ಗುರುವಾರ, ಮಾರ್ಚ್ 30, 2017

ತಮಿಳುನಾಡಿಗೆ ವಿಜಯ್ ಹಜಾರೆ ಟ್ರೋಫಿ

ತಮಿಳುನಾಡಿಗೆ ವಿಜಯ್‌ ಹಜಾರೆ ಟ್ರೋಫಿ

ನವದೆಹಲಿ : ಅನುಭವಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ (112; 120ಎ, 14ಬೌಂ) ಅವರ ಆಕರ್ಷಕ ಶತಕದ ಬಲದಿಂದ ತಮಿಳುನಾಡು ತಂಡ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದೆ.

ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ  ಫೈನಲ್‌ ಪಂದ್ಯದಲ್ಲಿ ತಮಿಳುನಾಡು ತಂಡ 37ರನ್‌ ಗಳಿಂದ ಬಂಗಾಳ ತಂಡವನ್ನು ಮಣಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಐದನೇ ಪ್ರಶಸ್ತಿ ಎತ್ತಿಹಿಡಿಯಿತು.

ವಿಜಯ್‌ ಶಂಕರ್‌ ಪಡೆ ಏಳು ವರ್ಷಗಳ ಬಳಿಕ ವಿಜಯ್‌ ಹಜಾರೆ ಟ್ರೋಫಿ ಜಯಿಸಿತು. 2009–10ರಲ್ಲಿ ತಂಡ ಕೊನೆಯ ಬಾರಿಗೆ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು. ಆಗಲೂ ಫೈನಲ್‌ನಲ್ಲಿ ಬಂಗಾಳ ತಂಡವನ್ನು ಸೋಲಿಸಿತ್ತು. ಮೊದಲು ಬ್ಯಾಟ್‌ ಮಾಡಿದ ತಮಿಳುನಾಡು 47.2 ಓವರ್‌ಗಳಲ್ಲಿ 217ರನ್‌ ಪೇರಿಸಿತು.
ಸವಾಲಿನ ಗುರಿ ಬೆನ್ನಟ್ಟಿದ ಬಂಗಾಳ ತಂಡ 45.5 ಓವರ್‌ಗಳಲ್ಲಿ 180ರನ್‌ ಗಳಿಸಲಷ್ಟೇ ಶಕ್ತವಾಯಿತು.

ಆರಂಭಿಕ ಆಘಾತ:  ಬ್ಯಾಟಿಂಗ್‌ ಆರಂಭಿಸಿದ ವಿಜಯ್‌ ಶಂಕರ್‌ ಪಡೆ ಆರಂಭಿಕ ಸಂಕಷ್ಟ ಎದುರಿಸಿತು. ತಂಡದ ಮೊತ್ತ 49 ರನ್‌ ಆಗುವಷ್ಟರಲ್ಲಿ ಗಂಗ ಶ್ರೀಧರ್‌ ರಾಜು (4), ಕೌಶಿಕ್‌ ಗಾಂಧಿ (15), ಬಾಬಾ ಅಪರಾಜಿತ್‌ (5) ಮತ್ತು ನಾಯಕ ವಿಜಯ್‌ (2) ಪೆವಿಲಿಯನ್‌ ಸೇರಿ ಕೊಂಡರು. ವೇಗಿ ಅಶೋಕ್‌ ದಿಂಡಾ ಮೂರು ವಿಕೆಟ್‌ ಉರುಳಿಸಿ ಬಂಗಾಳ ತಂಡಕ್ಕೆ ಮೇಲುಗೈ ತಂದುಕೊಟ್ಟರು.

ಈ ಹಂತದಲ್ಲಿ ಕಾರ್ತಿಕ್‌ ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು.   ಬಾಬಾ ಇಂದರ್‌ಜಿತ್‌ (32; 49ಎ, 1ಬೌಂ) ಜೊತೆ ಐದನೇ  ವಿಕೆಟ್‌ಗೆ 85ರನ್‌ ಕಲೆಹಾಕಿದ ಅವರು ಆರನೇ ವಿಕೆಟ್‌ಗೆ ವಾಷಿಂಗ್ಟನ್‌ ಸುಂದರ್‌ (22; 30ಎ, 2ಬೌಂ) ಮತ್ತು ಏಳನೇ ವಿಕೆಟ್‌ಗೆ ಮಹಮ್ಮದ್‌ (10) ಜೊತೆ ಕ್ರಮವಾಗಿ 38 ಮತ್ತು 28ರನ್‌ ಸೇರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಅಮಿರ್‌ ಗನಿ ಬೌಲ್‌ ಮಾಡಿದ 43ನೇ ಓವರ್‌ನ ಮೂರನೇ ಎಸೆತವನ್ನು ಬೌಂಡರಿಗಟ್ಟಿ ಶತಕ ಪೂರೈಸಿದ ಕಾರ್ತಿಕ್‌ 112 ರನ್‌ ಗಳಿಸಿದ್ದ ವೇಳೆ ಮಹಮ್ಮದ್ ಶಮಿಗೆ ವಿಕೆಟ್‌ ಒಪ್ಪಿಸಿದರು. ಗಾಯದಿಂದ ಚೇತರಿಸಿಕೊಂಡ ಬಳಿಕ ಮೊದಲ ಪಂದ್ಯ ಆಡಿದ ಶಮಿ ನಾಲ್ಕು ವಿಕೆಟ್‌ ಪಡೆದು ಬಂಗಾಳ ಪರ ಯಶಸ್ವಿ ಬೌಲರ್‌ ಅನಿಸಿದರು.

ಗುರಿ ಬೆನ್ನಟ್ಟುವ ಹಾದಿಯಲ್ಲಿ ಬಂಗಾಳ ತಂಡ  ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್‌ (1) ಮತ್ತು ಅಗ್ನಿವ್‌ ಪಾನ್‌ (0) ಅವರ ವಿಕೆಟ್‌ ಅನ್ನು ಬೇಗನೆ ಕಳೆದುಕೊಂಡಿತು. ಈ ಹಂತದಲ್ಲಿ ನಾಯಕ ಮನೋಜ್‌ ತಿವಾರಿ (32; 46ಎ, 3ಬೌಂ, 1ಸಿ) ಮತ್ತು ಶ್ರೀವತ್ಸ ಗೋಸ್ವಾಮಿ (23; 46ಎ, 3ಬೌಂ) ತಂಡಕ್ಕೆ ಆಸರೆಯಾಗುವ ಲಕ್ಷಣ ತೋರಿದ್ದರು.

13ನೇ ಓವರ್‌ ಬೌಲ್‌ ಮಾಡಿದ ರಾಹಿಲ್ ಷಾ ಐದನೇ ಎಸೆತದಲ್ಲಿ ಗೋಸ್ವಾಮಿ ವಿಕೆಟ್‌ ಪಡೆದು ಈ ಜೋಡಿಯನ್ನು ಮುರಿದರು.
ವಿಜಯ್‌ ಶಂಕರ್‌ ಬೌಲ್‌ ಮಾಡಿದ 21ನೇ ಓವರ್‌ನ ಐದನೇ ಎಸೆತದಲ್ಲಿ ಮನೋಜ್‌ ಬೌಲ್ಡ್‌ ಆಗಿದ್ದರಿಂದ ತಂಡದ ಗೆಲುವಿನ ಹಾದಿ ಕಠಿಣವಾಯಿತು. ಸುದೀಪ್‌ ಚಟರ್ಜಿ (58; 79ಎ, 5ಬೌಂ) ಅರ್ಧಶತಕ ಸಿಡಿಸಿದ್ದರಿಂದ ಬಂಗಾಳದ ಗೆಲುವಿನ ಆಸೆ ಚಿಗುರೊಡೆ ದಿತ್ತು.  ಅವರ ವಿಕೆಟ್‌ ಪತನವಾದ ಬಳಿಕ ಬಂದ ಆಟಗಾರರು ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ಸಂಕ್ಷಿಪ್ತ ಸ್ಕೋರ್‌: ತಮಿಳುನಾಡು: 47.2 ಓವರ್‌ಗಳಲ್ಲಿ 217 (ಕೌಶಿಕ್‌ ಗಾಂಧಿ 15, ದಿನೇಶ್‌ ಕಾರ್ತಿಕ್‌ 112, ಬಾಬಾ ಇಂದರ್‌ಜಿತ್‌ 32, ವಾಷಿಂಗ್ಟನ್‌ ಸುಂದರ್‌ 22, ಅಶ್ವಿನ್‌ ಕ್ರಿಸ್ಟ್‌ 10; ಅಶೋಕ್‌ ದಿಂಡಾ 36ಕ್ಕೆ3, ಕಾನಿಷ್ಕ್‌ ಸೇಠ್‌ 59ಕ್ಕೆ1, ಮಹಮ್ಮದ್‌ ಶಮಿ 26ಕ್ಕೆ4).

ಬಂಗಾಳ: 45.5 ಓವರ್‌ಗಳಲ್ಲಿ 180 (ಶ್ರೀವತ್ಸ ಗೋಸ್ವಾಮಿ 23, ಮನೋಜ್‌ ತಿವಾರಿ 32, ಸುದೀಪ್‌ ಚಟರ್ಜಿ 58, ಅನುಸ್ತಪ್‌ ಮಜುಂದಾರ್‌ 24, ಅಮೀರ್‌ ಗನಿ 24; ಅಶ್ವಿನ್‌ ಕ್ರಿಸ್ಟ್‌ 23ಕ್ಕೆ2, ಎಂ. ಮಹಮ್ಮದ್‌ 30ಕ್ಕೆ2, ರಾಹಿಲ್‌ ಷಾ 38ಕ್ಕೆ2, ವಿಜಯ್‌ ಶಂಕರ್‌ 20ಕ್ಕೆ1, ಬಾಬಾ ಅಪರಾಜಿತ್‌ 22ಕ್ಕೆ1, ಸಾಯಿ ಕಿಶೋರ್‌ 29ಕ್ಕೆ1).

ಫಲಿತಾಂಶ: ತಮಿಳುನಾಡಿಗೆ 37ರನ್‌ ಗೆಲುವು ಹಾಗೂ ಪ್ರಶಸ್ತಿ.
ಪಂದ್ಯಶ್ರೇಷ್ಠ: ದಿನೇಶ್ ಕಾರ್ತಿಕ್‌.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ