ಮಂಗಳವಾರ, ಮಾರ್ಚ್ 21, 2017

ಮಲೆಗಳಲ್ಲಿ ಮದುಮಗಳು ಕಾದಂಬರಿಯ ವಿಮರ್ಶೆ

ಪ್ರಸಿದ್ಧ ರಂಗಕರ್ಮಿ ಪಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ ಮೈಸೂರಿನ `ರಂಗಾಯಣ’ವು (ಏಪ್ರಿಲ್23-ಮೇ21, 2010) `ಮದುಮಗಳು’ ಕಾದಂಬರಿಯನ್ನು ಆಧರಿಸಿ ರಂಗಪ್ರಯೋಗವನ್ನು ಮಾಡಿತು. ಇದು ಕನ್ನಡ ರಂಗ ಇತಿಹಾಸದಲ್ಲಿ ಒಂದು ಮುಖ್ಯ ಘಟನೆಯಾಯಿತು. ಅಲ್ಲಿಯ ತನಕ `ಮದುಮಗಳು’ ಕಾದಂಬರಿ ಓದಿದವರು ತಮ್ಮ ಕಲ್ಪನೆಯ ನಾಯಿಗುತ್ತಿ, ಚಿನ್ನಮ್ಮ, ದೇವಯ್ಯ, ಪೀಂಚಲುವನ್ನು ಕಲ್ಪಿಸಿಕೊಂಡಿದ್ದರು. ಆದರೆ ನಾಟಕ ಆ ಕಲ್ಪನೆಗಳನ್ನು ಭಗ್ನಗೊಳಿಸಿ ಪಾತ್ರಗಳ ಮೂರ್ತ ರೂಪವನ್ನು ಕೊಟ್ಟಿತು. `ಮದುಮಗಳು’ ಕಾದಂಬರಿಯ ಬಗ್ಗೆ ಹಲವು ಅಧ್ಯಯನಗಳು, ವಿಮರ್ಶೆಗಳು, ಟಿಪ್ಪಣಿಗಳು ಬಂದಿವೆ. ಈ ಅಧ್ಯಯನಗಳನ್ನು ಆಧರಿಸಿ ಮಾಡಿದ ಟಿಪ್ಪಣಿ ರೂಪದ ಬರಹವಿದು. ಈ ಬರಹಕ್ಕೆ ನಾಟಕದ ಎರಡು ಸಂಗತಿಗಳು ರೂಪಕಗಳಂತೆ ಕಾಣುತ್ತಿವೆ.

ಒಂದು: ನಾಟಕ ಮುಗಿದಾದ ನಂತರ ಇದರಲ್ಲಿ ಪಾತ್ರ ಮಾಡಿದ ನಟ ನಟಿಯರು ತಮ್ಮ ಪಾತ್ರದ ಅನುಭವಗಳನ್ನು, ಜತೆಗೆ ತಮ್ಮ ಬದುಕಿನ ಕತೆಯನ್ನೂ ರಂಗಾಯಣದಲ್ಲಿ ಹೇಳಿಕೊಂಡಿದ್ದರು. ಈ ಕತೆಗಳನ್ನು ಕೇಳುತ್ತಿದ್ದರೆ ಅವರ ಬದುಕಿನ ಕತೆಯೇ ಅವರವರ ಪಾತ್ರಗಳಿಗೆ ಜೀವತುಂಬಲು ಸ್ಫೂರ್ತಿಯಾಯಿತೇನೋ ಎನ್ನುವಂತಿದೆ. ಈಗ ಆ ಪಾತ್ರಗಳೆಲ್ಲಾ ತಮ್ಮ ನಿಜ ಬದುಕಿಗೆ ತೆರೆದುಕೊಂಡಿವೆ; ಸದ್ಯದ ಎಲ್ಲಾ ವೈರುಧ್ಯಗಳೊಂದಿಗೆ ಈ ಪಾತ್ರಗಳು ಮುಖಾಮುಖಿಯಾಗುತ್ತಿವೆ. ಇದು ಕಾದಂಬರಿಯೊಂದು ವರ್ತಮಾನದಲ್ಲಿ ಜೀವಂತವಾಗಿರುವುದರ ರೂಪಕವೆನ್ನಿಸಿತು.

ಎರಡು: ಈ ನಾಟಕವನ್ನು ಅರ್ಜಿನಜೋಗಿಗಳು, ಕಾಡಸಿದ್ದರು ಹಾಗೂ ಹೆಳವರು ನಿರೂಪಿಸುತ್ತಾರೆ. ಅವರೆಲ್ಲ ತಮ್ಮ ಕತೆ ಹೇಳುವ ಕಾಯಕವನ್ನೇ ತ್ಯಜಿಸುವ ಹಂತದಲ್ಲಿರುವಾಗ, ಅವರನ್ನು ಕೈಹಿಡಿದು ಮತ್ತೆ ರಂಗಮಂಚಕ್ಕೆ ತಂದಿದ್ದು ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು’. ಇದರ ಹಿಂದೆ ಸೃಜನಶೀಲ ಕೃತಿಯೊಂದು ಮೌಖಿಕ ಜಗತ್ತಿನ ಮೂಲಕ ಮರುಹುಟ್ಟು ಪಡೆಯುವ ಸೂಚನೆಯಿದೆ. ಇದು ಜಾನಪದ ಜಗತ್ತು ಎದುರಿಸುವ ಬಿಕ್ಕಟ್ಟೊಂದನ್ನು ಬಿಡಿಸುವ ಧ್ವ್ವನಿ ಕೂಡ. ಯಾವ ಕುವೆಂಪು ತಮ್ಮ ಜೀವಿತಾವದಿಯಲ್ಲಿ ಜಾನಪದವನ್ನು ಮೌಢ್ಯ ಎಂದು ಆಕಡೆಗೆ ಹೆಚ್ಚು ಒಲವು ತೋರಲಿಲ್ಲವೋ, ಅದೇ ಜಾನಪದದ ಕಣ್ಣೋಟದಿಂದ ಮದುಮಗಳನ್ನು ನಿರೂಪಿಸಿದ್ದು ಹೆಚ್ಚು ಅರ್ಥಪೂರ್ಣ. ಇದು ಕಾದಂಬರಿಯೊಂದು ಲೇಖಕನ ನಂಬಿಕೆಯ ಲೋಕವನ್ನೂ ಮೀರಿ, ವಿಮರ್ಶಕರ ಲೆಕ್ಕಾಚಾರಗಳನ್ನು ಮತ್ತೆ ತಾಳೆ ನೋಡುವಂತೆ ಮಾಡಿ, ಮತ್ತೊಂದಕ್ಕೆ ಮರುಜೀವ ನೀಡಬಲ್ಲ ಅಗಾಧ ಚೈತನ್ಯದ ರೂಪಕದಂತೆ ಕಂಡಿತು. ಬಹುಶಃ ಈ ಎರಡೂ ರೂಪಕಗಳು ಮದುಮಗಳು ಕಾದಂಬರಿಯ ಅದ್ಯಯನಗಳ ಸಮೀಕ್ಷೆಗೆ ತೋರು ಬೆರಳಾಗಿವೆ.

2

ಕುವೆಂಪು ಎಲ್ಲಾ ಕಾಲದಲ್ಲೂ ಹೊಸ ಅರ್ಥಗಳಲ್ಲಿ ಎದುರಾಗುವ ಬಹುಮುಖ್ಯ ಲೇಖಕರಲ್ಲಿ ಒಬ್ಬರು. ಇವರ ಬಗೆಗೆ ಕನ್ನಡದ ಮನಸ್ಸು ತೋರಿದ ಪ್ರತಿಕ್ರಿಯೆಗಳು ಅಚ್ಚರಿ ಹುಟ್ಟಿಸುವಂತಹವು ಮತ್ತು ವೈರುಧ್ಯಗಳನ್ನು ಸೃಷ್ಟಿಸಿದಂತಹವು. ಅವರ ಬರಹಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಮುಖ್ಯವಾಗಿ ಎರಡು ಅಂಶಗಳು ಕಾಣಿಸುತ್ತವೆ. ಒಂದು: ಕುವೆಂಪು ಪ್ರಜ್ಞೆಯನ್ನು ವಿಸ್ತರಿಸುವ ಮತ್ತು ಮಿತಿಗೊಳಿಸುವ ಆಯಾಮ. ಎರಡು: ಸಾಮಾನ್ಯ ಓದುಗರಿಗೆ ಕುವೆಂಪು ಅವರನ್ನು ಭಿನ್ನವಾಗಿ ಅರ್ಥೈಸುವ ಮತ್ತು ತಮ್ಮ ಅರ್ಥಗಳ ಚೌಕಟ್ಟಿನಲ್ಲಿ ಕುವೆಂಪು ಅವರನ್ನು ಕಟ್ಟಿಹಾಕುವ ಆಯಾಮ. ಹಾಗಾಗಿ ಅವರ ಸಾಹಿತ್ಯದ ಅನುಸಂಧಾನ ಬಹುಮುಖಿಯಾದುದು. `ಮಲೆಗಳಲ್ಲಿ ಮದುಮಗಳು’ ಕಾದಂಬರಿ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು. ಅಂತೆಯೇ ಕನ್ನಡದ ಕಾದಂಬರಿ ಪ್ರಕಾರದ ಸಾಂಪ್ರದಾಯಿಕ ಕಟ್ಟುಗಳನ್ನು ಮುರಿದದ್ದು. ತುಂಬಾ ಸಂಕೀರ್ಣವಾದ ಈ ಕಾದಂಬರಿ ತನ್ನ ಬಗ್ಗೆ ಬರಬಹುದಾದ ವಿಮರ್ಶೆಗೂ ತಾನೇ ಸವಾಲಾಗಿ ನಿಂತದ್ದು.

20 ನೇ ಶತಮಾನದಲ್ಲಿ ಘಟಿಸಿದ ಪ್ರಮುಖ ಪಲ್ಲಟಗಳನ್ನು `ಮದುಮಗಳು’ ಒಳಗೊಂಡಿದೆ. ಮುಖ್ಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೊದಲ ದಿನಗಳ ಅನುಭವ, ಹಿಂದುಳಿದ ವರ್ಗಗಳ ಆಳದಲ್ಲಿ ರೂಪುಗೊಳ್ಳುತ್ತಿರುವ ಎಚ್ಚರದ ಸೂಕ್ಷ್ಮಗಳು, ಆಧುನಿಕ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿರುವ ಜನಸಮುದಾಯದ ಆಲೋಚನ ಪಲ್ಲಟ- ಇಂತಹ ಹಲವು ಬಗೆಯ ಪ್ರೇರಣೆಗಳು ಕುವೆಂಪು ಇವರ ಬರಹವನ್ನು ಪ್ರಭಾವಿಸಿವೆ. `ಮದುಮಗಳು’ ಬಗ್ಗೆ ಬಂದ ವಿಮರ್ಶೆ ಆ ಕಾಲಘಟ್ಟದ ಪ್ರಭಾವ ಪ್ರೇರಣೆಯ ಬಗೆಗೂ ಮತ್ತು ಒಟ್ಟು ಕನ್ನಡ ಪ್ರಜ್ಞೆಯು ರೂಪಾಂತರಕ್ಕೆ ಒಳಗಾಗುತ್ತಿರುವುದರ ಸಂಘರ್ಷದ ಬಗ್ಗೆಯೂ ಪ್ರತಿಕ್ರಿಯೆ ವ್ಯಕ್ತಪಡಿಸಿದಂತಿದೆ. ಹಾಗಾಗಿ ಕುವೆಂಪು ಅವರನ್ನು ಶೂದ್ರ ಪ್ರಜ್ಞೆಯ ಅಸ್ಮಿತೆಯನ್ನಾಗಿ ಕಟ್ಟಿಕೊಳ್ಳುವ ಸಮರ್ಥನೀಯ ನೆಲೆಗಳು ಇರುವಂತೆ, ಬ್ರಾಹ್ಮಣ ಪ್ರಜ್ಞೆಯ ನಿರಾಕರಣೆಯ ನೆಲೆಗಳೂ ಇವೆ. ಹಾಗೆಯೇ ಈ ವೈರುಧ್ಯಗಳನ್ನು ಮೀರಿದ ಸಂಗತಿಗಳೂ ಇಲ್ಲದಿಲ್ಲ.

ಕುವೆಂಪು ಅವರ ಒಟ್ಟು ಸಾಹಿತ್ಯದ ಬಗ್ಗೆ ಬಂದ ವಿಮರ್ಶೆಯಲ್ಲಿ ಅಭಿಮಾನದ ನೆಲೆ ಗಾಢವಾಗಿದೆ. ಇದನ್ನು ಹೆಚ್ಚಾಗಿ ಅವರ ಬಗ್ಗೆ ಬಂದ ಅಭಿನಂದನ ಗ್ರಂಥಗಳಲ್ಲಿ ಕಾಣಬಹುದು. ಇದರ ಸೆಳಕುಗಳು ಮದುಮಗಳು ಕಾದಂಬರಿಯ ವಿಮರ್ಶೆಯಲ್ಲೂ ಬೆರೆತಿವೆ. ಇದಕ್ಕೆ ಪ್ರೇರಣೆ ಕೇವಲ ಸಾಹಿತ್ಯಿಕ ಕಾರಣ ಮಾತ್ರವಲ್ಲದೆ, ಸಾಹಿತ್ಯೇತರ ಕಾರಣಗಳೂ ಇವೆ. ಅದರಲ್ಲಿ ಮುಖ್ಯವಾದುದು, ಮದುಮಗಳು ಕಾದಂಬರಿ ಬರುವ ಹೊತ್ತಿಗಾಗಲೇ ಕುವೆಂಪು ಅವರನ್ನು ಶೂದ್ರ ಪ್ರಜ್ಞೆಯ ರೂಪಕ ಎಂಬಂತೆ ದಲಿತ ಮತ್ತು ಕೆಳವರ್ಗದ ಚಿಂತಕರು ಒಪ್ಪಿಕೊಂಡಿದ್ದರು. ಹಾಗಾಗಿ ಈ ನೆಲೆ ಅವರ ಒಟ್ಟೂ ಸಾಹಿತ್ಯದ ನೋಟಕ್ರಮವನ್ನು ಪ್ರಭಾವಿಸಿತು. ಅದು ಇನ್ನೂ ಮುಂದುವರೆದು ಒಕ್ಕಲಿಗರ ಸಾಂಸ್ಕೃತಿಕ ಅನನ್ಯತೆಯಾಗಿಯೂ ರೂಪಾಂತರ ಪಡೆಯಿತು. ಈ ಅಂಶಗಳು ಕುವೆಂಪು ಅವರ ಬಗೆಗಿನ ಚಿಂತನೆಯ ಆಳದಲ್ಲಿ ಬ್ರಾಹ್ಮಣ್ಯದ ವಿರೋಧಿ ನಿಲುವು ನೆಲೆಗೊಳ್ಳುವಂತೆ ಮಾಡಿದವು. ಇದರ ವ್ಯತಿರಿಕ್ತ ಪರಿಣಾಮ ಕುವೆಂಪು ಅವರ ಸಾಹಿತ್ಯದ ಬಗ್ಗೆ ಬರೆದ ಬ್ರಾಹ್ಮಣರ ವಿಮರ್ಶೆ ಯಲ್ಲಿಯೂ ಕಾಣಿಸಿಕೊಂಡಿತು.

3

ಮದುಮಗಳು ಕಾದಂಬರಿ ಪ್ರಕಟಣೆಗೂ ಮುಂಚೆ ಕನ್ನಡದ ಕಾದಂಬರಿ ಚೌಕಟ್ಟುಗಳ ಬಗ್ಗೆ ಕೆಲವು ಸಿದ್ದ ಗ್ರಹಿಕೆಗಳಿದ್ದವು. ಅಂತೆಯೇ ಕಾದಂಬರಿ ಕುರಿತ ವಿಮರ್ಶಾ ಪರಿಭಾಷೆಯೂ ಆತನಕದ ಕನ್ನಡದ ಕಾದಂಬರಿಗಳನ್ನು ಆಧರಿಸಿ ರೂಪುಗೊಂಡಿತ್ತು. ಇದೇ ಗ್ರಹಿಕೆ ಮತ್ತು ಪರಿಭಾಷೆಗಳಲ್ಲಿ `ಮದುಮಗಳು’ ಕಾದಂಬರಿಯನ್ನು ವ್ಯಾಖ್ಯಾನಿಸುವ ಪ್ರಯತ್ನವೂ ನಡೆಯಿತು. ಇದನ್ನು ಮುಖ್ಯವಾಗಿ ನವ್ಯದ ವಿಮರ್ಶೆಯಲ್ಲಿ ಕಾಣಬಹುದು. ಈ ಕಾದಂಬರಿಗೆ ಶಿಲ್ಪದ ಕೊರತೆ ಇದೆ (ಎಂ.ಜಿ. ಕೃಷ್ಣಮೂರ್ತಿ), ಕೇಂದ್ರ ಪ್ರಜ್ಞೆ ಇಲ್ಲ, ವಿವರಗಳಲ್ಲಿ ಸೊಕ್ಕುತ್ತದೆ (ಯು.ಆರ್. ಅನಂತಮೂರ್ತಿ) ಮುಂತಾದ ವ್ಯಾಖ್ಯಾನಗಳು ಬಂದವುಗಳು. ಆ ನಂತರದಲ್ಲಿ ಈ ನೋಟಕ್ರಮ ಬದಲಾಗಿದೆ. ಸುಜನಾ ಅವರು `ಮಲೆಗಳಲ್ಲಿ ಮದುಮಗಳು’ ಮತ್ತು `ಶ್ರೀ ರಾಮಾಯಣ ದರ್ಶನಂ’ ಇವೆರಡೂ ಒಂದೇ ಪ್ರಜ್ಞೆಯ ಎರಡು ಭಿನ್ನ ಪಾತಳಿಗಳಾಗಿದ್ದು ಒಂದು `ತಾರಸ್ಥಾಯಿ’ ಮತ್ತೊಂದು `ಮಂದ್ರಸ್ಥಾಯಿ’ ಎನ್ನುತ್ತಾರೆ. ಇದನ್ನು ಕೆ.ವಿ ನಾರಾಯಣ ಅವರು ಇದೊಂದು ಮುಖ್ಯ ನಿಲುವು ಎಂದು ಹೇಳುತ್ತಾರೆ. (ತೊಂಡುಮೇವು-1, ಪು.223). ಇದು `ಮದುಮಗಳು’ ಕಾದಂಬರಿಯನ್ನು ಬೇರೆಯ ದಿಕ್ಕಿನಲ್ಲಿ ನೋಡಿದುದರ ಫಲ.

`ಮದುಮಗಳು’ ಕಾದಂಬರಿ ತನ್ನೊಡಲೊಳಗೇ ಕಾದಂಬರಿಯ ಹೊಸ ಆಯಾಮಗಳನ್ನು ಒಳಗೊಂಡಿತ್ತು. ಅಂದರೆ ಆತನಕದ ಕನ್ನಡದ ಕಾದಂಬರಿಯ ಚೌಕಟ್ಟುಗಳಲ್ಲಿ ಇಟ್ಟರೆ ಅದು ಹೊರಗೆ ಉಳಿದುಬಿಡುತ್ತಿತ್ತು. ಹಾಗಾಗಿ ಈ ಕಾದಂಬರಿಯೊಳಗಿನ ಭಿತ್ತಿಯನ್ನು ಆಧರಿಸಿ ವಿಶ್ಲೇಷಣೆ ಮಾಡುವ ಒತ್ತಡವನ್ನು ಸ್ವತಃ ಕಾದಂಬರಿಯೇ ಸೃಷ್ಟಿಸಿತು. ಇದು ಸೃಜನಶೀಲ ಕೃತಿಯೊಂದರ ಬಹುದೊಡ್ಡ ಯಶಸ್ಸು. ಈ ನೆಲೆಯಲ್ಲಿ ಕಾದಂಬರಿಯನ್ನು ನೋಡುವ ಕ್ರಮ ತೊಂಬತ್ತರ ದಶಕದಿಂದೀಚೆಗೆ ಹೆಚ್ಚಾಗುತ್ತಿದೆ. ಹೀಗಾಗಿಯೇ ಪ್ರತಿಸಂಸ್ಕೃತಿ ನೆಲೆಯ ವಿಮರ್ಶೆಯಲ್ಲಿ ಕುವೆಂಪು ಅವರನ್ನು ಮಹತ್ವದ ಲೇಖಕ ಎಂದು ಒಪ್ಪಿಕೊಂಡೂ, ಕೆಲವು ಸಂಗತಿಗಳಲ್ಲಿ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸುವ ಗುಣ ಬಂದಿದೆ. `ಇಲ್ಲಿ ಯಾರೂ ಅಮುಖ್ಯರಲ್ಲ’ ಎನ್ನುವ ಕುವೆಂಪು ಅವರೇ ತಮ್ಮ ಕಾದಂಬರಿಯಲ್ಲಿ ಯಾರನ್ನೆಲ್ಲಾ ಅಮುಖ್ಯರನ್ನಾಗಿ ಚಿತ್ರಿಸಿದ್ದಾರೆ ಎಂಬ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗಿದೆ.

`ಮದುಮಗಳು’ ಕಾದಂಬರಿಯನ್ನು ವಿಮರ್ಶಾ ಮಾನದಂಡವಿಲ್ಲದೆ, ಸಮುದಾಯದ ಬದುಕಿನ ನೆಲೆಯಲ್ಲಿ ನೋಡಿದ ನೋಟಕ್ರಮಗಳು ಹೆಚ್ಚು ಉಪಯುಕ್ತವಾಗಿವೆ. ಹಾಗೆಯೇ ಕಾದಂಬರಿಯನ್ನು ಹೊಸದಾಗಿ ನೋಡಬಹುದಾದ ನೋಟಗಳನ್ನೂ ನೀಡಿವೆ. ಇದರಲ್ಲಿ ಮುಖ್ಯವಾದ ಬರಹವೆಂದರೆ ಬಿ. ಕೃಷ್ಣಪ್ಪ ಅವರ ಲೇಖನ. ಕುವೆಂಪು ಚಿತ್ರಿಸಿದ ದಲಿತ ಲೋಕದ ಮೂಲಕ ಕೆಲವು ಆಕ್ಷೇಪಾರ್ಹವಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಂತೆಯೇ ಸಾಬರ ಚಿತ್ರಣ, ಕ್ರೈಸ್ತರ ಚಿತ್ರಣ, ಮಹಿಳಾ ಚಿತ್ರಣ ಮುಂತಾದ ಸಮುದಾಯಗಳ ನೆಲೆಯಲ್ಲಿ ಕಾದಂಬರಿಯನ್ನು ನೋಡಲಾಗಿದೆ. ಹಾಗೆ ನೋಡಿದರೆ ಮಹಿಳಾ ನೆಲೆಯಲ್ಲಿ `ಮದುಮಗಳು’ ಕಾದಂಬರಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದು ಕಡಿಮೆ. ಹಾಗೆಯೇ ಪರಿಸರವಾದಿ ದೃಷ್ಟಿಯಿಂದಲೂ ಕಾದಂಬರಿಯನ್ನು ನೋಡಲಾಗಿದೆ. ಚಂದ್ರಶೇಖರ್ ನಂಗಲಿ, ಬಿ. ಪುಟ್ಟಸ್ವಾಮಿ ಮುಂತಾದವರ ಬರಹದಲ್ಲಿ ಈ ನೆಲೆಯನ್ನು ಕಾಣಬಹುದಾಗಿದೆ. ಈ ಬಗೆಯ ಅಧ್ಯಯನಗಳಲ್ಲಿ ಜೀವ ವೈವಿಧ್ಯದ ಅಖಂಡತೆಯನ್ನು ತುಂಡು ತುಂಡಾಗಿಸಿರುವುದು ಮಿತಿಯಾಗಿದೆ. ಕೆ.ಸಿ. ಶಿವಾರೆಡ್ಡಿಯವರು `ಆಧುನಿಕ ಜಗತ್ತಿನ ಪರಿಸರವಾದಿಗಳು ಮಂಡಿಸುತ್ತಿರುವ `ಜೀವ ಸಮಾನತಾ ಧೋರಣೆ’ಯ ಪರಿಸರವಾದ, `ಮದುಮಗಳು’ ಕಾದಂಬರಿಯ ಮುಖ್ಯ ಭಿತ್ತಿಯಾಗಿರುವುದು ಇದರ ಅನನ್ಯತೆಯಾಗಿದೆ’ ಎನ್ನುತ್ತಾರೆ. ಇದು `ಮದುಮಗಳು’ ಕಾದಂಬರಿಯನ್ನು ಹೊಸ ಅನನ್ಯತೆಯ ನೆಲೆಯಲ್ಲಿ ನಿರೂಪಿಸುತ್ತಿರುವ ಅಧ್ಯಯನಗಳಿಗೆ ಸಾಕ್ಷಿಯಂತಿದೆ. ಹೀಗೆ ಈ ಕಾದಂಬರಿಯು ಬೇರೆ ಬೇರೆ ನೆಲೆಗಳಲ್ಲಿ ಶೋಧನೆಗೆ ಸವಾಲಾಗಿದೆ.

4

ಕುವೆಂಪು ಅವರನ್ನು ಕಾವ್ಯ, ಮಹಾಕಾವ್ಯ, ನಾಟಕದ ಮೂಲಕ ಪರೀಕ್ಷೆ ಮಾಡಿದಷ್ಟು, ಕಾದಂಬರಿಗಳ ಮುಖೇನ ಕನ್ನಡದ ಪ್ರಜ್ಞೆಯ ಭಾಗವಾಗಿ ಹೆಚ್ಚು ಪರೀಕ್ಷಿಶಿದಂತಿಲ್ಲ. ಮುಖ್ಯವಾಗಿ ಕನ್ನಡದ ಸೃಜನಶೀಲ ಸಾಹಿತ್ಯ ಸೃಷ್ಟಿಯ ಹಿಂದೆ `ಮದುಮಗಳು’ ಕಾದಂಬರಿಯ ಪ್ರಭಾವ ಅಗಾಧವಾಗಿದ್ದಂತಿದೆ. ದೇವನೂರ ಮಹಾದೇವ, ಮೊಗಳ್ಳಿ ಗಣೇಶ್, ಅಮರೇಶ ನುಗಡೋಣಿ ಮುಂತಾದ ಅನೇಕರು ಪ್ರಾಸಂಗಿಕವಾಗಿ ತಮ್ಮ ಮಾತುಗಳಲ್ಲಿ `ಮದುಮಗಳು’ ಕಾದಂಬರಿಯ ಪ್ರಭಾವವನ್ನು ಹೇಳಿಕೊಂಡಿದ್ದಾರೆ. ದೇವನೂರು ಮಹಾದೇವ ಅವರು ಕುಸುಮಬಾಲೆ ಕುರಿತಂತೆ ಬಂದ ವಿಮರ್ಶೆಗಳಲ್ಲಿ ಕುಸುಮಬಾಲೆ, ಮದುಮಗಳ ಮೊಮ್ಮಗಳು ಎಂದ ವಿಮರ್ಶೆ ನನಗೆ ಹೆಚ್ಚು ಇಷ್ಟವಾಗಿದೆ ಎಂದದ್ದು ಇದನ್ನು ತೋರಿಸುತ್ತದೆ. ಆದರೆ ಈ ಬಗೆಯ ಮಾತುಗಳು ಹೆಚ್ಚು ದಾಖಲಾದಂತಿಲ್ಲ. ಈ ನೆಲೆಯಲ್ಲಿ ಕಾದಂಬರಿಯ ಪ್ರಭಾವ ಮತ್ತು ಅದು ಹುಟ್ಟಿಸಿದ ಸೃಜನಶೀಲ ಮಾದರಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಿದೆ.

ಕೆಲವು ಕ್ಷೇತ್ರಗಳಿಗೆ ಮತ್ತೆ ಮತ್ತೆ ಭೇಟಿ ನೀಡುವಂತೆ `ಮದುಮಗಳು’ ಕಾದಂಬರಿಯನ್ನು ಮತ್ತೆ ಮತ್ತೆ ಓದುವ, ಆ ಕೃತಿಯನ್ನು ಒಳಗು ಮಾಡಿಕೊಳ್ಳುವ ವಿಧಾನವೊಂದು ಕನ್ನಡದಲ್ಲಿದೆ. ಈ ಬಗೆಯ ಬೇರೆ ಬೇರೆ ಓದುಗಳಲ್ಲಿ `ಮದುಮಗಳು’ ಕಾಣಿಸಿದ ಹಲವು ಬಗೆಯ ದರ್ಶನಗಳು ಹೆಚ್ಚು ದಾಖಲಾದಂತಿಲ್ಲ. ಅಥವಾ ಒಂದು ಕಾಲದಲ್ಲಿ ದಾಖಲಾದ `ಮದುಮಗಳು’ ಬಗೆಗಿನ ವಿಮರ್ಶೆಯ ನಿಲುವುಗಳು, ಕಾಲಾನಂತರದಲ್ಲಿ ಅದೇ ಲೇಖಕರಲ್ಲಿ ಬದಲಾದಂತಿದೆ. ಅಂತಹ ಸ್ಪಷ್ಟ ದಾಖಲಾತಿಗಳೂ ಹೆಚ್ಚು ಆಗಿಲ್ಲ. ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗ ಪ್ರಕಟಿಸಿರುವ ಮತ್ತು ಪ್ರೊ.ರಹಮತ್ ತರೀಕೆರೆ ಅವರು ಸಂಪಾದಿಸಿರುವ `ಮಲೆಗಳಲ್ಲಿ ಮದುಮಗಳು: ಸಾಂಸ್ಕೃತಿಕ ಮುಖಾಮುಖಿ’ ಕೃತಿ ಮದುಮಗಳು ಕುರಿತ ಬಹುಮುಖಿ ಚಿಂತನೆಯನ್ನು ನಡೆಸಿದೆ. ಮೊದಲಿಗೆ ಉಲ್ಲೇಖಿಸಿದ ಹಾಗೆ `ಮದುಮಗಳು’ ಮತ್ತೆ ಮೌಖಿಕ ಪರಂಪರೆಯಲ್ಲಿ ಪ್ರವೇಶ ಪಡೆದರೆ, ಜನಸಾಮಾನ್ಯರಲ್ಲಿ ಹೊಸ ಹೊಸ ಅರ್ಥಗಳಲ್ಲಿ ಪುನರ್ಸೃಷ್ಟಿಯಾಗುವ ಸಾಧ್ಯತೆ ಇದೆ. ಈಗ ಮದುಮಗಳು ನಾಟಕ ಬೆಂಗಳೂರಿನಲ್ಲಿಯೂ ನಡೆಯುತ್ತಿದೆ. ಅದು ಜನಮಾನಸದಲ್ಲಿ ನುಗ್ಗಿ ಹೊಸ ಜಾನಪದವನ್ನು ಸೃಷ್ಟಿಸಲಿ.

ಕೃಪೆ:- ಅರುಣ್ ಜೋಳದ ಕೂಡ್ಲಿಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ