ತಮಿಳುನಾಡು ತಂಡಕ್ಕೆ ದೇವಧರ್ ಟ್ರೋಫಿ
ವಿಶಾಖಪಟ್ಟಣ: ಅನುಭವಿ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ (126) ಅವರ ಶತಕದ ಬಲದಿಂದ ತಮಿಳು ನಾಡು ತಂಡ ಇಂಡಿಯಾ ರೆಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಬುಧವಾರ ಗೆಲುವು ಪಡೆದು ದೇವಧರ್ ಟ್ರೋಫಿಯನ್ನು ಎತ್ತಿಹಿಡಿದಿದೆ.
ವೈ.ಎಸ್.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ತಮಿಳುನಾಡು 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 303 ರನ್ ಕಲೆಹಾಕಿತು.
ಸವಾಲಿನ ಮೊತ್ತ ಬೆನ್ನಟ್ಟಿದ ಇಂಡಿಯಾ ರೆಡ್ ತಂಡ 46.1 ಓವರ್‌ಗಳಲ್ಲಿ 261 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು.
ವಿಫಲ: ಹಿಂದಿನ ಪಂದ್ಯಗಳಲ್ಲಿ ತಂಡದ ಗೆಲುವಿಗೆ ಕಾರಣರಾಗಿದ್ದ ಶಿಖರ್ ಧವನ್(45) ಹಾಗೂ ಕರ್ನಾಟಕದ ಮನೀಷ್ ಪಾಂಡೆ (32) ಉತ್ತಮ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.
ಹರ್‌ಪ್ರೀತ್ ಸಿಂಗ್ (36) ಹಾಗೂ ಗುರುಕೀರತ್ ಸಿಂಗ್ (64) 72 ರನ್‌ಗಳ ಉತ್ತಮ ಜತೆಯಾಟ ನೀಡಿದರು.
ಗುರುಕೀರತ್ 85 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 64 ರನ್ ಕಲೆಹಾಕಿದರು. ತಮಿಳುನಾಡು ತಂಡದ ರಾಹಿಲ್ ಷಾ 40 ರನ್‌ಗಳಿಗೆ ಮೂರು ವಿಕೆಟ್ ಕಬಳಿಸಿ ಮಿಂಚಿದರು.
ಕಾರ್ತಿಕ್ ಅಮೋಘ ಇನಿಂಗ್ಸ್: ಮೊದಲು ಬ್ಯಾಟ್ ಮಾಡಿದ ತಮಿಳು ನಾಡು ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಈ ತಂಡದ ಕೌಶಿಕ್ ಗಾಂಧಿ (16), ಗಂಗಾ ಶ್ರೀಧರ್ ರಾಜು (13) ಬೇಗನೆ ಔಟಾದರು. ಮುರುಗನ್ ಅಶ್ವಿನ್ (0) ಖಾತೆ ತೆರೆಯದೇ ಔಟಾದರು. 11ನೇ ಓವರ್‌ನಲ್ಲಿ 39 ರನ್‌ಗಳಿಗೆ ತಮಿಳುನಾಡು 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಬಳಿಕ ನಾಲ್ಕನೇ ವಿಕೆಟ್‌ನಲ್ಲಿ ನಾರಾಯಣ್ ಜಗದೀಶನ್ (55) ಹಾಗೂ ದಿನೇಶ್ ಕಾರ್ತಿಕ್ (126) 136 ರನ್‌ಗಳ ಅಮೋಘ ಜತೆಯಾಟ ನೀಡಿ ದರು. ಅಲ್ಲದೇ ನಿರ್ಣಾಯಕ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆ ಹಾಕುವಲ್ಲಿ ನೆರವಾದರು. ಇದರಿಂದಾಗಿ ತಮಿಳು ನಾಡು 300ರನ್‌ಗಳ ಗಡಿ ದಾಟಿತು.
ಕಾರ್ತಿಕ್ 91 ಎಸೆತಗಳಲ್ಲಿ 14 ಬೌಂಡರಿ ಹಾಗೂ ಒಂದು ಸಿಕ್ಸರ್‌ಗಳಿಂದ ಕ್ರೀಡಾಂಗಣದಲ್ಲಿ ಮಿಂಚು ಹರಿಸಿದರು. ರೆಡ್ ತಂಡದ ಬೌಲರ್ ಧವಳ್ ಕುಲಕರ್ಣಿ 39 ರನ್‌ಗಳಿಗೆ 5 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರು:
ತಮಿಳುನಾಡು: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 303 (ನಾರಾಯಣ್ ಜಗದೀಶನ್ 55, ದಿನೇಶ್ ಕಾರ್ತಿಕ್ 126; ಧವಳ್ ಕುಲಕರ್ಣಿ 39ಕ್ಕೆ5).
ಇಂಡಿಯಾ ರೆಡ್: 46.1 ಓವರ್‌ಗಳಲ್ಲಿ 261 ( ಶಿಖರ್ ಧವನ್ 45, ಹರ್‌ಪ್ರೀತ್ ಸಿಂಗ್ 36, ಗುರುಕೀರತ್ ಸಿಂಗ್ ಮಾನ್ 64; ರಾಹಿಲ್ ಷಾ 40ಕ್ಕೆ3, ರವಿಶ್ರೀನಿವಾಸನ್ ಸಾಯಿ ಕಿಶೋರ್ 41ಕ್ಕೆ2). ಫಲಿತಾಂಶ: ತಮಿಳುನಾಡು ತಂಡಕ್ಕೆ 42 ರನ್‌ಗಳ ಜಯ. ಪಂದ್ಯಶ್ರೇಷ್ಠ: ದಿನೇಶ್ ಕಾರ್ತಿಕ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ