಹತ್ ಯೋಜನೆ, ಕಾರ್ಯಸಾಧುವಲ್ಲ ಎಂಬ ವಾದವಿದ್ದರೂ ಆ ಬಗ್ಗೆ ಪ್ರಯತ್ನಗಳಂತೂ ನಿಂತಿಲ್ಲ.
ಕಾವೇರಿ ಜಲವಿವಾದದ ಕಾರಣ ಕರ್ನಾಟಕದ ಕಾವೇರಿ ಕಣಿವೆಯ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ನಿಧಿ ನೆರವು ದೊರಕಿಲ್ಲ. ರಾಜ್ಯವು ಕಬಿನಿ, ಹೇಮಾವತಿ ನೀರಾವರಿ ಯೋಜನೆಗಳನ್ನು ತನ್ನ ಸ್ವಂತ ಸಂಪನ್ಮೂಲಗಳಿಂದಲೇ ಕಾರ್ಯಗತ ಮಾಡಿದೆ.
ಈ ಹಿನ್ನೆಲೆಗಳಲ್ಲಿ 1991ರ ವೇಳೆಗೆ ಕಾವೇರಿ ವಿವಾದ ಜನರ ಅಂಗಳದಲ್ಲಿ ಚಳವಳಿಯ ಸ್ವರೂಪ ಪಡೆದುಕೊಂಡಿತು. ರೈತರ ದನಿಗೆ  ಉಳಿದ ಜನತೆಯ ದನಿಯೂ ಸೇರಿತು. ಅಂದರೆ ಪೌರಾಣಿಕ ಕಾಲದ ಕಾವೇರಿಯ  ಪ್ರತಿಭಟನೆಯ ಹಂತದಿಂದ ಆರಂಭವಾಗಿ ಉಭಯ ರಾಜ್ಯಗಳ ದೊರೆಗಳ ಯುದ್ಧ, ಪ್ರದರ್ಶನ, ಹೋರಾಟ, ನ್ಯಾಯಾಂಗದ ಅಂಕಣದಲ್ಲಿ ಕಾನೂನು ಸಮರ ಇತ್ಯಾದಿಗಳು ಚಳವಳಿಯ ವಿವಿಧ ಮಾರ್ಗದ ಮೈಲುಗಲ್ಲುಗಳಾದುವು. ಈ ಎಲ್ಲವೂ ರೈತರ ಪರವಾದ ಪ್ರಾತಿನಿಧಿಕ ಸಂಘರ್ಷವಾಗಿ ಬಹತೇಕ ನಡೆದು ಬಂದರೂ ರೈತರ, ರೈತಪರರ ಹಾಗೂ ರೈತೇತರರ ನೇರ ಪಾಲುದಾರಿಕೆಯ ಕಾವೇರಿ ಚಳವಳಿ 1991ರಲ್ಲಿ ಪೂರ್ವದ ಎಲ್ಲ ಸಂಕೀರ್ಣ ಘಟನೆಗಳ ಮೊತ್ತವಾಗಿ ರೂಪ ಪಡೆಯಿತೆನ್ನಬೇಕು. ಇಲ್ಲಿ ಕೃಷಿ, ನೀರಾವರಿ ಹಾಗೂ ಕುಡಿಯುವ ನೀರು ಈ ಎರಡು ಸಮಸ್ಯೆಗಳು ಸಂಯುಕ್ತಗೊಂಡಿದ್ದ ಕಾರಣ ಅದೊಂದು ಒಕ್ಕೂಟದ ಚಳವಳಿಯಾಗಿ ಮಾರ್ಪಟ್ಟಿತು. ಎಲ್ಲರ ಬಾಯಲ್ಲಿ ರೈತರ ದನಿ ಎನ್ನುವಂತಿತ್ತು. ರೈತರದು ಇಲ್ಲಿ ಅಗೋಚರ ಹಾಗೂ ಗೋಚರ ಪಾತ್ರವಾಗಿತ್ತು. ತುತ್ತು ಕೊಡುವ ರೈತ ಎಲ್ಲರ ಮನದೊಳಗಿದ್ದ. ತಮಿಳುನಾಡಿನ ದಾವೆಗಳ ಕಾರಣ ಕಾವೇರಿ ನದಿ ಪ್ರಾಧಿಕಾರದ ಆದೇಶಗಳ ಪಾಲನೆಗಳ ಅನಿವಾರ್ಯತೆಯ ಕಾರಣ ಅಸಹಾಯಕವಾಗಿ ರಾಜ್ಯಸರ್ಕಾರ ನಿಗದಿತ ನೀರಿನ ಮೊತ್ತವನ್ನು ತಮಿಳುನಾಡಿಗೆ ಕಬಿನಿ ಜಲಾಶದಿಂದ ಬಿಟ್ಟಿತು. ಇದನ್ನು ಪ್ರಘಿಭಟಿಸಿ 18-9-2002ರಂದು ಮೂವರು ರೈತರು ಜಲಾಶಯದಿಂದ ರಭಸವಾಗಿ ಹರಿದು ಹೋಗುತ್ತಿದ್ದ ನೀರಿಗೆ ಹಾರಿ ಕೊಚ್ಚಿ ಹೋದರು. ಅವರಲ್ಲಿ ಇಬ್ಬರನ್ನು ರಕ್ಷಿಸಲಾಯಿತಾದರೂ ಬೀಚನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರೈತ ಗುರುಸ್ವಾಮಿಯವರನ್ನು ರಕ್ಷಿಸಲಾಗದೆ ಅವರ ಆತ್ಮಬಲಿದಾನವಾಯಿತು. ಈ ಗಂಭೀರ ಸನ್ನಿವೇಶದಿಂದಾಗಿ ನೀರು ಬಿಡುಗಡೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಉಭಯ ಸದನಗಳ ತುರ್ತು ಅಧಿವೇಶನವನ್ನು ಕರೆದು ಕೇಂದ್ರಕ್ಕೆ ಪರಿಸ್ಥಿತಿಯನ್ನು ತಿಳಿಸಲು ತೀರ್ಮಾನವಾಯಿತು. ಮಂಡ್ಯ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ, ಮೈಸೂರಿನ ಕಾವೇರಿ  ಕ್ರಿಯಾ ಸಮಿತಿ, ಕಬಿನಿ ಹೋರಾಟ ಸಮಿತಿ ಮುಂತಾದ ರೈತ ಸಂಘಟನೆಗಳು ಈ ಮುನ್ನ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುವುದರ ವಿರುದ್ಧ ಬಂದ್, ರಸ್ತೆ ತಡೆ ಮೆರವಣಿಗೆ ಮೂಲಕ ಪ್ರತಿಭಟನೆ ತೋರಿದ್ದವು. ನೀರು ಬಿಡುವ ಗೇಟ್ ವ್ಯವಸ್ಥೆಗೆ ಹಾನಿ, ಹಿಂಸಾಚಾರ ನಡೆದಾಗ ಪೊಲೀಸರಿಂದ ಆಶ್ರುವಾಯು ಸಿಡಿತ, ಲಾಠಿ ಪ್ರಹಾರ ನಡೆದು ಕರ್ಫ್ಯೂ ಕೂಡ ಜಾರಿಯಾಗಿತ್ತು. ಕಾವೇರಿ ಪಾದಯಾತ್ರೆಗಳೂ ನಡೆದದ್ದುಂಟು. ಕೇಂದ್ರದಿಂದ ಕಾವೇರಿ ಉಸ್ತುವಾರಿ ಸಮಿತಿಯು ಈ ಘಟನೆಗಳ ಹಿನ್ನೆಲೆಯಲ್ಲಿ ತಮಿಳುನಾಡಿನ ನ್ಯಾಯಾಲಯದಲ್ಲಿ ದಾವೆ, ರಾಜ್ಯ ಸರ್ಕಾರದ ಉತ್ತರ ಇವೆಲ್ಲದರ ಪರಿಶೀಲನೆಗಾಗಿ ಉಭಯ ರಾಜ್ಯಗಳಿಗೆ ಭೇಟಿ ಕೊಟ್ಟಿತು. ರೈತರ ಅಹವಾಲು ಗಳನ್ನು ಅದು ಸ್ವೀಕರಿಸಿತು. ಮುಖ್ಯವಾಗಿ 1892ರ ಒಪ್ಪಂದದ ಕಾಲದಿಂದಲೂ ಕೃಷಿ ವಿಸ್ತರಣೆಗೆ ಆಗಲಿ, ಸರದಿ ಹೆಚ್ಚಿಸಿಕೊಳ್ಳುವ ಬೆಳೆ ಬೆಳೆಯಲು ನೀರಿನ ಬಳಕೆಗಾಗಲಿ ಅವಕಾಶ ಕರ್ನಾಟಕಕ್ಕೆ ಒದಗಲಿಲ್ಲ. ಆದರೆ ತಮಿಳುನಾಡು ಮೂರು ಪಟ್ಟು ಕೃಷಿ ವಿಸ್ತರಣೆ ಮಾಡಿಕೊಳ್ಳಲು ಅವಕಾಶ ನೀಡಲಾಯಿತು. ಶೋಷಿತಗೊಂಡದ್ದು ಕರ್ನಾಟಕವೇ. ಇದಲ್ಲದೆ ಬರ ಪರಿಸ್ಥಿತಿಯಲ್ಲಿ ಮಳೆ ಕೈಕೊಟ್ಟ ಸಂದರ್ಭದಲ್ಲಿ  ಅಂದರೆ ನೈರುತ್ಯ ಮಾರುತದ ಮಳೆ ಕೈಕೊಟ್ಟಾಗ ಒಪ್ಪಂದದಂತೆ ಕಾವೇರಿ ನೀರು ಬಿಡಬೇಕಾದಾಗ ತನ್ನ ಬೆಳೆಗೆ ಹಾನಿ ಮಾಡಿಕೊಂಡು ನೀರು ಬಿಡಬೇಕಾದ ಸಂದರ್ಭಗಳು ನ್ಯಾಯಾಧಿಕರಣದ ಆದೇಶವನ್ನು ಕನಿಷ್ಠ ಪಾಲಿಸಲೇಬೇಕಾದ ಒತ್ತಡವನ್ನು ಕರ್ನಾಟಕ ಅನುಭವಿಸಿದೆ.
ತಮಿಳುನಾಡಿನ ಬೆಳೆಗೆ ಆಯಾ ಋತುಮಾನ ಕಾಲದ ಸಾಂಬಾ ಅಥವಾ ಕುರುವೈ ಬೆಳೆಗೆ ಈಶಾನ್ಯ ಮಾರುತದ ಮಳೆಯ ನಿರೀಕ್ಷೆಯಾದರೂ ಇದೆ. ಮಳೆಯ ಅಭಾವದ ವರ್ಷಗಳಲ್ಲಿ  ಕಾವೇರಿ ಕಣಿವೆ ರಾಜ್ಯಗಳು ಪಾಲಿಸಬೇಕಾದ ಸಂಕಟ ಸೂತ್ರ ನ್ಯಾಯಾಧಿಕರಣದ ತೀರ್ಪು ಮಧ್ಯಂತರದ್ದಾದರೂ ನೀರು ಬಿಡಲೇಬೇಕು. ಈ ಬಗ್ಗೆ ರಾಜ್ಯವು ಬಿಳಿಗುಂಡ್ಲುವಿನ ಜಲಮಾಪನ ಕೇಂದ್ರದ ದಾಖಲಾತಿ, ಬಿಳಿಗುಂಡ್ಲು-ಮೆಟ್ಟೂರು ನಡುವಣ ಜಲಾನಯನ ಪ್ರದೇಶದ ಉತ್ಪನ್ನವು ಆ ಜಲಾಶಯಕ್ಕೆ ಸೇರುವುದರ ಲೆಕ್ಕ ಹಿಡಿಯಬೇಕು. ಮೆಟ್ಟೂರು ಜಲಾಶಯದ ಕೆಳಭಾಗದ ಜಲಾನಯನದಲ್ಲಿ ನೀರಿನ ಉತ್ಪನ್ನ ತಮಿಳುನಾಡಿನ ಉತ್ತರ ಕೊಲರೂನ್ ಮತ್ತು ಡೆಲ್ಟ ಪ್ರದೇಶದ ಅಂತರ್ಜಲ ಪ್ರಮಾಣ ಹಾಗೂ ಸುಧಾರಿತ ನೀರಾವರಿ ಪದ್ಧತಿ ಅನುಸರಣೆಯಿಂದ ಕಡಿಮೆಗೊಳ್ಳುವ ತಮಿಳುನಾಡಿನ ನೀರಿನ ಅಗತ್ಯದ ಲೆಕ್ಕವನ್ನು ಹಿಡಿದರೆ ಕರ್ನಾಟಕ ತಲುಪಿಸಬೇಕಾದ ನೀರಿನ ಪ್ರಮಾಣ ತಮಿಳುನಾಡು ಕೇಳಿಕೆಯ ಮೂರನೆಯ ಒಂದು ಭಾಗದಷ್ಟು ಮಾತ್ರ ಎಂದೆಲ್ಲ ನ್ಯಾಯಾಧಿಕರಣದ ಮುಂದೆ ತನ್ನ ವಾದವನ್ನೂ ಮಂಡಿಸಿದೆ. ಇದು ಸರ್ಕಾರ ಅಥವಾ ರಾಜಕೀಯ ಮಟ್ಟದಲ್ಲಿ ರೈತರ ಪರವಾಗಿ ರಾಜ್ಯದ ದನಿ ಆಗಿದೆ. ಇದೇನೇ ಇರಲಿ ಉಭಯ ರಾಜ್ಯಗಳ ರೈತರು ಕಾವೇರಿ ಕಣಿವೆ ನೀರಾವರಿ ಪ್ರದೇಶಗಳಿಗೆ ಭೇಟಿ ನೀಡಿ ಪರಸ್ಪರ ಸಮಾಲೋಚಿಸಿಕೊಂಡದ್ದು ಸಮಸ್ಯೆ ಬಗೆಹರಿವ ನಿಟ್ಟಿನಲ್ಲಿ ಒಂದು ಸೌಹಾರ್ದದ ಸಂಕೇತ. ಒಟ್ಟಾರೆ ಬಾಳೆಕುಂದ್ರಿಯವರೂ ಹೇಳಿರುವಂತೆ ತಮಿಳುನಾಡು ತನ್ನಲ್ಲಿಯ ಅಂತರ್ಜಲ ಬಳಸಿಕೊಂಡರೆ ಸಮುದ್ರಕ್ಕೆ ಬಿಟ್ಟು ಪೋಲಾಗುತ್ತಿರುವ ನೀರನ್ನು ಬಳಸಿಕೊಂಡರೆ ಕಾವೇರಿ ನೀರಿನ ಹೆಚ್ಚಿನ ಬಿಡುಗಡೆಗೆ ಕರ್ನಾಟಕವನ್ನು ಅದು ಕೇಳುವ ಅಗತ್ಯವೇೊಬೀಳುವುದಿಲ್ಲ.ೊಉಭಯ ರಾಜ್ಯಗಳೊರೈತರು ಸ್ಪಂದಿಸಿದರೆ ನ್ಯಾಯಯುತ ನೀರಿನ ಪಾಲು ಈಗಲಾದರೂ ಕರ್ನಾಟಕಕ್ಕೆ ಒದಗಿದರೆ ಉಭಯ ರಾಜ್ಯಗಳ ಜಲ ವಿವಾದದಲ್ಲಿ ಕೊಡುಕೊಳ್ಳುವ ಸಮನ್ವಯ ಸಂದರ್ಭ ಬೆಳೆದರೆ ಚಳವಳಿಗೆ ವಿರಾಮ ದೊರೆತೀತು. ವ್ಯಾಪಕ ಅರಣ್ಯ ಹನನದಿಂದಾಗಿ ಕೊಡಗಿನ ಮರಗಳ ನೆರಳು ಪ್ರದೇಶ ತೀವ್ರವಾಗಿ ಕುಸಿಯುತ್ತಿದೆ. ಕೊಡಗಿನಲ್ಲೂ ಬಿಸಿಲ ಕಾವು ಹೆಚ್ಚುತ್ತಿದೆ. ಇದೆಲ್ಲ ಕಾವೇರಿ ಜಲಾನಯನ ಪ್ರದೇಶದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಮುಂಬರುವ ಕೆಲವು ದಶಕಗಳಲ್ಲಿ ಕಾವೇರಿಯ ಒಡಲು ಬತ್ತುವ ಸಂದರ್ಭವಾಗುತ್ತಿದೆ. ಹೀಗಾಗಿ ಉಭಯ ರಾಜ್ಯಗಳು ಎಚ್ಚೆತ್ತು ಪರಸ್ಪರ ಸಹಕಾರದೊಡನೆ ನಡೆಯಬೇಕು. ನ್ಯಾಯಾಧಿಕರಣವೊಂದನ್ನೇ ಇದಕ್ಕೆ ಹೊಣೆ ಮಾಡಬಾರದು. ಈ ವರ್ಷದ ಕೊನೆಗೆ ಕಾವೇರಿ ನೀರಿನ ಹಂಚಿಕೆ ಕುರಿತು ಅಂತಿಮ ತೀರ್ಪು ಬರುವುದೆನ್ನಲಾಗಿದೆ. ಕಾವೇರಿಯ ಒಡಲಲ್ಲಿ ಹಸಿರಿನ ನೆಳಲು ಉಳಿದುಕೊಳ್ಳುವಂತೆ ಪ್ರಯತ್ನ ನಡೆಯುತ್ತಿರಬೇಕು. ಕಾವೇರಿ, ಕೃಷ್ಣಾ ನದಿ ವಿವಾದವಿರಲಿ, ಆ ಕಣಿವೆ ಪ್ರದೇಶದ ರೈತರ ಪ್ರತಿಭಟನೆಯಾಗಲಿ, ಮಲಪ್ರಭಾ ನದಿಗೆ ಕೂಡಿಸುವ ಬಂಡೂರಿ ನಾಲಾ ಯೋಜನೆ ಕಾರ್ಯಗತವಾಗಲೆಂಬ ರೈತ ಹೋರಾಟವಾಗಲಿ ಒಟ್ಟಾರೆ ರಾಷ್ಟ್ರೀಯ ಜಲನೀತಿಯನ್ನು ನಿರೂಪಿಸಿ ಮಾರ್ಗದರ್ಶಿ ಸೂತ್ರಗಳನ್ನು ಕೇಂದ್ರವು ನೀಡಿದರೆ ಅಂತರರಾಜ್ಯಗಳ ಜಲ ವಿವಾದ-ಜಲ ಹೋರಾಟಗಳು ನಿಲ್ಲಬಹುದು. ಅಂತೇ ಸಾಂತ್ವನ ಕ್ರಿಯೆಗಳು ಈ ದಿಸೆಯಲ್ಲಿ ದೇಣಿಗೆ ನೀಡಬಲ್ಲವು.
ಸಾಂತ್ವನ ಪ್ರಕ್ರಿಯೆಗಳು


ಚಳವಳಿ ನಿರಂತರ, ಅದು ಜಾಗೃತಿಯ ಲಕ್ಷಣವೂ ಹೌದು. ಚಳವಳಿ ಮಾಡಿಕೊಡಲು ಅವಕಾಶ ಕೊಡುವುದೂ  ಒಂದು ಸಾಂತ್ವನ ಕ್ರಿಯೆಯೇ. ಸದ್ಯ ರೈತ ಸಂಬಂಧವಾದ ಚಳವಳಿ ನಮ್ಮ ಗಮನದಲ್ಲಿರುವ ಕಾರಣ ಸರ್ಕಾರ ಸಮಾಜ ಹೇಗೆ ಸಾಂತ್ವನ ಪ್ರಕ್ರಿಯೆಯಲ್ಲಿ ಸಂವೇದನೆಯನ್ನು ತೋರಿದೆ ಎಂಬುದನ್ನು ಗಮನಿಸಬೇಕು. ರೈತರಿಗೆ ಮುಖ್ಯವಾಗಿ ಸೌಕರ್ಯಗಳ ಒದಗಣೆ ಬೇಕು. ನೀರು ಸರಬರಾಜು ಕೃಷಿ ಪರಿಕರಗಳ ಸರಬರಾಜು, ಬೆಳೆಹಾನಿಗೆ ಪರಿಹಾರ, ಕೃಷಿ ಉತ್ಪನ್ನಗಳಿಗೆ ವೃಜ್ಞಾನಿಕ ಬೆಲೆ, ಬೆಲೆ ಕುಸಿತವಾದಾಗ ಬೆಂಬಲ ಬೆಲೆ, ಬೆಳೆರಾಶಿ ಬಂದಾಗ ಖರೀದಿ ಕೇಂದ್ರಗಳ ಹೆಚ್ಚಳ, ಉಗ್ರಾಣ ವ್ಯವಸ್ಥೆ, ಶೀತಲ ಗೃಹ ವ್ಯವಸ್ಥೆ, ಸಂಸ್ಕರಣ ಘಟಕ, ಮಾರುಕಟ್ಟೆ ನಿಯಂತ್ರಣ ಒದಗಿಸಿದ ಮಾಲಿಗೆ ವಿಳಂಬವಿಲ್ಲದೆ ಹಣ ನೀಡಿಕೆ ಸಾಲ ಸೌಲಭ್ಯ, ಸಾಂದರ್ಭಿಕವಾಗಿ ಸಾಲದ ಬಡ್ಡಿಮನ್ನಾ, ಕೃಷಿ ತರಬೇತಿ, ಜಾಗತಿಕ ಸ್ಪರ್ಧೆಗೆ ಸಿದ್ಧ ಪಡಿಸುವಿಕೆ ಇತ್ಯಾದಿಗಳು ಸಾಂತ್ವನ ಪ್ರಕ್ರಿಯೆಯ ಘಟಕಗಳೆನ್ನಿಸುತ್ತವೆ. ಋಗ್ವೇದ ಕಾಲದಿಂದಲೇ ರೈತರನ್ನು ತೃಪ್ತಿ ಪಡಿಸುವ ಮಾತು ಶ್ಲೋಕಾನ್ವಿತವಾಗಿದೆ.
ರಾಷ್ಟ್ರೀಯ ರೈತ ಜೀವ ವಿಮಾ ನಿಗಮ ಸ್ಥಾಪನೆ, ಅಗ್ರಿಕ್ಲಿನಿಕ್ ತರಬೇತಿ, ಕೃಷಿ ಉಪಕರಣಗಳಿಗೆ ಸೂಕ್ತ ಸಬ್ಸಿಡಿ ನೀಡಿಕೆ, ಅಪಘಾತದಲ್ಲಿ ಸತ್ತ ರೈತನ ಕುಟುಂಬಕ್ಕೆ 50 ಸಾವಿರ ನೀಡುವ ‘ಜನಶ್ರೀ’ ವಿಮಾೊಯೋಜನೆ, ಬೆಲೆ ವಿಮಾ ಯೋಜನೆ, ಪ್ರಗತಿಪರ ಕೃಷಿ ಪದ್ಧತಿ ಹಾಗೂ ತಂತ್ರಜ್ಞಾನ ಅಳವಡಿಕೆಗೆ ಉತ್ತೇಜನ, ಕೃಷಿ ಪಂಡಿತ ಪ್ರಶಸ್ತಿ ಇತ್ಯಾದಿಗಳು ರೈತರ ಹಿತಕ್ಕೆ ಪೂರಕವಾಗಿವೆ. ಆದರೆ ಸಾಮಾನ್ಯ ರೈತರ ನಿರಂತರ ಕೃಷಿ ಸೇವೆಯನ್ನು ಗುರುತಿಸಿ ಸನ್ಮಾನಿಸಿದರೆ ಉಳಿದ ರೈತರಿಗೂ ಅದೊಂದು ಪ್ರೇರಕ ಕ್ರಿಯೆ ಆದೀತು. ಆಹಾರ ಸಂಸ್ಕರಣೆಯ ಪಾರ್ಕ್ ತೋಟಗಾರಿಕಾ ವಾಣಿಜ್ಯ ಬೆಳೆ ಬೆಳೆಯಲು ಸವಲತ್ತು, ಕಾಫಿ ಬೆಳೆಗೆ ಪರ್ಯಾಯ ಬೆಳೆಗಳನ್ನು ಬೆಳೆಯಲು(ವೆನಿಲ್ಲಾ, ಆಂಥೋರಿಯಂ, ಶುಂಠಿ, ಕಾಳುಮೆಣಸು, ಲೆಮನ್ಗ್ರಾಸ್ ಇತ್ಯಾದಿ) ನೆರಳು ಚಾವಣಿ ಯೋಜನೆ, ಹನಿ ನೀರಾವರಿ, ಸಾವಯವ ಕೃಷಿ ಯೋಜನೆ ಇತ್ಯಾದಿಗಳೂ ಸರ್ಕಾರಿ ಸಾಂತ್ವನ ಪ್ರಕ್ರಿಯೆಯ ಪ್ರೇರಕಗಳೆನ್ನಬಹುದು.
ಕೆರೆಗಳ ಪುನಶ್ಚೇತನವೆನಿಸುವ ‘ರೈತ ಕಾಯಕ ಕೆರೆ’ ಯೋಜನೆ, ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ಮುಕ್ತವಾಗಿಸುವ ‘ರೈತಸಂತೆ’ (ಗ್ರಾಮೀಣ ಮಾರುಕಟ್ಟೆ) ಕೃಷಿ  ವಿವರದ ಭೂದಾಖಲೆ ಗಣಕೀಕರಣದ ‘ಭೂಮಿ’, ಯೋಜನೆ, ಸಾಗುವಳಿ ಸಂದರ್ಭಗಳಲ್ಲಿ ಅಪಘಾತಕ್ಕೀಡಾದ ರೈತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ‘ರೈತ ಸಂಜೀವಿನಿ’ ವಿಮಾ ಯೋಜನೆ, ಕಡಿಮೆ ಬಡ್ಡಿದರದಲ್ಲಿ ಸುಲಭ ಸಾಲ ಸೌಲಭ್ಯ ಪಡೆಯಲನುಕೂಲಿಸುವ ‘ಕಿಸಾನ್ ಕ್ರೆಡಿಟ್ಕಾರ್ಡ್’ ಯೋಜನೆ, ‘ಕೃಷಿ ಪಾಸ್ ಪುಸ್ತಕ’ ನೀಡಿಕೆ, ಜಿಲ್ಲಾ ಕೃಷಿ ನೀತಿ ಯೋಜನೆ, ರೈತರಿಗೆ ಅಗತ್ಯವಾದ ಕೃಷಿ ಕಾರ್ಯ ಕುರಿತ ಸಮಗ್ರ ಮಾಹಿತಿ ನೀಡುವ ‘ರೈತ ಮಿತ್ರ’ ಯೋಜನೆ, ರೈತರ ಆರೋಗ್ಯ ವಿಮಾ ಯೋಜನೆ, ‘ಯಶಸ್ವಿನಿ’ ಇತ್ಯಾದಿಗಳು ರಾಜ್ಯ ಸರ್ಕಾರದ ಪ್ರಯತ್ನಗಳಾಗಿವೆ. ಇವುಗಳಲ್ಲದೆ ವಿಚಾರ ಸಂಕಿರಣಗಳಲ್ಲಿ ರೈತರ ಮಾತುಗಳಲ್ಲಿಯೇ ಸಮಸ್ಯೆಗಳನ್ನು ಅಭಿವ್ಯಕ್ತಗೊಳಿಸಬಲ್ಲ ರೈತರಿಗೆ ಅವಕಾಶ, ಸಾಹಿತ್ಯ ಸಮ್ಮೇಳನಗಳಲ್ಲಿ ರೈತಾಪಿ ಸಾಹಿತ್ಯ ಸಂಬಂಧ ಸಮಸ್ಯಾ ಸಂಬಂಧದ ಗೋಷ್ಠಿ, ಸ್ಮರಣ ಸಂಚಿಕೆಗಳಲ್ಲಿ ಗ್ಯಾಸೆಟಿಯರ್ಗಳಲ್ಲಿ  ಆಯಾ ಜಿಲ್ಲೆಯ ರೈತರ ಸಮಸ್ಯೆಗಳು ಹಾಗೂ ಚಳವಳಿ ಕುರಿತ ಲೇಖನಗಳ ಪ್ರಕಟನೆ, ಸಾಮಾನ್ಯ ರೈತರ ಸಾಧನೆಗಳನ್ನು ಗಮನಿಸಿ ಆರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ, ‘ಗುರುಕುಲ’ದ ರೀತಿಯಲ್ಲಿ ‘ಗ್ರಾಮಕುಲ’ ಅಥವಾ ರೈತಕುಲದ ವ್ಯವಸ್ಥೆ, ವೃದ್ಧಾಶ್ರಮಗಳ ಬಗೆಯಲ್ಲಿ ‘ರೈತಾಶ್ರಮ’ಗಳನ್ನು  ಅಸಹಾಯಕ ಶಕ್ತಿಹೀನ ರೈತರಿಗೆ ತೆರದು ಆಶ್ರಯ ಕೊಡುವುದು ಇತ್ಯಾದಿಗಳು ರೈತ ಸಾಂತ್ವನ ಪ್ರಕ್ರಿಯೆಯಾಗಿ ಘಟಿಸಬಲ್ಲವು. ರೈತರ ಆತ್ಮಹತ್ಯೆಗಳ ಪ್ರಕರಣಗಳನ್ನು ತಗ್ಗಿಸಬಲ್ಲವು.
ಒಟ್ಟಾರೆ  ಸಹಸ್ರಾರು ವರ್ಷಗಳ ಕೃಷಿ ಪರಂಪರೆಯ ಭಾರತೀಯ ರೈತನಿಗೆ ಹಿಂದೆ ಜನಸಂಖ್ಯಾ ಸ್ಫೋಟ ಸಮಸ್ಯೆಯಾಗಲಿ, ಕೃಷಿಯ ವಿಧಾನಗಳ ಮೇಲೆ ವಿದೇಶಿಯ ಪ್ರಭಾವವಾಗಲಿ ಕಾಡದೆ ಅವನ ಬದುಕು ನೈಸರ್ಗಿಕವಾಗಿ ನಡೆದು ಬಂತು. ಆದರೆ  ಮುಂದಿನ ಕಾಲಗಳಲ್ಲಿ ಅವನಿಗೆ ಸಮಸ್ಯೆಗಳು ಎದುರಾದರೂ ತನ್ನ ಅಸ್ತಿತ್ವ ಕಳೆದು ಕೊಳ್ಳದೆ ಮೌನವಾಗಿ ಸಮರ್ಥವಾಗಿ ಬದುಕು ನೀಸಿದ. ಸಮಸ್ಯೆಗಳು ಸಂಕೀರ್ಣವಾಗ ತೊಡಗಿದಾಗ ಎದುರಿಸುವ ಮಾರ್ಗವನ್ನೂ ಕಂಡುಕೊಂಡ. ಅದು ಮನವಿ, ಅಹವಾಲು, ಬಿನ್ನಹ, ದುಂಬಾಲು, ಒತ್ತಾಯ, ಪ್ರದರ್ಶನ, ಪ್ರತಿಭಟನೆ, ಬಂಡಾಯ, ಚಳವಳಿಗಳ ಮಾಧ್ಯಮಗಳ ಮೂಲಕ ಮೂಡಿಬಂತು. ಅಂದರೆ ಚಳವಳಿಯ ಮಜಲುಗಳು ವಿಕಸಿಸಿದ ಬಗೆ ಅದಾಗಿತ್ತು. ಹೀಗಾಗಿ ಕರ್ನಾಟಕದ ದೃಷ್ಟಿಯಿಂದ ಇರ್ವಿನ್ ನಾಲಾ ಚಳವಳಿಯಂಥ ಹೊಂದಿಕೊಂಡು ಹೋಗುವ ಚಳವಳಿಗಳು ದೀರ್ಘಕಾಲ ನಡೆದು, ವೈಚಾರಿಕ ನೆಲೆಯಲ್ಲಿ ಜಾಗೃತಿಗೊಂಡ ಕಾಗೋಡು ಸತ್ಯಾಗ್ರಹದಂಥ ಚಳವಳಿಗಳು ಜಾಗೃತ ಪ್ರತಿಭಟನೆಯ ಆಧುನಿಕ ಸಂಕೀರ್ಣ ಚಳವಳಿಗಳು (ಏಕೀಕರಣೋತ್ತರ ಚಳವಳಿಗಳು) ಎಂದು ವಿಭಾಗಿಸ ಬಹುದು.
ನಮ್ಮ ರೈತ ಚಳವಳಿಗಳು ಗ್ರಾಮೀಣ ಪ್ರದೇಶದಲ್ಲಿ ಕೆಲಮಟ್ಟಿಗೆ ನಗರೀಕರಣ (ಉಪನಗರಗಳು) ಪ್ರಕ್ರಿಯೆಯನ್ನು ಹುಟ್ಟುಹಾಕಿದೆ. ಮಾರುಕಟ್ಟೆಯ ಉಪಕೇಂದ್ರಗಳು, ಯಂತ್ರಚಾಲಿತ ವಾಹನ ಸೌಕರ್ಯ, ಬ್ಯಾಂಕ್ ಸಹಕಾರ ಸಂಘ, ರೈತ ಸಮ್ಮೇಳನ -ವಿಚಾರ ಸಂಕಿರಣ, ತರಬೇತಿ ಶಿಬಿರಗಳು ಹಳ್ಳಿಹಳ್ಳಿಗಳಲ್ಲಿ ವ್ಯವಸ್ಥೆಗೊಂಡಿವೆ. ಗಣಿಗಾರಿಕೆಗೆ ವಿರೋಧ, ಪರಿಸರ ಜಾಗೃತಿ, ವಿದ್ಯಾಕೇಂದ್ರಗಳ ಹೆಚ್ಚಳ, ಆರ್ಥಿಕ ಪುಷ್ಟಿ ಇತ್ಯಾದಿ ಎಚ್ಚೆತ್ತ ಮಾನಸಗಳ ಪ್ರತಿಫಲ ಮೊತ್ತವಾಗುತ್ತಿದೆ. ಹೀಗಿದ್ದರೂ ಗ್ರಾಮೀಣ ಸಂಸ್ಕೃತಿಯ ಪ್ರಾಮಾಣಿಕ ಜಾಯಮಾನವು ಅಂತರ್ಗತವಾಗಿ ಹರಿದು ಬರುತ್ತಿರುವುದೂ ಕಾಣುತ್ತದೆ. ಸಾಂಸ್ಕೃತಿಕ ಸಂಯಮ ಗ್ರಾಮಗಳಲ್ಲಿ ಇನ್ನೂ ಜೀವಂತವಾಗಿದೆ. ಇದಕ್ಕೆ ಅಪವಾದಗಳಿದ್ದರೂ ಅವೇ ಮುಖ್ಯವಲ್ಲ. ಕರ್ನಾಟಕದ ರೈತರ ಹಿತಕ್ಕಾಗಿ ಹೋರಾಡಿದ ಕೆಲವು ಪ್ರಮುಖರ ಹೆಸರನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಶಾಂತವೇರಿ ಗೋಪಾಲಗೌಡ, ಕೆ.ವಿ. ಶಂಕರೇಗೌಡ, ಹೆಚ್.ಎಸ್. ರುದ್ರಪ್ಪ, ಎಂ.ಡಿ. ನಂಜುಂಡಸ್ವಾಮಿ, ಸುಂದರೇಶ್, ಕಡಿದಾಳು ಶಾಮಣ್ಣ, ಜಿ. ಮಾದೇಗೌಡ, ಬಾಬಾಗೌಡ ಪಾಟೀಲ್, ಕೆ.ಎಸ್. ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್, ಚುಕ್ಕಿ ನಂಜುಂಡಸ್ವಾಮಿ ಮುಂತಾದವರು.

2 ಕಾಮೆಂಟ್‌ಗಳು:

  1. ನಿಮ್ಮ ಹಣಕಾಸಿನ ಚಿಂತೆಗಳನ್ನು ಕೊನೆಗೊಳಿಸಿ
    ನಾವು ಸಾಲ ಮಾನ್ಯತೆ ಪಡೆದ ಕಂಪನಿ. ನಾವು ವ್ಯಕ್ತಿಗಳಿಗೆ ಸಾಲವನ್ನು ನೀಡುತ್ತೇವೆ
    ಕಡಿಮೆ ಬಡ್ಡಿ ದರ 2%, ನಾವು ವೈಯಕ್ತಿಕ ಸಾಲ, ವ್ಯವಹಾರ ಸಾಲ,
    ಅಡಮಾನ ಸಾಲ. ಹೆಚ್ಚಿನ ಮಾಹಿತಿಗಾಗಿ ರಿಯಲ್ ಎಸ್ಟೇಟ್ ಸಾಲ
    ಮೂಲಕ ನಮ್ಮನ್ನು ಸಂಪರ್ಕಿಸಲು ಹಿಂಜರಿಯುವುದಿಲ್ಲ: (felixgeorge958@gmail.com)

    ಪ್ರತ್ಯುತ್ತರಅಳಿಸಿ