ನವದೆಹಲಿ: ಬೇಸಿಗೆ ಮುಕ್ತಾಯಕ್ಕೆ ಎರಡು ತಿಂಗಳು ಬಾಕಿ ಇರುವಾಗಲೇ ದೇಶದ ಬಹುಭಾಗದ ಜನರು ಸೂರ್ಯನ ಪ್ರಖರತೆಗೆ ತತ್ತರಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದರಿಂದ ನೀರಿಗಾಗಿ ತತ್ವಾರ ಉಂಟಾಗಿದ್ದರೆ, ಮತ್ತೊಂದೆಡೆ ಉತ್ತರ ಪ್ರದೇಶ, ಮಧ್ಯಪ್ರದೇಶ ಸಹಿತ ಸುಮಾರು ಒಂಭತ್ತು ರಾಜ್ಯಗಳು ಕಾದ ಕೆಂಡದಂತಾಗಿವೆ. ಮುಂದಿನ ಎರಡು ತಿಂಗಳಲ್ಲಿ ಉಷ್ಣಾಂಶ ಮತ್ತಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.
ವಾಡಿಕೆಗಿಂತ 9 ಡಿಗ್ರಿ ಹೆಚ್ಚು!: ಪ್ರಸಕ್ತ ವರ್ಷದ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಇರಲಿದೆ ಎಂಬ ಹವಾಮಾನ ವರದಿ ನಿರಾಸೆ ಮೂಡಿಸಿರುವ ಬೆನ್ನಲ್ಲೇ, ದೇಶಾದ್ಯಂತ ಏರಿಕೆಯಾಗುತ್ತಿರುವ ತಾಪಮಾನ ಜನರನ್ನು ಕಂಗೆಡಿಸಿದೆ. ಪ್ರತಿವರ್ಷ ಮಾರ್ಚ್ ತಿಂಗಳ ಕೊನೆಗೆ ಇರುತ್ತಿದ್ದ ತಾಪಮಾನ ಹಾಗೂ ಈಗಿನ ತಾಪಮಾನಕ್ಕೆ ಭಾರಿ ವ್ಯತ್ಯಾಸ ಕಂಡುಬರುತ್ತಿದೆ. ವಾಡಿಕೆ ತಾಪಮಾನಕ್ಕಿಂತ 5ರಿಂದ 9 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ರಾಜಸ್ಥಾನದ ಬಮೇರ್ನಲ್ಲಿ 43.4, ವಾರ್ಧಾ, ನಾಗಪುರ, ಚಂದ್ರಾಪುರದಲ್ಲಿ 43, ಹರಿಯಾಣದ ನರ್ನೌಲ್ನಲ್ಲಿ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
72 ವರ್ಷಗಳಲ್ಲೇ ಗರಿಷ್ಠ
ದೇಶದ ರಾಜಧಾನಿ ದೆಹಲಿಯಲ್ಲಿ ಗರಿಷ್ಠ ತಾಪಮಾನ 38.2 ಡಿಗ್ರಿ ದಾಖಲಾಗುವ ಮೂಲಕ 72 ವರ್ಷಗಳಲ್ಲೇ ಮಾರ್ಚ್ ತಾಪಮಾನ ದಾಖಲೆ ಬರೆದಿದೆ. 1945ರ ಮಾರ್ಚ್ನಲ್ಲಿ 38.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ವಾಡಿಕೆಗಿಂತ 6 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ. ದೇಶದ ಮಧ್ಯ ಹಾಗೂ ಪೂರ್ವ ಪ್ರದೇಶಗಳಲ್ಲಿ ಬಿಸಿಗಾಳಿ ಬೀಸುವ ಲಕ್ಷಣಗಳು ಕಂಡು ಬರುತ್ತಿವೆ. ಗುಜರಾತ್, ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ.
ರಾಜ್ಯದ ಒಳನಾಡಿನಲ್ಲೂ 40 ಡಿಗ್ರಿ ಸೆಲ್ಸಿಯಸ್
ಬೆಂಗಳೂರು: ರಾಜ್ಯದ ಕರಾವಳಿ ಹೊರತುಪಡಿಸಿ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಾಪಮಾನ ಹೆಚ್ಚಳದ ಕಾರಣ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಏ. 4ರವರೆಗೆ ಗುಡುಗು ಸಹಿತ ಸಾಧಾರಣ ಮಳೆ ಮುನ್ಸೂಚನೆ ನೀಡಲಾಗಿದೆ.
ಬಳ್ಳಾರಿಯಲ್ಲಿ 42 ಡಿಗ್ರಿ: ಗುರುವಾರ ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆ. ಗೆ ಏರಿಕೆಯಾಗಿ ಮಾರ್ಚ್ ತಿಂಗಳ ಸಾರ್ವಕಾಲಿಕ ಗರಿಷ್ಠ ತಾಪಮಾನ ದಾಖಲಾಗುವ ಮುನ್ಸೂಚನೆ ಕೊಟ್ಟಿದೆ. 1996 ಮಾ. 30ರಂದು ಗರಿಷ್ಠ ತಾಪಮಾನ 43 ಡಿಗ್ರಿ ಸೆ. ದಾಖಲಾಗಿತ್ತು. ವಿಜಯಪುರದಲ್ಲಿ 40 ಹಾಗೂ ಕಲಬುರ್ಗಿ ಗರಿಷ್ಠ ತಾಪಮಾನ 41.1 ಡಿಗ್ರಿ ಸೆ. ದಾಖಲಾಗಿದೆ. ಗುರುವಾರ ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 1.6 ರಿಂದ 3 ಡಿಗ್ರಿ ಸೆ. ಹೆಚ್ಚು ದಾಖಲಾಗಿದೆ.
ಬೆ.8ರಿಂದಲೇ ಕಚೇರಿ
ಬಿಸಿಲಿನ ತೀವ್ರತೆ ಅಧಿಕವಾಗಿರುವ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಸರ್ಕಾರಿ ಕಚೇರಿಯ ಕೆಲಸದ ಅವಧಿ ಬದಲಿಸಿ ಸರ್ಕಾರ ಆದೇಶ ಹೊರಡಿಸಿದೆ. ಕಲಬುರಗಿ ವಿಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ, ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಕಚೇರಿಗಳು ಮುಂದಿನ ಎರಡು ತಿಂಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಕಾರ್ಯನಿರ್ವಹಿಸಲಿವೆ. ಏ. 1ರಿಂದ ಈ ವೇಳಾಪಟ್ಟಿ ಜಾರಿಗೆ ಬರಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ