ಗುರುವಾರ, ಮಾರ್ಚ್ 30, 2017

ಪಾಕ್: ಹಿಂದೂ ವಿವಾಹ ಮಸೂದೆ ಕಾನೂನು ಜಾರಿ

ಪಾಕ್: ಹಿಂದೂ ವಿವಾಹ ಮಸೂದೆ ಕಾನೂನು ಜಾರಿ

ಇಸ್ಲಾಮಾಬಾದ್, ಮಾ. 20: ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳ ವಿವಾಹವನ್ನು ನಿಯಂತ್ರಿಸುವ ಮಸೂದೆಯು, ಅಧ್ಯಕ್ಷ ಮಮ್ನೂನ್ ಹುಸೈನ್ ಸೋಮವಾರ ಸಹಿ ಹಾಕುವುದರೊಂದಿಗೆ ಕಾನೂನಾಗಿದೆ.ಇದರೊಂದಿಗೆ, ಮದುವೆಗಳನ್ನು ನಿಯಂತ್ರಿಸುವುದಕ್ಕಾಗಿ ಪಾಕಿಸ್ತಾನದ ಹಿಂದೂಗಳಿಗೆ ವಿಶಿಷ್ಟ ವೈಯಕ್ತಿಕ ಕಾನೂನೊಂದು ಲಭಿಸಿದಂತಾಗಿದೆ.

‘‘ಪ್ರಧಾನಿ ನವಾಝ್ ಶರೀಫ್‌ರ ಸಲಹೆಯಂತೆ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ್‌ನ ಅಧ್ಯಕ್ಷರು ‘ಹಿಂದೂ ವಿವಾಹ ಮಸೂದೆ 2017’ಕ್ಕೆ ಸಹಿ ಹಾಕಿದ್ದಾರೆ’’ ಎಂದು ಪ್ರಧಾನಿ ಕಚೇರಿಯ ಹೇಳಿಕೆಯೊಂದು ತಿಳಿಸಿದೆ.

ಮದುವೆಗಳು, ಕುಟುಂಬಗಳು, ತಾಯಂದಿರು ಮತ್ತು ಅವರ ಮಕ್ಕಳನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಜೊತೆಗೆ, ಹಿಂದೂ ಕುಟುಂಬಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನೂ ಅದು ರಕ್ಷಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

‘‘ಪಾಕಿಸ್ತಾನದಲಿ ವಾಸಿಸುವ ಹಿಂದೂ ಕುಟುಂಬಗಳ ಮದುವೆಗಳನ್ನು ಊರ್ಜಿತಗೊಳಿಸುವುದಕ್ಕಾಗಿ ರೂಪಿಸಲಾದ ಪ್ರಬಲ ಕಾನೂನಾಗಿದೆ’’ ಎಂದಿದೆ.

ಪಾಕಿಸ್ತಾನದಲ್ಲಿ ವಾಸಿಸುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಮಾನ ಹಕ್ಕುಗಳನ್ನು ನೀಡುವ ಪ್ರಸ್ತಾಪಕ್ಕೆ ತನ್ನ ಸರಕಾರ ಯಾವತ್ತೂ ಆದ್ಯತೆ ನೀಡಿದೆ ಎಂದು ಪ್ರಧಾನಿ ಶರೀಫ್ ಹೇಳಿದರು.

‘‘ಅವರು ಇತರ ಯಾವುದೇ ಸಮುದಾಯದಷ್ಟೇ ದೇಶಪ್ರೇಮಿಗಳು. ಹಾಗಾಗಿ, ಅವರಿಗೆ ಸಮಾನ ರಕ್ಷಣೆಯನ್ನು ನೀಡುವುದು ಸರಕಾರದ ಜವಾಬ್ದಾರಿಯಾಗಿದೆ’’ ಎಂದರು.

ಕಾನೂನಿನ ಪ್ರಕಾರ, ಹಿಂದೂಗಳ ಮದುವೆಗಳ ನೋಂದಣಿಗಾಗಿ ಅವರಿಗೆ ಅನುಕೂಲವೆನಿಸುವ ಸ್ಥಳಗಳಲ್ಲಿ ಸರಕಾರವು ವಿವಾಹ ನೋಂದಣಾಧಿಕಾರಿಗಳನ್ನು ನೇಮಿಸುತ್ತದೆ.

ದಾಂಪತ್ಯ ಹಕ್ಕುಗಳು, ಕಾನೂನುಬದ್ಧವಾಗಿ ಬೇರ್ಪಡುವುದು, ಮದುವೆಗಳನ್ನು ರದ್ದುಗೊಳಿಸುವುದು, ಹೆಂಡತಿ ಮತ್ತು ಮಕ್ಕಳ ಆರ್ಥಿಕ ಭದ್ರತೆ, ಮದುವೆ ರದ್ದಾದರೆ ಪರ್ಯಾಯ ಪರಿಹಾರ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ ಮದುವೆ ರದ್ದುಗೊಳಿಸುವುದು ಮುಂತಾದವುಗಳಿಗೆ ಕಾನೂನು ಅವಕಾಶ ಮಾಡಿಕೊಡುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ