ಶುಕ್ರವಾರ, ಮಾರ್ಚ್ 31, 2017

ಹಣಕಾಸು ಮಸೂದೆಗೆ ಸಮ್ಮತಿ

ಹಣಕಾಸು ಮಸೂದೆಗೆ ಸಮ್ಮತಿ
31 Mar, 2017
ಪ್ರಜಾವಾಣಿ ವಾರ್ತೆ

ನವದೆಹಲಿ: ರಾಜ್ಯಸಭೆ ಸೂಚಿಸಿದ ಐದು ತಿದ್ದುಪಡಿಗಳನ್ನು ತಿರಸ್ಕರಿಸಿರುವ ಲೋಕಸಭೆ, ಮೂಲ ರೂಪದಲ್ಲೇ ‘ಹಣಕಾಸು ಮಸೂದೆ–2017’ ಅನ್ನು ಗುರುವಾರ ಅಂಗೀಕರಿಸಿದೆ.

ಮಸೂದೆಗೆ ಸಮ್ಮತಿ ದೊರಕುವುದರೊಂದಿಗೆ 2017–18ನೇ ಸಾಲಿನ ಬಜೆಟ್‌ಗೆ ಸಂಬಂಧಿಸಿ ಪ್ರಕ್ರಿಯೆಗಳು ಪೂರ್ಣಗೊಂಡಂತಾಗಿದೆ.

ಹಣಕಾಸು ವರ್ಷ (ಏಪ್ರಿಲ್‌ 1) ಆರಂಭಗೊಳ್ಳುವುದಕ್ಕಿಂತಲೂ ಮೊದಲು ಬಜೆಟ್‌ ಅಂಗೀಕಾರಗೊಂಡಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಏಪ್ರಿಲ್‌ 1ರಿಂದ ಮಸೂದೆ ಅನುಷ್ಠಾನಕ್ಕೆ ಬರಲಿದ್ದು, ಅದಕ್ಕೂ ಮೊದಲು ಸರ್ಕಾರ ರಾಷ್ಟ್ರಪತಿ ಅನುಮತಿ ಪಡೆಯಬೇಕಾಗಿದೆ.

ಮಸೂದೆಗೆ ಐದು ತಿದ್ದುಪಡಿಗಳನ್ನು ತರಲು ರಾಜ್ಯಸಭೆ ಬುಧವಾರ ಸಲಹೆ ನೀಡಿತ್ತು. ಮೂರು ತಿದ್ದುಪಡಿಗಳನ್ನು ಕಾಂಗ್ರೆಸ್‌ ಸೂಚಿಸಿದ್ದರೆ, ಇನ್ನೆರಡನ್ನು ಸಿಪಿಎಂ ಮಂಡಿಸಿತ್ತು.

ಆದಾಯ ತೆರಿಗೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಆದೇಶ ಹೊರಡಿಸುವ ಅಧಿಕಾರವನ್ನು ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಿಗೆ ನೀಡಲಾಗಿದೆ. ಹಿಂದೆ ಆಯುಕ್ತರಿಗೆ ಮಾತ್ರ ಈ ಅಧಿಕಾರ ಇತ್ತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್‌, ಕಿರಿಯ ಅಧಿಕಾರಿಗಳಿಗೆ ಅಂತಹ ಅಧಿಕಾರ ಇರಬಾರದು ಎಂದು ತಿದ್ದುಪಡಿಗೆ ಸೂಚಿಸಿತ್ತು.

**

ರಾಜ್ಯಸಭೆ ಸೂಚಿಸಿದ ತಿದ್ದುಪಡಿಗಳು...

* ಶೋಧ ಕಾರ್ಯಾಚರಣೆ  ನಡೆಸಲು ಆದೇಶ ಹೊರಡಿಸುವ ಅಧಿಕಾರವನ್ನು ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಿಗೆ ನೀಡುವ ನಿಯಮ ರದ್ದು ಮಾಡಬೇಕು

* ದಾಳಿ ಅಥವಾ ಶೋಧ ಕಾರ್ಯ ಯಾಕೆ ನಡೆಸಲಾಗುತ್ತಿದೆ ಎಂಬ ಕಾರಣವನ್ನು ದಾಳಿಗೊಳಗಾದ ವ್ಯಕ್ತಿ ಅಥವಾ ಮೇಲ್ಮನವಿ ಪ್ರಾಧಿಕಾರಕ್ಕೆ ಬಹಿರಂಗಪಡಿಸದಿರುವ ಅಧಿಕಾರವನ್ನು ತೆರಿಗೆ ಅಧಿಕಾರಿಗಳಿಗೆ ನೀಡುವುದಕ್ಕಾಗಿ ಐಟಿ ಕಾಯ್ದೆಗೆ ತಿದ್ದುಪಡಿ ತರುವ 3 ನಿಯಮಗಳು ಬೇಡ

* ಕಂಪೆನಿಗಳು ನಡೆಸುವ ಸೇವಾ ಸಂಸ್ಥೆಗಳನ್ನು ನಿಯಂತ್ರಿಸುವ ನಿಯಮಗಳನ್ನು ಇನ್ನಷ್ಟು ಬಲಪಡಿಸುವ ಪ್ರಸ್ತಾವನೆ ಅನಗತ್ಯ

* ಉದ್ಯಮ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗೆ ನಿಗದಿಪಡಿಸಿರುವ ಮಿತಿತೆಗೆದುಹಾಕುವ ನಿಯಮ ಸರಿಯಲ್ಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ