ಶಿವರಾತ್ರಿ ನಾಟಕ ಕುರಿತಂತೆ
ಶಿವರಾತ್ರಿ ಒಂದು ರಾತ್ರಿಯಲ್ಲಿ ನಡೆವ ನಾಟಕ. 12ನೇ ಶತಮಾನದಲ್ಲಿ ನಡೆದ ಬಸವಣ್ಣನ ನೇತೃತ್ವದ ಚಳುವಳಿಯನ್ನು ಹೊಸಕಣ್ಣಿನಿಂದ ನೋಡುವ ಈ ನಾಟಕ ಬಸವಣ್ಣ ಮತ್ತು ಬಿಜ್ಜಳನ ಸಂಘರ್ಷಗಳನ್ನು ಸಾಮಾನ್ಯ ಜನವರ್ಗದ ಕಣ್ಣಿನಿಂದ ನೋಡುತ್ತದೆ. ಲಕ್ಷಾಂತರ ಬೆಲೆಬಾಳುವ ಮುತ್ತಿನಸರವನ್ನು ಅಸಹ್ಯದಂತೆ ಕಾಣುವ ಕಾಶವ್ವ, ಮುದುಕಪ್ಪ, ಸೂಳೆಸಾವಂತ್ರಿ ಒಂದೆಡೆಯಾದರೆ, ನಿಮ್ಮ ಕನಸಿನಲ್ಲಿ ನನಗೂ ಜಾಗ ಸಿಗುತ್ತದೆಂದು ಕಾದೆ, ಅಂಗೈಯಗಲ ಜಾಗವೂ ಸಿಗಲಿಲ್ಲ ಎನ್ನುವ ಬಿಜ್ಜಳ
ಇನ್ನೊಂದಡೆ. ” ನೀವಿರುವ ಜಾಗವನ್ನು ಕೂಡಲಸಂಗಮ ಮಾಡಲು ಹೊರೆಟೆವು ಆದರೆ ನೀವು ಕತ್ತಲೆಗೆ ಒಯ್ಯುವ ಹಳೆಯ ದಾರಿಗಳಲ್ಲೇ ನಡೆಯ ಬಯಸಿದಿರಿ ” ಎನ್ನುವ ಬಸವಣ್ಣ. ಹೀಗೆ ಈ ನಾಟಕ ಕಲ್ಯಾಣದ ದುರಂತವನ್ನು ಒಂದು ರಾತ್ರಿಯಲ್ಲಿ ನಡೆವ ಘಟನೆಗಳ ಮೂಲಕ ತೆರೆದಿಡುತ್ತ ಹೋಗುತ್ತದೆ. ಡಾ.ಚಂದ್ರಶೇಖರ ಕಂಬಾರರ ಕಾವ್ಯಮಯ ಭಾಷೆಯ ಸೊಬಗು, ವಾಸ್ತವವಾಗುತ್ತಲೇ ಅತಿವಾಸ್ತವಕ್ಕೆ ಚಿಮ್ಮುವ ರೂಪಕಗಳ ಕಥಾನಕ ಇರುವ ಈ ನಾಟಕ ಕನ್ನಡದ ಮಹತ್ವದ ನಾಟಕಗಳ ಸಾಲಿಗೆ ನಿಲ್ಲಬಲ್ಲದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ