ಭಾನುವಾರ, ಏಪ್ರಿಲ್ 2, 2017

ಮದ್ಯಪ್ರದೇಶದಲ್ಲಿ ವಿದ್ಯುನ್ಮಾನ ಮತಯಂತ್ರ ಪರೀಕ್ಷೆ

ಮಧ್ಯಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ಸಂದರ್ಭ ಎಲ್ಲ ಮತಗಳನ್ನೂ ಬಿಜೆಪಿಗೆ ದಾಖಲಿಸಿದ ಇವಿಎಂ

ಭೋಪಾಲ,ಎ.1: ಮಧ್ಯಪ್ರದೇಶದಲ್ಲಿ ಶನಿವಾರ ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ವೊಂದು ಮತಗಳನ್ನು ನಿರ್ದಿಷ್ಟ ಪಕ್ಷಕ್ಕೇ ನೀಡಿದೆ ಎಂದು ವರದಿಯಾಗಿದ್ದು, ಇದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಅಂತಿಮ ಸುತ್ತಿನ ಮತದಾನದಲ್ಲಿ ಇವಿಎಂಗಳಲ್ಲಿ ಕೈವಾಡದಿಂದಾಗಿ ಮತಗಳು ಬಿಜೆಪಿ ಪರವಾಗಿ ಚಲಾವಣೆಯಾಗಿದ್ದವು ಎಂಬ ವಿರೋಧ ಪಕ್ಷಗಳ ಆರೋಪಗಳಿಗೆ ಹೊಸಬಲವನ್ನು ನೀಡಿದೆ.

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ಮುನ್ನ ರಾಜ್ಯ ಚುನಾವಣಾಧಿಕಾರಿಗಳು ಪತ್ರಕರ್ತರಿಗಾಗಿ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆಯ ವೀಡಿಯೊವನ್ನು ವೀಕ್ಷಿಸಿದ ಬಳಿಕ ಚುನಾವಣಾ ಆಯೋಗವು ಭಿಂಡಿ ಜಿಲ್ಲಾ ಚುನಾವಣಾಧಿಕಾರಿಗಳಿಂದ ವಿವರವಾದ ವರದಿಯನ್ನು ಕೇಳಿದೆ.

ಇವಿಎಂಗಳಲ್ಲಿ ಅಳವಡಿಸಲಾಗುವ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೇಲ್(ವಿವಿಪಿಎಟಿ) ಅಥವಾ ಮುದ್ರಿತ ರಸೀದಿ ವ್ಯವಸ್ಥೆಯ ಮೂಲಕ ಮತದಾರ ತಾನು ಒತ್ತಿದ ಮತ ತಾನು ಆಯ್ಕೆ ಮಾಡಿದ್ದ ಪಕ್ಷಕ್ಕೇ ಬಿದ್ದಿದೆ ಎನ್ನುವುದನ್ನು ಹೇಗೆ ಖಚಿತ ಪಡಿಸಿಕೊಳ್ಳಬಹುದು ಎಂಬ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು ಎಂದು ಸುದ್ದಿಗಾರರಿಗೆ ತಿಳಿಸಿದ ಮುಖ್ಯ ಚುನಾವಣಾಧಿಕಾರಿ ಶಾಲಿನಾ ಸಿಂಗ್ ಅವರು, ಎರಡೂ ಸಂದರ್ಭಗಳಲ್ಲಿ ಮತಗಳು ಬಿಜೆಪಿ ಪರವಾಗಿಯೇ ದಾಖಲಾಗಿದ್ದವು ಎನ್ನುವುದನ್ನು ತಿರಸ್ಕರಿಸಿದರು.
ಆದರೆ ಇದು ಇವಿಎಂಗಳ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆಗಳನ್ನೆತ್ತುತ್ತಿರುವ ವಿರೋಧ ಪಕ್ಷಗಳಿಗೆ ತೃಪ್ತಿಯನ್ನು ನೀಡಿಲ್ಲ.

ಮತದಾರ ಮತದಾನದ ಗುಂಡಿಯನ್ನು ಅದುಮಿದಾಗ ಆತ ಯಾವ ಪಕ್ಷಕ್ಕೆ ಮತ ಚಲಾಯಿಸಿದ್ದಾನೋ ಆ ಪಕ್ಷದ ಚುನಾವಣಾ ಚಿಹ್ನೆ ಮುದ್ರಿತಗೊಂಡಿರುವ ರಸೀದಿಯನ್ನು ವಿವಿಪಿಎಟಿ ಪ್ರದರ್ಶಿಸುತ್ತದೆ. ಪೆಟ್ಟಿಗೆಯೊಂದರಲ್ಲಿ ಅದು ಬೀಳುವ ಮುನ್ನ ಚಿಹ್ನೆಯನ್ನು ಖಚಿತ ಪಡಿಸಿಕೊಳ್ಳಲು ಏಳು ಸೆಕಂಡ್‌ಗಳ ಕಾಲಾವಕಾಶ ಮತದಾರನಿಗಿರುತ್ತದೆ.

ವರದಿಯ ಬೆನ್ನಲ್ಲೇ ದಿಲ್ಲಿಯಲ್ಲಿನ ಚುನಾವಣಾ ಆಯೋಗದ ಕಚೇರಿಗೆ ಧಾವಿಸಿದ ಕಾಂಗ್ರೆಸ್ ಮತ್ತು ಆಪ್‌ನ ಹಿರಿಯ ನಾಯಕರು ಇವಿಎಂಗಳ ಕುರಿತ ತಮ್ಮ ಕಳವಳಗಳನ್ನು ಪುನರುಚ್ಚರಿಸಿದರು. ಇವಿಎಂನ ತಟಸ್ಥತೆಯ ಕುರಿತ ಪ್ರಶ್ನೆಗಳನ್ನು ಆಯೋಗವು ಈ ಹಿಂದೆ ತಳ್ಳಿಹಾಕಿತ್ತು.

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಬಳಿಕ ಇವಿಎಂಗಳಲ್ಲಿ ಕೈವಾಡ ನಡೆದಿರುವ ಬಗ್ಗೆ ಬಿಎಸ್‌ಪಿ ನಾಯಕಿ ಮಾಯಾವತಿ ಮೊದಲು ಶಂಕೆ ವ್ಯಕ್ತಪಡಿಸಿದ್ದರು. ಆಪ್,ಎಸ್ಪಿ ಮತ್ತು ತೃಣಮೂಲ ಕಾಂಗ್ರೆಸ್ ಸಹ ಇದಕ್ಕೆ ಧ್ವನಿಗೂಡಿಸಿದ್ದವು.

ಇವಿಎಂಗಳ ಕುರಿತು ಎತ್ತಲಾಗಿರುವ ಶಂಕೆಗಳ ಬಗ್ಗೆ ತನಿಖೆ ನಡೆಯಲೇಬೇಕು ಎಂದು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಹೇಳಿದರು. ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರ ಜೊತೆ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದ ಸಿಂದಿಯಾ, ಈ ಬಗ್ಗೆ ತಾನು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಆಯೋಗವು ಭರವಸೆ ನೀಡಿದೆ ಎಂದು ತಿಳಿಸಿದರು.
ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸಲೇಬಾರದು ಎಂದು ಸಿಂಗ್ ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ