ಗುರುವಾರ, ಮಾರ್ಚ್ 30, 2017

ಮಣಿಪುರ: ವಿಶ್ವಾಸ ಗೆದ್ದ ಬಿರೇನ್ (ಮುಖ್ಯಮಂತ್ರಿ)

ಮಣಿಪುರ: ವಿಶ್ವಾಸ ಗೆದ್ದ ಬಿರೇನ್‌

ಇಂಫಾಲ್‌: ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರ ವಿಶ್ವಾಸಮತ ಗೆದ್ದಿದೆ. ಟಿಎಂಸಿಯ ಏಕೈಕ ಶಾಸಕ ಟಿ. ರವೀಂದ್ರ ಸಿಂಗ್‌ ಕೂಡ ಬಿರೇನ್‌ ಸಿಂಗ್‌ ನೇತೃತ್ವದ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಹಾಗಾಗಿ ಮತ ವಿಭಜನೆ ನಡೆಸದೆ,  ಧ್ವನಿಮತದಿಂದ ವಿಶ್ವಾಸಮತ ಅಂಗೀಕಾರವಾಗಿದೆ ಎಂದು ಘೋಷಿಸಲಾಯಿತು.

60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 21 ಶಾಸಕರನ್ನು ಹೊಂದಿದೆ. ನಾಗಾ ಪೀಪಲ್ಸ್‌ ಫ್ರಂಟ್‌ (ಎನ್‌ಪಿಎಫ್‌), ನ್ಯಾಷನಲ್‌ ಪೀಪಲ್ಸ್‌ ಪಾರ್ಟಿಯ (ಎನ್‌ಪಿಪಿ) ತಲಾ ನಾಲ್ವರು ಮತ್ತು ಲೋಕಜನಶಕ್ತಿ ಪಾರ್ಟಿಯ ಒಬ್ಬ ಶಾಸಕ ವಿಶ್ವಾಸಮತದ ಪರ ಮತ ಹಾಕಿದ್ದಾರೆ.

ಪಕ್ಷೇತರ ಶಾಸಕ ಅಸಬ್‌ ಉದ್ದೀನ್‌ ಮತ್ತು ಬಿರೇನ್‌ ನೇತೃತ್ವದ ಮಂತ್ರಿ ಪರಿಷತ್‌ಗೆ ಸೇರ್ಪಡೆಗೊಂಡಿರುವ ಒಬ್ಬ ಕಾಂಗ್ರೆಸ್‌ ಶಾಸಕ ಕೂಡ ಸರ್ಕಾರವನ್ನು ಬೆಂಬಲಿಸಿದ್ದಾರೆ.

ಟಿಎಂಸಿ ಆಪಾದನೆ: ಸರ್ಕಾರಕ್ಕೆ ಬೆಂಬಲ ನೀಡುವ ವಿಚಾರದಲ್ಲಿ ರವೀಂದ್ರ ಸಿಂಗ್‌ ಅವರು ಪಕ್ಷದ ನಾಯಕತ್ವದ ಜತೆ ಚರ್ಚಿಸಿಲ್ಲ ಎಂದು ಟಿಎಂಸಿ ಆಪಾದಿಸಿದೆ.

ಆದರೆ ಈ ಆಪಾದನೆಯನ್ನು ರವೀಂದ್ರ ಅವರು ಅಲ್ಲಗಳೆದಿದ್ದಾರೆ. ‘ಪಕ್ಷದ ನಾಯಕತ್ವದ ಜತೆ ಸಮಾಲೋಚನೆ ನಡೆಸಿದ ನಂತರವೇ ಈ ನಿರ್ಧಾರ ಕೈಗೊಳ್ಳಲಾಗಿದೆ. ನಾನು ಪಕ್ಷದ ಆದೇಶವನ್ನು ಉಲ್ಲಂಘಿಸಿಲ್ಲ. ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಪಕ್ಷ ಹೇಳಿದ್ದನ್ನೇ ಮಾಡಿದ್ದೇನೆ’ ಎಂದು ರವೀಂದ್ರ ಹೇಳಿದ್ದಾರೆ.

ಪಕ್ಷದ ನಿರ್ಧಾರವನ್ನು ಉಲ್ಲಂಘಿಸಿದ್ದರೆ ತಮ್ಮ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕಿತ್ತು. ಹಾಗೇನೂ ಆಗಿಲ್ಲ. ಪಕ್ಷ ತಮ್ಮ ಜತೆಗೆ ಇದೆ ಎಂಬುದೇ ಅದರ ಅರ್ಥ ಎಂದು ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಲು ರವೀಂದ್ರ ಅವರಿಗೆ ಸೂಚಿಲಾಗಿತ್ತು. ಆದರೆ ಕಾಂಗ್ರೆಸ್‌ಗೆ ಸರ್ಕಾರ ರಚಿಸುವುದು ಸಾಧ್ಯವಾಗಿಲ್ಲ. ನಂತರ ಬಿಜೆಪಿ ಮುಖಂಡರ ಜತೆಗೆ ರವೀಂದ್ರ ಅವರು ರಾಜಭವನಕ್ಕೆ ಹೋಗಿದ್ದಾರೆ ಎಂದು ಟಿಎಂಸಿ ಉಪಾಧ್ಯಕ್ಷ ಮುಕುಲ್‌ ರಾಯ್‌ ಹೇಳಿದ್ದಾರೆ.

‘ರವೀಂದ್ರ ವಿರುದ್ಧ ಯಾವುದೇ ಸಂದರ್ಭದಲ್ಲಿ ಶಿಸ್ತುಕ್ರಮ ಕೈಗೊಳ್ಳಬಹುದು. ಆದರೆ ಅವರ ಜೀವಕ್ಕೆ ಅಪಾಯ ಉಂಟಾಗುವ ಸನ್ನಿವೇಶ ಸೃಷ್ಟಿಸಲು ನಾವು ಬಯಸುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಅವರು ಮಾರ್ಚ್‌ 15ರಂದ ಬಿರೇನ್‌ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ್ದರು. ಆದರೆ ಇದಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿತ್ತು. ಅತಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸನ್ನೇ ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಹೇಳಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ