ಶುಕ್ರವಾರ, ಮಾರ್ಚ್ 31, 2017

ಕರ್ನಾಟಕದ ಪ್ರಚಲಿತ ವಿದ್ಯಮಾನ


೧) ಕರ್ನಾಟಕದ ಐ4 ನೀತಿ

ಕರ್ನಾಟಕದಾದ್ಯಂತ 2ನೇ ಮತ್ತು 3ನೇ ದರ್ಜೆಯ ನಗರಗಳಲ್ಲಿ ಹೊಸ ಐಟಿ ಮತ್ತು ಇತರೆ ಜ್ಞಾನಾಧಾರಿತ ವಲಯಗಳು ತಮ್ಮ ಕಾರ್ಯಕ್ಷೇತ್ರವನ್ನು ಸ್ಥಾಫಿಸಲು ಪ್ರೋತ್ಸಾಹಗಳನ್ನು ನೀಡಲು ಹೊಸ ಮಾಹಿತಿ ತಂತ್ರಜ್ಞಾನ ಐ4 ನೀತಿಯನ್ನು ಕರ್ನಾಟಕ ಸರ್ಕಾರವು ಜಾರಿಗೆ ತಂದಿದೆ.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಐಟಿ/ಐಟಿಇಎಸ್/ಸ್ಟಾರ್ಟ್ ಅಪ್ಸ್/ ಇತರೆ ಜ್ಞಾನಾಧಾರಿತ ಉದ್ದಿಮೆಗಳ ಪ್ರಸ್ತಾವನೆಗಳನ್ನು ಅಂಗೀಕರಿಸುವ ಏಕ ಗವಾಕ್ಷಿ ಸಂಸ್ಥೆಯಾಗಿರುತ್ತದೆ.

ಐ4 ನೀತಿಯ ಪ್ರಮುಖ ಅಂಶಗಳು

• ಉದ್ಯೋಗ ಆಧಾರಿತ ಪ್ರೋತ್ಸಾಹಕವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ಹೊರಭಾಗದಲ್ಲಿ ಭೂ ಮಂಜೂರಾತಿ ಮಾಡುವುದು.

• ಐಟಿ, ಐಟಿಇಎಸ್, ಅನಿಮೇಷನ್/ಜ್ಞಾನಾಧಾರಿತ ಉದ್ದಿಮೆಗಳಿಗೆ ರಿಯಾಯಿತಿ ದರದಲ್ಲಿ ಭೂ ಮಂಜೂರಾತಿ.

• ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಹೊರಭಾಗದಲ್ಲಿ ಹೂಡಿಕೆಗಾಗಿ ಉದ್ಯೋಗ ಸೃಷ್ಟಿ.

• ಅಭಿವೃದ್ಧಿಯನ್ನು 2 ಮತ್ತು 3ನೇ ದರ್ಜೆ ನಗರಗಳಿಗೆ ವಿಸ್ತರಿಸಲು ಆದ್ಯತೆ ನೀಡುವುದು.

• ನೇರ ಅಂತಿಮ ಬಳಕೆದಾರರಿಗೆ ಮಾತ್ರ ಪ್ರೋತ್ಸಾಹ ದೊರಕಿಸುವುದು.

• ಪ್ರತಿ 1000 ಉದ್ಯೋಗ ಸೃಷ್ಟಿಗೆ 1 ಎಕರೆ ದರದಲ್ಲಿ ಭೂಮಿಯನ್ನು ಮಂಜೂರು ಮಾಡುವುದು.

• ಸ್ಥಳವನ್ನು ಆಧರಿಸಿ ಸ್ಟಾರ್ಟ್ ಅಪ್ ಕಂಪನಿಗಳಿಗೆ ಇಂಟರ್ನೆಟ್‍ನೊಂದಿಗೆ ಪ್ಲಗ್ ಮತ್ತು ಪ್ಲೇ ಸ್ಥಳಕ್ಕಾಗಿ ರಿಯಾಯಿತಿ ದರದಲ್ಲಿ ಭೂಮಿಯನ್ನು ಒದಗಿಸಲಾಗುವುದು.

• ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಐಟಿ/ಐಟಿಇಎಸ್/ ಸ್ಟಾರ್ಟ್ ಅಪ್ಸ್/ಇತರೆ ಜ್ಞಾನಾಧಾರಿತ ಉದ್ದಿಮೆಗಳು ಸಾರ್ವಜನಿಕ ಸೇವಾ ಉದ್ಯಮಗಳಿಗೆ ಸರಿಸಮವಾಗಿ ಪರಿಗಣಿಸಲಾಗುವುದು.

• 5 ವರ್ಷಗಳವರೆಗೆ ಐಟಿ / ಐಟಿಇಎಸ್/ ಸ್ಟಾರ್ಟ್ ಅಪ್ಸ್/ ಇತರೆ ಜ್ಞಾನಾಧಾರಿತ ಉದ್ದಿಮೆಗಳಿಗೆ 1964ರ ಕರ್ನಾಟಕ ಕೈಗಾರಿಕ ಉದ್ಯೋಗ (ನಿಲುವು ಆದೇಶಗಳು) ನಿಯಮಗಳಿಂದ ವಿನಾಯಿತಿ ನೀಡಲಾಗಿದೆ.

• ಐಟಿ/ಐಟಿಇಎಸ್/ಸ್ಟಾರ್ಟ್ ಅಪ್ಸ್/ ಅನಿಮೇಷನ್ / ಬಿಪಿಓ/ಇತರೆ ಜ್ಞಾನಾಧಾರಿತ ಉದ್ದಿಮೆಗಳನ್ನು ಸಾರ್ವಜನಿಕ ಸೇವಾ ಉದ್ಯಮಗಳಿಗೆ ಸರಸಮವಾಗಿ ಪರಿಗಣಿಸುವುದು.

• 2ನೇ ಮತ್ತು 3ನೇ ದರ್ಜೆ ನಗರಗಳಲ್ಲಿ ಹೊಸ ಉದ್ಯೋಗವನ್ನು ಸೃಷ್ಟಿಸುವ ಎಲ್ಲಾ ಉದ್ದಿಮೆಗಳಿಗೆ ಎರಡು ವರ್ಷಗಳವರೆಗೆ ಭವಿಷ್ಯ ನಿಧಿ/ನೌಕರರ ರಾಜ್ಯ ವಿಮಾ ಮೊತ್ತವನ್ನು ಪ್ರತಿ ಉದ್ಯೋಗಿಗೆ ಪ್ರತಿ ಮಾಸಿಕವಾಗಿ ರೂ. 2000ದಂತೆ ಮರುಪಾವತಿ ಮಾಡಲಾಗುವುದು.

• ಐಟಿ/ಐಟಿಇಎಸ್/ಇಎಂಎಸ್‍ಡಿ ಟೆಲಿಕಾಂ ಮುಂತಾದವುಗಳಲ್ಲಿ ನಿರುದ್ಯೋಗಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

೨) ಸಬಲ

ಭಾರತ ಸರ್ಕಾರವು ರಾಜೀವ್‍ಗಾಂಧಿ ಪ್ರಾಯಪೂರ್ವ ಬಾಲಕಿಯರ ಸಬಲೀಕರಣ ಅಥವಾ ಸಬಲ ಎಂಬ ಹೊಸ ಯೋಜನೆಯನ್ನು ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಟಾನಗೊಳಿಸುತ್ತಿದೆ.

ಇದು ಶೇ. 100ರಷ್ಟು ಕೇಂದ್ರ ಪುರಸ್ಕøತ ಯೋಜನೆಯಾಗಿದ್ದು, ಇದರ ಉದ್ದೇಶವು 11-18 ವರ್ಷದ ಪ್ರಾಯಪೂರ್ವ ಬಾಲಕಿಯರನ್ನು ಸಬಲರನ್ನಾಗಿ ಮಾಡುವುದು.

ಅವರ ಆರೋಗ್ಯ ಮತ್ತು ಪೌಷ್ಟಿಕ ಮಟ್ಟವನ್ನು ಹೆಚ್ಚಿಸುವುದು, ವಿವಿಧ ಕೌಶಲ್ಯಗಳು ಅಂದರೆ ಗೃಹ ಕೌಶಲ್ಯ, ಜೀವನಕೌಶಲ್ಯ, ವೃತ್ತಿ ತರಬೇತಿ ನೀಡಲಾಗುತ್ತಿದೆ.

2015-16ನೇ ಸಾಲಿನಲ್ಲಿ ರಊ. 57.88 ಲಕ್ಷಗಲ ಅನುದಾನವನ್ನು ಕೇಂದ್ರ ಸರ್ಕಾರವು ಒದಗಿಸಿದ್ದು, ಅದಕ್ಕೆ 50% ಪಾಲು ರಾಜ್ಯ ಸರ್ಕಾರವು ನೀಡಬೇಕಾಗಿರುವುದರಿಂದ ಜಿಲ್ಲೆಗಳಿಗೆ ಅನುದಾನ ಮರುಹಂಚಿಕೆಗೊಳಿಸಲಾಗಿರುವುದಿಲ್ಲ.

೩) ಇಂಧನ ಕ್ಷೇತ್ರದಲ್ಲಿ ಸಹಕಾರ: ಭಾರತಕ್ಕೆ ನೈಸರ್ಗಿಕ ಅನಿಲ ರಫ್ತು

ಭಾರತಕ್ಕೆ ನೈಸರ್ಗಿಕ ಅನಿಲ ರಫ್ತು ಮಾಡುವ ಪ್ರಸ್ತಾವಕ್ಕೆ ಸರ್ಕಾರ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ ಎಂದು ಅಮೆರಿಕದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ–ಅಮೆರಿಕ ನಡುವಣ ದ್ವಿಪಕ್ಷೀಯ ಸಹಕಾರದಲ್ಲಿ ಇಂಧನ ಕ್ಷೇತ್ರ ಮಹತ್ವದ್ದಾಗಲಿದೆ ಎಂದೂ ಅವರು ಹೇಳಿದ್ದಾರೆ. ಮುಂದಿನ ವರ್ಷದ ಆರಂಭದ ವೇಳೆಗೆ ನೈಸರ್ಗಿಕ ಅನಿಲ ರಫ್ತು ಆರಂಭಗೊಳ್ಳುವ ನಿರೀಕ್ಷೆ ಇದೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವಧಿಯಲ್ಲಿ ಕೈಗೊಳ್ಳಲಾಗಿದ್ದ ನಿರ್ಧಾರಗಳನ್ನು ತೆಗೆದುಹಾಕುವ ಕಾರ್ಯಾಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಸಹಿ ಹಾಕಲು ಮುಂದಾಗಿರುವ ಸಂದರ್ಭದಲ್ಲೇ ಈ ಹೇಳಿಕೆ ನೀಡಲಾಗಿದೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿ ಪ್ಯಾರಿಸ್‌ ಒಪ್ಪಂದದಲ್ಲಿ ಕೈಗೊಳ್ಳಲಾಗಿರುವ ನಿರ್ಣಯಗಳ ಬಗ್ಗೆ ಟ್ರಂಪ್ ಆಡಳಿತ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಶುದ್ಧ ಇಂಧನ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿ ಭಾರತ ಸೇರಿ ಹಲವು ರಾಷ್ಟ್ರಗಳ ಜತೆಗಿನ ಸಹಕಾರದ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಾತುಕತೆ ನಡೆಸಿದ್ದ ಪ್ರಧಾನ್:

ಅಮೆರಿಕದಿಂದ ನೈಸರ್ಗಿಕ ಅನಿಲ ಆಮದು ಮಾಡುವ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಇಂಧನ ಸಚಿವ ರಿಕ್ ಪೆರ್ರಿ ಜತೆ ಚರ್ಚಿಸಿದ್ದರು.

ಇಂಧನ ಕ್ಷೇತ್ರದಲ್ಲಿ ಭಾರತ–ಅಮೆರಿಕ ನಡುವಣ ಸಹಕಾರ, ನೈಸರ್ಗಿಕ ಅನಿಲ, ತೈಲ ಬಾವಿ ಉದ್ಯಮದಲ್ಲಿ ಭಾರತದ ಹೂಡಿಕೆ ಮತ್ತಿತರ ವಿಷಯಗಳ ಬಗ್ಗೆಯೂ ಸಚಿವರು ಮಾತುಕತೆ ನಡೆಸಿದ್ದರು.

ಭಾರತದ ಕಂಪೆನಿಗಳಿಂದಲೇ ಎಚ್‌1ಬಿ ವೀಸಾ ಹೆಚ್ಚು ಬಳಕೆ

ಎಚ್‌1ಬಿ ವೀಸಾ ಅಡಿ ಉದ್ಯೋಗಿಗಳನ್ನು ನೇಮಿಸುವ ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಅಮೆರಿಕದ ವಲಸೆ ವ್ಯವಸ್ಥೆಯಲ್ಲಿನ ಲೋಪದೊಂದಿಗೆ ಆಟವಾಡಿವೆ ಎಂದು ಅಮೆರಿಕ ಹಿರಿಯ ಸಂಸದ ಡರೆಲ್‌ ಇಸಾ ಆರೋಪಿಸಿದ್ದಾರೆ.

‘ಎಚ್‌1ಬಿ ವೀಸಾ ಯೋಜನೆಯ ಶೇ 75ರಷ್ಟು ಭಾಗವನ್ನು ಭಾರತೀಯರ ಮಾಲೀಕತ್ವದ ಮತ್ತು ಭಾರತೀಯ ಉದ್ಯೋಗಿಗಳೇ ಇರುವ ಕಂಪೆನಿಗಳು ಬಳಸಿಕೊಳ್ಳುತ್ತಿವೆ’ ಎಂದು ಅವರು ಹೇಳಿದ್ದಾರೆ.

ಉದ್ಯೋಗ ಮಾಡುತ್ತಿರುವವರ ಕನಿಷ್ಠ ವೇತನವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಮಸೂದೆಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

೪) ಮನೆ ಬಾಡಿಗೆಗೂ ಜಿಎಸ್‌ಟಿ

ಭೂಮಿ ಗುತ್ತಿಗೆ ಕೊಡುವುದು, ಕಟ್ಟಡಗಳನ್ನು ಬಾಡಿಗೆಗೆ ನೀಡುವುದು   ಮತ್ತು ನಿರ್ಮಾಣ ಹಂತದಲ್ಲಿ ಇರುವ ಮನೆ ಖರೀದಿಗೆ ಪಾವತಿಸುವ ಕಂತುಗಳ ಮೇಲೆ  ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯಗೊಳ್ಳಲಿದೆ.

ಲೋಕಸಭೆಯ ಅನುಮೋದನೆಗಾಗಿ  ಮಾರ್ಚ್ ೨೮ರಂದು  ಮಂಡಿಸಿರುವ ಜಿಎಸ್‌ಟಿ ಪೂರಕ ಮಸೂದೆಗಳಲ್ಲಿ ಈ ವಿವರಗಳು ಅಡಕವಾಗಿವೆ.

ಮಸೂದೆಯಲ್ಲಿರುವ ಅಂಶಗಳೇನು?

ಕೇಂದ್ರ ಸರ್ಕಾರದ (ಸಿ–ಜಿಎಸ್‌ಟಿ) ಅನ್ವಯ, ಭೂಮಿಯ ಬಾಡಿಗೆ, ಗೇಣಿ, ಉಪಭೋಗ, ಭೂ ಸ್ವಾಧೀನ ಅನುಮತಿಯು ಸೇವಾ  ಪೂರೈಕೆಯಾಗಲಿದೆ.

ಜತೆಗೆ, ವಾಣಿಜ್ಯ, ಕೈಗಾರಿಕೆ ಅಥವಾ ವಸತಿ ಸಂಕೀರ್ಣವನ್ನು  ಭಾಗಶಃ ಇಲ್ಲವೆ ಪೂರ್ಣ ಪ್ರಮಾಣದಲ್ಲಿ ಬಾಡಿಗೆ ನೀಡುವುದು ಕೂಡ  ಹೊಸ ತೆರಿಗೆ ವ್ಯವಸ್ಥೆಯಡಿ ಸೇವೆಯ ಪೂರೈಕೆಯಾಗಿರಲಿದೆ.

ನಿರ್ಮಾಣ ಹಂತದಲ್ಲಿ ಇರುವ ಕಟ್ಟಡ ಹೊರತುಪಡಿಸಿ ಭೂಮಿ, ಕಟ್ಟಡ ಮಾರಾಟವು ಸರಕಿನ ಪೂರೈಕೆ ಅಥವಾ ಸೇವೆಯ ಪೂರೈಕೆ  ಎಂದು ಪರಿಗಣಿಸುವುದಿಲ್ಲ.ಹೀಗಾಗಿ ಇಂತಹ ವಹಿವಾಟಿಗೆ ಜಿಎಸ್‌ಟಿ ಅನ್ವಯವಾಗಲಾರದು.

ಭೂಮಿ ಮತ್ತು ಕಟ್ಟಡ ಮಾರಾಟ ವಹಿವಾಟು  ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯಾಗಿರುವ ಜಿಎಸ್‌ಟಿ   ವ್ಯಾಪ್ತಿಯಿಂದ ಹೊರಗೆ ಇರಲಿದೆ.   ಇಂತಹ ವಹಿವಾಟಿನ ಮೇಲೆ ಮುದ್ರಾಂಕ ಶುಲ್ಕ ವಿಧಿಸುವ ಸದ್ಯದ ವ್ಯವಸ್ಥೆ ಮುಂದುವರೆಯಲಿದೆ.

ಈ ಮೊದಲಿನ ಕರಡು ಮಸೂದೆಗಳಲ್ಲಿ ಇದ್ದ ಸರಕು ಮತ್ತು ಸೇವೆಗಳ ವ್ಯಾಖ್ಯಾನಕ್ಕೆ, ಈಗ ಮಂಡಿಸಿರುವ ಪೂರಕ ಮಸೂದೆಗಳು ಸ್ಪಷ್ಟನೆ ನೀಡಿವೆ.‘ಸದ್ಯಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳ ಬಾಡಿಗೆ ಮೇಲೆ ಸೇವಾ ತೆರಿಗೆ ವಿಧಿಸಲಾಗುತ್ತಿದೆ.

ಜಿಎಸ್‌ಟಿಯನ್ನು ವ್ಯಾಜ್ಯ ಮುಕ್ತಗೊಳಿಸಲು ಸರ್ಕಾರ ಸರ್ವ ಪ್ರಯತ್ನ ಮಾಡಬೇಕು’  ಎಂದು ತೆರಿಗೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಜಿಎಸ್‌ಟಿ ಜಾರಿಗೆ ಬರುತ್ತಿದ್ದಂತೆ, ಕೇಂದ್ರೀಯ ಅಬಕಾರಿ, ಸೇವಾ ತೆರಿಗೆ  ರಾಜ್ಯಗಳ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) , ತಯಾರಿಕಾ ಸರಕುಗಳ ಮೇಲಿನ ಪರೋಕ್ಷ ತೆರಿಗೆಗಳು ರದ್ದಾಗಲಿವೆ. ಆದರೆ, ವಿದ್ಯುತ್‌ ತೆರಿಗೆ ರದ್ದುಪಡಿಸಲು ಅವಕಾಶ ಇಲ್ಲ. ಹೀಗಾಗಿ ರಾಜ್ಯ ಸರ್ಕಾರಗಳು ಈ ತೆರಿಗೆ ವಿಧಿಸಬಹುದಾಗಿದೆ. ದೆಹಲಿ ರಾಜ್ಯ ಸರ್ಕಾರವು ಮನೆ, ಅಪಾರ್ಟ್‌ಮೆಂಟ್‌ಗಳ ಮೇಲೆ ವಿದ್ಯುತ್‌ ತೆರಿಗೆ ವಿಧಿಸಲು ವಿನಾಯ್ತಿ ನೀಡಿದೆ.  ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ.

೫) ಕರ್ನಾಟಕದಲ್ಲಿ ದೇಶೀಯ ಪ್ರವಾಸಿಗರಿಗೆ ‘ಸುವರ್ಣ ರಥ’ದಲ್ಲಿ ವಿಶೇಷ ಪ್ಯಾಕೇಜ್

ಕರ್ನಾಟಕದ ಅತ್ಯಂತ ದುಬಾರಿ ರೈಲು ಗೋಲ್ಡನ್ ಚಾರಿಯಟ್(ಸುವರ್ಣ ರಥ)ನ ಪ್ರವಾಸ ದರದಲ್ಲಿ ಕಡಿತ ಮಾಡಿ  ಜನತೆಯ ಕೈಗೆಟಕುವಂತೆ ಮಾಡಲು ಪ್ರವಾಸೋದ್ಯಮ ಇಲಾಖೆ ವಾರಾಂತ್ಯದಲ್ಲಿ ದೇಶೀಯ ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ಸೇವೆ ಒದಗಿಸಲಿದೆ.

ಈ ನಡೆಗೆ ಕಾರಣವೇನು?

ವಾರಾಂತ್ಯದಲ್ಲಿ ಎರಡು ರಾತ್ರಿ ಮತ್ತು ಒಂದು ಹಗಲಿಗೆ ರೈಲಿನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಪ್ರತಿ ವ್ಯಕ್ತಿಗೆ 30,000 ರೂಪಾಯಿ ದರ ವಿಧಿಸುತ್ತದೆ.

ದುಬಾರಿ ದರದಿಂದಾಗಿ ಸುವರ್ಣ ರಥದಲ್ಲಿ ಪ್ರವಾಸ ಮಾಡುವವರ ಸಂಖ್ಯೆ ಕಡಿಮೆ. ಹೀಗಾಗಿ ರೈಲ್ವೆ ಇಲಾಖೆಗೆ ಆಗುತ್ತಿರುವ ನಷ್ಟವನ್ನು ಮನಗಂಡಿರುವ ಪ್ರವಾಸೋದ್ಯಮ ಇಲಾಖೆ ಈ ಬಾರಿ ಬೇಸಿಗೆ ರಜೆಯಲ್ಲಿ ವಾರಾಂತ್ಯದ ದರವನ್ನು ಪ್ರಾಯೋಗಿಕ ಮಾದರಿಯಲ್ಲಿ ಜಾರಿಗೆ ತರುತ್ತಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವ ಯೋಜನೆಯಲ್ಲಿದೆ.

ಪರ್ಯಾಯ ವಾರಗಳಲ್ಲಿ ಎರಡು ಮಾರ್ಗಗಳಿಗೆ ಈ ದರ ಅನ್ವಯವಾಗುತ್ತದೆ.

ಬೆಂಗಳೂರಿನಿಂದ ಮೈಸೂರಿಗೆ ಶ್ರೀರಂಗಪಟ್ಟಣ ಮೂಲಕ ಮತ್ತು ಇನ್ನೊಂದು ಹಂಪಿಯನ್ನು ಒಳಗೊಂಡಿರುತ್ತದೆ.

ಮಾರ್ಚ್ ೨೯ರಂದು  ವಿಧಾನ ಪರಿಷತ್ತಿನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ಪ್ರವಾಸದಲ್ಲಿ ಈ ದರದಲ್ಲಿ ಆಹಾರ ಮತ್ತು ವಸತಿ ಕೂಡ ಒಳಗೊಳ್ಳುತ್ತದೆ.

ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲು ಪ್ರವಾಸೋದ್ಯಮ ಇಲಾಖೆ ಜನತೆಗೆ ಈ ಅನುಕೂಲ ಮಾಡಿಕೊಡುತ್ತಿದೆ ಎಂದರು.

ನಮ್ಮ ಇಲಾಖೆಗೆ ಈ ಬಗ್ಗೆ ಜನರಿಂದ ಮಾಹಿತಿ ಕೇಳಿ ಕರೆಗಳು ಬರುತ್ತಿದ್ದು ಇದು ಯಶಸ್ವಿಯಾದರೆ ಮುಂದುವರಿಸಿಕೊಂಡು ಹೋಗುತ್ತೇವೆ ಎನ್ನುತ್ತಾರೆ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್.

ದಕ್ಷಿಣದ ಹೆಮ್ಮೆ ಎಂಬ ಪ್ರವಾಸ ಏಳು ರಾತ್ರಿಗಳದ್ದಾಗಿದ್ದು, ಪ್ರತಿ ವ್ಯಕ್ತಿಗೆ ಸುಮಾರು 1.8 ಲಕ್ಷ ಖರ್ಚಾಗುತ್ತದೆ. ಅದು ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಸಂಚರಿಸಲಿದೆ. ಈ ಸಂದರ್ಭದಲ್ಲಿ ಹೆಚ್ಚು ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.ಕಳೆದ ಮೂರು ವರ್ಷಗಳಲ್ಲಿ ಸ್ವರ್ಣ ರಥದಲ್ಲಿ ವರ್ಷಕ್ಕೆ 10 ಟ್ರಿಪ್ ಮಾತ್ರ ಆಗಿದ್ದು ಇದರಿಂದ ಇಲಾಖೆಗೆ ಭಾರೀ ನಷ್ಟವುಂಟಾಗಿದೆ. ಕಳೆದ ವರ್ಷ ಶೇಕಡಾ 70ರಷ್ಟು ಸೀಟುಗಳು ಭರ್ತಿಯಾಗಿದ್ದವು. ಆದರೆ ಆದಾಯದಲ್ಲಿ ಭಾರೀ ಕುಸಿತ ಕಂಡುಬಂದಿದೆ.ವರ್ಷಕ್ಕೆ ಕನಿಷ್ಠ 26 ಟ್ರಿಪ್ ಗಳು ಆಗಬೇಕೆನ್ನುವುದು ಇಲಾಖೆಯ ಗುರಿಯಾಗಿದೆ ಎಂದು ಪುಷ್ಕರ್ ಹೇಳುತ್ತಾರೆ.

ರೈಲ್ವೆ ಮತ್ತು ಪ್ರವಾಸೋದ್ಯಮ ಇಲಾಖೆ ಮಧ್ಯೆ ಆದಾಯ ಹಂಚಿಕೆ ಮಾದರಿಯನ್ನು ಅನುಸರಿಸಿದರೆ ನಷ್ಟವನ್ನು ತಪ್ಪಿಸಬಹುದು. ಇದಕ್ಕಾಗಿ ರೈಲ್ವೆ ಇಲಾಖೆ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ