ಕಾಯಂ ಆಯ್ತು ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧದ ತೀರ್ಪು
ನವದೆಹಲಿ, ಮಾರ್ಚ್ 30: ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯದಂಗಡಿಗಳ ನಡುವಿನ ದೂರವನ್ನು 500 ಮೀ.ಗಳಿಗೆ ನಿಗದಿಗೊಳಿಸಿ ನೀಡಿದ್ದ ತನ್ನ ತೀರ್ಪು ಪುನರ್ ಪರಿಶೀಲಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಇದಲ್ಲದೆ, ಈ ಮದ್ಯದಂಗಡಿಗಳ ಪರವಾನಗಿಯನ್ನು ಏ. 1ರ ನಂತರ ನವೀಕರಣಗೊಳಿಸದಿರುವಂತೆಯೂ ಸುಪ್ರೀಂ ಕೋರ್ಟ್ ಸ್ಪಷ್ಟ ನುಡಿಗಳಲ್ಲಿ ಹೇಳಿರುವುದರಿಂದ ಏ. 1ರಿಂದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಆಸುಪಾಸಿನ ಪ್ರಾಂತ್ಯಗಳಲ್ಲಿರುವ ಪರಸ್ಪರ 500 ಮೀ. ಅಂತರದೊಳಗಿರುವ ಮದ್ಯ ಮಾರಾಟದ ಅಂಗಡಿಗಳು ಎತ್ತಂಗಡಿಯಾಗಲಿವೆ.[ಟ್ರಿಪಲ್ ತಲಾಖ್ ಪ್ರಕರಣ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ]
ಕಳೆದ ವರ್ಷ ಡಿಸೆಂಬರ್ 15ರಂದು ಸುಪ್ರೀಂ ಕೋರ್ಟ್ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿನ ಮದ್ಯದಂಗಡಿಗಳ ನಡುವಿನ ಅಂತರವನ್ನು500 ಮೀ.ಗಳಿಗೆ ಹೆಚ್ಚಿಸಿ ತೀರ್ಪು ನೀಡಿತ್ತು.
ಆದರೆ, ಈ ಬಗ್ಗೆ ಕೇರಳ, ತೆಲಂಗಾಣ ಹಾಗೂ ಪಂಬಾಜ್ ರಾಜ್ಯಗಳ ಮದ್ಯ ಮಾರಾಟಗಳ ಒಕ್ಕೂಟಗಳು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ, ಆದೇಶವನ್ನು ಮರುಪರಿಶೀಲಿಸಬೇಕು ಹಾಗೂ ಮದ್ಯದಂಗಡಿಗಳ ಅಂತರವನ್ನು 500 ಮೀ.ಗಳಿಗಿಂತಲೂ ಕಡಿಮೆ ಮಾಡಬೇಕೆಂದು ಕೋರಿದ್ದವು.
ಸರ್ಕಾರದ ಪರವಾಗಿ ಮನವಿ ಮಾಡಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಕೂಡಾ, ಈ ಅಂತರ ಕಡಿಮೆ ಮಾಡಬೇಕೆಂದು ಕೋರಿದ್ದರು.
ಈ ಮನವಿಗಳನ್ನು ಮಾರ್ಚ್ 29ರಂದು ವಿಚಾರಣೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಗುರುವಾರಕ್ಕೆ (ಮಾರ್ಚ್ 30) ಮುಂದೂಡಿತ್ತು.
ಗುರುವಾರದ ವಿಚಾರಣೆ ವೇಳೆ, ಮದ್ಯ ಮಾರಾಟಗಾರರ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿತಲ್ಲದೆ, ಜನರ ಜೀವಕ್ಕಿಂತ ಯಾವುದೂ ದೊಡ್ಡದಲ್ಲ ಎಂದು ಹೇಳಿತು.
ಇದರ ಅನ್ವಯ, ಹೆದ್ದಾರಿಗಳಲ್ಲಿನ ಮದ್ಯ ಮಾರಾಟವು ಇನ್ನು ಅರ್ಧ ಕಿ.ಮೀಗಳಿಗೊಂದರಂತೆ ಲಭ್ಯವಾಗಲಿದೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ