ಗಾಯಕರು ಸಿಕ್ಕಾಪಟ್ಟೆ ಹಣ ಸಂಪಾದಿಸುತ್ತಾರೆ, ಆದರೆ ಸಂಗೀತ ಸಂಯೋಜಕರಿಗೆ ಗೌರವಧನ ಕೊಡಲ್ಲ!
ಚೆನ್ನೈ: ತಾನು ನಿರ್ದೇಶಿಸಿರುವ ಹಾಡುಗಳನ್ನು ಸಂಗೀತ ಕಾರ್ಯಕ್ರಮಗಳಲ್ಲಿ ಹಾಡಬಾರದು ಎಂದು ಸಂಗೀತ ನಿರ್ದೇಶಕ ಇಳಯರಾಜಾ ಅವರು ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ, ಚರಣ್ ಹಾಗೂ ಗಾಯಕಿ ಚಿತ್ರಾ ಅವರಿಗೆ ನೋಟಿಸ್ ಕಳುಹಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಇಳಯರಾಜಾ ಅವರು ನೋಟಿಸ್ ಕಳುಹಿಸಿರುವ ಬಗ್ಗೆ ಫೇಸ್‌ಬುಕ್‍ನಲ್ಲಿ ಬರೆದುಕೊಂಡಿರುವ ಎಸ್‍ಪಿಬಿ ಈ ವಿಷಯದ ಬಗ್ಗೆ ನನಗೆ ಮೊದಲಿಗೆ ಗೊತ್ತೇ ಇರಲಿಲ್ಲ ಎಂದಿದ್ದಾರೆ.
ಸಂಗೀತಕ್ಷೇತ್ರಕ್ಕೆ ಎಸ್‌ಪಿಬಿಯವರು ಬಂದು 50 ವರ್ಷವಾಗಿರುವ ನೆನಪಿಗೆ 'ಎಸ್‍ಪಿಬಿ 50' ಹೆಸರಿನ ಕಾರ್ಯಕ್ರಮವನ್ನು ವಿಶ್ವದಾದ್ಯಂತ ಹಮ್ಮಿಕೊಂಡಿದ್ದು ಅವರು ಪ್ರವಾಸದಲ್ಲಿದ್ದಾರೆ.
ಕೆಲವು ದಿನಗಳ ಹಿಂದೆ ಇಳಯರಾಜಾ ಅವರ ವಕೀಲರು ನನಗೆ ನೋಟಿಸ್ ನೀಡಿದ್ದಾರೆ. ನನ್ನ ಜತೆ ಗಾಯಕ ಚರಣ್,ಗಾಯಕಿ ಚಿತ್ರಾ ಅವರಿಗೂ ನೋಟಿಸ್ ನೀಡಲಾಗಿದೆ.
ಅಲ್ಲದೆ ಸಂಗೀತ ಕಛೇರಿ ಆಯೋಜಿಸಿರುವ ಆಯೋಜಕರಿಗೂ ನೋಟಿಸ್ ನೀಡಲಾಗಿದೆ. ಇನ್ನು ಮುಂದೆ ನಾವು ಇಳಯರಾಜಾ ಅವರು ನಿರ್ದೇಶಿಸಿದ ಹಾಗೂ ಸಂಯೋಜನೆ ಮಾಡಿದ ಹಾಡುಗಳನ್ನು ಹಾಡುವುದಿಲ್ಲ.ಇಳಯರಾಜಾ ಅವರ ಅನುಮತಿ ಇಲ್ಲದೆ ಹಾಡಿದರೆ ಹಕ್ಕುಸ್ವಾಮ್ಯ ಉಲ್ಲಂಘನೆಯಾಗುತ್ತದೆ ಎಸ್‍ಪಿಬಿ ತಮ್ಮ ಫೇಸ್‍ಬುಕ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ ನನ್ನ ಹಾಡುಗಳನ್ನು ಎಸ್‌ಪಿ ಬಾಲಸುಬ್ರಮಣ್ಯಂ ಹಾಡಬಾರದು: ಇಳಯರಾಜಾ
ಇಳಯರಾಜಾ ಅವರು ಎಸ್‍ಪಿಬಿ ಅವರಿಗೆ ನೋಟಿಸ್ ಕಳಿಸಿರುವ ಸುದ್ದಿ ಹರಡುತ್ತಿದ್ದಂತೆ ಎಸ್‍ಪಿಬಿ ಅಭಿಮಾನಿಗಳು ಇಳಯರಾಜಾ ಅವರ ಮೇಲೆ ಸಿಟ್ಟುಗೊಂಡಿದ್ದಾರೆ. ಇಳಯರಾಜಾ ಅವರು ಈ ರೀತಿ ಮಾಡಿದ್ದು ಸರಿಯಲ್ಲ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿ ಬರುತ್ತಿದೆ.
ಏತನ್ಮಧ್ಯೆ, ಎಸ್‍ಪಿಬಿಯವರು ತಾವು ರಾಜಾ ಸರ್ ಅವರನ್ನು ಗೌರವಿಸುತ್ತೇನೆ. ಯಾರಿಗೂ ನೋವುಂಟು ಮಾಡಬೇಡಿ ಎಂದು ಫೇಸ್‍ಬುಕ್ ಮೂಲಕ ವಿನಂತಿಸಿಕೊಂಡಿದ್ದಾರೆ
ಸಾಮಾಜಿಕ ತಾಣಗಳಲ್ಲಿ ಇಳಯರಾಜಾ ನೋಟಿಸ್ ಬಗ್ಗೆ ಚರ್ಚೆಯಾಗುತ್ತಿದ್ದು, ಇಳಯರಾಜಾ ಅವರು ಯಾಕೆ ಹೀಗೆ ಮಾಡಿದರು ಎಂಬ ಪ್ರಶ್ನೆ ಅಭಿಮಾನಿಗಳದ್ದು.
ಈ ಬಗ್ಗೆ ನ್ಯೂಸ್ ಮಿನಿಟ್ ಮಾಧ್ಯಮದೊಂದಿಗೆ ಮಾತನಾಡಿದ ಇಳಯರಾಜಾ ಅವರ ಕಾಪಿರೈಟ್ಸ್ ಕನ್ಸಲ್ಟೆಂಟ್ (ಹಕ್ಕುಸ್ವಾಮ್ಯ ಸಲಹೆಗಾರ) ಇ. ಪ್ರದೀಪ್ ಅವರು, ಜನರು ಈ ವಿಷಯವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇಳಯರಾಜಾ ಅವರ ಪೂರ್ವಾನುಮತಿ ಪಡೆಯದೆ ಮತ್ತು ಅವರಿಗೆ ಗೌರವಧನ ನೀಡದೆ ಯಾರೊಬ್ಬರೂ ಅವರ ಹಾಡುಗಳನ್ನು ಹಾಡುವಂತಿಲ್ಲ ಎಂದು ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ಸುದ್ದಿಗೋಷ್ಠಿ ಕರೆದು ಇಳಯರಾಜಾ ಅವರು ಹೇಳಿದ್ದರು. ಇದೇನು ಹೊಸ ವಿಷಯವಲ್ಲ. ಆದರೆ ಇದೀಗ ಎಸ್‍ಪಿಬಿ ಅವರೇ ಕಾನೂನು ನೋಟಿಸ್ ಕಳುಹಿಸಿಕೊಡಬೇಕಾದಂತ ಪರಿಸ್ಥಿತಿಯನ್ನು ತಂದಿಟ್ಟಿದ್ದಾರೆ ಎಂದಿದ್ದಾರೆ.
ಇಳಯರಾಜಾ ಅವರು 35 ವರ್ಷಗಳ ಕಾಲ ಅವರು ಸಂಗೀತ ಸಂಯೋಜನೆ ಮಾಡಿ ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಆದರೆ ಅವರಿಗೆ ತಕ್ಕ ಗೌರವಧನ ಯಾವತ್ತೂ ಸಿಗಲಿಲ್ಲ. ಇಳಯರಾಜಾ ಅವರ ಸಂಗೀತವನ್ನು ಬಳಸಿಕೊಂಡು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಆರ್ಕೆಸ್ಟ್ರಾ ಅಥವಾ ಸಂಗೀತಗಾರರು ಗೌರವಧನ ಕೊಡಲಿ ಎಂದು ನಾವು ಒತ್ತಾಯಿಸುತ್ತಿಲ್ಲ. ಆದರೆ ಅವರ ಸಂಗೀತವನ್ನು ಬಳಸಿ ಲಕ್ಷ ಅಥವಾ ಕೋಟಿಗಟ್ಟಲೆ ಸಂಪಾದನೆ ಮಾಡುವ ಗಾಯಕರಲ್ಲಿ ಮಾತ್ರ ನಾವು ಗೌರವಧನಕೊಡಿ ಎಂದು ಕೇಳುತ್ತಿದ್ದೇವೆ. ಎಸ್‌ಪಿಬಿ ಅವರೇನೂ ಸಹಾಯಾರ್ಥ ಸಂಗೀತ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ಅವರು ಭರಪೂರ ಹಣ ಸಂಪಾದನೆ ಮಾಡುತ್ತಿದ್ದರೆ, ಸಂಗೀತ ಸಂಯೋಜಕನಿಗೆ ₹1 ಕೂಡಾ ಸಿಗುತ್ತಿಲ್ಲ. ಸಂಗೀತ ಸಂಯೋಜನೆ ಮಾಡಿದ ವ್ಯಕ್ತಿಯ ಸಾಮರ್ಥ್ಯ ಮತ್ತು ಕಲೆಗೆ ಬೆಲೆ ಬೇಡವೇ?
ಇಳಯರಾಜಾ ಅವರು ಹಲವಾರು ಹಾಡುಗಳ ಹಕ್ಕು ಸ್ವಾಮ್ಯವನ್ನು ಹೊಂದಿದ್ದಾರೆ. ಹೀಗಿರುವಾಗ ಪ್ರಸ್ತುತ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಎಸ್‍ಪಿಬಿ ಅನುಮತಿ ಕೇಳಬೇಕಿತ್ತು. ಅವರಿಬ್ಬರೂ ಗೆಳೆಯರು. ಹೀಗಿರುವಾಗ ಇಳಯರಾಜಾ ಅವರಲ್ಲಿ ಎಸ್‍ಪಿಬಿ ಅನುಮತಿ ಕೇಳಬಹುದಿತ್ತಲ್ಲವೇ?
ಇಂಥಾ ಸಂಗೀತ ಕಛೇರಿ ಮೂಲಕ ಸಿಕ್ಕಿದ ಆದಾಯದಿಂದ ಸಂಗೀತ ಸಂಯೋಜಕರು ಯಾವತ್ತೂ ಹಣ ಕೇಳುವುದಿಲ್ಲ. ಇಂತಿಷ್ಟೇ ಪಾವತಿ ಮಾಡಬೇಕು ಎಂಬ ಒತ್ತಾಯವೂ ಇಲ್ಲ. ಅವರಿಗೆ ಎಷ್ಟು ಹಣ ಕೊಡಲು ಸಾಧ್ಯ ಎಂದು ನಾವೇ ಕೇಳುತ್ತೇವೆ. ನೀವು ಸಂಗೀತ ಸಂಯೋಜಕರ ಬಳಿ ಅನುಮತಿ ಕೇಳಿ ಅವರಿಗೆ ಗೌರವಧನ ಕೊಟ್ಟು ಬಿಡಿ. ಆದರೆ ಯಾರೊಬ್ಬರೂ ₹1 ಕೊಡಲು ಮನಸ್ಸು ಮಾಡಲ್ಲ. ಜನರಿಗೆ ಎಲ್ಲವೂ ಉಚಿತವಾಗಿ ದಕ್ಕಬೇಕು ಅಂತಾರೆ ಪ್ರದೀಪ್.
ತನ್ನ ಪೂರ್ವಾನುಮತಿಯಿಲ್ಲದೆ ಹಾಡುಗಳನ್ನು ಪ್ರಸಾರ ಮಾಡುವಂತಿಲ್ಲ, ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಇಳಯರಾಜಾ ಅವರು 2015ರಲ್ಲಿ ರೇಡಿಯೊ ಸ್ಟೇಷನ್ ಮತ್ತು ಟಿವಿ ವಾಹಿನಿಗಳಿಗೆ ಎಚ್ಚರಿಕೆ ನೀಡಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ