ಸೋಮವಾರ, ಏಪ್ರಿಲ್ 3, 2017

ಮಿಯಾಮಿ ಓಪನ್ ಫೈನಲ್

ಮಿಯಾಮಿ ಓಪನ್ ಫೈನಲ್‍ನಲ್ಲಿ ನಡಾಲ್‍ ವಿರುದ್ಧ ಫೆಡರೆರ್‍ಗೆ ರೋಚಕ ಗೆಲುವು

ಮಿಯಾಮಿ (ಅಮೆರಿಕ), ಏ.3-ಮಿಯಾಮಿ ಓಪನ್ ಟೆನಿಸ್ ಫೈನಲ್‍ನಲ್ಲಿ ಸ್ವಿಟ್ಜರ್‍ಲೆಂಡ್‍ನ ರೋಜರ್ ಫೆಡರೆರ್ ತಮ್ಮ ಬಹುಕಾಲದ ಪ್ರತಿಸ್ಪರ್ಧಿ ಸ್ಪೇನ್‍ನ ರಫಾಯಿಲ್ ನಡಾಲ್‍ರನ್ನು ಮಣಿಸಿ ರೋಚಕ ಗೆಲುವು ದಾಖಲಿಸಿದ್ದಾರೆ. ನಡಾಲ್ ವಿರುದ್ಧ 6-3, 6-4ರಿಂದ ಗೆಲುವು ಸಾಧಿಸಿ ಫೆಡರೆರ್ ಈ ವರ್ಷದಲ್ಲೂ ಜೈತ್ರಯಾತ್ರೆಯನ್ನು ಮುಂದುವರಿಸಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಆರು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದ ಫೆಡರೆರ್ ಇತ್ತೀಚೆಗಷ್ಟೇ ಟೆನಿಸ್ ಅಂಕಣಕ್ಕೆ ಹಿಂದಿರುಗಿದ್ದರು. ಈಗಾಗಲೇ ಆಸ್ಟ್ರೇಲಿಯನ್ ಓಪನ್ ಮತ್ತು ಇಂಡಿಯನ್ ವೆಲ್ಸ್ ಪಂದ್ಯಾವಳಿಗಳಲ್ಲಿ ವಿಜಯಿಯಾಗಿರುವ ಸ್ವಿಸ್ ಆಟಗಾರ ಈ ವರ್ಷ 19-1ರಲ್ಲಿ ಗೆಲುವಿನ ಮುನ್ನಡೆ ಸಾಧಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್‍ನಲ್ಲಿ ನಡಾಲ್ ವಿರುದ್ಧ ಐದು ಸೆಟ್‍ಗಳಿಂದ ವಿಜೇತರಾಗಿದ್ದ ಫೆಡರೆರ್ ಈ ಫೈನಲ್ ಪಂದ್ಯದಲ್ಲೂ ಸ್ಪೇನ್ ಆಟಗಾರನಿಗೆ ಸೋಲಿನ ಕಹಿ ಅನುಭವ ನೀಡಿದರು.
  ಫೈನಲ್‍ನಲ್ಲಿ ಜಯಗಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ರೋಚಕ ಗೆಲುವು. ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಾಗಿದೆ ಎಂದು ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ