ಶುಕ್ರವಾರ, ಮಾರ್ಚ್ 31, 2017

ತ್ರಿವಳಿ ತಲಾಖ್ ಸಂವಿಧಾನ ಪೀಠಕ್ಕೆ

ತ್ರಿವಳಿ ತಲಾಖ್ ಸಂವಿಧಾನ ಪೀಠಕ್ಕೆ
31 Mar, 2017
ಪ್ರಜಾವಾಣಿ ವಾರ್ತೆ

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿ ಇರುವ ತ್ರಿವಳಿ ತಲಾಖ್, ನಿಖಾ ಹಲಾಲಾ ಮತ್ತು ಬಹುಪತ್ನಿತ್ವದ ಕಾನೂನು ಸಿಂಧುತ್ವವನ್ನು ಪರಿಶೀಲಿಸುವ ವಿಚಾರವನ್ನು ಸುಪ್ರೀಂ ಕೋರ್ಟ್ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವಹಿಸಿದೆ.

ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ನೀಡಲು ಅವಕಾಶವಿದೆ.

ಅದೇ ರೀತಿ ಮುಸ್ಲಿಂ ಮಹಿಳೆಯು ವಿಚ್ಛೇದಿತ ಪುರುಷನ ಜತೆ ಮರು ವಿವಾಹ ಮಾಡಿಕೊಳ್ಳಲು ನಿಬಂಧನೆ ಇದೆ. ಈ ಪದ್ಧತಿಯನ್ನು ಅನೇಕ ಮುಸ್ಲಿಂ ಮಹಿಳೆಯರು ಪ್ರಶ್ನಿಸಿದ್ದು, ಕೇಂದ್ರ ಸರ್ಕಾರ ಸಹ ಮಹಿಳೆಯರನ್ನು ಬೆಂಬಲಿಸಿದೆ. ನ್ಯಾಯಾಲಯಕ್ಕೆ ಬೇಸಿಗೆ ರಜವಿದ್ದರೂ ಸಾಂವಿಧಾನಿಕ ಪೀಠವು ಮೇ 11ರಂದು ಪ್ರಥಮ ವಿಚಾರ ಣೆಯನ್ನು ನಡೆಸಲಿದೆ. ಬೇಸಿಗೆ ರಜೆಯಲ್ಲಿ ವಾದ ಮಂಡಿಸಲು ವೈಯಕ್ತಿಕ ಕಾರಣಗಳಿಗಾಗಿ ಸಾಧ್ಯವಾಗುವುದಿಲ್ಲ ಎಂಬ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತಿತರರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಜೆ. ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್‌ ಅವರಿದ್ದ ಪೀಠವು ತಿರಸ್ಕರಿಸಿತು.

‘ಬೇಸಿಗೆ ರಜೆಯಲ್ಲಿ ನ್ಯಾಯಾಲಯ ಕಲಾಪ ನಡೆಸುವುದಕ್ಕೆ ನಿರ್ಬಂಧವೇನೂ ಇಲ್ಲ. ಇಂತಹ ಸಂದರ್ಭಗಳಲ್ಲಿ ನಾವೂ ರಜೆ ಅನುಭವಿಸುವ ಅವಕಾಶದಿಂದ ವಂಚಿತರಾಗುತ್ತೇವೆ’ ಎಂದು ನ್ಯಾಯಪೀಠವು ಹೇಳಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ