ಗುರುವಾರ, ಮಾರ್ಚ್ 30, 2017

ವಿಶ್ವ ಮಹಿಳಾ ಸ್ನೂಕರ್ : ವಿದ್ಯಾ ಪಿಳ್ಳೈಗೆ ಬೆಳ್ಳಿ

ವಿಶ್ವ ಮಹಿಳಾ ಸ್ನೂಕರ್‌: ವಿದ್ಯಾ ಪಿಳ್ಳೈಗೆ ಬೆಳ್ಳಿ

ಸಿಂಗಪುರ (ಪಿಟಿಐ): ಅಪೂರ್ವ ಸಾಮರ್ಥ್ಯ ತೋರಿದ ಭಾರತದ ವಿದ್ಯಾ ಪಿಳ್ಳೈ ಅವರು ಇಲ್ಲಿ ನಡೆದ ವಿಶ್ವ ಮಹಿಳಾ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದಾರೆ.

ಸೋಮವಾರ ನಡೆದ ಫೈನಲ್‌ ಹೋರಾಟದಲ್ಲಿ ಭಾರತದ ವಿದ್ಯಾ 4–5 ಫ್ರೇಮ್‌ಗಳಿಂದ ಹಾಂಕಾಂಗ್‌ನ ಎನ್‌ಜಿ ಆನ್‌ ಯೀ ವಿರುದ್ಧ ಪರಾಭವ
ಗೊಂಡರು. ಲೀಗ್‌ ಹಂತದ ಪಂದ್ಯಗಳಲ್ಲಿ ಅಮೋಘ ಆಟ ಆಡಿದ್ದ ವಿದ್ಯಾ ಫೈನಲ್‌ ಹೋರಾಟದ ಮೊದಲ ಆರು ಫ್ರೇಮ್‌ ಗಳು ಮುಗಿದಾಗ 4–2ರ ಮುನ್ನಡೆ ಗಳಿಸಿದ್ದರು.

ಹೀಗಾಗಿ ಬೆಂಗಳೂರಿನ ಆಟಗಾರ್ತಿ ಚಿನ್ನ ಗೆಲ್ಲುವುದು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ನಂತರದ ಮೂರು ಫ್ರೇಮ್‌ಗಳಲ್ಲಿ ಅವರು ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿದ್ದರಿಂದ ಹಿನ್ನಡೆ ಎದುರಾಯಿತು. ನಿರ್ಣಾಯಕ ಫ್ರೇಮ್‌ನ ಆರಂಭದಲ್ಲಿ ವಿದ್ಯಾ 22 ಸ್ಕೋರ್‌ ಸಂಗ್ರಹಿಸಿದರು.
ಆದರೆ ಮಾಜಿ ವಿಶ್ವ ಚಾಂಪಿಯನ್‌ ಯೀ ಬ್ರೇಕ್‌ ಮೂಲಕ 36 ಸ್ಕೋರ್‌ ಕಲೆಹಾಕಿ 42–22ರ ಮುನ್ನಡೆ ಪಡೆದುಕೊಂಡರು.

ಈ ಹಂತದಲ್ಲಿ ಮತ್ತೆ ಪುಟಿದೆದ್ದ ವಿದ್ಯಾ ದಿಟ್ಟ ಆಟ ಆಡಿದರಾದರೂ ನಾಲ್ಕು ಪಾಯಿಂಟ್ಸ್‌ನಿಂದ (50–54) ಚಿನ್ನ ಗೆಲ್ಲುವ ಅವಕಾಶ ಕೈಚೆಲ್ಲಿದರು.
ಲೀಗ್‌ ಹಂತದಲ್ಲಿ ಅಮೋಘ ಆಟ ಆಡಿದ್ದ ವಿದ್ಯಾ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ 4–1ರಲ್ಲಿ ಲಾತ್ವಿಯಾದ ಆಟಗಾರ್ತಿ, ಮಾಜಿ ಯುರೋಪಿಯನ್‌ ಚಾಂಪಿಯನ್‌ ತತ್‌ಜಾನ ವಸಿಲ್‌ಜೆವಾ ಅವರನ್ನು ಮಣಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ 4–1ರಿಂದ ಹಾಂಕಾಂಗ್‌ನ ಕ್ಯಾಥರಿನಾ ವಾನ್‌ ಅವರನ್ನು ಸೋಲಿಸಿದ್ದ ಭಾರತದ ಆಟಗಾರ್ತಿ, ಸೆಮಿಫೈನಲ್‌ನಲ್ಲಿ 5–1ರಲ್ಲಿ ಇಂಗ್ಲೆಂಡ್‌ನ ರೆಬೆಕ್ಕಾ ಗ್ರೆಂಜರ್‌ ಅವರ ಸವಾಲು ಮೀರಿ ನಿಂತಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ