ಸೋಮವಾರ, ಮಾರ್ಚ್ 27, 2017

ಗ್ರಾಮೀಣ ವಿದ್ಯುದ್ದೀಕರಣ

*ಗ್ರಾಮೀಣ ವಿದ್ಯುದ್ದೀಕರಣ*

ಗ್ರಾಮೀಣ ವಿದ್ಯುದ್ದೀಕರಣವನ್ನು ಸಾಮಾನ್ಯವಾಗಿ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂದು ಪರಿಗಣಿಸಲಾಗುತ್ತದೆ. ಗ್ರಾಮೀಣ ವಿದ್ಯುದ್ದೀಕರಣ ಈ ಕೆಳಗಿನ ವಿದ್ಯುತ್ ಬಳಕೆಗೆ ಅನಿವಾರ್ಯ ಎನಿಸಿದೆ.
ಎ. ಮೂಲಭೂತ ಲೈಟಿಂಗ್ ವ್ಯವಸ್ಥೆ
ಬಿ. ನೀರಾವರಿ
ಸಿ. ಅಡುಗೆ
ಡಿ. ಸಂವಹನ
ಇ. ನೀರು ಬಿಸಿ ಮಾಡಲು
ಎಫ್. ಗ್ರಾಮೀಣ ಹಾಗೂ ಗುಡಿ ಕೈಗಾರಿಕೆಗಳಿಗೆ

ಗ್ರಾಮೀಣ ವಿದ್ಯುದ್ದೀಕರಣದ ಪರಿಣಾಮಗಳನ್ನು ಸಾಮಾನ್ಯವಾಗಿ ಹೆಚ್ಚಿದ ಕೃಷಿ ಉತ್ಫಾದಕತೆ, ಸುಧಾರಿತ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ, ಸುಧಾರಿತ ಸಂವಹನ ವ್ಯವಸ್ಥೆ ಮತ್ತು ಹೆಚ್ಚು ಉದ್ಯೋಗ ಸೃಷ್ಟಿಯ ಮೂಲಕ ಆರ್ಥಿಕ ಅಭಿವೃದ್ಧಿಯಲ್ಲಿ ಕಾಣಬಹುದಾಗಿದೆ. ಸಾಂಪ್ರದಾಯಿಕವಾಗಿ ಕೃಷಿಯನ್ನೇ ಜೀವನಾಧಾರವಾಗಿ ಅವಲಂಬಿಸಿದ್ದ ಗ್ರಾಮೀಣ ಪ್ರದೇಶಗಳಲ್ಲಿ ಇದೀಗ ಗ್ರಾಮೀಣ ಆರ್ಥಿಕತೆ ಬೆಳೆಯಲು ಗ್ರಾಮೀಣ ವಿದ್ಯುದ್ದೀಕರಣ ಮಹತ್ವದ ಕೊಡುಗೆ ನೀಡಿದೆ. ದೇಶದಲ್ಲಿ ಸ್ವಾತಂತ್ರ್ಯಾನಂತರ ಹಾಗೂ ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ವಿದ್ಯುದ್ದೀಕರಣ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯನ್ನು ಸ್ಥೂಲವಾಗಿ ನೋಡೋಣ. ಅದರಲ್ಲೂ ಮುಖ್ಯವಾಗಿ ಪುನರ್ ಬಳಕೆ ಇಂಧನ ಮೂಲದಿಂದ ವಿದ್ಯುತ್ ಉತ್ಪಾದಿಸುವ ಮೂಲಕ ಗ್ರಾಮೀಣ ವಿದ್ಯುದ್ದೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

ಗ್ರಾಮೀಣ ವಿದ್ಯುದ್ದೀಕರಣ ಅಭಿವೃದ್ಧಿ
ಪ್ರಸ್ತುತ ದಿನಮಾನಗಳಲ್ಲಿ ಗ್ರಾಮೀಣ ವಿದ್ಯುದ್ದೀಕರಣದಲ್ಲಿ ಪ್ರಮುಖವಾಗಿ ಐದು ಅಂಶಗಳನ್ನು ಗಮನಿಸಬಹುದಾಗಿದೆ.
1. ಗ್ರಾಮೀಣ ವಿದ್ಯುದ್ದೀಕರಣಕ್ಕೆ ಅಗತ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು.
2. ಗ್ರಾಮೀಣ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವುದು.
3. ಅಗತ್ಯ ಪ್ರಮಾಣದ ಗುಣಮಟ್ಟದ ವಿದ್ಯುತ್ತನ್ನು ಪೂರೈಸುವುದು.
4. ಕೈಗೆಟುಕುವ ದರದಲ್ಲಿ ವಿದ್ಯುತ್ ಸರಬರಾಜು ಮಾಡುವುದು.
5. ಸ್ವಚ್ಛ, ಪರಿಸರ ಸಂರಕ್ಷಣೆಗೆ ಪೂರಕವಾದ  ಮತ್ತು ಸುಸ್ಥಿರ ವಿದ್ಯುತ್ತನ್ನು ದಕ್ಷ ವಿಧಾನದಲ್ಲಿ ಪೂರೈಸುವುದು.

ಭಾರತದಲ್ಲಿ ಗ್ರಾಮೀಣ ಆರ್ಥಿಕತೆ ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿದ್ದು, ಸ್ವಾತಂತ್ರದ ಬಳಿಕ ಅಧಿಕಾರಕ್ಕೆ ಬಂದ ಸರ್ಕಾರಗಳು, ವಿದ್ಯುತ್ ಮೂಲಸೌಕರ್ಯ ಸೇರಿದಂತೆ ಗ್ರಾಮೀಣ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಪ್ರಯತ್ನಗಳನ್ನು ಮಾಡುತ್ತಾ ಬಂದಿವೆ. ಇಷ್ಟಾಗಿಯೂ ಇನ್ನೂ ಸಾಧಿಸಬೇಕಾದ್ದು ಬಹಳಷ್ಟಿದ್ದು, ಗ್ರಾಮೀಣ ಆರ್ಥಿಕತೆಗೆ ಸೂಕ್ತ ಪರಿಕರಗಳನ್ನು ಕಲ್ಪಿಸಿಕೊಡುವ ಕೆಲಸ ಆಗಬೇಕಿದೆ.

ಗ್ರಾಮೀಣ ಪ್ರದೇಶಗಳ ಶೇಕಡ 100ರಷ್ಟು ವಿದ್ಯುದ್ದೀಕರಣದ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದ್ದರೂ, ಇದುವರೆಗೆ ಭಾರತದಲ್ಲಿ ಕೇವಲ ಶೇಕಡ 67.3ರಷ್ಟು ವಿದ್ಯುದ್ದೀಕರಣವನ್ನು ಸಾಧಿಸಲು ಮಾತ್ರ ಸಾಧ್ಯವಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳು ಸೇರಿ ಶೇಕಡ 67.3 ಪ್ರದೇಶಕ್ಕೆ ವಿದ್ಯುತ್ ಕಲ್ಪಿಸಲಾಗಿದೆ. ಸುಮಾರು 75 ದಶಲಕ್ಷ ಕುಟುಂಬಗಳು ಅಂದರೆ ಒಟ್ಟು ಗ್ರಾಮೀಣ ಕುಟುಂಬಗಳ ಶೇಕಡ 45ರಷ್ಟು ಕುಟುಂಬಗಳು ಇನ್ನೂ ವಿದ್ಯುತ್ ಸಂಪರ್ಕ ಪಡೆಯಬೇಕಿದೆ ಎನ್ನುವುದು 2011ರ ಜನಗಣತಿಯಿಂದ ತಿಳಿದುಬರುತ್ತದೆ. 2001ರವರೆಗಿನ ಮಾಹಿತಿಯ ಪ್ರಕಾರ 19909 ಗ್ರಾಮಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಬಂದಿಲ್ಲ ಎಂದು 2015ರ ಜನವರಿ 31ಕ್ಕೆ ಬಿಡುಗೆ ಮಾಡಲಾದ ಗ್ರಾಮೀಣ ವಿದ್ಯುದ್ದೀಕರಣದ ಪ್ರಗತಿ ವರದಿ ಹೇಳುತ್ತದೆ. ಅದಾಗ್ಯೂ ವಿದ್ಯುತ್ ಸಂಪರ್ಕ ಪಡೆದ ಎಲ್ಲ ಗ್ರಾಮಗಳು ಇಂದಿಗೂ ಗುಣಮಟ್ಟದ ವಿದ್ಯುತ್ ಪಡೆಯಲು ಸಫಲವಾಗಿಲ್ಲ. ಶೇಕಡ 33ರಷ್ಟು ಗ್ರಾಮೀಣವಾಸಿಗಳಿಗೆ ಅವರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸಾಧ್ಯವಾಗಿಲ್ಲ. ಅಂದರೆ ಈ ಕುಟುಂಬಗಳ ಮಂದಿ ತಿಂಗಳಿಗೆ 50 ಕಿಲೋವ್ಯಾಟ್‍ಗಿಂತ ಕಡಿಮೆ ವಿದ್ಯುತ್ ಪಡೆಯುತ್ತಿದ್ದಾರೆ.

ಗ್ರಾಮೀಣ ವಿದ್ಯುದ್ದೀಕರಣದಲ್ಲಿ ಸರ್ಕಾರದ ಯೋಜನೆ
ಗ್ರಾಮೀಣ ವಿದ್ಯುದ್ದೀಕರಣದ ಅಗತ್ಯತೆಯನ್ನು 1950ರ ದಶಕದಲ್ಲೇ ಮನಗಂಡಿದ್ದರೂ, ಮೊಟ್ಟಮೊದಲ ದೊಡ್ಡ ಪ್ರಮಾಣದ ಯೋಜನೆ ಈ ನಿಟ್ಟಿನಲ್ಲಿ ಆರಂಭವಾದದ್ದು 1969ರಲ್ಲಿ. ಆ ವರ್ಷ ಗ್ರಾಮೀಣ ವಿದ್ಯುತ್ ನಿಗಮವನ್ನು ಸ್ಥಾಪಿಸಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಾಯಿತು. ಇದರ ಮುಖ್ಯ ಉದ್ದೇಶವೆಂದರೆ ಗ್ರಾಮೀಣ ವಿದ್ಯುದ್ದೀಕರಣವನ್ನು ದೇಶಾದ್ಯಂತ ಉತ್ತೇಜಿಸಲು ಸೂಕ್ತ ಹಣಕಾಸು ನೆರವು ನೀಡುವುದು. ಇದು ಕೇವಲ ಸಾಲ ಸೌಲಭ್ಯವನ್ನು ರಾಜ್ಯ ವಿದ್ಯುತ್ ಮಂಡಳಿಗಳಿಗೆ ಅಥವಾ ರಾಜ್ಯ ವಿದ್ಯುತ್ ಸೌಲಭ್ಯಗಳಿಗೆ, ಪರಿಕರಗಳ ಉತ್ಪಾದಕರಿಗೆ ನೀಡುವ ಜತೆಗೆ, ವಿದ್ಯುತ್ ಸಚಿವಾಲಯದ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಗಳಿಗೂ ನೆರವು ನೀಡುತ್ತದೆ.

ಭಾರತ ಸರ್ಕಾರದ ಕೆಲ ಗಮನಾರ್ಹ ಯೋಜನೆಗಳು
1. ಭಾರತ ಸರ್ಕಾರ 1974ರಲ್ಲಿ ಕನಿಷ್ಠ ಅಗತ್ಯ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯನ್ನು ಆರಂಭಿಸಿತು.
2. 1988ರ ವೇಳೆಗೆ ಗ್ರಾಮೀಣ ಪ್ರದೇಶಗಳ ಬಡತನ ರೇಖೆಗಿಂತ ಕೆಳಗಿರುವ ಮಂದಿಗೆ ಒಂದು ಪಾಯಿಂಟ್‍ನ ವಿದ್ಯುತ್ ದೀಪ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಚಾಲನೆ ನೀಡಲಾಯಿತು.
3. ಪ್ರಧಾನ ಮಂತ್ರಿ ಗ್ರಾಮೋದಯ ಯೋಜನೆಯಡಿ ವಿದ್ಯುತ್ ಸಂಪರ್ಕ ಇಲ್ಲದ ಹಳ್ಲಿಗಳಿಗೆ ವಿಯುತ್ ಸಂಪರ್ಕ ಒದಗಿಸುವ ಯೋಜನೆಯನ್ನು ಹಾಲಿ ವಿದ್ಯುದ್ದೀಕರಣ ವ್ಯಾಖ್ಯೆಯ ಅಡಿಯಲ್ಲಿ 2003ರಿಂದೀಚೆಗೆ ನೀಡಲಾಗುತ್ತಿದೆ.
4. ತೀರಾ ಗುಡ್ಡಗಾಡು ಹಳ್ಳಿಗಳ ವಿದ್ಯುದ್ದೀಕರಣ ಯೋಜನೆಯನ್ನು 2001ರಲ್ಲಿ ಹೊಸ ಹಾಗೂ ಪುನರ್‍ಬಳಕೆ ವಿದ್ಯುತ್ ಸಚಿವಾಲಯ ಆರಂಭಿಸಿತು. ಈ ಯೋಜನೆಯಡಿ ತೀರಾ ಗುಡ್ಡಗಾಡು ಪ್ರದೇಶಗಳಿಗೆ ಗ್ರಿಡ್ ಸಂಪರ್ಕದ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಬದಲು ಪುನರ್ ಬಳಕೆ ಇಂಧನ ಮೂಲದ ವಿದ್ಯುತ್ತನ್ನು ಪೂರೈಸಲು ಒತ್ತು ನೀಡಲಾಯಿತು.
5. ಆಕ್ಸಿಲರೇಟೆಡ್ ರೂರಲ್ ಎಲೆಕ್ಟ್ರಿಫಿಕೇಶನ್ ಪ್ರೋಗ್ರಾಂ 2003ರಲ್ಲಿ ಆರಂಭವಾಯಿತು.
6. ಆ ಬಳಿಕ 2004ರಲ್ಲಿ ಒಂದು ಲಕ್ಷ ಹಳ್ಳಿಗಳಲ್ಲಿ ತ್ವರಿತ ವಿದ್ಯುದ್ದೀಕರಣ ಯೋಜನೆ ಮತ್ತು ಒಂದು ಕೋಟಿ ಕುಟುಂಬಗಳಿಗೆ ಈ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಲಾಯಿತು.
7. ರಾಜೀವ್‍ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆ:  ರಾಜೀವ್‍ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯನ್ನು 2005ರಲ್ಲಿ ಆರಂಭಿಸಲಾಯಿತು. ಈ ಯೋಜನೆಯಡಿ ಎಲ್ಲರಿಗೂ 2009ನೇ ಇಸ್ವಿಯ ಒಳಗಾಗಿ ವಿದ್ಯುತ್ ಸೌಲಭ್ಯ ಕೈಗೆಟುಕುವಂತೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಅಂತೆಯೇ 2012ರ ಒಳಗಾಗಿ ಪ್ರತಿ ಕುಟುಂಬಗಳಿಗೆ ದಿನಕ್ಕೆ ಕನಿಷ್ಠ ಒಂದು ಯೂನಿಟ್ ವಿದ್ಯುತ್ ನೀಡುವುದು ಈ ಯೋಜನೆಯ ಉದ್ದೇಶವಾಗಿತ್ತು. ಇದು 2005ರ ರಾಷ್ಟ್ರೀಯ ವಿದ್ಯುತ್ ನೀತಿಯ ಪ್ರಮುಖ ಅಂಶವೂ ಆಗಿತ್ತು. ಈ ಹಿಂದಿನ ಎಲ್ಲ ಯೋಜನೆಗಳನ್ನು  ರಾಜೀವ್‍ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯಲ್ಲಿ ವಿಲೀನಗೊಳಿಸಲಾಯಿತು.
8. 2009ರಲ್ಲಿ ವಿದ್ಯುತ್ ಸಚಿವಾಲಯವು ವಿಕೇಂದ್ರೀಕೃತ ವಿತರಣಾ ಉತ್ಪಾದನೆ ಯೋಜನೆಯನ್ನು  ರಾಜೀವ್‍ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯಡಿ ಆರಂಭಿಸಲಾಯಿತು. ಎಲ್ಲ ವಿದ್ಯುತ್‍ರಹಿತ ಗ್ರಾಮಗಳಿಗೆ ಮಿನಿ ಗ್ರಿಡ್ ಮೂಲಕ ವಿದ್ಯುತ್ ವಿತರಿಸುವ ಯೋಜನೆ ಇದಾಗಿದೆ. ಈ ಯೋಜನೆಯಡಿ ದಿನಕ್ಕೆ ಆರು ಗಂಟೆಗಿಂತ ಕಡಿಮೆ ವಿದ್ಯುತ್ ಪಡೆಯುವ ಗ್ರಾಮಗಳನ್ನೂ ಸೇರಿಸಲಾಯಿತು.
9. 2014ರ ಡಿಸೆಂಬರ್‍ನಲ್ಲಿ ಕೇಂದ್ರ ಸರ್ಕಾರವು ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯನ್ನು  ರಾಜೀವ್‍ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯ ಮಹತ್ವದ ಬದಲಾವಣೆಗಳೊಂದಿಗೆ ಆರಂಭಿಸಿತು.

ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯ ಗುರಿಗಳು
1. ಎಲ್ಲ ಗ್ರಾಮೀಣ ಕುಟುಂಬಗಳಿಗೆ 2009ರ ಒಳಗಾಗಿ ವಿದ್ಯುತ್ ಸೌಲಭ್ಯ ತಲುಪುವಂತೆ ಮಾಡುವುದು.
2. ನ್ಯಾಯಬದ್ಧ ಬೆಲೆಯಲ್ಲಿ ಗುಣಮಟ್ಟದ ಮತ್ತು ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಮಾಡುವುದು.
3. ಕನಿಷ್ಠ ಜೀವನಾವಶ್ಯಕ ಬಳಕೆ ಪ್ರಮಾಣವಾದ ಪ್ರತಿ ಕುಟುಂಬಕ್ಕೆ ದಿನಕ್ಕೆ ಒಂದು ಯೂನಿಟ್‍ನಷ್ಟು ಗುಣಮಟ್ಟದ ವಿದ್ಯುತ್ತನ್ನು 2012ರ ಒಳಗಾಗಿ ಒದಗಿಸುವುದು.
ಇಷ್ಟಾಗಿಯೂ ಇದುವರೆಗಿನ ಅಂಕಿ ಅಂಶಗಳಿಂದ ತಿಳಿದುಬರುವಂತೆ ಈ ಯಾವ ಗುರಿಗಳನ್ನೂ ಸಾಧಿಸಲು ಸಾಧ್ಯವಾಗಿಲ್ಲ.

ಗ್ರಾಮೀಣ ವಿದ್ಯುದ್ದೀಕರಣ ನೀತಿ ಕೂಡಾ ವಿದ್ಯುತ್ ಸಂಪರ್ಕ ಹೊಂದಿದ ಗ್ರಾಮಗಳ ವ್ಯಾಖ್ಯೆಯನ್ನು ಬದಲಿಸಿದೆ. ಗ್ರಾಮೀಣ ವಿದ್ಯುದ್ದೀಕರಣ ನೀತಿ ಅನವಯ, ಒಂದು ಗ್ರಾಮವನ್ನು ವಿದ್ಯುದ್ದೀಕರಣಗೊಂಡ ಗ್ರಾಮ ಎಂದು ಪರಿಗಣಿಸಬೇಕಾದರೆ, ಗ್ರಾಮಪಂಚಾಯ್ತಿಯ ದೃಢೀಕರಣ ಪತ್ರವನ್ನು ಆಧಾರವಾಗಿ ತೆಗೆದುಕೊಳ್ಳಲಾಗುತ್ತದೆ. ಗ್ರಾಮಪಂಚಾಯ್ತಿ ನೀಡುವ ಈ ಪ್ರಮಾಣಪತ್ರದಲ್ಲಿ ಮೂಲಸೌಕರ್ಯಗಳಾದ ವಿದ್ಯುತ್ ವಿತರಣಾ ಪರಿವರ್ತಕಗಳು ಹಾಗೂ ವಿತರಣಾ ಮಾರ್ಗಗಳನ್ನು ಎಲ್ಲ ವಾಸದ ತಾಣಗಳಲ್ಲಿ ಹಾಗೂ ಕನಿಷ್ಠ ಒಂದು ದಲಿತ ಬಸ್ತಿಗಳಲ್ಲಿ, ಉಪಗ್ರಾಮಗಳಲ್ಲಿ ಹೊಂದಿದೆ ಎನ್ನುವುದನ್ನು ಉಲ್ಲೇಖಿಸಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ