ಇಸ್ರೊ ವಿಜ್ಞಾನಿಗಳಿಗೆ ನಾರಿಶಕ್ತಿ ಪ್ರಶಸ್ತಿ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಿವಿಧ ಯೋಜನೆಗಳಲ್ಲಿ ಮಹತ್ವದ ಪಾತ್ರ ವಹಿಸಿದ ಶುಭಾ ವಾರಿಯರ್, ಬಿ. ಗೋದನಾಯುಕೈ ಮತ್ತು ಅನಟ್ಟಾ ಸೋನಿ ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ‘ನಾರಿ ಶಕ್ತಿ ಪ್ರಶಸ್ತಿ’ ಪ್ರದಾನ ಮಾಡಿದರು.
ಬೀದಿ ಬದಿಯ ಮಹಿಳೆಯರಿಗೆ ಘನತೆಯ ಬದುಕು ಕೊಡಿಸಲು ಕೆಲಸ ಮಾಡುತ್ತಿರುವ ಬೆಂಗಳೂರಿನ ‘ಸಾಧನಾ ಮಹಿಳಾ ಸಂಘ’, ದೇಶದ ಮೊದಲ ಖಾಸಗಿ ಅಭಯಾರಣ್ಯದ ಸಹ ಸಂಸ್ಥಾಪಕಿ ಪಮೇಲಾ ಮಲ್ಹೋತ್ರಾ ಅವರೂ ಇದೇ ಸಂದರ್ಭದಲ್ಲಿ ‘ನಾರಿ ಶಕ್ತಿ ಪ್ರಶಸ್ತಿ’ಯನ್ನು ರಾಷ್ಟ್ರಪತಿಯವರಿಂದ ಸ್ವೀಕರಿಸಿದರು.
ಮಹಿಳೆಯರಿಗಾಗಿ ಅಸಾಮಾನ್ಯ ಸೇವೆ ಸಲ್ಲಿಸಿದ ಒಟ್ಟು 33 ಮಹಿಳೆಯರಿಗೆ ರಾಷ್ಟ್ರಪತಿಯವರು ಈ ಪ್ರಶಸ್ತಿ ಪ್ರದಾನ ಮಾಡಿದರು.
ಸಾಧನಾ ಮಹಿಳಾ ಸಂಘ: 2002ರಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಸಂಘ, ನೋವುಂಡ ಮಹಿಳೆಯರಿಗೆ ನೆರವಿನ ಹಸ್ತ ಚಾಚುತ್ತಿದೆ. ಬೆಂಗಳೂರಿನ ಲೈಂಗಿಕ ವೃತ್ತಿನಿರತರ ಹಕ್ಕುಗಳಿಗಾಗಿ ಹೋರಾಡುತ್ತಿದೆ.
ದುರ್ಬಲ ವರ್ಗಗಳ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು, ಆರೋಗ್ಯ ಸೇವೆಗಳು ದೊರೆಯಬೇಕು ಎಂಬ ನಿಟ್ಟಿನಲ್ಲಿಯೂ ಇದು ಕೆಲಸ ಮಾಡುತ್ತಿದೆ. ಸಂಘವು ಇದುವರೆಗೆ ಮೂರು ಸಾವಿರ ಮಹಿಳೆಯರಿಗೆ ಸಹಾಯ ಹಸ್ತ ಚಾಚಿದೆ.
ಪಮೇಲಾ ಮಲ್ಹೋತ್ರಾ: ಪತಿಯ ಜೊತೆಗೂಡಿ 1991ರಲ್ಲಿ ದಕ್ಷಿಣ ಕೊಡಗಿನಲ್ಲಿ ಬಂಜರು ಭೂಮಿ ಖರೀದಿಸಿದ ಪಮೇಲಾ, ಅದನ್ನು ವನ್ಯಜೀವಿ ಅಭಯಾರಣ್ಯವಾಗಿ ಪರಿವರ್ತಿಸಿದರು. ಇದು 300 ಎಕರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿದೆ. ವನ್ಯಸಂಪತ್ತಿನ ರಕ್ಷಣೆಯೇ ಇವರ ಕೆಲಸ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ