ವೊಡಾಫೋನ್, ಐಡಿಯಾ ವಿಲೀನ ಘೋಷಣೆ
ಮುಂಬೈ: ಬ್ರಿಟನ್ನಿನ ದೂರಸಂಪರ್ಕ ಸಂಸ್ಥೆ ವೊಡಾಫೋನ್ ಮತ್ತು ಆದಿತ್ಯ ಬಿರ್ಲಾ ಸಮೂಹದ ಮೊಬೈಲ್ ಸೇವಾ ಸಂಸ್ಥೆ ಐಡಿಯಾ ಸೆಲ್ಯುಲರ್ ವಿಲೀನಗೊಳ್ಳಲಿವೆ ಎಂದು ಸೋಮವಾರ ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.
ದೂರಸಂಪರ್ಕ ರಂಗದಲ್ಲಿನ ಅತಿದೊಡ್ಡ ವಿಲೀನ ನಿರ್ಧಾರ ಇದಾಗಿದೆ. ಈ ವಿಲೀನದಿಂದಾಗಿ, ಮೊಬೈಲ್ ಬಳಕೆದಾರರ ಸಂಖ್ಯೆ ಮತ್ತು ವರಮಾನಕ್ಕೆ ಸಂಬಂಧಿಸಿದಂತೆ ದೇಶದ ಅತಿದೊಡ್ಡ ಹೊಸ ದೂರಸಂಪರ್ಕ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮೊಬೈಲ್ ಸಂಸ್ಥೆ ಏರ್‌ಟೆಲ್ ಅನ್ನು ಹಿಂದಿಕ್ಕಲಿದೆ.
ವಿಲೀನಗೊಂಡ ಸಂಸ್ಥೆಯು ಮುಂದಿನ ಎರಡು ವರ್ಷಗಳಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಅವರು ಹೊಸ ಸಂಸ್ಥೆಯ ಅಧ್ಯಕ್ಷರಾಗಿರಲಿದ್ದಾರೆ.
ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಹೊಣೆಯನ್ನು ವೊಡಾಫೋನ್‌ಗೆ ಸೇರಿದವರು ನಿರ್ವಹಿಸಲಿದ್ದಾರೆ.
‘ಎರಡೂ ಸಂಸ್ಥೆಗಳ ನಡುವಣ ಒಪ್ಪಂದದ ಅನ್ವಯ, ವೊಡಾಫೋನ್ ಮತ್ತು ಆದಿತ್ಯ ಬಿರ್ಲಾ ಸಮೂಹವು ಹೊಸ ಸಂಸ್ಥೆಯ ಮೇಲೆ ಜಂಟಿ ನಿಯಂತ್ರಣ ಹೊಂದಿರಲಿವೆ. ವಿಲೀನದ ನಂತರವೂ ಎರಡೂ ಬ್ರ್ಯಾಂಡ್‌ಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿವೆ’ ಎಂದು ವೊಡಾಫೋನ್ ಸಿಇಒ ವಿಟೊರಿಯೊ ಕೊಲಾವೊ ಅವರು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ರಿಲಯನ್ಸ್ ಜಿಯೊ ಒಡ್ಡಿರುವ ಸ್ಪರ್ಧೆ ಎದುರಿಸಲು, ಏರ್‌ಟೆಲ್‌ನ ಪ್ರಭುತ್ವಕ್ಕೆ ತಡೆ ಹಾಕಲು ವಿಲೀನಕ್ಕೆ ಮುಂದಾಗಿಲ್ಲ. ಇಂಟರ್‌ನೆಟ್ ಬಳಕೆ ಹೆಚ್ಚಳವೇ ಈ ನಿರ್ಧಾರಕ್ಕೆ ಕಾರಣ’ ಎಂದರು.
ದೇಶದ ದೂರಸಂಪರ್ಕ ಕ್ಷೇತ್ರದ ಮೇಲೆ ಪ್ರಭುತ್ವ ಸಾಧಿಸುವ ನಿಟ್ಟಿನಲ್ಲಿ ಎರಡು ದಿಗ್ಗಜ ಕಂಪೆನಿಗಳ ವಿಲೀನ ಪ್ರಕ್ರಿಯೆಯು ಟೆಲಿಕಾಂ ವಲಯದಲ್ಲಿ ಹೊಸ ಸಂಚಲನ ಮೂಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ