ಸೋಮವಾರ, ಮಾರ್ಚ್ 13, 2017

ಬಾಂಗ್ಲಾ ಭಾರತ ಗಡಿ ಒಪ್ಪಂದ 100 ನೆ ತಿದ್ದುಪಡಿ

ಬಾಂಗ್ಲಾ-ಭಾರತ  ಗಡಿ ಒಪ್ಪಂದ: ಸಂವಿಧಾನಕ್ಕೆ 100ನೇ ತಿದ್ದುಪಡಿ

ದಶಕಗಳಿಂದ ಕಗ್ಗಂಟಾಗಿದ್ದ ಭಾರತ-ಬಾಂಗ್ಲಾ ಗಡಿ ಬಿಕ್ಕಟ್ಟು ಈಗ ಇತಿಹಾಸ. ಉಭಯ ರಾಷ್ಟ್ರಗಳ ನಡುವಿನ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಜತೆಯಲ್ಲೇ ಸ್ನೇಹವನ್ನೂ ಬೆಸೆದಿದ್ದು ಈ ಒಪ್ಪಂದದ ವಿಶೇಷ. ಹುಟ್ಟಿ, ಬೆಳೆದ ಭೂಮಿ, ಅನ್ನ, ನೀರು ಕೊಟ್ಟ ಹೊಲಗದ್ದೆ, ಕೆರೆ, ಝರಿ ಎಲ್ಲವೂ ರಾತ್ರೋ ರಾತ್ರಿ ಅದಲು ಬದಲು. ದಿನದ ಹಿಂದೆ ಭಾರತದಲ್ಲಿದ್ದವರು ಕೆಲವೇ ಗಂಟೆಗಳಲ್ಲಿ ಬಾಂಗ್ಲಾ ನಾಗರಿಕರಾದರೆ, ಬಾಂಗ್ಲಾದಲ್ಲಿ ಹುಟ್ಟಿಬೆಳೆದವರು ಈಗ ಭಾರತದ ಪೌರರು. ಈ ಐತಿಹಾಸಿಕ ಭೂ ಪ್ರದೇಶ ಹಸ್ತಾಂತರ ಪ್ರಕ್ರಿಯೆ ಗಡಿ ಕದನ ನಡೆಸುತ್ತಿರುವ ವಿಶ್ವದ ಇತರೆ ರಾಷ್ಟ್ರಗಳಿಗೂ ಮಾದರಿಯಾಯಿತು.

ವಿಶ್ವದ ಅತ್ಯಂತ ಕಗ್ಗಂಟಿನ ಸಮಸ್ಯೆ ಎಂದೇ ಪರಿಗಣಿಸಲ್ಪಟ್ಟಿದ್ದ ಭಾರತ- ಬಾಂಗ್ಲಾ ಗಡಿ ಸಮಸ್ಯೆಗೆ ಅಧಿಕೃತ ಪರಿಹಾರ ದೊರಕಿದೆ. ಶನಿವಾರ ಮಧ್ಯರಾತ್ರಿ ಐತಿಹಾಸಿಕ ಭೂಪ್ರದೇಶ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು, ಈ ಸಂದರ್ಭ ಉಭಯ ದೇಶಗಳ ಜನರು ಸಂಭ್ರಮಾಚರಣೆ ನಡೆಸಿದರು. ಒಪ್ಪಂದದ ಪ್ರಕಾರ ಬಾಂಗ್ಲಾದೇಶದ 51 ಪರಾವೃತ ಹಳ್ಳಿಗಳು (ಎನ್‌ಕ್ಲೇವ್ಸ್) ಭಾರತದ ವ್ಯಾಪ್ತಿಗೆ ಬಂದಿದ್ದು 14000 ಜನರಿಗೆ ಭಾರತೀಯ ಪೌರತ್ವ ದೊರಕಿದೆ.

ಹಸ್ತಾಂತರ ಪ್ರಕ್ರಿಯೆ ಘೋಷಣೆ ವೇಳೆ ಹಾಜರಿದ್ದ ಅಧಿಕಾರಿಗಳು 111 ಹಳ್ಳಿಗಳಲ್ಲಿ ಬಾಂಗ್ಲಾದೇಶದ ಧ್ವಜ ಹಾಗೂ 51 ಹಳ್ಳಿಗಳಲ್ಲಿ ಭಾರತದ ಧ್ವಜಾರೋಹಣ ನಡೆಸಿದರು. 68 ಮೇಣದ ಬತ್ತಿ ಬೆಳಗುವ ಮೂಲಕ 68 ವರ್ಷಗಳ ಅತಂತ್ರ ಜೀವನವನ್ನು ಸಾಂಕೇತಿಕವಾಗಿ ಬಿಂಬಿಸಲಾಯಿತು. 162 ಹಳ್ಳಿಗಳ ಜನರಿಗೆ ಅಧಿಕೃತ ಪೌರತ್ವ ದೊರಕಿರುವ ಹಿನ್ನೆಲೆಯಲ್ಲಿ ಶಾಲೆ, ಆಸ್ಪತ್ರೆ ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. ಪಡಿತರ ಚೀಟಿ, ಆಧಾರ್‌ಕಾರ್ಡ್‌ನಂಥ ಸೌಲಭ್ಯಗಳೂ ಈ ನಾಗರಿಕರಿಗೆ ಸಿಗಲಿವೆ.

ಗೊಂದಲಕ್ಕೆ ತೆರೆ: ಬ್ರಿಟಿಷ್ ಆಡಳಿತ ಮುಗಿದು ದೇಶ ಸ್ವತಂತ್ರವಾದ ಸಂದರ್ಭ ಸೃಷ್ಟಿಯಾಗಿದ್ದ ಈ ಪ್ರದೇಶಗಳ ಗೊಂದಲ 1971ರ ಬಾಂಗ್ಲಾ-ಪಾಕ್ ಯುದ್ಧದ ಬಳಿಕವೂ ಹಾಗೇ ಮುಂದುವರಿದಿತ್ತು. 1974ರಲ್ಲಿ ಬಾಂಗ್ಲಾದೇಶ ಈ ವಿವಾದ ಬಗೆಹರಿಸುವ ಪ್ರಸ್ತಾಪ ಮಂಡಿಸಿತ್ತು. ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಢಾಕಾಗೆ ಭೇಟಿ ನೀಡಿದ್ದ ಸಂದರ್ಭ ಒಪ್ಪಂದಕ್ಕೆ ಅಂಕಿತ ಹಾಕಿದ್ದರು.

51 ಹಳ್ಳಿಗಳ 14000 ಜನರಿಗೆ ಭಾರತೀಯ ಪೌರತ್ವ111 ಗ್ರಾಮಗಳ 37 ಸಾವಿರ ಜನರು ಈಗ ಬಾಂಗ್ಲಾ ನಾಗರಿಕರು

ಜನಸಂಖ್ಯೆ

2011ರ ಜನಗಣತಿಯ ಪ್ರಕಾರ 162 ಹಳ್ಳಿಗಳ ಒಟ್ಟು ಜನಸಂಖ್ಯೆ 51,549. ಈ ಪೈಕಿ ಬಾಂಗ್ಲಾದ ಪರಾವೃತ ಪ್ರದೇಶಗಳಲ್ಲಿ 14, 215 ಹಾಗೂ ಭಾರತದಲ್ಲಿ 37,334 ಜನರಿದ್ದಾರೆ.

ಬಾಂಗ್ಲಾಗೆ ಹೋಗಲು ಹಿಂಜರಿಕೆ

ಮಾಹಿತಿಯ ಪ್ರಕಾರ ಬಾಂಗ್ಲಾಕ್ಕೆ ಸೇರಿರುವ ಭಾರತದ 111 ಹಳ್ಳಿಗಳ ಒಂದಿಷ್ಟು ನಾಗರಿಕರಿಗೆ ಬಾಂಗ್ಲಾ ಪೌರತ್ವ ಪಡೆಯುವುದು ಇಷ್ಟವಿಲ್ಲ. ಈ ಪೈಕಿ 979 ಮಂದಿ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದು ಇವರಲ್ಲಿ 169 ಮುಸ್ಲಿಮರೂ ಇದ್ದಾರೆ. ಇವರಿಗೆ ನವೆಂಬರ್ ಬಳಿಕ ಪೌರತ್ವ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಎನ್‌ಕ್ಲೇವ್‌ಎಂದರೆ..

ಪರ ದೇಶದ ಗಡಿಯಿಂದ ಸುತ್ತುವರಿದಿರುವ ಪ್ರದೇಶಕ್ಕೆ ಎನ್‌ಕ್ಲೇವ್(ಪರಾವೃತ ಪ್ರದೇಶ) ಎನ್ನಲಾಗುತ್ತದೆ. ಬಾಂಗ್ಲಾದಲ್ಲಿ ಭಾರತದ 111 ಹಾಗೂ ಭಾರತದಲ್ಲಿ ಬಾಂಗ್ಲಾದ 51 ಎನ್‌ಕ್ಲೇವ್‌ಗಳಿದ್ದವು. ಈ 162 ಪ್ರದೇಶಗಳು 18ನೇ ಶತಮಾನದಲ್ಲಿ ಕೂಚ್‌ಬಿಹಾರ್ ಮತ್ತು ರಂಗಾಪುರ ದೊರೆಗಳ ಆಡಳಿತಕ್ಕೆ ಒಳಪಟ್ಟಿದ್ದವು. 1947ರಲ್ಲಿ ಭಾರತ ಸ್ವತಂತ್ರವಾದ ಸಂದರ್ಭ ಎಲ್ಲ ಪ್ರದೇಶಗಳೂ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಂಗಡಣೆಯಾದರೂ ಈ 162 ಹಳ್ಳಿಗಳ ವಿಷಯ ಮಾತ್ರ ಬಗೆಹರಿದಿರಲಿಲ್ಲ. ಹಾಗಾಗಿ ಇಲ್ಲಿ ನೆಲೆಸಿರುವ ನಾಗರಿಕರಿಗೆ ಅಧಿಕೃತವಾಗಿ ಯಾವ ದೇಶದ ಪೌರತ್ವವೂ ಸಿಕ್ಕಿರಲಿಲ್ಲ. ಮೂಲಸೌಕರ್ಯ ಪಡೆಯುವುದಕ್ಕೂ ಇವರು ಕಳ್ಳಹಾದಿ ತುಳಿಯುವ ಅನಿವಾರ್ಯತೆ ಇತ್ತು.

ಬಾಂಗ್ಲಾದಲ್ಲೂ ಗಡಿ ಸಂಭಮ...

ಗಡಿ ಒಪ್ಪಂದದಿಂದ 37000ಕ್ಕೂ ಹೆಚ್ಚು ಬಾಂಗ್ಲಾ ಜನರಿಗೂ ಅನುಕೂಲವಾಗಿದೆ. ‘ಹಿಂದೆ ಗುರುತಿನ ಚೀಟಿಯೂ ಇರಲಿಲ್ಲ. ಕೆಲಸ ಹುಡುಕಿಕೊಂಡು ಭಾರತಕ್ಕೆ ಹೋಗುತ್ತಿದ್ದೆವು. ಆ ಸಂದರ್ಭ ನಕಲಿ ಗುರುತುಪತ್ರಗಳನ್ನು ಮಾಡಿಸಿಕೊಳ್ಳಬೇಕಾಗುತ್ತಿತ್ತು. ಆದರೆ ಇನ್ನು ಮುಂದೆ ನಾವು ಬಾಂಗ್ಲಾ ನಾಗರಿಕರು. ಹಾಗಾಗಿ ಆ ಅನಿವಾರ್ಯತೆ ಇಲ್ಲ ಎಂದು ಸಂತಸ ಹಂಚಿಕೊಂಡಿದ್ದಾರೆ.

ಒಪ್ಪಂದದ ಪರಿಣಾಮ

ಭಯೋತ್ಪಾದಕರ ಒಳನುಸುಳುವಿಕೆಗೆ ತಡೆಗೆ ಸಹಕಾರಿ ಉಭಯ ದೇಶಗಳ ಗಡಿ ರಕ್ಷಣಾ ಪಡೆ ಸಿಬ್ಬಂದಿಗೂ ಅನುಕೂಲ ಮೂಲಸೌಕರ್ಯ ಕಲ್ಪಿಸಲು ಅನುಕೂಲ ಉಗ್ರರ ನಿಗ್ರಹ ಕಾರ್ಯಾಚರಣೆಗೂ ಪೂರಕ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ನೆಲೆಸುವುದಕ್ಕೆ ಸಹಕಾರಿಯಾಗಲಿದೆ. ಪುನರ್ವಸತಿ ವ್ಯವಸ್ಥೆ ಏರ್ಪಟ್ಟು ನಾಗರಿಕರ ಬವಣೆ ತಪ್ಪಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ