ಭಾನುವಾರ, ಏಪ್ರಿಲ್ 2, 2017

ಎಂಟು ಒಪ್ಪಂದಕ್ಕೆ ಭಾರತ - ಮಲೇಷ್ಯಾ ಸಹಿ

ಎಂಟು ಒಪ್ಪಂದಕ್ಕೆ ಭಾರತ - ಮಲೇಷ್ಯಾ ಸಹಿ

ನವದೆಹಲಿ: ಭಾರತದಲ್ಲಿನ ಮದರಸಾಗಳ ಆಧುನೀಕರಣಕ್ಕೆ ನೆರವು ನೀಡಲು ಮಲೇಷ್ಯಾ ಸರ್ಕಾರ ಒಪ್ಪಿಗೆ ಸೂಚಿಸಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಮಲೇಷ್ಯಾ ಪ್ರಧಾನಿ ಮೊಹಮ್ಮದ್ ನಜೀಬ್ ರಜಾಕ್ ಅವರ ಮಧ್ಯೆ ನಡೆದ ಮಾತುಕತೆ ವೇಳೆ ಎರಡೂ ದೇಶಗಳು ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿವೆ.

ಮಲೇಷ್ಯಾದಲ್ಲಿ ಮದರಸಾಗಳನ್ನು ಸರ್ಕಾರದ ವತಿಯಿಂದ ಹೇಗೆ ನಿರ್ವಹಿಸಲಾಗುತ್ತಿದೆ ಎಂಬ ವಿವರಗಳು ಇರುವ ಪುಸ್ತಕವನ್ನು ರಜಾಕ್ ಅವರು ಮೋದಿ ಅವರಿಗೆ ನೀಡಿದರು.

‘ಮುಸ್ಲಿಂ ಯುವಕರು ಉಗ್ರವಾದ ಮತ್ತು ಧಾರ್ಮಿಕ ಮೂಲಭೂತವಾದ ಕಡೆ ವಾಲುವುದನ್ನು ತಡೆಯುವ ಸಲುವಾಗಿ ಮದರಸಾಗಳ ಪಠ್ಯಕ್ರಮಗಳಲ್ಲಿ  ಬದಲಾವಣೆ ತರಲು ಸರ್ಕಾರ ಉದ್ದೇಶಿಸಿದೆ’ ಎಂದು ಮೂಲಗಳು  ಶುಕ್ರವಾರ ಹೇಳಿದ್ದವು.

ಇದರ ಜತೆಯಲ್ಲೇ ಎರಡೂ ರಾಷ್ಟ್ರಗಳು ಇನ್ನೂ ಏಳು ಒಪ್ಪಂದಗಳಿಗೆ ಸಹಿ ಹಾಕಿವೆ.
‘ತಮಿಳು ಚಿತ್ರಗಳ ಅಭಿಮಾನಿ’ : ಮಲೇಷ್ಯಾ ಪ್ರಧಾನಿ ಮೊಹಮ್ಮದ್‌ ನಜೀದ್ ರಜಾಕ್‌ ಅವರು, ತಾವು ತಮಿಳು ಚಿತ್ರಗಳ ಅಭಿಮಾನಿ ಎಂದು ಘೋಷಿಸಿಕೊಂಡಿದ್ದಾರೆ.

‘ಚೆನ್ನೈಗೆ ಭೇಟಿ ನೀಡಿದ ನಂತರ ನಾನು ತಮಿಳು ಚಿತ್ರಗಳ ಹೊಸ ಅಭಿಮಾನಿ’ ಎಂದು ಪ್ರಧಾನಿ ಮೋದಿ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.
ಆರು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿರುವ ರಜಾಕ್‌ ಅವರ ಗುರುವಾರ ಚೆನ್ನೈಗೆ ಬಂದಿಳಿದಿದ್ದರು. ಈ ಸಂದರ್ಭದಲ್ಲಿ ಅವರು ಪತ್ನಿಯೊಂದಿಗೆ ಖ್ಯಾತ ನಟ ರಜನೀಕಾಂತ್‌ ಅವರನ್ನು ಭೇಟಿ ಮಾಡಿದ್ದರು.

ಜಂಟಿ ಘೋಷಣೆ

‘ಭಯೋತ್ಪಾದನೆ ವಿರುದ್ಧದ ಹೋರಾಟ ಎಂಬುದು ಕೇವಲ ಉಗ್ರರ ಹತ್ಯೆ, ಉಗ್ರ ಸಂಘಟನೆಗಳು ಮತ್ತು ಜಾಲವನ್ನು ನಿರ್ಮೂಲನೆ ಮಾಡುವುದಕ್ಕೆ ಸೀಮಿತವಲ್ಲ. ಉಗ್ರರಿಗೆ ಬೆಂಬಲ ನೀಡುವ ರಾಷ್ಟ್ರಗಳನ್ನು ಗುರುತಿಸಿ, ಅವುಗಳನ್ನು ಹೊಣೆಗಾರರನ್ನಾಗಿ ಮಾಡುವುದೂ ಈ ಹೋರಾಟದ ಪ್ರಮುಖ ಭಾಗ’ ಎಂದು ಮೋದಿ ಮತ್ತು ರಜಾಕ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಒಪ್ಪಂದಗಳು
* ರಕ್ಷಣೆ ಮತ್ತು ಭದ್ರತಾ ಸಹಕಾರ
* ವಾಯುಯಾನ ಸೇವಾ ಸಹಕಾರ
* ಎರಡೂ ದೇಶಗಳಲ್ಲಿನ ಶಿಕ್ಷಣಕ್ಕೆ ಪರಸ್ಪರರಲ್ಲಿ ಮಾನ್ಯತೆ
* ಕ್ರೀಡೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಸಹಕಾರ
* ತಾಳೆ ಎಣ್ಣೆ ಕ್ಷೇತ್ರದಲ್ಲಿ ಸಹಕಾರ
* ಕೃಷಿ ತ್ಯಾಜ್ಯಗಳಿಂದ ವಿದ್ಯುತ್ ಉತ್ಪಾದಿಸುವ ಅತ್ಯಾಧುನಿಕ ತಂತ್ರಜ್ಞಾನ ಪಾರ್ಕ್ ಆಂಧ್ರಪ್ರದೇಶದಲ್ಲಿ  ಸ್ಥಾಪನೆ
* ಭಾರತಕ್ಕೆ ರಫ್ತು ಮಾಡುವ ಉದ್ದೇಶದಿಂದ ಮಲೇಷ್ಯಾದಲ್ಲಿ ಯೂರಿಯಾ ಮತ್ತು ಅಮೋನಿಯಾ ಉತ್ಪಾದನಾ ಘಟಕ ಸ್ಥಾಪನೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ