ಭಾನುವಾರ, ಏಪ್ರಿಲ್ 2, 2017

ಆಧಾರ ದತ್ತಾಂಶ ಸೋರಿಕೆಯನ್ನು ಒಪ್ಪಿಕೊಂಡ ಸರಕಾರ

ಆಧಾರ ದತ್ತಾಂಶ ಸೋರಿಕೆಯನ್ನು ಒಪ್ಪಿಕೊಂಡ ಸರಕಾರ

ಚೆನ್ನೈ,ಮಾ.31: ನೀವು ಆಧಾರ್ ಕಾರ್ಡ್ ಹೊಂದಿದ್ದರೆ ಮತ್ತು ನಿಮ್ಮ ಬ್ಯಾಂಕ್ ಖಾತೆಗಳು, ಇತರ ಸೂಕ್ಷ್ಮ ಮಾಹಿತಿಗಳು ಅದರೊಂದಿಗೆ ಜೋಡಣೆಗೊಂಡಿದ್ದರೆ ನಿಮ್ಮ ದತ್ತಾಂಶಗಳು ಸೋರಿಕೆಯಾಗುವ ಸಾಧ್ಯತೆಗಳಿವೆ.

ಆಧಾರ್ ಮಾಹಿತಿಗಳು ಸೋರಿಕೆಯಾಗುತ್ತಿವೆ ಎನ್ನುವುದನ್ನು ಮೋದಿ ಸರಕಾರವು ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ.

ಆಧಾರ ಮಾಹಿತಿಗಳ ಸೂಕ್ಷತೆಯ ಕುರಿತು ಎಲ್ಲ ಎಚ್ಚರಿಕೆಗಳು ಮತ್ತು ಟೀಕೆಗಳನ್ನು ತೀರ ಇತ್ತೀಚಿನವರೆಗೂ ಕಡೆಗಣಿಸುತ್ತಲೇ ಬಂದಿದ್ದ ಸರಕಾರವು ಹಲವಾರು ಸೇವೆಗಳಿಗೆ ಆಧಾರ ಅಳವಡಿಕೆಗೆ ಒತ್ತು ನೀಡುತ್ತಲೇ ಇತ್ತು.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಬರೆದಿರುವ ಪತ್ರವೊಂದು ಪ್ರಮುಖ ಆಂಗ್ಲ ದೈನಿಕಕ್ಕೆ ಲಭ್ಯವಾಗಿದ್ದು, ಸರಕಾರವು ತುಂಬ ಎಚ್ಚರಿಕೆಯಿಂದ ಕಾಯುತ್ತಿರುವ ಆಧಾರ ದತ್ತಾಂಶಗಳು ಸೋರಿಕೆಯಾಗಿರುವುದನ್ನು ಈ ಪತ್ರವು ದೃಢಪಡಿಸಿದೆ.

ಸಚಿವಾಲಯದಲ್ಲಿ ಹಿರಿಯ ಅಧಿಕಾರಿಯಾಗಿರುವ ವಿಜ್ಞಾನಿ ಅರ್ಚನಾ ದುರೇಜಾ ಅವರು ಮಾ.25ರಂದು ಬರೆದಿರುವ ಈ ಪತ್ರದಲ್ಲಿ ದತ್ತಾಂಶ ಸೋರಿಕೆಯು ಗಂಭೀರ ಮತ್ತು ದಂಡನೀಯ ಅಪರಾಧವಾಗಿದೆ ಎಂದು ಹೇಳಿದ್ದಾರೆ.

ಹೆಸರು, ಜನ್ಮದಿನಾಂಕ, ವಿಳಾಸ ಇತ್ಯಾದಿಗಳೊಂದಿಗೆ ಆಧಾರ್ ಸಂಖ್ಯೆಯಂತಹ ಮಾಹಿತಿಯನ್ನು ಬಹಿರಂಗಗೊಳಿಸುವದು ಆಧಾರ್ ಕಾಯ್ದೆ, 2016ರ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಇದಕ್ಕಾಗಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಇಂತಹ ತಪ್ಪೆಸಗುವವರು ಸಂತ್ರಸ್ತ ವ್ಯಕ್ತಿಗಳಿಗೆ ಪರಿಹಾರದ ರೂಪದಲ್ಲಿ ನಷ್ಟಗಳನ್ನು ಪಾವತಿಸಲು ಬಾಧ್ಯರಾಗಿರುತ್ತರೆ ಎಂದು ಹೇಳಿರುವ ದುರೇಜಾ, ಇಂತಹ ಯಾವುದೇ ವಿಷಯವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಸಚಿವಾಲಯಗಳು ಮತ್ತು ರಾಜ್ಯಗಳಿಗೆ ಪತ್ರದ ಮೂಲಕ ನಿರ್ದೇಶ ನಿಡಿದ್ದಾರೆ.

ವ್ಯಂಗ್ಯವೆಂದರೆ ಇದೇ ಸಚಿವಾಲಯವು ಮಾ.5ರಂದು ಹೇಳಿಕೆಯೊಂದನು ಹೊರಡಿಸಿ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ)ದ ಬಳಿಯಿರುವ ವ್ಯಕ್ತಿಗಳ ಖಾಸಗಿ ಮಾಹಿತಿಗಳು ಸಂಪೂರ್ಣ ಸುರಕ್ಷಿತ ಮತ್ತು ಸುಭದ್ರವಾಗಿವೆ ಎಂದು ಭರವಸೆ ನೀಡಿತ್ತು. ಆಧಾರ್ ಮಾಹಿತಿ ಸೋರಿಕೆ, ಬಯೊಮೆಟ್ರಿಕ್ಸ್‌ನ ದುರುಪಯೋಗ, ಖಾಸಗಿತನದ ಉಲ್ಲಂಘನೆ ಮತ್ತು ಸಮಾನಾಂತರ ದತ್ತಾಂಶ ಸಂಚಯ ಸೃಷ್ಟಿಯನ್ನು ಆರೋಪಿಸಿದ್ದ ‘‘ಕೆಲವು ಮಾಧ್ಯಮ ವರದಿಗಳಲ್ಲಿನ ಸುಳ್ಳುಮಾಹಿತಿಗಳ ’’ಕುರಿತಂತೆ ಸ್ಪಷ್ಟನೆಯನ್ನು ನೀಡಿದ್ದ ಯುಐಡಿಎಐ, ಎಲ್ಲ ವರದಿಗಳನ್ನು ತಾನು ಪರಿಶೀಲಿಸಿದ್ದೇನೆ ಮತ್ತು ಯಾವುದೇ ದತ್ತಾಂಶ ಸೋರಿಕೆಯಾಗಿಲ್ಲ ಎಂದು ಒತ್ತಿ ಹೇಳಿತ್ತು.

ಇಂತಹ ದತ್ತಾಂಶ ಸೋರಿಕೆ ಸಂದರ್ಭದಲ್ಲಿ ಅದನ್ನು ನಿರ್ವಹಿಸಲು ಸರಕಾರದ ಸನ್ನದ್ಧತೆಗೆ ಸಂಬಂಧಿಸಿದಂತೆ ಮಾಜಿ ವಿತ್ತಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಬುಧವಾರ ಸಂಸತ್ತಿನಲ್ಲಿ ಪ್ರಶ್ನೆಗಳನ್ನೆತ್ತಿದ್ದರು.

ಬ್ಯಾಂಕ್ ಮತ್ತು ಇತರ ವಹಿವಾಟುಗಳು ಆಧಾರ್‌ನೊಂದಿಗೆ ಜೋಡಣೆಗೊಂಡ ನಂತರ ವ್ಯಕ್ತಿಗಳ ಖಾಸಗಿತನವನ್ನು ರಕ್ಷಿಸುವ ಬಗ್ಗೆ ನಿಮ್ಮ ಸಿದ್ಧತೆಗಳೇನು ಎಂದು ಅವರು ಸರಕಾರವನ್ನು ಪ್ರಶ್ನಿಸಿದ್ದರು.
ಇತ್ತೀಚಿಗಷ್ಟೇ ಕ್ರಿಕೆಟಿಗ ಎಂ.ಎಸ್.ಧೋನಿಯವರ ಪತ್ನಿ ಸಾಕ್ಷಿ ತನ್ನ ಪತಿಯ ಆಧಾರ ಮಾಹಿತಿಗಳು ಬಹಿರಂಗಗೊಂಡಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದರು.
ಧೋನಿಯವರ ಆಧಾರ್ ಸಂಖ್ಯೆಯನ್ನು ಸೃಷ್ಟಿಸಿದ್ದ ಏಜನ್ಸಿಯನ್ನು 10 ವರ್ಷಗಳ ಅವಧಿಗೆ ಕಪ್ಪುಪಟಿಗೆ ಸೇರಿಸಿರುವುದಾಗಿ ಹೇಳಿದ್ದ ಸರಕಾರವು, ಇದೊಂದು ಬಿಡಿ ಘಟನೆಯಷ್ಟೇ ಎಂದು ಸಮಜಾಯಿಷಿ ನೀಡಿತ್ತು. ಆದರೆ ದುರೇಜಾರ ಪತ್ರವು ಸೋರಿಕೆ ವ್ಯಾಪಕವಾಗಿರಬಹುದು ಎನ್ನುವುದನ್ನು ಸ್ಪಷ್ಟಪಡಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ