ಸೋಮವಾರ, ಮಾರ್ಚ್ 27, 2017

ವಿಶ್ವ ಸಾಹಿತ್ಯದ ಮಹಾಕವಿ ಕಾಳಿದಾಸ

ವಿಶ್ವ ಸಾಹಿತ್ಯದ ಮಹಾಕವಿ ಕಾಳಿದಾಸ

            ಕಾಳಿದಾಸ ಇಡೀ ಭಾರತೀಯ ಸಾಹಿತ್ಯದಲ್ಲೇ ಶ್ರೇಷ್ಠ ಪ್ರತಿಭೆ. ಭಾರತಕ್ಕೆ ಮಾತ್ರವಲ್ಲ ವಿಶಾಲ ಜಗತ್ತಿಗೆ ಈಗ ಚಿರಪರಿಚಿತ. ಇಂಥ ಮಹಾನ್ ಕವಿಯ ಬಗ್ಗೆ ಸಂಸ್ಕೃತ ವಿದ್ವಾಂಸ ಕೆ. ಕೃಷ್ಣಮೂರ್ತಿ ಅವರು ಹೀಗೆ ಬರೆದಿದ್ದಾರೆ : "ಸರಸ್ವತಿಯ ಅವತಾರ, ಕವಿ ಕುಲಗುರು, ನಾಟಕ ಸಾಮ್ರಾಜ್ಯದ ಅನಭಿಷಿಕ್ತ ದೊರೆ, ಸಾರ್ವಭೌಮ, ಸಾವಿರಾರು ವರ್ಷಗಳ ಸಂಸ್ಕೃತ ನಾಟಕದ ಇತಿಹಾಸದಲ್ಲಿ ಹಿಂದಿನವರ ಕೃತಿಗಳನ್ನು; ಮುಂದಿನವರ ಕೃತಿಗಳನ್ನು ಇಕ್ಕಿ ಮೆಟ್ಟಿದ ಮಹಾಮತಿ. ವಿಶ್ವಸಾಹಿತ್ಯದ ಮಹಾಕವಿ, ಸಾಹಿತ್ಯ ತಾರಾಗಣದಲ್ಲಿ ರಾರಾಜಿಸುವ ಉಜ್ವಲ ನಕ್ಷತ್ರ. ಜೋನ್ಸ್, ಗಯಟೆ, ಟ್ಯಾಗೂರ್, ಅರಬಿಂದೊ, ರಾಧಾಕೃಷ್ಣನ್ ಮುಂತಾದ ಮಹಾ ಮೇಧಾವಿಗಳ ಮುಕ್ತ ಪ್ರಶಂಸೆಗೆ ಮೀಸಲಾಗಿರುವ ನಮ್ಮ ರಾಷ್ಟ್ರಕವಿ, ಭಾರತದ ಷೇಕ್ಸ್ಪಿಯರ್, ಸಂಸ್ಕೃತ ಕಾವ್ಯದ ಅತ್ಯುನ್ನತ ಶಿಖರ, ಈತನಿಗೆ (ಕಾಳಿದಾಸನಿಗೆ) ಕೈ ಮುಗಿಯದ ಕವಿಯಿಲ್ಲ. ಅವನನ್ನು ಮೆಚ್ಚದ ವಿಮರ್ಶಕನಿಲ್ಲ. ಅವನ ಹೆಸರನ್ನು ಗೌರವಿಸದ ಭಾರತೀಯನಿಲ್ಲ." ಈ ಮಾತುಗಳು ಕಾಳಿದಾಸನ ಸಾಹಿತ್ಯ ಪ್ರತಿಭೆಯ ಮಟ್ಟವನ್ನು ಸೂಚಿಸುತ್ತದೆ. ಇದಿಷ್ಟೇ ಅಲ್ಲದೆ ಕಾಳಿದಾಸನ ನಂತರದ ಭಾರತೀಯ ಹಾಗೂ ಪಾಶ್ಚಾತ್ಯ ಲೇಖಕರು ಅನೇಕರು ಈತನ ಬಗ್ಗೆ ಹೆಮ್ಮೆಪಡಬಹುದಾದ ಮಾತುಗಳನ್ನಾಡಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಗಮನಿಸಬಹುದು : ಸಂಸ್ಕೃತದ ಹೆಸರಾಂತ ಸಾಹಿತಿ ಬಾಣಭಟ್ಟ ಕಾಳಿದಾಸನ ವಾಕ್ಯಗಳನ್ನು ಕೇಳಿದರೆ ಒಂದು ತರದ ಅನನ್ಯ ಪ್ರೀತಿಭಾವವು ನಮ್ಮಲ್ಲಿ ಚಿಮ್ಮುವುದು ಎಂದಿದ್ದಾರೆ; ಕವಿ ಕುಲ ಗುರು: ಕಾಲಿದಾಸೋ ವಿಲಾಸಃ ಎನ್ನುತ್ತಾನೆ - ಕವಿ ಜಯದೇವ. ಅಲಂಕಾರ ಶಾಸ್ತ್ರಜ್ಞ ರಾಜಶೇಖರ ಶೃಂಗಾರ ಮತ್ತು ಲಾಲಿತ್ಯ ಇವುಗಳಲ್ಲಿ ಕಾಳಿದಾಸನನ್ನು ಯಾರೂ ಗೆಲ್ಲಲಾರರು ಎಂದಿದ್ದಾನೆ. ಟೀಕಾಕಾರ ಮಲ್ಲಿನಾಥನಂತೂ ಕಾಳಿದಾಸನ ಶಬ್ದಗಳ ಸಾರವನ್ನು ಕಾಳಿದಾಸ ಇಲ್ಲವೆ ಸರಸ್ವತಿ ಇಲ್ಲ ಸಾಕ್ಷಾತ್ ಚತುರ್ಮುಖ ಬ್ರಹ್ಮನಲ್ಲದೆ ನನ್ನಂತಹವರು ತಿಳಿದುಕೊಳ್ಳಲಾರರು ಎಂದು ಉದ್ಘರಿಸುತ್ತಾನೆ. ಹೀಗೆ ಭಾರತೀಯ ಶ್ರೇಷ್ಠ ದರ್ಜೆಯ ಕವಿ - ಟೀಕಾಕಾರರಿಂದ ಮಾತ್ರವಲ್ಲದೆ ಪಾಶ್ಚಾತ್ಯ ಕವಿ - ವಿಮರ್ಶಕರಿಂದಲೂ ಪ್ರಶಂಸೆಗೆ ಒಳಗಾದವನು ಕಾಳಿದಾಸ. ಕಾಳಿದಾಸನ ಶಾಕುಂತಲ ನಾಟಕವನ್ನು ಕುರಿತು ವಿಶ್ವಕವಿ ಗಯಟೆ ಸ್ವರ್ಗ ಮತ್ತು ಭೂಮಿಗಳ ಸಂಗಮವಾಗಿದೆ ಶಾಕುಂತಲ ನಾಟಕ ಎಂಬುದಾಗಿ ಕೊಂಡಾಡಿದ್ದಾನೆ. ಹಾಗೆಯೇ ಕಾಳಿದಾಸನ ಕಾವ್ಯದ ಬಗ್ಗೆ ರಾಜರುಗಳ ಬಂಗಾರದಲ್ಲಿ ಇಲ್ಲವೇ ಸ್ಪಟಿಕ ಶಿಲೆಯಲ್ಲಿ ನಿಲ್ಲಿಸಿದ ಯಾವ ಸ್ಮಾರಕವೂ ಈ ಕಾವ್ಯಕ್ಕಿಂತ ಹೆಚ್ಚು ಬಾಳಲಾರವು ಎಂದು ಪ್ರಶಂಸಿದ್ದಾರೆ. ಇಂಗ್ಲೀಷ್ ವಿಮರ್ಶಕರಲ್ಲಿ ಬಹಳಷ್ಟು ಜನ ಕಾಳಿದಾಸನೆಂದರೆ ಭಾರತದ ಷೇಕ್ಸ್ಪಿಯರ್ ಎಂದು ಸಾರಿದರು. ಹೀಗೆ ಹೇಳುವಲ್ಲಿ ಹೋಲಿಕೆಯ ಭಾವ ಮಾತ್ರ ಮುಖ್ಯವಲ್ಲ. ಷೇಕ್ಸ್ಪಿಯರನ ಶ್ರೇಷ್ಠತೆ ಎಂಥದ್ದು ಎಂಬುದನ್ನು ಅರಿತಲ್ಲಿ ಕಾಳಿದಾಸನಲ್ಲಿ ಅಂತಹ ಶ್ರೇಷ್ಠತೆ ಇದೆ ಎಂಬುದು ಮುಖ್ಯ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಏನೆಂದರೆ, ಪಾಶ್ಚಾತ್ಯರು ಕಾಳಿದಾಸನ ಕೃತಿಗಳ ಬಗ್ಗೆ ಮೆಚ್ಚುಗೆಯ ಮಾತುಗಳಲ್ಲೇ ಅವರ ಮನ್ನಣೆಯ ಭಾವವನ್ನು ಮುಗಿಸಲಿಲ್ಲ. ಬದಲಿಗೆ ಅವರವರ ದೇಶೀ ಭಾಷೆಗಳಲ್ಲಿ ಕಾಳಿದಾಸನ ನಾಟಕಗಳನ್ನು ಸಾರ್ವಜನಿಕರಿಗೆ ಪ್ರದಶರ್ಿಸಿದ್ದಾರೆ. ಒಟ್ಟಾರೆ, ಕಾಳಿದಾಸ ಭಾರತ ದೇಶದ ಮತ್ತು ವಿಶ್ವ ಮಾನ್ಯತೆಯ ಶ್ರೇಷ್ಟಕವಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ಪೂರಕವಾದ ಐತಿಹ್ಯವೊಂದು ಹೀಗಿದೆ: ಒಮ್ಮೆ ನಮ್ಮ ದೇಶದಲ್ಲಿ ಶ್ರೇಷ್ಠ ಕವಿಗಳು ಎಷ್ಟು ಜನರಿದ್ದಾರೆ ಎಂಬ ಎಣಿಕೆ ನಡೆಯಿತಂತೆ. ಎಣಿಕೆ ಕಿರುಬೆರಳಿನಿಂದ ಆರಂಭವಾಯಿತು. ಮೊದಲಿಗೆ ಕಾಳಿದಾಸ ಎಂದು ಕಿರುಬೆರಳನ್ನು ಮಡಿಚಲಾಯಿತು. ಆಮೇಲೆ ಆತನಿಗೆ ಸಮಾನಾದ ಇನ್ನೊಬ್ಬ ಕವಿಯೇ ಇಲ್ಲ ಎನ್ನುವುದಕ್ಕೆ ಉಂಗುರದ ಬೆರಳನ್ನು ಮಣಿಸಲಾಯಿತಂತೆ. ಅಂದರೆ ಕಾಳಿದಾಸನ ಮಟ್ಟದ ಇನ್ನೊಬ್ಬ ಕವಿ ಈ ದೇಶದಲ್ಲಿರಲಿಲ್ಲ ಎಂಬರ್ಥ. ಈ ಐತಿಹ್ಯ ಒಂದು ಹಂತಕ್ಕೆ ಉತ್ಪ್ರೇಕ್ಷೆ ಇರಲಾರದು. ಕಾಳಿದಾಸನ ಪ್ರತಿಭೆಯ ಉನ್ನತಿಯೇ ಅಂಥದ್ದು. ಈ ಮಾತಿಗೆ ಪೂರಕವಾಗಿ ಪ್ರಚಲಿತವಿರುವ ಮತ್ತೊಂದು ಐತಿಹ್ಯವನ್ನು ಗಮನಿಸಬಹುದು ಸಂಸ್ಕೃತ ಸಾಹಿತ್ಯದ ಹೆಸರಾಂತ ನಾಟಕಕಾರ ಭವಭೂತಿ ತನ್ನ 'ಉತ್ತರ ರಾಮ ಚರಿತೆ' ನಾಟಕದಲ್ಲಿ ರಾಮ-ಸೀತೆಯರು ವನವಾಸದ ಸಂದರ್ಭದಲ್ಲಿ ನಡೆದುಕೊಂಡ ವರ್ತನೆಯ ಸಂದರ್ಭಗಳನ್ನು ವಿವರಿಸುವುದಕ್ಕೆ ಬರೆದಿದ್ದ ಕೆಲವು ಶ್ಲೋಕಗಳನ್ನು ಕಾಳಿದಾಸನಿಗೆ ತೋರಿಸಿದನಂತೆ ಅದನ್ನೆಲ್ಲ ನೋಡಿದ ಕಾಳಿದಾಸ ಎಲ್ಲ ಸರಿಯಿದೆ ಆದರೆ ಈ ಶ್ಲೋಕದ ಕೊನೆಯಲ್ಲಿ ಒಂದು ಅನಸ್ವರ ಮಾತ್ರ ಹೆಚ್ಚಾಗಿದೆ ಎಂದನಂತೆ. ಇಂಥ ಅಪಾರ ಪಾಂಡಿತ್ಯ ಹಾಗೂ ಸೂಕ್ಷ್ಮ ಪ್ರಜ್ಞೆಯ ಇನ್ನೊಬ್ಬ ಕವಿ ಆ ಕಾಲದಲ್ಲಿ ಇರಲಿಲ್ಲ ಎಂದರೆ ಉತ್ಪ್ರೇಕ್ಷೆ ಏನಲ್ಲ. ಇಂಥ ಹಲವಾರು ಕಾರಣಗಳಿಂದಾಗಿಯೇ ಕಾಳಿದಾಸನನ್ನು ವಿಶ್ವಸಾಹಿತ್ಯಕ್ಕೆ ಸಲ್ಲುವ ಮಹಾನ್ ಕವಿ ಎಂದು ಹೆಸರಿಸಲಾಗಿದೆ. ಈ ಮಾತನ್ನು ಕಾಳಿದಾಸನ ಕೃತಿಗಳನ್ನು ನೋಡಿದವರೆಲ್ಲರೂ ಒಪ್ಪುತ್ತಾರೆ.
ಕಾಲ - ಜೀವನ - ವ್ಯಕ್ತಿತ್ವ
       ಇಂಥ ಮೇದಾವಿ ಕವಿ ಭಾರತದ ಯಾವ ಭೂಭಾಗದಲ್ಲಿ ಜನಿಸಿದ? ಯಾವ ಕಾಲದಲ್ಲಿ ಬದುಕಿದ್ದ? ಆತನ ಜೀವನದ ವಿವರಗಳೇನು? ಆತನ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತಿಳಿಯುವುದು ಅವಶ್ಯಕವೆನಿಸುತ್ತದೆ. ಕಾಳಿದಾಸನ ಈ ವಿವರಗಳು ಎಲ್ಲಿಯೂ ಪ್ರತ್ಯೇಕವಾಗಿ, ಸ್ಪಷ್ಟವಾಗಿ ಮತ್ತು ನಿದರ್ಿಷ್ಟವಾಗಿ ದೊರೆಯುವುದಿಲ್ಲ. ಸ್ವತಃ ಕವಿಯಾಗಲಿ ಅಥವಾ ಸಾಹಿತ್ಯ ಚರಿತ್ರೆಕಾರರಾಗಲಿ ಈ ಬಗ್ಗೆ ಎಲ್ಲಿಯೂ ದಾಖಲಿಸಿಲ್ಲ. ಹಾಗಾದರೆ ಈ ಬಗ್ಗೆ ಏನೇನೂ ಮಾಹಿತಿ ಇಲ್ಲವಾ? ಎಂದರೆ ಇಲ್ಲ ಎಂದು ಹೇಳಲಾಗದು. ಕಾಳಿದಾಸನ ಸಾಹಿತ್ಯ ಕೃತಿಗಳಲ್ಲಿ ದೊರೆಯುವ ಮಾಹಿತಿಗಳ ಆಧಾರದ ಮೇಲೆ ಇಂಥ ವಿಷಯಗಳನ್ನು ಹೆಕ್ಕಿ ತೆಗೆಯಬಹುದಾಗಿದೆ. ಈ ರೀತಿಯ ಸಾಹಸದ ಪ್ರಯತ್ನವನ್ನು ಹಲವಾರು ಸಂಶೋಧಕರು, ವಿಮರ್ಶಕರು ಮಾಡಿದ್ದಾರೆ. ಅಂಥವರ ವಿಚಾರಗಳ ಆಧಾರದ ಮೇಲೆ ಕಾಳಿದಾಸನ ಕಾಲ-ಜೀವನ ಮತ್ತು ವ್ಯಕ್ತಿತ್ವನ್ನು ತಿಳಿಯಬಹುದಾಗಿದೆ.
ಕಾಲ
     ಭಾರತೀಯ ಸಾಹಿತ್ಯ ಕ್ಷೇತ್ರದ ಉಜ್ವಲ ನಕ್ಷತ್ರ ಕಾಳಿದಾಸನ ಕಾಲದ ಬಗ್ಗೆ ಒಂದೇ ರೀತಿಯ ಅಭಿಪ್ರಾಯಗಳಿಲ್ಲ. ಇದನ್ನು ಕುರಿತಂತೆ ವಿದ್ವಾಂಸರು ಎಲ್ಲರೂ ಒಂದೊಂದು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿಯೇ ಈತನ ಕಾಲ ಕ್ರಿ.ಪೂ. 1ನೇ ಶತಮಾನದಿಂದ ಕ್ರಿ.ಶ. 6ನೇ ಶತಮಾನದವರೆಗೆ ಓಡಾಡುತ್ತಿದೆ. ಕಾಳಿದಾಸನ ಬಗೆಗಿರುವ ಒಂದು ದಂತಕಥೆಯ ಪ್ರಕಾರ ಈತ ವಿಕ್ರಮಾದಿತ್ಯ ರಾಜನ ಆಸ್ಥಾನದಲ್ಲಿದ್ದ ನವರತ್ನ (ಒಂಭತ್ತು ಜನ ಕವಿಗಳು)ಗಳಲ್ಲಿ ಒಬ್ಬ ಆದರೆ ಈ ನವರತ್ನಗಳೆಂದು ಹೆಸರಿಸಲಾಗಿರುವ ಕವಿಗಳಲ್ಲಿ ಕೆಲವರು ಇತ್ತೀಚಿನವರು ಹಾಗಾಗಿ ಈ ಐತಿಹ್ಯದ ಅಭಿಪ್ರಾಯವನ್ನು ಒಪ್ಪಲಾಗುವುದಿಲ್ಲ. ಇನ್ನೂ 16ನೇ ಶತಮಾನದ ಬಲ್ಲಾಳ ಕವಿಯು ತನ್ನ ಭೋಜ ಪ್ರಬಂಧ ಎಂಬ ಗ್ರಂಥದಲ್ಲಿ ಕಾಳಿದಾಸ, ಭಾರವಿ, ಭವಭೂತಿ ಮತ್ತು ದಂಡಿ ಇವರೆಲ್ಲರೂ ಸಮಕಾಲೀನನೆಂದು ಹೇಳಲಾಗಿದೆ. ಆದರೆ ಕಾಳಿದಾಸನ ಪಾಂಡಿತ್ಯ, ಶೈಲಿಯನ್ನು ನೋಡಿದರೆ ಭಾಸನಿಗಿಂತ 2 ಅಥವಾ 3 ಶತಮಾನಗಳ ನಂತರದವನು ಎನಿಸುತ್ತದೆ. ಕೆಲವು ವಿದ್ವಾಂಸರು ಕಾಳಿದಾಸನ 'ಮಾಲವಿಕಾಗ್ನಿಮಿತ್ರ' ನಾಟಕದಲ್ಲಿ ಬಂದಿರುವ ಕ್ರಿ.ಪೂ. 2ನೇ ಶತಮಾನದ ಕೊನೆಯ ಬಾಳಿದ ಅಗ್ನಿಮಿತ್ರನ ಸಮಕಾಲೀನನೆಂದು ವಾದಿಸಿದ್ದಾರೆ. ಈ ವಾದಕ್ಕೂ ಕೂಡ ಸರಿಯಾದ ಗಟ್ಟಿ ತಳಹದಿ ಇಲ್ಲ. ಏಕೆಂದರೆ ಕಾಳಿದಾಸನು ಪ್ರಚುರಕ್ಕೆ ಬಂದಿದ್ದು 3 ಮತ್ತು 4 ನೇ ಶತಮಾನಗಳಲ್ಲಿ ಹಾಗಾದರೆ ಕ್ರಿ.ಪೂ. 2ನೇ ಶತಮಾನದಿಂದ 3-4ನೇ ಶತಮಾನದವರೆಗೆ ಎಲ್ಲಿಯೂ ಉಲ್ಲೇಖಗೊಂಡಿಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತದೆ. ಕಾಳಿದಾಸನ ಕಾಲದ ಬಗ್ಗೆ ವಿಚಾರ ಮಾಡಿದ ಅನೇಕ ವಿದ್ವಾಂಸರು ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದಲ್ಲಿದುದನ್ನು ಪ್ರಸ್ತಾಪಿಸುತ್ತಾರೆ. ಆದರೆ ಭಾರತದ ಚರಿತ್ರೆಯಲ್ಲಿ ಈ ಹೆಸರುಗಳ ಅರಸರು ಬಹಳಷ್ಟು ಜನ ಆಗಿ ಹೋಗಿದ್ದು ಅವರಲ್ಲಿ ಯಾರು ಕಾಳಿದಾಸನ ಆಶ್ರಯದಾತ ಎಂಬುದರ ಬಗ್ಗೆಯೂ ಸಾಕಷ್ಟು ಜಿಜ್ಞಾಸೆಗಳು ಇವೆ. ಇಂಥ ವಾದ-ವಿವಾದಗಳನ್ನು ಗಮನಿಸಿ ನಾವು ಬರಬಹುದಾದ ತೀರ್ನಮಾನ ಇಂತಿರಬಹುದು. ಕಾಳಿದಾಸನ ಕಾಲ ಸುಮಾರು 4ನೇ ಶತಮಾನ. ಇವನ ಕಾಲ ಕ್ರಿ.ಪೂ. ಮೊದಲ ಶತಮಾನವೆಂದು ಕೆಲವರು ಕ್ರಿ.ಶ. 2ನೇ ಶತಮಾನವೆಂದು ಇನ್ನೂ ಕೆಲವರು, ನಾಲ್ಕು ಮತ್ತು ಐದನೇ ಶತಮಾನವೆಂದು ಇನ್ನೂ ಕೆಲವರು ಹೇಳುತ್ತಾರಾದರೂ ಕಾಳಿದಾಸನ ಕಾಲ ನಿಖರವಾಗಿ ಕ್ರಿ.ಶ. 357-413 ಎಂದು ಹೇಳಲು ಯಾವುದೇ ಅಡ್ಡಿ ಇಲ್ಲ. ಗುಪ್ತರ ಅರಸ ಚಂದ್ರಗುಪ್ತ ವಿಕ್ರಮಾದಿತ್ಯನ ಆಳ್ವಿಕೆಯ ಕಾಲ ಇದಾಗಿದ್ದು, ಇವನ ಆಸ್ಥಾನದಲ್ಲಿ ಕಾಳಿದಾಸ ಆಸ್ಥಾನ ಕವಿಯಾಗಿದ್ದನು ಎನ್ನಬಹುದು. ಚಂದ್ರಗುಪ್ತನು ಉಜ್ಜಯಿನಿಯನ್ನು ಕೇಂದ್ರವಾಗಿಸಿಕೊಂಡು ಆಳುತ್ತಿದುದು ಹಾಗೂ ಕಾಳಿದಾಸನು ತನ್ನ ಕಾವ್ಯಗಳಲ್ಲಿ ಈ ನಗರದ ಬಗ್ಗೆ ವಿಶೇಷವಾಗಿ ವರ್ಣಿಸಿರುವುದು ತಾಳೆಯಾಗುತ್ತಿದೆ.
ಜೀವನ
        ಕಾಳಿದಾಸನ ಕಾಲದಂತೆ ಜೀವನದ ವಿವರಗಳು ಬೇರೆಲ್ಲಿಯೂ ಒಂದು ಚಿಕ್ಕ ಸಾಲಿನಲ್ಲಿಯೂ ಅಭಿವ್ಯಕ್ತಿಗೊಂಡಿಲ್ಲ. ಕಾಳಿದಾಸನ ಜೀವನ ಕುರಿತಂತೆ ಹುಟ್ಟಿದ ಸ್ಥಳಯಾವುದು? ತಂದೆ-ತಾಯಿಯರು ಯಾರು? ವಿವಾಹವಾಗಿತ್ತೆ? ಆಗಿದ್ದರೆ ಹೆಂಡತಿ-ಮಕ್ಕಳು ಯಾರು? ಈತ ಕೊನೆಗೆ ಏನಾದ? ಇಂಥ ಪ್ರಶ್ನೆಗಳಿಗೆ ಯಾವುದೇ ಉತ್ತರವಿಲ್ಲ. ಇವುಗಳಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರವೆಂಬಂತಿರುವ ಐತಿಹ್ಯವೊಂದು ಹೀಗಿದೆ: " ಕಾಳಿದಾಸ ಒಬ್ಬ ಕುರುಬ ಹುಡುಗನಾಗಿದ್ದನಂತೆ ಅವನಿಗೆ ಶಿಕ್ಷಣದ ಗಂಧವೇ ಇರಲಿಲ್ಲ. ಆ ದೇಶದ ರಾಜ ಕುಮಾರಿಯು ಯಾವ ರಾಜಕುಮಾರನನ್ನೂ ಮದುವೆಗಾಗಿ ಮೆಚ್ಚದ್ದರಿಂದ ಮಂತ್ರಿಯು ಆಕೆಯನ್ನು ಒಂದು ತರದಿಂದ ಶಿಕ್ಷಿಸಬೇಕೆಂದು ಯಾವುದೋ ಕುಯುಕ್ತಿಯಿಂದ ಈ ಕುರುಬ ಯುವಕನೊಡನೆ ಆಕೆಯ ಮದುವೆಯನ್ನು ಗೊತ್ತು ಮಾಡಿದನು. ಆಕೆ ಮದುವೆಯ ತರುವಾಯ ವಸ್ತು ಸ್ಥಿತಿಯನ್ನು ಅರಿತುಕೊಂಡು ಮಂತ್ರಿಯ ವಿರುದ್ಧ ತನ್ನ ಹಟವನ್ನು ತೀರಿಸಿಕೊಳ್ಳಲು ಕಾಲಿ (ದೇವಿ)ಯನ್ನು ಪ್ರಾರ್ಥಿಸಿಕೊಂಡಳು. ಕಾಳಿಯ ವರಪ್ರಸಾದದಿಂದ ಸಾಕ್ಷಾತ್ ಸರಸ್ವತಿಯೇ ಇವನ ನಾಲಗೆಯ ಮೇಲೆ  ನರ್ತಿಸತೊಡಗಿದಳೆಂದು  ಅಂದಿನಿಂದ ಅವನಿಗೆ ಕಾಳಿದಾಸ ಎಂಬ ಹೆಸರು ಬಂದಿತು. ಇದಿಷ್ಟು ವಿಚಾರಗಳ ಜೊತೆಗೆ ಇನ್ನೂ ಕೆಲವು ವಿಚಾರಗಳು ಕಾಳಿದಾಸನ ಜೀವನದ ಮೇಲೆ ಬೆಳಕು ಚಲ್ಲುತ್ತವೆ. ಮುಖ್ಯವಾಗಿ ಕಾಳಿದಾಸನು ಪ್ರಾರಂಭದಲ್ಲಿ ಸೂಚಿಸಿದ ದಂತ ಕಥೆಗೆ ವಿರುದ್ಧವಾಗಿ ಬಾಲ್ಯದಿಂದಲೇ ಹೆಚ್ಚಾಗಿ ಶಿಕ್ಷಣವನ್ನು ಪಡೆದುಕೊಂಡವನಾಗಿದ್ದನು ಎಂಬುದು ಅವನ ಕೃತಿಗಳಲ್ಲಿಯ ಬೇರೆ ವಿವರಗಳಿಂದಲೂ ಸ್ಪಷ್ಟವಾಗಿ ಕಂಡ ಬುರುವುದು. ವೇದ, ಬ್ರಾಹ್ಮಣಗಳು, ಉಪನಿಷತ್ತು, ಭಗವದ್ಗೀತಾ, ರಾಮಾಯಣ - ಮಹಾಭಾರತ, ವ್ಯಾಕರಣ - ಅಲಂಕಾರ - ಛಂದಃಶಾಸ್ತ್ರಗಳು ಮುಂತಾಗಿ ವೈದಿಕ ಸಂಪ್ರದಾಯದ ಪೂರ್ತಿ ಶಿಕ್ಷಣವನ್ನು ಕಾಳಿದಾಸನು ಪಡೆದುಕೊಂಡಿದ್ದನು. ಕೃತಿಗಳಿಂದ ತಿಳಿದು ಬರುವ ಇಂಥ ವಿಚಾರಗಳನ್ನು ಹೊರತುಪಡಿಸಿದರೆ ಉಳಿದಂತೆ ಯಾವುದೇ ಮಾಹಿತಿ ಇಲ್ಲ. ವಿಶ್ವ ಸಾಹಿತ್ಯದಲ್ಲೇ ಮೇರು ಕವಿಯೆನಿಸಿದ ಒಬ್ಬ ಕವಿಯ ವೈಯುಕ್ತಿಕ ಜೀವನದ ವಿವರಗಳು ಇಷ್ಟರ ಮಟ್ಟಿಗೆ ಗೈರು ಹಾಜರಾಗಿರುವುದು ಅನೇಕ ಅನುಮಾನಗಳನ್ನು ಹುಟ್ಟಹಾಕುತ್ತದೆ. ಈ ಬಗ್ಗೆ ಗಂಭೀರವಾಗಿ ಆಲೋಚಿಸಿದರೆ ಹೀಗಾದುದರ ಹಿಂದಿನ ಗುಟ್ಟಾದರೂ ತಿಳಿದೀತು.
ವ್ಯಕ್ತಿತ್ವ
        ಕಾಳಿದಾಸನ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೂಡ ಆತನ ಸಾಹಿತ್ಯ ಸೃಷ್ಠಿಯ ಒಳಗೇ ಆಯ್ದುಕೊಳ್ಳಬೇಕಿದೆ. ಈ ದಿಕ್ಕಿನ ಪ್ರಯತ್ನಗಳನ್ನು ಕೆಲವಾರು ವಿದ್ವಾಂಸರು ಮಾಡಿದ್ದು ಅದರಿಂದ ಹೊರಬಿದ್ದ ಫಲಿತಗಳನ್ನು ಮುಂದಿನಂತೆ ನೋಡಬಹುದು. ಕಾಳಿದಾಸನ ಕುರಿತು ಸಮಗ್ರ ಗ್ರಂಥವೊಂದನ್ನು ಬರೆದ ಶ್ರೀರಂಗ (ಆದ್ಯ ರಂಗಾಚಾರ್ಯ) ಕಾಳಿದಾಸನ ವ್ಯಕ್ತಿತ್ವದ ಬಗ್ಗೆ ಹೀಗೆ ಬರೆಯುತ್ತಾರೆ: ಒಂದೆಡೆ ನಿರುಪದ್ರವಿ ಕಿಡಿಗೇಡಿತನದ ಕುತೂಹಲ, ಇನ್ನೊಂದೆಡೆ ಉದಾತ್ತ ಆದರ್ಶ; ಒಂದೆಡೆ ವೇದಾಂಗ-ವೇದ-ಶಾಸ್ತ್ರ-ಪುರಾಣಗಳ ಪಾಂಡಿತ್ಯ, ಇನ್ನೊಂದೆಡೆ ವಿಶಾಲ ವಿಫುಲ ವಿವಿಧ ಲೋಕಾನುಭವ; ಒಂದೆಡೆ ಸೊಗಸುಗಾರ, ಇನ್ನೊಂದೆಡೆ ಸಹೃದಯ; ಸ್ವಂತಕ್ಕೆ 'ಮಂದಃ ಕವಿಯಶಃ ಪ್ರಾರ್ಥಿ', ಲೋಕಕ್ಕೆ ಕವಿ-ಕುಲಗುರು ಶ್ರೀರಂಗರ ಈ ಮಾತನ್ನು ಗಮನಿಸಿದರೆ ಕಾಳಿದಾಸನ ವ್ಯಕ್ತಿತ್ವ ವಿವಿಧ ಮಜಲುಗಳನ್ನು ಹೊಂದಿದೆ ಎಂಬುದು ತಿಳಿಯುತ್ತದೆ. ಅಂಥ ಮಜಲುಗಳನ್ನು ಗುರುತಿಸುವುದಾದರೆ: ಕಾಳಿದಾಸ ಸಂಪ್ರದಾಯ ನಿಷ್ಠ; ವರ್ಣಾಶ್ರಮ ಧರ್ಮದ ಅಭಿಮಾನಿ; ಕ್ರಾಂತಿಕಾರಿ, ವಿನಯಿ, ವಿನೋದ ಪ್ರಿಯ, ಈ ಮುಖಗಳನ್ನು ಕೆಲವೊಂದು ಉದಾಹರಣೆಗಳ ಮೂಲಕ ಸ್ಪಷ್ಟಗೊಳಿಸಿಕೊಳ್ಳಬಹುದು.
1. ಸಂಪ್ರದಾಯ ನಿಷ್ಠ
ಕಾಳಿದಾಸನ ಕಾವ್ಯ-ನಾಟಕಗಳಲ್ಲಿ ಬರುವ ಪಾತ್ರ ಚಿತ್ರಣಗಳನ್ನು ಕಂಡರೆ ಆತನ ಸಂಪ್ರದಾಯ ನಿಷ್ಠತೆ ಅರಿವಾಗುತ್ತದೆ. ಅದರಲ್ಲೂ ವೈದಿಕ ಸಂಪ್ರದಾಯದ ಕಡೆಗೆ ಈತನ ಒಲವು ಜಾಸ್ತಿ. ಕಾಳಿದಾಸನ ರಾಜರು ಹಾಗೂ ಸ್ತ್ರೀಪಾತ್ರಗಳನ್ನು ನೋಡಿದರೆ ಅವರೆಲ್ಲ ಹಿಂದೂ ಧರ್ಮ ಸಂಪ್ರದಾಯದ ಮೂತರ್ಿಗಳಂತೆ ಕಾಣುತ್ತಾರೆ. ಇಲ್ಲಿಯ ರಾಜರು ಧರ್ಮವನ್ನು ಚಾಚೂತಪ್ಪದೆ ಪಾಲಿಸುವವರು. ಸ್ತ್ರೀಯರಂತೂ ಆದರ್ಶಪತ್ನೀ ಧರ್ಮರತರು. ಇನ್ನೂ ಶಾಕುಂತಲೆಯ ನಾಟಕದಲ್ಲಿ ಬರುವ ಸಂದರ್ಭವೊಂದನ್ನು ಇಲ್ಲಿ ಪ್ರಸ್ತುತ ವಿಚಾರಕ್ಕೆ ಪೂರಕವಾಗಿ ಉಲ್ಲೇಖಿಸಬಹುದು. ಅಭಿಜ್ಞಾನ ಶಾಕುಂತಲದ ಮೂರನೇ ಅಂಕದ ಕೊನೆಗೆ ತನ್ನನ್ನು ತಡೆದ ದುಷ್ಯಂತನಿಗೆ ಶಕುಂತಲೆಯು ಬಿಡು ನನ್ನನ್ನು ಎನ್ನುತ್ತಾಳೆ. ಬಿಡುವೆ ನ್ನುವನು ದುಷ್ಯಂತ 'ಯಾವಾಗ?' ಎಂದು ಶಕುಂತಲೆಯು ಕೇಳಲು 'ನಿನ್ನ ಆಧರದ ಸವಿಯನ್ನು ಕಂಡ ಮೇಲೆ ಎನ್ನುತ್ತಾ ದುಷ್ಯಂತನು ಅವಳ ಮುಖವನ್ನೆತ್ತಲು ಹೋಗುವುದು; ಅಷ್ಟರಲ್ಲಿ ಒಳಗಿನಿಂದ ಆರ್ಯಗೌತಮಿಯ ದನಿ ಕೇಳಿ ಬರುವುದು. ಇದಕ್ಕೆ ಮುಖ್ಯ ಕಾರಣವೆಂದರೆ ರಂಗಸ್ಥಲದಲ್ಲಿ ಚುಂಬನವು ನಿಷಿದ್ಧ' ಹಾಗಾಗಿ ಕಾಳಿದಾಸನ ಕಾಲಕ್ಕೆ ತಕ್ಕಂತೆ ಮಾತ್ರವಲ್ಲದೆ ವೈದಿಕ ಸಂಪ್ರದಾಯಕ್ಕೆ ತಕ್ಕಂತೆ ಇದ್ದನು ಎಂದೂ ಅವನ ಕೃತಿ ವಿಮರ್ಶೆಯಿಂದ ಹೇಳಬಹುದಾಗಿದೆ. ಋತು ಸಂಹಾರ ಮತ್ತು ಮೇಘದೂತಗಳಲ್ಲಿ ಅವನು ಸಂಪ್ರದಾಯಗಳಿಗೆ ಬದ್ಧನಾಗಿದ್ದಾನೆ. ಹಾಗೆಯೇ ಅವನು ತನ್ನ ಜೀವನ ಮತ್ತು ವಿಚಾರಗಳಲ್ಲಿ ಕೂಡ ಪೂರ್ತಿಯಾಗಿ ಸಂಪ್ರದಾಯಕ್ಕೆ ಬದ್ಧನಾಗಿದ್ದಾನೆ ಎನ್ನಬಹುದು.
2. ವರ್ಣಾಶ್ರಮ ಧರ್ಮದ ಅಭಿಮಾನಿ
ಭಾರತೀಯ ಸಮಾಜದ ವ್ಯವಸ್ಥೆಯಲ್ಲಿ ಹುಣ್ಣಿನಂತೆ ಕಾನುವ ವಣರ್ಾಶ್ರಮಧರ್ಮದ ಪದ್ಧತಿ ಒಂದು ಹಂತದವರೆಗೆ ಮುಕ್ತ ಹಾಗೂ ಸ್ವತಂತ್ರ ವ್ಯವಸ್ಥೆಯಾಗಿತ್ತು. ಆನಂತರದ ದಿನಗಳಲ್ಲಿ ನಿರ್ಬಂಧಿತ, ಏಣಿಶ್ರೇಣಿ ವ್ಯವಸ್ಥೆಯಾಗಿ ಮಾಪರ್ಾಡಾಯಿತು. ಇದರಿಂದ ಈ ಪದ್ಧತಿಗೆ ಇದ್ದ ಶ್ರಮ ವಿಭಜನೆಯ ಮೂಲತತ್ವಕ್ಕೆ ಧಕ್ಕೆಯಾಯಿತು. ಹಾಗೆಯೇ ಆರಂಭಕ್ಕೆ ಎಲ್ಲರ ಉದ್ಧಾರವನ್ನು ಬಯಸುತ್ತಿದ್ದ ವಣರ್ಾಶ್ರಮ ಧರ್ಮ ಕೆಲವೇ ಕೆಲವರ ಹಿತಾಸಕ್ತಿಯನ್ನು ಕಾಪಾಡುವುದಕ್ಕೆ ಸೀಮಿತವಾಯಿತು. ಹಾಗಾದರೆ ಇಲ್ಲಿ ಕಾಳಿದಾಸ ಅಭಿಮಾನಿಯಾಗಿರುವುದು ಯಾವ ಹಂತದ ವಣರ್ಾಶ್ರಮ ಧರ್ಮಕ್ಕೆ? ಎಂದು ಪ್ರಶ್ನಿಸಿಕೊಂಡರೆ ಇದಕ್ಕೆ ಉತ್ತರ ಖಂಡಿತವಾಗಿ ಆರಂಭದ ಹಂತದ ವ್ಯವಸ್ಥೆಗೆ ಎಂದೆನ್ನಬಹುದು. ಇದಕ್ಕೆ ಪೂರಕವಾಗಿ ಕಾಳಿದಾಸ ತನ್ನ ಕೃತಿಗಳಲ್ಲಿ ಪ್ರತಿಪಾದಿಸಿರುವ ಪ್ರಮುಖ ತತ್ವವೆಂದರೆ ತನಗೆ ಯೋಗ್ಯವಾದ ಕರ್ಮವನ್ನು ಪ್ರತಿಯೊಬ್ಬನು ಮಾಡುವಾಗ ಯಾವನೂ ಶ್ರೇಷ್ಠನಲ್ಲ. ಯಾವನೂ ಕನಿಷ್ಟನಲ್ಲ; ಇಷ್ಟೇ ಅಲ್ಲ, ಯಾವ ಕರ್ಮವೂ ಹೆಚ್ಚಿನದಲ್ಲ ಯಾವುದೂ ಕೀಳು ಅಲ್ಲ. ಈ ತತ್ವ ಪ್ರತಿಪಾದನೆ ಅಭಿಜ್ಞಾನ ಶಾಕುಂತಲ ನಾಟಕ ಆರನೇ ಅಂಕದ ಪ್ರಾರಂಭಿಕ ದೃಶ್ಯವನ್ನು ಗಮನಿಸಬೇಕು. ದೃಶ್ಯದ ಆರಂಭಕ್ಕೆ ನಗರ ರಕ್ಷಕರು ಮೀನುಗಾರನೊಬ್ಬನನ್ನು ಬಂಧಿಸಿದ್ದಾರೆ (ಅವನು ಹಿಡಿದ ಮೀನಿನ ಹೊಟ್ಟೆಯಲ್ಲಿ ಕಳೆದ ಉಂಗುರ ಸಿಕ್ಕಿತ್ತು) ಈ ಉಂಗುರ ನಿನಗೆ ಹೇಗೆ ದೊರಕಿತು ನೀನು ಸದ್ಬ್ರಾಹ್ಮಣ ಎಂದು ರಾಜನು ಇದನ್ನು ನಿನಗೆ ಕೊಟ್ಟನೆ? ಎಂಬುದಾಗಿ ರಕ್ಷಕರಲ್ಲಿ ಒಬ್ಬ ಕೇಳುತ್ತಾನೆ. ಆಗ 'ನಾನು ಮೀನುಗಾರ ಜಾತಿಯವ' ಎನ್ನುತ್ತಾನೆ ಮೀನುಗಾರ. ಆಗ ಇನ್ನೊಬ್ಬ ನಗರ ರಕ್ಷಕ ತಿರಸ್ಕಾರದಿಂದ ಅಹಹ! ಎಂದು ಪರಿಶುದ್ಧವಾದ ವ್ಯವಸಾಯ' ಎನ್ನುತ್ತಾನೆ. ಇದಕ್ಕೆ ಮೀನುಗಾರ ಹೀಗೆ ಉತ್ತರಿಸುತ್ತಾನೆ. 'ಹೇಸಿ ಕೆಲಸ ಎಂಬ ಕಾರಣಕ್ಕಾಗಿ ಯಾವನೂ ತನಗೆ ಸಹಜವಾದ ಕೆಲಸವನ್ನು ಬಿಟ್ಟುಕೊಡಬಾರದು ಪಶುವದೆಯು ಹೇಸಿ ಕೆಲಸವೆ ಅಲ್ಲವೆ? ಆದರೂ ಯಜ್ಞಕ್ಕಾಗಿ ಅದನ್ನು ಕೊಲ್ಲುವ ಬ್ರಾಹ್ಮಣನು ಕರುಣೆಯ ಹೃದಯವುಳ್ಳವನಾಗಿದ್ದಾನೆ ಹೀಗಾಗಿಯೇ ಕರ್ಮದ ಬಾಹ್ಯ ಸ್ವರೂಪಕ್ಕಾಗಿ ಯಾರನ್ನು ಹೊಗಳಬೇಕಿಲ್ಲ, ತೆಗಳಬೇಕಿಲ್ಲ ಎಂಬುದು ಕಾಳಿದಾಸನ ಸ್ಪಷ್ಟ ಅಭಿಪ್ರಾಯ.
3. ವಿನಯವಂತ
ಇಡೀ ಪ್ರಪಂಚದ ಸಾಹಿತ್ಯ ಲೋಕದ ದೃವತಾರೆಯಾಗಿರುವ ಕಾಳಿದಾಸ ಎಲ್ಲಾ ವಿಷಯದಲ್ಲಿ ಸಮರ್ಥ. ಪಾಂಡಿತ್ಯದಲ್ಲಂತೂ ಅಪ್ರತಿಮ. ಆದರೆ ಈತನ ಬರವಣಿಗೆಗಳಲ್ಲಿ ಪಾಂಡಿತ್ ಅಹಂಕಾರವಾಗಿ ಕಾಣದೆ ವಿನಯ ಮತ್ತು ಆತ್ಮ ವಿಶ್ವಾಸವಾಗಿ ಕಾಣುತ್ತದೆ. ಉದಾಹರಣೆಗೆ: 'ರಘುವಂಶ'ದ ಪ್ರಾಸ್ತಾವಿಕ ಶ್ಲೋಕಗಳಿಂದ ವ್ಯಕ್ತವಾಗುವ ಅರ್ಥದ ಸಾಲುಗಳನ್ನು ಗಮನಿಸಿ ಸೂರ್ಯನಿಂದ ಹುಟ್ಟಿದ ವಂಶವೆಲ್ಲಿ? ಅಲ್ಪಜ್ಞನಾದ ನನ್ನ ಬುದ್ಧಿ ಎಲ್ಲಿ? ವಿಶಾಲವಾದ ಸಾಗರವನ್ನು ದೋಣಿಯಲ್ಲಿ ಕುಳಿತು ದಾಟಬಯಸುವ ಹೆಡ್ಡ ನಾನು! ಕವಿ ಯಶಸ್ಸಿನ ನನ್ನ ಈ ಹುಚ್ಚು ಆಸೆಗಾಗಿ ನಾನು ಜನರಿಗೆ ಅಪಹಾಸ್ಯನಾಗುವೆ. ಗಿಡದ ಎತ್ತರದಲ್ಲಿದ್ದ ಹಣ್ಣನ್ನು ಬಯಸಿ ಜೊಲ್ಲು ಸುರಿಸುತ್ತ ನೆಗೆ ನೆಗೆ ಅದನ್ನು ಕಿತ್ತುಕೊಳ್ಳಬಯಸಿದ ಕುಳ್ಳನನ್ನು ಕಂಡರೆ ಯಾರು ನಗರು? ಕವಿತ್ವಶಕ್ತಿ, ವಿದ್ಯೆ ಇವು ಎಷ್ಟು ಅಪಾರವಾಗಿವೆ ಎಂಬುದನ್ನು ಅನುಭವದಿಂದ ಕಂಡುಕೊಂಡ ಮೇದಾವಿಯ ವಿನಯವಿದೆ.
4. ವಿನೋದಪ್ರಿಯ
ಕಾಳಿದಾಸ ತನ್ನ ನಾಟಕಗಳಲ್ಲಿ ವಿದೂಷನ ಪಾತ್ರದ ಮೂಲಕ ವಿನೋದ ಪ್ರಿಯತೆಯನ್ನು ಎಂದು ನಾವ್ಯಾರ್ಯಾದರೂ ಸಾಮಾನ್ಯವಾಗಿ ಊಹಿಸುವುದಾದರೆ ಅದು ತಪ್ಪಾಗುತ್ತದೆ. ಹಾಗೆ ನೋಡಿದರೆ ಎಲ್ಲಾ ನಾಟಕಕಾರರೂ ಸಾಮಾನ್ಯವಾಗಿ ಚಿತ್ರಿಸುವಂತೆ ವಿದೂಷಕ ಇಲ್ಲಿ ಹಾಸ್ಯ ಪಾತ್ರವಲ್ಲ ಗಂಭೀರ ಚಿಂತನೆ ಮಾಡಬಲ್ಲ. ವ್ಯಕ್ತಿ ಜೊತೆಗೆ ಸ್ವಲ್ಪ ಹಾಸ್ಯವೂ ಇದೆ. ಉದಾ: ಮಾಲವಿಕಾಗ್ನಿಮಿತ್ರದ ನಾಲ್ಕನೇ ಅಂಕದಲ್ಲಿ ಅರಮನೆಯ ಅಂತಃಪುರಕ್ಕೆ ಕಪಿ ದಾಳಿಯಿಡುತ್ತದೆ. ದಾಳಿಯಲ್ಲಿ ರಾಜ ಹಾಗೂ ವಿದೂಷಕ ಇಬ್ಬರೂ ಪಾರಾಗುತ್ತಾರೆ ಆಗ ವಿದೂಷಕ 'ಭಲೆ! ಕಪಯೇ! ನಿನ್ನ ಬಾಂಧವನನ್ನು ಒಳ್ಳೆ ಸಂಕಟದಿಂದ ಉಳಿಸಿದೆ. ಹಾಗೆಯೇ ಅಭಿಜ್ಞಾನ ಶಾಕುಂತಲದ ಮೊದಲ ಅಂಕದಲ್ಲಿ ಭ್ರಮರವು ಶಕುಂತಲೆಯ ಕಪೋಲವನ್ನು ಮುಟ್ಟಿದಾಗ 'ಎಲ! ಕಳ್ಳ! ನೀನೇ ಧನ್ಯ ಇಲ್ಲಿ ನೋಡು, ಇದು ಸರಿಯಾದೀತೆ ಇಲ್ಲವೆ ಎಂದು ತತ್ವಶೋಧನೆಯಲ್ಲಿ ಬರೀ ನಮ್ಮ ತುಟಿಯನ್ನು ಸದರಿಕೊಳ್ಳುತ್ತಿದ್ದೇವೆ ಎಂಬ ದುಷ್ಯಂತನ ಮಾತು ಓದುಗರನ್ನು / ನೋಡುಗರನ್ನು ನಗಸದೇ ಇರದು. ಹಾಗಾಗಿ ಇಂಥ ಪ್ರಸಂಗಗಳ ಮೂಲಕ ಕಾಳಿದಾಸನನ್ನು ಉತ್ತಮ ಹಾಸ್ಯ ಪ್ರಜ್ಞೆ ಇರುವ ಕವಿಯೆಂದು ನಿಸಂಶಯವಾಗಿ ಹೇಳಬಹುದು.
ಕ್ರಾಂತಿಕಾರಿ
ಕಾಳಿದಾಸ ತನ್ನ ಸಾಹಿತ್ಯದಲ್ಲಿ ಅನಾವರಣಗೊಂಡಿರುವ ಬಗೆಗಳಲ್ಲಿ ಒಂದು ಬಗೆ ಕ್ರಾಂತಿಕಾರಿ ಸ್ವರೂಪದ್ದು. ಈ ಕ್ರಾಂತಿಕಾರಿ ತನ ಸಮಯ ಸಂದರ್ಭಕ್ಕನುಗುಣವಾಗಿ ಸೌಮ್ಯವೂ, ಕಾರ್ಯವು ಆಗಿ ರೂಪು ಪಡೆದಿರುವುದನ್ನು ಗಮನಿಸಬಹುದು. ಉದಾ: ವಿಕ್ರಮೋರ್ವಶಿಯ ನಾಟಕದಲ್ಲಿ ರಾಜನು ಊರ್ವಶಿಯನ್ನು (ಮಗನನ್ನು ಪಡೆದುಕೊಂಡ ನಂತರ) ಕಳೆದುಕೊಂಡನು ಈ ಪ್ರಸಂಗದಲ್ಲಿ ವಿಕ್ರಮನ ಕಾಮುಖತನದ ಬಗ್ಗೆ ತೀವ್ರವಾದ ವಿರೋಧ ಹೊಂದಿರುವ ಕವಿ ಕಾಳಿದಾಸ ಆ ವಿರೋಧವನ್ನು ನಾರದರ ಪಾತ್ರವನ್ನೂ ಸೃಷ್ಟಿಸಿ ಆ ಪಾತ್ರದ ಮೂಲಕ ಹೇಳಿಸುತ್ತಾನೆ. ಹಾಗೆಯೇ ಎರಡನೇ ಚಂದ್ರಗುಪ್ತ ತನ್ನ ಸೋದರನನ್ನು ಕೊಂದುದು, ಅವನ ಹೆಂಡತಿಯನ್ನು ಅಪಹರಿಸಿದ್ದನ್ನು 'ಇದು ಕ್ಷತ್ರಿಯನ, ರಾಜನ ಧರ್ಮವಲ್ಲ' ಎಂದು ನೇರವಾಗಿ ಸ್ಪಷ್ಟವಾಗಿ ಸಾರಿದ್ದಾನೆ. ಇಂಥ ಅನೇಕ ಪ್ರಸಂಗಗಳನ್ನು ಕಂಡಾಗ ಕಾಳಿದಾಸನ ಕ್ರಾಂತಿಕಾರಿತನ ಎದ್ದು ಕಾಣುತ್ತದೆ.
ಕೃತಿಗಳು
ಕಾಳಿದಾಸನು ರಚಿಸಿರುವ ಕೃತಿಗಳ ಸಂಖ್ಯೆ: 07. ಇವುಗಳಲ್ಲಿ ಋತು ಸಂಹಾರ ಮತ್ತು ಮೇಘ ಸಂದೇಶ ಎಂಬ ಎರಡು ಖಂಡಕಾವ್ಯಗಳು; ಕುಮಾರ ಸಂಭವ ಮತ್ತು ರಘುವಂಶ ಎನ್ನುವ ಎರಡು ಮಹಾಕಾವ್ಯಗಳು; ಮಾಲವಿಕಾಗ್ನಿಮಿತ್ರ, ವಿಕ್ರಮೋವಶರ್ಿಯಾ ಹಾಗೂ ಅಭಿಜ್ಞಾನ ಶಾಕುಂತಲ ಎಂಬ ಮೂರು ನಾಟಕಗಳು. ಸಾಹಿತ್ಯ ಕ್ಷೇತ್ರದಲ್ಲಿ ಕಂಡು ಬರುವ ಒಂದು ಸಾಮಾನ್ಯ ಸಂಗತಿ ಎಂದರೆ ಯಾವುದಾದರೂ ಒಂದೋ ಎರಡೋ ಪ್ರಕಾರಗಳ ಸಾಹಿತ್ಯ ಮಾತ್ರ ಶ್ರೇಷ್ಠವಾಗಿರುತ್ತದೆ. ಆದರೆ ಕಾಳಿದಾಸ ಬರೆದಿರೋ ಎಲ್ಲಾ ಪ್ರಕಾರಗಳಲ್ಲಿ ಸಮರ್ಥವಾಗಿ ಬರೆದಿದ್ದಾರೆ. ಈತನ ಸಾಹಿತ್ಯದ ಬಗ್ಗೆ ಹೇಳಬಹುದಾದ ಮೆಚ್ಚುಗೆಯ ಮಾತುಗಳು ಹೀಗಿವೆ: ಕಾಳಿದಾಸನ ಕೃತಿಗಳು ಸರ್ವತೋ ಪೂರ್ಣವಾಗಿದೆ, ಸರ್ವಾಂತ ಸುಂದರವಾಗಿವೆ. ಇದು ಹೆಚ್ಚು ಇದು ಕಡಿಮೆ ಎನ್ನುವಂತಿಲ್ಲ. ಸಾಹಿತ್ಯಕ್ಕೆ ಬೇಕಾದುದೆಲ್ಲಕ್ಕೂ ಇವನಲ್ಲಿ ಉದಾಹರಣೆಗಳಿವೆ. ಯಾವುದು ಅತಿಯಾಗಿಲ್ಲ. ವಸ್ತು ವಿನ್ಯಾಸ, ಪಾತ್ರ ಸೃಷ್ಠಿ, ತಕ್ಕಷ್ಟು ಮಾತು, ತಕ್ಕ ಶಬ್ದ ಜಾಲ ಎಲ್ಲದರಲ್ಲೂ ಪರಸ್ಪರ ಔಚಿತ್ಯ ತಾನೆ ತಾನಾಗಿದೆ. ಇಂಥ ಅದ್ಭುತ ಪ್ರತಿಭಾಪೂರ್ಣವಾದ್ದರಿಂದಲೇ ಕಾಳಿದಾಸ ಭಾರತದ ಪ್ರಾಚೀನ ಹಾಗೂ ಆಧುನಿಕ ವಿಮರ್ಶಕರಿಂದ ಮಾತ್ರವಲ್ಲದೆ ವಿಶ್ವದ ಪಂಡಿತರಿಂದಲೂ ಮೆಚ್ಚುಗೆಯನ್ನು ಪಡೆದಿದ್ದಾನೆ. ಇಂಥ ಮಹತ್ವದ ಕಾಳಿದಾಸನ ಕೃತಿಗಳನ್ನು ಈ ಮುಂದಿನಂತೆ ಸ್ಥೂಲವಾಗಿ ಪರಿಚಯಿಸಿಕೊಳ್ಳಬಹುದು.
1. ಋತು ಸಂಹಾರ
ಹೆಸರೇ ಸೂಚಿಸುವಂತೆ ಈ ಕಾವ್ಯ ಋತುಗಳ ವರ್ಣನೆಯ ಖಂಡಕಾವ್ಯ. ಇದರಲ್ಲಿ ಯಾವುದೇ ಕಥೆಯಿಲ್ಲ. ಇದು ಕಾಳಿದಾಸನು ಬರೆದ ಕಾವ್ಯಗಳಲ್ಲಿ ಮೊದಲನೆಯದು. ಪ್ರತೀ ಋತುವಿಗೆ ಒಂದು ಅಧ್ಯಾಯದಂತೆ ಆರು ಋತುಗಳನ್ನು ಆರು ಅಧ್ಯಾಯಗಳಲ್ಲಿ ವಣರ್ಿಸಲಾಗಿದೆ. ಒಟ್ಟು 144 ಶ್ಲೋಕಗಳಿದ್ದು ಇಡೀ ಕಾವ್ಯದ ತುಂಬ ಪ್ರಿಯ-ಪ್ರೇಯಸಿಯರ ದೃಷ್ಟಿಯಿದೆ. ಪ್ರಿಯ-ಪ್ರೇಯಸಿಗೆ ಹೇಳಿದ ರೀತಿಯಲ್ಲಿ ಕಾವ್ಯ ರಚನೆಯಾಗಿರುವುದು ವಿಶೇಷ. ಈಗಾಗಲೇ ಹೇಳಿದಂತೆ ಕಾಳಿದಾಸನ ಮೊದಲ ಕಾವ್ಯವಿದಾದರೂ ಇದರೊಳಗೆ ನಿರೀಕ್ಷಣಾ ಸಾಮಥ್ರ್ಯ, ಯಾವುದೇ ವಸ್ತುವಿನ ಅಂತಸತ್ವವನ್ನು ಗುರುತಿಸಿ ಸ್ವಲ್ಪದರಲ್ಲೇ ಅದನ್ನು ಸೂಚಿಸುವ ನೈಪುಣ್ಯತೆ, ಪ್ರಕೃತಿ-ಪ್ರಾಣಿ ಸ್ವಭಾವದ ನಿಕಟ ಪರಿಚಯ ಇಂಥ ಲಕ್ಷಣಗಳು ಸ್ಪಷ್ಟವಾಗಿವೆ. ವರ್ಣನಾ ಪದ್ಯಗಳಂತೂ ಓದುಗರ ಗಮನ ಸೆಳೆಯುತ್ತವೆ.
2. ಮೇಘದೂತ
ಹೆಂಡತಿಯನ್ನು ಕಳೆದುಕೊಂಡು ವಿರಹಿಯಾದ ಯಕ್ಷನೊಬ್ಬನ ಮನಸ್ಥಿತಿಯನ್ನು ಚಿತ್ರಿಸಿರುವ ಮತ್ತೊಂದು ಖಂಡಕಾವ್ಯವಿದೆ. ಇದರಲ್ಲಿ ಪೂರ್ವ-ಮೇಘ ಮತ್ತು ಉತ್ತರ-ಮೇಘವೆಂದೂ ಎರಡು ಭಾಗಗಳಿವೆ. ಈ ಕಾವ್ಯದಲ್ಲಿ 115 ಶ್ಲೋಕಗಳಿವೆ. ತಾನು ಮಾಡಿದ ಒಂದು ತಪ್ಪಿಗಾಗಿ 'ನೀನು ನಿನ್ನ ಹೆಂಡತಿಯಿಂದ ಒಂದು ವರ್ಷದವರೆಗೆ ದೂರದಲ್ಲಿರು' ಎಂದು ಕುಬೇರನ ಶಾಪಕ್ಕೆ ಗುರಿಯಾದ ಯಕ್ಷನೊಬ್ಬನು ವಿಂದ್ಯಾಪರ್ವತದ ರಾಮಗಿರಿಯ ಆಶ್ರಮ ಪ್ರದೇಶದಲ್ಲಿ ವಿರಹ ದುಖಿಃಯಾಗಿ ಕಾಲ ಕಳೆಯುತ್ತಿದ್ದ. ಎಂಟು ತಿಂಗಳು ಕಳೆದು ಮಳೆಗಾಲ ಮೊದಲಾಯಿತು. ಆಗ ಉತ್ತರ ದಿಕ್ಕಿಗೆ ಓಡುತ್ತಿದ್ದ ಮೋಡವೊಂದನ್ನು ಯಕ್ಷನು ಸ್ವಾಗತಿಸಿ ತನ್ನ ಕ್ರಿಯೆಗೆ ಸಂದೇಶ ತಲುಪಿಸಬೇಕೆಂದು ಬೇಡುತ್ತೇನೆ. ತನ್ನ ಊರಾದ ಅಲಕಾವತಿಯ ಪ್ರಯಾಣದ ಹಾದಿ ಹಾಗೂ ಗುರುತುಗಳ ವರ್ಣನೆ ಮತ್ತು ಅಲಕಾವತಿಯ ತನ್ನ ಮನೆಯ ಗುರುತು ಪ್ರಿಯೆ ಇರಬಹುದಾದ ಸ್ಥಿತಿಯ ವರ್ಣನೆ; ತಲುಪಿಸಬೇಕಾದ ಸಂದೇಶಗಳನ್ನು ಮೋಡಕ್ಕೆ ವಿವರಿಸುತ್ತಾನೆ. ಪ್ರಸ್ತುತ ಕಾವ್ಯದ ಬಗ್ಗೆ ವಿದ್ವಾಂಸರ ಪ್ರಶಂಸೆ ಹೀಗಿದೆ: ಈ ಕಾವ್ಯದ ಪ್ರತಿಯೊಂದು ಶ್ಲೋಕವು ರತ್ನಪ್ರಾಯವಾಗಿದೆ. ಇಡೀ ಗೀತಾ ಒಂದು ಭವ್ಯ ರತ್ನಮಾಲಿಕೆಯಂತಿದೆ. ಇಲ್ಲಿ ಬಳಕೆಯಾಗಿರುವ ವಾಗರ್ಥಗಳು ಛಂದಸ್ಸು ಕಾಳಿದಾಸನ ಅದ್ಭುತ ಕಲಾ ಪ್ರೌಢಿಮೆಗೆ ನಿದರ್ಶನವಾಗಿದೆ. ಆದುದರಿಂದಲೇ ಪ್ರಪಂಚದಲ್ಲಿಯೇ ಈ ಲಘು ಕಾವ್ಯ ವಿಸ್ಮಯಕಾರಕ ಪ್ರಣಯಗೀತೆಯೆಂದು ಪ್ರಸಿದ್ಧಿ ಪಡೆದಿದೆ.
3. ಕುಮಾರ ಸಂಭವ
ಕಾಳಿದಾಸನಿಗೆ ಸಂಸ್ಕೃತ ಮಹಾಕವಿ ಪರಂಪರೆಯಲ್ಲಿ ಸ್ಥಾನ ಗಳಿಸಿಕೊಟ್ಟ ಮಹಾಕಾವ್ಯ ಇದು. ಈ ಕಾವ್ಯದಲ್ಲಿ 17 ಅಧ್ಯಾಯಗಳಿದ್ದು ಇವುಗಳಲ್ಲಿ 8 ಅಧ್ಯಾಯಗಳನ್ನು ಮಾತ್ರ ಕಾಳಿದಾಸ ಬರೆದಿದ್ದು, ನಂತರದ ಅಧ್ಯಾಯಗಳನ್ನು ಯಾರೋ ಅಜ್ಞಾತ ಕವಿ ಬರೆದು ಸೇರಿಸಿರಬಹುದೆಂದು ಊಹಿಸಲಾಗಿದೆ. ಪ್ರಸ್ತುತ ಕಾವ್ಯದ ಕಥೆ ತಾರಕಾಸುರನ ವಧೆ, ಇದಕ್ಕಾಗಿ ಕಾತರ್ಿಕೇಯ ಜನಿಸಿದುದಕ್ಕೆ ಸಂಬಂಧಿಸಿದೆ. ಪಾರ್ವತೀ-ಪರಮೇಶ್ವರರ ಈ ಕಥೆ ರಾಮಾಯಣ, ಶಿವ, ಸ್ಕಂದ ಪುರಾರಣಗಳಲ್ಲಿ ಬಂದಿದೆ. ಇವುಗಳಲ್ಲಿ ಕಾಳಿದಾಸ ಯಾವುದರಿಂದ ಆಯ್ದುಕೊಂಡ ಎಂಬುದರ ಬಗ್ಗೆ ಸ್ಪಷ್ಟವಿಲ್ಲ. ವಿಶೇಷವೆಂದರೆ ಮೂಲ ವಸ್ತುವಿಗೇ ಜೊತು ಬೀಳದೆ ತನ್ನ ವಿಶಿಷ್ಟ ಪ್ರತಿಭೆಯ ಸ್ಪರ್ಷದಿಂದ ತನ್ನದೇ ಆದ ವೈಶಿಷ್ಯಪೂರ್ಣವಾದ ಮಹಾಕಾವ್ಯವನ್ನು ನೆಯ್ದಿದ್ದಾನೆ. ವಟು ವೇಷದ ಶಿವನಿಗೂ ಪಾರ್ವತಿಗೂ ನಡೆಯುವ ಸಂವಾದ, ಮನ್ಮಥನ ಪ್ರತಾಪ, ರತಿ ವಿಲಾಪ, ಶಿವ ಪಾರ್ವತೀ ವಿಲಾಸ ಇತ್ಯಾದಿ ವರ್ಣನೆಗಳು ಕಾಳಿದಾಸನ ಕವಿ ಪ್ರತಿಭೆಯ ಶ್ರೇಷ್ಟತೆಗೆ ಸಾಕ್ಷಿಯಾಗಿವೆ. ಈ ಕಾವ್ಯದಲ್ಲಿ ಕಾಶ್ಮೀರದ ಭೂ ಪ್ರದೇಶದ ವರ್ಣನೆ ಎಷ್ಟೊಂದು ಚೇತೋಹಾರಿಯಾಗಿದೆ, ಅಂದರೆ ಇದನ್ನೂ ಓದಿದ ಅನೇಕರು ಕಾಶ್ಮೀರವೇ ಕಾಳಿದಾಸನ ಜನ್ಮದೇಶವಿರಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ತಾರಕಾಸುರನೆಂಬ ರಾಕ್ಷಸ ಬ್ರಹ್ಮನ ವರಗಳಿಂದ ಕೊಬ್ಬಿ ಇಂದ್ರಾದಿ ದೇವತೆಗಳಿಗೆ ಹಿಂಸೆ ಕೊಡುತ್ತಿದ್ದ, ದೇವತೆಗಳ ಶಕ್ತಿಯೆಲ್ಲ ತಾರಕಾಸುರನ ಮುಂದೆ ಉಡುಗಿದ್ದವು. ಆಗ ದೇವತೆಗಳೆಲ್ಲ ಬೃಹಸ್ಮತಿಯ ನೇತೃತ್ವದಲ್ಲಿ ಬ್ರಹ್ಮನ ಬಳಿಗೆ ಬಂದು ಗೋಳಿಡುತ್ತಾರೆ. ಆಗ ಬ್ರಹ್ಮನು ಶಿವ ಪಾರ್ವತಿಯರಿಗೆ ವಿವಾಹವಾದರೆ ಅವನ ಮಗನಿಂದ ತಾರಕಾಸುರನ ವಧೆಯಾಗುವುದೆಂದು ದೇವತೆಗಳನ್ನು ಸಂತೈಯಿಸಿ ಕಳುಹಿಸುವನು. ಶಿವ - ಪಾರ್ವತಿಯರಿಗೆ ವಿವಾಹ ಮಾಡಿಸಲು ಮನ್ಮಥನೇ ಯೋಗ್ಯವೆಂದು ಇಂದ್ರ ಅವನಿಗೆ ಮರ್ಯಾದೆಮಾಡಿ ಈ ಕಾರ್ಯವನ್ನು ವಹಿಸಿಕೊಡುತ್ತಾರೆ. ಆದರೆ ಮನ್ಮಥನ ಕಾರ್ಯ ಸಫಲವಾಗುವುದಿಲ್ಲ. ಸ್ವತಃ ಆತನೇ ಶಿವನ ಮೂರನೇ ಕಣ್ಣಿಗೆ ಸಿಕ್ಕು ಉರಿದು ಹೋಗುತ್ತಾನೆ. ಕೊನೆಗೆ ಪಾರ್ವತಿ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಳ್ಳುತ್ತಾಳೆ. ಆನಂತರ ಶಿವ - ಪಾರ್ವತಿಯರ ವಿವಾಹ ಹಾಗೂ ಶೃಂಗಾರದ ವಿವರಗಳು ಇಲ್ಲಿಗೆ ಮುಕ್ತಾಯ. 'ಭಾರತಿಯ ಸಂಸ್ಕೃತಿಯ ತಿರುಳಾದ ಪುರುಷಾರ್ಥಗಳ ಉಜ್ವಲ ಸಮನ್ವಯ ದೃಷ್ಟಿ, ಸಂವಾದಗಳಲ್ಲಿ ತಿಳಿಹಾಸ್ಯ, ತಪ್ಪದೆ ನಾಟಕೀಯತೆ ಮೊದಲಾದ ಉತ್ತಮ ಸಾಹಿತ್ಯಿಕ ಸಾಂಸ್ಕೃತಿಕ ಗುಣಗಳನ್ನು ಹೊಂದಿರುವ ಕುಮಾರ ಸಂಭವ ಕಾಳಿದಾಸನ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದೆ.
4. ರಘುವಂಶ
ಭಾರತೀಯ ಚರಿತ್ರೆಯಲ್ಲಿ - ಪುರಾಣಲೋಕದಲ್ಲಿ ವಿರಾಜಮಾನವಾಗಿರುವ ರಘುವಂಶದ ಚರಿತ್ರೆಯನ್ನು ವಿವರಿಸುವ ಮಹಾ ಕಾವ್ಯವಿದು. 19 ಅಧ್ಯಾಯಗಳ ಈ ಕಾವ್ಯದಲ್ಲಿ ದಿಲೀಪ ರಾಜನಿಂದ ಆರಂಭವಾಗಿ ಇವನ ಮಗ ರಘು; ರಘುವಿನ ಮಗ ಅಜ' ಅಜನ ಮಗ ದಶರಥ; ದಶರಥನ ಮಗ ರಾಮ; ರಾಮನ ಮಗ ಕುಶ ಇವರ ಚರಿತ್ರೆಯನ್ನು ದೀರ್ಘವಾಗಿ ವಿವರಿಸಲಾಗಿದೆ. ಕುಶನಿಂದ ಮುಂದಿನ ವಂಶಾವಳಿಯನ್ನು ಸಂಕ್ಷಿಪ್ತವಾಗಿ ಸೂಚಿಸಿ ಅಗ್ನಿವರ್ಣನ ಕತೆಯೊಂದಿಗೆ ಕಾವ್ಯ ಮುಕ್ತಾಯವಾಗುತ್ತದೆ. 11ನೇ ಅಧ್ಯಾಯದಿಂದ 5 ಅಧ್ಯಾಯಗಳು ವಾಲ್ಮೀಕಿ ರಾಮಾಯಣದ ಸಂಗ್ರಹ. ಇಲ್ಲಿ ಕಾಳಿದಾಸ ಆರಿಸಿಕೊಂಡಿರುವ ಅರಸರೆಲ್ಲರೂ ಅರಸೆಲ್ಲರೂ ಆದರ್ಶಗಳೆನಿಸಿರುವವರೆ. ಇಲ್ಲಿ ಬರುವ ದಿಲೀಪ ಆದರ್ಶರಾಜ, ಗುರುಭಕ್ತ ಶಾಸ್ತ್ರವಿಧಿಗಳನ್ನು ಆಚರಿಸುವುದರಲ್ಲಿ ಬಹಳ ಆಸಕ್ತಿಯುಳ್ಳವ ಗುರುವಿನ ಆಜ್ಞೆಗೆ ಅಡ್ಡಿ ಬರುವುದಾದರೆ ತನ್ನ ಜೀವನವನ್ನೇ ಅಪರ್ಿಸುವಷ್ಟು ದಾಢ್ರ್ಯವುಳ್ಳವ; ರಘು ಅಪ್ರತಿಮ ವೀರ, ಬೇಡಿದ್ದರ ಬಯಕೆಗಿಂತ ಹೆಚ್ಚಾಗಿಯೇ ಕೊಡುವವನೆಂದು ಬಿರುದು ಹೊತ್ತ ಮಹಾಪುರುಷ. ಅಜ, ಸತಿ ಇಲ್ಲದಿದ್ದರೆ ಪತಿ ನಿಜರ್ೀವ ಎಂದು ನಂಬಿದ ಆದರ್ಶ ಪ್ರೇಮಿ ದಶರಥ ಅಪಾರ ಪುತ್ರ ಪ್ರೇಮಿ, ರಾಮ ಅನಂತಗುಣನಿಧಿ, ಧರ್ಮ ಪರಿಪಾಲಕನಾಗಿ ಎಲ್ಲವನ್ನೂ ತ್ಯಜಿಸಬಲ್ಲವ. ಏಕ ಪತ್ನಿ ವ್ರತಸ್ಥ, ಇಂಥ ಅನೇಕ ಆದರ್ಶಗಳನ್ನು ಬಿಂಬಿಸುವ ಕಾವ್ಯ ಈ ರಘುವಂಶ.
5. ಮಾಲವಿಕಾಗ್ನಿಮಿತ್ರ
ಕಾಳಿದಾಸ ರಚಿಸಿರುವ ಮೂರು ನಾಟಕಗಳಲ್ಲಿ ಒಂದು ಈ ಮಾಲವಿಕಾಗ್ನಿ ಮಿತ್ರ. ಇದು 5 ಅಂಕಗಳ ನಾಟಕ. ಅರಮನೆಯೊಂದರಲ್ಲಿ ನಡೆದ ಪ್ರಣಯ ವೃತ್ತಾಂತ ಇದರ ವಸ್ತು. ಅಗ್ನಿ ಮಿತ್ರನೆಂಬ ದೊರೆ ಮಾಲವಿಕ ಎಂಬ ರಾಜಪುತ್ರಿಯನ್ನು ಕಂಡು ಮೋಹಿಸಿ ಅವಳನ್ನು ವಿವಾಹವಾದುದು ಇಲ್ಲಿನ ಮುಖ್ಯ ಕಥೆ. ಇವರುಗಳ ವಿವಾಹಕೆಕ ಅನೇಕ ಅಡ್ಡಿಗಳು ಎದುರಾಗಿ ಅನಂತರ ಅವೆಲ್ಲವೂ ಆಶ್ಚರ್ಯಕರ ರೀತಿಯಲ್ಲಿ ನಿವಾರಣೆಯಾಗಿ ಸುಖಾಂತ್ಯವಾಗುತ್ತದೆ.
6. ವಿಕ್ರಮೋರ್ವಶೀಯ
ಐದು ಅಂಕಗಳಿರುವ ಈ ನಾಟಕವು ಋಗ್ವೇದದ ಕಾಲದಿಂದ ಪ್ರಚುರವಾದ ಪುರೂರವಸ್ ಮತ್ತು ಊರ್ವಶಿಯರ ಪ್ರೇಮದ ಕಥೆಯನ್ನು ವಸ್ತುವಾಗಿ ಚಿತ್ರಿಸಿದೆ. ಈ ಪುರೂರುವ-ಊರ್ವಶಿಯರ ಕಥೆ ಪದ್ಮಪುರಾಣ ಭಾಗವತ. ಕಥಾ ಸರಿತ್ಸಾಗರ ಮತ್ತು ಬೃಹತ್ಕತೆಗಳಲ್ಲಿ ಬರುತ್ತದೆ. ಈ ಕಥೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಅನೇಕ ಕವಿಗಳು ಬಳಸಿಕೊಂಡಿದ್ದಾರೆ. ಅದೇ ರೀತಿ ಕಾಳಿದಾಸನು ತನ್ನ ಕಾವ್ಯಕ್ಕೆ ಈ ಕಥೆಯನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡಿದ್ದಾನೆ. ಇಲ್ಲಿ ಬರುವ 'ಅನುಕೂಲ' ಪದ ಸ್ವಾರ್ಥ ರಹಿತವಾದ ಸರ್ವಜನಹಿತವಾದುದಾಗಿದೆ. ಕಥೆ ಹೇಳುವಂತೆ 'ಕೇಶಿ' ಎಂಬ ದಾನವನ ಬಂಧನಕ್ಕೊಳಗಾಗಿದ್ದ ಅಪ್ಸರೆ ಊರ್ವಶಿಯನ್ನು ಪುರೂರವ ಬಿಡಿಸಿದ್ದರಿಂದ ಆ ರಾಜನಲ್ಲಿ ಅವಳಿಗೆ ಅನುರಾಗ ಹುಟ್ಟಿ ಪ್ರಣಯಕ್ಕೆ-ತಿರುಗುತ್ತದೆ. ಈ ಮಧ್ಯೆ ಊರ್ವಶಿ ಪ್ರಣಯ ಕೋಪದಿಂದ ಕುಮಾರ ವನವನ್ನು ಪ್ರವೇಶಿಸಿ ದೇವತೆಯಾಗಿ ಪರಿವತರ್ಿತಳಾಗುತ್ತಾಳೆ. ಆಗ ಅವಳನ್ನು ಅರಸುತ್ತ ರಾಜ ಅಲೆಯುವ ಪ್ರಸಂಗವನ್ನು ಕವಿ ಹೃದಯಸ್ಪರ್ಷಿಯಾಗಿ ವಿವರಿಸಿದ್ದಾರೆ.
7. ಅಭಿಜ್ಞಾನ ಶಾಕುಂತಲ
ಕಾಳಿದಾಸನ ಬಹುಜನಪ್ರಿಯ ನಾಟಕವಿದು. ಕಾಳಿದಾಸನಿಗೆ ಸಿಕ್ಕಿರುವ ಪ್ರಸಿದ್ಧಿಯಲ್ಲಿ ಈ ನಾಟಕದ ಪಾತ್ರ ಬಹಳಷ್ಟು ಇದೆ. ಇದರ ಸಾಹಿತಿಕ ಗುಣ ಕೂಡ ಅಷ್ಟೇ ಮಹತ್ವದ್ದು. ಈ ಬಗ್ಗೆ ಕಾವೇಷು ನಾಟಕಂ ರಮ್ಯಂ, ತತ್ರಾಪಿ ಚ ಶಕುಂತಲಾ' ಎನ್ನುವ ಶ್ಲೋಕ ಪ್ರಚಲಿತವಿದ್ದು ಶಾಕುಂತಲ ನಾಟಕದ ಶ್ರೇಷ್ಟತಯನ್ನು ಸರಿಯಾಗಿಯೇ ಬಿಂಬಿಸುತ್ತದೆ. ಸಾರಂಗವನ್ನು ಬೇಟೆಯಾಡುತ್ತಾ ಬಂದ ದುಷ್ಯಂತ ಕಣ್ವರ ಆಶ್ರಮ ತಲುಪುವುದು ಅಲ್ಲಿ ಕಣ್ವರ ಸಾಕುಮಗಳು ಶಾಕುಂತಲೆಯನ್ನು ನೋಡುವುದು ಇಬ್ಬರು ಪರಸ್ಪರ ಅನುರಾಗಕ್ಕೆ ಒಳಗಾಗುವುದು ಅನಂತರ ಗಾಂಧರ್ವ ವಿವಾಹವಾಗುವುದು ಅನಂತರ ಶಾಕುಂತಲೆಯನ್ನು ಆಶ್ರಮದಲ್ಲಿಯೇ ಬಿಟ್ಟು ರಾಜಧಾನಿಗೆ ಮರಳಿದ್ದು, ಶಾಕುಂತಲೆ ಗರ್ಭಿಣಿಯಾದದ್ದು, ಅನಂತರ ದೂರ್ವಾಸನ ಶಾಪ ಕೊನೆಗೆ ಉಂಗುರದ ಪ್ರಸಂಗ ಹಾಗೂ ದುಷ್ಯಂತ - ಶಕುಂತಲೆಯರು ಒಂದಾಗಿದ್ದು ಇದಿಷ್ಟು ಕಥೆಯನ್ನು ಕಾಳಿದಾಸ ತನ್ನ ಅಪೂರ್ವ ಕಾವ್ಯ ಪ್ರತಿಭೆಯಿಂದ ಅದ್ಭುತವಾಗಿ ಚಿತ್ರಿಸಿದ್ದಾನೆ.
ಕಾಳಿದಾಸನಿಗೆ ಸಂದ ಎರಡು ಶ್ರೇಷ್ಠ ಗೌರವಗಳು
ಕಾಳಿದಾಸ ಸಾಹಿತ್ಯಿಕ ಪ್ರತಿಬೆಯನ್ನು ಹಾಡಿಹೊಗಳಿದ ನೂರಾರು ವರ್ಷಗಳಿಂದ ಹೊತ್ತು ಮರೆಸಿದ ಹೊರತಾಗಿಯೂ ಪ್ರತ್ಯೇಕವಾಗಿ ಹೆಸರಿಸಲೇಬೇಕಾದ ಎರಡು ಗೌರವಗಳಿವೆ. ಅವುಗಳೆಂದರೆ:
1. ಕಾಳಿದಾಸ ಸಮ್ಮಾನ ಪ್ರಶಸ್ತಿ
2. ಕವಿ ಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯ
ಸಂಸ್ಕೃತ ಜ್ಞಾನ ಪರಂಪರೆಗಳನ್ನು ಅಧ್ಯಯನ ಮಾಡಲೆಂದೇ ಮಹಾರಾಷ್ಟ್ರ ರಾಜ್ಯದ ನಾಗಪುರ ಎಂಬಲ್ಲಿ ಒಂದು ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದ್ದು, ಆ ವಿಶ್ವವಿದ್ಯಾನಿಲಯಕೆಕ ಕವಿ ಕುಲಗುರು ಕಾಳಿದಾಸನ ಹೆಸರಿಡಲಾಗಿದೆ. ಒಬ್ಬ ಶ್ರೇಷ್ಠ ಸಾಹಿತಿಯನ್ನು ಸಮಾಜ ಸದಾ ಕಾಲ ನೆನಪಿನಲ್ಲಿಡುವ ಪ್ರಯತ್ನ ಒಂದು ಭಾಗ ಇದಾಗಿದ್ದು ಗಮನಾರ್ಹ.
ಹಾಗೆಯೇ ಕಾಳಿದಾಸನ ಪ್ರತಿಭೆ ಸ್ಫೂರ್ತಿದಾಯಕವೆಂದು ಭಾವಿಸಿದ ಮಧ್ಯಪ್ರದೇಶ ಸಕರ್ಾರ; ಸಾಹಿತ್ಯ, ನಾಟಕ, ಕಲೆ (ಸಂಗೀತ, ನೃತ್ಯ, ರಂಗಭೂಮಿ)ಗಳ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಭಾರತೀಯ ಬರಹಗಾರರು ಮತ್ತು ಕಲಾವಿದರಿಗೆ ಕಾಳಿದಾಸನ ಹೆಸರಲ್ಲಿ ಒಂದು ಪ್ರಶಸ್ತಿಯನ್ನು ನೀಡುತ್ತಿದೆ. 'ಕಾಳಿದಾಸ ಸಮ್ಮಾನ್' ಎಂಬ ಈ ಪ್ರಶಸ್ತಿಯನ್ನು 1980 ರಿಂದ ನೀಡಲಾಗುತ್ತಿದೆ. ಇಲ್ಲಿಯವರೆಗೂ ಅನೇಕ ಕಲಾವಿದರು, ನಾಟಕಕಾರರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಕನರ್ಾಟಕದಿಂದ ಮಲ್ಲಿಕಾಜರ್ುನ ಮನ್ಸೂರ್, ಬಿ.ವಿ. ಕಾರಂತ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ, ಕೆ.ವಿ. ಸುಬ್ಬಣ್ಣ ಮೊದಲಾದವರು ಕಾಳಿದಾಸ ಸಮ್ಮಾನ್ ಪ್ರಶಸ್ತಿ ಪಡೆದಿದ್ದಾರೆ. ಇಂದು 2 ಲಕ್ಷ ರೂಪಾಯಿಗಳ ಮೊತ್ತವನ್ನು ಹೊಂದಿರುವ ಈ ಪ್ರಶಸ್ತಿ ಕೇವಲ ಹಣದ ಕಾರಣಕ್ಕೆ ಮಾತ್ರವಲ್ಲದೆ ಅದು ಹೊಂದಿರುವ ಕವಿಯ ಹೆಸರಿನಿಂದಲ್ಲಿ ಭಾರತದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದೆನಿಸಿದೆ.
ಕನ್ನಡದಲ್ಲಿ ಕಾಳಿದಾಸ
ಕಾಳಿದಾಸ ಭಾತ ಭಾಷೆಗಳಿಗೆ ಮಾತ್ರವಲ್ಲ; ಜಗತ್ತಿನ ಬೇರೆ ಬೇರೆ ಭಾಷೆಗಳಿಗೂ ಚಿರಪರಿಚಿತರು. ಸಂಸ್ಕೃತ ಭಾಷೆಯಲ್ಲಿ ಬರೆದ ಕಾಳಿದಾಸ ಬೇರೆ ಭಾಷೆಗಳ ಬರಹಗಾರರನ್ನು ಪ್ರಭಾವಿಸಿದ್ದಾನೆ. ಈತನ ಪ್ರಭಾವ ಎರಡು ರೀತಿಯಲ್ಲಿ ಆಗಿರುವುದನ್ನು ಕಾಣಬಹುದು. ಅವುಗಳಲ್ಲಿ ಒಂದು ಕಾಳಿದಾಸನ ಕೃತಿಗಳನ್ನು ತಮ್ಮ ತಮ್ಮ ಭಾಷೆಗಳಿಗೆ ಅನುವಾದಿಸಿಕೊಂಡಿದ್ದು. ಮತ್ತೊಂದು ಕೃತಿಗಳ ಭಾಷೆ-ಸಾಹಿತ್ಯ-ದರ್ಶನಗಳಿಂದ ಪ್ರಭಾವಿತರಾಗಿ ಸ್ವಂತ ರಚನೆ ಮಾಡುವುದು. ಇವೆರಡೂ ಪ್ರಭಾವಗಳಲ್ಲಿ ಮೊದಲನೆಯದು ಪಾಶ್ಚಾತ್ಯ ಭಾಷೆಗಳಲ್ಲಿ ಕಂಡುಬರುತ್ತದೆ ಎನ್ನಬಹುದು. ಭಾರತೀಯ ಭಾಷೆಗಳಲ್ಲಿ ಸಂಸ್ಕೃತದ ಒಡನಾಟದಲ್ಲಿ ಹೆಚ್ಚು ಬೆಳೆದ ಭಾಷೆ ಕನ್ನಡ. ಮೇಲೆ ಉಲ್ಲೇಖಿಸಿದ ಎರಡೂ ರೀತಿಯ ಪ್ರಭಾವಗಳು ಕನ್ನಡದಲ್ಲಿ ಅತ್ಯಂತ ಸಮರ್ಥವಾಗಿಯೇ ಆಗಿವೆ. ಅಂಥ ಕೆಲವು ವಿವರಗಳನ್ನು ಇಲ್ಲಿ ನೋಡಬಹುದು.
ಕನ್ನಡದ ಪ್ರಾಚೀನ ಸಾಹಿತ್ಯ ಪರಂಪರೆಯಲ್ಲಿ ಬರುವ ನೃಪತುಂಗ ಪಂಪ, ಪೊನ್ನ, ಹರಿಹರ, ದುರ್ಗಸಿಂಹ ಹಾಗೂ ನಾಗವರ್ಮ ಅವರುಗಳ ಸಾಹಿತ್ಯದಲ್ಲಿ ಕಾಳಿದಾಸನ ದಟ್ಟ ಪ್ರಭಾವವಿದ್ದು, ಅನೇಕ ವಿಷಯಗಳಲ್ಲಿ ಕಾಳಿದಾಸನಿಗೆ ಋಣಿಯಾಗಿದ್ದಾರೆ. ಇವರಲ್ಲಿ ಕೆಲವರಂತೂ ಕಾಳಿದಾಸನನ್ನೂ ಮೀರಿಸುತ್ತೇವೆ ಎಂಬ ಆಶಯದೊಂದಿಗೆ ಬರೆದಿರುವುದುಂಟು. ಪೊನ್ನ ಹೇಳಿರುವ 'ಕಾಳಿದಾಸಂಗೆ ನೂರ್ಮಡಿ' ಎಂದಿರುವ ಮಾತು ಅತ್ಯುತ್ತಮ ಉದಾಹರಣೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಆಧುನಿಕ ಆಯಾಮಗಳು ಕಾಣಿಸಿಕೊಳ್ಳುವ 19ನೇ ಶತಮಾನದವರೆಗು ಕನ್ನಡದಲ್ಲಿ ಕಾಳಿದಾಸನ ಪ್ರಭಾವ ಹೀಗಿದ್ದರೆ ಅಲ್ಲಿಂದ ಮುಂದೆ ಸಂಪೂರ್ಣ ಬದಲಾಗಿ ಕಾಳಿದಾಸನ ನಾಟಕ ಹಾಗೂ ಕಾವ್ಯಗಳನ್ನು ಕನ್ನಡ ಭಾಷೆಗೆ ಭಾಷಾಂತರ ಹಾಗೂ ಭಾವಾಂತರಗಳ ಮೂಲಕ ತರಲಾಯಿತು. ಇಂಥ ಪ್ರಯತ್ನಗಳಲ್ಲಿ 19ನೇ ಶತಮಾನದ ಆರಂಭಕ್ಕೆ ಮೈಸೂರು ಅರಮನೆಯ ಬರೆಹಗಾರರಿಂದ ನಡೆದ ಅನುವಾದಗಳು ಬಹಳ ಪ್ರಮುಖ. ಅದರಲ್ಲಿ ಬಸವಪ್ಪ ಶಾಸ್ತ್ರಿ, ಸೋಸಲೆ ಅಯ್ಯಶಾಸ್ತ್ರಿಗಳು ಕ್ರಮವಾಗಿ ಶಾಕುಂತಲ, ವಿಕ್ರಮೋರ್ವಶೀಯ ನಾಟಕಗಳನ್ನು ಅನುವಾದಿಸಿದ್ದು ಅವು ಇಂದಿಗೂ ಮಾಸ್ಟರ್ಪೀಸ್ಗಳಾಗಿವೆ. ಇನ್ನೂ ನಂತರದ ದಿನಗಳಲ್ಲಿ ಶಾಂತಕವಿ, ಶೇಷಗಿರಿ ರಾಮಚಂದ್ರ ಚುರಮುರಿ, ಅವರುಗಳು ಕಾಳಿದಾಸನ ಅಭಿಜ್ಞಾನ ಶಾಕುಂತಲ ನಾಟಕವನ್ನೂ ಕನ್ನಡಕ್ಕೆ ತಂದಿದ್ದು ಕನ್ನಡದ ನಾಟಕ ರಚನೆಗೆ ಬುನಾದಿಯಾದವು. ಹಾಗೆಯೇ ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿ ಅವರ ಮೇಘದೂತ ಹಾಗೂ ಎಸ್.ಜಿ. ನರಸಿಂಹಚಾರ್ಯರ ದಿಲೀಪ ಚರಿತೆ ಗಮನಿಸಬೇಕಾದ ಪ್ರಯತ್ನಗಳಾಗಿವೆ. ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡದ ಗದ್ಯ ಬರೆಹದಲ್ಲಿ ತರಲು ಹಿಂದೆ ಬೀಳದ ಕನ್ನಡ ಸಾಹಿತ್ಯ ಲೋಕ ಈ ದಿಕ್ಕಿನಲ್ಲಿ ಸಾಕಷ್ಟು ಉತ್ತಮ ಕೆಲಸ ನಡೆದಿದೆ. ಅವುಗಳಲ್ಲಿ ಎಸ್.ವಿ. ಪರಮೇಶ ಭಟ್ಟ ಅವರು ಕಾಳಿದಾಸನ ಎಲ್ಲಾ ಕೃತಿಗಳನ್ನು ಗದ್ಯದಲ್ಲಿ ತಂದ ಪ್ರಯತ್ನ ಬಹಳ ಮುಖ್ಯವಾದುದು. ಅದರಂತೆ 3ನೇ ಕೃಷ್ಣರಾಜ ಒಡೆಯರ ಶಾಕುಂತಲ ನಾಟಕ-ನವೀನ ಟೀಕೆ, ಬಿ. ಕೃಷ್ಣಪ್ಪನವರ ಕನ್ನಡ ಶಾಕುಂತಲ ಗಮನಿಸಲೇಬೇಕಾದ ಇತರೆ ರಚನೆಗಳಾಗಿವೆ. ಇಂಥ ಅನುವಾದಗಳಿಂದಲ್ಲದೆ ವಿಮರ್ಶಾ ಬರೆಹಗಳ ಮೂಲಕವೂ ಕನ್ನಡದಲ್ಲಿ ಕಾಳಿದಾಸ ಕಾಣಿಸುತ್ತಾನೆ. ವಿಮರ್ಶೆಯ ಮೂಲಕ ಕಾಳಿದಾಸನನ್ನು ಪರಿಚಯಿಸಿದ ವಿಮರ್ಶಕರೆಂದರೆ ಮಾಸ್ತಿ, ತೀ.ನಂ.ಶ್ರೀ. ದ.ರಾ. ಬೇಂದ್ರೆ, ಎಸ್.ವಿ. ರಂಗಣ್ಣ, ಶ್ರೀರಂಗ, ಲಕ್ಷ್ಮೀನರಸಿಂಹಚಾರ್ಯ, ಸಿ.ಕೆ. ವೆಂಕಟರಾಮಯ್ಯ, ಎ.ಆರ್. ಕೃಷ್ಣಶಾಸ್ತ್ರಿ, ಕೆ. ಕೃಷ್ಣಮೂರ್ತಿ ಇನ್ನೂ ಮೊದಲಾದವರು. ಒಟ್ಟಾರೆ ಹೇಳುವುದಾದರೆ ಅನುವಾದ, ಗದ್ಯ ಅನುವಾದ ಹಾಗೂ ವಿಮರ್ಶೆಯ  ಮೂಲಕ ಕಾಳಿದಾಸ ಕನ್ನಡಕ್ಕೆ ಎಷ್ಟರ ಮಟ್ಟಿಗೆ ಪರಿಚಯವೆಂದರೆ ಆತ ಸಂಸ್ಕೃತದ ಕವಿ ಅಲ್ಲವೇ ಅಲ್ಲ ಬದಲಿಗೆ ಕನ್ನಡದ ಕವಿಯೇ ಆಗಿದ್ದಾನೆ.
ಕೊನೆಗೆ ಉಳಿಯುವ ಅನುಮಾನಗಳು
ಕಾಳಿದಾಸನ ಸಾಹಿತ್ಯಿಕ ಪ್ರತಿಭೆಯ ಔನತ್ಯದ ಸ್ಥಿತಿಯನ್ನು ಕಂಡಾಗ ನಮ್ಮೆದುರಿಗೆ ಅನೇಕ ಪ್ರಶ್ನೆ ಹಾಗೂ ಅನುಮಾನಗಳು ಕಾಣಿಸುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಬಹುದು:
1. ಕಾಳಿದಾಸನ ಕಾಲ 4 ಹಾಗೂ 5ನೇ ಶತಮಾನಗಳಿಗೂ ಹಿಂದಿನ ಕವಿಗಳ ಬಗ್ಗೆ ಸಾಕಷ್ಟು ಮಾಹಿತಿ ಇರುವಾಗ ಈ ಶತಮಾನಗಳಲ್ಲೇ ಬದುಕಿದ ಕಾಳಿದಾಸನ ವೈಯುಕ್ತಿಕ ಮಾಹಿತಿಗಳಿಲ್ಲ ಯಾಕೆ?
2. ಕಾಳಿದಾಸನ ಕಾವ್ಯ-ನಾಟಕಗಳಲ್ಲಿ ಕಂಡುಬರುವ ಸ್ಥಾಯಿಭಾವ ಪ್ರೇಮಕ್ಕೂ ಆತನ ವೈಯುಕ್ತಿಕ ಬದುಕಿಗೂ ಸಂಬಂಧವಿದೆಯೆ?
3. ರಾಜಮನೆತನದಲ್ಲಿ ಕಾಳಿದಾಸನ ವಿವಾಹ ಸಂಬಂಧ ಕುದುರಿದ್ದಕ್ಕೂ ಆತನ ವೈಯುಕ್ತಿಕ ವಿವರಗಳು ಯಾವುದೇ ರೂಪದಲ್ಲಿ ಲಭ್ಯವಿಲ್ಲದಿರುವುದಕ್ಕೂ ಏನಾದರೂ ಸಂಬಂಧವಿದೆಯೆ?
4. ಕಾಳಿದಾಸನ ವೈಯುಕ್ತಿಕ ವಿವರಗಳನ್ನು ತಿಳಿಯಬೇಕಾದರೆ ನಾವು ಅವಲಂಭಿಸಬಹುದಾದ ಆಕರಗಳ್ಯಾವುವು.
ಕಾಳಿದಾಸನ ಅಧ್ಯಯನಗಳು ಇಂದು ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳಿವು. ಈ ಪ್ರಶ್ನೆಗಳು ಕವಿಕಾಳಿದಾಸನ ಅಧ್ಯಯನಗಳಿಗೆ ಒಂದು ಹೊಸ ಆಯಾಮ ನೀಡಬಲ್ಲವು. ಇಂಥ ಪ್ರಯತ್ನಗಳು ಈಗಾಗಲೇ ನಮ್ಮೊಳಗೆ ಶುರುವಾಗಿರುವುದು ಉತ್ತಮ ಬೆಳವಣಿಗೆ ಕನ್ನಡದಲ್ಲಿ ಕಳೆದ ಕೆಲವಾರು ವರ್ಷಗಳಿಂದ ನಡೆಯುತ್ತಿದೆ ಎಂಬುದು ಗಮನಾರ್ಹ ಸಂಗತಿ. ಈ ರೀತಿಯ ಹೊಸ ಚಚರ್ೆಗಳು ಪ್ರಧಾನವಾಗಿ ಪರಿಗಣಿಸಿರುವ ಅಂಶವೆಂದರೆ ಕಾಳಿದಾಸನ ವೈವಾಹಿಕ ಸಂಬಂಧ ರಾಜಮನೆತನದಲ್ಲಿ ಬೆಳೆದ ಕಾರಣದಿಂದಲೇ ಆತನ ವಿವರಗಳು ಮಾಯವಾಗಿರಬಹುದೆಂಬ ಊಹೆ. ಇದನ್ನು ಕನ್ನಡದ ಜನಪ್ರಿಯ ಸಿನಿಮಾ 'ಕವಿರತ್ನ ಕಾಳಿದಾಸ' ಸರಿಯಾದ ಕ್ರಮದಲ್ಲೇ ಪ್ರಸ್ತುತ ಪಡಿಸಿತು. ಈ ಪ್ರಯತ್ನದ ನಂತರ ಕೋಲಾರ ಜಿಲ್ಲೆಯ ಜನಪದ ಕಥಾನಕದಲ್ಲಿ ದೊರೆಯುವ ಸುಳಿವುಗಳ ಮೂಲಕ ಕೆ.ವೈ. ನಾರಾಯಣಸ್ವಾಮಿ ಹಾಗೂ ಶ್ರೀನಿವಾಸ ಮೊದಲಾದವರು ಇನ್ನಷ್ಟು ಹೊಸ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಕಾಳಿದಾಸ ಮೂಲತಃ ತಂದೆ-ತಾಯಿಯನ್ನು ಕಳೆದುಕೊಂಡು 'ಕಾಳಿ' ಗುಡಿಯಲ್ಲಿ ಸಿಕ್ಕವನು. ಹಾಗಾಗಿಯೇ ಅವನ ಮೂಲ ಹೆಸರು 'ಕಾಳಿ' ಕಾಶ್ಮೀರದ ಬುಡಕಟ್ಟಿನ ಹಟ್ಟಿಯ ಜನರೆಲ್ಲರು ಈತನನ್ನು ತಮ್ಮ ಮಗನೆಂದೇ ಸಾಕಿ ಸಲಹುತ್ತಾರೆ. ಇಂಥ ಸಮಯದಲ್ಲಿ ಆ ಪ್ರದೇಶದ ನದಿಯ ಮರಳಿನ ದಿಬ್ಬಗಳ ಮೇಲೆ ಅಲ್ಲಿನ ಅರಸರ ಮಕ್ಕಳಿಗೆ ಪಾಠ ಕಲಿಸಲಾಗುತ್ತದೆ. ಮರಳಿನ ಮೇಲೆ ಅಕ್ಷರ ತಿದ್ದಿಸುತ್ತಿದ್ದರು ಹಾಗೂ ಬಾಯಿ ಪಾಠಮಾಡಿಸುತ್ತಿದ್ದರು. ಈ ಸಮಯದಲ್ಲಿ ಬಾಯಿಪಾಠವನ್ನು ಮರೆಯಲ್ಲಿ ನಿಂತು ಕೇಳಿಸಿಕೊಳ್ಳುವುದು ಹಾಗೂ ರಾಜರ ಮಕ್ಕಳು ಮರಳಿನ ಮೇಲೆ ತಿದ್ದಿ ಬಿಟ್ಟ ಅಕ್ಷರ ಗುರುತುಗಳ ಮೇಲೆ ತಿದ್ದುವುದರ ಮೂಲಕ ಕಾಳಿ ವಿದ್ಯೆ ಕಲಿಯುತ್ತಾನೆ. ಇದಷ್ಟೇ ಅಲ್ಲದೆ ಅತ್ಯುತ್ತಮ ಹಾಡುಗಾರನೂ ಆಗಿದ್ದ. ಒಮ್ಮೆ ಸಂಪ್ರದಾಯದಂತೆ ಅರಸನ ಪ್ರತಿನಿಧಿಗಳು ಸುಂಕ ವಸೂಲಿಗಾಗಿ ಆಗಮಿಸಿದಾಗ ಹಟ್ಟಿಯ ಜನರ ಪರವಾಗಿ ಹಾಡು ಹಾಡಿ ಸಂತೃಪ್ತಿಪಡಿಸುತ್ತಾನೆ. ಈ ಕಾಳಿಯ ಪ್ರತಿಭೆಯನ್ನು ಕಂಡ ಅರಸ ರಾಜಾಸ್ಥಾನಕ್ಕೆ ಆಹ್ವಾನಿಸುತ್ತಾನೆ. ಈ ಮಧ್ಯೆ ಹಾಡಿನಲ್ಲಿ ಗಂದರ್ವಕನ್ಯೆಯೊಡನೆ ಪ್ರೇಮವಾಗಿರುತ್ತದೆ. ಇದನ್ನು ತೊರೆದು ರಾಜಾಸ್ತಾನಕ್ಕೆ ಹೋಗಲೇ ಬೇಕಾಗುತ್ತದೆ. ಹಾಗಾಗಿ ಕಾಳಿ ರಾಜಾಸ್ತಾನಕ್ಕೆ ಹೋಗುತ್ತಾನೆ. ಅಲ್ಲಿ ರಾಜಕುಮಾರಿಯು ಈತನನ್ನು ಮೆಚ್ಚಿ ವಿವಾಹವಾಗುವಂತೆ ಕೇಳುತ್ತಾಳೆ ಇದರಿಂದ ರಾಜಕುಮಾರಿ ಕಾಳಿಯನ್ನು ಅಪಹರಿಸಿ ಅಜ್ಞಾತ ಸ್ಥಳದಲ್ಲಿಡುತ್ತಾಳೆ. ಹೀಗೆ ಕೊನೆಗೆ ಕಾಳಿದಾಸನ ಸಾವಿನ ಸುದ್ದಿ ತಲುಪುತ್ತದೆ. ಈ ಸಾವಿಗೆ ಒಬ್ಬ ವೇಶ್ಯೆ ಕಾರಣವೆಂಬ ಸುದ್ದಿಯೂ ಹರಡುತ್ತದೆ.
ಮೇಲಿನ ಕಥೆ ಜಾನಪದ ಕಥನಗಳಲ್ಲಿ ಆಗುವಂತಹದ್ದು. ಈ ಲೇಖನದ ಆರಂಭಕ್ಕೆ ಉಲ್ಲೇಖಿಸಿದ ಐತಿಹ್ಯ ಇದಕ್ಕಿಂತ ಭಿನ್ನವಾದ ಕಥೆಯನ್ನು ಹೇಳಿದೆ. ಇವೆರಡೂ ಕೂಡ ಒಂದೇ ವಿಷಯದ ಭಿನ್ನ ಅಭಿಪ್ರಾಯಗಳಾಗಿವೆ. ಇಲ್ಲಿ ಗಮನಿಸಬೇಕಾದುದೆಂದರೆ ಕಾಳಿದಾಸ ರಾಜಮನೆತನದಿಂದ ಒದಗಿಬಂದ ಪ್ರೇಮಕ್ಕೆ ಬಲಿಯಾದ ವ್ಯಕ್ತಿ ಎಂಬ ಅನುಮಾನ ಇನ್ನಷ್ಟು ಗಟ್ಟಿಯಾಗುತ್ತದೆ. ಪ್ರತಿಭೆಯನ್ನು - ದೇಹವನ್ನು ಒಂದೇ ಎಂಬಂತೆ ಕಾಣುವ ಪ್ರೇಮ ಹಾಗೂ ಇವೆರಡೂ ಬೇರೆ ಎಂಬಂತೆ ಕಾಣುವ ಪ್ರಭುತ್ವದ ಬಗೆಗಿನ ಒಳಮರ್ಮಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಪ್ರಸ್ತುತ ನಮ್ಮ ಚಿಂತನಾ ವಲಯ ಕಾಳಿದಾಸನ ಸಾಹಿತ್ಯದ ಚರ್ಚೆಗಿಂತ ಆತನ ಜೀವನ ವಿವರಗಳ ಬಗೆಗಿನ ಚರ್ಚೆಯನ್ನು ಬೆಳಸಬೇಕಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ