ಆಜೀವ ನಿರ್ಬಂಧಕ್ಕೆ ಆಯೋಗ ಬೆಂಬಲ
ನವದೆಹಲಿ: ಕ್ರಿಮಿನಲ್ ಅಪರಾಧ ಎಸಗಿ, ಶಿಕ್ಷೆಗೆ ಗುರಿಯಾಗುವ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಜೀವನ ಪರ್ಯಂತ ನಿರ್ಬಂಧ ವಿಧಿಸಬೇಕು ಎಂಬ ಬೇಡಿಕೆಗೆ ಕೇಂದ್ರ ಚುನಾವಣಾ ಆಯೋಗ ಬೆಂಬಲ ವ್ಯಕ್ತಪಡಿಸಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗುವ ವ್ಯಕ್ತಿ, ಶಿಕ್ಷೆಯ ಅವಧಿ ಪೂರೈಸಿದ ನಂತರ ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸುವ ಕಾನೂನು ಈಗ ಜಾರಿಯಲ್ಲಿದೆ.
ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಯಾಗಿ ಆಯೋಗ ಪ್ರಮಾಣಪತ್ರ ಸಲ್ಲಿಸಿದೆ.
ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಬೇಕು, ಚುನಾವಣಾ ಸುಧಾರಣೆಗಳು ಬೇಕು ಎಂಬ ಬಗ್ಗೆ ಆಯೋಗ ಸ್ಪಂದನಾಶೀಲವಾಗಿದೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ವಿಚಾರವಾಗಿ ಆಯೋಗವು ವಿಸ್ತೃತ ಪ್ರಸ್ತಾವನೆ ಸಲ್ಲಿಸಿದೆ. ರಾಜಕೀಯವನ್ನು ಕ್ರಿಮಿನಲ್ ಅಪರಾಧಿಗಳಿಂದ ಮುಕ್ತವಾಗಿಸುವುದು, ಮತದಾನಕ್ಕೆ 48 ಗಂಟೆಗಳ ಮೊದಲು ಚುನಾವಣಾ ಜಾಹೀರಾತು ನಿರ್ಬಂಧಿಸುವುದು ಹಾಗೂ ‘ಕಾಸಿಗಾಗಿ ಸುದ್ದಿ’ ನಿಷೇಧಿಸುವುದು ಇದರಲ್ಲಿ ಸೇರಿದೆ ಎಂದು ಆಯೋಗ ವಿವರಣೆ ನೀಡಿದೆ. ‘ನಮ್ಮ ಬಹುತೇಕ ಶಿಫಾರಸುಗಳನ್ನು ಕಾನೂನು ಆಯೋಗವು ತನ್ನ 244 ಹಾಗೂ 255ನೇ ವರದಿಗಳಲ್ಲಿ ಒಪ್ಪಿಕೊಂಡಿದೆ. ಬಹುತೇಕ ಸುಧಾರಣಾ ಕ್ರಮಗಳನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ಗೆ ಆಯೋಗ ತಿಳಿಸಿದೆ. ಕ್ರಿಮಿನಲ್ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಎಂದಿಗೂ ಅವಕಾಶ ನೀಡಬಾರದು ಎಂದು ಉಪಾಧ್ಯಾಯ ಸಲ್ಲಿಸಿರುವ ಮನವಿಗೆ ವಿರೋಧ ಇಲ್ಲ. ಅರ್ಜಿದಾರರ ಆಶಯಕ್ಕೆ ಬೆಂಬಲ ಇದೆ ಎಂದು ಆಯೋಗ ಪ್ರಮಾಣಪತ್ರದಲ್ಲಿ ಹೇಳಿದೆ. ** ಚುನಾವಣಾ ಸುಧಾರಣೆ ಸುತ್ತ
- ಚುನಾವಣೆಯಲ್ಲಿ ಸ್ಪರ್ಧಿಸಲು ಗರಿಷ್ಠ ವಯೋಮಿತಿ, ಕನಿಷ್ಠ ವಿದ್ಯಾರ್ಹತೆ ನಿಗದಿ ಮಾಡಬೇಕು ಎಂಬ ಬಗ್ಗೆ ಶಾಸಕಾಂಗವೇ ತೀರ್ಮಾನಿಸಬೇಕು: ಆಯೋಗ
- ವಯೋಮಿತಿ, ವಿದ್ಯಾರ್ಹತೆಯ ನಿಯಮ ಜಾರಿಗೆ ತರಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಆಯೋಗ ಹೇಳಿದೆ.
- ಕ್ರಿಮಿನಲ್ ಅಪರಾಧಿಗೆ ನ್ಯಾಯಾಂಗ ಹಾಗೂ ಕಾರ್ಯಾಂಗದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಇಲ್ಲ. ಆದರೆ ಈ ನಿಯಮವನ್ನು ಶಾಸಕಾಂಗದಲ್ಲಿ ವಿಭಿನ್ನ ರೀತಿಯಲ್ಲಿ ಅನ್ವಯಿಸಲಾಗಿದೆ ಎಂಬುದು ಅರ್ಜಿದಾರರ ಅಳಲು.
- ಶಿಕ್ಷೆಗೆ ಗುರಿಯಾದ ವ್ಯಕ್ತಿ ಕೂಡ, ಆರು ವರ್ಷಗಳ ನಂತರ ಚುನಾವಣೆ ಸ್ಪರ್ಧಿಸಬಹುದು, ಶಾಸಕ ಅಥವಾ ಸಚಿವ ಆಗಬಹುದು. ಇದು ಸರಿಯಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ