ಮೊಬೈಲ್‌ಗೆ ಆಧಾರ್ ಕಡ್ಡಾಯ
ನವದೆಹಲಿ: ಹಾಲಿ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಮೊಬೈಲ್ ಸಿಮ್ ಬಳಕೆದಾರರು, ಮೊಬೈಲ್ ಸೇವಾ ಕಂಪೆನಿಗಳಿಗೆ ಆಧಾರ್ ಸಂಖ್ಯೆ ಕೊಡುವುದು ಕಡ್ಡಾಯ.
ಆಧಾರ್ ಸಂಖ್ಯೆ ಜೋಡಣೆಯಾಗದ ಮೊಬೈಲ್ ಸಂಪರ್ಕಗಳು 2018ರ ಫೆಬ್ರುವರಿ 6 ರಿಂದ ಅಕ್ರಮ ಎನಿಸಿಕೊಳ್ಳಲಿವೆ. ಜತೆಗೆ ಆ ಸಂಪರ್ಕಗಳು ಸ್ಥಗಿತಗೊಳ್ಳಲಿವೆ.
‘ಆಧಾರ್ ಆಧರಿತ ವಿದ್ಯುನ್ಮಾನ–ದೃಢೀಕರಣದ (ಇ–ಕೆವೈಸಿ: ಎಲೆಕ್ಟ್ರಾನಿಕ್–ನೋ ಯುವರ್ ಕಸ್ಟಮರ್) ಮೂಲಕ ಎಲ್ಲಾ ಮೊಬೈಲ್ ಸೇವಾ ಕಂಪೆನಿಗಳು ತಮ್ಮ ಚಂದಾದಾರರ ವಿವರಗಳನ್ನು ಮರುಪರಿಶೀಲನೆ ನಡೆಸಬೇಕು’ ಎಂದು ದೂರಸಂಪರ್ಕ ಸಚಿವಾಲಯ ಶುಕ್ರವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.
2018ರ ಫೆಬ್ರುವರಿ 6ರ ಒಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಅದು ಎಲ್ಲಾ ಕಂಪೆನಿಗಳಿಗೆ ಸೂಚನೆ ನೀಡಿದೆ. ‘ಆಧಾರ್ ಆಧರಿತ ಮರುಪರಿಶೀಲನೆ ಪ್ರಕ್ರಿಯೆ ಹೇಗೆ ನಡೆಯುತ್ತದೆ
ಎಂಬುದನ್ನು ಎಸ್‌ಎಂಎಸ್ ಕಳುಹಿಸುವ ಹಾಗೂ ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ ಮೊಬೈಲ್ ಸೇವಾ ಕಂಪೆನಿಗಳು ತಮ್ಮ ಗ್ರಾಹಕರಿಗೆ ಮುಂಚಿತವಾಗಿ ವಿವರಿಸಬೇಕು’ ಎಂದು ಅದು ಹೇಳಿದೆ.
‘ಈ ಪ್ರಕ್ರಿಯೆಯಲ್ಲಿ ವ್ಯತ್ಯಯವಾದರೆ ಕೋಟ್ಯಂತರ ಗ್ರಾಹಕರಿಗೆ ತೊಂದರೆ ಆಗಲಿದೆ. ಹೀಗಾಗಿ, ಇಡೀ ಪ್ರಕ್ರಿಯೆ ಸರಾಗವಾಗಿ ನಡೆಯಲು ಅನುಕೂಲವಾಗುವಂತೆ ಕಂಪೆನಿಗಳು ವ್ಯವಸ್ಥೆರೂಪಿಸಬೇಕು’ ಎಂದು ಸಚಿವಾಲಯ ನಿರ್ದೇಶನ ನೀಡಿದೆ.
‘ಇ–ಕೆವೈಸಿ ಪ್ರಕ್ರಿಯೆ ಆರಂಭಿಸುವುದಕ್ಕೂ ಮುನ್ನ ಕಂಪೆನಿಗಳು ಪ್ರತಿ ಚಂದಾದಾರರಿಗೂ ಪರಿಶೀಲನಾ ಸಂಖ್ಯೆ (ವೆರಿಫಿಕೇಷನ್ ಕೋಡ್) ಕಳುಹಿಸಿ, ಸಿಮ್ ಕಾರ್ಡ್ ಅವರ ಬಳಿಯೇ ಇದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು’ ಎಂದೂ ಅದು ಸೂಚಿಸಿದೆ.
‘ಸಿಮ್ ಮೂಲಕ ಹಾಟ್‌ಸ್ಪಾಟ್ ಮತ್ತು ಡಾಂಗಲ್ ಬಳಸಿ, ಇಂಟರ್ನೆಟ್ ಸೇವೆ ಪಡೆಯುವಾಗ ಚಂದಾದಾರರು ಸಂಪರ್ಕ ಸಂಖ್ಯೆಯನ್ನು ನೀಡಿರುತ್ತಾರೆ. ಸೇವಾ ಕಂಪೆನಿಗಳು, ಆ ಸಂಖ್ಯೆಗಳ ಮೂಲಕ ಇಂಟರ್ನೆಟ್ ಚಂದಾದಾರರನ್ನು ಸಂಪರ್ಕಿಸಿ, ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳಬೇಕು’ ಎಂದು ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ವಿವರಿಸಿದೆ. ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ದೂರಸಂಪರ್ಕ ಸಚಿವಾಲಯ ಈ ಅಧಿಸೂಚನೆ ಹೊರಡಿಸಿದೆ.
‘ಆಧಾರ್ ಮೂಲಕ ಮೊಬೈಲ್ ಸಂಪರ್ಕಗಳನ್ನು ಪರಿಶೀಲಿಸಲಾಗುವುದು. ನಕಲಿ ದಾಖಲೆಗಳನ್ನು ಸಲ್ಲಿಸಿ ಮೊಬೈಲ್ ಸಂಪರ್ಕ ಪಡೆಯಲಾಗಿದೆಯೇ ಎಂಬುದನ್ನು ಪತ್ತೆ ಮಾಡಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಬ್ಯಾಂಕ್ ವಹಿವಾಟುಗಳಿಗೂ ಮೊಬೈಲ್ ಬಳಸುತ್ತಿರುವುದರಿಂದ ಕ್ರಮಕ್ಕೆ ಮುಂದಾಗಿದ್ದೇವೆ’ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಫೆಬ್ರುವರಿಯಲ್ಲಿ ತಿಳಿಸಿತ್ತು. ಸರ್ಕಾರದ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ